ಇತ್ತೀಚೆಗೆ ಅವನು ಯಾಕೆ ಮಾತು ಮಾತಿಗೆ ತಲ್ಲಾಖ್ ಕೊಡುತ್ತೇನೆಂದು ಹೆದರಿಸುತ್ತಲೇ ಇರುತ್ತಿದ್ದ. ನಾನೂ ಸುಮ್ಮನೇ ಮನೆಯಲ್ಲಿ ಸುಮ್ಮನೆ ಕೂಡುತ್ತಿರಲಿಲ್ಲ. ಟೇಲರಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡಿ ಸಂಪಾದಿಸುತ್ತಿದ್ದೆ. ಅತ್ತೆಯವರು ಮಕ್ಕಳನ್ನು ನೋಡಿಕೊಳ್ಳತ್ತಿದ್ದರು. ಗಂಡ ಮಗಳು ಸಲ್ಮಾಗೆ ಒಳ್ಳೆಯ ಶಾಲೆಗೆ ಸೇರಿಸಿದ್ದನು. ಶೋಯೇಬ್‌ಗೆ ಇನ್ನೂ ಶಾಲೆಗೆ ಹಾಕಿರಲಿಲ್ಲ. ಮಾತು ಮಾತಿಗೆ ಹೊಡಿಬಡಿ ಮಾಡುವುದು, ಕೂಗಾಡುತ್ತಿದ್ದುದೇ ಅವಳಿಗೊಂದು ಸಮಸ್ಯೆಯಾಗಿತ್ತು. ಗಂಡ ತನಗೆಲ್ಲಿ ಸಿಟ್ಟಿನ ಭರದಲ್ಲಿ ತಲ್ಲಾಖ್ ಹೇಳಿ ಬಿಡುತ್ತಾನೋ ಎಂದು ನಡುಗುತ್ತಿದ್ದಳು.
ಡಾ.ಕೆ. ಷರೀಫಾ ಬರೆದ ಈ ಭಾನುವಾರದ ಕಥೆ “ಹೀಗೊಂದು ಖುಲಾಹ್”

 

ಸಾರಾಳಿಗೆ ಗಂಡನ ಮನೆಯೆಂದರೆ ಉರಿಯ ಕೆನ್ನಾಲಿಗೆ. ಅವನ ಮನೆಯ ಬದುಕೆಂದರೆ ಅದೊಂದು ಕತ್ತಿ ಅಲುಗಿನ ನಡೆ. ಪಾಪ ಸಾರಾ ಕಷ್ಟಪಟ್ಟು ಸಮತೋಲನ ಮಾಡಲು ಹೆಣಗುತ್ತಿದ್ದಳು. ಗಂಡ, ಮಾವ ಮತ್ತು ಇಬ್ಬರು ನಾದಿನಿಯರ ಕುಹಕದ ಮಾತು ನಿಂದನೆ, ಹಿಂಸೆ ತಡೆಯಿಲ್ಲದೆ ಸಾಗಿತ್ತು. ಗಂಡನ ಬೆಂಬಲ ತನಗಿದ್ದರೂ ಅವಳು ಹೇಗಾದರೂ ಸಹಿಸಿಯಾಳು. ಆದರೆ ಗಂಡನೂ ಅವರದೇ ಬೆಂಬಲಕ್ಕೆ ನಿಲ್ಲುತ್ತಿದ್ದುದು ಅವಳಿಗೊಂದು ದೊಡ್ಡ ಸಮಸ್ಯೆಯಾಗಿತ್ತು. ಹಗಲಿರುಳು ಚಿಂತಿಸಿ, ಹಿಂಸೆಯನ್ನು ಸಹಿಸಿ, ಹಲವಾರು ರಾತ್ರಿಗಳು ಊಟವನ್ನೂ ಕೂಡ ಮಾಡದೆ ಮಲಗಿದ ಪ್ರಸಂಗಗಳು ಅನೇಕ ಬಾರಿ ನಡೆದಿದ್ದವು. ಈ ವಿಷಯವನ್ನು ಅವಳು ತನ್ನ ತವರಿಗೆ ಮಾತ್ರ ತಿಳಿಸುತ್ತಿರಲಿಲ್ಲ. ಏಕೆಂದರೆ ತಾಯಿಗೆ ಈಗಲೆ ಅನೇಕ ಕಾಯಿಲೆಗಳು, ನೂರಾರು ಚಿಂತೆಗಳಿದ್ದವು. ಅಮ್ಮನಿಗೆ ನನ್ನದೊಂದು ಸಮಸ್ಯೆ ಹೇಳಿ ನೋಯಿಸುವುದು ಬೇಡವೆಂದು ಸಾರಾ ತನ್ನ ಪಾಲಿಗೆ ಬಂದುದೇ ಅಲ್ಲಾಹ್‌ನ ಕರುಣೆ ಎಂದು ಸಹಿಸಿಕೊಂಡಿದ್ದಳು. ಮದುವೆಯಾಗಿ ಐದು ವರ್ಷವಾಗಿದ್ದರೂ ತನ್ನ ನೋವನ್ನು ಅವಳು ತಾಯಿಯ ಬಳಿ ಹೇಳಿಕೊಂಡಿರಲಿಲ್ಲ. ಈ ಅವಧಿಯಲ್ಲಿ ಅವಳಿಗೆ ಎರಡು ಮಕ್ಕಳು ಬೇರೆ ಆಗಿದ್ದವು. ನಾಲ್ಕು ವರ್ಷದ ಸಲ್ಮಾ ಎರಡು ವರ್ಷದ ಶೋಯೆಬ್.

ಸಾರಾಳ ತವರು ಮನೆಯವರೂ ಅಂತಹ ಸ್ಥಿತಿವಂತರೇನೂ ಆಗಿರಲಿಲ್ಲ. ಅದೊಂದು ಕೆಳ ಮಧ್ಯಮ ವರ್ಗದ ಕುಟುಂಬವಾಗಿತ್ತು. ತಂದೆ ಬಟ್ಟೆ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಅಮ್ಮ ಮನೆಯಲ್ಲಿಯೇ ಟೇಲರಿಂಗ್ ಮಾಡುತ್ತಿದ್ದಳು. ಈ ದಂಪತಿಗಳಿಗೆ ಮೂರು ಜನ ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದ. ಸಾರಾ ಪಿಯುಸಿ ಎರಡನೆಯ ವರ್ಷದಲ್ಲಿ ಓದುತ್ತಿರುವಾಗಲೇ ಅಪ್ಪ ಹೃದಯಾಘಾತದಿಂದ ಕಣ್ಣು ಮುಚ್ಚಿದರು. ಆಗಲೇ ಅಣ್ಣನಿಗೆ ಮದುವೆಯಾಗಿತ್ತು. ಅಣ್ಣ ಹಣ್ಣಿನ ಅಂಗಡಿಯಿಟ್ಟುಕೊಂಡಿದ್ದ. ಅವನು ತನ್ನ ಹೆಂಡತಿಯ ಮಾತು ಕಟ್ಟಿಕೊಂಡು ಮದುವೆಯಾದ ಕೆಲವು ದಿನಗಳಲ್ಲಿಯೇ ಬೇರೆ ಮನೆ ಮಾಡಿದ. ಅಣ್ಣ ಅತ್ತಿಗೆಯ ತವರು ಮನೆಯ ಬಳಿಯೇ ಅಂಗಡಿ ಹಾಕಿಕೊಂಡಿದ್ದ.

ಇದರಿಂದ ದಿಕ್ಕೇ ತೋಚದಂತಾಗಿ ಅಮ್ಮ ಕಂಗಾಲಾಗಿ ಬಿಟ್ಟಿದ್ದಳು. ದುಡಿಯುವ ಮಗನೂ ಮನೆಯಿಂದ ಹೊರಬಿದ್ದ. ಗಂಡನೂ ಅಲ್ಲಾಹ್‌ನಿಗೆ ಪ್ರೀಯವಾಗಿ ಬಿಟ್ಟ. “ಮೂರು ಜನ ಹೆಣ್ಣು ಮಕ್ಕಳಿದ್ದಾರೆ ರಬ್ಬೇ ಏನು ಮಾಡಲಿ” ಎಂದು ಚಿಂತಿಸುತ್ತಿದ್ದಳು. ತಂದೆ ತೀರಿದ ಒಂದು ವರ್ಷದೊಳಗೆ ಮನೆಯಲ್ಲಿ ಯಾವುದಾದರೂ ಒಂದು ಕಾರ್ಯ ಮಾಡಬೇಕಂತೆ. ಅದಕ್ಕಾಗಿ ಅಮ್ಮ ನನ್ನ ಮದುವೆ ಮಾಡುವ ಯೋಚನೆಯಲ್ಲಿದ್ದಾಗಲೇ ಅತ್ತೆಯವರು ತಮ್ಮ ಹಿರಿಯ ಮಗ ಜುಬೇರನಿಗಾಗಿ ಸಾರಾಳ ಸಂಬಂಧವನ್ನು ಕುದುರಿಸಲು ಅಂದು ನಮ್ಮ ಮನೆಗೆ ಬಂದಿದ್ದರು. ಅತ್ತೆಯವರು ನನ್ನನ್ನು ಕೊಡಲು ಕೇಳಿದಾಗ, ಅಮ್ಮ ಎರಡು ಮಾತಾಡದೇ ಜುಬೇರನಿಗೆ ಕೊಟ್ಟು ನನ್ನ ಮದುವೆ ಮಾಡಿ ತಲೆ ಭಾರ ಇಳಿಸಿಕೊಂಡಿದ್ದಳು. ಹಿರಿಯ ಮಗಳಾದ ನನಗೆ ಜುಬೇರನಿಗೆ ಕೊಟ್ಟು ಮದುವೆ ಮಾಡಿದ್ದಳು. ಒಂದರ ಹಿಂದೊಂದರಂತೆ ಮನೆಯಲ್ಲಿ ಕಾರ್ಯಗಳು ನಡೆದವು. ತಂಗಿಗೂ ಶಿಡ್ಲಘಟ್ಟದ ಮಂಡಿ ವ್ಯಾಪಾರಿಗೆ ಕೊಟ್ಟು ಮದುವೆ ಮಾಡಿ ಅಮ್ಮ ಬಿಡುಗಡೆಯ ಉಸಿರು ಬಿಟ್ಟಳು. ಇನ್ನು ಉಳಿದವಳು ಕೊನೆಯ ಮಗಳಾದ ಶಬನಮ್. ಅವಳು ಆಗಿನ್ನೂ ೯ನೇ ತರಗತಿಯಲ್ಲಿ ಓದುತ್ತಿದ್ದಳು.

ಒಳ್ಳೆಯ ಸ್ಥಿತಿವಂತರ ಮನೆಗೆ ಸಾರಾಳನ್ನು ಕೊಟ್ಟೆ ಎಂದು ಅಮ್ಮ ಖುಷಿಯಿಂದಿದ್ದಳು. ಸಾರಾಳ ಮಾವ ಜುಬೇರನ ಸಿಡುಕುತನ ಮುಂಗೋಪಕ್ಕೆ ಬೇಜಾರಾಗಲಿಲ್ಲ. ಏಕೆಂದರೆ ಅವರ ದೃಷ್ಟಿಯಲ್ಲಿ ಗಂಡಸೆಂದರೆ ಹಾಗೆಯೇ ಇರಬೇಕು. ಅವರು ಸೊಸೆ ಸಾರಾಳ ಪರವಾಗಿ ಎಂದಿಗೂ ನಿಲ್ಲುತ್ತಿರಲಿಲ್ಲ.. ಅವರು ತುಂಬಾ ಸಿಟ್ಟು, ಶ್ರೇಷ್ಠತೆಯ ಗೀಳು ತುಂಬಿದ ವ್ಯಕ್ತಿಗಳಾಗಿದ್ದರು. ಜುಬೇರ್ ಹಳೆಯ ಕಾರುಗಳನ್ನು ಖರೀದಿಗೆ ತೆಗೆದುಕೊಂಡು ರಿಪೇರಿ ಮಾಡಿಸಿ, ಬಣ್ಣ ಹಚ್ಚಿ, ದುರಸ್ತಿ ಮಾಡಿಸಿ, ಲಾಭಕ್ಕೆ ಮಾರುತ್ತಿದ್ದ. ಇದರಿಂದ ಅವನಿಗೆ ಉತ್ತಮ ದುಡಿಮೆಯಾಗುತ್ತಿತ್ತು. ಇರಲು ಸ್ವಂತ ಮನೆಯೂ ಇತ್ತು. ಅವಳ ಗಂಡನ ಮನೆಯಲ್ಲಿ ಅಂತಹ ಆರ್ಥಿಕ ಸಮಸ್ಯೆಗಳೇನೂ ಇರಲಿಲ್ಲ. ಆದರೆ ಜುಬೇರನ ಸಿಟ್ಟು, ಮುಂಗೋಪ ಸಹಿಸುವುದೇ ಅವಳಿಗೊಂದು ಸಮಸ್ಯೆಯಾಗಿತ್ತು. ಇತ್ತೀಚೆಗೆ ಯಾಕೋ ಮಾತು ಮಾತಿಗೆ ಸಿಡುಕುತ್ತಿದ್ದ. ಅವಳಿಗೆ ಅವಮಾನಿಸಿ ಹಿಂಸಿಸುತ್ತಿದ್ದ. ಇದಕ್ಕೇನು ಕಾರಣ? ಎಂದು ಸಾರಾ ಕಾರಣ ಶೋಧಿಸಲು ಶುರುವಿಟ್ಟುಕೊಂಡಳು. ಅವನಿಗೆ ಬೇರೆ ಯಾವ ಹೆಂಗಸಿನ ಸಹವಾಸವೇನಾದರೂ ಇದೆಯೇ ಎಂದು ಪತ್ತೆದಾರಿ ಕೆಲಸ ಕೂಡ ಮಾಡಿದ್ದಳು. ಟೇಲರಿಂಗ್ ಸೆಂಟರ್‌ಗೆ ಹೋಗುತ್ತೇನೆಂದು ಹೋಗಿ, ಗಂಡನ ನಡೆಯನ್ನು ಪರೀಕ್ಷಿಸಿದ್ದಳು. ಅಂತಹ ಯಾವುದೇ ಸುಳಿವು ಸಿಗದಿದ್ದುದರಿಂದ ನಿರುಮ್ಮಳವಾಗಿದ್ದಳು.

ಇತ್ತೀಚೆಗೆ ಅವನು ಯಾಕೆ ಮಾತು ಮಾತಿಗೆ ತಲ್ಲಾಖ್ ಕೊಡುತ್ತೇನೆಂದು ಹೆದರಿಸುತ್ತಲೇ ಇರುತ್ತಿದ್ದ. ನಾನೂ ಸುಮ್ಮನೇ ಮನೆಯಲ್ಲಿ ಸುಮ್ಮನೆ ಕೂಡುತ್ತಿರಲಿಲ್ಲ. ಟೇಲರಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡಿ ಸಂಪಾದಿಸುತ್ತಿದ್ದೆ. ಅತ್ತೆಯವರು ಮಕ್ಕಳನ್ನು ನೋಡಿಕೊಳ್ಳತ್ತಿದ್ದರು. ಗಂಡ ಮಗಳು ಸಲ್ಮಾಗೆ ಒಳ್ಳೆಯ ಶಾಲೆಗೆ ಸೇರಿಸಿದ್ದನು. ಶೋಯೇಬ್‌ಗೆ ಇನ್ನೂ ಶಾಲೆಗೆ ಹಾಕಿರಲಿಲ್ಲ. ಮಾತು ಮಾತಿಗೆ ಹೊಡಿಬಡಿ ಮಾಡುವುದು, ಕೂಗಾಡುತ್ತಿದ್ದುದೇ ಅವಳಿಗೊಂದು ಸಮಸ್ಯೆಯಾಗಿತ್ತು. ಗಂಡ ತನಗೆಲ್ಲಿ ಸಿಟ್ಟಿನ ಭರದಲ್ಲಿ ತಲ್ಲಾಖ್ ಹೇಳಿ ಬಿಡುತ್ತಾನೋ ಎಂದು ನಡುಗುತ್ತಿದ್ದಳು. ಏಕೆಂದರೆ ಇಸ್ಲಾಂ ಧರ್ಮದಲ್ಲಿ ಗಂಡ ತಲ್ಲಾಖ್ ಹೇಳಿದರೆ ಹೆಂಡತಿ ಮರುಪ್ರಶ್ನೆ ಮಾಡುವಂತಿಲ್ಲ. ಬಾಯಿಮುಚ್ಚಿಕೊಂಡು ಅದನ್ನು ಸ್ವೀಕರಿಸಬೇಕಿತ್ತು. ಇದು ಆ ಧರ್ಮದ ಫರ್ಮಾನು. ಒಂದು ವೇಳೆ ಜುಬೇರ್ ತನಗೇನಾದರು ತಲ್ಲಾಖ್ ನೀಡಿದರೆ? ಬಾಯಿ ಮುಚ್ಚಿಕೊಂಡು ಎದುರಾಡದೇ ಸ್ವೀಕರಿಸಬೇಕಾಗಿತ್ತು. ತಿರಸ್ಕರಿಸುವಂತಿಲ್ಲ. ಯಾಕೆಂದು ಪ್ರಶ್ನಿಸುವಂತಿಲ್ಲ. ಅದನ್ನು ಪ್ರಶ್ನಿಸುವ ಹಕ್ಕು ಸ್ತ್ರೀಯರಿಗೆ ಪವಿತ್ರ ಕುರಾನ್ ನೀಡಿಲ್ಲ. ಅವನು ತಲ್ಲಾಖ್ ಉಚ್ಚರಿಸಿದರೆ ಪತ್ನಿ ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕು ಅಷ್ಟೆ. ಆದರೆ ಒಂದು ಸಮಾಧಾನದ ವಿಷಯವೆಂದರೆ, ಅವನು ಒಂದೇ ಬಾರಿಗೆ ಮೂರು ತಲ್ಲಾಕ್ ಹೇಳುವಂತಿಲ್ಲ. ತಿಂಗಳಿಗೊಂದರಂತೆ ತಲ್ಲಾಕ್ ನೀಡಬೇಕಿತ್ತು. ಇಸ್ಲಾಂಮಿನ ಪದ್ಧತಿಯ ಪ್ರಕಾರ ಸರಿಯಾಗಿ ತಿಂಗಳಿಗೊಂದರಂತೆ ಮೂರು ತಿಂಗಳು ಅವನು ‘ತಲ್ಲಾಕ್’ ಉಚ್ಚರಿಸಬೇಕಿತ್ತು. ಆದ್ದರಿಂದ ನಮಾಜು ಮಾಡಿದ ಪ್ರತಿ ಬಾರಿಯೂ ಅಲ್ಲಾಹನಲ್ಲಿ,

“ಯಾ ರಹೀಮೋ ಕರಿಂ, ಯಾ ರ‍್ವರ್‌ದಿಗಾರ್, ಯಾ ಮೇರೆ ಗೌಸೇ ಪಾಕ್,ಯಾ ಮೇರೆ ಮೌಲಾ ನನ್ನ ಮೇಲೆ ಕರುಣೆಯಿರಲಿ. ನನ್ನ ಗಂಡ ನನಗೆ ತಲ್ಲಾಕ್ ನೀಡದಿರಲಿ ಸಾಕು”

ಎಂದು ಹಗಲಿರುಳು ದುವಾ ಮಾಡಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಅನೇಕ ಬಾರಿ ಹುಚ್ಚಳಂತೆ ದೇವರಲ್ಲಿ ಮೊರೆಯಿಡುತ್ತಾ, ತಜಬೀಹ್ ಪಠಿಸುತ್ತಿದ್ದಳು. ಅತ್ತೆಯವರು ಕೂಡ ಧರ್ಮ ಶ್ರದ್ಧೆಯುಳ್ಳ ಮಹಿಳೆ. ಸೊಸೆಯನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದರು. ಮಾವ ಮಾತ್ರ ಮಗನದೇ ಪ್ರತಿರೂಪವಾಗಿದ್ದ. ಸಿಟ್ಟು ದುಡುಕಿನ ಮಾತು, ಮುಂಗೋಪ, ಕುಡಿತ ಬೇರೆ ಹೆಣ್ಣುಗಳ ಸಹವಾಸ ಹೀಗೆ ಎಲ್ಲವೂ ಇತ್ತು. ಅತ್ತೆ ಅಂತಹ ದುಷ್ಟನನ್ನು ಸಹಿಸಿಕೊಂಡು ಬದುಕು ಸಾಗಿಸಿದ್ದಳು. ಮಗ ಏನು ತಪ್ಪು ಮಾಡಿದರೂ “ಅವನು ಗಂಡ್ಸು ಏನಾರ ಮಾಡ್ತಾನೆ. ಕಾಲಿನ ಮೆಟ್ಟು ಬಿಟ್ಟಲ್ಲಿ ಬಿದ್ದಿರಬೇಕು. ಅದನ್ನು ತಲೆ ಮೇಲೆ ಇಟ್ಟುಕೊಳ್ಳಲಾಗುತ್ತದೆಯೇ” ಎಂದು ಸಮರ್ಥಿಸಿಕೊಳ್ಳುತ್ತಿದ್ದ. ಇಂತಹ ಅವಾಂತರಕಾರಿಯನ್ನು ಅತ್ತೆಯವರು ಹೇಗೆ ಸಹಿಸಿದರೋ ಎಂದು ಒಂದೊಂದು ಸಲ ಸಾರಾ ಯೋಚಿಸುತ್ತಿದ್ದಳು.

ಗಂಡನಂತೂ ಅಬ್ಬೆಪಾರಿ ಮಗನಾದರೂ ಸರಿಯಾದ ದಾರಿಯಲ್ಲಿ ನಡೆಯಬಾರದೆ? ಅವನು ಊರಿಗೆ ಉಪಕಾರಿ ಮನೆಗೆ ಮಾರಿಯಂತಾಗಿದ್ದನು. ಅತ್ತೆ ಮಗನ ನಡೆ ನುಡೆ ಮನೆಯಲ್ಲಿ ಅವನು ತೋರುವ ಅಸಹನೆಯ ಬಗ್ಗೆಯೇ ಯೋಚಿಸುತ್ತಿದ್ದರು. ಅವರು ಅನೇಕ ಬಾರಿ ಮಗನಿಗೆ ಬುಧ್ಧಿಯೂ ಹೇಳುತ್ತಿದ್ದರು.

“ನೋಡು ಮಗನೇ ಮಾತು ಮಾತಿಗೆ ತಲ್ಲಾಖ್, ತಲ್ಲಾಖ್ ಎಂದು ಹೇಳಬೇಡ. ಹುಜೂರರಿಗೆ (ಪೈಗಂಬರರಿಗೆ)ಆ ಶಬ್ದದಿಂದ ಬಹಳ ನಫ್ರತ್(ದ್ವೇಷ)ಇತ್ತು. ಮತ್ತೆ ಮತ್ತೆ ನುಡಿಯಬೇಡ. ಸುತ್ತಲೂ ಫರಿಶ್ತಾಗಳು(ದೇವದೂತರು) ಸುತ್ತುತ್ತಿರುತ್ತಾರೆ. ಅವರು ‘ಆಮೀನ್’ ಎಂದು ಹೇಳಿದರೆ ಹಾಗೆಯೇ ಆಗುತ್ತದೆಯಂತೆ. ನಿನ್ನ ಹೆಂಡತಿ ತುಂಬಾ ಒಳ್ಳೆಯ ಹುಡುಗಿ. ಬಡವರ ಮಗಳು. ಅವಳ ಹಿಂದೆ ಯಾರೂ ಇಲ್ಲವೆಂದು ನೀನು ಮನಬಂದತೆ ನಡೆಸಿಕೊಂಡರೆ ಅಲ್ಲಾಹ್ ಮೆಚ್ಚಲಾರ”

ಎಂದು ಹೇಳಿದಾಗ. ಅಲ್ಲಿಯೇ ಕುಳಿತಿದ್ದ ಮಾವನವರು ಚಡಪಡಿಸಿ ಹೇಳಿದ್ದೆನೆಂದರೆ- “ಅವನ ಹೆಂಡತಿಗೆ ಅವನು ಹೊಡಿತಾನೆ. ಬೇರೆಯವರ ಹೆಂಡ್ತಿಗೇನಾರ ಹೊಡೆದಿದಾನಾ?” ಎಂದು ಅಪ್ಪ ಹೇಳಿದಾಗ ಜುಬೇರಗೆ ಇನ್ನಷ್ಟು ಬೆಂಬಲ ಸಿಕ್ಕಂತಾಯಿತು. ಮತ್ತೇ ರಾತ್ರಿಯೂ ಇನ್ನಷ್ಟು ಕುಡಿದು ಬಂದು ಗಲಾಟೆ ಮಾಡಿದ್ದ. ಮರುದಿನ ಬೆಳಿಗ್ಗೆ ತಂದೆಯ ಬಳಿ ತನ್ನ ವ್ಯಾಪಾರದ ಸಂಕಷ್ಟಗಳನ್ನು ತೋಡಿಕೊಂಡಿದ್ದ ಜುಬೇರ್.

“ಏನು ಮಾಡಲಿ ಅಬ್ಬಾಜಾನ್ ಬಿಜನೆಸ್ ಥಂಡಾ ಹೊಡಿತಿದೆ. ಲಾಕ್ ಡೌನ್‌ನಲ್ಲಿ ವ್ಯಾಪಾರ ವಹಿವಾಟುಗಳೇ ನಡೆಯುತ್ತಿಲ್ಲ. ಈ ಕರೋನಾ ಬಂದಾಗಿನಿಂದ ಗಿರಾಕಿಗಳೇ ಸಿಗುತ್ತಿಲ್ಲ. ಮೇಲಿಂದ ಸರ್ಕಾರ ಸರಕುಗಳ ಮೇಲೆ ವಿಪರೀತ ಟ್ಯಾಕ್ಸ್ ಹಾಕಿದ್ದರಿಂದ ಕೈಗೆ ಏನೂ ಉಳಿತಿಲ್ಲ ಬೇಜಾರಾಗಿದೆ. ಎಲ್ಲಿಯಾದರೂ ಓಡಿ ಹೋಗಲೇ ಎನಿಸುತ್ತಿದೆ”ಎಂದಾಗ ವ್ಯಾಪಾರ, ವಹಿವಾಟಿನ ಸಮಸ್ಯೆಯಿಂದ ಹೀಗೆ ಮಾಡುತ್ತಿದ್ದಾನೆ ಎಂದು ಅಮ್ಮ ಊಹಿಸಿದಳು.

“ಅದು ನಿನ್ನ ವ್ಯಾಪಾರ ವಹಿವಾಟಿನ ಸಮಸ್ಯೆ. ಅದನ್ನು ತಂದು ಅವಳ ಮೇಲೆ ತೀರಿಸಿಕೊಂಡರೆ ಹೇಗೆ ಜುಬೇರ್. ಅವಳಿಗೂ ತಂದೆಯಿಲ್ಲ. ತಂದೆಯಿಲ್ಲದ ಹೆಣ್ಣು ಮಗು. ಅವರ ಮನೆಯಲ್ಲಿ ದುಡಿಯುವ ಗಂಡಸರು ಯಾರೂ ಇಲ್ಲ. ನಿನ್ನ ಅತ್ತೆ ಗಂಡನ ಪಿಂಚಣಿ ಮೇಲೆ ಬದುಕು ನಡೆಸುತ್ತಿದ್ದಾಳೆ. ತಾಳ್ಮೆ ವಹಿಸು. ಆ ಸಿಟ್ಟನ್ನು ಹೆಂಡತಿ ಮಕ್ಕಳ ಮೇಲೆ ತಕ್ಕೊಂಡ್ರೆ ಆಗುತ್ತಾ ಬೇಟಾ?. ಸ್ವಲ್ಪ ತಾಳ್ಮೆ ತಂದುಕೋ ಎಲ್ಲಾ ಅಲ್ಲಾನ ಕೈಯಲ್ಲಿದೆ. ಖುದಾವಂದೇ ಕರಿಂನಲ್ಲಿ ವಿಶ್ವಾಸವಿಡು ಎಲ್ಲ ಒಳ್ಳೆಯದಾಗುತ್ತೇ. ದುಡುಕಬೇಡ ಬೇಟಾ”

ಎಂದು ಅಮ್ಮ ಬುದ್ದಿ ಹೇಳಿದಳು. ಆದರೆ ಸಾರಾಳ ಸಂಶಯವೇ ಪರಿಹಾರವಾಗಲಿಲ್ಲ. ಇಷ್ಟು ದಿನ ನನ್ನೊಂದಿಗೆ ಚೆನ್ನಾಗಿದ್ದ ಗಂಡ ಇದ್ದಕ್ಕಿದ್ದಂತೆ ಹೀಗೇಕೆ ಮಾಡುತ್ತಿದ್ದಾನೆ? ಎಂಬುದೇ ಅವಳಿಗೆ ಸಮಸ್ಯೆಯಾಯಿತು. ಗಂಡನನ್ನು ಖುಷಿಯಾಗಿಡಲು ಬಹುವಾಗಿ ಪ್ರಯತ್ನಿಸುತ್ತಿದ್ದಳು. ಗಂಡ ತಾನು ಕೆಲಸಕ್ಕೆ ಹೋಗುತ್ತಿದ್ದುದರಿಂದ ಬೇಸರವಾಗಿದ್ದರೆ ಕೆಲಸ ಕೂಡ ಬಿಡಬೇಕೆಂದು ಸಾರಾ ತೀರ್ಮಾನಿಸಿದ್ದಳು. ಅತ್ತೆಯ ಬಳಿ ಮಾಡನಾಡುತ್ತಾ,

“ಇವರಿಗೆ ನಾನು ಟೇಲರಿಂಗ್ ಮಾಡುವುದು ಇಷ್ಟವಿಲ್ಲದಿದ್ದರೆ ಬಿಡುತ್ತೇನೆ ಅಮ್ಮಿಜಾನ್. ಆದರೆ ಅವರು ಸಿಟ್ಟು, ಸಿಡುಕು, ಹೊಡೆತ ಮಾಡಿದರೆ ನನ್ನಿಂದ ಸಹಿಸಲಾಗದು ಅಮ್ಮಿಜಾನ್” ಎಂದಾಗ “ಚಿಂತಿಸಬೇಡ ಮಗಳೇ. ರೆಡಿಮೇಡ್ ಬಟ್ಟೆಗಳಿಗಿಂತ ನೀನು ಚೆಂದ ಹೊಲಿಯುತ್ತಿ. ಮನೆಯಲ್ಲಿ ಕುಳಿತು ಏನು ಮಾಡುತ್ತಿ. ನೀನು ನಾಲ್ಕು ಕಾಸು ದುಡಿದರೆ, ನಿನ್ನ ಮೇಲಿನ ಖರ್ಚಿಗಾಗುತ್ತದೆ. ಕೆಲಸ ಬಿಡಬೇಡ, ಬದುಕಿನ ಜಂಜಡದಿಂದ ಹೊರಬರಲು ನಿನಗೆ ಅದೊಂದು ರಹದಾರಿ.”

ಆದರೆ ಅದೊಂದು ರಾತ್ರಿ ವಿಪರೀತ ಕುಡಿದು ಬಂದ ಜುಬೇರ್ ಬಾಗಿಲು ಮುಚ್ಚಿಕೊಂಡು ಹೆಂಡತಿಗೆ ದನಕ್ಕೆ ಬಡಿದಂತೆ ಬಡಿದು ಗೋಳಾಡಿಸುತ್ತಿದ್ದ.

“ನನ್ನ ಮನೆತನದ ಮರ್ಯಾದೆ ಬೀದಿಗೆ ತಂದಿರುವೆ. ನಿನಗೇಕೆ ಬೇಕು ಬಟ್ಟೆ ಹೊಲಿಯುವ ಕಾಯಕ. ನಿನಗೆ ನಾನು ಮನೆಯಲ್ಲಿ ಹೊಟ್ಟೆ ಬಟ್ಟೆಗೆ ಕಡಿಮೆ ಮಾಡಿರುವೆನೆ? ಅಪ್ಪ ಅಮ್ಮನ ಸೇವೆ ಮಾಡ್ಕೊಂಡು ಮನೆಯಲ್ಲಿ ಬಿದ್ದಿರು. ಇನ್ನೊಮ್ಮೆ ಬೀದಿಯಲ್ಲೇನಾದರೂ ಕಂಡ್ರೆ. ನಿನಗೆ ಅಲ್ಲೇ ಮುಗಿಸಿ ಬಿಡುವೆ ಹಲ್ಕಾ ಹೆಂಗಸೇ” ಎಂದು ದಪದಪನೇ ಕೈಯಿಂದ ಹೊಡೆಯುತ್ತ ಕಾಲಿನಿಂದ ಒದೆಯತೊಡಗಿದ್ದ. ಕೈಗೆ ಸಿಕ್ಕ ಕೋಲಿನಿಂದಲೂ ಮನಸೋ ಇಚ್ಛೆ ಹೊಡೆದ.

“ಯಾಕೆ ಹೊಡಿತ್ತಿದ್ದೀರಿ?. ನಾನೇನು ತಪ್ಪು ಮಾಡಿದೆ?. ನನಗಾಗಿ ಅಲ್ಲದಿದ್ದರೂ ಮಕ್ಕಳ ಮೇಲೆ ಕರುಣೆ ತೋರಿರಿ. ಮಕ್ಕಳು ಗಾಬರಿಯಾಗಿದ್ದಾರೆ” ಎನ್ನುತ್ತಾ, ಅವನ ಹೊಡೆತಗಳಿಂದ ತಪ್ಪಿಸಿಕೊಳ್ಳಲು ನೋಡಿದಳು. ಮಕ್ಕಳು ಸಹ ಅಮ್ಮನನ್ನು ಬಿಡಿಸಿಕೊಳ್ಳಲು ಅಡ್ಡ ಬಂದರು.

“ಛೋಡೋ ಅಬ್ಬಾ ಛೋಡೋ. ಅಮ್ಮಿಗೆ ಹೊಡಿಬೇಡಿ”
ಎಂದು ಪುಟ್ಟ ಕೈಗಳಿಂದ ಅಮ್ಮನನ್ನು ಬಿಡಿಸಲು ಹೆಣಗಿದರು. ಅಡ್ಡ ಬಂದ ಮಕ್ಕಳನ್ನು ದೂರ ಎಸೆದಾಗ ಸಲ್ಮಾಳಿಗೆ ಗೋಡೆ ಬಡಿದು ತಲೆಗೆ ಗಾಯವಾಗಿ ಅಳುತ್ತಿದ್ದಳು. ಶೋಯೆಬ್ ಏನೂ ತೋಚದೇ ಅಸಹಾಯಕನಾಗಿ ಮಿಕಮಿಕ ನೋಡುತ್ತ ನಿಂತಿದ್ದ. ಪುಟ್ಟ ಮಗು ಭಯಗೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅವನು ನಿಂತಲ್ಲಿಯೇ ಉಚ್ಚೆಯನ್ನೂ ಹೊಯ್ದುಕೊಂಡಿದ್ದ. ಸಲ್ಮಾಳ ಹಣೆಯಿಂದ ಬರುತ್ತಿದ್ದ ರಕ್ತ ನೋಡಿ ಸಾರಾಳಿಗೆ ಗಾಬರಿಯಾಗಿತ್ತು. ಒಂದೇ ಸಮನೆ ಗೋಳಿಡುತ್ತಿದ್ದ ಸೊಸೆ ಮಕ್ಕಳ ಆಕ್ರಂದನಕ್ಕೆ ಅತ್ತೆ ಹೊರಗಿನಿಂದ ಬಾಗಿಲು ಬಡಿಯುತ್ತಿದ್ದರು. ಮಕ್ಕಳಿಗೆ ಬಾಗಿಲು ತೆಗೆಯುವಂತೆ ಹೇಳುತಿದ್ದರು. ಆದರೆ ಅಪ್ಪ ಬಾಗಿಲಿನ ಮೇಲಿನ ಕೊಂಡಿ ಹಾಕಿದ್ದ. ಪುಟ್ಟ ಮಕ್ಕಳ ಕೈಗೆ ಅದು ಸಿಗುತ್ತಿರಲಿಲ್ಲ. ಹೊಡೆತಗಳಿಂದ ಬಸವಳಿದು ಹೋಗಿದ್ದ ಸಾರಾಳಿಗೆ ಅದೆಲ್ಲಿತ್ತೋ ಶಕ್ತಿ, ತನ್ನ ಶಕ್ತಿಯೆಲ್ಲ ಒಗ್ಗೂಡಿಸಿ, ಗಂಡನಿಂದ ಬಿಡಿಸಿಕೊಂಡು ಓಡಿ ಹೋಗಿ ಬಾಗಿಲು ತೆಗೆದು ಹೊರಬಂದು ಅತ್ತೆಯನ್ನು ಅವುಚಿಕೊಂಡು ಮನಸಾರೆ ಅತ್ತಳು. ಮಾವ ಮಾತ್ರ ‘ಜುಬೇರ್ ಸರಿಯಾಗಿಯೇ ಮಾಡಿದ್ದಾನೆ’. ಎಂಬ ಧೋರಣೆಯಿಂದ ತನಗೂ ಅದಕೂ ಸಂಬಂಧವಿಲ್ಲದಂತೆ ಚುಟ್ಟ ಸೇದುತ್ತಾ ಕಟ್ಟೆಯ ಮೇಲೆಯೇ ಕುಳಿತಿದ್ದ. ಒಳಗೆ ಏನು ನಡೀತಿದೆ ಎಂದು ಎದ್ದು ಬಂದು ಕೂಡ ನೋಡಲಿಲ್ಲ. ಕುಡಿತದ ದಾಸನಾಗಿದ್ದ ಜುಬೇರ್ ಇಂದು ಅಕ್ಷರಶಃ ಪ್ರಾಣಿಯಾಗಿದ್ದ. ಅದನ್ನು ಕಂಡ ಅತ್ತೆ ಸೊಸೆಗೆ ಸಮಾಧಾನ ಪಡಿಸುತ್ತಾ

“ಸುಮ್ಮನಿರು ಮಗಳೆ ಅವನ ಮೇಲೆ ಇಂದು ಸೈತಾನ ಸವಾರಿ ಮಾಡಿದ್ದಾನೆ ಸಹಿಸಿಕೊ. ಈ ಕೆಟ್ಟ ಘಳಿಗೆ ಕಳೆಯಲಿ ಸುಮ್ಮನಿರು. ಆ ಮೇಲೆ ಅವನಿಗೆ ವಿಚಾರಿಸಿಕೊಂಡರಾಯಿತು”

ಎಂದು ತಲೆ ಸವರಿ ಕೂಡಿಸಿ ಅಲ್ಲೇ ನಿಂತಿದ್ದ ಸಾರಾಳ ನಾದಿನಿಗೆ ಎರಡು ಗ್ಲಾಸ್ ನೀರು ತರಲು ಹೇಳಿದಳು. ಶಮಾ ಓಡೋಡಿ ಹೋಗಿ ಎರಡು ಗ್ಲಾಸ್ ನೀರು ಕೊಟ್ಟಳು. ಸೊಸೆಗೆ ಕುಡಿಸಿದಳು. ಮತ್ತೊಬ್ಬ ನಾದಿನಿ ಹೆದರಿ ಉಚ್ಚೆ ಮಾಡಿಕೊಂಡಿದ್ದ ಶೋಯೆಬ್‌ನಿಗೆ ಕರೆದುಕೊಂಡು ಹೋಗಿ ಬಟ್ಟೆ ಬದಲಾಯಿಸಿದಳು. ಸಲ್ಮಾಳ ಹಣೆಯಿಂದ ಸೋರುತ್ತಿದ್ದ ರಕ್ತವನ್ನು ಒರೆಸಿ ಜೌಷಧಿ ಹಚ್ಚಿ ಪಟ್ಟಿ ಹಾಕಿದಳು.
“ಭಾಬಿ ಅಣ್ಣನ ಮಾತಿನಂತೆ ನಡೆದಿದ್ದರೆ ಹೀಗಾಗುತ್ತಿತ್ತೇ? ನಿಮಗೂ ಅಹಂಕಾರ ಜಾಸ್ತಿ. ಹಟ ಮಾಡದೇ ಅಣ್ಣನ ಮಾತು ಕೇಳಬಾರದೇ?” ಎಂದು ಮೂಗು ಮುರಿದಳು ದೊಡ್ಡ ನಾದಿನಿ. ಜುಬೇರ್ ಅರಚುತ್ತಲೇ ಇದ್ದ. ಸಹನೆ ಕಳಕೊಂಡ ಮಗನನ್ನು ನೋಡಿ ಅತ್ತೆ ಮೆಹರುನ್ನಿಸಾ ತುಂಬಿದ ಕೊಡ ಎತ್ತಿ ಮಗನ ತಲೆ ಮೇಲೆ ತಣ್ಣೀರು ಸುರಿದಳು.

“ಇವಳಿಂದ ನನಗೆ ಸ್ನೇಹಿತರ ಮಧ್ಯೆ ಮರ್ಯಾದೆಯಿಲ್ಲದಂತಾಗಿದೆ. ಇವಳೇಕೆ ಕೆಲಸಕ್ಕೆ ಹೋಗಬೇಕು? ನಾನೇನು ಕಡಿಮೆ ಮಾಡಿರುವೆ ಅವಳಿಗೆ? ಸುವ್ವರ್”

ಎಂದು ಒಂದೇ ಬಯ್ಯುತ್ತ, ಹಲ್ಲು ಕಡಿಯುತ್ತ ಹೆಂಡತಿಗೆ ಬಯ್ಯುತ್ತಿದ್ದ. ಅವಡುಗಚ್ಚಿ ಮತ್ತೇ ಮತ್ತೇ ಹೆಂಡತಿಗೆ ಹೊಡೆಯಲು ಬರುತ್ತಿದ್ದ ಅವನ ರುದ್ರಾವತಾರಕ್ಕೆ ಬೆದರಿದ ಹರಿಣಿಯಂತಾಗಿದ್ದಳು ಸಾರಾ. “ನಾನು ಕೆಲಸ ಮಾಡಿದರೆ ಇವನ ಮರ್ಯಾದೆ ಹೋಗುತ್ತದಂತೆ, ಅವರ ಅಹಂಕಾರಕ್ಕೆ ಧಕ್ಕೆಯಾಗುತ್ತದಂತೆ?” ಎಂದು ಗೋಣಗುಟ್ಟುತ್ತಲೇ ಅತ್ತೆಯ ಬೆನ್ನ ಹಿಂದೆ ಸರಿದಳು. ಮುಂಗೋಪಿ ಗಂಡನ ಕಾಟದಿಂದ ಬಸವಳಿದಿದ್ದ ಸಾರಾ. ಕೊನೆಗೊಂದು ತೀರ್ಮಾನಕ್ಕೆ ಬಂದು ಎದ್ದು ನಿಂತಳು. ಗೂಟಕ್ಕೆ ಸಿಗಿಸಿದ್ದ ಬುರ್ಖಾ ತೊಟ್ಟವಳೇ
“ಅಮ್ಮಿಜಾನ್ ನನ್ನಿಂದ ಇನ್ನು ಸಹಿಸಲಾಗದು. ನಾನು ಎಲ್ಯಾದ್ರೂ ಹೋಗುತ್ತೇನೆ. ನಾನು ನನ್ನ ಮಕ್ಕಳು ಕೆರೆನೋ ಭಾವಿನೋ ಆಗ್ತಿವಿ. ಇದೇ ಅಲ್ಲಾನ ಮರ್ಜಿಯೂ ಆಗಿರ್ಬಹುದು”ಎಂದು ಲಗುಬಗೆಯಿಂದ ಅಳುತ್ತಲೇ ಮನೆ ತೊರೆದು, ಅತ್ತೆಗೆ ಹೇಳಿದವಳೇ ಎರಡೂ ಮಕ್ಕಳನ್ನು ಕರೆದುಕೊಂಡು ಹೊರಟೇ ಹೋದಳು. ಅವಳನ್ನು ಯಾರೂ ತಡೆಯಲಿಲ್ಲ.

ಜುಬೇರ್ ಹೊಡಿ ಬಡಿ ಮಾಡುತ್ತಿದ್ದುದು ಇದೇ ಮೊದಲೇನಲ್ಲ. ಮೊದಲ ಮಗಳು ಸಲ್ಮಾ ಹುಟ್ಟಿ ಹದಿನೈದು ದಿನಗಳಾಗಿತ್ತು. ಹೆಣ್ಣು ಹೆತ್ತದ್ದಕ್ಕೆ ನನ್ನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದ, ಪುಟ್ಟ ಮಗು ಹಸಿ ಬಾಣಂತಿ ಎಂಬುದನ್ನೂ ಲೆಕ್ಕಿಸದೇ ರಾತ್ರಿಯಿಡಿ ಹೊಡೆದು ಮನೆಯಿಂದ ಹೊರಹಾಕಿದ್ದ. ಪುಟ್ಟ ಕಂದನನ್ನು ಸೆರಗಿನಲ್ಲಿ ಸುತ್ತಿಕೊಂಡು ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಬಾಗಿಲಿನಲ್ಲೇ ಕೂತಿದ್ದೆ. ನನ್ನನ್ನು ಅತ್ತೆಯವರೇ ಮೆಲ್ಲನೆ ಸದ್ದಾಗದಂತೆ ಬಾಗಿಲು ತೆರೆದು ಒಳಗೆ ಕರೆದು ತಮ್ಮ ಕೋಣೆಯಲ್ಲಿ ಮಲಗಿಸಿಕೊಂಡಿದ್ದರು. ಮುಂದೇ ಶೋಯೇಬ್ ಹುಟ್ಟಿದಾಗ ಗಂಡು ಮಗ ಹುಟ್ಟಿದ ಎಂದು ಸಂಭ್ರಮಿಸಿದ್ದ. ಗೆಳೆಯರನ್ನು ಸೇರಿಸಿಕೊಂಡು ದೊಡ್ಡ ಪಾರ್ಟಿ ಮಾಡಿ ಗಡಂಗ ಕುಡಿದು ಮನೆಗೆ ಬಂದಿದ್ದ. ಆದರೆ ನನ್ನ ಕಷ್ಟ ನೋವು ಏನೆಂದು ಮಾತ್ರ ವಿಚಾರಿಸಲಿಲ್ಲ. ಹೆಣ್ಣು ಹುಟ್ಟಿದರೆ ವರದಕ್ಷಿಣೆ ಎಲ್ಲಿಂದ ತರಬೇಕು. ಹೆಣ್ಣು ಹುಟ್ಟುವುದೇ ಅಪರಾಧ. ಅದು ಹೆಣ್ಣಿನದೇ ತಪ್ಪು ಎನ್ನುತ್ತಿದ್ದ ಮತ್ತೇ ಮತ್ತೇ ಅದೇ ಕಾರಣ ಇಟ್ಟುಕೊಂಡು ಹೆಣ್ಣು ಮಗುವಿಗೆ ಕೊಲ್ಲಲೂ ಹೇಸಲಾರ ಎಂದು ಗ್ರಹಿಸಿದ ಸಾರಾ ತನ್ನ ಮಗಳನ್ನು ಬಹು ಜತನದಿಂದ ನೋಡಿಕೊಂಡಿದ್ದಳು.

ಆದರೆ ಇಂದು ಅವನ ನಡೆ ವಿಪರೀತವಾಗಿತ್ತು. ಅಪಮಾನ, ನೋವು, ಪ್ರಾಣಿಯಂತೆ ತನ್ನ ಮೇಲೆ ಹಲ್ಲೆ ನಡೆಸಿದ ಗಂಡನ ನಡೆಯಿಂದ ಸಾರಾ ಜರ್ಝರಿತವಾಗಿದ್ದಳು. ಮೈ ಮನಸ್ಸುಗಳು ನೋವಿನಿಂದ ನರಳುತ್ತಿದ್ದವು. ಗಂಡನ ಪಶುತ್ವದ ನಡೆಯನ್ನು ಸಾರಾ ಸಹಿಸದಾದಳು. ಇನ್ನೆಷ್ಟು ದಿನ ಗಂಡನ ಹಿಂಸೆ ಸಹಿಸಬೇಕು? ಮದುವೆಯಾಯ್ತು ಮಕ್ಕಳಾದವು ಇನ್ನೇನು ಗಂಡ ಸುಧಾರಿಸಬಹುದು ಎಂದು ತಿಳಿದಿದ್ದ ಅವಳ ಆಸೆ ಹುಸಿಯಾಗತೊಡಗಿತ್ತು. ಮಾತು ಮಾತಿಗೆ ತಲ್ಲಾಕ್ ಉಚ್ಛರಿಸುವ ಆತನಿಗೆ ಅಲ್ಲಾಹ್‌ನ ಭಯವೇ ಇಲ್ಲವಾದೆಯಲ್ಲ ಎಂದು ಚಿಂತಿಸುತ್ತಿದ್ದಳು. ಅವನು ಮನೆಯ ಹಿರಿಯಳಾದ ಅತ್ತೆಯ ಮಾತೂ ಕೇಳುವುದಿಲ್ಲ. ಸಣ್ಣ ಸಣ್ಣ ಮಾತಿಗೂ ಕಿಡಿ ಕಿಡಿಯಾಗುತ್ತಿದ್ದ. ಇಡೀ ಓಣಿಗೆ ಕೇಳಿಸುವಂತೆ ಕಿರುಚಾಡುತ್ತಿದ್ದ. ಅವನಿಗೆ ಕೋಪ ಬಾರದಂತೆ ನಡೆದುಕೊಳ್ಳಬೇಕೆಂದು ನಾನು ಎಷ್ಟು ಸುಧಾರಿಸಿಕೊಂಡರೂ ಅವನು ವಿನಾಕಾರಣ ತಲ್ಲಾಖ್ ಹೇಳಿ ಬಿಡುತ್ತಿದ್ದ. “ಒಂದು ವೇಳೆ ಮೂರು ಬಾರಿ ತಲ್ಲಾಕ್ ಹೇಳಿ ಬಿಟ್ಟರೇ?” ಎಂದು ಸಾರಾ ಕಂಪಿಸುತ್ತಿದ್ದಳು.

ಪವಿತ್ರ ಕುರಾನ್ ಅವಳಿಗೆ ಯಾವುದೇ ಆಯ್ಕೆಯನ್ನು ಕೊಟ್ಟಿರಲಿಲ್ಲ. ಆದ್ದರಿಂದ ಅವನ ನಡೆಯನ್ನು ಅವಳು ಪ್ರಶ್ನಿಸುವಂತಿರಲಿಲ್ಲ. ತುಟಿ ಎರಡು ಮಾಡದೇ ಅವನ ತಲ್ಲಾಖ್‌ನ್ನು ಸ್ವೀಕರಿಸಬೇಕಿತ್ತು. ಹಗಲು ರಾತ್ರಿ ಅವಳ ನೆತ್ತಿಯ ಮೇಲೆ ತಲ್ಲಾಖಿನ ತೂಗುಗತ್ತಿ ನೇತಾಡುತ್ತಲೇ ಇತ್ತು. ಪತಿಯು ನೀಡಿದ ವಿಚ್ಛೇದನಕ್ಕೆ ಕಾರಣವನ್ನು ಅವಳು ಕೇಳುವಂತಿಲ್ಲ. ಆದರೆ ಗಂಡನೂ ಸಹ ಮೂರೂ ತಲ್ಲಾಖ್‌ಗಳನ್ನು ಒಂದೇ ಬಾರಿಗೆ ಉಚ್ಛರಿಸುವಂತಿರಲಿಲ್ಲ. ಒಂದು ತಿಂಗಳಿಗೊಂದರಂತೆ ಮೂರು ತಿಂಗಳಿಗೆ ಮೂರು ಬಾರಿ, ಮೂರು ತಿಂಗಳವರೆಗೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಲೇ ಹೇಳಬೇಕಿತ್ತು. ಇದರ ಉದ್ದೇಶ ಎರಡು ಬಾರಿ ಅಥವಾ ಮೂರನೇ ಬಾರಿಗೆ ತಲ್ಲಾಖ್ ಹೇಳುವುದಕ್ಕಿಂತ ಮುಂಚೆ ಅವರಿಬ್ಬರಲ್ಲಿ ಹೊಂದಾಣಿಗೆ ಉಂಟಾಗಿ ತಲ್ಲಾಖ್ ನಡೆಯದಿರಲಿ ಎಂಬ ಸದುದ್ದೇಶ ಇದರ ಹಿಂದಿದೆ. ಆದರೆ ಅನೇಕ ಗಂಡಸರು ಒಂದೇ ಉಸಿರಿಗೆ ಮೂರು ಬಾರಿ ತಲ್ಲಾಖ್ ಹೇಳಿ ಹೆಂಡತಿಯನ್ನು ಮನೆಯಿಂದ ಹೊರದಬ್ಬುವವರೂ ಇದ್ದಾರೆ. ಇದನ್ನೆಲ್ಲಾ ಯೋಚಿಸುತ್ತಿದ್ದರೆ ಸಾರಾಳಿಗೆ ಹುಚ್ಚು ಹಿಡಿದಂತಾಗುತ್ತಿತ್ತು.

“ಎರಡೂ ಮಕ್ಕಳಿಗೆ ಬಾವಿಗೆ ದೂಡಿ ತಾನು ಹಾರಿ ಬಿಡಲೇ? ಈ ಸಮಸ್ಯೆಗೆ ಅಂತ್ಯ ಹಾಡಿ ಬಿಡಲೇ” ಎಂದು ಯೋಚಿಸಿ, ಹಿಮಗಟ್ಟುವ ಚಳಿಯಲ್ಲೂ ಬೆವರುತ್ತಿದ್ದಳು ಸಾರಾ. ಜುಬೇರ್ ಪ್ರಜ್ಞಾಪೂರ್ವಕವಾಗಿಯೇ ಅವಳಿಗೆ ಮೂರು ತಲ್ಲಾಕ್ ಹೇಳುತ್ತಿರಲಿಲ್ಲ. ತನಗಿಷ್ಟ ಬಂದಾಗಲೆಲ್ಲ ‘ತಲ್ಲಾಖ್’ ಎಂದು ಅವಳಿಗೆ ಹೆದರಿಸುತ್ತಿದ್ದ. ಎರಡು ಬಾರಿ ತಲ್ಲಾಖ್ ಹೇಳುತ್ತಿದ್ದ ಅವನು, ಅದನ್ನು ತನ್ನ ಪತ್ನಿಗೆ ಹೆದರಿಸುವ ಅಸ್ತ್ರವಾಗಿ ಬಳಸುತ್ತಿದ್ದ. ಇದರಿಂದ ಸಾರಾಳಿಗೆ ಪತಿಯ ಸಹವಾಸವೇ ನರಕವಾದಂತಾಗಿತ್ತು. ಬದುಕು ಅನಿಶ್ಚಿತವಾಗಿತ್ತು. ನಾಳೆ ಏನು ಎಂಬುದೇ ತಿಳಿದಿಲ್ಲ. ಗಂಡನ ಬಾಯಿಯಲ್ಲಿ ಏನು ಬರುತ್ತದೋ ಎಂಬ ಭಯದ ನೆರಳು ಅವಳಿಗೆ ಹಗಲಿರುಳೂ ಪೀಡಿಸುತ್ತಿತ್ತು. ಇದಕ್ಕೆಲ್ಲ ಕೊನೆ ಹಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ ಸಾರಾಗೆ ತನ್ನ ನಿರಪರಾಧಿ ಮುಗ್ಧ ಮಕ್ಕಳ ಮುಖಗಳು ತೇಲಿ ಬಂದಾಗ “ನನ್ನ ಮಕ್ಕಳು ನಿರಪರಾಧಿಗಳು. ನಾನು ಸತ್ತರೆ ಮಕ್ಕಳು ತಬ್ಬಲಿಯಾಗುತ್ತಾರಲ್ಲಾ?.” ಎಂಬ ಚಿಂತೆ ಕಾಡಿತು.

ಜುಬೇರ್ ನೋಡಲು ಸುಂದರವಾಗಿದ್ದ. ಅವನ ಮುಖ ನೋಡಿ ಅವನಿಗೆ ಯಾರಾದರೂ ಎರಡನೇ ಮದುವೆಯೆಂದರೂ ಹೆಣ್ಣು ಕೊಡುತ್ತಾರೆ. ಆದರೆ ಮಕ್ಕಳ ಪರಿಸ್ಥಿತಿ ಏನಾಗಬಹುದೆಂಬುದನ್ನು ಯೋಚಿಸಿ ಸಾರಾ ಮತ್ತೇ ಚಿಂತಿತಳಾಗುತ್ತಿದ್ದಳು. ಸಹಜ ಸಾವು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದು ಸಹ ಇಸ್ಲಾಂನಲ್ಲಿ ಮಹಾಪಾಪವಾಗಿದೆ. ಇದನ್ನು ಅಲ್ಲಾಹ್ ಕ್ಷಮಿಸಲಾರ. ನನ್ನ ಮೇಲೆ ನಂಬಿಕೆಯಿಲ್ಲದ, ಮುಂಗೋಪಿಯೂ ಆಗಿರುವ ಗಂಡನೊಂದಿಗೆ ಬದುಕು ನರಕವಾಗುವುದಕ್ಕಿಂತ ತನ್ನ ಮಕ್ಕಳೊಂದಿಗೆ ಬೇರೆಯಾಗುವುದೇ ಸೂಕ್ತವೆಂದು ಯೋಚಿಸಿದ ಸಾರಾ ಮಕ್ಕಳನ್ನು ಕರೆದುಕೊಂಡು ನೇರವಾಗಿ ತಾಯಿಯ ಮನೆಗೆ ಬಂದಳು. ಆಗ ರಾತ್ರಿ ಹನ್ನೆರಡು ಗಂಟೆಯಾಗಿತ್ತು. ಯಾರು ಬಾಗಿಲು ಬಡಿಯುತ್ತಿದ್ದಾರೆಂದು ಗಾಬರಿಯಾದ ಅಮ್ಮ ಸೆರಗು ಸರಿಪಡಿಸಿಕೊಳ್ಳುತ್ತಾ, ಲೈಟು ಹಾಕಿ
“ಕೌನ್” ಎಂದು ಕೇಳಿದ್ದಕ್ಕೆ ಸಾರಾ

“ಅಮ್ಮಿ ಮೈ” ಎಂದು ಹೇಳಿದ ಮಗಳ ಧ್ವನಿ ಗುರುತಿಸಿದ ತಾಯಿ ದಡಬಡಿಸಿ ಬಾಗಿಲು ತೆಗೆದಳು. “ಬೇಟಿ ಅಂದರ ಆವ್. ಏನು ಮಾತು ಮಾಗಳೇ ಈ ರಾತ್ರಿ. ಅದೂ ಒಬ್ಬಳೇ? ” ಎಂದು ಕೇಳಿದಳು. ಸಲ್ಮಾಳ ತಲೆಯ ಗಾಯ, ಸಾರಾ ಅತ್ತು ಅತ್ತು ಸ್ವರಗಿದ ಕಣ್ಣು ನೋಡಿ ಎಲ್ಲವನ್ನೂ ಕ್ಷಣಾರ್ಧದಲ್ಲಿ ಏನು ನಡೆದಿರಬಹುದೆಂದು ಅಮ್ಮ ಊಹಿಸಿದಳು. ಪ್ರತಿ ಸಲದಂತೆ ಅವಳ ಗಂಡನದೇ ಅವಾಂತರ ಇರಬಹುದು ಎಂದು ಮಗಳನ್ನು ಮತ್ತು ಮಕ್ಕಳನ್ನೂ ಒಳಗೆ ಕರೆದು ಕೂಡಿಸಿದಳು. ಅವಳ ಮುಖದ ಮೇಲೆ ಪ್ರಶ್ನೆಯಿತ್ತು. ಮೊದಲು ಮಕ್ಕಳಿಗೆ ಊಟ ಮಾಡಿಸು ಎಂದು ಮೊಮ್ಮಗನನ್ನು ತನ್ನ ಬಳಿ ಕರೆದುಕೊಂಡಳು. ಸಲ್ಮಾಳಿಗೆ ಹತ್ತಿರ ಕರೆದು

“ತಲೆಗೆ ಏನಾಯ್ತು ಮಗು” ಎಂದು ಕಕ್ಕುಲಾತಿಯಿಂದ ಅಜ್ಜಿ ಕೇಳಿದ್ದಕ್ಕೆ ಅವಳು “ನಾನಿಜಾನ್ ಅಬ್ಬಾ” ಎಂದಳು. ಅವಳಿಗೆ ಎಲ್ಲ ಅರ್ಥ ಮಾಡಿಕೊಂಡು. “ಊಟ ಮಾಡಿದಿರಾ ಮಕ್ಕಳೇ” ಎಂದು ಕೇಳಿದ್ದಕ್ಕೆ ಮಕ್ಕಳು “ಹುಂ” ಎಂದು ಉತ್ತರಿಸಿದರು. ಸಾರಾ ಒಳಗೆ ಬಂದವಳೇ ಚಾಪೆಯ ಮೇಲೆ ಕುಳಿತುಕೊಂಡಳು. ಒಂದೇ ರೂಮಿನ ಮನೆ ಅದು. ಮನೆಯ ಚಾಪೆಯ ಮೇಲೆಯೇ ತಾಯಿ ಮಕ್ಕಳು ಕುಳಿತರು. ನಡೆದುದೆಲ್ಲವನ್ನು ಸಾರಾ ಅಮ್ಮನಿಗೆ ತಿಳಿಸಿದಳು. ಸಲ್ಮಾ ಅಜ್ಜಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದಳು. ಶೋಯೆಬ್ ಅಮ್ಮನ ಬಳಿ ಮಲಗಿದ. ಅಮ್ಮ ಮಗಳಿಗೂ ಮೊಮ್ಮಕ್ಕಳಿಗೂ ಹಾಸಿಗೆ ಹಾಸಿ ಮಲಗಿಸಿದಳು. ತಂಗಿಯೂ ಕೂಡ ಮಕ್ಕಳೊಂದಿಗೆ ಮಲಗಿದಳು.

“ಈಗ ಮಲಗು ಮಗಳೇ. ಅಲ್ಲಾಹ್‌ನ ಮೇಲೆ ಭಾರ ಹಾಕು. ಖುದಾವಂದೆಕರೀ ನಿನ್ನ ರಕ್ಷಣೆಗಿದ್ದಾರೆ. ಹೆದರಬೇಡ. ಖ್ವಾಜಾ ಗರೀಬನ್ನವಾಜ ಎಲ್ಲ ಸಂಕಟ ದೂರ ಮಾಡುತ್ತಾರೆ. ಎಲ್ಲಾ ಒಳ್ಳೆಯದಾಗುತ್ತೆ. ಬೆಳಿಗ್ಗೆ ಮಾತಾಡೋಣ ಈಗ ಮಲಗು” ಎಂದು ಮಗಳಿಗೆ ಸಮಾಧಾನ ಹೇಳಿ ಮಕ್ಕಳಿಗೂ ಸಾರಾಳಿಗೂ ಹಾಸಿಗೆ ಹಾಸಿ ಮಲಗಲು ಹೇಳಿದಳು. ಮಕ್ಕಳಿಗೆ ಮಲಗಿಸಿದ ಸಾರಾಳ ಮುಂದೆ, ಮುಂದೇನು ಎಂಬ ದೊಡ್ಡ ಪ್ರಶ್ನೆ ಇಡೀ ರಾತ್ರಿ ಕಾಡಿತ್ತು? ಕಣ್ಣಿಗೆ ಕಣ್ಣು ಹಚ್ಚದೇ ರಾತ್ರಿಯೆಲ್ಲ ಯೋಚಿಸುತ್ತಿದ್ದಳು. “ಯಾ ರಬ್ಬೇ, ಯಾ ಕರಿಂ ನಾನೇನು ಮಾಡಲಿ? ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಲಿ? ಏನು ಮಾಡಲಿ? ದಿಕ್ಕೇ ತೋಚದಂತಾಗಿದೆ.” ಎಂದು ಚಿಂತಿತಳಾದಳು.

“ಮಗಳೇ ಇವತ್ತು ಗುರುವಾರ. ಇಲ್ಲಿ ಒಬ್ಬ ಆಲೀಮಾ (ಧರ್ಮಪಂಡಿತಳು)ಬಂದಿದ್ದಾರೆ. ಬಹಳ ಚೆಂದ “ಇಸ್ತೆಮಾ”(ಮಹಿಳೆಯರ ಧಾರ್ಮಿಕ ವಿಚಾರ ಸಂಕಿರಣ) ನಡೆಸುತ್ತಾರೆ. ತುಂಬಾ ಚೆಂದ ಹೇಳ್ತಾರಂತೆ ಹೋಗೋಣವಾ? ಅಲ್ಲಾಹ್ ಏನಾದರೂ ದಾರಿ ತೋರಿಸಬಹುದು. ನಾಳೆ ಹೋಗೋಣವಾ?” ಎಂದಾಗ “ಆಗಲಿ” ಎಂದು ಒಪ್ಪಿಗೆ ಸೂಚಿಸಿದಳು. ಮಧ್ಯಾಹ್ನ ಮೂರು ಗಂಟೆಗೆ ಅಮ್ಮನೊಂದಿಗೆ ಸಾರಾ ಇಸ್ತೆಮಾಕ್ಕೆ ಹೊರಟಳು. ೨೫-೩೦ ಜನ ಮಹಿಳೆಯರಿದ್ದರು. ಆಲೀಮಾ ಮುಮ್ತಾಜ್ ಆಪಾ ತುಂಬಾ ಚೆನ್ನಾಗಿ ವಿಷಯಗಳನ್ನು ಹೇಳುತ್ತಿದ್ದರು.

“ಪೈಗಂಬರರು ಹೇಳುತ್ತಾರೆ. ಅಲ್ಲಾಹ್‌ನಿಗೆ ತಲ್ಲಾಖ್ ಇಷ್ಟವಿಲ್ಲ. ಅವನು ಅತ್ಯಂತ ನೋವಿನಿಂದ ಈ ಹಕ್ಕನ್ನು ಕೊಟ್ಟಿದ್ದಾರೆ. ಸರ್ಕಾರವಾದರೂ ಮುಸ್ಲಿಂ ಮಹಿಳೆಯರ ಈ ಸಮಸ್ಯೆಯನ್ನು ಬಗೆಹರಿಸಲು ಏನಾದರೊಂದು ಕ್ರಮ ಕೈಕೊಳ್ಳುತ್ತದೆ ಎಂದರೆ ಅದೂ ಕೂಡ ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿ ಕಾನೂನು ತರುತ್ತೇನೆಂದು ಹೇಳುತ್ತದೆ. ಆದರೆ ಭಾರತದ ಸರ್ವೋಚ್ಚ ನ್ಯಾಯಾಲಯವು ಶಾಬಾನು ಪ್ರಕರಣದಲ್ಲಿ ತೀರ್ಪು ಘೋಷಿಸಿ, ಆಕೆಯ ಪತಿಯಿಂದ ಮಾಸಿಕ ರೂ. ೧೭೯.೨೦ ಮೊತ್ತವನ್ನು ಜೀವನಾಂಶವಾಗಿ ಕೊಡಬೇಕೆಂದು ಭೂಪಾಲದ ಉಚ್ಚ ನ್ಯಾಯಾಲಯದ ನಿರ್ಧಾರವನ್ನು ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ ೧೨೫ರ ಪ್ರಕಾರ ಎತ್ತಿ ಹಿಡಿಯಿತು. ಅದಕ್ಕೆ ಮುಸ್ಲಿಂ ಸಮಾಜದ ಪುರುಷರಿಂದ “ಇದು ಇಸ್ಲಾಂಗೆ ವಿರುದ್ಧವಾಗಿದೆ” ಎಂದು ಶಾಬಾನು ಮೇಲೆ ಇನ್ನಿಲ್ಲದ ಒತ್ತಡ ತಂದು ತಲ್ಲಾಖ್ ನೀಡಿದ ಪತಿಯಿಂದ ನಿರ್ವಹಣಾ ವೆಚ್ಚವೆಂಬ ಜುಜುಬಿ ಹಣವನ್ನೂ ಪಡೆಯಲು ಬಿಡಲಿಲ್ಲ. ನಜ್ಮಾ ಹೆಪ್ತುಲ್ಲಾರವರೂ ಸಹ ಸಂಸತ್ತಿನಲ್ಲಿ “ಇಸ್ಲಾಮನ್ನು ಪಾರ್ಲಿಮೆಂಟೋ ಅಥವಾ ಸುಪ್ರೀಮ್ ಕೋರ್ಟೊ ಮಾಡಿದ್ದಲ್ಲ. ಅದರಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಅವರಿಗಿಲ್ಲ” ಎಂದು ಸಂಸತ್ತಿನಲ್ಲೇ ಹೇಳುತ್ತಾರೆ. ಮುಸ್ಲಿಂ ಮಹಿಳಾ ಸಂಸದರೂ ಸಹ ವಿವೇಚನಾ ಶೂನ್ಯರಾಗಿ ಮಾತಾಡಿದರೆ ಆ ಧರ್ಮದ ಸ್ತ್ರೀಯರ ಪರವಾಗಿ ಮಾತಾಡುವವರು ಯಾರು?

ಕೇಂದ್ರ ಸರ್ಕಾರವು ಮುಸ್ಲಿಂ ಮಹಿಳೆಯರನ್ನು ಓಟ್ ಬ್ಯಾಂಕ್ ಮಾಡಿಕೊಳ್ಳುವ ತರಾತುರಿಯಲ್ಲಿ ಈ ಮೊದಲು ಶಾಬಾನೂ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟು ನೀಡಿದ ಮೆಂಟೆನನ್ಸನ್ನು ರದ್ದು ಪಡಿಸಿ, ವಿಛ್ಛೇದಿತಳಾದ ಮಹಿಳೆಯರ ಜವಾಬ್ದಾರಿ ನೋಡಿಕೊಳ್ಳಲು, ಅಕೆಯ ಜವಾಬ್ದರಿಯನ್ನು ಆಕೆಯ ಸಹೋದರ, ಸಹೋದರಿಯರು, ಇಲ್ಲವೇ ಆಕೆಯ ಸ್ಥಿತಿವಂತ ಮಕ್ಕಳ ಮೇಲೆ ಹೇರಿತು. ಅವಳಿಗೆ ಯಾರೂ ದಿಕ್ಕಿಲ್ಲದ ಸಂದರ್ಭದಲ್ಲಿ ವಕ್ಫ್ ಬೋರ್ಡ್‌ ಆಕೆಯ ಯೋಗಕ್ಷೇಮವನ್ನು ನೋಡಿಕೊಳ್ಳಬೇಕೆಂದು ಕಾಯ್ದೆ ಜಾರಿ ಮಾಡಿದಲ್ಲದೆ. ಒಂದು ವೇಳೆ ಗಂಡ ಒಂದೇ ಬಾರಿಗೆ ಮೂರು ಬಾರಿ ತಲ್ಲಾಖ್ ಹೇಳಿದರೆ ಅದನ್ನು ಕ್ರಿಮಿನಲ್ ಪ್ರಕರಣವೆಂದು ಪರಿಗಣಿಸಿ, ಅವನನ್ನು ಬೇಲು ಸಿಗದಂತೆ ಬಂಧಿಸಿ ಕಾರಾಗೃಹದಲ್ಲಿ ಇಡುವ ಕಾಯ್ದೆ ಇತ್ತೀಚೆಗೆ ಜಾರಿಗೆ ಬಂದಿದೆ. ಯಾರು ಯಾರಿಗೆ ಸಲಹುತ್ತಾರೆ ಈ ಕಾಲದಲಿ?. ವಿಚ್ಛೇದಿತ ಮಹಿಳೆ ಅಕ್ಷರಶಃ ಬೀದಿ ಭಿಕಾರಿಯಾಗುತ್ತಾಳೆ. ಇಲ್ಲವೇ ವೇಶ್ಯಾವೃತ್ತಿಗಿಳಿಯಬೇಕಾಗುವ ಅನಿವಾರ್ಯತೆಯಿರುತ್ತದೆ”. ವಿಚ್ಛೇದನ ಅಥವಾ ಒಂದೇ ಬಾರಿಗೆ ಮೂರು ತಲ್ಲಾಖ್ ಹೇಳಿದ ಗಂಡನನ್ನು ಒಯ್ದು ಜೈಲಿಗೆ ಹಾಕುತ್ತಾರೆ. ನಂತರ ಹೆಂಡತಿ ಮಕ್ಕಳ ಪರಿಸ್ಥಿತಿಯೇನು? ಅನ್ನ ಆಹಾರ ಬಟ್ಟೆ, ಸೂರು, ಶಿಕ್ಷಣ ಇವುಗಳ ಬಗ್ಗೆ ಸರ್ಕಾರ ಯೋಚಿಸುವುದೇ ಇಲ್ಲ. ಹಿಂದೂ ಗಂಡಸು ಹೆಂತಿಯನ್ನು ವಿಚ್ಛೇದನ ನೀಡಿದರೆ, ಅದು ಸಿವಿಲ್ ಕೇಸು. ಆದರೆ ಅದೇ ಮುಸ್ಲಿಂ ಗಂಡಸು ವಿಚ್ಛೇದನೆ ನೀಡಿದರೆ ಅದು ಕ್ರಿಮಿನಲ್ಲ ಮತ್ತು ನಾನ್ ಬೇಲೇಬಲ್ ಅಂತೆ. ಇದು ಎಂತಹ ಕಾನೂನು?.

ಸಾರಾ ತನ್ನ ಸ್ಥಿತಿಯನ್ನು ನೆನೆದು ಒಂದು ಕ್ಷಣ ಕಂಪಿಸಿದಳು. “ಯಾ ಖುದಾ ನನಗಾಗಿ ಒಂದು ಕೆಲಸ ದಯಪಾಲಿಸಿರುವೆಯಲ್ಲ. ನಿನಗೆ ಅನಂತ ಧನ್ಯವಾದಗಳು. ನನಗೆ ಅಂತಹ ಕೆಟ್ಟ ಪರಿಸ್ಥಿತಿ ಖಂಡಿತಾ ತರಬೇಡ ಖುದಾ”. ಎಂದು ಅಲ್ಲಾಹ್‌ನಲ್ಲಿ ಪ್ರಾರ್ಥಿಸಿದಳು. ಸಾರಾ ಗಾರ್ಮೆಂಟ್ ಇಂಡಸ್ಟ್ರಿಯಲ್ಲಿ ಕೆಲಸವಿರುವುದರಿಂದ ಹೇಗಾದರೂ ಮಾಡಿ ತನ್ನ ಎರಡು ಮಕ್ಕಳನ್ನು ಸಾಕಬಹುದು ಎಂದುಕೊಂಡಳು. ‘ತನಗೆ ಅಂತಹ ಕೆಟ್ಟ ಪರಿಸ್ಥಿತಿ ದೇವರು ತರದಿರಲಿ’ ಎಂದು ಪ್ರಾರ್ಥಿಸಿದಳು.

“ಮುಸ್ಲಿಂ ಮಹಿಳಾ ಹಕ್ಕುಗಳನ್ನು ರಕ್ಷಿಸುವ ಮುಸ್ಲಿಮ್ ವೈಯಕ್ತಿಕ ಕಾನೂನುಗಳೂ ಜಡವಾಗಿವೆ? ದಿಯೋ ಬಂದ್ ಮತ್ತು ಬರೇಲ್ವಿ ಪಂಥದ ಮೌಲ್ವಿಗಳು ಹಿಡಿದುಕೊಂಡು ಬಂದ ಕಾಗದದ ಮೇಲೆ ಹೆಬ್ಬೆರಳು ಒತ್ತಿದ ಶಾಬಾನು ತನ್ನ ಜೀವನಾಂಶ ಕುರಿತ ಅರ್ಜಿಯನ್ನು ಹಿಂದಕ್ಕೆ ಪಡೆದು ಸುಪ್ರೀಮ್ ಕೋರ್ಟಿನ ತೀರ್ಪನ್ನು ನಿರಾಕರಿಸಿದಳು. ಹೀಗೆ ಕೋರ್ಟುಗಳು ಮಹಿಳಾ ಪರ ತೀರ್ಮಾನ ನೀಡಿದರೂ ಅದನ್ನು ಸ್ವೀಕರಿಸದಂತಹ ಸಂಧಿಗ್ಧ ಪರಿಸ್ಥಿತಿ ತಂದು ಒಡ್ಡುತ್ತಾರೆ ನಮ್ಮ ಮೌಲ್ವಿಗಳು. ಆದರೆ ಪೈಗಂಬರರು ಹೇಳುತ್ತಾರೆ. ನಿಮಗೆ ಸಂಬಂಧ ಬೇಡವಾದಲ್ಲಿ ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ “ಅವರಿಗೆ ಘನತೆಯಿಂದ ಬದುಕುವಂತೆ ಮಾಡಿ” ಎಂದು ಹೇಳುತ್ತಾರೆ. “ತಲ್ಲಾಖ್ ಬಗ್ಗೆ ಕಾತರಿಸುವ ಸರ್ಕಾರ ಅವಳ ಖುಲಾದ ಸ್ವಾತಂತ್ರ್ಯಕ್ಕಾಗಿ ಯಾಕೆ ಮಾತನಾಡುವುದಿಲ್ಲ. ವಿಶ್ವದಲ್ಲಿ ಮಹಿಳೆ ಖುಲಾದ ಹಕ್ಕನ್ನು ಇಸ್ಲಾಂ ಧರ್ಮವೆ ಮೊದಲು ನೀಡಿದೆ ನಿಜ. ಆದರೆ ಅದನ್ನು ಜಾರಿ ಮಾಡಲು ಧರ್ಮದ ಅಡ್ಡಗೋಡೆಗಳಿವೆಯಲ್ಲ. ಅದನ್ನು ಕೆಡಹುವುದು ಹೇಗೆ ಎಂಬುದು ಸಮಸ್ಯೆಯಾಗಿದೆ. ಇಸ್ಲಾಂ ಧರ್ಮ ಮಹಿಳೆಗೆ ವಿವಾಹ, ಮರುವಿವಾಹ, ಆಸ್ತಿ, ವ್ಯಾಪಾರ ಮತ್ತು ತನ್ನ ಗಂಡನನ್ನು ಆಯ್ಕೆ ಮಾಡುವ ಹಕ್ಕು ನೀಡಿದರೂ ಸಹ ಇಂದಿಗೂ ಯಾಕೆ ಅವು ಜಾರಿಯಾಗುತ್ತಿಲ್ಲ?.” ಎಂದು ಹೇಳಿದ ಆಲಿಮಾ ಮುಹತ್ರಮಾ ಮುಮ್ತಾಜ್ ಆಪಾ “ಇವತ್ತಿಗೆ ಇಷ್ಟು ಸಾಕು. ಮುಂದಿನ ವಾರ ಮತ್ತೇ ಸೆರೋಣ” ಎಂದು ಆದಾಬ್ ಹೇಳಿ ಎಲ್ಲರಿಗೂ ಬಿಳ್ಕೋಟ್ಟರು. ಅಸರ್(ಸಂಜೆ ೫ ಗಂಟೆಯ ಪ್ರಾರ್ಥನೆ) ನಮಾಜಿನ ಸಮಯವಾಗಿದ್ದರಿಂದ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದರು.

ಅವರ ಮನೆಯಲ್ಲಿ ದುಡಿಯುವ ಗಂಡಸರು ಯಾರೂ ಇಲ್ಲ. ನಿನ್ನ ಅತ್ತೆ ಗಂಡನ ಪಿಂಚಣಿ ಮೇಲೆ ಬದುಕು ನಡೆಸುತ್ತಿದ್ದಾಳೆ. ತಾಳ್ಮೆ ವಹಿಸು. ಆ ಸಿಟ್ಟನ್ನು ಹೆಂಡತಿ ಮಕ್ಕಳ ಮೇಲೆ ತಕ್ಕೊಂಡ್ರೆ ಆಗುತ್ತಾ ಬೇಟಾ?. ಸ್ವಲ್ಪ ತಾಳ್ಮೆ ತಂದುಕೋ ಎಲ್ಲಾ ಅಲ್ಲಾನ ಕೈಯಲ್ಲಿದೆ.

ಮನೆಗೆ ಬಂದರೂ ಸಾರಾಳ ತಲೆಯಲ್ಲಿ ಆಲಿಮಾ ಹೇಳಿರುವ ಮಾತುಗಳೇ ಅನುರಣಿಸುತ್ತಿದ್ದವು. ಜುಬೇರನೊಂದಿಗೆ ಮದುವೆಯಾಗಿ ಎರಡು ಮಕ್ಕಳಾಗಿವೆ ನಿಜ. ಆದರೂ ಯಾಕೆ ಅವನು ನನ್ನ ಪೀಡಿಸುತ್ತ, ಹಿಂಸಿಸುತ್ತಲೇ ಇರುತ್ತಾನೆ. ಹೆಣ್ಣು ಮಗುವನ್ನು ಯಾಕಿಷ್ಟು ದ್ವೇಷಿಸುತ್ತಾನೆ. ಅವನ ತಾಯಿ ಇಲ್ಲದೇ ಅವನು ಹುಟ್ಟಿದನೇ ಅವನಿಗೆ ಇಬ್ಬರು ಸೋದರಿಯರಿದ್ದಾರೆ. ಆದರೂ ಮಗಳು ಸಲ್ಮಾಳನ್ನು ಏಕೆ ಹಿಂಸಿಸುತ್ತಾನೆ. ನನಗೆ ಅವಳನ್ನು ಜತನ ಮಾಡುವುದೇ ದೊಡ್ಡ ಕೆಲಸವಾಗಿದೆ. ಅಮ್ಮ ರಾತ್ರಿ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದಳು. ನಾನು ಅನ್ಯ ಮನಸ್ಕಳಾಗಿ ಕುಳಿತಿರುವಾಗ ಸಂಜೆಯಾಗುತ್ತಿತ್ತು. ಬಾಗಿಲು ತಟ್ಟಿದರು. ಯಾರೆಂದು ಎದ್ದು ಬಾಗಿಲು ತೆಗೆದೆ. ಅಮ್ಮ ಒಳಗಿದ್ದುದರಿಂದ ನಾನೇ ತೆಗೆದು ನೋಡಿದರೆ, ಅತ್ತೆ ಜುಬೇರನೊಂದಿಗೆ ಬಂದಿದ್ದರು. ಬನ್ನಿ ಎಂದು ಅವರಿಗೆ ಸಲಾಂ ಮಾಡಿ ಒಳಗೆ ಕರೆದು ಕೂಡಿಸಿದೆ. ಒಳಗಿನಿಂದ ಅಮ್ಮನೂ ಬಂದು ಬೀಗಿತ್ತಿಗೆ
“ಅಸ್ಸಲಾಮ್ ವಲೈ ಕುಂ ಭಾಬಿ” ಎಂದಾಗ
“ವಾಲೆಕು ಅಸ್ಸಲಾಮ್ ಆಪಾ” ಎಂದರು ಅಮ್ಮ.

ಮಗನೂ ಸಲಾಂ ಮಾಡಿ ಒಳಗೆ ಬಂದು ಚಾಪೆಯ ಮೇಲೆ ಕುಳಿತನು. ಉಭಯ ಕುಶಲೋಪರಿ ವಿಚಾರಿಸಿದರು ಅಮ್ಮ. ನಾನು ಒಳಗೆ ಹೋಗಿ ಚಹಾಕ್ಕೆ ಇಟ್ಟೆ. ಅಲ್ಲಿಯೇ ಆಡಿಕೊಂಡಿದ್ದ ಶೋಯೆಬ್ “ಅಬ್ಬಾ” ಎಂದು ಕುಣಿಯುತ್ತಾ ಹೋಗಿ ಅಪ್ಪನ ತೊಡೆಯ ಮೇಲೆ ಕುಳಿತ. ಸಲ್ಮಾಳಿಗೆ ಅಪ್ಪನ ದ್ವೇಷ, ಅಸಹನೆ, ಹೊಡೆತಗಳನ್ನು ಕಂಡಿದ್ದರಿಂದ, ಮೊನ್ನೆಯ ಗಾಯ ಇವತ್ತು ತುಂಬಾ ನೋಯುತ್ತಿದುದರಿಂದ ಮುಖ ಚಿಕ್ಕದು ಮಾಡಿಕೊಂಡು ದೂರವೇ ಇದ್ದು, ಅಮ್ಮನ ಬಳಿಗೆ ಒಳಗೆ ಓಡಿ ಹೋದಳು. ಒಮ್ಮೆಲೇ ನಿಷ್ಟುರವಾಗಿ ಜುಬೇರ ಹೇಳಿದ

“ನಾನು ನನ್ನ ಹೆಂಡ್ತಿ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಕಳಿಸಿಕೊಡಿ”

“ಆದದ್ದು ಆಯಿತು ರುಖಿಯಾ ಭಾಬಿ. ಐಸಾ ಕರೆತೋ ಜೀನಾ ಹೊತೈ ಕ್ಯಾ? ಮಗಳಿಗೆ ಕಳಿಸಿಕೊಡಿ” ಎಂದು ಹೇಳಿದ್ದಕ್ಕೆ

“ಅವ್ರು ಚೆನ್ನಾಗಿದ್ದರೆ ನನಗೂ ಖುಷಿಯಲ್ಲವೇ ಆಪಾ? ಆದರೆ ದನಕ್ಕೆ ಬಡದಂಗ ಬಡದ್ರೆ ಅವಳು ಹ್ಯಾಂಗ ಸಹಿಸಬೇಕು? ನೀವೇ ಹೇಳಿ? ತನ್ನ ಕರುಳ ಕುಡಿಯನ್ನೇ ಅಷ್ಟು ಬೇತುಕಾ ಹೋಡಿತಿದಾನಲ್ಲ ಜೀವ ಹೋದ್ರೆ ಏನು ಮಾಡಬೇಕಿತ್ತು ಹೇಳಿ?” ಎಂದು ಅಮ್ಮ ಮೊಮ್ಮಗಳನ್ನು ಎಳೆದು ತಂದು ಅವಳ ಗಾಯಗಳನ್ನು ತೋರಿಸಿದಳು. ಅದರಿಂದ ಸಿಟ್ಟಾದ ಜುಬೇರ್

“ಅವಳ್ನ ಕೊಂದು ಹಾಕಿ ಬಿಡ್ತಿನಿ” ಎದ್ದು ಮತ್ತೇ ಅವಳನ್ನ ಹೊಡೆಯಲು ಮುಂದಾದಾಗ ಒಳಗಿದ್ದ ಸಾರಾ ಓಡಿ ಬಂದವಳೇ ಮಗಳನ್ನು ಮರೆಗೆ ಒಯ್ದಳು.

“ನೀವೇನು ಮನುಷ್ಯರೋ ಪ್ರಾಣಿನೋ? ಅತ್ತೆ ಇವರು ನನಗೆ ಹೇಗೆ ಹೊಡೀತಿದಾರೆ ನೋಡಿ?” ಎಂದು ತನ್ನ ಮೈಮೇಲಿನ ಗಾಯಗಳನ್ನು ತೋರಿಸುತ್ತಾ “ಇದೇನು ಮೊದಲನೇ ಸಲ ಅಲ್ಲ. ಐದು ವರ್ಷಗಳಿಂದಲೂ ಇವರ ಹಿಂಸೆ ಸಹಿಸಿ ಸಾಕಾಗಿದೆ. ಮಾತು ಮಾತಿಗೆ ತಲ್ಲಾಕ್ ಹೇಳ್ತಾರೆ. ನಾನಲ್ಲಿ ಹೇಗೆ ಇರಬೇಕು ಹೇಳಿ? ಹೆಣ್ಣಾಗಿ ಹುಟ್ಟಿದ್ರಲ್ಲಿ ಸಲ್ಮಾಳದೇನು ತಪ್ಪು? ಮಾತು ಮಾತಿಗೆ ಅವಳಿಗೆ ಹೊಡೆಯುತ್ತಾರೆ. ಎಷ್ಟು ಅಂತ ಅವಳಿಗೆ ಜತನ ಮಾಡಲಿ? ಇಲ್ಲ ಅತ್ತೆ ನಾನು ಬರೋದಿಲ್ಲ. ಇವರಿಂದ ಬಹಳ ಹಿಂಸೆಯಾಗಿದೆ.”

“ಹಂಗ ಹೇಳಿದ್ರೆ ಆಗುತ್ತಾ ಬೇಟಾ. ನಿನ್ನ ಮನೆ ನಿನ್ನ ಗಂಡ. ಮನೆ ಅಂದ್ಮೆಲ್ ಒಂದು ಸ್ವಲ್ಪ ಹೆಚ್ಚು ಕಮ್ಮಿ ಆಗ್ತದ. ಅದಕ್ಕ ತವರು ಮನ್ಯಾಗನೇ ಇರ್ಲಿಕ್ಕಾಗ್ತದಾ ಬೇಟಾ ನಡಿ?” ಎಂದು ಅತ್ತೆ ಹೇಳಿದಾಗ ಜುಬೇರ್ ಸುಮ್ಮನಿರಲಾರದೇ “ತೇರಿ ಮಾಕಿ ಸುವ್ವರ್. ಇಲ್ಲಿ ಬಂದು ನಿನ್ನ ನಾಲಿಗೆ ಉದ್ದ ಆಗಿದೆ.” ಎಂದು ಹಲ್ಲು ಹಲ್ಲು ಕಡಿಯುತ್ತಾ ಮತ್ತೇ ಅವಳನ್ನು ಹೊಡೆಯಲು ಹೋಗುತ್ತಾನೆ. ಸಾರಾ ಅಮ್ಮನ ಹಿಂದೆ ನಿಂತರೆ ಸಲ್ಮಾ ಅವಳ ಸೀರೆ ಹಿಡಿದು ನಿಂತಳು. ಶೋಯೆಬ್ ಪಿಳಿ ಪಿಳಿ ಕಣ್ಣು ಬಿಡುತ್ತಾ ನಿಂತಿದ್ದ.

“ಈಗ ಇಲ್ಲದ ರಾದ್ಧಾಂತ ಬೇಡ. ಈಗ ಮನೆಗೆ ಹೋಗ್ರಿ. ನಾಳೆ ಬೆಳಿಗೆ ಹನ್ನೊಂದು ಗಂಟೆಗೆ ಜಮಾತಿನ ಕಟ್ಟೆಗೆ ಬನ್ನಿ. ಅಲ್ಲಿ ಹಿರಿಯರ ಮುಂದೆ ಮಾತಾಡುವಿರಂತೆ” ಎಂದು ಅಮ್ಮ ಹೇಳಿದಾಗ

“ಹೆಣ್ಣಾಗಿ ಅವಳಿಗೇ ಇಷ್ಟು ಜಂಭ ಇರ್ಬೇಕಾದ್ರೆ… ನನಗೆಷ್ಟಿರಬೇಡ. ನಡಿರಿ ಅಮ್ಮಿಜಾನ್. ಈ ಛಿನಾಲಿಗೆ ನಾಳೆ ಜಮಾತಿನ ಕಟ್ಟೆಯಲ್ಲೇ ತಲ್ಲಾಕ್ ಹೇಳಿ ಬಿಡ್ತೇನೆ”

ಎಂದು ತಾಯಿಯನ್ನು ಕರೆದುಕೊಂಡು ಜೋರಾಗಿ ಹೊರನಡೆದ.

*****

ಹೀಗೆ ಮಾತು ಮಾತಿಗೆ ತಲ್ಲಾಖ್ ಹೇಳುವ ಗಂಡನನ್ನು ಹೇಗೆ ನಂಬುವುದೆಂದು ಸಾರಾ ಇಡೀ ರಾತ್ರಿ ಚಿಂತಿಸುತ್ತಲೇ ಕಳೆದಳು. ಧರ್ಮದ ಪ್ರಕಾರ ಹೆಣ್ಣು ಮಕ್ಕಳು “ತಲ್ಲಾಖ್” ಏಕೆ ಎಂದು ಪ್ರಶ್ನಿಸುವಂತಿಲ್ಲ. ಆದರೆ ತಲ್ಲಾಖ್ ಹೇಳುವುದು ಅಲ್ಲಾಹನಿಗೆ ಅಪ್ರೀಯವಾದ ವಿಷಯವೆಂದು ಪೈಗಂಬರರೇ ಹೇಳಿದ್ದಾರೆ. ನಾನೇ ಖುಲಾಹ್ ಕೇಳಿದರೆ ಹೇಗೆ? ಇದರಿಂದ ಅತ್ತೆ ನೊಂದುಕೊಳ್ಳಬಹುದು ನಿಜ. ಆದರೆ ಗಂಡ ಹೆಂಡತಿ ಎಂಬ ಅನಿಶ್ಚಿತ ಬದುಕಿನಲ್ಲಿ ಅದೆಷ್ಟು ದಿನ ಭಯ, ಅಭದ್ರತೆಯಲ್ಲಿ ಬದುಕಲಿ? ಒಂದು ಸಲ ಈ ಅಭದ್ರತೆಯ ಎಳೆಯನ್ನು ಕಿತ್ತು ಹಾಕಿದರೆ ಒಳ್ಳೆಯದಲ್ಲವೆ? “ಯಾ ರಬ್ಬೇ ನಾನೇನು ಮಾಡಲಿ” ಅಮ್ಮನಿಗೆ ಅವನೇ ತಲ್ಲಾಖ್ ನೀಡಿದರೂ ಚಿಂತೆ, ನಾನೇ ಖುಲಾ ಪಡೆದರೂ ಚಿಂತೆ. ಅಮ್ಮಿಯ ನೋವು ಆಘಾತ ಹೇಳತೀರದು. ಅವನು ತನಗೆ ಹೇಗೆ ಬೇಕೋ ಹಾಗೆ ನನ್ನನ್ನು ಬಳಸಿಕೊಳ್ಳುತ್ತಾನೆ. ಅವನಿಗಾಗಿ ಅವನ ಹೊಟ್ಟೆಯ ಹಸಿವು ತಣಿಸಲು ಅವನ ಇಷ್ಟದ ಅಡುಗೆಗಳನ್ನು ಮಾಡಿ ಬಡಿಸುವುದು. ಕೊನೆಗೆ ಅವನ ದೈಹಿಕ ಹಸಿವನ್ನು ಇಂಗಿಸಬೇಕಾಗುತ್ತಿತ್ತು. ಅವನ ಎಲ್ಲ ಬೇಕು ಬೇಡಗಳನ್ನು ಮರುಮಾತಿಲ್ಲದೇ ತೀರಿಸುತ್ತಿದ್ದೆ. ಆದರೆ ಮಾತು ಮಾತಿಗೆ ತಲ್ಲಾಖ್ ಹೇಳುವ ಗಂಡನನ್ನು ಹೇಗೆ ನಂಬುವುದೆಂದು? ಮಗಳು ಸಲ್ಮಾಳನ್ನು ಕಂಡರೆ ಸಾಯಿಸಲು ಮುಂದಾಗುತ್ತಾನೆ. ಅವಳು ಮಾಡಿದ ತಪ್ಪೇನು? ಪೈಗಂಬರರಿಗೆ ಹೆಣ್ಣು ಮಕ್ಕಳೆಂದರೆ ಬಹಳ ಪ್ರೀತಿಯಿತ್ತು. ಇವರಿಗೇನಾಗಿದೆ? ನಾನು ನನ್ನ ಮಗಳನ್ನು ಉಳಿಸಿಕೊಳ್ಳಲೇ ಬೇಕು. ಜುಬೇರಲ್ಲಿಗೆ ಹೋದರೆ ಮತ್ತೇ ಅವನು ಸಲ್ಮಾಳ ಮೇಲೆ ನನ್ನ ಮೇಲೆ ಎಗ್ಗಿಲ್ಲದೇ ಹಲ್ಲೆ ಮಾಡುತ್ತಾನೆ. ನನಗೆ ಹೇಗಿದ್ದರೂ ಕೆಲಸವಿದೆ. ಮಕ್ಕಳನ್ನು ಸಾಕಬಹುದು. ಸಾರಾ ಇವತ್ತು ಕೂಡ ಇಡೀ ರಾತ್ರಿ ಚಿಂತಿಸುತ್ತಲೇ ಕಳೆದಳು. ಕೊನೆಗೆ ಗಟ್ಟಿ ಧೈರ್ಯ ಮಾಡಿ ಒಂದು ತೀರ್ಮಾನಕ್ಕೆ ಬರುತ್ತಾಳೆ.

ಸಾರಾ ಬೆಳಿಗ್ಗೆ ಎದ್ದವಳೇ ದಿಗ್ಮೂಢಳಾಗಿ ಕುಳಿತಿದ್ದಳು. ತಾಯಿ ಎದ್ದು ಎಲ್ಲರಿಗಾಗಿ ಚಹಾ ಕಾಸುತ್ತಿದ್ದಳು. ಮೌಲ್ವಿಗಳು ಯಾಕೆ ಖುಲಾ ನೀಡುತ್ತಿರುವುದು ಎಂದು ಕೇಳಿದರೆ ಏನು ಹೇಳಲಿ? ಇದಕ್ಕೆ ಗಂಡನ ಒಪ್ಪಿಗೆ ಪಡೆದಿರುವೆಯಾ ಎಂದರೆ?. ಅವನು ತಲ್ಲಾಖ್ ನೀಡಬೇಕಾದರೆ ನನ್ನ ಒಪ್ಪಿಗೆ ಬೇಕಿಲ್ಲ. ಆದರೆ ನಾನು ಖುಲಾ ನೀಡಿದರೆ ಅವನ ಒಪ್ಪಿಗೆ ಏಕೆ ಪಡೆಯಬೇಕು? ಹೆಣ್ಣುಮಕ್ಕಳಿಗೇ ಯಾಕಿಂತಹ ಶಿಕ್ಷೆ ನೀಡುತ್ತಿರುವೆ ರಬ್ಬೇ? ನಾವೇನು ಪಾಪ ಮಾಡಿರುವೆವು. ಮದುವೆಯೆಂಬುದು ಇಸ್ಲಾಂನಲ್ಲಿ ಒಂದು ಒಪ್ಪಂದ ಮಾತ್ರ. ಅದು ಏಳೇಳು ಜನ್ಮದ ಬಂಧನವಲ್ಲ. ಹುಡುಗನಿಗೆ ಬೇಡವಾದಾಗ ತಲ್ಲಾಖ್ ನೀಡುವ ಹಕ್ಕು ನೀಡಿದೆ. ಹುಡುಗಿಗೆ ಬೇಡವಾದಾಗ ಅವಳೂ ಖುಲಾಹ್ ನೀಡುವ ಹಕ್ಕು ಪಡೆದಿದ್ದಾಳೆ. ಮದುವೆಯ ಕೊನೆಯ ಘಳಿಗೆಯವರೆಗೂ ಹೆಣ್ಣು ಈ ಮದುವೆಯನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕನ್ನು ಪಡೆದಿರುತ್ತಾಳೆ. ಮದುವೆಯಲ್ಲಿ ಖಾಜಿ ಬಂದು “ನಿಮಗೆ ಈ ಮದುವೆ ಖುಬುಲ್(ಒಪ್ಪಿಗೆ) ಇದೆಯಾ?” ಎಂದು ಪ್ರಶ್ನಿಸುತ್ತಾರೆ. ಆಗ ಮದುಮಗಳು “ಖುಬುಲ್ ಹೈ” ಎಂದರೆ ಮಾತ್ರ ಆ ಮದುವೆ ನೆರವೇರುತ್ತದೆ. ನಮ್ಮ ಸಮಾಜ ಖುಲಾವನ್ನು ಕಾರ್ಯರೂಪಕ್ಕೆ ತರದೇ ತ್ರಿವಳಿ ತಲ್ಲಾಕನ ಬಗ್ಗೆಯೇ ಯಾಕೆ ತಲೆ ಏಕೆ ಕೆಡಿಸಿಕೊಂಡಿದ್ದಾರೋ ತಿಳಿಯದಾಗಿದೆ… ಎಂದು ಸಾರಾ ಬಹಳ ಹೊತ್ತಿನವರೆಗೂ ಯೋಚಿಸುತ್ತ ಕುಳಿತಿದ್ದಳು. ಅಮ್ಮ ಹಬೆಯಾಡುವ ಬಿಸಿಬಿಸಿ ಚಹಾ ತಂದು ಮುಂದಿಡದೇ ಹೋಗಿದ್ದರೆ ಅವಳ ಯೋಚನಾ ಲಹರಿ ಹಾಗಿಯೇ ಹರಿಯುತ್ತಿತ್ತು.

“ಏನು ಯೋಚನೆ ಮಾಡುತ್ತಿರುವೆ ಮಗಳೇ ದೇವರಿದ್ದಾನೆ ಬಿಡು. ತನ್ನ ನಂಬಿದವರನ್ನು ಅಲ್ಲಾಹ್ ಕೈಬಿಡೋದಿಲ್ಲ. ಮೊದಲು ಚಹಾ ಕುಡಿ” ಎಂದಾಗ.. “ಏನಿಲ್ಲ ಅಮ್ಮಿ” ಎಂದು ಚಹಾ ಕಪ್ಪು ಎತ್ತಿಕೊಂಡಳು. ಮಕ್ಕಳು ಚಿಕ್ಕಮ್ಮನೊಂದಿಗೆ ತಮ್ಮ ಪಾಡಿಗೆ ತಾವು ಆಡಿಕೊಂಡಿದ್ದರು.

ಎಲ್ಲಾ ಧರ್ಮ ಶಾಸನಗಳಲ್ಲಿ ವ್ಮರೆಯಲ್ಲಿ ಸ್ವಾರ್ಥಿಗಳು ಸ್ತ್ರೀವಿರೋಧಿ ಮೌಲ್ಯಗಳನ್ನೇ ತುಂಬಿದ್ದಾರೆ. ಧರ್ಮದ ವ್ಮರೆಯಲ್ಲಿ ಹೆಣ್ಣು ವಿರೋಧಿ ಮೌಲ್ಯಗಳೇ ಅಡಗಿ ಕುಳಿತಿವೆ? ಬೂಟಾಟಿಕೆಯ ಧರ್ಮ ಶಾಸನಗಳಿಗೆ ಬೆಂಕಿ ಬೀಳಬಾರದೇ? ನಿಜ ಧರ್ಮಕ್ಕೆ ಯಾವತ್ತೂ ಗೆಲುವು ಇದ್ದೇ ಇದೆ. ಇದ್ದ ವ್ಮರೆಯನ್ನು ಅಳಕಿಸುವುದರೊಂದಿಗೆ ತನ್ನದೇ ಆದ ಒಂದು ವ್ಮರೆಯನ್ನು ಮಹಿಳೆಯರು ಯಾಕೆ ಎಳೆಯಬಾರದು?. ಕಾಲಕಾಲಕ್ಕೆ ಸಮಾಜ ಅರಗಿಸಿಕೊಳ್ಳುವಂತಹ, ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುವಂತಹ ಪರಿವರ್ತನಾ ಸಮಯ ನಮಗಿಂದು ಒದಗಿ ಬಂದಿದೆ ಎಂದು ಅಂದುಕೊಂಡಳು ಸಾರಾ. ಮರುಕ್ಷಣವೇ ಯೋಚಿಸಿದಳು ಸಮಾಜವೂ ಅದಕ್ಕೆ ತೆರೆದುಕೊಳ್ಳುವುದು ಸೂಕ್ತವಲ್ಲವೆ? ಹೆಣ್ಣುಮಕ್ಕಳಿಗೆ ಸಹನೆ ಬೇಕು ನಿಜ. ಆದರೆ ಅಪಮಾನದ ಬದುಕನ್ನು ಯಾಕೆ ಮತ್ತು ಎಲ್ಲಿಯವರೆಗೆ ಸಹಿಸಬೇಕು?.

ಆರ್ಥಿಕವಾಗಿ ಸ್ವತಂತ್ರಳಲ್ಲದ ಮುಸ್ಲಿಂ ಮಹಿಳೆ ಹೇಗೆ ತಾನೆ ಖುಲಾ ನೀಡಬಲ್ಲಳು. ಜಮಾತಿನವರು ಏನಾದರೂ ತಮ್ಮ ಮಹಿಳೆಯರ ಉದ್ಧಾರ ಬಯಸುವುದಾದರೆ, ಗಂಡಸಿಗೆ ತಲ್ಲಾಖಿನ ಹಕ್ಕನ್ನು ಇನ್ನಷ್ಟು ಸರಳಗೊಳಿಸುವುದು ಅಲ್ಲವೆ ಅಲ್ಲ. ಅಥವಾ ತಲ್ಲಾಖ್ ಹೇಳಿದ ಗಂಡನನ್ನು ಬೇಲ್ ಸಿಗದಂತೆ ಜೈಲಿಗೆ ಹಾಕುವ ಕ್ರಿಮಿನಲ್ ಕಾಯ್ದೆ ಅನ್ವಯಿಸುವುದೂ ಸೂಕ್ತವಲ್ಲ. ಬದಲಾಗಿ ಮಹಿಳೆಗಿರುವ ಖುಲಾ ಸ್ವಾತಂತ್ರವನ್ನು ಕಾರ್ಯರೂಪಕ್ಕೆ ತರಲು ಯಾರು ಹೋರಾಡಬೇಕು? ಪುರುಷ ಬಹಳ ಸುಲಭವಾಗಿ ತಲ್ಲಾಖ್ ಹೇಳಿ ಸ್ವತಂತ್ರನಾಗುತ್ತಾನೆ. ಆದರೆ ಇದು ನಮಗೇಕೆ ಸಾಧ್ಯವಾಗುತ್ತಿಲ್ಲವೆಂದು ಯೋಚಿಸುತ್ತಾ ಸಾರಾ ಚಿಂತನೇಗೀಡಾಗುತ್ತಾಳೆ. ಖುಲಾ ಎಂಬುದು ಪುರುಷ ಪ್ರಪಂಚಕ್ಕೆ ಬೇಡದ ಶಬ್ದ. ಅದು ಅವನ ಮೇಲರಿಮೆಗೆ ಬಹು ದೊಡ್ಡ ಪೆಟ್ಟು ಕೊಡುವಂತಹದು.

ಖುಲಾ ಎಂಬುದು ಅರೇಬಿಕ್ ಶಬ್ದ. ಖುಲಾ ಎಂದರೆ ‘ತೆಗೆದುಹಾಕು’ ಎಂದರ್ಥ. ಇದು ಪತಿಯಿಂದ ಬಿಡುಗಡೆ ಪಡೆಯಲು ಸ್ತ್ರೀಯರಿಗೆ ನೀಡಲಾಗಿರುವ ಹಕ್ಕು. ಹೀಗೆ ಖುಲಾಹ್ ಅಥವಾ ತಲ್ಲಾಖಿತ ದಂಪತಿಗಳಿಗೆ ಮಕ್ಕಳಿದ್ದರೆ ಅವರು ಏಳು ವರ್ಷದವರಾಗುವವರೆಗೂ ಆ ಮಕ್ಕಳು ತಾಯಿಯ ಬಳಿ ಇರಬಹುದು. ಆದರೆ ಮಕ್ಕಳ ಶಿಕ್ಷಣ, ಪಾಲನೆಯ ಖರ್ಚು, ಜವಾಬ್ದಾರಿ ತಂದೆಯೇ ವಹಿಸಬೇಕಾಗುತ್ತದೆ. ಏಳು ವರ್ಷಗಳ ನಂತರ ಮಕ್ಕಳು ತಂದೆ ಅಥವಾ ತಾಯಿಯ ಬಳಿ ಮಕ್ಕಳ ಇಚ್ಛೆಯಂತೆ ಇರುವ ಹಕ್ಕನ್ನು ಮಕ್ಕಳು ಪಡೆಯುತ್ತಾರೆ.

ಮದುವೆಯ ಸಂದರ್ಭದಲ್ಲಿ ಗಂಡ ಹೆಂಡತಿಗೆ ಮೆಹರನ್ನು ನೀಡುತ್ತಾನೆ. ಅದು ಹಣ, ಜಮೀನು, ಅಥವಾ ಬಂಗಾರದ ರೂಪದಲ್ಲಿ ನೀಡಿರುತ್ತಾನೆ. ಎಷ್ಟೋ ಸಲ ಪತಿಗೆ ಮದುವೆಯಲ್ಲಿ ಮೆಹರ್ ನೀಡಲು ಸಾಧ್ಯವಾಗಿರುವುದಿಲ್ಲ. ಒಂದು ವೇಳೆ ಅವನು ಜೀವನ ಪರ್ಯಂತ ಅವಳಿಗೆ ಮೆಹರನ್ನು ನೀಡಲು ಸಾಧ್ಯವಾಗಿರದೇ ಇದ್ದು. ಒಂದು ಪಕ್ಷ ಅವನು ನಿಧನನಾದರೆ, ಅವನ ಶವ ಎತ್ತುವುದಕ್ಕೆ ಮುನ್ನ ಹೆಂಡತಿಯಿಂದ ಅವನು ಕಟ್ಟಿದ ಮೆಹರನ್ನು ಹೆಂಡತಿ ಮನ್ನಾ ಅಥವಾ ಮಾಫೀ ಮಾಡಿದ ನಂತರವೇ ಶವವನ್ನು ಜಮಾತಿನವರು ಎತ್ತುತ್ತಾರೆ. ಅದೇ ರೀತಿ ಖುಲಾ ಸಂದರ್ಭದಲ್ಲಿ ಮೆಹರಿನ ರೂಪದಲ್ಲಿ ಪತಿಯು ಅವಳಿಗೆ ನೀಡಿದ್ದನ್ನು ಹಿಂತಿರುಗಿಸಬೇಕಾಗುತ್ತದೆ. ಇಲ್ಲವಾದರೆ ಪತಿಯಿಂದ ಅದನ್ನು ಮಾಫೀ ಮಾಡಿಸಬೇಕಾಗುತ್ತದೆ.”

“ಖುಲಾಹ್ ನಿಬಂಧನೆಗಳು ಎಷ್ಟು ಸರಳವಾಗಿದ್ದರೂ, ಯಾಕೆ ಮಹಿಳೆಯರು ಖುಲಾ ನೀಡುವುದೇ ಇಲ್ಲವಲ್ಲ?” ಎಂದು ಸಾರಾ ಕ್ಷಣ ಕಾಲ ಯೋಚಿಸುತ್ತಿರುವಾಗಲೇ ಅವಳಿಗೆ ಗೆಳತಿಯೊಬ್ಬಳಿಂದ ಪ್ರವಾದಿ ಮಹಮ್ಮದರ ಕಾಲದಲ್ಲಿ ನಡೆದ ಖುಲಾಹ್ ಪ್ರಸಂಗ ಹೇಳಿದ್ದು ನೆನಪಾಗುತ್ತದೆ. ಅದೇನೆಂದರೆ ಪ್ರವಾದಿಯವರ ಕಾಲದಲ್ಲಿ ‘ತಾಬಿತ್ ಇಬ್ನ ಕೈಸ್’ ಅವರ ಪತ್ನಿಯು ಪ್ರವಾದಿಗಳ ಬಳಿ ಬಂದು ತನಗೆ ಪತಿಯಿಂದ ಖುಲಾಹ್ ಕೊಡಿಸಿ ಎಂದು ಭಿನ್ನವಿಸುತ್ತಾಳೆ. ಆಗ ಪ್ರವಾದಿಗಳು
‘ಅವರು ಮೆಹರ್‌ನಲ್ಲಿ ನಿನಗೆ ಏನನ್ನು ನೀಡಿದ್ದರು’ ಎಂದು ಕೇಳುತ್ತಾರೆ. ಆಗ ಅವಳು
“ಒಂದು ಹಣ್ಣಿನ ತೋಟವನ್ನು” ಎನ್ನುತ್ತಾಳೆ. ಆಗ ಪ್ರವಾದಿಗಳು ಕೇಳುತ್ತಾರೆ
“ನೀನು ನಿನ್ನ ಪತಿ ನಿನಗೆ ನೀಡಿದ್ದ ಹಣ್ಣಿನ ತೋಟವನ್ನು ಹಿಂತಿರುಗಿಸಲು ಸಿದ್ಧಳಿರುವೆಯಾ?”ಎಂದಾಗ ಅವಳು
“ಹಾಗೆ ಆಗಲಿ” ಎನ್ನುತ್ತಾಳೆ. ಆಗ ಪೈಗಂಬರರು ಅವಳಿಗೆ ಹೇಳುತ್ತಾರೆ.

“ಹೋಗು ಇಂದಿನಿಂದ ನೀನು ಈ ಮದುವೆಯ ಬಂಧದಿಂದ ಬಿಡುಗಡೆಗೊಂಡಿರುವೆ. ನಿನಗೆ ‘ಖುಲಾ’ ಸಿಕ್ಕಿದೆ.” ಎನ್ನುತ್ತಾರೆ. ಪ್ರವಾದಿಗಳು ತಮ್ಮ ಅನುಯಾಯಿಗಳಿಗೆ ಹೇಳುತ್ತಾರೆ.

“ಒಬ್ಬ ಪುರುಷ ವಿಚ್ಛೇದನವನ್ನು ನೀಡುವುದಾದರೆ ಆತ ಖಾಜಿಯ ಬಳಿ ಕಾರಣವನ್ನು ಕೇಳಬೇಕು. ಆದರೆ ಒಬ್ಬ ಮಹಿಳೆಯು ಖುಲಾಹ್ ಬಯಸಿದರೆ ಮತ್ತು ಕಾರಣವನ್ನು ಬಹಿರಂಗಪಡಿಸಲು ಬಯಸದಿದ್ದರೆ, ಖಾಜಿಯು ಅದಕ್ಕಾಗಿ ಅವಳಿಗೆ ಬಲವಂತ ಪಡಿಸುವಂತಿಲ್ಲ. ಆಕೆಗೆ ಗೌರವದಿಂದ ಖುಲಾಹ್ ನೀಡಿ, ಅದನ್ನು ಘೋಷಿಸಬೇಕು” ಎಂದು ಹೇಳುತ್ತಾರೆ.

ಹೌದಲ್ಲವೇ ಪೈಗಂಬರರು ಖುಲಾಹ್‌ನ ವಿಧಿಗಳನ್ನು ಎಷ್ಟೊಂದು ಸರಳವಾಗಿಸಿದ್ದಾರೆ. ಅದನ್ನು ಪ್ರಚಲಿತ ಸಮಾಜ ಸಿಕ್ಕಾಗಿಸಿರುವುದನ್ನು ಕಂಡು ಸಾರಾ ಬೇಸರ ಪಟ್ಟುಕೊಳ್ಳುತ್ತಾಳೆ.

“ಈಗ ಮುಂದೇನು?” ಎಂಬುದು ಅವಳ ಮುಂದೆ ಇರುವ ಬೆಟ್ಟದಂತಹ ಸಮಸ್ಯೆಯಾಗಿದೆ.

“ನಾನು ಸ್ವಲ್ಪ ಹೊರಗೆ ಹೋಗಿ ಬರುವೆ ಮಗಳೇ” ಎಂದು ಅಮ್ಮ ಹೇಳಿದಳು. ಖಿನ್ನಳಾಗಿ ಕೂತಿದ್ದ ಸಾರಾ ಕುಡಿದ ಚಹಾದ ಕಪ್ಪು ಒಣಗಿ ಹೋಗಿತ್ತು. ಅವಳು “ಆಗಲಿ” ಎಂದು ಗೋಣು ಅಲ್ಲಾಡಿಸಿದಳು. ಅವಳು ಹೊರಗೆ ಬಂದವಳೇ ಅಟೋ ಹತ್ತಿ ಅಳಿಯನ ಮನೆಗೆ ಹೊರಟಳು. ಅಂಗಳದಲ್ಲಿಯೇ ಕುಳಿತಿದ್ದ ಬೀಗತಿಯನ್ನು ಕಂಡು “ಸಲಾಂ” ಹೇಳಿ ಕುಳಿತುಕೊಂಡಳು. ಅಳಿಯ ಮಗಳ ವಿಷಯವೇನೆಂದು ಬೀಗತ್ತಿಗೆ ಕೇಳಿದಳು. ಅವಳ ಅತ್ತೆಯೇ ಹೇಳಿದಳು “ನನ್ನ ಮಗನದೇ ತಪ್ಪು ನನ್ನ ಸೊಸೆಯದು ಏನೂ ತಪ್ಪಿಲ್ಲ” ಎಂದಳು. ಎಲ್ಲ ವಿಷಯಗಳನ್ನು ಅವರ ಬಾಯಿಯಿಂದ ತಿಳಿದುಕೊಂಡಳು. ಒಳಗಿಂದ ಚಹಾ ತಂದು ಕುಡಿಸಿ ಬೀಗತ್ತಿಯನ್ನು ಬಿಳ್ಕೋಟ್ಟಳು ಮೆಹರುನ್ನಿಸಾ. ಅಮ್ಮ ಲಗುಬಗೆಯಿಂದ ಮನೆಗೆ ಬಂದವಳೇ ನನ್ನೊಂದಿಗೆ ಲೋಕಾರೂಢಿ ಮಾತಾಡುತ್ತಾ ಕೇಳುತ್ತಾಳೆ.

“ಸಾರಾ ಮುಂದೇನು ಮಾಡುವುದೆಂದು ಯೋಚನೆ ಮಾಡಿರುವೆ ಮಗಳೇ. ಜುಬೇರನನ್ನು ಕ್ಷಮಿಸಿ ಅವನ ಮನೆಗೆ ಮರಳುವೆಯಾ?. ಇಲ್ಲವೇ ಅವನಿಂದ “ಖುಲಾ” ಪಡೆಯುವಿಯಾ? ನಿನ್ನ ಮುಂದಿರುವುದು ಇವೆರಡೇ ಆಯ್ಕೆಗಳು” ಎಂದಾಗ ಸಾರಾ
“ಹೌದಮ್ಮ” ಎನ್ನುತ್ತಾಳೆ.

ಅಮ್ಮ ಮರುದಿನ ಜಮಾತಿನವರನ್ನು ಖಾಜಿಯವರನ್ನೂ, ಅಳಿಯನನ್ನೂ ಜಮಾತಿನ ಕಟ್ಟೆಗೆ ಕರೆಯಿಸುತ್ತಾಳೆ. ಬೆಳಿಗ್ಗೆ ಹನ್ನೊಂದು ಗಂಟೆಯ ಸಮಯಕ್ಕೆ ಸರಿಯಾಗಿ ಎಲ್ಲರೂ ಸೇರಿರುತ್ತಾರೆ. ಬೀಗತ್ತಿಯೂ ಮಗನನ್ನು ಕರೆದುಕೊಂಡು ಬರುತ್ತಾಳೆ. ಖಾಜಿಯವರು ಇಬ್ಬರ ಮಾತುಗಳನ್ನೂ ಕೇಳಿಸಿಕೊಳ್ಳುತ್ತಾರೆ. ನಂತರ ಸಾರಾಳ ಕಡೆ ಕೇಳುತ್ತಾರೆ.

“ಏನಮ್ಮ ನಿನಗೆ ಖುಲಾಹ್ ಬೇಕೇ ಅಥವಾ ಅವನೊಂದಿಗೇ ಬಾಳ್ವೇ ಮಾಡಿಕೊಂಡು ಹೋಗುತ್ತಿಯೋ. ಎರಡು ಮಕ್ಕಳಿದ್ದಾರೆ. ಯೋಚಿಸಿ ಹೇಳು”

“ಸಾಹೇಬರೇ ನನಗೆ ಖುಲಾಹ್ ನೀಡಿರಿ”

“ನೀನು ಅವನು ನೀಡಿದ ಮೆಹರನ್ನು ವಾಪಸ್ಸು ಕೊಡುವೆಯಾ?” ಎಂದಾಗ

“ಮೆಹರನಲ್ಲಿ ಅವನು ನನಗೆ ನೀಡಿದ ನಾಲ್ಕು ಬಂಗಾರದ ಬಳೆಗಳನ್ನು ಅವರೇ ತಮ್ಮ ವ್ಯವಹಾರಕ್ಕಾಗಿ ಒಯ್ದು ಗಿರಿವಿ ಇಟ್ಟಿದ್ದಾರೆ. ಆ ಬಳೆಗಳೀಗ ನನ್ನ ಬಳಿ ಇಲ್ಲ ಸಾಹೇಬರೇ”

“ಜುಬೇರ್ ಈ ಮಾತು ನಿಜವೇನಪ್ಪ” ಎಂದು ಖಾಜಿಗಳು ಕೇಳಿದ್ದಕ್ಕೆ ಜುಬೇರ್ ಹೌದೆಂದು ತಲೆ ಅಲ್ಲಾಡಿಸುತ್ತಾನೆ.

“ಹಾಗಾದರೆ ಸಾರಾಳ ಖುಲಾವನ್ನು ನೀನು ಒಪ್ಪಿಕೊಳ್ಳಬೇಕು. ನಿನ್ನ ಮಕ್ಕಳಿಗೆ ಏಳು ವರ್ಷಗಳಾಗುವವರೆಗೂ ಅವರ ಜವಾಬ್ದಾಗಳನ್ನು ನಿರ್ವಹಿಸಬೇಕು. ಅಲ್ಲಿಯವರೆಗೂ ಮಕ್ಕಳು ತಾಯಿಯ ಬಳಿಯೇ ಇರುತ್ತಾರೆ. ಅನಂತರ ಮಕ್ಕಳು ತಾವು ಯಾರ ಬಳಿಯಿರುವುದೆಂದು ಅವರೇ ನಿರ್ಧರಿಸಲಿ. ಇಂದಿನಿಂದ ಸಾರಮ್ಮ ನಿನಗೆ ಖುಲಾಹ್ ದೊರಕಿದೆ ಹೋಗು” ಎನ್ನುತ್ತಾರೆ.

ಜಮಾತ್ ಅಲ್ಲಿಗೇ ಬರಖಾಸ್ತ್ ಆಗುತ್ತದೆ. ಸಾರಾ ಅಮ್ಮನೊಂದಿಗೆ ಮಕ್ಕಳನ್ನು ಕರೆದುಕೊಂಡು ಭಾರವಾದ ಹೃದಯದಿಂದ ಕಾಲೆಳೆದುಕೊಂಡು ಶೂನ್ಯ ಭಾವದಿಂದ ತಾಯಿ ಮನೆಗೆ ಬರುತ್ತಾಳೆ. ಹಿಂದೆಯೇ ಮನೆಗೆ ಬಂದ ಜುಬೇರ್ ಗಲಾಟೆ ಮಾಡುತ್ತಾನೆ. “ನನಗೆ ಬಿಟ್ಟು ಯಾವನಿಗೆ ಹುಡ್ಕೋಂಡಿದಿಯಾ ಹೇಳು?” ಎಂದು ಗದ್ದಲ ಮಾಡುತ್ತಿರುವಾಗ ಅಕ್ಕ ಪಕ್ಕದ ಜನರೆಲ್ಲ ಸೇರುತ್ತಾರೆ. ಜುಬೇರ್ ಕಂಠಪೂರ್ತಿ ಕುಡಿದು ಬಂದಿದ್ದ. ನಿಲ್ಲಲೂ ಆಗದೇ ವಾಲಾಡುತ್ತಿದ್ದ.

“ಎಷ್ಟೇ ಪೋಗರು ನಿನಗೆ? ನೀನು ನನಗೆ ಖುಲಾ ಕೊಡ್ತಿಯಾ ಹೆಣ್ಣು ಹೆಂಗ್ಸೆ. ನನ್ನ ಕಾಲಿನ ಚಪ್ಪಲಿಗೆ ಸಮ ನೀನು? ನಾನೇ ನಿನಗೆ ತಲ್ಲಾಖ್ ನೀಡತ್ತೇನೆ. ತಗೋ ಬೇವರ್ಸಿ ಮುಂಡೆ, ಛಿನಾಲ್” ಎಂದು ಮನಸೋ ಇಚ್ಚೇ ಬಯ್ಯುತ್ತಿರುವಾಗ ಸಾರಾ ಹೊರಗೆ ಬಂದು ಹೇಳುತ್ತಾಳೆ-
“ನಿನಗೆ ತಲ್ಲಾಖ್ ಕೊಡೋ ಯೊಗ್ಯತೆಯೆಲ್ಲಿದೆ? ನಾನೇ ನಿನಗೆ ಖುಲಾಹ್ ನೀಡಿರುವೆ ಬಾಯಿ ಮುಚ್ಚಿಕೊಂಡು ಹೋಗು” ಎಂದು ಗದರಿಸಿ ಧಡಾರ್ ಎಂದು ಬಾಗಿಲು ಹಾಕಿಕೊಂಡು ಒಳನಡೆದಳು. ಮರುದಿನದಿಂದ ಅಮ್ಮ ಮಗನನ್ನು ನೋಡಿಕೊಳ್ಳುತ್ತಿದ್ದರು. ಶಬನಮ್ ಕಾಲೇಜಿಗೆ ಹೋಗಲು ಆರಂಭಿಸಿದಳು. ನಾನು ಟೇಲರಿಂಗ್ ಸೆಂಟರ್‌ಗೆ ಹೋಗುವಾಗ ಮಗಳಿಗೆ ಶಾಲೆಗೆ ಬಿಟ್ಟು ನನ್ನ ಕೆಲಸಕ್ಕೆ ಹೋಗಲು ಶುರುಮಾಡಿದೆ. ಬರುವಾಗ ಮಗಳನ್ನೂ ಕರೆದುಕೊಂಡು ಬರುತ್ತಿದ್ದೆ. ಪ್ರತಿ ದಿನದ ಗಂಡನ ಹಿಂಸೆಯಿಂದ ಬಿಡುಗಡೆಗೊಂಡು ಮನಸ್ಸು ಹಗುರವಾದಂತೆನಿಸಿತು. ನೀಲ ಆಕಾಶ ನೋಡುತ್ತ ಮನದ ತಲ್ಲಣದ ನಿಟ್ಟುಸಿರು ಹೊರಗೆ ದಾಟಿಸುತ್ತ, ನಿರಾಳವಾಗುತ್ತ, ಹಗುರವಾದಂತೆನಿಸಿ, ಲಗುಬಗೆಯಿಂದ ಕೆಲಸಕ್ಕೆ ಹೊರಟು ನಿಂತಳು.