ಮೆಲ್ಬೋರ್ನ್ ನಗರದಿಂದ ಉತ್ತರಕ್ಕೆ ಎರಡು ಸಾವಿರ ಕಿಲೋಮೀಟರಿಗೂ ಜಾಸ್ತಿ ದೂರದಲ್ಲಿರುವ ನಮ್ಮ ಬ್ರಿಸ್ಬನ್ ನಗರನಿವಾಸಿಗಳಿಗೆ ಕೆಳಗಡೆ ಲೋಕದಲ್ಲಿ ನಡೆಯುತ್ತಿರುವ ಅವಾಂತರಗಳನ್ನು ಕೇಳುವುದು ಅಭ್ಯಾಸವಾಗಿದ್ದು, ಅಯ್ಯೋ ಪಾಪ ಎಂದು ಲೊಚ್ ಲೊಚ್ ಅನ್ನೋದು ನಡೆಯುತ್ತಿತ್ತು. ಸಧ್ಯ, ನಾವು ರಾಣಿರಾಜ್ಯದವರು ಕ್ಷೇಮದಿಂದಿದ್ದೀವಿ ಎಂದೂ, ನಮ್ಮಲ್ಲಿ ಒಂದೂ ಕೊರೋನ ಕೇಸ್ ಇಲ್ಲವೆಂದೂ ಹರ್ಷಿಸುವುದು, ಕಾಪಾಡು ಕೊರೋನ ಎಂದು ಉದ್ಗಾರವೆಳೆಯುವುದು ನಡೆದಿತ್ತು. ಈ ಎರಡು ನಗರಗಳ ಮಧ್ಯೆಯಿರುವ ಸಿಡ್ನಿ ನಗರ ಆ ಕಡೆ ಈ ಕಡೆ ಕಣ್ಣು ಹೊರಳಿಸಿಕೊಂಡು ನೋಡುತ್ತಾ, ಅವರ್ ಬಿಟ್ ಇವರ್ ಬಿಟ್ ಅರ್ವ್ಯಾರು ಅನ್ನೋ ಆಟದಲ್ಲಿ ಮಗ್ನವಾಗಿತ್ತು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಇನ್ನೇನು ಕೊರೋನ ಕಾಟ ಮುಗಿಯುತ್ತಾ ಬಂತು, ನಿಶ್ಚಿಂತೆಯಿಂದ ಓಡಾಡಿಕೊಂಡಿರಬಹುದು ಅಂತ ಮೆಲ್ಬೋರ್ನ್ ನಗರನಿವಾಸಿಗಳು ಕಳೆದ ತಿಂಗಳು ಹಾಯೆಂದು ಉಸಿರೆಳೆದುಕೊಳ್ಳುತ್ತಿದ್ದಾಗಲೇ ಕರೋನ ಕಾಟ ಭಾಗ ಎರಡು ಎಂಬ ನಾಟಕೀಯ ಸಿನೆಮಾ ಶುರುವಾಯ್ತು. ಇದ್ದಕ್ಕಿಂದ್ದಂತೆ ಕೋವಿಡ್ ಪೀಡಿತರ ಸಂಖ್ಯೆ ನೂರಾರು ದಾಟಿದಾಗ ಮತ್ತೆ ಲಾಕ್ ಡೌನ್. ಅದಕ್ಕೂ ಜಗ್ಗದೆ ಸಂಖ್ಯೆ ಇನ್ನಷ್ಟು ಹೆಚ್ಚಾದಾಗ ಚಿಂತೆಗೊಳಗಾದ ಸರ್ಕಾರ ಅಲ್ಲಲ್ಲಿ ಚೆಲ್ಲಿಬಿದ್ದಿದ್ದ ರೂಲ್ಸ್ ಗಳನ್ನ ನೆನಪಿಸಿಕೊಂಡು ವಿಕ್ಟೋರಿಯಾ ರಾಜ್ಯವನ್ನು ಸ್ಟೇಟ್ ಆಫ್ ಡಿಸಾಸ್ಟರ್ ಎಂದು ಘೋಷಿಸಿತು. ಎಲ್ಲರೂ ಮನೆಯೊಳಗಡೆ ಇದ್ದುಕೊಂಡು, ದಿನಕ್ಕೊಮ್ಮೆ ಮಾತ್ರ ವ್ಯಾಯಾಮಕ್ಕಾಗಿ ಹೊರಬರಬಹುದು. ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಪರವಾನಗಿಯಿದ್ದು ನಿಯಮಿತವಾಗಿ ತೆರೆದಿರುವ ಸೂಪರ್ ಮಾರುಕಟ್ಟೆಗೆ ಹೋಗಿ ದಿನದ ಅವಶ್ಯ ಪದಾರ್ಥಗಳನ್ನು ಕೊಳ್ಳಬಹುದು. ಕಡ್ಡಾಯವಾಗಿ ಬಾಯಿ, ಮೂಗನ್ನು ಮುಚ್ಚಿರುವ ಮಾಸ್ಕ್ ಧರಿಸದಿದ್ದರೆ ಸ್ಥಳದಲ್ಲೇ ಅಪರಾಧ ದಂಡ ಮುಡಿಗೇರುತ್ತದೆ. ದೈಹಿಕ ಅಂತರ ಇರಲೇಬೇಕು. ರಸ್ತೆಗಳಲ್ಲಿ ಪೋಲೀಸರ ಜೊತೆಗೆ ಸೈನಿಕರೂ ಕೂಡ ಕಾವಲು ಕಾಯುತ್ತ ಅಡ್ಡಾಡುತ್ತಿದ್ದಾರಂತೆ. ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿ ಎಂದಿಗಿಂತಲೂ ಚಳಿ ತೀವ್ರವಾಗಿದ್ದು ರಾತ್ರಿ ಹೊತ್ತು ಮೈನಸ್ ಡಿಗ್ರಿ, ಬೆಳಗ್ಗೆ ಕನಿಷ್ಠ ತಾಪಮಾನವಿದ್ದು ಜನರು ಕಂಗಾಲಾಗಿದ್ದಾರೆ. ಅತ್ತ ಕೊರೋನ ಇತ್ತ ಮೈಕೊರೆಯುವ ಚಳಿ.

ಮೆಲ್ಬೋರ್ನ್ ನಗರದಿಂದ ಉತ್ತರಕ್ಕೆ ಎರಡು ಸಾವಿರ ಕಿಲೋಮೀಟರಿಗೂ ಜಾಸ್ತಿ ದೂರದಲ್ಲಿರುವ ನಮ್ಮ ಬ್ರಿಸ್ಬನ್ ನಗರನಿವಾಸಿಗಳಿಗೆ ಕೆಳಗಡೆ ಲೋಕದಲ್ಲಿ ನಡೆಯುತ್ತಿರುವ ಅವಾಂತರಗಳನ್ನು ಕೇಳುವುದು ಅಭ್ಯಾಸವಾಗಿದ್ದು, ಅಯ್ಯೋ ಪಾಪ ಎಂದು ಲೊಚ್ ಲೊಚ್ ಅನ್ನೋದು ನಡೆಯುತ್ತಿತ್ತು. ಸಧ್ಯ, ನಾವು ರಾಣಿರಾಜ್ಯದವರು ಕ್ಷೇಮದಿಂದಿದ್ದೀವಿ ಎಂದೂ, ನಮ್ಮಲ್ಲಿ ಒಂದೂ ಕೊರೋನ ಕೇಸ್ ಇಲ್ಲವೆಂದೂ ಹರ್ಷಿಸುವುದು, ಕಾಪಾಡು ಕೊರೋನ ಎಂದು ಉದ್ಗಾರವೆಳೆಯುವುದು ನಡೆದಿತ್ತು. ಈ ಎರಡು ನಗರಗಳ ಮಧ್ಯೆಯಿರುವ ಸಿಡ್ನಿ ನಗರ ಆ ಕಡೆ ಈ ಕಡೆ ಕಣ್ಣು ಹೊರಳಿಸಿಕೊಂಡು ನೋಡುತ್ತಾ, ಅವರ್ ಬಿಟ್ ಇವರ್ ಬಿಟ್ ಅರ್ವ್ಯಾರು ಅನ್ನೋ ಆಟದಲ್ಲಿ ಮಗ್ನವಾಗಿತ್ತು. ಕೊರೋನ ಬರುವುದೋ ಇಲ್ಲವೋ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವುದೇ ನಿತ್ಯಧರ್ಮವಾಗಿತ್ತು.

ವಿಷಯ ಹೀಗಿರುವಾಗ ನಮ್ಮ ಬ್ರಿಸ್ಬನ್ನಿನಲ್ಲಿ ಎರಡು ‘ವಿಷ ಕನ್ಯೆಯರ’ ಸೃಷ್ಟಿಯಾಯ್ತು. ಅವರಿಗೆ ತಾವು ಆ ರೀತಿಯಲ್ಲಿ ಸೃಷ್ಟಿಯಾಗುವುದು ಬೇಕಿತ್ತೋ ಬೇಡವಿತ್ತೋ ಯಾರೂ ಕೇಳಲಿಲ್ಲ. ಮಾಧ್ಯಮಗಳು ನೀಮುಂದು, ತಾಮುಂದು ಎಂದು ಆತುರದಿಂದ ಹರಿಹಾಯ್ದು ಆ ಇಬ್ಬರು ಯುವತಿಯರ ಜನ್ಮ ಜಾಲಾಡಿ ಅವರಿಗೆ ವಿಷಕನ್ಯೆಯರ ಪಟ್ಟವನ್ನು ನಿರ್ದಯೆಯಿಂದ ಕೊಟ್ಟುಬಿಟ್ಟರು.

ಕೊರೋನ ಗಲಾಟೆ ಮುಗಿದ ಮೇಲೆ ಬಹು ಒತ್ತಾಯದಿಂದ ಬೇಸತ್ತು ಜೂನ್ ತಿಂಗಳಿನಲ್ಲಿ ನಮ್ಮ ರಾಣಿರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಗಡಿಪ್ರದೇಶವನ್ನು ಮುಕ್ತಗೊಳಿಸಿದ್ದರು. ಅಂದರೆ ಎಲ್ಲಾ ರಾಜ್ಯದವರು ಪರವಾನಗಿಯಿಲ್ಲದೆ ಪರಸ್ಪರತೆಯಿಂದ ಮುಕ್ತವಾಗಿ ಓಡಾಡಬಹುದಿತ್ತು. ಪ್ರತಿ ರಾಜ್ಯದ ಗಡಿ ದಾಟುವಾಗ ಮಾತ್ರ ಅಧಿಕಾರಿಗಳಿಗೆ ತಮ್ಮ ದಾಖಲೆಗಳನ್ನು ಕೊಡಬೇಕಿತ್ತು. ಆ ಯುವತಿಯರು ಕಳೆದ ತಿಂಗಳು ಜುಲೈನಲ್ಲಿ ಚಿಕ್ಕ ನಗರವಾದ ಬ್ರಿಸ್ಬನ್ನಿಂದ ದೇಶದ ಸಾಂಸ್ಕೃತಿಕ ರಾಜಧಾನಿಯಾದ ದೊಡ್ಡ ಮೆಲ್ಬೋರ್ನ್ ನಗರಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಿ ಒಂದಷ್ಟು ದಿನ ಸುತ್ತಾಡಿ ಆನಂದಿಸಿ ವಾಪಸ್ ಮರಳಿದರು. ವಿಷಯ ಅಷ್ಟೇ ಸರಳವಾಗಿದ್ದರೆ ಚೆನ್ನಿತ್ತು.

ಅವರಿಬ್ಬರ ಪ್ರಯಾಣದ ಕಥೆಗೆ ಒಂದಷ್ಟು ಬಣ್ಣ, ರೆಕ್ಕೆಪುಕ್ಕೆಗಳು, ಅಂತೆಕಂತೆಗಳು ಸೇರಿವೆ. ಇವತ್ತಿಗೂ ಯಾವುದು ಎಷ್ಟು ನಿಜ ಅನ್ನೋದು ಸಾರ್ವಜನಿಕರಿಗೆ ತಿಳಿದಿಲ್ಲ. ಇಬ್ಬರು ಹುಡುಗಿಯರೂ ಮೆಲ್ಬೋರ್ನ್ ನಗರದಲ್ಲಿ ಮೂವತ್ತು ಜನರು ಸೇರಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು ಅನ್ನುವುದು ಕಥೆಯ ಒಂದು ಎಳೆ. ಇನ್ನೊಂದು ಎಳೆ ಅವರಿಬ್ಬರೂ ನಗರವನ್ನು ಸುತ್ತಾಡಿ ಹೆಸರಾಂತ ಅಂಗಡಿಗಳಿಗೆ ಭೇಟಿಕೊಟ್ಟು ಬಹು ಬೆಲೆಬಾಳುವ ಕೈಚೀಲಗಳನ್ನು, ಪರ್ಸುಗಳನ್ನು ಕಳ್ಳತನ ಮಾಡಿದ್ದರು. ಹಾಗೆ ಮಾಡುವುದಕ್ಕೆ ಅವರಿಗೆ ಬೆಂಬಲ ಮತ್ತು ನಿರ್ದೇಶನಗಳನ್ನು ಕೊಟ್ಟು ಅವರನ್ನು ಪ್ರೇರೇಪಿಸಿದ್ದು ಒಂದು ಕಳ್ಳರ ಗ್ಯಾಂಗ್. ಇವರು ದೇಶದ ಪೂರ್ತಿ ತಮ್ಮ ಕಳ್ಳ ವ್ಯವಹಾರಗಳನ್ನು ನಡೆಸುವ ಕೇಡಿಗರು. ಯುವತಿಯರು ತಮಗೆ ಅರಿವಿಲ್ಲದೆ ಬಲಿಪಶುಗಳಾಗಿದ್ದರು. ಇವೆರಡು ವಿಷಯಗಳಲ್ಲಿ ಇರುವ ಸುಳ್ಳು ನಿಜದ ಅಂಶ ತಿಳಿದಿಲ್ಲ. ಬಹುಶಃ ಪೊಲೀಸರಿಗೆ ಗೊತ್ತಿರುತ್ತದೆ, ಅವರು ಅದನ್ನು ಬಹಿರಂಗಪಡಿಸಿಲ್ಲ.

ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿ ಎಂದಿಗಿಂತಲೂ ಚಳಿ ತೀವ್ರವಾಗಿದ್ದು ರಾತ್ರಿ ಹೊತ್ತು ಮೈನಸ್ ಡಿಗ್ರಿ, ಬೆಳಗ್ಗೆ ಕನಿಷ್ಠ ತಾಪಮಾನವಿದ್ದು ಜನರು ಕಂಗಾಲಾಗಿದ್ದಾರೆ. ಅತ್ತ ಕೊರೋನ ಇತ್ತ ಮೈಕೊರೆಯುವ ಚಳಿ.

ಆದರೆ ನಿಜವಾದ ಸಮಾಚಾರವೇನೆಂದರೆ ಈ ಎರಡು ಹುಡುಗಿಯರಂತೆ ಕಳೆದೆರಡು ತಿಂಗಳಿನಲ್ಲಿ ಅನೇಕರು ಮೆಲ್ಬೋರ್ನ್ ನಗರಕ್ಕೆ ಭೇಟಿಕೊಟ್ಟಿದ್ದರು. ವಾಪಸ್ ರಾಣಿರಾಜ್ಯದ ತಮ್ಮ ಪ್ರದೇಶಗಳಿಗೆ ಹಿಂದುರಿಗಿದ್ದರು. ಅವರಲ್ಲಿ ಅದೆಷ್ಟು ಜನರು ಕೋವಿಡ್ ಪರೀಕ್ಷೆಗೊಳಗಾಗಿದ್ದರೋ ತಿಳಿಯದು. ಆದರೆ ಹುಡುಗಿಯರು ವಾಪಸ್ ಬಂದ ಮೇಲೆ ಆರೋಗ್ಯದಲ್ಲಿ ಹೆಚ್ಚುಕಡಿಮೆಯಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿದಾಗ ಅವರಿಗೆ ಸೋಂಕು ತಗುಲಿರುವುದು ಧೃಡವಾಯ್ತು. ಪರೀಕ್ಷಿಸಿದ ಮೇಲೆ ಯಥಾಪ್ರಕಾರ ಆರೋಗ್ಯ ಇಲಾಖೆಯವರು ಸರ್ಕಾರಕ್ಕೆ ವಿಷಯ ಮುಟ್ಟಿಸಿದರು. ಅವರಿಬ್ಬರನ್ನು ಚಿಕಿತ್ಸೆಗೆ ಮತ್ತು ನಿರ್ಬಂಧಕ್ಕೆ ಒಳಪಡಿಸಲಾಯಿತು. ಅವರಿಬ್ಬರ ಆಗುಹೋಗುಗಳ ತಪಾಸಣೆ ಶುರುವಾಯ್ತು.

ಒಬ್ಬ ಹುಡುಗಿ ಪೋಲೀಸರ ವಿಚಾರಣೆಗೆ ಸಹಕರಿಸಿದರೆ ಮತ್ತೊಬ್ಬಳು ಅರ್ಧಂಬರ್ಧ ಮಾತನಾಡಿದ್ದಳು. ಪೊಲೀಸರು ತಮ್ಮ ಮಾಧ್ಯಮಗಳ ವರದಿಯಲ್ಲಿ ರಾಣಿರಾಜ್ಯದಲ್ಲಿ ಸೋಂಕು ತಗುಲಿರುವ ಹೊಸ ಎರಡು ಕೇಸ್ ಬಂದಿವೆ, ಅವುಗಳ ವಿವರಗಳು ಹೀಗಿವೆ ಎಂದು ಬಹಿರಂಗಪಡಿಸಿದ್ದೂ ಅಲ್ಲದೆ ಪೊಲೀಸ್ ಕಮಿಷನರ್ ಆ ಹುಡುಗಿಯರ ಹುಡುಗಾಟದ ವರ್ತನೆಯಿಂದ ತಮಗೆ ಬಹು ನಿರಾಸೆಯಾಗಿದೆ. ಅವರಿಬ್ಬರೂ ಮೆಲ್ಬೋರ್ನ್ ನಗರದಿಂದ ವಾಪಸ್ ಬರುವಾಗ ಮಧ್ಯೆ ಸಿಡ್ನಿ ನಗರದಲ್ಲಿ ತಂಗಿದ್ದರು. ರಾಜ್ಯದ ಗಡಿ ದಾಟುವಾಗ ತಮ್ಮಿಬ್ಬರ ಬಗ್ಗೆ ಸುಳ್ಳು ದಾಖಲೆಗಳನ್ನು ನೀಡಿ ಪೊಲೀಸರಿಗೆ ವಂಚಿಸಿದ್ದರು. ಇವೆಲ್ಲವನ್ನೂ ತಮ್ಮ ಅರಿವಿನಲ್ಲೇ ಇದ್ದುಕೊಂಡು ಮಾಡಿದ್ದರಿಂದ ಅವರಿಬ್ಬರಿಗೂ ಸರ್ಕಾರ ದಂಡ ಹಾಕಿದ್ದಲ್ಲದೆ ಅವಳ ವರ್ತನೆಯನ್ನು ಕ್ರಿಮಿನಲ್ ಕೇಸ್ ಎಂದು ಪರಿಗಣಿಸಿ ಸೆಪ್ಟೆಂಬರ್ ತಿಂಗಳಲ್ಲಿ ಅವರನ್ನು ಕೋರ್ಟಿಗೆ ಹಾಜರು ಪಡಿಸಲಾಗುತ್ತದೆ. ಅಪರಾಧ ಸಾಬೀತಾದರೆ ಅವರಿಗೆ ಕನಿಷ್ಠ ಐದು ವರ್ಷಗಳ ಜೈಲುವಾಸವಾಗುತ್ತದೆ ಎಂದೆಲ್ಲ ಹೇಳಿಕೆ ಕೊಟ್ಟರು.

ಅವರ ಹೇಳಿಕೆಯ ನಂತರ ವಿಷಯಕ್ಕೆ ರಂಗೇರಿತು. ಮಾಧ್ಯಮಗಳು ಬಹುರೋಚಕವಾಗಿ ಹುಡುಗಿಯರಿಬ್ಬರೂ ಹೋಗಿದ್ದೆಲ್ಲಿಗೆ, ಏನೆಲ್ಲಾ ಮಾಡಿದರು, ಎಲ್ಲಿದ್ದರು, ಅವರ ಸ್ನೇಹಿತರು ಮತ್ತು ಕುಟುಂಬದವರು ಯಾರು, ಎಂತೆಲ್ಲ ಅವರ ಜಾತಕವನ್ನು ಬಿಡಿಸಿ ಫೋಟೋಗಳ ಸಮೇತ ಸಾರ್ವಜನಿಕರ ಮುಂದಿಟ್ಟರು. ಜನ ಆ ಯುವತಿಯರಿಗೆ ಮತ್ತು ಅವರ ಕುಟುಂಬದವರಿಗೆ ಛೀಮಾರಿ ಹಾಕಿದರು. ಸಾಮಾಜಿಕ ತಾಣಗಳಲ್ಲಿ ಅವರ ತೇಜೋವಧೆಯಾಯ್ತು.

ಅವರಿಬ್ಬರೂ ಕೆಲಸ ಮಾಡುತ್ತಿದ್ದ ಶಾಲೆಗಳನ್ನು ಮುಚ್ಚಿಸಿ ಡೀಪ್ ಕ್ಲೀನಿಂಗ್ ನಡೆಸಲಾಯ್ತು. ಅವರ ಕುಟುಂಬದವರು ಎಣಿಸದ ರೀತಿಯಲ್ಲಿ ಏಕಾಏಕಿ ತಮಗೆ ಬಂದ ಕುಖ್ಯಾತಿಯಿಂದ ನೊಂದರು. ಒಬ್ಬ ತಾಯಿಯಂತೂ ತನ್ನ ಮಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಾಣಿಯಂತೆ ಚಿತ್ರಿಸಿ ಕೊಲ್ಲಲಾಗುತ್ತಿದೆ ಎಂದು ವಿಷಾದಿಸಿದರು. ಹುಡುಗಿಯರ ಹಿನ್ನೆಲೆಯನ್ನು ಜಾಲಾಡಿದ ಜನರು ಅವರ ಜನಾಂಗ ಹಿನ್ನೆಲೆ, ಅವರ ಸಮುದಾಯ ಮತ್ತು ಸಂಸ್ಕೃತಿಯೆಲ್ಲವನ್ನೂ ಆಡಿಕೊಂಡು ಇನ್ನಷ್ಟು ವಿವಾದಗಳನ್ನು ಸೃಷ್ಟಿಸಿದರು. ಹೀಗೆ ಮುಂದುವರೆದರೆ ಇದೊಂದು ಜನಾಂಗೀಯ ದ್ವೇಷ ದಳ್ಳುರಿಯ ಪ್ರಸಂಗವಾಗುತ್ತದೆ. ಆದ್ದರಿಂದ ಬಿಳಿಯರಲ್ಲದ ಬೇರೆಲ್ಲರಿಗೂ ಆಪತ್ತು ಕಟ್ಟಿಟ್ಟದ್ದು ಅನ್ನುವುದು ಆತಂಕದ ವಿಷಯವಾಯ್ತು. ಬರಿ ಅವರ ಒಂದು ಜನಾಂಗವಲ್ಲ ನಾವೆಲ್ಲಾ ಅದರಲ್ಲಿ ಸೇರಿಕೊಳ್ಳುತ್ತೀವಿ ಎಂದು ನನಗೆ ಸ್ವಲ್ಪ ಚಿಂತೆಯಾಯ್ತು. ಇದೂ ಕೂಡ ಚರ್ಚಿತವಾಗಿ ಮಾತುಕತೆ ಬೆಳೆದು ಒಂದು ದೊಡ್ಡ ವಿಷಯವಾಯ್ತು.

ಆಗ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಜನರು ಆ ರೀತಿ ನಡೆದುಕೊಳ್ಳಬಾರದು ಎಂದು ಎಚ್ಚರಿಸಿ, ಹುಡುಗಿಯರ ವಿವರಗಳನ್ನು ಬಹಿರಂಗಪಡಿಸಿ ವಿವಾದಗಳಿಗೆ ಎಡೆಮಾಡಿದ ಮಾಧ್ಯಮದವರನ್ನು ದೂಷಿಸಿದರು. ಕೇಸಿನ ವಿಚಾರಣೆ ನಡೆಯುತ್ತಿದೆಯಾದ್ದರಿಂದ ವಿಷಯವನ್ನು ಪೊಲೀಸರಿಗೆ ಬಿಟ್ಟುಬಿಡಿ ಎಂದು ವಿನಂತಿಸಿಕೊಂಡರು. ಆದರೇನು, ಸಮಯ ಮೀರಿತ್ತು. ಹುಡುಗಿಯರು ಅದಾಗಲೇ ಜನರ ನಗೆಪಾಟಲಿಗೆ ಗುರಿಯಾಗಿದ್ದರು. ಬಿಳಿಯರಲ್ಲದ ಇತರರು ‘ಸಂಸ್ಕೃತಿಹೀನರು, ಅಪರಾಧಿಗಳು, ನಮ್ಮ ದೇಶದ ರೀತಿನೀತಿಗಳನ್ನು ಪಾಲಿಸದ ಅವಿವೇಕಿಗಳು, ನಮ್ಮಂತೆ ಬದುಕಲು ಲಾಯಕ್ಕಿಲ್ಲದ ಹೀನ ಜನರು’ ಎಂದೆಲ್ಲಾ ನಿಂದನೆಗೆ ಒಳಗಾದರು.

ಕೊರೋನ ಪಾಸಿಟಿವ್ ಆದ ಹುಡುಗಿಯರು ಕಮಂಗಿಗಳಾದರೋ, ಅವರ ಕೇಸಿನ ಬಗ್ಗೆ ಮಾಧ್ಯಮದವರ ಬಳಿ ಮಾತನಾಡುತ್ತಾ ‘ಹುಡುಗಿಯರ ವರ್ತನೆಯಿಂದ ತಮಗೆ ಬಹು ನಿರಾಸೆಯಾಗಿದೆ, ಅವರದ್ದು ಕ್ರಿಮಿನಲ್ ವರ್ತನೆ’ ಎಂದ ಪೊಲೀಸ್ ಅಧಿಕಾರಿಗಳು ಕಮಂಗಿಗಳೋ, ಅವರ ಖಾಸಗಿ ವಿವರಗಳನ್ನು ಬಹಿರಂಗಗೊಳಿಸಿದರೆ ಯುವತಿಯರ ಭವಿಷ್ಯದ ಬಾಳು ಏನಾಗುತ್ತದೆ ಎನ್ನುವ ಕಾಳಜಿಯಾಗಲಿ ಅಥವಾ ಜವಾಬ್ದಾರಿಯಾಗಲಿ ಇಲ್ಲದ ಮಾಧ್ಯಮದವರು ಕಮಂಗಿಗಳೋ ಅಥವಾ ಯುವತಿಯರಿಗೆ ಇನ್ನಿಲ್ಲದಷ್ಟು ಛೀಮಾರಿ ಹಾಕಿದ ಸಾರ್ವಜನಿಕರು ಕಮಂಗಿಗಳೋ ತಿಳಿಯದು. ಈ ಕೊರೋನ ಕುಚೇಷ್ಟೆ ಇನ್ಯಾವ ಹಂತವನ್ನು ತಲುಪುತ್ತದೋ ಅದೂ ತಿಳಿಯದು.