ಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ ಹೇಗೆ ತಮ್ಮ ಸ್ವಾರ್ಥಕ್ಕಾಗಿ ಹೋರಾಟದ ಹೆಸರಲ್ಲಿ ಗದ್ದುಗೆಯನ್ನು ಹೇಗೆ ಹಿಡಿದರು ಎಂಬೆಲ್ಲ ಆಲೋಚನೆ ಮೂಡಿಸುತ್ತ ಸಾಗುತ್ತದೆ. ಈ ರಾಜಕೀಯ ಎನ್ನುವ ಉಸುಕಿನ ಕ್ಷೇತ್ರವು ಒಮ್ಮೆ ಒಳಹೊಕ್ಕವರನ್ನು ತನ್ನ ಕಬಂಧ ಬಾಹುವಿನ ಮೂಲಕ, ಲಾಲಸೆಗಳ ಜಾಲದಿಂದ ಹೇಗೆ ಪಥದಿಂದ ವಿಮುಖವಾಗಿಸುತ್ತದೆ ಎನ್ನುವುದು ತಿಳಿಯದ್ದೇನಲ್ಲ.
ಲತಾ ಗುತ್ತಿ ಕಾದಂಬರಿ “ಚದುರಂಗ” ಕುರಿತು ತೇಜಸ್ವಿನಿ ಹೆಗಡೆ ಬರಹ

ಲೇಖಕಿ ಲತಾಗುತ್ತಿಯವರ ‘ಚದುರಂಗ’ 1975ರ ತುರ್ತುಪರಿಸ್ಥಿತಿಯ ಪೂರ್ವೋತ್ತರ ಕಥನವನ್ನು ಹೇಳುವ ಕಾದಂಬರಿಯಾಗಿದೆ. ಅವರ ‘ಕರಿನೀರು’ ಕಾದಂಬರಿ ನಮ್ಮ ಸ್ವಾತಂತ್ರ್ಯ ಹೋರಾಟದ ‘ಇತಿಹಾಸ’ದ ಘಟ್ಟವನ್ನು ತೆರೆದಿಟ್ಟಿದ್ದರೆ, ಪ್ರಸ್ತುತ ಕಾದಂಬರಿ 75ರ ಆಸುಪಾಸಿನ ರಾಜಕೀಯ ಒಳಸುಳಿಗಳನ್ನು, ಒಳಿತು-ಕೆಡುಕುಗಳನ್ನು ನಿಷ್ಪಕ್ಷವಾಗಿ ದಾಖಲಿಸುವ ಒಂದು ಪ್ರಯತ್ನ ಎನ್ನಬಹುದು.

(ಲತಾ ಗುತ್ತಿ)

ತುರ್ತುಪರಿಸ್ಥಿತಿ ಎಂದರೆ ಎಲ್ಲರಿಗೂ ಗೊತ್ತಿರುವಂಥದ್ದೇ. ಶಾಲೆಗಳಲ್ಲಿ ನಮಗೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು 75ರಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದರು ಎಂದಷ್ಟೇ ಕಲಿಸಲಾಗಿತ್ತು. ಆದರೆ, ಈ ಒಂದು ರಾಜಕೀಯ ತೀವ್ರ ಬಿಕ್ಕಟ್ಟನ್ನು ದೇಶದ ಮೇಲೆ ಹೇರಲು ಏನೆಲ್ಲ ಕಾರಣಗಳು, ಪೂರ್ವಭಾವಿ ಘಟನೆಗಳು ಕಾರಣವಾದವು ಎಂಬುದನ್ನು ಆ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಎಂ.ಎ. ವ್ಯಾಸಂಗ ಮಾಡುತ್ತಿದ್ದ ಲೇಖಕಿ ಬಿಚ್ಚಿಡುತ್ತಾ ಹೋಗಿದ್ದಾರೆ. ಅವರು ತಮ್ಮ ಅನುಭವಕ್ಕೆ ಬಂದ, ತಾನು ನೋಡಿದ, ಕೇಳಿದ, ಓದಿದ, ಚರ್ಚಿಸಿದ ಎಲ್ಲ ಸಂಗತಿಗಳ ಒಟ್ಟೂ ಸಾರವೇ ‘ಚದುರಂಗ’ ಎನ್ನಬಹುದು.

ಇದು ಕೇವಲ ಎಮರ್ಜೆನ್ಸಿಯ ಘಟನಾವಳಿಗಳನ್ನು ಹೇಳುವ ಕಾದಂಬರಿಯಾಗಿ ಮಾತ್ರ ಉಳಿಯುವುದಿಲ್ಲ. ಅದಕ್ಕೂ ಮುನ್ನ ದೇಶದೊಳಗೆ ಏನೆಲ್ಲ ವಿಪ್ಲವಗಳು ಆಗುತ್ತಿದ್ದವು, ಸಾಮಾಜಿಕ ತಲ್ಲಣಗಳು, ಕ್ರಾಂತಿಗಳು, ಜನಜೀವನ ಹೇಗಿತ್ತು, ಜನರ ಮನೋಭಾವ, ಆಚರಣೆ, ಮೂಢತೆ ಎಲ್ಲವೂ ಯಾವ ರೀತಿ ರಾಜಕೀಯ ಬಿಕ್ಕಟ್ಟಿಗೆ ಕೊಡುಗೆ ಕೊಡುತ್ತ ಹೋಗಿದ್ದವು ಎಂಬುದನ್ನೆಲ್ಲ ಅವರು ‘ರುದ್ರಾಪುರ’ ಎಂಬ ಪುಟ್ಟ ಊರಿನ ಜನರ ಸಾಮಾಜಿಕ ಜೀವನದ ವಿವರಣೆಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಪ್ರಸ್ತುತ ನಾನು ಈ ಕಾದಂಬರಿಯಲ್ಲಿ ಮೂರು ವಿಂಗಡನೆಯನ್ನು ಗುರುತಿಸಿ, ಆ ಮೂಲಕ ನಾನು ಅರ್ಥೈಸಿಕೊಂಡಿದ್ದು ಹೀಗೆ:

  1. ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಓರ್ವ ಪ್ರಧಾನಿ ತನ್ನ ಆಸುಪಾಸಿನ ಹಿತೈಶಿಗಳ ಮಾತಿಗೆ ಸಿಲುಕಿ ಹೇರುವ ಎಮರ್ಜೆನ್ಸಿ ಮತ್ತು ಅದರಿಂದಾಗುವ ದೌರ್ಜನ್ಯ ಮತ್ತು ಸಾಮಾಜಿಕ ಪಲ್ಲಟಗಳು
  2. ಜಮೀನ್ದಾರಿ ಪದ್ಧತಿಯ ಕರಾಳತೆಗೆ ನಲುಗಿದ ಜನತೆಗಾಗಿ, ಬಡ ರೈತರ ನ್ಯಾಯಕ್ಕಾಗಿ ಅಂದು ಹುಟ್ಟಿದ್ದ ನಕ್ಸಲಿಸಂ ಮುಂದೆ ನಡೆದಂತೇ ತೆಗೆದುಕೊಂಡ ಭೀಕರ ಸ್ವರೂಪ, ಅದು ಸಾಮಾಜಿಕ ಜೀವನದಲ್ಲಿ ತಂದ ಬದಲಾವಣೆ ಮತ್ತು ಕ್ರಮೇಣ ಅದು ಬದಲಾಯಿಸಿದ ಪಥ.
  3. ಸಮಾಜವಾದಿ ಪಕ್ಷದ (Socialism) ಉತ್ತುಂಗತೆ ಮತ್ತು ಕ್ರಮೇಣ ಬದಲಾದ ಅದರ ಸ್ವರೂಪ.

ಯಾವುದೇ ಇಸಂ/ಸಿದ್ಧಾಂತವು ಆರಂಭವಾಗುವುದು ಹೋರಾಟದ ಗುರಿಯೊಂದಿಗೇ. ಬ್ರಿಟೀಶರ ಸಹಸ್ರಾರು ವರ್ಷಗಳ ಅನ್ಯಾಯ, ದೌರ್ಜನ್ಯದ ವಿರುದ್ಧ ದಂಗೆ ಎದ್ದ ಜನರ ರಾಷ್ಟ್ರೀಯತೆಯ, ಏಕತೆಯ ಭಾವ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಯಾಯಿತು. ಆದರೆ ಅಸಂಖ್ಯಾತ ಜೀವಬಲಿಯೊಂದಿಗೆ ದೊರೆತ ಸ್ವಾತಂತ್ರ್ಯದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ, ಸಂಭಾಳಿಸುವ ದೃಢತೆಯನ್ನು, ದೂರದೃಷ್ಟಿತ್ವವನ್ನು ತೋರುವಲ್ಲಿ ಎಡವಿದೆವು. ದೇಶದ ಹಿತವನ್ನು ಸ್ವಾರ್ಥ ರಹಿತವಾಗಿ ಕಾಪಿಡುವ, ಭಾರತೀಯತೆಯ ಬೇರಿನೊಳಗಿಳಿದು ಅಂದು ಮೇಲ್ಮೈಗೆ ಮಸುಕಾಗಿದ್ದ ವಿಶಾಲತೆ, ಉದಾತ್ತತೆಯನ್ನು ಕಂಡು ಹೊರತೆಗೆವ, ತರತಮ ಭಾವವನ್ನು ಕೆಡವಿ ಸಮತೆ ತರುವ ನಾಯಕರ ಕೊರತೆಯು ಎದ್ದುಕಂಡಿತು. ಇದರಿಂದಾಗಿ ಒಂದೊಂದೇ ಸಂಕಷ್ಟಗಳಿಗೆ, ಚೀನಾ, ಪಾಕಿಸ್ತಾನ ಯುದ್ಧಗಳಿಗೆ ನಮ್ಮನ್ನು ಸಿಲುಕಿಸುತ್ತಾ ಹೋಯಿತು. ಅಲ್ಲಲ್ಲಿ ಗಟ್ಟಿ ನಿರ್ಧಾರ, ದೇಶದ ಹಿತ ಕಾಪಿಡುವ ಉದ್ದೇಶದ ಮನಸುಗಳು ಆಳಲು ಹೊರಟರೂ ಅವರ ಕಾಲಘಟ್ಟ ಅಲ್ಪಾಯುವಾಗಿ ಮತ್ತೆ ಅತಂತ್ರತೆ ಆವರಿಸಿತು. ಇಂತಹ ಸಮಯದಲ್ಲಿ ಆಂಗ್ಲರ ಕಪಿಮುಷ್ಟಿಯಿಂದ ಹೊರ ತರಲು ದೊಡ್ಡ ಕೊಡುಗೆ ನೀಡಿತ್ತು ಎನ್ನಲಾದ  ಕಾಂಗ್ರೆಸ್ ಪಕ್ಷದ ಇಂದಿರಾಗಾಂಧಿಯವರೇ ಮತ್ತೊಮ್ಮೆ ಸ್ವಾತಂತ್ರ್ಯ ಹರಣ ಮಾಡುವ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ ಹುಟ್ಟಿದ್ದ ದಂಗೆಯಲ್ಲಿ ಎಲ್ಲ ಸಿದ್ಧಾಂತದವರೂ ಏಕಮತದಲ್ಲಿ ಕೈಜೋಡಿಸಿದ್ದರು! ಕಮ್ಯುನಿಸ್ಟರು, ಸಮಾಜವಾದಿಗಳು, ರಾಷ್ಟ್ರವಾದಿಗಳು – ಹೀಗೆ ಎಲ್ಲರೂ ಒಗ್ಗೂಡಿದ ಹೋರಾಟಗಳ ಕುರಿತು ಇಲ್ಲಿ ವಿವರಣೆ ಬರುತ್ತದೆ.

ತನ್ನ ಕುಟುಂಬದ ಹಾಗೂ ಊರಿನ ಜನರ ಮೇಲಾಗುವ ವಿವಿಧ ರೀತಿಯ ದೌರ್ಜನ್ಯವನ್ನು ಕಮುನಿಸ್ಟ್ ಸಿದ್ಧಾಂತವನ್ನು ಅಪ್ಪಿಕೊಂಡಿದ್ದ ನಿಸ್ವಾರ್ಥಿ, ಸಮಾಜಮುಖಿ ವ್ಯಕ್ತಿಯಾಗಿದ್ದ ಪ್ರೊ. ಗುರುಪಾದ ಮತ್ತು ಆತನ ಸಹೃದಯ ಸ್ನೇಹಿತರ ಹೋರಾಟ, ಬವಣೆಗಳ ಮೂಲಕ ಇಲ್ಲಿ ತೆರೆದಿಡುತ್ತಾ ಹೋಗಲಾಗಿದೆ. ಅಂದು ಬಹುತೇಕ ಎಲ್ಲ ರೀತಿಯ ಸಿದ್ಧಾಂತಿಗಳ ಹೋರಾಟದಲ್ಲಿದ್ದದ್ದು ಯಾವುದೇ ಅಧಿಕಾರದ ಲಾಲಸೆಯಲ್ಲ, ತಮ್ಮ ಸಿದ್ಧಾಂತವನ್ನು ಹೇರುವ ಹಪಾಹಪಿಯೂ ಇರಲಿಲ್ಲ, ಬದಲಿಗೆ ಆಗುತ್ತಿರುವ ದಬ್ಬಾಳಿಕೆಯ ವಿರುದ್ಧದ ಕೂಗಾಗಿತ್ತು ಎನ್ನುವುದನ್ನು ಕಾಣುತ್ತೇವೆ.

ಪಶ್ಚಿಮ ಬಂಗಾಲದ ಡಾರ್ಜಿಲಿಂಗಿನ ನಕ್ಸಲ್ ಬರಿ ಎನ್ನುವ ಊರಿನಲ್ಲಿ ಚಾರು ಮಜುಂದಾರ ಎನ್ನುವ ಕ್ರಾಂತಿಕಾರಿಯು ಅಲ್ಲಿಯ ಬಡ ರೈತರು, ಬುಡಕಟ್ಟು ಜನರ ಮೇಲೆ ಜಮೀನ್ದಾರರು, ಬಂಡವಾಳ ಶಾಹಿಗಳು ನಡೆಸುತ್ತಿದ್ದ ಅವ್ಯಾಹತ ದೌರ್ಜನ್ಯವನ್ನು ಹಿಂಸೆಯ ಮೂಲಕ ಮಾತ್ರ ಎದುರಿಸಬಹುದು ಎಂದು ನಿರ್ಧರಿಸಿ ರಕ್ತಸಿಕ್ತ ಕ್ರಾಂತಿಕಾರಿ ಹೋರಾಟಕ್ಕೆ ನುಗ್ಗಿದ್ದು. ಆ ಮೂಲಕ ನಲುಗಿದ ಜನತೆಗೆ ನ್ಯಾಯ ಕೊಡುತ್ತಾ, ಹಿಂಸೆಗೆ ಪ್ರತಿಹಿಂಸೆಯೊಂದೇ ಮದ್ದು ಎಂಬಂತೇ ಎಲ್ಲೆಡೆ ಈ ಸಿದ್ಧಾಂತವನ್ನು ಪಸರಿಸಿದ್ದು. ಇದೆಲ್ಲವನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತಾ, ಹೇಗೆ ಈ ಒಂದು ಸಿದ್ಧಾಂತ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು ಎನ್ನುವುದನ್ನೂ ತೋರಲಾಗಿದೆ.

ಉದಾಹರಣೆಗೆ, ಹೆಣ್ಣು-ಗಂಡಿನ ನಡುವೆ ಸಮಾನತೆ, ಹೆಣ್ಮಕ್ಕಳಿಗೆ ವಿದ್ಯೆ, ಉದ್ಯೋಗ, ಆಸ್ತಿಯಲ್ಲಿ ಸಮಪಾಲು, ಗಂಡು ಮಕ್ಕಳಿಂದ ಮಾತ್ರ ಮನೆ ಬೆಳಗುವುದು, ಹೆಣ್ಣು ಶಾಪ ಎಂಬಿತ್ಯಾದಿ ಮೂಢ ನಂಬಿಕೆಗಳ ನಿವಾರಣೆ, ಅನ್ಯಾಯದ ವಿರುದ್ಧ ನಿರಂತರ ಹೋರಾಡುವುದು – ಇವೆಲ್ಲವನ್ನೂ ಗುರುಪಾದ, ಚಂದ್ರು, ಶಕುಂತಳ, ಅರವಿಂದ, ಕುಸುಮ – ಮುಂತಾದ ಪ್ರಮುಖ ಪಾತ್ರಗಳ ಕೌಟುಂಬಿಕ ಚಿತ್ರಣದ ಮೂಲಕ ನೀಡಲಾಗಿದೆ. ಅಲ್ಲದೇ, ವಿಧವಾ ವಿವಾಹ, ವೇಶ್ಯೆಯರಿಗೆ ಪುನರ್ವಸತಿ ಕಲ್ಪಿಸುವ ಮಹತ್ತರ ಹೆಜ್ಜೆಯತ್ತ ಆ ಕಾಲ ಹೇಗೆ ನಿಧಾನವಾಗಿ ತೆರೆದುಕೊಂಡಿತು ಎನ್ನುವುದನ್ನೂ ಸಮಾಜವಾದಿ ಚಿಂತನೆಗಳುಳ್ಳ, ರಾಷ್ಟ್ರವಾದಿ ಧೋರಣೆ ಹೊಂದಿದ್ದ ಪಾತ್ರಗಳ ಮೂಲಕವೂ ಕಾಣುತ್ತೇವೆ. ಹೀಗೆ ಕೇವಲ ರಾಜಕೀಯ ನಿಲುವು, ತಲ್ಲಣಗಳನ್ನು ಮಾತ್ರವಲ್ಲ ಸಾಮಾಜಿಕ ವಿಪ್ಲವಗಳನ್ನು ಗುರುತಿಸಿ ದಾಖಲಿಸಲಾಗಿದೆ.  ಅಂತೆಯೇ, ಸಮಾಜವಾದಿ ಸಿದ್ಧಾಂತವು ಇಂದಿರಾಗಾಂಧಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದರೂ, ತಮ್ಮ ವಿಶಿಷ್ಟ ಸಿದ್ಧಾಂತದ ಮೂಲಕ ಸಮಾಜದಲ್ಲಿ ಬದಲಾವಣೆ ತಂದು, ರಾಷ್ಟ್ರಹಿತದ ಗುರಿಯೊಂದಿಗೆ ಮುನ್ನುಗ್ಗುವಲ್ಲಿ ಎಡವಿದ್ದು, ಪಕ್ಷದೊಳಗಿನ ಒಳಜಗಳದಿಂದ ಮುಗ್ಗರಿಸಿದ್ದೂ ಕಾಣಿಸಿದೆ.

ಶ್ರೀಮಂತರ, ಜಮೀನ್ದಾರರ ದೌರ್ಜನ್ಯಕ್ಕೆ ನಲುಗಿದವರ ಉದ್ಧಾರಕ್ಕಾಗಿ, ಸಮಾಜದೊಳಗಿನ ಮೌಢ್ಯದ ನಿವಾರಣೆಗಾಗಿ ಹುಟ್ಟಿದ್ದ ಇಂತಹ ಕ್ರಾಂತಿಗಳು ಬಹುಶಃ ಆ ಕಾಲಕ್ಕೆ ಅನಿವಾರ್ಯವೇ ಆಗಿತ್ತು ಎನ್ನಬಹುದು. ಇಂತಹ ಅಸಮಾನತೆಯನ್ನು ಹೋಗಲಾಡಿಸುವ ರೀತಿಯ ಶಿಕ್ಷಣ, ವಿವೇಚನೆ ಸಮಾಜದೊಳಗೆ ಇಲ್ಲದ್ದು ಇದಕ್ಕೆ ಬಹುದೊಡ್ಡ ಕಾರಣವಾಗಿತ್ತು. ನಕ್ಸಲಿಸಂ ಮತ್ತು ಅದರ ಭಾಗವಾದ ಕಮ್ಯುನಿಸ್ಟ್ ಪಕ್ಷ ಹಾಗ ಸೋಶಿಯಲಿಸ್ಟ್ ಸಿದ್ಧಾಂತವುಳ್ಳ ಸಮಾಜವಾದಿ ಪಕ್ಷ ಮತ್ತು ಅದರ ತತ್ವ ಆದರ್ಶಗಳಲ್ಲೇ ಒಂದು ಭಾಗವಾಗಿ ಬೆರೆತು ಮೊಳಕೆಯೊಡೆದು ಚಿಗುರುತ್ತಿದ್ದ ರಾಷ್ಟ್ರವಾದಿ ಚಿಂತಕರ ಪಡೆ – ಹೀಗೆ ಇವರೆಲ್ಲರೂ ಒಂದಾಗಿ ಇಂದಿರಾ ಸರ್ಕಾರವನ್ನು ಕಿತ್ತೊಗೆದು ಆಮೇಲೆ ಅಧಿಕಾರಕ್ಕೆ ಬಂದರೂ, ಆಂತರಿಕ ಕಚ್ಚಾಟಕ್ಕೆ ಸಿಲುಕಿ ಎರಡು ವರ್ಷಗಳ ಒಳಗೇ ಕೆಳಗಿಳಿದಿದ್ದು, ಸೋಲಾಗಿದ್ದು ದೊಡ್ಡ ವಿಪರ್ಯಾಸವೇ!

ಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ ಹೇಗೆ ತಮ್ಮ ಸ್ವಾರ್ಥಕ್ಕಾಗಿ ಹೋರಾಟದ ಹೆಸರಲ್ಲಿ ಗದ್ದುಗೆಯನ್ನು ಹೇಗೆ ಹಿಡಿದರು ಎಂಬೆಲ್ಲ ಆಲೋಚನೆ ಮೂಡಿಸುತ್ತ ಸಾಗುತ್ತದೆ. ಈ ರಾಜಕೀಯ ಎನ್ನುವ ಉಸುಕಿನ ಕ್ಷೇತ್ರವು ಒಮ್ಮೆ ಒಳಹೊಕ್ಕವರನ್ನು ತನ್ನ ಕಬಂಧ ಬಾಹುವಿನ ಮೂಲಕ, ಲಾಲಸೆಗಳ ಜಾಲದಿಂದ ಹೇಗೆ ಪಥದಿಂದ ವಿಮುಖವಾಗಿಸುತ್ತದೆ ಎನ್ನುವುದು ತಿಳಿಯದ್ದೇನಲ್ಲ.

ಆ ದಿನಗಳ ಹೋರಾಟಗಾರರ ಬವಣೆ, ಬದುಕು, ಉನ್ನತ ಚಿಂತನೆಗಳ ಝಲಕ್ ನೋಡಿದಾಗ ಥಟ್ಟನೆ ಹೊಳೆದದ್ದೇನೆಂದರೆ – ತಮಗೆ ಮಕ್ಕಳಾದರೆ ಎಲ್ಲಿ ಆಸ್ತಿ ಕೂಡಿಡುವ ಹಂಬಲ ಬಂದು ದೇಶಕ್ಕೆ ಅನ್ಯಾಯ ಎಸೆಗಿಬಿಡಬಹುದು ಎಂಬ ಕಾರಣಕ್ಕೆ ಪತಿ-ಪತ್ನಿ ದೂರವಿದ್ದ ಸಮಾಜವಾದಿ ಜಯಪ್ರಕಾಶ್ ದಂಪತಿಗಳು ಒಂದೆಡೆಯಾದರೆ, ಎಷ್ಟು ಕೂಡಿಟ್ಟರೂ ಭ್ರಷ್ಟತೆಯ ನಶೆಯೇರಿಸಿಕೊಂಡು, ದುಡಿವ ಜನರ ದುಡ್ಡು ಲಪಟಾಯಿಸುವ, ದೌರ್ಜನ್ಯದ/ಹಿಂಸೆಯ ವಿರುದ್ಧ ನಮ್ಮ ಸಮರ ಎನ್ನುತ್ತಲೇ ಅದನ್ನು ತಮ್ಮತಮ್ಮ ರಾಜಕೀಯ ಮೇಲುಗೈಯಿಗೆ ಬಳಸುವ, ಜನಸಾಮಾನ್ಯರ ದಿಕ್ಕು ತಪ್ಪಿಸುವ, ಜಾತಿ ನಿರ್ಮೂಲನೆಯನ್ನು ಪ್ರತಿಪಾದಿಸುತ್ತಲೇ ಸದಾ ಜಾತಿಯತ್ತೆಯೇ ಆಡಿಕೊಳ್ಳುವ, ಸ್ವಂತ ಹಾಗೂ ಪರಿವಾರದ ಬೊಕ್ಕಸ ತುಂಬಿಕೊಳ್ಳುವ, ತಮ್ಮ ಮಕ್ಕಳನ್ನಷ್ಟೇ ಬೆಳೆಯುವ/ಬೆಳೆಸುವ, ಅಧಿಕಾರಕ್ಕಾಗಿ, ಆಯಕಟ್ಟಿನ ಜಾಗದಲ್ಲಿ ಉನ್ನತ ಹುದ್ದೆಗಾಗಿ ಹಪಹಪಿಸುವ, ಪ್ರಶಸ್ತಿ, ಫಲಕಗಳಿಗಾಗಿ ಬೆನ್ನು ಚಪ್ಪರಿಸುವ  ಸಮಾಜವಾದಿ, ಕಮುನಿಸಮ್, ಲಿಬರಿಲಿಸಮ್, ದೇಶಪ್ರೇಮಿ, ರಾಷ್ಟ್ರವಾದಿ – ಹೀಗೆ ಈ ಎಲ್ಲ ಸಿದ್ಧಾಂತಗಳ ಸೋಗಿನ ಈಗಿನ ಹಲವಾರು ಸ್ಯೂಡೋ ಸಿದ್ಧಾಂತಿಗಳು, ಧುರೀಣರು ಇನ್ನೊಂದೆಡೆ!

ತನ್ನ ಕುಟುಂಬದ ಹಾಗೂ ಊರಿನ ಜನರ ಮೇಲಾಗುವ ವಿವಿಧ ರೀತಿಯ ದೌರ್ಜನ್ಯವನ್ನು ಕಮುನಿಸ್ಟ್ ಸಿದ್ಧಾಂತವನ್ನು ಅಪ್ಪಿಕೊಂಡಿದ್ದ ನಿಸ್ವಾರ್ಥಿ, ಸಮಾಜಮುಖಿ ವ್ಯಕ್ತಿಯಾಗಿದ್ದ ಪ್ರೊ. ಗುರುಪಾದ ಮತ್ತು ಆತನ ಸಹೃದಯ ಸ್ನೇಹಿತರ ಹೋರಾಟ, ಬವಣೆಗಳ ಮೂಲಕ ಇಲ್ಲಿ ತೆರೆದಿಡುತ್ತಾ ಹೋಗಲಾಗಿದೆ. ಅಂದು ಬಹುತೇಕ ಎಲ್ಲ ರೀತಿಯ ಸಿದ್ಧಾಂತಿಗಳ ಹೋರಾಟದಲ್ಲಿದ್ದದ್ದು ಯಾವುದೇ ಅಧಿಕಾರದ ಲಾಲಸೆಯಲ್ಲ, ತಮ್ಮ ಸಿದ್ಧಾಂತವನ್ನು ಹೇರುವ ಹಪಾಹಪಿಯೂ ಇರಲಿಲ್ಲ.

ಯುವಕರಲ್ಲಿ ಕ್ರಾಂತಿಯ ಬೀಜ ಮೊಳೆಸಲು, ಸಮಾಜದೊಳಗಿನ ಮೌಢ್ಯತೆ ಕಳೆಯಲು, ಹೊಸ ಸಿದ್ಧಾಂತಗಳಿಗೆ ನಾಂದಿಯಾಯಿತು ಎನ್ನುವುದು ಸರಿಯೇ. ಆದರೆ ಸಮಾನತೆ, ಏಕತೆ, ಹೆಣ್ಣು-ಗಂಡು ತರತಮ ಭಾವ ಇಲ್ಲದಿರುವಿಕೆ ಇವೆಲ್ಲವೂ ಬಹಳ ಹಿಂದೆ ನಮ್ಮ ಗುರುಕಲಗಳಲ್ಲೇ ಇತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಇದನ್ನು ಮರೆತ ನಮ್ಮದೇ ಪುರುಷಪ್ರಧಾನ ಸಮಾಜ, ಹಾಗೂ ಆರ್ಥಿಕ ಗುರಿಯನ್ನಷ್ಟೇ ಒಳಗೊಂಡ ಶಿಕ್ಷಣ ನೀತಿಯಿಂದಾಗಿ, ಸಮಾಜದಲ್ಲಿ ತರತಮ ಭಾವ, ದೌರ್ಜನ್ಯ ಅತಿ ಹೆಚ್ಚಾಯಿತು. ಈ ಸತ್ಯ ಕಂಡುಕೊಂಡಿದ್ದರೆ, ವಿದೇಶಿ ನೆಲದ ಇಸಂ/ಸಿದ್ಧಾಂತಗಳು ಆ ಕ್ಷಣಕ್ಕೇನೋ ಹಬ್ಬಿ, ಕಾಲಕ್ರಮೇಣ ಈ ನೆಲದ ಸೊಗಡಿನೊಳಗೆ ಬೆರೆಯಲಾಗದೇ ಭಿನ್ನವಾಗಿಯೇ ನಿಂತು, ಸೊರಗಿ ಹೋಗುತ್ತಿರಲಿಲ್ಲ. ಮೌಢ್ಯತೆ ಕಳೆಯುವ ನೆಪದಲ್ಲೇ ನಮ್ಮೊಳಗಿನ ಒಳಿತು, ಸುಂದರ ಸಂಪ್ರದಾಯ, ಆಚಾರ, ಉದಾತ್ತ ಚಿಂತನೆಗಳನ್ನೆಲ್ಲ ಸಾರಾಸಗಟ ತಿರಸ್ಕರಿಸಿದ್ದು, ಕೆಡುಕೆಂದು ಬಿಸುಟಿದ್ದೇ ಇಂದಿನ ಅನೇಕ ಯುವಕರಲ್ಲಿ ಹತಾಶೆ, ಸೋಲಿನ ಭೀತಿ, ನಿರುತ್ಸಾಹ, ಮನೋಬಲದ ಕುಸಿತಕ್ಕೆ ಕಾರಣ ಎಂದೂ ಅನ್ನಿಸಿತು. ಬೇರನ್ನು ಕಡಿದು ಚಿಗುರನ್ನು ಹುಟ್ಟಿಸುವ ಹುಂಬ ಆಲೋಚನೆಯಿಂದಲೇ ಎಲ್ಲವೂ ಅವಸಾನ ಆಗಿದ್ದು.

ಕಮ್ಯುನಿಸಂ, ಸೋಶಯಲಿಸಂ ಇತ್ಯಾದಿ ಸಿದ್ಧಾಂತಗಳೊಳಗಿನ ಕೆಲವು ಒಳಿತನ್ನು ಸ್ವೀಕರಿಸಿ ಭಾರತೀಯತೆಯ ನಿಜವಾದ ಉದಾತ್ತ ಚಿಂತನೆಯೊಂದಿಗೆ, ಸಮಷ್ಟಿಯ, ರಾಷ್ಟ್ರಹಿತವನ್ನು ಸಾತ್ವಿಕ ಪಥದಲ್ಲಿ ಬಯಸುವ ಹೊಸ ಸಿದ್ಧಾಂತವೊಂದು ಹುಟ್ಟಿದ್ದಿದ್ದರೆ, ಭಾರತೀಯ ಸೊಗಡು, ಉತ್ತಮ ಆಚಾರಾದ ಪರಿಕಲ್ಪನೆಯೊಂದಿಗೆ ಮಿಳಿತವಾಗಿ ಸರ್ವರನ್ನೊಳಗೊಳ್ಳುವ ಪಕ್ಷವೊಂದು ಉದ್ಭವಿಸಿದ್ದರೆ, ಈ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ತರ ನಾಯಕರು ಚಿಂತಿಸಿದ್ದರೆ ಅಥವಾ ಹಾಗೆ ಆಲೋಚಿಸುವ ನಾಯಕರಿಗೆ ಅಧಿಕಾರ ದೊರಕಿದ್ದರೆ ನಮ್ಮ ದೇಶದ ಸ್ವಾತಂತ್ರ್ಯೋತ್ತರ ಇತಿಹಾಸ ಅದೆಷ್ಟೋ ಕರಾಳತೆಯಿಂದ ಪಾರಾಗುತ್ತಿತ್ತು ಎಂದೂ ಅನ್ನಿಸಿತು. ಜೆ.ಎನ್ಯು. ಅಂತಹ ವಿಶ್ವವಿದ್ಯಾಲದ ಪ್ರಸ್ತಾಪ ಬರುತ್ತದೆ ಈ ಕಾದಂಬರಿಯಲ್ಲಿ. ಅದು ಹೇಗೆ ಆ ಕಾಲಕ್ಕೆ ಪ್ರಸ್ತುತವಾಗಿತ್ತು, ಎಂದು ಮಾತ್ರ ಇಲ್ಲಿ ತೆರೆದಿಡಲಾಗಿದೆ. ಅಂತೆಯೇ ಈ ಕಾಲಘಟ್ಟದಲ್ಲಿ ಅದರ ವಿಫಲತೆಗೆ ಇರುವ ಕಾರಣವನ್ನೂ ಸಮರ್ಥವಾಗಿ ತೆರೆದಿಟ್ಟಿದ್ದರೆ ಮತ್ತೂ ಹೆಚ್ಚು ಬ್ಯಾಲನ್ಸ್ ಆಗಿ ಕಾದಂಬರಿ ಬರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ. ಅಲ್ಲದೇ, ನನಗೆ ಅನ್ನಿಸುವ ಮತ್ತೊಂದು ಬಹುಮುಖ್ಯ ಅಂಶವೇನೆಂದರೆ, ಈ ಎಲ್ಲ ಸಿದ್ಧಾಂತಗಳು ಕೇವಲ ಒಂದು ಧರ್ಮದ ಮೌಢ್ಯತೆ ಕಳೆಯುವುದರಲ್ಲೇ ಮುಳುಗಿ, ಇತರ ಮತಗಳೊಳಗಿನ ಅಸಮಾನತೆ, ಸ್ತ್ರೀ ಸಮಾನತೆ, ಅವರ ಸ್ವಾತಂತ್ರ್ಯವನ್ನು ಅನಾವರಣಗೊಳಿಸುವಲ್ಲಿ, ಸೂಕ್ತ ಶಿಕ್ಷಣದ ಮೂಲಕ ಆ ಸಮುದಾಯಗಳಲ್ಲೂ ಬದಲಾವಣೆಯನ್ನು ಅಷ್ಟೇ ವೇಗದಲ್ಲಿ ತರುವಲ್ಲಿ ಸೋತಿದ್ದೂ ಕಂಡುಬರುತ್ತದೆ.

ಕರಿನೀರು ಕಾದಂಬರಿಯಲ್ಲಿ ಲೇಖಕಿ ಮುಖಾಮುಖಿಯಾಗಿದ್ದು ಬ್ರಿಟೀಷರ ವಿರುದ್ಧ. ಹೀಗಾಗಿ ನಿರ್ಭೀತಿಯಿಂದ ಹಿಂಜರಿಕೆ ಬಿಟ್ಟು ವಾಸ್ತವಿಕತೆಯನ್ನು ಸಂಪೂರ್ಣ ಕಟ್ಟಿಕೊಟ್ಟಿದ್ದಾರೆ. ಆದರೆ ಅದೇ ಚದುರಂಗದಲ್ಲಿ ರಾಜಕೀಯ ಜಗ್ಗಾಟವನ್ನು ತೆರೆದಿಡುವಾಗ ತುಸು ಅಲ್ಲಲ್ಲಿ ಬಿಗಿಹಿಡಿದಂತೆ, ನೇರ ವಿಷಯ ಹರವಲು ಹಿಂದೇಟು ಹಾಕಿದಂತೇ ಅನ್ನಿಸಿತು. ಆದರೆ, ಆ ಸಮಯದ ಸಾಂಸಾರಿಕ, ಶೈಕ್ಷಣಿಕ, ಸಾಮಾಜಿಕ ಚಿತ್ರಣದ ಸಮಗ್ರ ವಿವರಗಳಂತೂ ನಮಗೆ ಇಲ್ಲಿ ಸಿಗುತ್ತವೆ. ಚಿಂತನೆಗೆ-ಮಂಥನಕ್ಕೆ ಹೇರಳ ಪ್ರಸಂಗಗಳನ್ನೊದಗಿಸುತ್ತದೆ.

ಹಾಂ, ಎಮರ್ಜೆನ್ಸಿ ಖಂಡಿತವಾಗಿಯೂ ದೇಶದ ಸಾರ್ವಭೌಮತ್ವದ ಮೇಲೆ, ಜನರ ನಂಬಿಕೆಯ ಮೇಲೆ ಮಾಡಿದ ಅತಿ ದೊಡ್ಡ ಪ್ರಹಾರವೇ ಆಗಿತ್ತು. ಆದರೆ ಸರಿಸುಮಾರು ಆ ಕಾಲಘಟ್ಟದಲ್ಲಿಯೇ ಜಾರಿಗೆ ಬಂದ ಉಳುವವನೇ ಭೂಮಿಗೆ ಒಡೆಯ ಎನ್ನುವ ಕಾನೂನು, ನಸಬಂದಿ ಕಾನೂನು (ಸಂತಾನ ಹರಣ ಶಸ್ತ್ರಚಿಕಿತ್ಸೆ) ಇವೆಲ್ಲ ಒಳ್ಳೆಯ ಘೋಷಣಗಳೇ ಆಗಿದ್ದವು. ದೇಶದ ಅಭಿವೃದ್ಧಿಗೆ ಬಡತನ ನಿರ್ಮೂಲನಕ್ಕೆ ಜನಸಂಖ್ಯಾಸ್ಪೋಟವನ್ನು ನಿಯಂತ್ರಣದಲ್ಲಿಡುವುದು ಅತ್ಯಗತ್ಯವೇ. ಈಗ ಮತ್ತೂ ಇದರ ಆವಶ್ಯಕತೆ ಹೆಚ್ಚಾಗಿದೆ. ಗಂಡು ಬೇಕೆಂದು ನಾಲ್ಕು ಹೆಣ್ಣಾದರೂ ಮತ್ತೆ ಗರ್ಭಿಣಿಯಾಗುವ ಶಕುಂತಳಾ ಅಂಥವರು ಈಗಲೂ ಎಲ್ಲ ಮತಗಳಲ್ಲಿಯೂ ಸಾಕಷ್ಟಿದ್ದಾರೆ. ಇನ್ನೂ ಮಕ್ಕಳೆಂದರೆ ಭಗವಂತನ ಕೊಡುಗೆ ಎಂದು ಹೇಳುವ ಮುಗ್ಧರೋ/ದಡ್ಡರೋ ಸಾಕಷ್ಟು ತುಂಬಿದ್ದಾರೆ.

ಆದರೆ, ತುರ್ತುಪರಿಸ್ಥಿತಿಯ ಸಮಯದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇದನ್ನು ಮಾಡಬೇಕಿತ್ತು. ಅಧಿಕಾರದ ಮದದಲ್ಲಿ, ದರ್ಪದಲ್ಲಿ ಎಳೆದುಕೊಂಡು ಹೋಗಿ ಭೀತರನ್ನಾಗಿಸಿ ಶಸ್ತ್ರಚಿಕಿತ್ಸೆ ನೀಡಿದ್ದು ಖಂಡನೀಯ. ಎಷ್ಟೋ ಪುರುಷರು ನಿರ್ಲಕ್ಷ್ಯದ ಆಪರೇಶನ್ನಿನಿಂದ ಪುರುಷತ್ವವನ್ನು, ಪ್ರಾಣವನ್ನೂ ಕಳೆದುಕೊಂಡಿದ್ದನ್ನು ಕೇಳಿದ್ದೆನೆ.

ಅದೇನೇ ಇದ್ದರೂ ನಮ್ಮೊಳಗಿನ ಜಗಳದಿಂದಲೇ ವಿದೇಶಿಗರು ನಮ್ಮನ್ನಾಳಿದ್ದು. ಉದ್ದೇಶ ಒಳಿತಾಗಿದ್ದರೂ ಅದನ್ನು ಜಾರಿಗೆ ತರುವ ದಾರಿ, ಸಂಕಲ್ಪ, ಮನೋಬಲ ಎಲ್ಲಕ್ಕಿಂತ ಮುಖ್ಯವಾಗಿ ಜನಸಾಮಾನ್ಯ ಬೆಂಬಲ ಅದೆಷ್ಟು ಅಗತ್ಯ ಎನ್ನುವುದನ್ನೂ ನಾವು ತುರ್ತುಪರಿಸ್ಥಿತಿಯ ಪೂರ್ವೋತ್ತರ ಮತ್ತು ಆನಂತರದ ಕಾಲಘಟ್ಟದಲ್ಲೂ ಕಾಣಬಹುದು. ಕಾದಂಬರಿ ಅದನ್ನೆಲ್ಲ ಇಲ್ಲಿ ವಿಷದವಾಗಿ ಚರ್ಚಿಸಿದೆ. ಆದರೆ, ನಡುವೆ ಅಲ್ಲಲ್ಲಿ ಬರುವ ಕೆಲವು ಅನಗತ್ಯ ಸಾಂಸಾರಿಕ ವಿವರಣೆಗಳಿಗೆ ಕತ್ತರಿ ಹಾಕಿ, ಕೊರೋನಾ ಕಾಲಘಟ್ಟದ ಚಿತ್ರಣ, ಚರ್ಚೆ, ಬದಲಾದ ಶೈಕ್ಷಣಿಕ ವ್ಯವಸ್ಥೆಯನ್ನು, ವಿಶ್ವವಿದ್ಯಾನಿಲಯಗಳ ಪಾತ್ರವನ್ನು ಚರ್ಚಿಸುವ ಅಂತಿಮ ಭಾಗದಲ್ಲಿ ಮತ್ತಷ್ಟು ವಿವರಗಳನ್ನು ದಾಖಲಿಸಿದ್ದರೆ ಮತ್ತೂ ಚೆನ್ನಾಗಿರುತ್ತಿತ್ತು ಎಂದೆನ್ನಸಿತು.

ಇನ್ನು, ರಾಜಕೀಯ ದಾವ್ ಪೇಚುಗಳಿಗೆ ಬಲಿಯಾಗುವವರಲ್ಲಿ ಹೆಚ್ಚಿನವರು ಮಹಿಳೆಯರೇ ಎನ್ನುವುದು ಮತ್ತೊಂದು ಕಟು ಸತ್ಯ! ಈ ವಿಷಯವನ್ನೂ ಶಶಿ ಎನ್ನುವ ಮಹಿಳೆಯ ಅಸಹಾಯಕ ಪರಿಸ್ಥಿತಿಯ ಮೂಲಕ ವಿವರಿಸುತ್ತದೆ ಈ ಕಾದಂಬರಿ. ರಾಜಕೀಯ ವ್ಯಕ್ತಿಗಳು, ಸಮಾಜದಲ್ಲಿ ಹೆಸರು ಮಾಡಿದವರು ಸ್ತ್ರೀಯರನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದು, ಅವರ ಮೇಲೆ ನಾನಾ ರೀತಿಯ ದೌರ್ಜನ್ಯ ಎಸಗುವುದು ಎಲ್ಲವೂ ಅಂದಿನಿಂದಲೂ ಹೇಗೆ ನಡೆದುಕೊಂಡುಬಂದಿದೆ ಮತ್ತು ಇದಕ್ಕೆ ಯಾರೂ ಹೊರತಲ್ಲ ಎನ್ನುವ ಕರಾಳ ಸತ್ಯ ಅರಿವಾಗುತ್ತದೆ. ಮಹಾನ್ ನಾಯಕರ ದೌರ್ಬಲ್ಯಗಳ ಅನಾವರಣ ಆಗುತ್ತಲೇ ಇರುತ್ತದೆ. ಹೆಣ್ಣಿನ ಅನಿವಾರ್ಯತೆ, ಅಸಹಾಯಕತೆ, ದೌರ್ಬಲ್ಯ ಇಲ್ಲಿ ಬಹುದೊಡ್ಡ ಕಾರಣವಾಗಿರುತ್ತದೆ. ಹಾಂ, ಕೆಲವು ಸ್ತ್ರೀಯರ ಹಣದ ಲಾಲಸೆ, ಹುದ್ದೆಯ ಆಮಿಶ, ಅವಿವೇಕತನವೂ ಇಲ್ಲಿ ಕೊಡುಗೆ ನೀಡಿರುತ್ತದೆ. ಕೊನೆಗೆ ‘ನೈತಿಕತೆ ಎನ್ನುವುದು ಕೇವಲ ಜನಸಾಮಾನ್ಯರ ಬದುಕಿಗೆ ಮಾತ್ರ ಅನ್ವಯವಾಗುವ ನಿಯಮ ಅಷ್ಟೆ.

ಮೂಲದಲ್ಲಿ ಶುಭ್ರವಾಗಿರುವ ನೀರ ಧಾರೆಯು ಬಲಿತು, ನದಿಯಾಗಿ ಹರಿಯುತ್ತಾ ಹೋದಂತೇ ತನಗೆ ಸೇರಲ್ಪಡುವ ಕೊಚ್ಚೆ, ಕೊಳೆ, ಕೆಸರನ್ನೆಲ್ಲ ಎಳೆದುಕೊಂಡು ಕಪ್ಪಾಗಿಬಿಡುವಂತೇ ಈ ರಾಜಕೀಯ ಸಿದ್ಧಾಂತಗಳು, ವಿವಿಧ ಹೋರಾಟಗಳು ಎಂದೆನ್ನಿಸಿಬಿಡುತ್ತದೆ. ಆಗಾಗ ಹೊಸನೀರು ಆಗಸದಿಂದಲೇ ಸುರಿಯಬೇಕು… ಪ್ರವಾಹವುಕ್ಕಿ ಎಲ್ಲವೂ ಕಳೆದುಹೋಗಬೇಕು. ಒಟ್ಟಿನಲ್ಲಿ ಎಮರ್ಜನ್ಸಿಯ ಕಾಲಘಟ್ಟದ ಮೂಲಕ ಈಗಲೂ ಪ್ರಸ್ತುತವಾಗಿರುವ ರಾಜಕೀಯ ಒಳಸುಳಿಗಳು, ಅವುಗಳ ಚದುರಂಗದಾಟಕ್ಕೆ ಬಲಿಯುವಾಗುವ ಅಮಾಯಕ ಜನರು, ಸಮಾಜದ ಮೇಲೆ ಅದು ಉಂಟುಮಾಡುವ ಪರಿಣಾಮ ಇದೆಲ್ಲವುದನ್ನು ಸ್ಪಷ್ಟವಾಗಿ ತೆರೆದಿಟ್ಟಿದೆ ಲತಾ ಗುತ್ತಿಯವರ ‘ಚದುರಂಗ’.

(ಕೃತಿ: ಚದುರಂಗ (ಕಾದಂಬರಿ), ಲೇಖಕರು: ಲತಾ ಗುತ್ತಿ, ಪ್ರಕಾಶಕರು: ಅಂಕಿತ ಪುಸ್ತಕ,  ಬೆಲೆ: 495/-)