ಈವರೆಗೂ ಅವರು ಇಂಟರ್‍ವ್ಯೂ ಪ್ಯಾನಲ್‍ಗಳಲ್ಲಿ ಕುಳಿತು ಸಂದರ್ಶನ ತೆಗೆದು ಕೊಂಡವರೇ ಹೊರತು ಸಂದರ್ಶನ ಕೊಟ್ಟವರಲ್ಲ. ಅದೂ, ಹೆಚ್ಚಾಗಿ ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಕೊನೆಯ ಹಂತದ ಇಂಟರ್‍ವ್ಯೂಗಳಿಗೆ ಎಚ್ ಆರ್ ಪ್ರತಿನಿಧಿಸುವ ಪ್ಯಾನಲ್‍ನ ಸದಸ್ಯರಾಗಿ. ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಸೀನಿಯರ್ ಮ್ಯಾನೇಜರ್‍ಗಳು ತಮ್ಮ ಸುದೀರ್ಘ ಪ್ರಶ್ನೋತ್ತರಗಳನ್ನು ಮುಗಿಸಿದ ಮೇಲೆ ತಮ್ಮ ಸರದಿಬಂದಾಗ ಒಂದೆರಡು ಎಚ್‍ಆರ್ ಪ್ರಶ್ನೆಗಳನ್ನು ಕೇಳಿ, “ದ ಕ್ಯಾಂಡಿಡೇಟ್ ಹ್ಯಾಸ್ ರೀಸನಬಲ್ ಕಮ್ಯುನಿಕೇಶನ್ ಸ್ಕಿಲ್ಸ್”
ಎಂ.ಆರ್. ದತ್ತಾತ್ರಿ ಅವರ “ಒಂದೊಂದು ತಲೆಗೂ ಒಂದೊಂದು ಬೆಲೆ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

ಶಿವಸ್ವಾಮಿ ಮೆಟ್ರೋ ಟ್ರೈನ್‌ನ ಕಿಟಕಿಯಿಂದ ಆಚೆ ನೋಡಿದರು. ರಸ್ತೆಗಳು, ಸಿಗ್ನಲ್ ಲೈಟುಗಳು, ತುಂಬಿನಿಂತ ವಾಹನಗಳು, ಗಾಬರಿಯಲ್ಲಿ ದಾಟುವ ಜನ ಸಮೂಹ, ಎತ್ತರದ ಕಟ್ಟಡಗಳು, ಅಂಗಡಿಗಳು, ಮನೆಗಳು, ತಾರಸಿಗಳ ಮೇಲೆ ಮಾಸಿದಬಣ್ಣದ ಸಿಂಥೆಟಿಕ್ ಟ್ಯಾಂಕುಗಳು, ವಿವಿಧ ಬಣ್ಣಗಳ ಬಿಲ್‍ಬೋರ್ಡುಗಳು, ಹಸಿರು ಮರಗಳು, ಕೇಸರಿ ಗುಲ್‍ಮೊಹರ್ ಹೂವುಗಳು, ಮೊಬೈಲ್ ಟವರುಗಳು, ಲೈಟುಕಂಬಗಳು- ಎಲ್ಲವೂ ಕೋರೈಸುವ ಬೆಳಕಿಗೆ ತಮ್ಮಿರುವಿಕೆಗಿಂತ ನಿಚ್ಚಳವಾಗಿ ಮತ್ತು ಪ್ರಕಾಶಮಾನವಾಗಿ ಕಂಡವು. ರೈಲು ನಿಂತು ಎಂಜಿ ರೋಡಿನ ಮೆಟ್ರೋ ಸ್ಟೇಷನ್ನಿನಲ್ಲಿ ಇಳಿದಾಗ ಸೂರ್ಯ ನೆತ್ತಿಯ ಮೇಲೆ ನಿಷ್ಕರುಣಿಯಂತೆ ಉರಿಯುತ್ತಿದ್ದ. ಎಷ್ಟೋ ವರ್ಷಗಳ ಮೇಲೆ ಹುಡುಕಿ ಹಾಕಿಕೊಂಡಿದ್ದ ಕರಿಯ ಬ್ಲೇಝರ್ ದೇಹವನ್ನು ಒಳಗೇ ಬೇಯಿಸಿ ಬನಿಯನ್ನು ಮತ್ತು ಅಂಗಿ ಮೈಗೆ ಅಂಟುವಂತೆ ಮಾಡಿತ್ತು. ಟ್ರೈನಿನಲ್ಲಿ ಜನದೊತ್ತಡದ ನಡುವೆ ನಿಂತು ಮಾಡಿದ ಪಯಣ ಮತ್ತು ಇಳಿದ ಮೇಲೆ ಉರಿಬಿಸಿಲಿನಲ್ಲಿ ಆಫೀಸು ಹುಡುಕಲು ಓಡಾಡಿದ್ದು ಸೇರಿ ತಲುಪುವ ಹೊತ್ತಿಗೆ ಆಯಾಸವಾಗಿ ಕಾಲುಗಳು ನೋಯುತ್ತಿದ್ದವು.

ಹುಡುಕುತ್ತಿದ್ದ ಕಂಪನಿಯನ್ನು ತಲುಪಿ ಲಾಬಿಯ ಸೋಫಾದ ಮೇಲೆ ಕುಳಿತು ಏಸಿಯ ತಣ್ಣನೆಯ ಹವಾದಲ್ಲಿ ಹಣೆಯ ಬೆವರನ್ನು ಒರೆಸಿಕೊಂಡರು. ಕೆನ್ನೆ ಮತ್ತು ಮೂಗಿನಿಂದ ಜಾರಿದ ಬೆವರಹನಿಗಳು ಕಪ್ಪುಬಿಳುಪಿನ ಒರಟು ಮೀಸೆಯನ್ನು ತೋಯಿಸಿ ತುಟಿಗಿಳಿಯುತ್ತಿದ್ದವು. ಜೇಬಿನಿಂದ ತೆಗೆದ ಕರ್ಚೀಫು ಕೊಂಚ ಕಮಟು ವಾಸನೆಯನ್ನು ಬೀರುತ್ತಿತ್ತಾಗಿ ಮುಖವರೆಸಿಕೊಂಡ ತಕ್ಷಣವೇ ಅದನ್ನು ಮತ್ತೆ ಜೇಬಿನ ಆಳಕ್ಕೆ ತುರುಕಿ ಕೊಂಡರು. ಬೆಂಕಿಬಿಸಿಲು ಗಾಜಿನಾಚೆಯ ಹೊರಲೋಕವನ್ನು ದಹಿಸುತ್ತಿತ್ತು. ಮಾನ್‍ಸೂನ್ ಮಳೆ ಪೂರ್ತಿಯೂ ಬಾರದೆ ಪೂರ್ತಿಯೂ ಹೋಗದೆ ಎರಡು ದಿನ ಒಣಹವೆ ಎರಡುದಿನ ಹಸಿಹವೆಯನ್ನು ಸೃಷ್ಟಿಸಿತ್ತು. ಕಂಪನಿಯ ಒಳಹೊರಗು ಓಡಾಡುವ ಯುವಕ ಯುವತಿಯರ ಬೀಸು ನಡಿಗೆ, ಕಿರುಚು ಮಾತುಗಳು, ನಗು, ಬ್ಯಾಡ್ಜ್ ತಾಗಿಸಿದೊಡನೆಯೇ ಪಟ್ ಎಂಬ ಶಬ್ದದೊಂದಿಗೆ ತೆಗೆದುಕೊಳ್ಳುವ ಬಾಗಿಲು, ನಿರಂತರ ಫೋನಿನಲ್ಲಿ ಮಾತನಾಡುವ ಇಬ್ಬರು ಫ್ರಂಟ್ ಡೆಸ್ಕಿನ ಯುವತಿಯರು. ಶಿವಸ್ವಾಮಿಗೆ ಸನ್ನಿವೇಶವು ಅಪರಿಚಿತವಾಗಿತ್ತು.

(ಎಂ.ಆರ್. ದತ್ತಾತ್ರಿ)

ಒಳಗೆ ಕರೆದರೆ ಎಷ್ಟು ಹೊತ್ತಾಗುತ್ತದೋ, ಅಲ್ಲಿಯ ತನಕ ಮೂತ್ರ ಕಟ್ಟಿಕೊಂಡಿರು ವುದು ಸಾಧ್ಯವೇ ಇಲ್ಲ ಎನ್ನಿಸತೊಡಗಿತು. ನಿಧಾನಕ್ಕೆ ಎದ್ದು ಫ್ರಂಟ್‍ಡೆಸ್ಕಿನ ಮುಂದೆ ಹೋಗಿ ನಿಂತರು. “ಡಿಟಿ ಸಾಫ್ಟ್‍ವೇರ್ ಸಲೂಷನ್ಸ್” ಎನ್ನುವ ಬಂಗಾರದ ಮೋಡಿ ಅಕ್ಷರಗಳ ಮುಂದೆ ತಿರುಗುಕುರ್ಚಿಯಲ್ಲಿ ಕುಳಿತು ಫೋನಿನಲ್ಲಿ ಮಾತನಾಡುತ್ತಿದ್ದವರಲ್ಲಿ ಒಬ್ಬಳು ಫೋನಿನ ಮೌತ್‍ಪೀಸಿಗೆ ಕೈಅಡ್ಡ ಹಿಡಿದು ಇವರೆಡೆಗೆ ಮೆಲುದನಿಯಲ್ಲಿ, “ನೀವು ಬಂದಿರುವುದನ್ನು ನಾನಾಗಲೇ ಒಳಗೆ ತಿಳಿಸಿದ್ದೇನೆ. ಅವರೇ ಕರೆಯುತ್ತಾರೆ” ಎಂದಳು. ಇಲ್ಲಿ ಟಾಯ್ಲೆಟ್ ಎಲ್ಲಿದೆ ಎಂದು ಕೇಳಿದ ಮೇಲೆ ತಾವು ಹಿಂದಿಯಲ್ಲಿ ಕೇಳಿದ್ದು ಎಂಬ ಅರಿವಾಗಿ ನಾಚಿ ನಾಲಗೆ ಕಚ್ಚಿಕೊಂಡರು. ಘಾಝಿಯಾಬಾದಿಗೆ ಹೊಂದಿಕೊಂಡಿದ್ದ ನಾಲಗೆಯದು. ಆಕೆ ಫೋನಿನ ಮೌತ್‍ಪೀಸಿನಿಂದ ತನ್ನ ಕೈತೆಗೆದು ಕಾಲ್‍ನ ಇನ್ನೊಂದುಬದಿಯವರಿಗೆ, “ಜಸ್ಟ್ ಎ ಸೆಕೆಂಡ್ ಸರ್” ಎಂದಂದು ಮತ್ತೆ ಕೈಮುಚ್ಚಿ ತನ್ನ ಕುರ್ಚಿಯನ್ನು ವೃತ್ತಾಕಾರದಲ್ಲಿ ಹಿಂದಕ್ಕೆ ತಿರುಗಿಸಿ, “ಸಿದ್ದು ಸಿದ್ದು” ಎಂದು ಎರಡು ಬಾರಿ ಕೂಗುವ ಹೊತ್ತಿಗೆ ಕಂದು ಸಮವಸ್ತ್ರದಲ್ಲಿದ್ದ ಹುಡುಗನೊಬ್ಬ ಪ್ರತ್ಯಕ್ಷನಾದ. “ಸರ್‍ಗೆ ರೆಸ್ಟ್‍ರೂಮ್ ತೋರಿಸು” ಎಂದವಳು ಇವರೆಡೆಗೆ ನೋಡದೆ ಮತ್ತೆ ತನ್ನ ಕರೆಗೆ ಮರಳಿದಳು.

ಹುಡುಗನ ಹಿಂದೆ ಹೋದರು. ಅದೊಂದು ಶ್ರೀಮಂತ ಟಾಯ್‍ಲೆಟ್. ಕಣ್ಣುಕೋರೈಸುವ ಬಿಳಿಯಬಣ್ಣ. ಒಂದು ಬದಿಯ ಗೋಡೆ ಭರ್ತಿ ಕಲೆರಹಿತ ಕನ್ನಡಿ. ಶುಭ್ರ ಕೌಂಟರ್‍ಟಾಪಿನ ಮೇಲೆ ಸಾಲಂಕೃತ ಹೂಕುಂಡಗಳು. ಕಣ್ಣಿಗೆ ಹಿತವಾಗುವಷ್ಟು ಮಂದಬೆಳಕು. ಬಳಸಿ ಗಲೀಜು ಮಾಡಿ ಅದರ ಶುದ್ಧತೆಯ ವ್ರತವನ್ನು ಎಲ್ಲಿ ಭಂಗ ಗೊಳಿಸುತ್ತೇವೆಯೋ ಎಂದು ಅಂಜುವಂತೆ ಮಾಡುವಂಥದ್ದು. ಘಾಝಿಯಾಬಾದ್‍ನ ಆಫೀಸಿನಲ್ಲಿ ತೀರಾ ಅಶುದ್ಧವಲ್ಲದಿದ್ದರೂ ಎರಡು ದಿನಕ್ಕೊಮ್ಮೆ ಶುದ್ಧಗೊಳ್ಳುವ ಮತ್ತು ಕಡು ಬ್ಲೀಚಿಂಗ್‍ಪೌಡರ್ ವಾಸನೆಯ ಶೌಚಾಲಯದ ಅಭ್ಯಾಸವಾಗಿದ್ದ ಶಿವಸ್ವಾಮಿ ತಮ್ಮ ಒತ್ತಡವನ್ನು ತಡೆದುಕೊಂಡು ಒಂದು ಕ್ಷಣ ಹಾಗೇ ನಿಂತರು. ಅಲ್ಲಿಯದು ಶೌಚಾಲಯ ಮತ್ತು ಇಲ್ಲಿಯದು ರೆಸ್ಟ್‍ರೂಮ್. ಟಾಯ್ಲೆಟ್ಟಿನ ಶ್ರೀಮಂತಿಕೆಯೇ ಮುಂದಿನ ಕ್ಷಣಗಳಲ್ಲಿ ನಡೆಯಬಹುದಾದ ಇಂಟರ್‍ವ್ಯೂಗೆ ಅವರನ್ನು ಅಧೀರರನ್ನಾಗಿಸಿತು. ಇದು ತನಗಲ್ಲ ಎಂದು ಮರುಗಿಕೊಂಡರು. ಬರುವಾಗ ದಾರಿಯುದ್ದಕ್ಕೂ ಕಾಡಿದ್ದು ಅದೇ; ಇಂತಹ ಸಾಫ್ಟ್‍ವೇರ್ ಕಂಪನಿಗೆ ಬೇಕಾದ ಹೊಸ ರಕ್ತ, ಹೊಸ ಭಾಷೆ, ಹೊಸ ಹಾವಭಾವಗಳು ತಮ್ಮಲ್ಲಿಲ್ಲ ಎಂದು. ಮುಂದಿನ ಅವಮಾನಗಳನ್ನು ಎದುರಿಸುವ ಬದಲು ಈಗಲೇ ಇಲ್ಲಿಂದ ಹಾಗೇ ವಾಪಸ್ಸು ಹೋಗಿಬಿಡೋಣವೇ ಎಂದು ಯೋಚಿಸಿದರು. ಆದರೆ ಆಗಲೇ ಬಂದಾಗಿತ್ತು, ಬಂದಿದ್ದೇನೆ ಎಂದು ತಿಳಿಸಿಯಾಗಿತ್ತು. ಎದುರಿಸಿಯೇ ಮನೆಗೆ ಹೋಗೋಣ ಎಂದು ನಿರ್ಧರಿಸಿದರು. ಬರುವುದು ಬಂದೆ, ಬರೀ ಬ್ಲೇಝರಿನಲ್ಲಿ ಬರದೆ ಸೂಟು ಧರಿಸಿ ಬರಬೇಕಿತ್ತು ಎಂದು ಶಿವಸ್ವಾಮಿಗೆ ಅನ್ನಿಸಿತು. ಒಳಗಿನ ಶರಟೂ ಕೂಡ ಹೊರಗಿನ ಕೋಟಿಗೆ ಹೊಂದುತ್ತಿಲ್ಲ ಎನ್ನಿಸಿತು. ಎಷ್ಟೇ ಐರನ್ ಮಾಡಿದ್ದರೂ ಸುಕ್ಕಾಗಿ ಕಾಣಿಸುತ್ತಿತ್ತು.

ಟಾಯ್ಲೆಟ್ಟಿನಿಂದ ವಾಪಸ್ಸು ಬರುವ ಹೊತ್ತಿಗೆ ಫ್ರಂಟ್‍ಡೆಸ್ಕಿನವಳು ಇವರನ್ನೇ ಕಾಯುತ್ತಿದ್ದಳು. ವಿಸಿಟರ್ ಬ್ಯಾಡ್ಜನ್ನು ಕೈಗಿಡುತ್ತ ‘ಸರ್ ನೀವು ಒಳಗೆ ಹೋಗಬಹುದು’ ಎಂದಳು. ಮತ್ತೆ ಅದೇ ಆಫೀಸ್‍ಬಾಯನ್ನು ಕರೆದು, “ಇವರನ್ನು ಗ್ರೌಂಡ್ ಫ್ಲೋರಿನ ಸೌತ್ ಕಾನ್ಫರೆನ್ಸ್ ರೂಮಿಗೆ ಬಿಡು” ಎಂದಳು. ಅವನು ಗಾಜಿನ ಬಾಗಿಲು ತೆರೆದು ಶಿವಸ್ವಾಮಿ ಮುಂದೆ ಹೋಗುವುದನ್ನು ಕಾದು ಅನಂತರ ಬೇಗ ಹೆಜ್ಜೆಹಾಕಿ ಅವರಿಗಿಂತ ಮುಂದೆ ನಡೆದ. ಶಿವಸ್ವಾಮಿ ಅವನನ್ನು ಅನುಸರಿಸಿದರು. ಬೆಳಕಿನಿಂದ ಬೀಗುತ್ತಿದ್ದ ಕಂಪನಿಯದು. ವಿಶಾಲ ಹಾಲ್‍ವೇ. ಕುಳಿತೋ ನಿಂತೋ ಗುಂಪಾಗಿಯೋ ಕೆಲಸ ಮಾಡುವ ನೂರಾರು ಜನರು ಕಂಡರು. ಕೋಣೆಯಿರಲಿ ಕ್ಯೂಬಿಕಲ್ ಇರಲಿ, ಇಡೀ ಫ್ಲೋರಿನ ಎಲ್ಲರೂ ಕಾಣುವಂತಹ ಗಾಜಿನ ಅರಮನೆಯದು. ಪ್ರತಿ ಗಾಜುಗೋಡೆಯ ಮೇಲೂ ಕಂಪನಿಯ ಅನೇಕ ಪೋಸ್ಟರುಗಳು. ಟೀಂ ವರ್ಕ್‍ನ ಮೇಲೆ, ಕ್ವಾಲಿಟಿಯ ಮೇಲೆ, ಕಂಪನಿಯ ಉತ್ಪನ್ನಗಳ ಮೇಲೆ ಪೋಸ್ಟರ್‍ಗಳು. ಈಗಷ್ಟೇ ಬರ್ತಡೇ ಪಾರ್ಟಿ ಯೊಂದು ಮುಗಿಯಿತೇನೋ ಎನ್ನುವಂತೆ ಜನ ಸಂಭ್ರಮದಲ್ಲಿರುವಂತೆ ಕಂಡರು. ಆಫೀಸಾಗಲಿ ಮನೆಯಾಗಲಿ ಕ್ಲಬ್ಬಾಗಲಿ, ಹೊಸತಲೆಮಾರಿನ ಜನರು ಕಾಣಿಸಿಕೊಳ್ಳುವ ಬಗೆಯೇ ಹಾಗೇನೋ.

ಹುಡುಗ ಕಾನ್ಫರೆನ್ಸ್ ರೂಮಿನ ಬಾಗಿಲು ತೋರಿಸಿ ಕ್ಷಣವೂ ನಿಲ್ಲದೆ ಹೊರಟು ಹೋದ. ಶಿವಸ್ವಾಮಿ ಮೆಲ್ಲನೆ ಬಾಗಿಲು ತಟ್ಟಿದರು. ಒಳಗೆ ಮೂವರು ಕುಳಿತಿರುವುದು ಕಾಣುತ್ತಿತ್ತು. ಆ ಮೂವರಲ್ಲಿದ್ದ ಒಬ್ಬಳೇ ಹೆಂಗಸು ಇವರೆಡೆಗೆ ನೋಡಿ, “ಪ್ಲೀಸ್ ಕಮ್ ಇನ್” ಎಂದು ಹೇಳಿ ಕೈನಲ್ಲಿ ಸಂಜ್ಞೆಯನ್ನೂ ಮಾಡಿದರು. ಶಿವಸ್ವಾಮಿ ಮೆಲ್ಲಗೆ ಬಾಗಿಲು ದಬ್ಬಿ ಒಳಬಂದರು. ವಿಶಾಲವಾದ ಕಾನ್ಫರೆನ್ಸ್ ಕೋಣೆಯದು. ಚೌಕಾಕಾರದ ಟೇಬಲ್ಲಿನ ಸುತ್ತ ಕೊನೆಪಕ್ಷ ಮೂವತ್ತು ಜನರು ಕೂರಬಹುದು. ಇವರನ್ನು ಎದುರಿಸುವಂತೆ ಮೂವರು ಕುಳಿತಿದ್ದರು. ಇಷ್ಟು ವಯಸ್ಸಿನವರನ್ನು ಇಂಟರ್‍ವ್ಯೂಗೆ ನಿರೀಕ್ಷಿಸಿರಲಿಲ್ಲವೋ ಏನೋ, ಮೂವರೂ ತಮ್ಮ ಪರಿಚಯ ಮಾಡಿಕೊಳ್ಳಲು ಎದ್ದುನಿಂತರು. ಮೊದಲ ನೆಯವರಾಗಿ ತೆಳುಹಸಿರು ಚೂಡಿದಾರದಲ್ಲಿದ್ದ ಹೆಂಗಸು, ನಡುವಯಸ್ಸಿನವರಿರಬಹುದು, ಶಿವಸ್ವಾಮಿಯೆಡೆಗೆ ಕೈಚಾಚುತ್ತ, “ನಾನು ಶ್ಯಾಮಲಾ ಮೆನನ್. ಡಿಟಿ ಗ್ರೂಪ್ ಆಫ್ ಕಂಪನೀಸ್‍ಗೆ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿದ್ದೇನೆ” ಎಂದರು.

ಅವರ ಪಕ್ಕದಲ್ಲಿದ್ದವನು, ಮೂವತ್ತೈದರಿಂದ ನಲ್ವತ್ತರೊಳಗಿರಬಹುದು, ಎತ್ತರ ಮತ್ತು ಗಾತ್ರದವನು, ಬ್ಯುಸಿನೆಸ್ ಸೂಟಿನಲ್ಲಿದ್ದವನು, ಧ್ವನಿಯೂ ಆಳ. ಕೈಚಾಚುತ್ತ “ನಾನು ರವಿರಾಜ್ ಥಕ್ಕರ್. ಡಿಟಿ ಗ್ರೂಪಿಗೆ ಸೇರಿದ ಈ ಸಾಫ್ಟ್‍ವೇರ್ ಯೂನಿಟ್‍ಗೆ ಮುಖ್ಯಸ್ಥನಾಗಿದ್ದೇನೆ” ಎಂದು ಪರಿಚಯ ಮಾಡಿಕೊಂಡನು. ಅವನ ಪಕ್ಕದಲ್ಲಿದ್ದವನು ಕೂಡ ಸುಮಾರು ಅದೇ ವಯಸ್ಸಿನವನಂತೆ ಕಾಣುತ್ತಿದ್ದನಾದರೂ ಒಳ್ಳೆಯ ದೇಹದಾಢ್ರ್ಯತೆ ಯನ್ನು ಉಳ್ಳವನಾಗಿ, ಬಿಳಿಯ ಟೀಶರ್ಟ್ ಮತ್ತು ತೆಳು ನೀಲಿ ಜೀನ್ಸ್ ಪ್ಯಾಂಟಿನಲ್ಲಿದ್ದವ ನಗುತ್ತ ಆತ್ಮೀಯವಾಗಿ ಕೈ ಚಾಚಿದ. ಆ ಮೂವರಲ್ಲಿ ನಕ್ಕಿದ್ದು ಅವನೇನೇ. “ನಾನು ಪ್ರಭುದಾಸ್. ನೀವು ಇಂಟರ್‍ವ್ಯೂಗೆ ಬಂದಿರುವ ಈ ಕಂಪನಿಯ ಸಾಫ್ಟ್‍ವೇರ್ ಡೆಲವರಿಗೆ ವೈಸ್ ಪ್ರೆಸಿಡೆಂಟ್ ಆಗಿದ್ದೇನೆ. ನನ್ನ ಪಕ್ಕದ ಈ ವ್ಯಕ್ತಿ ಕಂಪನಿಗೆ ಪ್ರಭುವಾದರೂ ಇಲ್ಲಿ ಜನ ನನ್ನನ್ನು ಪ್ರಭು ಎಂದು ಕರೆಯುತ್ತಾರೆ” ಎಂದು ಹೇಳಿದ. ಅವನ ಮಾತಿಗೆ ಎಲ್ಲರೂ ನಕ್ಕರು. ಶಿವಸ್ವಾಮಿಗೆ ಪರಿಸ್ಥಿತಿ ಸ್ವಲ್ಪ ತಿಳಿಯಾಯಿತು.

ಎಲ್ಲರೂ ಕುಳಿತ ಮೇಲೆ ಶ್ಯಾಮಲಾ ಮೆನನ್ ಶಿವಸ್ವಾಮಿಯವರನ್ನು ಪರಿಚಯ ಮಾಡಿಕೊಳ್ಳುವಂತೆ ಕೇಳಿಕೊಂಡರು.

“ನಾನು ಪಬ್ಲಿಕ್ ಸೆಕ್ಟರ್ ಕಂಪನಿ ಬಿಇಎಲ್‍ನಲ್ಲಿ ಮೂವತ್ತೈದು ವರ್ಷಗಳ ಕಾಲ ಕೆಲಸ ಮಾಡಿ ಈಗ ಎರಡು ವರ್ಷಗಳಿಂದ ನಿವೃತ್ತನಾಗಿದ್ದೇನೆ. ನಿವೃತ್ತನಾಗುವ ವೇಳೆಗೆ ನಾನು ಎಚ್ ಆರ್ ಡಿಪಾರ್ಟ್‍ಮೆಂಟಿಗೆ ಎಜಿಎಮ್ ಆಗಿದ್ದೆ. ನಾನು ನನ್ನ ಸರ್ವೀಸನ್ನು ಪೂರ್ತಿಯಾಗಿ ಘಾಝಿಯಾಬಾದ್‍ನಲ್ಲಿ ಮಾಡಿದೆನಾದರೂ ಮೂಲತಃ ಕರ್ನಾಟಕದವನೇ. ಕೋಲಾರ ಜಿಲ್ಲೆಯ ಮಾಸ್ತಿ ನನ್ನ ಸ್ವಂತ ಊರು. ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂಎ ಪದವಿ ಪಡೆದಿದ್ದೇನೆ. ನಾನು ಕಂಪನಿಗೆ ಆಯ್ಕೆಯಾದ ವರ್ಷದಲ್ಲಿಯೇ ಸಂಸ್ಥೆಯು ಘಾಝಿಯಾಬಾದ್ ಶಾಖೆಯನ್ನು ಪ್ರಾರಂಭಿಸಿತಾಗಿ ನನ್ನ ಪೋಸ್ಟಿಂಗ್ ನೇರವಾಗಿ ಅಲ್ಲಿಗೇ ಆಯಿತು. ಸೇರಿದ ಮೊದಲ ಕೆಲವು ವರ್ಷಗಳ ಕಾಲ ಬೆಂಗಳೂರಿಗೆ ವರ್ಗಬಯಸಿ ಕೋರಿಕೆ ಸಲ್ಲಿಸುತ್ತಿದ್ದೆನಾದರೂ ಕಂಪನಿಯು ಹಲವಾರು ಕಾರಣಗಳಿಂದ ಟ್ರಾನ್ಸಫರ್ ಕೊಡಲಿಲ್ಲ. ಹಾಗಾಗಿ ಅಲ್ಲಿಯೇ ಮುಂದುವರೆದೆ. ಮುಂದೆ ಮದುವೆಯಾಗಿ ಮಕ್ಕಳಾದ ಮೇಲೆ ಊರು ಬದಲಿಸುವುದು ಅಷ್ಟು ಸುಲಭವಲ್ಲ ನೋಡಿ, ಹಾಗಾಗಿ ಅಲ್ಲಿಯೇ ಉಳಿದುಬಿಟ್ಟೆವು. ಉಳಿದದ್ದಷ್ಟೇ ಆಲ್ಲ, ಆ ಊರನ್ನು ಬಹಳ ಇಷ್ಟಪಟ್ಟೆವು” ಎಂದು ಪೇಲವ ನಗೆಯನ್ನು ನಕ್ಕರು.

ತಾನೇಕೆ ಅವೆಲ್ಲ ಹೇಳಬೇಕಿತ್ತು ಎಂದು ತಿಳಿಯಲಿಲ್ಲ. ತುಂಬ ಮಾತನಾಡಿಬಿಟ್ಟೆ ಎನ್ನುವಂತೆ ಪೆಚ್ಚಾದರು. ಎದುರಿನ ಮೂವರ ಮುಖ ನೋಡಿದರು. ಹೆಂಗಸಿನ ಮುಖದಲ್ಲಿ ಕಂಡೂಕಾಣದಂತಹ ಅಸಹನೆಯಿತ್ತು. ಸೂಟಿನಲ್ಲಿದ್ದ ದಢೂತಿ ಮನುಷ್ಯ, ರವಿರಾಜ್ ಥಕ್ಕರ್ ಎಂದು ಪರಿಚಯ ಮಾಡಿಕೊಂಡವನು, ಇವರನ್ನು ಅಳೆಯುವವನಂತೆ ನೋಡುತ್ತಿದ್ದ. ಪ್ರಭುದಾಸನ ಮುಖದಲ್ಲಿ ನಗೆಯಿತ್ತು, ಆದರೆ ಅದು ಯಾವ ಬಗೆಯದು ಎಂದು ಸುಳಿವು ಸಿಗದಾಯ್ತು. ಸೂಟಿನವನು ತನ್ನ ತಲೆಬಗ್ಗಿಸಿ ಕಿರುಗಣ್ಣಿನಲ್ಲಿ ವಾಚು ನೋಡಿಕೊಂಡ ಎಂದು ಅನ್ನಿಸಿದಾಗ ತಾನು ಇವರೆಲ್ಲರ ಸಮಯ ವ್ಯರ್ಥ ಮಾಡು ತ್ತಿದ್ದೇನೇನೋ ಎಂದು ಮತ್ತೂ ಆವೇಗಕ್ಕೆ ಒಳಗಾದರು. ಆವೇಗಕ್ಕೆ ಒಳಗಾದರೆ ಶಿವಸ್ವಾಮಿಯ ಧ್ವನಿ ನಡುಗುತ್ತದೆ, ಮಾತು ವೇಗವಾಗುತ್ತದೆ. ಗಬಳೆ ಮಾತುಗಳು ಏನು ಮಾತನಾಡಬೇಕು ಎನ್ನುವ ಆಲೋಚನೆಗಳನ್ನು ದಿಕ್ಕುತಪ್ಪಿಸುತ್ತವೆ.

ಈವರೆಗೂ ಅವರು ಇಂಟರ್‍ವ್ಯೂ ಪ್ಯಾನಲ್‍ಗಳಲ್ಲಿ ಕುಳಿತು ಸಂದರ್ಶನ ತೆಗೆದು ಕೊಂಡವರೇ ಹೊರತು ಸಂದರ್ಶನ ಕೊಟ್ಟವರಲ್ಲ. ಅದೂ, ಹೆಚ್ಚಾಗಿ ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಕೊನೆಯ ಹಂತದ ಇಂಟರ್‍ವ್ಯೂಗಳಿಗೆ ಎಚ್ ಆರ್ ಪ್ರತಿನಿಧಿಸುವ ಪ್ಯಾನಲ್‍ನ ಸದಸ್ಯರಾಗಿ. ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಸೀನಿಯರ್ ಮ್ಯಾನೇಜರ್‍ಗಳು ತಮ್ಮ ಸುದೀರ್ಘ ಪ್ರಶ್ನೋತ್ತರಗಳನ್ನು ಮುಗಿಸಿದ ಮೇಲೆ ತಮ್ಮ ಸರದಿಬಂದಾಗ ಒಂದೆರಡು ಎಚ್‍ಆರ್ ಪ್ರಶ್ನೆಗಳನ್ನು ಕೇಳಿ, “ದ ಕ್ಯಾಂಡಿಡೇಟ್ ಹ್ಯಾಸ್ ರೀಸನಬಲ್ ಕಮ್ಯುನಿಕೇಶನ್ ಸ್ಕಿಲ್ಸ್. ಹರ್ ಆಟಿಟ್ಯೂಡ್ ಈಸ್ ಓಕೆ” ಎಂದು ಒಂದೆರಡು ಕಾಮೆಂಟುಗಳನ್ನು ಬರೆದರೆ ಅವರ ಜವಾಬ್ದಾರಿ ಪೂರೈಸುತ್ತಿತ್ತು. ಆದರೆ ಕೆಲಸಕ್ಕಾಗಿ ಸಂದರ್ಶನವನ್ನು ಎದುರಿಸುತ್ತಿರುವುದು ಅವರ ಜೀವಮಾನದಲ್ಲಿ ಇದು ಎರಡನೇ ಬಾರಿ, ಅದೂ ಮೂವತ್ತೈದು ವರ್ಷಗಳ ಅಂತರದಲ್ಲಿ.

ಮುಂದಿನ ಅವಮಾನಗಳನ್ನು ಎದುರಿಸುವ ಬದಲು ಈಗಲೇ ಇಲ್ಲಿಂದ ಹಾಗೇ ವಾಪಸ್ಸು ಹೋಗಿಬಿಡೋಣವೇ ಎಂದು ಯೋಚಿಸಿದರು. ಆದರೆ ಆಗಲೇ ಬಂದಾಗಿತ್ತು, ಬಂದಿದ್ದೇನೆ ಎಂದು ತಿಳಿಸಿಯಾಗಿತ್ತು. ಎದುರಿಸಿಯೇ ಮನೆಗೆ ಹೋಗೋಣ ಎಂದು ನಿರ್ಧರಿಸಿದರು.

ಅಷ್ಟೇ ಪರಿಚಯ! ಮೂವರೂ ಅವರಿಂದ ಮತ್ತೂ ನಿರೀಕ್ಷಿಸಿದ್ದವರಾಗಿ ಸುಮ್ಮನೆ ಕುಳಿತರು. ಶಿವಸ್ವಾಮಿಯೂ ಮೌನವಾಗಿಬಿಟ್ಟರು. ಅವರನ್ನು ಹಗುರಾಗಿಸುವವನಂತೆ ಪ್ರಭುವೇ, “ಸರ್, ಎಲ್ಲಿ ಅಂದಿರಿ? ಘಾಝಿಯಾಬಾದು ಡೆಲ್ಲಿ ಪಂಜಾಬ್ ಬಾರ್ಡರ್ ಅಲ್ಲವಾ?” ಎಂದು ಕೇಳಿದ.

“ಅಲ್ಲ, ಡೆಲ್ಲಿ ಉತ್ತರ ಪ್ರದೇಶ್ ಬಾರ್ಡರ್. ನಿಜಕ್ಕೂ ಯೂಪಿಗೆ ಬರುತ್ತದೆ” ಎಂದರು.

“ಸರ್, ನಿಮಗೆ ಎಷ್ಟು ಮಕ್ಕಳು? ಏನು ಮಾಡುತ್ತಿದ್ದಾರೆ? ನಿಮ್ಮ ಕುಟುಂಬದ ಬಗ್ಗೆ ಹೇಳಿ.”

ಅವನ `ಸರ್’ ಪ್ರಯೋಗ ಶಿವಸ್ವಾಮಿಯ ಮೇಲೆ ಕೆಲಸ ಮಾಡಿತು ಎಂದು ಕಾಣುತ್ತದೆ. ಹಿಂದಿನ ಕಂಪನಿಯ ಸಂಸ್ಕೃತಿಗೆ ಹೊಂದಿಕೆಯಾಗುತ್ತಿತ್ತು. ಶಿವಸ್ವಾಮಿ ಕೊಂಚ ನಿರಾಳರಾದರು.

“ಇಬ್ಬರು. ಇಬ್ಬರೂ ಈಗ ಅಮೆರಿಕದಲ್ಲಿದ್ದಾರೆ. ಮಗಳು ದೊಡ್ಡವಳು, ಸಂಜನಾ ಎಂದು ಹೆಸರು. ಬಿಎಸ್ಸಿ ಓದಿದ್ದಾಳೆ. ಎರಡು ವರ್ಷಗಳ ಹಿಂದೆ ಮದುವೆಯಾಯಿತು. ಈಗ ಗಂಡನೊಂದಿಗೆ ಕ್ಯಾಲಿಫೋರ್ನಿಯಾದಲ್ಲಿದ್ದಾಳೆ. ಮಗನ ಹೆಸರು ತೇಜಸ್. ಎನ್‍ಐಟಿ ಡೆಲ್ಲಿಯಲ್ಲಿ ಬಿಟೆಕ್ ಓದಿ ಯೂನಿವರ್ಸಿಟಿ ಆಫ್ ಟೆಕ್ಸಸ್ ಆಸ್ಟಿನ್‍ನಲ್ಲಿ ಎಂಎಸ್ ಮಾಡುತ್ತಿದ್ದಾನೆ. ನನ್ನ ಪತ್ನಿಯ ಹೆಸರು ರೇವತಿ.” ಅವನು ಆಸ್ಟಿನ್‍ಗೆ ಹೋಗುವ ಮುಂಚೆ ಇಲ್ಲಿ ಬೆಂಗಳೂರಿನಲ್ಲಿ ಒಂದೂವರೆ ವರ್ಷಗಳು ಕೆಲಸ ಮಾಡಿದ್ದ ಎನ್ನುವುದನ್ನು ಬಿಟ್ಟೆನಲ್ಲ ಎನ್ನಿಸಿತು. ಹಾಗೆಯೇ, ರೇವತಿ ಹೌಸ್‍ವೈಫ್ ಎನ್ನುವುದನ್ನು ಸೇರಿಸಬೇಕಿತ್ತೇನೋ.

ಶಿವಸ್ವಾಮಿ ಮಾತು ನಿಲ್ಲಿಸುವುದನ್ನೇ ಕಾದವರಂತೆ ಶ್ಯಾಮಲಾ ಇಂಟರ್‍ವ್ಯೂನ ದಿಕ್ಕು ಬದಲಿಸಿದರು. ಅವರ ಉದ್ಯೋಗ ಕುರಿತಾದ ಪ್ರಶ್ನೆಗಳನ್ನು ಕೇಳಿದರು. ಬಿಇಎಲ್‍ನಲ್ಲಿ ಅವರು ಒಂದು ಟೀಮನ್ನು ಮ್ಯಾನೇಜ್ ಮಾಡುತ್ತಿದ್ದರಾ, ಅಲ್ಲಿ ಅವರ ದೈನಂದಿನ ಚಟುವಟಿಕೆಗಳು ಹೇಗಿದ್ದವು, ಮ್ಯಾನೇಜ್‍ಮೆಂಟಿಗೆ ಯಾವ ಬಗೆಯ ರಿಪೋರ್ಟುಗಳನ್ನು ಕೊಡುತ್ತಿದ್ದರು, ಯಾವ ಬಗೆಯ ಸ್ಟಾಂಡರ್ಡ್‍ಗಳನ್ನು ಅನುಸರಿಸುತ್ತಿದ್ದರು, ಹೀಗೆ. ಶಿವಸ್ವಾಮಿ ತಮ್ಮ ಅನುಭವದಿಂದ ಉತ್ತರಿಸಿದರಾದರೂ ತಮ್ಮ ಉತ್ತರಕ್ಕೂ ಈ ಸಾಫ್ಟ್‍ವೇರ್ ಜಗತ್ತಿನ ನಿರೀಕ್ಷೆಗೂ ದೊಡ್ಡ ಕಂದಕವಿದೆ ಎನ್ನುವುದು ಆ ಮೂವರಿಂದ ಬರುತ್ತಿದ್ದ ಮರುಪ್ರಶ್ನೆಗಳಿಂದ ಮತ್ತು ಮುಖಭಾವಗಳಿಂದ ವ್ಯಕ್ತವಾಗಿ ಅವರ ತಿಳುವಳಿಕೆಗೆ ಬರುತ್ತಿತ್ತು. ಹಾಗೆ ತಿಳುವಳಿಕೆಗೆ ಬಂದಂತೆಲ್ಲ, ಶ್ಯಾಮಲಾ ಮೆನನ್‍ನ ಮುಖ ಗಂಟು ಹಾಕಿ ಕೊಂಡಂತೆಲ್ಲ, ಶಿವಸ್ವಾಮಿಯ ಮಾತುಗಳು ಮತ್ತೂ ತಡವರಿಸುತ್ತಿದ್ದವು.
ಅಷ್ಟು ಹೊತ್ತು ಸುಮ್ಮನೆ ಕುಳಿತು ಕೇಳುತ್ತಿದ್ದ ರವಿರಾಜ ಥಕ್ಕರ್ ನಿಧಾನಕ್ಕೆ ಗಂಭೀರವಾಗಿ ಅವರನ್ನೇ ನೋಡಿಕೊಂಡು ಕೇಳಿದ – “ಮಿಸ್ಟರ್ ಶಿವ್‍ಸ್ವಾಮಿ, ನಿಮ್ಮ ಈವರೆಗಿನ ಅನುಭವ ದೊಡ್ಡ ಕಂಪನಿಯದು. ಸಾವಿರಾರು ಜನರು ಕೆಲಸ ಮಾಡುವ ಸರ್ಕಾರಿಸ್ವಾಮ್ಯದ ಕಂಪನಿಯಲ್ಲಿ. ಆದರೆ ನಮ್ಮದು ಹಾಗಲ್ಲ. ಡಿಟಿ ಸಾಫ್ಟ್‍ವೇರ್ ಸಲೂಷನ್ಸ್ ಡಿಟಿ ಗ್ರೂಪಿಗೆ ಸೇರಿ ಅದರ ಒಂದು ಬ್ರಾಂಚಿನಂತೆ ಕಾಣುತ್ತದಾದರೂ, ನಿಜಕ್ಕೂ ಅದು ಒಂದು ಪ್ರತ್ಯೇಕ ಕಂಪನಿ ಎನ್ನುವಷ್ಟು ಬೇರೆ ನಿಲ್ಲುವಂಥದ್ದು. ನಮ್ಮ ಮಾತೃಸಂಸ್ಥೆ ಡಿಟಿ ಗ್ರೂಪ್ ನಿಮಗೆ ತಿಳಿದೇ ಇರುತ್ತದೆ. ದೊಡ್ಡ ಸಂಸ್ಥೆ. ಲಾಜಿಸ್ಟಿಕ್ಸ್ ಬ್ಯುಸಿನೆಸ್ಸಿನಲ್ಲಿ ದೊಡ್ಡ ಹೆಸರು ಮಾಡಿದ್ದರೂ, ಅದಕ್ಕೆ ಸಮಾನಾಂತರವಾಗಿ ಇಂಜಿನಿಯರಿಂಗ್ ಕನ್ಸಲ್ಟಿಂಗ್ ಡಿವಿಶನ್ನಿದೆ; ಅವರು ದೊಡ್ಡ ದೊಡ್ಡ ಸಿವಿಲ್ ಇಂಜಿನಿಯರಿಂಗ್ ಪ್ರಾಜಕ್ಟ್‍ಗಳನ್ನು ತೆಗೆದುಕೊಳ್ಳುತ್ತಾರೆ. ಮೆಡಿಕಲ್ ಇಕ್ಯುಪ್‍ಮೆಂಟ್ ಟ್ರೇಡ್ ಮಾಡುವ ಒಂದು ಡಿವಿಶನ್ ಕೂಡ ಇದೆ. ಹೀಗೆ ಡಿಟಿ ಗ್ರೂಪ್ ಬೇರೆಬೇರೆ ವಹಿವಾಟುಗಳ ಒಂದು ದೊಡ್ಡ ಸಮೂಹ. ಅವುಗಳಲ್ಲಿ ಕೆಲವು ನೀವು ಈಗ ವಿವರಿಸಿದಂತೆ ಬಿಇಎಲ್ ಸಂಸ್ಥೆಯಂತೆಯೇ ನಡೆಯುತ್ತವಾದರೂ, ನಾವು ಈ ಎಚ್‍ಆರ್ ಪೊಸಿಷನ್‍ನನ್ನು ನೋಡುತ್ತಿರುವುದು ಈ ಸಾಫ್ಟ್‍ವೇರ್ ಡಿವಿಶನ್ನಿಗೆ ಮಾತ್ರ. ನಿಮ್ಮ ಅನುಭವಕ್ಕೂ ಇಲ್ಲಿಯ ನಿರೀಕ್ಷೆಗೂ ಬಹಳ ವ್ಯತ್ಯಾಸವಿದ್ದಂತಿದೆ. ನೀವು ಆಯ್ಕೆಯಾದರೆ ಇಲ್ಲಿಗೆ ಹೇಗೆ ನಿಮ್ಮನ್ನು ಹೊಂದಿಸಿಕೊಳ್ಳುತ್ತೀರಿ?”

ಶಿವಸ್ವಾಮಿಗೆ ಮತ್ತೆ ತಾವು ಬರಲೇಬಾರದಿತ್ತು ಎಂದು ವಿರಕ್ತಿ ಮೂಡಿತು. ಇವರು ಬಯಸುವ ಲಘುತ್ವ ತಮಗೆ ದಕ್ಕದು. ತಮ್ಮ ಮೂವತ್ತೈದು ವರ್ಷಗಳ ಅನುಭವವನ್ನು, ಅದೂ ರಿಟೈರ್ಡ್ ಆಗಿ ಎರಡು ವರ್ಷಗಳ ಅನಂತರ, ಇಲ್ಲಿ ಯಾರೋ ಮೂವರು ಅಪರಿಚಿತರ ಮುಂದೆ ಮಾರಾಟಕ್ಕೆ ಇಟ್ಟಂತೆ ಮಾತನಾಡುವುದು ಪಿಚ್ಚೆನಿಸಿತು. ಸ್ನೇಹಿತ ಗುಡಿಬಂಡೆ ಶಂಕರನ ದೆಸೆಯಿಂದ ಹೀಗಾದದ್ದು. ಬೇಡ ಬೇಡ ಎಂದರೂ ತನ್ನ ಏಜನ್ಸಿಯಿಂದಲೇ ಬಯೋಡೇಟಾ ಸಿದ್ಧ ಮಾಡಿ ಪ್ರಪಂಚಕ್ಕೆಲ್ಲ ಹಂಚಿ ಈ ಇಂಟರ್‍ವ್ಯೂ ಸೆಟ್‍ಅಪ್ ಮಾಡಿಬಿಟ್ಟ. ಇವರಿಗೂ ನನಗೂ ಹೊಂದಿಕೆಯಾಗದಷ್ಟು ವ್ಯತ್ಯಾಸಗಳಿವೆ. ನನ್ನ ಅನುಭವವೇ ಇವರಿಗೆ ಬೇಕಿಲ್ಲ. ಅವರು ನಿರೀಕ್ಷಿಸುವ ಮಟ್ಟದ ವಿದ್ಯಾರ್ಹತೆಗಳಾಗಲಿ, ಹಲವು ಕಂಪನಿಗಳ ಅನುಭವಗಳಾಗಲಿ ನನಗಿಲ್ಲ. ಚಿಗುರುಮೀಸೆ ಹೊತ್ತು ಯಾವ ಕಂಪನಿಯನ್ನು ಸೇರಿದ್ದೆನೋ, ಅದೇ ಕಂಪನಿಯಲ್ಲಿ ಬಿಳಿಮೀಸೆ ಹೊತ್ತು ನಿವೃತ್ತನಾದವನು. ಅಷ್ಟೂ ವರ್ಷಗಳಲ್ಲಿ ಯಾವೊಂದು ದಿನವೂ ಕಂಪನಿ ಬಿಟ್ಟು ಬೇರೆ ಸೇರಬೇಕೆನ್ನುವ ಯಾವ ಯೋಚನೆಗಳೂ ಯಾವತ್ತೂ ಸುಳಿಯಲಿಲ್ಲ. ಈಗ ಯಾವ ಪುರುಷಾರ್ಥ ಸಾಧನೆಗಾಗಿ ಇವರಿಗೆ ಉತ್ತರಿಸಬೇಕು ಎಂದು ಯೋಚಿಸಿದರು. ಆದರೂ ಪ್ರಶ್ನೆಗೆ ಉತ್ತರಿಸದೆ ಹೋಗುವಂತಿರಲಿಲ್ಲ. ಹೋದರೆಷ್ಟು ಬಂದರೆಷ್ಟು ಎನ್ನುವ ಭಾವ ಬಂದಮೇಲೆ ಅವರ ಮಾತು ಏರು ಧ್ವನಿಯಾಗಿ ದೃಢವಾಯಿತು.

“ಮಾನವ ಸಂಪನ್ಮೂಲವೆಂದರೆ ಮಾನವ ಸಂಪನ್ಮೂಲವೇ, ಸಾಫ್ಟ್‍ವೇರ್ ಆಗಲಿ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಆಗಲಿ ಅಥವಾ ಹೊಳೆಯ ಮೇಲೆ ಬ್ರಿಡ್ಜ್ ಕಟ್ಟುವ ಕೆಲಸವಾಗಲಿ! ಯಾವ ವ್ಯತ್ಯಾಸವಾಗುತ್ತದೆ? ಮನುಷ್ಯ ಮನುಷ್ಯನೇ. ಒಬ್ಬ ಮನುಷ್ಯ ತನ್ನ ಹುಟ್ಟು ಸ್ವಭಾವ, ಬೆಳೆದುಬಂದ ಹಿನ್ನೆಲೆ ಮತ್ತು ಬದುಕುವ ಸಮಾಜದ ಸಂಸ್ಕೃತಿಗೆ ಅನುಗುಣವಾಗಿ ಮತ್ತೊಬ್ಬ ಮನುಷ್ಯನೊಂದಿಗೆ ವ್ಯವಹರಿಸುತ್ತಾನೆ. ಒಬ್ಬ ಎಚ್‍ಆರ್ ಮ್ಯಾನೇಜರ್ ತನ್ನ ಕಂಪನಿಯ ನೌಕರನೊಂದಿಗೆ ವ್ಯವಹರಿಸುವಾಗ ಈ ಮನುಷ್ಯ ಸ್ವಭಾವದ ಸೂಕ್ಷ ್ಮಗಳನ್ನು ಅರಿತು ವ್ಯವಹರಿಸಬೇಕು. ಅಷ್ಟು ಮಾಡಿದರಷ್ಟೆ ಸಾಕು, ಕಂಪನಿ ಏನು ವ್ಯವಹಾರವನ್ನು ಮಾಡುತ್ತದೆ ಎನ್ನುವುದು ಅಷ್ಟು ಮುಖ್ಯವಾಗುವುದಿಲ್ಲ. ಇಲ್ಲಿ ಮನುಷ್ಯ ಮುಖ್ಯನಾಗುತ್ತಾನೆ. ಒಟ್ಟು ಪ್ರಾಸಸ್‍ಗಳಲ್ಲಿ ನಿಮ್ಮದು ವೇಗ, ನಮ್ಮದು ನಿಧಾನ. ಆದರೆ ಮಾನವ ಸಂಪನ್ಮೂಲ ಡಿಪಾರ್ಟಮೆಂಟಿನಲ್ಲಿ ವ್ಯವಹಾರ ನಡೆಯುವುದು ಮನುಷ್ಯರೊಂದಿಗೇ ಅಲ್ಲವೇ?” ಎಂದರು.

ತಮ್ಮ ಅನುಭವವನ್ನು ಸರಿಯಾಗಿಯೇ ಸಮರ್ಥಿಸಿಕೊಂಡೆ ಎಂದು ಶಿವಸ್ವಾಮಿಗೆ ಅನ್ನಿಸಿ ಸಮಾಧಾನವಾಯಿತು. ಈ ಬಾರಿ ಪದಗಳೂ ಸರಿಯಾಗಿಯೇ ಕೂಡಿಬಂದವು. ಆದರೂ, ಇವರ ಕೆಲಸಕ್ಕೇ ಇಂಟರ್‍ವ್ಯೂಗೆ ಬಂದು `ನಿಮ್ಮದು ನಮ್ಮದು’ ಎಂದು ವಿಂಗಡಿಸಿ ಹೇಳಬಾರದಿತ್ತೇನೋ ಎನ್ನುವ ಆಲೋಚನೆಯು ಅಧೀರರನ್ನಾಗಿ ಮಾಡಿತು. ಆದರೆ ಶ್ಯಾಮಲಾ ಮೆನನ್ ತನಗೆ ಆ ಉತ್ತರ ಏನೂ ಹಿಡಿಸಲಿಲ್ಲವೆನ್ನುವುದನ್ನು ತನ್ನ ಚಡಪಡಿಕೆಯಲ್ಲಿಯೇ ತೋರಿಸಿದರು. ಕಂಡೂ ಕಾಣದ ಕುಹಕದ ನಗುವಿನಲ್ಲಿ ರವಿರಾಜ ಮತ್ತು ಪ್ರಭುವಿನೆಡೆಗೆ ನೋಡಿದರು. ರವಿರಾಜ ಮತ್ತೊಮ್ಮೆ ಕೈಗಡಿಯಾರ ನೋಡಿಕೊಂಡದ್ದನ್ನು ಗಮನಿಸಿದರೆ ಅವನಿಗೆ ಈ ನಾಟಕ ಮುಗಿದರೆ ಸಾಕಿತ್ತು. ಬಹುಶಃ, ಅವನಾಗಲೇ ಇಂಟರ್‍ವ್ಯೂನ ಫಲಿತಾಂಶವನ್ನು ನಿರ್ಧರಿಸಿಯಾಗಿತ್ತು. ಇನ್ನೇನಿದ್ದರೂ ಕೆಲವು ನಿಮಿಷಗಳ ಶಿಷ್ಟಾಚಾರವಷ್ಟೇ. ಆ ಶಿಷ್ಟಾಚಾರವು ಕೂಡ ಇಂಟರ್‍ವ್ಯೂಗೆ ಬಂದ ಅಭ್ಯರ್ಥಿಯ ವಯಸ್ಸನ್ನು ಪರಿಗಣಿಸಿಯಷ್ಟೇ. ಈ ಮುದುಕರನ್ನು ಸಾಗಹಾಕಿದರೆ ಅವನಿಗೆ ಮಾಡಿಕೊಳ್ಳಲು ಬಹಳಷ್ಟು ಕೆಲಸಗಳಿದ್ದವು.

ಪಟ್ಟುಬಿಡದವಳಂತೆ ಶ್ಯಾಮಲಾ ಮೆನನ್ ಮತ್ತೂ ಮುಕ್ಕಾಲು ಗಂಟೆ ಶಿವಸ್ವಾಮಿ ಯನ್ನು ಪರೀಕ್ಷಿಸಿದರು. ಪ್ರಶ್ನೆಗಳು ಮುಖ್ಯವಾಗಿ ಆಕೆಯಿಂದ ಮತ್ತು ಆಗಾಗ ಪ್ರಭುವಿನಿಂದ ಬರುತ್ತಿದ್ದವು. ಇಬ್ಬರೂ ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಿ ಪ್ರಶ್ನೆ ಕೇಳುತ್ತಿದ್ದ ಬಗೆಯಿಂದಲೇ ಈ ಮೂವರಾಗಲೇ ಬಹಳಷ್ಟು ಮಂದಿಯನ್ನು ಈ ಕೆಲಸಕ್ಕಾಗಿ ಇಂಟರ್‍ವ್ಯೂ ಮಾಡಿದ್ದಾರೆ ಎನ್ನುವುದನ್ನು ಶಿವಸ್ವಾಮಿ ಊಹಿಸಿದರು. ಅವೆಲ್ಲ ಸನ್ನಿವೇಶಗಳಿಗೆ ತಮಗೆ ತೋಚಿದಂತೆ ಮತ್ತು ತಮ್ಮ ಅನುಭವಕ್ಕೆ ತಕ್ಕಂತೆ ಉತ್ತರಿಸಿದರಾದರೂ ಪದಗಳ ಬಳಕೆಯಲ್ಲಿ ಅತಿಜಾಗೃತ ರಾಗಿ ಮಾತನಾಡಿದರು. ಅವರು ಬಳಸುವ ಒಂದು ಪದ ಹೆಚ್ಚುಕಡಿಮೆಯಾದರೂ ಅವರನ್ನು ತಿರುಚಲು ಎದುರು ಕುಳಿತ ಹೆಂಗಸು ಕಾಯುತ್ತಿದ್ದಾಳೆ ಎನ್ನುವುದು ತಿಳಿದಿತ್ತು.

“ಒಬ್ಬ ಡೆವಲಪರ್ ನಿಮ್ಮ ಬಳಿಗೆ ಎಗ್ಸಿಟ್ ಇಂಟರ್‍ವ್ಯೂಗಾಗಿ ಬರುತ್ತಾನೆ. ಕಂಪನಿಯ ವ್ಯವಹಾರಕ್ಕೆ ಬಹಳ ಉಪಯುಕ್ತನಾದವನು. ನೀವು ಅವನನ್ನು ಬಿಡುವ ಕಾರಣ ಕೇಳುತ್ತೀರಿ. ಅದಕ್ಕವ, ನಾನು ಸೇರುತ್ತಿರುವ ಕಂಪನಿಯು ನನ್ನ ಸಂಬಳವನ್ನು ಶೇಕಡಾ ಐವತ್ತರಷ್ಟು ಜಾಸ್ತಿ ಮಾಡಿ ಕರೆಯುತ್ತಿದೆ, ಹಾಗಾಗಿ ಅಲ್ಲಿಗೆ ಸೇರುತ್ತಿದ್ದೇನೆ ಎಂದು ಪ್ರಾಮಾಣಿಕವಾಗಿ ತಾನು ಬಿಡುತ್ತಿರುವ ಕಾರಣವನ್ನು ತಿಳಿಸುತ್ತಾನೆ. ನಾವು ಅದೇ ಸಂಬಳವನ್ನು ಕೊಟ್ಟರೆ ಇಲ್ಲಿಯೇ ಉಳಿದುಕೊಳ್ಳುತ್ತೀಯಾ ಎಂದು ನೀವು ಕೇಳುತ್ತೀರಿ. ಅದಕ್ಕವನು ಖಂಡಿತಕ್ಕೂ ಎನ್ನುತ್ತಾನೆ. ಆ ಕಂಪನಿಗಿಂತ ಈ ಕಂಪನಿಯೇ ನನಗೆ ಇಷ್ಟ, ಆದರೆ ಸಂಬಳ ಮಾತ್ರ ಅವರು ತೋರಿಸಿದಷ್ಟಾಗಬೇಕು. ನಿಮಗೆ ನನ್ನ ಪ್ರಶ್ನೆ ಎಂದರೆ, ಅವನನ್ನು ಹೇಗೆ ಕಂಪನಿಯಲ್ಲೇ ಉಳಿಸಿಕೊಳ್ಳುತ್ತೀರೀ?”

ಪ್ರಶ್ನೆ ಕೇಳಿದ್ದು ಪ್ರಭು. ಶಿವಸ್ವಾಮಿ ಈ ಪ್ರಶ್ನೆಯನ್ನು ನಿರೀಕ್ಷಿಸಿದ್ದರು. ಸಾಫ್ಟ್‍ವೇರ್ ಕಂಪನಿಯೊಂದು ಎಚ್‍ಆರ್ ಮ್ಯಾನೇಜರಿಗೆ ಇಂಟರ್‍ವ್ಯೂನಲ್ಲಿ ಈ ಪ್ರಶ್ನೆಯಲ್ಲದೆ ಮತ್ತೇನನ್ನು ಕೇಳಲು ಸಾಧ್ಯ ಎಂದು ಮೊದಲೇ ಊಹಿಸಿದ್ದರು.

“ಅದೇ ಸಂಬಳವನ್ನು ಇಲ್ಲಿ ಕೊಟ್ಟರೆ ಉಳಿದುಕೊಳ್ಳುತ್ತೀಯಾ ಎಂದು ಕೇಳುತ್ತೀರಿ ಎಂದಿರಲ್ಲ, ನಾನು ಹಾಗೆ ಕೇಳುವುದೇ ಇಲ್ಲ. ಏಕೆಂದರೆ ಅದು ಸರಿಯಾದ ಪ್ರಶ್ನೆಯಲ್ಲ. ಹೀಗೆ ಯೋಚಿಸಿ. ನಾನು ಹಾಗೆ ಕೇಳಿ ಆ ಹುಡುಗನನ್ನೋ ಹುಡುಗಿಯನ್ನೋ ಕಂಪನಿಯಲ್ಲೇ ಉಳಿಸಿಕೊಂಡೆನೆಂದುಕೊಳ್ಳಿ. ಅವನೋ ಅವಳೋ ಸೇರಿಕೊಳ್ಳಲು ಯೋಚಿಸುತ್ತಿರುವ ಕಂಪನಿಯ ಎಚ್‍ಆರ್ ಮ್ಯಾನೇಜರಿಗೆ ಅದು ತಿಳಿಯುತ್ತದೆ. ತಿಳಿಯಲೇ ಬೇಕು ಏಕೆಂದರೆ ಈ ವ್ಯಕ್ತಿ ಅವರ ಕಂಪನಿಯನ್ನು ನಿರ್ಧರಿಸಿದ ದಿನಾಂಕದಂದು ಸೇರುತ್ತಿಲ್ಲವಲ್ಲಾ! ಆಗ ಅವನು ಈ ವ್ಯಕ್ತಿಯನ್ನು ತಕ್ಷಣಕ್ಕೆ ಸೆಳೆದುಕೊಳ್ಳಲು ಹಿಂದೆ ಮಾಡಿದ್ದ ಆಫರ್‍ಗೆ ಐದು ಪರ್ಸೆಂಟ್ ಜಾಸ್ತಿ ಮಾಡುತ್ತಾನೆ. ಆಗ ಈ ಹುಡುಗ ಮತ್ತೆ ನನ್ನ ಬಳಿ ಬಂದು ವ್ಯಾಪಾರಕ್ಕೆ ಇಳಿಯುತ್ತಾನೆ. ಒಮ್ಮೆ ಆ ಹಾದಿಗೆ ಬಿದ್ದ ಮೇಲೆ ನಾವು ಅವನನ್ನು ಉಳಿಸಿಕೊಳ್ಳಲು ಮತ್ತೆ ಸಂಬಳವನ್ನು ಏರಿಸಬೇಕಾಗುತ್ತದೆ. ಇದೊಂದು ಹರಾಜು ಪ್ರಕ್ರಿಯೆಯಾಗಿ ನಮಗಾಗಲೀ, ಆ ಇನ್ನೊಂದು ಕಂಪನಿಗಾಗಲೀ, ಸಮಾಜ ಕ್ಕಾಗಲೀ, ಕೊನೆಗೆ ಆವ್ಯಕ್ತಿಗೂ ಏನೂ ಒಳ್ಳೆಯದು ಮಾಡುವುದಿಲ್ಲ” ಎಂದರು.

ಮೂವರೂ ಕ್ಷಣ ಕಾಲ ಮೌನದಲ್ಲಿ ಕುಳಿತರು. ಶಿವಸ್ವಾಮಿ ಪ್ರಶ್ನೆ ಕೇಳಿದ ಪ್ರಭುವಿನ ಮುಂದಿನ ಮಾತನ್ನು ನಿರೀಕ್ಷಿಸುತ್ತಿದ್ದರು. ಅವನ ಮುಖಭಾವದಲ್ಲಿ ಈಗ ಗೊಂದಲವಿತ್ತು. ಏನೋ ಮಾತನಾಡಲು ಹೋದ, ತಡೆದ. ಮತ್ತೆ ಆಲೋಚನೆಗಳನ್ನು ಕೂಡಿಸಿಕೊಳ್ಳುವವನಂತೆ ಮಾತನಾಡಿದ.

“ನೀವು ಹೇಳಿದ್ದು ಗೊತ್ತು ನಮಗೆ. ಹಾಗೆ ಮಾಡಬಾರದೆಂದೂ ಗೊತ್ತು. ಆದರೆ ನಮ್ಮ ನಿಜಸ್ಥಿತಿ ಬೇರೆಯೇ ಇದೆಯಲ್ಲವೇ? ಹೀಗೆ ಹೇಳುತ್ತಿದ್ದೇನೆ ಎಂದು ಬೇಸರಿಸಿ ಕೊಳ್ಳಬೇಡಿ. ನೀವು ಹೇಳಿದ್ದು ಆರ್ಮ್‍ಚೇರ್ ಫಿಲಾಸಫಿಯಲ್ಲವೇ? ಬೋಧಿಸುವುದು ಸುಲಭ, ಅನುಸರಿಸುವುದು ಕಷ್ಟ. ಇಲ್ಲಿ ಒಂದೇ ಕೇಂದ್ರವನ್ನು ಹೊಂದಿರುವ ಎರಡು ವೃತ್ತಗಳಿವೆ. ಎಚ್‍ಆರ್ ಮ್ಯಾನೇಜರ್‍ರಾಗಿ ನೀವು ಹೊರಗಿನ ವೃತ್ತದಲ್ಲಿ ನಿಂತು ಮಾತನಾಡುತ್ತಿದ್ದೀರಿ. ಸಾಫ್ಟ್‍ವೇರ್ ಡೆಲವರಿಗೆ ಮುಖ್ಯಸ್ಥನಾಗಿ ನಾನು ಒಳಗಿನ ವೃತ್ತದಲ್ಲಿದ್ದೇನೆ. ಆ ಹುಡುಗ ಪ್ರಾಜಕ್ಟಿನಿಂದ ಹೊರಹೋಗುತ್ತಿದ್ದಾನೆ ಎನ್ನುವ ಬೆಂಕಿ ನಿಜಕ್ಕೂ ಒಳವೃತ್ತಕ್ಕೆ ಬಿದ್ದಿದೆ. ಅದನ್ನು ನಾನು ತಕ್ಷಣಕ್ಕೆ ಬಗೆಹರಿಸಿಕೊಳ್ಳಲೇ ಬೇಕಲ್ಲವೇ? ಗಮನಿಸಿದಿರೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಒಂದು ಮುಖ್ಯವಾದ ಪಾಯಿಂಟನ್ನು ನನ್ನ ಪ್ರಶ್ನೆಯಲ್ಲಿ ಸೇರಿಸಿದ್ದೆ. ಆ ಹುಡುಗ ನಮ್ಮ ವ್ಯವಹಾರಕ್ಕೆ ಬಹಳ ಬೇಕಾದವನು ಎಂದು. ಆ ಹುಡುಗನನ್ನು ಉಳಿಸಿಕೊಳ್ಳುವುದು ಮುಖ್ಯವಲ್ಲವಾ? ಸಂಬಳ ಜಾಸ್ತಿ ಮಾಡದೆ ಅಥವಾ ನೀವೇ ಉಪಯೋಗಿಸಿದ `ಹರಾಜು ಪ್ರಕ್ರಿಯೆ’ಯನ್ನು ನಡೆಸದೆ ಅವನನ್ನು ಹೇಗೆ ಕಂಪನಿಯಲ್ಲೇ ಉಳಿಸಿಕೊಳ್ಳುವಿರಿ?”

ಇದು ಸದ್ಯದ ಸಮಾಜಸ್ಥಿತಿಯಲ್ಲಿ ಉತ್ತರವಿಲ್ಲದ ಪ್ರಶ್ನೆ ಎಂದು ಶಿವಸ್ವಾಮಿಗೆ ತಿಳಿದಿತ್ತು. ಆ ಜೀನ್ಸ್‍ಪ್ಯಾಂಟ್ ಟೀಶರ್ಟಿನ ವ್ಯಕ್ತಿ ಸರಿಯಾಗಿ ಗುರುತಿಸಿದಂತೆ ನಾನು ಹೊರಗಿನ ವೃತ್ತದಲ್ಲಿದ್ದೇನೆ ಮತ್ತು ಅವನು ಒಳಗಿನ ವೃತ್ತದಲ್ಲಿದ್ದಾನೆ. ನಿಜಕ್ಕೂ ಪರಿಹಾರ ಹೊರಗಿನ ವೃತ್ತದಲ್ಲಿಯೇ ಇರುವುದು, ಆದರೆ ಅದು ಹೊರಗಿನ ವೃತ್ತದಿಂದ ಒಳಗಿನ ವೃತ್ತಕ್ಕೆ ಪ್ರವೇಶಿಸುವ ಮೊದಲು ಒಳಗಿನ ವೃತ್ತವು ಸುಟ್ಟು ಭಸ್ಮವಾಗಿರುತ್ತದೆ. ಹೆಚ್ಚಿನ ಹಣಕ್ಕಾಗಿ ಕಂಪನಿಯಿಂದ ಕಂಪನಿಗೆ ಪದೇ ಪದೇ ನೆಗೆದುಕೊಳ್ಳುವ ಈ ಬಗೆಯ ಸಾಮಾಜಿಕ ಸಮಸ್ಯೆಗೆ ಶೀಘ್ರ ಪರಿಹಾರ, ಇವರು ಸಾಫ್ಟ್‍ವೇರ್‍ನವರು ಕರೆಯುತ್ತಾರಲ್ಲ, ಕ್ವಿಕ್ ಫಿಕ್ಸ್, ಅವುಗಳಿರುವುದಿಲ್ಲ. ಶಿವಸ್ವಾಮಿ ಇನ್ನೇನು ಮಾತನಾಡುವವರಿದ್ದರು ಆಗ ಶ್ಯಾಮಲಾ ಮೆನನ್ ಮಾತನಾಡಿದರು.

“ನೀವು ಈ ಬಗೆಯ ಪರಿಸ್ಥಿತಿಯನ್ನು ಎದುರಿಸಿಲ್ಲ ಎಂದು ಗೊತ್ತು. ಬಿಇಎಲ್ ನಂತಹ ಪಬ್ಲಿಕ್ ಸೆಕ್ಟರ್‍ನಲ್ಲಿ ಯಾರು ಆ ಹುಡುಗನ ಮಾತು ಕೇಳುತ್ತಾರೆ? ಕೇಳಿದರೂ ದಿಢೀರನೆ ಒಬ್ಬ ನೌಕರನ ಸಂಬಳವನ್ನು ಹೇಗೆ ಶೇಕಡಾ ಐವತ್ತು ಏರಿಸಬಲ್ಲರು? ಏರಿಸಬಲ್ಲರು ಎಂದು ಅಂದುಕೊಂಡರೂ ಹೇಗೆ ಒಂದೇ ದಿನದಲ್ಲಿ, ಕೆಲವು ಗಂಟೆಗಳಲ್ಲಿ ನಿರ್ಧಾರವನ್ನು ತೆಗೆದುಕೊಂಡು ಪ್ರೈವೇಟ್ ಕಂಪನಿಯೊಂದಿಗೆ ಸ್ಪರ್ಧಿಸಬಲ್ಲರು? ಸರಿಯಲ್ಲವಾ ಮಿಸ್ಟರ್ ಶಿವಸ್ವಾಮಿ ನಾನು ಹೇಳುತ್ತಿರುವುದು? ನಿಮ್ಮದೆಲ್ಲ ಕೇಂದ್ರದಿಂದ ಬರುವ ಪೇ ರಿವಿಜನ್‍ಗಳ ಮೇಲೆ ಹೋಗುತ್ತದೆ, ಅಲ್ಲವಾ?”ಎಂದರು.

ಅವಳ ವ್ಯಂಗ್ಯವನ್ನು ಗಮನಿಸದಂತೆ ಶಿವಸ್ವಾಮಿ ಉತ್ತರಿಸಿದರು. “ಹೌದು, ನಮ್ಮದು ಪೇ ರಿವಿಜನ್ ಆಧಾರಿತವಾದದ್ದು ಮತ್ತು ಕೇಂದ್ರ ಸರಕಾರದ ಕಮಿಟಿಗಳು ನಿರ್ಧರಿಸುತ್ತವೆ. ನೌಕರರ ಸಂಬಳವನ್ನು ಯಾವಾಗ ಜಾಸ್ತಿ ಮಾಡಬೇಕು ಎಷ್ಟು ಜಾಸ್ತಿ ಮಾಡಬೇಕು ಎನ್ನುವುದು ನಮ್ಮ ಎಚ್‍ಆರ್ ಡಿಪಾರ್ಟ್‍ಮೆಂಟಿನ ಕೈನಲ್ಲಿರುತ್ತಿರಲಿಲ್ಲ. ಆದರೆ, ಹಾಗೆ ಆ ಶಕ್ತಿ ಕೈನಲ್ಲಿದ್ದರೂ ಅದನ್ನು ಈ ಬಗೆಯಲ್ಲಿ, ನೀವು ತಿಳಿಸಿದ ಉದಾಹರಣೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಉಪಯೋಗಿಸಬಾರದು, ಎನ್ನುವುದು ನನ್ನ ತಿಳುವಳಿಕೆ. ಉಪಯೋಗಿಸುವುದು ಸುಲಭ, ಆದರೆ ಪರಿಣಾಮಗಳು ವಿಪರೀತ. ಆ ಹುಡುಗನೋ ಹುಡುಗಿಯೋ ಕಂಪನಿಯಲ್ಲಿ ತನ್ನ ಸ್ನೇಹಿತರಿಗೆ ಹೀಗಾಯಿತು ಎಂದು ಗುಟ್ಟುಬಿಟ್ಟರೆ ಅವರೆಲ್ಲ ಅದೇ ತಂತ್ರವನ್ನು ಉಪಯೋಗಿಸಿ ಎಚ್‍ಆರ್ ಮ್ಯಾನೇಜರ್‍ನ ಬಾಗಿಲು ತಟ್ಟಿದರೆ ಈ ಪಂದ್ಯ ನಮ್ಮನ್ನು ಎಲ್ಲಿಗೆ ಮುಟ್ಟಿಸುತ್ತದೆ?”

ರವಿರಾಜ ಥಕ್ಕರ್‍ಗೆ ಸಾಕಾಗಿಹೋಗಿತ್ತು. ಇನ್ನು ಟೈಮ್‍ವೇಸ್ಟ್ ಸಹಿಸುವುದಿಲ್ಲ ಎನ್ನುವಂತೆ ಸಮಯ ನೋಡಿಕೊಂಡು ತನ್ನೆದುರಿನ ನೋಟ್‍ಬುಕ್ಕನ್ನು ಮುಚ್ಚಿ ಕೈ ಎರಡನ್ನೂ ಟೇಬಲ್ಲಿನ ಮೇಲೆ ಊರಿಕೊಂಡ. ಆದರೆ ಶ್ಯಾಮಲಾ ಚರ್ಚೆಯನ್ನು ಮುಂದುವರೆಸಿದರು.

“ಇಲ್ಲಿಯೇ ನಮಗೂ ನಿಮಗೂ ದೊಡ್ಡ ವ್ಯತ್ಯಾಸವಿರುವುದು, ಶಿವಸ್ವಾಮಿ. ನೀವು ಬ್ಯುಸಿನೆಸ್ ದೃಷ್ಟಿಯಿಂದ ನೋಡುತ್ತಿಲ್ಲ. ಪ್ರಭು ಆ ಪ್ರಶ್ನೆಯನ್ನು ಕೇಳಿದ್ದು ಸುಮ್ಮನೆ ನಿಮ್ಮನ್ನು ಪರೀಕ್ಷಿಸುವುದಕ್ಕಿಂತ ಅವನು ನಿಜಕ್ಕೂ ಆ ಸ್ಥಿತಿಯಲ್ಲಿದ್ದಾನೆ ಎಂದು ತೋರಿಸಲು. ನೌಕರರನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವುದು ಪ್ರತಿದಿನದ ತಲೆನೋವಾಗಿದೆ. ಬಿಟ್ಟುಹೋಗುತ್ತಿರುವ ಆ ಹುಡುಗನನ್ನು ನೀವು ಉಳಿಸಿಕೊಳ್ಳಬೇಕಷ್ಟೇ. ಎಚ್‍ಆರ್ ದೃಷ್ಟಿಯಿಂದ ಯಾವ ಮಾರ್ಗಗಳನ್ನು ನೀವು ತೆಗೆದುಕೊಳ್ಳುತ್ತೀರೋ ಅದು ಪ್ರಭುವಿಗೆ ಮುಖ್ಯವಲ್ಲ, ಏಕೆಂದರೆ ಅವನು ಡೆಲವರಿಗೆ ಹೆಡ್. ಇದಕ್ಕೆ ಉತ್ತರವನ್ನು ನಿಮ್ಮಿಂದ ನಿರೀಕ್ಷಿಸುತ್ತಿದ್ದೆವು” ಎಂದರು.

“ಕ್ಷಮಿಸಿ. ನಿಮಗೆ ಏನು ಹೇಳಬೇಕೋ ನನಗೆ ತಿಳಿಯುತ್ತಿಲ್ಲ. ಆ ಹುಡುಗನ ಮಾತು ಕೇಳಿ ಅವನ ಸಂಬಳವನ್ನು ಏಕಾಏಕಿ ಏರಿಸಿದರೆ ಅದು ಸಮಾಜಕ್ಕೆ ನಾವು ಮಾಡುವ ದ್ರೋಹವಾಗುತ್ತದೆ. ನಾನು ಹಾಗೆ ಮಾಡಲಾರೆ. ಹಣವೆನ್ನುವುದು ಜೀವನದ ಅಗತ್ಯದ್ದು. ಅದು ಅಷ್ಟಕ್ಕೇ ಮೀಸಲಿರಬೇಕು. ಹಣದ ಹಿಂದೆ ಹೋದವರನ್ನು ತೃಪ್ತಿ ಪಡಿಸಲಾಗುವುದಿಲ್ಲ. ನೀವು ಕೊಡುತ್ತಿರುವ ಸಂಬಳ ಆ ವ್ಯಕ್ತಿಯ ಜಾಣ್ಮೆ ಮತ್ತು ಅನುಭವಗಳಿಗೆ ಸರಿಯಾಗಿದ್ದರೆ ಮತ್ತೇನೂ ಮಾಡುವ ಅವಶ್ಯಕತೆಯಿಲ್ಲ. ಅದನ್ನು ಆ ಹುಡುಗನೇ ಅರಿತುಕೊಳ್ಳಬೇಕು ಅಥವಾ ಅರಿತುಕೊಳ್ಳುವಂತೆ ಮಾಡಬೇಕು. ಅಲ್ಲಮಪ್ರಭುವಿನ ಒಂದು ವಚನವಿದೆ. ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ, ಧೀರರೂ ಅಲ್ಲ. ನಾನು ಆ ಹುಡುಗನಿಗೆ ಈ ಸಂದೇಶವನ್ನು ಕೊಡುತ್ತೇನೆ” ಎಂದರು.

“ಬ್ಯುಸಿನೆಸ್ ಏಟು ತಿಂದರೂ ಸಹಾ?”

“ಒಬ್ಬ ನೌಕರನ ನಿರ್ಗಮನದಿಂದ ಬ್ಯುಸಿನೆಸ್ ಆ ಮಟ್ಟಕ್ಕೆ ಏಟು ತಿನ್ನುತ್ತದೆ ಎನ್ನುವುದಾದರೆ ನಾವು ಫಿಕ್ಸ್ ಮಾಡಬೇಕಾಗಿರುವುದು ಈ ಸನ್ನಿವೇಶವನ್ನಲ್ಲ, ತೊಂದರೆ ಬೇರೆಯೆಲ್ಲೋ ಇದೆ” ಎಂದರು ಬಿಟ್ಟುಕೊಡದಂತೆ.

ರವಿರಾಜ ಶ್ಯಾಮಲಾಳ ಕಡೆಗೆ ತಿರುಗಿ ಇನ್ನು ಸಾಕು ಎಂದ. ಶಿವಸ್ವಾಮಿಯೂ ತಮ್ಮ ಹ್ಯಾಂಡ್‍ಬ್ಯಾಗನ್ನು ಎತ್ತಿಕೊಳ್ಳುತ್ತ ಎದ್ದು ನಿಂತರು. ಮೂವರೂ ಎದ್ದು ನಿಂತು ಅವರನ್ನು ಬೀಳ್ಕೊಟ್ಟರು.

ಶಿವಸ್ವಾಮಿ ಆ ಕಟ್ಟಡದಿಂದ ಹೊರಗೆ ಬಂದಾಗ ಬಿಸಿಲು ಸೂಜಿಮೊನೆಯಂತೆ ಚುಚ್ಚುತ್ತಿತ್ತು. ಬರುವಾಗ ಈ ಕಡೆಯಿಂದಲೇ ಬಂದಿದ್ದು ಎಂದು ಮೆಟ್ರೋ ಸ್ಟೇಷನ್ನಿಗೆ ಯಾವುದೋ ಭ್ರಮೆಯಲ್ಲಿದ್ದವರಂತೆ ಹೊರಟವರು ಹೋಗಿದ್ದು ವಿರುದ್ಧ ದಿಕ್ಕಿಗೆ. ಎಷ್ಟೋ ದೂರ ನಡೆದ ಮೇಲೆ ಅನುಮಾನ ಬಂದು ಯಾರನ್ನಾದರು ಕೇಳೋಣವೆಂದು ನೋಡಿದರೆ ಹತ್ತಿರದಲ್ಲಿ ಯಾರೂ ಕಾಣಲಿಲ್ಲ. ಅಲ್ಲೊಂದು ಬಂಗಲೆಯಂತಹ ಮನೆಯನ್ನು ಒಬ್ಬ ಕಾವಲುಗಾರ ಹೆಣಕಾಯುವವನಂತೆ ತೂಕಡಿಕೆಯಲ್ಲಿ ಕಾಯುತ್ತಿದ್ದ. ಅವನನ್ನು ಎಬ್ಬಿಸಿ ಕೇಳಿದ ಮೇಲೆ ವಿರುದ್ಧದಿಕ್ಕಿಗೆ ಬಂದದ್ದು ತಿಳಿಯಿತು. ಮತ್ತೆ ವಾಪಸ್ಸು ಹೊರಟು ಡಿಟಿ ಸಾಫ್ಟ್‍ವೇರ್ ಸಲೂಷನ್ಸ್ ಕಟ್ಟಡವನ್ನು ದಾಟಿ ಎಂಜಿ ರೋಡು ತಲುಪಿ ಮೆಟ್ರೋ ಸ್ಟೇಷನ್ನಿಗೆ ಬಂದರು. ಮೈಯಿಂದ ಬೆವರು ಕಿತ್ತುಹರಿಯುತ್ತಿತ್ತು. ಬಂದು ನಿಲ್ಲುವ ಪ್ರತಿ ಟ್ರೈನಿಗೂ ವಿಪರೀತ ಜನ. ಅಲ್ಲಿಂದ ಮೆಜೆಸ್ಟಿಕ್ ಸ್ಟೇಷನ್ನಿಗೆ ಬಂದು ಮತ್ತೊಂದು ಟ್ರೈನನ್ನು ಹಿಡಿದು ಯೆಲಚೇನಹಳ್ಳಿ ಸ್ಟೇಷನ್ ತಲುಪುವ ವೇಳೆಗೆ ಬಿಸಿಲು ಇಳಿದು ಸಂಜೆಯಾಗಿತ್ತು. ಮೆಟ್ರೋ ಸ್ವೇಷನ್ನಿನಿಂದ ಬಸ್ಸು ಹಿಡಿದು ತಲಘಟ್ಟಪುರಕ್ಕೆ ಬಂದು ಅನಂತರ ನಡೆದು ಮನೆ ಸೇರುವ ಹೊತ್ತಿಗೆ ಶಿವಸ್ವಾಮಿ ತುಂಬ ಆಯಾಸಗೊಂಡಿದ್ದರು.

(ಕೃತಿ: ಒಂದೊಂದು ತಲೆಗೂ ಒಂದೊಂದು ಬೆಲೆ (ಕಾದಂಬರಿ), ಲೇಖಕರು: ಎಂ. ಆರ್.‌ ದತ್ತಾತ್ರಿ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 250/-)