ರಾಜರಾಜನು ಶಿವಭಕ್ತನಾಗಿದ್ದನು. ತಂಜಾವೂರಿನಲ್ಲಿ ಅವನು ಕಟ್ಟಿಸಿದ ರಾಜರಾಜೇಶ್ವರ ದೇವಾಲಯವು ತಮಿಳುನಾಡಿನ ದೇವಾಲಯಗಳಲ್ಲೇ ಅತ್ಯಂತ ಸುಂದರವಾಗಿದೆ. ನಾಗಪಟ್ಟಣದಲ್ಲಿ ಒಂದು ಬೌದ್ಧ ದೇವಾಲಯವನ್ನು ಕಟ್ಟಿಸಿ ಮತ್ತು ವೈಷ್ಣವ ಮತಕ್ಕೂ ಪ್ರೋತ್ಸಾಹವನ್ನಿತ್ತು, ಪರಧರ್ಮ ಸಹಿಷ್ಣುತೆಯನ್ನು ಪ್ರದರ್ಶಿಸಿರುವನು. ಕಲೆ, ಸಾಹಿತ್ಯಗಳು ಸಾಕಷ್ಟು ಪ್ರೋತ್ಸಾಹವನ್ನು ಇವನಿಂದ ಪಡೆದುಕೊಂಡುವು. ರಾಜ್ಯಾಡಳಿತದಲ್ಲಿ ಸುಧಾರಣೆಯನ್ನು ತಂದು ಹೆಸರುವಾಸಿಯಾದನು. ಕಂದಾಯವನ್ನು ನಿರ್ಧರಿಸಲು ಭೂಮಿಯ ಸರ್ವೆ ಮಾಡಿಸಿದನಲ್ಲದೆ, ತನ್ನ ವಿಶ್ವಾಸಕ್ಕೆ ಯೋಗ್ಯರಾದ ಜನರನ್ನು ಪ್ರತಿನಿಧಿಗಳಾಗಿ ಅಲ್ಲಲ್ಲಿ ನಿಯಮಿಸಿ ಆಡಳಿತವು ಸರಿಯಾಗಿ ನಡೆಯುವಂತೆ ನೋಡಿಕೊಂಡನು.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯಲ್ಲಿ ಚೋಳ ಸಾಮ್ರಾಜ್ಯದ ಕುರಿತ ಬರಹ ಇಲ್ಲಿದೆ.

ಚೋಳರು

ಕಲಭ್ರರ ಹಾವಳಿಯಿಂದ ಅವನತಿ ತಲುಪಿದ ಉರೈಯೂರಿನ ಚೋಳರು ಕ್ರಿ.ಶ. 880ರ ತನಕವೂ ಬೇರೆ ಬೇರೆ ಕಾಲದ ಪಾಂಡ್ಯ, ಪಲ್ಲವ, ಚಾಲುಕ್ಯರ ಸಾಮಂತರಾಗಿದ್ದರು. ಕ್ರಿ.ಶ. 880ರಲ್ಲಿ ವಿಜಯಾಲಯನು ಕಲಭ್ರರಿಂದ ತಂಜಾವೂರನ್ನು ಕಿತ್ತುಕೊಂಡನು. ಚೋಳರ ಅದೃಷ್ಟವು ಉದಯಿಸಿತು. ವಿಜಯಾಲಯನ ಮಗನಾದ ಆದಿತ್ಯನು ಪಲ್ಲವರಿಂದ ಕಾಂಚಿಯನ್ನೂ, ಪಾಂಡ್ಯರಿಂದ ಸೇಲಂ ಕೊಯಂಬತ್ತೂರುಗಳನ್ನೂ ಗೆದ್ದು ತನ್ನ ಸಾಮ್ರಾಜ್ಯವನ್ನು ಕಾಳಹಸ್ತಿಯಿಂದ ಪುದುಕೋಟೆ (ಪಾಂಡಿಚೇರಿ) ತನಕ ವಿಸ್ತರಿಸಿದನು.

ಒಂದನೇ ಪರಾಂತಕ (907-953): ಆದಿತ್ಯನಿಂದ ಸುರುಹಚ್ಚಲ್ಪಟ್ಟ ಪಾಂಡ್ಯ ವಿನಾಶಕಾರ್ಯವು ಅವನ ಮಗನಾದ ಪರಾಂತಕನಿಂದ ಮುಂದರಿಸಲ್ಪಟ್ಟಿತು. ಪಾಂಡ್ಯರನ್ನು ಸದೆಬಡಿದು ಅವರ ರಾಜಧಾನಿಯಾದ ಮಧುರೆಯನ್ನು ಪಡೆದನು. ಸಿಂಹಳದ ಅರಸನೊಂದಿಗೆ ಯುದ್ಧ ಸಾರಿ ಅವನ ಮೇಲೆ ಸಾರ್ವಭೌಮತ್ವವನ್ನು ಸ್ಥಾಪಿಸಿದನು. ಪಲ್ಲವರನ್ನು ಸಂಪೂರ್ಣವಾಗಿ ಸೋಲಿಸಿ ಕಾಂಚಿಯ ಉತ್ತರಕ್ಕಿದ್ದ ಭೂಭಾಗವನ್ನು ವಶಪಡಿಸಿದನು. ಈ ರೀತಿಯಾಗಿ ಉತ್ತರ ಪೆನ್ನಾರಿನಿಂದ ಕನ್ಯಾಕುಮಾರಿಯ ನಡುವಣ ರಾಜ್ಯದ ಒಡೆಯನಾದನು.

ಪರಾಂತಕನು ಉತ್ತಮ ಆಡಳಿತಗಾರನಾಗಿ ಹೆಸರನ್ನು ಪಡೆದನು. ಗ್ರಾಮಗಳ ಆಡಳಿತಕ್ಕಾಗಿ ಸಭಾಗಳನ್ನು ನಿರ್ಮಿಸಿದನು. ಈ ಸಭಾಗಳ ಸದಸ್ಯತ್ವವನ್ನು ಹೊಂದಲು ಬೇಕಾದ ಯೋಗ್ಯತೆಗಳನ್ನು ಶಾಸನರೂಪವಾಗಿ ಉತ್ತರ ಪೆನ್ನಾರಿನಲ್ಲಿ ಪ್ರಸಿದ್ಧಿಗೊಳಿಸಿದನು. ಶೈವನಾಗಿದ್ದ ಪರಾಂತಕನು ಆ ಧರ್ಮದ ಏಳಿಗೆಗಾಗಿ ದುಡಿದನು. ಅನೇಕ ಶಿವದೇವಾಲಯಗಳನ್ನು ಕಟ್ಟಿಸಿದನಲ್ಲದೆ ಚಿದಂಬರಮಿನ ನಟರಾಜ ದೇವಾಲಯಕ್ಕೆ ಚಿನ್ನದ ಮಾಡನ್ನು ನಿರ್ಮಿಸಿದನು.

ಪರಾಂತಕನ ಕೊನೆಗಾಲದಲ್ಲಿ ರಾಷ್ಟ್ರಕೂಟರ ಮೂರನೇ ಕೃಷ್ಣನು ದಂಡೆತ್ತಿ ಬಂದು ಕಾಂಚಿಯನ್ನು ವಶಪಡಿಸಿಕೊಂಡನು. ಈ ಯುದ್ಧದಲ್ಲಿ ಪರಾಂತಕನ ಮಗನು ಮರಣ ಹೊಂದಿದ ಕಾರಣ ಈಗಿನ್ನೂ ಉದಯೋನ್ಮುಖಿಯಾಗಿದ್ದ ಚೋಳ ಸಾಮ್ರಾಜ್ಯಕ್ಕೆ ದೊಡ್ಡ ಆಘಾತವುಂಟಾಯಿತು. ಮುಂದೆ ಕ್ರಿ.ಶ. 985ರಲ್ಲಿ ರಾಜರಾಜ ಚೋಳನು ಪಟ್ಟಕ್ಕೇರುವ ತನಕ ಚೋಳ ಸಾಮ್ರಾಜ್ಯವು ಶತ್ರುಗಳ ಕಾಟಕ್ಕೊಳಗಾಗಿ ದುರ್ಬಲವಾಗುತ್ತ ಬಂತು.

ರಾಜರಾಜ (985-1014): ಕ್ರಿ.ಶ. 985ರಲ್ಲಿ ಪಟ್ಟಾಭಿಷಿಕ್ತನಾದ ರಾಜರಾಜನಿಗೆ ಪ್ರಬಲರಾದ ವೈರಿಗಳನ್ನು ಸೋಲಿಸಿ ರಾಜ್ಯವನ್ನು ಮತ್ತೆ ಕಟ್ಟಬೇಕಿತ್ತು. ಇದರ ಪ್ರಾರಂಭವಾಗಿ ಚೇರರ ನೌಕೆಯನ್ನು ನಾಶಪಡಿಸಿ, ಅವರು ಅಧೀನರಾಗುವಂತೆ ಮಾಡಿದನು. ಈ ದಿಗ್ವಿಜಯವನ್ನು ಪಾಂಡ್ಯ ರಾಜ್ಯದ ಮೇಲೂ, ಸಿಂಹಳದ ಮೇಲೂ ಮುಂದುವರಿಸಿ, ಚೋಳ ಸಾರ್ವಭೌಮತ್ವವನ್ನು ಪಾಂಡ್ಯರ ಮೇಲೆ ಮತ್ತೆ ಸ್ಥಾಪಿಸಿದನು. ಮತ್ತು ಉತ್ತರ ಸಿಂಹಳವನ್ನು ಕಿತ್ತುಕೊಂಡನು. ಕೊಡಗು, ಗಂಗ ರಾಜ್ಯಗಳನ್ನು ಜಯಿಸಿದನಲ್ಲದೆ, ಕಲ್ಯಾಣಿಯ ಸತ್ಯಾಶ್ರಯನನ್ನು ಪರಾಜಿತನನ್ನಾಗಿ ಮಾಡಿ ತುಂಗಭದ್ರೆಯನ್ನು ತನ್ನ ಸಾಮ್ರಾಜ್ಯದ ಉತ್ತರ ಮೇರೆಯನ್ನಾಗಿ ಮಾಡಿದನು. ರಾಜರಾಜನು ತನ್ನ ಶ್ರೇಷ್ಠ ನೌಕಾಪಡೆಯ ಸಹಾಯದಿಂದ ಮಲವಿ ದ್ವೀಪಗಳನ್ನು ವಶಪಡಿಸಿಕೊಂಡನು.

ರಾಜರಾಜನು ಶಿವಭಕ್ತನಾಗಿದ್ದನು. ತಂಜಾವೂರಿನಲ್ಲಿ ಅವನು ಕಟ್ಟಿಸಿದ ರಾಜರಾಜೇಶ್ವರ ದೇವಾಲಯವು ತಮಿಳುನಾಡಿನ ದೇವಾಲಯಗಳಲ್ಲೇ ಅತ್ಯಂತ ಸುಂದರವಾಗಿದೆ. ನಾಗಪಟ್ಟಣದಲ್ಲಿ ಒಂದು ಬೌದ್ಧ ದೇವಾಲಯವನ್ನು ಕಟ್ಟಿಸಿ ಮತ್ತು ವೈಷ್ಣವ ಮತಕ್ಕೂ ಪ್ರೋತ್ಸಾಹವನ್ನಿತ್ತು, ಪರಧರ್ಮ ಸಹಿಷ್ಣುತೆಯನ್ನು ಪ್ರದರ್ಶಿಸಿರುವನು. ಕಲೆ, ಸಾಹಿತ್ಯಗಳು ಸಾಕಷ್ಟು ಪ್ರೋತ್ಸಾಹವನ್ನು ಇವನಿಂದ ಪಡೆದುಕೊಂಡುವು. ರಾಜ್ಯಾಡಳಿತದಲ್ಲಿ ಸುಧಾರಣೆಯನ್ನು ತಂದು ಹೆಸರುವಾಸಿಯಾದನು. ಕಂದಾಯವನ್ನು ನಿರ್ಧರಿಸಲು ಭೂಮಿಯ ಸರ್ವೆ (ಅಳತೆ) ಮಾಡಿಸಿದನಲ್ಲದೆ, ತನ್ನ ವಿಶ್ವಾಸಕ್ಕೆ ಯೋಗ್ಯರಾದ ಜನರನ್ನು ಪ್ರತಿನಿಧಿಗಳಾಗಿ ಅಲ್ಲಲ್ಲಿ ನಿಯಮಿಸಿ ಆಡಳಿತವು ಸರಿಯಾಗಿ ನಡೆಯುವಂತೆ ನೋಡಿಕೊಂಡನು. ಲೆಕ್ಕಪತ್ರಗಳ ಸರಿಯಾದ ಪರಿಶೋಧನೆಗೂ ತಕ್ಕುದಾದ ವ್ಯವಸ್ಥೆಯನ್ನು ರಚಿಸಿ, ಸರಕಾರದ ಧನವು ದುರುಪಯೋಗವಾಗದಂತೆ ಮಾಡಿದನು.

ರಾಜೇಂದ್ರ (1012-1044): ರಾಜರಾಜನ ಮಗನಾದ ರಾಜೇಂದ್ರನು ಚೋಳ ರಾಜರಲ್ಲೇ ಅತ್ಯಂತ ಬಲಿಷ್ಠನಿದ್ದನು. ಪಟ್ಟವೇರಿದಕೂಡಲೇ ಪಾಂಡ್ಯ, ಚೇರರನ್ನು ಸಂಪೂರ್ಣವಾಗಿ ಸೋಲಿಸಿ ಅವರನ್ನು ಪದಚ್ಯುತರನ್ನಾಗಿ ಮಾಡಿದನು. ಸಿಂಹಳವನ್ನು ಗೆದ್ದು ತನ್ನ ಅಧೀನಕ್ಕೆ ಒಳಪಡಿಸಿಕೊಂಡನು. ತುಂಗಭದ್ರೆಯ ಉತ್ತರಕ್ಕಿರುವ ರಾಯಚೂರ್ ದೊ-ಆಬ್‌ಅನ್ನು (ಎರಡು ನದಿಗಳು ಸೇರುವ ನಡುವಣ ಪ್ರದೇಶ, ಇಲ್ಲಿ ಕೃಷ್ಣ-ತುಂಗಭದ್ರ) ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಆಮೇಲೆ ಉತ್ತರಕ್ಕೆ ದಂಡಯಾತ್ರೆಯನ್ನು ಕೈಗೊಂಡನು. ಬಂಗಾಳದ ಅರಸರನ್ನು ಸೋಲಿಸಿ, ಗಂಗಾನದಿಯನ್ನು ದಾಟಿ, ಅದರ ಉತ್ತರ ದಂಡೆಯಲ್ಲಿ ತನ್ನ ವಿಜಯ ಪತಾಕೆಯನ್ನು ನಿಲ್ಲಿಸಿದನು. ಈ ವಿಜಯದ ನೆನಪಿಗಾಗಿ ‘ಗಂಗೈಕೊಂಡ’ ಎಂಬ ಬಿರುದನ್ನು ಧರಿಸಿದನು. ಅಲ್ಲದೆ ಗಂಗೈಕೊಂಡಚೋಲಪುರಂ ಎಂಬ ನಗರವೊಂದನ್ನು ಸ್ಥಾಪಿಸಿದನು (ಇಂದಿನ ಅರಿಯಾತೂರ್ ಜಿಲ್ಲೆ); ಮುಂದೆ ಅದುವೇ ಚೋಳ ಅರಸರ ರಾಜಧಾನಿಯಾಯಿತು.

ರಾಜೇಂದ್ರನ ಅತ್ಯಂತ ಸಾಹಸಮಯ ಕಾರ್ಯವೆಂದರೆ ಕದರಂ (ಸುಮಾತ್ರಾ) ಮತ್ತು ಶ್ರೀವಿಜಯ ರಾಜ್ಯಕ್ಕೆ ದಂಡೆತ್ತಿ ಹೋಗಿ ವಿಜಯವನ್ನು ಪಡೆದುದು. ಕದರಂ ವಿಜಯದ ನಂತರ ಸಿಂಹಳದಲ್ಲಿ ಸ್ವಾತಂತ್ರ್ಯಕ್ಕಾಗಿ ದಂಗೆಯುಂಟಾಯಿತು. ಅದನ್ನು ಅಣಗಿಸಲು ಒಂದು ನೌಕಾ ದಂಡಯಾತ್ರೆಯನ್ನು ಸಿಂಹಳಕ್ಕೆ ತೆಗೆದುಕೊಂಡು ಹೋದನು.

ರಾಜೇಂದ್ರನ ಕಾಲದಲ್ಲಿ ಚೋಳ ಸಾಮ್ರಾಜ್ಯವು ಅತ್ಯಂತ ವಿಸ್ತಾರವಾಗಿತ್ತು. ರಾಜರಾಜನಂತೆಯೇ ರಾಜೇಂದ್ರನೂ ಕಲೆ, ವಿದ್ಯೆ, ಸಾಹಿತ್ಯಗಳಿಗೆ ಪ್ರೋತ್ಸಾಹವನ್ನು ಕೊಡುತ್ತಿದ್ದನಲ್ಲದೆ ಪರಮತ ಸಹಿಷ್ಣುವಾಗಿ ದಕ್ಷತೆಯಿಂದ ರಾಜ್ಯವನ್ನಾಳಿದನು. ವಿದ್ಯೆಯ ಪ್ರಚಾರಕ್ಕಾಗಿ ಅವನು ಬಹಳ ಶ್ರಮ ಪಟ್ಟಿದ್ದನೆಂದು ಎನ್ನಾಯಿರಂ ಶಾಸನದಿಂದ ತಿಳಿಯುವುದು.

ರಾಜೇಂದ್ರನ ಬಳಿಕ ಅವನ ಮಕ್ಕಳಾದ ರಾಜಾಧಿರಾಜ, ಎರಡನೆ ರಾಜೇಂದ್ರ, ಮತ್ತು ವೀರರಾಜೇಂದ್ರ ಒಬ್ಬರ ನಂತರ ಒಬ್ಬರಂತೆ ಪಟ್ಟವನ್ನೇರಿದರು. ಇವರು ಯಾರೂ ಒಂದನೇ ರಾಜೇಂದ್ರನಷ್ಟು ಪ್ರಬಲರಾಗಿರಲಿಲ್ಲ. ವೆಂಗಿಯ ಮತ್ತು ಕಲ್ಯಾಣಿಯ ಚಾಲುಕ್ಯರು ಸ್ವಾತಂತ್ರ್ಯವನ್ನು ಪಡೆಯಲು ಹವಣಿಸಿದರು. ಆದರೆ ಅದನ್ನು ಅಣಗಿಸಲಾಗಿತ್ತು. ಕದರಂ ದೇಶವು ಸ್ವತಂತ್ರವಾಯಿತು. ಸ್ವಾತಂತ್ರ್ಯ ಪಡೆಯುವ ಪ್ರಯತ್ನವು ಸಿಂಹಳದಲ್ಲಿಯೂ ನಡೆಯಿತು. ಆದರೆ ಫಲಕಾರಿಯಾಗಲಿಲ್ಲ. ಈ ಮೂವರು ಚೋಳ ಅರಸರು ತಂದೆಯಿಂದ ಬಂದ ವಿಶಾಲವಾದ ಸಾಮ್ರಾಜ್ಯವನ್ನು ದಕ್ಷತೆಯಿಂದ ರಕ್ಷಿಸಿದರು.

ಒಂದನೇ ಕುಲೋತ್ತುಂಗ (1070-1120): ಕುಲೋತ್ತುಂಗನು ಅನೇಕ ದಂಗೆಗಳನ್ನು ಎದುರಿಸಬೇಕಾಯಿತು. ಸಿಂಹಳವು ಸ್ವತಂತ್ರವಾಯಿತು. ಕಲ್ಯಾಣಿಯ ಮತ್ತು ವೆಂಗಿಯ ಚಾಲುಕ್ಯರು ದಂಗೆಯೆದ್ದರು. ಅವರನ್ನು ಪರಾಭವಗೊಳಿಸಿ ಅಲ್ಲಿಗೆ ತನ್ನ ಮಗನನ್ನು ಅಧಿಕಾರಿಯನ್ನಾಗಿ ನೇಮಿಸಿದನು. ಗಂಗವಾಡಿಯು ಹೊಯ್ಸಳ ಅರಸ ವಿಷ್ಣುವರ್ಧನನ ವಶವಾಯಿತು. ಇಷ್ಟು ತೊಂದರೆಗಳಿದ್ದರೂ ಕುಲೋತ್ತುಂಗನು ಕಳಿಂಗ ರಾಜ್ಯಕ್ಕೆ ದಂಡೆತ್ತಿಹೋಗಿ ಅಲ್ಲಿನ ಅರಸನನ್ನು ಸೋಲಿಸಿದನು. ಕುಲೋತ್ತುಂಗನ ಕಾಲದಲ್ಲಿ ರಾಜ್ಯದ ವಿಸ್ತಾರವು ಕಡಿಮೆಯಾದರೂ, ದೇಶದಲ್ಲಿ ಶಾಂತಿ ಸುಭಿಕ್ಷೆಗಳು ನೆಲಸಿದ್ದುವು. ಕುಲೋತ್ತುಂಗನು ಜನರಿಗೆ ಉತ್ತಮ ಆಡಳಿತವನ್ನು ನೀಡಿದನು. ಭೂಮಿಯನ್ನು ಅಳೆಸಿ ಕಂದಾಯವನ್ನು ನಿಶ್ಚೈಸಿದನು. ಕೆಲವು ತೆರಿಗೆಗಳನ್ನು ರದ್ದುಗೊಳಿಸಿ ಪ್ರಜೆಗಳ ಪ್ರೀತಿಗೆ ಪಾತ್ರನಾದನು. ಕುಲೋತ್ತುಂಗನ ಅನಂತರ ಚೋಳ ಸಾಮ್ರಾಜ್ಯದ ಪ್ರಾಮುಖ್ಯತೆ ಇಳಿಮುಖವನ್ನು ಹೊಂದಿತು. ದೇಶವು ಬಲಹೀನ ಅರಸರಿಂದಾಗಿ ಕ್ಷೋಭೆಗೊಳಗಾಯಿತು. ಆದರೂ ಕಲೆ, ಸಾಹಿತ್ಯ, ಧರ್ಮಗಳಿಗೆ ಪ್ರೋತ್ಸಾಹವನ್ನೀಯುತ್ತಾ ಈ ವಂಶದ ಅರಸರು ಹದಿಮೂರನೇ ಶತಮಾನದ ಉತ್ತರಾರ್ಧದ ತನಕ ಆಳಿದರು. ಕೊನೆಯ ಅರಸನಾದ ಮೂರನೇ ರಾಜೇಂದ್ರನ ಕಾಲದಲ್ಲಿ ಪಾಂಡ್ಯ, ಕಾಕತೀಯ, ಹೊಯ್ಸಳರ ಉಪಟಳಕ್ಕೆ ಒಳಗಾಗಿ ಚೋಳ ಸಾಮ್ರಾಜ್ಯವು ನುಚ್ಚುನೂರಾಯಿತು.

ಚೋಳರ ರಾಜ್ಯಾಡಳಿತೆ

ಚೋಳರು ವೈಭವಶಾಲಿಗಳಾದ ಅರಸರಾಗಿದ್ದರು. ಇವರು ರಾಜ್ಯಾಡಳಿತೆಯಲ್ಲಿ ಸರ್ವತಂತ್ರ ಸ್ವತಂತ್ರರಿದ್ದರು. ಮಂತ್ರಿ ಮಂಡಲವು ಇರಲಿಲ್ಲ. ಆದರೆ ಸುಶಿಕ್ಷಿತ ಹಾಗೂ ದಕ್ಷ ಅಧಿಕಾರಿಗಳ ಅನುಭವಗಳ ಉಪಯೋಗವನ್ನು ಪಡೆದುಕೊಳ್ಳಲಾಗುತ್ತಿತ್ತು. ವಿಶೇಷ ವಿಚಾರಗಳಲ್ಲಿ ರಾಜನು ನುರಿತ ಅಧಿಕಾರಿಗಳ ಸಲಹೆ ಕೇಳುತ್ತಿದ್ದನು. ರಾಜನು ಆಗಾಗ ರಾಜ್ಯದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಸಂಚರಿಸಿ ಆಡಳಿತವು ಸುಸೂತ್ರವಾಗಿ ನಡೆಯುತ್ತಿದೆಯೋ ಎಂದು ನೋಡಿಕೊಳ್ಳುತ್ತಿದ್ದನು. ಉತ್ಪತ್ತಿಯ ಮೂರನೇ ಒಂದಂಶದಷ್ಟು ತೆರಿಗೆಯನ್ನು ಜನರು ತೆರಬೇಕಾಗಿತ್ತು. ಕಂದಾಯವು ಭೂಮಿಯನ್ನು ಅಳತೆ (ಸರ್ವೆ) ಮಾಡಿ ನಿರ್ಧರಿಸಲ್ಪಡುತ್ತಿತ್ತು. ಅಲ್ಲದೆ ಭೂಮಿಯ ಸರ್ವೆಯನ್ನು ಆಗಾಗ ಮಾಡಿ, ತೆರಿಗೆಯಲ್ಲಿ ವ್ಯತ್ಯಾಸಗೊಳಿಸಲಾಗುತ್ತಿತ್ತು. ತೆರಿಗೆಯನ್ನು ವಸೂಲು ಮಾಡುವ ಅಧಿಕಾರವು ಗ್ರಾಮ ಸಮಿತಿಗಳಿಗಿತ್ತು. ಗ್ರಾಮ ಸಮಿತಿಯು ಧಾನ್ಯ, ಯಾ ಹಣದ ರೂಪದಲ್ಲಿ ವಸೂಲು ಮಾಡಿ, ಸರಕಾರಕ್ಕೆ ಒಪ್ಪಿಸುತ್ತಿತ್ತು. ಕ್ಷಾಮ ಬಂದ ಕಾಲದಲ್ಲಿ ತೆರಿಗೆಯನ್ನು ಕಡಿಮೆ ಮಾಡಲಾಗುತ್ತಿತ್ತು. ಭೂಮಿಯ ಮೇಲೆ ಮಾತ್ರವಲ್ಲದೆ ಇತರ ವೃತ್ತಿಗಳ ಮೇಲೂ ತೆರಿಗೆಯನ್ನು ಹೇರಲಾಗುತ್ತಿತ್ತು. ಈ ರೀತಿ ವಸೂಲಾದ ತೆರಿಗೆಗಳಿಂದ ಅರಮನೆ, ಅಧಿಕಾರಿ ವರ್ಗ, ಸೈನ್ಯ ಮೊದಲಾದವುಗಳ ಖರ್ಚಿಗೆ ವಿನಿಯೋಗಿಸಿ, ಉಳಿದ ಹಣವನ್ನು ಕಾಲುವೆ, ಮಾರ್ಗ, ಕೊಳಗಳ ನಿರ್ಮಾಣವೇ ಮುಂತಾದ ಜನಹಿತ ಕಾರ್ಯಗಳಿಗೆ ಬಳಸಲಾಗುತ್ತಿತ್ತು.

ಗ್ರಾಮಗಳ ಆಡಳಿತೆ

ಚೋಳ ಸಾಮ್ರಾಜ್ಯವು ಎಂಟು ಮಂಡಲಗಳಾಗಿಯೂ (ಪ್ರಾಂತ್ಯಗಳು), ಮಂಡಲಗಳು ವಳಿನಾಡು ಮತ್ತು ನಾಡುಗಳು ಕುರ್ರಂ ಅಥವಾ ಕೊಟ್ಟಂಗಳಾಗಿಯೂ ಆಡಳಿತೆಯ ಕಾರಣಕ್ಕೆ ವಿಭಜಿಸಲ್ಪಟ್ಟತ್ತು. ಕುರ್ರಂ ಅಥವಾ ಕೊಟ್ಟಂಗಳೆಂದು ಕರೆಯಲ್ಪಡುತ್ತಿದ್ದ ಗ್ರಾಮಗಳಿಗೆ ಆಡಳಿತದ ಸ್ವಾತಂತ್ರ್ಯವು ಕೊಡಲ್ಪಟ್ಟಿತ್ತು. ಗ್ರಾಮಾಡಳಿತೆಯು ಚೋಳ ರಾಜ್ಯಾಡಳಿತೆಯ ವೈಶಿಷ್ಟ್ಯವಾಗಿದ್ದಿತು. ಮಂಡಲಗಳು ರಾಜವಂಶಕ್ಕೆ ಸೇರಿದ ರಾಜ ಪ್ರತಿನಿಧಿಗಳಿಂದ ಆಳಲ್ಪಡುತ್ತಿದ್ದುವು.

ಗ್ರಾಮಗಳ ಆಡಳಿತೆಗೆ ಸಭಾ ಎಂದು ಕರೆಯಲ್ಪಡುತ್ತಿದ್ದ ಸಮಿತಿಯಿತ್ತು. ಈ ಸಮಿತಿಯ ಕಾರ್ಯಕಲಾಪಗಳು, ಅದರ ಸದಸ್ಯರಿಗಿರಬೇಕಾದ ಯೋಗ್ಯತೆಗಳು ಪರಾಂತಕನಿಂದ ನಿಶ್ಚೈಸಲ್ಪಟ್ಟು ಉತ್ತರ ಮೇರೂರ್ ಶಾಸನದಲ್ಲಿ ಕೆತ್ತಲ್ಪಟ್ಟವೆ.

ಉತ್ತರ ಮೇರೂರ್ ಶಾಸನ

ಸಭೆಯ ಸದಸ್ಯರ ಯೋಗ್ಯತೆ: ಸದಸ್ಯರು ಮೂವತ್ತೈದು ವರ್ಷ ದಾಟಿದವರಾಗಿದ್ದು ಎಪ್ಪತ್ತು ವರ್ಷಕ್ಕೆ ಕೆಳಗಿನವರಾಗಿರಬೇಕು. ಒಂದೂವರೆ ಎಕರೆಯಷ್ಟಾದರೂ ಭೂಮಿಯಿದ್ದು ಸ್ವಂತ ಆಸ್ತಿಯಲ್ಲಿ ವಾಸ ಮಾಡುವವನಾಗಿರಬೇಕು. ವೇದ, ಬ್ರಾಹ್ಮಣಗಳ ಸರಿಯಾದ ಜ್ಞಾನವಿರಬೇಕು. ಇಷ್ಟು ಯೊಗ್ಯತೆಗಳಿದ್ದೂ, ವೇಶ್ಯಾ ಸಹವಾಸದಲ್ಲಿರುವವನು, ಕಳವು ಮಾಡಿದವನು, ಜಾತಿಧರ್ಮವನ್ನು ಪಾಲಿಸದವನು, ಹಿಂದೆ ಮೂರು ವರ್ಷಗಳ ಕಾಲ ಸದಸ್ಯನಾಗಿದ್ದವನು, ಮತ್ತು ಸದಸ್ಯನಾಗಿದ್ದು ಲೆಕ್ಕಪತ್ರಗಳನ್ನು ಒಪ್ಪಿಸದಿದ್ದವನು ಸದಸ್ಯತ್ವಕ್ಕೆ ಅನರ್ಹನಾಗಿರುತ್ತಾನೆ.

ಸಭೆಯು ಈ ಯೊಗ್ಯತೆಯನ್ನು ಹೊಂದಿದ, ಗ್ರಾಮಗಳ ಬೇರೆ ಬೇರೆ ಭಾಗಗಳಿಂದ ಆರಿಸಿ ಕಳುಹಿಸಲ್ಪಟ್ಟ ಮೂವತ್ತು ಜನರನ್ನು ಒಳಗೊಂಡಿರುತ್ತದೆ. ಸಭೆಯ ಸದಸ್ಯರಿಂದ ಐದು ಇತರ ಸಮಿತಿಗಳನ್ನು ಸೋಡತಿ ಚೀಟಿನ ಮೂಲಕ ಏರ್ಪಡಿಸಲಾಗುವುದು. ಬೇರೆ ಬೇರೆ ಸಮಿತಿಗಳು ಕಾರ್ಯಗಳನ್ನು ತಮ್ಮೊಳಗೆ ಹಂಚಿಕೊಳ್ಳುವರು. ಸಭೆಯ ಸದಸ್ಯತನವು ನಿಸ್ವಾರ್ಥ ಸೇವೆಯಾಗಿದ್ದು ಗೌರವಪದವಿಯಾಗಿರುವುದು.

ಕಾರ್ಯ ಕಲಾಪಗಳು

ಗ್ರಾಮಸಮಿತಿಗಳ ಕಾರ್ಯ ಕಲಾಪಗಳನ್ನು ಪರಿಶೀಲಿಸಿದರೆ ಗ್ರಾಮಾಡಳಿತೆಯಲ್ಲಿ ಎಷ್ಟು ಸ್ವಾತಂತ್ರ್ಯವಿತ್ತೆಂಬುದು ತಿಳಿಯುವುದು. ಶತ್ರುಗಳಿಂದ ದೇಶರಕ್ಷಣೆ, ರಾಜ್ಯದಲ್ಲಿ ಸುಖ ಶಾಂತಿಯನ್ನಿರಿಸುವುದು, ಸಾರ್ವಜನಿಕ ಹಿತ ಕಾರ್ಯಗಳು, ಮತ್ತು ಧಾರ್ಮಿಕ ಅಭಿವೃದ್ಧಿ ಕಾರ್ಯಗಳು ಕೇಂದ್ರ ಸರಕಾರದ ಅಧೀನದಲ್ಲಿದ್ದುವು. ಉಳಿದೆಲ್ಲಾ ಅಧಿಕಾರವೂ ಮಹಾಸಭೆಗೆ ಬಿಟ್ಟುಕೊಡಲ್ಪಟ್ಟಿತ್ತು. ಸಾರ್ವಜನಿಕ ಅಸ್ತಿಯ ರಕ್ಷಣೆ, ಸಾರಿಗೆ ಸೌಕರ್ಯಗಳನ್ನು ಒದಗಿಸುವುದು, ಕಾಡು ಪ್ರದೇಶಗಳನ್ನು ಮತ್ತು ಬಂಜರು ಭೂಮಿಗಳನ್ನು ಕೃಷಿಯೋಗ್ಯವನ್ನಾಗಿ ಮಾಡುವುದು, ಭೂಕಂದಾಯ ನಿರ್ಣಯ ಮತ್ತು ವಸೂಲಿ ಇವು ಮಹಾಸಭೆಗಳಲ್ಲಿ ಮುಖ್ಯ ಕಾರ್ಯಗಳಾಗಿದ್ದುವು. ಅಲ್ಲದೆ ಮಾರ್ಗಗಳ ನಿರ್ಮಾಣ ಮತ್ತು ದುರಸ್ತಿ, ನೀರಾವರಿ ಕೆಲಸಗಳು, ಧಾರ್ಮಿಕ ಸಂಸ್ಥೆ, ಆಸ್ಪತ್ರೆ, ವಿದ್ಯಾಲಯಗಳ ಮೇಲ್ವಿಚಾರಣೆಗಳು ಕೂಡಾ ಮಹಾಸಭೆಯ ಕಾರ್ಯ ಕಲಾಪಗಳಾಗಿದ್ದುವು. ಇಂತಹ ವ್ಯವಸ್ಥೆಯಿಂದ ಕೃಷಿ, ಕೈಗಾರಿಕೆಗಳು ಹೆಚ್ಚಿ ದೇಶವು ಸುಭಿಕ್ಷವಾಗಿತ್ತು.

ನ್ಯಾಯ ಪರಿಪಾಲನೆ

ಕೇಂದ್ರ ಸರಕಾರದಿಂದ ನೇಮಿಸಲ್ಪಟ್ಟ ಗ್ರಾಮಾಧಿಕಾರಿಗಳು ಕಳ್ಳರನ್ನು ಹಾಗೂ ಸಮಾಜದ್ರೋಹಿಗಳನ್ನು ಪತ್ತೆಹಚ್ಚಿ ಸರಕಾರದಿಂದ ನಿಯಮಿಸಲ್ಪಟ್ಟ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತಿದ್ದರು. ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸಿ ಶಿಕ್ಷೆ ವಿಧಿಸಲಾಗುತ್ತಿತ್ತು. ಶಿಕ್ಷೆಯು ಬಹಳ ಸಾಮಾನ್ಯ ತರದ್ದಾಗಿತ್ತು. ಕಠಿಣ ಶಿಕ್ಷೆ ವಿಧಿಸಿದ ಉಲ್ಲೇಖಗಳು ಕಂಡುಬರುವುದಿಲ್ಲ. ಜುಲ್ಮಾನೆ, ಕತ್ತೆಯ ಮೇಲೆ ಸವಾರಿ, ಕೊಲೆಗಟುಕರು ದೇವಸ್ಥಾನಗಳಲ್ಲಿ ನಂದಾದೀಪಗಳನ್ನು ಬೆಳಗಿಸುವುದು ಮೊದಲಾದ ಶಿಕ್ಷೆಗಳು ಕೊಡಲ್ಪಡುತ್ತಿದ್ದುವು.

ರಾಜರಾಜನು ಶಿವಭಕ್ತನಾಗಿದ್ದನು. ತಂಜಾವೂರಿನಲ್ಲಿ ಅವನು ಕಟ್ಟಿಸಿದ ರಾಜರಾಜೇಶ್ವರ ದೇವಾಲಯವು ತಮಿಳುನಾಡಿನ ದೇವಾಲಯಗಳಲ್ಲೇ ಅತ್ಯಂತ ಸುಂದರವಾಗಿದೆ. ನಾಗಪಟ್ಟಣದಲ್ಲಿ ಒಂದು ಬೌದ್ಧ ದೇವಾಲಯವನ್ನು ಕಟ್ಟಿಸಿ ಮತ್ತು ವೈಷ್ಣವ ಮತಕ್ಕೂ ಪ್ರೋತ್ಸಾಹವನ್ನಿತ್ತು, ಪರಧರ್ಮ ಸಹಿಷ್ಣುತೆಯನ್ನು ಪ್ರದರ್ಶಿಸಿರುವನು. ಕಲೆ, ಸಾಹಿತ್ಯಗಳು ಸಾಕಷ್ಟು ಪ್ರೋತ್ಸಾಹವನ್ನು ಇವನಿಂದ ಪಡೆದುಕೊಂಡುವು.

ವಿದ್ಯೆಗೆ ಪ್ರೋತ್ಸಾಹ

ವಿದ್ಯಾಪ್ರಚಾರಕ್ಕಾಗಿ ಚೋಳರು ವಿಶೇಷ ಆಸಕ್ತಿಯನ್ನು ವಹಿಸುತ್ತಿದ್ದರು. ಗ್ರಾಮಗಳಲ್ಲಿ ಚಿಕ್ಕ ಚಿಕ್ಕ ಶಾಲೆಗಳು ಮಹಾಸಭೆಯ ಮೇಲ್ವಿಚಾರಣೆಯಲ್ಲಿ ನಡೆಸಲ್ಪಡುತ್ತಿದ್ದುವಲ್ಲದೆ, ದೇವಾಲಯಗಳಲ್ಲಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಕಾವ್ಯವಾಚನ, ಪುರಾಣ ಪ್ರವಚನಗಳು ನಡೆಸಲ್ಪಡುತ್ತಿದ್ದುವು. ಉಚ್ಚ ಶಿಕ್ಷಣಕ್ಕಾಗಿ ಹಲವು ವಿಶ್ವ ವಿದ್ಯಾಲಯಗಳು ಸ್ಥಾಪಿಸಲ್ಪಟ್ಟಿದ್ದುವು. ಎನ್ನಾಯಿರಂ ವಿಶ್ವವಿದ್ಯಾಲಯ: ದಕ್ಷಿಣ ಆರ್ಕಾಟಿನ ಸಮೀಪದಲ್ಲಿದ್ದ ಎನ್ನಾಯಿರಂನಲ್ಲಿ ವೇದ, ವೇದಾಂತ, ವ್ಯಾಕರಣ, ಮೀಮಾಂಸೆಗಳಲ್ಲಿ ಶಿಕ್ಷಣವೀಯಲಾಗುತ್ತಿತ್ತು. ಮುನ್ನೂರ ನಲುವತ್ತು ವಿದ್ಯಾರ್ಥಿಗಳಿದ್ದ ಈ ಪಾಠಶಾಲೆಯಲ್ಲಿ ಹದಿನಾಲ್ಕು ಮಂದಿ ಆಚಾರ್ಯರಿದ್ದರೆಂದು ತಿಳಿದು ಬರುತ್ತದೆ. ವಿದ್ಯಾರ್ಥಿಗಳು ಮತ್ತು ಆಚಾರ್ಯರುಗಳ ದಿನವಹಿ ಖರ್ಚನ್ನು ಸರಕಾರ ನೋಡಿಕೊಳ್ಳುತ್ತಿತ್ತು. ಶಾಲೆಯ ಇತರ ಖರ್ಚಿಗಾಗಿ ಅರುವತ್ತು ಎಕರೆ ಭೂಮಿಯನ್ನು ದಾನವಾಗಿ ಕೊಡಲಾಗಿತ್ತು.

ತ್ರಿಭುವನಿ ವಿಶ್ವವಿದ್ಯಾಲಯ: ಪಾಂಡಿಚೇರಿಯ ಸಮೀಪ ತ್ರಿಭುವನಿ ಎಂಬಲ್ಲಿ ಇನ್ನೊಂದು ಉನ್ನತ ಶಿಕ್ಷಣಾಲಯವು ಸ್ಥಾಪಿಸಲ್ಪಟ್ಟಿತ್ತು. ಎಂಭತ್ತು ಎಕರೆ ಭೂಮಿಯ ಉತ್ಪತ್ತಿಯನ್ನು ಪಡೆಯುತ್ತಿದ್ದ ಈ ಶಿಕ್ಷಣ ಸಂಸ್ಥೆಯಲ್ಲಿ ಮೇಲೆ ಹೇಳಿದ ವಿಷಯಗಳನ್ನಲ್ಲದೆ, ಮನುಧರ್ಮಶಾಸ್ತ್ರ ಮತ್ತು ಕಾವ್ಯಗಳನ್ನು ಕಲಿಸಲಾಗುತ್ತಿತ್ತು.

ತರುಮುಕ್ಕುಡಲ್: ಚೆಂಗಲ್ ಪೇಟೆಯ ಸಮೀಪದ ತಿರುಮುಕ್ಕುಡಲ್ ವಿಶ್ವವಿದ್ಯಾಲಯ, ಅದಕ್ಕೆ ಸಂಬಂದಿಸಿದ ವಿದ್ಯಾರ್ಥಿನಿಲಯ ಮತ್ತು ಆಸ್ಪತ್ರೆಯ ಖರ್ಚನ್ನು ಸರಕಾರ ವಹಿಸಿಕೊಳ್ಳುತ್ತಿತ್ತು. ಇಲ್ಲಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಊಟ, ವಸತಿ, ಸ್ನಾನಕ್ಕೆ ಎಣ್ಣೆ, ಬೆಳಕು, ವೈದ್ಯಕೀಯ ಸಲಹೆ ಮುಂತಾದುವುಗಳನ್ನು ಮುಫತ್ತಾಗಿ ಪಡೆಯುತ್ತಿದ್ದರು.

ತಿರುವಡುತ್ತುರೈ; ತಂಜಾವುರಿನ ತಿರುವಡುತ್ತುರೈ ಎಂಬಲ್ಲಿ ಒಂದು ವೈದ್ಯ ಶಿಕ್ಷಣ ಶಾಲೆಯೂ ಇತ್ತು. ಇವಲ್ಲದೆ ಇನ್ನಿತರೆಡೆಗಳಲ್ಲೂ ಅನೇಕ ಶಾಲೆಗಳು ನಡೆಸಲ್ಪಡುತ್ತಿದ್ದುವು.

ಸಾಮಾಜಿಕ ಪರಿಸ್ಥಿತಿ

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವರ್ಣಗಳಲ್ಲಿ ಅಸಂಖ್ಯಾತ ಪಂಗಡಗಳು ಉಂಟಾಗಿದ್ದು, ಬೇರೆ ಬೇರೆಯೆ ಉದ್ಯೊಗಗಳನ್ನು ಅವಲಂಬಿಸುವ ಜನರು ಬೇರೆ ಬೇರೆ ಜಾತಿಯವರೆಂದು ಪರಿಗಣಿಸಲ್ಪಡುತ್ತಿದ್ದರು. ಜಾತಿಗಳೊಳಗೆ ನಿರ್ಬಂಧಗಳು ಬಿಗಿಯಾಗಿದ್ದು ಅಂತರ್ಜಾತೀಯ ವಿವಾಹವೇ ಮುಂತಾದ ಸಂಬಂಧಗಳು ನಿಷೇಧಿಸಲ್ಪಟ್ಟಿದ್ದುವು. ಹಿಂದಿನ ಕಾಲದಲ್ಲಿ ಶಾಸ್ತ್ರದ ಒಪ್ಪಿಗೆಯನ್ನು ಪಡೆದಿದ್ದ ಅನುಲೋಮ ವಿವಾಹ ಸಂಬಂಧ ಕೂಡಾ ಈ ಕಾಲದಲ್ಲಿ ನಿಷೇಧಕ್ಕೆ ಒಳಗಾಗಿತ್ತು. ಇಷ್ಟು ಭೇದಗಳಿದ್ದೂ ಹಳ್ಳಿಗಳಲ್ಲಿಯೂ ಪೇಟೆಗಳಲ್ಲಿಯೂ ಜನರು ಪರಸ್ಪರ ಸೌಹಾರ್ದತೆಯಿಂದ ಜೀವನವನ್ನು ನಡೆಸುತ್ತಿದ್ದರು. ಜಾತಿಭ್ರಷ್ಟರಾದವರಿಗೆ ಸಂಸ್ಕಾರ ಮಾಡಿ ಪುನಃ ಜಾತಿಗೆ ಸೇರಿಸಿಕೊಳ್ಳುವ ಪದ್ಧತಿ ಇರಲಿಲ್ಲ. ಇದರಿಂದಾಗಿ ಬಲಾತ್ಕಾರದಿಂದ ಬೇರೆ ಮತಕ್ಕೆ ಸೇರಿಸಲ್ಪಟ್ಟವರಿಗೆ ತಮ್ಮ ಜಾತಿ ಯಾ ಮತಕ್ಕೆ ಮರಳಿ ಸೇರುವ ಆಸೆ ಇಲ್ಲವಾಗಿತ್ತು.

ಸ್ತ್ರೀಯರಿಗೆ ಯಾವುದೇ ತರದ ಸ್ವಾತಂತ್ರ್ಯವೂ ಇರಲಿಲ್ಲ. ವಿಧವೆಯರಿಗೆ ಅಶನಾರ್ಥವು ಶಾಸನಬದ್ಧವಾಗಿ ಮಾಡಲ್ಪಟ್ಟು ಅವರ ಆರ್ಥಿಕ ಸ್ಥಿತಿ ಸುಧಾರಿಸಿದ್ದರೂ, ಸಮಾಜದಲ್ಲಿ ಅವರ ಸ್ಥಾನ ಶೋಚನೀಯವಾಗಿತ್ತು. ಸತಿ ಪದ್ಧತಿಯೂ ಬೆಳೆದು ಬಂದಿತ್ತು.

ಸಂಗಂ ಕಾಲದ ಬಳಿಕ ಚೇರರು

ಪಾಂಡ್ಯ, ಚೇರ, ಚೋಳ ಅರಸರು ಕೃಷಿ, ವಿದೇಶ ವ್ಯಾಪಾರ, ಕಲೆ ಸಾಹಿತ್ಯಗಳಿಗೆ ಕೊಡುತ್ತಿದ್ದ ಪ್ರೋತ್ಸಾಹದಿಂದಾಗಿ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ, ದಕ್ಷಿಣ ಭಾರತವು ಸಂಗಂ ಕಾಲದಲ್ಲಿ ಅಭಿವೃದ್ಧಿಯನ್ನು ಸಾಧಿಸಿತು. ಬೌದ್ಧ, ಜೈನ, ಹಿಂದೂ ಮತಗಳ ನಡುವೆ ಇದ್ದ ಸಾಮರಸ್ಯ ಈ ಅಭಿವೃದ್ಧಿಗೆ ಸಹಾಯಕವಾಯಿತು.

ಸಂಗಂ ಕಾಲದ ಅನಂತರ (ಕ್ರಿ.ಶ. ಮೂರನೇ ಶತಮಾನ) ಚೇರರ ಸಾಮ್ರಾಜ್ಯಕ್ಕೆ ಕತ್ತಲು ಕವಿದಂತಾಯಿತು. ಚೋಳರು ಇವರನ್ನು ಪರಾಭವಗೊಳಿಸಿದರಲ್ಲದೆ, ಇವರ ಕಾಲದಲ್ಲಿ ಹೊಸ ಮತಗಳು ಪ್ರಚಾರಕ್ಕೆ ಬರತೊಡಗಿದುವು. ಕ್ರಿಸ್ತನ ಅನುಯಾಯಿಯಾದ ಸಂತ ಥಾಮಸ್‌ನು ಪಶ್ಚಿಮದ ಮಲಬಾರು ಕರಾವಳಿಯಲ್ಲಿ ಕ್ರೈಸ್ತಧರ್ಮ ಪ್ರಚಾರ ಮಾಡಿ ಹಲವು ಇಗರ್ಜಿಗಳನ್ನು ಸ್ಥಾಪಿಸಿದನು. ಮುಂದೆ ಅಲ್ಲಿಂದ ಪೂರ್ವ ಕರಾವಳಿಗೂ ಹೋಗಿ ಅಲ್ಲಿ ಧರ್ಮಪ್ರಚಾರವೆಸಗುವ ವೇಳೆ ಮದರಾಸಿನ ಹತ್ತಿರದ ಮೈಲಾಪುರದಲ್ಲಿ ಹತನಾದನು (ಕ್ರಿ.ಶ. 72).

ರೋಮನ್ ಸಾಮ್ರಾಜ್ಯದ ವೈಭವದ ಕಾಲದಲ್ಲಿ ಜೆರುಸಲೇಮಿನ ಯೆಹೂದ್ಯರು ಕೀಟಲೆಗಳಿಗೆ ಒಳಗಾದಾಗ, ಸಾಧಾರಣ ಹತ್ತು ಸಾವಿರ ಯೆಹೂದ್ಯರು ಭಾರತದ ಪಶ್ಚಿಮ ಕರಾವಳಿಗೆ ಬಂದು ಅಲ್ಲಿ ನೆಲೆನಿಂತರು.

ಹಿಂದೂ ದೇಶದೊಂದಿಗೆ ಬಹಳ ಕಾಲದಿಂದ ವ್ಯಾಪಾರ ನಡೆಸುತ್ತ ಬಂದಿದ್ದ ಅರಬರು ಹಲವರು ಪಶ್ಚಿಮ ಕರಾವಳಿಯಲ್ಲಿ ನೆಲಸಿದರು ಹಾಗೂ ಹಿಂದೂ ಸ್ತ್ರೀಯರನ್ನು ವಿವಾಹವಾದರು; ಇವರಲ್ಲಿ ಉಂಟಾದ ಸಂತತಿಯನ್ನು ಮಾಪಿಳ್ಳೆಯರೆಂದು ಕರೆಯಲಾಗುತ್ತದೆ. ಇವರು ಇಸ್ಲಾಂ ಧರ್ಮೀಯರು. ಈ ರೀತಿಯಾಗಿ ಹಿಂದೂ ದೇಶಕ್ಕೆ ಹೊಸ ಮತ ಧರ್ಮಗಳ ಪರಿಚಯವಾಯಿತು.

ಪಾಂಡ್ಯರು

ಮಾರವರ್ಮನ್ ಸುಂದರ ಪಾಂಡ್ಯ: ಹದಿಮೂರನೇ ಶತಮಾನದ ಆದಿಯಲ್ಲಿ (1216) ಮಾರವರ್ಮನ್ ಸುಂದರ ಪಾಂಡ್ಯನು ಪಾಂಡ್ಯ ಆಳ್ವಿಕೆಯನ್ನು ಪುನರ್ ಸ್ಥಾಪಿಸಿದನು. ಚೋಳರ ಮೇಲೆ ಯುದ್ಧ ಸಾರಿ ಉರೈಯೂರ್ ಮತ್ತು ತಂಜಾವೂರುಗಳನ್ನು ವಶಪಡಿಸಿಕೊಂಡನು. ಆದರೆ ಕೊನೆಗೆ ಮಾರವರ್ಮನ್ ಸುಂದರ ಪಾಂಡ್ಯನು ಚೋಳರಿಂದ ಸೋಲಿಸಲ್ಪಟ್ಟುದರಿಂದ ಅವರ ಅಧೀನನಾಗಿಯೇ ಉಳಿದನು.

ಅವನ ಮಗನಾದ ಜಾತವರ್ಮನ್ ಸುಂದರ ಪಾಂಡ್ಯನು (1250-1261) ಅನೇಕ ವಿಜಯಗಳನ್ನು ಗಳಿಸಿ ವೈಭವದಿಂದ ರಾಜ್ಯವಾಳಿದನು. ಚೋಳರನ್ನು ಗೆದ್ದು ಸಾಮಂತರನ್ನಾಗಿ ಮಾಡಿದನು. ತಿರುವಾಂಕೂರಿನ ಅರಸನನ್ನು ಪರಾಭವಗೊಳಿಸಿದನು. ತೆಲುಗು ಅರಸರನ್ನು ಸೋಲಿಸಿ, ಕಾಂಚಿ ನೆಲ್ಲೂರುಗಳನ್ನು ಪಡೆದನು. ಹೊಯ್ಸಳರ ಧಾಳಿಯನ್ನು ತಡೆಗಟ್ಟಿ ಹೊಡೆದೋಡಿಸಿದನು. ಅಲ್ಲದೆ ಸಿಂಹಳಕ್ಕೂ ದಂಡೆತ್ತಿ ಹೋಗಿ ಅಲ್ಲಿನ ಅರಸನು ಕಪ್ಪ ಸಲ್ಲಿಸುವಂತೆ ಮಾಡಿದನು. ಚೋಳ ರಾಜ ಪರಾಂತಕನಂತೆ ಜಾತವರ್ಮನೂ ದೈವಭಕ್ತನಾಗಿದ್ದು ತಾನು ಯುದ್ಧದಲ್ಲಿ ಗೆದ್ದ ಹೆಚ್ಚಿನ ಹಣವನ್ನೂ ಚಿದಂಬರಂ, ಮಧುರೈ, ಶ್ರೀರಂಗಂ, ತಿರುಮಲ ಮುಂತಾದ ದೇವಾಲಯಗಳ ಅಭಿವೃದ್ಧಿಗೋಸ್ಕರ ಉಪಯೋಗಿಸಿದನು. ಚಿದಂಬರಂ ನಟರಾಜ ದೇವಾಲಯಕ್ಕೆ ಇವನೂ ಚಿನ್ನ ಹೊದೆಸಿದನಲ್ಲದೆ, ಹದಿನೆಂಟು ಲಕ್ಷ ಚಿನ್ನದ ನಾಣ್ಯಗಳನ್ನು ಕಾಣಿಕೆಯಾಗಿ ಒಪ್ಪಿಸಿದನು. ಇವನ ಅನಂತರ ಇವನ ಐದು ಜನ ಮಕ್ಕಳು ಒಟ್ಟಿಗೆ ರಾಜ್ಯಭಾರ ನಡೆಸಿದರು.

ಅಧಿಕೃತವಾಗಿ ಹಿರಿಯ ಪುತ್ರ ಮಾರವರ್ಮನ್ ಕುಲಶೇಖರ ಪಾಂಡ್ಯನು (1268-1308) ಅರಸನಾಗಿದ್ದನು. ಇವನು ಈ ವಂಶದ ಕೊನೆಯ ಅರಸನೂ ಆಗಿದ್ದನು. ಕ್ವಿಲೋನು ಮತ್ತು ಸಿಲೋನುಗಳ ವಿರುದ್ಧ ಸಾರಿದ ಎರಡು ಯುದ್ಧಗಳನ್ನು ಬಿಟ್ಟರೆ, ಅವನ ಉಳಿದ ದೀರ್ಘ ಕಾಲದ ಆಡಳಿತವು ಶಾಂತಿ ಮತ್ತು ಅಭಿವೃದ್ಧಿಯ ಕಾಲವಾಗಿತ್ತು.

1310ರಲ್ಲಿ ಮಾರವರ್ಮನ ಔರಸಪುತ್ರ ಸುಂದರ ಪಾಂಡ್ಯನಿಗೂ ದಾಸೀಪುತ್ರ ವೀರ ಪಾಂಡ್ಯನಿಗೂ ಪಟ್ಟಕ್ಕಾಗಿ ಜಗಳವಾಯಿತು. ಈ ಸಂದರ್ಭದಲ್ಲಿ ದೆಹಲಿ ಸುಲ್ತಾನನ ದಂಡಾಳು ಮಾಲಿಕ್ ಕಾಫರನು ಧಾಳಿಯನ್ನು ನಡೆಸಿ ವೀರ ಪಾಂಡ್ಯನನ್ನು ಸೋಲಿಸಿ, ಮಧುರೆ, ಚಿದಂಬರಂ, ಶ್ರೀರಂಗಗಳನ್ನು ಸೂರೆಗೈದು, ರಾಮೇಶ್ವರದ ತನಕ ಮುಂದುವರಿದನು. ಆ ಮುಂದೆ ದೆಹಲಿಯ ಇನ್ನೊಬ್ಬ ಪ್ರತಿನಿಧಿ ಖುಸ್ರು ಖಾನನು ಧಾಳಿ ನಡೆಸಿ, ಶ್ರೀರಂಗವನ್ನು ಮತ್ತೊಮ್ಮೆ ಕೊಳ್ಳೆಹೊಡೆದನು. ಬಳಿಕ ಸುಲ್ತಾನ್ ಮಹಮ್ಮದ್ ಬಿನ್ ತುಘ್ಲಕನು ಸ್ವತಃ ಈ ಪ್ರದೇಶವನ್ನು ಗೆದ್ದು, ತನ್ನ ರಾಜ್ಯಕ್ಕೆ ಸೇರಿಸಿ, ಒಬ್ಬ ಮುಸಲ್ಮಾನ ಗವರ್ನರನನ್ನು ನೇಮಿಸಿದನು. ಹೀಗೆ ಮೇಲಿಂದ ಮೇಲೆ ನಡೆದ ಮುಸಲ್ಮಾನರ ಧಾಳಿಯಿಂದಾಗಿ, ಪಾಂಡ್ಯರ ಆಳ್ವಿಕೆಯ ತರುವಾಯ ತಮಿಳು ನಾಡಿನಲ್ಲಿ ಅಶಾಂತಿ, ಬಡತನಗಳು ತಲೆದೋರಿದುವು.

ಪಾಂಡ್ಯರ ವೈಭವದ ಆಳ್ವಿಕೆಯ ಕಾಲದಲ್ಲಿ ಹಿಂದುಸ್ಥಾನವು ವಿದೇಶ ವ್ಯಾಪಾರದಲ್ಲಿ ತುಂಬಾ ಅಭಿವೃದ್ಧಿಯನ್ನು ಪಡೆದಿತ್ತು. ತಮ್ಮ ಶ್ರೇಷ್ಠ ತರಗತಿಯ ನೌಕಾಬಲದ ಸಹಾಯದಿಂದ ಪೌರಸ್ತ್ಯ ಮತ್ತು ಪಾಶ್ಚ್ಚಾತ್ಯ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಇಟ್ಟುಕೊಂಡುದು ಆರ್ಥಿಕ ಅಭಿವೃದ್ಧಿಗೆ ಕಾರಣವಾಯಿತು. 1293ರಲ್ಲಿ ಪಾಂಡ್ಯ ರಾಜ್ಯವನ್ನು ಸಂದರ್ಶಿಸಿದ ಮಾರ್ಕೊ ಪೋಲೋನು ತನ್ನ ವರದಿಯಲ್ಲಿ ಈ ರಾಜ್ಯದ ಕುರಿತು ಹೀಗೆ ಹೇಳಿರುವನು: ವಿಸ್ತಾರವಾದ ಮಾಬರ್ ಪ್ರದೇಶವು ಬೃಹದ್ಭಾರತವೆಂದು ಕರೆಯಲ್ಪಡುತ್ತದೆ. ಇಂಡಿಯಾ ದ್ವೀಪಗಳಲ್ಲೇ ಇದು ಅತ್ಯಂತ ಹೆಸರುವಾಸಿಯಾದುದು. ಅಲ್ಲದೆ ಪ್ರಪಂಚದಲ್ಲೇ ಸುಂದರವಾದುದು. ಈ ಪ್ರಾಂತದ ದಕ್ಷಿಣದ ಕೊನೆಯಲ್ಲಿ ಇದನ್ನು ಐದು ಸೋದರರಲ್ಲಿ ಒಬ್ಬನಾದ ಸುಂದರ ಪಾಂಡ್ಯ ದೇವನು ಆಳುತ್ತಿದ್ದಾನೆ. ಈತನು ಅನಭಿಷಿಕ್ತ ದೊರೆಯಾಗಿರುವನು. ರಾಜ್ಯದಲ್ಲಿ ಉತ್ತಮ ಹಾಗೂ ದೊಡ್ಡ ಮುತ್ತುಗಳು ಹೇರಳವಾಗಿವೆ. ತಾಮ್ರಪರ್ಣಿ ನದಿಯ ಮುಖದಲ್ಲಿನ ‘ಕಯಲ್’ ನಗರವು ಹೆಸರಾಂತ ಸುಂದರ ನಗರವಾಗಿದ್ದು, ಏಡನ್, ಅರೇಬಿಯಾ, ಫೋರ್ಮೋಸ, ಕಿಸ್ ಮೊದಲಾದ ಪಾಶ್ಚಾತ್ಯ ದೇಶಗಳಿಂದ ಕುದುರೆ ಮತ್ತಿತರ ಸಾಮಗ್ರಿಗಳನ್ನು ಹೇರಿಕೊಂಡು ಅಸಂಖ್ಯಾತ ದೋಣಿಗಳು ಈ ನಗರದಲ್ಲಿ ವ್ಯಾಪಾರಕ್ಕಾಗಿ ಬಂದು ತಂಗುತ್ತವೆ. ಈ ಪಟ್ಟಣದಲ್ಲಿ ಇನ್ನು ಬೇರೆಲ್ಲಿಯೂ ಕಂಡುಕೇಳರಿಯದಷ್ಟು ಹೆಚ್ಚು ಪ್ರಮಾಣದಲ್ಲಿ ವ್ಯಾಪಾರವು ಸಾಗುತ್ತದೆ. ಈ ರಾಜರ ಬೊಕ್ಕಸ ಧನಕನಕಗಳಿಂದ ಹೇರಳವಾಗಿದೆ. ಅನರ್ಘ್ಯ ಚಿನ್ನಾಭರಣಗಳಿಂದ ರಾಜನು ತನ್ನ ದೇಹವನ್ನು ಅಲಂಕರಿಸಿಕೊಳ್ಳುವನು. ವಿಶಾಲವಾದ ರಾಜ್ಯವನ್ನು ಈ ಅರಸನು ನ್ಯಾಯದಿಂದ ಪರಿಪಾಲಿಸುತ್ತಿರುವನಲ್ಲದೆ ವ್ಯಾಪಾರಿಗಳಲ್ಲೂ ವಿದೇಶೀಯರಲ್ಲೂ ದಯಾದ್ರತೆ ಉಳ್ಳವನು. ಆದ್ದರಿಂದಲೇ ವಿದೇಶೀಯರು ಈ ದೇಶವನ್ನು ಸಂದರ್ಶಿಸಲು ಆತುರಪಡುವರು.