“ಪಟೇಲ್ ರುದ್ರಪ್ಪಯ್ಯನವರು ಸಿಟ್ಟು ಬಂದರೆ ಪ್ರಳಯ ಕಾಲದ ರುದ್ರನೇ ಎಂಬುದು ಊರವರ ಅನುಭವ. ಹತ್ತಿರ ಹತ್ತಿರ ಆರಡಿ ಎತ್ತರದ ಬಲವಾದ ಮೈಕಟ್ಟಿನ ಶರೀರ ಅವರದ್ದು. ತಾರುಣ್ಯದಲ್ಲಿ ಕೇರಳದ ಕಡೆಯಿಂದ ಯಾರೋ ಒಬ್ಬ ಕಳರಿ ಪಟ್ಟಿನವನನ್ನು ಕೆಲವು ಕಾಲ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಆತನಿಂದ ಆ ವಿದ್ಯೆಯನ್ನೂ ತಕ್ಕಮಟ್ಟಿಗೆ ಕಲಿತವರು. ಕೇಂಪ್ ಕ್ಲಾರ್ಕ್ ಬೆನ್ನು ಹಾಕಿದ ಕೂಡಲೇ ಕುಳಿತವರು ಎದ್ದು ಹೋಗಿ ಕೋಣೆಯ ಬಾಗಿಲನ್ನು ದಡಾರನೆ ಮೆಟ್ಟಿ ತೆರೆದರು. ಮೂರು ಬೆರಳು ಅಗಲದ ಕೆಂಪು ಅಂಚಿನ ಧೋತ್ರವನ್ನು ಕಚ್ಚೆ ಹಾಕಿದರು. ಕಾಲರ್ ಇಲ್ಲದ ಕಪ್ಪು ಬಣ್ಣದ ಮುಚ್ಚು ಕೋಟನ್ನು ತೊಟ್ಟುಕೊಂಡರು. ”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವಓಬೀರಾಯನ ಕಾಲದ ಕತೆಗಳುಸರಣಿಯಲ್ಲಿ ತುದಿಯಡ್ಕ ವಿಷ್ಣ್ವಯ್ಯರವರು ಬರೆದ ಕತೆದೊರೆಯ ಪರಾಜಯ”

 

ಆಂಗ್ಲರು ನಮ್ಮ ದೇಶವನ್ನು ಆಳತೊಡಗಿದಾಗ ಜಿಲ್ಲಾಧಿಕಾರಿ, ಪೋಲೀಸು ಸುಪರಿಂಟೆಂಡೆಂಟ್, ಮೊದಲಾದ ವರಿಷ್ಠ ಅಧಿಕಾರ ಪೀಠದಲ್ಲಿ ಯೂರೋಪಿಯನ್ನರೇ ಕುಳ್ಳಿರುತ್ತಿದ್ದರು. ಗ್ರಾಮ ಮಟ್ಟದಲ್ಲಿ ಆಡಳಿತ ಯಂತ್ರದ ಕೀಲುಗಳಾದ ಶ್ಯಾನುಭಾಗರು ಪಟೇಲರುಗಳನ್ನು ಹಿಂದಿನಂತೆ ಅವರು ಉಳಿಸಿಕೊಂಡರು. ಈ ಉದ್ಯೋಗಗಳು ಬಹುತೇಕ ವಂಶ ಪಾರಂಪರ್ಯವಾಗಿಯೇ ಬಂದಂಥವುಗಳು. ಗ್ರಾಮಾಧಿಕಾರಿಗಳಾದ ಪಟೇಲರು ಶ್ಯಾನುಭಾಗರುಗಳಲ್ಲಿ ಹೆಚ್ಚಿನವರು ತಕ್ಕಷ್ಟು ಅನುಕೂಲಸ್ಥರಾಗಿದ್ದು ಗೌರವಾನ್ವಿತ ಮನೆತನಕ್ಕೆ ಸೇರಿದವರಾಗಿರುತ್ತಿದ್ದರು. ತಾವು ಆಡಳಿತ ನಡೆಸುವ ಮುಂಚೆ ರಾಜರುಗಳಿಗೆ ದವಸ ಧಾನ್ಯ ರೂಪದಲ್ಲಿ ಕಂದಾಯ ತೆರುತ್ತಿದ್ದ ಪದ್ಧತಿಯನ್ನು ಬ್ರಿಟಿಷರು ರದ್ದು ಮಾಡಿ ಹಣದ ರೂಪದಲ್ಲಿಯೇ ತೆರಿಗೆ ಸಲ್ಲಿಸಬೇಕೆಂದು ತಾಕೀತು ಮಾಡಿದರು. ಆಗ ಅವರು ಗ್ರಾಮಾಧಿಕಾರಿಗಳು ಅನುಕೂಲವಂತರಾಗಿ ಗೌರವಸ್ಥರಾಗಿದ್ದರೆ ಕಂದಾಯದ ಹಣಕ್ಕೆ ಮೋಸವಾಗಲಿಕ್ಕಿಲ್ಲ ಎಂಬ ಭಾವನೆಯಿಂದ ಮೊದಲಿನ ವ್ಯವಸ್ಥೆಯನ್ನು ಬದಲಿಸಲು ಹೋಗಲಿಲ್ಲ.

ಜನರು ಬ್ರಿಟಿಷ್ ಅಧಿಕಾರಿಗಳನ್ನು ದೊರೆಗಳೆಂದು ಕರೆಯುತ್ತಿದ್ದರು. ತಲೆಗೆ ಅವರು ಹಾಕಿಕೊಳ್ಳುತ್ತಿದ್ದ ಹೇಟಿಗೆ ದೊರೆ ಟೊಪ್ಪಿ ಎಂದೇ ನಮ್ಮ ಜನ ನಾಮಕರಣ ಮಾಡಿಬಿಟ್ಟರು. ಈ ಅಧಿಕಾರಿಗಳದ್ದು ಹೆಚ್ಚಾಗಿ ಕುದುರೆಯ ಮೇಲೆ ಸಂಚಾರ, ಪ್ರಯಾಣದಲ್ಲಿ ರಾತ್ರಿ ತಂಗಲು ಮುಸಾಫಿರ್ ಬಂಗ್ಲೆಗಳಿದ್ದುವು. ಅಲ್ಲಿ ತಂಗುವ ಅಧಿಕಾರಿಗಳಿಗೆ ಬೇಕಾಗುವ ಉಟೋಪಚಾರದ ಲವಾಜಮೆಯನ್ನು ಒದಗಿಸುವುದು, ಅವರನ್ನು ಗ್ರಾಮಕ್ಕೆ ಪ್ರವೇಶಿಸುವಾಗ ಗಣ್ಯರೊಡನೆ ಸ್ವಾಗತಿಸುವುದು, ಇಲ್ಲಿಂದ ತೆರಳುವರೆಗೆ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಮುಂತಾದ ಜವಾಬ್ದಾರಿ ಗ್ರಾಮದ ಪಟೇಲರಿಗೆ ಸೇರಿದ್ದಾಗಿತ್ತು. ಮುಸಾಫಿರ್ ಬಂಗಲೆಗಳಿರುವ ಗ್ರಾಮಗಳಿಗೆ ಕಸಬಾ ಗ್ರಾಮಗಳೆಂದು ಹೆಸರು. ಆ ಗ್ರಾಮದ ಪಟೇಲರಿಗೆ ಇಬ್ಬರು ಉಗ್ರಾಣಿಗಳನ್ನು ಇಟ್ಟುಕೊಳ್ಳುವ ಅವಕಾಶವೂ ಇತ್ತು.

ಮೈಸೂರು ಕಡೆಯಿಂದ ಕೊಡಗಿಗಾಗಿ ಮಂಗಳೂರಿಗೆ ಹೋಗುವ ಅಧಿಕಾರಿಗಳಿಗೆ ಬಡ್ಯಾರು ಗ್ರಾಮ ಒಂದು ತಂಗುದಾಣ. ಪೇಟೆಯ ಬದಿಯಲ್ಲಿಯೇ ಇರುವ ಎತ್ತರದ ಗುಡ್ಡದಲ್ಲಿ ಪ್ರವಾಸಿ ಬಂಗಲೆ. ಇದರಿಂದಾಗಿ ಆ ಗುಡ್ಡಕ್ಕೆ ಬಂಗಲೆಗುಡ್ಡೆಯೆಂದೇ ಹೆಸರು. ಗುಡ್ಡದ ಕೆಳಬದಿಯಲ್ಲಿ ಬಂಗಲೆಯ ಉಸ್ತುವಾರಿ ನೋಡಿಕೊಳ್ಳುವ ವಾಚರ್ ವಾಚಣ್ಣ ಮನೆ. ಅಲ್ಲಿಂದ ಒಂದು ಮೈಲು ದೂರದಲ್ಲಿ ಕಸಬಾ ಪಟೇಲ್ ಪಡುಬೈಲು ರುದ್ರಪ್ಪಯ್ಯನವರ ಮನೆ.

ರುದ್ರಪ್ಪಯ್ಯನವರದ್ದು ಮನೆ ಎಂದು ಹೇಳುವುದಕ್ಕಿಂತಲೂ ಪುಟ್ಟ ಅರಮನೆ ಎಂದು ಹೇಳಿದರೇ ಸರಿಯಾದೀತು. ನಾಲ್ಕು ಸೂತ್ರದ ಒಳ ಅಂಗಳವಿರುವ ದೊಡ್ಡ ಎರಡು ಅಂತಸ್ತಿನ ಮನೆ. ಮನೆಯ ಪೂರ್ವಭಾಗದಲ್ಲಿ ಸುಮಾರು ಐವತ್ತು ಜನ ಕುಳಿತುಕೊಳ್ಳಬಹುದಾದ ಚಾವಡಿ. ಮನೆಯಿಂದ ಇಪ್ಪತ್ತು ಮಾರು ದೂರದಲ್ಲಿ ಊರ ಪಂಚಾತಿಕೆ ನಡೆಸಲು, ತಹಸೀಲ್ದಾರರೇ ಮುಂತಾದ ಸರಕಾರಿ ಅಧಿಕಾರಿಗಳ ತಾತ್ಕಾಲಿಕ ವಸತಿಗೆ ಅನುಕೂಲವಾದ ಕಟ್ಟಡ, ಭತ್ತದ ದಾಸ್ತಾನಿನ ಪತ್ತಾಯದ ಪೊರೆ, ಹಟ್ಟಿಕೊಟ್ಟಿಗೆ ಎಂದು ಬೇರೆ ನಾಲ್ಕೈದು ಉಪ ಕಟ್ಟಡಗಳು, ಒಂದು ಸಾವಿರದಷ್ಟು ಜನ ಒಮ್ಮೆಗೇ ಊಟಕ್ಕೆ ಕುಳಿತುಕೊಳ್ಳಬಹುದಾದ ವಿಶಾಲವಾದ ಅಂಗಳ.

ಅಂಗಳದಿಂದ ಇಪ್ಪತ್ತು ಮೆಟ್ಟು ಇಳಿದರೆ ತೆಂಕುಬಡಗಲಾಗಿ ಚಾಚಿದ್ದ ಮೂರು ಬೆಳೆಯ ದೊಡ್ಡ ಬಯಲು, ಸಂಪೂರ್ಣವಾಗಿಯಲ್ಲದಿದ್ದರೂ ಹೆಚ್ಚು ಭಾಗ ಪಟೇಲರಿಗೇ ಸೇರಿದ್ದು. ಮನೆಯ ಇದಿರಿನ ಹದಿನೈದು ಮುಡಿ ಗದ್ದೆ ಸ್ವಂತ ಬೇಸಾಯಕ್ಕೆ ಇಟ್ಟುಕೊಂಡು ಉಳಿದಿದ್ದ ಗದ್ದೆಗಳನ್ನು ಹತ್ತು ಹದಿನೈದು ಒಕ್ಕಲುಗಳಿಗೆ ಗೇಣಿಗೆ ಕೊಟ್ಟಿದ್ದರು.

ಪಟೇಲರದ್ದು ತಕ್ಕಷ್ಟು ದೊಡ್ಡ ಸಂಸಾರ. ಇವರಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿ ಲಕ್ಷ್ಮೀ ಅಮ್ಮನವರಲ್ಲಿ ಸಂತತಿಯಾಗಲಿಲ್ಲವೆಂದು ದೇವಕಿ ಅಮ್ಮನವರನ್ನು ಮದುವೆಯಾಗಿದ್ದರು. ಪಟೇಲರ ಇಬ್ಬರು ತಮ್ಮಂದಿರಾದ ಸೀತಾರಾಮಯ್ಯ, ಶ್ರೀನಿವಾಸಯ್ಯ ಎಂಬವರೂ ಇವರ ಸಂಸಾರವೂ ರುದ್ರಪ್ಪಯ್ಯನವರೊಟ್ಟಿಗೇ ವಾಸ. ಅಲ್ಲದೆ ಕುಟುಂಬದ ಬಾಲ ವಿಧವೆಯೊಬ್ಬರೂ ಈ ಮನೆಯಲ್ಲಿಯೇ ಆಶ್ರಯ ಪಡೆದಿದ್ದರು. ಗಂಡಸರು ಹೆಂಗಸರು ಮಕ್ಕಳು ಮರಿಗಳು ಎಂದು ಮನೆಯವರಲ್ಲದೇ ಬಂದು ಹೋಗುವ ನೆಂಟರಿಷ್ಟರು ಎಂದು ಹತ್ತು ಹನ್ನೆರಡು ಜನ ಸದಾ ಮನೆಯಲ್ಲಿರುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಇಬ್ಬರು ಉಗ್ರಾಣಿಗಳು, ನ್ಯಾಯ ತೀರ್ಮಾನಕ್ಕಾಗಿ ದೂರು ತೆಗೆದುಕೊಂಡು ಬಂದವರು ಇತ್ಯಾದಿಯಾಗಿ ನಾಲ್ಕಾರು ಜನರೂ ಊಟಕ್ಕೆ ತಪ್ಪಿದ್ದಿಲ್ಲ. ಒಂದೊಂದು ಸಲ ಇಪ್ಪತ್ತು ಇಪ್ಪತ್ತೈದು ಎಂಜಲೆಲೆಗಳೂ ಹೊರಗೆ ಬೀಳುವುದಿತ್ತು.

ಮನೆಯಿಂದ ಇಪ್ಪತ್ತು ಮಾರು ದೂರದಲ್ಲಿ ಊರ ಪಂಚಾತಿಕೆ ನಡೆಸಲು, ತಹಸೀಲ್ದಾರರೇ ಮುಂತಾದ ಸರಕಾರಿ ಅಧಿಕಾರಿಗಳ ತಾತ್ಕಾಲಿಕ ವಸತಿಗೆ ಅನುಕೂಲವಾದ ಕಟ್ಟಡ, ಭತ್ತದ ದಾಸ್ತಾನಿನ ಪತ್ತಾಯದ ಪೊರೆ, ಹಟ್ಟಿಕೊಟ್ಟಿಗೆ ಎಂದು ಬೇರೆ ನಾಲ್ಕೈದು ಉಪ ಕಟ್ಟಡಗಳು, ಒಂದು ಸಾವಿರದಷ್ಟು ಜನ ಒಮ್ಮೆಗೇ ಊಟಕ್ಕೆ ಕುಳಿತುಕೊಳ್ಳಬಹುದಾದ ವಿಶಾಲವಾದ ಅಂಗಳ.

ಒಂದು ಸಲ ಗ್ರಾಮದ ಕುಳವಾರುಗಳಿಂದ ವಸೂಲು ಮಾಡಿದ ಕಂದಾಯದ ಹಣವನ್ನು ತಾಲೂಕು ಖಜಾನೆಗೆ ಕಟ್ಟಲು ಪಟೇಲರ ಉಗ್ರಾಣಿ ಹೋಗಿದ್ದಾಗ, ಮೈಸೂರು ಕಡೆಯಿಂದ ಕೊಡಗಿಗಾಗಿ ಯಾವುದೋ ಇಲಾಖೆಯ ದೊಡ್ಡ ಆಂಗ್ಲ ಅಧಿಕಾರಿ ಅಂದಿನಿಂದ ಹದಿನೈದನೇ ದಿನದಲ್ಲಿ ಸಂಜೆ ಹೊತ್ತು ಬಡ್ಯಾರು ಗ್ರಾಮಕ್ಕೆ ತನ್ನ ನಾಲ್ಕಾರು ಶಿಬಂಧಿಯೊಂದಿಗೆ ಬರುತ್ತಾರೆಂತಲೂ ಮಾಮೂಲು ಪ್ರಕಾರ ಎಲ್ಲಾ ವ್ಯವಸ್ಥೆಯನ್ನು ಪಟೇಲರು ಮಾಡಬೇಕೆಂತಲೂ ಹುಕುಂ ತಾಲೋಕಿನಿಂದ ಅವನ ಕೈಗೆ ಬಂತು. ಅದನ್ನು ಆತ ಪಟೇಲರಿಗೆ ಕೊಟ್ಟ.

ಅಧಿಕಾರಿ ಬರುವ ದಿವಸವಾದ ಶುಕ್ರವಾರ ಸಂಜೆ ಪಟೇಲರು, ಶ್ಯಾನುಭಾಗರು, ಅವರ ಉಗ್ರಾಣಿಗಳು ಇನ್ನೂ ನಾಲ್ಕಾರು ಜನರು ಸ್ವಾಗತಿಸಲು ಗೊತ್ತಾಗಿರುವ ಸ್ಥಳದಲ್ಲಿ ಸಂಜೆ ಹೋಗಿ ನಿಂತರು. ಕತ್ತಲಾಯಿತು, ಗಂಟೆ ಹತ್ತಕ್ಕೆ ಹತ್ತಿರವಾಯಿತು. ಪಟೇಲರು, “ಈ ದೊರೆ ಎಲ್ಲಿ ಕುಡಿದು ಬಿದ್ದಿದ್ದಾನೋ. ಇವನ ಪತ್ತೆಯೇ ಇಲ್ಲವಲ್ಲ, ಬದಲಿ ವರ್ತಮಾನವೂ ಇಲ್ಲ, ನಾವು ಹೋಗುವ” ಎಂದು ಅಲ್ಲಿದ್ದವರನ್ನು ಅವರವರ ಮನೆಗೆ ಹೋಗಲು ಹೇಳಿ ತಾವೂ ತಮ್ಮ ಮನೆಗೆ ಹೊರಟರು.

ಮರುದಿವಸ ಶನಿವಾರ. ಅಮಾವಾಸ್ಯೆ, ಸಂಕ್ರಮಣ ಹೊರತು ಇತರ ಶನಿವಾರಗಳಲ್ಲಿ ಪಟೇಲರು ತಪ್ಪದೇ ತೈಲಾಭ್ಯಂಗ ಮಾಡುವುದು ಪದ್ಧತಿ. ಅದನ್ನು ಎಂದೂ ಅವರು ತಪ್ಪಿಸಲಾರರು. ಬೆಳಗಿನ ಉಪಾಹಾರದ ಅನಂತರ ಅವರ ಉಗ್ರಾಣಿಗಳಲ್ಲೊಬ್ಬರು ವೈದ್ಯ ವಾಸು ಪಂಡಿತನ ವಾತಾಹಾರಿ ತೈಲವನ್ನು ಪಟೇಲರ ಮೈಗೆ ಹಾಕಿ ಚೆನ್ನಾಗಿ ಮಾಲೀಷು ಮಾಡಬೇಕು. ಸುಮಾರು ಒಂದುವರೆ ಗಂಟೆಯ ತನಕ ಕಾದು ಎಣ್ಣೆ ಎಲ್ಲ ಮೈಗೆಳೆದು ಹಾಗೆ ಬೆವರಲು ತೊಡಗಿತು ಎಂದಾಗ ಅವರು ಸ್ನಾನಕ್ಕೆ ಏಳುತ್ತಿದ್ದರು. ಅಷ್ಟರೊಳಗೆ ಬಚ್ಚಲು ಮನೆಯಲ್ಲಿ ರಾಮ ಲಕ್ಷ್ಮಣ ಎಂಬ ದೊಡ್ಡ ಗುಡಾಣಗಳಲ್ಲಿ ಬಿಸಿನೀರು ಕಾಯಿಸಿ ದೊಡ್ಡ ತಾಮ್ರದ ಹಂಡೆಯೊಂದರಲ್ಲಿ ಗುಡಾಣಗಳಿಂದ ತೋಡಿ ಮೀಯಲು ಹದವಾದ ಬಿಸಿ ನೀರನ್ನು ಕೆಲಸದಾಕೆ ಕೊರಪೋಳು ಸಿದ್ಧಪಡಿಸಿಡಬೇಕು. ಎರಡು ಸೆರೆ ಸೀಗೆಪುಡಿ, ಎರಡು ಸೆರೆ ಬಾಗೆ ಮರದ ಕೆತ್ತೆಯ ಪುಡಿ ಸಹಿತ ಹೆಂಡತಿಯರ ಪೈಕಿ ಯಾರಾದರೊಬ್ಬರು ಪಟೇಲರು ಬಚ್ಚಲಿಗೆ ಕಾಲಿಡುವಾಗ ಸ್ನಾನ ಮಾಡಿಸಲು ಕಾಯುತ್ತಿರಬೇಕು. ಸಾವಕಾಶವಾಗಿ ಮೈಯಲ್ಲಿ ಒಂದಿಷ್ಟೂ ಎಣ್ಣೆಯ ಪಸೆ ಉಳಿಯದಂತೆ ತಿಕ್ಕಿ ತೀಡಿ, ಎರಡೂ ಗುಡಾಣಗಳು ಖಾಲಿಯಾದ ಮೇಲೆ ಮೂರು ಮೂರು ಸಲ ಮೈ ಒರೆಸಿಕೊಂಡು ಕೆಂಪಾದ ಮೈಯ ಪಟೇಲರು ಮನೆಗೆ ಬಂದು ಚಾವಡಿಯ ಉಯ್ಯಾಲೆಯಲ್ಲಿ ಕುಳಿತಾಗ ಮತ್ತೊಬ್ಬ ಹೆಂಡತಿ ಒಂದು ಗಿಂಡಿಯಲ್ಲಿ ಹದ ಬಿಸಿಯ ಹಾಲನ್ನು ತಂದುಕೊಡಬೇಕು. ಹಾಲನ್ನು ಕುಡಿದು ಉಯ್ಯಾಲೆಯಲ್ಲೇ ಪಟೇಲರು ಹೊದೆದು ಮಲಗುತ್ತಾರೆ. ಅರ್ಧ ಗಂಟೆಯ ಒಳಗೆ ಎದ್ದು ಪುನಃ ಮೈ ಒರಸಿ ದೇವರ ಪೂಜೆ ಮಾಡಿ ಮಧ್ಯಾಹ್ನದ ಊಟ ತೀರಿಸಿ ತಿರುಗಿ ಚಾವಡಿಗೆ ಬರುವಾಗ ಹಗಲು ಒಂದೂವರೆ ಗಂಟೆಯಾಗುತ್ತದೆ. ಅನಂತರ ಉಯ್ಯಾಲೆಯಲ್ಲೇ ಅರ್ಧಗಂಟೆ ನಿದ್ದೆ.

ಈ ಶನಿವಾರ ಉಗ್ರಾಣಿ ಉಕ್ರಪ್ಪ ಪಟೇಲರಿಗೆ ಎಣ್ಣೆಹಾಕಿ ಮಾಲೀಷು ಮುಗಿಸುವ ಹೊತ್ತಿಗೆ ಬಂಗಲೆ ವಾಚರ್ ವಾಚಣ್ಣನ ಮಗ ಮಾದಪ್ಪ ಓಡೋಡಿ ಬಂದು, “ಒಬ್ಬ ಪರೆಂಗಿ ಅಧಿಕಾರಿಯೂ ನಾಲ್ಕಾರು ಜನ ಅವನ ಪರಿವಾರದವರೂ ಬಂಗಲೆಗೆ ಬಂದು ಬಿಟ್ಟಿದ್ದಾರೆ. ಧನಿಗಳನ್ನು ಬೇಗನೆ ಕರೆದುಕೊಂಡು ಬರಲು ಹೇಳಿದ್ದಾರೆ” ಎಂದು ಬಡಬಡಿಸಿದ. ಪಟೇಲರು “ನೀನು ಹೋಗು. ನಿನ್ನೆ ಬಂಗ್ಲೆಯಲ್ಲಿ ತಂದಿರಿಸಿದ ಎಳನೀರು ಬಾಳೆ ಹಣ್ಣುಗಳನ್ನು ಅವರಿಗೆ ಕೊಡುವಂತೆ ನಿನ್ನ ತಂದೆಯಲ್ಲಿ ಹೇಳು. ಬಟ್ಳರನಿಗೆ ಅಡುಗೆ ಸಾಮಾನುಗಳನ್ನೂ ಒದಗಿಸಲಿ. ನೀನು ಎರಡು ಸೇರು ಹಾಲು ಇಲ್ಲಿಂದ ಕೊಂಡು ಹೋಗು, ಕಾಫಿ ಕಾಯಿಸಲಿ. ನಾನು ಸ್ನಾನ ಮಾಡಿ ಊಟ ತೀರಿಸಿ ಬರುತ್ತೇನೆ. ಆಗ ಅವರ ಊಟವೂ ಮುಗಿದಿರುತ್ತದೆ” ಎಂದು ಮಾದನಲ್ಲಿ ಹೇಳಿ ಎಂದಿನಂತೆ ಸ್ನಾನಕ್ಕೆ ಹೋದರು.

ಸ್ನಾನ ಮುಗಿಸಿ ಹಾಲು ಕುಡಿದು ಉಯ್ಯಾಲೆಯಲ್ಲಿ ಕೆಲ ಹೊತ್ತು ಹೊದೆದು ಮಲಗಿ ದೇವರ ಪೂಜೆಯಲ್ಲಿ ಅವರು ಇದ್ದಾಗ ಮಾದಪ್ಪ, ಅವನ ಜೊತೆಗೆ ದೊರೆಯ ಕೇಂಪು ಕ್ಲಾರ್ಕ್ ಹಾಗೂ ಇನ್ನೆರಡು ಜನರು ಪಟೇಲರ ಮನೆಯ ಅಂಗಳವನ್ನೇರಿದರು. ಮಾದಪ್ಪನ ಹೊರತಾಗಿ ಉಳಿದವರು ಸರಕಾರಿ ನೌಕರರೇ ಮುಂತಾದವರು ಬಂದರೆ ಕುಳ್ಳಿರಲೆಂದೇ ಇರುವ ಕಟ್ಟಡದಲ್ಲಿ ಹೋಗಿ ಕುಳಿತರು. ಅಲ್ಲಿಗೇ ಅವರ ಕಿವಿಗೆ ಪೂಜೆ ಮಾಡುತ್ತಿದ್ದ ಪಟೇಲರ ಮಂತ್ರ ಘೋಷ ಕೇಳಿ ಬರುತ್ತಿತ್ತು. ಇದರಿಂದಾಗಿ ಕೇಂಪ್ ಕ್ಲಾರ್ಕನಿಗೆ ತಾವು ಬಂದ ಸಂಗತಿಯನ್ನು ತಟ್ಟನೇ ಪಟೇಲರಿಗೆ ತಲುಪಿಸುವುದು ಹೇಗೆ? ಎಂಬ ಪ್ರಶ್ನೆ ಇದಿರಾಯಿತು.

ಪಟೇಲರು ಪೂಜೆ ಮುಗಿಸಿ ನೇರ ಪಡಸಾಲೆಗೆ ಹೋಗಿ ಊಟ ತೀರಿಸಿ ಚಾವಡಿಯ ಬೋದಿಗೆ ಕಂಬಕ್ಕೆ ಒಂದು ಲೋಡನ್ನು ಒರಗಿಸಿಟ್ಟು ಅದಕ್ಕೆ ಬೆನ್ನು ಆನಿಸಿ ಕುಳಿತು ಪತ್ನಿ ದೇವಕಿ ತಂದಿರಿಸಿದ ವೀಳ್ಯದೆಲೆಯ ಹರಿವಾಣದಿಂದ ಒಂದೊಂದೇ ಅಡಕೆ ಹೋಳುಗಳನ್ನು ಬಾಯಿಗೆ ಎಸೆದರು. ನಾಲ್ಕು ವೀಳ್ಯದೆಲೆಗಳಿಗೆ ಕೈ ಹಾಕಿದರು. ಅಷ್ಟರಲ್ಲಿ ತನ್ನ ಊಟ ತೀರಿಸಿದ ಸೀತಾರಾಮಯ್ಯ ಹೊರಗೆ ಬಂದಾಗ ಮಾದಪ್ಪನನ್ನೂ ಉಳಿದವರನ್ನೂ ಕಂಡು ಏನು ಸಂಗತಿ ಎಂದು ವಿಚಾರಿಸಿದರು. “ಪಟೇಲರನ್ನು ಈಗಿಂದೀಗಲೇ ಕರೆದುಕೊಂಡು ಬನ್ನಿ. ನಾನು ಬರುವಾಗ ಮಾಮೂಲಿನಂತೆ ಗ್ರಾಮ ಗಡಿಯಲ್ಲಿ ತನ್ನನ್ನು ಸ್ವಾಗತಿಸಲಿಲ್ಲ ಆತ. ಬಂಗಲೆಯಲ್ಲಿ ತಾನೇ ನಿಂತು ನನ್ನ ಮೇಜವಾನಿಯ ಉಸ್ತುವಾರಿ ನೋಡಿಕೊಳ್ಳಲಿಲ್ಲ, ನಾನು ಬಂದು ಎರಡು ಗಂಟೆಯಾದರೂ ಪಟೇಲ ತನಗೆ ಮುಖ ತೋರಿಸಲಿಲ್ಲ, ಅವನಿಗೆ ಬಿಸಿ ಮುಟ್ಟಿಸುತ್ತೇನೆ ಎಂದೆಲ್ಲ ಹೇಳುತ್ತಾ ದೊರೆಗಳು ಹಾರಾಡುತ್ತಿದ್ದಾರೆ. ಈಗಿಂದೀಗ ಬಾರದಿದ್ದರೆ ಪಟೇಲರಿಗೆ ತೊಂದರೆಯಾಗುತ್ತದೆ” ಎಂದು ಕೇಂಪ್ ಕ್ಲಾರ್ಕ್ ಒಂದೇ ಉಸಿರಿನಲ್ಲಿ ಹೇಳಿದ.

ಸೀತಾರಾಮಯ್ಯನ ಮುಖಾಂತರ ವಿಷಯ ಪಟೇಲ ಕಿವಿಗೆ ಬಿದ್ದಾಗ ಅವರು ಕೇಂಪ್ ಕ್ಲಾರ್ಕನನ್ನು ಚಾವಡಿಗೆ ಬರ ಮಾಡಿಕೊಂಡು, ಅಳುಕುತ್ತಲೇ ಬಂದ ಅವನನ್ನು ನೋಡಿದಾಕ್ಷಣ “ಏನು? ಆ ಮಂಗ ಮುಸುಡಿನವ ಬಂಗ್ಲೆ ಇಡೀ ಹಾರಾಡುತ್ತಿದ್ದಾನೆಯೇ? ನೆಲದ ಸಾರಣೆ ಉಳಿದಿದೆಯೋ ಅಥವಾ ಧೂಳಾಗಿ ಹಾರುತ್ತಾ ಇದೆಯೋ” ಎಂದು ಬಾಯಿಯಲ್ಲಿ ಅರ್ಧ ಜಗಿದಿದ್ದ ಎಲೆ ಅಡಕೆ ಹಿಂಟೆಯನ್ನೂ ‘ಥೂ’ ಎಂದು ಪೀಕದಾನಿಗೆ ಉಗುಳಿದರು. ಬಂದಾತ “ನಿಮ್ಮನ್ನು ನಮ್ಮೊಟ್ಟಿಗೇ ಕರೆದುಕೊಂಡು ಬಾರದಿದ್ದರೆ ನಮಗೆ ತಕ್ಕ ಶಾಸ್ತಿಯಾಗುತ್ತದೆ. ಆಂಗ್ಲ ದೊರೆ ತುಂಬಾ ದರ್ಪದವರು ಎಂಬ ಖ್ಯಾತಿ ಇದೆ. ಅವರು ಮೊದಲು ಮಿಲಿಟರಿಯಲ್ಲಿ ಅಧಿಕಾರಿಗಳಾಗಿದ್ದವರಂತೆ” ಎಂದು ಕಂಠದಾಳದಿಂದ ಉಸುರಿದ.

ಪಟೇಲರು ಬೆನ್ನ ಹಿಂದೆ ಇದ್ದ ಲೋಡನ್ನು ಉಯ್ಯಾಲೆಯ ಮೇಲೆ ಎಸೆದರು. ಗಂಟಲ ಸೆರೆಯಲ್ಲಿದ್ದ ಅಡಕೆ ಚೂರುಗಳನ್ನು ಕ್ಯಾಕರಿಸಿ ಪೀಕದಾನಿಗೆ ಉಗುಳಿ ಎದ್ದು ನಿಂತು “ನಡಿ ಹೋಗು, ನಿನ್ನ ಬೆಂಕಿ ನವಾಬನಿಗೆ ನಾನು ಬರುತ್ತೇನೆಂದು ತಿಳಿಸು” ಎಂದು ಗರ್ಜಿಸಿದರು.

ಪಟೇಲ್ ರುದ್ರಪ್ಪಯ್ಯನವರು ಸಿಟ್ಟು ಬಂದರೆ ಪ್ರಳಯ ಕಾಲದ ರುದ್ರನೇ ಎಂಬುದು ಊರವರ ಅನುಭವ. ಹತ್ತಿರ ಹತ್ತಿರ ಆರಡಿ ಎತ್ತರದ ಬಲವಾದ ಮೈಕಟ್ಟಿನ ಶರೀರ ಅವರದ್ದು. ತಾರುಣ್ಯದಲ್ಲಿ ಕೇರಳದ ಕಡೆಯಿಂದ ಯಾರೋ ಒಬ್ಬ ಕಳರಿ ಪಟ್ಟಿನವನನ್ನು ಕೆಲವು ಕಾಲ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಆತನಿಂದ ಆ ವಿದ್ಯೆಯನ್ನೂ ತಕ್ಕಮಟ್ಟಿಗೆ ಕಲಿತವರು. ಕೇಂಪ್ ಕ್ಲಾರ್ಕ್ ಬೆನ್ನು ಹಾಕಿದ ಕೂಡಲೇ ಕುಳಿತವರು ಎದ್ದು ಹೋಗಿ ಕೋಣೆಯ ಬಾಗಿಲನ್ನು ದಡಾರನೆ ಮೆಟ್ಟಿ ತೆರೆದರು. ಮೂರು ಬೆರಳು ಅಗಲದ ಕೆಂಪು ಅಂಚಿನ ಧೋತ್ರವನ್ನು ಕಚ್ಚೆ ಹಾಕಿದರು. ಕಾಲರ್ ಇಲ್ಲದ ಕಪ್ಪು ಬಣ್ಣದ ಮುಚ್ಚು ಕೋಟನ್ನು ತೊಟ್ಟುಕೊಂಡರು. ಅರ್ಧಭದ್ರಾಕರಣದ ತಲೆಕೂದಲು ಜುಟ್ಟನ್ನು ಬಿಗಿಯಾಗಿ ಸೂಡಿ ಕಟ್ಟಿಕೊಂಡರು. ಕೊಳ್ಳೇಗಾಲದ ಚೌಕುಳಿ ಕೆಂಪುಶಾಲನ್ನು ಉತ್ತರೀಯ ಹಾಕಿ ಚಾವಡಿಯಲ್ಲಿದ್ದ ದೊಡ್ಡ ನಿಲುಗನ್ನಡಿಯ ಮುಂದೆ ನಿಂತರು. ಮುಖದಲ್ಲಿ ಪೂಜಾ ಕಾಲದಲ್ಲಿ ಹಾಕಿದ್ದ ತ್ರಿಪುಂಡ್ರ ಭಸ್ಮ. ಹಣೆಯ ಮಧ್ಯದಲ್ಲಿ ಕಾಸಿನಷ್ಟಗಲದ ಕುಂಕುಮ ಬೊಟ್ಟು, ಕಿವಿಗಳಲ್ಲಿ ತೂಗಾಡುವ ಚಿನ್ನದ ಒಂಟಿಗಳು, ಕೊರಳಲ್ಲಿ ಚಿನ್ನಕಟ್ಟಿದ ರುದ್ರಾಕ್ಷಿ ಮಾಲೆ, ಬಂಗಾರದ ಮುಂಗೈ ಸರಪಣಿ, ಒಟ್ಟಿನಲ್ಲಿ ನೂರು ಜನರ ಮಧ್ಯದಲ್ಲಿದ್ದರೂ ಎದ್ದು ಕಾಣುವ ಭವ್ಯ ಶರೀರ, ಅದಕ್ಕೊಪ್ಪುವ ವೇಷಭೂಷಣ, ಗೋಡೆಗೆ ತಗಲಿಸಿದ್ದ ಕಡವೆಯ ಕೊಂಬಿನಲ್ಲಿದ್ದ ರುಮಾಲನ್ನು ತಲೆಗೆ ಇಟ್ಟುಕೊಂಡರು. ಕನ್ನಡಿ ನೋಡಿ ಮೀಸೆ ಹುರಿ ಮಾಡಿಕೊಂಡರು, ಮೂಲೆಯಲ್ಲಿಟ್ಟಿದ್ದ ಬೆಳ್ಳಿಕಟ್ಟಿದ ನಾಗರ ಬೆತ್ತವನ್ನು ಕೈಯಲ್ಲಿ ಹಿಡಿದು ಚಾವಡಿಯಿಂದ ಅಂಗಳಕ್ಕೆ ಇಳಿದರು.

ಸ್ನಾನ ಮುಗಿಸಿ ಹಾಲು ಕುಡಿದು ಉಯ್ಯಾಲೆಯಲ್ಲಿ ಕೆಲ ಹೊತ್ತು ಹೊದೆದು ಮಲಗಿ ದೇವರ ಪೂಜೆಯಲ್ಲಿ ಅವರು ಇದ್ದಾಗ ಮಾದಪ್ಪ, ಅವನ ಜೊತೆಗೆ ದೊರೆಯ ಕೇಂಪು ಕ್ಲಾರ್ಕ್ ಹಾಗೂ ಇನ್ನೆರಡು ಜನರು ಪಟೇಲರ ಮನೆಯ ಅಂಗಳವನ್ನೇರಿದರು. ಮಾದಪ್ಪನ ಹೊರತಾಗಿ ಉಳಿದವರು ಸರಕಾರಿ ನೌಕರರೇ ಮುಂತಾದವರು ಬಂದರೆ ಕುಳ್ಳಿರಲೆಂದೇ ಇರುವ ಕಟ್ಟಡದಲ್ಲಿ ಹೋಗಿ ಕುಳಿತರು.

ಅಷ್ಟರಲ್ಲಿ ಉಗ್ರಾಣಿಗಳಲ್ಲೊಬ್ಬ ಸಮಗಾರ ಸೇಸ ಪಟೇಲರಿಗೆಂದೇ ಮೆಹನತ್ತಿನಿಂದ ತಯಾರಿಸಿದ ಜೀಕಿನ ಮೆಟ್ಟುಗಳನ್ನು ಅವರ ಇದಿರಿಗೆ ತಂದಿಟ್ಟ. ಅವನ್ನು ಕಾಲಿಗೆ ಸಿಕ್ಕಿಸಿಕೊಂಡು ‘ಜರಕ್’ ‘ಜರಕ್’ ಎಂದು ಸದ್ದು ಮಾಡುತ್ತಾ ಬಯಲಿಗೆ ಇಳಿಯುವಾಗ ಅವರ ಇಬ್ಬರು ಉಗ್ರಾಣಿಗಳೂ ಒಕ್ಕಲುಗಳ ಪೈಕಿ ಏಳೆಂಟು ಮಂದಿಯೂ ಅವರನ್ನು ಹಿಂಬಾಲಿಸತೊಡಗಿದರು.

ಇಷ್ಟರೊಳಗೆ ಬಂಗ್ಲೆಗೆ ದೊರೆ ಬಂದ ಸುದ್ದಿ ಮತ್ತು ಪಟೇಲರಿಗೂ ಆತನಿಗೂ ನಡೆದ ಇರಿಸು ಮುರಿಸಿನ ವಾರ್ತೆ ಬಯಲಿನಲ್ಲಿಯೂ ಪೇಟೆಯಲ್ಲಿಯೂ ಹರಡಿತ್ತು. ಹೀಗಾಗಿ ಪಟೇಲರು ಬಂಗಲೆಗೆ ಮುಟ್ಟುವಾಗ ಅವರ ಜೊತೆ ಸುಮಾರು ಐವತ್ತು ಜನರು ಸೇರಿಕೊಂಡರು. ಈಗಾಗಲೇ ಬಂಗಲೆಯಲ್ಲಿ ಏನು ನಡೆಯುತ್ತದೆ ಎಂದು ಕುತೂಹಲದಿಂದ ಬಂಗಲೆಯ ಆಸುಪಾಸಿನವರೂ ಜಮೆಯಾಗಿ ಪಟೇಲರದ್ದು ಪುಟ್ಟ ಪಾಳೆಯಗಾರನ ದಂಡೇ ಆಯಿತು.

ದೊರೆ ಮತ್ತು ಆತನ ಪರಿವಾರದವರು ಬಂಗಲೆಯ ಒಳಗೆ ಊಟ ತೀರಿಸಿ ಕುಳಿತಿದ್ದರು. ಹೊರಗೆ ಯಾರೂ ಇರಲಿಲ್ಲ. ಪಟೇಲರು ಬಂಗಲೆಯ ಮೆಟ್ಟು ಕಲ್ಲಿನ ಹತ್ತಿರ ನಿಂತು ತಮ್ಮ ಕೈಯಲ್ಲಿದ್ದ ಬೆತ್ತವನ್ನು ಎರಡು ಸಲ ನೆಲಕ್ಕೆ ಕುಟ್ಟಿ ಸದ್ದು ಮಾಡಿದರು. ಆಗ ಕೋಟೆಯ ಒಳಗೆ ಕುಳಿತಿದ್ದ ದೊರೆ ತನ್ನ ಕೇಂಪ್ ಕ್ಲಾರ್ಕನೊಂದಿಗೆ ಸಿಟ್ಟಿನಿಂದ ಗಟ್ಟಿಯಾಗಿ ಹೇಳುತ್ತಿದ್ದ ಮಾತುಗಳು ಪಟೇಲರ ಕಿವಿಗೆ ಬಿದ್ದವು. ಬಹುಶಃ ಆತನಿಗೆ ಪಟೇಲರು ಬಂದದ್ದು ಗೊತ್ತಾಗಿ ಅವನು ಎದ್ದು ನಿಂತು ಬೂಟುಗಾಲನ್ನು ನೆಲಕ್ಕೆ ಅಪ್ಪಳಿಸುತ್ತಾ, “You dirty fellows, why so late to bring the rascal here?’’ (ಕೊಳಕು ಮನುಷ್ಯರೇ ಆ ಧೂರ್ತನನ್ನು ಕರೆತರಲು ಇಷ್ಟು ತಡವೇಕೆ) ಎಂದು ತಾರಕ ಸ್ವರದಲ್ಲಿ ಮಾತಾಡುತ್ತಾ ನಾಲ್ಕು ಹೆಜ್ಜೆ ಇದಿರು ಬಂದು ಕೇಂಪ್ ಕ್ಲಾರ್ಕನಲ್ಲಿ ಎಂದು ಏನೇನೋ ಬಡ ಬಡಿಸುತ್ತಾ ಬಂದವನೇ ಇದಿರು ನಿಂತಿರುವ ಪಟೇಲರ ಭವ್ಯಾಕೃತಿಯನ್ನು ನೋಡಿ ಅಲ್ಲೇ ನಿಂತು ಬಿಟ್ಟ. ಪಟೇಲರಿಗೆ ಇಂಗ್ಲೀಷ್ ಭಾಷೆ ಗೊತ್ತಿಲ್ಲದಿದ್ದರೂ ರಾಸ್ಕಲ್, ಬ್ಲಡೀಫೂಲ್ ಎಂಬುದು ಬೈಗಳೆಂದು ಗೊತ್ತಿತ್ತು. ಮತ್ತು ಅದು ತನ್ನನ್ನೇ ಗುರಿ ಇಟ್ಟು ಹೇಳಿದ್ದು ಎಂಬ ವಿಚಾರ ಅರ್ಥವಾಗಿತ್ತು. ಪಟೇಲರು ಬಾಯಿ ಬಿಡಲಿಲ್ಲ . ಕೇಂಪ್ ಕ್ಲಾಕ್, “ಇವತ್ತು ಗ್ರಾಮ ಗಡಿಯಲ್ಲಿ ತನ್ನನ್ನು ಸ್ವಾಗತಿಸದಿದ್ದಕ್ಕೂ, ಬಂಗ್ಲೆಯಲ್ಲಿಯೇ ಇದ್ದು ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳದೆ ಇದ್ದದ್ದಕ್ಕೂ, ಹೇಳಿ ಕಳಿಸಿದಾಗ ಕೂಡಲೇ ಬಾರದಿದ್ದಕ್ಕೂ ನಿಮ್ಮ ಮೇಲೆ ದೊರೆಗಳಿಗೆ ಸಿಟ್ಟು ಬಂದಿದೆ, ಅವರಿಗೆ ನಿಮ್ಮ ಜವಾಬು ಬೇಕಾಗಿದೆ” ಎಂದ. ಪಟೇಲರ ಕಣ್ಣು ಕೆಂಪೇರಿತು. ಕರ್ಣನ ಸಾರಥಿಯಾಗಬೇಕೆಂದು ಕೌರವ ಶಲ್ಯನೊಡನೆ ಕೇಳಿಕೊಂಡಾಗ ಸಿಟ್ಟುಗೊಂಡ ಶಲ್ಯನನ್ನು ವರ್ಣಿಸುವ ಕುಮಾರವ್ಯಾಸನ “ಮಾತಿನ ಗಾಳಿ ತುಡುಕಿತು ಮನದ ರೋಷಜ್ವಾಲೆಯನು, ಮೀಸೆಗಳು ಕುಣಿದವು, ಕಾಯ ಕಂಪಿಸಿತು” ಎಂಬ ರೀತಿ ಪಟೇಲರ ದೇಹ ಸ್ಥಿತಿಯೂ ಆಯಿತು.

ಪಟೇಲರು ಬೆತ್ತವನ್ನು ನೆಲಕ್ಕೆ ಕುಟ್ಟಿ ಬಂಗಲೆಯ ಮೆಟ್ಟಿಲುಗಳನ್ನು ಏರಿ ಜಗಲಿಯಲ್ಲಿ ನಿಂತು ಕೇಂಪ್ ಕ್ಲಾರ್ಕನನ್ನು ದಿಟ್ಟಿಸಿ ನೋಡಿ “ಬೊಗಳು, ನಿನ್ನ ಧನಿಯ ಹತ್ತಿರ, ಆತ ನನಗೆ ಪ್ರಯೋಗಿಸಿದ ಬೈಗಳಿಗಾಗಿ ಕ್ಷಮೆ ಕೇಳದಿದ್ದರೆ ಇಲ್ಲಿಂದ ಅವ ಹೆಜ್ಜೆ ತೆಗೆಯಲಿಕ್ಕಿಲ್ಲ. ನಾನು ಎಲ್ಲದಕ್ಕೂ ಸಿದ್ದನಾಗಿಯೇ ಬಂದವ. ಮಂಗ ಮುಸುಡಿನವನ ಬೈಗಳು ಕೇಳಿ ದಿನ ತೆಗೆಯುವ ಅಗತ್ಯ ನನಗಿಲ್ಲ. ಏನು ಮಾಡುತ್ತಾನೆ ಇವ? ನೋಟೀಸಿನಲ್ಲಿ ಹೇಳಿದ ದಿವಸ ಬಾರದೆ ಯಾವಾಗಲೋ ಬಂದು ನಾನು ಬರುವಾಗ ನೀನು ಇರಲಿಲ್ಲ ಎಂದು ಹೇಳುತ್ತಾನೆ, ನನ್ನದೇನು ಕತ್ತೆ ಚಾಕರಿಯೋ?” ಎಂದು ಬೆತ್ತವನ್ನು ನೆಲಕ್ಕೆ ಮತ್ತೊಮ್ಮೆ ಕುಟ್ಟಿ ಗಾಳಿಯಲ್ಲಿ ಬೀಸಿದರು. ಪಟೇಲರ ರುದ್ರಾವತಾರ ನೋಡಿ ದೊರೆ ಕೋಣೆಯ ಒಳಗೆ ಸೇರಿಕೊಂಡ. ಇಷ್ಟು ಹೊತ್ತಿಗೆ ಬಂಗಲೆಯ ಇದಿರು ಸಾಧಾರಣ ಹತ್ತಿರ ಹತ್ತಿರ ನೂರು ಜನರು ಸೇರಿದ್ದರು. ಅದರಲ್ಲಿ ಪಟೇಲರ ಕೂಲಿಯಾಳುಗಳೂ ಇಪ್ಪತ್ತೈದಕ್ಕೆ ಕಡಿಮೆ ಇಲ್ಲದಷ್ಟು ಹೆಂಗುಸರೂ ಇದ್ದರು.

ಕೇಂಪ್ ಕ್ಲಾರ್ಕ್ ಒಳಗೆ ಹೋದವನೇ “ಪಟೇಲರನ್ನು ಸಮಾಧಾನಪಡಿಸುವುದೇ ಲೇಸು, ಇಲ್ಲದಿದ್ದರೆ ನಾವು ಇಲ್ಲಿಂದ ಕ್ಷೇಮವಾಗಿ ಹೋಗಲಾರೆವು. ಆತ ಇಲ್ಲಿಯ ತುಂಡರಸನೆಂದೇ ಹೇಳಬೇಕು. ಈಗಾಗಲೇ ಅವನ ಕಡೆಯ ಜನ ನೂರಕ್ಕೂ ಮಿಕ್ಕಿದೆ, ಸಂಜೆಯ ಹೊತ್ತಿಗೆ ಅದು ಇಮ್ಮಡಿಯಾಗಬಹುದು, ನಾವು ಅಪಾಯದಲ್ಲಿ ಸಿಲುಕಿದ್ದೇವೆ” ಎಂದು ಮುಂತಾಗಿ ನಯವಾಗಿ ತಿಳಿಸಿದ. ದೊರೆ ಒಂದು ನಿಮಿಷ ಯೋಚನೆ ಮಾಡಿದ. ಪಟೇಲರ ರೋಷಾವೇಷವನ್ನೂ ಬಂಗಲೆಯ ಮುಂದಿರುವ ಜನರನ್ನೂ ನೋಡಿದಾಗ ಕೇಂಪ್ ಕ್ಲಾರ್ಕನ ಮಾತಿನಲ್ಲಿ ಸತ್ಯಾಂಶ ಇದೆ ಎಂದು ಅವನಿಗೆ ಭಾಸವಾಯಿತು.

ಐದು ನಿಮಿಷ ಕಳೆದ ಮೇಲೆ ದೊರೆ ಹೊರಗೆ ಬಂದವನೇ ಬೆಟ್ಟದ ಹಾಗೆ ಕದಲದೆ ನಿಂತ ಪಟೇಲರ ಹತ್ತಿರ ಹೋಗಿ ಬಲಗೈಯನ್ನು ನೀಡಿ “ಮಿಸ್ಟರ್ ಪಟೇಲ್, ಐ ಯಾಮ್ ಸಾರಿ, ಫರ್ಗೆಟ್ ದ ಪಾಸ್ಟ್” ಎಂದು ಅವರ ಕೈ ಕುಲುಕಿಸಿದ. ಪಟೇಲರು ಹತ್ತೂ ಬೆರಳಿಗೆ ಆರು ಉಂಗುರ ಸಿಕ್ಕಿಸಿದ್ದ ತಮ್ಮ ಎರಡು ಕೈಗಳಿಂದಲೂ ದೊರೆಯ ಕೈಯನ್ನು ಬಿಗಿಯಾಗಿ ಹಿಡಿದರು. ದೊರೆಗೆ ಇದು ಬರೇ ಪುಳಿಚಾರು ಬ್ರಾಹ್ಮಣನ ಕೈಯಲ್ಲ, ಸಮಯ ಬಿದ್ದರೆ ಉಕ್ಕಿನ ಸಲಾಖೆಯೂ ಆದೀತು ಎಂಬ ಅರಿವಾಗಿ ಪಟೇಲರ ಹಿಡಿತದಿಂದ ಕೈಯನ್ನು ಜಾರಿಸಿ ಹಿಂದೆ ತೆಗೆದುಕೊಂಡ.

ತುದಿಯಡ್ಕ ವಿಷ್ಣ್ವಯ್ಯ
ಸಂಪುಟದಲ್ಲಿರುವ ಕತೆಗಳು : ಸುಳ್ಯ ತಾಲೂಕಿನ ತುದಿಯಡ್ಕದ ವಿಷ್ಣ್ವಯ್ಯನವರು (1930 – 2006) ಪ್ರಸಿದ್ಧರಾದ ಶಾನುಭೋಗರ ವಂಶದವರು.
‘ದೇವರು ಇಲ್ಲ’, ‘ಅಬ್ಬರ ತಾಳ’ ಮತ್ತು ‘ಜನಸ್ಪಂದನ’ ಅವರ ಇತರ ಕೃತಿಗಳು. ಅವರು ಬಹಳ ದೊಡ್ಡ ವಿದ್ವಾಂಸರೂ, ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಗಳೂ ಆಗಿದ್ದರು. 1999 ರ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ‘ದೊರೆಯ ಪರಾಜಯ ಮತ್ತು ಇತರ ಕತೆಗಳು’ ಎಂಬ ಕಥಾಸಂಕಲನದಲ್ಲಿ ಅವರು ಕೆಲವು ವಸಾಹತುಕಾಲೀನ ಘಟನೆಗಳನ್ನು ದಾಖಲಿಸಿದ್ದಾರೆ. ಇಲ್ಲಿ ಬಳಸಿಕೊಂಡಿರುವ ಕತೆಗಳೆಲ್ಲ ಅವರ ಹಿರಿಯರ ಅನುಭವದ ಸತ್ಯಕತೆಗಳು – ಹೆಸರುಗಳನ್ನು ಮಾತ್ರ ಬದಲಾಯಿಸಲಾಗಿದೆ. (ಈ ವಿಷಯವನ್ನು ಸ್ವತಃ ವಿಷ್ಣ್ವಯ್ಯನವರು ಈ ಸಂಪುಟದ ಸಂಪಾದಕನಿಗೆ ತಿಳಿಸಿದ್ದರು – ಅವರ ಕಥಾಸಂಕಲನ ‘ದೊರೆಯ ಪರಾಜಯ’ 2001 ರಲ್ಲಿ ಪ್ರಕಟವಾದಾಗ ಈ ಸಂಪಾದಕ ಅದಕ್ಕೆ ಮುನ್ನುಡಿ ಬರೆದಿದ್ದ; ಆ ಸಂದರ್ಭದಲ್ಲಿ ಅವರು ತಿಳಿಸಿದ ವಿಚಾರವಿದು). ಪ್ರಸ್ತುತ ಕತೆಯಲ್ಲಿ ಪಟೇಲ್ ರುದ್ರಯ್ಯನೆಂಬವರಿದ್ದಾರೆ. ಹೆಸರು ಬದಲಾಯಿಸಿದ್ದು ಬಿಟ್ಟರೆ ಕತೆಯ ಇತರ ವಿವರಗಳೆಲ್ಲ ನಿಜವಾಗಿಯೂ ನಡೆದ ಘಟನೆಗಳು.
ಬ್ರಿಟಿಷರ ಕಾಲದ ಆಡಳಿತ ವ್ಯವಸ್ಥೆ ಮತ್ತು ಕಂದಾಯದ ವಿಚಾರಗಳನ್ನು ಆಮೂಲಾಗ್ರವಾಗಿ ತಿಳಿದಿದ್ದ ತುದಿಯಡ್ಕ ವಿಷ್ಣ್ವಯ್ಯನವರು ಈ ಕತೆಯ ಪ್ರಾರಂಭದಲ್ಲಿ ದಾಖಲಿಸಿರುವ ವಿವರಗಳು (ಸನ್ನಿವೇಶಕ್ಕೆ ಪೂರಕವಾಗಿ ಮಾತ್ರವಲ್ಲದೆ) ಮಾಹಿತಿಯಾಗಿಯೂ ಆಸಕ್ತಿ ಹುಟ್ಟಿಸುವಂತಿವೆ. ಉದಾಹರಣೆಗೆ : “ಆಂಗ್ಲರು ನಮ್ಮ ದೇಶವನ್ನು ಆಳತೊಡಗಿದಾಗ ಜಿಲ್ಲಾಧಿಕಾರಿ, ಪೋಲೀಸು ಸುಪರಿಂಟೆಂಡೆಂಟ್, ಮೊದಲಾದ ವರಿಷ್ಠ ಅಧಿಕಾರ ಪೀಠದಲ್ಲಿ ಯೂರೋಪಿಯನ್ನರೇ ಕುಳ್ಳಿರುತ್ತಿದ್ದರು. ಗ್ರಾಮ ಮಟ್ಟದಲ್ಲಿ ಆಡಳಿತ ಯಂತ್ರದ ಕೀಲುಗಳಾದ ಶ್ಯಾನುಭಾಗರು ಪಟೇಲರುಗಳನ್ನು ಹಿಂದಿನಂತೆ ಅವರು ಉಳಿಸಿಕೊಂಡರು. ಈ ಉದ್ಯೋಗಗಳು ಬಹುತೇಕ ವಂಶ ಪಾರಂಪರ್ಯವಾಗಿಯೇ ಬಂದಂಥವುಗಳು. ಗ್ರಾಮಾಧಿಕಾರಿಗಳಾದ ಪಟೇಲರು ಶ್ಯಾನುಭಾಗರುಗಳಲ್ಲಿ ಹೆಚ್ಚಿನವರು ತಕ್ಕಷ್ಟು ಅನುಕೂಲಸ್ಥರಾಗಿದ್ದು ಗೌರವಾನ್ವಿತ ಮನೆತನಕ್ಕೆ ಸೇರಿದವರಾಗಿರುತ್ತಿದ್ದರು. ತಾವು ಆಡಳಿತ ನಡೆಸುವ ಮುಂಚೆ ರಾಜರುಗಳಿಗೆ ದವಸ ಧಾನ್ಯ ರೂಪದಲ್ಲಿ ಕಂದಾಯ ತೆರುತ್ತಿದ್ದ ಪದ್ಧತಿಯನ್ನು ಬ್ರಿಟಿಷರು ರದ್ದು ಮಾಡಿ ಹಣದ ರೂಪದಲ್ಲಿಯೇ ತೆರಿಗೆ ಸಲ್ಲಿಸಬೇಕೆಂದು ತಾಕೀತು ಮಾಡಿದರು. ಆಗ ಅವರು ಗ್ರಾಮಾಧಿಕಾರಿಗಳು ಅನುಕೂಲವಂತರಾಗಿ ಗೌರವಸ್ಥರಾಗಿದ್ದರೆ ಕಂದಾಯದ ಹಣಕ್ಕೆ ಮೋಸವಾಗಲಿಕ್ಕಿಲ್ಲ ಎಂಬ ಭಾವನೆಯಿಂದ ಮೊದಲಿನ ವ್ಯವಸ್ಥೆಯನ್ನು ಬದಲಿಸಲು ಹೋಗಲಿಲ್ಲ.
“ಜನರು ಬ್ರಿಟಿಷ್ ಅಧಿಕಾರಿಗಳನ್ನು ದೊರೆಗಳೆಂದು ಕರೆಯುತ್ತಿದ್ದರು. ತಲೆಗೆ ಅವರು ಹಾಕಿಕೊಳ್ಳುತ್ತಿದ್ದ ಹೇಟಿಗೆ ದೊರೆ ಟೊಪ್ಪಿ ಎಂದೇ ನಮ್ಮ ಜನ ನಾಮಕರಣ ಮಾಡಿಬಿಟ್ಟರು. ಈ ಅಧಿಕಾರಿಗಳದ್ದು ಹೆಚ್ಚಾಗಿ ಕುದುರೆಯ ಮೇಲೆ ಸಂಚಾರ, ಪ್ರಯಾಣದಲ್ಲಿ ರಾತ್ರಿ ತಂಗಲು ಮುಸಾಫಿರ್ ಬಂಗ್ಲೆಗಳಿದ್ದುವು. ಅಲ್ಲಿ ತಂಗುವ ಅಧಿಕಾರಿಗಳಿಗೆ ಬೇಕಾಗುವ ಊಟೋಪಚಾರದ ಲವಾಜಮೆಯನ್ನು ಒದಗಿಸುವುದು, ಅವರನ್ನು ಗ್ರಾಮಕ್ಕೆ ಪ್ರವೇಶಿಸುವಾಗ ಗಣ್ಯರೊಡನೆ ಸ್ವಾಗತಿಸುವುದು, ಇಲ್ಲಿಂದ ತೆರಳುವರೆಗೆ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಮುಂತಾದ ಜವಾಬ್ದಾರಿ ಗ್ರಾಮದ ಪಟೇಲರಿಗೆ ಸೇರಿದ್ದಾಗಿತ್ತು. ಮುಸಾಫಿರ್ ಬಂಗಲೆಗಳಿರುವ ಗ್ರಾಮಗಳಿಗೆ ಕಸಬಾ ಗ್ರಾಮಗಳೆಂದು ಹೆಸರು. ಆ ಗ್ರಾಮದ ಪಟೇಲರಿಗೆ ಇಬ್ಬರು ಉಗ್ರಾಣಿಗಳನ್ನು ಇಟ್ಟುಕೊಳ್ಳುವ ಅವಕಾಶವೂ ಇತ್ತು.
“ಮೈಸೂರು ಕಡೆಯಿಂದ ಕೊಡಗಿಗಾಗಿ ಮಂಗಳೂರಿಗೆ ಹೋಗುವ ಅಧಿಕಾರಿಗಳಿಗೆ ಬಡ್ಯಾರು ಗ್ರಾಮ ಒಂದು ತಂಗುದಾಣ. ಪೇಟೆಯ ಬದಿಯಲ್ಲಿಯೇ ಇರುವ ಎತ್ತರದ ಗುಡ್ಡದಲ್ಲಿ ಪ್ರವಾಸಿ ಬಂಗಲೆ. ಇದರಿಂದಾಗಿ ಆ ಗುಡ್ಡಕ್ಕೆ ಬಂಗಲೆಗುಡ್ಡೆಯೆಂದೇ ಹೆಸರು. ಗುಡ್ಡದ ಕೆಳಬದಿಯಲ್ಲಿ ಬಂಗಲೆಯ ಉಸ್ತುವಾರಿ ನೋಡಿಕೊಳ್ಳುವ ವಾಚರ್ ವಾಚಣ್ಣನ ಮನೆ. ಅಲ್ಲಿಂದ ಒಂದು ಮೈಲು ದೂರದಲ್ಲಿ ಕಸಬಾ ಪಟೇಲ್ ಪಡುಬೈಲು ರುದ್ರಪ್ಪಯ್ಯನವರ ಮನೆ.”
‘ಕಸಬಾ’ ಎಂಬ ಶಬ್ದ ಈಗಲೂ ಹಲವು ಊರುಗಳ ಹೆಸರಿನ ಜತೆಗೆ ಜೋಡಿಸಲ್ಪಟ್ಟಿದೆ. ಅದರ ಅರ್ಥವನ್ನು ಲೇಖಕರು ಇಲ್ಲಿ ಕೊಟ್ಟಿದ್ದಾರೆ. ‘ಬಂಗ್ಲೆಗುಡ್ಡೆ’ ಎನ್ನುವ ಶಬ್ದವೂ ಐದಾರು ಕಡೆಗಳಲ್ಲಿ (ಉದಾಹರಣೆಗೆ ಕಾರ್ಕಳದ ‘ಬಂಗ್ಲೆಗುಡ್ಡೆ’) ಕಂಡುಬರುತ್ತಿದ್ದು, ಈಗ ಕೆಲವು ಊರುಗಳ ಪ್ರವಾಸಿಬಂಗ್ಲೆಗಳು ಕಾಣೆಯಾಗಿವೆಯಾದರೂ, ಹೆಸರು ಉಳಿದು ಊರುಗಳ ಬಡಾವಣೆಗಳಾಗಿ ವಿಸ್ತರಿಸಿಕೊಂಡಿರುವುದಿದೆ.
ತುದಿಯಡ್ಕ ವಿಷ್ಣ್ವಯ್ಯನವರು ತಮ್ಮ ಕತೆಗಳಲ್ಲಿ ಬಿಳಿಯ ಅಧಿಕಾರಿಗಳು ಅಥವಾ ‘ದೊರೆಗಳ’ ಅಹಂಕಾರವನ್ನು ದಾಖಲಿಸಿದ್ದಾರೆ. ‘ದೊರೆಯ ಪರಾಜಯ’ ಕತೆಯಲ್ಲಿ ಅಂತಹ ಅಧಿಕಾರಿಯೊಬ್ಬನ ದರ್ಪವನ್ನು ಅದಕ್ಕಿಂತಲೂ ದರ್ಪಿಷ್ಟನಾದ ಪಟೇಲನೊಬ್ಬ ಇಳಿಸಿದುದನ್ನು ಅವರು ದಾಖಲಿಸಿದ್ದಾರೆ. ಈ ಕತೆಯ ಪ್ರಾರಂಭದಲ್ಲಿ ಹೇಳಿರುವಂತೆ, ಪಟೇಲರಾಗಿ ನಿಯುಕ್ತರಾದವರು ಪಾರಂಪರಿಕವಾಗಿಯೇ ದೊಡ್ಡ ಮನೆತನದವರಾಗಿರುತ್ತಿದ್ದ ಕಾರಣ ಕೆಲವರಲ್ಲಿ ಸ್ವಭಾವಜನ್ಯ ಅಥವಾ ಪಾರಂಪರಿಕ ಜರ್ಬು ಕೂಡಾ ಇರುತ್ತಿದ್ದುದು ಆಶ್ಚರ್ಯಕರವಲ್ಲ.
ಹಿಂದೆ ನಾವು ಗಮನಿಸಿದಂತೆ ಬ್ರಿಟಿಷರ ದೌರ್ಬಲ್ಯಗಳು ವೈಯಕ್ತಿಕವೆಂಬಂತೆ ಚಿತ್ರಿತವಾಗಿ, ಅವರಿಗೆ ಸಾಮುದಾಯಿಕವಾಗಿ ಒಂದು ಚಹರೆ (ಇಮೇಜ್) ಇದ್ದುದನ್ನು ಆಗಿನ ಸಾಹಿತ್ಯದಲ್ಲಿ ಕಾಣಬಹುದು. ಪಟೇಲರಿಗೆ ಇದ್ದ ಸಾಮುದಾಯಿಕ ಚಹರೆ ಬ್ರಿಟಿಷರ ಆಜ್ಞಾನುವರ್ತಿ ಪ್ರತಿನಿಧಿಗಳೆಂದೇ ಹೊರತು ಅವರನ್ನು ಪ್ರತಿಭಟಿಸುವ ಭಾರತೀಯ ಸ್ವಾತಂತ್ರ್ಯಾಕಾಂಕ್ಷಿಯೆಂದಲ್ಲ. ಈ ಕತೆಯಲ್ಲಿ ಹಾಗೆ ಕಾಣಿಸುವ ಒಬ್ಬ ನಾಯಕನಿರುವುದು ಮುದಗೊಳಿಸುವ ವಿಚಾರವೇ ಆಗಿದ್ದರೂ ಇದು ವೈಯಕ್ತಿಕ ವ್ಯಕ್ತಿತ್ವದ ಘನತೆಯೇ ಹೊರತು ಸಾಮುದಾಯಿಕ ಚಹರೆಯನ್ನು ಡಿಫೈನ್ ಮಾಡುವ ಸಂಗತಿಯಲ್ಲ. ಇನ್ನು ಮುಂದಿನ ಕೆಲವು ಕತೆಗಳಲ್ಲಿ ಪಟೇಲರ ಸಾಮುದಾಯಿಕ ಚಹರೆ ಹೇಗಿತ್ತೆನ್ನುವುದು ಸ್ಪಷ್ಟವಾಗುತ್ತದೆ.