ಜಲ್ಲಿಕಟ್ಟು ಬೇರೆ ಕ್ರೀಡೆಗಳಿಗಿಂತ ಹೇಗೆ ವಿಭಿನ್ನವಾದದ್ದು ಎಂದು ಕೇಳಿದರೆ ಅದಕ್ಕೊಂದು ಉತ್ತರವಿದೆ. ಬೇರೆ ಆಟಗಳಲ್ಲಿ ಆಡುವ ಇಬ್ಬರೂ ಆಟಗಾರರಿಗೂ ಇದು ಆಟವೆಂದು ತಿಳಿದಿರುತ್ತದೆ. ಆದರೆ ಜಲ್ಲಿಕಟ್ಟುವಿನಲ್ಲಿ ಹಾಗಲ್ಲ. ಮನುಷ್ಯನಿಗೆ ಮಾತ್ರ ಇದು ಆಟ. ಮೃಗಕ್ಕೆ ಅದು ಗೊತ್ತಿಲ್ಲ. ಆಟವೆಂದು ತಿಳಿಯದ ಮೃಗವನ್ನು ಅಡಗಿಸಲು ಮನುಷ್ಯನಿಗೆ ಸಾಕಷ್ಟು ಯುಕ್ತಿಗಳಿವೆ. ಮೃಗವು ಅದನ್ನೆಲ್ಲಾ ಮೀರಿ ಆತನಿಂದ ತಪ್ಪಿಸಿಕೊಳ್ಳಬೇಕು. ಅದರ ಕೆಲವು ಅಂಶಗಳು ವಾಡಿವಾಸಲ್ ನಲ್ಲಿ ವಿವರವಾಗಿಯೇ ಬರೆಯಲಾಗಿದೆ. ಮನುಷ್ಯನೊಳಗೂ ಬಚ್ಚಿಟ್ಟುಕೊಂಡಿರುವ ಮೃಗತ್ವವನ್ನು ತೋರುವ ಕೃತಿಯಾಗಿದೆ ಈ ವಾಡಿವಾಸಲ್.
ಚಿ.ಸು. ಚೆಲ್ಲಪ್ಪ ಬರೆದ ‘ವಾಡಿವಾಸಲ್‌’ಗೆ ಪೆರುಮಾಳ್ ಮುರುಗನ್ ಬರೆದ ಮುನ್ನುಡಿ

 

ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ – ಜಲ್ಲಿಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಇದೊಂದು ಜೀವನಶೈಲಿ. ಪ್ರಾಚೀನ ತಮಿಳು ಸಾಹಿತ್ಯವಾದ ‘ಕಲಿತ್ತೊಗೈ’ ನಲ್ಲಿ ಆಯರ್‍ಗಳು ಬಾಳುವ ಮುಲ್ಲೈ ನೆಲದಲ್ಲಿ ನಡೆಯುವ ಜಲ್ಲಿಕಟ್ಟಿನ ಕುರಿತು ಸಾಕಷ್ಟು ವರ್ಣಿಸಲಾಗಿವೆ. ಆ ದಿನಗಳಲ್ಲಿ ಈ ಕ್ರೀಡೆಯ ಹೆಸರು ‘ಏರು ತಳುವುದಲ್’. ಏರು ಎಂಬ ಶಬ್ದಕ್ಕೆ ಎತ್ತು ಅಥವಾ ಗೂಳಿ ಎಂಬ ಅರ್ಥವಿದೆ. ಗೂಳಿಯನ್ನು ಅಡಗಿಸಿ ಕನ್ಯೆಯ ಕೈ ಹಿಡಿಯುವ ವ್ಯಕ್ತಿಗಳ ಬಗ್ಗೆ ಚಿತ್ರಣಗಳಿವೆ.

ಪುಣ್ ಕುರುಕ್ಕನ್, ಸುರಿ ನೆಟ್ರಿಕ್ಕಾರಿ, ನುಣ್ಪೊರಿ ವೆಳ್ಳೈ ಎಂಬ ಹಲವು ಎತ್ತುಗಳ ವಿವರಗಳು ಹಾಗೂ ಅವುಗಳನ್ನು ಅಡಗಿಸುವ ವೀರನಾಯಕರ ವಿವರಣೆಗಳು ‘ಮುಲ್ಲೈ ಕಲಿ’ ಯಲ್ಲಿ ಸಿಗುತ್ತವೆ. ಆ ಕೃತಿಯಲ್ಲಿ ಜಲ್ಲಿಕಟ್ಟನ್ನು ಯುದ್ಧಭೂಮಿಗೆ ಸಮನಾಗಿ ವರ್ಣಿಸಲಾಗಿದೆ. ಕೊಂಬನ್ನು ಕಂಡು ಅಂಜುವ ಗಂಡಸನ್ನು ಮುಂದಿನ ಜನ್ಮದಲ್ಲೂ ಸಹ ಆಯರ್ ಜನಾಂಗದ ಹೆಣ್ಣು ಮಗಳು ಬಯಸುವುದಿಲ್ಲ ಎಂಬ ವಾಕ್ಯಗಳೂ ಸಹ ಕಾಣ ಸಿಗುತ್ತವೆ.

(ಚಿ.ಸು. ಚೆಲ್ಲಪ್ಪ)

‘ಏರು ತಳುವುದಲ್’ ಆ ಕಾಲದಲ್ಲಿ ಸರ್ವೇ ಸಾಮಾನ್ಯ ಕ್ರೀಡೆಯಾಗಿತ್ತು ಎಂಬುದನ್ನು ಕಲಿತ್ತೊಗೈಯಿಂದ ತಿಳಿಯಬಹುದು. ಮೋಜಿನ ಉದ್ದೇಶದಿಂದಲೇ ಶುರುವಾಗಿ ನಂತರ ಕ್ರೀಡೆಯು ಸಾಕಷ್ಟು ರೂಪಗಳನ್ನು ತಾಳಿರುವುದು ಸಹ ಅರಿವಾಗುತ್ತದೆ. ಅತೀವ ಸಂಭ್ರಮ, ಮದ್ಯ ಪಾನದ ಅಮಲು, ವಿಜಯದ ಕುಣಿತಗಳಿಂದ ಕ್ರೀಡೆಯು ಮುಕ್ತಾಯಗೊಳ್ಳುತ್ತಿತ್ತು. ಮನುಷ್ಯನಿಗೂ ಮೃಗಕ್ಕೂ ನಡುವೆ ನಡೆಯುವ ಈ ಕ್ರೀಡೆ ಕೇವಲ ಒಬ್ಬನ ಶೌರ್ಯವನ್ನು ಅಳೆಯುವುದಕ್ಕೆ ಮಾತ್ರ ಸೀಮಿತವಾಗಿತ್ತು. ಬುಡಕಟ್ಟು ಸೊಗಡನ್ನು ಬಿಟ್ಟು ಕೊಡದ ಸಾಮೂಹಿಕ ಕ್ರೀಡೆ ಈ ‘ಏರು ತಳುವುದಲ್’ ಎಂಬುದನ್ನು ಕಲಿತ್ತೊಗೈ ಇಂದ ತಿಳಿದುಕೊಳ್ಳಬಹುದು.

ಕಲಿತ್ತೊಗೈಯ ನಂತರ ಈ ಕ್ರೀಡೆಯ ಬಗ್ಗೆ ತಿಳಿದುಕೊಳ್ಳಬೇಕೆಂದರೆ ನಾವು ಕೆಲವು ಕಾದಂಬರಿಗಳನ್ನು ಗಮನಿಸಬೇಕಾಗುತ್ತದೆ. ಹಳೆಯ ಕಾದಂಬರಿಗಳಲ್ಲಿ ಒಂದಾದ ರಾಜಮ್ ಅಯ್ಯರ್ ಅವರ ‘ಕಮಲಂಬಾಳ್ ಸರಿತ್ತಿರಮ್’ ನಲ್ಲಿ ಜಲ್ಲಿಕಟ್ಟು ಕ್ರೀಡೆಯ ಕುರಿತು ಉಲ್ಲೇಖವಿದೆ. ಆದರೆ ಇದರಲ್ಲಿ ಜಲ್ಲಿಕಟ್ಟು ಸಾಹಸ ಕ್ರೀಡೆಯಾಗಿಲ್ಲ. ಬದಲಿಗೆ, ಅದರ ಒಳಗಿನ ರಾಜಕೀಯ ಮತ್ತು ಅಧಿಕಾರ ದರ್ಪಗಳ ಬಗ್ಗೆ ಮಾತನಾಡುತ್ತದೆ. ಮೃಗಕ್ಕೂ ಮನುಷ್ಯನಿಗೂ ಶುರುವಾಗುವ ಪಂದ್ಯ ಹೇಗೆ ಮನುಷ್ಯ – ಮನುಷ್ಯನ ಮಧ್ಯೆ ಹೊತ್ತಿಕೊಳ್ಳುತ್ತದೆ ಎಂಬ ಚಿತ್ರಣವಿದೆ. ಅಧಿಕಾರ ಹೊಂದಿರುವ ಇಬ್ಬರು ತಮ್ಮ ತಮ್ಮ ಗೂಳಿಗಳನ್ನು ಅಖಾಡಕ್ಕೆ ಬಿಟ್ಟು ಜಯ ಸಾಧಿಸಲು ಹಾತೊರೆಯುತ್ತಾರೆ. ಸೋತ ವ್ಯಕ್ತಿಯು ಗೂಳಿಗೆ ನೀಡುವ ಶಿಕ್ಷೆಯಂತೂ ಘನಘೋರ. ಜೀವಂತವಾಗಿಯೇ ಅದರ ಚರ್ಮವನ್ನು ಸುಲಿಯಲು ಆಜ್ಞೆ ಇಡುತ್ತಾನೆ.

‘ಕಮಲಂಬಾಳ್ ಸರಿತ್ತರಿಮ್’ ನಂತರ ಜಲ್ಲಿಕಟ್ಟುವಿನ ಬಗ್ಗೆ ಕು.ಪ. ರಾಜಗೋಪಾಲರ ‘ವೀರಮ್ಮಾಳ್ ಕಾಳೈ’ ಎಂಬ ಸಣ್ಣ ಕತೆಯಲ್ಲಿ ಕಾಣಬಹುದು. ಕಳ್ಳರ್ ಜಾತಿಯ ಹೆಣ್ಣುಮಗಳಾದ ವೀರಮ್ಮಾಳ್ ಬೆಳೆಸಿದ ಗೂಳಿಯನ್ನು ಆಕೆ ಇಷ್ಟ ಪಡುವ ಕಾತ್ತಾನ್ ಎಂಬುವನು ಅಡಗಿಸಲು ಯತ್ನಿಸುತ್ತಾನೆ. ವೀರಮ್ಮಾಳ್ ತಂದೆಯ ಜೊತೆ ವಾಗ್ವಾದ ಉಂಟಾಗಿ ಕಾತ್ತಾನ್ ಈ ನಿರ್ಧಾರಕ್ಕೆ ಬಂದಿರುತ್ತಾನೆ. ಜಲ್ಲಿಕಟ್ಟಿನಲ್ಲಿ ಗೂಳಿಯನ್ನು ಅಡಗಿಸಿ, ಕೊಂಬಿಗೆ ಕಟ್ಟಿದ್ದ ರುಮಾಲನ್ನು ಸಹ ಬಿಚ್ಚಿ ಬಿಡುತ್ತಾನೆ. ಹೆಚ್ಚುಕಡಿಮೆ ಆತ ಗೆದ್ದ ಹಾಗೆಯೆ. ಆದರೆ ಆ ಸಮಯದಲ್ಲಿ ಅನಾಹುತವಾಗಿ ಬಿಡುತ್ತದೆ. ಗೂಳಿ ಆತನನ್ನು ತಿವಿದು ಕೊಂದುಬಿಡುತ್ತದೆ. ಆ ಅಪಘಾತದಿಂದ ವೀರಮ್ಮಾಳ್ ಅತೀವ ದುಃಖದಲ್ಲಿ ಕೂತಿದ್ದಾಳೆ. ಕಾತ್ತಾನ್ ತೀರಿಕೊಂಡದ್ದರಿಂದ ಆಕೆ ಇಷ್ಟು ಖಿನ್ನಳಾಗಿದ್ದಾಳೆ ಎಂಬಂತೆ ಕಥೆ ಸಾಗುತ್ತದೆ. ಆದರೆ ಅದು ಆತನ ಸಾವಿನಿಂದಲ್ಲ. ತಾನು ಬೆಳೆಸಿದ ಗೂಳಿ ಅವನ ಕೈಯಿಂದ ಸೋತು ಹೋಯಿತಲ್ಲ ಎಂಬ ದುಃಖ ಎಂಬುದು ತಿಳಿದು ಬರುತ್ತದೆ. ರಾಜಮ್ ಅಯ್ಯರ್ ಬರೆದ ಮುಕ್ತಾಯವೇ ಹೆಚ್ಚು ಕಡಿಮೆ ಈ ಕಥೆಗೂ. ಈಟಿಯನ್ನು ಎತ್ತಿ ಗೂಳಿಯ ಮೇಲೆ ಎಸೆಯುತ್ತಾಳೆ ವೀರಮ್ಮಾಳ್. ಈ ಕಥೆಯಲ್ಲಿ ಜಲ್ಲಿಕಟ್ಟುವಿನ ಬಗ್ಗೆ ವಿಸ್ತಾರವಾದ ವಿವರಣೆಗಳಿಲ್ಲ. ಆದರೆ ಒಂದೇ ಜಾಗದಲ್ಲಿ ನಿಂತು ಎಲ್ಲಾ ದಿಕ್ಕುಗಳಲ್ಲೂ ಕೊಂಬನ್ನು ತಿರುಗಿಸಿ ಆಟಗಾರರನ್ನು ಹಿಂದಿಕ್ಕುವ ಗೂಳಿಗಳ ಬಗ್ಗೆ ವಿವರಣೆಗಳಿವೆ.

ಮೃಗ-ಮನುಷ್ಯನ ಪಂದ್ಯವು ಮೆಲ್ಲಗೆ ಹೇಗೆ ಮನುಷ್ಯ- ಮನುಷ್ಯನ ಪಂದ್ಯವಾಗಿ ಮಾರ್ಪಾಟಾಗುತ್ತದೆ ಎಂಬುದನ್ನು ಚಿ.ಸು. ಚೆಲ್ಲಪ್ಪನವರು ವಾಡಿವಾಸಲ್ ಕಥೆಯಲ್ಲಿ ವರ್ಣಿಸಿದ್ದಾರೆ. ಸಣ್ಣ ಕತೆ, ಕಾದಂಬರಿ, ಕವಿತೆಗಳು, ವಿಮರ್ಶೆ ಎಂದು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಚೆಲ್ಲಪ್ಪ ಅವರು ಕೇವಲ ‘ಎಳುತ್ತು’ ಪತ್ರಿಕೆಯೊಂದಕ್ಕೆ ಸೀಮಿತಗೊಳಿಸಿ ಗುರುತಿಸಲ್ಪಡುತ್ತಿರುವುದು ಸರಿಯಲ್ಲ. ಆ ಪತ್ರಿಕೆಯನ್ನು ಅವರು ನಡೆಸಲು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ಪುಸ್ತಕಗಳನ್ನು ಸ್ವತಃ ಹೆಗಲ ಮೇಲೆ ಹೊತ್ತು ಬೀದಿ ತಿರುಗಿ ಮಾರಿದ್ದಾರೆ. ಬಹಳ ನಷ್ಟ ಅನುಭವಿಸಿದರೂ ಸ್ವಲ್ಪವೂ ಹುಮ್ಮಸ್ಸನ್ನು ಕಳೆದುಕೊಳ್ಳದೆ ಮುನ್ನುಗ್ಗಿದ ಹಠವಾದಿ. ಅವರ ಬಗ್ಗೆ ಮಾತನಾಡಿದರೆ, ಬಹಳಷ್ಟು ಹೇಳುತ್ತಲೇ ಹೋಗಬಹುದು.

ಚಿ.ಸು. ಚೆಲ್ಲಪ್ಪ ಹೊಸತನಗಳಿಂದ ಕೂಡಿದ ಕೆಲವು ಒಳ್ಳೆಯ ಸಣ್ಣ ಕತೆಗಳನ್ನು ಬರೆದಿದ್ದಾರೆ. ವ್ಯವಸ್ಥೆಯನ್ನು, ಜಾತಿ ವಿಧಾನಗಳನ್ನು ಅವರು ನೋಡುತ್ತಿದ್ದ ದೃಷ್ಟಿಕೋನವೇ ಬೇರೆ. ಮರವರ್ ಜಾತಿಯ ಬಗ್ಗೆ ಅವರು ಬರೆದಿರುವ ಕಥೆಗಳೆಲ್ಲವೂ ಅಚ್ಚರಿಯನ್ನುಂಟು ಮಾಡುತ್ತದೆ. ಅದರಲ್ಲಿ ಒಂದು ಈ ವಾಡಿವಾಸಲ್. ರಾಜಮ್ ಅಯ್ಯರ್ ಅವರ ಕಮಲಾಂಬಾಳ್ ಸರಿತ್ತಿರಮ್ ಇಂದಲೂ ವಾಡಿವಾಸಲ್ ಸ್ಫೂರ್ತಿಗೊಂಡಿರಬಹುದು. ರಾಜಮ್ ಅಯ್ಯರ್ ಮತ್ತು ಚಿ.ಸು. ಚೆಲ್ಲಪ್ಪ ಇಬ್ಬರೂ ಒಂದೇ ಊರಿನವರು. ರಾಜಮ್ ಅಯ್ಯರ್ ಎಂದರೆ ಚೆಲ್ಲಪ್ಪನವರಿಗೆ ಸಾಕಷ್ಟು ಗೌರವ. ಆದ್ದರಿಂದ ‘ಕಮಲಾಂಬಾಳ್ ಸರಿತ್ತಿರಮ್’ ನ ಸಣ್ಣ ಭಾಗವೊಂದನ್ನು ವಿಸ್ತರಿಸಿ ಅವರು ವಾಡಿವಾಸಲ್ ಬರೆದಿರಲೂಬಹುದು. ಎರಡು ಕೃತಿಗಳಲ್ಲಿ ಬರುವ ಕೆಲವು ಸಂಭವಗಳು ಒಂದೇ ರೀತಿಯಿವೆ. ಆದರೆ ವಾಡಿವಾಸಲ್ ಏರಲು ಯತ್ನಿಸುವ ಎತ್ತರ ಬಹಳ ದೊಡ್ಡದು.

ಜಲ್ಲಿಕಟ್ಟು ಬೇರೆ ಕ್ರೀಡೆಗಳಿಗಿಂತ ಹೇಗೆ ವಿಭಿನ್ನವಾದದ್ದು ಎಂದು ಕೇಳಿದರೆ ಅದಕ್ಕೊಂದು ಉತ್ತರವಿದೆ. ಬೇರೆ ಆಟಗಳಲ್ಲಿ ಆಡುವ ಇಬ್ಬರೂ ಆಟಗಾರರಿಗೂ ಇದು ಆಟವೆಂದು ತಿಳಿದಿರುತ್ತದೆ. ಆದರೆ ಜಲ್ಲಿಕಟ್ಟುವಿನಲ್ಲಿ ಹಾಗಲ್ಲ. ಮನುಷ್ಯನಿಗೆ ಮಾತ್ರ ಇದು ಆಟ. ಮೃಗಕ್ಕೆ ಅದು ಗೊತ್ತಿಲ್ಲ. ಆಟವೆಂದು ತಿಳಿಯದ ಮೃಗವನ್ನು ಅಡಗಿಸಲು ಮನುಷ್ಯನಿಗೆ ಸಾಕಷ್ಟು ಯುಕ್ತಿಗಳಿವೆ. ಮೃಗವು ಅದನ್ನೆಲ್ಲಾ ಮೀರಿ ಆತನಿಂದ ತಪ್ಪಿಸಿಕೊಳ್ಳಬೇಕು. ಅದರ ಕೆಲವು ಅಂಶಗಳು ವಾಡಿವಾಸಲ್ ನಲ್ಲಿ ವಿವರವಾಗಿಯೇ ಬರೆಯಲಾಗಿದೆ. ಮನುಷ್ಯನೊಳಗೂ ಬಚ್ಚಿಟ್ಟುಕೊಂಡಿರುವ ಮೃಗತ್ವವನ್ನು ತೋರುವ ಕೃತಿಯಾಗಿದೆ ಈ ವಾಡಿವಾಸಲ್.

ಮೋಜಿನ ಉದ್ದೇಶದಿಂದಲೇ ಶುರುವಾಗಿ ನಂತರ ಕ್ರೀಡೆಯು ಸಾಕಷ್ಟು ರೂಪಗಳನ್ನು ತಾಳಿರುವುದು ಸಹ ಅರಿವಾಗುತ್ತದೆ. ಅತೀವ ಸಂಭ್ರಮ, ಮದ್ಯ ಪಾನದ ಅಮಲು, ವಿಜಯದ ಕುಣಿತಗಳಿಂದ ಕ್ರೀಡೆಯು ಮುಕ್ತಾಯಗೊಳ್ಳುತ್ತಿತ್ತು.

ಸೋತು ಹೋದ ತನ್ನ ಕಾರಿಯನ್ನು ಗುಂಡಿಟ್ಟು ಕೊಲ್ಲುವ ಜಮೀನ್ದಾರನ ಒಳಗಿರುವ ಅದೇ ಮೃಗತ್ವ, ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳಲು ಬರುವ ಪಿಚ್ಚಿಯಲ್ಲೂ ಕಾಣಬಹುದು. ಅದರ ತೀವ್ರತೆಗಳು ಮತ್ತು ಉದ್ದೇಶಗಳು ಬೇರೆ ಅಷ್ಟೆ. ಗೂಳಿಯೆಂಬುದು ಜಮೀನ್ದಾರನಿಗೆ ತನ್ನ ಅಧಿಕಾರದ ಗುರುತು. ತನ್ನ ಗೂಳಿಯನ್ನು ಯಾರಿಂದಲೂ ಅಡಗಿಸಲು ಸಾಧ್ಯವಿಲ್ಲ ಎಂಬ ವಿಶ್ವಾಸದ ಜೊತೆಗೆ ಅಡಗಿಸಲು ಯಾರೂ ಬರಬಾರದೆಂಬ ಅವರ ನಿರೀಕ್ಷೆಯೂ ಇಲ್ಲಿ ಮುಖ್ಯವಾದದ್ದು. ಪಿಚ್ಚಿ, ಕಾರಿಯನ್ನು ಅಡಗಿಸಲು ಬಂದಿದ್ದಾನೆಂಬ ವಿಷಯವನ್ನು ಜಮೀನ್ದಾರರು ಖಾತರಿ ಪಡಿಸಿಕೊಳ್ಳುವ ವಿಧಾನವು ಮತ್ತು ಅದರ ನಂತರ ನಡೆಯುವ ಸಂಭಾಷಣೆಯು ಮುಖ್ಯವಾದದ್ದು. ಕಾರಿಯ ಚಲನೆ, ಸಾಮರ್ಥ್ಯ ಮತ್ತು ಆಕ್ರೋಶ ಇವು ಯಾವೂ ಸಾಮಾನ್ಯ ಗೂಳಿಯಂಥದ್ದಲ್ಲ. ಪಿಚ್ಚಿಯ ಎದುರು ನಿಂತಿರುವ ಆಕೃತಿ ಗೂಳಿಯಾಗಿರಬಹುದು. ಆದರೆ ಅದು ಗೂಳಿಯಲ್ಲ. ಅವನ ಪ್ರಕಾರ ಅದು ಗೂಳಿ ರೂಪದ ಮನುಷ್ಯನೇ. ಕಾರಿಯನ್ನು ಅಡಗಿಸಿದ ನಂತರ ಜನ ಮಾತನಾಡಿಕೊಳ್ಳುವ ಮಾತುಗಳು ಜಮೀನ್ದಾರನ ಕಿವಿಗೆ ಸಾಧಾರಣವಾಗಿ ಕೇಳುವುದಿಲ್ಲ. ಎಲ್ಲವೂ ಚುಚ್ಚು ಮಾತುಗಳಂತೆ ಅನ್ವಯಿಸುತ್ತವೆ. ಅವರ ಮುಖಭಾವ ದಿಢೀರನೇ ಬದಲಾಗಿ ಸಿಟ್ಟು ಹುಟ್ಟುತ್ತದೆ. ‘ಮೂಡಣದೋನು ಜಮೀನ್ ಗೂಳೀನ ಅಡಗುಸ್ಬುಟ್ಟ’, ‘ಹುಣ್ಸೆ ಹಣ್ ಹಿಸುಕ್ದಂಗ್ ಹಿಸುಕ್ಬುಟ್ಟ ಕಲಾ’ ಮುಂತಾದ ಮಾತುಗಳು ಅವರ ಅಧಿಕಾರವನ್ನು ಪ್ರಶ್ನಿಸುವಂತಾಗುತ್ತವೆ. ಅಧಿಕಾರಕ್ಕೆ ಕಳಂಕ ತಂದ ಕಾರಿಯನ್ನು ಜಮೀನ್ದಾರರು ಹೇಗೆ ತಾನೆ ಒಪ್ಪುತ್ತಾರೆ?

(ಪೆರುಮಾಳ್ ಮುರುಗನ್)

ಜನರೆಲ್ಲಾ ಸೇರುವ ಇಂತಹ ಕ್ರೀಡಾ ಸಮಯಗಳಲ್ಲಿ ಮನುಷ್ಯರ ಮಧ್ಯೆ ಇರುವ ಅಸಮಾನತೆಯಿಂದಾಗುವ ಸಾಧಕ ಬಾಧಕಗಳನ್ನೂ ವಾಡಿವಾಸಲ್ ಸೂಕ್ಷ್ಮವಾಗಿ ಬಿಚ್ಚಿಡುತ್ತದೆ. ಜಮೀನ್ದಾರನೆಂಬ ವ್ಯಕ್ತಿಯ ಮುಂದೆ ಮಹಾಶೂರನಾದ ಪಿಚ್ಚಿ ಕೈ ಕಟ್ಟಿ ನಿಲ್ಲುತ್ತಾನೆ. ‘ಜಮೀನ್’ ಮನೆತನಕ್ಕೆ ಆತ ತೋರುವ ಗೌರವ, ಈ ಅತಿ ವಿನಯ, ಇನ್ನೂ ಹೇಳಬೇಕೆಂದರೆ ಗುಲಾಮತನ. ಜಮೀನ್ದಾರರಿಗೆ ಬೆನ್ನು ತೋರಿಸಿ ನಡೆಯಬಾರದು, ಧ್ವನಿ ಏರಿಸಿ ಮಾತನಾಡಬಾರದು. ಸೂಕ್ಷ್ಮವಾಗಿ ಗಮನಿಸಿದರೆ, ಜಮೀನ್ದಾರನು ಮತ್ತು ಪಿಚ್ಚಿಯೂ ಒಂದೇ ಜಾತಿಗೆ ಸೇರಿದವರೇ ಆಗಿರುತ್ತಾರೆ. ಆದರೆ ಆ ಜಾತಿಯೊಳಗೆ ಉಪಜಾತಿಗಳಿವೆ. ಅದರಲ್ಲಿ ಜಮೀನ್ದಾರ ಒಡೆಯ. ಪಿಚ್ಚಿ ಕೈ ಆಳು.

ಕಾರಿ ಪ್ರವೇಶಿಸಿದ ನಂತರ ಕಥೆಯ ಓಟಕ್ಕೆ ಬೇರೊಂದು ಬಲ ಸಿಕ್ಕಿದಂತಾಗುತ್ತದೆ. ಪಿಚ್ಚಿಗೂ ಕಾರಿಗೂ ನಡುವೆ ಶುರುವಾಗುವ ಪಂದ್ಯ ರಣರಂಗದ ಕಾಳಗದಂಥದ್ದು. ಇಲ್ಲಿ ಪಿಚ್ಚಿ ಜಮೀನ್ದಾರನ ಮುಂದೆ ಕೈ ಕಟ್ಟಿ ನಿಂತಿದ್ದ ವ್ಯಕ್ತಿ ಅಲ್ಲ. ವಾಡಿವಾಸಲ್ ಆತನ ಕೋಟೆ. ಅವನ ಅಖಾಡ! ವಿನಯದಿಂದ ಬೆನ್ನು ಬಾಗಿ ನಿಂತಿದ್ದ ಆಳು ಈಗ ತನ್ನ ಅಧಿಕಾರದ ರೂಪಕದ ಮೇಲೆ ಉಸ್ತುವಾರಿ ಹೊಂದಿರುವುದು ಜಮೀನ್ದಾರರಿಗೆ ಜೀರ್ಣಿಸಲಾಗದ ಸಂಗತಿ. ಇಂತಹ ವಿಷಯಗಳನ್ನು ಬಹಳ ಚುರುಕಾಗಿ ಮತ್ತು ಒತ್ತಿ ಹೇಳಿದ್ದಾರೆ ಚೆಲ್ಲಪ್ಪ.

ಅಧಿಕಾರ, ಜಾತಿಯ ದರ್ಪ ಮೊದಲಾದ ಸಮಾಚಾರಗಳನ್ನು ವಿರೋಧಿಸುವ ಸ್ಥಳವಾಗಿಯೂ ವಾಡಿವಾಸಲ್ ಅನ್ನು ಕಾಣಬಹುದು. ಪಿಚ್ಚಿಯ ತಂದೆ ಅಂಬುಲಿ ಕಾರಿಯನ್ನು ಅಡಗಿಸಲು ಯತ್ನಿಸಿ ಸೋತವನು. ಅವನ ಮಗ ತಂದೆಯ ದಾರಿಯನ್ನೇ ಹಿಡಿಯುತ್ತಾನೆ. ತಂದೆಯ ಹೆಸರನ್ನು ಕಾಪಾಡುವ ಉದ್ದೇಶವಿದೆ ಅವನಲ್ಲಿ. ಅಂಬುಲಿಯ ತಲೆಮಾರಿನ ಮುದುಕನೊಬ್ಬ ಪಿಚ್ಚಿಗೆ ಅಖಾಡದ ಸೂಕ್ಷ್ಮಗಳನ್ನು ತಿಳಿಸುತ್ತಾನೆ. ಅದೇ ರೀತಿ ಪಿಚ್ಚಿಗೆ ವಿರೋಧವಾಗಿಯೂ ನಿಲ್ಲುವ ಕೆಲವರನ್ನು ಕಾಣಬಹುದು. ಮುಖ್ಯವಾಗಿ ಜಮೀನ್ ಕಡೆಯವನೇ ಪಿಚ್ಚಿಗೆ ವಿರೋಧಿ. ಇಲ್ಲಿ ವಂಚನೆ, ಆಕ್ರೋಶ, ದ್ವೇಷ, ಸಾಧಿಸುವ ಛಲ ಎಲ್ಲವೂ ಇದೆ. ಇದೊಂದು ರಣರಂಗ. ಜಲ್ಲಿಕಟ್ಟು ಎಂಬುದನ್ನು ಇಲ್ಲಿ ಅಧಿಕಾರ ವಿರೋಧದ ರೂಪಕವಾಗಿ ಕಾಣಬಹುದು.

ಚಿ.ಸು. ಚೆಲ್ಲಪ್ಪ ವಾಡಿವಾಸಲ್ ಅನ್ನು ವಿವರಿಸುವ ವಿಧಾನ, ಪಾತ್ರಗಳನ್ನು ಬೆಳೆಸುವ ರೀತಿ, ಕಟ್ಟಿಕೊಡುವ ನೈಜ ಚಿತ್ರಣ – ಇವುಗಳಿಂದ ಅವರು ಎಂಥಾ ಶ್ರೇಷ್ಠ ಸಾಹಿತಿಯೆಂಬುದನ್ನು ತೋರಿಸುತ್ತದೆ. ಜಲ್ಲಿಕಟ್ಟು ಮೃಗವನ್ನು ಹಿಂಸಿಸುವ ಕ್ರೀಡೆಯೆಂದು ವಿಮರ್ಶಿಸುವ ಪ್ರಾಣಿದಯಾ ಗುಂಪಿನವರು, ಒಮ್ಮೆ ವಾಡಿವಾಸಲ್ ಅನ್ನು ಓದಬೇಕು.

(ಕೃತಿ: ವಾಡಿವಾಸಲ್‌ (ಕಾದಂಬರಿ), ಮೂಲ: ಚಿ.ಸು. ಚೆಲ್ಲಪ್ಪ, ಅನುವಾದ: ಸತ್ಯಕಿ, ಪ್ರಕಾಶಕರು: ಛಂದ ಪುಸ್ತಕ, ಬೆಲೆ: 70/-)