ಕಾದಂಬರಿಯ ನಿಜ ಸತ್ವ ಅಡಗಿರುವುದು ಕಾದಂಬರಿಯ ಮೂವತ್ತಮೂರನೆ ಅಧ್ಯಾಯದಲ್ಲಿಯೇ. ಕಾದಂಬರಿಯ ಆರಂಭಕ್ಕೆ ಬಂದ ಕಮಲ ಕಡೆಗೂ ಬರುತ್ತಾಳೆ. ಬೀಡಿ ಹೊಸೆದೂ ಹೊಸೆದೂ ಕುಟುಂಬ ನಿಭಾಯಿಸಿದಷ್ಟೂ ತನ್ನ ಖುಷಿಗಳನ್ನು ಹೊಸಕಿ ಹಾಕುತ್ತಿರುತ್ತಾಳೆ. ಕೈಯಲ್ಲಿ ಕೆಲವೇ ರುಪಾಯಿಗಳನ್ನು ಹಿಡಿದು ಪೇಟೆಗೆ ಹೋಗುವ ಆಕೆ ರಿಸ್ಟ್ ವಾಚನ್ನು ನೋಡುತ್ತಾಳೆ. ತೆಗೆದುಕೊಳ್ಳುವುದಿಲ್ಲ. ಬಣ್ಣ ಬಣ್ಣದ ಸೀರೆಯನ್ನು ನೋಡುತ್ತಾಳೆ ಅದಕ್ಕೆ ಹೊಂದಿಕೆಯಾಗುವ ರವಿಕೆಯನ್ನೂ ನೋಡುತ್ತಾಳೆ. ಇನ್ನೊಮ್ಮೆ ಇನ್ನೊಮ್ಮೆ ಎಂದು ತನ್ನ ಬಯಕೆಗಳನ್ನು ಮುಂದೆ ಹಾಕುತ್ತಲೇ ಅಂಗಡಿಯವನು ಬೇರೆ ಗಿರಾಕಿಗಳ ಕಡೆ ಗಮನ ಕೊಟ್ಟಾಗ ತಾನು ಸದ್ದಿಲ್ಲದೆ ಅಂಗಡಿಯಿಂದ ಹೊರಬರುತ್ತಾಳೆ.
ಕೆ.ವಿ. ತಿರುಮಲೇಶರ “ಆರೋಪ” ಕಾದಂಬರಿಯ ಕುರಿತು ಸುಮಾವೀಣಾ ಬರಹ

ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಕೆ.ವಿ. ತಿರುಮಲೇಶರ ಹೆಸರೂ ಮಹತ್ವದ್ದು. ಇವರ ಕಾದಂಬರಿಗಳನ್ನು ಈ ಹೊತ್ತಿನಲ್ಲಿ ಅನುಸಂಧಾನಿಸಿರುವ ಕಿರುಪ್ರಯತ್ನ ಮಾಡಿದ್ದೇನೆ. ತಿರುಮಲೇಶರು ರಚಿಸಿರುವ ಕಾದಂಬರಿಗಳು ಸಂಖ್ಯೆಯ ದೃಷ್ಟಿಯಲ್ಲಿ ಕಡಿಮೆ ಅನ್ನಿಸಿದರೂ ಅವರು ಚರ್ಚಿಸಿರುವ ಬಹುವಿಧ ಆಯಾಮಗಳು ಅನನ್ಯವಾಗಿವೆ. ಕಾದಂಬರಿ ಅಂದರೆ ಕತೆಯ ವಿಸ್ತರಣೆಯಲ್ಲ, ಸನ್ನಿವೇಶಗಳ ನಿರೂಣೆಯಲ್ಲ, ಮನರಂಜನೆಯ ಮಜಲನ್ನೂ ದಾಟಿ ಓದುಗರನ್ನು ಗಂಭೀರ ಚಿಂತನೆಗೆ ಹಚ್ಚುವ ಕ್ರಮ. ಬಹುವಿಧ ಆಯಾಮಗಳಲ್ಲಿ ಅವುಗಳು ಓದುಗರಿಗೆ ವಿಶೇಷ ಹಾಗು ತಾರ್ಕಿಕ ಸಂದೇಶಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಏಕ ವ್ಯಕ್ತಿಯಾಗಿ ಅನೇಕ ಹೊಳಹುಗಳನ್ನೂ ವಿಶಾಲ ಎನ್ನುವ ಹೆಸರನ್ನು ಇರಿಸಿಕೊಂಡರೂ ಸಂಕುಚಿತವಾಗಿ ವರ್ತಿಸುವ ವ್ಯಕ್ತಿ, ಮಾಡದ ತಪ್ಪಿಗೆ ಆರೋಪವನ್ನು ಎದುರಿಸುವ ಅನಿವಾರ್ಯತೆ, ಅಂದುಕೊಂಡಂತೆ ಯಾವುದೂ ಆಗದಾಗ ಪಲ್ಲಟಗಳಿಗೆ ಒಳಗಾಗುವ ಮನುಷ್ಯನ ಸಹಜ ಮನಸ್ಥಿತಿಯನ್ನು, ತಲ್ಲಣ, ತಾಕಲಾಟಗಳನ್ನು ತಿರುಮಲೇಶರು ‘ಅನೇಕ’, ‘ಆರೋಪ’, ‘ತರಂಗಾಂತರ’, ‘ಮುಸುಗು’ ಕಾದಂಬರಿಗಳಲ್ಲಿ ತಂದಿದ್ದಾರೆ. ಕೇರಳ, ಕರ್ನಾಟಕ, ಆಂಧ್ರ, ಒರಿಸ್ಸಾ ರಾಜ್ಯಗಳ ಹಾಗು ವಿದೇಶಗಳ ಕಿರು ತಿರುಗಾಟದೊಂದಿಗೆ ಪ್ರಾದೇಶಿಕತೆಯ ಬಗ್ಗೆಯೂ ತಿಳಿಸುವ ಸೂಕ್ಷ್ಮ ಸಂವೇದನೆಯ ಹರಹನ್ನು ಬಿತ್ತರಿಸಿರುವ ಕೆ.ವಿ. ತಿರುಮಲೇಶರ ಆರೋಪ ಕಾದಂಬರಿಯ ಒಳಹೊಕ್ಕು ನೋಡುವ ಕಿರುಪ್ರಯತ್ನ ಇಲ್ಲಿದೆ.

ಆರೋಪ

ಮೈಸೂರಿನಲ್ಲಿ ಇತಿಹಾಸ ಎಂ.ಎ. ಓದಿಕೊಂಡು ಕೆಲಸಕ್ಕಾಗಿ ಅಲೆದು ಸಾಫಲ್ಯ ಕಾಣದೆ ನಾಗೂರಿಗೆ ಹೊಸದಾಗಿ ಶಿಕ್ಷಕ ವೃತ್ತಿಯನ್ನು ಅರಸಿ ಬರುವ ಅರವಿಂದ ಈ ಕಾದಂಬರಿಯ ಕಥಾ ನಾಯಕ. ರಿಸರ್ಚ್ ಮಾಡಬೇಕು ಎಂದುಕೊಂಡರೂ ಪ್ರತಿಭೆಗೆ ಸರಿಯಾದ ಪುರಸ್ಕಾರ ಸಿಗದೇ ಇದ್ದಾಗ ಏನಾಗುತ್ತದೆ ಎಂಬುದನ್ನು ಇಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. ವಿಷಯವಸ್ತುಗಳನ್ನು ಅರಿಯದೆ ಮಕ್ಕಿಕಾಮಕ್ಕಿ ಕಂಠಪಾಠ ಮಾಡುತ್ತಿದ್ದ ಕಾದಂಬರಿಯ ನಾಯಕನ ಸಹಪಾಠಿ ಜೋಷಿ ರಿಸರ್ಚ್ ಸ್ಕಾಲರ್ ಆಗಿ ಸೇರ್ಪಡೆಯಾಗುವುದು, ಶಿಫಾರಸ್ಸಿನ ಮೇಲೆ ವಿದೇಶಕ್ಕೆ ಪ್ರಯಾಣ ಬೆಳೆಸುವ ಹೈದರಾಬಾದನ ಸಹಸಂಶೋಧಕ ರಾಜಾರಾಮ, ಪ್ರತಿಭಾವಂತೆಯಾದರೂ ಸಂಶೋಧನೆಯನ್ನು ಅರ್ಧಕ್ಕೆ ನಿಲ್ಲಿಸಿ ಬ್ಯಾಂಕೊಂದರಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸಕ್ಕೆ ಸೇರುವ ಶಕುಂತಳ, ತಾಯಿಯನ್ನು ಕಳೆದುಕೊಂಡು ಅಪ್ಪನ ಮಾತನ್ನು ಕೇಳದೆ ಬದುಕಿನಲ್ಲಿ ನಿರ್ದಿಷ್ಟ ನೆಲೆ ಕಂಡುಕೊಳ್ಳದೆ ಇದ್ದ ಮೆರೆನಾ ನಮ್ಮ ನಿಮ್ಮ ನಡುವಿನ ಎತ್ತುಗೆ ಎಂದರೂ ತಪ್ಪಿಲ್ಲ. ಈ ಪಾತ್ರಗಳು ಇಂದಿನ ದಿನಮಾನಗಳಲ್ಲಿಯೂ ಹೆಚ್ಚಾಗಿ ನಡೆಯುತ್ತಿರುವ ಅಪಸವ್ಯಗಳ ಕುರಿತು ಮಾತನಾಡುತ್ತಾರೆ.

ಓದುಗರಿಗೆ ಸಾಧಾರಣ ಹಳ್ಳಿ ನಾಗನೂರಿನ ಪರಸರದೊಂದಿಗೆ ತರೆದುಕೊಳ್ಳುವ ಕಾದಂಬರಿ ‘ಆರೋಪ’ ವಿದ್ಯಾವಂತ ಯುವಕನ ಉದ್ಯೋಗ ಬೇಟೆಯ ಕುರಿತಾಗಿದೆ. ನಾಗೂರನ್ನು ಪ್ರವೇಶಿಸಿದ ಕೂಡಲೆ ಖಾಸಗಿ ಶಾಲಾ ಮುಖ್ಯಸ್ಥ ಶಾಮರಾಯರನ್ನು ಪರಿಚಯಮಾಡಿಕೊಂಡು ತಾತ್ಕಾಲಿಕ ನೆಲೆಯನ್ನು ಕಂಡುಕೊಳ್ಳುತ್ತಾನೆ. “ಫೋಸ್ಟಾಫೀಸಿನ ಪಕ್ಕದಲ್ಲಿ ಒಂದು ರೂಮಿದೆ ಅಲ್ಲಿ ಎಲ್ಲ ಅನುಕೂಲಗಳೂ ಇವೆ, ಊಟಕ್ಕೆ ಹೆಬ್ಬಾರರ ಹೋಟೇಲಿಗೆ ಹೇಳುತ್ತೇನೆ ಅವರಲ್ಲಿ ಕೀ ತೆಗೆದುಕೊಳ್ಳಿ” ಎಂದು ಒಂದೇ ಭೇಟಿಗೆ ಶಾಮರಾಯರು ಅರವಿಂದನಿಗೆ ಶಾಲೆಯಲ್ಲಿ ಕೆಲಸವನ್ನು ಉಳಿದುಕೊಳ್ಳಲು ವ್ಯವಸ್ಥೆಯನ್ನೂ ಮಾಡಿಬಿಡುತ್ತಾರೆ. ಇಲ್ಲಿ ಸಂಬಳ ಕೊಡುವ ಹಾಗು ತೆಗೆದುಕೊಳ್ಳುವ ಕಾದಂಬರಿ ನಾಯಕ ಅರವಿಂದನ ನಡುವೆ ಅದು ಸಂಭಾಷಣೆಯೋ? ಇಲ್ಲ ವ್ಯಾಪರವೋ? ಅನ್ನಿಸುತ್ತದೆ. ಸುಲಭಕ್ಕೆ ದುಡಿತ ಮಾಡಿಸಿಕೊಳ್ಳುವ ಮನಸ್ಥಿತಿ ‘ಆರೋಪ’ ಕಾದಂಬರಿಯಲ್ಲಿ ಶಾಮರಾಯರಿಗೆ ಇಲ್ಲದೆ ಇದ್ದರೂ ಪ್ರಸ್ತುತ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳವರ ಶಿಕ್ಷಕರ ಸೇವೆಯನ್ನು ಪಡೆದುಕೊಂಡು ಸರಿಯಾಗಿ ಸಂಬಳಕೊಡದ, ಅನಗತ್ಯ ಒತ್ತಡ ಹೇರುವ ಮನೋಭಾವನೆಯನ್ನು ಯೋಚನೆ ಮಾಡುವಂಥಾಗುತ್ತದೆ. ಈ ಕಾದಂಬರಿಯಲ್ಲಿ ಶಾಮರಾಯರು ಹಳ್ಳಿ ಮಕ್ಕಳಿಗೆ ಪೇಟೆಯಂತೆಯೇ ಉತ್ತಮ ಶಿಕ್ಷಣ ಕೊಡಿಸಬೇಕೆಂದಿರುವುದು ಅವರ ಉದಾರ ವ್ಯಕ್ತಿತ್ವವನ್ನು ಹೇಳುತ್ತದೆ. ಹಾಗೆ ಅದೇ ಕರಾವಳಿ ಬಾಗದಲ್ಲಿ ಶಿಕ್ಷಣಕ್ಕಾಗಿ ಶ್ರಮಿಸಿದ ಶಿವರಾಮಕಾರಂತರು ಹಾಗು ಅವರ ‘ಸ್ಮೃತಿ ಪಠಲದಿಂದ’ ಎಂಬ ಕೃತಿಗಳ ನೆನಪೂ ಇಲ್ಲಿ ಬಾರದಿರದು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಬಳ ಏಕರೂಪವಾಗಿರುವುದಿಲ್ಲ. ಅನುಭವಾಧಾರಿತ ಎನ್ನುವುದಕ್ಕಿಂತಲೂ, ಪರಿಚಯ, ಶಿಫಾರಸ್ಸುಗಳನ್ನು, ಜಾತಿ ವರ್ಗ ವ್ಯವಸ್ಥೆಗಳನ್ನೂ ಅನುಸರಿಸಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ‘ಆರೋಪ’ ಕಾದಂಬರಿಯಲ್ಲಿ ಬರು ಮೋನಾ ಮಿಸ್ತ್ರಿ ಎಂಬ ಇಂಗ್ಲಿಷ್ ಕಲಿಸುವ ಶಿಕ್ಷಕಿಗೆ ಇಲ್ಲಿ ಸಂಬಳ ಹೆಚ್ಚಿರುತ್ತದೆ. ಇದೂ ಅಕ್ಷರಶಃ ಖಾಸಗಿ ಸಂಸ್ಥೆಗಳಲ್ಲಿ ಆಗುತ್ತಿರುವ ವಿಷಯವ್ಯಭಿಚಾರ ಎಂದು ನೇರವಾಗಿ ಹೇಳಬೇಕೆನಿಸುತ್ತದೆ. ಕಲಿಸುವ ವಿಷಯಗಳ ಆಧಾರದ ಮೇಲೆ ಶಿಕ್ಷಕರನ್ನು ಸಂಬಳದಲ್ಲಿ ಅಳೆಯುವುದು ಕನಿಷ್ಟ ಮನಸ್ಥಿತಿ ಎನ್ನಬಹುದು. ಇದನ್ನು ಸಹಿಸದ ಆಕೆಯ ವಿರುದ್ಧ ವೆಂಕಟರಮಣ ಮೂರ್ತಿಗಳು ತಪ್ಪು ಅಭಿಪ್ರಾಯ ಬರುವಂತೆ ಮಾತನಾಡುವುದು “ಅತ್ತೆಯ ಸಿಟ್ಟು ಕೊತ್ತಿಯ ಮೇಲೆ” ಅನ್ನುವ ಗಾದೆಗೆ ಅನ್ವಯವಾಗುತ್ತದೆ. ಸಂಬಳ ವಿಚಾರದಲ್ಲಿ ಮೊನಾ ಮಿಸ್ತ್ರಿ ಅನುಕೂಲ ಪಡೆದರೂ ವ್ಯಕ್ತಿಗತವಾಗಿ ಒಳ್ಳೆಯ ಹಾಗು ವೃತ್ತಿನಿಷ್ಟ ಹೆಣ್ಣು ಮಗಳು ಎಂಬುದರಲ್ಲಿ ಎರಡು ಮಾತಿಲ್ಲ. ಹೊಸದಾಗಿ ಕೆಲಸಕ್ಕೆ ಸೇರಿದ ಅರವಿಂದನಿಗೆ ಸಹಾಯ ಮಾಡುವುದು, ಅಪಘಾತಕ್ಕೀಡಾದ ತಂದೆಯ ಸಾವಿನ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದ ತನ್ನ ವಿದ್ಯಾರ್ಥಿ ಶ್ರೀನಿಯನ್ನು ವೈಯುಕ್ತಿಕ ಆಸಕ್ತಿಯಿಂದ ಗಮನಿಸುವುದು ಶಿಕ್ಷಕರಿಗೆ ಇರಬೇಕಾದ ಬದ್ಧತೆಯನ್ನು ತೋರಿಸುತ್ತದೆ. ವಿದ್ಯಾರ್ಥಿಗಳ ಮನಸ್ಸಿನಾಳಕ್ಕಿಳಿಯುವ, ಅವರಿಗೆ ಸೂಕ್ತವಾಗಿ ಸ್ಪಂದಿಸುವ ಮೇಸ್ಟ್ರುಗಳನ್ನು ಪ್ರತಿನಿಧಿಸುತ್ತಾರೆ.

ಈ ಕಾದಂಬರಿಯಲ್ಲಿ ನೊಂದ ಪ್ರತಿಭಟನಾತ್ಮಕ ಧ್ವನಿಯಾಗಿ ಸಂಕಯ್ಯ ಬರುತ್ತಾನೆ. ಊಳಿಗದಿಂದ ಹೊರಬರಬೇಕೆಂದು ಹಂಬಲಿಸಿ ಲ್ಯಾಂಡ್ ಟ್ರಿಬ್ಯೂನಲ್‌ಗೆ ಅರ್ಜಿ ಹಾಕಿ ನಾಗೂರಿನ ಜಮೀನ್ದಾರನ ವಿರೋಧ ಕಟ್ಟಿಕೊಂಡು ಕರಿಗೌಡನ ದರ್ಪಕ್ಕೆ ಬಲಿಯಾಗುತ್ತಾನೆ. ಇವನ ಅಂತ್ಯ ಪ್ರಾಯೋಜಿತ ಕೊಲೆಯೇ ಆಗಿರುತ್ತದೆ ಆದರೆ ಊರವರು ಬಾಯಿಬಿಡಲು ಹೆದರುತ್ತಾರೆ. ಇಲ್ಲಿ ಮತ್ತೆ ಕಾರಂತರ ‘ಚೋಮನದುಡಿ’ ಕಾದಂಬರಿಯ ಕೆಲ ಸನ್ನಿವೇಶಗಳು ನೆನಪಿಗೆ ಬರುತ್ತವೆ.

ಕಾದಂಬರಿಯ ನಾಯಕ ಅರವಿಂದನಿಗೆ ಇಲ್ಲಿ ಮೋನಾ ಮಿಸ್ತ್ರಿ, ಕಮಲಾ, ಮರೀನಾ, ಕವಿತಾ, ಶಕುಂತಲಾ, ರಾಣಿ ಡಾ. ವೈಶಾಖಿ ಮೊದಲಾದ ಹೆಣ್ಣುಗಳ ಪರಿಚಯವಾಗುತ್ತದೆ. ಎಲ್ಲರೂ ಅರವಿಂದನ ಜೀವನದಲ್ಲಿ ಆಗುವ ಆಗುಹೋಗುಳಿಗೆ ಪೂರಕವಾಗಿ ಬಂದು ಹೋಗುವವರೆ. ಕಮಲ ಕಾದಂಬರಿಯ ಪ್ರಾರಂಭಕ್ಕೆ ಅರವಿಂದನಿಗೆ ತಿನ್ನಲು ಹುರಿದ ಗೇರುಬೀಜವನ್ನು ಕೊಡುವುದು, ಕಸಮುಸುರೆಗೆ ಯಾರು ಸಹಾಯ ಮಾಡುತ್ತಾರೆ ಎಂದು ಅವನಿಗೆ ಸಹಾಯ ಮಾಡಿದರೆ, ಕವಿತಾ ರಿಸರ್ಚ್ ಮಾಡುವ ಸಲುವಾಗಿ ಪ್ರೊಫೆಸರನ್ನು ಪರಿಚಯ ಮಾಡಿಕೊಡುವ ಮೂಲಕ ನೆರವಾಗುತ್ತಾಳೆ, ಶಾಕುಂತಲಾ ಬರೆದ ಪೇಪರುಗಳನ್ನು ತಿದ್ದುವಲ್ಲಿ, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಹೋಗುವ ವಿಚಾರಕ್ಕೆ ವೈಶಾಖಿ ಸಹಾಯಮಾಡುವುದು ಕಾದಂಬರಿಯ ನಿರಂತರತೆಯನ್ನು ಕಾಯುವಲ್ಲಿ ಸಹಕಾರಿಯಾಗಿದೆ ಎನ್ನಬಹುದು.

ಗೇರುಬೀಜ, ಚಹಾ ಇಲ್ಲಿ ಪ್ರಾಂತೀಯತೆಯನ್ನು ಬಿಂಬಿಸುತ್ತವೆ. ಶಿಕ್ಷಕನಾಗಿ ಅರವಿಂದ ವಿದ್ಯಾರ್ಥಿಗಳಲ್ಲಿ ಕಾಳಜಿಯುಳ್ಳವನಾಗಿಯೂ ಅಶಿಸ್ತನ್ನು ಸಹಿಸದೆ ಇರುವವನಾಗಿಯೂ ಇರುವ ಕಾರಣಕ್ಕೆ ಆ ಊರಿನ ಕರಿಗೌಡರ ಕೆಂಗಣ್ಣಿಗೆ ಗುರಿಯಾಗುತ್ತಾನೆ ಅವರ ಮಗ ನಾಗೇಶನನ್ನು ತರಗತಿಯಿಂದ ಹೊರಕಳುಹಿಸುತ್ತಾನೆ. ಅದೇ ಊರೆಲ್ಲಾ ದೊಡ್ಡ ಸುದ್ದಿಯಾಗುತ್ತದೆ ಇತರ ಶಿಕ್ಷಕರು ಆತನಿಗೆ ಶಿಕ್ಷೆಯನ್ನು ಕೊಡದೆ ಅಂಜಿಕೆಯಿಂದಿದ್ದರೂ ಆತನಿಗೆ ಶಿಕ್ಷೆ ದೊರೆಯಿತು ಎಂದಾಗ ಸಂಭ್ರಮಿಸುತ್ತಾರೆ. ಗೌಡರು ಉದ್ಧಟತನದ ನಾಗೇಶನಿಗೆ ಮನೆಯಲ್ಲಿಯೇ ಬಂದು ಪಾಠ ಹೇಳಿಕೊಡಬೇಕೆಂದಾಗ ಅರವಿಂದ ತಿರಸ್ಕರಿಸುವುದು ಸ್ವಾಭಿಮಾನಿ ಶಿಕ್ಷಕನ ಲಕ್ಷಣವಾಗಿದೆ. ಹಣದಿಂದ ಎಲ್ಲವನ್ನು ಸುಲಭಕ್ಕೆ ಧಕ್ಕಿಸಿಕೊಳ್ಳಬಹುದೆಂಬ ಗೌಡರ ಅಹಂಕಾರಕ್ಕೆ ಸೆಡ್ಡುಹೊಡೆಯುವಂಥದ್ದು ಅರವಿಂದ ಓರ್ವ ಶಿಕ್ಷಕನಾಗಿ ನಾಗೇಶನಿಂದ ಶಿಸ್ತನ್ನು ಬಯಸುವುದು ಸಹಜವಾಗಿ ಚಿತ್ರಿತವಾಗಿದೆ. ಅರವಿಂದನನ್ನು ಹಾಗೆ ಪರಿಚಯಮಾಡಿಕೊಂಡು ಕಾಡಿನೊಳಕ್ಕೆ ಕರೆದುಕೊಂಡು ಹೋಗಿ ಕರಿಗೌಡರು ತನ್ನ ಈಡಿನ ಜಾಣ್ಮೆಯನ್ನು ತೋರಿಸುವುದು ಅವನ ಅಹಂಕಾರವನ್ನು ತೋರಿಸುತ್ತದೆ. ಆ ಮೂಲಕ ನನ್ನ ಮಗನ ಸುದ್ದಿಗೆ ಬರಬಾರದೆಂಬ ಎಚ್ಚರಿಕೆಯ ಸಂದೇಶವನ್ನು ಕಾದಂಬರಿಯ ನಾಯಕ ಅರವಿಂದನಿಗೆ ಕರಿಗೌಡರು ಪರೋಕ್ಷವಾಗಿ ರವಾನಿಸುತ್ತಾರೆ.

ಕಡಿಮೆ ಸಂಬಳದಿಂದ ಬದುಕು ಕಟ್ಟಿಕೊಳ್ಳಲಾಗದ ಹಾಗಂತ ಬದ್ಧತೆ ಹಾಗು ವೃತ್ತಿ ನಿಷ್ಟತೆಯನ್ನು ಬಿಡಲಾಗದ ಸಾಮಾನ್ಯ ಶಿಕ್ಷಕ ವರ್ಗದ ಮಾನಸಿಕ ತೊಳಲಾಟವನ್ನು ತಿರುಮಲೇಶರು ಅನನ್ಯವಾಗಿ ಇಲ್ಲಿ ಚಿತ್ರಿಸಿದ್ದಾರೆ. ಕರಿಗೌಡರು ಕಾದಂಬರಿ ನಾಯಕನಿಗೆ ಕಾಡನ್ನು ತೋರಿಸಿ ಶಿಸ್ತಿನ ನೆಪಮಾಡಿಕೊಂಡು ನನ್ನ ಮಗನನ್ನು ಪದೇ ಪದೇ ಕಾಡಬೇಡ ಹಾಗೆ ಕಾಡಿದರೆ ಜಮೀನ್ದಾರನಾಗಿ ನಾನು ನಿನ್ನನ್ನು ಕಾಡಬೇಕಾಗುತ್ತದೆ ಎಂಬ ಖಡಕ್ ಎಚ್ಚರಿಕೆಯನ್ನು ಕೊಡುವುದು ಇಲ್ಲಿ ಖಂಡನೀಯ!

ಭಯಕ್ಕೆ ಬಂತೋ, ಕಾಡಿಲ್ಲಿ ತಂಡಿಯ ವಾತಾವರಣಕ್ಕೆ ಜ್ವರ ಬಂತೋ ಅಥವಾ ಆಯಾಸಕ್ಕೆ ಜ್ವರ ಬಂತೋ ಗೊತ್ತಿಲ್ಲ ಆದರೆ ಜ್ವರದಿಂದ ಅರವಿಂದ ಬಳಲುವಾಗ ಆತನ ಆರೈಕೆಗೆ ಬರುವುದು ಮೆಸ್ಕರೆನ್ನರು. ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾಗಿ ನಿವೃತ್ತರಾಗಿರುತ್ತಾರೆ. ಮೂವರು ವಿದ್ಯಾವಂತ ಮಕ್ಕಳನ್ನು ಪಡೆದಿದ್ದರೂ ಒಬ್ಬರಲ್ಲಿಯೂ ಸುಖ ಕಾಣದೆ ಹೆಂಡತಿಯನ್ನು ಕಳೆದುಕೊಂಡು ಒಂಟಿತನದ ಬದುಕನ್ನು ನಡೆಸುತ್ತಿರುತ್ತಾರೆ. ಮನುಷ್ಯನಿಗೆ ತನ್ನವರು ಎಂಬ ಅಕ್ಕರೆಯ ಮುಂದೆ ಮಿಕ್ಕೆಲ್ಲವೂ ನಗಣ್ಯ ಎಂಬುದನ್ನು ಕಾದಂಬರಿಕಾರರು ಓದುಗರಿಗೆ ಮೆಸ್ಕರೆನ್ನರ ಎತ್ತುಗೆಯ ಮೂಲಕ ನಯವಾಗಿಯೇ ಹೇಳಿದ್ದಾರೆ.

ಯಾರ ಹಂಗಿಗೂ ಒಳಗಾಗಬಾರದೆನ್ನುವ ಅರವಿಂದ ಜ್ವರ ಬಂದಾಗ ಅಸಹಾಯಕನಾಗಿ ಮೆಸ್ಕರೆನ್ನಾರ ದಾಕ್ಷಿಣ್ಯಕ್ಕೆ ಒಳಗಾಗಬೇಕಾಗುತ್ತದೆ ಅರ್ತಾಥ್ ಅವರ ಆರೈಕೆಗೆ ಒಳಗಾಗಬೇಕಾಗುತ್ತದೆ. ಒಂಟಿಯಾಗಿದ್ದ ಅವರಿಗೆ ಅವರ ಮಾತನ್ನು ಕೇಳಲು ಸಮಾನ ಮನಸ್ಸಿನ ಒಬ್ಬ ವ್ಯಕ್ತಿಯ ಅವಶ್ಯಕತೆಯಿರುತ್ತದೆ. ಕುಡಿತದ ಗೀಳು ಇರಿಸಿಕೊಂಡಿದ್ದ ಅವರು (ಪುಟ. ಸಂ 29 ) “ಲೆಟ್ ಮಿ ಕರಪ್ಟ್ ಯು ಯಂಗ್ ಮ್ಯಾನ್” ಎಂದೇ ಹೇಳುವುದು ಇದನ್ನು ಸಾಕ್ಷೀಕರಿಸುತ್ತದೆ. (ಪುಟ. ಸಂ. 32) “ನ್ಯಾಯಾಧೀಶ ಕಣ್ಣಿದ್ದೂ ಕುರುಡ ವೈಯುಕ್ತಿಕ ಸಂದೇಹಗಳಿಗೆ ನ್ಯಾಯಾಲಯದಲ್ಲಿ ಸ್ಥಾನವಿಲ್ಲ. ಅದೊಂದು ಪಾತ್ರವನ್ನು ನಿರ್ವಹಿಸಿದಂತೆ” ಎನ್ನುವುದು ನ್ಯಾಯಾಧೀಶರ ಮಿತಿಗಳನ್ನೂ ತಿರುಮಲೇಶರು ಇಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಒಂಟಿ ತನಕ್ಕೆ ಒಗ್ಗಿಕೊಳ್ಳಬೇಕಾದರೆ ಅವರಿಗೆ ಮದ್ಯದ ಸಹಾಯಬೇಕಾಗುತ್ತದೆ. ಹಾಗಾಗಿ ಮಗಳೆದುರು ಅರವಿಂದನನ್ನು ಕುಡಿತದ ಚಟಕ್ಕೆ ಎಳೆದಿದ್ದೇನೆ ಎಂದು “ಐ ಹ್ಯಾವ್ ಕರೆಪ್ಟೆಡ್ ಹಿಮ್- ಟು ದ ಡ್ರಗ್ಸ್!” ಎನ್ನುತ್ತಾರೆ. (ಪುಟ. ಸಂ. 42) “ಎಲ್ಲ ಸಮಸ್ಯೆಗಳಿಗೂ ಬೌದ್ಧಿಕ ಉತ್ತರಗಳನ್ನು ಹುಡುಕುವುದು ತಪ್ಪಲ್ಲವೆ? ಅದೊಂದೇ ಅಲ್ಲ, ಅಂಥ ವಿವೇಚನೆ ತುಂಬಾ ಬೋರು ಕೂಡ, ನಿಮಗನಿಸುತ್ತದೆ?” ಎಂಬ ಕಾದಂಬರಿಕಾರರ ಮಾತುಗಳು ಅಕ್ಷರಶಃ ಸತ್ಯ ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವುದು.

ತಾಯಿಲ್ಲದ ಮಗಳನ್ನು ಬೈದರೂ ತಪ್ಪು! ಏನೂ ಕೇಳದೆ ಹಾಗೆ ಇದ್ದರೂ ತಪ್ಪು! ಎಂಬ ಸಂದಿಗ್ಧಕ್ಕೆ ನ್ಯಾಯಾಧೀಶ ಮೆಸ್ಕರೆನ್ನಾ ಸಿಲುಕುತ್ತಾರೆ.. ಮರೀನಾ ಸ್ವತಂತ್ರ ಪ್ರವೃತ್ತಿಯವಳಾಗಿರುತ್ತಾಳೆ. ಡಾಕ್ಟರಾಗಬೇಕೆಂಬ ಮನೆಯವರ ಆಸೆಗೆ ವಿರುದ್ಧವಾಗಿ ಚಿತ್ರ ಕಲೆಯಲ್ಲಿ ಆಸಕ್ತಿ ಉಳ್ಳವಳಾಗಿ ಬಿ. ಎ ಸೇರುತ್ತಾಳೆ. ಕರಾರುವಕ್ಕು ನಿರ್ಧಾರಕ್ಕೆ ಬರಲಾಗದ ಆದರೆ ಮಹತ್ವಾಕಾಂಕ್ಷೆಯುಳ್ಳ ಹುಡುಗಿ ಮೆರೆನಾ ಚಿತ್ರಕಾರಳಾಗಿ, ಜಾಹಿರಾತುಗಾರಳಾಗಿ, ಶಿಕ್ಷಕಿಯಾಗಿ ಹೋರಾಟಗಾರಳಾಗಿ ಹೀಗೆ ಬೇರೆ ಬೇರೆ ಅಯಾಮಗಳಲ್ಲಿ ನೆಲೆ ಕಂಡುಕೊಳ್ಳಲು ಹೆಣಗುತ್ತಾಳೆ. ಬರೊಡಾ, ಮುಂಬೈ, ಬೆಂಗಳೂರು ಮುಂತಾದ ಸ್ಥಳಗಳಿಂದ ತಂದೆಗೆ ಪತ್ರ ಬರೆಯುತ್ತಾಳೆ. ಕಡೆಗೊಂದು ದಿನ ನಾಗೂರಿಗೆ ಸೌಖ್ಯವಿಲ್ಲದೆ ಸಿನೋಫಿಲೀಯಾ ಎನ್ನುವ ಕಾಯಿಲೆಯನ್ನಿರಿಸಿಕೊಂಡು. ಆಕೆಗೆ ಚಿಕಿತ್ಸೆಯನ್ನು ನೀಡಿದ ವೈದ್ಯರು ಹವಾಮಾನ ಬದಲಿಸಲು ಹೇಳಿರುತ್ತಾರೆ ಅಂದರೆ ಆಧುನಿಕ ಜೀವನಶೈಲಿ, ಒತ್ತಡದ ಬದುಕು ಹೇಗೆ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಇಲ್ಲಿ ನೋಡಬಹುದು.

ಹಣದಿಂದ ಎಲ್ಲವನ್ನು ಸುಲಭಕ್ಕೆ ಧಕ್ಕಿಸಿಕೊಳ್ಳಬಹುದೆಂಬ ಗೌಡರ ಅಹಂಕಾರಕ್ಕೆ ಸೆಡ್ಡುಹೊಡೆಯುವಂಥದ್ದು ಅರವಿಂದ ಓರ್ವ ಶಿಕ್ಷಕನಾಗಿ ನಾಗೇಶನಿಂದ ಶಿಸ್ತನ್ನು ಬಯಸುವುದು ಸಹಜವಾಗಿ ಚಿತ್ರಿತವಾಗಿದೆ. ಅರವಿಂದನನ್ನು ಹಾಗೆ ಪರಿಚಯಮಾಡಿಕೊಂಡು ಕಾಡಿನೊಳಕ್ಕೆ ಕರೆದುಕೊಂಡು ಹೋಗಿ ಕರಿಗೌಡರು ತನ್ನ ಈಡಿನ ಜಾಣ್ಮೆಯನ್ನು ತೋರಿಸುವುದು ಅವನ ಅಹಂಕಾರವನ್ನು ತೋರಿಸುತ್ತದೆ. ಆ ಮೂಲಕ ನನ್ನ ಮಗನ ಸುದ್ದಿಗೆ ಬರಬಾರದೆಂಬ ಎಚ್ಚರಿಕೆಯ ಸಂದೇಶವನ್ನು ಕಾದಂಬರಿಯ ನಾಯಕ ಅರವಿಂದನಿಗೆ ಕರಿಗೌಡರು ಪರೋಕ್ಷವಾಗಿ ರವಾನಿಸುತ್ತಾರೆ.

ತಂದೆಯ ಹೆಚ್ಚು ಪ್ರಶ್ನೆಗಳು ಅವಳಿಗೆ ಹುಚ್ಚು ಪ್ರಶ್ನೆಗಳಾಗಿ ಕಾಡುತ್ತವೆ. “ಓ ಡ್ಯಾಡಿ! ಯೂ ಆರ್ ಬಿಕಮಿಂಗ್ ರಿಯಲಿ ಡಿಫಿಕಲ್ಟ್” ಎನ್ನುವುದು ಅರವಿಂದನಲ್ಲಿ ಮಾತನಾಡುವಾಗ ಸಿಗರೇಟ್ ಇದೆಯಾ? ಈಗ ಈ ಸಿಮೋಫಿನಿಲಿಯಾ ಡ್ಯಾಮಿಟ್” ಎನ್ನುವುದು ಆಕೆಯ ಜೀವನ ಶೈಲಿಯನ್ನು ತೋರಿಸುತ್ತದೆ. ಯಾರಿಗೂ ಹೆದರದೆ ಯಾವ ಹಿರಿಯರೆದುರೂ ಕೂಡ ಔಪಾಚಾರಿಕತೆಯನ್ನು ಅನುಸರಿಸದ ಮಿತಿಯನ್ನೂ ಆಕೆ ಧಾಟಿದ್ದಳೆನ್ನುವುದು ಅರ್ಥವಾಗುತ್ತದೆ. ನಂತರ ಚಿತ್ರಕಲಾವಿದನಿಗೆ ವಿವಿಧ ಭಂಗಿಗಳನ್ನು ನೀಡುವಾಗ ಮೆಸ್ಕರೆನ್ನರು ನೋಡುತ್ತಾರೆ. ಆ ಸನ್ನಿವೇಶದ ಮೇಲಂತೂ ತಂದೆ ಮಗಳು ಇಬ್ಬರೂ ಪರಸ್ಪರ ಅಸಹನಾಭಾವವನ್ನು ತಳೆಯುತ್ತಾರೆ. ‘ಆರೋಪ’ ಕಾದಂಬರಿಯಲ್ಲಿ “ವರ್ಕ್ ಸ್ಯಾಟಿಸ್ಫ್ಯಾಕ್ಷನ್” ಎಂಬ ಬಹುಮುಖ್ಯ ಮಾತು ಬರುತ್ತದೆ. ಈ ಮಾತು ಮೆರೆನಾ ವಿಚಾರದಲ್ಲಿ ಅಲ್ಲಿಂದಿಲ್ಲಿಗೆ ಬದಲಾವಣೆ ಹೊಂದಿ ಅಪೂರ್ಣ ಅನ್ನಿಸಿದರೆ ಅರವಿಂದನ ವಿಚಾರದಲ್ಲಿ ಪೂರ್ಣಪ್ರಮಾಣದ್ದಾಗಿರುತ್ತದೆ.

ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯಕರ್ತನೊಬ್ಬ ನಾಗೂರಿಗೆ ಬರುವುದು. ರಾಜಶೇಖರನೆಂಬ ವ್ಯಕ್ತಿ ಹಿರಿಯರಿಗೆ ಶಿಕ್ಷಣ ಕೊಡುವುದಾಗಿ ಹೇಳಿಕೊಂಡು ಅರವಿಂದನ ಶಾಲೆ ಪ್ರವೇಶ ಮಾಡಿ ಮೆರೆನಾ ಜೊತೆ ತನ್ನ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭ ಮಾಡಿದರೂ ಅರವಿಂದನಿಗೆ ಸರಕಾರದ ವಿರುದ್ಧ ಹೋರಾಟವೋ, ಸರಕಾರದ ತೀರ್ಮಾನಗಳಿಗೆ ವಿರುದ್ಧವಾಗಿ ಈತ ಚಟುವಟಿಕೆಗಳನ್ನು ನಡೆಸುತ್ತಿರಬಹುದೆಂಬ ಆಲೋಚನೆ ಎಳ್ಳಷ್ಟೂ ಖಂಡಿತಾ ಬರುವುದಿಲ್ಲ. (ಪುಟ ಸಂ 49) “ಇದರ ಸಕ್ಸೆಸ್ ಅಥವಾ ಫೈಲಿಯರ್ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆರಂಭಿಸೋದು ಮುಖ್ಯ” ಎಂಬ ರಾಜಶೇಖರನ ಮಾತುಗಳು ಉತ್ತಮ ಕೆಲಸಗಳಿಗೆ ಮೀನಮೇಷ ಎಣಿಸಬಾರದು ಎಂಬ ಸತ್ಯ ಹೇಳುತ್ತದೆ ಆದರೆ ಯಾವ ಕೆಲಸ ಎನ್ನುವುದರ ಮೇಲೆ ಅದರ ಸಾರ್ಥಕತೆ ಅಡಗಿರುತ್ತದೆ.

ರಾಜಶೇಖರ ಕಮ್ಯೂನಿಸ್ಟ್ ಏಜೆಂಟ್ ಎಂದು ಅರವಿಂದನಿಗೆ ತಿಳಿಯುವ ಮೊದಲೆ ಅರವಿಂದ ತನ್ನ ತಾಯಿಯ ಸಾವಿನ ಕಾರಣಕ್ಕೆ ಊರಿಗೆ ಹೋಗಬೇಕಾಗುತ್ತದೆ. ಮತ್ತೆ ನಾಗೂರಿಗೆ ಬಂದಾಗ ರಾಜಶೇಖರ ಮತ್ತು ಮೆರೆನಾ ಇಬ್ಬರೂ ಇರುವುದಿಲ್ಲ. ಮೆಸ್ಕೆರೆನ್ನಾ “ಯೂ ಮಸ್ಟ ಬಿ ಮಿಸ್ಸ್ಇಂಗ್ ಹರ್” ಎಂದು ಹೇಳಿ ಮತ್ತೆ ಮೆರೆನಾ ಮರೆಯಾದ ಸಂಗತಿಯನ್ನು ಹೇಳುತ್ತಾನೆ. “ಕೋಣೆ ತುಂಬಾ ಧೂಳು, ಕಸ, ಅವನ ಜಗತ್ತು ಮತ್ತೆ ಒಮ್ಮೆಲೆ ಸಂಕುಚಿತಗೊಂಡಿತ್ತು. ರಾಜಶೇಖರ, ಮರೀನಾ ಎಲ್ಲ ಕನಸು ಹರಿದಂತೆ ಹರಿದಿದ್ದರು. ಈ ಕಸ, ತೊಳೆಯದೆ ಇಟ್ಟಿದ್ದ ಪಾತ್ರೆಗಳು…………… ಆದರೂ ಅದೆಂಥ ಕನಸು! ಅದರ ಗಾಯಗಳನ್ನು ಬಿಟ್ಟೇಹೋಗಿತ್ತು”. ಎಂದು ಕಾದಂಬರಿಯಲ್ಲಿ ಬರುವ ಮಾತುಗಳು ಅರವಿಂದನಿಗಾದ ಅಸ್ಪಷ್ಟತೆಯನ್ನು ತೋರಿಸುತ್ತವೆ. ‘ಆರೋಪ’ ಕಾದಂಬರಿಯಲ್ಲಿ, ಉಪಕಾರಿ ಎಂಬುದಕ್ಕೆ ಶಾಮರಾಯ ಅನ್ವಯವಾದರೆ, ಅಪಕಾರಿ ಎಂಬುದಕ್ಕೆ ಕರಿಗೌಡ ಆರೋಪಿತನಾಗಿದ್ದಾನೆ. ಮೈಸೂರಿನ ಗೆಳೆಯ ಜೋಷಿ ಯ ಕಾರಣದಿಂದ ಹೈದರಾಬಾದಿನಲ್ಲಿ ಪಿಹೆಚ್ ಡಿಗೆ ಸೀಟು ಕೋರಿ ಬರೆದ ಪತ್ರ ಅರವಿಂದನಿಗೆ ಬಂದಿತ್ತು. ಅದನ್ನು ಕೊಟ್ಟ ಪೋಸ್ಟಾಫೀಸಿನ ಪೈಗಳನ್ನು ಕಂಡಾಗ ಮೊದಲಿಗೆ ಗಾಬರಿಯಾದರೂ ನಂತರ ಸಂಶೋಧನೆಗೆ ಅವಕಾಶ ದೊರೆತಿರುವುದು ಕಾದಂಬರಿಯ ನಾಯಕನಿಗೆ ಸಂತೋಷದ ಸಂಗತಿಯೇ ಆಗಿತ್ತು. ಶಾಮರಾಯರ ಸಾವು, ತಾಯಿಯ ಸಾವು, ರಾಜಶೇಖರ ಮತ್ತು ಮೆರೆನಾರ ನಾಪತ್ತೆಯಿಂದ ಕಂಗೆಟ್ಟಿದ್ದ ಅರವಿಂದನಿಗೆ ಹೊಸ ವಾತಾವರಣ ಬೇಕೆಂಬ ಆಸೆ ಸುಪ್ತ ಮನಸ್ಸಿನಲ್ಲಿ ಇದ್ದುದಕ್ಕೂ, ಅವಕಾಶ ದೊರೆತಿದ್ದಕ್ಕೂ ಪೂರಕವಾಗುತ್ತದೆ.. ಇರುವ ಕಡಿಮೆ ಸಂಬಳದಲ್ಲಿಯೇ ಕೂಡಿಟ್ಟ ಹಣವನ್ನು ಒಟ್ಟು ಮಾಡಿಕೊಂಡು ಕಮಲಳಿಗೆ ಇನ್ನೆಂದೂ ಈ ಊರಿನೆಡೆಗೆ ತಲೆ ಹಾಕುವುದಿಲ್ಲ ಎಂದು ಹೈದರಬಾದಿಗೆ ಹೊರಟೇ ಬಿಡುತ್ತಾನೆ.

ಸಂದರ್ಶನಕ್ಕೆ ಇನ್ನೆರಡು ದಿನ ಇರುವಾಗ ಹೈದರಾಬಾದಿಗೆ ಹೋಗಬೇಕೆಂದು ರೈಲ್ವೇ ನಿಲ್ದಾಣ ತಲುಪಿದವನಿಗೆ ಎದುರಾದದ್ದೇ ಲಂಚಾವತಾರ! ಅದೇ ಸೀಟಿಗೋಸ್ಕರ ಲಂಚ. ಇದು ಅರವಿಂದನಿಗೆ ಹೊಸ ಪರಿಸರದಲ್ಲೂ ಒಂದಲ್ಲಾ ಒಂದು ಬಗೆಯಲ್ಲಿ ಇದೇ ತೆರನಾದ ಹೊಂದಿಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ ಎಂಬುದಕ್ಕೆ ದಿಕ್ಸೂಚಿಯಂತೆ ಇರುತ್ತದೆ. ಕಾಣದ ಹೈದರಾಬಾದಿನ ಸಂಶೋಧನಾ ಕ್ಷೇತ್ರವನ್ನು ತುಳಿದ ಕಾದಂಬರಿ ನಾಯಕನಿಗೆ “ಕ್ಯಾನ್ ಐ ಹೆಲ್ಪ್ ಯೂ” ಎಂದು ಎದುರಾದವಳೆ ಕವಿತಾ. ತಕ್ಕ ಮಟ್ಟಿಗೆ ಸಿರಿವಂತರ ಮನೆ ಹೆಣ್ಣು.

ಈ ಸಂದರ್ಭದಲ್ಲಿ ಅರವಿಂದನಿಗೆ ಮಿತ್ರ ಜೋಷಿ ಹೇಳಿದ ಮಾತುಗಳು ನೆನಪಿಗೆ ಬರುತ್ತವೆ ಅದೇ “ಸ್ವಕಾರ್ಯಾರ್ಥ ಸಿಕ್ಕವರನ್ನು ಉಪಯೊಗಿಸಿಕೊಳ್ಳುವ ತಂತ್ರ”. ಹೇಗೋ ಬದುಕು ಕಟ್ಟಿಕೊಳ್ಳಬೇಕೆಂದವರಿಗೆ ಯಾರಾದರೇನು ಎರವಾಗಲು ಎನ್ನುವ ತತ್ವ. (ಪುಟ. ಸಂ. 71) ಕವಿತಾಳನ್ನು ಯೋಚಿಸಿಕೊಂಡು “ಆಕಸ್ಮಿಕವೆಂಬುದು ಅವಕಾಶಕ್ಕೆ ಇನ್ನೊಂದು ಹೆಸರು. ಅವಕಾಶವನ್ನು ಯಾರೂ ತಂದುಕೊಡುವುದಿಲ್ಲ ನಾವೇ ಹುಡುಕಿಕೊಳ್ಳಬೇಕು ಎಂಬುದು. ಖಾಡಿಲ್ಕರ್ ಎಂಬ ಪ್ರೊಫೆಸರ್ ಅವರ ಪರಿಚಯವಾಗುತ್ತದೆ. ಅವರು ಅರವಿಂದನನ್ನು ಅವರ ಮನೆಯ ಟ್ಯೂಷನ್ ಹೇಳಲು ಬಳಸಿಕೊಳ್ಳುತ್ತಾರೆ. ಅರವಿಂದನಿಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲಿ ಕಾಣಬರುವ ಸತ್ಯ ಎಂದರೆ ಪ್ರೈವೇಟ್ ಕೆಲಸ ಯಾವುದೇ ಆಗಿರಲಿ ಅದರಲ್ಲಿ ಪ್ರೈವೆಸಿ ಇರುವುದಿಲ್ಲ ಎಂಬುದು. ಕವಿತಾ ತನ್ನದೇ ಮಾತೃಭಾಷೆ ಮಾತನಾಡುವ ಖಾಡಿಲ್ಕರ್ ಅವರನ್ನು ಪರಿಚಯ ಮಾಡಿಸುವಲ್ಲಿಯೂ ಸ್ವಜನಶೀಲತೆಯ ಕಮಟು ಇದ್ದೇ ಇದೆ. ಖಾಡಿಲ್ಕರ್ ಸಮರ್ಥ ಪ್ರಾಧ್ಯಾಪಕರಾಗಿದ್ದರೂ ಮನೆ ತುಂಬಾ ಹೆಣ್ಣು ಮಕ್ಕಳನ್ನು ಇರಿಸಿಕೊಂಡಿದ್ದೇನೆ ಎಂಬ ಅವ್ಯಕ್ತ ನೋವಿನಲ್ಲಿರುತ್ತಾರೆ. ನಿವೃತ್ತಿ ನಂತರ ಎಕ್ಸೆಟೆಂಷನ್ ನಿರೀಕ್ಷೆಯಲ್ಲಿದ್ದರೂ ಅದು ಈಡೇರದಾದಾಗ ಸಹಜವಾಗಿ ಕುಗ್ಗಿ ಹೋಗುತ್ತಾರೆ. ಸ್ವಜೀನಶೀಲತೆಯಲ್ಲೂ ಅರವಿಂದನಂಥ ಸೃಜನಶೀಲ ವ್ಯಕ್ತಿಗೆ ಸಹಾಯ ಮಾಡಿದ್ದನ್ನು ಮರೆಯುವಂತಿಲ್ಲ. ಇಂದಿನ ಪೀಳಿಗೆಯನ್ನು ಬೆಳೆಸುವ ಜವಾಬ್ದಾರಿ ಹೊತ್ತ ಬದ್ಧತೆಯನ್ನು ಆ ಪ್ರೊಫೇಸರ್‌ನಲ್ಲಿ ಕಾಣಬಹುದು.

ಕವಿತಾ ಸರಿದಂತೆ ಅರವಿಂದನಿಗೆ ಸಹಾಯ ಮಾಡುವುದು ವೈಶಾಖಿ. ಆಕೆಯೇ ಒಂದು ಖಾಸಗಿ ಹಾಸ್ಟೆಲ್ ಒಂದನ್ನು ಅರವಿಂದನಿಗೆ ಪರಿಚಯ ಮಾಡಿಸುವುದು. ಖಾಸಗಿ ಹಾಸ್ಟೆಲಿನಲ್ಲಿ ಅರವಿಂದ ತನಗಿಂತಲೂ ಭಿನ್ನಸ್ವಭಾವದ ಕೇಶವುಲು ಎಂಬ ವ್ಯಕ್ತಿಯ ಜೊತೆ ಕೊಠಡಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ಹಾಸ್ಟೆಲಿನ ಪರಿಸರ ಚೆನ್ನಾಗಿದ್ದರೂ ಕೇಶವುಲು ಇದ್ದಂತಹ ಪರಿಸರತ ಅವನ ಹಾವಭಾವ ಅರವಿಂದನನಿಗೆ ತದ್ವಿರುದ್ಧವಾಗಿರುತ್ತದೆ. ಇಲ್ಲಿಯೂ ನಮಗೆ ಪರಸ್ಪರ ವಿರೋಧಾಭಾಸಗಳ ನಡುವೆ ಜೀವನ ಸಾಗಿಸುವುದೇ ಬದುಕು ಎಂಬುದನ್ನು ಕಾದಂಬರಿಕಾರರು ಅರ್ಥಮಾಡಿಸಲು ಪ್ರಯತ್ನ ಮಾಡಿದ್ದಾರೆ. ಸಹವಾಸದೋಷ ಕೆಲವೊಮ್ಮೆ ದೋಷಾರಾಹಿತ್ಯತೆಯನ್ನು ಪಡೆದುಕೊಳ್ಳುತ್ತದೆ ಎಂಬುದಕ್ಕೆ ಕೇಶವುಲು ಮತ್ತೆ ಉದಾಹರಣೆಯಾಗುತ್ತಾನೆ. ಅರವಿಂದ ತುಂಬಾ ತಿಳಿದವನು ತುಂಬಾ ಬುದ್ಧಿವಂತ ಎಂದು ತಿಳಿದ ಮೇಲೆ ಅವನಿಗೆ ತನ್ನಸಹ ಕೊಠಡಿವಾಸಿಯ ಮೇಲೆ ಗೌರವ ಹೆಚ್ಚುತ್ತದೆ.

ಕಾದಂಬರಿಯ ಪುಟ ಸಂ 96ರಲ್ಲಿ ಬಂದಿರುವ “ಜೋಷಿಗೆ ಬರೇ ವಿನಯದ, ಶಿಷ್ಟಾಚಾರದ ನಯ, ವಂಚನೆ ಮಾತ್ರ ಗೊತ್ತು. ನನಗೆ ಹಟವಿದೆ ಬುದ್ಧಿಯಿದೆ, ಎಲ್ಲಕ್ಕಿಂತ ಹೆಚ್ಚಾಗಿ ಹುಚ್ಚು ಸಾಹಸವಿದೆ” ಎಂಬ ಮಾತು ಜೀವನದಲ್ಲಿ ಸಾಹಸದದಂಡಯಾತ್ರೆ ಮಾಡುವವನಿಗೆ ಇರಬೇಕಾದ ಅರ್ಹತೆ ಎಂದು ಬಲವಾಗಿ ಅನ್ನಿಸುತ್ತದೆ. ಆರೋಪ ಕಾದಂಬರಿ ವ್ಯಕ್ತಿ ಪರಿಚಯವನ್ನು ವ್ಯಕ್ತಿಗಳೊಂದಿಗೆ ಮಾಡಿಸುತ್ತದೆ. ಇಲ್ಲಿ ಕಳಿಂಗ ಯುದ್ಧ ಅದರ ನಂತರ ಆಗುವ ಬದಲಾವಣೆ, ಹಿಟ್ಲರ್ ಯೆಹೂದಿಗಳನ್ನು ಸದೆ ಬಡಿದದ್ದು ಸರಿಯೇ? ತಪ್ಪೇ? ವೈರಾಗ್ಯ ಎಂದರೆ ಕ್ರೌರ್ಯದ ನಂತರ ಬರುವುದೇ ಹಾಗಿದ್ದರೆ ವೈರಾಗಿಗಳೆಲ್ಲಾ ಕ್ರೌರ್ಯ ಮಾಡಿದವರೆ ಎಂಬ ತಪ್ಪು ಒಪ್ಪುಗಳ ಜಿಜ್ಞಾಸೆ ಬಂದೇ ಬರುತ್ತದೆ.

ಕಾದಂಬರಿಯ ಆರಂಭದಲ್ಲಿ ಬರುವ ಅರವಿಂದನ ಗೆಳೆಯ ಜೋಷಿಯಂತೆಯೇ ಇನ್ನೊಬ್ಬ ರಾಜಾರಾಮ ಅಷ್ಟೇನು ಪ್ರತಿಭಾವಂತ ಅಲ್ಲದೇ ಇದ್ದರೂ ವಿಲಾಸೀ ಜೀವನವನ್ನು ನಡೆಸುತ್ತಿದ್ದವನು ಅಪ್ಪನ ಹಣದಲ್ಲಿ ಮೆರೆಯುತ್ತಿದ್ದವನು ಮುಂದಿನ ವ್ಯಾಸಂಗಕ್ಕೆ ಅಮೆರಿಕಾ ಹೋಗುವುದು ಅರವಿಂದನಲ್ಲಿ ಮತ್ತೆ ಗೊಂದಲಗಳನ್ನ ಸೃಷ್ಟಿ ಮಾಡಿಸುತ್ತದೆ. ನಂತರ ಅರವಿಂದನಿಗೆ ಹೈದರಾಬಾದಿನಲ್ಲಿ ಮೊದಲು ಸಹಾಯ ಮಾಡಿದ ಕವಿತಾಳ ನಡವಳಿಕೆಯಲ್ಲಿ ಬದಲಾವಣೆ ಕಾಣುವುದು.

ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಎಂಬ ಇವನ ಸುಳ್ಳನ್ನು ಆಕೆ ಪತ್ತೆ ಹಚ್ಚುವುದು ಇವೆಲ್ಲವೂ ಬದ್ಧತೆ ಎಂಬುದರ ನೈತಿಕ ಸತ್ಯಕ್ಕೆ ಸವಾಲು ಹಾಕುವಂತಿರುತ್ತದೆ. ಮತ್ತೆ ಮೆರಿನಾಳ ಪರಿಚಯವಾಗುವುದು ಅರವಿಂದನಿಗೆ ಮನಸ್ಸಿಗೆ ಖುಷಿಕೊಟ್ಟರೂ ಗೊಂದಲದ ತೆರೆಗಳು ಇದ್ದೇ ಇರುತ್ತವೆ. ನಾಗಾರ್ಜುನ ಸಾಗರಕ್ಕೆ ಪ್ರವಾಸ ಮಾಡುವ ಸಂದರ್ಭದಲ್ಲಿ ಭಾರತೀಯ ಇತಿಹಾಸ ಓದಲು ಬಂದ ಪ್ರವಾಸಿ “ನಾನೊಬ್ಬ ಬೌದ್ಧ ಭಿಕ್ಕುವಾಗುತ್ತೇನೆ” ಎಂದು ಹೇಳಿದ್ದು ಇತರರು “ನಿನ್ ಹೆಂಡತಿ ಮಕ್ಕಳನ್ನು ಏನು ಮಾಡುವೆ” ಎಂದು ಕೇಳಿದಾಗ ಜೊತೆಯಲ್ಲಿ ಕರೆದುಕೊಂಡು ಬರುತ್ತೇನೆ” ಎಂದು ಹೇಳಿದ್ದು ಅವನ ಅಪರಿಪೂರ್ಣ ತಿಳಿವಳಿಕೆಯನ್ನು ಹೇಳುತ್ತದೆ. ಜೀವನದಲ್ಲಿ ಸರಿಯಾಗಿ ತಿಳಿಯದೆ ಅರೆವಾಸಿ ತಿಳಿದು ಮಾತನಾಡಿದರೆ, ವ್ಯವಹರಿಸಿದರೆ ಎಂಥಾ ಆಭಾಸಗಳಾಗುತ್ತವೆ ಎಂಬುದನ್ನು ಕಾದಂಬರಿಕಾರರು ಬಹಳ ಸೂಕ್ಷ್ಮವಾಗಿ ಇಲ್ಲಿ ಹೇಳಿದ್ದಾರೆ. ಪುಟ ಸಂ. 110 ರಲ್ಲಿ ಬರುವ “ಈ ಮೂವತ್ತು ಮಂದಿ ಈಗ ಮೂವತ್ತು ರೀತಿಗಳಲ್ಲಿ ಚಿಂತಿಸುತ್ತಿರಬೇಕಲ್ಲವೇ !” ಎಂಬ ಮಾತಂತೂ ಮನುಷ್ಯನ ಭಾವಲಹರಿಯನ್ನು ಎಂದಿಗೂ ಕ್ರಮಿಸಲು ಸಾಧ್ಯವಿಲ್ಲ ಎಂಬ ನಗ್ನ ಸತ್ಯವನ್ನು ತಿರುಮಲೇಶರು ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.

ಮರಿನಾಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಅರವಿಂದನಿಗೆ ಕೇಂಬರಿಜ್ ಕನಸು ಡಾ. ವೈಶಾಖಿಯಿಂದ ಖಾತ್ರಿಯಾಗುವುದನ್ನು ಕಾದಂಬರಿಕಾರರು ನಿದ್ರೆಯಿಂದ ದಡ್ಡನೆ ಎಚ್ಚರಿಸಿದ ಕನಸಿಗೆ ಹೋಲಿಸಿದ್ದಾರೆ. ಸಾಧಾರಣ ಬಡ ಕುಟುಂಬದ ವಿದ್ಯಾವಂತರ ಪಾಲಿಗೆ ದೊಡ್ಡ ಅವಕಾಶಗಳು ದೊರೆತಾಗ ಈ ರೀತಿ ಆಗಿಯೇ ಆಗುತ್ತದೆ. ಅವೆಲ್ಲಾ ನಮಗೆ ಸಾಧ್ಯವೇ ಎಂದು ಅವಕ್ಕಾಗಿ ನೋಡುವ ಹಾಗಾಗುತ್ತದೆ. ಅದರ ನಡುವೆ ಕಾದಂಬರಿ ನಾಯಕನಿಗೆ ರಾಜಶೇಖರ ಹಾಗು ಮೆರೆನಾಳ ಹೋರಾಟದ ಬಗ್ಗೆ ತಿಳಿಯುತ್ತದೆ. ರಾಜಶೇಖರ ಮೆರೀನಾಳನ್ನು ರೈಲ್ವೇ ಸ್ಟೇಶನ್ನಿನಲ್ಲಿ ಪರಿಚಯಸ್ಥರ ಸಹಾಯದಿಂದ ಟಿಕೇಟ್ ಕಾಯ್ದಿರಿಸಿ ಬೆಂಗಳೂರಿಗೆ ಕಳುಹಿಸುವ ರೀತಿ ಅವನು ಅನುಭವಿಸುವ ಕಳವಳ, ತಪ್ಪು ಮಾಡಿದವರನ್ನು ಒಂದಲ್ಲ ರೀತಿ ಹೇಗೆ ಕಾಡುತ್ತದೆ ಎಂಬುದನ್ನು ಸಮದರ್ಶಿಸಿದ್ದಾರೆ.

ಇತ್ತ ಪೋಲಿಸರು ತನಿಖೆಯ ನೆಪದಲ್ಲಿ ಅರವಿಂದನ ಕೊಠಡಿಯನ್ನು ಜಾಲಾಡಿರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ದಿಂಬನ್ನು ಚಾಕುವಿನಿಂದ ಹರಿದು. ನಾಯಕ ಅರವಿಂದನಿಗೆ ದೊಡ್ಡ ಪಾರ್ಟಿಯೊದರಲ್ಲಿ ಭಾಗವಹಿಸಿದರೂ ಸಂತೋಷದಿಂದ ಇರಲಾಗದ ಪರಿಸ್ಥಿತಿ ಇರುತ್ತದೆ. ಅವನನ್ನು ಪಾರ್ಟಿಗೆ ಆಹ್ವಾನಿಸುವ ರೀತಿ ಪುಟ ಸಂ 152 ರಲ್ಲಿ “ತೆರೆ ಮುಗಿದು ಸಮುದ್ರ ಸ್ನಾನ ಮಾಡುತ್ತಾರೆಯೇ?” ಎಂಬ ಮಾತು ಚಿಂತನಕ್ಕೆ ಹಚ್ಚುವಂಥದ್ದು. ಪೈಪೋಟಿ ಕೊಡುವವರ ನಡುವೆ ಇರಬೇಕು ಹೋರಾಟಗಾರರ ನಡುವಿನ ಹೋರಾಟ ನಿಜವಾದದ್ದು ಎಂಬ ಸತ್ಯವನ್ನು ಅರುಹುತ್ತದೆ. ಕಡೆಗೆ ಪೋಲೀಸರ ತನಿಖೆ”, “ಒಬ್ಬವ್ಯಕ್ತಿಗೆ ಗೊತ್ತಿಲ್ಲದ್ದು ಸರಕಾರಕ್ಕೆ ಹೆಚ್ಚಿಗೆ ಗೊತ್ತಿರುತ್ತದೆ. ಸರಕಾರದ ಅರ್ಥವೇ ಅದು”. ಎಂಬ ತಿರುಮಲೇಶರ ಮಾತನ್ನು ಇಲ್ಲಿ ಒಪ್ಪಬೇಕಾದ್ದೆ.

“ಅವನ ಮೇಲಿನ ಆರೋಪವನ್ನು ರುಜುಪಡಿಸಲು ನೀವು ಉಪಯೋಗಿಸಬಹುದಾದಂಥ ಯಾವ ವಿವರಣೆಯನ್ನು ನಾನು ನೀಡಲಾರೆ” ಎಂದು ಅರವಿಂದ ಹೇಳುವುದು ಸರಿಯಾಗಿದೆ. ಕಾರಣ ರಾಜಶೇಖರನ ಹೋರಾಟದ ಬಗ್ಗೆ ಅವನಿಗೆ ಅಷ್ಟೇನು ಮಾಹಿತಿ ಸರಿಯಾಗಿ ಇರುವುದಿಲ್ಲ.. ತನಿಖೆಯನ್ನು ಕೆಟ್ಟ ಕನಸೆಂದು ಭಾವಿಸಿ ಅದರಿಂದ ಹೇಗೋ ಹೊರಬರಬೇಕೆನ್ನುವ ಕನಸು ಪ್ರತಿಯೊಬ್ಬ ಅಮಾಯಕನಲ್ಲಿಯೂ ಇರುವಂಥದ್ದೆ. ಅದನ್ನು ಇಲ್ಲಿ ಅನನ್ಯವಾಗಿ ತಿರುಮಲೇಶರು ಹೇಳಿದ್ದಾರೆ ಕೂಡ.

ಕಾದಂಬರಿಯ ಮಧ್ಯಭಾಗದಲ್ಲಿ ಶಾಮರಾಯರ ನಿಧನಾನಂತರ ಹೆಬ್ಬಾರರನ್ನು ಅನುಮಾನದ ದೃಷ್ಟಿಯಿಂದಲೇ ನೋಡುವ ಪೋಲೀಸರ ಅನುಮಾನದಿಂದ ಕೂಡಿದ ತನಿಖೆ ಎಂಥವರನ್ನೂ ಬೇಸರಕ್ಕೆ, ರೇಜಿಗೆ ಸಿಲುಕಿಸುವಂತೆ ಇರುತ್ತದೆ. ಅದರೆ ಕಾದಂಬರಿಯ ಅಂತ್ಯಕ್ಕೆ ಅರವಿಂದ ಎದುರಿಸುವ ತನಿಖೆ ಅಷ್ಟೇನು ಅವನ ಮನಸ್ಸನ್ನು ಘಾಸಿಗೊಳಿಸದೆ ಇರುವುದು ಇಲ್ಲಿ ಪ್ರಶ್ನಾರ್ಥಕವಾಗಿ ಉಳಿಯುತ್ತದೆ.

ಕಾದಂಬರಿಯ ನಿಜ ಸತ್ವ ಅಡಗಿರುವುದು ಕಾದಂಬರಿಯ ಮೂವತ್ತಮೂರನೆ ಅಧ್ಯಾಯದಲ್ಲಿಯೇ. ಕಾದಂಬರಿಯ ಆರಂಭಕ್ಕೆ ಬಂದ ಕಮಲ ಕಡೆಗೂ ಬರುತ್ತಾಳೆ. ಬೀಡಿ ಹೊಸೆದೂ ಹೊಸೆದೂ ಕುಟುಂಬ ನಿಭಾಯಿಸಿದಷ್ಟೂ ತನ್ನ ಖುಷಿಗಳನ್ನು ಹೊಸಕಿ ಹಾಕುತ್ತಿರುತ್ತಾಳೆ. ಕೈಯಲ್ಲಿ ಕೆಲವೇ ರುಪಾಯಿಗಳನ್ನು ಹಿಡಿದು ಪೇಟೆಗೆ ಹೋಗುವ ಆಕೆ ರಿಸ್ಟ್ ವಾಚನ್ನು ನೋಡುತ್ತಾಳೆ. ತೆಗೆದುಕೊಳ್ಳುವುದಿಲ್ಲ. ಬಣ್ಣ ಬಣ್ಣದ ಸೀರೆಯನ್ನು ನೋಡುತ್ತಾಳೆ ಅದಕ್ಕೆ ಹೊಂದಿಕೆಯಾಗುವ ರವಿಕೆಯನ್ನೂ ನೋಡುತ್ತಾಳೆ. ಇನ್ನೊಮ್ಮೆ ಇನ್ನೊಮ್ಮೆ ಎಂದು ತನ್ನ ಬಯಕೆಗಳನ್ನು ಮುಂದೆ ಹಾಕುತ್ತಲೇ ಅಂಗಡಿಯವನು ಬೇರೆ ಗಿರಾಕಿಗಳ ಕಡೆ ಗಮನ ಕೊಟ್ಟಾಗ ತಾನು ಸದ್ದಿಲ್ಲದೆ ಅಂಗಡಿಯಿಂದ ಹೊರಬರುತ್ತಾಳೆ. ತಂದೆ ಸತ್ತು ಬಹಳ ದಿನಗಳಾಗಿರುತ್ತದೆ. ತಮ್ಮ ಶ್ರೀನಿ ಮನೆಬಿಟ್ಟು ಹೋಗಿರುತ್ತಾನೆ ಇನ್ನು ಪಡ್ಡೆ ಹುಡುಗರಿಗೆ ಇವಳೊಂದು ಚೇಷ್ಟೆಯ ವಸ್ತುವಾಗಿರುತ್ತಾಳೆ. ಹರೆಯದ ಬಯಕೆ, ಮನೆಯ ತೊಂದರೆ, ತಮ್ಮನ ಮೇಲಿನ ಪ್ರೀತಿ, ಪಡ್ಡೆ ಹುಡುಗರ ತೊಂದರೆ ಕಮಲಳಿಗೆ ತಲ್ಲಣಗಳಾಗಿರುತ್ತವೆ. ಅವುಗಳ ನಡುವೆ ದಿನಕಳೆಯುತ್ತಿದ್ದಂಥ ಕಮಲಳಿಗೆ ಎಂದಿಗೂ ನಾಗೂರಿಗೆ ಬರುವುದಿಲ್ಲ ಎಂದು ಹೇಳಿ ಹೋಗಿದ್ದ ಅನಪೇಕ್ಷಿತ ಅರವಿಂದನ ಧ್ವನಿ ಆಶ್ಚರ್ಯ ತರಿಸುತ್ತದೆ.

ಹೆಚ್ಚಿನ ಸಂದರ್ಭದಲ್ಲಿ ಬೀಡಿ ಕಾರ್ಮಿಕರು ಯಾರಿಗೆ ಆಪತ್ತು ಬಂದರೂ ನನಗೆ ಬಂದ ಹಾಗೆಯೇ ಎನ್ನುವಂತೆ ಇಲ್ಲಿರುತ್ತಾರೆ. ಕಾರ್ಮಿಕರ ಹೋರಾಟಗಳು ಕಾರ್ಮಿಕರಿಂದಲೇ ಸತ್ವ ಕಳೆದುಕೊಳ್ಳುತ್ತವೆ ಮಾಲೀಕರು ಕಾರ್ಮಿಕರ ನಡುವೆಯೇ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿ ಹೋರಾಟವನ್ನು ನೆಲಸಮ ಮಾಡಿಬಿಡುತ್ತಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆರಯಾಗಿದೆ. ಹೋರಾಟದಿಂದ ಗಳಿಸುವುದಕ್ಕಿಂತ ಕಡಿಮೆಯೋ ಹೆಚ್ಚೋ ಅವಕಾಶ ಸಿಕ್ಕಾಗ ದುಡಿದು ಬಿಡೋಣ ಎಂಬ ಮಾತು ಅಸಹಾಯಕ ಕಾರ್ಮಿಕರಿಗೆ ಅನ್ವಯಾಗುತ್ತದೆ ಅದರಲ್ಲಿ ಬೀಡಿ ಕಟ್ಟುವ ಕೆಲಸ ಮಾಡಿಕೊಂಡಿದ್ದ ಕಮಲ ಕೂಡ ಹೊರತಲ್ಲ. ನಾಗೂರಿನಿಂದ ಆರಂಭವಾಗುವ ಕಾದಂಬರಿ ನಾಗೂರಿನಲ್ಲಿಯೇ ಅಂತ್ಯಗೊಳ್ಳುತ್ತದೆ. ಪುಟ ಸಂ 75ರಲ್ಲಿ ಬರುವ ಡೌನ್ ವಿದ್ ಇಂಪೀರಿಯಲಿಸಮ್ ಎಂಬ ಬಸ್ ಇಲ್ಲಿ ಪ್ರತಿಮೆಯಾಗಿ ಬಂದಿದೆ. ಅನೇಕ ಹೆಣ್ಣುಗಳ ಸಂಸರ್ಗಕ್ಕೆ ಅರವಿಂದ ಬಿದ್ದರೂ ಪ್ರಾಮಾಣಿಕವಾಗಿದ್ದ ಮುಗ್ಧ, ಶ್ರಮಜೀವಿ ಕಮಲಳನ್ನು ಸಮೀಪಿಸುತ್ತಾನೆ. ಇದು ಅರವಿಂದ ನಾಯಕನಾಗಿ ನೈಜಬದುಕು ಸ್ಥಿರವಾಗಿಸಿಕೊಂಡ ಬಗೆ, ನಾಟಕೀಯತೆ ನೆಪ ಮಾತ್ರ; ಅದರ ಕಾಲು ಯಾವಾಗಲೂ ಕುಂಟು ಎಂಬುದನ್ನು ಗಟ್ಟಿಯಾಗಿ ಧ್ವನಿಸುತ್ತಾನೆ.