ಅಬ್ದುಲ್ ಕರೀಂಖಾನ್
ನಾನು ಶಿವಮೊಗ್ಗೆಯಲ್ಲಿದ್ದಾಗ, ಅಲ್ಲಿ ಏರ್ಪಡುತ್ತಿದ್ದ ಹಿಂದೂಸ್ಥಾನಿ ಸಂಗೀತದ ಸಭೆಗಳಿಗೆ ಹೋಗುತ್ತಿದ್ದೆ. ಹರಿಪ್ರಸಾದ್ ಚೌರಾಸಿಯಾ, ವಿ.ಜಿ. ಜೋಗ್, ಪರ್ವೀನ್ ಸುಲ್ತಾನಾ, ರಸಿಕಲಾಲ್ ಕಂಧಾರಿಯಾ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಭೀಮಸೇನ ಜೋಶಿ ಮುಂತಾದವರನ್ನು ನಾನು ಕೇಳಿದ್ದು ಅಲ್ಲೇ. ಒಮ್ಮೆ ಗಂಗೂಬಾಯಿಯವರೂ ಬಂದು ಕಛೇರಿ ಕೊಟ್ಟಿದ್ದರು. ಹಿಂದೂಸ್ಥಾನಿ ಸಂಗೀತದ ರುಚಿ ಸಿಕ್ಕ ಬಳಿಕ, ಬೇರೆಬೇರೆ ಗಾಯಕರನ್ನು ಹುಡುಹುಡುಕಿ ಕೇಳತೊಡಗಿದೆ. ಕಡೆಗೆ ನನ್ನನ್ನು ಸಮ್ಮೋಹಗೊಳಿಸಿದ್ದು, ನಾನೆಂದೂ ಮುಖತಃ ನೋಡದ ಶಿವಪುತ್ರಪ್ಪ ಕೊಂಕಾಳಿಮಠ ಉರುಫ್ ಕುಮಾರ ಗಂಧರ್ವರದು. ಬೆಳಗಾವಿಯಿಂದ ಮಧ್ಯಪ್ರದೇಶದ ಮಾಳ್ವಾ ಸೀಮೆಗೆ ಹೋಗಿ, ಅಲ್ಲಿನ ಜನಪದ ಸಂಗೀತ ಮತ್ತು ಕಬೀರ್ ಹಾಡುಪರಂಪರೆಯೊಡನೆ ಹಿಂದೂಸ್ತಾನಿ ಸಂಗೀತವನ್ನು ಕಸಿಮಾಡಿದ ಅವರು ಹಾಡುತ್ತಿದ್ದರೆ ಭಾವವು ನರನಾಡಿಗಳನ್ನೆಲ್ಲಾ ಆವರಿಸಿಕೊಳ್ಳುತ್ತದೆ. ಆದರೆ ಯಾಕೊ ಏನೊ ಗಂಗೂಬಾಯಿಯವರ ಹಾಡುಗಾರಿಕೆಯಲ್ಲಿ ತಲ್ಲೀನನಾಗಲು ನನಗೆ ಸಾಧ್ಯವಾಗಲೇ ಇಲ್ಲ. ಅವರು ಧ್ವನಿಬದಲಾವಣೆಯಾಗುವ ಮುನ್ನ ಹಾಡಿರುವ ಸಂಗೀತವನ್ನು ಕೇಳಿರದ ಕಾರಣದಿಂದಲೂ ಹೀಗಾಗಿರಬಹುದು. ಆ ಗಡಸು ದನಿಯಲ್ಲಿ ಸಂಗೀತದ ಶಾಸ್ತ್ರವಿದ್ದೀತು. ನನ್ನನ್ನು ಅನುಭವವಾಗಿ ಅದು ತನ್ಮಯಗೊಳಿಸಲಿಲ್ಲ. ಆದರೆ ಸಾಮಾನ್ಯ ಬೆಸ್ತರ ಮನೆತನದಲ್ಲಿ ಹುಟ್ಟಿದ ಅವರು ಭಾರತದ ದೊಡ್ಡ ವಿದುಷಿಯಾಗಲು ಮಾಡಿದ ಸಾಧನೆ ಮಾತ್ರ ನನಗೆ ಆದರ ಹುಟ್ಟಿಸುತ್ತದೆ.
ಕಳೆದ ತಿಂಗಳು, ಧಾರವಾಡಕ್ಕೆ ಹೋಗಿದ್ದಾಗ, ಯಾಕೋ ಏನೊ ಅವರನ್ನು ನೋಡಬೇಕು, ಅವರ ಜತೆ ಮಾತಾಡಬೇಕು ಅನಿಸಿತು. ಗಂಗೂಬಾಯಿಯವರನ್ನು ಹುಬ್ಬಳ್ಳಿಯ ಅವರ ಮನೆಯಲ್ಲಿ ಭೇಟಿಯಾದೆ.
ಗಂಗೂಬಾಯಿಯವರು ಹುಬ್ಬಳ್ಳಿಯಲ್ಲಿ ಪ್ರತಿವರ್ಷ ಕಿರಾಣೆ ಘರಾಣೆಯ ದೊಡ್ಡ ಗಾಯಕರಾದ ಉಸ್ತಾದ್ ಅಬ್ದುಲ್ ಕರೀಂಖಾನ್ ಮೀರಜಕರ್ ಅವರ ಪುಣ್ಯತಿಥಿಯನ್ನು ಆಚರಿಸುತ್ತಾರೆ. ಎಲ್ಲರಿಗೂ ತಿಳಿದಿರುವಂತೆ, ಕರೀಂಖಾನರು ಅವರ ಗುರುಗಳಾದ ಕುಂದಗೋಳದ ಸವಾಯಿ ಗಂಧರ್ವರ ಗುರುಗಳು. ಅಬ್ದುಲ್ ಕರೀಂ ಖಾನರು ವರಿಸಿದ್ದು ಬರೋಡೆಯ ರಾಜವಂಶದ ಹೆಣ್ಣನ್ನು. ಅವರ ಹೊಟ್ಟೆಯಲ್ಲಿ ಹುಟ್ಟಿದ ಇಬ್ಬರು ಮಕ್ಕಳು, ಸುರೇಶ್ ಮಾನೆ ಮತ್ತು ಹೀರಾಬಾಯಿ ಬಡೋದೆಕರ್, ಇಬ್ಬರೂ ಗಂಗೂಬಾಯಿಯವರ ಸಮಕಾಲೀನರು ಮತ್ತು ದೊಡ್ಡ ಹಿಂದೂಸ್ಥಾನಿ ಗಾಯಕರು. ಹಿಂದೂಸ್ಥಾನಿ ಸಂಗೀತದಲ್ಲಿ ಗುರುಶಿಷ್ಯರ ಪರಂಪರೆಯನ್ನಾಗಲಿ, ವಿವಾಹ ಸಂಬಂಧಗಳನ್ನಾಗಲಿ ಜಾತಿಧರ್ಮದ ಹೆಸರಲ್ಲಿ ನೋಡಲು ಸಾಧ್ಯವೇ ಇಲ್ಲ. ಹಾಗೆ ಧರ್ಮಾತೀತವಾದ ಸಂಬಂಧಗಳು ಅಲ್ಲಿ ಬಳ್ಳಿಯಂತೆ ಹಬ್ಬಿ ಹರಡಿವೆ. ಇಂತಹ ಪರಂಪರೆಯಲ್ಲಿ ಬಂದ ಗಂಗಜ್ಜಿ, ಮತಧರ್ಮದ ಹೆಸರಲ್ಲಿ ಆಗಾಗ್ಗೆ ಹಿಂಸೆಯನ್ನು ಸೃಷ್ಟಿಸಿಕೊಳ್ಳುವ ಕರ್ನಾಟಕದ ಊರುಗಳಲ್ಲಿ ಒಂದಾದ ಹುಬ್ಬಳ್ಳಿಯಲ್ಲಿ ಇದ್ದರು. ಇದೆಲ್ಲ ತಪ್ಪು ಎಂದು ಅವರಿಗೆ ಅನಿಸಿರಬಹುದೇ? ತಪ್ಪು ಎಂದು ಸಾರ್ವಜನಿಕವಾಗಿ ಹೇಳಿದರೇ? ಅಥವಾ ಕಲಾವಿದರಾದ ತಮಗೆ ಈ ದೈನಿಕ ರಾಜಕಾರಣದೊಳಗೆ ತಲೆಹಾಕಬೇಕಿಲ್ಲ ಅನಿಸಿತೇ? ಅಂತಹವರ ಮಾತನ್ನು ಕೇಳುವ ತಾಳ್ಮೆ ನಮ್ಮ ಸಾರ್ವಜನಿಕ ಬದುಕು ಇದೆಯೇ? ಹೀಗೆಲ್ಲ ಆಲೋಚನೆ ಬರುತ್ತಿತ್ತು. ಅದರಲ್ಲೂ ಅವರ ಮನೆಯಲ್ಲೇ ಇರುವ ರಾಜಕೀಯ ಪಕ್ಷವೊಂದರ ಮುಖಂಡರೂ ಆಗಿರುವ ಅವರ ಮೊಮ್ಮಗ ಶ್ರೀ. ಮನೋಜ್ ಅವರು ಅಜ್ಜಿಯ ಜತೆ ಸೇರಿ ಕರೀಂಖಾನರ ಪುಣ್ಯತಿಥಿ ಆಚರಿಸುವುದು ನನಗೆ ಕುತೂಹಲ ಉಂಟುಮಾಡುತ್ತಿತ್ತು. ಮತಾತೀತವಾದ ಸಂಗೀತ, ಮತದ ಲೆಕ್ಕಾಚಾರದ ರಾಜಕಾರಣ ಹೇಗೆ ಒಂದೇ ಸೂರಿನಡಿ ಜೀವಿಸುತ್ತಿವೆ ಎಂಬುದು ಸೋಜಿಗ ತರುತ್ತಿತ್ತು.
ಗಂಗಜ್ಜಿಯವರ ಜತೆ ಮಾತಾಡುವುದು ನನ್ನ ಬಲುದಿನದ ಆಸೆಯಾಗಿತ್ತು. ನನಗೆ ಮುಖ್ಯವಾಗಿ ಅವರ ಹೆಸರಲ್ಲಿರುವ ಸಂಗೀತದ ಮ್ಯೂಸಿಯಂ ನೋಡಬೇಕಿತ್ತು. ಸಾಧ್ಯವಾದರೆ, ನಾನು ಸಂಶೋಧನೆ ಮಾಡುತ್ತಿರುವ ಅವರ ಸಮಕಾಲೀನರಾದ ಬೀಳಗಿ ಮೂಲದ ರಂಗನಟಿ, ಸಿನಿಮಾ ಗಾಯಕಿ ಅಮೀರಬಾಯಿ ಕರ್ನಾಟಕಿ ಕುರಿತಂತೆ ಗಂಗಜ್ಜಿಯ ನೆನಪುಗಳನ್ನು ಕೆದಕಬೇಕಿತ್ತು. ಗಂಗಜ್ಜಿಗೆ ಸಿಹಿ ಎಂದರೆ ಬಹಳ ಇಷ್ಟವೆಂದು ಅವರನ್ನು ಬಲ್ಲ ಸ್ನೇಹಿತರೊಬ್ಬರು ಹೇಳಿದ್ದರು. ಧಾರವಾಡದ ಪೇಡೆ ಕಟ್ಟಿಸಿಕೊಂಡು, ಪತ್ರಕರ್ತ ಮಿತ್ರನಾದ ಡಾ. ಗಣೇಶ್ ಅಮೀನಗಢ ಅವರ ಮೂಲಕ ಸಮಯ ಗೊತ್ತುಮಾಡಿಕೊಂಡು, ಒಂದು ಬೆಳಿಗ್ಗೆ ಹೋದೆ.
ಮನೆತುಂಬ ಜನರಿದ್ದರು. ಅದರಲ್ಲೂ ಗಂಗೂಬಾಯಿಯವರ ಮೊಮ್ಮಗಳು ಮುಂಬೈನಿಂದ ತಮ್ಮ ಮಕ್ಕಳ ಜತೆ ಬಂದಿದ್ದರು. ಅವರು ನಮಗೆ ಕುಡಿಯಲು ಟೀ ಕೊಟ್ಟು, ಕೊಂಚ ಹೊತ್ತು ಕಾಯಲು ಹೇಳಿದರು. ಅಲ್ಲಿಯ ತನಕ ಗಂಗಜ್ಜಿಯ ಹೆಸರಲ್ಲಿ ಮನೋಜ್ ಹಾನಗಲ್ ರೂಪಿಸಿರುವ ಮ್ಯೂಸಿಯಂ ನೋಡತೊಡಗಿದೆ. ಅದೊಂದು ಅಪೂರ್ವ ಮ್ಯೂಸಿಯಂ. ಅದರಲ್ಲಿ ಗಂಗೂಬಾಯಿಯವರ ಪ್ರಾಯದಿಂದ ಹಿಡಿದು ಮುಪ್ಪಿನ ತನಕದ ಫೋಟೊಗಳಿವೆ. ಅವರಿಗೆ ಬಂದಿರುವ ಪ್ರಶಸ್ತಿ ಫಲಕಗಳಿವೆ. ಅವರು ಬೇರೆಬೇರೆ ಗಣ್ಯರ ಜತೆ ಅಥವಾ ಗಣ್ಯರೇ ಇವರ ಜತೆ ನಿಂತು ತೆಗೆಸಿಕೊಂಡಿರುವ ಚಿತ್ರಗಳಿವೆ. ಇವುಗಳಲ್ಲಿ ನನಗೆ ಇಷ್ಟವಾಗಿದ್ದು ಎರಡು ವಿಭಾಗಗಳು.
೧. ಸಂಗೀತ ವಾದ್ಯಗಳ ವಿಭಾಗ. ಎಷ್ಟು ಬಗೆಯ ಪೇಠಿಗಳು, ಏಕತಾರಿಗಳು, ಆರ್ಗನ್ಗಳು, ತಂಬೂರಿಗಳು, ಜಲತರಂಗಗಳು, ತಬಲಾಗಳು! ನಾನು ಕಂಡಿರುವ ಸಂಗೀತ ವಾದ್ಯಗಳ ಅದ್ಭುತ ಸಂಗ್ರಹವೆಂದರೆ, ದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಮ್ಯೂಸಿಯಂ. ಅದು ಬಿಟ್ಟರೆ ಇದುವೇ. ಚರ್ಮ ಕಬ್ಬಿಣ, ಮರ, ಹೀಗೆ ನಾನಾ ತರಹದ ಧಾತುಗಳಿಂದ ಮಾಡಲ್ಪಟ್ಟಿರುವ ಹಲವು ವಾದ್ಯಗಳು, ನುಡಿಸುವ ಬೆರಳುಗಳಿಂದ ಬೇರ್ಪಟ್ಟು ಹಾಗೇ ಸುಮ್ಮನೆ ಕುಳಿತಿದ್ದವು.
೨. ಭಾರತದ ಹಿಂದೂಸ್ಥಾನಿ ಸಂಗೀತಗಾರರ ಫೋಟೊ ವಿಭಾಗ. ಇದೊಂದು ಎಲ್ಲ ಧರ್ಮದ ಎಲ್ಲ ಪ್ರಾಂತ್ಯಗಳಿಂದ ಬಂದಿರುವ ಸಂಗೀತಗಾರರ ದೊಡ್ಡಮೇಳ. ಇದನ್ನು ನೋಡುವಾಗ ಹಿಂದೂಸ್ಥಾನಿ ಸಂಗೀತದ ಪರಂಪರೆಯು ಭಾರತೀಯ ಸಂಸ್ಕೃತಿ ಸೃಷ್ಟಿಸಿರುವ ಅಪೂರ್ವ ಸಂಕರ ಕಲೆಗಳಲ್ಲಿ ಒಂದು ಎಂದು ಅನಿಸುತ್ತದೆ. ಅಲ್ಲಿ ‘ಮುಸ್ಲಿಂ’ ಎಂದು ಕರೆಯಬಹುದಾದ ಸಂಗೀತಗಾರರೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಾಂಪ್ರದಾಯಕವಾಗಿ ಇಸ್ಲಾಂ ಸಂಗೀತ ನಿಷೇಧಿಸುತ್ತದೆ. ಆದರೆ ಭಾರತದ ಮುಸ್ಲಿಮರು ಈ ನಿಷೇಧವನ್ನು ಮುರಿದು, ಅಮೀರ ಖುಸ್ರೂನಿಂದ ಹಿಡಿದು ಬಿಸ್ಮಿಲ್ಲಾಖಾನರ ತನಕ ಅದನ್ನು ನುಡಿಸುತ್ತಲೇ ಬಂದರು. ಹಿಂದೂಸ್ಥಾನಿ ಸಂಗೀತಗಾರರಲ್ಲಿ ಯಾರೂ ವೈಯಕ್ತಿಕವಾಗಿ ತಂತಮ್ಮ ಧರ್ಮ ಬಿಟ್ಟವರಲ್ಲ. ಆದರೆ ಅದು ಎಳೆಯುವ ಲಕ್ಷ್ಮಣರೇಖೆಗಳನ್ನು ಉಲ್ಲಂಘಿಸಿ ಒಂದು ಕಲೆಯನ್ನು ನಿರ್ಮಿಸಿದರು. ಪ್ರತಿಯೊಂದು ವಾದ್ಯಕ್ಕೂ ತನ್ನದೇ ಆದ ನಾದವಿದೆ. ಆದರೆ ಅದು ಅಲಾಯದ ನಿಂತುಕೊಳ್ಳದೆ ಒಟ್ಟು ಸಂಗೀತದಲ್ಲಿ ಕರಗಿಹೋಗುತ್ತದೆ. ಎಲ್ಲ ವಾದ್ಯಗಳು ಒಬ್ಬ ಗಾಯಕನ ಸುತ್ತಮುತ್ತ ಕೂಡಿ, ಒಟ್ಟಾಗಿ ಒಂದು ಸಂಗೀತವನ್ನು ಸೃಷ್ಟಿಸುತ್ತವೆ.
ವಿಭಿನ್ನ ಹಿನ್ನೆಲೆಯಿಂದ ಬಂದವರು, ಒಂದೇ ಸಂಗೀತದಲ್ಲಿ ಬೆರೆತುಹೋಗಿದ್ದಾರೆ. ನಮ್ಮ ಸಮಾಜವನ್ನು ಕಟ್ಟುವ ಯಾವುದೊ ಒಂದು ಗುಟ್ಟು ಈ ಸಂಗೀತದಲ್ಲಿದೆ ಎಂದು ಯೋಚಿಸುತ್ತ, ಬಿಸ್ಲಿಲ್ಲಾಖಾನರನ್ನು ತಬ್ಬಿಕೊಂಡು ನಗುತ್ತಿರುವ ಗಂಗಜ್ಜಿಯ ಚಿತ್ರ ನೋಡುತ್ತ, ನಿಂತುಕೊಂಡಿದ್ದೆ.
ಅಷ್ಟರಲ್ಲಿ ಗಂಗೂಬಾಯಿಯವರು ಬಿಡುವಾಗಿದ್ದಾರೆ, ಈಗ ಭೇಟಿಯಾಗಬಹುದು ಎಂದು ಒಳಗಿಂದ ಕರೆಬಂದಿತು.
ಒಳಗೆ ಹೋದೆ. ಗಂಗಜ್ಜಿ ಒಂದು ಸಣ್ಣಖೋಲಿಯಲ್ಲಿ ಮಂಚದ ಮೇಲೆ ಮಲಗಿದ್ದರು. ದೇಹವು ಜರಾಜೀರ್ಣವಾಗಿತ್ತು. ಕೈಕಾಲು ಬತ್ತಿಹೋಗಿದ್ದವು. ಇನ್ನು ಸುಕ್ಕು ಮೂಡಲು ಜಾಗವೇ ಇಲ್ಲವೆಂಬಂತೆ ತೊಗಲಿನ ತುಂಬ ಮಡಿಕೆಗಳು. ಆದರೆ ಮೊಗದ ಕಾಂತಿ ಕೊಂಚವೂ ಅಲುಗಿರಲಿಲ್ಲ. ಸಿಹಿಯ ಪೊಟ್ಟಣ ಕೊಟ್ಟೆ. ಪಕ್ಕದಲ್ಲಿಟ್ಟುಕೊಂಡರು. ಬಳಿಕ ದಪ್ಪಗಾಜಿನ ಚಶ್ಮಾವನ್ನು ಮೂಗಿನ ಮೇಲೆ ಏರಿಸಿಕೊಂಡು ‘ಯಾರಪ್ಪ ನೀವು? ಎಲ್ಲಿಂದ ಬಂದಿರಿ?’ ಎಂದು ಪ್ರೀತಿಯಿಂದ ಕೇಳಿದರು. ನಾನು ನನ್ನ ಹೆಸರನ್ನು ಹೇಳಿದೆ. ‘ಅಡ್ಡಹೆಸರೇನು’ ಎಂದರು? ‘ ತರೀಕೆರೆ… ಕನ್ನಡ ವಿಶ್ವವಿದ್ಯಾಲಯದಿಂದ ಬಂದಿದ್ದೇನೆ’ ಎಂದೆ. ‘ಛಲೋ ಆತು ಬಂದದ್ದು. ಆದರ ನಿಮ್ಮ ವಿಶ್ವವಿದ್ಯಾಲಯದೊಳಗ ಮಳಿ ನನಗ ಕಛೇರಿ ಮಾಡಗೊಡಲಿಲ್ಲ’ ಎಂದರು. ಅವರ ತುಟಿಯಲ್ಲಿ ತುಂಟತನದ ನಗುವಿತ್ತು. ನನಗೆ ಅಜ್ಜಿಯ ನೆನಪಿನ ಶಕ್ತಿಯ ಬಗ್ಗೆ ಭೇಷ್ ಅನಿಸಿತು.
ಈ ಪ್ರಸಂಗ ನಡೆದಿದ್ದು ಹೀಗೆ. ೧೯೯೫. ಅದು ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕಾನ್ವೊಕೇಶನ್ ಸಮಾರಂಭ. ಅದರಲ್ಲಿ ಕುವೆಂಪು, ಎಸ್. ನಿಜಲಿಂಗಪ್ಪ ಹಾಗೂ ಗಂಗೂಬಾಯಿ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಗೌರವ ಪದವಿ ನಾಡೋಜ ನೀಡುವುದಿತ್ತು. ಅದರ ಹಿಂದಿನ ದಿನ, ಗಂಗೂಬಾಯಿಯವರ ಸಂಗೀತ-ಹಂಪಿಯ ಆನೆಲಾಯದ ಮೈದಾನದಲ್ಲಿ. ಮೇಲೆ ಶಾಮಿಯಾನ ಇಲ್ಲದ ಬಟಾಬಯಲು. ಇನ್ನೇನು ಅವರು ಎಡಗೈಯನ್ನು ಕಿವಿಗೆ ಹಚ್ಚಿ ‘ಹ್ಞಾಆಂ’ ಎಂದು ಸುರ್ ಹಚ್ಚಬೇಕು, ಅಷ್ಟರಲ್ಲಿ ದಪ್ಪದಪ್ಪ ಹನಿಗಳು ಆಗಸದಿಂದ ಬೀಳತೊಡಗಿದವು. ಒಂದು ಸಲ ಸುರ್ ಹಚ್ಚುವುದು, ಇನ್ನೊಂದು ಸಲ ‘ಮಳಿ ಬಂತೇನು?’ ಎಂದು ಪಕ್ಕದಲ್ಲಿದ್ದ ಮಗಳು ಕೃಷ್ಣಾಹಾನಗಲ್ಲರಿಗೆ ಕೇಳುವುದು ಹೀಗೇ ಸ್ವಲ್ಪ ಹೊತ್ತು ನಡೆಯಿತು. ಆದರೆ ಮಳೆ ಜೋರಾಯಿತು. ಅವರು ಎದ್ದು ಓಡಿಹೋಗಿ ಕಾರಿನೊಳಗೆ ಕೂತರು. ಕಛೇರಿ ರದ್ದಾಯಿತು. ಆದರೆ ಅಜ್ಜಿ ಬೇಸರಿಸದೆ, ‘ಬರಲಿ, ಮಳಿ ಬರಲಿ, ಸಂಗೀತ ಇನ್ನೊಮ್ಮೆ ಹಾಡಬಹುದು’ ಎಂದರು.
ಗಂಗಜ್ಜಿ ತಮ್ಮ ಶತಮಾನದ ನೆನಪುಗಳ ಭಂಡಾರಕ್ಕೆ ನುಗ್ಗಿ ಏನೇನನ್ನು ಹೆಕ್ಕಿ ತರುತ್ತಾ ಮಾತಾಡುತ್ತ ಹೋದರು. ಮಳೆಗಾಲದಲ್ಲಿ ಕರೆಂಟು ಬಂದುಹೋಗಿ ಮಾಡುವಂತೆ ನೆನಪು ಆಟವಾಡುತ್ತಿತ್ತು. ಏನೋ ಕೇಳಿದರೆ ಏನೋ ಹೇಳುತ್ತಿದ್ದರು. ಎಲ್ಲಿಂದಲೋ ಎಲ್ಲಿಗೊ ನೆಗೆತ. ಬೀಳಗಿಯ ಅಮೀರಬಾಯಿ ಕರ್ನಾಟಕಿಯವರ ಬಗ್ಗೆ ಕೇಳಿದೆ. ‘ಇಲ್ಲಪ್ಪ. ಗೊತ್ತಿಲ್ಲ. ಅವರು ನಾಟಕದೋರು. ಸಿನಿಮಾದೋರು. ಮುಂಬೈಗೆ ಹೋಗತಿದ್ದೆ. ಆದರ ಭೆಟ್ಟಿ ಆಗತಿದ್ದಿಲ್ಲ’ ಎಂದರು. ಅದೂ ಇದೂ ಮಾತಾಡುತ್ತ, ತಮ್ಮ ಮಗ್ಗುಲಿಗೆ ಇರುವ ಕಪ್ಪುಬೈಂಡಿನ ಒಂದು ನೋಟುಬುಕ್ಕು ತೆಗೆದು, ಹುಡುಕಿ, ದೇವನಾಗರಿಯಲ್ಲಿರುವ ಒಂದು ಮರಾಠಿ ರಚನೆ ಓದತೊಡಗಿದರು. ‘ಶಕ್ತಿಯಲ್ಲಿ ವಿಷ್ಣುದೊಡ್ಡವನು, ಜ್ಞಾನದಲ್ಲಿ ಮಹದೇವ ದೊಡ್ಡವನು. ನದಿಗಳಲ್ಲಿ ಗಂಗೆ ಶ್ರೇಷ್ಠಳು. ಮನುಷ್ಯರಲ್ಲಿ ಬ್ರಾಹ್ಮಣರು ಉತ್ತಮರು…’ ಎಂಬ ಅರ್ಥವುಳ್ಳ ರಚನೆಯದು. ಅದು ಸಮರ್ಥ ರಾಮದಾಸರ ರಚನೆಯೊ ಏನೊ? ಅದನ್ನೇಕೆ ಓದಿದರೊ ತಿಳಿಯದು. ಆದರೆ ಗಂಗಜ್ಜಿಗೆ ಕನ್ನಡದಷ್ಟೇ ಸಹಜವಾಗಿ ಮರಾಠಿಯ ಬಳಕೆಯಿರುವುದು ತಿಳಿಯಿತು. ಅವರು ಮುಂಬೈಗೆ ಹೋದಾಗ, ನಮ್ಮ ಮನೆಯ ಮಗಳು ಬಂದಳು ಎಂದು ಅಲ್ಲಿನ ಜನ ಅವರನ್ನು ಪ್ರೀತಿಸುತ್ತಿದ್ದರು. ಕನ್ನಡಿಗರ ಬಗ್ಗೆ ಕೊಂಚ ಅಸಡ್ಡೆಯಿರುವ ಮರಾಠಿಗರು ಗೌರವ ತಾಳುತ್ತಿದ್ದೇ ಈ ಸಂಗೀತಗಾರರಿಂದ. ಗಂಗಜ್ಜಿ ಇನ್ನೂ ಓದುತ್ತಿದ್ದರೇನೊ? ಇನ್ನೂ ಮಾತಾಡುತ್ತಿದ್ದರೇನೊ? ಅಷ್ಟರಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ಸಹಾಯಕಿಯೊಬ್ಬರು, ನಮ್ರವಾಗಿ ‘ಸಾರ್, ಅವರಿಗೆ ಜಾಸ್ತಿ ಮಾತಾಡಿದರೆ ಸುಸ್ತಾಗುತ್ತದೆ’ ಎಂದು ಎಚ್ಚ
ರಿಸಿದರು. ಇಷ್ಟು ಹೊತ್ತು ನಿರರ್ಗಳವಾಗಿ ಮಾತಾಡುತ್ತಿದ್ದ ಅಜ್ಜಿ ಕೂಡ ಮಗುವಿನಂತೆ ‘ಹೂನ್ರಪಾ ಸುಸ್ತಾಗ್ತದ’ ಎಂದಿತು. ಚಾಚಿದ ಅವರ ಕಾಲುಮುಟ್ಟಿ ನಮಸ್ಕರಿಸಿದೆ. ಅಜ್ಜಿ ತನ್ನ ಬಡಕಲು ಕೈಯನ್ನು ನನ್ನ ತಲೆಯ ಮೇಲಿಟ್ಟಿತು.
ಅವರಿಗೆ ಇನ್ನೂ ಏನೆಲ್ಲ ಮಾತಾಡುವುದಿತ್ತೋ? ನನಗಂತೂ ಇನ್ನೂ ಏನೇನೊ ಕೇಳಬೇಕಿತ್ತು. ಕಾಲ ಅಡ್ಡಬಂದಿತು. ಮಾತುಗಳು ಗಂಟಲಲ್ಲೇ ಉಳಿದವು.
[ಚಿತ್ರಗಳು-ಲೇಖಕರದು ]
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.