ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ ಸ್ವರಾಜ್ಯ ಫಂಡಿಗೆ ಅರ್ಪಿತವಾದವು. ಕೊನೆಯಲ್ಲಿ ಆಚಾರ್ಯರೇ ಅವುಗಳನ್ನೆಲ್ಲಾ ಏಲಂ ಹಾಕಿ ಸ್ಫೂರ್ತಿಯ ಮಾತುಗಳಿಂದ ಮೇಲಾಟವೆಬ್ಬಿಸಿ ಆದಷ್ಟು ಹೆಚ್ಚಿನ ಹಣ ಪಡೆಯುತ್ತಿದ್ದರು.
ಡಾ.ಜನಾರ್ದನ ಭಟ್ ಅವರು ಸಾದರಪಡಿಸುತ್ತಿರುವ ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೆ.ಕೆ. ಶೆಟ್ಟಿ ಅವರು ಬರೆದ ಕತೆ “ಕೀರ್ತನ ಕಂಠೀರವ”

 

Starting tomorrow. Await arrival station. Ramacharya.
(ನಾಳೆ ಹೊರಡುವೆನು. ಸ್ಟೇಶನಿನಲ್ಲಿ ಕಾದಿರಿ. ರಾಮಾಚಾರ್ಯ)

ಅಂಕೋಲೆಯಿಂದ ಬಂದ ಈ ತಂತಿಯನ್ನು ನೋಡಿ, ಮಂಗಳೂರ ‘ಕಾಂಗ್ರೆಸ್ ಜನರು’ ಆನಂದೋತ್ಸಾಹದಿಂದ ತುಂಬಿದರು. ಜನಸಾಮಾನ್ಯರನ್ನು ರಾಜಕೀಯ ವಿಚಾರದಲ್ಲಿ ಹುರಿದುಂಬಿಸಲು ಆಚಾರ್ಯರ ಹರಿಕೀರ್ತನೆಗಳೇ ಪಂಚಾಕ್ಷರೀ ಮಂತ್ರವೆಂದು ಅವರು ದೃಢ ನಂಬಿದ್ದರು. ರಾಮಾಚಾರ್ಯರು ಇತರ ಕೀರ್ತನಕಾರರಂತೆ ಜರಿ ಪೇಟಾ ಕಟ್ಟಿಕೊಂಡು, ಥಳಥಳಿಪ ಅಲ್ಪಾಕು ನಿಲುವಂಗಿಯ ಮೇಲೆ ಮಿರಿಮಿರಿ ಶಾಲನ್ನು ಪಾದಗಳ ತನಕ ಬಿಟ್ಟು, ಪಟ್ಟೆ ಧೋತ್ರವುಟ್ಟು, ಆಡಂಬರದಿಂದ ಸುಂದರ ರಾವಣನಂತೆ ಮೆರೆದು, ಗಂಧಾಕ್ಷತೆ, ಪುಷ್ಪ ಮಾಲಾಲಂಕೃತರಾಗಿ, ಆರತಿ ಪಾದಪೂಜೆಗಳನ್ನು ಸ್ವೀಕರಿಸಿ, ನೀರಸ ಧಾರ್ಮಿಕ ತತ್ವಗಳಿಗೆ ಕಟ್ಟುಕಥೆಗಳ ಉಪ್ಪು ಖಾರ ಹಚ್ಚಿ, ಹರಕೆ ಸಲ್ಲಿಸಿ ಜನರಿಗೆ ಪುಣ್ಯ ಹಂಚುವವರಲ್ಲ.

“ಒಂದೇ ನಾಮವು ಸಾಲದೇ| ಶ್ರೀ ಹರಿಯೆಂಬ |
ಒಂದೇ ನಾಮವು ಸಾಲದೇ||
ಒಂದೇ ನಾಮವು ಭವ | ಬಂಧನ ಬಿಡಿಸುವ |
ದೆಂದು ವೇದಗಳು ಆ | ನಂದದಿ ಸಾರ್ವವು ||’’
ಎಂಬ ಪೀಠಿಕೆಯಿಂದ ತನ್ನಷ್ಟಕ್ಕೆ ಒಂದೆಡೆ ಕುಳಿತು “ರಾಮ, ರಾಮ, ರಾಮ” ಅಥವಾ “ನಾರಾಯಣ, ನಾರಾಯಣ, ನಾರಾಯಣ” ಇಲ್ಲವೇ ಒಬ್ಬರ ಹೆಸರನ್ನೇ ಹೇಳುವುದರಿಂದ ಇನ್ನೊಬ್ಬರಿಗೆ ಕೋಪವುಂಟಾಗುವುದಾದರೆ ಬೆಳಗ್ಗೆ ನಾರಾಯಣ, ಸಂಜೆ ರಾಮನಾಮ ಸ್ಮರಣೆಯನ್ನು ಮಾಡಿದ ಕೂಡಲೇ ಪಾಪವೆಲ್ಲವೂ ದೂರವಾಗುವುದೆಂಬ ಜಡ ತತ್ವವನ್ನು ಗಿಳಿಬಾಯಿಪಾಠ ಹೇಳುವವರಲ್ಲ. ಪ್ರಕೃತದ ವಿದ್ಯಮಾನಗಳಿಗನುಗುಣವಾಗಿ ಧಾರ್ಮಿಕಕ್ಕೆ ರಾಜಕೀಯ ಬಣ್ಣವನ್ನು ಚಿತ್ತಾಕರ್ಷಕವಾಗಿ ಕೊಟ್ಟು, ನೂಲುವ ಚರಕವನ್ನು ಸುದರ್ಶನ ಚಕ್ರಕ್ಕೆ ಸರಿಹೋಲಿಸಿ, ಗಾಂಧಿ, ದಾಸ, ತಿಲಕರನ್ನು ಬ್ರಹ್ಮ, ವಿಷ್ಣು, ಮಹೇಶ್ವರರೆಂದು ಚಿತ್ರಿಸಿ, ಖಾದಿಯನ್ನು ಕಾಮಧೇನುವಿಗೆ ತುಲನೆಮಾಡಿ, ಜನರಲ್ಲೆಲ್ಲಾ ತಾತ್ಕಾಲಿಕವಾದ ಕ್ಷೋಭೆಯನ್ನುಂಟುಮಾಡುವವರು. ಇಂತಹ ಹರಿದಾಸರು ಬರುವುದೆಂದರೆ ಮಂಗಳೂರು ಕಾಂಗ್ರೆಸ್ ಕೆಲಸಗಾರರು ತಮ್ಮ ಪಾಲಿನ ಭಾಗ್ಯೋದಯವೆಂದೇ ಭಾವಿಸಿಕೊಂಡು ಹಿರಿಹಿರಿ ಹಿಗ್ಗಿದರು.

ಮರುದಿವಸ ಇನ್ನೊಂದು ತಂತಿ! Started today. Arrange procession with elephants and band. Ramacharya. (ಇಂದು ಹೊರಟಿರುವೆನು. ಆನೆ ಮತ್ತು ಬೇಂಡಿನಿಂದ ಮೆರವಣಿಗೆಯನ್ನು ವ್ಯವಸ್ಥೆ ಮಾಡಿರಿ – ರಾಮಾಚಾರ್ಯ) ಎಂದೇ ತಂತಿಯ ವರ್ತಮಾನ. ಕೂಡಲೇ ಕಾಂಗ್ರೆಸ್ ಕೆಲಸಗಾರರು ಮೆರವಣಿಗೆಯ ಸನ್ನಾಹ ಮಾಡಿದರು. ಸ್ವಯಂ ಸೇವಕರ ಆವೇಶ, ಕಾಂಗ್ರೆಸ್ ಕಡೆಯವರ ಉತ್ಸಾಹ, ಜನರ ಉತ್ಸುಕತೆಯ ಮಧ್ಯೆ ಆಚಾರ್ಯರ ಸವಾರಿ ಬಂದಿಳಿಯಿತು. ಸ್ವಯಂ ಸೇವಕರ ಗಡಣದಿಂದ ಮೆರವಣಿಗೆಯು ಬಹು ಸಂಭ್ರಮದಿಂದ ನಡೆಯಿತು.

ಇದೇ ಸುಸಂದರ್ಭವೆಂದು ಸ್ವಯಂಸೇವಕರು ನೂರಾರು ಗಾಂಧಿಟೊಪ್ಪಿಗಳನ್ನು ಬಲವಂತದಿಂದ ಸಿಕ್ಕಸಿಕ್ಕವರ ತಲೆಗಿಟ್ಟರು. ನಾನೂ ಒಬ್ಬ ಸ್ವಯಂಸೇವಕನಾಗಿದ್ದು ಮೌನವಾಗಿ ಎಲ್ಲವನ್ನೂ ನೋಡುತ್ತಿದ್ದೆನು. ಕೆಲವು ಸ್ವಯಂಸೇಕವರು ಆವೇಶಭರದಿಂದ ಆಚಾರ್ಯರನ್ನು ಹೊತ್ತುಕೊಂಡು ಹೋಗಲೂ ತಯಾರಿದ್ದರು. ಆಚಾರ್ಯರು ಓರ್ವ ಸದ್ಗೃಹಸ್ಥರ ಖಾಸಗೀ ಮನೆಯಲ್ಲುಳಿಯುವುದೆಂದು ನಿಶ್ಚಿತವಾಗಿತ್ತು. ಅಂತೆಯೇ ಮೆರವಣಿಗೆಯು ಆ ಮನೆಗೆ ನಡೆಯಿತು. ಆಚಾರ್ಯರು ತನಗೆ ಸಿದ್ಧವಾದ ನಿವಾಸಕ್ಕೆ ಹೋಗಿ, ಅವರನ್ನು ಒಂದೊಮ್ಮೆ ನೋಡಲು ನುಗ್ಗಿ ನುಸುಳುತ್ತಿದ್ದ ಜನರನ್ನು, ರುಕ್ಷಸ್ವದಿಂದ ಸಂಬೋಧಿಸಿ, “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ….’’ ಎಂಬ ಪುರಾಣವಾದಿ ರಾಜಕೀಯ ಪ್ರಮುಖರ ಪಲ್ಲವಿಯನ್ನೆತ್ತಿಹಿಡಿದು, ಉದ್ವೇಗಪೂರ್ವಕವಾದ ಎರಡು ಮಾತು ಹೇಳಿ, ತನ್ನ ಸ್ವರ ಬಿದ್ದು ಹೋದುದರಿಂದ ಹೆಚ್ಚು ಮಾತಾಡಲಾಗುವುದಿಲ್ಲವೆಂದು ಹೇಳಿ ಜನರನ್ನು ಅಂದಿಗೆ ಬೀಳ್ಕೊಟ್ಟರು.

ನಾನೊಬ್ಬ ಸ್ವಯಂಸೇವಕನಾಗಿದ್ದುದರಿಂದ ಆಚಾರ್ಯರ ಬಳಿ ಹೋಗುವ ‘ಪ್ರಿವಿಲೇಜು’ ನನಗಿದ್ದಿತು. ಆದುದರಿಂದ ನಾನು ರಾಮಾಚಾರ್ಯರ ಹತ್ತಿರ ಹೋಗಿ ಅವರ ಉಡುಪನ್ನು ಪರೀಕ್ಷಿಸಿದೆನು. ಅವರ ಹೆಂಡತಿ ಮಕ್ಕಳ ಉಡುಗೆಯನ್ನೂ ಲಕ್ಷ್ಯವಿಟ್ಟು ನೋಡಿದೆನು. ಆಚಾರ್ಯರ ಖದ್ದರಿನ ಜಿಬ್ಬವೊಂದು ಮತ್ತು ಗಾಂಧಿ ಟೊಪ್ಪಿಯ ಹೊರತು ಉಳಿದ ವಸ್ತ್ರವೆಲ್ಲಾ ಗಿರಣಿ ಅಥವಾ ವಿದೇಶಿಯಾಗಿದ್ದಿತು. ನಾನು ಮನಸ್ಸಿನೊಳಗೆನೇ ನಕ್ಕು ಹೊರ ನಡೆದೆನು.

ಕೀರ್ತನ ಕಂಠೀರವ ರಾಮಾಚಾರ್ಯರ ಹರಿಕೀರ್ತನೆಗಳು ನಡೆಯತೊಡಗಿದವು. ಈ ಬಿರುದು ಈಗ ಕೆಲವರಿಟ್ಟುಕೊಳ್ಳುವಂತೆ ಸ್ವಯಂದತ್ತವಾದುದೋ ಎಂಬೀ ಸಂಶಯವೇ ನನ್ನಲ್ಲಿ ಪ್ರಬಲವಾಗಿದ್ದರೂ, ನಾನು ಆಚಾರ್ಯರನ್ನಿಲ್ಲಿ ಕೀರ್ತನ ಕಂಠೀರವರೆಂದೇ ಸಂಬೋಧಿಸುವೆನು. ಜನರ ಉತ್ಸಾಹವೇ ಉತ್ಸಾಹ! ಹಳ್ಳಿ ಪಳ್ಳಿಗಳಿಂದಲೂ ಜನರು ಬಂದು ಕಿಕ್ಕಿರಿದು ನೆರೆದು ಆಚಾರ್ಯರ ಹರಿಕಥೆ ಕೇಳಿ ಮೆಚ್ಚಿಹೋಗುತ್ತಿದ್ದರು.

“ಬಂದನು ಸಿ. ಆರ್. ದಾಸನು ಭರದಲಿ |
ಇಳಿದನು ಜಬ್ಬಲ್ ಪುರ ಸ್ಟೇಶನಲಿ ||
ಎಂದು ಸ್ಪೂರ್ತಿಯಿಂದ ಹೇಳಿದೊಡನೆಯೇ ಜನರು ಮೆಚ್ಚಿ ಕೈ ಚಪ್ಪಾಳೆ ಹೊಡೆದುಬಿಡುತ್ತಿದ್ದರು. ಅನಂತರ ಆಚಾರ್ಯರು ಏನು ಹೇಳುವರೆಂಬ ಗೊಡವೆಯೇ ಅವರಿಗಿದ್ದಿಲ್ಲ. ಆಚಾರ್ಯರೂ ಮುಂದಿನ ಸೊಲ್ಲನ್ನು ಪೂರ್ತಿಗೊಳಿಸುವ ದಾರಿಗಾಣದೆ,
“ತಾನ ತಾನನ ತಾನನ ತಾನನ ತಾನನ ತಾನನ ||
ರಾಮಾರಮಾ ರಮ ರಾಮರಮಾ ರಮ ರಾಮರಮಾ ||
ಎಂದು ಕೊನೆಗೊಳಿಸಿಬಿಡುತ್ತಿದ್ದರು. ಆಚಾರ್ಯರ ಹಾಡುಗಳು ಹೆಚ್ಚಾಗಿ ಇಂತಹವೇ. ಏನೆಂದರೂ ಒಮ್ಮೆಗೆ ತನ್ನ ವಾಕ್ ಚಮತ್ಕಾರದ ಪ್ರವಾಹದಲ್ಲಿ ಜನರನ್ನೆಲ್ಲಾ ಮುಳುಗಿಸಿ ಸೆಳೆದೊಯ್ಯುವ ಶಕ್ತಿಯೊಂದು ಕೀರ್ತನ ಕಂಠೀರವರಲ್ಲಿದ್ದಿತು.

ಪ್ರಕೃತದ ವಿದ್ಯಮಾನಗಳಿಗನುಗುಣವಾಗಿ ಧಾರ್ಮಿಕಕ್ಕೆ ರಾಜಕೀಯ ಬಣ್ಣವನ್ನು ಚಿತ್ತಾಕರ್ಷಕವಾಗಿ ಕೊಟ್ಟು, ನೂಲುವ ಚರಕವನ್ನು ಸುದರ್ಶನ ಚಕ್ರಕ್ಕೆ ಸರಿಹೋಲಿಸಿ, ಗಾಂಧಿ, ದಾಸ, ತಿಲಕರನ್ನು ಬ್ರಹ್ಮ, ವಿಷ್ಣು, ಮಹೇಶ್ವರರೆಂದು ಚಿತ್ರಿಸಿ, ಖಾದಿಯನ್ನು ಕಾಮಧೇನುವಿಗೆ ತುಲನೆಮಾಡಿ, ಜನರಲ್ಲೆಲ್ಲಾ ತಾತ್ಕಾಲಿಕವಾದ ಕ್ಷೋಭೆಯನ್ನುಂಟುಮಾಡುವವರು.

ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ ಸ್ವರಾಜ್ಯ ಫಂಡಿಗೆ ಅರ್ಪಿತವಾದವು. ಕೊನೆಯಲ್ಲಿ ಆಚಾರ್ಯರೇ ಅವುಗಳನ್ನೆಲ್ಲಾ ಏಲಂ ಹಾಕಿ ಸ್ಫೂರ್ತಿಯ ಮಾತುಗಳಿಂದ ಮೇಲಾಟವೆಬ್ಬಿಸಿ ಆದಷ್ಟು ಹೆಚ್ಚಿನ ಹಣ ಪಡೆಯುತ್ತಿದ್ದರು.

ಹೊಸತಾಗಿ ಹೊರಟ ಭೂತದ ಪ್ರಭಾವದಂತೆ ಕೀರ್ತನ ಕಂಠೀರವರ ಪ್ರಭಾವ ಹಬ್ಬಿಬಿಟ್ಟಿತು. ಆಚಾರ್ಯರು ಅದೇಕೋ ಸ್ತ್ರೀಯರಿಗಾಗಿ ಪ್ರತ್ಯೇಕ ಹರಿಕೀರ್ತನೆಯೊಂದನ್ನು ಏರ್ಪಡಿಸಿದರು. ಪುರುಷರಾರೂ ಬರಬಾರದೆಂದು ಆಜ್ಞೆ ಮಾಡಿದರು. ನಾನು ಸ್ವಯಂಸೇವಕನೆಂದು ಆಜ್ಞೆಯನ್ನು ಉಲ್ಲಂಘಿಸಿ ಹೋಗಿಬಿಟ್ಟೆನು. ಆಚಾರ್ಯರಿಗೆ ಆರತಿ, ಪುಷ್ಪಹಾರ ಅರ್ಪಣೆ, ಪಾದಪೂಜೆಗಳು ಸಾಂಗವಾಗಿ ನಡೆದವು. ಆಚಾರ್ಯರ ಅಂದಿನ ಪರಿಯೇ ಬೇರೆ. ಹಿಂದೂ ಸ್ತ್ರಿಯರ ಪಾತಿವ್ರತ್ಯ, ದಾನಧರ್ಮ ಬುದ್ಧಿಗಳನ್ನೆಲ್ಲಾ ಬಹಳವಾಗಿ ಹೊಗಳಿ ಪುರುಷರ ಅನೀತಿ ಅನಾಚಾರಗಳನ್ನು ತೆಗಳಿದರು.

ಹರಿಕಥೆಯ ನಂತರ ತಾನೇ ಹರಿವಾಣ ಹಿಡಿದು,
“ಕನ್ನಡದಾಸನು ಬೇಡಲು ಬಂದಿಹ| ದಾನವ ದಯದಿಂ ಕೊಡಿರಮ್ಮಾ ||’’
ಎಂಬೀ ಪಲ್ಲವಿ ಹಾಡುತ್ತಾ ಭಿಕ್ಷೆಗೆ ಹೊರಟರು. ದಯಾದ್ರಹೃದಯರಾದ ಸ್ತ್ರೀಯರು ತಮ್ಮ ಮನೆಯವರೇನೆನ್ನುವರೆಂಬ ಗೊಡವೆಯೇ ಇಲ್ಲದೆ, ಆವೇಶದಿಂದ ವಿಧವಿಧ ಆಭರಣಗಳನ್ನು ಹರಿವಾಣದ ಮೇಲೆ ಸುರಿದರು.

*******

ಆಚಾರ್ಯರು ಯಾವ ಸದ್ಗೃಹಸ್ಥರ ಮನೆಯಲ್ಲಿ ಉಳಿದಿದ್ದರೋ ಅಲ್ಲಿಂದವರು ಕೂಡಲೇ ಬಿಟ್ಟು ಹೋಗಬೇಕೆಂದು ಆ ಗೃಹಸ್ಥರು ಹೇಳಿದುದನ್ನು ಕೇಳಿ ಕಾಂಗ್ರೆಸ್ ಕೆಲಸಗಾರರೆಲ್ಲಾ ಚಕಿತರಾದರು. ಈ ಸದ್ಗೃಹಸ್ಥರ ದುರ್ವರ್ತನೆಗಾಗಿ ಅವರನ್ನು ಜನರೆಲ್ಲಾ ಹಳಿಯತೊಡಗಿದರು!

ಆಚಾರ್ಯರು ಹಳ್ಳಿಹಳ್ಳಿಗಳಿಗೂ ಹೋಗಿ ಕೀರ್ತನೆ ಮಾಡಲಾರಂಭಿಸಿದರು. ಅನಂತರಾಮ ಭಟ್ಟರೆಂಬುವರು ತನ್ನ ಹಳ್ಳಿಗೆ ಕೀರ್ತನ ಕಂಠೀರವರನ್ನು ಕರೆಸಿ ಹರಿಕೀರ್ತನೆ ಮಾಡಿಸಿದರು. ಭಟ್ಟರು ಆ ಪ್ರಾಂತದಲ್ಲಿ ರಾಷ್ಟ್ರಸೇವೆಗಾಗಿ ತನ್ನ ತನುಮನಧನವನ್ನರ್ಪಿಸುತ್ತಿರುವರು. ತನ್ನ ಊರಿನ ಆಸುಪಾಸಿನ ಜನರಲ್ಲಿ ರಾಜಕೀಯ ಜಾಗೃತಿಯನ್ನುಂಟು ಮಾಡುವ ಸಂದರ್ಭವೇನು ದೊರೆತರೂ ಅದನ್ನವರು ಎಂದೂ ಬಿಟ್ಟುಬಿಡುತ್ತಿದ್ದಿಲ್ಲ.

ಕೀರ್ತನ ಕಂಠೀರವರಿಗೆ ಅನಂತರಾಮಭಟ್ಟರ ಮನೆಯಲ್ಲಿ ಭೋಜನ ಸತ್ಕಾರವು ಬಹಳ ಸಂಭ್ರಮದಿಂದ ನಡೆಯಿತು. ಮರುದಿವಸ ಬೆಳಿಗ್ಗೆ ಆಚಾರ್ಯರು ಹಿಂತೆರಳುವವರಿದ್ದರು. ಅನಂತರಾಮ ಭಟ್ಟರು ಆಚಾರ್ಯರಿಗೆ ಭೋಜನ ಸತ್ಕಾರ ಮಾತ್ರವಲ್ಲ, ಆಭರಣಗಳನ್ನೂ ಅರ್ಪಿಸಿ, ತಾನೂ ಗೌರವ ಪಡೆಯಬೇಕೆಂದಿದ್ದರು. ಅವರ ಪತ್ನಿಯೂ ಇದಕ್ಕೆ ಒಪ್ಪಿದರು. ಮರುದಿನ ಆಚಾರ್ಯರು ಬೀಳ್ಕೊಟ್ಟಾಗ ಅವರು ತನ್ನ ಕೈಯ ಚಿನ್ನದ ಬಳೆಗಳನ್ನು ಕಳಚಿಕೊಟ್ಟರು. ಆಚಾರ್ಯರು ಅವರಿಬ್ಬರ ತಲೆಯ ಮೇಲೂ ಪ್ರಶಂಸೆಯ ಮಳೆಗರೆದು, “ಈ ಆಭರಣಗಳು ದಾಸ್ಯದಿಂದ ನರಳುವ ಹಿಂದೂ ಮಾತೆಯ ಬಂಧವಿಮೋಚನೆಗಾಗಿ ಉಪಯೋಗಿಸಲ್ಪಡುವವು” ಎಂದು ಆಶ್ವಾಸನೆಯಿತ್ತರು.

ಕೆಲವು ದಿನಗಳು ಗತಿಸಿ ಹೋದವು. ಅನಂತರಾಮ ಭಟ್ಟರ ಪತ್ನಿಯು ಮಂಗಳೂರಲ್ಲಿದ್ದ ತನ್ನ ತಾಯಿ ಮನೆಗೆ ಬಂದಿದ್ದರು. ಒಂದು ದಿನ ಸಂಜೆ ನೆರೆಮನೆಯ ವೇಶ್ಯೆ ಕಲಾವತಿಯೊಡನೆ ಮಾತನಾಡುತ್ತಿದ್ದಾಗ ಆಕೆಯ ಮುಂಗೈಯಲ್ಲಿ ತಾನು ಆಚಾರ್ಯರಿಗೆ ಅರ್ಪಿಸಿದ ಬಳೆಗಳನ್ನು ಕಂಡು ಅವರ ಎದೆ ಧಸ್ಸೆಂದಿತು.
‘ಈ ಬಳೆಗಳು ದಾಸ್ಯದಿಂದ ನರಳುತ್ತಿರುವ ಹಿಂದೂ ಮಾತೆಯ ಬಂಧವಿಮೋಚನೆ ಗಾಗಿ ಉಪಯೋಗಿಸಲ್ಪಡುವವು!’

*******

ಕೆ. ಕೆ. ಶೆಟ್ಟಿ : ಉಡುಪಿಯ ಸ್ವಾತಂತ್ರ್ಯ ಹೋರಾಟಗಾರ – ಲೇಖಕ ಕೆ. [ಕೆಮ್ತೂರು] ಕೆ. [ಕಾಂತಪ್ಪ] ಶೆಟ್ಟಿ [1901 – 87] ಯವರು ಶಾಂತಿನಿಕೇತನದಲ್ಲಿ ಶಿಕ್ಷಣ ಪಡೆದವರು. ಸಾಂತ್ಯಾರು ಅನಂತಪದ್ಮನಾಭ ಭಟ್ಟರು ಸಾಂತ್ಯಾರಿನಲ್ಲಿ ನಡೆಸುತ್ತಿದ್ದ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಕೆ. ಕೆ. ಶೆಟ್ಟರು ಕತೆ, ಕಾದಂಬರಿ, ನಾಟಕ ಹಾಗೂ ಪತ್ರಿಕಾ ಬರಹಗಳ ಮೂಲಕ ಜನಶಿಕ್ಷಣ ನೀಡಿದವರು. ಮುಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ, ವಿಧಾನಸಭಾ ಸದಸ್ಯ – ಉಪಾಧ್ಯಕ್ಷ – ಅಧ್ಯಕ್ಷರಾಗಿಯೂ, ಲೋಕಸಭಾ ಸದಸ್ಯರಾಗಿಯೂ ಸ್ವಾತಂತ್ರ್ಯೋತ್ತರ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು.
ಕೃಷಿ ಮತ್ತು ಅಧ್ಯಾಪನವನ್ನು ವೃತ್ತಿಯಾಗಿ ಸ್ವೀಕರಿಸಿದ್ದ ಅವರು ‘ನವಯುಗ’ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿ, ವಿಧಾನ ಪರಿಷತ್ ಸದಸ್ಯ, ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರಾಗಿದ್ದರು.

ಕೆ. ಕೆ. ಶೆಟ್ಟರ ಕತೆಗಳ ಸಂಕಲನ ಬಂದಿಲ್ಲ. ಪ್ರಸ್ತುತ ಕತೆ 1940 ರಲ್ಲಿ ‘ಅಂತರಂಗ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇವರ ಪ್ರಕಟಿತ ಕೃತಿಗಳು: ‘ನಿಜ ದಾಂಪತ್ಯ’, ‘ಸಂಶಯ ಪಿಶಾಚಿ’, ‘ಕುಶಲವ’, ‘ಪುರುಷ ವಧು’ (ನಾಟಕಗಳು), ‘ಚಿತ್ರಾ’, ‘ಅಂಚೆಮನೆ’ (ಠಾಕೂರರ ನಾಟಕಗಳ ಅನುವಾದ), ‘ವ್ಯಭಿಚಾರಿಣಿ ಯಾರು?’, ‘ಸಂನ್ಯಾಸಿಯ ಸೋಗಿನಲ್ಲಿ’, ‘ಹೆಂಡ್ತಿ ಗಂಡನಾದರೆ’, ‘ದೇಶಭಕ್ತ’ (ಪ್ರಹಸನಗಳು), ‘ಪ್ರೇಮ ವಿಜಯ’ ಮತ್ತು ‘ಮುಂದಿನ ದೇವರು’ (ಪ್ರಬಂಧಗಳು).