ಮಂಜುನಾಥ ಶಾಲೆಗೆ ಹೋಗುವಾಗ ದಿನಾಲೂ ಅವನ ತಾಯಿಯನ್ನು ತಬ್ಬಿ ಮುದ್ದಾಡುತ್ತಿದ್ದ. ಅಷ್ಟೊಂದು ಪ್ರೀತಿ ವಾತ್ಸಲ್ಯ ಇಬ್ಬರಲ್ಲೂ ತುಂಬಿತ್ತು. ‘ತಾಯಿ ವಾತ್ಸಲ್ಯ ಮತ್ತು ಮಗನ ಮಂದಹಾಸ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ’ ಎನ್ನುವ ಶಿರ್ಷಿಕೆಯೊಂದಿಗೆ ಅದು ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಅಷ್ಟೊಂದು ಅಮೋಘವಾದ ಪ್ರೀತಿ ಇವರದಾಗಿತ್ತು. ಅದನ್ನು ನೋಡಿ ಮಗ ಫೋಟೋದಂತೆ ಕಟ್ಟು ಹಾಕಿಸಲು ತಾಯಿಗೆ ಹೇಳಿದ. ಬಾಲ್ಯದ ಆ ಅಮೂಲ್ಯ ನೆನಪನ್ನು ಗೆಳೆಯರಾದ ಪಲ್ಲವಿ, ಪವನ, ಆಕಾಶ ನೆನಪಿಸಿಕೊಳ್ಳುತ್ತಾರೆ. ಅವ್ವ ಬಹಳ ಸಂತೋಷ ಪಡುವ ರೀತಿಯನ್ನು ಲೇಖಕರು ಬಹಳ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ.
ಡಾ. ಬಸು ಬೇವಿನಗಿಡದ ಬರೆದ “ಒಳ್ಳೆಯ ದೆವ್ವ” ಮಕ್ಕಳ ಕಾದಂಬರಿಯ ಕುರಿತು ನಾಗರಾಜ ಎಂ ಹುಡೇದ ಬರಹ

ಡಾ. ಬಸು ಬೇವಿನಗಿಡದ ಅವರು ಮಕ್ಕಳ ಸಾಹಿತ್ಯಕ್ಕೆ ಕಥೆ, ಕಾದಂಬರಿಯಂತಹ ಮಹತ್ವದ ಕೃತಿಗಳನ್ನು ನೀಡಿದ್ದಾರೆ. ಇವರ ‘ಓಡಿ ಹೋದ ಹುಡುಗ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರವೂ ದೊರೆತಿದೆ. ಇವರ ಇತ್ತೀಚಿನ ಮಹತ್ವದ ಕಾದಂಬರಿ ‘ಒಳ್ಳೆಯ ದೆವ್ವ’.

ಈ ಕಾದಂಬರಿಯ ಕೇಂದ್ರಬಿಂದು ಮುಖ್ಯ ಪಾತ್ರದಾರಿ ಮಂಜುನಾಥ. ಅವನಿಗೆ ದೆವ್ವ ಹಿಡಿದಿದೆ ಎಂಬುದೇ ಮುಖ್ಯ ಕಥೆ. ದೆವ್ವದ ಕುರಿತು ಇಲ್ಲಿಯವರೆಗೂ ನಾನಾ ಕಥೆಗಳು, ಚಲನಚಿತ್ರಗಳು ಬಂದಿವೆ. ಅವೆಲ್ಲ ನಮ್ಮನ್ನು ರೋಮಾಂಚನಗೊಳಿಸಿದ್ದಲ್ಲದೆ, ಅಂಜುಬುರುಕರನ್ನಾಗಿಸಿವೆ. ಆದರೆ ಇಲ್ಲಿ ಡಾ.ಬಸು ಬೇವಿನಗಿಡದ ಅವರು ದೆವ್ವವನ್ನು ನಂಬುತ್ತಿದ್ದವರನ್ನು ದೆವ್ವವೇ ಇಲ್ಲ ಎಂದು ಹೇಳುವಂತೆ ಮಾಡಿದ್ದಾರೆ. ಓದುಗರಿಗೆ ಸ್ಪಷ್ಟವಾಗುವಂತೆ ಹಲವಾರು ಅಂಶಗಳನ್ನು ನಿರೂಪಿಸಿದ್ದಾರೆ. ಎಳೆಯ ಓದುಗರಲ್ಲಿ ಧೈರ್ಯದ ಕಿಚ್ಚು ತುಂಬಿದ್ದಾರೆ.

(ಡಾ. ಬಸು ಬೇವಿನಗಿಡದ)

ಮಂಜುನಾಥ ಧಾರವಾಡದ ಹತ್ತಿರವಿರುವ ಪ್ರೌಢಶಾಲೆಗೆ ಸೈಕಲ್ ಮೇಲೆ ಹೋಗಿ ಬರುತ್ತಿದ್ದ. ಕ್ರೀಯಾಶೀಲತೆಯಿಂದಿದ್ದ ಮಂಜುನಾಥ ಒಳ್ಳೆಯ ವಿದ್ಯಾರ್ಥಿಯಾಗಿದ್ದ. ಇವರದು ಬಡ ಕುಟುಂಬ ಆದರೂ ತಾಯಿ ನೀಲವ್ವ ಅವನನ್ನು ಮುದ್ದಿನಿಂದ ಸಾಕಿದ್ದಳು. ಒಂದು ದಿನ ಸಾಯಂಕಾಲ ಮಂಜುನಾಥ ಅದೇಕೋ ಏನೇನೋ ಮಾತನಾಡೋದು, ಒಂದುತರಹ ವರ್ತನೆಯಲ್ಲಿ ವಿಚಿತ್ರವಾಗಿ ಕಾಣಿಸತೊಡಗಿದ. ಆಗ ಮಂಜುನಾಥನಿಗೆ ದೆವ್ವ ಹೊಕ್ಕಿದೆ ಎಂಬ ಮಾತು ಕೇಳಿ ನೀಲವ್ವಳಿಗೆ ದಿಕ್ಕೆ ತೋಚದಂತಾಯಿತು. ಹೀಗೆ ಕಾದಂಬರಿ ಆರಂಭವಾಗುತ್ತದೆ.

ಮಗನ ಬಗ್ಗೆ ತಾಯಿ ತೋರುವ ಕಕ್ಕುಲತೆಯನ್ನು ಲೇಖಕರು ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ. ‘ಇಷ್ಟು ಸಣ್ಣ ಹುಡುಗನೇ ಬೇಕಾಗಿತ್ತಾ? ಮಲ್ಲಿಗೆ ಅರಳಿದಂತೆ ಮೆಲ್ಲಗೆ ಮಾತನಾಡುವ ಈ ಕಂದನೆ ಅದಕ್ಕೆ ಸಿಗಬೇಕಾಗಿತ್ತಾ? ದಪ್ಪನವರು, ತೆಳ್ಳಗಿರೋರು, ಎತ್ತರೆತ್ತದವರು ಹೀಗೆ ವಿವಿಧ ತರಹದ ಜನ ಬೇಕಾದ್ರು ಇದ್ರು. ಅವರನ್ನು ಹಿಡಿದುಕೊಳ್ಳಬಹುದಿತ್ತು’. ಎಂದು ತಾಯಿ ದೆವ್ವನಿಗೆ ಪರಿಪರಿಯಾಗಿ ಕೇಳುತ್ತಾಳೆ.

ಹಾಗೆಯೇ ದೆವ್ವ ಮಂಜುನಾಥನಿಗೆ ಹಿಡಿದುಕೊಳ್ಳಲೂ ಕಾರಣವನ್ನು ಊಹಿಸುತ್ತಾಳೆ. ‘ಹುಡುಗ ತನಗೇನು ಅಪಾಯ ಮಾಡೋದಿಲ್ಲ ಅನಿಸಿರಬೇಕು. ಅದು ಅವನಂತೆ ಆಟ ಆಡಬೇಕು, ಕುಣಿಬೇಕು, ಸೈಕಲ್ ಹೊಡಿಬೇಕು, ಗಿರಿ-ಗವ್ಹರಗಳನ್ನು ಸುತ್ತಬೇಕು ಎಂದು ಕನಸು ಕಂಡಿರಬೇಕು’ ಎಂದು ತಾಯಿ ನೀಲವ್ವ ಮಂಜುನಾಥನ ಸ್ವಭಾವ ಮತ್ತು ಒಳ್ಳೆಯತನವನ್ನು ಈ ಮೂಲಕ ಹೇಳುತ್ತಾರೆ. ಅಂದರೆ ಲೇಖಕರು ಕಾದಂಬರಿಯನ್ನು ಮುಗ್ಧ ಮಗುವಿನಂತೆ ಪೋಷಣೆ ಮಾಡುತ್ತಾ ಹೋಗಿದ್ದಾರೆ. ಪ್ರತಿಯೊಂದನ್ನೂ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ.

ಮಂಜುನಾಥ ಶಾಲೆಗೆ ಹೋಗುವಾಗ ದಿನಾಲೂ ಅವನ ತಾಯಿಯನ್ನು ತಬ್ಬಿ ಮುದ್ದಾಡುತ್ತಿದ್ದ. ಅಷ್ಟೊಂದು ಪ್ರೀತಿ ವಾತ್ಸಲ್ಯ ಇಬ್ಬರಲ್ಲೂ ತುಂಬಿತ್ತು. ‘ತಾಯಿ ವಾತ್ಸಲ್ಯ ಮತ್ತು ಮಗನ ಮಂದಹಾಸ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ’ ಎನ್ನುವ ಶಿರ್ಷಿಕೆಯೊಂದಿಗೆ ಅದು ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಅಷ್ಟೊಂದು ಅಮೋಘವಾದ ಪ್ರೀತಿ ಇವರದಾಗಿತ್ತು. ಅದನ್ನು ನೋಡಿ ಮಗ ಫೋಟೋದಂತೆ ಕಟ್ಟು ಹಾಕಿಸಲು ತಾಯಿಗೆ ಹೇಳಿದ. ಬಾಲ್ಯದ ಆ ಅಮೂಲ್ಯ ನೆನಪನ್ನು ಗೆಳೆಯರಾದ ಪಲ್ಲವಿ, ಪವನ, ಆಕಾಶ ನೆನಪಿಸಿಕೊಳ್ಳುತ್ತಾರೆ. ಅವ್ವ ಬಹಳ ಸಂತೋಷ ಪಡುವ ರೀತಿಯನ್ನು ಲೇಖಕರು ಬಹಳ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ತಾಯಿಯು ಮಾಡುವ ಹುಗ್ಗಿ, ತಾಲಿಪಟ್ಟು, ಸವತಿಬೀಜದ ಪಾಯಸ ಮತ್ತು ತಿಂಡಿ ತಿನಿಸುಗಳ ಸವಿಯನ್ನು ಕಾದಂಬರಿಯಲ್ಲಿ ಸವಿಯುವಂತೆ ಮಾಡಿದ್ದಾರೆ. ಉಂಡವರಿಗೆ ಅವುಗಳ ರುಚಿ ಮತ್ತೊಮ್ಮೆ ಬಾಯಲ್ಲಿ ನೀರೂರಿಸುತ್ತವೆ. ಬದಲಾದ ಈಗಿನ ಆಹಾರ ಪದ್ಧತಿಯನ್ನು ತುಲನೆ ಮಾಡುವಂತೆ ಮಾಡಿದ್ದಾರೆ. ಅವನ ಗೆಳೆಯರ ಒಡನಾಟ, ಆತ್ಮೀಯತೆ ನಮ್ಮ ಗೆಳೆಯರ ಗುಂಪನ್ನು ನೆನಪಿಸುತ್ತವೆ.

ಇಂತಹ ಮಂಜುನಾಥನಿಗೆ ದೆವ್ವ ಬಡಿದಿದೆ ಎಂದರೆ ಆಶ್ಚರ್ಯ. ಮಕ್ಕಳು ಕ್ಲಾಸ್ ರೂಂನಲ್ಲಿ ತರ್ಲೆ ಮಾಡೋದು ಇದ್ದೇ ಇರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಹೆಸರಿಡೋದು, ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳೋದು ಮಂಜುನಾಥನ ಗೆಳೆಯರ ಗುಂಪಿನಲ್ಲಿಯೂ ಇತ್ತು.

ಈಗ ದೆವ್ವ ಬಿಡಿಸುವ ಕಾರ್ಡನ್ನು ಮಾಡಿಕೊಂಡಿರುವ ಗಾಳೆಪ್ಪ ಮಹಾರಾಜ ಮಂಜುನಾಥನಿಗೆ ಹಿಡಿದ ದೆವ್ವ ಬಿಡಿಸಲು ಬರುತ್ತಾನೆ. ಅವನ ಆಕಾರವೂ ದೆವ್ವನ ತರಹವೇ ಇತ್ತು. ಅವನು ಮಂಜುನಾಥನಿಗೆ ಹೊಡಿಯೋದು ನೋಡಿದ್ರ ಹೊಟ್ಟೆಯ ಕರುಳು ಕಿತ್ತು ಬರುತ್ತಿತ್ತು. ಇಲ್ಲಿ ನಡೆಯುವ ಘಟನೆಗಳನ್ನು ಓದುತ್ತಾ ಹೋದಂತೆ ಮೈ ಜುಮ್ಮೆನ್ನುತ್ತದೆ. ಮಗ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿದ್ದಾನೆ. ಏನೂ ಊಟ ಮಾಡಿಲ್ಲ ಮತ್ತು ಮಾತನಾಡುವುದಿಲ್ಲ. ಮಗನ ಈ ಸ್ಥಿತಿಯನ್ನು ನೋಡಿ ಮಮ್ಮಲ ಮರುಗುತ್ತಾಳೆ.

ಕಾದಂಬರಿಯಲ್ಲಿ ಹಾಸ್ಯದ ಲೇಪನ ಹಚ್ಚಿದ ಬೆಚ್ಚಪ್ಪ ಕಾಕಾ ವಿಶೇಷ ಪಾತ್ರವಹಿಸುತ್ತಾನೆ. ಹಾಗೆಯೇ ಧಾರವಾಡದ ಗೋಡೆ ಗಡಿಯಾರ ತಯಾರಿಸುವ ಕಾರ್ಖಾನೆ ಕುರಿತು ಇದ್ದ ನಂಬಿಕೆಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನೀರಸಾಗರದಂತ ಪ್ರದೇಶಗಳಿಗೆ ಭೇಟಿ ನೀಡಿದಾಗ ಇರಬೇಕಾದ ಎಚ್ಚರವನ್ನು ನಮಗೆ ತಿಳಿಸುತ್ತದೆ. ಮಕ್ಕಳ ಅಜಾಗೂರಕತೆಯಿಂದ ನಡೆದ ನೀರಿನಲ್ಲಿ ಮುಳುಗಿಹೋದ ಘಟನೆಯನ್ನೂ ನೆನಪಿಸುತ್ತಾರೆ. ಮನೆಯಲ್ಲಿ ಹಿರಿಯರು, ಓಣಿಯಲ್ಲಿ ಜನರು ಮಾತನಾಡುವುದನ್ನು ಮಕ್ಕಳೂ ಆಲಿಸುತ್ತಾರೆ. ಅವೆಲ್ಲವೂಗಳನ್ನೂ ಪಲ್ಲವಿ, ಆಕಾಶ, ದುರ್ಗಾ, ಪವನ ಮಾತಾಡಿಕೊಳ್ಳುವದು ಮತ್ತು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಲೇಖಕರು ಅರ್ಥವತ್ತಾಗಿ ಬರಹಕ್ಕಿಳಿಸಿದ್ದಾರೆ.

‘ಹುಡುಗ ತನಗೇನು ಅಪಾಯ ಮಾಡೋದಿಲ್ಲ ಅನಿಸಿರಬೇಕು. ಅದು ಅವನಂತೆ ಆಟ ಆಡಬೇಕು, ಕುಣಿಬೇಕು, ಸೈಕಲ್ ಹೊಡಿಬೇಕು, ಗಿರಿ-ಗವ್ಹರಗಳನ್ನು ಸುತ್ತಬೇಕು ಎಂದು ಕನಸು ಕಂಡಿರಬೇಕು’ ಎಂದು ತಾಯಿ ನೀಲವ್ವ ಮಂಜುನಾಥನ ಸ್ವಭಾವ ಮತ್ತು ಒಳ್ಳೆಯತನವನ್ನು ಈ ಮೂಲಕ ಹೇಳುತ್ತಾರೆ. ಅಂದರೆ ಲೇಖಕರು ಕಾದಂಬರಿಯನ್ನು ಮುಗ್ಧ ಮಗುವಿನಂತೆ ಪೋಷಣೆ ಮಾಡುತ್ತಾ ಹೋಗಿದ್ದಾರೆ. ಪ್ರತಿಯೊಂದನ್ನೂ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ.

ನಮ್ಮ ಸಮಾಜದಲ್ಲಿ ಅನೇಕ ಕ್ಷುಲ್ಲಕ ವಿಚಾರಗಳೂ ಗಾಳಿಸುದ್ದಿಯಾಗಿ ಹರಡುವುದನ್ನು ನಾವು ಕಾಣುತ್ತೇವೆ. ಇಲ್ಲಿಯೂ ಸಹಿತ ಕರೆನೋ-ಸುಳ್ಳೋ ಗೊತ್ತಿಲ್ಲ ಆ ಸಂದರ್ಭಕ್ಕಾದರೂ ನಂಬಿ ಬಿಡುವ ಪ್ರಸಂಗಗಳಿವೆ. ಹಾಗಾಗಿ ದೆವ್ವದ ಬಗ್ಗೆ ಅನೇಕ ಅವರವರ ಜೀವನದ ಘಟನೆಗಳು, ಅನಿಸಿಕೆಗಳು ವ್ಯಕ್ತವಾಗಿವೆ.

ಭಗವತಿ ಗುರುಗಳ ಮೂಲಕ ವೈದ್ಯರ ಕಡೆ ಕರೆದುಕೊಂಡು ಹೋಗಲು ಹೇಳಿದರು. ವೈಜ್ಞಾನಿಕ ಕಾರಣಗಳನ್ನು ಹುಡುಕಿ ಪರಿಹಾರ ನೀಡುವ ಅವಶ್ಯಕತೆಯನ್ನೂ ಮತ್ತು ಮಕ್ಕಳಲ್ಲಿ ಬೆಳೆಸಲು ಲೇಖಕರು ಪ್ರಯತ್ನಿಸಿರುವುದು ಕೃತಿಗೆ ಮೆರಗು ತಂದಿದೆ ಎನ್ನಬಹುದು. ದೆವ್ವ, ಭೂತ ಕೇವಲ ನಮ್ಮ ಭ್ರಮೆ ಎಂಬುದನ್ನು ದೃಢಪಡಿಸುತ್ತದೆ.

ಅಂತಿಮವಾಗಿ ಮಂಜುನಾಥ ಅವನ ತಾಯಿಯ ಕನಸಿನಲ್ಲಿ ಬರುತ್ತಾನೆ. ಅಲ್ಲಿ ನಡೆದ ಭಯಾನಕ ದೃಶ್ಯದಿಂದ ನಲುಗಿಹೋಗುತ್ತಾಳೆ. ನಿಜ ಜೀವನದಲ್ಲಿ ನಡೆಯದಿರಲಿ ಎಂದು ಕೈ ಕೈ ಹಿಚುಕಿಕೊಳ್ಳುತ್ತಾಳೆ. ಕೊನೆಗೂ ಮಂಜುನಾಥ ಗೆಳೆಯರೊಂದಿಗೆ ಮಾತನಾಡತೊಡಗಿದ. ಆರಾಮವಾದ. ಆದರೆ ನೀಲವ್ವಳಿಗೆ ತಲೆತಿರುಗಿ ಬಿದ್ದದ್ದು ಆ ಇಡೀ ಓಣಿಯ ಜನ ನೋಡಲು ಬಂದರು. ಆಗ ಅವರು ನೀಲವ್ವಳ ಸಹಾಯಕ್ಕೆ ನಿಂತು ಉಪಚಾರ ಮಾಡಿದರು. ಅದು ಅವರ ಅನ್ಯೋನ್ಯ ಪ್ರೀತಿಗೆ, ಸಾಮರಸ್ಯಕ್ಕೆ ಗೆಲುವಾಗುತ್ತದೆ. ಕಾದಂಬರಿ ಇಂತಹ ಬದುಕು ಇಂದಿನ ಜೀವನಕ್ಕೂ ಬೇಕೆಂಬ ಸಂದೇಶವನ್ನು ಸಾರುತ್ತದೆ.

ಕೊನೆಯಲ್ಲಿ ಕಾರವಾರದಲ್ಲಿದ್ದ ಮಂಜುನಾಥನ ತಂದೆಯನ್ನು ಸಂಪರ್ಕಿಸಿ ಊರಿಗೆ ಕರೆಸಿದರು. ಆಗ ಅವನ ತಂದೆ ತಾನು ಒಂದು ಸಾರಿ ಮಂಜುನಾಥನ ತಲೆಗೆ ಹೊಡೆದಿದ್ದರಿಂದ ಪೆಟ್ಟಾಗಿ ಅವನು ಈ ರೀತಿಯಾಗಿ ವರ್ತಿಸಿದನೆಂದು, ತನ್ನ ತಪ್ಪನ್ನು ಅಂದು ಬಿಚ್ಚಿಟ್ಟ. ಪ್ರತಿ ಸಂಸಾರಕ್ಕೂ ಅನ್ಯೋನ್ಯತೆ, ಒಬ್ಬರನ್ನೊಬ್ಬರು ಅರಿತು ನಡೆಯಬೇಕೆಂಬುದನ್ನು ಕಾದಂಬರಿ ಸೂಚ್ಯವಾಗಿ ಹೇಳಿದೆ.

ಕಾದಂಬರಿಗುಂಟ ಗೆಳೆಯರ ಹಾಸ್ಯ, ಪ್ರಶ್ನೆ ಮಾಡುವುದು ಹಾಗೂ ಕೀಟಲೆ ಮಾಡುವ ಸ್ವಭಾವ ಓತಪ್ರೋತವಾಗಿ ಹರಿದಿದೆ. ಹಾಗಾಗಿ ಮಕ್ಕಳಿಗೆ ಇಷ್ಟವಾಗುತ್ತದೆ. ಮೊದ ಮೊದಲು ಓದುವಾಗ ಭಯವೆನಿಸಿದರೂ ಓದುತ್ತಾ ಹೋದಂತೆ ಕಾದಂಬರಿ ಓದಿ ಮುಗಿಸುವಷ್ಟರಲ್ಲಿ ದೆವ್ವಕ್ಕೆ ಅಂಜುವ ಮಕ್ಕಳೂ ಕೂಡ ಧೈರ್ಯವಂತರಾಗಿ ಬದಲಾಗುವುದರಲ್ಲಿ ಸಂದೇಹವಿಲ್ಲ. ಅಂತಹದೊಂದು ಶಕ್ತಿ ಈ ಕೃತಿಗಿದೆ. ಇದು ಈ ಕಾದಂಬರಿಯ ಯಶಸ್ಸೂ ಕೂಡಾ ಆಗಿದೆ.

“ಡಾ. ಬಸು ಬೇವಿನಗಿಡದ ಮಕ್ಕಳಿಗಾಗಿ ಬರೆದ ಅದ್ಭುತ ರಮ್ಯ ಕಾದಂಬರಿ ‘ಒಳ್ಳೆಯ ದೆವ್ವ’. ಹೆಜ್ಜೆ ಹೆಜ್ಜೆಗೂ ಮೈ ನವಿರೇಳುವಂತೆ ನಿರೂಪಿತವಾಗಿರುವ ಕಾದಂಬರಿ ಕೊನೆಗೆ ದೆವ್ವದ ಕಲ್ಪನೆ ಹುಸಿ ಎಂಬುದನ್ನು ರೋಚಕವಾಗಿ ಸ್ಫೋಟಿಸಿ ಮೂಢನಂಬಿಕೆಗಳನ್ನು ಉಚ್ಛಾಟಿಸುವ ರೀತಿ ಆಕರ್ಷಕವಾಗಿದೆ. ಲವಲವಿಕೆಯ ಗದ್ಯ, ಮಕ್ಕಳಿಗೆ ಹಿತವಾಗುವಂಥ ತಮಾಷೆ, ಪುಟ್ಟ ಪುಟ್ಟ ವಾಕ್ಯಗಳಿಂದ ಕೂಡಿರುವ ಈ ಕೌತುಕದ ಕಥೆ ಮಕ್ಕಳ ಮನಸ್ಸನ್ನು ಸೂರೆಗೊಳ್ಳುವುದರೊಂದಿಗೆ ಅವರ ವೈಚಾರಿಕ ಜಗತ್ತನ್ನೂ ಜಾಗೃತಗೊಳಿಸುತ್ತದೆ” ಎಂದು ಖ್ಯಾತ ಮಕ್ಕಳ ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಯವರು ಕೃತಿ ಕುರಿತು ನುಡಿದಿದ್ದಾರೆ.

ಡಾ.ಬಸು ಬೇವಿನಗಿಡದ ಅವರು ಬಳಸಿರುವ ಸಹಜ ಸಂಭಾಷಣೆಗಳು, ನುಡಿಗಟ್ಟುಗಳು, ನಾಣ್ಣುಡಿಗಳು ಕಾದಂಬರಿಗೆ ಗಟ್ಟಿತನ ತುಂಬಿವೆ. ಹೀಗೆ ‘ಒಳ್ಳೆಯ ದೆವ್ವ’ ಕಾದಂಬರಿ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಹಿರಿಮೆ ಗರಿಮೆಯಾಗಿದೆ.

ವಸಂತ ಬಾಲ ಸಾಹಿತ್ಯ ಮಾಲೆ -2 ರ ಅಡಿಯಲ್ಲಿ ಈ ಕೃತಿ ಪ್ರಕಟವಾಗಿದೆ. ಆಕರ್ಷಕ ಮುಖಪುಟ ಮತ್ತು ಒಳಚಿತ್ರಗಳನ್ನು ಸಂತೋಷ ಸಸಿಹಿತ್ಲು ಅವರು ರಚಿಸಿದ್ದಾರೆ. ಅಚ್ಚುಕಟ್ಟಾದ ಮುದ್ರಣದಿಂದಾಗಿ ಕೃತಿ ಓದಲು ಕೈಗೆತ್ತಿಕೊಳ್ಳಲು ಪ್ರೇರಣೆ ನೀಡುತ್ತದೆ.

(ಕೃತಿ: “ಒಳ್ಳೆಯ ದೆವ್ವ” ಮಕ್ಕಳ ಕಾದಂಬರಿ, ಲೇಖಕರು: ಡಾ. ಬಸು ಬೇವಿನಗಿಡದ, ಪ್ರಕಾಶಕರು: ವಸಂತ ಪ್ರಕಾಶನ ಜಯನಗರ, ಬೆಂಗಳೂರು (ಮೊ: 7892106719), ಪುಟಗಳು: 148, ಬೆಲೆ: 160/-)