ಜಗಳಗಳೆಂದರೆ ಎಲ್ಲರಿಗೂ ಪ್ರತ್ಯಕ್ಷವಲ್ಲದಿದ್ದರೂ ಪರೋಕ್ಷವಾಗಿಯಾದರೂ ಇಷ್ಟವಾಗುತ್ತದೆ. ಹಸಿವು ನಿದ್ದೆಯ ಅಗತ್ಯವಿದ್ದಂತೆ, ಮನಸ್ಸಿಗೆ ಒಂದಿಷ್ಟು ಜಗಳದ ಅವಶ್ಯಕತೆಯೂ ಇದೆಯೇನೋ. ಆದರೆ ಅದು ಮನುಷ್ಯನ ಬದುಕಿಗೇ ಕುತ್ತು ತಂದಾಗ ಸಮಸ್ಯೆಗಳು ಬೆಳೆಯಲಾರಂಭಿಸುತ್ತವೆ. ಗುಬ್ಬಿಯನ್ನು ಕಂಡರೆ ಅಕ್ಕರೆ ಮೂಡಿದಂತೆ, ಬೆಕ್ಕುಗಳನ್ನು ಕಂಡರೆ ಮುದ್ದು ಬಂದಂತೆ, ಜಗಳಗಳಿಗೂ ಸಾಮಾನ್ಯವಾದುದೊಂದು ಕಾರಣವಿದೆಯೇ.
ಜಗಳವೆಂಬ ಮನೆದೇವರು ಪ್ರಸನ್ನವಾಗಿರಲಿ ಎಂದು ಹಾರೈಸಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.
ಬೆಕ್ಕುಗಳನ್ನು ಮುದ್ದಿಸಿದಂತೆ, ನಾಯಿಗಳನ್ನು ಅಕ್ಕರೆ ಮಾಡಿದಂತೆ, ಆನೆಗಳನ್ನು ಇಷ್ಟಪಟ್ಟಂತೆ ಕಾಗೆಗಳನ್ನು ಯಾರೂ ಇಷ್ಟಪಡುವುದನ್ನು ನೋಡಿಲ್ಲ. ಆ ಮಟ್ಟಿಗೆ ಬೆಕ್ಕುಗಳು ಬಲು ಅದೃಷ್ಟವಂತರು. ಇಲಿಹಿಡಿಯಲಿ, ಹಿಡಿಯದೇ ಇರಲಿ, ಅವುಗಳಿಗೆ ‘ಮುದ್ದು ಬೆಕ್ಕುಗಳು’ ಎಂದೇ ಹೆಸರು. ನಾಯಿಗಳೆಂದರೆ, ಅವು ಹೃದಯದೊಡನೆ ನೇರವಾಗಿ ಮಾತನಾಡಿದಂತೆ ಪ್ರೀತಿ ಮಾಡುತ್ತವೆ. ಮನುಷ್ಯರೂ ಅವುಗಳನ್ನು ಅಷ್ಟೇ ಅಕ್ಕರೆಯಿಂದ ಹಚ್ಚಿಕೊಳ್ಳುವುದನ್ನ ನೋಡುತ್ತೇವೆ. ಯಾವುದೇ ಪ್ರಾಣಿಯನ್ನು ನೋಡಿದಾಗ, ಅಂತಹುದೇ ನಿರ್ದಿಷ್ಟ ಭಾವನೆಗಳು ನಮ್ಮ ಅಂತರಂಗದಲ್ಲಿ ಯಾಕೆ ಸೃಷ್ಟಿಯಾಗುತ್ತವೆ, ಅದಕ್ಕೆ ನಾವಷ್ಟೇ ಹೊಣೆಯೇ ಅಥವಾ ನಮ್ಮೆದುರಿಗೆ ಇರುವವರೂ ಕಾರಣವೇ ಎಂಬ ಪ್ರಶ್ನೆಯೊಂದು ಸದಾ ಕಾಡುತ್ತದೆ. ಇದು ಮನುಷ್ಯರ ನಡುವಿನ ಸಂಬಂಧಗಳಿಗೂ ಅನ್ವಯಿಸುತ್ತದೆ. ಒಂದಿಷ್ಟು ಜನರು ಪ್ರೀತಿಯನ್ನು ಆಕರ್ಷಿಸುವ, ಎಲ್ಲರೂ ಮೆಚ್ಚುವ ಸ್ವಭಾವದವರಾದರೆ, ಮತ್ತಷ್ಟು ಜನರು ಜಗಳಗಂಟರಂತೆ, ಕೇಡಿಗಳಂತೆ ಎಲ್ಲರಿಂದಲೂ ಬೈಸಿಕೊಳ್ಳುತ್ತಾರೆ. ನಿಜಕ್ಕೂ ಅವರು ಅಷ್ಟೇನೂ ಕೇಡಿಗಳಲ್ಲ ಎಂಬುದು ಹತ್ತಿರದ ಕೆಲವೇ ಜನರಿಗೆ ಗೊತ್ತಿರುತ್ತದೆ, ಅಥವ ಗೊತ್ತೇ ಇರುವುದಿಲ್ಲವೆನ್ನಿ. ಆದರೆ ಜನರನ್ನು ದ್ವೇಷಿಸುವಾಗ ಪೂರ್ವಗ್ರಹಗಳೇ ಹೆಚ್ಚಾಗಿ ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆ.
ಜೀವನದ ನಡೆಯು ಸುಸ್ಥಿತಿಯಲ್ಲಿದ್ದಾಗ ಇವೆಲ್ಲ ಗಮನಕ್ಕೆ ಬರುವುದೇ ಇಲ್ಲ. ಆದರೆ ಯಾವಾಗ ಜಗಳಗಳು ಶುರುವಾಗುತ್ತದೋ, ಆಗ ಇಂತಹ ವಿಚಾರಗಳು ಮುನ್ನೆಲೆಗೆ ಬಂದುಬಿಡುತ್ತವೆ. ಈ ಅಸಮಾನ ಸ್ವಭಾವದ ವೇದಿಕೆಯ ಮೇಲೆಯೇ ‘ಜಗಳ’ವೆನ್ನುವ ಮಹಾರಾಜ ರಾರಾಜಿಸುತ್ತಾನೆ ಎನಿಸುತ್ತದೆ. ಎಷ್ಟೋ ಬಾರಿ ಜಗಳವೇ ಬದುಕನ್ನು ಮುನ್ನಡೆಸುವುದುಂಟು. ಬೇಕಾದರೆ ಧಾರಾವಾಹಿಗಳನ್ನು ನೋಡಿದರೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಜಗಳವೊಂದು ಇಲ್ಲದೇ ಇದ್ದರೆ ಧಾರಾವಾಹಿಯ ಪಾತ್ರಗಳು ಮೂಕಿಗಳಾಗಿಬಿಟ್ಟಾವು.
ದೇಶ ದೇಶಗಳ ನಡುವಿನ ಜಗಳ, ಮನುಷ್ಯರ ನಡುವಿನ ಜಗಳ, ಸಂಬಂಧಿಕರ ನಡುವಿನ ಜಗಳಗಳನ್ನೆಲ್ಲ ಪರಿಗಣಿಸುವುದಾದರೆ, ಗಂಡಹೆಂಡತಿಯ ನಡುವಿನ ಜಗಳಕ್ಕಿಂತ ಪ್ರಸಿದ್ಧವಾದ ಜಗಳ ಮತ್ತೊಂದಿಲ್ಲ.
‘ಜನತುಂಬಿ ನಿಂತ ಹಂದರದ ಒಳಗ
ನಿಮ್ಮಪ್ಪ ಕೈಯ ಕೊಟ್ಟಾ
ಕಡೆಗೆ ಎಲ್ಲಾ ಕೊಡತೀನಿ ಅಂತ
ಕೊಡಲಿಲ್ಲ ಒಂದು ಚುಟ್ಟಾ’
‘ಸಾಕವ್ವ ಸಾಕು ಕೆರೆಭಾವಿ ಪಾಲು
ನಾನಾಗಿ ಹೋಗಲೇನ
ದಿನ ಗಳಿಗೆಗೂನು ಕಟಿಪಿಟಿಯ ತಿಂದು
ಉಪವಾಸ ಸಾಯಲೇನ’
ಎಂಬಂತಹ ಜಗಳಗಳು ಎಲ್ಲ ಮನೆಯಲ್ಲಿಯೂ ಕೇಳುವಂತಹುದೇ. ಆದರೆ ಈ ತಾತ್ಕಾಲಿಕ ಜಗಳವನ್ನು ಮೀರಿದ ಕಾದಾಟ ಶುರುವಾದಾಗ ಬದುಕು ದುಸ್ತರವಾಗುತ್ತದೆ. ವೃತ್ತಿಯಲ್ಲಿ ಟೀಚರ್ ಆಗಿರುವ ಸುಮತಿ ಪತಿಯೊಡನೆ ತನ್ನ ಹಕ್ಕುಗಳಿಗಾಗಿ ಹೋರಾಡುತ್ತ ತನ್ನ ಜೀವನದ ಬಹುಪಾಲನ್ನು ಕಳೆದಿದ್ದಳು. ಆದರೆ ಕೊನೆಗೂ ಬದುಕು ಸಾಧ್ಯವಾಗುತ್ತಿಲ್ಲ ಎಂದು ಅರಿತಾಗ ಅವನಿಂದ ಬೇರೆಯಾಗುವ ನಿರ್ಧಾರ ಮಾಡಿದಳು.
ಬೇರೆಯಾಗುವುದಾದರೂ ಸುಲಭವಿಲ್ಲ ತಾನೆ. ಕಾನೂನು ಹೋರಾಟಗಳು ದೀರ್ಘಕಾಲ ನಡೆಯುತ್ತಿದ್ದವು. ಆದರೆ ಅಷ್ಟರಲ್ಲಿ ಅವನು ಹಠಾತ್ ತೀರಿಕೊಂಡಿದ್ದ. ನಾವು ಯಾರೊಡನೆ ದೀರ್ಘಕಾಲ ಜಗಳವಾಡುತ್ತೇವೆಯೋ, ಅವರೇ ನಮ್ಮ ಜೀವನದ ಕೇಂದ್ರ ಬಿಂದವಾಗಿ ಬಿಟ್ಟಿದ್ದಾರೆ ಎಂಬ ಅರಿವಾಗುವುದು, ಅವರು ಅಗಲಿದಾಗಲೇ. ಏಕಮುಖವಾಗಿ ಬದುಕುತ್ತಿದ್ದ ಆಕೆಗೆ ಇದ್ದಕ್ಕಿದ್ದಂತೆಯೇ, ಜಗಳವಾಡುವುದಕ್ಕೆ ಕಾರಣವಿಲ್ಲದೇ, ಬದುಕನ್ನು ಮತ್ತೊಂದು ಹಳಿಗೆ ತಂದುಕೊಂಡು ನಿಭಾಯಿಸುವುದು ಆಕೆಗೆ ದೊಡ್ಡ ಸವಾಲಾಗಿಬಿಟ್ಟಿತು.
ಕ್ರೈಮ್ ವರದಿಗಳನ್ನು ಬರೆಯುವಾಗ ಎಷ್ಟೊಂದು ವೈವಿಧ್ಯಮಯವಾದ ಜಗಳನ್ನು ಕಂಡು ಅಚ್ಚರಿಯೆನಿಸುತ್ತಿತ್ತು. ನಮ್ಮ ಮನೆಯಂಗಳಕ್ಕೆ ಪಕ್ಕದ ಮನೆಯ ಕೋಳಿಗಳು ಬಂದರೆ, ಕತ್ತಿ ದೊಣ್ಣೆ ಹಿಡಿದು ಕಾದಾಡುವಷ್ಟು ದೊಡ್ಡ ಜಗಳ ನಿಜಕ್ಕೂ ಹೇಗೆ ಸೃಷ್ಟಿಯಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಲು ಕಷ್ಟಪಟ್ಟುದುಂಟು. ಅಪರಾಧ ಜಗತ್ತಿನಲ್ಲಿ ಜಗಳ ಬಗ್ಗೆ ಮಾತನಾಡುವವರು, ‘ ಎಲ್ಲ ಜಗಳಗಳೂ ಹೆಣ್ಣು, ಹೊನ್ನು ಮಣ್ಣಿಗಾಗಿ ನಡೆಯುತ್ತದೆ’ ಎಂದು ನಂಬುತ್ತಾರೆ. ಆದರೆ ವಾಸ್ತವವಾಗಿ ಇವುಗಳನ್ನು ಅತಿಯಾಗಿ ಬಯಸುವ ಸ್ವಾರ್ಥದಿಂದ ಜಗಳಗಳು ಸೃಷ್ಟಿಯಾಗುತ್ತವೆ ಎಂಬುದು ಹೆಚ್ಚು ಸ್ಪಷ್ಟ.
ಎಷ್ಟೋ ಬಾರಿ ಜಗಳವೇ ಬದುಕನ್ನು ಮುನ್ನಡೆಸುವುದುಂಟು. ಬೇಕಾದರೆ ಧಾರಾವಾಹಿಗಳನ್ನು ನೋಡಿದರೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಜಗಳವೊಂದು ಇಲ್ಲದೇ ಇದ್ದರೆ ಧಾರಾವಾಹಿಯ ಪಾತ್ರಗಳು ಮೂಕಿಗಳಾಗಿಬಿಟ್ಟಾವು.
ಡಾರ್ವಿನ್ ಏನೋ, ಬಲಿಷ್ಟ ಜೀವಿಯೇ ಈ ಜಗತ್ತಿನಲ್ಲಿ ಬದುಕಿ ಉಳಿಯುವುದು ಎಂದು ವ್ಯಾಖ್ಯಾನ ಮಾಡಿರಬಹುದು. ಮನುಷ್ಯರಂತೂ ಆ ಮಾತಿಗೆ ಜೋತುಬೀಳದೇ ‘ಮಾನವೀಯತೆ’ಯನ್ನು ಗೌರವಿಸುವ ಪ್ರಯತ್ನಗಳನ್ನು ನಡೆಸುತ್ತಾರೆ. ಬಲಿಷ್ಟರಾದವರಷ್ಟೇ ಅಲ್ಲ, ದುರ್ಬಲರೂ, ಅಶಕ್ತರೂ ಈ ಜಗತ್ತಿನಲ್ಲಿ ಬಾಳುವೆ ಮಾಡಬೇಕು. ಅವರಿಗೂ ಬದುಕುವ ಹಕ್ಕಿದೆ ಎಂಬ ನಿಟ್ಟಿನಲ್ಲಿಯೇ ಅಪರಾಧಗಳ ತನಿಖೆ, ಶಿಕ್ಷೆಗಳ ನಿರ್ಣಯಗಳು ಆಗಬೇಕು. ಜೊತೆಗೆ ದೈನಂದಿನ ಜೀವನದಲ್ಲಿಯೂ ಸಾಮಾಜಿಕ ನೀತಿ ನಿಯಮಗಳು ಇದೇ ವಿಚಾರವನ್ನು ಸಾರಿ ಹೇಳುತ್ತವೆ.
ಆದರೆ ಜಗಳವು ನಿಭಾಯಿಸಲಾರದಷ್ಟು ಕೆಟ್ಟದಾಗಿ ಬೆಳೆಯುವುದು ಅವುಗಳು ಬಣ್ಣಗಳನ್ನು ಹೊದ್ದು ನಿಂತಾಗ. ಈ ಜಗತ್ತಿನಲ್ಲಿ ಮನುಷ್ಯರಿಗೆ ಯೋಚಿಸುವ ಶಕ್ತಿಯಿದೆ ಮತ್ತು ಸಂವಹನ ನಡೆಸುವುದಕ್ಕೆ ಮಾತೆಂಬ ಆಯುಧವಿದೆ ಎಂದು ಅನೇಕ ಬಾರಿ ಹೆಮ್ಮೆಪಟ್ಟುಕೊಳ್ಳುತ್ತೇವೆ. ಆದರೆ ಈ ಎರಡೂ ಶಕ್ತಿಗಳು ಎಷ್ಟೊಂದು ಟೊಳ್ಳಾಗಿರುತ್ತವೆ ಎಂಬುದು ಅರ್ಥವಾಗುವುದು ಇಂತಹ ಸಂದರ್ಭಗಳಲ್ಲಿ.
ಉದಾಹರಣೆಗೆ, ಒಬ್ಬರ ಮನೆಯಿಂದ ವಸ್ತುವೊಂದು ಕಳ್ಳತನವಾಗುತ್ತದೆ ಎಂದಿಟ್ಟುಕೊಳ್ಳೋಣ. ಕಳ್ಳತನದ ನೆಪದಲ್ಲಿ ಎರಡೂ ಮನೆಗಳ ಸದಸ್ಯರ ನಡುವೆ ಜಗಳಗಳು ಶುರುವಾಗುತ್ತವೆ. ಇಬ್ಬರ ನಡುವೆ ರಾಜೀ ಪಂಚಾಯಿತಿ ಮಾಡಲು ಊರ ಹಿರಿಯರು ಪ್ರಯತ್ನಿಸುತ್ತಾರೆ. ಅದನ್ನೂ ಮೀರಿ ಜಗಳವು ತೀವ್ರವಾಗಿ ಬೆಳೆಯತೊಡಗಿದಾಗ, ಈ ಕುರಿತು ಪೊಲೀಸರಿಗೆ ದೂರು ಕೊಟ್ಟು, ಪೊಲೀಸರು ಕಳ್ಳನನ್ನು ಹಿಡಿದು,ನ್ಯಾಯಾಲಯವು ಶಿಕ್ಷೆ ವಿಧಿಸುವುದರೊಂದಿಗೆ ಪರಿಸ್ಥಿತಿ ಒಂದು ಹಂತಕ್ಕೆ ಬರುತ್ತದೆ. ಆದರೆ ಇದೇ ಮನೆಗಳ ಸದಸ್ಯರು ಯಾವ ಯಾವ ಸಮುದಾಯದವರು ಎಂಬ ಪ್ರಶ್ನೆ ಬಂದಾಗ ಪರಿಸ್ಥಿತಿ ಇಷ್ಟು ಸರಳವಿರುವುದಿಲ್ಲ ಸಮುದಾಯಗಳೆಂಬ ಬಣ್ಣದಡಿಯಲ್ಲಿ ಜಗಳವು ಕೆಟ್ಟದಾರಿಯಲ್ಲಿ ಬೆಳೆಯಲು ಶುರುವಿಟ್ಟುಕೊಳ್ಳುತ್ತದೆ. ಬಣ್ಣದ ಮಸೂರದಡಿಯಲ್ಲಿ ಇದ್ದಕ್ಕಿದ್ದಂತೆಯೇ, ಕಳ್ಳತನವಾದುದು ಯಾವ ವಸ್ತು ಎಂಬುದಕ್ಕೆ ಹೆಚ್ಚು ಆದ್ಯತೆ ದೊರೆಯುತ್ತದೆ. ಜೀವಿಯೇ, ನಿರ್ಜೀವಿಯೇ ಎಂಬುದು ಅದರ ಮಗದೊಂದು ಮಗ್ಗುಲು. ಹೀಗೆ ಈ ಜಗಳಗಳು ಶತಮಾನ ಕಳೆದರೂ ಇತ್ಯರ್ಥವಾಗುವುದೇ ಇಲ್ಲ.
ಒಂದುವೇಳೆ ಅವು ಬಗೆಹರಿದಂತೆ ಕಂಡರೂ, ಪರಿಸ್ಥಿತಿಯ ಒತ್ತಡವೋ, ಅನಿವಾರ್ಯತೆಯೋ ಅದಕ್ಕೆ ಕಾರಣವಾಗಿರುತ್ತದೆಯೇ ವಿನಃ, ‘ನಿಮ್ಮ ಮಾತು ಸರಿ, ನನ್ನ ನಡೆಯಲ್ಲಿ ತೊಡಕಾಯಿತು’ ಎಂದು ಸರಿಪಡಿಸಿಕೊಳ್ಳುವ ಧೋರಣೆ ಕಂಡುಬರುವುದೇ ಇಲ್ಲ.
ಗಾತ್ರ ಎಷ್ಟೇ ದೊಡ್ಡದಾದರೂ ಯಾವುದೋ ಚಿಕ್ಕ ಸಂಗತಿಗೆ ಬದುಕಲ್ಲಿ ಎಲ್ಲರೂ ಸೋಲಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮನಸ್ಸೇ ಇರುವುದಿಲ್ಲ.
ರೇಶಿಮೆ ಸೀರೆಯನ್ನು ವಿಶಾಲವಾದ ಟೇಬಲ್ಲಿನ ಮೇಲೆ ಹಾಸಿ, ಸೆರಗಿನ ತುದಿಯಿಂದ ಒಂದೊಂದೇ ನೂಲನ್ನು ತೆಗೆಯಲಾರಂಭಿಸುತ್ತಾಳೆ ಟೇಲರ್ ಮರಿಯಮ್ಮ. ಅಚ್ಚ ಎಣ್ಣೆಗೆಂಪು ಬಣ್ಣದ ಸೀರೆಯಿಂದ ಕೆಂಪಿನ ಅಡ್ಡ ನೂಲುಗಳನ್ನು ತೆಗೆದಂತೆ, ಕಪ್ಪನೆಯ ಉದ್ದ ನೂಲುಗಳು ಜಾಲರಿಯಂತೆ ನೇತಾಡುತ್ತಾ ಇರುತ್ತದೆ. ಅವುಗಳಲ್ಲಿ ಇಷ್ಟಿಷ್ಟನ್ನೇ ಬೆರಳುಗಳಿಗೆ ಸುತ್ತಿಕೊಂಡು ಗಂಟು ಹಾಕುತ್ತ ಸೆರಗಿಗೆ ಗೊಂಡೆ ಹಾಕುತ್ತಾಳೆ. ತೆಗೆದಿಟ್ಟ ಕೆಂಪನೆಯ ನೂಲನ್ನು ಸೇರಿಸಿ ಗೊಂಡೆಯ ಗುಚ್ಛವನ್ನು ದಪ್ಪವಾಗಿಸುತ್ತಾಳೆ. ತಾನೇ ಖರೀದಿಸಿ ತಂದ ಚಿನ್ನದ ಬಣ್ಣ ನೂಲಿನ ಕಟ್ಟುಗಳನ್ನು ಹಾಕುತ್ತ, ಅದೆರೆಡೆಯಲ್ಲಿ ಮುತ್ತಿನ ಮಣಿಗಳನ್ನು ಸೇರಿಸುತ್ತಾ ಗೊಂಡೆಯ ಅಲಂಕಾರ ಮುಂದುವರೆಯುತ್ತದೆ. ಅಂತಿಮವಾಗಿ ಗೊಂಡೆಯು ಸುಂದರವಾಗಿ, ಶ್ರೀಮಂತವಾಗಿ ಗೋಚರಿಸುತ್ತದೆ. ಎಲ್ಲ ಬಣ್ಣಗಳೂ ಒಂದಕ್ಕೊಂದು ಪೂರಕವೆಂದರೂ ಕೇಳುವವರಾರು ? ಸೀರೆಯಲ್ಲಿದ್ದ ಕಪ್ಪುನೂಲಿನಲ್ಲಿ ಕಟ್ಟಿ ಗೊಂಡೆಯನ್ನು ಭದ್ರವಾಗಿ ಜೀವಂತವಿರಿಸಿದ್ದೇನೆ ಎಂದರೆ, ಆ ಮಾತನ್ನು ಕೇಳುವರಾರು ? ಚಂದ ಕಾಣುವ ವೈಭವದ ಬಣ್ಣಗಳು ಯಾವುದನ್ನೂ ಹೇಳುವುದಕ್ಕೆ ಬಿಡುವುದೇ ಇಲ್ಲ ಎಂದುಕೊಂಡು ಸುಮ್ಮನಾಗುತ್ತಾಳೆ.
ಕತೆಗಾರ ವಸುಧೇಂದ್ರ ಬರೆದ ‘ತೇಜೋ ತುಂಗಭದ್ರ’ ಕಾದಂಬರಿಯಲ್ಲೊಂದೆರಡು ಸಾಲುಗಳು ಹೀಗಿವೆ. ‘ಧರ್ಮವಲ್ಲದಿದ್ದರೆ ಜನರು ಬೇರೆಯದಕ್ಕೆ ಜಗಳವಾಡುತ್ತಿದ್ದರಲ್ಲವೇ? ಈ ಮಾನವ ದ್ವೇಷದಲ್ಲಿ ಧರ್ಮದ ಪಾತ್ರವೆಷ್ಟು, ಮನುಷ್ಯನ ಪಾತ್ರವೆಷ್ಟು? ಜಗಳವಾಡುವುದು ಮನುಷ್ಯನ ಹುಟ್ಟುಗುಣವೇ? ಹಸಿವೆ, ನಿದ್ದೆ, ನೀರಡಿಕೆಗಳಿಗೆ ದೇಹವನ್ನು ತೃಪ್ತಿಪಡಿಸಿದಂತೆ ಜಗಳವಾಡಿಯೂ ಅದನ್ನು ತೃಪ್ತಿಪಡಿಸಬೇಕೆ?’
ಜಗಳವು ಅತೃಪ್ತಿಯ ಸಂಕೇತ. ಅಂದಮೇಲೆ ತೃಪ್ತಿಯಾಗುವ ಮಾತೇ ಇಲ್ಲ. ರಿಲೇ ಓಟದಂತೆ ಸದಾ ಸಾಗುತ್ತಿರುತ್ತದೆ. ಆದರೆ ಮನಸ್ಸು ಬಯಸಿದ್ದನ್ನೆಲ್ಲ ಮಾಡುವುದು ಮನುಷ್ಯ ಧರ್ಮವಲ್ಲ. ಪ್ರೀತಿಸುವುದನ್ನು ಕಲಿತ ಮಕ್ಕಳು ನಾಳೆ ಶತ್ರುಗಳನ್ನೂ ಪ್ರೀತಿಸಿ ಗೆದ್ದಾರು. ದ್ವೇಷವನ್ನು ಕಲಿಸಿದರೆ ದ್ವೇಷಿಸುವ ಚಟದಾಸರಾಗಿ ತಮ್ಮವರನ್ನೇ ದ್ವೇಷಿಸಿಯಾರು. ಆದ್ದರಿಂದ ಪ್ರೀತಿಯ ಪಂಚಾಂಗಕ್ಕೆ ಹಾನಿ ಮಾಡದಂತೆ ಜಗಳಗಳು ಜೊತೆಗಿರಲಿ.
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.