Advertisement
ದುಡಿಮೆ, ಬಿಡುವುಗಳ ಸಮೀಕರಣ… ನಮಗೆಂದಾದರೂ ಅರ್ಥವಾದೀತೇ ಹೇಳಣ್ಣ: ಎಲ್.ಜಿ.ಮೀರಾ ಅಂಕಣ

ದುಡಿಮೆ, ಬಿಡುವುಗಳ ಸಮೀಕರಣ… ನಮಗೆಂದಾದರೂ ಅರ್ಥವಾದೀತೇ ಹೇಳಣ್ಣ: ಎಲ್.ಜಿ.ಮೀರಾ ಅಂಕಣ

ಇಲ್ಲಿ ಇನ್ನೊಂದು ಗಮನೀಯ ವಿಷಯ ಇದೆ ನೋಡಿ. `ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುತ್ತಲೇ ಇರಬೇಕು. ಒಂದೇ ಒಂದು ನಿಮಿಷ ನನಗೆ ಸುಮ್ಮನಿರಲಾಗದು’ ಎನ್ನುವುದು ಸಹ ಆರೋಗ್ಯಕರವಾದ ಆಯ್ಕೆಯೇನಲ್ಲ. ಇಂಥಹ ಮನಃಸ್ಥಿತಿಯ ಜನರು ಮನೆಯವರೊಡನೆಯೋ, ಸ್ನೇಹಿತರೊಡನೆಯೋ ಉದ್ಯಾನವನಕ್ಕೋ, ಪ್ರವಾಸಕ್ಕೋ, ವಿಹಾರಕ್ಕೋ ಹೋದರೂ ಆ ಮನರಂಜನೆಯಲ್ಲಿ ಮನಸ್ಸಿಡಲಾಗದೆ ಒಂದೇ ಸಮ ಚಡಪಡಿಸುತ್ತಿರುತ್ತಾರೆ. ತಾವೂ ನೆಮ್ಮದಿಯಾಗಿರುವುದಿಲ್ಲ, ಉಳಿದವರಿಗೂ ಕಿರಿಕಿರಿ ಮಾಡುತ್ತಿರುತ್ತಾರೆ. ಇದೂ ಒಂದು ರೀತಿಯ ಅಸ್ವಾಸ್ಥ್ಯ ಅಲ್ಲವೆ? ಬಿಡುವೇ ತೆಗೆದುಕೊಳ್ಳಲು ಅರಿಯದ ಜನ ಇದ್ದಾರೆ. ಯಾವಾಗಲೂ ಓಡಾಡುತ್ತಲೇ, ಇರುವೆಗಳಂತೆ ಏನನ್ನೋ ಮಾಡುತ್ತಲೇ ಇರುವ ಅಭ್ಯಾಸದವರು.
ಡಾ.
ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತಾರನೆಯ ಬರಹ

`ಅಯ್ಯೋ .. ಬಿಡುವೇ ಇಲ್ಲ..ʼ, `ಯಾವತ್ತು ರಜ ಬರುತ್ತೋ ಅಂತ ಕಾಯ್ತಿದೀನಿ’, `ಸಾಕಪ್ಪಾ ಸಾಕು ಈ ದುಡಿತ’ …. ಈ ಮಾತನ್ನು ನಮ್ಮ ಸಹಜೀವಿಗಳ ಬಾಯಲ್ಲಿ ಹಲವು ಬಾರಿ ಕೇಳಿರುತ್ತೇವೆ, ನಾವು ಕೂಡ ಹಲಕೆಲವು ಬಾರಿ ಆಡಿರುತ್ತೇವೆ. `ದುಡಿಮೆ ಅನ್ನುವುದು ತಪ್ಪಿಸಿಕೊಳ್ಳಬೇಕಾದ, ಮಾಡಿ ಮುಗಿಸಬೇಕಾದ ಒಂದು ಅಪ್ರಿಯ ದಂದುಗ, ಬಿಡುವು ಅನ್ನವುದು ಒಂದು ಸ್ವಾಗತಾರ್ಹ ವಿಶ್ರಾಂತಿ ಸಮಯ; ಬೇಕಾದ್ದನ್ನು ಮಾಡುವ ಬೇಡದ್ದನ್ನು ಮಾಡದಿರುವ ಸ್ವಾತಂತ್ರ್ಯ’ – ಈ ರೇಖೆಯಲ್ಲಿ ಚಲಿಸುವ ಚಿಂತನೆಯು ನಮ್ಮಲ್ಲಿ ಹಲವರಲ್ಲಿ ಇರುವಂತೆ ತೋರುತ್ತದೆ. ಆದರೆ ಈ ಮೇಲ್ಪದರದ ಮನೋಮೂಡಿಕೆಗಳನ್ನು ತುಸು ಕೆರೆದು ನೋಡಿದರೆ ಕೆಲವು ಸ್ವಾರಸ್ಯಕರ ಸಂಗತಿಗಳು ಎದುರಾಗುತ್ತವೆ.

  1. ನಿರಂತರ ದುಡಿಮೆಯು ಬೇಸರ ಹುಟ್ಟಿಸುವಂತೆ ನಿರಂತರ ಬಿಡುವು ಕೂಡ ಮನುಷ್ಯರಲ್ಲಿ ಬೇಸರ ಹುಟ್ಟಿಸುತ್ತದೆ! ವಿಚಿತ್ರ ಅನ್ನಿಸಿದರೂ ಇದು ಸತ್ಯ. ಮಾಡಲು ಇಂಥದ್ದೇ ಎನ್ನುವ ಕೆಲಸವಿಲ್ಲದೆ ಮನೆಯಲ್ಲಿ ಸೋಫಾದ ಮೇಲೆ ದೂರದರ್ಶನ ನೋಡುತ್ತಲೋ, ಓದಿದ ಸುದ್ದಿಪತ್ರಿಕೆಯನ್ನೇ ಮತ್ತೆ ಮತ್ತೆ ತಿರುವಿಹಾಕುತ್ತಲೋ, ಉದ್ಯಾನವನದಲ್ಲಿ ಒಣಹರಟೆಯಲ್ಲೋ ನಿರತರಾಗಿರುವ ನಿವೃತ್ತರನ್ನು ನೋಡಿದರೆ ಅವರ ಮುಖದಲ್ಲಿ ಈ ನಿರಂತರ ಬಿಡುವು ತರುವಂತಹ ಅನಾಕರ್ಷಕ ಸಪ್ಪೆತನ ಎದ್ದು ಕಾಣುತ್ತದೆ. ಬೆಳಿಗ್ಗೆ ಎದ್ದು `ಇಷ್ಟೊಂದು ಸಮಯವಿದೆಯಲ್ಲಾ, ಏನಪ್ಪಾ ಮಾಡಲಿ ಇದರಲ್ಲಿ, ನನಗೆ ಮಾಡಲು ಏನೂ ಕೆಲಸವೇ ಇಲ್ಲವಲ್ಲ’ ಅನ್ನಿಸುವುದು ಎಷ್ಟು ಭಯಾನಕ ಅಲ್ಲವೆ? ನಮ್ಮ ಸಮಯ ನಮಗೆ ಭಾರವಾಯಿತೆಂದರೆ ನಮ್ಮ ಬದುಕೇ ನಮಗೆ ಭಾರವಾದಂತೆ.
  2. `ದ ಲೋಟಸ್ ಈಟರ್ಸ್’ ಎಂಬ ಆಲ್ಫ್ರೆಡ್ ಟೆನ್ನಿಸನ್ ಕವಿ ವಿರಚಿತ ಕವಿತೆ ನೆನಪಾಗುತ್ತಿದೆ. ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಈ ಕವಿತೆ ನಮಗೆ ಪಾಠದಲ್ಲಿತ್ತು. ಯುದ್ಧದಂತಹ ತುಂಬ ಒತ್ತಡದ ಕೆಲಸ ಮಾಡಿದ ವ್ಯಕ್ತಿಗಳು ದ್ವೀಪವೊಂದರಲ್ಲಿ ವಿಶೇಷ ಬೀಜಗಳನ್ನು ತಿಂದು ಇನ್ನು ತಾವು ಯಾವುದೇ ಕೆಲಸವಿಲ್ಲದೆ ಆರಾಮವಾಗಿ ಇರಬೇಕು, ಏನೂ ಒತ್ತಡ ತೆಗೆದುಕೊಳ್ಳದೆ ಸದಾ ವಿಶ್ರಾಂತಿ ಪಡೆಯುತ್ತಿರಬೇಕು ಎಂದು ಆಸೆಪಟ್ಟು ಹಾಗೆ ಒಂದು ರೀತಿಯ ಮಂಪರಿನಲ್ಲಿ ಇದ್ದ ಜೀವಿಸಲು ಜನರ ಒಂದು ಕಥಾನಕ ಅದು. ಮನಸ್ಸು ತೀವ್ರವಾದ ನಷ್ಟ ಅಥವಾ ದುಃಖವನ್ನು ಅನುಭವಿಸಿದಾಗ ಇನ್ನು ತನಗೆ ಯಾವುದೇ ಜವಾಬ್ದಾರಿ ಬೇಡ, ಯಾವ ಚಿಂತನೆ-ಚಿಂತೆ ಬೇಡ, ಒತ್ತಡ ಬೇಡ ಎಂದು ನಿರ್ಧರಿಸಿ ವಾಸ್ತವಿಕ ಬದುಕಿಗೆ ವಿಮುಖವಾಗುತ್ತದಂತೆ. ಇದು ವಿಶ್ರಾಂತಿ ಹೌದಾದರೂ ಅಂತಹ ಸ್ವಸ್ಥ ಸ್ಥಿತಿ ಅನ್ನಿಸುವುದಿಲ್ಲ.
  3. ಲಿಂಗಭೇದ, ವರ್ಗಭೇದ, ಜನಾಂಗ ಭೇದ, ಕಾಲದೇಶಗಳ ಭೇದ – ದುಡಿಮೆ ಹಾಗೂ ಬಿಡುವುಗಳು ನಮ್ಮ ಪ್ರದೇಶ, ಜನಾಂಗ, ವರ್ಗ, ಲಿಂಗ ಇವುಗಳನ್ನು ಆಧರಿಸಿರುತ್ತವೆ. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಜಪಾನೀ ಜನರು ಹೆಚ್ಚು ಕಾಲ ದುಡಿಮೆಯಲ್ಲಿ ತೊಡಗುತ್ತಾರೆ ಎಂಬುದು ಜನಜನಿತ ವಿಷಯ. ಮುಖ್ಯ ವ್ಯಕ್ತಿಗಳು ಯಾರಾದರೂ ತೀರಿಕೊಂಡಾಗ ರಾಷ್ಟ್ರೀಯ ರಜೆ ಕೊಡುವ ಬದಲು ಅವರ ಗೌರವಾರ್ಥ ಜಪಾನೀಯರು ಎರಡು ಗಂಟೆ ಹೆಚ್ಚು ಕೆಲಸ ಮಾಡುತ್ತಾರೆ ಎಂಬ ಹೇಳಿಕೆ ಇದೆ. ಪ್ರದೇಶದ ಮಾತು ಒಂದಾದರೆ, ವರ್ಗದ ಮಾತು ಇನ್ನೊಂದು. ಶ್ರೀಮಂತರಿಗೆ ಬಿಡುವು ಹೆಚ್ಚು. ಏಕೆಂದರೆ ಅವರಿಗೆ ತಮಗೆ ಕೆಲಸ ಮಾಡಲು ಮನಸ್ಸಿಲ್ಲದಿದ್ದಾಗ, ಬಿಡುವು ಬೇಕು ಅನ್ನಿಸಿದಾಗ ಬೇರೆಯವರಿಗೆ ಹಣ ಕೊಟ್ಟು ಕೆಲಸ ಮಾಡಿಸುವ ಅನುಕೂಲ ಇರುತ್ತದೆ. ತಿನ್ನಲು ಗತಿಯಿಲ್ಲದ, ಕೈ ಮೇಲೆ ಹೊಟ್ಟೆ ಎಂದು ಬದುಕುವ ಬಡವರಿಗೆ ಬಿಡುವು ಕಡಿಮೆ. ಸಾಂಪ್ರದಾಯಿಕ ಮನೆಗಳಲ್ಲಿ ಹೆಂಗಸರಿಗೆ ಬಿಡುವು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಭಾನುವಾರ ಬಂದರೆ ಮನೆಯ ಬೇರೆ ಸದಸ್ಯರಿಗೆ ಬಿಡುವು ಸಿಕ್ಕಿದರೆ ಹೆಂಗಸರಿಗೆ ಅಂದು ಇನ್ನೂ ಹೆಚ್ಚು ಕೆಲಸ. ಹಬ್ಬ ಹರಿದಿನಗಳಲ್ಲೂ ಅಷ್ಟೆ, ಹೆಂಗಸರಿಗೆ ವಿಪರೀತ ಕೆಲಸ.

ಇನ್ನು ಭೌಗೋಳಿಕ ಹವಾಮಾನ ಸಹ ನಮ್ಮ ದುಡಿಮೆ, ಬಿಡುವುಗಳ ಸಮೀಕರಣದಲ್ಲಿ ಒಂದು ಅಂಶವಾಗುತ್ತದೇನೊ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಕರಾವಳಿ, ಮಲೆನಾಡು, ಬಯಲು ಸೀಮೆಯಲ್ಲಿ ಜನರು ದುಡಿಯುವ ಹಾಗೂ ಬಿಡುವು ತೆಗೆದುಕೊಳ್ಳುವ ಕಾಲವಿನ್ಯಾಸದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಾಣುತ್ತವೆ. ವಿಪರೀತ ಸೆಕೆ, ವಿಪರೀತ ಚಳಿ, ಧಾರಾಕಾರ ಮಳೆ ಮುಂತಾದವು ನಮ್ಮ ದುಡಿಮೆ ಬಿಡುವುಗಳ ವ್ಯಾಖ್ಯೆಯನ್ನು ಬದಲಾಯಿಸುತ್ತವೆ ಎಂದು ತೋರುತ್ತದೆ. ಮಂಗಳೂರಿನಲ್ಲಿ ಜನ ತುಂಬ ಬಿಸಿಲಿರುವ ಕಾರಣದಿಂದಾಗಿ ಬೆಳಿಗ್ಗೆ ಏಳು-ಎಂಟು ಗಂಟೆಯ ಮುಂಚೆಯೇ ಅನೇಕ ಕೆಲಸಗಳನ್ನು ಮುಗಿಸುವ ಅಭ್ಯಾಸ ಇಟ್ಟುಕೊಂಡಿದ್ದರೆ ಸಮ ಶೀತೋಷ್ಣ ಹವಾಮಾನ ಇರುವ ಮೈಸೂರಿನಲ್ಲಿ ಎಲ್ಲವೂ ಆರಾಮವಾಗಿ ನಿಧಾನವಾಗಿ `ಏನವಸರ?’ ಎನ್ನುವ ಧಾಟಿಯಲ್ಲಿ ಸಾಗುತ್ತವೆ!

  1. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಕೆಲಸದ ಬದಲಾವಣೆಯೇ ಬಿಡುವು ಎಂಬ ಚಿಂತನೆ. ನಮ್ಮ ರಾಷ್ಟ್ರಪಿತ ಗಾಂಧೀಜಿಯವರಿಗೆ ಇದ್ದ ಇಂತಹ `ಬಿಡುವಿನ’ ಕಲ್ಪನೆ ನಮಗೆಲ್ಲರಿಗೂ ಗೊತ್ತು. ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಬದಲಾಯಿಸುವುದೇ ತಮ್ಮ ಮಟ್ಟಿಗೆ ಬಿಡುವು ಅನ್ನುತ್ತಿದ್ದರು ಅವರು! ತಮ್ಮನ್ನು ತಾವು ಕೆಲಸವ್ಯಸನಿ(ವರ್ಕೋಹಾಲಿಕ್)ಗಳು ಎಂದು ತಮಾಷೆಯಾಗಿ ಕರೆದುಕೊಳ್ಳುವವರು ದಿನವಿಡೀ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುತ್ತಾರೆ.
  2. ಇಲ್ಲಿ ಇನ್ನೊಂದು ಗಮನೀಯ ವಿಷಯ ಇದೆ ನೋಡಿ. `ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುತ್ತಲೇ ಇರಬೇಕು. ಒಂದೇ ಒಂದು ನಿಮಿಷ ನನಗೆ ಸುಮ್ಮನಿರಲಾಗದು’ ಎನ್ನುವುದು ಸಹ ಆರೋಗ್ಯಕರವಾದ ಆಯ್ಕೆಯೇನಲ್ಲ. ಇಂಥಹ ಮನಃಸ್ಥಿತಿಯ ಜನರು ಮನೆಯವರೊಡನೆಯೋ, ಸ್ನೇಹಿತರೊಡನೆಯೋ ಉದ್ಯಾನವನಕ್ಕೋ, ಪ್ರವಾಸಕ್ಕೋ, ವಿಹಾರಕ್ಕೋ ಹೋದರೂ ಆ ಮನರಂಜನೆಯಲ್ಲಿ ಮನಸ್ಸಿಡಲಾಗದೆ ಒಂದೇ ಸಮ ಚಡಪಡಿಸುತ್ತಿರುತ್ತಾರೆ. ತಾವೂ ನೆಮ್ಮದಿಯಾಗಿರುವುದಿಲ್ಲ, ಉಳಿದವರಿಗೂ ಕಿರಿಕಿರಿ ಮಾಡುತ್ತಿರುತ್ತಾರೆ. ಇದೂ ಒಂದು ರೀತಿಯ ಅಸ್ವಾಸ್ಥ್ಯ ಅಲ್ಲವೆ? ಬಿಡುವೇ ತೆಗೆದುಕೊಳ್ಳಲು ಅರಿಯದ ಜನ ಇದ್ದಾರೆ. ಯಾವಾಗಲೂ ಓಡಾಡುತ್ತಲೇ, ಇರುವೆಗಳಂತೆ ಏನನ್ನೋ ಮಾಡುತ್ತಲೇ ಇರುವ ಅಭ್ಯಾಸದವರು.
  3. ಇನ್ನೊಂದು ಸ್ವಾರಸ್ಯಕರ ವಿಷಯ ಇದೆ ಇಲ್ಲಿ. ಮನಃಶಾಸ್ತ್ರದವರು ಹೇಳುವ `ಹರಿವು’( ಫ್ಲೋ) ಪರಿಕಲ್ಪನೆ ಇದು. ಇದರ ಪ್ರಕಾರ ಮನುಷ್ಯನು ಕೆಲಸದಲ್ಲಿ ಸಂಪೂರ್ಣ ತಲ್ಲೀನನಾಗಿ `ತಾನು ಕೆಲಸ ಮಾಡುತ್ತಿದ್ದೇನೆ’ ಅನ್ನುವುದೇ ಮರೆತು ಹೋಗಿ, ಅವನೂ ಕೆಲಸವೂ ಎರಡಳಿದು ಐಕ್ಯಗೊಂಡ ಒಂದು ರೀತಿಯ ತಲ್ಲೀನ `ಸಮಾಧಿ’ ಸ್ಥಿತಿ ಇದು. ಅತ್ಯಂತ ಸುಖದಾಯಕವಾದ ಇರುವಿಕೆ ಇದು ಅನ್ನುತ್ತಾರೆ. ಮನುಷ್ಯನಿಗೆ ಹೀಗೆ ಕೆಲಸ ಮಾಡಲು ಸಾಧ್ಯವಾದರೆ ಅವನು ನಿಜಕ್ಕೂ ಅದೃಷ್ಟವಂತ, ಅವನು ತನ್ನ ಜೀವನದ ಪರಮೋದ್ದೇಶವನ್ನು ಕಂಡುಕೊಂಡಿದ್ದಾನೆ ಎಂದು ಅರ್ಥವಂತೆ. ಇಂತಹ ಪರಮ ಜೀವನಕಾರ್ಯವನ್ನು ಕಂಡುಕೊಂಡು ಕೊನೆಯ ಉಸಿರಿನವರೆಗೆ ಮಾಡುತ್ತಾ ಇರಬಲ್ಲೆವಾದರೆ ಇದಕ್ಕಿಂತ ನೆಮ್ಮದಿ ಬೇರೇನಿದೆ? ಆದರೆ ನಮ್ಮಲ್ಲಿ ಅನೇಕರಿಗೆ ನಮ್ಮ ಜೀವನೋದ್ದೇಶವೇ ಗೊತ್ತಿರುವುದಿಲ್ಲ. `ಹುಟ್ಟು- ಶಾಲೆ-ಕಾಲೇಜಿಗೆ ಹೋಗು – ಹೊಟ್ಟೆಪಾಡಿಗಾಗಿ ಒಂದು ಉದ್ಯೋಗ ಹಿಡಿ – ಮದುವೆ ಮಾಡಿಕೊ – ಮಕ್ಕಳನ್ನು ಹೆತ್ತು ಬೆಳೆಸು – ಮನೆ ಕಟ್ಟು – ಮಕ್ಕಳ ಮದುವೆ ಮಾಡಿ ಮೊಮ್ಮಕ್ಕಳನ್ನು ನೋಡು – ಒಂದು ದಿನ ಸತ್ತು ಹೋಗಿ ಗೋಡೆ ಮೇಲಿನ ಛಾಯಾಚಿತ್ರವಾಗಿಬಿಡು’ – ಯೋಗರಾಜ ಭಟ್ಟರು `ಪಂಚರಂಗಿ’ ಸಿನಿಮಾದ ತಮ್ಮ `ಲೈಫು ಇಷ್ಟೇನೆ’ ಹಾಡಿನಲ್ಲಿ ಹಾಸ್ಯದ ಮರೆಯಲ್ಲಿ ವ್ಯಂಗ್ಯವಾಗಿ ಹೇಳಿರುವ ಹಾಗೆ `ಇಷ್ಟೇ ಜೀವನ’ ಎಂದು ಬದುಕಿಬಿಡುವುದು ಬಹುತೇಕ ಜನರ ದಾರಿ. ಸ್ವಂತವಾಗಿ ಯಾವುದರ ಬಗ್ಗೆಯೂ ಆಲೋಚಿಸದೆ ಕಣ್ಣು ಮುಚ್ಚಿಕೊಂಡು ಪರಂಪರೆ, ಹಿರಿಯರು, ಗೆಳೆಯರೆನ್ನಿಸಿಕೊಂಡವರು ಹೇಳಿದ್ದನ್ನು ನಂಬಿ ಸರೀಕರ ಜೊತೆ ಸಮನಾಗಲು ಬದುಕುವುದಿದೆಯಲ್ಲ ಅದು ನಮ್ಮ ವಿವೇಕದ ಅಪವ್ಯಯ ಅಥವಾ ದುಂದು ಅನ್ನಿಸುತ್ತೆ. ಹೀಗಾಗಿ ನಿವೃತ್ತಿಯಲ್ಲಿ ಮನುಷ್ಯರನ್ನು ಕಾಡುವ ಖಾಲಿತನವು ನಿವೃತ್ತಿಯಾದ ಮೇಲೆ ಹೊಸದಾಗಿ ಆಗಮಿಸುವುದಲ್ಲ. ಮೊದಲೇ ಅವರಲ್ಲಿ ಇದ್ದ ಖಾಲಿತನ ಹಾಗೂ ಆಳವಾದ ಚಿಂತನೆಯ ಕೊರತೆಯು ಹೊಟ್ಟೆಪಾಡಿನ ಉದ್ಯೋಗದಲ್ಲಿ ಮರೆಯಾಗಿ ಆ ಉದ್ಯೋಗಕ್ಕೆ ಪೂರ್ಣವಿರಾಮ ಬಿದ್ದ ಮೇಲೆ ಮತ್ತೆ ಅವತರಿಸುತ್ತೆ ಅಷ್ಟೆ. ಹೀಗಾಗಿ ಮಧ್ಯವಯಸ್ಸಿನಲ್ಲೇ ತಮ್ಮ ನಿವೃತ್ತಿ ಜೀವನದ ಅರ್ಥಪೂರ್ಣತೆಯ ಬಗ್ಗೆ ಜನರು ಯೋಚಿಸಿ, ಯೋಜಿಸುವುದು ಉತ್ತಮ ಅನ್ನಿಸುತ್ತೆ.
  4. ಇನ್ನೂ ಒಂದು ಗಮನೀಯ ಸಂಗತಿ ಇದೆ. ದುಡಿಮೆಯಲ್ಲಿದ್ದರೇ ಬಿಡುವು ಭಾಸವಾಗುವ ವಿಪರ್ಯಾಸ! – ತುಂಬ ವಿಚಿತ್ರ ವಿಷಯ ಇದು. ಒಂದು ವೇಳೆ ಒಬ್ಬ ವ್ಯಕ್ತಿಗೆ ವಾರದ ಏಳು ದಿನವೂ ಕೆಲಸಕ್ಕೆ ಹೋಗುವ ಅಗತ್ಯವೇ ಇಲ್ಲ, ಪ್ರತಿ ದಿನವೂ ಬಿಡುವೇ ಅಂದುಕೊಳ್ಳೋಣ. ಇನ್ನೊಬ್ಬ ವ್ಯಕ್ತಿಗೆ ವಾರದಲ್ಲಿ ಆರು ದಿನ ಕೆಲಸಕ್ಕೆ ಹೋಗುವುದಿದೆ, ವಾರದಲ್ಲಿ ಒಂದು ದಿನ ಮಾತ್ರ ರಜೆ ಇದೆ ಅನ್ನಿ. ಇವರಿಬ್ಬರಲ್ಲಿ ಬಿಡುವಿನ ಸವಿ ಯಾರ ಮನಸ್ಸಿಗೆ ಗಾಢವಾಗಿ ಭಾಸವಾಗುತ್ತದೆ ಎಂದು ಊಹಿಸುವುದು ಕಷ್ಟವೇನಲ್ಲ. ಆರು ದಿನ ಕಷ್ಟಪಟ್ಟು ದುಡಿದು ಕೆಲಸ ಮಾಡಿದವನಿಗೆ ಆರನೆಯ ದಿನದ ಕೊನೆಯಲ್ಲಿ `ಅಬ್ಬ! ನಾಳೆ ರಜೆ, ಅಹಾ ನಾಳೆ ರಜೆ!! ಬೆಳಿಗ್ಗೆ ಬೇಗ ಎದ್ದು ನಾನು ಕೆಲಸಕ್ಕೆ ಓಡಬೇಕಿಲ್ಲ. ನಿಧಾನವಾಗಿ ಏಳಬಹುದು, ರುಚಿಸಿಕೊಂಡು ಕಾಫಿ-ತಿಂಡಿ ಸೇವಿಸಬಹುದು, ನೆಮ್ಮದಿಯಿಂದ ತಲೆಗೆ ಸ್ನಾನ ಮಾಡಬಹುದು, ನೋಡಬೇಕು ಅಂತ ಬಹಳ ದಿನಗಳಿಂದ ನಾನು ಕಾಯ್ತಾ ಇದ್ದ ಸಿನಿಮಾಗೆ ಹೋಗಬಹುದು’ ಅನ್ನುವ ಖುಷಿ ಉಂಟಾಗುತ್ತದೆ. ಈ ಹಗುರ ಭಾವ ಅವನ ಮನಸ್ಸನ್ನು ಅವರಿಸಿರುತ್ತದೆ. ಅದೇ ಹೊತ್ತಿನಲ್ಲಿ, ದಿನಾ ರಜೆ ಇರುವ ಮನುಷ್ಯನಿಗೆ `ಏಳನೆಯ ದಿನ ಒಂದು ಹೊಸದಿನ, ಬಿಡುವಿನ ದಿನ’ ಅಂತೇನೂ ಅನ್ನಿಸುವುದಿಲ್ಲ. ವಾರದ ಪ್ರತಿದಿನವೂ ಭಾನುವಾರವೇ ಆದರೆ ಅದರಲ್ಲಿ ಏನು ವಿಶೇಷ ಉಳಿಯಿತು ಹೇಳಿ. ಒಟ್ಟಿನಲ್ಲಿ ಅತಿಯಾದರೆ ಅಮೃತವೂ ವಿಷ. ವಿಜ್ಞಾನಿಗಳು ಹೇಳುವ ಪ್ರಕಾರ ಬಿಡುವು ಅತಿಯಾದರೆ ನಮ್ಮ ಮೆದುಳು ತನ್ನ ಚಟುವಟಿಕೆಯನ್ನು ಕಳೆದುಕೊಳ್ಳುವುದರಿಂದ `ಡಿಮೆನ್ಶಿಯಾ’ದಂತಹಮರೆವಿನ ಕಾಯಿಲೆಗಳು ಬೇಗ ವಕ್ಕರಿಸುತ್ತವಂತೆ. ಈ ವಿಷಯದಲ್ಲಿ ಸಂಶೋಧನೆ ಮಾಡಿದವರು ಮನುಷ್ಯನಿಗೆ ಕೊನೆಯವರೆಗೂ ಯಾವುದಾದರೂ ಒಂದು ವಿಷಯದಲ್ಲಿ `ಮೆಂಟಲ್ ಎಂಗೇಜ್‌ಮೆಂಟ್’ – ಮಾನಸಿಕ ತೊಡಗುವಿಕೆ ಅನ್ನುವುದು ಇರಬೇಕು. ಬೆಳಿಗ್ಗೆ ಉತ್ಸಾಹದಿಂದ ಏಳುವುದಕ್ಕೆ ಒಂದು ಕಾರಣ ಇರಬೇಕು ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ಹೀಗೆ ಹೇಳಬಹುದು ಅನ್ನಿಸುತ್ತೆ, ನಿವೃತ್ತಿ, ಬಿಡುವು, ವಿಶ್ರಾಂತಿ ಇವುಗಳನ್ನು ಕುರಿತು ನಮ್ಮಲ್ಲಿ ಸರಿಯಾದ ದೃಷ್ಟಿಕೋನ ಇರುವುದು ಮುಖ್ಯ. ನಿವೃತ್ತಿ ಅಂದರೆ ಏನೂ ಕೆಲಸ ಮಾಡದೆ ಇರುವ ಸ್ಥಿತಿ ಎಂಬುದು ಅಥವಾ ಯುವಕರಂತೆಯೇ ಕೆಲಸ ಮಾಡುವ ಹಂತ ಎಂದು ಯೋಚಿಸುವುದು – ಎರಡೂ ಅತಿರೇಕಗಳೇ. ಒಂದಂತೂ ನಿಜ. ದಿನಾ ಬೆಳಿಗ್ಗೆ ಏಳಲು ಮನುಷ್ಯನಿಗೆ ಒಂದು ಕಾರಣ ಬೇಕು. ತಾನು ಬೆಳೆಸುತ್ತಿರುವ ಹೂಗಿಡಗಳ ದೇಖರೇಖಿಯೋ, ತನ್ನ ಮೊಮ್ಮಕ್ಕಳ ಒಡನಾಟವೋ, ತಾನು ಬರೆಯುತ್ತಿರುವ ಪುಸ್ತಕವೋ, ಸೇವೆ ಸಲ್ಲಿಸುತ್ತಿರುವ ಅನಾಥಾಶ್ರಮವೋ, ತನ್ನ ಕೌಶಲ್ಯವನ್ನು ತರಬೇತಿಯಾಗಿ ನೀಡುತ್ತಿರುವ ಸಮುದಾಯವೋ, ನಿರ್ದಿಷ್ಟ ಗುರಿಯುಳ್ಳ ಪ್ರವಾಸವೋ….. ಒಟ್ಟಿನಲ್ಲಿ `ತನ್ನ ಅಗತ್ಯ ಅಲ್ಲಿ ಇದೆ, ತಾನು ಈ ಪ್ರಪಂಚಕ್ಕೆ ಬೇಕಾಗಿದ್ದೇನೆ’ ಎಂಬ ಭಾವನೆ ವ್ಯಕ್ತಿಯಲ್ಲಿ ಬರಬೇಕು. ಜಪಾನಿನ ದೀರ್ಘಾಯುಷೀ ಜನರು ಇದನ್ನು `ಇಕಿಗಾಯ್’ ಎಂದೂ ಇಂಗ್ಲಿಷ್‌ನಲ್ಲಿ ಪರ್ಪಸ್ ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಬಹುಶಃ ನಾವು ಇದನ್ನು ಜೀವನೋದ್ದೇಶ ಅನ್ನಬಹುದೇನೋ. `ನಾನು ಬದುಕುತ್ತಿರುವುದಕ್ಕೆ ಯಾವ ಉದ್ದೇಶವೂ ಇಲ್ಲ, ಸದಾ ಮೂಲೆಯಲ್ಲಿ ಕುಳಿತಿರುವ ಯಾರಿಗೂ ಬೇಡದ ಮುದುಕ/ಮುದುಕಿ ನಾನು. ನಾನು ಇದ್ದರೂ ಸತ್ತರೂ ಏನೂ ವ್ಯತ್ಯಾಸ ಆಗುವುದಿಲ್ಲ’ ಎಂಬ ಭಾವನೆ ಮನುಷ್ಯರಲ್ಲಿ ಬಂದುಬಿಟ್ಟರೆ ಅದಕ್ಕಿಂತ ದುಃಖಕರ, ಯಾತನಾಮಯ ಸನ್ನಿವೇಶ ಇನ್ನೊಂದಿಲ್ಲ. ಹೀಗಾಗಿ ನಾವು ಚಿಕ್ಕಂದಿನಿಂದಲೇ ಮಕ್ಕಳಿಗೆ ಹೊಟ್ಟೆ ಹೊರೆಯುವುದಕ್ಕಿಂತ ಭಿನ್ನವಾದ ಒಂದು ಜೀವನೋದ್ದೇಶವನ್ನು ಬದುಕಿಗಾಗಿ ಇಟ್ಟುಕೊಳ್ಳಬೇಕು ಎಂಬ ಜೀವನಪಾಠವನ್ನು ಹೇಳಿಕೊಡುವ ಅಭ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕು ಬಹುಶಃ. ಅತ್ಯಾಸಕ್ತಿಯ ಕ್ಷೇತ್ರವೊಂದಿದ್ದು ಮಾನಸಿಕವಾಗಿ ಅದರಲ್ಲಿ ತೊಡಗುವುದರ ಪ್ರಾಮುಖ್ಯವನ್ನು ಎಷ್ಟು ಹೇಳಿದರೂ ಸಾಲದು. ಈ ಬಗ್ಗೆ ನಾವು ಎಷ್ಟು ಗಂಭೀರವಾಗಿ ಯೋಚಿಸಿದರೆ ಅಷ್ಟು ಉತ್ತಮ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ