ಬಾಬು ಮಾಮಾನ ಗೆಳೆಯನೊಬ್ಬ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ. ಎತ್ತಿ ಆಡಿಸುತ್ತಿದ್ದ. ಆತನೊಮ್ಮೆ ಬಾವಿಯಿಂದ ನೀರು ತುಂಬಿಕೊಂಡು ಹೋಗುತ್ತಿದ್ದುದು ಕಾಣಿಸಿತು. ಅವನನ್ನು ಕಂಡೊಡನೆ ಖುಷಿಯಿಂದ ಅವನ ಹಿಂದೆ ಓಡಿದೆ. ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಐದನೇ ಕಂತು.

 

ಅಲ್ಲೀಬಾದಿಯಲ್ಲಿ ಮನೆ ಸಮೀಪವಿದ್ದ ಇಬ್ಬರು ಗೆಳೆಯರು ನನ್ನ ಬದುಕಿನಲ್ಲಿ ಬಂದ ಮೊದಲ ಗೆಳೆಯರಾಗಿದ್ದರು. ಮೊದಲನೆಯವನು ಮೀನಪ್ಪನ ಮಗ ಭೀಮು. ಎರಡನೆಯವನ ಹೆಸರು ಮರೆತಿದ್ದೇನೆ. ಆತನ ಅಪ್ಪನ ಹೆಸರು ಚಂದ್ರಪ್ಪ. ಈಗ ಆತ ‘ಚಂದ್ರಪ್ಪನ ಮಗ’ ಎಂದು ಮಾತ್ರ ನೆನಪು. ಅವನ ಹೆಸರು ಮರೆತದ್ದಕ್ಕೆ ಕಸಿವಿಸಿಯಾಗುತ್ತಿದೆ. ಆತ ಬಹಳ ಸಂಭಾವಿತನಾಗಿದ್ದ. ಭೀಮು ಕೂಡ ಒಳ್ಳೆಯ ಹುಡುಗನೇ, ಆದರೆ ಅವನಿಗೆ ಮನೆಯಲ್ಲಿ ಬಹಳ ಪ್ರೀತಿ ಮಾಡುತ್ತಿದ್ದುದರಿಂದ ಸ್ವಲ್ಪ ಗಂಭೀರವಾಗೇ ಇರುತ್ತಿದ್ದ.

ಆ ಇಬ್ಬರೂ ಗೆಳೆಯರು ಹಳ್ಳಿಯ ದೃಷ್ಟಿಯಲ್ಲಿ ಶ್ರೀಮಂತರೇ ಆಗಿದ್ದರು. ಆದರೆ ನನಗೆ ಬಡವನೆಂಬ ಕೀಳರಿಮೆ ಇರಲಿಲ್ಲ. ಅವರನ್ನು ಎಲ್ಲದರಲ್ಲೂ ಸೋಲಿಸುತ್ತಿದ್ದೆ. ಬಾಳಿಕಾಯಿ ಕುಸ್ತಿಯಲ್ಲೂ ನನ್ನದೇ ಗೆಲವು. ದೊಡ್ಡವರು ಕುಸ್ತಿ ಆಡುವ ಮೊದಲು ಆ ಅಖಾಡದಲ್ಲಿ ಹುಡುಗರು ಕುಸ್ತಿ ಆಡುವುದಕ್ಕೆ ‘ಬಾಳಿಕಾಯಿ ಕುಸ್ತಿ’ ಅನ್ನುತ್ತಾರೆ. ಗೆದ್ದವರಿಗೆ ಎರಡು, ಸೋತವರಿಗೆ ಒಂದು ಬಾಳೆಹಣ್ಣು ಕೊಡುತ್ತಿದ್ದರು. ಬರಿ ಹಸಿ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯಲ್ಲೂ ಅವರನ್ನು ಸೋಲಿಸುತ್ತಿದ್ದೆ.

ಕಲ್ಲವ್ವ ದಪ್ಪನೆಯ ಬೆಳ್ಳನೆಯ ಸುಂದರ ಹೆಣ್ಣುಮಗಳು. ಅಷ್ಟೇ ಸಂಭಾವಿತಳು. ಮೀನಪ್ಪ ಮೀಸೆ ಹೊತ್ತ ಸರಳ ಮನುಷ್ಯ. ಆತ ಕೂಡ ದಪ್ಪಗೆ ಇದ್ದ. ಮೀನಪ್ಪ ಮತ್ತು ಚಂದ್ರಪ್ಪ ಅವರ ಕುಟುಂಬಗಳು ಯಾವುದೇ ಊರ ಉಸಾಬರಿಗೆ ಹೋಗುತ್ತಿರಲಿಲ್ಲ. ಮೀನಪ್ಪ ಮತ್ತು ಚಂದ್ರಪ್ಪ ಕುಟುಂಬಗಳು ಅಕ್ಕಪಕ್ಕದಲ್ಲಿದ್ದು ಜೊತೆಯಾಗಿ ತಮ್ಮ ತಮ್ಮ ಸವಾರಿ ಗಾಡಿಗಳನ್ನು ಕಟ್ಟಿಕೊಂಡು ಸವದತ್ತಿ ಯಲ್ಲಮ್ಮನ ಜಾತ್ರೆಗೆ ಹೋಗಿದ್ದವು. ಜಾತ್ರೆಯಲ್ಲಿ ಅವರು ತಮ್ಮ ಮಕ್ಕಳಿಗೆ ಬಣ್ಣದ ತಗಡಿನ ತುತ್ತೂರಿ ಮತ್ತು ಆಟಿಗೆ ಕಾರುಗಳನ್ನು ಕೊಡಿಸಿದ್ದರು. ಆಗ ಆಟಿಕೆ ಕಾರುಗಳನ್ನು ಕೂಡ ಬಣ್ಣದ ತಗಡಿನಿಂದ ತಯಾರಿಸುತ್ತಿದ್ದರು. ಜಾತ್ರೆಯಿಂದ ವಾಪಸ್ ಬಂದ ನಂತರ ಭೀಮು ಮತ್ತು ಚಂದ್ರಪ್ಪನ ಮಗ ಬಹಳ ಹೆಮ್ಮೆಯಿಂದ ಆ ಕಾರುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರು.

(ಇಜಾಪುರ ಮುಳ್ಳಿನ ಗುಂಪಿ)

‘ನನ್ನ ಕಾರಿನಷ್ಟು ನಿಮ್ಮ ಕಾರುಗಳು ಗಟ್ಟಿ ಇಲ್ಲ’ ಎಂದು ಅವರಿಗೆ ಹೇಳಿದೆ. ‘ಹೌದಾ ನಿನ್ನ ಕಾರ್ ತೊಗೊಂಡ್ ಬಾ’ ಎಂದು ಭೀಮೂ ಅಂದ. ನಾನು ಆಯತಾಕಾರದ ಕಟ್ಟಿಗೆ ತುಂಡಿಗೆ ಮೊಳೆ ಹೊಡೆದು ಅದಕ್ಕೆ ಸುತಳಿ ಕಟ್ಟಿ ಎಳೆದುಕೊಂದು ಬಂದೆ. ‘ಬರ್ರಿ ನೋಡ್ತೀನಿ ಯಾರ ಕಾರ್ ಜೋರಾಗಿ ಓಡ್ತದ’ ಎಂದು ಸವಾಲು ಹಾಕಿದೆ. ತಮ್ಮ ಕಾರುಗಳು ಹಾಳಾಗುತ್ತವೆ ಎಂದು ಅವರು ಅಂಜಿ ಸವಾಲನ್ನು ಎದುರಿಸಲಿಲ್ಲ. ಆಗ ನಾನು ನನ್ನ ‘ಕಾರ’ನ್ನು ಯರ್ರಾಬಿರ್ರಿ ಎಳೆದಾಡುತ್ತ, ನೋಡ್ರಿ ನನ್ನ ಕಾರ್ ಎಷ್ಟ ಗಟ್ಟಿ’ ಎಂದು ಹೇಳುತ್ತ, ಆ ಕಟ್ಟಿಗೆ ತುಂಡನ್ನು ಎಳೆಯುತ್ತ ಮನೆಗೆ ಹೊರಟೆ. (ಆಗ ಮಕ್ಕಳಿಗೆ ಚಪ್ಪಲಿ ಹೊಲಿಸುವ ಯೋಚನೆ ಪಾಲಕರಿಗೆ ಇರಲಿಲ್ಲ. ನಾವೆಲ್ಲ ಬರಗಾಲಲ್ಲೇ ತಿರುಗುತ್ತಿದ್ದೆವು.) ಅಂದು ಆ ಇಬ್ಬರು ಗೆಳೆಯರನ್ನು ಮಣಿಸಿ ಉತ್ಸಾಹದಿಂದ ಬರುವ ಸಂದರ್ಭದಲ್ಲಿ ಲಕ್ಷ್ಯ ಕೊಡದೆ ಇಜಾಪುರ (ವಿಜಾಪುರ) ಮುಳ್ಳಿನ ಗುಂಪನ್ನು ತುಳಿದೆ. ಆ ಮುಳ್ಳುಗಳನ್ನು ತುಳಿದರೆ ತೆಗೆಯುವುದು ಕಷ್ಟ. ಅವು ಕೂದಲೆಳೆಯಷ್ಟು ತೆಳ್ಳಗಿದ್ದು ಬಹಳ ಗಿಡ್ಡ ಮತ್ತು ಚೂಪಾಗಿರುತ್ತವೆ. ಏಕಕಾಲಕ್ಕೆ ಬಹಳಷ್ಟು ಮುಳ್ಳುಗಳು ನೇರವಾಗಿ ಅಂಗಾಲಲ್ಲಿ ಸೇರಿ ಅಡಗಿಕೊಳ್ಳುತ್ತವೆ. ಅವುಗಳನ್ನು ಸೂಜಿಯಿಂದ ಹೊರ ತೆಗೆಯಲು ಹರ ಸಾಹಸ ಪಡಬೇಕಾಗುತ್ತದೆ. ಕೆಲವೊಂದು ಸಲ ಒಂದೆರಡು ಮುಳ್ಳುಗಳು ಬರದೇ ಇದ್ದಾಗ ಅವುಗಳನ್ನು ಹಾಗೇ ಬಿಟ್ಟು ಕಸಿವಿಸಿ ಪಡುತ್ತ ನೋವನ್ನು ಸಹಿಸಿಕೊಂಡೇ ಇರಬೇಕಾಗುತ್ತದೆ. ಮುಂದೆ ಆ ಜಾಗದಲ್ಲಿ ಬಾವುಗಟ್ಟಿದಾಗ ಮೂಗು ಮಾಡಿ ಕಳ್ಳಿ ಹಾಲು ಹಾಕಿದ ನಂತರ ಸ್ವಲ್ಪ ಹೊತ್ತು ಬಿಟ್ಟು ತೆಗೆಯ ಬೇಕಾಗುತ್ತದೆ. ಅಂದು ಇಜಾಪುರ ಮುಳ್ಳು ತೆಗೆಯುವುದರಲ್ಲೇ ನನ್ನ ದಿನವೆಲ್ಲ ಹೋಯಿತು.

ಈ ಜಾತಿ ಕುರಿತ ಇನ್ನೊಂದು ಅನುಭವವನ್ನು ಹೇಳಬೇಕೆನಿಸುತ್ತಿದೆ. ಹಳ್ಳಿಯಲ್ಲಿ ನಮ್ಮ ಕಡೆ ಹೊಕ್ಕು ತುಂಬುವ ಒಂದೇ ಬಾವಿ ಇತ್ತು. ಆ ಬಾವಿಯ ನೀರನ್ನು ಊರವರು ಕುಡಿಯುತ್ತಿದ್ದರು. ದಲಿತ ಸಮಾಜದವರು ಎಲ್ಲಿಂದ ನೀರು ತರುತ್ತಿದ್ದರೊ ಗೊತ್ತಿಲ್ಲ. ನಾವು ಮಾತ್ರ ಇದೇ ಬಾವಿಯಿಂದ ನೀರು ತರುತ್ತಿದ್ದೆವು.

ಬಾಬು ಮಾಮಾನ ಗೆಳೆಯನೊಬ್ಬ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ. ಎತ್ತಿ ಆಡಿಸುತ್ತಿದ್ದ. ಎರಡೂ ಕೈಗಳನ್ನು ಹಿಡಿದು ಎತ್ತಿ ಗರಗರ ತಿರುಗಿಸುತ್ತ ಖುಷಿ ಕೊಡುತ್ತಿದ್ದ. ಆತ ರುಮಾಲು ಧರಿಸುವ ಸ್ಟೈಲ್ ಸ್ವಲ್ಪ ಬೇರೆ ಇತ್ತು. ಅದರ ಚುಂಗ ಮೊಳಕಾಲಿನವರೆಗೆ ಬರುತ್ತಿತ್ತು. ಆತ ಬಾವಿಯಿಂದ ನೀರು ತುಂಬಿಕೊಂಡು ಹೋಗುತ್ತಿದ್ದುದು ಕಾಣಿಸಿತು. ಅವನನ್ನು ಕಂಡೊಡನೆ ಖುಷಿಯಿಂದ ಅವನ ಹಿಂದೆ ಓಡಿದೆ. ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ. ನಾನು ಅಪಮಾನಿತನಾಗಿ ಪಕ್ಕದಲ್ಲೇ ನಿಲ್ಲಿಸಿದ್ದ ಎತ್ತಿನ ಗಾಡಿಯ ಕೆಳಗೆ ಹೋಗಿ, ಗಾಲಿಯ ಹಲ್ಲುಗಳ ಮಧ್ಯದಿಂದ ಜಾತೀಯತೆಯ ಕ್ರೌರ್ಯವನ್ನು ನೋಡುತ್ತಿದ್ದೆ. ನಾನು ಮುಟ್ಟಿದ್ದಕ್ಕೆ ಆತ ನೀರು ಚೆಲ್ಲಿದ. ಆದರೆ ಮತ್ತೆ ಅದೇ ಬಾವಿಯ ನೀರು ತಂದ! ನಾವು ಕೂಡ ನೀರು ತರುವ ಬಾವಿಯಿಂದಲೇ!

(ಕುರಿ ಮೇಯಿಸುವಾಗ ಬಯಲಲ್ಲೇ ಊಟ)

ನೀರು ತರುವಾಗ ಕೂಡ ಮೇಲ್ಜಾತಿಯವರು ಮುಸ್ಲಿಮರನ್ನು ಮುಟ್ಟಿಸಿಕೊಳ್ಳುವುದಿಲ್ಲ ಎಂಬುದು ನನಗೆ ಅಂದು ತಿಳಿಯಿತು. ಊಟ ಮತ್ತು ನೀರಿನ ವಿಚಾರ ಬಂದಾಗ ಹಳ್ಳಿಯ ಸವರ್ಣೀಯರ ದೃಷ್ಟಿಯಲ್ಲಿ ಹೊಲೆಯರು ಮತ್ತು ಮಾದಿಗರಿಗಿಂತ ಮುಸ್ಲಿಮರು ಬೇರೆ ಆಗಿರಲಿಲ್ಲ.

ನನಗೆ ಬೇಸರವಾದಾಗಲೆಲ್ಲ ಹೊಕ್ಕು ತುಂಬುವ ಬಾವಿಯ ಕಡೆಗೆ ಹೋಗುತ್ತಿದ್ದೆ. ಅಂದಿನ ಬೇಸರ ಹಿಂದೆಂದಿಗಿಂತಲೂ ವಿಚಿತ್ರವಾಗಿತ್ತು. ಅಪಮಾನದಿಂದಾಗಿ ಏನೂ ತೋಚದೆ ಇದ್ದುದರಿಂದ ನನಗೆ ನಾನೇ ಸಮಾಧಾನಪಡಿಸಿಕೊಳ್ಳಲು ಅದೇ ಬಾವಿಯ ಕಡೆಗೆ ಹೋಗಿ ಕುಳಿತೆ. ಅದು ನನ್ನ ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿತ್ತು.

ಹೊಕ್ಕು ತುಂಬುವ ಬಾವಿಯ ಒಂದು ಮೂಲೆಯಲ್ಲಿ ಗಿಡಗಳು ಬೆಳೆದಿದ್ದವು. ಅವುಗಳ ಟೊಂಗೆಗಳು ಬಾವಿಯಲ್ಲಿ ಬಾಗಿದ್ದವು. ಪಕ್ಷಿಗಳು ಅವುಗಳಲ್ಲಿ ವೈವಿಧ್ಯಮಯವಾದ ಗೂಡುಗಳನ್ನು ಕಟ್ಟಿದ್ದವು. ಬಹಳಷ್ಟು ಗೂಡುಗಳಿಂದ ಕೂಡಿದ ಆ ಮನಮೋಹಕ ದೃಶ್ಯ ಇಂದಿಗೂ ನೆನಪಾಗುತ್ತಿದೆ. ಕೆಲವೊಂದು ಚಿಕ್ಕ ಗೂಡುಗಳಾಗಿದ್ದರೆ. ಮತ್ತೆ ಕೆಲವು ಉದ್ದನೆಯ ಕೊಳವೆಯಂಥ ‘ಬಾಲ’ವನ್ನು ಹೊಂದಿದ್ದು ಅದಕ್ಕೆ ತಕ್ಕುದಾಗಿ ಮೇಲ್ಭಾಗದ ಗೂಡನ್ನು ಹೆಣೆದವುಗಳಾಗಿದ್ದವು. ಅವು ಒಂದೇ ತೆರನಾದ ಹುಲ್ಲನ್ನು ಆರಿಸಿ ತಂದು ಚುಂಚಿನಿಂದ ಕಲಾತ್ಮಕವಾಗಿ ಗೂಡುಕಟ್ಟುವ ಕ್ರಿಯೆ ಅಚ್ಚರಿ ಹುಟ್ಟಿಸುವಂಥದ್ದು.

(ಗುಬ್ಬಿಗೂಡುಗಳು)

ಕೆಲವೊಂದು ಗೂಡುಗಳು ತೀರಾ ಸಾದಾ ರೀತಿಯವು ಆಗಿದ್ದವು. ಹಕ್ಕಿಗಳು ಪದೆ ಪದೆ ಬಂದು ಮರಿಗಳಿಗೆ ಗುಟುಕು ಹಾಕಿ ಹೋಗುವುದನ್ನು ನೋಡುವಾಗ ಎಲ್ಲವನ್ನೂ ಮರೆಯುತ್ತಿದ್ದೆ. ಅವುಗಳ ಚಿಲಿಪಿಲಿ ನಿಸರ್ಗದತ್ತ ಸಂಗೀತವಾಗಿ ಮುದನೀಡುತ್ತಿತ್ತು. ಹಾವು, ಬೆಕ್ಕು, ಹದ್ದು ಮುಂತಾದವುಗಳ ಕಾಟದಿಂದ ಅವೆಲ್ಲ ಬದುಕುಳಿಯುವುದು ಕಷ್ಟ. ಅಳಿದುಳಿದವುಗಳು ಸುದೈವಿಗಳು ಎಂದೇ ಭಾವಿಸುತ್ತಿದ್ದೆ. ಹೀಗೆ ಆ ಬಾವಿ ನನ್ನ ಮತ್ತು ಹಕ್ಕಿಗಳ ಸಂಬಂಧಕ್ಕೆ ಸಾಕ್ಷಿಯಾಗಿತ್ತು ಮತ್ತು ನನ್ನ ನೆಮ್ಮದಿಯ ತಾಣವಾಗಿತ್ತು.

ಹೆಂಗಸರು ಗಂಡಸರು ಮೆಟ್ಟಿಲುಗಳನ್ನು ಇಳಿದು ಕೊಡಗಳನ್ನು ಅದ್ದಿ ನೀರು ಸರಿಸಿ ನೀರು ತುಂಬಿಕೊಳ್ಳುತ್ತಿದ್ದರು. ಅದು ಅವರ ನೀರು ಸ್ವಚ್ಛ ಮಾಡುವ ಕ್ರಮವಾಗಿತ್ತು. ಮೆಟ್ಟಿಲು ಇಳಿಯುವಾಗ ಮತ್ತು ನೀರು ತುಂಬುವಾಗ ಅವರು ಏನೇನೂ ಮಾತನಾಡುವುದು ಸಹಜವಾಗಿತ್ತು.

ಅಲ್ಲಿಂದ ಎದ್ದು ಮನೆ ಕಡೆಗೆ ಹೊರಟೆ. ಆ ದಾರಿ ಮಧ್ಯೆ ಪಕ್ಕದಲ್ಲೇ ಎತ್ತರದಲ್ಲಿ ಬೆಳೆದ ಸೇಂದಿ ಗಿಡವಿತ್ತು. ಸೇಂದಿಹಣ್ಣಿನ ಗೊಂಚಲುಗಳು ಬಹಳ ಆಕರ್ಷಕವಾಗಿದ್ದವು. ಆ ಹಣ್ಣು ತಿಂದ ನೆನಪು. ಬಹುಶಃ ದನ ಕಾಯುವ ಹುಡುಗರು ಕಲ್ಲು ಹೊಡೆದು ಬೀಳಿಸಿದ್ದಿರಬೇಕು.

ನಮ್ಮ ಮನೆಯ ಹತ್ತಿರದಲ್ಲೇ ಒಂದು ಗಿಡ ಇತ್ತು. ಅದು ಬನ್ನಿಯ ಗಿಡ ಇದ್ದಿರಬಹುದು. ಅದರ ಬೀಜದ ರುಚಿ ಬಿಸ್ಕಿಟ್ ಹಾಗೆ ಅನಿಸುತ್ತಿತ್ತು. ಬಿಸ್ಕಿಟ್ ತಿನ್ನುವ ಮನಸ್ಸಾದಾಗ ಅಜ್ಜಿಗೆ ಹಣ ಕೇಳುತ್ತಿರಲಿಲ್ಲ. ಆ ಬೀಜಗಳೇ ಬಿಸ್ಕಿಟ್‍ಗಳಾಗುತ್ತಿದ್ದವು.

(ಸೇಂದಿ ಗಿಡ)

ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ.

ಒಮ್ಮೆ ನಮ್ಮ ಹಳ್ಳಿಯಲ್ಲಿ ಒಬ್ಬ ಸಾಹುಕಾರನನ್ನು ನೋಡಿದೆ. ಆತನ ಜೊತೆ ಕಲ್ಲಿಮೀಸೆಯ ಕಪ್ಪನೆಯ ಧಾಡಸಿ ವ್ಯಕ್ತಿಯೊಬ್ಬ ಚಪಗೊಡಲಿ (ಅರ್ಧಚಂದ್ರಾಕೃತಿಯ ಕೊಡಲಿ) ಹಿಡಿದುಕೊಂಡು ಬರುತ್ತಿದ್ದ. ಅವನನ್ನು ನೋಡಿ ಅಂಜಿದ್ದೆ. ಆ ದಿನಗಳಲ್ಲಿ ಹಳ್ಳಿಯ ಶ್ರೀಮಂತರು ಹೀಗೆ ಧೈರ್ಯಶಾಲಿ ದಲಿತರನ್ನು ಅಂಗರಕ್ಷಕರಾಗಿ ಬಳಸಿಕೊಳ್ಳುತ್ತಿದ್ದರು.

ಒಕ್ಕಳಮಟ್ಟಿ ಹೊಲೆಯರು ಭಿಕ್ಷಾಟನೆಗೆ ಬರುತ್ತಿದ್ದರು. ಮನೆ ಮುಂದೆ ಬಂದು ‘ನಾವು ಒಕ್ಕಳಮಟ್ಟಿ ಹೊಲೇರ್ರಿ ಅವ್ವಾ’ ಎಂದು ಹೆಮ್ಮೆಯಿಂದ ಒದರುತ್ತಿದ್ದರು. ಮನೆಯವರು ಗೌರವದಿಂದ ಅವರಿಗೆ ಹೆಚ್ಚಿನ ಭಿಕ್ಷೆ ಕೊಟ್ಟು ಕಳಿಸುತ್ತಿದ್ದರು.

ಈ ಜಾತಿ ವಿಚಾರದಲ್ಲಿ ಇನ್ನೊಂದು ನೆನಪಿಡುವ ಘಟನೆ ನಡೆಯಿತು. ಒಬ್ಬ ಸಾಹುಕಾರನ ಮನೆಯಲ್ಲಿ ವಯೋವೃದ್ಧರೊಬ್ಬರು ತೀರಿಕೊಂಡರು. ಹಳ್ಳಿಗಳಲ್ಲಿ ಯಾವುದೇ ದೂರವಾಣಿ ವ್ಯವಸ್ಥೆ ಇಲ್ಲದ ಆ ದಿನಗಳಲ್ಲಿ ಮನೆ ಹತ್ತಿರದ ವ್ಯಕ್ತಿಯೊಬ್ಬನನ್ನು ಆ ಸಾಹುಕಾರ ಕರೆದು ಪರ ಊರಿನಲ್ಲಿರುವ ಬೀಗರಿಗೆ ಸುದ್ದಿ ಮುಟ್ಟಿಸಲು ರಾತೋರಾತ್ರಿ ಕಳಿಸಿದ. ಹಾಗೆ ಸತ್ತವರ ಸುದ್ದಿ ಮುಟ್ಟಿಸಲು ಹಳ್ಳಿಯಲ್ಲಿ ಒಂದು ಜಾತಿಯ ದಲಿತರ ಮನೆತನವಿತ್ತು. ಶವಸಂಸ್ಕಾರವಾದ ನಾಲ್ಕನೇ ದಿನಕ್ಕೆ ಆ ಮನೆತನದ ಹಿರಿಯ ವ್ಯಕ್ತಿ ‘ನಮ್ಮ ಹಕ್ಕಿಗೆ ಚ್ಯುತಿ ಬಂದಿತು’ ಎಂದು ಆರೋಪಿಸಿ ಪಂಚಾಯ್ತಿ ಕರೆದ. ‘ನಮ್ಮ ಮನೆತನದ ಹಕ್ಕನ್ನು ಈ ಸಾಹುಕಾರ ಬೇರೆಯವರಿಗೆ ಕೊಟ್ಟಿದ್ದಾನೆ’ ಎಂದು ಆರೋಪಿಸಿದ. ಆತ ಹೇಳುವುದು ಸರಿ ಎಂದು ಪಂಚಾಯ್ತಿಯ ಹಿರಿಯರು ಹೇಳಿದರು. ಅದಕ್ಕಾಗಿ ಆ ಸಾಹುಕಾರ ಪಂಚಾಯ್ತಿ ಕರೆದ ದಲಿತ ವ್ಯಕ್ತಿಗೆ ದಂಡ ಕೊಡಬೇಕಾಯಿತು. (ಈ ದೇಶದ ಜಾತಿವ್ಯವಸ್ಥೆ ಬಹು ಸಂಕೀರ್ಣವಾಗಿದೆ.)

ಅಲ್ಲೀಬಾದಿಯಲ್ಲಿ ಕೂಡ ಕೆಲ ವ್ಯಕ್ತಿಗಳಿಂದಾಗಿ ಜಾತಿಗಳ ಮಧ್ಯೆ ವೈಷಮ್ಯವಿದ್ದರೂ ಅಂಥವು ಇಡೀ ಹಳ್ಳಿಯನ್ನು ಆವರಿಸುವಂಥ ಸಾಮರ್ಥ್ಯವನ್ನು ಹೊಂದಿದ್ದಿಲ್ಲ. ನನ್ನ ಬಾಲ್ಯದ ಹಳ್ಳಿಯ ಬದುಕೇ ಬೇರೆಯಾಗಿತ್ತು. ಬಹುಪಾಲು ಜನರು ಮರ್ಯಾದೆಗೆ ಅಂಜುತ್ತಿದ್ದರು. ಜಾತಿವ್ಯವಸ್ಥೆ ಅಂತಃಕರಣವನ್ನು ಹದಗೆಡಿಸಿರಲಿಲ್ಲ. ಆದರೆ ಅದಕ್ಕೆ ತನ್ನದೇ ಆದ ಅಸಮಾನತೆಯ ನಡಾವಳಿಗಳನ್ನು ಅದು ಸದಾ ಜೀವಂತವಾಗಿರಿಸಿತ್ತು.

ಹಳ್ಳಿಯಲ್ಲಿ ಜಾತಿ ಮತ್ತು ಅಸ್ಪೃಶ್ಯತೆ ದೇಹಕ್ಕೆ, ರಕ್ತಸಂಬಂಧಕ್ಕೆ ಮತ್ತು ತಮ್ಮದೇ ಆದ ಪದ್ಧತಿಗೆ ಸೀಮಿತವಾಗಿದ್ದವು. ಆದರೆ ಈ ಸಮಸ್ಯೆಗಳು ಮನಸ್ಸಿಗೆ ಇನ್ನೂ ತಾಗಿರಲಿಲ್ಲ. ಎಲ್ಲರೂ ಎಲ್ಲರ ಜೀವನವಿಧಾನವನ್ನು ಗೌರವಿಸುತ್ತಿದ್ದರು. ‘ಸಮಗಾರ ಭೀಮಣ್ಣ, ಕುಂಬಾರ ಮಲ್ಲಣ್ಣ, ಬಣಜಿಗರ ಸೋಮಣ್ಣ’ ಎಂದು ಜನ ಸಹಜವಾಗೇ ಕರೆಯುತ್ತಿದ್ದರು. ಕರೆಯುವವರಲ್ಲಿ ಕಹಿ ಭಾವನೆಯಾಗಲಿ, ಕರೆಯಿಸಿಕೊಳ್ಳುವವರಲ್ಲಿ ಕೀಳರಿಮೆಯಾಗಲಿ ಇರಲಿಲ್ಲ. ಎಲ್ಲರೂ ಅಣ್ಣ, ಅಕ್ಕ ಎಂದೇ ಸಂಬೋಧಿಸುತ್ತಿದ್ದರು.

ಒಂದು ಸಲ ದಲಿತ ಸಮುದಾಯದ ರಾಮು ದಪ್ಪನೆಯ ಕೊಡಲಿಯನ್ನು ಹೆಗಲಿಗೇರಿಸಿಕೊಂಡು ಕಟ್ಟಿಗೆ ಕಡಿಯಲು ಬರುವುದನ್ನು ನೋಡಿದೆ. ಕೂಡಲೆ ಅಜ್ಜಿ ಕೇಳುವ ಹಾಗೆ ‘ರಾಮು ಬಂದಾ’ ಎಂದು ಕೂಗಿದೆ. ಆಗ ಅಜ್ಜಿ ಒಳಗಿಂದ ಬಂದವಳೇ ಕೆನ್ನೆಗೆ ಬಾರಿಸಿದಳು. ‘ಮಾಮಾ ಅನ್ನು’ ಎಂದು ಗದರಿಸಿದಳು. ಆ ಹೊಡೆತದಿಂದ ತಬ್ಬಿಬ್ಬಾದೆ. ಅದು ಮೊದಲ ಮತ್ತು ಕೊನೆಯ ಹೊಡೆತವಾಯಿತು. ಒಳ್ಳೆಯ ಪಾಠವೂ ಆಯಿತು.

(ಕುರುಬ ಮತ್ತು ಕುರಿಗಳು)

(ವರ್ಣವ್ಯವಸ್ಥೆ ಸವರ್ಣೀಯರ ಪರವಾಗಿದೆ. ಬಹುಸಂಖ್ಯಾತ ಶೂದ್ರರು ಮತ್ತು ಪಂಚಮರು ಸಹಸ್ರಾರು ವರ್ಷಗಳಿಂದ ವರ್ಣವ್ಯವಸ್ಥೆಯ ತುಳಿತಕ್ಕೆ ಒಳಗಾಗಿದ್ದಾರೆ. ಈ ಚಾತುರ್ವರ್ಣ ವ್ಯವಸ್ಥೆಯು ಅಲ್ಲಿಗೆ ನಿಲ್ಲದೆ ಜಾತಿ ಉಪಜಾತಿಗಳಿಗೂ ದಾರಿ ಮಾಡಿಕೊಟ್ಟಿದೆ. ತಮ್ಮ ಮೇಲಿನವರು ಮಾಡುವ ಅಪಮಾನದ ಕಡೆಗೆ ಜನರು ಲಕ್ಷ್ಯ ಕೊಡದೆ ತಮ್ಮಿಂದ ಅಪಮಾನಕ್ಕೀಡಾಗುವ ಕೆಳಗಿನವರ ಕಡೆ ನೋಡಿ ಸಮಾಧಾನ ಪಡುತ್ತಾರೆ. ಅನೇಕ ಲಿಂಗಾಯತರು ಬ್ರಾಹ್ಮಣರ ನಂತರ ನಾವೇ ಎಂದು ಹೇಳುತ್ತಾರೆ. ಇಂಥ ಶ್ರೇಣೀಕೃತ ಸಮಾಜದಲ್ಲಿ ಅಪಮಾನ ಮಾಡುವುದು ಮತ್ತು ಅಪಮಾನಕ್ಕೆ ಒಳಗಾಗುವುದು ಒಂದು ಮಾನಸಿಕ ರೋಗವಾಗಿರುತ್ತದೆ.)

ಅದೇನೇ ಇದ್ದರೂ ಹಳ್ಳಿಗರು ಕಷ್ಟದಲ್ಲಿ ಸಹಾಯಕ್ಕೆ ಬರುತ್ತಿದ್ದರು. ಅಂಥ ಸಂದರ್ಭದಲ್ಲಿ ಜಾತಿಗಳು ಮತ್ತು ವೈಮನಸ್ಸು ಎಂದೂ ಅಡ್ಡ ಬರುತ್ತಿರಲಿಲ್ಲ. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಏಕತಾರ ಸಾಹೇಬರ ದರ್ಗಾಕ್ಕೆ ಹೋಗುವ ದಾರಿಯಲ್ಲಿ ನೆರೆಮನೆಯವರು ಯಾವುದೋ ಕಾರಣದಿಂದ ಜಗಳಾಡಿದ್ದರು. ಆ ಎರಡೂ ಮನೆತನದವರು ಮಾತನಾಡುತ್ತಿರಲಿಲ್ಲ. ಒಂದು ಮನೆಯಲ್ಲಿ ಐದಾರು ಜನ ಅಣ್ಣ ತಮ್ಮಂದಿರರಿದ್ದರು ಇನ್ನೊಂದು ಮನೆಯಲ್ಲಿ ಒಬ್ಬ ಮಗ ಇದ್ದ ನೆನಪು. ಆ ಮನೆಗೆ ಬೆಂಕಿ ಹತ್ತಿತು. ಬೆಂಕಿ ಆರಿಸಲು ದೂರದ ಬಾವಿಯಿಂದ ನೀರು ತರಬೇಕಿತ್ತು. ಆ ಮನೆಯವರು ಅಸಹಾಯಕರಾದರು. ಆದರೆ ಆ ಐದಾರು ಜನ ಅಣ್ಣ ತಮ್ಮಂದಿರು ನೀರು ತಂದು ಬೆಂಕಿಯನ್ನು ಆರಿಸಿದರು. ಮಾತು ಬಿಟ್ಟರೂ ಬೆಂಕಿ ಆಕಸ್ಮಿಕದ ವೇಳೆ ಸಹಾಯ ಮಾಡುವುದು ಬಿಡಲಿಲ್ಲ.

ನಮ್ಮ ಊರಲ್ಲಿ ಇದ್ದ ಒಂದೇ ಒಂದು ಮಸೀದಿಯ ಮಣ್ಣಿನ ಗೋಡೆ ಭಾರಿ ಮಳೆಯಿಂದಾಗಿ ಬಿದ್ದಾಗ ಊರವರೇ ಸೇರಿ ಕಟ್ಟಿಸಿಕೊಟ್ಟಿದ್ದುಂಟು.

ತೋಳಗಳು ರಾತ್ರಿ ಬಂದು ದೊಡ್ಡಿಯಲ್ಲಿನ ಕುರುಬರ ಕುರಿಗಳನ್ನು ಕೊಂದು ಎಳೆದುಕೊಂಡು ಹೋದ ಘಟನೆ ಬೆಳಗಾಗುವುದರೊಳಗಾಗಿ ಸುದ್ದಿಯಾಗುತ್ತಿತ್ತು. ಜನ ಅವರಿಗೆ ಸಾಂತ್ವನ ಹೇಳುತ್ತಿದ್ದರು.

(ಟೆಂಟೊಳಗೆ ಅಡುಗೆ)

ಕುರುಬರದು ಕಷ್ಟದ ಜೀವನ. ಅವರು ತಿಂಗಳುಗಟ್ಟಲೆ ಕುರಿಗಳನ್ನು ಮೇಯಿಸುತ್ತ ಊರೂರು ತಿರುಗುತ್ತಿದ್ದರು. ಮಳೆ, ಚಳಿ, ಗಾಳಿ, ಬಿಸಿಲು ಹೀಗೆ ಎಲ್ಲ ಋತುಮಾನಗಳಿಗೂ ಅವರ ದೇಹ ಒಗ್ಗಿರುತ್ತಿತ್ತು. ಕೆಲವೊಂದು ಸಲ ಗುಂಪು ಗುಂಪಾಗಿ ಹೋಗುತ್ತಿದ್ದರು. ನೂರಾರು ಕುರಿಗಳ ಜೊತೆಗೆ ಬೇರೆಯವರ ಕುರಿಗಳನ್ನೂ ಕಾಯುತ್ತಿದ್ದರು. ಕುರಿಗಳು ಎರಡು ಮರಿಗಳನ್ನು ಹಾಕಿದರೆ ‘ಒಂದು ಮರಿ ಕುರಿಯ ಮಾಲೀಕರಿಗೆ, ಇನ್ನೊಂದು ಕುರುಬರಿಗೆ’ ಎಂದು ಮುಂತಾಗಿ ವ್ಯವಸ್ಥೆ ಇತ್ತು.

ಪ್ರತಿಯೊಬ್ಬ ಕುರುಬ ತನ್ನ ಕುರಿಗಳ ಮತ್ತು ಕುರಿಮರಿಗಳ ಮುಖಗಳನ್ನು ಗುರುತು ಹಿಡಿಯುತ್ತಾನೆ. ಬೇರೆ ಕುರುಬರ ಕುರಿಗಳ ಜೊತೆ ಇತರರ ಕುರಿಗಳು ಮೇಯುತ್ತಿದ್ದರೂ ಕೊನೆಗೆ ತಮ್ಮ ಗುಂಪನ್ನೇ ಸೇರುತ್ತವೆ. ಒಂದು ವೇಳೆ ತಪ್ಪಿಸಿಕೊಂಡಿದ್ದರೆ. ಕುರುಬರು ತಮ್ಮ ಕುರಿಗಳನ್ನು ಗುರುತು ಹಿಡಿದು ತರುತ್ತಾರೆ. ಒಂದು ಕುರಿಯ ಹಾಗೆ ಇನ್ನೊಂದು ಕುರಿಯು ಇರುವುದಿಲ್ಲ ಎಂಬ ಆಶ್ಚರ್ಯವನ್ನು ಬಾಲ್ಯದಲ್ಲೇ ಅನುಭವಿಸಿದ್ದೇನೆ.

ಕುರಿಗಾಯಿಗಳು ತಿಂಗಳುಗಟ್ಟಲೆ ಬೇಕಾಗುವ ರೊಟ್ಟಿ ಕಟ್ಟಿಕೊಂಡು ಹೋಗುತ್ತಿದ್ದರು. ಯಾರದೋ ಖಾಲಿ ಹೊಲದಲ್ಲಿ ಕುರಿಗಳನ್ನು ಒಂದು ರಾತ್ರಿ ನಿಲ್ಲಿಸಿದರೆ ಹೊಲದವರು ಹಣ ಕೊಡುತ್ತಿದ್ದರು. ಹಾಲು ಕುದಿಯುವಾಗ ತಂಗಳು ರೊಟ್ಟಿ ಮುರಿದು ಸುರಿಯುತ್ತಿದ್ದರು. ಹೀಗೆ ಅವರು ತಂಗಳು ರೊಟ್ಟಿಯನ್ನು ಕುರಿಯ ಹಾಲಲ್ಲಿ ಕುದಿಸುತ್ತಿದ್ದರು. ಅದೇ ಅವರ ನಾಷ್ಟಾ (ನ್ಯಾರಿ- ಬ್ರೇಕ್‍ಫಾಸ್ಟ್) ಮತ್ತು ಊಟ. ರೊಟ್ಟಿ ಮುಗಿದರೆ. ಜೋಳದ ನುಚ್ಚು ಕುದಿಸಿ ಹಾಲು ಬೆಲ್ಲ ಹಾಕಿಕೊಂಡು ತಿನ್ನುತ್ತಿದ್ದರು. ಕೆಲವರು ತಮ್ಮ ಹೆಂಡಿರನ್ನೂ ಕರೆದುಕೊಂಡು ಹೋಗುತ್ತಿದ್ದರು. ಕೂಡು ಕುಟುಂಬದಲ್ಲಿ ಮಾತ್ರ ಇದು ಸಾಧ್ಯವಾಗುತ್ತಿತ್ತು.

ಊರೂರು ಸುತ್ತವಾಗ ಇಳಿದ ಹೊಲದಲ್ಲೇ ತಾತ್ಪೂರ್ತಿಕ ಗುಡಿಸಲು ನಿರ್ಮಿಸುತ್ತಿದ್ದರು. ಚಳಿ ಮಳೆ ಗಾಳಿ ತಡೆಯಲು ಮತ್ತು ಹೊದೆಯಲು ಕಂಬಳಿಯೇ ಅವರಿಗೆ ಸರ್ವಸ್ವವಾಗಿತ್ತು. ತಕಲಿ (ಕದಿರ) ಹಿಡಿದು ಉಣ್ಣೆಯಿಂದ ನೂಲು ತೆಗೆಯುವ ಕ್ರಿಯೆ ಹೋದಲ್ಲೆಲ್ಲ ನಡೆದೇ ಇರುತ್ತಿತ್ತು. ಕುರಿಮರಿಯ ಉಣ್ಣೆಯಿಂದ ಬೇರೆ ನೂಲು ತೆಗೆಯುತ್ತಿದ್ದರು ಮತ್ತು ಅವುಗಳಿಂದ ಬೇರೆ ಕಂಬಳಿ ನೇಯುತ್ತಿದ್ದರು. ಅವುಗಳ ಬೇಡಿಕೆಯೂ ಹೆಚ್ಚು, ಬೆಲೆಯೂ ಹೆಚ್ಚು.

ಕುರಿಗಾಯಿಗಳು ತಮ್ಮ ಬದುಕಿನ ಅವಿಭಾಜ್ಯ ಅಂಗವಾದ ನಾಯಿಗಳನ್ನು ಕೂಡ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ನಾಯಿಗಳಿಗೂ ಅವರದೇ ಊಟ ಸಿಗುತ್ತಿತ್ತು. ಕುರಿಯ ಹಿಂಡಿನಿಂದ ಯಾವ ಕುರಿಯೂ ಹೊರಗೆ ಹೋಗದಂತೆ ಅವು ನೋಡಿಕೊಳ್ಳುವ ಚಾಣಾಕ್ಷತನವನ್ನು ಹೊಂದಿದ್ದವು. ಪ್ರಸಂಗ ಬಂದರೆ ಅವು ತೋಳಗಳ ಜೊತೆಗೆ ಸಾವು ಬದುಕಿನ ಹೋರಾಟ ಮಾಡುವಂಥವು.

(ಅಲ್ಲೀಬಾದಿಯ ಒಂದು ಹಾದಿ)

ಅಲ್ಲೀಬಾದಿ ಸಣ್ಣ ಹಳ್ಳಿ 65 ವರ್ಷಗಳಷ್ಟು ಹಿಂದೆ ಒಂದು ಸಾವಿರ ಜನ ಸಂಖ್ಯೆ ಇರಬಹುದು. ಇದು ವಿಜಾಪುರದಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿರುವುದರಿಂದ ಮಾರವಾಡಿಗಳು ಮತ್ತು ಇತರೆ ಶ್ರೀಮಂತರು ಇಲ್ಲಿನ ಹೊಲಗಳನ್ನು ಕೊಂಡು ಫಾರ್ಮ್ ಹೌಸ್ ಮಾಡಿಕೊಂಡಿದ್ದಾರೆ. ಈಗ ಜನಸಂಖ್ಯೆ ಮೂರು ಸಾವಿರದಷ್ಟಾಗಿರಬಹುದು.

ಮರಾಠರು, ಕುರುಬರು. ಕಬ್ಬಲಿಗರು(ತಳವಾರರು) ಹೆಚ್ಚಾಗಿದ್ದಾರೆ. ಬ್ರಾಹ್ಮಣರ ಒಂದು ಮನೆತನವಿದ್ದು ಬಹಳ ದಿನಗಳ ಹಿಂದೆಯೆ ವಿಜಾಪುರ ಸೇರಿದ್ದಾರೆ. ಅವರ ಹೊಲ ಮಾತ್ರ ಅಲ್ಲೀಬಾದಿ ಪ್ರದೇಶದಲ್ಲಿದೆ. ಹಂಡೇವಜೀರರು (ಹಂಡೆಗುರುಬರು) ಮತ್ತು ಮರಾಠಿ ಮಾತನಾಡುವ ಧನಗರರ ಮನೆತನಗಳು ಕಡಿಮೆ ಇವೆ. ಮುಸ್ಲಿಮರ ಎರಡು ಮನೆ, ಕುಡ ಒಕ್ಕಲಿಗರ ಎರಡು ಮನೆ ಮತ್ತು ಬಣಜಿಗರ ಒಂದು ಮನೆ ಇದೆ. ದಲಿತರ ಮನೆಗಳು ಹಳ್ಳಿಯ ಭಾಗವೇ ಆಗಿದ್ದು ಯಾವುದೇ ಜಗಳಗಳು ಸಂಭವಿಸಿದ ಉದಾಹರಣೆಗಳಿಲ್ಲ. ಈ ಹಳ್ಳಿಯ ಇತಿಹಾಸದಲ್ಲಿ ಎಂದೂ ಕೋಮುಗಲಭೆಯಾಗಿಲ್ಲ. ಎಲ್ಲರೂ ಸೇರಿ ಎಲ್ಲ ಹಬ್ಬಗಳನ್ನು ಆಚರಿಸುತ್ತಾರೆ. ಏಕತಾರಸಾಬ ದರ್ಗಾಕ್ಕೆ ಕೂಡ ಎಲ್ಲರೂ ನಡೆದುಕೊಳ್ಳುವುದಷ್ಟೇ ಅಲ್ಲದೆ ನೋಡಿಕೊಳ್ಳುತ್ತಾರೆ.

ಬಕ್ರೀದ್ ಹಬ್ಬವಾದ 8 ನೇ ದಿನಕ್ಕೆ ಅಲ್ಲೀಬಾದಿಯಿಂದ 8 ಕಿಲೋಮೀಟರ್ ದೂರದ ದ್ಯಾಬೇರಿಯಲ್ಲಿ ಅಣ್ಣ ಚಂದಾಸಾಹೇಬರ ಉರುಸ್ (ಸ್ಮರಣೋತ್ಸವ) ಆಗುತ್ತದೆ. (ಹಳೆ ಮೈಸೂರ ಕಡೆ ಉರುಸ್‍ಗೆ ಬಾಬಯ್ಯನ ಜಾತ್ರೆ ಎಂದು ಹೇಳುತ್ತಾರೆ.) ಇದಾದ 8ನೇ ದಿನಕ್ಕೆ ತಮ್ಮ ಏಕತಾರಸಾಹೇಬರ ಉರುಸ್ ಆಗುತ್ತದೆ. ಈ ಇಬ್ಬರೂ ಸೂಫಿಗಳು ಆ ಪ್ರದೇಶದ ಜನಮನದಲ್ಲಿ ಬೇರೂರಿದ್ದಾರೆ ಲಾಲಸಾಬ ಅಲಿ ಪಂಜಾ ಅನ್ನು ಏಕತಾರಸಾಬ ದರ್ಗಾದ ಮುಲ್ಲಾ ಹೊರುತ್ತಾನೆ. ಬೆರಳೆಣಿಕೆಯಷ್ಟು ಮುಸ್ಲಿಮರಿರುವ ಅಲ್ಲೀಬಾದಿಯಲ್ಲಿ ಐದು ಪಂಜಾಗಳ ಮೊಹರಂ ಡೋಲಿಯನ್ನು ಹೊರುವವರೂ ಮುಸ್ಲಿಮೇತರರೇ ಆಗಿದ್ದಾರೆ. ಅವರೆಲ್ಲ ಅನ್ಯೋನ್ಯವಾಗಿ ಬದುಕುತ್ತಾರೆ.

(ಚಿತ್ರಗಳು: ಸುನೀಲಕುಮಾರ ಸುಧಾಕರ)