ಏಕತಾರಿ ಕತೆಯೊಳಗ ಉಪಮೆ ಹಾಗೂ ಹೋಲಿಕೆಗಳು ತುಂಬಿ ತುಳಕತಾವ. ಕಾಂಡಕೊರೆಯುವ ಹುಳು ಒಳಗೆ ಹೊಕ್ಕವರಂತೆ ದಿನದಿನಕ್ಕೆ ಕೃಶನಾಗುತ್ತ ಹೊರಟಿದ್ದಾನೆ, ಮುರುದು ಮುಟಗಿಮಾಡಿ ನುಂಗಿ ನೀರ ಕುಡಿತಿದ್ರು, ಪಡಸಾಲ್ಯಾಗ ಕುಂತಾವ ಎದ್ದು ಹೊಲಕ ಹೋದವರಂಗ ಹೋಗಿ ಬಿಟ್ಟ ನೋಡ್ರಿ, ಮಳಿಯಪ್ಪ ಗವಿ ಸೆರಿದವರಮಗ ರೈತರ ಕೂಡಾ ಕಣಮುಚಗಿ ಆಟ ಆಡಾಕ ಸುರು ಮಾಡಿದ, ಹೋರಿ ಕೋಡಿಗೆ ಕೊಂಬೆಣಸು ಹಾಕಿಸಿದೆಂಗ ಆಗೈತಿ ನೋಡು ಗಿರಿಯಪ್ಪ ನಿನ್ನ ಮುಶಿ… ಎಂಬಂಥ ಸಾಲುಗಳು ತಲೆಯಲ್ಲಿ ಸುತ್ತಿ ಮನಸ್ಸು ಕಳ್ಳೆಮಳ್ಳೆ ಆಡಿಸತೊಡಗಿದವು.
ಚನ್ನಪ್ಪ ಕಟ್ಟಿಯವರ ಕಥಾಸಂಕಲನ “ಏಕತಾರಿ”ಯ ಕುರಿತು ಸಾಹೇಬಗೌಡ ಯ ಬಿರಾದಾರ ಲೇಖನ

 

ಈ ಸಮಕಾಲಿನ ಕಥಾ ಪ್ರಪಂಚದಲ್ಲಿ ಅತ್ಯದ್ಭುತವಾಗಿ ಕತೆಯನ್ನು ಕಟ್ಟಿಕೊಡಬಲ್ಲ ಅದಮ್ಯ ಶಕ್ತಿ ಚನ್ನಪ್ಪ ಕಟ್ಟಿ ಅವರು. ಹುಟ್ಟು ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮವಾದರೂ,ಬೆಳೆದು ನಿಂತು ನಂಬಿಗೆಗೆ ಇಂಬು ಎನಿಸಿದ್ದು ಸಿಂದಗಿ. ಸಿಂದಗಿಯಲ್ಲಿ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಚನ್ನಪ್ಪ ಕಟ್ಟಿ ಅವರು ಬೆಳೆದರು. ಅವರು ಬೆಳದ ಎತ್ತರಕ್ಕೆ ತಮ್ಮ ಶಿಷ್ಯಕೋಟಿಯನ್ನು ಬೆಳೆಸಿದರು. ವೃತ್ತಿಯಿಂದ ಸಿಂದಗಿಯ ಪ್ರತಿಷ್ಠಿತ ಪೋರವಾಲ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾವದೆತ್ತರದ ಆ ಇಂಗ್ಲೀಷ್ ಗೂ, ಭಾವದಾಳದೊಳಿರುವ ಕನ್ನಡಕ್ಕೂ ಎಂಥಾ ಸಂಬಂಧವನ್ನು ಕಟ್ಟಿಕೊಡುವ ಗಟ್ಟಿತನ ಚನ್ನಪ್ಪ ಕಟ್ಟಿ ಗುರುಗಳ ಬದುಕು ಮತ್ತು ಬರಹದಲ್ಲಿ ಕಾಣುತ್ತೇವೆ.

ಕತೆ ಹೇಳುವ ಪರಿಯಂತೂ “ಹಸಿ ಗ್ವಾಡಿಗಿ ಹಳ್ಳಿಟ್ಟಂಗ” ಓದುತ್ತ ಸಾಗಿದಂತೆಲ್ಲ ನಮ್ಮನ್ನು ತಮ್ಮಂತೆ ಮಾಡಿಕೊಳ್ಳುವ ಪರುಷಗುಣ ಕಟ್ಟಿಯವರ ಬರಹಕ್ಕಿದೆ. ನಮ್ಮ ಓಣ್ಯಾಗಿನ ಮುದುಕಿ ಮಾತಾಡಿದಂಗ, ನಮ್ಮನಿಯಾಗ ಇದೇನೋ ನಡದೈತಿ ಅನುವಂಗ, ನಾನೇ ಕಥಾನಾಯಕ, ನಂದ ಕತಿ ನಡದೈತಿ ಅನಸತೈತಿ. ಯಾಕ್ಹಿಂಗ ಅಂದ್ರ, ಪಕ್ಕಾ ಪಕ್ಕಾ ಹಳ್ಯಾಗಿನ ಹವಳದಂತ ಮಾತು ಏಕತಾರಿ ತುಂಬಾ ತುಂಬಿಕೊಂಡಾವ! ಕಟ್ಟಿ ಅವರ ವಿದ್ಯಾಗುರುಗಳು ಎನಿಸಿಕೊಂಡಿರುವ ಎಸ್.ಎಫ್. ಯೋಗಪ್ಪನವರು ಬರೆದ ಮುನ್ನುಡಿ ಹಾಗೂ ಬೆನ್ನುಡಿಯಂತು, ಏಕತಾರಿಯನ್ನು ಪ್ರತಿಬಿಂಬಿಸುವ ಮುತ್ತಿನ ಕನ್ನಡಿಯಂಗ ಕಾಣತೈತಿ. ಅದಕ್ಕೆ ಅವರು ಬಳಸಿದ ಪದ ಶ್ರೀಮಂತಿಕೆ, ಹೊಂದಿಸಿ ಹೇಳಿದ ರೀತಿ, ಕತೆಯೊಳಗಿನ, ಕತೆಹೊರಗಿನ ಜೀವನದೊಂದಿಗೆ ಬೆರೆಸಿದ ಭಾವದೋಕಳಿಗೆ ಓದುಗನ ಮನ ಮಿಂದೆದ್ದ ಹಗೂರ ಆಗತೈತಿ.

ಪ್ರತಿ ಕತಿಯು ಒಂದೊಂದು ದಿಕ್ಕಿನ್ಯಾಗ ಹರದಾಡತಾವ, ಊಟಕ್ಕ ಕುಂತವ್ರಿಗೆ ಊಟ ಬಡಿಸುವ ಕೆಲಸ ನಡೆದೇ ಇರತೈತಿ… ಹಸಿವ ಹೆಚ್ಚಾಗತಿರ್ತೈತಿ ಕಾರಣ ರುಚಿ ಹೆಚ್ಚಿದ್ದಾಗ ಹಂಗ ಆಗತೈತಿ. ಕತಿ ಮುಗಿತೈತಿ ಆದ್ರ ಕೈ ತೊಳೆದುಕೊಳ್ಳುವ ಮುನ್ಸೂಚನೆ ಸಿಗೋದಿಲ್ಲ.. ಅಂದ್ರ ಮುಂದುವರೆಸಿದ್ರ ಕತೆಯೆಲ್ಲವೂ ಕಾದಂಬರಿ ಆಗುವ ವಿಸ್ತಾರವನ್ನು, ಹರಿವನ್ನು ಹೊಂದ್ಯಾವ. ಎಲ್ಲಾ ಕತಿಯಲ್ಲಿ ಎಲ್ಲವನ್ನೂ ಹೇಳುತ್ತಾರೆ ಆದರೆ ತೀರ್ಮಾನಿಸುವುದಿಲ್ಲ. ಒಂದು ಮತ್ತೊಂದು ಸನ್ನಿವೇಶಕ್ಕೆ ಲಿಂಕ್ ಕೊಡುತ್ತಾರೆ. ಅದನ್ನು ಅರ್ಥೈಸಿಕೊಳ್ಳುವಿಕೆ ಬಹಳ ಜಾಣತನದ್ದಾಗಿದೆ.

(ಚನ್ನಪ್ಪ ಕಟ್ಟಿ)

ಜುಮ್ಮಣ್ಣನ ಕಂಚಿನ ಮೂರ್ತಿ ಎಂಬ ಕತಿಯೊಳಗ, ಅಪ್ಪನ ಸಾವಿನ ರಹಸ್ಯ ಕೇಳಲು ಬಂದ ಮಗ ಸೋಮ್ನಿಂಗಗೆ ಬಹಳ ಸ್ವಾರಸ್ಯಕರವಾಗಿ ಅವನ ತಾಯಿ ಉತ್ತರ ನೀಡುತ್ತಾಳೆ. “ದೇವಿರಪ್ಪ ಆರ ವರ್ಷದ ಶಿವ್ಲಿಂಗನ ಕರಕೊಂಡು ದೇವರ ಹಿಪ್ಪರಗಿಗೆ ಬಂದ, ಆ ಶಿವ್ಲಿಂಗ್ ಎಂಟು ವರ್ಷದಾವ ಆಗೂದರೊಳಗ ನೀ ಹುಟ್ಟಿದಿ” ಎಂದು ನಿಟ್ಟುಸಿರ ಬಿಟ್ಟಳು ಎಂಬಲ್ಲಿಗೆ ಅವನ ಹುಟ್ಟು, ತಂದೆಯ ಕೊಂದ ಗುಟ್ಟು ಎರಡು ತಿಳಿಸಿದಂತೆ ಅನಿಸಿದರೂ ಅದರ ಗುಟ್ಟು ಬಿಟ್ಟುಕೊಡುವುದಿಲ್ಲ ಕತೆಗಾರರು. ನೀರ ಮೇಲೆ ಸೀರೆ ಎಳೆದಂತೆ, ಬಾರಿ ಕಂಟಿಮ್ಯಾಲ ಬಿದ್ದ ಸೀರೆಯನ್ನು ನಾಜೂಕಾಗಿ ಬಿಡಿಸಿಕೊಂಡತೆ ಕತೆಯನ್ನು ಬಿಚ್ಚಿಡುತ್ತಾರೆ. ತೀರ್ಮಾನವನ್ನ ಬಹುಪಾಲು ಕತೆಗಳಲ್ಲಿ ಓದುಗನಿಗೆ ಬಿಡುತ್ತಾರೆ.

ಜುಮ್ಮಣನ ಕಂಚಿನ ಮೂರ್ತಿ, ಒಲಿಯದ ಗಂಡ, ದೇವಿರಪ್ಪನ ಆಗಮನ, ಸೋಮ್ಲಿಂಗನ ಜನನ, ದೇವಿರಪ್ಪನ ಕೊಲೆ, ಸೋಮ್ಲಿಂಗ ಹಾಗೂ ಶಿವ್ಲಿಂಗನ ಗೆಳೆತನ, ಕ್ಷಮಿಸು ಎಂದು ಹೇಳಿ ಬಾವನೊಂದಿಗೆ ಹೊರಡುವ ಶಿವ್ಲಿಂಗನ ರೀತಿ… ಕೊನೆಗೆ ಜುಮ್ಮಣ್ಣನ ಮೂರ್ತಿಯೊಂದಿಗೆ ದೇವರಹಿಪ್ಪರಗಿಯಿಂದ ಅವಳು ಹೊರಡುವ ನಿರಮ್ಮಳತೆ ಇವೆಲ್ಲವನ್ನು ಕಟ್ಟಿಯವರು ಕಟ್ಟಿಕೊಟ್ಟಿರುವ ರೀತಿ ಸ್ವಾರಸ್ಯದಿಂದ ಕೂಡಿದೆ.

ರತ್ನಗಿರಿಯೆಂಬ ಮಾಯೆಯ ಕತೆಯಲ್ಲಿ ಕಾಯಿಪಲ್ಯ ಮಾರುವ ಮುದಕಿ ಮಾತುಗಳು ಸಂಸಾರ ಹಾಗೂ ಪಾರಮಾರ್ಥದ ಒಳಸುಳಿವುಗಳನ್ನು ಬಿಚ್ಚಿಡುತ್ತದೆ. ಕಾಯಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ದುಡಿಯುವುದೆಂದರೆ “ಅಂಗೈಯ ಗೆರೆ ಅಳಿಸಿ ಹೋಗುವಂಗ ದುಡದ ಎದಿಮಟ ಬೆಳಿಯೊಳಗ ತನ್ನಷ್ಟಕ್ಕೆ ತಾನೇ ನಕ್ಕೋತ ನಿಂದ್ರಾವ” ಅನ್ನೋದಿದೆಯಲ್ಲ ಅದು ಭೂಮಿಯೊಂದಿಗೆ ರೈತ ಹೊಂದಿರುವ ಅವಿನಾಭಾವ ಸಂಬಂಧ ಹಾಗೂ ಶ್ರಮ ಸಂಸ್ಕೃತಿಯನ್ನು ಗೌರವಿಸಿದಂತ ಮಾತುಗಳನ್ನು ಕಟ್ಟಿಯವರು ಆಡಿಸಿದ್ದಾರೆ. ಇದ ಕಾಯಿಪಲ್ಯ ಮಾರುವ ಮುದಕಿ ಮಕ್ಕಳು ರತ್ನಗಿರಿಗೆ ಹೋಗಿದ್ದನ್ನ ವಿರೋಧಿಸುವ ಧಾಟಿಯೊಳಗ ಅವಳ ನುಡಿಗಳು ಒಕ್ಕಲುತನವನ್ನು ಪುಷ್ಠಿಕರಿಸುತ್ತವೆ. ಅದೆನೆಂದರೆ “ರಟ್ಟಿ ದುಡದರ ದುಡದವನ ಹೊಟ್ಟಿ ಮಾತ್ರ ತುಂಬುತ್ತ, ಹೊಲಾ ದುಡದ್ರ ಹೊಲದಾಗ ದುಡದವರು, ಅವರ ನೆಚಗೊಂಡ ಆಳುಕಾಳು, ಎತ್ತುಎಮ್ಮಿ, ಆಡುಆಕಳ, ಎಲ್ಲಾ ಬದುಕತಾವು” ಅನ್ನುವುದು ಪರಿಸರ ಹಾಗೂ ಜೀವಕೋಟಿಯೊಂದಿಗೆ ಮೂಲತಃ ಮಾನವನ ಸಂಬಂಧವನ್ನು ತಿಳಿಸುತ್ತದೆ. ಕಥಾನಾಯಕ ಹೊಲ ಮಾರಬಾರದು ಎಂಬ ನಿರ್ಧಾರಕ್ಕೆ ಬರುವಂತೆ ಆಗುವುದು.

ಬಾಲಕನ ಕಣ್ಣಲ್ಲಿ ಸಾವು ಎಂಬ ಕತೆಯೊಳಗ ತನ್ನದೆ ರೆಕಾರ್ಡ್ ತಾನೇ ಮುರಿಯುವ ಒಟಗಾರನಂತೆ ಓಡುತ್ತ ರೈಲು ನಿಲ್ದಾಣ ತಲುಪಿದ ಅನ್ನುವ ಪರಿಕಲ್ಪನೆ ಹಾಗೂ ಟ್ರೇನ್ ನಲ್ಲಿ ನಡೆಯುವ ಒಂದೊಂದು ಘಟನೆಯೂ ನೈಜತೆಯಿಂದ ಕೂಡಿರುವುದು. ಅವರವರ ಕಣ್ಣುಗಳಲ್ಲಿ ಏನೆಲ್ಲವನ್ನು ಕಂಡಂತೆ ಆ ಬಾಲಕನ ಕಣ್ಣಲ್ಲಿ ಸಾವಿತ್ತು ಎನ್ನುವುದರಲ್ಲಿಗೆ ಕತೆ ಮುಕ್ತಾಯವಾಗುತ್ತದೆ.

ಅಟ್ಟ ಎಂಬ ಕತೆ ಕಟ್ಟಿಕೊಡುವ ಅತ್ಯಂತ ಅದ್ಬುತ ಅರ್ಥಹುಡುಕುವ ಲೋಕವನ್ನು… ಅತ್ತೆಯ ಕುಬಸದ ಕಾರಣ, ಅದಕ್ಕೆ ಅರ್ಥಹುಡುಕುವ ಕೆಂಚನಿಗೆ ಮಹಾಜ್ಞಾನಿಯಂತೆ ನಿಲ್ಯಾನ ಇರುವಿಕೆ, ಅದಕ್ಕೆಲ್ಲ ಕೆಂಚ ಮಾಡುವ ಸೇವೆಗಳನ್ನು ಗಮನಿಸಿದಾಗ ಜ್ಞಾನ ಜಗವನ್ನೆ ಆಳುತ್ತದೆ ಎಂದೆನಿಸುತ್ತದೆ. ಅಷ್ಟೇ ಅಲ್ಲ ಕೆಂಚನಂತೆ ನಾವೂ ಅಲ್ಲಲ್ಲಿ ಬರುವ ದೇಸಿಯ ನುಡಿಗಟ್ಟಿನ ಅರ್ಥಹುಡುಕಿ ಹೊರಟಂತೆ ಅನಿಸುತ್ತದೆ.

ಅಟ್ಟದ ವರ್ಣನೆ, ತಾಯಿಯನ್ನು ಕಳೆದುಕೊಂಡಾಗ ಬತ್ತಿರಪ್ಪನ ಗುಡ್ಡದಿಂದ ಸೂರ್ಯನ ಬೆಳಕು, ಕಣ್ಣಿರು, ಅತ್ತೆ ಕುಬಸದ ಕಾರಣಕ್ಕೆ ಹೋಗಬೇಕೆನ್ನುವಾಗಿನ ಮನಸ್ಸಿನ ತುಮುಲ, ಅವ್ವನ ನೆನಪು ಮರಳಿ ಮನೆಗೆ ಬಂದರೆ ಮನೆ ಮುಂದೆ ಜನ ಜಾತ್ರಿ, ಮುದಕಿಯ ಸಾವು… ಹೀಗೆ ಬತ್ತಿರಪ್ಪನ ಗುಡ್ಡ, ಸಯ್ಯದ ಬಾಶ ದರ್ಗಾ, ಬಸರಿ ಮರದಲ್ಲಿನ ಮರಿಗಳು ತನ್ನನ್ನು ಆವರಿಸಿಕೊಳ್ಳುತ್ತಿದ್ದಂತೆ ಅವನು ಇಹ ಲೋಕವನ್ನು ಮರೆಯುತ್ತಾನೆ. ಕೆಂಚನ ಅಂತಿಮವನ್ನು ಅಟ್ಟದ ವಿಸ್ತಾರವನ್ನು ಓದುಗ ಬಯಸುತ್ತಾನೆ. ಇದಕ್ಕೆ ಅಂದದ್ದು ಒಂದೊಂದು ಕತೆಯೂ ಮುಂದುವರೆದರೆ ಕಾದಂಬರಿಯಾಗಬಲ್ಲಷ್ಟು ಆಳ ಅಗಲ ವಿಸ್ತರಿಸಿಕೊಂಡಿವೆ ಎನಿಸುತ್ತದೆ.

ಹೊಸ್ತಿಲೊಳಗಣ ಹುತ್ತ ಕತೆಯಲ್ಲಿ ಗಿರಿಯಪ್ಪನ ಗತ್ತು, ಮುಶೀಯ ಮಸಲತ್ತು, ಪರಪ್ಪನು ಮಾಡಿದ ಗರ್ದಿಗಮ್ಮತ್ತು, ತಿಪ್ಪಣ್ಣನ ಮಜಕುರಾದ ತತ್ವಜ್ಞಾನದ ಸೊಗಡು, ಮಸ್ತ ಮಸ್ತ ಮಾತಿನ ಪದಗಳ ಸಕ್ಕಸರಗಿ ಈ ಕತಿಯೊಳಗ ವ್ಯಕ್ತ ಆಗತೈತಿ. ಹಳ್ಳಿಯಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಜಗಜ್ಜಾಹಿರವಾದ ಪದ “ಇದರವೌನ” “ಇವನೌನ” ಇದರ ಮಜಾನೆ ಬ್ಯಾರೆ. ಇದರ ಬಳಕೆಯನ್ನು ಕಟ್ಟಿಯವರು ಬಹಳ ಚಂದ ಬಳಸಿದ್ದಾರೆ. ಗಿರಿಯಪ್ಪ ಮುಶೀ ಸೇದಿದ ಮ್ಯಾಲ ದೂರಬಿನ್ ನೋಡಿದಂಗ್ ಒಂದ ಕಣ್ಣ ಮುಚ್ವಿ ಅದರೊಳಗ ನೋಡ್ತಾನ, ಆಗ “ಉಪ್ ಎಂದರೆ ಉದರಿ ಬೀಳುವ ಜಾತಿಯದಲ್ಲ ಇದರೌನ”, “ಸೊನ್ನಿ ಮಾತ ಎಲ್ಲಿ ಕೇಳತ್ತ ಇದರೌನ, ಹಾರೀ ತಗೊಂಡು ಮುಕಳಾಗ ಹೆಟ್ಟಿದರ ಬಾಯಾಗಿಂದ ಬುದಬುದ ಕಾರಿಕೋತ ಕಣ್ಣಕಣ್ಣ ಬಿಟಗೊಂಡ ಕುಂದರತೈತಿ” ಎಂದು ಬಯ್ಯುವ ಬೇಗಳದ ಮಜ ಕೇಳಾಕ ಬಲುಚಂದ.

ಗಿರಿಯಪ್ಪನಿಗೆ ಬಲು ಸಂತೋಷವಾದಾಗ, ವ್ಯಘ್ರನಾದಾಗ ಮುಶೀಯು ಆಲಿಂಗನ, ಅದು ನೀಡುವ ಸಾಂತ್ವನ, ಸುಖ ಗಮನಿಸಿದಾಗ ಶಿವರಾಮ ಕಾರಂತರ ಕಾದಂಬರಿ “ಚೋಮನದುಡಿ”ಯಲ್ಲಿ ಚೋಮ ದುಡಿಯನ್ನು ಬಡಿಯುವ ಘಟನೆ ಸರಕ್ಕಂತ ಸ್ಮೃತಿಯಲ್ಲಿ ಬಂದು ಹೋಗುವುದು….

ಉರ್ಧ್ವರೇತು ಎಂಬ ಕತೆಯಲ್ಲಿ ಬಾದಾಮಿಯ ಶಿಲ್ಪಕಲೆಯನ್ನು ಹಾಗೂ ರಂಗ್ಯಾ, ರಂಗಪ್ಪ, ಡಾ.ರಂಗರಾಜ ಆದ ಬಗೆಯನ್ನು ಆತನ ಆಲೋಚನಾ ಶೈಲಿಯ ಬದಲಾವಣೆಗೆ ದೆಹಲಿಯ ಜವಹರಲಾಲ್ ನೇಹರು ವಿಶ್ವವಿದ್ಯಾಲಯದ ದಟ್ಟ ಪ್ರಭಾವದ ಹಿನ್ನೆಲೆ ಕಾಣುತ್ತೇವೆ. ಬಹುದಿನದ ಗೆಳತಿ ಸೇವಂತಿ ಮೊಬೈಲ್ ನಲ್ಲಿ “ಸೇಬು” ಎಂದು ಹೆಸರಾದದ್ದು, ಅದರ ಹಿಂದಿನ ಹೆಜ್ಜೆಗುರುತುಗಳನ್ನು ಗಮನಿಸಿದ ವನಮಾಲ ಆಗಿ ಮರುನಾಮಕರಣಗೊಂಡ ಶಂಕ್ರೆಮ್ಮಗ ಗೊತ್ತಾಗದೆ ಇರಲಾರದು. ಸಂಸಾರವನ್ನು ನಿಭಾಯಿಸುವ ಎಲ್ಲಾ ತಾಯಂದಿರು(ಹೆಣ್ಣುಮಕ್ಕಳು) ಮನಿಮನದ ಗೌರವಕ್ಕೆ ಧಕ್ಕೆಯಾಗದಂತೆ, ಸಂದರ್ಭದ ಸೂಕ್ತತೆ ನೋಡಿ ಹೇಳುವ ಮಾತುಗಳು ಎಚ್ಚರಿಕೆಯ ಗಂಟೆಯಂತೆ! “ಮದುವೆಯ ವಯಸ್ಸಿಗೆ ಬಂದ ಎರಡು ಮಕ್ಕಳಿದ್ದಾರೆ, ಸಂಭಾಳಿಸಿಕೊಂಡು ಬನ್ನಿರಿ” ಎಂದು ವನಮಾಲ ಆಡಿದ ಮಾತುಗಳು.

ಪ್ರತಿಯೊಬ್ಬರ ಮನೆಯಲ್ಲಿ ಗಂಡನ ಬಗ್ಗೆ ಎಲ್ಲೊ ಎಳ್ಳಕಾಳಿನಷ್ಟು ಸುಳಿವು ಸಿಕ್ಕಾಗ, ಮರ್ಯಾದೆಯ ಪ್ರಶ್ನೆಯೆಂದು ಹೇಳದೆ, ಮನಸಿಗೆ ನಾಟುವ ಮಾತುಗಳನ್ನು ಆಡುತ್ತಾರೆ ಎಂಬುದಕ್ಕೆ ವನಮಾಲ ಆಡುವ ಒಂದು ಮಾತು ನಿದರ್ಶನ.

ಸುಖದ ನಾದ ಹೊರಡಿಸುವ ಕೊಳಲು ಕತೆಯಲ್ಲಿ: ರೆಬಕಾಯಿ ಮತ್ತು ಅರ್ಯಾಣಸಿದ್ಧನ ಕತೆಯೊಂದಾದರೆ, ಅದರಲ್ಲಿ ಅರ್ಯಾಣಸಿದ್ಧ ದೇವರ ಹಾಗೂ ಜನ್ನವ್ವನ ಕತೆಯೂ ಸಮೀಕರಿಸುತ್ತದೆ. ಕತೆಯೊಳಗ ಕತೆಯ ಕಟ್ಟಿ ಕೊಡುವ ಕತೆಗಾರರು ನಮ್ಮ ಚನ್ನಪ್ಪ ಕಟ್ಟಿಯವರು. ಸಂಪ್ರದಾಯ, ನಂಬಿಕೆ, ಚಾಜ ಹೊದ್ದು ಬೆಳೆದ ರೆಬಕಾಯಿಗೆ ಆಧುನಿಕತೆಯ ಮೆರವಣಿಗೆ ಇಷ್ಟವಾಗುವುದಿಲ್ಲ. ಸಂಪ್ರದಾಯಬದ್ಧ ಜನರಿಗೆ ಅದು ಅಂದು, ಇಂದು, ಮುಂದೆಯೂ ಹಿಡಿಸುವುದಿಲ್ಲ. ಅದಕ್ಕೆ ರೆಬಕಾಯಿಯ ಮಾತು ಮನದಾಗ ಸಿಡಲ ಹೊಡದಂಗ ಆಗತೈತಿ. ಹೀಂಗ ಉರುಣಗಿ ಮಾಡಿದವರ್ಯಾರೂ ಉಳದಿಲ್ಲ ನಮ್ಮ ದೇವರ ಮುಂದ ಎಂದು ಊರ ಗೌಡ ಹೇಳಿಕೊಳ್ಳುವ ಪರಿಯೂ ಬದಲಾವಣೆಗೆ ಒಗ್ಗದ ಮನೋಭಾವ ಎನ್ನೋದಕ್ಕಿಂತ ನಂಬಿಕೊಂಡ ಬಂದ ನಂಬಿಗೆಯ ಮ್ಯಾಲ ಬದುಕು ಮಾಡುವವರ ಮಾತೆನ್ನಬಹುದು.

ಜುಮ್ಮಣನ ಕಂಚಿನ ಮೂರ್ತಿ, ಒಲಿಯದ ಗಂಡ, ದೇವಿರಪ್ಪನ ಆಗಮನ, ಸೋಮ್ಲಿಂಗನ ಜನನ, ದೇವಿರಪ್ಪನ ಕೊಲೆ, ಸೋಮ್ಲಿಂಗ ಹಾಗೂ ಶಿವ್ಲಿಂಗನ ಗೆಳೆತನ, ಕ್ಷಮಿಸು ಎಂದು ಹೇಳಿ ಬಾವನೊಂದಿಗೆ ಹೊರಡುವ ಶಿವ್ಲಿಂಗನ ರೀತಿ… ಕೊನೆಗೆ ಜುಮ್ಮಣ್ಣನ ಮೂರ್ತಿಯೊಂದಿಗೆ ದೇವರಹಿಪ್ಪರಗಿಯಿಂದ ಅವಳು ಹೊರಡುವ ನಿರಮ್ಮಳತೆ ಇವೆಲ್ಲವನ್ನು ಕಟ್ಟಿಯವರು ಕಟ್ಟಿಕೊಟ್ಟಿರುವ ರೀತಿ ಸ್ವಾರಸ್ಯದಿಂದ ಕೂಡಿದೆ.

ಏಕತಾರಿ ಕತೆಯೊಳಗ ಮೊದಲ ರಾತ್ರಿಯಂದು ಚಂದ್ರಪ್ಪನ ಅಳು ಚಂದ್ರವ್ವಗ ಯಕ್ಷಪ್ರಶ್ನೆಯಾಗಿ ಕಾಡತೈತಿ. ಅದು ಬಹಳ ದಿನ ಆ ಗುಟ್ಟು ಹಂಗ ಉಳಿಯಂಗಿಲ್ಲ. ತನ್ನ ಗೆಳೆಯಾರೊಂದಿಗೆ ಕುಡತಕ್ಕೆ ಕುಂತಾಗ ಸತ್ಯದ ಮಾತ ಹೊರಡತಾವ. ಕುಡದವ್ರು ಖರೆ ಹೇಳ್ತಾರ ಅನ್ನೋದಕ್ಕೆ ಸಾಕ್ಷಿ ಎಂಬಂತೆ ಕುಡಿದ ನಿಶೇದಾಗ ಚಂದ್ರಪ್ಪ “ಅವ್ವನ ಕೂಡ ಯಾರಾರ ಸಂಸಾರ ಮಾಡಿದ್ದು ಕಂಡಿರೇನೋ ಭಾಡಕೋಗೋಳ್ರ್ಯಾ? ಅಕಿನ್ ನೊಡಿದ್ರ ಥೇಟ ನನ್ನ ಹಡದವ್ವನ ನೆನಪ ಆಕ್ಕೈತಿ, ಅಂಥಾಕಿ ಕೂಡ ಹ್ಯಾಂಗ್ ಮಾಡಲ್ಯೋ ಸಂಸಾರ? ಅಂದಕೊಂಡು ಚಂದಾಲಿಂಗ ಗೀಗೀ ತಂಡದ ಮಾಳವ್ವನ ಮನೆ ಸೇರಿದ ಸುದ್ಧಿ ಖಚಿತವಾಗುವುದು. ಕೈ ಹಿಡಿದ ಗಂಡ ಕೈ ಬಿಟ್ರೂ ಹಳ್ಯಾಗಿನ ಹೆಣ್ಣಮಕ್ಕಳು ಧೈರ್ಯದಿಂದ ತಾವೇ ಸ್ವತಃ ಗಣಮಕ್ಕಳಂಗ ದುಡ್ದು ತೋರುವ ಅದೇಷ್ಟೋ ಚಿತ್ರಗಳು ನಮ್ಮೆದುರಿಗೆ ಇವೆ. ಅದೆ ಇದು ಅನ್ನುವಷ್ಟರ ಮಟ್ಟಿಗೆ ಸಹಜತೆ ಕತೆಯಲ್ಲಿ ಕಂಡುಬರುತ್ತದೆ.

ಚಂದ್ರವ್ವ ಸಣ್ಣಾಕಿ ಇದ್ದಾಗ ಕಿತ್ತಲಿ ನೀಲಪ್ಪನ ಅಂಗಡಿಗೆ ಬೆಲ್ಲ ತರಾಕಂತ ಹೊದಾಗ ಮುಖಕ್ಕೆಲ್ಲ ಬೆಲ್ಲ ಕೊಟ್ಟ ಘಟನೆ, ಮುಂದೆ ಅವನಲ್ಲಿ ಸಹಾಯ ಯಾಚಿಸಿದ ಸಂದರ್ಭ, ಸಂಬಂಧಿಕರು ಇವರ ಸಂಬಂಧಗಳ ಬಗ್ಗೆ ಮಾತನಾಡಿಕೊಳ್ಳಲು ಆರಂಭಿಸುತ್ತಾರೆ. ವಾದಿಬಿದಿಯ ಗೀಗೀ ಪದದಲ್ಲಿ ಅಮೀನಸಾಬನ ಹಾಡು ಚಂದ್ರಪ್ಪನನ್ನು ಎತ್ತಿ ಕುಸ್ತಿಕಣದಾಗ ಒಗೆದಂಗ ಆಗತೈತಿ. ವೇದಿಕೆಯಿಂದ ನಿಧಾನವಾಗಿ ಹಿಂದೆ ಸರಿದ ಚಂದ್ರಪ್ಪ ಸೀದಾ ಚಂದಾಲಿಂಗನ ಗುಡಿಯನ್ನು ಸೇರಿದ ಬದುಕಿನ ಏನೆಲ್ಲ ಚಿತ್ರಣ ಕಣ್ಣಮುಂದ ಬಂದು ಹೋಗ್ತಾವ. ಕಪ್ಪಲಮನಿಯ ಗುಡಿಯಿಂದ ಕೇಳಿಬರುವ ಏಕತಾರಿ ನಾದದತ್ತ ಮನಸ್ಸು ದೇಹ ಹೊರಡತೈತಿ. “ಏ ತಮ್ಮಾ ನೀ ತಿಳಿದು ನೋಡೋ, ಕದ್ದು ಹಾದರ ಮಾಡೋದು ಸಲ್ಲ” ಎಂಬ ತತ್ವಪದ ಗುಣಗುತ್ತ ಏಕತಾರಿ ನಾದದತ್ತ ಹೆಜ್ಜೆ ಹಾಕುತ್ತಾನೆ… ಏಕತಾರಿಯ ನಾದ ಅವನನ್ನು ಕರೆಯುತ್ತದೆ… ಇಲ್ಲಿ ಚಂದ್ರಪ್ಪ ಚಂದ್ರವ್ವನ ವಿವಾಹ ನಂತರದ ಸಂಬಂಧಗಳು ಸೂಕ್ಷ್ಮಾತೀಸೂಕ್ಷ್ಮ ವಿಷಯಗಳನ್ನು ಬಿಟ್ಟುಕೊಡುತ್ತವೆ. ಒಂದಕ್ಕೆ ಮತ್ತೊಂದು ಆಸರ ಎನ್ನುವ ಧಾಟಿಯಲ್ಲಿ ಕತೆ ದಡ ಮುಟ್ಟುತ್ತದೆ.

ರಾಯಪ್ಪನ ಬಾಡಿಗೆ ಸಾಯಿಕಲ್ಲು ಎಂಬ ಕತೆಯಲ್ಲಿ ರಾಯಪ್ಪನ ಸೂಕ್ಷ್ಮ ಗ್ರಹಿಕೆ, ಸ್ವಾಮಿನಿಷ್ಠೆ, ಋಣ ಸಂಬಂಧ, ಕೊನೆಗೆ ಬೆಂಕಿಗೆ ಆಹುತಿಯಾದ ಬಾಡಿಗೆ ಸಾಯಿಕಲ್ಲು ಗಮನಿಸಿದಾಗ ಇಂದು ನಡೆಯುವ ಅದೇಷ್ಟೋ ಬಂದ್, ಮುಷ್ಕರಗಳಲ್ಲಿ ಬಡಪಾಯಿಯ ಬದುಕೆ ಛಿದ್ರಛಿದ್ರ ಎನಿಸುತ್ತದೆ. ಕೊನೆಗೆ ಎಲ್ಲವನ್ನು ಬಿಟ್ಟು ಬೆಳಂದಿಗಳಲ್ಲಿ ಹೊಲತುಂಬಾ ಗೊಬ್ಬರವನ್ನು ಚರಗ ಹೊಡೆಯುತ್ತಾನೆ. ರೈತರಿಗೆ ರಾಜಕೀಯ ಡಾಂಭಿಕತನ, ಇನ್ನೊಬ್ಬರನ್ನು ಒಲಿಸಿಕೊಳ್ಳುವ ಪ್ರಯತ್ನ ಫಲ ನೀಡದೆ ಭೂತಾಯಿಯನ್ನು ನೆಚ್ಚಿನಡೆದರೆ ಬದುಕು ಬಂಗಾರವಾಗುವುದು ಎಂಬ ಸಂದೇಶವಿದೆ.

ಏಕತಾರಿಯಲ್ಲಿ ಪ್ರತಿ ಪಾತ್ರದ ಹುಟ್ಟು, ಬೆಳವಣಿಗೆ, ಅಂತಿಮ ಹಂತ ತಲುಪುವ ಅವುಗಳ ಗುಣ, ಅಂತಿಮ ಸತ್ಯವನ್ನು ತೋರುವ ಸನ್ನಿವೇಶಗಳನ್ನು ಗಮನಿಸಿದಾಗ, ಕುವೆಂಪುರವರ “ಮಲೆಗಳಲ್ಲಿ ಮದುಮಗಳು” ನೆನಪಾಗುತ್ತದೆ.

ಹಳ್ಳಿಗಾಡಿನಿಂದ ಮರೆಯಾಗಬಲ್ಲ ಹವಳದಂತ ಪದಗಳು:- ಜುಮ್ಮಣ್ಣನ ಕಂಚಿನ ಮೂರ್ತಿಯಲ್ಲಿ ಬರುವ ಸೋಮ್ಲಿಂಗ್ ನಿಗೆ ಕನಸಲ್ಲಿ ಶಿವ್ಲಿಂಗ್ ತನ್ನ ಮರ್ಮಾಂಗಕ್ಕೆ ಕೈ ಹಾಕಿ ತೊರಡು ಹಿಚಕಿದಂತೆ ಅನ್ನಿಸಿ ಚಿಟ್ಟನೆ ಚೀರಿದೆ ಎನ್ನುವುದು ಸಹಜವಾಗಿ ಮೂಡುವಂತದ್ದು. ನಿಮ್ಮಪ್ಪ ನನ್ನ ಸನಿಹಕ್ಕೆ ಬಂದರ ಹೂಸಲಂಗಿ ವಾಸನೀ ಮೂಸಿದಂಗ ದೂರ ಸರಿತಿದ್ದ ಎನ್ನುವುದರಲ್ಲಿ ಹೂಸಲಂಗಿ ವಾಸನೇ ಎನ್ನುವುದು ಮರೆಯಾಗುತ್ತಿದೆ.

ರತ್ನಗಿರಿ ಎಂಬ ಮಾಯೆಯಲ್ಲಿ ಕಾಯಿಪಲ್ಯ ಮಾರುವ ಮುದಕಿ ಆಡಿದ “ಗಟ್ಟ್ಯೂಳ್ಳಾಕಿ ಅಂತ ಪಾರಾಗಿ ಬಂದೆ”
ಸದಾ ಹೊಲದೊಂದಿಗೆ ಗುದಮುರಗಿ ಹಾಕುವವನಿಗೆ ಮಕ್ಕಳ ಹಡೆಯೋದ ಯಾವಾಗ ನೆನಪ ಇಟ್ಕೊಂಡೋ ಅನ್ನೋದು, ಮಳಿಯಪ್ಪ ರೈತರೊಂದಿಗೆ ಕಣ್ಣಮುಚಗಿ ಆಟಾ ಅಡಾಕ ಸುರು ಮಾಡಿದ ಎನ್ನುವ ಪದ ಲಾಲಿತ್ಯ ನಮಗೆಲ್ಲರಿಗೂ ತಿಳಿಯುವಂತದ್ದು.

“ಈಟ ಮುಟ್ಟಿದರ ಏನಾತು? ಮ್ಯಾಣಿಲೆ ಮಾಡೆರೇನು? ಕಪ್ಪುರ ಗೊಂಬೇನು?” ಎನ್ನುವ ಪದಗಳು ಸಹಜ ಸುಂದರವಾಗಿವೆ. ಈ ಮಾತುಗಳು ಬಾಲಕನ ಕಣ್ಣಲ್ಲಿ ಸಾವಿತ್ತು ಕತೆಯಲ್ಲಿ ಕಂಡುಬರುತ್ತವೆ.

ಅಟ್ಟದ ಕತೆಯಲ್ಲಿ ಸೂಳೇ ಮಗ ಮಾಸ್ತರಾ, ಈ ಕೆಂಪ ಬಸ್ಸತಂದು ನಮ್ಮೂರ ಹುಡ್ಗರ್ನ ಹಾಳ ಮಾಡಾಕ ಹತ್ಯಾನ. ಅತ್ತಿ ಬಂದ್ರ ಹಿಂಗಾತ, ಇನ್ನೂ ಅತ್ತೀ ಮಗಳು ಬಂದ್ರ ನಾವೆಲ್ಲ ಕುಂಡಿ ಹಿಂದಲ ಗಾಳಿ ಆಕ್ಕಿವಿ, ನಸುಕಿನ್ಯಾಗ ಹೊರಕಡೆಗೆಂದು ಹೋಗಿದ್ದ, ಎಂಥಾ ಪಾಮರ ಐತಿ ಈ ಪಾರ, ಹ್ಯಾಂಗ ಬಂದ ನಿಂತಾನ ನೋಡ್ರಿ ಬಾಜಿರಾಯ? ಇಂಥಾ ಮೊಮ್ಮಟ್ಯಾ ಮೊಮ್ಮಗನ ಕಾರಣ ಮುದಕಿ ಹೆಣಾ ತಾಸ ಹಾದಿ ಹೆಣದಂತೆ ಬಿಳೋದು ಆತ ನೋಡ್ರಿ ಎನ್ನುವ ಪದಗುಚ್ಚಗಳು ನಾವೆಲ್ಲೂ ಕೇಳಿರಲಾಕ ಸಾಧ್ಯವೆ ಇಲ್ಲ.

ಹೊಸ್ತಿಲೊಳಗಣ ಹುತ್ತ ಕತೆಯಲ್ಲಿ ಸೊನ್ನಿ ಮಾತ ಎಲ್ಲಿ ಕೇಳತ್ತ ಇದರೌನ, ನಿನ್ನ ಉರವಣಿಗೀಗೆ ಹ್ಯಾಂಗ ಉರಿ ಹಚ್ಚೀನಿ, ತಿಪ್ಪಣ್ಣನ ಮಜಕುರದ ತತ್ವಜ್ಞಾನ, ಶಬ್ದಗಳು ತಲೆಯಲ್ಲಿ ಸುತ್ತಿ ಮನಸ್ಸನ್ನು ಕಳ್ಳೆಮಳ್ಳೆ ಆಡಿಸತೊಡಗಿದವು ಎನ್ನುವ ಮಾತುಗಳ ಕರಳಿಗಿ ಕರಳ ಹಚ್ಚಿದಂಗ ಅನಿಸತೈತಿ.

ಕಕ್ಕುಲಾತಿ, ಒಂದೆ ವಾಟೆ ಹಾಲು, ಕೊಕ್ಕಸಿ ನಕ್ಕ, ಬುದಗ್ಗನೆ ಎದ್ದು ನಿಂತ, ಅಡರಾಸಿ ಜೀಪಿನೊಳಗ ನುಗ್ಗಿ ಕುಳಿತ, ತಾಯಿ ಮೊಲೆಯನ್ನು ಜುರುಜುರು ಜಗ್ಗವಂತೆ ಅಷ್ಟಷ್ಟೇ ಹಿರತೊಡಗಿದ, ಮುಖವೆಲ್ಲ ರಾಮಾರಗತಾಯಿತು ಅನ್ನುವ ವಾಕ್ಯಗಳು ಕತೆಗಳಲ್ಲಿ ವ್ಯಕ್ತವಾಗುತ್ತವೆ. ಇವು ಬುತ್ತಿಪಾಡಿನಲ್ಲಿ ಉಳಿದ ರೊಟ್ಟಿ ಚುರಿನಂತೆ ಮನಸಿನ್ಯಾಗ ಉಳಿತಾವ. ಕಟ್ಟಿಯವರೆ ಕತೆ ಉತ್ತರಕರ್ನಾಟಕದ ಜನಪದದ ಜೇನುಸವಿಯಂತೆ ಮನಸನ್ನು ಎಳೆಯುತ್ತವೆ.

ಜುಮ್ಮಣ್ಣನ ಕಂಚಿನ ಮೂರ್ತಿಯಲ್ಲಿ ದೇವಿರಪ್ಪನ ಆಗಮನ, ಸೋಮ್ನಿಂಗನ ಜನನ, ದೇವಿರಪ್ಪನ ಕೊಲೆ, ಸೋಮ್ನಿಂಗನ ತಂದೆ ಒಂದೆ ದಿನದಾಗ ನಾಲ್ಕಾರ ಅವ್ವಂದಿರ ಮನೆಗೆ ಕುದರೆ ಏರಿ ಹೋಗಿ ಬರ್ತಿದ್ದ… ಈ ಘಟನೆಗಳ ಹಿಂದೆ ವಿವಾಹೇತರ ಸಂಬಂಧದ ತಿಳಿಯಾದ ಹೊಗೆ ಎದ್ದುಕಾಣುತ್ತದೆ. ಅದನ್ನು ಬಿಚ್ವಿ ಹೇಳದ ಕತೆಗಾರರು ಮಾರ್ಮಿಕವಾಗಿ ನುಡಿಯುತ್ತಾರೆ.

ಅಟ್ಟ ಕತೆಯಲ್ಲಿ ಕೆಂಚನ ಅತ್ತಿ ಗೊಡ್ಡಿ, ಮಾಸ್ತರ ಬಗೆಗಿನ ಮಮಕಾರ, ಕೆಂಚನ ತಂದೆಗೆ ಎರಡನೆ ಹೆಂಡತಿ, ಇವೆಲ್ಲವುಗಳು ಅಂತರ್ಮುಖಿ ಸಂಬಂಧಗಳನ್ನು ಸೂಚಿಸುತ್ತವೆ. ಉರ್ಧ್ವರೇತ ಕತೆಯಲ್ಲಿ ರಂಗಪ್ಪನಿಗೆ ಥೇಟರ್ ನಲ್ಲಿ ರಾಮ್ಯಾನಿಂದಾದ ಅನುಭವ ಹಾಗೂ ಡಾ.ರಂಗರಾಜನಾದ ಬಳಿಕ
ಫೋನ್ ಡೈರಿಯಲ್ಲಿ ಸೇವಂತಿ ಎಂಬ ಹೆಸರಿ ಗರ್ಲ್ ಫ್ರೆಂಡ್ ಸೇಬು ಆದದ್ದು, ಅದನ್ನು ಗಮನಿಸಿ ಎಚ್ಚರಿಕೆಯ ಮಾತುಗಳನ್ನಾಡಿದ ವನಮಾಲ… ಡಾ.ಸೇವಂತಿ ನಾನು ಬಾಣಂತಿಯಾಗಬೇಕು ಅದು ತಪ್ಪಾ? ಎಂದು ಕೇಳಿಕೊಳ್ಳುವ ಪರಿ.. ವಿವಾಹೇತರ ಸಂಬಂಧವನ್ನು ಅತ್ಯಂತ ಜಾಗರುಕರಾಗಿ ಕತೆಯನ್ನು ಹೆಣೆದಿದ್ದಾರೆ.

ಸುಖದ ನಾದ ಹೊರಡಿಸುವ ಕೊಳಲು ಕತೆಯಲ್ಲಿ ರೆಬಕಾಯಿಯ ಮಗ ಅರ್ಯಾಣಸಿದ್ದ ಮದುವೆಯ ವಿಚಾರ ಬಂದಾಗ ಮಾತಾಡಿದ್ದು “ಸಂಬಂಧಕ್ಕಿಂತ ಸಂಬೋಗ” ಒಂದು ಸರಳ ಕ್ರೀಯೆ ಎಂಬಂತೆ ತೋರುತ್ತದೆ. “ಒಂದು ವಾಟೆ ಹಾಲಿನ ಸಲುವಾಗಿ ಒಂದ ಎಮ್ಮಿ ಯಾಕ ಸಾಕಬೇಕು? ಹಸಿವಾದ್ರ ಹ್ವಾದನೇನೋ, ಒಂದ ವಾಟೆ ಹಾಲ ಕುಡದನೇನೋ, ಬಾಯಿ ಒರೆಸಿಗೊಂಡು ಬಂದನೇನೋ” ಅನ್ನುವುದು ವಿವಾಹ ಬಂಧನಕ್ಕಿಂತ ಬಾಹ್ಯದೇಹ ಸಂಬಂಧ ಹಗುರ ಎನ್ನುವ ಮಾತುಗಳು ಕಂಡುಬರುತ್ತವೆ.

ಏಕತಾರಿ ಕತೆಯಲ್ಲಿ ಚಂದ್ರಪ್ಪ ಜಂದಾಲಿಂಗನ ಗೀಗೀ ಮ್ಯಾಳದ ಮಾಳವ್ವನನ್ನು ಕೂಡುವುದು, ಚಂದ್ರವ್ವಗ ತಬ್ಬಿಕೊಂಡು ಬೆಲ್ಲಕೊಟ್ಟ ಕಿತ್ಲಿನಿಂಗನ ಸಹಾಯ ಸದಾ ಇರೋದು ಗಮನಿಸಿದರೆ ಹಳ್ಯಾಗ ಹಗಲಲ್ಲೂ ಕಾಣುವ ಹಾದರದ ವಿಷಯ ಸರಾಗವಾಗಿ ಎದ್ದು ತೋರುತ್ತದೆ. ಬೀಳು ಜೀವಕ್ಕ ಹುಲ್ಲು ಆಸರ ಎನ್ನುವಂಗ ಕಂಡುಕಾಣದಂಗ ಒಳಮುಚುಕಿನ ದೈಹಿಕ ಸಂಬಂಧದ ಸದ್ದು ಕತೆಯಲ್ಲಿ ವ್ಯಕ್ತವಾಗುತ್ತದೆ. ಏಕತಾರಿ ನಾದಕ್ಕೆ ಚಂದ್ರಪ್ಪ ತಲ್ಲೀನನಾಗಿ “ಕದ್ದು ಹಾದರ ಮಾಡುದು ಸಲ್ಲ, ನಾ ಖುಲ್ಲಾ ಖುಲ್ಲಾ” ಎಂದು ಹಾಡುಕಟ್ಟಿ ಹಾಡುತ್ತಾನೆ. ಈ ಎಲ್ಲಾ ಪಾತ್ರಗಳು ಭೋಗ ಸಂಭೋಗದಾಚೆ ದಾರಿಯನ್ನು ಕಾಣುತ್ತವೆ ಎನ್ನುವುದು ವಿಶಿಷ್ಟವಾಗಿದೆ.

ಉತ್ತರ ಕರ್ನಾಟಕದ ಭಾಷೆ ಅಂದ್ರನೆ ಒಂದ ನಮೂನಿ ಬ್ಯಾರೇನೆ ಐತಿ ಅಂತ ಹಾಡ ಹಾಡಬೇಕು ಅನಸತೈತಿ. ಏಕತಾರಿ ಕತೆಯೊಳಗ ಉಪಮೆ ಹಾಗೂ ಹೋಲಿಕೆಗಳು ತುಂಬಿ ತುಳಕತಾವ. ಕಾಂಡಕೊರೆಯುವ ಹುಳು ಒಳಗೆ ಹೊಕ್ಕವರಂತೆ ದಿನದಿನಕ್ಕೆ ಕೃಶನಾಗುತ್ತ ಹೊರಟಿದ್ದಾನೆ. ಹೂಸಲಂಗಿ ವಾಸನೀ ಮೂಸಿದಂಗ ದುರ ಸರೀತಿದ್ದ, ಕಟ್ಟಾ ಗಾಂಧೀವಾದಿ ದೇವಿರಪ್ಪನ ಕೊಂದ ನಮ್ಮೂರಿನ ಗೋಡ್ಸೆ ಯಾರು? ಅಂಗೈ ಗೆರಿ ಅಳಿಸಿ ಹೋಗೂವಂಗ ದುಡುದು ಎದಿಮಟ ಬೆಳಿಯೊಳಗ ತನ್ನಷ್ಟಕ್ಕ ತಾನ ನಕ್ಕೋತ ನಿಂದ್ರಾವ, ಮುರುದು ಮುಟಗಿಮಾಡಿ ನುಂಗಿ ನೀರ ಕುಡಿತಿದ್ರು, ಪಡಸಾಲ್ಯಾಗ ಕುಂತಾವ ಎದ್ದು ಹೊಲಕ ಹೋದವರಂಗ ಹೋಗಿ ಬಿಟ್ಟ ನೋಡ್ರಿ, ಮಳಿಯಪ್ಪ ಗವಿ ಸೆರಿದವರಮಗ ರೈತರ ಕೂಡಾ ಕಣಮುಚಗಿ ಆಟ ಆಡಾಕ ಸುರು ಮಾಡಿದ, ಹೋರಿ ಕೋಡಿಗೆ ಕೊಂಬೆಣಸು ಹಾಕಿಸಿದೆಂಗ ಆಗೈತಿ ನೋಡು ಗಿರಿಯಪ್ಪ ನಿನ್ನ ಮುಶಿ… ಎಂಬಂಥ ಸಾಲುಗಳು ತಲೆಯಲ್ಲಿ ಸುತ್ತಿ ಮನಸ್ಸು ಕಳ್ಳೆಮಳ್ಳೆ ಆಡಿಸತೊಡಗಿದವು.

( ಸಾಹೇಬಗೌಡ ಯ ಬಿರಾದಾರ)

ಗುಡ್ಡದ ಮುಕದಲ್ಲಿ ಎದ್ದ ಬೊಕ್ಕೆಗಲ ಹಾಗೆ ಕಾಣುತ್ತದೆ, ಯಾವ ಕುಸ್ತಿಯಾಳೂ ಎತ್ತಲಾಗದಕ್ಕೆ ಗರಡಿಯ ಮನೆಯ ಹೊರಗೆ ಅನಾಥವಾಗಿ ಬಿದ್ದ ಸಂಗ್ರಾಣು ಕಲ್ಲಿನ ಹಾಗೆ ರೆಬಕಾಯಿ ಅಚಲವಾಗಿ ಕುಳಿತಿದ್ದಾಳೆ, ಎನ್ನುವ ಹೋಲಿಕೆ ಹಾಗೂ ಉಪಮೆಗಳನ್ನು ಖುದ್ದು ಈ ಕತೆಗಳನ್ನು ಓದಿ ತಿಳಿದಾಗ ಹೋಳಿಗಿ ಉಂಡಷ್ಟು ಖುಷಿ ಆಗುವುದು.

ಎಲ್ಲಾ ಕತೆಗಳ ಅಂತಿಮ ಸತ್ಯ “ಏಕದಾರಿ”: ಜುಮ್ಮಣ್ಣನ ಕಂಚಿನ ಮೂರ್ತಿಯಲ್ಲಿ ಶಿವ್ಲಿಂಗ್ ಬಾವಾನ ಜೊತೆ ಹೊರಡುವುದು, ರತ್ನಗಿರಿಯ ಮಾಯೆಯಲ್ಲಿ ಮತ್ತೆ ಹಳ್ಳಿಯ ಹೊಲದತ್ತ ಮುಖ ಮಾಡುವುದು, ಅಟ್ಟ ಕತೆಯಲ್ಲಿ ಕೆಂಚ ಬತ್ತಿರಪ್ಪನ ಗುಡ್ಡದ ಕಡೆ ನೋಡುತ್ತ ನಿಂತು ಲೋಕ ಮರೆಯೋದು, ಹೊಸ್ತಿಲೊಳಗಣ ಹುತ್ತದಲ್ಲಿ ತಿಪ್ಪಣ್ಣನ ಮಾತಿನಿಂದ ಗಿರಿಯಪ್ಪ ಮನಸ್ಸು ಬದಲಾಯಿಸುವುದು, ಊರ್ಧ್ವರೆತುವಿನಲ್ಲಿ ಡಾ. ರಂಗರಾಜ ಮೋಹಬಂಧನದಿಂದ ಯೋಗಬಂಧನಕ್ಕೆ ಒಳಗಾಗಿ ಡಾ.ಸೇವಂತಿಯ ಬಯಕೆಯನ್ನು ಸೌಜನ್ಯದಿ ತಿರಸ್ಕರಿಸುವುದು, ಅರ್ಯಾಣಸಿದ್ಧ ದೇವರ ಮೇಲೆ ಅಪಾರ ಭಕ್ತಿಯನ್ನು ಇಟ್ಟ ರೆಬಕಾಯಿಯ ನಿಷ್ಠೆ, ರಾಯಪ್ಪನ ಬಾಡಿಗೆ ಸಾಯಿಕಲ್ಲು ಕತೆಯಲ್ಲಿ ರಾಯಪ್ಪ ಮರಳಿ ಹೊಲಕ್ಕೆ ಬಂದು ಗೊಬ್ಬರ ಚೆಲ್ಲಿದ ಪರಿ ಇದೆಲ್ಲವನ್ನು ನೋಡಿದರೆ, ಈ ಎಲ್ಲಾ ಕತೆಗಳು ಹಳ್ಳಿಗಾಡಿನ ಲೌಕಿಕ ಹಂದರದಲ್ಲಿ ಹುಟ್ಟಿ, ಬದುಕಿನ ತೊಟ್ಟಿಲದಾಗ ಬಡಿದಾಡಿ, ಸಂಜೆಗತ್ತಲಿನ ಇಳಿವಯಸ್ಸಿಗೆ ಅಲೌಕಿಕದತ್ತ ಮುಖಮಾಡಿ ಏಕತಾರಿಯ ನಾದದಲ್ಲಿ ಒಂದಾದಂತೆ ಎದ್ದು ತೋರುತ್ತವೆ.

ಮುನುಷ್ಯ ಬದುಕಿನ ಸಾರ್ಥಕತೆಯನ್ನು ನಂಬಿಕೆ, ನೈತಿಕತೆಯ ಚೌಕಟ್ಟಿನೊಳಗೆ ಕಟ್ಟಿಯವರು ಕಟ್ಟಿದ ಕತೆಗಳಿವೆ. ಅವುಗಳನ್ನು ನಿಭಾಯಿಸಿದ ರೀತಿ ದಡಮುಟ್ಟಿಸಿದ ಪರಿ ಓದುಗನಿಗೆ ವಿಸ್ಮಯ ಎನಿಸುತ್ತದೆ. ಆ ಮೂಲಕ ಕಥಾ ಸಾಹಿತ್ಯದಲ್ಲಿ ಈ ಕತೆಗಳು ಗಟ್ಟಿಯಾಗಿ ನಿಲ್ಲಬಲ್ಲವುಗಳಾಗಿವೆ.

ಏಕತಾರಿಯ ಬೆನ್ನಪುಟದ ಒಳಪುಟದಲ್ಲಿ ಡಾ.ಬಾಳಾಸಾಹೇಬ ಲೋಕಾಪುರ ಅವರು ಕೃತಿ ಕುರಿತು ಆಡಿದ ಮಾತುಗಳು ಏಕತಾರಿಯ ನಾಡಿಮಿಡಿತದಂತಿವೆ. ಒಳಗೇನಿದೆ ಎಂಬುದರ ಹೊಸಹೊಳಲಿನ ಹೂರಣ ಮುಷ್ಟಿ ಮುಷ್ಟಿಯಾಗಿ ನೀಡಿದ್ದಾರೆ. ಈ ಕತೆಗಳಲ್ಲಿ ಉಂಡ ಬದುಕಿನ ತಾಜಾತನವಿದೆ, ಕಟ್ಟಿದ ಕತೆಗಳ ಕೃತ್ರಿಮತೆಯನ್ನು ದಾಟಿದ ಹುಟ್ಟಿದ ಕತೆಗಳು ಇಲ್ಲವೆ ಎಂದು ಹೃದಯತುಂಬಿ ಆಡಿದ ಮಾತುಗಳು ಸಹ ಎದೆಯಾಳಕ್ಕೆ ಇಳಿಯುತ್ತವೆ.