ಒಮ್ಮೆ ಧಾರವಾಡದ ಖ್ಯಾತ ವೈದ್ಯರೂ ಧ್ಯಾನಯೋಗದ ಸಾಧಕರೂ ಆದ ಡಾ. ಕುಲಕರ್ಣಿಯವರು ಮತ್ತು ನಾನು ಸೇರಿಕೊಂಡು, ಕರ್ನಾಟಕದ ಬೌದ್ಧಧರ್ಮದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಆಗ ಬೌದ್ಧಧರ್ಮಕ್ಕೆ ಸಂಬಂಧಪಟ್ಟಂತೆ ಕರ್ನಾಟಕದಲ್ಲಿರುವ ಸ್ಥಳಗಳನ್ನೆಲ್ಲ ಒಮ್ಮೆ ಯಾಕೆ ನೋಡಬಾರದು ಎಂಬ ಹುಕಿ ಬಂತು. ಹಾಗೆಯೇ ಸೂಫಿ, ತಾಂತ್ರಿಕ, ಶಾಕ್ತ, ನಾಥ ಮುಂತಾದ ಎಲ್ಲ ಬಗೆಯ ಪಂಥಗಳಿಗೆ ಸಂಬಂಧಿಸಿದ ಜಾಗಗಳನ್ನೂ ಕಾಣುವ ಗುಪ್ತ ಉದ್ದೇಶವೂ ನಮಗಿತ್ತು. ಇದರ ವಾಸನೆಯನ್ನು ಹೇಗೋ ಪತ್ತೆ ಮಾಡಿದ ಕವಿ, ದಲಿತ ಚಳುವಳಿಯ ಸಂಗಾತಿ ಮೈಸೂರಿನ ಎಚ್. ಗೋವಿಂದಯ್ಯನವರು ‘ನನ್ನನ್ನು ಬಿಟ್ಟುಹೋಗಬೇಡಿ’ ಎಂದರು. ಕಡೆಗೆ ಈ ಗುಂಪಿಗೆ ಕಿರಿಯ ಕವಿಮಿತ್ರ ಅರುಣ್ ಜೋಳದಕೂಡ್ಲಿಗಿ ಕೂಡ ಸೇರಿಕೊಂಡರು. ಎಲ್ಲ ಸೇರಿ ಕರ್ನಾಟಕವನ್ನು ಅದರ ಅಂಚಿನಲ್ಲೇ ಒಂದು ಸುತ್ತು ಹಾಕುತ್ತ ಹೊರಟೆವು. ೧೬ ದಿನಗಳ ತನಕ ನಮ್ಮ ಬೌದ್ಧಯಾತ್ರೆ ಮುಂಡಗೋಡಿನ ಟಿಬೆಟಿಯನ್ ಕ್ಯಾಂಪಿನಿಂದ ಶುರುವಾಗಿ ಬದಾಮಿಯಲ್ಲಿರುವ ಪದ್ಮಪಾಣಿ ಬುದ್ಧನ ಗುಹೆಯ ತನಕ ನಡೆಯಿತು. ಅದರೊಳಗೆ ‘ರೋಮಾಂಚಕ’ ‘ಆಹ್ಲಾದಕರ’ ‘ಭೀಕರ’ ಎಂದೆಲ್ಲ ವಿಂಗಡಿಸಬಹುದಾದ ಅನೇಕ ಅನುಭವಗಳಿಗೆ ಸಿಲುಕಿದೆವು. ಹೊರಟಿದ್ದು ಬುದ್ಧನ ಹೆಸರಲ್ಲಾದರೂ ನಾವು ಹೆಚ್ಚು ನೋಡಿದ್ದು ಕರ್ನಾಟಕದ ಕಡಲು ಕಾಡು ನದಿ ಬೆಟ್ಟ ಬಯಲುಗಳನ್ನು. ನಾನಾ ತರಹದ ಜನರನ್ನು. ಎಲ್ಲವೂ ಬುದ್ಧನ ಮಹಾಕಲ್ಪನೆಯಾದ ಕರುಣೆಗೆ ಸಂಬಂಧಿಸಿದವಾದ ಕಾರಣ, ಅಬೌದ್ಧ ಅನುಭವ ಎನ್ನುವಂತಹುದೇ ಇರಲಿಲ್ಲ. ಅದರಲ್ಲಿ ಒಬ್ಬ ಪಾತರಗಿತ್ತಿ ಪಕ್ಕಗಳ ಕಲಾವಿದೆಯ ಭೇಟಿಯೂ ಒಂದಾಗಿದ್ದು, ಅದು ಅವಿಸ್ಮರಣೀಯವಾಗಿದೆ.

ನಾವು ಬನವಾಸಿ ಮುಗಿಸಿ, ಕೊಡಚಾದ್ರಿಯನ್ನು ಅಪರಾತ್ರಿಯಲ್ಲಿ ಹತ್ತಿಳಿದು, ಕರಾವಳಿಯನ್ನು ಜಾಲಾಡಿ, ಕುಶಾಲನಗರದ ಬಳಿಯಿರುವ ಬೈಲುಕುಪ್ಪೆಗೆಂದು ಬರುತ್ತಿದ್ದೆವು. ಬೈಲುಕುಪ್ಪೆಯು ಟಿಬೆಟ್ಟಿನ ತಾಂತ್ರಿಕ ಬುದ್ಧಿಸಂ ಕೇಂದ್ರಗಳಲ್ಲಿ ಒಂದು. ಮಡಿಕೇರಿ ಕುಶಾಲನಗರ ಮಧ್ಯದ ಹಾದಿಯಲ್ಲಿರುವಾಗ, ಗೋವಿಂದಯ್ಯನವರು ‘ಇಲ್ಲೇ ಭಾವನ ಮನೆಯೂ ಇದೆ. ವಸಿ ಹೊತ್ತು ಇಳಿದು ಟೀ ಕುಡಿದು ಹೋಗೋಣ’ ಎಂದರು. ಹತ್ತಲಾರದ ದಿಬ್ಬಗಳನ್ನು ಹತ್ತಿ ಹೆಚ್ಚಾದ ಹಸಿರನ್ನು ಕಂಡು ದಣಿದಿದ್ದ ನಮಗೂ ಇಂತಹದೊಂದು ಮಾತು ಬೇಕಿತ್ತು. ಕಡಿದಾದ ಬೋರೆಯ ಎದೆಮೇಲೆ ಗಿಡಮರಗಳ ಮರೆಯಲ್ಲಿ ಅಡಗಿ ಕುಳಿತಂತಿದ್ದ ಒಂದು ಪುಟ್ಟಮನೆಗೆ ಗೋವಿಂದಯ್ಯ ನಮ್ಮನ್ನು ಏರಿಸಿಕೊಂಡು ಹೋದರು. ನಾವು ಬರುವುದು ಮೊದಲೇ ಗೊತ್ತಿದ್ದ ಕಾರಣ, ‘ಬನ್ನಿಬನ್ನಿ’ ‘ನಮಸ್ಕಾರ’ ಎಂಬ ದನಿಯೂ ಕೈಕಾಲು ತೊಳೆಯಲು ಬಿಸಿಬಿಸಿ ನೀರೂ ಸಿಕ್ಕವು. ಅದು ಕನ್ನಡದಲ್ಲಿ ಬೇಟೆಯ ಅನುಭವ ಬರೆದ ಲೇಖಕ ಶ್ರೀ.ಜೋಯಪ್ಪನವರ ಮನೆ. ಮನೆಯ ಸುತ್ತ ಸೌಂದರ್ಯ ಚೆಲ್ಲಿಕೊಂಡು ಬಿದ್ದಿತ್ತು. ದೊಡ್ಡದೊಂದು ಜಲಪಾತ ಕಾಡುಬೆಟ್ಟಗಳ ಒಳಗಿಂದ ಅಡಗಿಕೊಂಡು ಬಂದು ಮನೆಯ ಹಿಂಬದಿಯಲ್ಲಿ ತಟ್ಟನೆ ಪ್ರತ್ಯಕ್ಷಗೊಂಡು ಧೋಧೋ ಎಂದು ಬೀಳುತ್ತಿತ್ತು. ಎದುರುಗಡೆ ಸಾಲುಸಾಲು ಬೆಟ್ಟಗಳ ಕಣಿವೆ. ಕೊಡಗಿನಲ್ಲಿ ಸಹಜವಾಗಿಯೇ ಇರುವ ಈ ಚೆಲುವನ್ನು ಕಾಣುತ್ತಿರುವಾಗ ಟೀಕುಡಿಯಲು ಒಳ ಬರಬೇಕೆಂಬ ಕರೆಬಂತು. ಟೀಕುಡಿದು ತಟ್ಟೆತುಂಬಿಟ್ಟಿದ್ದ ಬಾಳೆಹಣ್ಣನ್ನು ಮೆದ್ದು ಜೋಯಪ್ಪನವರ ಜತೆ ಹರಟುತ್ತ ಕುಳಿತೆವು.

ಹಾಗೆ ಹರಟುವಾಗ ಮನೆಯ ಗೋಡೆಗೆ ನೇತುಬಿದ್ದಿರುವ ಕೆಲವು ಕುಶಲಕಲೆಯ ಕುರುಹು ಕಂಡವು. ಮನೆಗೆಲಸಗಳ ನಡುವೆ ಸಿಗುವ ಬಿಡುವಿನಲ್ಲಿ ಭಾರತದ ಗೃಹಿಣಿಯರು ರಚಿಸುವ ಬಣ್ಣದ ನೂಲಿನ ಬಾಗಿಲ ತೋರಣ, ಪ್ಲಾಸ್ಟಿಕ್ ಎಳೆಗಳ ಹೂಕುಂಡ, ಮಣಿಗಳ ಟೇಬಲ್ ಹಾಸು- ಮುಂತಾದ ಕೈಕಲೆಯ ವಸ್ತುಗಳ ಬಗ್ಗೆ ನನಗೆ ಎಂತಹುದೋ ಆಸ್ಥೆ. ಕೈದೋಟ, ಕೋಳಿ, ಜಾನುವಾರು ಸಾಕಣೆ, ಮನೆಯ ಅಚ್ಚುಕಟ್ಟು ಎಲ್ಲವೂ ಅವರ ಕುಶಲತೆ ಪ್ರತಿಭೆಗಳನ್ನು ಪ್ರಕಟಿಸುತ್ತಿರುತ್ತವೆ. ಇವು ಸಾರ್ವಜನಿಕ ಬದುಕಿಗೆ ಹೋಗದಂತೆ ತಮ್ಮನ್ನು ತಡೆದಿರುವ ವ್ಯವಸ್ಥೆಗೆ ತಮ್ಮ ಸೃಜನಶೀಲತೆಯ ಮೂಲಕ ಹಾಕಿದ ಸವಾಲುಗಳಂತೆಯೂ ತೋರುತ್ತವೆ.

 ಅಲ್ಲಿನ ಕಲಾಕೃತಿಗಳ ಬಗ್ಗೆ ನನ್ನ ಕುತೂಹಲ ಕಂಡ ಗೋವಿಂದಯ್ಯನವರು ‘ನನ್ನ ಭಾವನ ಮಡದಿ ಭಾರತಿ, ಮನೆಯೊಳಗೆ ಬಂದ್ಹೋಗೊ ಚಿಟ್ಟೆಗಳ ಚಿತ್ರ ಬಿಡಿಸಿದ್ದಾಳೆ. ಏ ತಾಯಿ! ನೀನು ಮಾಡಿರೊ ಪೇಂಟಿಂಗ್ ತೋರಿಸು’ ಎಂದರು. ಆಗ ಆಕೆ ಸಂಕೋಚ ಪಟ್ಟುಕೊಂಡು ಒಳಗಿಂದ ಒಂದು ಚಿತ್ರ ತಂದರು. ಗೀರುಗಳುಳ್ಳ ಲೆಡ್ಜರ್ ಹಾಳೆಯಲ್ಲಿ ಬಿಡಿಸಿದ ಚಿಟ್ಟೆಯ ಆ ಚಿತ್ರ ಅಪೂರ್ವವಾಗಿತ್ತು. ಸಮುದ್ರದ ಜಲಚರದಂತಿದ್ದ ಅದು ಮೂರು ಕಡೆ ಅರೆನಿಮೀಲಿತ ನೇತ್ರಗಳನ್ನು ಒಳಗೊಂಡಿತ್ತು. ಗಾಳಿಪಟದಂತೆ ಬಾಲಂಗೋಚಿಯನ್ನು ಹೊಂದಿತ್ತು. ಅದರೆ ರೆಕ್ಕೆಯ ನಕ್ಷೆಯು ಬೇಂದ್ರೆಯವರ ಪಾತರಗಿತ್ತಿ ಪಕ್ಕಪದ್ಯದ ಬಣ್ಣನೆಯನ್ನು ಮೀರಿಸುವಂತಿತ್ತು. ನಮ್ಮ ಪ್ರತಿಕ್ರಿಯೆ ಕಂಡ ಬಳಿಕ ಒಳಗಿಂದ ಒಂದೊಂದೇ ಚಿತ್ರಗಳು ಹೊರಬರತೊಡಗಿದವು. ನೋಡುತ್ತ ಹೋದಂತೆ ಹಲವಾರು ಬಣ್ಣಗಳ ನೂರಾರು ಡಿಸೈನುಗಳ ಚಿಟ್ಟೆಗಳು ಸೋಜಿಗದಲ್ಲಿ ಅದ್ದಿದವು. ಈ ಸೋದರಿ ಮನೆಯೊಳಗೆ ಬಂದು ಗೋಡೆಗಳ ಮೇಲೆ ಕುಳಿತುಕೊಳ್ಳುತ್ತಿದ್ದ ಚಿಟ್ಟೆಗಳನ್ನೆಲ್ಲ ಇಲ್ಲಿ ಹಿಡಿದುಹಾಕಿದ್ದರು.

ಒಂದು ಹಂತದಲ್ಲಿ ನನಗೆ ಇಷ್ಟೊಂದು ಚಿಟ್ಟೆಗಳು ಕೊಡಗಿನ ಕಾಡುಗಳಲ್ಲಿವೆಯೇ? ಇದ್ದರೂ ಇಷ್ಟೊಂದು ವಿಚಿತ್ರ ಆಕಾರ ಇರುತ್ತದೆಯೇ? ಇವು ಕಾಲ್ಪನಿಕವಿರಬಾರದೇಕೆ ಎಂಬ ಸಣ್ಣಶಂಕೆ ಮೂಡಿತು. ನನ್ನ ಮುಖ ಕಂಡ ಭಾರತಿಯವರು ‘ಸಾಯಂಕಾಲದವರೆಗೆ ಇರಿ. ನಾನು ಬಿಡಿಸಿದ ಇಷ್ಟೂ ಚಿಟ್ಟೆಗಳು ಮನೆ ಹತ್ತಿರ ಬರುತ್ತವೆ’ ಎಂದರು. ಈ ಮಾತನ್ನು ಕೇಳಿಸಿಕೊಂಡವೊ ಎಂಬಂತೆ ಕೆಲವು ಚಿಟ್ಟೆಗಳು ಕಾಡಿನೊಳಗಿಂದ ಕೈದೋಟಕ್ಕೆ ಬಂದು ಆಡತೊಡಗಿದವು. ಕೆಲವು ಮನೆಯೊಳಕ್ಕೂ ನುಗ್ಗಿಹೋದವು. ಅಂಗಳ ಮತ್ತು ಹಿತ್ತಿಲ ಆಚೀಚೆ ಕಾಡಿರುವುದರಿಂದ ಅವು ಒಂದು ಬಾಗಿಲೊಳಗಿಂದ ಹೊಕ್ಕು ಇನ್ನೊಂದು ಬಾಗಿಲ ಮೂಲಕ ಹಾದು ಹೋಗುತ್ತಿದ್ದವು. ಅವು ತಮ್ಮ ಚಿತ್ರಕ್ಕೆ ರೂಪದರ್ಶಿಗಳಾಗಲೆಂದೆ ಇಲ್ಲಿ ಅಡ್ಡಾಡುತ್ತಿರುವಂತೆ ಭಾಸವಾಯಿತು. ಒಂದು ಚಿಟ್ಟೆಯಂತೂ ಪುಟ್ಟಹಕ್ಕಿಯಷ್ಟು ದೊಡ್ಡದಿತ್ತು.

ಈ ಚಿತ್ರಗಳನ್ನು ನೋಡುವಾಗ ನನಗೆ ಮಲೆನಾಡಿನಲ್ಲಾದ ಒಂದು ಅನುಭವ ನೆನಪಾಯಿತು. ಬರುತ್ತಾ ಒಂದು ರಾತ್ರಿ ಅಲ್ಲೊಬ್ಬರ ತೋಟದಲ್ಲಿ ತಂಗಿದ್ದೆವು. ಅದರ ಯಜಮಾನರು ಬಹಳ ಕಷ್ಟಪಟ್ಟು ಮುತುವರ್ಜಿ ವಹಿಸಿ ಅದ್ಭುತ ತೋಟ ಮಾಡಿದ್ದರು. ಮನೆಯ ಮುಂದೆ ಕಾರ್ಪೊರೇಟ್ ಆಫೀಸುಗಳಲ್ಲಿ ಇರುವಂತೆ ಪೇಟೆಯ ನರ್ಸರಿಯಿಂದ ತಂದು ಬಗೆಬಗೆಯ ಗಿಡಗಳನ್ನು ಬೆಳೆಸಿ, ಅವನ್ನು ಕ್ರಮವಾಗಿ ಕತ್ತರಿಸಿ ಅಚ್ಚುಕಟ್ಟಾಗಿ ಇಟ್ಟಿದ್ದ ದೊಡ್ಡ ಉದ್ಯಾನವೂ ಇತ್ತು. ದಟ್ಟಮಲೆನಾಡಿನ ಅಸ್ತವ್ಯಸ್ತ ಕಾಡಿನಲ್ಲಿ ಹೀಗೆ ಶಿಸ್ತಿಗೆ ಒಳಪಟ್ಟ ಉದ್ಯಾನವು ಎದ್ದುಕಾಣುತ್ತಿತ್ತು. ಉದ್ಯಾನದ ಒಂದು ಎಲೆ ಆಚೀಚೆಯಾದರೂ ಅವರಿಗದು ಗೊತ್ತಾಗುತ್ತಿತ್ತು. ಆದರೆ ನನಗೆ ಯಾಕೊ ಈ ಅಚ್ಚುಕಟ್ಟುತನ ಕೃತಕವೆಂದೂ, ಈ ತೋಟ ಮತ್ತು ಉದ್ಯಾನಗಳ ಯಶಸ್ಸೇ ಅವರಿಗೊಂದು ಬಂಧನವಾಗಿ ಹೊರಗೆಲ್ಲೂ ಹೋಗದಂತೆ ಹಿಡಿದು ಹಾಕಿರಬಹುದೆಂದೂ ಅನಿಸತೊಡಗಿತು. ಯಜಮಾನರು ತಮ್ಮ ತೋಟದ ಬಗ್ಗೆ ಅಭಿಮಾನದಿಂದ ಹೇಳುವಾಗ, ಅವರ ಮಡದಿಯ ಮುಖದಲ್ಲಿದ್ದ ಮ್ಲಾನತೆಯು, ಅವರು ಹೇಳುವುದೆಲ್ಲ ನಿಜವಲ್ಲ ಎಂದು ಭಿನ್ನಮತ ಸೂಚಿಸಿದಂತಾಗುತ್ತಿತ್ತು. ಆಕೆಯಲ್ಲಿ ತೋಟದ ಬಗ್ಗೆ ಕೇಳಿದರೆ ದೂರಪಟ್ಟಣದಲ್ಲಿರುವ ಮೊಮ್ಮಗನ ಸುದ್ದಿಯನ್ನೆ ಮಾತಾಡಿದರು. ಉದ್ಯಾನದ ಶಿಸ್ತಿನ ಸೌಂದರ್ಯವು ಆ ಪರಿಸರದ ಸಹಜ ಸ್ವಚ್ಛಂದವನ್ನು ಕೊಂಚ ಮುಕ್ಕು ಮಾಡಿದಂತಿತ್ತು. ಅಥವಾ ಪಟ್ಟಣದ ಏಕತಾನದ ಬದುಕಿನಿಂದ ಬೇಸತ್ತು ಬಂದ ಪ್ರವಾಸಿ ಮನೋಧರ್ಮದ ನಮಗೆ ಸೊಕ್ಕಿದ ಕಾಡುಬೆಟ್ಟ ಕೊಡುವ ಬಿಡುಗಡೆಯ ಭಾವವನ್ನೇ, ಕಾಡಲ್ಲೇ ದಿನಾ ಬದುಕುವವರಿಗೆ ಅದರ ಸೊಕ್ಕನ್ನು ಮುರಿದು ತೋರುವಂತಹ ಶಿಸ್ತಿಗೊಳಪಟ್ಟ ಉದ್ಯಾನವು ಕೊಡುತ್ತಿರಬಹುದೇ? ಒಂದು ವಸ್ತು ಅದು ನಿಜವಾಗಿಯೂ ಇರುವಂತೆ ತೋರುವುದಿಲ್ಲ. ಅದನ್ನು ನೋಡುವವರು ನಿಂತು ನೋಡುವ ಸ್ಥಳ ಮತ್ತು ಕಾಲದ ಕಾರಣದಿಂದ ಸಾಪೇಕ್ಷವಾಗಿ ಭಿನ್ನವಾಗಿ ತೋರುತ್ತದೆಯಷ್ಟೆ.

ಆದರೆ ಇಲ್ಲಂತೂ ಮನೆಯೊಡತಿಯ ಮುಖದಲ್ಲಿ ಮ್ಲಾನತೆಯಿರಲಿಲ್ಲ. ಬದಲಿಗೆ ಪಾತರಗಿತ್ತಿಗಳನ್ನು ಕರೆದು ಕೂರಿಸಿ, ಅವನ್ನೆಲ್ಲ ತನ್ನ ಹಗಲಿನ ಸಂಗಾತಿಗಳಾಗಿಸಿಕೊಂಡ ಸಂತೋಷವಿತ್ತು. ಕುರಿಗಾಹಿಯು ತನ್ನ ಪಶುಗಳನ್ನು ಕಾಯುತ್ತ ಅವುಗಳ ಜತೆ ಹಾಡುತ್ತ ಇರುವಂತೆ ಪಾತರಗಿತ್ತಿಗಳನ್ನು ಮನೆಯ ಸುತ್ತಲಿನ ಹೂರಸವನ್ನು ಮೇಯಿಸುತ್ತ ಇದ್ದಂತೆ ಅನಿಸಿತು.
ನಿಸರ್ಗದ ಜತೆಗಿನ ಈ ಎರಡು ಬಗೆಯ ಮಾನುಷ ಅನುಸಂಧಾನಗಳು ಬುದ್ಧನ ನಗುಮೊಗದ ಹುಡುಕಾಟದಲ್ಲಿದ್ದ ನಮಗೆ ಎರಡು ಪಾಠಗಳಂತೆ ಕಂಡವು.

[ಚಿತ್ರಗಳು – ಚರಿತ]