ಅವಳು ತನ್ನ ಈ ಪರಿಸ್ಥಿತಿಗೆ ಸರಕಾರದ ಯಾವುದೋ ಒಂದು ನೀತಿಯೇ ಕಾರಣ ಅಂತ ಹಳಿಯುತ್ತಿದ್ದಳು. ಪೂರ್ತಿ ಏಳು ಎಕರೆಯಲ್ಲಿ ಶುಂಠಿ ಹಾಕು ಅಂತ ಸರಕಾರ ಅವಳಿಗೆ ಹೇಳಿತ್ತೆ? ಅದೇ ಒಂದು ವೇಳೆ ಒಳ್ಳೆ ಬೆಲೆ ಬಂದು ಒಂದಿಷ್ಟು ಲಕ್ಷ ಲಾಭವಾಗಿದ್ದರೆ ಸರಕಾರದ ಕಾರಣದಿಂದ ತನಗೆ ಲಾಭ ಆಯ್ತು ಅಂತ ಅನ್ನುತ್ತಿದ್ದಳೆ? ಊಹೂಂ.. ಆಗ ಮಾತ್ರ ನಾನು ಕಷ್ಟ ಪಟ್ಟಿದ್ದಕ್ಕೆ ಹೀಗೆ ಒಳ್ಳೆಯದಾಯ್ತು ಅನ್ನುತ್ತಿದ್ದಳು. ಅವಳಿಗೂ ಹಾಗೆಯೇ ಹೇಳಿದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಮರುದಿನ ನನ್ನ ಹೊಲಕ್ಕೆ ಸುನಿಲ ಅವರನ್ನು ಕರೆದುಕೊಂಡು ಹೋದೆ. ಎಷ್ಟು ಚೊಲೋ ಐತಿ ಸರ ಜಮೀನು. “ಇಷ್ಟೊತ್ತಿಗೆ ಅಡಿಕೆ ಹಾಕಿ ಬಿಟ್ಟಿದ್ರ ಮಸ್ತ್ ಇನ್ಕಮ್ ಬರತಿತ್ತು “ಅಂದ್ರು. ಅಡಿಕೆ ನನಗೆ ಬಾಯಲ್ಲಿ ಹಾಕೋದು ಇಷ್ಟವೆ ಹೊರತು ಹೊಲದಲ್ಲಿ ಹಾಕಬೇಕು ಎಂಬುದು ನನ್ನ ತಲೆಯಲ್ಲಿ ಇರಲೇ ಇಲ್ಲವಲ್ಲ! ಆದರೂ ಅವರ ಜೊತೆಗೆ ಅದರ ಕುರಿತು ಸಮಜಾಯಿಷಿ ಕೊಡುತ್ತಾ ಸಮಯ ಕಳೆಯುವುದು ನನಗೆ ಇಷ್ಟವಿರಲಿಲ್ಲ. ನಕ್ಕು ಸುಮ್ಮನಾದೆ. ಅವರ ಜೊತೆಗೆ ಹೊಲವೆಲ್ಲ ಸುತ್ತಾಡಿದೆವು. ಅಲ್ಲಲ್ಲಿ ಇದ್ದ ಕೆಲವೇ ಕೆಲವು ಅಳಿದುಳಿದ ಮರಗಳನ್ನು, ಗೊಬ್ಬರ ಗಿಡಗಳನ್ನು ತೋರಿಸಿದೆ. ಸಧ್ಯಕ್ಕೆ ನನ್ನ ಸಾಧನೆ ಭತ್ತ ಬೆಳೆದಿದ್ದನ್ನು ಬಿಟ್ಟರೆ ಇವೆ ಒಂದಿಷ್ಟು ಗಿಡಗಳನ್ನು ಉಳಿಸಿದ್ದು. ಅದರಲ್ಲಿ ನನಗೇನೂ ಪಶ್ಚಾತಾಪ ಇರಲಿಲ್ಲ. ಉಳಿದವರಂತೆ ದುಡ್ಡು ಹಾಕಿ ದುಡ್ಡು ತೆಗೆಯುವ ಅಥವಾ ಕಳೆಯುವ ಆಸೆ ಇರಲಿಲ್ಲ! ತುಂಬಾ ಸಮಯ ತೆಗೆದುಕೊಂಡು ನನಗೆ ಬೇಕಾದ ಹಾಗೆ ಅಲ್ಲೊಂದು ಸ್ವರ್ಗವನ್ನು ಸೃಷ್ಟಿಸುವ ವಿಚಾರದಲ್ಲಿ ನಾನಿದ್ದೆ.
ಅಷ್ಟೊತ್ತಿಗೆ ಒಂದು ಕರೆ ಬಂತು. ಅದು ವರ್ಷಳದು (ಹೆಸರು ಕಾಲ್ಪನಿಕ!). ಅವಳು ಕೂಡ ನನ್ನಂತೆಯೇ ಬೇರೆ ಊರಿನಿಂದ ಬಂದು ಕೃಷಿ ಮಾಡುತ್ತಿದ್ದಳು. ಅವಳಿಗೂ ತನ್ನ ನಿವೃತ್ತ ಜೀವನವನ್ನು ಖುಷಿಯಾಗಿ ತೋಟದಲ್ಲಿ ಕಳೆಯಬೇಕು ಎಂಬ ದೊಡ್ಡ ಹುಚ್ಚು. ವಯಸ್ಸಿನಲ್ಲಿ ನನಗಿಂತ ತುಸು ದೊಡ್ಡವಳು. ಅವಳು ನನಗೆ ಬೇರೆ ಒಬ್ಬ ಸ್ನೇಹಿತರ ಕಡೆಯಿಂದ ಪರಿಚಯ ಆಗಿದ್ದಳು. ಹಾಗೆ ಪರಿಚಯವಾದ ಮೇಲೆ ಫೋನಿನಲ್ಲಿ ಮಾತಾಡುವಾಗ ಅವಳ ಕೃಷಿ ಭೂಮಿ ನನ್ನ ಭೂಮಿಯ ಹತ್ತಿರವೇ ಇರುವ ಸಂಗತಿ ಗೊತ್ತಾಗಿತ್ತು. ಒಮ್ಮೆ ಊರಿಗೆ ಬಂದಾಗ ಭೆಟ್ಟಿಯಾಗೋಣ ಅಂತ ಕೂಡ ಹೇಳಿದ್ದೆ. ಅವಳು ನಮ್ಮ ಹುಬ್ಬಳ್ಳಿ-ಧಾರವಾಡದ ಕಡೆಯವಳೇ ಆಗಿದ್ದರಿಂದ ಬಹು ಬೇಗನೆ ಒಂದು ಸಲುಗೆ ಏರ್ಪಟ್ಟಿತ್ತು.
“ಎಲ್ಲಿದ್ದೀಯೋ ಕುರ್ತಕೋಟಿ?” ಅಂದಳು. ಅಲ್ಲಿಯವರೆಗೆ, ಅಲ್ಲಿರುವ ಎಷ್ಟೋ ಜನರು ಹೆಗಡೆರೆ, ಭಟ್ಟರೆ ಅಂತ ನನ್ನನ್ನು ಸಂಬೋಧಿಸುತ್ತಿದ್ದರು. ಸಧ್ಯ ಇವಳಾದರೂ ನನ್ನ ಮೂಲ ಅಡ್ಡಹೆಸರಿನಿಂದ ಕರೆಯುವಳಲ್ಲ ಅಂತ ನನಗೆ ಖುಷಿಯಾಗಿತ್ತು.
“ಹೇಳು ವರ್ಷಕ್ಕಾ, ನನ್ನ ಹೊಲದಾಗ ಇದ್ದೀನಿ” ಅಂದೆ.
“ಹೌದನೋ.. ನನ್ನ ಹೊಲದಾಗ ಶುಂಠಿ ತಗಸಾಕತ್ತೇನೋ ಯಪ್ಪಾ. ಎಷ್ಟು ಅಗದರೂ ಏನೂ ಸಿಗವಲ್ದು. Rate ಬ್ಯಾರೆ ಕಡಿಮಿ ಅದ. ಕೈಗೆ ಏನೂ ದಕ್ಕು ಹಂಗ ಕಾಣಂಗಿಲ್ಲ!”
ಅವಳದು ಏಳು ಏಕರೆ ಜಾಗ. ಹದಿನೈದು ಲಕ್ಷ ಖರ್ಚು ಮಾಡಿ ಶುಂಠಿ ಬಿತ್ತಿದ್ದಳು. ಈಗ ಅದನ್ನು ಕುಯಿಲು ಮಾಡುವ ಸಮಯ ಬಂದಿತ್ತು. ಆದರೆ ಅವಳ ದುರಾದೃಷ್ಟಕ್ಕೆ ಅದೇ ವರ್ಷ ಶುಂಠಿಯ ಬೆಲೆ ಪಾತಾಳಕ್ಕೆ ಇಳಿದಿತ್ತು. 3 ಲಕ್ಷವಾದರೂ ದಕ್ಕುತ್ತದೋ ಇಲ್ಲವೋ ಎಂಬ ಪರಿಸ್ಥಿತಿ. ಅಷ್ಟು ಬಂದರೂ ಆಳುಗಳಿಗೆ, ಸಾಗಣಿಕೆಗೆನೇ ಖರ್ಚಾಗುತ್ತಿತ್ತು.
“ಅಲ್ಲೇ ಬರತೀನಿ ತಡಿ, ನಿನ್ನ ಹೊಲಾನೂ ನೋಡಿದಂಗ ಆಗತದ“ ಅಂತ ಸುನಿಲ ಅವರನ್ನೂ ಕರೆದುಕೊಂಡು ಅವಳ ಹೊಲಕ್ಕೆ ಹೋದೆ. ಅವರನ್ನೂ ಪರಿಚಯ ಮಾಡಿಸಿದೆ. ಆ ಹೊಲ ತುಂಬಾ ಫಲವತ್ತಾಗಿತ್ತು. ಯಾಕೆಂದರೆ ಅದಕ್ಕೂ ಮೊದಲು ಅಲ್ಲಿ ಸಿಕ್ಕಾಪಟ್ಟೆ ಗಿಡ ಮರಗಳು ಇದ್ದವು. ಅದೊಂದು ತರಹದ ಕಾಡಿನ ಮಣ್ಣು. ಆದರೂ ಯಾಕೋ ಶುಂಠಿ ಕೈ ಕೊಟ್ಟಿತ್ತು. ಬೆಲೆ ಕೂಡ ಇರಲಿಲ್ಲ. ಆಗಿನ ದರ ಕ್ವಿಂಟಾಲ್ಗೆ 1500 ಇತ್ತು ಅಂತ ನೆನಪು. ನಾನು ಬೆಳೆದ ಬತ್ತದ ಬೆಲೆಯೇ ಅದಕ್ಕಿಂತ ಹೆಚ್ಚು ಇತ್ತು! ಅವಳು ತನ್ನ ಈ ಪರಿಸ್ಥಿತಿಗೆ ಸರಕಾರದ ಯಾವುದೋ ಒಂದು ನೀತಿಯೇ ಕಾರಣ ಅಂತ ಹಳಿಯುತ್ತಿದ್ದಳು. ಪೂರ್ತಿ ಏಳು ಎಕರೆಯಲ್ಲಿ ಶುಂಠಿ ಹಾಕು ಅಂತ ಸರಕಾರ ಅವಳಿಗೆ ಹೇಳಿತ್ತೆ? ಅದೇ ಒಂದು ವೇಳೆ ಒಳ್ಳೆ ಬೆಲೆ ಬಂದು ಒಂದಿಷ್ಟು ಲಕ್ಷ ಲಾಭವಾಗಿದ್ದರೆ ಸರಕಾರದ ಕಾರಣದಿಂದ ತನಗೆ ಲಾಭ ಆಯ್ತು ಅಂತ ಅನ್ನುತ್ತಿದ್ದಳೆ? ಊಹೂಂ.. ಆಗ ಮಾತ್ರ ನಾನು ಕಷ್ಟ ಪಟ್ಟಿದ್ದಕ್ಕೆ ಹೀಗೆ ಒಳ್ಳೆಯದಾಯ್ತು ಅನ್ನುತ್ತಿದ್ದಳು. ಅವಳಿಗೂ ಹಾಗೆಯೇ ಹೇಳಿದೆ. ಬೇರೆ ಯಾರದೋ ಮಾತನ್ನು ಕೇಳಿದರೂ ಕೂಡ ನಮ್ಮ ಹೊಲದಲ್ಲಿ ಬೆಳೆ ಏನು ಬೆಳೆಯಬೇಕು ಅಂತ ನಿರ್ಧರಿಸುವುದು ನಾವೇ ಅಲ್ಲವೇ? ಅಲ್ಲಿ ಯಾವುದೇ ಸಮಸ್ಯೆಗಳು ಆದರೂ ಅದಕ್ಕೆ ನಾವೇ ಜವಾಬ್ದಾರಿ. ಒಂದೇ ಬೆಳೆಯ ಮೇಲೆ ಅವಲಂಬಿವಾಗಿ ಸಿಕ್ಕಾಪಟ್ಟೆ ದುಡ್ಡು ಸುರಿದು ಮಾಡುವ ಕೃಷಿ ಅಥವಾ ಯಾವುದೇ ವ್ಯವಹಾರ ಒಂದು ರೀತಿಯಲ್ಲಿ ಜೂಜಿಗೆ ಸಮಾನ ಅಲ್ಲವೇ?|
ಕೆಲಸಗಾರರು ಅಲ್ಲಲ್ಲಿ ಶುಂಠಿ ಅಗಿದು ಚೀಲಕ್ಕೆ ತುಂಬುವ ಕೆಲಸ ಮಾಡುತ್ತಿದ್ದರು. ನಾವು ಮೂವರು ಸೇರಿ ನಾವು ಎದುರಿಸಿದ ಸಮಸ್ಯೆಗಳು, ನಮ್ಮ ಹುಚ್ಚುಗಳು, ಭ್ರಮೆಗಳು ಇವೆಲ್ಲದರ ಬಗ್ಗೆ ಒಂದಿಷ್ಟು ಚರ್ಚಿಸಿದೆವು. ನಾವೇ ಇನ್ನೂ ಸರಿ ಇಲ್ಲ ಅಂತ ಅರಿವಿದ್ದರೂ ಕೂಡ ಅವರಿವರಿಗೆ ಒಂದಿಷ್ಟು ಬೈದುಕೊಂಡು ಸಮಾಧಾನ ಪಟ್ಟುಕೊಂಡೆವು! ಕಷ್ಟ ಸುಖ ಹಂಚಿಕೊಳ್ಳಲು ಅಲ್ಲೊಂದು ಸಮಾನ ಮನಸ್ಕರ ಒಂದು ಸಂಘ ಸೃಷ್ಟಿಯಾಗಿತ್ತು.
ಶುಂಠಿ ಹೆಚ್ಚು ಕಡಿಮೆ ಒಂಬತ್ತು ತಿಂಗಳ ಬೆಳೆ. ಅದು ಭೂಮಿಯ ಕೆಳಗೆ ಬೆಳೆಯುವುದರಿಂದ ಅದನ್ನು ಬೆಳೆಯಲು ಸರಿಯಾದ ವ್ಯವಸ್ಥೆ ಮಾಡಬೇಕಾಗುತ್ತದೆ. ಅದಕ್ಕಾಗಿ ಏರು ಮಡಿಗಳನ್ನು (bed) ಮಾಡುತ್ತಾರೆ. ತುಂತುರು ನೀರಾವರಿ ವ್ಯವಸ್ಥೆ ಮಾಡಬೇಕಾಗುತ್ತದೆ. ಇದು ಪೊದೆಯಾಗಿ ಬೆಳೆಯುವಂತಹ ಸಸ್ಯ. ಅರಿಷಿಣದ ತರಹ ಇದಕ್ಕೂ ಕೊಡ ಹೆಚ್ಚಿನ ಬೆಳಕು ಬೇಕಾಗೊಲ್ಲ. ಹೀಗಾಗಿ ಯಾವುದೇ ಗಿಡದ ನೆರಳಿನಲ್ಲಿ ಕೂಡ ಇದನ್ನು ಬೆಳೆಯಬಹುದು. ಆದರೆ ಇದಕ್ಕೆ ಶಿಲೀಂದ್ರದ ಕಾಟ ತುಂಬಾ ಜಾಸ್ತಿ. ಇದಕ್ಕೆಲ್ಲ ಕಾರಣ ಏಕ ಬೆಳೆ ಪದ್ಧತಿ ಹಾಗೂ ಅತಿಯಾದ ರಾಸಾಯನಿಕಗಳ ಬಳಕೆ. ಎಷ್ಟೋ ಜನ ಆ ರೋಗವನ್ನು ನಿಯಂತ್ರಿಸಲು ಸಾಧ್ಯವಾಗದೆ ಕೈ ಸುಟ್ಟುಕೊಂಡಿದ್ದಾರೆ. ನಿಯಂತ್ರಿಸಬೇಕು ಎಂಬ ಹಟಕ್ಕೆ ಬಿದ್ದು ಏನೇನೋ ರಾಸಾಯನಿಕಗಳನ್ನು ಬಳಸುತ್ತಾರೆ, DDT ಕೂಡ! ಹೀಗೆ ಬಳಸಿದ ರಾಸಾಯನಿಕ ನಮ್ಮ ಹೊಟ್ಟೆ ಸೇರುವುದಂತೂ ಖಚಿತ. ಅದರ ಜೊತೆಗೆ ಭೂಮಿಯನ್ನೂ ಕೂಡ ಬರಡು ಮಾಡಿ ಹಾಕುತ್ತದೆ.
ಪರ್ಯಾಯವಾಗಿ ಶುಂಠಿಯನ್ನು ತೆಂಗಿನ ನಾರು ಹಾಗೂ ಚಿಪ್ಪನ್ನು ಬಳಸಿ ತಯಾರಿಸಿದ cocopeat ನಲ್ಲಿ ಮಣ್ಣು ರಹಿತವಾಗಿ ಬೆಳೆಯಲು ಸಾಧ್ಯ. ಹಾಗೆ ಬೆಳೆದಾಗ ಆಗುವ ಲಾಭಗಳು
1. ಶಿಲೀಂದ್ರದ (fungus) ನಿಯಂತ್ರಣವೂ ಸುಲಭ.
2. ಭೂಮಿಗೂ ಕೂಡ ಹಾನಿಯಾಗದು.
3. ಕಳೆಯ ಸಮಸ್ಯೆ ಇರುವುದಿಲ್ಲ.
4. ಕುಯಿಲು ಮಾಡಲು ಸಾಕಷ್ಟು ಪರಿಶ್ರಮ ಬೇಕಿಲ್ಲ.
ಆದರೆ ಈ ಪ್ರಯೋಗಗಳನ್ನು ಮಾಡಲು ಹಳ್ಳಿಯಲ್ಲಿ ಬಹಳಷ್ಟು ಜನ ತಯಾರಿಲ್ಲವಲ್ಲ! ಬೇರೆಯವರನ್ನು ಬದಲಿಸುವ ಮೊದಲು ನಾವೇ ಆ ಬದಲಾವಣೆ ಆಗಬೇಕು ಅಂತ ನಾವು ಬೆಂಗಳೂರಿನಲ್ಲಿಯೇ ಶುಂಠಿ ಬೆಳೆಯಲು ಶುರು ಮಾಡಿದ್ದೆವು. Grow bags ಗಳಲ್ಲಿ, ನೀರಿನಲ್ಲಿ ಕರಗುವ ಲವಣಾಂಶಗಳನ್ನು ಬಳಸಿ, ಬೆಳೆದು ಒಳ್ಳೆಯ ಇಳುವರಿ ಕೂಡ ಪಡೆದೆವು. ಅದನ್ನು ಇನ್ನೂ ದೊಡ್ಡದಾಗಿ ಬೆಳೆಯುವ ಯೋಚನೆ ಕೂಡ ಇದೆ.
ಶುಂಠಿಗೆ ಬೆಲೆ ಚೆನ್ನಾಗಿಯೇ ಇರುತ್ತದೆ. ಅದನ್ನು ಬೆಳೆದು ತುಂಬಾ ದುಡ್ಡು ಮಾಡಿದವರೂ ಇದ್ದಾರೆ. ಅಂಥವರನ್ನು ನೋಡಿ ಅಥವಾ ಅವರಿಂದ ಸಲಹೆ ಪಡೆದು ಇದನ್ನು ದೊಡ್ಡದಾಗಿ ಮಾಡಿ ಕೈ ಸುಟ್ಟುಕೊಂಡವರೂ ಇದ್ದಾರೆ. ಆದರೆ ಅದಕ್ಕೆ ಕಾರಣ ಕೈ ಸುಟ್ಟುಕೊಂಡವರೆ! ಇಂತಹ ಬೆಳೆಗಳ ಅಥವಾ ಯಾವುದೇ ಬೆಳೆಗಳ ಬೆಲೆಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಸರ್ಕಾರಗಳಿಗೂ ಅದು ಅಷ್ಟು ಸುಲಭದ ಸಂಗತಿಯಲ್ಲ. ಯಾವುದೇ ಒಂದು ಬೆಳೆಯನ್ನು ಬೇರೆ ದೇಶದಿಂದ ಆಮದು ಮಾಡುವುದರಿಂದಲೂ ಕೂಡ ನಮ್ಮ ಬೆಳೆಗಾರರಿಗೆ ಸಮಸ್ಯೆ ಆಗಬಹುದು. ಹಾಗಂತ ಧಿಡೀರ್ ಅಂತ ಆಮದು ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಸ್ವಲ್ಪ ಮಟ್ಟಿಗೆ ಆಮದನ್ನು ನಿಯಂತ್ರಿಸಬಹುದು ಅಷ್ಟೇ. ನಾವು ನಮ್ಮ ದೇಶದಿಂದ ಕೂಡ ಬೇರೆ ದೇಶಗಳಿಗೆ ರಫ್ತು ಮಾಡುತ್ತಿರುತ್ತೇವೆ. ಅಲ್ಲೊಂದು ರಾಜತಾಂತ್ರಿಕ ಸಂಬಂಧ ಇರುತ್ತದೆ. ಹೀಗಾಗಿ ಅದೊಂದು ಕಷ್ಟದ ಕೆಲಸ. ರೈತರಾದವರು ನಮ್ಮ ಕೈಯಲ್ಲಿ ನಿಯಂತ್ರಿಸಲು ಏನು ಸಾಧ್ಯವೋ ಅದನ್ನು ಮಾಡಬೇಕು. ಅದೇ ಕಾರಣಕ್ಕೆ ಮಿಶ್ರ ಬೆಳೆ ಪದ್ಧತಿ ಅಥವಾ ವೈವಿಧ್ಯಮಯ ಬೆಳೆ ಬೆಳೆಯುವುದೇ ಜಾಣತನ. ಆಗ ಯಾವುದೋ ಒಂದು ಬೆಳೆ ನಮ್ಮ ಕೈ ಹಿಡಿಯುತ್ತೆ.
ದೊಡ್ಡ ಪ್ರಮಾಣದಲ್ಲಿ ಶುಂಠಿ ಬೆಳೆದಾಗ ಅದನ್ನು ಮಾರಾಟ ಮಾಡುವುದು ಕೂಡ ಕಷ್ಟ. ಯಾವುದೋ ಒಂದು ಉತ್ಪನ್ನ ಮಾಡುವಂತಹ company ಗೆ ಮಾರಬೇಕು. ಒಳ್ಳೆ ಬೆಲೆ ಇದ್ದಾಗ ಅದೇನು ಸಮಸ್ಯೆ ಅಲ್ಲ. ಒಳ್ಳೆಯ ಲಾಭ ಕೂಡ ಹೌದು. ಆದರೆ ವರ್ಷಳ ಪರಿಸ್ಥಿತಿ ವಿರುದ್ಧವಾಗಿತ್ತು. 15 ಲಕ್ಷ ಖರ್ಚು ಮಾಡಿ 3 ಲಕ್ಷ ಕೈಗೆ ಬಂದಿತ್ತು! ನನಗೂ ಪಾಪ ಅನಿಸಿತು.
“ಮುಂದಿನ ಬೆಳಿ ವಿಚಾರ ಮಾಡಿ ಹಾಕು ಅಕ್ಕೊ” ಅಂದೆ.
“ಯಪ್ಪ ಈ ಶುಂಠಿ ಸಹವಾಸ ಬ್ಯಾಡೊ…” ಅಂದಳು.
ಮುಂದೇನು ಮಾಡ್ತೀಯಾ ಅಂದಾಗ ಅವಳ ಉತ್ತರ “ಅಡಿಕೆ ಸಸಿ ತಂದು ಇಟ್ಟಿನೋ ಯಪ್ಪ. ಅದನ್ನ ಹಾಕತೇನಿ. ಬ್ಯಾರೆ ಯಾವುದು ಸಹವಾಸನೇ ಬ್ಯಾಡ.“ ಅಂದಳು.
ಇನ್ನೂ ಹತ್ತು ವರ್ಷಕ್ಕೆ ಇವಳ ಅಡಿಕೆ ಬೆಳೆ ಬರುವ ಹೊತ್ತಿಗೆ ಅಡಿಕೆಯ ಬೆಲೆ ಬಿದ್ದರೆ? ಹಾಗೆ ಹೇಳಲು ಹೋಗಲಿಲ್ಲ. ಅದು ಅವಳಿಗೆ ಬಿಟ್ಟ ವಿಷಯ!
ತಮಾಷೆ ಏನು ಗೊತ್ತಾ? ಯಾವಾಗ ಬೆಲೆಗಳು ಬೀಳುತ್ತವಲ್ಲ, ಆಗ ಆ ಬೆಳೆಯನ್ನು ಯಾರೂ ಹಾಕುವ ಮನಸ್ಸು ಮಾಡೋದಿಲ್ಲ. ಹೀಗಾಗಿ ಅದರ ಬೆಲೆ ಮುಂದಿನ ವರ್ಷ ಗಗನಕ್ಕೆ ಏರುವ ಸಂಭವನೀಯತೆ ಜಾಸ್ತಿ ಇರುತ್ತದೆ. ಹಾಗಂತ 15 ಲಕ್ಷ ಕಳೆದುಕೊಂಡವರು ಮತ್ತೆ 15 ಲಕ್ಷ ಹಾಕಲು ಸಿದ್ಧ ಇರುವುದಿಲ್ಲವಲ್ಲ! ತುಂಬಾ ಹಿಂದೆ ನಾವಿನ್ನೂ ರೈತನಾಗಬೇಕು ಅಂತ ಬರಿ ಕನಸು ಕಾಣುತ್ತಿದ್ದ ಸಮಯ. ಆಗ ನಮ್ಮ ಜೊತೆ engineering ಮಾಡುತ್ತಿದ್ದ ಗೆಳೆಯನೊಬ್ಬನಿಗೆ ಕೃಷಿಕನಾಗುವ ಅನಿವಾರ್ಯತೆ ಬಂದಿತ್ತು. ಅವನು ಆಕಸ್ಮಿಕವಾಗಿ ಅಂತ ಅದರಲ್ಲಿ ಧುಮುಕಿ ಮುಂದೆ ತುಂಬಾ ಯಶಸ್ವಿ ರೈತನಾಗಿ ಬೆಳೆದ. ಅವನು ಹೀಗೆ ಹೇಳುತ್ತಿದ್ದ. “ಯಾವುದು ಬೆಳಿ ರೇಟ್ ಕಡಿಮಿ ಇರತೈತಿ ಅದನ್ನ ಬೆಳೀಬೇಕು, ಅದಕ್ಕ ಮುಂದ rate ಬಂದ ಬರತೈತಿ” ಅಂತ. ಅದು ತರಕಾರಿಗಳಿಗೆ/ ಕಡಿಮೆ ಅವಧಿಯ ಬೆಳೆಗಳಿಗೆ ಹೆಚ್ಚು ಅನ್ವಯ ಆಗುತ್ತಾದರೂ, ಅವನು ಹೇಳಿದ್ದು ಸರಿ ಅಂತ ನನಗೆ ತುಂಬಾ ಸಲ ಅನಿಸಿದೆ.
ಅಂತೂ ಇಂತೂ ಶುಂಠಿ ಟ್ರಕ್ಗಳಲ್ಲಿ ಲೋಡ್ ಆಗಿ ಫ್ಯಾಕ್ಟರಿಗೆ ಹೋಯಿತು. ವಿಪರ್ಯಾಸ ನೋಡಿ. ಬೆಳೆಗಾರ ಜೂಜು ಆಡಿ ತನ್ನ ದುಡ್ಡು ಸುರಿದು ನಷ್ಟ ಹೊಂದುತ್ತಾನೆ ಅದೇ ಪದಾರ್ಥವನ್ನು ಒಂದು ಉತ್ಪನ್ನವನ್ನಾಗಿ ಮಾಡಿ ವ್ಯಾಪಾರಿಯೊಬ್ಬ ಲಾಭ ಗಳಿಸುತ್ತಾನೆ. ಹಾಗಂತ ರೈತರಿಗೆ ಉತ್ಪನ್ನ ಮಾಡಿ ಲಾಭ ಗಳಿಸಲು ಅವಕಾಶ ಇಲ್ಲವೇ? ಖಂಡಿತ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಹಲವಾರು ಯೋಜನೆಗಳು ಅದಕ್ಕೆ ಪ್ರೋತ್ಸಾಹ ನೀಡುತ್ತವೆ. ಆದರೆ ರೈತ ಅದರ ತಿಳುವಳಿಕೆ ಪಡೆಯಬೇಕು, ಮಾಡಲು ಮನಸ್ಸು ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ರೈತರು ಒಂದಾಗಬೇಕು. ಅದು ತಕ್ಕ ಮಟ್ಟಿಗೆ ಅಡಿಕೆಯ ವಿಷಯದಲಿ ಆಗಿದೆಯೇ ಹೊರತು ಬೇರೆ ಬೆಳೆಗಳಲ್ಲಿ ಸಂಘಟನೆ ಕಂಡು ಬರೋದಿಲ್ಲ. ಇದು ನನ್ನ ಅನಿಸಿಕೆ. ಬೆಳೆಸಿರಿ ರೈತ ಬಳಗದ ಕನಸು ಮತ್ತೆ ಜಾಗೃತವಾಯ್ತು. ಸಧ್ಯಕ್ಕೆ ನಾಲ್ಕು ಜನರ ಒಂದು ಬಳಗ ತಯಾರಾಗಿತ್ತು. ಅದು ಮುಂದೊಮ್ಮೆ ನಾಲ್ಕು ಲಕ್ಷ ಆಗಬೇಕು. ನಾವೆಲ್ಲ ಸೇರಿ ಒಂದಿಷ್ಟು ಒಳ್ಳೆಯ ಕೆಲಸ ಮಾಡಬೇಕು ಅನ್ನುವ ಕನವರಿಕೆಗಳ ಜೊತೆಗೆ ಮತ್ತೆ ಮರಳಿ ಬೆಂಗಳೂರಿಗೆ ಹೊರಟೆ.
(ಮುಂದುವರಿಯುವುದು..)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
ದಿನದಿಂದ ದಿನಕ್ಕೆ ಈ ಅಂಕಣ ಬಹಳ ಆಪ್ತವೆನಿಸುತ್ತಿದೆ. ಪ್ರತಿಬಾರಿ ಓದಲು ಕಾಯುವೆ ????????
ನಾಗಶ್ರೀ, ತಮ್ಮ ಅನಿಸಿಕೆಗಳನ್ನು ತಿಳಿದು ತುಂಬಾ ಖುಷಿ ಆಯ್ತು! ಧನ್ಯವಾದಗಳು ,:)