ನನ್ನ ಕ್ಯಾಬಿನ್‌ಗೆ ಹೋಗಿ ಇಮೇಲ್ ನೋಡಿದಾಗ ಅವರ ಲಿಂಕ್ ಬಂದಿತ್ತು. ಅರೆ ಅವರು ಹೇಳಿದ್ದು ನಿಜಾನೇ ಆಗಿತ್ತು! ನನಗೆ ಮೊದಲಬಾರಿಗೆ ವೆಂಕಟ್ ಮೇಲೆ ತುಂಬಾ ಅಭಿಮಾನ ಉಕ್ಕಿ ಹರಿಯಿತು. ಕೂಡಲೇ ನನ್ನ ವಿವರಗಳನ್ನು ಲಿಂಕ್ ಮೂಲಕ ನಮೂದಿಸಿದೆ. ಅವರು ಅದನ್ನು ಅನುಮೋದಿಸಿ ಮುಂದಿನ ಹಂತಕ್ಕೆ ಕೂಡ ಕಳಿಸಿದರು. ಜೀವನದಲ್ಲಿ ವಿಚಿತ್ರ ತಿರುವುಗಳು ಇರುತ್ತವೆ! ಫ್ರಾನ್ಸ್‌ಗೆ ಹೋಗುವ ಅವಕಾಶ ಬೆಳಿಗ್ಗೆ ತಪ್ಪಿತು ಅಂತ ವ್ಯಥೆಪಟ್ಟೆ. ಈಗ ಅಮೆರಿಕೆಗೆ ಹೋಗುವ ಅವಕಾಶ ಕದ ತಟ್ಟುತ್ತಿತ್ತು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಮೂರನೆಯ ಬರಹ
ಹಾಸಿನಿ ತಾನು ಮೋಸ ಹೋದೆ ಅಂತ ಹೇಳಿದ್ದು ಕೇಳಿ ಕೆಲ ಕ್ಷಣ ಏನು ಹೇಳುತ್ತಿದ್ದಾರೆ ಅಂತ ಅರ್ಥವಾಗಲಿಲ್ಲವಾದರೂ ಸಾವರಿಸಿಕೊಂಡು “ಯಾಕೆ ಏನಾಯ್ತು” ಅಂತ ಕೇಳಿದೆ.
“ನನಗೆ ಮೋಸ ಮಾಡಿದರು ಗುರು. ಅವರಿಬ್ಬರೂ frauds. ಅವರನ್ನು ನಂಬಿ ನಾನು ನಿಮಗೆಲ್ಲ ಮೋಸ ಮಾಡಿದ ಹಾಗೆ ಆಯ್ತು” ಅಂತ ಆಳುವ ದನಿಯಲ್ಲಿ ಎಲ್ಲ ಕತೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಒಂದು ಪ್ರತಿಷ್ಟಿತ ಕಂಪೆನಿಯ directors ಅಂತ ಹೇಳಿಕೊಂಡು ಬಂದವರು ಅಲ್ಲಿ ಎಷ್ಟೋ ಅಭ್ಯರ್ಥಿಗಳು ಬೇಕಾಗಿದ್ದಾರೆ ಅಂತ ನಂಬಿಸಿ ಇವರಿಗೆ ಯಾಮಾರಿಸಿದ್ದರು. ಹೆಚ್ಚುಕಡಿಮೆ ಐದು ಲಕ್ಷ ಇವರಿಂದ ಪೀಕಿಸಿದ್ದರು. ಇನ್ನಷ್ಟು ಕೆದಕಿದಾಗ ತಿಳಿದ ವಿಷಯ ಇಷ್ಟು.. ರಚನಾ ಎಂಬ ಒಬ್ಬ ಮೋಸದ ಹೆಣ್ಣುಮಗಳು ಮೈಸೂರಿನಲ್ಲಿ ಯಾವುದೋ xerox ಅಂಗಡಿಯ ಹತ್ತಿರ ಇವರಿಗೆ ಸಿಕ್ಕಿದ್ದಳಂತೆ. ಹಾಗೆಯೇ ಯಾವುದೋ ವಿಷಯಕ್ಕೆ ಇಬ್ಬರಿಗೂ ಪರಿಚಯವಾಗಿ ತಾನು ಆ ದೊಡ್ಡ ಕಂಪೆನಿಯ ದೊಡ್ಡ ಹುದ್ದೆಯಲ್ಲಿ ಇದ್ದೇನೆ ಹಾಗೆ ಹೇಗೆ ಅಂತ ಹೇಳಿ ಇವರಲ್ಲಿ ತುಂಬಾ ಒಳ್ಳೆಯ ಭಾವನೆ ಬರುವಂತೆ ಮಾಡಿದ್ದಾರೆ. ಹಾಸಿನಿ ನನ್ನನ್ನೂ ಸೇರಿ ತನ್ನ ಹಲವಾರು ಸ್ನೇಹಿತರೊಂದಿಗೆ ಮಾತಾಡಿ ಎಲ್ಲರ ಬಳಿ visa ಗೆ ಅಂತ ದುಡ್ಡನ್ನು ಅವಳ ಖಾತೆಗೆ ವರ್ಗಾವಣೆ ಮಾಡಿಸಿದ್ದಾರೆ. ಅಷ್ಟೇನೂ ದೊಡ್ಡ ಮೊತ್ತ ಅನಿಸಿಲ್ಲವಾದ್ದರಿಂದ ಹಾಗೂ ಹಾಸಿನಿ ಮೇಲಿನ ನಂಬಿಕೆಯಿಂದ ಎಲ್ಲರೂ 25000 ದುಡ್ಡನ್ನು ಅವಳ account ಗೆ ಹಾಕಿಬಿಟ್ಟರು. ಹನಿ ಹನಿ ಕೂಡಿ ಹಳ್ಳ ಅಂತ ಮೋಸಗಾರರು ಐದು ಲಕ್ಷದ ದುಡ್ಡು ತೆಗೆದುಕೊಂಡು ಪರಾರಿಯಾದರು! ಅವರು ದುಡ್ಡು ಕೇಳಿದಾಗ ನನಗೆ ಸಂಶಯ ಬಂದಿತ್ತಾದರೂ ಹಾಸಿನಿ ನನ್ನ ಹಳೆಯ ಪರಿಚಯ ಎಂಬ ಕಾರಣಕ್ಕೆ ನಾನು ಕೂಡ ದುಡ್ಡು ಕೊಟ್ಟು ಮೋಸ ಹೋಗಿದ್ದೆ. ಮೋಸಗಾರರು ಬಳಸುವ ವಿಧಾನಗಳಲ್ಲಿ ಇದೂ ಒಂದು. ರಚನಾ ಒಂದು ರಚನಾತ್ಮಕ ವ್ಯೂಹ ರಚಿಸಿ ಎಲ್ಲರನ್ನೂ ಯಶಸ್ವಿಯಾಗಿ ಖೆಡ್ಡಾದಲ್ಲಿ ಬೀಳಿಸಿದ್ದಳು!
“ನಿಮ್ಮ ದುಡ್ಡು ನನ್ನ ಕೈಯಿಂದ ವಾಪಸ್ಸು ಕೊಡುತ್ತೇನೆ ಗುರು. ಅವಳ ಮೇಲೆ ಪೊಲೀಸ್ complaint ಕೊಡ್ತೀನಿ.” ಅಂತ ಹೇಳಿ ಹಾಸಿನಿ ಫೋನ್ ಇಟ್ಟರು.
ನನಗೆ ತುಂಬಾ ಬೇಜಾರಾಯ್ತು. ದುಡ್ಡು ಹೋಯ್ತಲ್ಲ ಅನ್ನೋದಕ್ಕಿಂತ ಕೆಲಸದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡು ಕೆಲಸವನ್ನೇ ಬಿಡಬೇಕು ಅಂತಂದುಕೊಂಡಿದ್ದ ನನಗೆ, ವಿದೇಶಕ್ಕೆ ಹೋಗುವ ಒಳ್ಳೆಯ ಅವಕಾಶದ ಕನಸು ಬಿತ್ತಿ, ಹೀಗೆ ಭಗ್ನ ಮಾಡಿದರಲ್ಲ ಎಂಬ ನಿರಾಶೆ. ಮಕ್ಕಳಿಗೆ ice cream ಕೊಡಿಸುತ್ತೇನೆ ಅಂತ ಹೇಳಿ ಆಮೇಲೆ ಇಲ್ಲ ಅಂತ ಅಮ್ಮ ಹೇಳಿದಾಗ ಅವು ಹೇಗೆ ಕೆಳಗಡೆ ಬಿದ್ದು ಹೊರಳಾಡಿ ಅಳುತ್ತವಲ್ಲ ಹಾಗೆಯೇ ನನ್ನ ಮನಸ್ಸು ಕೂಡ ವಿಲಿ ವಿಲಿ ಒದ್ದಾಡತೊಡಗಿತು. ಹೇಗೋ ಸಮಾಧಾನ ತಂದುಕೊಂಡು ಆಶಾಳಿಗೆ ಫೋನ್ ಮಾಡಿ ಹೀಗೆ ಅಂತ ಹೇಳಿದೆ. ಬಟ್ಟೆ ಬರೆ Pack ಮಾಡೋದು ತಪ್ಪಿತು ಬಿಡು ಅಂತ ಅವಳು ತಮಾಷೆ ಮಾಡಿದಳು.
ಅವತ್ತು ನನಗೆ ಆಫೀಸ್‌ನಲ್ಲಿ ಕೆಲಸ ಮಾಡಲು ಮನಸ್ಸೇ ಇಲ್ಲದಂತೆ ಆಯ್ತು. ಅರ್ಧ ದಿನದ ರಜೆ ಹಾಕಿ ಮನೆಗೆ ಹೋಗೋಣ ಅಂತ ಅಂದುಕೊಂಡೆ. ಅಷ್ಟೊತ್ತಿಗೆ ವೆಂಕಟ್ ಸಿಕ್ಕರು. ಬಾಸ್‌ಗಳು ಹಾಗೇನೇ. ನಾವು ಯಾವಾಗ ಮನೆಗೆ ಹೋಗಬೇಕು ಅಂದುಕೊಂಡಿರುತ್ತೇವೆಯೋ ಆಗಲೇ ಅವರು ಪ್ರತ್ಯಕ್ಷ ಆಗುತ್ತಾರೆ!
“ಏನ್ ಗುರು, ಯಾಕೋ ಡಲ್ ಇದ್ದೀರಿ” ಅಂತ ಪ್ರತಿ ಸಲದಂತೆ ನನ್ನ ಮನಸ್ಸನ್ನು ಯಶಸ್ವಿಯಾಗಿ ಓದಿದರು! ನನಗೆ ಮೊದಲೇ ತಲೆ ಕೆಟ್ಟು ಹಾಳಾಗಿತ್ತು. ಆ ಕೋಪವನ್ನು ಪ್ರದರ್ಶಿಸಲು ಸರಿಯಾದ ಸಮಯ ಅಂತ ಅನಿಸಿತು.
“ವೆಂಕಟ್, ನಿಮ್ಮ ಜೊತೆ ಮಾತಾಡಬೇಕು” ಅಂತ ಗಂಭೀರವಾಗಿ ಹೇಳಿದೆ.
ಹೀಗೆ ಒಬ್ಬ ವ್ಯಕ್ತಿಯ ಜೊತೆ ಒಬ್ಬರೇ ಮಾತಾಡುವ ಇಂತಹ ಮೀಟಿಂಗ್‌ಗಳಿಗೆ ಕಾರ್ಪೊರೇಟ್ ಜಗತ್ತಿನಲ್ಲಿ One-On-One ಅಂತ ಕರಿತಾರೆ. ಮ್ಯಾನೇಜರ್‌ಗಳು ತಮ್ಮ ಕೆಳಗಿನವರಿಗೆ ಒಂದು ಎಚ್ಚರಿಕೆ ಕೊಡಬೇಕು ಅಥವಾ ತುಂಬಾ ಮುಖ್ಯ ವಿಷಯ ಏನೋ ಹೇಳಬೇಕು ಅಂದಾಗ ಇಂತಹ meeting ನಡೆಯುತ್ತವೆ. ಅಥವಾ ಮ್ಯಾನೇಜರ್ ಜೊತೆಗೆ ಏನೋ ಒಂದು ಗಂಭೀರ ವಿಷಯ ಮಾತಾಡಲೂ ಕೂಡ ಯಾರು ಬೇಕಾದರೂ ಇಂತಹ ಮೀಟಿಂಗ್‌ಗಾಗಿ ವಿನಂತಿಸಬಹುದು. ನಾನು ಕೂಡ ನನಗೆ ರಿಪೋರ್ಟ್ ಮಾಡುತ್ತಿರುವವರ ಜೊತೆಗೆ ಒಮ್ಮೊಮ್ಮೆ ಹೀಗೆ ಮಾತಾಡುತ್ತಿದ್ದೆ. ಹಾಗಂತ ಯಾವಾಗಲೂ ಗಂಭೀರ ವಿಷಯಗಳೆ ಇರುತ್ತಿರಲಿಲ್ಲ. ಆದರೆ ಹಾಗೆ ಒಬ್ಬರ ಜೊತೆಗೆ ಮಾತಾಡುತ್ತಿರುವಾಗ ಇನ್ನೊಬ್ಬ ಸಹೋದ್ಯೋಗಿಗೆ ಅಲ್ಲಿ ಏನೋ ದೊಡ್ಡ ಗುಟ್ಟು ಮಾತಾಡುತ್ತಿದ್ದಾರೆ ಅಂತ ಅನಿಸೋದು. ನನ್ನ ಒಬ್ಬ ಪ್ರಕಾಶ ಎಂಬ ಮಿತ್ರನಿಗೆ ನನ್ನ ಕೆಳಗೆ ಕೆಲಸ ಮಾಡುವ ಅನಿವಾರ್ಯತೆ ಬಂದಿತ್ತು. ಮಿತ್ರರು ನಮ್ಮ ಟೀಮ್‌ಗೆ ಬಂದುಬಿಟ್ಟರೆ ಅದು ತುಂಬಾ ಪ್ರಾಣಸಂಕಟ. ಅವನ ಜೊತೆಗೆ ನಾನು ತುಂಬಾ ಸಲಿಗೆಯಿಂದ ಇದ್ದೇನೆ ಅಂತ ಹಲವರು ಆರೋಪಿಸುತ್ತಿದ್ದರು. ಬೇರೆಯವರ ಜೊತೆಗಷ್ಟೇ ನಾನು one on one ಮಾಡುತ್ತೇನೆ, ತನ್ನ ಜೊತೆಗೆ ಮಾತಾಡೀದೆ ಇಲ್ಲ ಅಂತ ಅವನು ನನ್ನ ಮೇಲೆ ಆರೋಪ ಮಾಡುತ್ತಿದ್ದ! ಒಟ್ಟಿನಲ್ಲಿ ಮ್ಯಾನೇಜರ್ ಆಗೋದು ಅಂದರೆ ಒಳ್ಳೆಯ ಫಜೀತಿ. ಎಲ್ಲ ಮ್ಯಾನೇಜರ್‌ಗಳು ನನ್ನ ಹಾಗೆ ಇರೋದಿಲ್ಲ. ಇಂತಹ ವಿಷಯಗಳನ್ನು ತಲೆಗೆ ಹಚ್ಚಿಕೊಳ್ಳದೆ ಆಟ ಆಡುತ್ತಾರೆ. ಮೊದಲೇ ಹೇಳಿದೆನಲ್ಲ ಅದೊಂದು ದೊಡ್ಡ ರಂಗಮಂದಿರ, ನಾನೊಬ್ಬ ನಟನೆ ಬಾರದ ದಡ್ಡನಾಗಿದ್ದೆ!
ವೆಂಕಟ್‌ನ ಕ್ಯಾಬಿನ್ ಒಳಗೆ ಅವರ ಎದುರು ಕುಳಿತುಕೊಂಡೆ. ಅವರ ಕ್ಯಾಬಿನ್ ನನ್ನ ಕ್ಯಾಬಿನ್‌ಕಿಂತ ವಿಶಾಲವಾಗಿತ್ತು. ಅಲ್ಲಿನ ಗೋಡೆಯ ಮೇಲೆಲ್ಲಾ ಅವರು ತೆಗೆದ ಫೋಟೊಗಳನ್ನು ತೂಗು ಹಾಕಿದ್ದರು. ಅವರಿಗೆ ಫೋಟೋಗ್ರಫಿ ಹುಚ್ಚು ಇತ್ತು ಅಂತ ಅವರೇ ಒಮ್ಮೆ ಹೇಳಿದ್ದರು. ಹಾಗೆಯೇ ನಾನೂ ಕೂಡ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತೇನೆ ಎಂಬ ವಿಷಯ ಅವರಿಗೆ ತಿಳಿದಿತ್ತು.
“ಮತ್ತೆ ಹೊಸದಾಗಿ ಏನಾದರೂ ಬರೆದಿದ್ರಾ ಗುರು. ನೀವು ಈ ಪ್ರೊಫೆಷನ್ ಬಿಟ್ಟು ರೈಟರ್ ಆಗಬೇಕಿತ್ತು ಬಿಡಿ.. ಇಷ್ಟೊತ್ತಿಗೆ ಯಾವುದಾದರೂ award ಸಿಕ್ಕಿರೋದು.. ಹ ಹ ಹ” ಅಂದರು. ಅಂದರೆ ಹೊಗಳಿದಂತೆಯೂ ಆಗಿರಬೇಕು, ನೀನು ಈ ವೃತ್ತಿಗೆ ನಾಲಾಯಕ್ ಅಂತಲೂ ಹೇಳಿದಂತಿರಬೇಕು. ಅದು ಮ್ಯಾನೇಜರನಿಗೆ ಇರಲೇಬೇಕಾದ ಗುಣ! ಅವರಲ್ಲಿ ಅದು ಹೇರಳವಾಗಿ ಇತ್ತು. ನಾನು ಅದಕ್ಕೆ ಪ್ರತಿಕ್ರಿಯಿಸಲು ಹೋಗಲಿಲ್ಲ.
“ಯಾಕರಿ ಎನ್ ಸಮಾಚಾರ?”
ಅವತ್ತು ನನಗೆ ಆಫೀಸ್‌ನಲ್ಲಿ ಕೆಲಸ ಮಾಡಲು ಮನಸ್ಸೇ ಇಲ್ಲದಂತೆ ಆಯ್ತು. ಅರ್ಧ ದಿನದ ರಜೆ ಹಾಕಿ ಮನೆಗೆ ಹೋಗೋಣ ಅಂತ ಅಂದುಕೊಂಡೆ. ಅಷ್ಟೊತ್ತಿಗೆ ವೆಂಕಟ್ ಸಿಕ್ಕರು. ಬಾಸ್‌ಗಳು ಹಾಗೇನೇ. ನಾವು ಯಾವಾಗ ಮನೆಗೆ ಹೋಗಬೇಕು ಅಂದುಕೊಂಡಿರುತ್ತೇವೆಯೋ ಆಗಲೇ ಅವರು ಪ್ರತ್ಯಕ್ಷ ಆಗುತ್ತಾರೆ!
“ವೆಂಕಟ್, ನಾನು ಇಲ್ಲಿಗೆ ಬಂದಾಗಲೆ ನೀವು ನನ್ನ designation ಸರಿಯಾಗಿ ಕೊಟ್ಟಿಲ್ಲ. ಅದು ಈಗಾಗಲೇ ತುಂಬಾ ಸಲ ಹೇಳಿದೀನಿ. ನನಗೆ ಪ್ರಮೋಷನ್ ಬೇಕು” ಅಂತ ಸ್ವಲ್ಪ ಗಂಭೀರವಾಗಿಯೇ ಅರುಹಿದೆ.
ಖಕ್ ಖಕ್ ಅಂತ ಮೆಲ್ಲಗೆ ಕೆಮ್ಮಿ ಗಂಟಲು ಸರಿ ಪಡಿಸಿಕೊಂಡರು ಅವರು. ಮೀಸೆಯ ಅಡಿಯಲ್ಲಿಯೇ ಮುಗುಳುನಕ್ಕರು.
“ಕಂಪೆನಿ ತುಂಬಾ ಲಾಸ್ ಅಲ್ಲಿ ಇದೆ ಗುರು. ನಮಗೂ ಪ್ರಮೋಷನ್, increment ಏನೂ ಇಲ್ಲ ಈ ಸಲ, ಸ್ಯಾಲರಿ ಕೊಡ್ತಾ ಇದಾರೆ ಅದೇ ದೊಡ್ಡದು” ಎಂಬ ವೇದಾಂತವನ್ನು ಮಂಡಿಸಿ ಕೂಡಲೇ ಏನೋ ಗಹನ ವಿಷಯದ ಬಗ್ಗೆ ಇಮೇಲ್ ಬಂದಿದೆ ಎಂಬಂತೆ ತಮ್ಮ laptop ನ ಮಾನಿಟರ್ ದಿಟ್ಟಿಸಿ ನೋಡತೊಡಗಿದರು. ಇದು ಮ್ಯಾನೇಜರ್‌ಗೆ ಇರಬೇಕಾದ ಮತ್ತೊಂದು ಗುಣ!
ಅವರ ಜೊತೆಗೆ ಮಾತಾಡೋದು ಹಾಗೆ ಸುಮ್ಮನೆ ಕಾಲಹರಣ ಅಂತ ಗೊತ್ತಿದ್ದರೂ ಅವರ ಜೊತೆಗೆ ಮಾತುಕತೆಗೆ ಇಳಿದೆನಲ್ಲ ಅಂತ ನನ್ನನ್ನು ನಾನೇ ಹಳಿಯುತ್ತಾ, ಇನ್ನೇನು ಎದ್ದು ಹೋಗುವದರಲ್ಲಿದ್ದೆ…
“ಅಮೆರಿಕೆಗೆ ಹೋಗ್ತೀರೇನ್ರೀ ಗುರು? ಮ್ಯಾನೇಜರ್‌ಗಳಿಗೆ ಒಂದಿಷ್ಟು ವೀಸಾ ಮಾಡಿಸಬೇಕು ಅಂತ ನಮ್ಮ client ಹೇಳಿದಾರೆ. ನಮ್ಮ account ನಲ್ಲಿ ಒಂದಿಷ್ಟು requirements ಇವೆ” ಅನ್ನಬೇಕೆ!
ಎದ್ದು ಹೊರಟವನು ಮತ್ತೆ ಕೂತೆ. ಈಗ ಖಕ್ ಖಕ್ ಅಂತ ಗಂಟಲು ಸರಿ ಮಾಡಿಕೊಳ್ಳುವ ಸರದಿ ನನ್ನದಾಗಿತ್ತು! ವಿದೇಶದಲ್ಲಿ ಕೆಲಸ ಮಾಡುವ ಆಸೆಗೆ ಈಗಾಗಲೇ ಮೋಸ ಹೋಗಿದ್ದ ನನಗೆ ಈ ವೆಂಕಟ್ ಮಾತುಗಳ ಮೇಲೆ ಎಳ್ಳಷ್ಟೂ ನಂಬಿಕೆ ಇರಲಿಲ್ಲ. ಸುಮ್ಮನೆ ವಿಷಯಾಂತರ ಮಾಡಲು ಹಾಗೆ ಹೇಳುತ್ತಿದ್ದಾರೆ ಅಂತ ಕೂಡಲೇ ಅನಿಸಿತು. ಏನೇ ಆಗಲಿ, ಅವಕಾಶ ಇದ್ದರೆ ಬಿಡೋದು ಯಾಕೆ ಅಂತಲೂ ಅನಿಸಿತು.
“ಆಯ್ತು ಅಲ್ಲಾದರೂ ಕಳಿಸಿ. ಇಲ್ಲಿ ಸಾಕಾಗಿದೆ” ಅಂದೆ. ಅವರು ಮತ್ತೆ ಮೀಸೆಯ ಅಡಿಯಲ್ಲಿ ಮುಗುಳು ನಗೆ ನಕ್ಕರು. ಸರಿ ಒಂದು ಲಿಂಕ್ ಕಳಿಸಿದೀನಿ. Details ಎಲ್ಲಾ ಕೊಡಿ. ನಾನು ನಿಮ್ಮ ವೀಸಾ process ಮಾಡ್ತೀನಿ ಅಂದರು.
ನನ್ನ ಕ್ಯಾಬಿನ್‌ಗೆ ಹೋಗಿ ಇಮೇಲ್ ನೋಡಿದಾಗ ಅವರ ಲಿಂಕ್ ಬಂದಿತ್ತು. ಅರೆ ಅವರು ಹೇಳಿದ್ದು ನಿಜಾನೇ ಆಗಿತ್ತು! ನನಗೆ ಮೊದಲಬಾರಿಗೆ ವೆಂಕಟ್ ಮೇಲೆ ತುಂಬಾ ಅಭಿಮಾನ ಉಕ್ಕಿ ಹರಿಯಿತು. ಕೂಡಲೇ ನನ್ನ ವಿವರಗಳನ್ನು ಲಿಂಕ್ ಮೂಲಕ ನಮೂದಿಸಿದೆ. ಅವರು ಅದನ್ನು ಅನುಮೋದಿಸಿ ಮುಂದಿನ ಹಂತಕ್ಕೆ ಕೂಡ ಕಳಿಸಿದರು.
ಜೀವನದಲ್ಲಿ ವಿಚಿತ್ರ ತಿರುವುಗಳು ಇರುತ್ತವೆ! ಫ್ರಾನ್ಸ್‌ಗೆ ಹೋಗುವ ಅವಕಾಶ ಬೆಳಿಗ್ಗೆ ತಪ್ಪಿತು ಅಂತ ವ್ಯಥೆಪಟ್ಟೆ. ಈಗ ಅಮೆರಿಕೆಗೆ ಹೋಗುವ ಅವಕಾಶ ಕದ ತಟ್ಟುತ್ತಿತ್ತು! ನಾನು ಅವತ್ತು ಬೇಗ ಮನೆಗೆ ಹೋಗಿದ್ದರೆ ಇಂತಹ ಅವಕಾಶ ಕೈತಪ್ಪಿ ಹೋಗುತ್ತಿತ್ತು ಅಂದುಕೊಂಡೆ. ಆಶಾಳಿಗೆ ಹೀಗೆ ಆಯ್ತು ಅಂತ ಹೇಳಿದೆ. ವೀಸಾ ಪೂರ್ತಿ process ಆಗಿ ಅಲ್ಲಿಗೆ ಹೋಗುವ ತನಕ ನಮ್ಮಿಬ್ಬರಿಗೂ ನಂಬಿಕೆ ಇರಲಿಲ್ಲ. ಹೀಗಾಗಿ ಈ ಸಲ ಯಾರಿಗೂ ಇದರ ಬಗ್ಗೆ ಹೇಳಲೂ ಇಲ್ಲ.
ನನ್ನ ಜೊತೆಗೆ ಇನ್ನೊಬ್ಬ ಸಹೋದ್ಯೋಗಿ ಥಾಮಸ್ ಎಂಬವರಿಗೆ ಕೂಡ visa ಮಾಡಿಸಲು ಹೇಳಿದ್ದರು. ಅವರಿಗೂ ನನ್ನ ವಿಷಯ ಗೊತ್ತಾಗಿ ಅದರ documentation ಬಗ್ಗೆ ನನ್ನ ಬಳಿ ವಿಚಾರಿಸಲು ತೊಡಗಿದರು. ಅಮೆರಿಕೆಯ ವೀಸಾ ಅಂದರೆ ಅದೊಂದು ದೊಡ್ಡ ಕಿರಿಕಿರಿ. ಈಗಾಗಲೇ ಎರಡು ಸಲ ನಾನು ಅಲ್ಲಿಗೆ ಪ್ರವಾಸ ಮಾಡಿದ್ದೆನಾದರೂ ಅವು ಒಂದು ತಿಂಗಳಿನ ಬಿಸಿನೆಸ್ ವೀಸಾ ಆಗಿದ್ದವು. ಆ ವೀಸಾ ಸುಲಭವಾಗಿ ಸಿಕ್ಕಿಬಿಡುತ್ತದೆ. ಆದರೆ ಈಗ ನಾನು ಹೋಗಬೇಕಿದ್ದುದು L1 ವೀಸಾ ಆಗಿತ್ತು. ಅದು ದೀರ್ಘ ಕಾಲ ಅಲ್ಲಿ ಕೆಲಸ ಮಾಡುವ ಅನುಮತಿ ನೀಡುವ ವೀಸಾ. ಅದು ಕಂಪೆನಿ ಒಳಗಡೆ ಭಾರತದ ಶಾಖೆಯಿಂದ ಅಮೆರಿಕೆಯ ಶಾಖೆಯ ವರ್ಗಾವಣೆ. ನನ್ನ ಸಂಬಳ ಕೂಡ ಅಮೆರಿಕೆಯಲ್ಲಿಯೇ ಕೊಡುವ ವ್ಯವಸ್ಥೆ ಅದು. ಹೀಗಾಗಿ ಅಮೆರಿಕೆಯ embassy ಅಷ್ಟು ಸುಲಭದಲ್ಲಿ ನಮ್ಮನ್ನು ಪಾಸ್ ಮಾಡೋದಿಲ್ಲ. ಅದಕ್ಕಾಗಿ ನಾನು ನನ್ನ ಹೆಂಡತಿ ಮಗಳನ್ನು ಕರೆದುಕೊಂಡು ಚೆನ್ನೈನಲ್ಲಿರುವ ಅವರ ಆಫೀಸ್‌ಗೆ ಹೋಗಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ನಮ್ಮ passport ಗಳ ಮೇಲೆ ವೀಸಾ ಸಿಕ್ಕಾ ಹಾಕಿಸಿಕೊಳ್ಳಬೇಕಿತ್ತು. ಅದಕ್ಕಿಂತ ಮೊದಲು ಏನೇನೋ ದಾಖಲೆಗಳನ್ನು ನಾನು ನೀಡಬೇಕಿತ್ತು. ನಾನು ಮಹಾ ಮೈಗಳ್ಳ. ಅದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದೆ. ಥಾಮಸ್ ಎಲ್ಲ ವಿವರಗಳನ್ನು ಒಂದೆರಡು ದಿನಗಳಲ್ಲಿ ಕೊಟ್ಟುಬಿಟ್ಟಿದ್ದರು. ಅವರಿಗೆ ಅಮೆರಿಕೆಗೆ ಹೋಗಿ ಅಲ್ಲಿಯೇ ಬೇರೂರುವ ದೊಡ್ಡ ಕನಸಿತ್ತು. ನನಗೆ ಹಾಗಿರಲಿಲ್ಲವಲ್ಲ. ಆದರೆ ಅವರು “ಗುರು, did you upload documents” ಅಂತ ನಕ್ಷತ್ರಿಕರಂತೆ ನನ್ನ ಬೆನ್ನು ಹತ್ತಿದ್ದರು. ಅವರ ಕಿರಿಕಿರಿ ತಾಳಲಾರದೆ ಎಲ್ಲ ವಿವರಗಳನ್ನು upload ಮಾಡಿದೆ. ಅವರಿಗೆ ಆ ವಿಷಯದಲ್ಲಿ ಋಣಿ.
ಇದೆಲ್ಲ ಸಂಭ್ರಮಗಳು ಮುಗಿದ ಮೇಲೆ ವೀಸಾ ಸಂದರ್ಶನಕ್ಕೆ ಹೋಗಲು ಒಂದು ದಿನಾಂಕ ನಿಗದಿ ಆಯ್ತು. ಥಾಮಸ್ ಅವರ ಸಂದರ್ಶನ ನನಗಿಂತ ಮೊದಲೇ ನಿಗದಿ ಆಗಿತ್ತು. ಚೆನೈಗೆ ವೀಸಾ ಸಂದರ್ಶನಕ್ಕೆ ಹೋಗಲು ನಾವು ಕುಟುಂಬ ಸಮೇತ ತಯಾರಾದೆವು.
(ಮುಂದುವರಿಯುವುದು..)
ಸಾರೀರೀ… ಗುರು!(ಹಿಂದಿನ ಕಂತು….)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
ಗುರು ಸರ್, ಫ್ರಾನ್ಸ್ ವಿಮಾನ ತಪ್ಪಿ, ಅಮೆರಿಕ ವಿಮಾನ ಸಿಕ್ಕದ್ದು ಓದಿ ಖುಷಿಯಾಯಿತು. ಆಕಸ್ಮಿಕ ತಿರುವುಗಳ ನಿಮ್ಮ ಸಾಫ್ಟವೆರ್ ಬದುಕಿನ ಪಯಣವನ್ನು ಓದುವ ಖುಷಿ ನಮ್ಮದು.
ಗದಗ ಸರ್, ಹೌದು. ತಮ್ಮ ಅನಿಸಿಕೆಗಳನ್ನು ಕೇಳಿ ಖುಷಿಯಾಯ್ತು 🙂