ಸೆಣೆಸಾಡುವ ಬಣ್ಣ

ಅಲ್ಲಿ ಸಮರಗಳು ಕಾಲು ಕೆರೆಯುತ್ತಿವೆ
ವರ್ಣರಂಜಿತ ಓಕುಳಿಯಾಡಲು
ಇಲ್ಲಿ ಬಣ್ಣಗಳು ಸೆಣೆಸಾಡುತ್ತಿವೆ
ಕೆಂಪು ಹಸಿರು ನೀಲಿ ಚೆಲ್ಲಿ
ಅರಿವಿಲ್ಲದೆ ಮೂಲದ್ರವ್ಯದ ವರ್ಣ
ರಜತಬಿಲ್ಲಿಗೆ ಗೊತ್ತು ಎಲ್ಲವುಗಳ ಮರ್ಮ

ಅಂದು ಕನಕ ಸಾರಿ ಸಾರಿ ಹೇಳಿದ್ದ
ಕರಿಯ ಬಿಳಿಯ ಸಾರವ
ವ್ರೀಹಿ ನೆರೆದೆಲಗಗಳ ಬಿತ್ತಿ

ಮತ್ತೆ ಅವತರಿಸಿದರು
ಗಾಂಧಿ ಮಂಡೇಲಾ
ಬಣ್ಣವನ್ನು ಕುಡಿಯಲು
ಹಸಿವನ್ನು ನುಂಗಲು

ಶತ ಶತಮಾನದ ನೋಟಕ್ಕಿನ್ನೂ
ಅವರಿಸಿರುವ ಕಾಮಾಲೆಯ ಗ್ರಹಣ ಹೋಗದು

ಗಲ್ಲಿಗೊಂದು ಗಡಿಗೊಂದು
ಊರಿಗೊಂದು ಕೇರಿಗೊಂದು
ದೇಶಕ್ಕೊಂದು ಕೋಶಕ್ಕೊಂದು
ಹಗಲಿಗೊಂದು ಇರುಳಿಗೊಂದು

ಹೀಗೆ
ಬಣ್ಣ ಓಡಾಡುತ್ತಿದೆ
ಮತ್ತೆ ಮತ್ತೆ ವೇಷ ಧರಿಸಿ..