ನಾನು ಮೊದಲು ಹೋಗಿದ್ದು ಬುಗ್ಗ ರಾಮಲಿಂಗೇಶ್ವರಕ್ಕೆ. ನಿತ್ಯ ಬರುವ ಭಕ್ತಾದಿಗಳನ್ನು ಬಿಟ್ಟರೆ ಹೆಚ್ಚು ಜನ ಇರಲಿಲ್ಲ. ವಿಜಯನಗರ ಶೈಲಿಯ ದೇವಾಲಯಗಳಲ್ಲಿ ಇರುವಂತೆ ಪ್ರವೇಶ ದ್ವಾರ ಎತ್ತರವಾಗಿದ್ದು, ಎರಡೂ ಬದಿಗಳಲ್ಲಿ ಗಂಗಾ, ಯಮುನೆಯರ ಶಿಲ್ಪಗಳಿಂದ ಕೂಡಿದೆ. ಇವು ಮಾನಸಿಕವಾಗಿ ನಮ್ಮನ್ನು ಗಂಗೆ, ಯಮುನೆಯರಿಂದ ಶುಚಿಗೊಳಿಸಿಕೊಂಡು ಒಳಕ್ಕೆ ಹೋಗುವ ಪ್ರತೀಕ. ದೇವಾಲಯದ ಪ್ರಶಾಂತತೆ ಹಾಗೂ ಅದರ ಬೃಹತ್‌ ಗಾತ್ರವನ್ನು ಕಂಡು ನನಗೆ ಒಂದು ಕಡೆ ಬೆರಗು ಜೊತೆಗೆ ಏನು ನೋಡಲಿ ಏನು ಬಿಡಲಿ ಅಂತ ಸ್ವಲ್ಪ ಹೊತ್ತು ತಲೆ ಕೆಟ್ಟ ನೊಣದ ಹಾಗೆ ಕ್ಯಾಮೆರಾ ಹಿಡಿದುಕೊಂಡು ಓಡಾಡಿದೆ.
‘ದೇವ ಸನ್ನಿಧಿ’ ಅಂಕಣದಲ್ಲಿ ತಾಡಿಪತ್ರಿ ಎಂಬ ಅಪರೂಪದ ಜಾಗದ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

ವಿಜಯನಗರ ಅಂದ ಕೂಡಲೇ ಥಟ್ಟನೆ ಕಣ್ಣ ಮುಂದೆ ಬರುವುದು ವಿಜಯನಗರ ಕಾಲದ ಭವ್ಯ ಇತಿಹಾಸದ ವರ್ತಮಾನದ ತುಣುಕು ಹಂಪೆ. ಬಹುಶಃ ಹಂಪೆಯ ಬಗ್ಗೆ ತಿಳಿಯದ ಕನ್ನಡಿಗರೇ ಇಲ್ಲ ಅನ್ನಬಹುದು. ಅಷ್ಟ್ಯಾಕೆ, ಅದು ಯುನೆಸ್ಕೋ ಪಾರಂಪರಿಕ ತಾಣಕ್ಕೆ ಸೇರಿದ ಮೇಲೆಯಂತೂ ಭಾರತೀಯರ ಹೋಗಲೇಬೇಕಾದ, ನೋಡಲೇಬೇಕಾದ ಜಾಗಗಳ ಪಟ್ಟಿಯಲ್ಲಿ ಹಂಪೆಗೆ ಅಗ್ರಸ್ಥಾನ. ನಾನು ನನ್ನ ವಿದೇಶೀ ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ಕಂಡಂತೆ ಅವರಿಗೂ ಹಂಪೆಯ ಹುಚ್ಚು. ನೋಡಿದವರ ಹೃದಯದಲ್ಲಿ ವೈಭವದ ಜೊತೆಗೆ ಒಂದು ವಿಷಾದದೊಂದಿಗೆ ಹಂಪೆ ಕಟ್ಟಿಕೊಳ್ಳುತ್ತದೆ. ಹಂಪೆಯ ಪ್ರಸಿದ್ಧಿ ಹೀಗಿರುವಾಗ ಇತಿಹಾಸಕಾರ ಜೇಮ್ಸ್‌ ಫರ್ಗ್ಯುಸನ್‌ ತನ್ನ ಪುಸ್ತಕ, ‘History of Indian and Estren Architectureʼ ನಲ್ಲಿ ಹೀಗೆ ಹೇಳುತ್ತಾನೆ.

“ಹಂಪೆಯ ವಿಠಲ ದೇವಾಲಯ ಹಾಗೂ ಇತರ ದೇವಾಲಯಗಳು ಖಂಡಿತವಾಗಿಯೂ ಭಾರತದ ಮುಖ್ಯವಾದ ಅವಶೇ಼ಷಗಳಲ್ಲೊಂದಾದರೂ, ವಿಜಯನಗರ ಕಾಲದ ಅದ್ಭುತ ಕಲಾನಿಪುಣತೆ ಕಾಣುವುದು ಇಲ್ಲಲ್ಲ ಬದಲಿಗೆ ಹಂಪೆಯಿಂದ ನೂರು ಮೈಲಿ ದೂರವಿರುವ ತಾಡಿಪತ್ರಿಯಲ್ಲಿ”

ನಾನು ತಾಡಿಪತ್ರಿಯ ಬಗ್ಗೆ ತಿಳಿದದ್ದು ಆಕಸ್ಮಿಕವಾಗಿ. ಇತಿಹಾಸ ತಜ್ಞೆ ಚಿತ್ರಾ ಮಾಧವನ್‌ ಅವರ ಯಾವುದೋ ಲೇಖನ ಓದುವಾಗ ಇದರ ಬಗ್ಗೆ ಒಂದೆರಡು ಸಾಲು ಓದಿದೆ. ಕುತೂಹಲದಿಂದ ಗೂಗಲಿಸಿದಾಗ ಸಿಕ್ಕ ಚಿತ್ರಗಳು ನನ್ನನ್ನು ಇನ್ನಿಲ್ಲದಂತೆ ಸೆಳೆದವು. ಗುರುವಾರ ರಾತ್ರಿ ಓದಿದವಳು ಶುಕ್ರವಾರದ ಸಂಜೆಗಾಗಲೇ ಶನಿವಾರ ಬೆಳಿಗ್ಗೆ ತಾಡಿಪತ್ರಿಗೆ ಹೋಗುವುದೆಂದು ತೀರ್ಮಾನಿಸಿದ್ದೆ.

ಬೆಂಗಳೂರಿನಿಂದ ೨೭೦ ಕಿ. ಮೀ ದೂರದಲ್ಲಿರುವ ತಾಡಿಪತ್ರಿಗೆ ಹತ್ತಿರದ ಪಟ್ಟಣ ಅನಂತಪುರ. ತಾಡಿಪತ್ರಿ ಸಣ್ಣ ಊರು. ಉಳಿಯಲು ಅಷ್ಟೇನೂ ಒಳ್ಳೇ ಅನುಕೂಲಗಳು ಇರದುದರಿಂದ ಅನಂತಪುರದಲ್ಲಿ ಉಳಿದರೆ ಒಳ್ಳೆಯದು. ಬೆಳಿಗ್ಗೆ ಎದ್ದವಳೇ ಅನಂತಪುರದಿಂದ ೫೫-೬೦ ಕಿ ಮೀ ದೂರದಲ್ಲಿರುವ ತಾಡಿಪತ್ರಿಗೆ ಹೋದೆ. ತನ್ನೊಳಗೆ ಮನೋಹರವಾದ, ಕಲಾತ್ಮಕತಕಾಗಿ ಶ್ರೀಮಂತವಾಗಿರುವ ಎರಡು ದೇವಾಲಯಗಳನ್ನು ಅಡಗಿಸಿಟ್ಟುಕೊಂಡು ಸರಳವಾಗಿ, ಏನೂ ಗೊತ್ತೇ ಇಲ್ಲದ ಮಳ್ಳಿಯಂತಿದೆ ಊರು. ಪೆನ್ನಾರ್, ಪಿನಾಕಿನಿ ಅಂತೆಲ್ಲಾ ಹೆಸರಿನಿಂದ ಕರೆಯಲ್ಪಡುವ ನದಿಯು ಊರ ಪಕ್ಕದಲ್ಲಿ ಹರಿಯುತ್ತಾಳೆ. ಇವಳು ಹುಟ್ಟೋದು ನಮ್ಮ ಬೆಂಗಳೂರಿನ ನಂದಿ ಬೆಟ್ಟದ ಬಳಿ. ಇಲ್ಲಿ ಹುಟ್ಟಿ ಆಂಧ್ರಪ್ರದೇಶದಲ್ಲಿ ಹರಿಯುತ್ತಾಳೆ. ತಾಡಿಪತ್ರಿ, ಗಂಡಿಕೋಟದಲ್ಲೆಲ್ಲಾ ಪಿನಾಕಿನಿ ನದಿಯದೇ ದರ್ಬಾರು.

(ಬುಗ್ಗ ರಾಮಲಿಂಗೇಶ್ವರ ದೇವಸ್ಥಾನ)

ತಾಡಿಪತ್ರಿ ಚೋಳರು, ಚಾಲುಕ್ಯರು, ಹೊಯ್ಸಳರು, ಕೊನೆಗೆ ವಿಜಯನಗರದ ಅರಸರು ಆಳಿದ ಊರು. ಈ ಊರಿನಲ್ಲಿ ವಿಜಯನಗರದ ೧೬ನೇ ಶತಮಾನಕ್ಕೆ ಸೇರಿದ ಎರಡು ದೇವಾಲಯಗಳಿವೆ. ಅವು ಸಾಮಾನ್ಯವಾಗಿ ಕಾಣುವ ವಿಜಯನಗರ ಶೈಲಿಯಂತಿರದೆ ಹೊಯ್ಸಳ, ವಿಜಯನಗರ ಮತ್ತು ಚಾಲುಕ್ಯರ ಕೂಡು ಶೈಲಿಯಂತಿದೆ. ಚಿಂತಾಲ ವೆಂಕಟರಮಣ ಹಾಗೂ ಬುಗ್ಗ ರಾಮಲಿಂಗೇಶ್ವರ ಊರಿನ ಮುತ್ತು ರತ್ನಗಳು. ಒಂದು ವಿಷ್ಣುವಿಗಾದರೆ ಮತ್ತೊಂದು ಶಿವನ ದೇವಾಲಯ ಗ್ರನೈಟ್‌ ಕಲ್ಲಿನಲ್ಲಿ ಕಟ್ಟಿದ ಇವೆರಡು ದೇವಾಲಯಗಳು ವಿಜಯನಗರದ ಶಿಲ್ಪಿಗಳ ಕುಶಲತೆಗೆ, ಕಲಾನೈಪುಣ್ಯಕ್ಕೆ ಕಿರೀಟಪ್ರಾಯವಾಗಿವೆ. ಹೆಚ್ಚು ಜನಪ್ರಿಯವಾಗದೇ ಉಳಿದಿರುವುದು ಅವುಗಳ ಪುಣ್ಯ ಎಂದೇ ಹೇಳಬಹುದು. ದೇವಾಲಯಗಳು ಹೊರಗಿನ ದಾಳಿಗೊಳಗಾಗದೇ ಹೆಚ್ಚೇನೂ ಹಾನಿಗೊಳಗಾಗದೆ ೫೦೦ಕ್ಕೂ ಹೆಚ್ಚು ವರ್ಷಗಳಿಂದ ಉಳಿದು ಬಂದಿವೆ. ಇವು ಇಂದಿಗೂ ಪೂಜೆ ನಡೆಯತ್ತಿರುವ ದೇವಾಲಯಗಳಾಗಿರುವುದೂ ಅವು ಉಳಿದು ಬಂದಿರುವುದಕ್ಕೆ ಕಾರಣ ಇರಬಹುದು.

ನಾನು ಮೊದಲು ಹೋಗಿದ್ದು ಬುಗ್ಗ ರಾಮಲಿಂಗೇಶ್ವರಕ್ಕೆ. ನಿತ್ಯ ಬರುವ ಭಕ್ತಾದಿಗಳನ್ನು ಬಿಟ್ಟರೆ ಹೆಚ್ಚು ಜನ ಇರಲಿಲ್ಲ. ವಿಜಯನಗರ ಶೈಲಿಯ ದೇವಾಲಯಗಳಲ್ಲಿ ಇರುವಂತೆ ಪ್ರವೇಶ ದ್ವಾರ ಎತ್ತರವಾಗಿದ್ದು, ಎರಡೂ ಬದಿಗಳಲ್ಲಿ ಗಂಗಾ, ಯಮುನೆಯರ ಶಿಲ್ಪಗಳಿಂದ ಕೂಡಿದೆ. ಇವು ಮಾನಸಿಕವಾಗಿ ನಮ್ಮನ್ನು ಗಂಗೆ, ಯಮುನೆಯರಿಂದ ಶುಚಿಗೊಳಿಸಿಕೊಂಡು ಒಳಕ್ಕೆ ಹೋಗುವ ಪ್ರತೀಕ. ದೇವಾಲಯದ ಪ್ರಶಾಂತತೆ ಹಾಗೂ ಅದರ ಬೃಹತ್‌ ಗಾತ್ರವನ್ನು ಕಂಡು ನನಗೆ ಒಂದು ಕಡೆ ಬೆರಗು ಜೊತೆಗೆ ಏನು ನೋಡಲಿ ಏನು ಬಿಡಲಿ ಅಂತ ಸ್ವಲ್ಪ ಹೊತ್ತು ತಲೆ ಕೆಟ್ಟ ನೊಣದ ಹಾಗೆ ಕ್ಯಾಮೆರಾ ಹಿಡಿದುಕೊಂಡು ಓಡಾಡಿದೆ. ಅಲ್ಲಿಯ ಪೂಜಾರಿ ಒಬ್ಬರು ಬಂದು ಮಾತನಾಡಿಸಿದರು. ಮಾತಾಡ್ತಾ ಆಡ್ತಾ ಅವರು ಬೆಂಗಳೂರಿನವರು ಅಂತ ತಿಳೀತು. ಇನ್ನೇನು ಕನ್ನಡದಲ್ಲೇ ಮಾತನಾಡೋಕೆ ಶುರು ಮಾಡಿದಿವಿ. ನನಗೊಂದಿಷ್ಟು ತೋರಿಸಲು ಬಂದರು. ನಾನು ಮೊದಲನೇ ದ್ವಾರದಿಂದ ಮುಂದಕ್ಕೆ ಹೋಗ್ತಾನೇ ಇಲ್ಲದ್ದು ಕಂಡು ನೀವು ನೋಡ್ತಾ ಇರಿ ಅಂತ ಪೂಜೆ ಮುಂದುವರೆಸಲು ಹೋದರು.

ಅದೊಂದು ಮಾಯಾ ಜಗತ್ತು. ನೂರಾರು ಕಥೆಗಳು, ಕಲ್ಲಿನಲ್ಲಿ ಕೆತ್ತಿದ್ದರೂ ಅಲ್ಲಿನ ರೂಪಗಳಲ್ಲಿ ಭಾವಾಭಿವ್ಯಕ್ತಿಯನ್ನು ಕಡೆದ ಶಿಲ್ಪಿಗಳಿಗೆ ಶರಣು. ಹೊಯ್ಸಳರ ಶಿಲ್ಪಗಳಲ್ಲಿ ಕುಸುರಿ ಜಾಸ್ತಿ. ಅವರು ಬಳಸಿದ ಬಳಪದ ಕಲ್ಲು ಬೆಣ್ಣೆಯಂತೆ ಕೆತ್ತಲು ಸುಲಭ. ಆದರೆ ಇದು ಕರಿ ಗ್ರಾನೈಟ್. ಇದರಲ್ಲಿ ಅವರು ಮಾಡಿರುವ ಕೆಲಸ ಅತ್ಯದ್ಭುತ.

ತನ್ನೊಳಗೆ ಮನೋಹರವಾದ, ಕಲಾತ್ಮಕತಕಾಗಿ ಶ್ರೀಮಂತವಾಗಿರುವ ಎರಡು ದೇವಾಲಯಗಳನ್ನು ಅಡಗಿಸಿಟ್ಟುಕೊಂಡು ಸರಳವಾಗಿ, ಏನೂ ಗೊತ್ತೇ ಇಲ್ಲದ ಮಳ್ಳಿಯಂತಿದೆ ಊರು. ಪೆನ್ನಾರ್, ಪಿನಾಕಿನಿ ಅಂತೆಲ್ಲಾ ಹೆಸರಿನಿಂದ ಕರೆಯಲ್ಪಡುವ ನದಿಯು ಊರ ಪಕ್ಕದಲ್ಲಿ ಹರಿಯುತ್ತಾಳೆ. ಇವಳು ಹುಟ್ಟೋದು ನಮ್ಮ ಬೆಂಗಳೂರಿನ ನಂದಿ ಬೆಟ್ಟದ ಬಳಿ.

ದೇವಾಲಯಕ್ಕೆ ಮೂರು ಪ್ರವೇಶದ್ವಾರಗಳಿವೆ. ಉತ್ತರ, ದಕ್ಷಿಣ ಹಾಗೂ ಪಶ್ಚಿಮದಲ್ಲಿ. ದೇವಾಲಯದ ಪಕ್ಕ ಪಿನಾಕಿನಿ ನದಿ ಹರಿಯುತ್ತದೆ. ದೇವಾಲಯದ ಪ್ರಾಂಗಣದ ನಡುವೆ ಮುಖ್ಯ ದೇವರಾದ ಬುಗ್ಗ ರಾಮಲಿಂಗೇಶ್ವರನ ದೇವಾಲಯ. ಅದಕ್ಕೆ ಹೊಂದಿಕೊಂಡಂತೆ, ದೇವಿಯ ದೇವಾಲಯ. ಶಿವ ಉದ್ಭವ ಲಿಂಗ ಹಾಗೂ ಸದಾ ಅಲ್ಲಿ ನೀರಿನ ಒರತೆ ಬೇಸಿಗೆಯೂ ಸೇರಿದಂತೆ ಎಲ್ಲಾ ಕಾಲದಲ್ಲೂ ಇರುವುದರಿಂದ ಅದಕ್ಕೆ ಬುಗ್ಗ ರಾಮಲಿಂಗೇಶ್ವರ ಅಂತ ಹೆಸರು. ಇಲ್ಲಿ ಪರಶುರಾಮ ತಪಸ್ಸು ಮಾಡಿದ ಅನ್ನುವ ಐತಿಹ್ಯವೂ ಇದೆ. ಶಾಸನಗಳ ಆಧಾರದ ಮೇಲೆ ಪೆಮ್ಮಸಾನಿ ಪಾಳೆಗಾರರ ಕಾಲದಲ್ಲಿ ಕಟ್ಟಿದ್ದು ತಿಳಿಯುತ್ತದೆ.

ದೇವಿಯ ದೇವಾಲಯದ ಗರ್ಭಗುಡಿಯ ಹೊರಗಿರುವ ಮಂಟಪ ತುಂಬಾ ವಿಶೇಷವಾಗಿದೆ. ಹಂಪೆಯ ಸಂಗೀತ ಕಂಬಗಳ ಹಾಗೇ ಇಲ್ಲಿಯೂ ಒಂದು ಕಂಬದಲ್ಲಿ ಸಂಗೀತ ಹೊಮ್ಮುತ್ತದೆ. ಕಂಬದ ಮೇಲಿರುವ ಅಪ್ಸರೆಯರು ಕಲ್ಲಿಗೆ ಸೌಂದರ್ಯದ ಹೊದಿಕೆ ಹೊದಿಸಿದ್ದಾರೆ. ದೇವಿಯು ನಿಂತಿರುವ ಮೂರ್ತಿ ವಿಶೇಷವಾಗಿದೆ. ಅಲ್ಲಿ ವಿಜಯನಗರದ ವಿಶೇಷವಾದ ಸೂರಿನಲ್ಲಿ ಚಿತ್ರಿಸುವ ಬಣ್ಣದ ಚಿತ್ರಗಳು ಇದ್ದದ್ದು ಕಾಣುತ್ತದಾದರೂ ಈಗ ಅವೆಲ್ಲಾ ಅಳಿಸಿ ಹೋಗಿದೆ.

ಇನ್ನು ಶಿವನ ದೇವಾಲಯವಾಗಿರುವುದರಿಂದ ಕೆತ್ತನೆಗಳೆಲ್ಲಾ ಶಿವಮಯ. ಶಿವಪುರಾಣದ ಅನೇಕ ಕಥೆಗಳು ಇಲ್ಲಿ ಕಾಣುತ್ತವೆ. ಶಿವ, ಅವನ ಕುಟುಂಬ, ಶಿವಗಣಗಳು, ಅನೇಕಾನೇಕ ರೂಪದಲ್ಲಿ ಕಾಣಸಿಗುತ್ತವೆ. ಹೋಗಿ ಎರಡು ಗಂಟೆಗಳಾದರೂ ನಾನು ದಕ್ಷಿಣ ದ್ವಾರವನ್ನು ಆಸ್ವಾದಿಸುತ್ತಾ ಮುಳುಗಿದ್ದೆ. ಪುರೋಹಿತರು ಬಂದು ಬನ್ನಿ ಉತ್ತರ ದ್ವಾರ ತೋರಿಸ್ತೀನಿ ಅಂತ ಕರೆದುಕೊಂಡು ಹೋದರು. ಅದನ್ನು ಕಂಡು ನನಗೆ ಮಾತೇ ಹೊರಡಲಿಲ್ಲ. ಅವಾಕ್ಕಾದೆ. ನಾನು ಈ ತರಹದ ಕೆತ್ತನೆಯನ್ನು ಬೇರೆಲ್ಲೂ ಕಂಡಿರಲಿಲ್ಲ. ಇದೊಂದು ಅಪೂರ್ಣ ಪ್ರವೇಶದ್ವಾರ. ಯಾಕಾಗಿ ನಿಲ್ಲಿಸಿದರೋ ಕಾಣೆ. ಆದರೆ ಅದು ಪೂರ್ಣ ಆಗಿದ್ದಿದ್ದರೆ… ಛೇ ಅಂತ ಉದ್ಗಾರ ತಾನೇ ತಾನಾಗಿ ಬರುತ್ತೆ. ಅದಕ್ಕೂ ಒಂದು ಕಥೆಯಿದೆ. ಕಾಶಿಗೆ ಇದು ಕಾಂಪಿಟೇಷನ್‌ ಆಗಬಾರದು ಅಂತ ಶಿವ ಮಧ್ಯದಲ್ಲೇ ತಡೆದ ಅನ್ನೋದು, ಸಮಾಧಾನ ಮಾಡಿಕೊಳ್ಳಲು ಕಟ್ಟಿರುವ ಕಥೆಯಿರಬಹುದು. ಇದನ್ನು ಕೆತ್ತಿದ ಶಿಲ್ಪಿಗೆ ಕಲ್ಲು ಕಲ್ಲಾಗಿಲ್ಲ. ಬೆಣ್ಣೆಯಾಗಿದೆ. ಆತನಿಗೆ ಇರಬಹುದಾದ ಸಮಸ್ತ ಗಣಿತ, ರೇಖಾಗಣಿತ, ವೇದಪುರಾಣಗಳ ತಿಳುವಳಿಕೆ ಎಷ್ಟಿರಬಹುದು ಅಂತ ಯೋಚಿಸಿ. ಅದು ಅಷ್ಟು ಎತ್ತರದಲ್ಲಿದ್ದರೂ ಒಂದೂ ಕೂಡ ಪ್ರಮಾಣ ತಪ್ಪಿಲ್ಲ. ಅಲ್ಲಿ ಅನೇಕ ವಿಶೇಷವಾದ ಶಿಲ್ಪಗಳಿವೆ. ಉದಾಹರಣೆಗೆ, ವಿಷ್ಣುವಿನ ಅರ್ಧನಾರೀಶ್ವರ ರೂಪ. ಎಡಗಡೆಗೆ ಲಕ್ಷ್ಮಿ ಬಲಕ್ಕೆ ವಿಷ್ಣು. ಇದಂತೂ ದಕ್ಷಿಣ ಭಾರತದಲ್ಲೆಲ್ಲೂ ಕಂಡು ಬಂದ ಉಲ್ಲೇಖವಿಲ್ಲ. ಇದು ಏನು ಅಂತ ನಾನು ಬಂದ ಮೇಲೆ ಅಧ್ಯಯನ ನಡೆಸಿದಾಗ ತಿಳಿದದ್ದು ಶಾರದಾತಿಲಕ ಎಂಬ ತಂತ್ರ ಗ್ರಂಥದಲ್ಲಿ ಇದರ ಉಲ್ಲೇಖ ಇದೆ ಎಂದು.

ಶಿವನಲ್ಲದೇ ಗಣೇಶ, ಕುಮಾರ, ವಿಷ್ಣುವಿನ ದಶಾವತಾರಗಳನ್ನೂ ಕೂಡ ನೋಡಬಹುದು. ಪುರೋಹಿತರು ಅವರು ಹೊರಡುವ ಸಮಯವಾಗಿದ್ದರಿಂದ ನನಗೆ ನೋಡಲು ಹೇಳಿ ಹೊರಟರು. ನನಗೆ ಮನಃತೃಪ್ತಿಯಾಗುವಷ್ಟು ಹೊತ್ತು ಪಿನಾಕಿನಿಯ ಹರಿವ ಸದ್ದನ್ನು ಕೇಳ್ತಾ ದೇವಲೋಕದಲ್ಲಿ ಮಿಂದು ಬಂದೆ.

ಆನಂತರ ಮಗಳೂ ಜೊತೆ ಇದ್ದದ್ದರಿಂದ ಅವಳಿಗೆ ಒಂದು ಮೆಸ್‌ ನಲ್ಲಿ ಸ್ವಲ್ಪ ಊಟ ತಿನ್ನಿಸಿ ಊರಿನ ನಡುವೆ ಇರುವ ಚಿಂತಾಲ ವೆಂಕಟರಮಣ ನೋಡಲು ಹೋಗೋದ್ರೊಳಗೆ ಗಂಟೆ ಮೂರಾಗಿತ್ತು. ಅದು ಬುಗ್ಗ ರಾಮಲಿಂಗೇಶ್ವರನಿಗಿಂತ ದೊಡ್ಡ ದೇವಾಲಯ ಮತ್ತು ದೊಡ್ಡ ಪ್ರಕಾರ. ವಿಷ್ಣುವಿಗೆ ವೈಭವ ಜಾಸ್ತಿ!

(ಚಿಂತಾಲ ವೆಂಕಟರಮಣ ದೇವಾಲಯ)

ಗುತ್ತಿ-ಗಂಡಿಕೋಟವನ್ನು ಆಳುತ್ತಿದ್ದ ವಿಜಯನಗರದ ಪೆಮ್ಮಸಾನಿ ಯೆರ ತಿಮ್ಮನಾಯ್ಡು ೧೬ ನೇ ಶತಮಾನದಲ್ಲಿ ಕಟ್ಟಿಸಿದ್ದು ಈ ದೇವಾಲಯ. ಸ್ಥಳಪುರಾಣದ ಪ್ರಕಾರ ಇದು ಮೊದಲು ಹುಣಸೇ ತೋಪಾಗಿತ್ತು. ಒಂದು ದಿನ ಒಂದು ಮರ ಸೀಳಿಕೊಂಡು ವೆಂಕಟರಮಣನ ಮೂರ್ತಿ ಹೊರಬಂತು. ಅದನ್ನು ಕಟ್ಟಿಸು ಅಂತ ತಿಮ್ಮನಾಯ್ಡುವಿಗೆ ಕನಸಿನಲ್ಲಿ ಬಂದು ವೆಂಕಟರಮಣ ಆದೇಶ ಕೊಟ್ಟ. ಹಾಗಾಗಿ ದೇವಾಲಯ ನಿರ್ಮಾಣ ಆಯ್ತು ಅನ್ನೋ ನಂಬಿಕೆ.

ಮುಖ್ಯ ದೇವಾಲಯವು ಗರ್ಭಗೃಹ, ಅಂತರಾಳ, ದೊಡ್ಡ ರಂಗಮಂಟಪವನ್ನು ಹೊಂದಿದೆ. ಇದು ವಿಜಯನಗರದ ಕಾಲದ ದೇವಾಲಯದ ವಿನ್ಯಾಸವನ್ನೇ ಹೋಲುತ್ತದೆ. ಒಳಗೆ ಕಾಲಿಟ್ಟಂತೆ ಮೊದಲು ಎದುರುಗೊಳ್ಳುವುದೇ ರಥದ ಆಕಾರದ ಗರುಡ ಮಂಟಪ. ನಮಗೆಲ್ಲಾ ಹಂಪೆಯ ರಥ ಗೊತ್ತು. ಇದು ಹೆಚ್ಚು ಪ್ರಚಲಿತ ಅಲ್ಲದ ಈ ಪುಟ್ಟ ಊರಾದ ತಾಡಿಪತ್ರಿಯಲ್ಲಿ ಬಚ್ಚಿಟ್ಟುಕೊಂಡಿರುವ ಮನಮೋಹಕವಾದ ಕಲ್ಲಿನ ರಥ. ಕೆಲವು ಕಲಾವಿಮರ್ಶಕರ ಪ್ರಕಾರ ಇದು ಹಂಪೆಯ ಕಲ್ಲಿನ ರಥಕ್ಕಿಂತ ಸುಂದರವಾಗಿದೆ. ಅನೇಕ ಕುಸುರಿ ಕೆತ್ತನೆಗಳಿಂದ ಕೂಡಿದ ರಥದ ಒಳಗೆ ಗರುಡನಿದ್ದಾನೆ. ಇದನ್ನು ನೋಡೋಕಾದರೂ ತಾಡಿಪತ್ರಿಗೆ ಹೋಗಬೇಕು. ಗೋಪುರವೂ ಕೂಡಿ ದೇವಾಲಯಕ್ಕೆ ಇರುವ ಎಲ್ಲಾ ವಾಸ್ತುವಿನ್ಯಾಸವನ್ನು ಹೊಂದಿದ ಇದು ಒಂದು ಸಣ್ಣ ದೇವಾಲಯವೇ ಸರಿ.

ಈ ದೇವಾಲಯ ಮುಖ್ಯವಾಗಿ ವಿಶಿಷ್ಠವಾಗುವುದು ಇಲ್ಲಿನ ರಾಮಾಯಣ, ಭಾಗವತ ಕತೆಗಳಿಂದ. ರಾಮಾಯಣದ ಕತೆ ಅನೇಕ ದೇವಾಲಯಗಳಲ್ಲಿ ಮೂಡಿದರೂ ಚಿಂತಾಲ ವೆಂಕಟರಮಣದಲ್ಲಿ ಹೇಳಿರುವಂತೆ ಎಲ್ಲಿಯೂ ಹೇಳಿಲ್ಲ. ಅತ್ಯಂತ ವಿಸ್ತಾರವಾಗಿ, ದೇವಾಲಯದ ಹೊರಭಿತ್ತಿಯಲ್ಲಿ ಮೂಡಿರುವ ರಾಮಾಯಣವನ್ನು ನೋಡುವುದೇ ಹಬ್ಬ. ಇನ್ನು ಕೃಷ್ಣನ ತುಂಟಾಟಗಳ ಭಾಗವತದ ಕಥೆಗಳು ಮನಸ್ಸಿಗೆ ಮುದ ನೀಡುತ್ತವೆ. ಸುಮಾರು ೨೦೫ ಪ್ಯಾನಲ್‌ ಗಳಲ್ಲಿ ರಾಮಾಯಣದ ೧೫೦ ಕಥೆಗಳನ್ನು ಹೇಳಿದ್ದಾರೆ. ರಾಮ ಮಾತ್ರವಲ್ಲದೆ ಉಳಿದ ಸಣ್ಣ ಪಾತ್ರಗಳಿಗೂ ಇಲ್ಲಿ ಜಾಗವಿದೆ. ಮಂಥರೆ, ಶೂರ್ಪಣಕಿ, ರಾಕ್ಷಸರಾದ ರಾವಣ, ಖರ, ದೂಷಣ ಎಲ್ಲರೂ ಇಲ್ಲಿ ಕಥೆ ಹೇಳುತ್ತಾರೆ. ಇದು ರಾಮಾಯಣದ ನೋಡುವ ಕಾವ್ಯ. ಮಕ್ಕಳಿಗೆ ರಾಮಾಯಣವನ್ನು ತೋರಿಸಬೇಕೆಂದರೆ ಇಲ್ಲಿಗೆ ಕರೆದುಕೊಂಡು ಬರಬೇಕು. ಕಾದಾಟದ ಸನ್ನಿವೇಶವೇ ಆಗಲಿ, ಯಶೋಧೆಯ ಮಮತೆಯ ದೃಶ್ಯವೇ ಆಗಲಿ – ಶಿಲ್ಪಿ ಅವಕ್ಕೆಲ್ಲಾ ಭಾವನೆಗಳನ್ನು ಹಚ್ಚಿರೋದರಿಂದ ಒಂದು interactive movie ನೋಡಿದ ಅನುಭವ ಬರುತ್ತೆ.

ಶಿಲ್ಪಿಗಳ ಹಾಸ್ಯ ಪ್ರಜ್ಞೆಯನ್ನು ಹೇಳಲೇಬೇಕು. ಬುಗ್ಗ ರಾಮಲಿಂಗೇಶ್ವರದಲ್ಲಿ ಪ್ರವೇಶ ದ್ವಾರದಲ್ಲಿ ನೂರಕ್ಕೂ ಹೆಚ್ಚಿನ ಯಕ್ಷ ಕುಬ್ಜರ ಕೆತ್ತನೆಯಿದೆ. ಅವುಗಳ ಕಿತಾಪತಿ ಮಾಡುವ ಮುಖ ಭಾವ, ಡೊಳ್ಳುಹೊಟ್ಟೆ, ಸಂಗೀತ, ನರ್ತನ ಮುಖದಲ್ಲೊಂದು ನಗೆ ತಾರದೆ ಇರದು. ಚಿಂತಾಳ ವೆಂಕಟರಮಣ ದೇವಾಲಯದ ಸೂರಿನ ಮೇಲೆ ಮಂಗಗಳನ್ನು ಕೆತ್ತಿದ್ದಾರೆ. ಮರದಿಂದ ಇಳಿದು ಬರುವಂತೆ ಕಾಣುವ ಇವು ನಿಜಕ್ಕೂ ಸೂರಿನ ಮೇಲೆ ಇರುವಂತೆ ತೋರುತ್ತದೆ.

ಅಲ್ಲಿನ ತುಳಸಿ ಕಟ್ಟೆಗೂ ಕೂಡ ಕಲೆಯ ಸ್ಪರ್ಶವಿದೆ. ಇಷ್ಟಾದರೂ ಈ ದೇವಾಲಯಕ್ಕೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಆದ್ದರಿಂದ ಅಲ್ಲಿ ಗೌಜು ಗದ್ದಲವಿಲ್ಲ. ಹಂಪೆಯ ಹಾಗೆ ಶೂಟಿಂಗ್‌ ಸ್ಪಾಟ್‌ ಆಗಿಲ್ಲ. ದೇವಭಕ್ತರಿಗೆ ಹಾಗೂ ಕಲಾಭಕ್ತರು ಮಾತ್ರ ಹೋಗೋದರಿಂದ ಅಲ್ಲೊಂದು ತಂಪಿದೆ, ಪರಂಪರೆಯ ನಾದವಿದೆ. ಪುರಾಣಗಳ ಘಮಲಿದೆ, ಮುಖ್ಯವಾಗಿ ಅದು ದೇವಸನ್ನಿಧಿ.