ಇಬ್ಬರು ಸಂಭಾವಿತರು
ಅವಳಿರುತ್ತಾಳೆ ಪ್ರತಿದಿನ
ಬಹುತೇಕ ಬಾರಿ ಅದೇ ಸೀಟಿನಲ್ಲಿ
ಹತ್ತಿಳಿಯುವುದು ಅವನದೇ ಸ್ಟಾಪಿನಲ್ಲಿ
ಹೊರತೆಗೆದು ಫೋನನ್ನು
ಏನೋ ನೋಡುವ ಇವನ ನಟನೆ
ಕೂಡ ಮುಗ್ಗರಿಸುತ್ತದೆ
ಫೋನಿನ ಸ್ಕ್ರೀನನ್ನು ಮೀರಿ
ಅವಳೆಡೆಗೆ ಹರಿಸುವ ನೋಟದಲ್ಲಿ
ಅವಳೂ ನೋಡುತ್ತಾಳೆ
ಅತ್ತಿತ್ತ ಸರಿದು ಕೂರುತ್ತಾಳೆ
ಮಾಟವಾಗಿ ಕಾಣುತ್ತಾಳೆ
ಮನಸೆಲ್ಲ ತುಂಬಿ
ಸುತ್ತಲಿನ ಗದ್ದಲ, ನೂಕಾಟ
ಹತ್ತಿ ಇಳಿಯುವಾಟಗಳ ನಡುವೆ
ಮನದ ಜೋಕಾಲಿ ತೂಗಿ
ಇಬ್ಬರೂ ಆರಿಸಿಕೊಳ್ಳುತ್ತಾರೆ
ಬ್ಯಾಗಿಗೂ, ಜೇಬಿಗೂ ತುಂಬಿಕೊಳ್ಳುತ್ತಾರೆ
ಹಾರಿಸುವ ಕುಡಿನೋಟಗಳ ಹೆಕ್ಕಿ
ಅವಳು ಕಿರುನಗುತ್ತಾಳೆ
ಇವನು ಹಗುರ ತೇಲುತ್ತಾನೆ
ಪರಿಚಯದ ಹಂಗಿಲ್ಲ
ಧನ್ಯವಾದಗಳ ಭಾರವಿಲ್ಲ
ಇಬ್ಬರೂ ನಡೆಯುತ್ತಾರೆ ವಿರುದ್ಧ ದಿಕ್ಕಿನಲ್ಲಿ
ಸಂಜೆಗೆ ಮತ್ತೆ ಸೇರುವ ಗುಂಗಿನಲ್ಲಿ
ವರ್ಷಗಳು ಹಾರುತ್ತವೆ
ಒಬ್ಬರಿಗೊಬ್ಬರು ಆಭಾರಿಗಳು
ಲೇಖಕಿ ಮತ್ತು ದಂತವೈದ್ಯೆ. ಮೂಲತಃ ತುಮಕೂರಿನವರು. ಕಳೆದ ಹದಿನೈದು ವರ್ಷಗಳಿಂದ ಇಂಗ್ಲೆಂಡ್ ನಿವಾಸಿ. ಬಾಲಕಿಯಾಗಿರುವಾಗಲೇ ಬರೆಯಲು ತೊಡಗಿದ್ದವರು ಈಗ ಇಂಗ್ಲೆಂಡಿನ ಕನ್ನಡಕೂಟಗಳ ಒಡನಾಟದಲ್ಲಿ ಮತ್ತೆ ಬರವಣಿಗೆ ಮುಂದುವರೆಸಿದ್ದಾರೆ.