ಕಳೆದ ಒಂದು ವಾರದಿಂದ ಕರ್ನಾಟಕದ  ಲಜ್ಜೆಗೆಟ್ಟ ರಾಜಕಾರಣದ ವರದಿಗಳನ್ನು ಟಿ.ವಿ.ಯಲ್ಲಿ, ಪತ್ರಿಕೆಗಳಲ್ಲಿ ನೋಡಿ ಬೇಸತ್ತು ಹೋಗಿದ್ದೆ. ಬಿ.ಬಿ.ಸಿ. ಹೆಚ್ಚು ಕಮ್ಮಿ ಒಂದು ತಿಂಗಳಿಂದೀಚೆಗೆ ತನ್ನ ವರದಿಗಾರನಿಂದ ಚಿಲಿಯ ಕೊಪಿಯಾತೊದಲ್ಲಿನ ಸಾನ್ ಜೋಸ್ ಚಿನ್ನ ಮತ್ತು ತಾಮ್ರದ ಕಲ್ಲು ಬಂಡೆಯ ಗಣಿಯಲ್ಲಿ ಸಿಕ್ಕಿಕೊಂಡ ೩೩ಕಾರ್ಮಿಕರ ಬಗ್ಗೆ ಸಮಾಚಾರ ಕೇಳಿ ಬಿತ್ತರಿಸುತ್ತಿತ್ತು. ಈ ವಾರವಿಡೀ ಇಲ್ಲಿನ ಜನರ, ಕಾರ್ಮಿಕ ಕುಟುಂಬದವರ ಕಾತರ, ದುಃಖ, ಆಶಾವಾದದ ಬಗ್ಗೆ ವರದಿಗಾರ ಸುದ್ದಿ ಬಿತ್ತರಿಸುತ್ತಲೇ ಇದ್ದ.

ಇದನ್ನು ನೋಡುತ್ತ ನನಗೂ ಕುತೂಹಲ ಕೆರಳಿತ್ತು. ಸಮಯ ಸಿಕ್ಕಾಗಲೆಲ್ಲ ಈ ಬಗ್ಗೆ ಏನಾಯಿತೆಂದು ಗಮನಿಸುತ್ತಿದ್ದೆ. ಬಳ್ಳಾರಿಯ ಗಣಿಗಳ ಕೋಟ್ಯಾಂತರ ರೂಪಾಯಿಬೆಲೆಬಾಳುವ ಸಂಪತ್ತನ್ನು ಕಬಳಿಸಿದ ಗಣಿಧನಿಗಳು, ಭೂಮಿತಾಯಿಯ ಮೇಲೆ ಅತ್ಯಾಚಾರ ಮಾಡುವ ನೆಲಗಳ್ಳರು, ಭ್ರಷ್ಟಾಚಾರಿಗಳು ಕರ್ನಾಟಕದಲ್ಲಿ ಜನರನ್ನು ಭ್ರಮೆ ಮತ್ತು ರಾಜಕೀಯ ಕುತಂತ್ರದಲ್ಲಿ ಸಿಲುಕಿಸುತ್ತಿರುವಾಗ ದೂರದ ಚಿಲಿ ದೇಶದ ಅಧ್ಯಕ್ಷ ವೈಯಕ್ತಿಕವಾಗಿ ಅಗರ್ಭ ಶ್ರೀಮಂತನೆನಿಸಿದ ಸಬೆಸ್ತಿನ್ ಪಿನೇರಾ ಗಣಿಗಳಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬಡ ಕಾರ್ಮಿಕರನ್ನು ರಕ್ಷಿಸುವುದಕ್ಕಾಗಿ ಸೆಣಸಾಡುತ್ತಿರುವ ರಕ್ಷಣಾ ದಳದವರ ಜೊತೆಗೆ ರಾತ್ರಿಹಗಲು ಪ್ರಯಾಸ ಪಡುತ್ತಿದ್ದ ಮತ್ತು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದ. ಚಿಲಿದೇಶದ ಗಣಿ ಮಂತ್ರಿ ಮತ್ತು ಇತರ ಕ್ಯಾಬಿನೆಟ್ ಮಂತ್ರಿಗಳು ಕೂಡ ಅಧ್ಯಕ್ಷ ಪಿನೆರಾ ಮತ್ತು ಅವನ ಪತ್ನಿಯ ಜೊತೆಗೆ ಗಣಿಯ ಪ್ರದೇಶದಲ್ಲಿ ಕಾತರದಿಂದ ಕಾಯುತ್ತಿದ್ದ ಕಾರ್ಮಿಕರ ಕುಟುಂಬದವರಿಗೆ ಸಾಂತ್ವನ ನೀಡುತ್ತಾ ಹಗಲೂರಾತ್ರಿಯೆನ್ನದೆ ಜೊತೆಗಿದ್ದರು.

ಚಿಲಿಯ ಹೆಮ್ಮೆಯ ಹೊತ್ತುಚಿಲಿ ದೇಶವೆಂದ ಕೂಡಲೇ ನಮಗೆ ನೆನಪಿಗೆ ಬರುವುದು ೧೯೭೧ರಲ್ಲಿ ನೋಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಕವಿ ಪಾಬ್ಲೊ ನೆರೂದ ಮತ್ತು ೧೯೪೫ರಲ್ಲಿ ನೊಬೆಲ್‌ಸಾಹಿತ್ಯ ಪ್ರಶಸ್ತಿ ಪಡೆದ ಗಾಬ್ರಿಯಲ್ ಮಿಸ್ತ್ರಾರ್. ಇಲ್ಲಿನ ಜನ ಅನೇಕ ವಿಧದ ಪ್ರಾಕೃತಿಕ, ರಾಜಕೀಯ ಗಂಡಾಂತರಗಳನ್ನು ಎದುರಿಸಿದವರು. ಸಮಾಜವಾದಿ ಸಲ್ವಡೋರ್ ಅಲಂಡೆಯ ಸರಕಾರವನ್ನು ಕುತಂತ್ರದಿಂದ ಕಿತ್ತುಕೊಂಡ ಅಗೊಸ್ತೊ ಪಿನಾಶೆಯ ಮಿಲಿಟರಿಸರಕಾರ ೧೯೭೩ರಿಂದ ೧೯೮೯ರ ತನಕ ಆಳಿತು. ಈ ಸಮಯದಲ್ಲಿ ಪಿನಾಶೆ ಸಹಸ್ರಾರು ಜನ ತನ್ನ ವಿರೋಧಿಗಳ ಕಗ್ಗೊಲೆ ನಡೆಸಿ ದೇಶವನ್ನ ದಟ್ಟದಾರಿದ್ರ್ಯಕ್ಕೆ ಸಿಲುಕಿಸಿದ್ದ.  ಶಾಂತಸಾಗರದ ತೀರದುದ್ದಕ್ಕೂ ೪೩೦೦ಕಿ.ಮೀ. ದೂರದ ತನಕ ಹರಡಿರುವ ದಕ್ಷಿಣ ಅಮೇರಿಕಾದ ಈ ದೇಶ ತೀರ ಇತ್ತೀಚೆಗೆ ಭೂಕಂಪ ಮತ್ತು ಸುನಾಮಿ ಅಲೆಗಳಿಂದ ತತ್ತರಿಸಿತ್ತು. ೫೦೦ಜನರು ಸತ್ತಿದ್ದರು ಸಹಸ್ರಾರು ಕಟ್ಟಡಗಳು ನೆಲಸಮವಾಗಿದ್ದವು. ಹೆಚ್ಚು ಕಮ್ಮಿ ೧೭ಮಿಲಿಯ ಜನಸಂಖ್ಯೆಯ ಈ ದೇಶ ಆರ್ಥಿಕವಾಗಿ ಬಡ ಮತ್ತು ಅಭಿವೃದ್ಧಿಶೀಲ ದೇಶ. ಇಲ್ಲಿನ ಒಟ್ಟು ಆದಾಯದ ಹೆಚ್ಚು ಕಮ್ಮಿ ೪೦ಶೇಕಡಾ ಅಂಶ ಗಣಿಗಳಿಂದ ಬರುತ್ತಿದೆ. ಜನವರಿ ೨೦೧೦ರಲ್ಲಿ ಈ ದೇಶದ ಈಗಿನ ಅಧ್ಯಕ್ಷನಾಗಿ ಚುನಾಯಿತನಾದ ಸೆಬೆಸ್ತಿಯಾ ಪಿನೇರಾ ದೊಡ್ಡ ಬಿಲಿಯನೇರ್ ಉದ್ಯಮಿ.

ಕೊಪಿಯಾತೊದ ಗುಡ್ಡಗಳಿಂದ ಆವೃತ್ತವಾದ ಮರುಭೂಮಿಯಲ್ಲಿರುವ ಸನ್ ಜೋಸ್ ಖಾಸಗಿ ಕಂಪೆನಿಯೊಂದರ ಒಡೆತನದ ಪುಟ್ಟ ಗಣಿ. ಇಲ್ಲಿನ ದೊಡ್ಡ ದೊಡ್ಡ ಗಣಿಗಳಲ್ಲಿ ಕೆಲಸಕಾರರ ಭದ್ರತೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿವೆಯಾದರೂ ಈ ಗಣಿಯಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಅಂತಹ ಕ್ರಮಗಳನ್ನೇನೂ ಕೈಗೊಂಡಿರಲಿಲ್ಲ. ೨೦೧೦ರ ಅಗೋಸ್ತು ತಿಂಗಳ ೫ನೇ ದಿನಾಂಕದಂದು ಗಣಿಯೊಳಗೆ ೬೨೨ ಮೀಟರ್ ಆಳದಲ್ಲಿ ತಾಮ್ರದ ಅದುರಿಗಾಗಿ ಅಗೆದು ಹುಡುಕುತ್ತಾ  ೩೩ಮಂದಿ ಕಾರ್ಮಿಕರ ತಂಡ ಗಣಿಯೊಳಗೆ ಪ್ರವೇಶಿಸಿತ್ತು. ಸಣ್ಣ ಅಚಾತುರ್ಯದಿಂದ ಮತ್ತು ಖಾಸಗಿ ಕಂಪೆನಿ ತನ್ನ ಕಾರ್ಮಿಕರ ರಕ್ಷಣೆಗಾಗಿ ನಿಗದಿತ ಕ್ರಮವನ್ನು ಕೈಗೊಳ್ಳದೇ ಹೋದುದರಿಂದ ಗಣಿಯ ಒಂದು ಭಾಗ ಕುಸಿದು ಪ್ರವೇಶ ದ್ವಾರವನ್ನು ಮುಚ್ಚಿತು. ಹೆಚ್ಚುಕಮ್ಮಿ ೩ಸಾವಿರ ಅಡಿಗಳ ಆಳದಲ್ಲಿದ್ದ ಈ ತಂಡ ತಮ್ಮ ಧೈರ್ಯವನ್ನು ಕಳೆದು ಕೊಂಡಿರಲಿಲ್ಲ. ತುರ್ತುಸ್ಥಿತಿಯಲ್ಲಿ  ಉಪಯೋಗಕ್ಕೆ ಬರಬಹುದೆಂದ ಮಾಡಿದ್ದ ಬಂಡೆಯ ಒಂದು ಗುಹೆಯಂತಿರುವ ಭಾಗದಲ್ಲಿ ಉಳಿದುಕೊಂಡರು. ಆಗಾಗ ಭೂಮಿಯ ಮೇಲ್ಭಾಗಕ್ಕೆ ಕೇಳಲೆಂದು ಬಂಡೆಗೆ ಬಡಿದು ಸದ್ದು ಮಾಡುತ್ತಿದ್ದರು. ಹೆಚ್ಚು ಕಮ್ಮಿ ಇವರೆಲ್ಲರೂ ತೀರಿಕೊಂಡಿದ್ದಾರೆಂದೇ ತಿಳಿದ ಇತರ ಕಾರ್ಮಿಕರು ಮತ್ತು ಕುಟುಂಬದವರಿಗೆ ಅಗೋಸ್ತು ೨೨ರಂದು ಭೂಮಿಯೊಳಗಿಂದ ಬಡಿಯುವ ಸದ್ದು ಕೇಳಿ ಇವರು ಇನ್ನೂ ಬದುಕಿದ್ದಾರೆಂದು ಗೊತ್ತಾಯಿತು. ಇದರ ನಂತರ ಹಲವಾರು ರೀತಿಯಲ್ಲಿ ಸಿಕಿಬಿದ್ದ ಕಾರ್ಮಿಕರೊಂದಿಗೆ ಸಂಪರ್ಕಕ್ಕಾಗಿ ಪ್ರಯತ್ನಿಸಿ ಅಲ್ಲಲ್ಲಿ ಸಾಧ್ಯವಾದಷ್ಟು ಭೂಮಿಯನ್ನು ಕೊರೆದು ಅವರಿಗೆ ನೀರು, ಆಹಾರ ದೊರೆಯುವಂತೆ ಜನ ಪ್ರಯತ್ನಿಸಿದ್ದರು. ಇವರ ಪ್ರಯತ್ನ ಮತ್ತು ಕಾರ್ಯತಂತ್ರ ಸಾಧ್ಯರೂಪಕ್ಕೆ ಬಂದದ್ದು ಸೆಪ್ಟೆಂಬರ್ ೧೭ರಿಂದ. ಜರ್ಮನಿಯ ತಂತ್ರಜ್ಞರ ಸಹಾಯದಿಂದ ಕೊರೆಯುವ ಯಂತ್ರ ಮತ್ತು ಕಬ್ಬಿಣದ ರೋಪ್(ಹಗ್ಗ) ತರಿಸಲಾಯಿತು. ನೇವಿಯವರು ತಯಾರಿಸಿದ ಮನುಷ್ಯರನ್ನು ಕೊಳವೆಯ ಮೂಲಕ ಎತ್ತಿತರುವ ಸಾಮರ್ಥ್ಯದ ಸುಸಜ್ಜಿತ ಕ್ಯಪ್ಸೂಲ್ ಬಂತು.  ಈ ಕ್ಯಾಪ್ಸೂಲ್‌ಗೆ ಗ್ರೀಕ್ ಪುರಾಣಕಥೆಯಲ್ಲಿ ಬರುವ ಮತ್ತೆ ಮತ್ತೆ ಸುಟ್ಟರೂ ಎದ್ದುಬರುವ ಹಕ್ಕಿ ‘ಫಿನಿಕ್ಸ್’ನ ಹೆಸರನ್ನು ಇಡಲಾಯಿತು.

ಇಷ್ಟೆಲ್ಲ ತಯಾರಾಗಿ  ಸಿಕ್ಕಿಬಿದ್ದ ಕಾರ್ಮಿಕರು ಇರುವ ಬಂಡೆಯ ಗುಹೆಯ ಬಳಿಗೆ ಕೊಳವೆ ತಲಪುವಾಗ ಒಂದು ತಿಂಗಳು ಹಿಡಿಯಿತು. ಕೊಳವೆ ತಲಪಿದ ನಂತರದಲ್ಲಿ ಅವರಿಗೆ ಬೇಕಾದ ಆಹಾರ, ನೀರು, ಔಷಧ ಇತ್ಯಾದಿ ಅವಶ್ಯಕ ವಸ್ತುಗಳನ್ನು ಮೇಲಿನಿಂದ ಕಳುಹಿಸತೊಡಗಿದರು. ಆದರೂ ಅಚ್ಚರಿಯ ಸಂಗತಿಯೆಂದರೆ ೬೯ದಿನಗಳಷ್ಟು ಕಾಲ ನೆಲದಡಿಯಲ್ಲಿ ಇದ್ದರೂ ಈ ೩೩ಮಂದಿ ಕಾರ್ಮಿಕರು ಕೂಡ ಧೈರ್ಯಗುಂದಿರಲಿಲ್ಲ. ಈ ತಂಡದಲ್ಲಿ ೨೨ವರ್ಷದ ಯುವಕರಿಂದ ಹಿಡಿದು ೬೩ ವರ್ಷ ವಯಸ್ಸಿನ ಕಾರ್ಮಿಕರೂ ಇದ್ದರು. ಇವರಲ್ಲಿ ಕೆಲವರಿಗೆ ಅನಾರೋಗ್ಯ ಕಾಡಿದರೂ ಕೂಡ ಒಗ್ಗಟ್ಟಿನಿಂದ ಮತ್ತು ಧೃತಿಗೆಡದೆ ಆತ್ಮವಿಶ್ವಾಸದೊಂದಿಗೆ ಕಾಲಕಳೆದಿದ್ದರು. ಬಿಬಿಸಿ ಮತ್ತು ಸಿ.ಎನ್.ಎನ್.ನ ವರದಿಗಾರರು ಸೇರಿದಂತೆ ೨೦೦ ಮಾಧ್ಯಮ ಸಂಸ್ಥೆಗಳ ೫೦೦ಕ್ಕೂ ಮೀರಿದ ಪತ್ತಿಕಾ ಮತ್ತು ಟಿವಿ ವರದಿಗಾರರು ಸೇರಿದ್ದರು. ಲಕ್ಷಾಂತರ ಮಂದಿ ಕುತೂಹಲ ಮತ್ತು ಕಾತರದಿಂದ ನೋಡಲು ಬಂದಿದ್ದರು. ಇವರಿಗಾಗಿ ಬರಿಯ ಮರುಭೂಮಿಯಾಗಿದ್ದ ಪ್ರದೇಶ ಜನಜಂಗುಳಿ ಅಂಗಡಿ, ತಿಂಡಿ ತೀರ್ಥಗಳ ಹೋಟೆಲುಗಳು ಹುಟ್ಟಿಕೊಂಡು ಒಂದು ಪುಟ್ಟ ಪಟ್ಟಣವಾಗಿ ಮಾರ್ಪಟ್ಟಿತ್ತು. ಈ ಜನರನ್ನು ಶಿಸ್ತಿನಿಂದ ನಿಯಂತ್ರಿಸುವುದರ ಜೊತೆಗೆ ನೆಲದಡಿಯಲ್ಲಿ ಸಿಲುಕಿದ ಕಾರ್ಮಿಕರನ್ನು ಮೇಲೆತರುವ ಕಾರ್ಯತಂತ್ರವನ್ನು ರೂಪಿಸುತ್ತಾ ರಕ್ಷಣಾ ದಳದ ಸದಸ್ಯರು, ತಂತ್ರಜ್ಞರು ಹಗಲುರಾತ್ರಿಯೆನ್ನದೆ ದುಡಿಯುತ್ತಿದ್ದರು. ಇವರನ್ನು ಹುರಿದುಂಬಿಸಿ ಪ್ರೋತ್ಸಾಹಿಸುವ ಸಲುವಾಗಿ ಸ್ವತಹ ದೇಶದ ಅಧ್ಯಕ್ಷ ಸೆಬಸ್ತಿಯಾ ಪಿನೆರಾ ದಂಪತಿಗಳು ಆಗಮಿಸಿದ್ದರು. ಜೊತೆಗೆ ಗಣಿವ್ಯವಹಾರಗಳ ಮಂತ್ರಿ ಮತ್ತು ಸಿಬ್ಬಂದಿಗಳೂ ಹಾಜರಿದ್ದರು.
ಗಣಿಯಿಂದ ಹೊರಬಂದ ಗೋಮೆಝ್ನೆಲದಡಿಯ ಬಂಡೆಯೊಳಗಿದ್ದ ಕಾರ್ಮಿಕರ ಚಲನವಲವನ್ನು ನೋಡಲು ವೀಡಿಯೋ ತಂತ್ರಜ್ಞಾನ ಬಳಸಿ ಟಿವಿಯಲ್ಲಿ ನೋಡುವುದಕ್ಕೆ ಕುಟುಂಬದ ಜನರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದಾಗ ಆಪ್ತ ಮಿತ್ರರು, ಕುಟುಂಬದವರಿಗೆ ಆದ ಸಂತೋಷಕ್ಕೆ ಪಾರವಿಲ್ಲವಾಗಿತ್ತು. ಕುಟುಂಬದ ಹತ್ತಿರದ ಸಂಬಂಧಿಗಳೊಂದಿ ವೀಡಿಯೋಗ್ರಾಫಿಕ್ ಮಾತುಕತೆಗೂ ಕ್ಷಣಕಾಲ ಅವಕಾಶ ಮಾಡಿಕೊಡಲಾಯಿತು.

೧೩ನೇ ಅಕ್ಟೋಬರ್ ಬುಧವಾರ ಅಲ್ಲಿ ರಾತ್ರಿ ಹತ್ರರ ಸುಮಾರಿಗೆ ಫಿನಿಕ್ಸ್ ಕ್ಯಾಪ್ಸೂಲ್ ರಕ್ಷಣಾ ದಳದ ನುರಿತ ಸದಸ್ಯನೊಬ್ಬನನ್ನು ಹೊತ್ತುಕೊಂಡು ೬೨೨ ಮೀಟರ್ ಆಳಕ್ಕೆ ಸಾಗಿತು. ಕಾರ್ಮಿಕರಿದ್ದಲ್ಲಿಗೆ ತಲಪಲು ಹೆಚ್ಚುಕಮ್ಮಿ ೨೨ ನಿಮಿಷಗಳು ತಗಲಿದವು.  ರಕ್ಷಕ ಸದಸ್ಯನನ್ನು ಕಂಡ ಕೂಡಲೇ ೬೯ದಿನಗಳ ನಂತರ ಪ್ರಥಮ ಬಾರಿಗೆ ಮನುಷ್ಯನೊಬ್ಬನನ್ನು ಕಂಡ ಕಾರ್ಮಿಕರ ಆನಂದಕ್ಕೆ ಪಾರವಿಲ್ಲವಾಯಿತು. ಪರಸ್ಪರ ಬಿಗಿದಪ್ಪಿ ಅಭಿನಂದನೆಗಳನ್ನು ಸಲ್ಲಿಸಿಕೊಂಡರು. ಒಳಗೆ ೩೩ಡಿಗ್ರಿಯಷ್ಟು ಉಷ್ಣತೆಯಿದ್ದದ್ದರಿಂದ ತೇವಾಂಶವೂ ಇದ್ದುದರಿಂದ ಕಾರ್ಮಿಕರು ಬಟ್ಟೆ ಬಿಚ್ಚಿಟ್ಟು ಬರಿಯ ಚಡ್ಡಿ ತೊಟ್ಟುಕೊಂಡಿದ್ದರು. ಅವರು ಆಚೀಚೆ ನಡೆದಾಡುತ್ತಾ ಚಟುವಟಿಕೆ ಮತ್ತು ಶಿಸ್ತಿನಿಂದ ಇದ್ದರು. ಮೇಲೆ ಹೋಗುವ ಅವಕಾಶ ಬಂದಾಗ ತಾನುಮುಂದು ತಾನುಮುಂದೆಂದು ಜಗ್ಗಾಡದೆ ಶಿಸ್ರಿನಿಂದ ನಿಂತಿದ್ದರು. ರಕ್ಷಣಾ ದಳದ ವ್ಯಕ್ತಿ ಕ್ಯಾಪ್ಸೂಲನ್ನು ಬಳಸುವ ಕ್ರಮ, ಮುನ್ನೆಚ್ಚರಿಕೆ ಮುಂತಾದವನ್ನು ವಿವರಿಸಿದ ನಂತರ ಯಾರು ಹೆಚ್ಚು ಆರೋಗ್ಯವಂತರಾಗಿದ್ದರೋ ಅವರು ಕೊನೆಗೆ ಹೋಗುವುದೆಂದೂ ಅನಾರೋಗ್ಯದಲ್ಲಿದ್ದವರು ಮೊದಲು ಹೋಗಬೇಕೆಂದೂ ನಿರ್ಧರಿಸಲಾಯಿತು. ಮೇಲೆ ಆರೋಗ್ಯಾಧಿಕಾರಿಗಳು ಮತ್ತು ವೈದ್ಯರು, ಮನಶ್ಶಾಸ್ತ್ರಜ್ಞರು ಇವರ ಆರೈಕೆಗಾಗಿ ತಯಾರಾಗಿದ್ದರು.

ಕ್ಯಾಪ್ಸೂಲಿನಲ್ಲಿ ಮೊದಲಿಗೆ ೩೧ವರ್ಷ ವಯಸ್ಸಿನ ಶ್ವಾಸಕೋಶದ ಕಾಯಿಲೆಯುಳ್ಳ ಫ್ಲೊರೆನ್ಸಿಯೋ ಅವೆಲೋಸ್‌ನನ್ನು ಕಳುಹಿಸುವುದು ಎಂದು ನಿಶ್ಚಯಿಸಲಾಗಿ ಪ್ರಯಾಣಕ್ಕೆ ಸಿದ್ಧಪಡಿಸಲಾಯಿತು. ಅವನಿಗೆ ಬಟ್ಟೆತೊಡಿಸಿ ತಲೆಗೆ ಹೆಲ್ಮೆಟ್ ಮತ್ತು ಒಮ್ಮೆಲೇ ಹೊರಗಿನ ಬೆಳಕನ್ನು ನೋಡಲು ಅನುಕೂಲವಾಗುವಂತೆ ಕಣ್ಣಿಗೆ ವಿಶೇಷವಾಗಿ ತಯಾರಿಸಿದ ತಂಪು ಕನ್ನಡಕವನ್ನು ತೊಡಿಸಲಾಯಿತು. ಕ್ಯಾಪ್ಸೂಲಿನ ಬಾಗಿಲು ತೆರೆದು ನಿಲ್ಲಿಸಿ ಹರ್ಷೋಲ್ಲಾಸದೊಂದಿಗೆ ಕಳಿಸಿಕೊಡಲಾಯಿತು. ಚಿಲಿಯ ಕಾಲಮಾನ ಹೆಚ್ಚುಕಮ್ಮಿ ೧೨ಗಂಟೆ ರಾತ್ರಿ (ಇಲ್ಲಿ ಬೆಳಗ್ಗೆ ೮.೪೦ಕ್ಕೆ) ಮೊದಲನೆಯ ಕಾರ್ಮಿಕ ಫ್ಲೊರೆನ್ಸಿಯೋ ಅವೆಲೋಸ್ ಸುರಕ್ಷಿತವಾಗಿ ಮೇಲಕ್ಕೆ ಬಂದ. ಅಲ್ಲೆಲ್ಲ ಹರ್ಷೋದ್ಗಾರ ಝೀ…ಝೀ….ಝೀ, ಲೀ…ಲೀ…ಲೀ… ಎಂಬ ಜೈಕಾರ ಕೂಗಲಾಯಿತು. ಗಣಿ ಪ್ರದೇಶವಿಡೀ ತುಂಬಿದ ಜನರ ಆನಂದಕ್ಕೆ ಪಾರವಿಲ್ಲವಾಯಿತು. ಮೊದಲ ಕಾರ್ಮಿಕನನ್ನು ಬಿಗಿದಪ್ಪಿ ದೇಶದ ಅಧ್ಯಕ್ಷ ಪಿನೆರಾ ಸ್ವಾಗತಿಸಿದ. ಜೊತೆಗೆ ಅವನ ಪತ್ನಿ ಮತ್ತು ಮಕ್ಕಳು ಕುಟುಂಬದ ಸದಸ್ಯರು ಸೇರಿಕೊಂಡು ಆಲಂಗಿಸಿದರು. ಕೂಡಲೇ ಅವನನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ವೈದ್ಯರು ಅಲ್ಲೆ ಇದ್ದ ತಾತ್ಕಾಲಿಕ ಆಸ್ಪತ್ರೆಗೆ ಕೊಂಡೊಯ್ದರು. ಜನರೆಲ್ಲ ಶಿಸ್ತಿನಿಂದ ನಿಂತು ಚಿಲಿರಾಷ್ಟ್ರಗೀತೆ ಹಾಡಿದರು.
“ನಮ್ಮಲ್ಲಿ ಹೆಚ್ಚಿನ ಮಂದಿ ನಂಬಿಕೆಯನ್ನು ಕಳಕೊಂಡಿದ್ದೆವು. ಕಾರ್ಮಿಕರ ಕುಟುಂಬದೊಂದಿಗೆ ಸಾಂತ್ವನ ನೀಡುವುದಕ್ಕಾಗಿ ಇಡೀ ದೇಶವೇ ಒಗ್ಗಟ್ಟಾಗಿ ನಿಂತಿದೆ. ನಮ್ಮ ಕಾರ್ಮಿಕರು ಹೊಂದಿರುವ ಧೈರ್ಯ, ಸಾಹಸ, ಶಿಸ್ತು, ಸಹನೆಯ ಗೆಲುವಿದು. ನಮ್ಮ ರಕ್ಷಣಾದಳದವರ ಪರಿಶ್ರಮದ ಗೆಲುವಿದು.” ಎಂದು ಅಧ್ಯಕ್ಷ ಪಿನೆರಾ ಜನರನ್ನು ಹುರಿದುಂಬಿಸುತ್ತಾ ಮಾತಾಡಿದ. ಮತ್ತೆ ಒಂದೊಂದಾಗಿ ಕಾರ್ಮಿಕರು ಮೇಲಕ್ಕೆ ತರಲಾಯಿತು. ಕೊನೆಯದಾಗಿ ತಂಡದ ಫೋರ್‌ಮೆನ್ ನಾಯಕ ಲೂಯಿಸ್ ಉಝುವಾ ಮೇಲಕ್ಕೆ ಬರುವಾಗ ಸರಿಯಾಗಿ ೭೦ ದಿನಗಳಾಗಿತ್ತು. ಅವನು ನಿಜಕ್ಕೂ ತಂಡದ ನಾಯಕನೆನಿಸಿದವನು ತನ್ನ ಎಲ್ಲ ಕಾರ್ಮಿಕ ಸಂಗಾತಿಗಳಿಗೆ ಧೈರ್ಯನೀಡುತ್ತಾ ಹುರುಪಿನಿಂದ ಇದ್ದು ಎಲ್ಲರ ಒಳಿತಿಗಾಗಿ ಶ್ರಮಿಸಿದ್ದ. ಅವನು ಮೇಲಕ್ಕೆ ಬಂದವನೇ ’ನನ್ನ ಜೀವಮಾನದ ಅತ್ಯಂತ ದೀರ್ಘ ಪಾಳಿ(ಶಿಫ್ಟ್)’ ಎಂದ. ಅವನ ಯವಕ ಮಗ ಕಣ್ಣುತುಂಬಿ ತನ್ನ ತಂದೆಯನ್ನು ನೆಲದ ಮೇಲೆ ಕಾದಿದ್ದವರುಪ್ರೀತಿಯಿಂದ, ಹೆಮ್ಮೆಯಿಂದ ನೋಡುತ್ತಿದ್ದ. ಅಧ್ಯಕ್ಷ ಪಿನೆರಾ ಅವನನ್ನು ಬಿಗಿದಪ್ಪಿ ಶುಭಹಾರೈಸಿದ.
ನೆಲದಡಿಯಲ್ಲಿ ಸಿಲುಕಿಕೊಂಡ ೩೩ಕಾರ್ಮಿಕರು ಎರಡುದಿನಗಳ ಸತತ ಪ್ರಯತ್ನದಿಂದ ೭೦ದಿನಗಳ ನಂತರ ಸುರಕ್ಷಿತವಾಗಿ ಮೇಲೆ ಬಂದಿದ್ದು ಎಲ್ಲರಲ್ಲೂ ಉತ್ಸಾಹ ಮೂಡಿತ್ತು. ಬೆಲೂನುಗಳ ರಾಶಿ ಹಾರಾಡಿಸುತ್ತಾ ಉತ್ಸಾಹದಿಂದ ಕುಣಿಯುತ್ತಾ, ರಾಷ್ಟ್ರಗೀತೆಯನ್ನು ಹಾಡುತ್ತಾ, ಖುಶಿಯಿಂದ ಕುಣಿಯುವ ಅಲ್ಲೊಂದು ದೊಡ್ಡ ಉತ್ಸವದ ವಾತಾವರಣ ಮೂಡಿತ್ತು.

ನೋಡಿ, ನಮ್ಮ ರಾಜಕೀಯ ಗಣಿಯಲ್ಲಿ ಮುಳುಗಿರುವ ಇದೇ ಹೊತ್ತಲ್ಲಿ  ಚಿಲಿಯ ರಾಜಕಾರಣಿಯೊಬ್ಬ ಗಣಿಯಲ್ಲಿ ಮರಣಹೊಂದಬೇಕಿದ್ದವರನ್ನು ಬದುಕಿಸಲು ಹೆಣಗುತ್ತಿದ್ದ!

ಈ ಮಧ್ಯೆ ಕಾರ್ಮಿಕನೊಬ್ಬನಿಗೆ ಮಗು ಹುಟ್ಟಿತ್ತು. ಅದಕ್ಕೆ ಸ್ಪಾನಿಷ್ ಹೆಸರು ‘ಎಸ್ತನೀನಾ’

ಎಸ್ತನೀನಾ ಅಂದೆ ಭರವಸೆ ಎಂದು ಅರ್ಥವಂತೆ!