ಇಲ್ಲಿ ಒಮ್ಮೆ ಕವಿ ಬೇಸಗೆಯ ಒಂದು ಸಂಜೆಯಲ್ಲಿ ಪರಿಸರದ ಸೌಂದರ್ಯವನ್ನು ಸವಿಯುತ್ತಿರುವಾಗ, ಒಂದು ಕಲ್ಲು ಗುಹೆಯ ಬಳಿ ಸುಂದರವಾದ ದೋಣಿಯನ್ನು ನೋಡುತ್ತಾನೆ. ತಕ್ಷಣ ಅವನಿಗೆ ಅದು ತನಗೆ ಬೇಕು ಎನಿಸಿಬಿಡುತ್ತದೆ. ಅವನು ನಿಧಾನವಾಗಿ ಕಳ್ಳತನದಿಂದ ಅದರ ಹಗ್ಗವನ್ನು ಬಿಚ್ಚಿ ಮೆಲ್ಲಗೆ ದೋಣಿಯನ್ನು ತಳ್ಳಿಕೊಂಡು ಹೋಗಿ ನಂತರ ಹುಟ್ಟು ಹಾಕಿ ನಡೆಸತೊಡಗುತ್ತಾನೆ. ಆಗ ಅವನಿಗೆ ಯಾವ ಧ್ವನಿಯೂ ಕೇಳುವುದಿಲ್ಲ. ತನ್ನದಲ್ಲದ ವಸ್ತುವನ್ನು ಕಳ್ಳತನದಿಂದ ಒಯ್ಯುತ್ತಿರುವುದು ಸರಿಯಾ ತಪ್ಪಾ ಎನ್ನುವ ಆಲೋಚನೆಯೂ ಕಾಡುವುದಿಲ್ಲ. ಪ್ರಕೃತಿಯ ಸೊಬಗು ಅವನ ಸಂತೋಷವನ್ನು ಇಮ್ಮಡಿಸುತ್ತದೆ. ಸ್ವಲ್ಪ ಹೊತ್ತಿನ ನಂತರ ಅವನಿಗೆ ಏನೋ ಒಂದು ನಮೂನಿ ಅನಿಸಲು ಶುರುವಾಗುತ್ತದೆ.
ಆಶಾ ಜಗದೀಶ್ ಅಂಕಣ

 

ನಮಗೆ ಬೇಕಾದ ಎಲ್ಲ ಉತ್ತರವೂ ಪ್ರಕೃತಿಯಲ್ಲಿದೆ. ನಮ್ಮ ಯಾವುದೇ ಪ್ರಶ್ನೆಯೂ ಅನಾಥವಲ್ಲ ಬೇನಾಮಿಯಲ್ಲ. ಆದರೂ ನಮಗೆ ಪ್ರಶ್ನೆಗಳು ಕೊಡುವಷ್ಟು ಸಮಾಧಾನ ಉತ್ತರಗಳು ಕೊಡುವುದಿಲ್ಲ. ಕಾರಣ ಬಹುಶಃ ಪ್ರಶ್ನೆ ನಮ್ಮ ಮೂಗಿನ ನೇರಕ್ಕಿರುತ್ತದೆ. ಆದರೆ ಉತ್ತರ ನಮ್ಮ ಕೈಲಿರುವುದಿಲ್ಲ. ನಮಗೆ ಎಲ್ಲವೂ ನಮ್ಮ ಅಧೀನದಲ್ಲೇ ಇರಬೇಕು ಎನ್ನುವ ಹಪಾಹಪಿ. ಆದರೆ ಯಾವುದೂ ನಮ್ಮ ಕೈಲಿರುವುದಿಲ್ಲ ಎನ್ನುವುದು ಸತ್ಯ ಸಂಗತಿ. ಭಗವಂತನ ಕೃಪೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡಲಾರದು ಎನ್ನುವ ನಂಬಿಕೆ ಧರ್ಮದ ಹೆಸರಿನಲ್ಲಿ ನಮಗೆ ತಲುಪಿಸಲಾಗುತ್ತಿರುವ ಸತ್ಯ.

ಇಂತಹ ಅದೆಷ್ಟೋ ಸತ್ಯಗಳು ನಮ್ಮ ಧರ್ಮದಲ್ಲಿವೆ. ನನಗೆ ವಿವೇಕಾನಂದರ ಮಾತೊಂದು ಸದಾ ನೆನಪಾಗುತ್ತಿರುತ್ತದೆ. ಧರ್ಮ ಎನ್ನುವುದಕ್ಕೆ ಅವರು ಕೊಡುವ ವ್ಯಾಖ್ಯಾನ ಅದೆಷ್ಟು ಅರ್ಥಪೂರ್ಣ! ಅವರು ಹೇಳುತ್ತಾರೆ, “ಯಾವುದು ನಮ್ಮನ್ನು ತಪ್ಪು ಮಾಡದಂತೆ ಒಳ್ಳೆಯ ಮಾರ್ಗದಲ್ಲಿ ನಡೆಸುತ್ತದೋ ಅದೇ ಧರ್ಮ” ಎಂದು. ಪ್ರತಿಯೊಂದು ಧರ್ಮದ ಅಂತಿಮ ಸಾರವೂ ಇದೇ ಆಗಿರುತ್ತದೆ. ಎಲ್ಲ ಧರ್ಮಗಳ ಸಾರಾಂಶವೂ ಮಾನವತೆಯೇ…

ಧಾರ್ಮಿಕ ನಂಬಿಕೆಯಲ್ಲಿ ದೇವರ ಕಲ್ಪನೆ ಒಂದು ಸುಂದರವಾದ ಮತ್ತು ಅಗತ್ಯವಿದ್ದ ಕಲ್ಪನೆ. ದೇವರನ್ನು ನಂಬದವರೂ ಜಗತ್ತಿನಲ್ಲಿ ಶಕ್ತಿಯೊಂದು ಇದೆ ಎನ್ನುವುದನ್ನು ಒಪ್ಪುತ್ತಾರೆ. “Energy cannot be created nor be destroyed, but it can be transformed from one form to another” ಎನ್ನುವುದನ್ನು ವಿಜ್ಞಾನವೂ ಹೇಳುತ್ತದೆ. ಅದನ್ನು ನಾವೂ ಒಪ್ಪುತ್ತೇವೆ. ಆದರೆ ಅದು ಅನುಭವಕ್ಕೆ ದಕ್ಕದಿದ್ದಾಗ ನಂಬಿಕೆ ಹುಟ್ಟದಿದ್ದಾಗ ದೇವರು ಎನ್ನುವ ನಂಬಿಕೆ ನಮ್ಮಿಂದ ಅದೇ ನಿರೀಕ್ಷಿತ ಫಲವನ್ನು ಮಾಡಿಸುತ್ತದೆ ಎಂದರೆ ಅಂತಹ ನಂಬಿಕೆ ರಚನಾತ್ಮಕ ಮತ್ತು ನಿರೀಕ್ಷಣೀಯ ಅಂತಲೇ ಅನಿಸುತ್ತದೆ.

ನಾವು ಯಾವುದೇ ಕೆಲಸವನ್ನು ಮಾಡಲಿ ಇತರರು ನಮ್ಮನ್ನು ನೋಡಲಿ, ಪ್ರಶಂಸಿಸಲಿ ಎನ್ನುವ ಉದ್ದೇಶ ನಮಗೇ ಅರಿವಿಲ್ಲದೆ ಕೆಲಸ ಮಾಡುತ್ತಿರುತ್ತದೆ. ಯಾರೂ ನಮ್ಮನ್ನು ಗಮನಿಸುತ್ತಿಲ್ಲ ಅಥವಾ ಗಮನಿಸುವುದೇ ಇಲ್ಲ ಎಂದೆನಿಸಿದಾಗ ತಕ್ಷಣ ನಾವದರಲ್ಲಿ ಆಸಕ್ತಿ ಕಳೆದುಕೊಂಡುಬಿಡುತ್ತೇವೆ. ಆದರೆ ಯಾವ ಗಮನವನ್ನೂ ನಿರೀಕ್ಷಿಸದೆ ನಮ್ಮ ಸ್ವ ಆಸಕ್ತಿ ತುಡಿತದಿಂದ ಮಾಡುವ ಕೆಲಸಗಳು ಮಾತ್ರ ಅರ್ಥಪೂರ್ಣವಾಗಬಲ್ಲವು.

ಕನಕದಾಸರ ಕಥೆಯೊಂದು ನೆನಪಾಗುತ್ತಿದೆ ನನಗೆ. ಒಮ್ಮೆ ಕನಕದಾಸರು ಗುರುಕುಲದಲ್ಲಿ ಕಲಿಯುತ್ತಿದ್ದಾಗ, ಅವರ ಗುರು ಶಿಷ್ಯಂದಿರನ್ನು ಪರೀಕ್ಷಿಸಲಿಕ್ಕಾಗಿ ಎಲ್ಲರಿಗೂ ಒಂದೊಂದು ಬಾಳೆಹಣ್ಣನ್ನು ಕೊಟ್ಟು ಯಾರೂ ಇಲ್ಲದಿರುವ ಜಾಗದಲ್ಲಿ ಯಾರಿಗೂ ಕಾಣದಂತೆ ತಿಂದು ಬನ್ನಿ ಎಂದರಂತೆ. ಆಗ ಎಲ್ಲರೂ ಒಂದೊಂದು ಜಾಗದಲ್ಲಿ ಅಂದರೆ ಒಬ್ಬ ಮಂಚದ ಕೆಳಗೆ, ಒಬ್ಬ ಬಾಗಿಲ ಹಿಂದೆ, ಒಬ್ಬ ಹೊದಿಕೆ ಹೊದ್ದು…. ಹೀಗೆ ಒಬ್ಬೊಬ್ಬರು ಒಂದೊಂದು ಜಾಗದಲ್ಲಿ ಬಚ್ಚಿಟ್ಟುಕೊಂಡು ತಿಂದು ಬಂದರಂತೆ. ಆದರೆ ಕನಕದಾಸರು ಮಾತ್ರ ಎಲ್ಲೇ ತಿನ್ನಲು ಹೋಗಲಿ ಆ ಜಾಗದಲ್ಲಿ ಸಾಕ್ಷಾತ್ ಆದಿಕೇಶವನೇ ಕಾಣಿಸುತ್ತಿದ್ದನಂತೆ. ಹಾಗಾಗಿ ಅವರು ಮಾತ್ರ ಹಣ್ಣನ್ನು ತಿನ್ನದೇ ಹಾಗೇ ಬರುತ್ತಾರೆ. ಆಗ ಎಲ್ಲರೂ ಅವರನ್ನು ನೋಡಿ ನಗುತ್ತಾರೆ. ಗುರುಗಳು ಬಂದು ಎಲ್ಲ ಶಿಷ್ಯಂದಿರನ್ನೂ ಹಣ್ಣನ್ನು ಹೇಗೆ ತಿಂದು ಬಂದರೆನ್ನುವ ವೃತ್ತಾಂತವನ್ನು ಕೇಳುತ್ತಾ ಬರುತ್ತಾರೆ. ಎಲ್ಲರೂ ತಮ್ಮ ತಮ್ಮ ಸಾಹಸವನ್ನು ವರ್ಣಿಸುತ್ತಾ ಬರುತ್ತಾರೆ. ಕೊನೆಗೆ ಸಪ್ಪೆ ಮೋರೆ ಹಾಕಿಕೊಂಡು ಮೂಲೆಯಲ್ಲಿ ನಿಂತಿದ್ದ ಕನಕದಾಸರನ್ನು ಮಾತಾಡಿಸಿ, “ಕನಕ ನೀ ಯಾಕೆ ನಾಳೇಹಣ್ಣನ್ನು ತಿಂದಿಲ್ಲ, ಯಾಕೆ ಸಪ್ಪಗಿರುವೆ?” ಎಂದು ವಿಚಾರಿಸುತ್ತಾರೆ. ಆಗ ಕನಕದಾಸರು “ನನಗೆ ಭಗವಂತನಿಲ್ಲದ ತೃಣ ಮಾತ್ರದ ಜಾಗ ಎಲ್ಲಿಯೂ ಸಿಗಲಿಲ್ಲ ಗುರುಗಳೇ, ನಾ ಎಲ್ಲೇ ಹೋಗಲಿ ಅಲ್ಲೆಲ್ಲಾ ಭಗವಂತನೇ ನಿಂತು ನನ್ನನ್ನು ನೋಡುತ್ತಿದ್ದ, ಅವನಿಲ್ಲದ ಜಾಗ ನನಗೆ ಎಲ್ಲೂ ಸಿಗಲಿಲ್ಲ” ಎನ್ನುತ್ತಾರೆ. ಈ ಮಾತು ಕೇಳಿದ ಗುರುಗಳ ಕಣ್ಣಲ್ಲಿ ತಡೆಯಲಾರದ ಅಶ್ರುಧಾರೆ. ಗುರುಗಳು ಅವನನ್ನು ತಬ್ಬಿ ಸಂತೈಸುತ್ತಾರೆ. ಅವರ ಗುಣಗಾನ ಮಾಡುತ್ತಾ ಅವರ ಹಿರಿಮೆಯನ್ನು ಇತರೆ ಶಿಷ್ಯರಿಗೆ ಹೇಳುತ್ತಾರೆ.

ಈ ಕಥೆ ಯಾವಾಗಲೂ ನನ್ನನ್ನು ಕಾಡುತ್ತಿರುತ್ತದೆ. ಇಂತಹ ಒಂದು ಜಾಗೃತ ಪ್ರಜ್ಞೆ ಸದಾ ನಮ್ಮಲ್ಲಿದ್ದರೆ ಎಷ್ಟು ಚಂದ. ನಾವು ಒಂಟಿಯಾಗಿದ್ದಾಗಲೂ ಯಾರೂ ಇಲ್ಲದಿದ್ದಾಗಲೂ ಕದಿಯುವ ಅವಕಾಶವಿದ್ದೂ ಅದು ಯಾರಿಗೂ ತಿಳಿಯುವ ಸಾಧ್ಯತೆಯೇ ಇಲ್ಲದಿದ್ದಾಗಲೂ ನಾವು ಕದಿಯದೇ ಉಳಿಯಬೇಕೆಂದಾಗ ಇಂತಹ ಸುಪ್ತ ಪ್ರಜ್ಞೆಯೊಂದು ನಮ್ಮಲ್ಲಿ ಸದಾ ಜೀವಂತವಿರಬೇಕು. ಅದು ನಮ್ಮನ್ನು ತಪ್ಪು ದಾರಿ ತುಳಿಯದಂತೆ ಎಚ್ಚರಿಸಬೇಕು. ತಪ್ಪನ್ನು ಮಾಡದಂತೆ ತಡೆಯಬೇಕು. ಅದೇ ತಾನೇ ಜಗತ್ತಿನ ಉಳಿವಿನ ಹೆದ್ದಾರಿ.

ಇದೇ ಸಂದರ್ಭದಲ್ಲಿ ನನಗೆ ಮತ್ತೊಂದು ಕವಿತೆ ನೆನಪಾಗುತ್ತಿದೆ. ಅದು ವಿಲಿಯಂ ವರ್ಡ್ಸ್ ವರ್ತ್ ರ “ದ ಸ್ಟೋಲನ್ ಬೋಟ್” ಎನ್ನುವ ಕವಿತೆ. ಇಲ್ಲಿ ಒಮ್ಮೆ ಕವಿ ಬೇಸಗೆಯ ಒಂದು ಸಂಜೆಯಲ್ಲಿ ಪರಿಸರದ ಸೌಂದರ್ಯವನ್ನು ಸವಿಯುತ್ತಿರುವಾಗ, ಒಂದು ಕಲ್ಲು ಗುಹೆಯ ಬಳಿ ಸುಂದರವಾದ ದೋಣಿಯನ್ನು ನೋಡುತ್ತಾನೆ. ತಕ್ಷಣ ಅವನಿಗೆ ಅದು ತನಗೆ ಬೇಕು ಎನಿಸಿಬಿಡುತ್ತದೆ. ಅವನು ನಿಧಾನವಾಗಿ ಕಳ್ಳತನದಿಂದ ಅದರ ಹಗ್ಗವನ್ನು ಬಿಚ್ಚಿ ಮೆಲ್ಲಗೆ ದೋಣಿಯನ್ನು ತಳ್ಳಿಕೊಂಡು ಹೋಗಿ ನಂತರ ಹುಟ್ಟು ಹಾಕಿ ನಡೆಸತೊಡಗುತ್ತಾನೆ. ಆಗ ಅವನಿಗೆ ಯಾವ ಧ್ವನಿಯೂ ಕೇಳುವುದಿಲ್ಲ. ತನ್ನದಲ್ಲದ ವಸ್ತುವನ್ನು ಕಳ್ಳತನದಿಂದ ಒಯ್ಯುತ್ತಿರುವುದು ಸರಿಯಾ ತಪ್ಪಾ ಎನ್ನುವ ಆಲೋಚನೆಯೂ ಕಾಡುವುದಿಲ್ಲ. ಪ್ರಕೃತಿಯ ಸೊಬಗು ಅವನ ಸಂತೋಷವನ್ನು ಇಮ್ಮಡಿಸುತ್ತದೆ.

ಧರ್ಮ ಎನ್ನುವುದಕ್ಕೆ ಅವರು ಕೊಡುವ ವ್ಯಾಖ್ಯಾನ ಅದೆಷ್ಟು ಅರ್ಥಪೂರ್ಣ! ಅವರು ಹೇಳುತ್ತಾರೆ, “ಯಾವುದು ನಮ್ಮನ್ನು ತಪ್ಪು ಮಾಡದಂತೆ ಒಳ್ಳೆಯ ಮಾರ್ಗದಲ್ಲಿ ನಡೆಸುತ್ತದೋ ಅದೇ ಧರ್ಮ” ಎಂದು. ಪ್ರತಿಯೊಂದು ಧರ್ಮದ ಅಂತಿಮ ಸಾರವೂ ಇದೇ ಆಗಿರುತ್ತದೆ. ಎಲ್ಲ ಧರ್ಮಗಳ ಸಾರಾಂಶವೂ ಮಾನವತೆಯೇ…

ಸ್ವಲ್ಪ ಹೊತ್ತಿನ ನಂತರ ಅವನಿಗೆ ಏನೋ ಒಂದು ನಮೂನಿ ಅನಿಸಲು ಶುರುವಾಗುತ್ತದೆ. ಯಾರೋ ತನ್ನನ್ನು ಗಮನಿಸುತ್ತಿದ್ದಾರೆ ಎನಿಸತೊಡಗುತ್ತದೆ. ಸುತ್ತಲ ಪರಿಸರ ಅವನ ಮೇಲೆ ನಿಗಾ ಇಟ್ಟಿರುವಂತೆ, ಕಳ್ಳನನ್ನು ಹಿಡಿಯಲು ಬಂದ ಆರಕ್ಷಕ ದುರುಗುಟ್ಟಿ ನೋಡಿದಂತೆ ಭಾಸವಾಗತೊಡಗುತ್ತದೆ. ಅವನಿಗೀಗ ಯಾವುದೂ ಸುಂದರವಾಗಿ ಕಾಣುತ್ತಿಲ್ಲ, ಯಾವುದೂ ಖುಷಿ ಕೊಡುತ್ತಿಲ್ಲ. ಕೊನೆಗೆ ಅವನು ಆ ದೋಣಿಯನ್ನು ಮರಳಿ ಅದರ ಜಾಗದೆಡೆಗೆ ನಡೆಸಿಕೊಂಡು ಬರುತ್ತಾನೆ. ಮತ್ತೆ ಅದು ಇದ್ದಲ್ಲಿಯೇ ಇದ್ದಂತೆಯೇ ಬಿಟ್ಟು ಹೊರಡುತ್ತಾನೆ. ಆಗ ಅವನಿಗೆ ಒಂಚೂರು ಸಮಾಧಾನವಾಗುತ್ತದೆ. ಆದರೂ ಈ ಘಟನೆ ನಡೆದು ಅದೆಷ್ಟೋ ದಿನಗಳಾದ ನಂತರವೂ ಒಂದು ದುಃಸ್ವಪ್ನದಂತೆ ಆಗಾಗ ಕವಿಯ ಕನಸಿಗೆ ಬಂದು ಕವಿಯನ್ನು ಕಾಡುತ್ತಲೇ ಹೋಗುತ್ತದೆ…

ಹೀಗೆ ಕವಿತೆ ಮುಗಿದಾಗ ಕವಿತೆ ನಮ್ಮನ್ನು ಕಾಡಲು ಶುರುಮಾಡುತ್ತದೆ. ಆತ್ಮಸಾಕ್ಷಿಗಿಂತ ದೊಡ್ಡ ಸಾಕ್ಷಿ ಯಾವುದೂ ಇರಲು ಸಾಧ್ಯವಿಲ್ಲ. ನಮ್ಮ ತಪ್ಪಿಗೆ ನಮಗೆ ನಾವು ಸಮರ್ಥನೆ ಕೊಟ್ಟುಕೊಳ್ಳಲು ಸಾಧ್ಯವಾದರೆ ಅದು ತಪ್ಪೇ ಅಲ್ಲ. ನಮ್ಮೊಳಗಿನ ದನಿ ಸದಾ ನಮ್ಮನ್ನು ಎಚ್ಚರಿಸುತ್ತಿರುತ್ತದೆ. ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಪ್ರತಿ ಬಾರಿ ಹೇಳುತ್ತಿರುತ್ತದೆ. ನಾವು ಅದನ್ನು ಸ್ವಚ್ಛ ಮನಸಿಂದ ಕೇಳಿಸಿಕೊಳ್ಳಬೇಕಷ್ಟೇ.

ಇದಕ್ಕೆ ಪೂರಕವೆನ್ನುವ ಹಾಗೆ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಯವರ “ಅಳುವಿನ ಹಾದಿ” ಎನ್ನುವ ಕವಿತೆ ಇದೆ, ನಮ್ಮ ನಿಜಾಯಿತಿಗೆ ಹಿಡಿದ ಕನ್ನಡಿಯಂತಿದೆ…

“ನನ್ನದೇ ಅಪಮಾನ ಸೋಲು ಸಂಕಟಗಳಿಗೆ
ನಾನು ಅಳುವುದು ಸಹಜ. ಕಲ್ಲೆಡವಿದರು ಕೂಡ
ಅಯ್ಯೋ ಎನುವೆ! ತನಗೆ ತಾನೇ ಕಣ್ಣೀರ ಹನಿ
ಜಗುಳುವುದು ಹೊರಗೆ, ಥಟ್ಟನೆ ಕಣ್ಣಿನರಿವಿರದೆ!
ನನ್ನ ಮಗು ನನ್ನ ಹೆಂಡತಿ ನನ್ನ ಆಪ್ತರಿಗೆ
ಒದಗಿದಾಗಾಪತ್ತು ನಾನು ಕಳವಳಪಟ್ಟು
ಅಳಬಹುದು. ಅತ್ತ ಅಳು ಚಿತ್ತಪರಿಭಾವ ಫಲ
ಆದರೂ ಕಣ್ಣೀರು ಸತ್ಯ. ಪರಿಧಿಯ ಅಳತೆ
ಕೊಂಚ ವಿಸ್ತೃತ ಈಗ. ನನಗಾಗದವರಿಗೇ-
ನಾದರಾಯಿತೋ ಆಗ? ಸರಿ! ಆಗಬೇಕಾದ್ದೆ
ಎನ್ನುವುದೆ ಕಣ್ಣ ಹನಿ ಹಿಂದೊಂದು ಸಣ್ಣ ದನಿ?
ಅದು ಪ್ರಕೃತಿ ಧರ್ಮ. ಸಂಸ್ಕೃತಿಯ ಮರ್ಮವೆ ಬೇರೆ.

ಯಾವನೋ ಯಕ್ಷ… ಯಾರೋ ಚೋಮ…. ಯಾರೋ ನಳ…
ಆದರೂ ಅಲೆಗಳೇಳುತ್ತ ಕಲಕುವುದು ಕೊಳ.”
-ಎಚ್ಚೆಸ್ವಿ

ಈ ಕವಿತೆ ಭಾವಕೋಶದ ನಾದದಂತಿರುವ ಕಣ್ಣೀರಿನ ಬಗ್ಗೆ ಅದೆಷ್ಟು ಎಳೆ ಎಳೆಯಾಗಿ ಬಿಡಿಸಿಡುತ್ತಾ ಹೋಗುತ್ತದೆ. ಕೊನೆಗೆ ಕಣ್ಣೀರಿಗಂತೂ ಯಾವ ತಡೆಗೋಡೆಗಳಿಲ್ಲ. ಇದ್ದರೂ ಅವು ಮಾನವ ನಿರ್ಮಿತ ಅಣೆಕಟ್ಟುಗಳಷ್ಟೇ. ಅವಾದರೂ ಕಣ್ಣೀರಿನ ಸಾಮರ್ಥ್ಯದ ಮುಂದೆ ಒಂದಲ್ಲಾ ಒಂದು ದಿನ ಒಡೆದುಹೋಗಬಹುದಾದಂಥವು. ಅಂದರೆ ನಮ್ಮ ಅಂತಃ ಸತ್ವ ನಮ್ಮಿಂದ ಬೇರೇನನ್ನೋ ಬಯಸುತ್ತದೆ. ಆದರೆ ನಾವು ಅದರ ವಿರುದ್ಧವಾಗಿ ನಡೆಯಲೆತ್ನಿಸಿ ಪದೇ ಪದೇ ಸೋಲುತ್ತೇವೆ. ಮತ್ತೆ ಈ ಸೋಲುಗಳಿಂದ ನಾವೇನೂ ಕಲಿಯುತ್ತಿಲ್ಲ ಎನ್ನುವುದು ವಿಷಾದ ಹುಟ್ಟಿಸುತ್ತದೆ….

ಹೀಗೆಲ್ಲಾ ಯೋಚಿಸುತ್ತಾ ಹೋಗುವಾಗ ಹೊರಗಿನ ಪ್ರಪಂಚವನ್ನೇ ದೊಡ್ಡದೆಂದುಕೊಳ್ಳುವ ನಮಗೆ ಒಳಗಿನ ಪ್ರಪಂಚ ಅದೆಷ್ಟು ಅಪರಿಚಿತ ಎನ್ನುವುದು ಸೋಜಿಗದ ಸೋಜಿಗ…