“ಅದೊಂದು ತೋತಾಪುರಿ ಮಾವಿನ ಮರ. ಆದರೆ ನನಗೆಂದೂ ಒಂದೇ ಒಂದು ಹಣ್ಣು ಬಿದ್ದು ಸಿಕ್ಕಿದ ನೆನಪಿಲ್ಲ. ಸುತ್ತಲೂ ಲಂಟಾನದ ಗಿಡಗಳು, ಬೇಲಿಗಿಡಗಳು ಸೊಂಪಾಗಿ ಬೆಳೆದಿದ್ದವು. ಸರಳಿ ಮರಗಳು ಅಂಕುಡೊಂಕಾಗಿ ಕಾಲು ದಾರಿಗೆ ಒರಗಿ ನಿಂತದ್ದರಿಂದ ಸೂರ್ಯನ ಬೆಳಕು ಆ ಪ್ರದೇಶಕ್ಕೆ ಸರಿಯಾಗಿ ಬೀಳುತ್ತಿರಲಿಲ್ಲ. ಅ ಪ್ರದೇಶ ನಿತ್ಯವೂ ನೆರಳಲ್ಲೇ ಇರುತ್ತಿತ್ತು. ಕಾಣುವವರಿಗೆ ಭೀತಿಯ ವಾತಾವರಣ ನಿರ್ಮಾಣವಾಗುತ್ತಿತ್ತು.ಸರಸರನೆ ಏನೋ ತರಗೆಲೆಗಳ ಮಧ್ಯೆ ಹೆಜ್ಜೆಯೂರಿದ ಸದ್ದಾದಂತಾಗಿ ನಾನು ಮತ್ತು ಜೊತೆಗಿದ್ದ ಗೆಳೆಯರಿಬ್ಬರೂ ಭಯಂಕರವಾಗಿ ಹೆದರಿ ಅಲ್ಲಿಂದ ಕಾಲ್ಕಿತ್ತಿದ್ದೆವು”
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳ ಮೊದಲ ಕಂತು.

 

ಪರಿಸರದ ಕತೆ ಓದಿಸುತ್ತಾ ಹೋದಂತೆ ನನ್ನ ಪರಿಸರದ ವಿಚಿತ್ರ ಕತೆಗಳು ಮನದೊಳಗೆ ಗೂಡುಕಟ್ಟಲಾರಂಭಿಸಿದ್ದು ಸುಳ್ಳಲ್ಲ. ದೂರ ಕಾಣುವ ಗುಡ್ಡ, ಸರಕಾರ ನೆಟ್ಟು ಬೆಳೆಸಿದ ಗೇರು ಬೀಜ ಮೀಸಲು ಪ್ರದೇಶವನ್ನು ನೋಡುತ್ತಿದ್ದಂತೆ ನನೆಗೇನೋ ಹುಚ್ಚು ಪ್ರಪಂಚ ತೆರೆದುಕೊಳ್ಳುತ್ತಿತ್ತು. ಬಾಲ ಕಥೆಗಳನ್ನು ಓದುವ ವಯಸ್ಸು. ಅಲ್ಲೂ ಕೆಲವು ಕಾಡು-ಮೇಡುಗಳ ಕುರಿತಾದ ಬರಹಗಳು ನನ್ನನ್ನು ಇನ್ನಷ್ಟು ಆಸಕ್ತಿಗೆ ತಳ್ಳುತ್ತಿದ್ದವು. ದಾರಿ ತಪ್ಪುವ ಚಡ್ಡಿ ಹಾಕುತ್ತಾ ಮಾತನಾಡುವ ಇಲಿ, ಫ್ರಾಕು ಹಾಕಿದ ಜಿಂಕೆ, ಕನ್ನಡಿಯಿಟ್ಟ ಮೊಲ ಹೀಗೆ ಏನಾದರೂ ಕಾಣ ಸಿಗಬಹುದೋ ಎಂಬ ಕುತೂಹಲ. ರಜೆ ಮುಗಿಯುತ್ತಿದ್ದಂತೆ ಆ ಗುಡ್ಡವನ್ನೊಮ್ಮೆ ಬೆಳ್ಳಂಬೆಳಗ್ಗೆ ಹತ್ತಿ ಇನ್ನೊಂದು ಗುಡ್ಡವೂ ದಾಟಿದರೆ ಪಂಗಿಲ, ಚಂಪಕವನ ಸಿಗಬಹುದೋ ಅನ್ನುವಷ್ಟು ಪೆದ್ದು ಪೆದ್ದಾಗಿ ಅಂದುಕೊಳ್ಳುತ್ತಿದ್ದೆ. ಆಗಂತೂ ಮಲಗಿದ ಕೂಡಲೇ ನಿದ್ದೆ ಆವರಿಸಿದಂತೆ ಇಂಥದ್ದೆಲ್ಲಾ ಕನಸು. ಮತ್ತೆ ನಿರಾಸೆಯಾಗಿ ಅಳು ಬರುತ್ತಿತ್ತು.

ಶಾಲೆಯಲ್ಲಿ ಪರೀಕ್ಷೆಗಳು ಮುಗಿದ ಮೇಲೆ ಏಪ್ರಿಲ್ ಹತ್ತರವರೆಗೂ ಪೊರಕೆ ಮಾಡಲು ಶಾಲೆಯಿಂದ ಅನುಮತಿ ಬರುತ್ತಿತ್ತು. ಅದು ಬಂತೆಂದರೆ ನಮಗೆಲ್ಲ ಎಲ್ಲಿಲ್ಲದ ಖುಷಿ. ಇನ್ನು ಹತ್ತೋ, ಹನ್ನೆರಡು ದಿನಗಳಲ್ಲಿ ರಜೆ ಬೇರೆ, ಈ ಖುಷಿಯಲ್ಲಿ ಶಾಲೆಯ ಸುತ್ತಲಿನ ಕಾಡು ಸೋಸುವುದೇ ನಮ್ಮ ಕೆಲಸ. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗುವ ರೋಚಕ ಅನುಭಗಳ ಹೊಸ ಹೊಸ ಹಸಿ ಹಸಿ ಸುಳ್ಳುಗಳೇ ನಮಗೆ ಜೀವಾಳ. ಶಾಲೆಯ ತರಗತಿಯಲ್ಲೇ ಆಗ ಬೇಕಿಂದಿರಲಿಲ್ಲ. ನಮಗಿಷ್ಟ ಬಂದ ಕಡೆ ಹೋಗಿ ತೆಂಗಿನ ಗರಿ ಸೀಳಿ ಪೊರಕೆ ಕಡ್ಡಿಗಳನ್ನು ಮಾಡಬಹುದಿತ್ತು. ಒಂದು ದಿನ ಯಾರೋ “ಒಬ್ಬ ಬ್ರಹ್ಮ ರಾಕ್ಷಸನನ್ನು ಕಂಡನಂತೆ, ಅದರ ಕಾಲಿನ ಗೆಜ್ಜೆಯ ಶಬ್ಧವನ್ನೂ ಕೇಳಿದನಂತೆ, ಅದನ್ನು ಕಂಡದ್ದೇ ತಡ ಮಾವು ಕೊಯ್ಯಲು ಮರದ ಮೇಲೆ ಹತ್ತಿದವನು ನೇರ ಕೆಳಕ್ಕೆ ಹಾರಿ ಓಡಿ ಬಂದನಂತೆ” ಎಂದೆಲ್ಲಾ ಗುಲ್ಲೆಬ್ಬಿಸುತ್ತಿದ್ದರು. ಅದೆಷ್ಟು ಸುಳ್ಳೆಂದು ನಂಬಲಾಗುವಷ್ಟು ಬುದ್ದಿ ಬೆಳೆದಿರಲಿಲ್ಲ. ” ಅದ್ಯಾಕೆ ಆತನ ಕೈ ಕಾಲು ಮುರಿಯಲಿಲ್ಲ” ನನಗೇನೋ ಅನುಮಾನ ಬಂದು ಯಾರ ಬಳಿ ಈ ಸಂದೇಹ ತೋಡಿಕೊಂಡರೂ ಸೊಪ್ಪು ಹಾಕುವವರಿರಲಿಲ್ಲ. ಆಗ ನಾನು ಚಕಾರವೆತ್ತಿದರೂ ಬಾಯ್ಮುಚ್ಚಿಸಿ ಸಮರ್ಥಿಸುವವರ ಮುಂದೆ ನನ್ನ ಅನುಮಾನಗಳು ಮಣ್ಣು ಸೇರುತ್ತಿದ್ದವು. ಇಡೀ ಶಾಲೆಯೇ ನನ್ನೆದುರಿಗಿರುವಾಗ ಅವರೆಲ್ಲರ ಜೊತೆ ವಾದ ಮಾಡಿ ಜಯಿಸಲಾದೀತೇ? ಹಾಗೆ ಕಂಡವನನ್ನು ಒಮ್ಮೆ ವಿಚಾರಿಸೋಣವೆಂದರೆ, ಅವನು ಶಾಲೆಯಲ್ಲಿ ೭ ನೇ ತರಗತಿಯಲ್ಲಿರುವವನು, ನಾನು ನಾಲ್ಕೋ, ಐದೋ ಕ್ಲಾಸಿನಲ್ಲಿರುವವನು. ಖಂಡಿತಾ ನನ್ನನ್ನು ಸೊಲ್ಲೆತ್ತದಂತೆ ಮಾಡುವ ಎಲ್ಲಾ ಅವಕಾಶಗಳು ಆತನಿಗಿತ್ತು. ಹಾಗೆಯೇ ನಾನೂ ಕಟ್ಟುಬಿದ್ದು ನಂಬಲೇಬೇಕಾಗಿತ್ತು.

ಅದೊಂದು ತೋತಾಪುರಿ ಮಾವಿನ ಮರ. ನನ್ನಜ್ಜನ ತಮ್ಮನ ಸುಪರ್ದಿಯಲ್ಲಿತ್ತು ಎಂದು ನೆನಪು. ಸರಕಾರ ಊರವರ ಜಟಾಪಟಿಗೆ ಯಾರ ಕಡೆಗೆ ವಾಲಿದೆ ಯಾರು ಬಲ್ಲವರು. ನಾನು ಶಾಲೆಗೆ ಹೋಗುತ್ತಿದ್ದ ೭ ವರ್ಷಗಳಲ್ಲಿ ಹೋಗಿದ್ದು ನಾಲ್ಕೋ ಮೂರು ಬಾರಿ. ಆದರೆ ನನಗೆಂದೂ ಒಂದೇ ಒಂದು ಹಣ್ಣು ಬಿದ್ದು ಸಿಕ್ಕಿದ ನೆನಪಿಲ್ಲ. ಸುತ್ತಲೂ ಲಂಟಾನದ ಗಿಡಗಳು, ಬೇಲಿಗಿಡಗಳು ಸೊಂಪಾಗಿ ಬೆಳೆದಿದ್ದವು. ಸರಳಿ ಮರಗಳು ಅಂಕುಡೊಂಕಾಗಿ ಕಾಲು ದಾರಿಗೆ ಒರಗಿ ನಿಂತದ್ದರಿಂದ ಸೂರ್ಯನ ಬೆಳಕು ಆ ಪ್ರದೇಶಕ್ಕೆ ಸರಿಯಾಗಿ ಬೀಳುತ್ತಿರಲಿಲ್ಲ. ಅ ಪ್ರದೇಶ ನಿತ್ಯವೂ ನೆರಳಲ್ಲೇ ಇರುತ್ತಿತ್ತು. ಕಾಣುವವರಿಗೆ ಭೀತಿಯ ವಾತಾವರಣ ನಿರ್ಮಾಣವಾಗುತ್ತಿತ್ತು. ಒಂದು ಬಾರಿ ಹೋಗಿದ್ದಾಗ ಸರಸರನೆ ಏನೋ ತರಗೆಲೆಗಳ ಮಧ್ಯೆ ಹೆಜ್ಜೆಯೂರಿದ ಸದ್ದಾದಂತಾಗಿ ನಾನು ಮತ್ತು ಜೊತೆಗಿದ್ದ ಗೆಳೆಯರಿಬ್ಬರೂ ಭಯಂಕರವಾಗಿ ಹೆದರಿ ಅಲ್ಲಿಂದ ಕಾಲ್ಕಿತ್ತಿದ್ದೆವು. ಬ್ರಹ್ಮರಾಕ್ಷಸನ ಕತೆ ಹಬ್ಬಿದವರ ವಿಷಯಕ್ಕೂ ನಮಗಾದ ಅನುಭವಕ್ಕೂ ಉಪ್ಪು ಖಾರ ಸೇರಿಸಿ ನಾವೂ ಒಂದಷ್ಟು ದಿನ ಇದರ ಕುರಿತು ವಾರ್ತೆ ಹಬ್ಬಿದೆವು. ಆ ಹೊತ್ತಿಗಾಗಲೇ ಬ್ರಹ್ಮ ರಾಕ್ಷಸ ಕಂಡವನು ಏಳನೇ ತರಗತಿ ಮುಗಿಸಿ ಹೋಗಿದ್ದ. ನಿಜವಾಗಿಯೂ ಅಲ್ಲಿ ಅಂಥದ್ದೇನಾದರೂ ಸಮಸ್ಯೆಯುಂಟೇ!? ನನಗಂತೂ ಅದರ ರಹಸ್ಯ ಬೇಧಿಸುವ ಚಪಲ ದಿನೇ ದಿನೇ ಹೆಚ್ಚಾಗುತ್ತಿತ್ತು.

ನನಗೆ ಈ ಕುತೂಹಲ ಕಾಡಲು ಕಾರಣವುಂಟು. ಒಂದು ಸಲ ಯಾವುದೋ ಪುಸ್ತಕದಲ್ಲಿ ಒಂದು ಕಥೆ ಓದಿದೆ. ಎಲ್ಲೋ ಒಂದೂರಲ್ಲಿ, ಇದೇ ತರ ಮಾವಿನ ಹಣ್ಣಿನ ಮರ ಇತ್ತಂತೆ. ಯಾರು ಹೋದ್ರೂ ಜೀವಂತವಾಗಿ ತಿರುಗಿ ಬರ್ತಿರ್ಲಿಲ್ಲವಂತೆ. ಊರವರು ನಾಪತ್ತೆಯ ಆರೋಪ ಪ್ರೇತದ ಮೇಲೆ ಹೊರಿಸತೊಡಗಿದ್ದರು. ನಾಪತ್ತೆಯಾದವರ ಮೃತದೇಹ ಕೂಡಾ ಕಾಣಲು ಸಿಗುತ್ತಿರಲಿಲ್ಲ. ಹೀಗಿರಲು ಒಬ್ಬ ಸುಶಿಕ್ಷಿತ ಆ ಊರಲ್ಲಿದ್ದ. ಅವನು ಈ ರಹಸ್ಯ ಭೇದಿಸಲು ಹೊರಟ. ಬಹಳ ಜಾಗರೂಕತೆಯಿಂದ ನಡೆಯುತ್ತಾ ಆ ಮಾವಿನ ಮರದ ಕೆಳಗೆ ಬಂದಿದ್ದ. ಎಷ್ಟೇ ಹುಡುಕಿದರೂ ಕೊಲೆಗಾರನ ಸುಳಿವು ಸಿಗಲಿಲ್ಲ. ಕೊನೆಗೂ ಸ್ವಲ್ಪ ಹುಡುಕಾಡಿದ ಬಳಿಕ ಅಲ್ಲೇ ಒಂದುದ್ದವಾದ ಉರುಳು ನೇತು ಹಾಕಿದ್ದು ಗಮನಕ್ಕೆ ಬಂತು. ನೋಡಿದರೆ ದೊಡ್ಡ ಹೆಬ್ಬಾವು. ಮರದ ಮೇಲೆ ಕುಣಿಕೆ ಹಾಕಿ ಮಲಗುತ್ತಿತ್ತು. ಯಾರದಾದರೂ ಕುತ್ತಿಗೆ ತಾಗಿದರೆ ಸಾಕು ರಪ್ಪನೆ ಹಿಡಿತ ಬಿಗಿಗೊಳಿಸಿ ಉಸಿರುಗಟ್ಟಿಸಿ ಕೊಂದು ತಿನ್ನುತ್ತಿದ್ದುದು ಅವನು ತಕ್ಷಣ ಊಹಿಸಿಕೊಂಡು ಕೂಡಲೇ ಊರವರ ಗಮನಕ್ಕೆ ತಂದು ಅದನ್ನು ಕೊಂದು ಹಾಕಿಸಿದ. ಈ ಕಥೆಯ ಆಧಾರದಂತೆ ನನಗೂ ಗುಮಾನಿ ದಟ್ಟವಾಯ್ತು. ನಾನ್ಯಾಕೆ ಇದನ್ನು ಭೇಧಿಸಬಾರದು? ಪ್ರಶ್ನೆ ನನ್ನೊಳಗೆ ಕೊರೆಯತೊಡಗಿತು. ಇದಾಗಿ ಕೆಲದಿನಗಳ ನಂತರ ಇನ್ನೊಂದು ಬಾರಿ ಇಬ್ಬರು ಗೆಳೆಯರ ಜೊತೆ ಅಲ್ಲಿಗೆ ಹೋಗಿದ್ದೆ. ದಾರಿಯನ್ನೆಲ್ಲಾ ಪರೀಕ್ಷಿಸಿ ಹೆಬ್ಬಾವಿನ ಕುಣಿಕೆಯನ್ನು ಹುಡುಕುತ್ತಲೇ ಇದ್ದ. ನಿಶ್ಯಬ್ಧ ವಾತಾವರಣ ಕಿರ್ರನೆ ಗಾಳಿಗೆ ಬಾಗುವ ಸದ್ದು ಬಿಟ್ಟರೆ ನಮ್ಮ ಸುಯ್ಲೂ ನಮಗೆ ಕೇಳಿಸದು. ಮೂವರು ಢವಗುಡುವ ಹೃದಯದೊಂದಿಗೆ ಅಲ್ಲಿಗೆ ಬಂದಿದ್ದೆವು. ನೋಡುವಾಗ ಮಾವಿನ ಮರದ ಬುಡವೆಲ್ಲಾ ಒಪ್ಪ ಓರಣವಾಗಿ ಗುಡಿಸಿಡಲಾಗಿದೆ. ಅಷ್ಟರಲ್ಲೇ “ಟನ್” ಎಂದು ಘಂಟೆ ಬಡಿಯುವ ಸದ್ದು ಕೇಳಿತು. ಶಾಲೆಗೂ ಸಮಯವಾಗಿತ್ತು, ಒಂದೇ ಸಮನೆ ಮೂವರೂ ಯಾರ ಆಜ್ಞೆಗೂ ನಿಲ್ಲದೆ ಕಾಲ್ಕಿತ್ತೆವು. ಅಲ್ಲಿ ಗುಡಿಸಿಟ್ಟು ಚೊಕ್ಕಟ ಮಾಡಿದ್ದು ಯಾರು ಎಂಬ ಪ್ರಶ್ನೆ ಹಲವು ದಿನಗಳವರೆಗೆ ನಮ್ಮನ್ನು ಕಾಡುತ್ತಲೇ ಇತ್ತು.

ಆವಾಗ ಬಾಲ ಕಥೆಗಳನ್ನು ಓದುವ ವಯಸ್ಸು. ಅಲ್ಲೂ ಕೆಲವು ಕಾಡು-ಮೇಡುಗಳ ಕುರಿತಾದ ಬರಹಗಳು ನನ್ನನ್ನು ಇನ್ನಷ್ಟು ಆಸಕ್ತಿಗೆ ತಳ್ಳುತ್ತಿದ್ದವು. ದಾರಿ ತಪ್ಪುವ ಚಡ್ಡಿ ಹಾಕುತ್ತಾ ಮಾತನಾಡುವ ಇಲಿ, ಫ್ರಾಕು ಹಾಕಿದ ಜಿಂಕೆ, ಕನ್ನಡಿಯಿಟ್ಟ ಮೊಲ ಹೀಗೆ ಏನಾದರೂ ಕಾಣ ಸಿಗಬಹುದೋ ಎಂಬ ಕುತೂಹಲ. ರಜೆ ಮುಗಿಯುತ್ತಿದ್ದಂತೆ ಆ ಗುಡ್ಡವನ್ನೊಮ್ಮೆ ಬೆಳ್ಳಂಬೆಳಗ್ಗೆ ಹತ್ತಿ ಇನ್ನೊಂದು ಗುಡ್ಡವೂ ದಾಟಿದರೆ ಪಂಗಿಲ, ಚಂಪಕವನ ಸಿಗಬಹುದೋ ಅನ್ನುವಷ್ಟು ಪೆದ್ದು ಪೆದ್ದಾಗಿ ಅಂದುಕೊಳ್ಳುತ್ತಿದ್ದೆ. ಆಗಂತೂ ಮಲಗಿದ ಕೂಡಲೇ ನಿದ್ದೆ ಆವರಿಸಿದಂತೆ ಇಂಥದ್ದೆಲ್ಲಾ ಕನಸು. ಮತ್ತೆ ನಿರಾಸೆಯಾಗಿ ಅಳು ಬರುತ್ತಿತ್ತು.

ಆ ಬಳಿಕ ನಾನು ಆ ಸ್ಥಳಕ್ಕೆ ಹೋಗಿಯೇ ಇಲ್ಲ. ನಮ್ಮ ಸಂದೇಹಗಳಿಗೆ ರೆಕ್ಕೆ ಪುಕ್ಕ ಸೇರಿ ಮಾವಿನ ಮರದ ಸಮಸ್ಯೆ ಇನ್ನಷ್ಟು ಜಟಿಲವಾಯಿತು. ಆ ಬಳಿಕ ಶಾಲೆಗೆ ರಜೆ ಸಿಕ್ಕಿದ ಕೊನೆಯ ದಿನ ಹೋಗಬೇಕೆಂದೆನಿಸಿದರೂ ಏಪ್ರಿಲ್ ಒಂಬತ್ತರಂದು ಪೇರಳೆ ಮರದಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡದ್ದರಿಂದ, ಶಾಲೆಯಿಂದ ಶಿಕ್ಷಕರೇ ಬಂದು ನೋಡಿಹೋಗಿದ್ದರು. ನನಗಂತೂ ವಿಪರೀತ ದುಃಖ ಮತ್ತು ಹತಾಷೆ ಉಂಟಾಗಿತ್ತು. ಇದರಿಂದ ನನ್ನ ಸಂಶಯ ಪರಿಹಾರವಾಗಿರಲಿಲ್ಲ.

ಇಷ್ಟೆಲ್ಲ ನಡೆದು ವರ್ಷಗಳಾದ ನಂತರ ಒಮ್ಮೆ ಅದೇ ಮಾವಿನ ಮರದ ಸಮೀಪ ಕುತೂಹಲದ ಕಿವಿ ಹೊತ್ತು ಕುಳಿತಿದ್ದೆ. ಒಮ್ಮೆಗೆ ತರಗೆಲೆಗಳ ಮೇಲೆ ಚರಪರ ಶಬ್ದವಾಯ್ತು. ನನ್ನ ಎಲ್ಲಾ ಜ್ಞಾನೇಂದ್ರಿಯಗಳು ಥಟ್ಟನೆ ಜಾಗೃತವಾದವು. ಅದೇ ಸದ್ದು ಹಿಂದೆ ಅಷ್ಟೇ ನಿಶ್ಯಬ್ಧತೆಯಲ್ಲಿ ಕೇಳಿಸಿಕೊಂಡಿದ್ದೆ. ಸದ್ದು ಬಂದ ಕಡೆ ದಿಟ್ಟಿ ಹಾಯಿಸಿದೆ. ನೋಡುತ್ತೇನೆ; ಹಾವು ರಾಣಿಯೊಂದು ಪರ ಪರನೆ ಸದ್ದು ಮಾಡುತ್ತಾ ತರಗೆಲೆಗಳ ಮಧ್ಯೆ ತಲೆ ತೂರಿಸುತ್ತಾ ಹರಿದಾಡುತ್ತಿತ್ತು. ನನಗೊಮ್ಮೆ ನಗು, ಮತ್ತು ಸಂತೋಷ ಒಟ್ಟೊಟ್ಟಿಗೆ ಬಂತು. ನಮ್ಮ ತೋತಾಪುರಿ ಮಾವಿನ ಭೂತದ ರಹಸ್ಯ ಎಳೆಯೆಳೆಯಾಗಿ ನನ್ನ ಮುಂದೆ ಬಿಚ್ಚತೊಡಗಿತ್ತು. ಈಗ ಅಲ್ಲಿನ ಕೆಲವು ಕಟ್ಟು ಕಥೆಗಳ ಹಿಂದಿನ ರಹಸ್ಯ ಮಾತ್ರ ಎಷ್ಟು ಜನರಿಗೆ ಗೊತ್ತಿದೆಯೋ? ನಾನು ಮಾತ್ರ ಹೀಗೆ ನಂಬಿದ್ದೇನೆ. ಅಲ್ಲಿರುವ ಮಾವಿನ ಹಣ್ಣುಗಳನ್ನು ಮಕ್ಕಳು ಯಾರಾದ್ರೂ ಹೆಕ್ಕಿಕೊಂಡೋ, ಕೊಯ್ದುಕೊಂಡೋ ಹೋಗುವುದಕ್ಕಾಗಿಯೇ ಈ ಕಟ್ಟು ಕಥೆಗಳನ್ನು ಹೆಣೆಯಲಾಗಿದೆ. ಮರದ ಕೆಳಗೆ ಗುಡಿಸಿಟ್ಟುದನ್ನು ಕಂಡದ್ದು ಬಹುಃಶ ಯಾರೋ ಹತ್ತಿರದ ಮನೆಯವರ ಕೆಲಸ. ಮಾವಿನ ಹಣ್ಣು ಹೆಕ್ಕಲು ಸುಲಭವಾಗಲು ಈ ರೀತಿ ಮಾಡಿದ್ದಿರಬೇಕು. ಅಂತೂ ಇಂತೂ ಬ್ರಹ್ಮರಾಕ್ಷಸನ ಭೀತಿ ಒಂದಷ್ಟು ಕಾಲ ನಮ್ಮನ್ನು ಅದರ ಬಳಿ ಸುಳಿಯದಂತೆ ಮಾಡಿದ್ದು ಸುಳ್ಳಲ್ಲ.

ಬೆತ್ತದ ಹುಡುಕಾಟ ಮತ್ತು ಹಕ್ಕಿ ಮೊಟ್ಟೆ

ಈ ವರ್ಷದ ಕ್ಲಾಸಿನ ಲೀಡರ್ ” ಮುನಾವರ್” ಅನ್ನುತ್ತಾ ಅಧ್ಯಾಪಕರು ನನ್ನ ಹೆಸರನ್ನು ಅಪಭ್ರಂಶಗೊಳಿಸಿ ಕರೆದರೆ ಮುಗಿಯಿತು. ಎಷ್ಟು ಹೆಣ್ಮಕ್ಳು ಹೊಟ್ಟೆ ಉರಿಸಿಕೊಳ್ತಿದ್ರೋ? ಗೊತ್ತಿಲ್ಲ. ಒಟ್ಟಾರೆ ನಾನೇ ಲೀಡರಾಗಿ ಬಿಡುತ್ತಿದ್ದೆ. ನನಗಂತೂ ಇದೇ ಚರ್ವಿತಚರ್ವಣ ಕೇಳಿ ಸಾಕಾಗಿ ಹೋಗಿತ್ತು. ಇದರಿಂದ ಒಮ್ಮೆ ಬಿಡುವು ಸಿಗಲಿ ಎಂದು ಪ್ರಾರ್ಥಿಸುವವನಾದೆ. ಒಂದು ಕಡೆ ಮಾತನಾಡಿದವರ ಹೆಸರು ಬರೆದು ಪೆಟ್ಟು ತಿಂದ ವಿದ್ಯಾರ್ಥಿಗಳ ಶಾಪ, ಒಂದು ಕಡೆ ಯಾರೋ ಒಬ್ಬ ಲೀಡರ್ ಆಗಿ ಬಿಟ್ಟರೆ ನನ್ನದೂ ಹೆಸರು ಬಿಡುವನೆಂಬ ಹೆದರಿಕೆ. ಹೆಚ್ಚಿನ ಸಮಯದಲ್ಲೂ ನಾನು ಹೆಸರು ಅಳಿಸಿ ಹಾಕಿ, ಇನ್ನು ಮಾತನಾಡಿದರೆ ಹೆಸರು ಬರೆಯುವೆ ಅಂಥೆಲ್ಲಾ ಹೆದರಿಸಿ ಕೊನೆಗೆ ಯಾರೂ ಮಾತನಾಡಿಲ್ಲವೆಂದು ಸುಳ್ಳು ಹೇಳಿ ಪೆಟ್ಟನ್ನು ತಪ್ಪಿಸುತ್ತಿದ್ದೆ. “ಅಲ್ಲ, ಈ ಸುಯಿಲು ತೆಗೆದರೂ ಹೆಸರು ಬರೆಯಿಸಿ, ಹೆಸರು ನೋಡಿ ಹೊಡೆದ ಶಿಕ್ಷರು ಏನು ಗಿಟ್ಟಿಸಿಕೊಂಡರೋ?” ನಾನಂತೂ ಅರಿಯೆ. ನಾನು ಯಾವತ್ತೂ ಶಾಲೆಯ ಹೋಂ ವರ್ಕ್ ಮನೆಯಲ್ಲಿ ಮಾಡಿದವನಲ್ಲ. ಸಮಯ ಸಿಕ್ಕಾಗ ಶಾಲೆಯಲ್ಲೇ ಮುಗಿಸಿ ಮನೆಗೆ ಬಂದು ಸಂಜೆ ಹಾಯಾಗಿ ತಿರುಗುತ್ತಿದ್ದೆ. ಹೇಳಿ ಕೇಳಿ ಏನಾದ್ರೂ ಪುರುಸೊತ್ತೇ ಸಿಗಲಿಲ್ಲವೆಂದರೆ ಮಾತ್ರ ಮನೆಯಲ್ಲಿ ಪುಸ್ತಕ ಮುಟ್ಟುತ್ತಿದ್ದುದು. ನಮ್ಮಲ್ಲಿ ಒಂದು ಮೂಢನಂಬಿಕೆ ಇತ್ತು. “ಯಾರು ಹೆಚ್ಚು ಬೆತ್ತ ಮಾಡಿ ತರುತ್ತಾರೋ, ಅವರೇ ಹೆಚ್ಚು ಪೆಟ್ಟು ತಿನ್ನುತ್ತಾರೆಂಬುವುದು”. ಯಾವ ದಡ್ಡ ಚಾಣಕ್ಯ ಬರೆದ ಸಂಹಿತೆಯೋ ಯಾರು ಬಲ್ಲವರು. ಅಂತೂ ಬೆತ್ತ ಮಾಡಿ ಕೊಡಲೂ ನನ್ನನ್ನೇ ಅಧ್ಯಾಪಕರು ಕಳಿಸುತ್ತಿದ್ದರು. ಆಗ ಎಲ್ಲರೂ ಶಾಲೆಯಲ್ಲಿ ಕುಳಿತಿರುವಾಗ ಬೆತ್ತ ಮಾಡಲು ನಾನೊಬ್ಬನೇ, ಅಥವಾ ಇಬ್ಬರು ಬೆತ್ತ ಹುಡುಕಿಕೊಂಡು ಹೋಗುತ್ತಿದ್ದ ಮಜಾನೇ ಬೇರೆ. ಬೆತ್ತ ಮಾಡುವಾಗ, ಜೊತೆಗೆ ಹೆಚ್ಚು ಪೆಟ್ಟು ತಿನ್ನುವ ತರಲೆ ಹುಡುಗರು ಯಾರಾದರೂ ಇದ್ದರೆ ಬಿದಿರಿನ ಬೆತ್ತದ ಮಧ್ಯೆ ಸ್ವಲ್ಪ ಹೆಚ್ಚೇ ನೀವಿ ಒಂದೇ ಪೆಟ್ಟಿಗೆ ತುಂಡಾಗುವ ರೀತಿಯಲ್ಲಿ ವಿನ್ಯಾಸ ಮಾಡುತ್ತಿದ್ದೆವು.

ಒಮ್ಮೆ ನಾಲ್ಕನೇ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬ ಮನೆಯ ಕಡೆ ನಾಗರ ಬೆತ್ತ ಇದೆ ಎಂದು ಹೇಳಿ ನನ್ನನ್ನೂ ಅವನೊಂದಿಗೆ ಸೇರಿಸಿ ಒಂದು ನಾಲ್ಕು ಬೆತ್ತ ಮಾಡಿಸಿಕೊಂಡು ಬನ್ನಿ ಎಂದು ಕಳಿಸಿದ್ದರು. ಅವನ ಹೆಸರು ನಿರಂಜನ. ನಾವು ಚಡ್ಡಿ ದೋಸ್ತಿಗಳು. ಆಗ ನಮ್ಮ ಪಯಣ ಆರಂಭವಾಯಿತು ನೋಡಿ. ನಡೆದೇ ನಡೆದೆವು. ಎಷ್ಟು ದೂರ? ಎಂಬ ಪ್ರಶ್ನೆಗೆ “ಹಿಂದೆ ಬಾ” ಅನ್ನುವ ಉತ್ತರವಲ್ಲದೆ ಆತ ದೂರದ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ನಮ್ಮೂರ ಶಾಲೆ ಇರುವುದು ಬನ್ನೆಂಗಳ. ಒಳ ದಾರಿಯಲ್ಲಿ ಹೊರಟರೆ ಪಿಲಿಗೂಡು, ದೋಟಾಜೆ, ಮೊಗ್ಗ ಗುತ್ತು, ಕರಾಯ ಕೂಡ ಸೇರಬಹುದು. ೧೧ ಘಂಟೆಗೆ ಸವಾರಿ ಪ್ರಾರಂಭವಾಗಿತ್ತು. ದಾರಿಯುದ್ದಕ್ಕೂ ಕಾಡು, ಕಾಡೆಂದರೆ ಕಾಡು ಅಷ್ಟೇ. ಮೊದ ಮೊದಲಲ್ಲಿ ಗದ್ದೆ ಬದುವಿನಲ್ಲಿ ನಡೆಯಬೇಕು. ಹಸಿರು ಕಂಗೊಳಿಸುವ ಹಸಿರು ಭತ್ತದ ಗದ್ದೆ ಒಮ್ಮೆ ಎಂಥವನನ್ನೂ ಆಕರ್ಷಿಸಬಲ್ಲದು. ನೀರಿನ ಸಣ್ಣಸೇತುವೆ ದಾಟಿ ಕಾಲು ದಾರಿಯಲ್ಲಿ ಸಾಗಬೇಕು, ಎಷ್ಟೋ ದೂರ ಸುಮ್ಮನೆ ನಡೆಯುತ್ತಲೇ ಇದ್ದೆವು. ದಾರಿ ತಿಳಿಯುವ ಒಬ್ಬನಿರುವಾಗ ದಾರಿ ತಪ್ಪಿದರೇನು ಬಂತು. ಅಂತೂ ನನಗೆ ಅಲ್ಪ ಸ್ವಲ್ಪ ಹೋಗಿ ಗೊತ್ತಿದ್ದ ದಾರಿಯು ಮುಗಿಯಿತು. ಹಂದಿ ಪಾಲನೆ ಮಾಡುವ ಕ್ರೈಸ್ತರ ಮನೆಯೂ ದಾಟಿತು. ಸಣ್ಣ ನೀರಿನ ಝರಿ, ಮರದಿಂದ ತಯಾರಿಸಿದ ದಾಟು ಸೇತುವೆ. ಒಂದು ಸೇತುವೆಯಂತೂ ವಿಪರೀತ ಉದ್ದ. ಮಲೇರಿಯಾ ಬಂದವರಂತೆ ಗಡ ಗಡನೆ ನಡುಗುತ್ತಲೇ ಇತ್ತು. ಮೊಟ್ಟ ಮೊದಲು ಸೇತುವೆ ಬದಿಯಲ್ಲಿ ನಡೆದು ಹೋಗುವ ಪ್ರಯಾಣಿಕ ಹೆದರುವಂತೆ ನಾನೂ ನಡುಗುತ್ತಲೇ ದಾಟಿದೆ. ಅಷ್ಟೊತ್ತಿಗೆ ಹೋದ ಪ್ರಾಣ ಮರಳಿ ಬಂದಿದ್ದು ಸುಳ್ಳಲ್ಲ. ಒಂದು ಗಂಟೆಗೂ ಹೆಚ್ಚು ನಡೆದಿದ್ದೆವು. ಆತ ಶಾಲೆಗೆ ಸಮಯವಾಗಲೆಂದು ಬಳಸು ದಾರಿಯಲ್ಲಿ ನಡೆಯಿಸಿದ್ದಿರಬೇಕು. ಮಧ್ಯೆ ಹಕ್ಕಿಗಳು ಗುಬ್ಬಳಿಸುವ ಸದ್ದು, ನಡುನಡುವೆ ಪೊದೆಗಳಲ್ಲಿ ಸರಸರನೆ ಹರಿಯುವ ಹಾವು. ನನಗಂತೂ ಅಮೇಝಾನ್ ಕಾಡಿನಲ್ಲೇ ಬಂಧಿಯಾಗಿದ್ದೇನನ್ನುವಷ್ಟು ಕಳವಳ ಉಂಟಾಗುತ್ತಿತ್ತು. ಅಳಿಲುಗಳ ಚೀಂಗುಟ್ಟುವ ಸದ್ದು, ಮಾತಿನ ಮಧ್ಯೆ ಮೌನ ತಾಳುತ್ತಿದ್ದ ನನಗೆ ಹೆದರಿಕೆ ಹುಟ್ಟಿಸಿ ಬಿಡುತ್ತಿತ್ತು. ದಾರಿ ಮಧ್ಯೆ ಮನೆಗಳು ಕಂಡಿತೆಂದರೆ ನನಗೆ ಅನಾಥ ಭಾವದಿಂದ ಹೊರಬಂದಷ್ಟು ಖುಷಿಯಾಗುತ್ತಿತ್ತು. ನನ್ನ ಹೆದರಿಕೆಯನ್ನೇನೋ ಆತನಲ್ಲಿ ತೋರಿಸಿಕೊಡಲಿಲ್ಲ. ಅದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯೆಂದೇ ಭಾವಿಸಿದ್ದೆ.

ನಮ್ಮಲ್ಲಿ ಒಂದು ಮೂಢನಂಬಿಕೆ ಇತ್ತು. “ಯಾರು ಹೆಚ್ಚು ಬೆತ್ತ ಮಾಡಿ ತರುತ್ತಾರೋ, ಅವರೇ ಹೆಚ್ಚು ಪೆಟ್ಟು ತಿನ್ನುತ್ತಾರೆಂಬುವುದು”. ಯಾವ ದಡ್ಡ ಚಾಣಕ್ಯ ಬರೆದ ಸಂಹಿತೆಯೋ ಯಾರು ಬಲ್ಲವರು. ಅಂತೂ ಬೆತ್ತ ಮಾಡಿ ಕೊಡಲೂ ನನ್ನನ್ನೇ ಅಧ್ಯಾಪಕರು ಕಳಿಸುತ್ತಿದ್ದರು. ಆಗ ಎಲ್ಲರೂ ಶಾಲೆಯಲ್ಲಿ ಕುಳಿತಿರುವಾಗ ಬೆತ್ತ ಮಾಡಲು ನಾನೊಬ್ಬನೇ, ಅಥವಾ ಇಬ್ಬರು ಬೆತ್ತ ಹುಡುಕಿಕೊಂಡು ಹೋಗುತ್ತಿದ್ದ ಮಜಾನೇ ಬೇರೆ. ಬೆತ್ತ ಮಾಡುವಾಗ, ಜೊತೆಗೆ ಹೆಚ್ಚು ಪೆಟ್ಟು ತಿನ್ನುವ ತರಲೆ ಹುಡುಗರು ಯಾರಾದರೂ ಇದ್ದರೆ ಬಿದಿರಿನ ಬೆತ್ತದ ಮಧ್ಯೆ ಸ್ವಲ್ಪ ಹೆಚ್ಚೇ ನೀವಿ ಒಂದೇ ಪೆಟ್ಟಿಗೆ ತುಂಡಾಗುವ ರೀತಿಯಲ್ಲಿ ವಿನ್ಯಾಸ ಮಾಡುತ್ತಿದ್ದೆವು.

ಹಲವಷ್ಟು ಮನೆಗಳಲ್ಲಿ ನಾಯಿಗಳು ಬೊಗಳುತ್ತಿದ್ದವು. ಆಕಾಶ ನಕ್ಷತ್ರವೇ ಬಿದ್ದು ಶರಣಾಗತಿ ಕೇಳುವಷ್ಟೂ ಗಟ್ಟಿಯಾಗಿ ಅರಚುತ್ತಿದ್ದವು. ಆ ಸಮಯದಲ್ಲೆಲ್ಲಾ ನಾನು ಪರಾರಿ ಕೀಳಲು ಯತ್ನಿಸುತ್ತಿದ್ದೆ. ನನ್ನದೇ ಓರಗೆಯ ನಿರಂಜನನಿಗೆ ನಾಯಿಗಳೆಂದರೆ ಸಲೀಸು. ಕಲ್ಲೋ, ಬಡಿಗೆಯೋ ಎತ್ತಿ ಎಸೆಯುವಂತೆ ಮಾಡಿದರೆ ಸಾಕು, “ಸೆಂಟರ್ ಫ್ರೆಶ್ ” ಜಾಹಿರಾತು ಕಣ್ಣಿಗೆ ಕಾಣಿಸಿದಂತಾಗುತ್ತಿತ್ತು. ಒಮ್ಮೆಲೆ ಬೊಗಳುವುದು ನಿಲ್ಲಿಸಿ ಹೆದರಿ ಹಿಂದೆ ಸರಿಯುವುದನ್ನು ಕಾಣುವಾಗ ನಿರಂಜನನೇ ಸದ್ಯದ ಆಪತ್ಬಾಂಧವನೆಂದು ಅಂದಾಜಿಸಿದೆ. ಬಹುಶಃ ಇದೇ ದಾರಿಯಲ್ಲಿ ಆತ ನಡೆದು ದಿನವೂ ಶಾಲೆಗೆ ಬರುವವನಾಗಿದ್ದರೆ ಖಂಡಿತಾ ಬರುತ್ತಿರಲಿಲ್ಲವೆಂದು ಕಾಣುತ್ತೆ, ದಾರಿಯಂತೂ ಸಿಕ್ಕಾಪಟ್ಟೆ ದೂರವಾಗುತ್ತಲೇ ಇತ್ತು. ಸೂರ್ಯ ನೆತ್ತಿಯ ನೇರ ಸುಡತೊಡಗಿದ. ನಡೆಯುವ ದಾರಿಯಲ್ಲಿ ಹಕ್ಕಿ ಗೂಡೊಂದನ್ನು ನಾವು ನೋಡಿದೆವು. ಆತ ಹಿಂದೆಯೇ ಇರಿಸಿದ್ದ ಉರುಳನ್ನು ಸರಿ ಪಡಿಸಿ ಮತ್ತೆ ಯಥಾ ಸ್ಥಾನಕ್ಕೆ ಕುಳ್ಳಿರಿಸಿದ. ಪೆಪ್ಪರಮೆಂಟು ಗಾತ್ರದ ಬೂದು ನಸುಗೆಂಪು ಮೊಟ್ಟೆಗಳು ಗೂಡಿನಲ್ಲಿದ್ದುದನ್ನು ನಾನು ಗಮನಿಸಿದೆ. ಸ್ವಲ್ಪ ಹೊತ್ತಿಗೆ ನಿರಂಜನನ ಮನೆ ಬಂತು. ಅಲ್ಲೂ ನಾಯಿಯದೇ ಕಾಟ, ನನ್ನ ನೋಡಿ ಮೈಮೇಲೆ ಹಾರಲು ಹವಣಿಸುತ್ತಿದ್ದ ನಾಯಿಯಿಂದ ತಪ್ಪಿಸಿಕೊಳ್ಳಲು ನಿರಂಜನನನ್ನು ಗುರಾಣಿಯಾಗಿಸಿ ಮನೆಯೊಳಗೆ ಪ್ರವೇಶಿಸಿದೆ. ಆತ ಗದರಿದಾಗ ನಾಯಿ ಸುಮ್ಮನಾಯಿತು. ಬೀಡಿ ಸೊಪ್ಪನ್ನು ಮಡಿಲಲ್ಲಿರಿಸಿದ್ದ ಅವನಮ್ಮ ನನ್ನ ಅರೆ ಬರೆ ತುಳುವನ್ನು ಕೇಳಿಸಿಕೊಂಡು ಕನಿಕರ ಹುಟ್ಟಿ ಕನ್ನಡದಲ್ಲೇ ಮಾತನಾಡತೊಡಗಿದರು. ಅಂತೂ ಮಜ್ಜಿಗೆ ಮತ್ತು ಊಟ ಬಂತು. ವಿಪರೀತ ಹಸಿವಾಗಿತ್ತು. ನಾನು ಎರಡು ಬಾರಿ ಹಾಕಿಸಿಕೊಂಡು ತಿಂದೆ. ಮತ್ತೆ ಮಜ್ಜಿಗೆ ಬಂತು. ಆ ದಿನ ನೋಡಿದರೆ ನಾಗರ ಬೆತ್ತ ಸಿಗುವುದಿಲ್ಲವೆಂದು ಖಾತ್ರಿಯಾಯಿತು. “ಯೆಂಕು ಪಣಂಬೂರಿಗೆ ಹೋದಂತೆ” ಎಂಬ ತುಳು ಗಾದೆಯಂತೆ ಬರಿಗೈಯಲ್ಲೇ ಮರಳುವ ನಮಗೇನನ್ನುತ್ತಾರೋ ಗೊತ್ತಿಲ್ಲದೆ ಡವಗುಟ್ಟುವ ಹೃದಯದೊಂದಿಗೆ ಮತ್ತೆ ಶಾಲೆ ಕಡೆ ಹೊರಟೆವು. ಅಂತೂ ೨-೩೦ ರ ವೇಳೆಗೆ ಅಲ್ಲಿ ತಲುಪಿದ್ದಿರಬಹುದು. ಮುಖಮಜ್ಜನ ಮುಗಿದು ಅಧ್ಯಾಪಕರ ಕೊಠಡಿಗೆ ಹೊಕ್ಕೆವು. ಇನ್ನೇನು ಬಯ್ಯಲಿದ್ದಾರೆನ್ನುವಾಗ, “ಸರಿ ಇನ್ನೊಮ್ಮೆ ಬರುವಾಗ ತಗೊಂಡು ಬಾ ಅಪ್ಪ” ಎಂದು ಹೇಳಿದ್ದು ಕೇಳಿ ನನಗಂತೂ ದಿಗಿಲು. ಆ ಬಳಿಕ ಆ ಬೆತ್ತ ತಂದು ಕೊಟ್ಟಿದ್ದೂ ನೆನಪಿದೆ. ಅದು ಯಾವ ರೀತಿಯ ಗಿಡವೋ ಸಸ್ಯವೋ ಎಂದು ತಿಳಿಯುವ ಆಸೆ ಮಾತ್ರ ಈಡೇರಲೇ ಇಲ್ಲ. ಆ ಬಳಿಕ ಹೋದ ದಾರಿ ದೂರ, ಮತ್ತು ಬಂದ ದಾರಿ ಹತ್ತಿರವಾದ ಕಾರಣವನ್ನೂ ಆತನ ಬಳಿ ಕೇಳಿ ತಿಳಿಯಬೇಕೆಂದಿದ್ದರೂ ಎಲ್ಲಾ ಮರೆತು ಹೋಗಿ, ಐದನೇ ತರಗತಿಯ ಕೊನೆಗೆ ಆತ ಶಾಲೆ ಬಿಟ್ಟು ಬೇರೆ ಶಾಲೆ ಸೇರಿಕೊಂಡ.

ನಾಲ್ಕನೇ ತರಗತಿಯಲ್ಲಿರುವಾಗ ಹೀಗೆಯೇ ಒಂದು ಘಟನೆ ನಡೆಯಿತು. ಒಂದು ದಿನ ಬೆಳಗ್ಗೆ ನಿರಂಜನ ಬರುವಾಗ ಹಿಂದೆ ನೋಡಿದ ಅದೇ ತರದ ನಾಲ್ಕು ಮೊಟ್ಟೆಯನ್ನು ಶಾಲೆಗೆ ತಂದಿದ್ದ. ಶಿಕ್ಷಕರಿಗೆ ತೋರಿಸುವ ಅವಸರದಲ್ಲಿ ಆತ ಇದ್ದಂತಿತ್ತು. ನಾನು ಕೇಳಿದ್ದಕ್ಕೆ ಏನೇನೂ ಉತ್ತರ ಕೊಟ್ಟಿರಲಿಲ್ಲ. ಟೀಚರು ಕ್ಲಾಸಿಗೆ ಬಂದಂತೆ ನನಗೆ ಹುಚ್ಚು ಕುತೂಹಲ. ಹಾಜರಿ ಮುಗಿದ ತಕ್ಷಣ ಮೊಟ್ಟೆಯ ವಿಚಾರ ಹೇಳಿ ಬಿಟ್ಟೆ. “ಎಲ್ಲಿದೆ ಮೊಟ್ಟೆ?” ಎಂದು ಕೇಳಿದರು. ಮೊಟ್ಟೆ ನೋಡಿದ ತಕ್ಷಣ ಏನಾಯ್ತೋ ಗೊತ್ತಿಲ್ಲ. ತಾಯ್ತನದ ನೆನಪಾಗಿ “ಮರ್ಯಾದೆಯೆಂದ ಅದು ಎಲ್ಲಿ ತೆಗೆದಿದೆಯೋ ಅಲ್ಲಿ ಇಟ್ಟು ಬಿಡು” ತಾಯಿ ಹಕ್ಕಿ ಎಷ್ಟು ಸಂಕಟ ಪಟ್ಟಿತೋ ಎಂದು ಹೇಳಿ ಬಯ್ದುಬಿಟ್ಟರು. ಅವರು ಬಯ್ಯುವಾಗಲೇ ಮೆಲ್ಲ ನಿರಂಜನನ ಮುಖ ನೋಡಿದ್ದೆ. ಆತ ನನ್ನನ್ನು ನುಂಗಿಬಿಡುವಷ್ಟು ದ್ವೇಷದಿಂದ ನನ್ನನ್ನೇ ನೋಡಿ ದುರುಗುಟ್ಟಿದ. ಪಾಪ, ನನಗೇನು ಗೊತ್ತು, ಟೀಚರ್ ಈ ರೀತಿ ಬೈತಾರೆಂದು. ನಾನೂ ಸುಮ್ಮನಾದೆ. ತರಗತಿ ಮುಗಿದಂತೆ ಮೆಲ್ಲ ಹೋಗಿ ಆತನ ಸಮಾಧಾನ ಪಡಿಸುವಷ್ಟರಲ್ಲಿ ಸಾಕು ಸಾಕಾಗಿತ್ತು. ಅದಾಗಲೇ ನನ್ನದೂ ಹೊಸ ಉಪಾಯ ತಯ್ಯಾರಾಗಿತ್ತು. ಮನೆಯಲ್ಲಿ ಕಾವಿಗೆ ಕುಳಿತುಕೊಳ್ಳುತ್ತಿದ್ದ ಹೇಂಟೆ ಇತ್ತು. ಹೇಗೂ ಮೊಟ್ಟೆ ಇಡಲು ಕಾವು ಕುಳಿತಿರುತ್ತದೆ. ಅದರ ಮದ್ಯೆ ಈ ಮೊಟ್ಟೆಯನ್ನು ಯಾಕಿಡಬಾರದು? ಇಷ್ಟೆಲ್ಲಾ ತರಗತಿ ಮುಗಿಯುವುದರೊಳಗೆ ಅಲೋಚನೆ ಮಾಡಿ ಹೊರ ಬಂದ ಹಕ್ಕಿ ಮರಿಗಳನ್ನು ದೊಡ್ಡದು ಮಾಡಿ ತುಂಬಾ ಹಕ್ಕಿಗಳು ಮನೆಯಲ್ಲೇ ಸಾಕಬಹುದಲ್ವಾ ಅಂಥ ನನ್ನ ಆಲೋಚನೆಗಳು ರೆಕ್ಕೆ ಬಿಚ್ಚಿ ಹಾರಾಟ ಆರಂಭಿಸಿತ್ತು. ಆತನನ್ನು ಹೇಗೋ ಪುಸಲಾಯಿಸಿ, “ಇನ್ನು ನೀನು ಮಾತನಾಡಿದರೆ ಹೆಸರೇ ಬರೆಯುವುದಿಲ್ಲ” ಅಂತೆಲ್ಲಾ ಹೇಳಿ ಹೇಗೋ ಮೊಟ್ಟೆ ಪಡೆದುಕೊಂಡೆ. ಅದನ್ನು ಆತ ತಂದಿದ್ದ ಅದೇ ಪ್ಲಾಸ್ಟಿಕ್ ಲಕೋಟೆಯಲ್ಲಿರಿಸಿದ್ದೆ. ಊಟದ ವಿರಾಮಕ್ಕೆ ಇನ್ನೊಂದು ಪಿರಿಯಡ್ ಬಾಕಿ ಇತ್ತು. ಅಂತೂ ಅದೂ ಮುಗಿಯಿತು. ಊಟದ ಹೊತ್ತಿಗೆ ಸಮಯವಾದಾಗ ಬೆಲ್ಲು ಬಾರಿಸಿತು. ನಾನು ಮೊಟ್ಟೆ ಬಿಟ್ಟು ಮನೆಗೆ ಓಡಿದೆ.

ಸೂರ್ಯ ನೆತ್ತಿಯ ನೇರ ಸುಡತೊಡಗಿದ. ನಡೆಯುವ ದಾರಿಯಲ್ಲಿ ಹಕ್ಕಿ ಗೂಡೊಂದನ್ನು ನಾವು ನೋಡಿದೆವು. ಆತ ಹಿಂದೆಯೇ ಇರಿಸಿದ್ದ ಉರುಳನ್ನು ಸರಿ ಪಡಿಸಿ ಮತ್ತೆ ಯಥಾ ಸ್ಥಾನಕ್ಕೆ ಕುಳ್ಳಿರಿಸಿದ. ಪೆಪ್ಪರಮೆಂಟು ಗಾತ್ರದ ಬೂದು ನಸುಗೆಂಪು ಮೊಟ್ಟೆಗಳು ಗೂಡಿನಲ್ಲಿದ್ದುದನ್ನು ನಾನು ಗಮನಿಸಿದೆ. ಸ್ವಲ್ಪ ಹೊತ್ತಿಗೆ ನಿರಂಜನನ ಮನೆ ಬಂತು. ಅಲ್ಲೂ ನಾಯಿಯದೇ ಕಾಟ, ನನ್ನ ನೋಡಿ ಮೈಮೇಲೆ ಹಾರಲು ಹವಣಿಸುತ್ತಿದ್ದ ನಾಯಿಯಿಂದ ತಪ್ಪಿಸಿಕೊಳ್ಳಲು ನಿರಂಜನನನ್ನು ಗುರಾಣಿಯಾಗಿಸಿ ಮನೆಯೊಳಗೆ ಪ್ರವೇಶಿಸಿದೆ. ಆತ ಗದರಿದಾಗ ನಾಯಿ ಸುಮ್ಮನಾಯಿತು. ಬೀಡಿ ಸೊಪ್ಪನ್ನು ಮಡಿಲಲ್ಲಿರಿಸಿದ್ದ ಅವನಮ್ಮ ನನ್ನ ಅರೆ ಬರೆ ತುಳುವನ್ನು ಕೇಳಿಸಿಕೊಂಡು ಕನಿಕರ ಹುಟ್ಟಿ ಕನ್ನಡದಲ್ಲೇ ಮಾತನಾಡತೊಡಗಿದರು. ಅಂತೂ ಮಜ್ಜಿಗೆ ಮತ್ತು ಊಟ ಬಂತು. ವಿಪರೀತ ಹಸಿವಾಗಿತ್ತು. ನಾನು ಎರಡು ಬಾರಿ ಹಾಕಿಸಿಕೊಂಡು ತಿಂದೆ. ಮತ್ತೆ ಮಜ್ಜಿಗೆ ಬಂತು. ಆ ದಿನ ನೋಡಿದರೆ ನಾಗರ ಬೆತ್ತ ಸಿಗುವುದಿಲ್ಲವೆಂದು ಖಾತ್ರಿಯಾಯಿತು.

ನನಗೆ ಆಗ ಬಿಸಿಯೂಟ ಹಿಡಿಸುತ್ತಿರಲಿಲ್ಲ. ತಿರುಗಿ ಶಾಲೆಗೆ ಬರಬೇಕಾದರೆ ಮೊಟ್ಟೆಯ ನೆನಪಾಯಿತು. ಈ ಮಧ್ಯೆ ಹೊಸ ತಲೆ ಬಿಸಿಯೊಂದು ಬೆನ್ನು ಬಿತ್ತು. ನಾನು ಕೊಂಡು ಹೋಗುವುದನ್ನು ಟೀಚರಾಗಲೀ, ಹತ್ತಿರದ ಮನೆಯವರಾಗಲೀ ನೋಡಬಾರದು. ಹಾಗಂತ ಆ ದೊಡ್ಡ ಪ್ಲಾಸ್ಟಿಕ್ ಲಕೋಟೆ ಹಿಡಿದುಕೊಂಡು ಹೋಗುವಂತಿರಲಿಲ್ಲ. ಸಂಜೆಯ ಕೊನೆಯ ಮುಂದಿನ ಪಿರಿಯಡ್ ನ ಸಮಯದಲ್ಲಿ ಲಕೋಟೆ ತೆಗೆದು ಮೆಲ್ಲಗೆ ಬ್ಯಾಗ್ ತೆಗೆದು ಸಣ್ಣಗಿರುವ ಝಿಪ್ ಇರುವ ಕಿಸೆಗೆ ನಾಲಕ್ಕು ಮೊಟ್ಟೆಯನ್ನು ಹಾಕಿದೆ. ಸೂಕ್ಷ್ಮವಾಗಿ ನೋಡಿದೆ, ಮೊಟ್ಟೆ ಒಡೆದು ಹೋಗಿರಲಿಲ್ಲ. ಶಾಲೆ ಬಿಟ್ಟಂತೆ ಬಿರ ಬಿರನೆ ಚೀಲ ಅಲುಗದಂತೆ ವೇಗದ ಹೆಜ್ಜೆ ಹಾಕುತ್ತಾ ಮನೆ ಕಡೆ ನಡೆಯುತ್ತಿದ್ದೆ. ಮಧ್ಯೆ ಸಿಗುವವರ ಮನೆಯವರ ಕಡೆ ಮುಖಾನೂ ತಿರುಗಿಸದೆ ಸಾಗಿ ಬಂದೆ. ಸಣ್ಣ ತೋಡು ದಾಟಲಿರುವ ತನಕ ನೆನಪಿತ್ತೋ ಏನೋ, ಅಲ್ಲಿಂದ ಮುಂದೆ ಮೊಟ್ಟೆಯ ವಿಚಾರ ನೆನಪಿನಿಂದ ಹೋಯಿತು. ಮತ್ತೆ ಮನೆಗೆ ಹೋಗಿ ಸ್ನಾನ ಮಾಡಿ ಮಸೀದಿಗೆ ಹೋದೆ. ಮಸೀದಿಯಿಂದ ರಾತ್ರಿ ಮರಳುವ ದಾರಿಯಲ್ಲಿ ಮತ್ತೆ ಮೊಟ್ಟೆಯ ನೆನಪಾಯಿತು. ಕಿವಿಗೆ ಗಾಳಿ ನುಗ್ಗಿದ ಕರುವಿನಂತೆ ಒಂದೇ ಸಮನೆ ಓಡಿ ಮನೆಗೆ ಬಂದು ಮನೆಯವರಿಗೂ ಸಂದೇಹ ಬಾರದಂತೆ ಬ್ಯಾಗ್ ಕಡೆಗೆ ದಿಟ್ಟಿ ಹಾಯಿಸಿದೆ. ಮೊಟ್ಟೆ ಇಟ್ಟ ಜೇಬು ಮೇಲೆಯೇ ಇರುವಂತೆ ಬ್ಯಾಗ್ ಬಿದ್ದಿತ್ತು. ಡವಗುಟ್ಟುವ ಹೃದಯದೊಂದಿಗೆ ಬ್ಯಾಗನ್ನು ಹಿಡಿದು ಮೂಲೆ ಸೇರಿದೆ. ಮೆಲ್ಲಗೆ ಬ್ಯಾಗಿನ ಝಿಪ್ಪನ್ನು ಪ್ರಾರ್ಥಿಸುತ್ತಲೇ ತೆಗೆದೆ. ನೋಡುವುದೇನು, ಮೊಟ್ಟೆಗಳೆಲ್ಲಾ ಆಮ್ಲೇಟಾಗಿ ಹೋಗಿದೆ. ಆ ಜೇಬು ಪೂರ ವಾಸನೆ. ಈ ರಾತ್ರಿ ಎಲ್ಲರೆದುರಲ್ಲಿ ತೊಳೆಯಲು ಹೋದರೆ ಪೆಟ್ಟು ಕಟ್ಟಿಟ್ಟ ಬುತ್ತಿ. ಮೆಲ್ಲ ಅಲ್ಲಿ ಬಿದ್ದಿದ್ದ ಪೇಪರನ್ನು ಹರಿದು ಮೊಟ್ಟೆಯ ಲೋಳೆಯನ್ನೆಲ್ಲಾ ಅದ್ದಿ ತೆಗೆದೆ; ವಾಸನೆ ಹೋದಂತೆ ತೋರಲಿಲ್ಲ. ಮತ್ತೆ ಹೋಗಿ ಕೈತೊಳೆದುಕೊಳ್ಳುತ್ತಾ ಸೋಪಿನ ನೆನಪು ಬಂದು ಅದರ ನೊರೆಯನ್ನು ಆ ಜೇಬಿಗೆ ಇಳಿಬಿಟ್ಟೆ ಮತ್ತೊಂದು ಪೇಪರಲ್ಲಿ ಒರೆಸಿಕೊಂಡೆ. ಆ ಬಳಿಕ ನನ್ನ ಬ್ಯಾಗಿನ ಬಳಿ ಯಾರೂ ಸುಳಿಯುವುದಕ್ಕೆ ಬಿಟ್ಟಿರಲಿಲ್ಲ. ಮನೆಯಲ್ಲಿ ಯಾವ ಸುಗಂಧ ದ್ರವ್ಯ ಬಂದರೂ ಆ ಜೇಬಿನೊಳಗಿನ ಅಭಿಶೇಕ ಮಾಡುತ್ತಲೇ ಇದ್ದೆ. ಒಮ್ಮೆ ಪೌಡರಿಗೆ ಸೆಂಟು ಹಾಕಿ ಆ ಜೇಬಿನೊಳಗೂ ಹಾಕಿದ್ದೆ. ಕೊನೆಯವರೆಗೂ ವಾಸನೆ ಹೋದಂತಿರಲಿಲ್ಲ. ನಾಗವಲ್ಲಿಯ ಕೊಠಡಿಯಂತೆ ನಾನು ಆ ಬ್ಯಾಗಿನ ಜೇಬಿನ ಝಿಪ್ಪನ್ನು ಯಾರಿಗೂ ತೆಗೆಯಲು ಬಿಡಲೇ ಇಲ್ಲ. ಆ ಬಳಿಕ ಬ್ಯಾಗ್ ಬದಲಾಯಿತು. ನೆನಪುಗಳು ಹಾಗೆಯೇ ಉಳಿದುಕೊಂಡವು. ಇನ್ನೊಮ್ಮೆ ಅಟ್ಟ ಗುಡಿಸುವಾಗ ಅದೇ ಬ್ಯಾಗ್ ಸಿಕ್ಕರೆ ಬೇರೆ ಏನಾದರೂ ನೆನಪಾಗುವ ಕಥೆಯನ್ನು ಹೇಳುತ್ತೇನೆ.

ಏಡಿಯ ಅವಾಂತರ

ಮಳೆಗಾಲ ಬಂತೆಂದರೆ ಆ ದಿನಗಳಲ್ಲಿ ಹಬ್ಬ. ಶಾಲೆ ಬಿಟ್ಟು ಬರುವ ದಾರಿಯಲ್ಲಿ ಕೆಂಪು ನೀರು ಹರಿಯುವ ತೊರೆಯನ್ನು ದಾಟಿ ಸಾಗಬೇಕಾದ ದಾರಿಯೇ ಏಕೆ ಇಷ್ಟವಾಗುತ್ತದೆಂದು ಕೇಳಿದರೆ, ಉತ್ತರವಿಲ್ಲ. ಅಂತೂ ಮಳೆಯಿಲ್ಲದ ದಿನ ಮೊಣಕಾಲಿನ ಬಳಿ ಎತ್ತಿಟ್ಟ ಪ್ಯಾಂಟಿನ ತುದಿ ಒದ್ದೆಯಾದರೆ ಮುಗಿಯಿತು. ಅಪ್ಪನ ಕೈ ಮತ್ತು ನಮ್ಮ ಬೆನ್ನು ಬಿಸಿಯಾಗುವಷ್ಟು ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಹಾಗಂತ ನಾನು ಕಲಿಯದಿರುವುದಕ್ಕೆ ಪೆಟ್ಟು ತಿಂದ ಚರಿತ್ರೆಯೇ ಇಲ್ಲ. ಕೀಟಲೆ ಮಾಡಿದ್ದಕ್ಕೆ ದಿನವೂ ಪೆಟ್ಟು ತಿನ್ನುತ್ತಿದ್ದ ನನಗೆ ಕಲಿಯದ್ದಕ್ಕೂ ಪೆಟ್ಟು ತಿನ್ನುವಂತವನಾಗಿದ್ದರೆ ಯಾವತ್ತಿಗೋ ಬೆಂಗಳೂರಿನ ಫುಟ್ ಪಾತ್ ಗಳಲ್ಲಿ ಬದುಕು ಕಲಿತುಕೊಳ್ಳುತ್ತಿದ್ದೆನೋ ಏನೋ? ತಥಾಕಥಿತ ದಾರಿಯಲ್ಲಿ ಬರುವುದಾದರೆ ಮಳೆಯ ದಿನಗಳಲ್ಲಿ ರಭಸವಾಗಿ ಕಲಕು ನೀರು ಹರಿದು ಹೋಗುತ್ತಿತ್ತು. ಅದನ್ನು ದಾಟುವ ಸಾಹಸಕ್ಕೆ ಹೊಸ ಉಮೇದು. ಹಾಗಂತ ನಾವು ಬೇಕೂಂತಲೇ ಬಿದ್ದು ಹೊರಳಾಡಿದರೂ ನಮ್ಮನ್ನು ಕೊಚ್ಚಿಕೊಂಡು ಹೋಗುವಷ್ಟು ದೊಡ್ಡ ತೋಡಾಗಿರಲಿಲ್ಲ ಅದು. ಮಳೆ ಬೀಳುವಾಗ ರಭಸವಾಗಿ ಹರಿಯುವ ದಿನಗಳಲ್ಲಿ ಚಹಾದಂತೆ ತೋರುವ ಗಾಢವಾದ ಬಣ್ಣದ ಹರಿಯುವ ನೀರು ನೋಡಬಹುದಿತ್ತು. ಮಳೆಯಿಲ್ಲದ ದಿನಗಳಲ್ಲಿ ಸ್ಪಟಿಕ ಶುಭ್ರ ತೊರೆ. ಮನೆಯ ದಾರಿಯಲ್ಲಿ ಅಡ್ಡಲಾಗಿ ಸಿಗುವ ಸಣ್ಣ ತೊರೆಯಾಗಿತ್ತು ಅದು. ಕೆಲವೊಮ್ಮೆ ಕುತೂಹಲದಿಂದ ನೀರು ಬರುವ ಕೊನೆಯ ಸ್ಥಳ ಯಾವುದೆಂದು ಹುಡುಕಿಕೊಂಡ ಹೋದ ಚರಿತ್ರೆಯೂ ನಮ್ಮಲ್ಲಿದೆ.

ಹೀಗೆ ಮುಂದೆ ಹೋದರೆ ಸ್ಪಲ್ಪ ದೂರದಲ್ಲಿ ರಭಸವಾಗಿ ನೀರು ಬಿದ್ದು ಉಂಟಾದ ಸಣ್ಣ ಕುಳಿಯೊಂದಿದೆ. ಆ ಕಿಷ್ಕಿಂದೆಯ ಬಳಿ ಚೆನ್ನಾಗಿ ಬೆಳಕು ಬೀಳುತ್ತದೆ. ಬಹುಃಶ ಆ ಕಾರಣಕ್ಕೆ ಅಲ್ಲಿ ಸುಮಾರು ಮೀನುಗಳು ಒಂದೇ ಕಡೆ ನೆಲೆಸಿರುತ್ತದೆ. ಬಗೆ ಬಗೆಯ ಜಾತಿಯ ತೋಡಿನಲ್ಲಿ ವಾಸಿಸುವ ಮೀನುಗಳನ್ನು ಆ ಕೊರಕಲಲ್ಲಿ ಹಿಡಿದಿದ್ದರಿಂದಲೇ ಅಲ್ಲಿ ಹೆಚ್ಚು ಮೀನುಗಳು ವಾಸಿಸುತ್ತವೆಂಬ ನಂಬಿಕೆ. ನನ್ನ ಅಣ್ಣನಿಗೆ ಮೀನು ಹಿಡಿಯಲು ಗೊತ್ತಿಲ್ಲದಿದ್ದರೂ, ಅವನ ಜೊತೆಗಿದ್ದ ಸ್ನೇಹಿತನಿಗೆ ಈ ಬಗ್ಗೆ ಅಪಾರ ಜ್ಞಾನವಿತ್ತು. ಆ ಕಾಲದಲ್ಲಿ ಮೀನು ಹಿಡಿಯುವುದರಲ್ಲಿ ಆತ ನಮಗೆಲ್ಲಾ ಗುರು ಅನ್ನಿಸಿಕೊಂಡಿದ್ದ. ಅಣ್ಣ ಮತ್ತು ಅದೇ ಓರಗೆಯ ಶರೀಫ್ ಇಬ್ಬರೂ ಸೇರಿ ಮೀನು ಹಿಡಿಯುತ್ತಿದ್ದುದು ನೆನಪು. ಕೆಲವೊಮ್ಮೆ ಅವರು ಮೀನು ಹಿಡಿಯಲು ಬಳಸುವ ಬಟ್ಟೆಯಿಂದ ಮೀನುಗಳು ತಪ್ಪಿ ಹೋದರೆ ನನಗೆ ಬೈಗುಳಗಳ ಸುರಿಮಳೆಯಾಗುತ್ತಿತ್ತು. “ಇನ್ನು ಇವನನ್ನು ಮೀನು ಹಿಡಿಯಲು ಕರೆದುಕೊಳ್ಳಬಾರದು” ಎಂದು ಅಣ್ಣ ಅಸಹಾಯಕತೆಯನ್ನು ನನ್ನ ಮೇಲೆ ತೀರಿಸುವಾಗ ಕೊತ ಕೊತನೆ ಕುದಿದರೂ ಮನಸ್ಸಲ್ಲಿಯೇ ಕರಗಿಸಿ ಅವುಡುಗಚ್ಚಿ ಸುಮ್ಮನಿರುತ್ತಿದ್ದೆ. ಆ ಮೀನು ಹಿಡಿಯುವ ದಿನಗಳಲ್ಲಿ ನಾನು ಮಾತೆತ್ತಿದರೆ ಸಾಕು, ಶ್ ಎಂಬ ಘರ್ಜನೆಯೂ ಅಣ್ಣನಿಂದ ಬರುತ್ತಿತ್ತು. ನಾನು ಸುಮ್ಮನೆ ಅವರು ಮೀನು ಹಿಡಿಯುವ ಚಾಕ ಚಾಕ್ಯತೆಯನ್ನು ಕಂಡು ತುಂಬಾ ಮೌನದಿಂದ ಖುಷಿ ಪಡುತ್ತಿದ್ದೆ. ತೋಡಿನ ನೀರು ಶುಭ್ರವಾಗಿ ಹರಿಯು ದಿನ ಮೀನುಗಳು ಅವರು ಹಿಡಿಯುವ ವಸ್ತ್ರದ ಮೇಲೆ ಇನ್ನೇನು ಬರಲಿದೆ ಎಂದು ಖುಷಿಯಿಂದ ಮೈ ಮರೆತು ನಾನು ದಡದಲ್ಲೇ ನಿಂತು ಜಿಗಿಯುವುದು ಮತ್ತು ಅದು ಕೂದಲೆಳೆಯುವ ಅಂತರದಿಂದ ತಪ್ಪಿಸಿಕೊಳ್ಳುವುದು ನಡೆದರೆ ಮುಗಿಯಿತು. ನಾನೇ ಆ ಮೀನನ್ನು ಓಡಿಸಿದನೆಂದು ಅಣ್ಣ ನನ್ನನ್ನೇ ಬೈಯ್ಯುತ್ತಿದ್ದುದು ಮಾಮೂಲಾಗಿತ್ತು.

ಒಂದು ದಿನ ಅವರ್ಯಾರು ಇದ್ದಿರಲಿಲ್ಲ. ನೀರು ಶುಭ್ರವಾಗಿತ್ತು. ಅಪ್ಪನ ಪೆಟ್ಟು ತಪ್ಪಿಸಲು ತೊಡೆಯವರೆಗೂ ಪ್ಯಾಂಟಿನ ಕಾಲು ಮಡಚಿ ತೊರೆಯ ವಿರುದ್ಧ ದಾರಿಯಲ್ಲಿರುವ ಆ ಗುಳಿಯ ಬಳಿ ಬಂದೆ. ಸಿಕ್ಕಿದ ಛಾನ್ಸು ಎಂದು ಒಬ್ಬನೇ ಮೀನು ಹಿಡಿಯುವ ಉತ್ಸಾಹದಿಂದ ಮೆಲ್ಲಗೆ ಅದೇ ಕುಳಿಯ ಬಳಿ ಗುಹೆಯಂತಿರುವ ಸ್ಥಳಕ್ಕೆ ಎರಡು ಕೈಯನ್ನೂ ಮುಳುಗಿಸಿ ಹತ್ತಿರ ತಂದೆ. ಒಮ್ಮೆಗೆ ಮೀನು ಚಿಮ್ಮಿ ಮಾಯವಾದುದನ್ನು ನೆನೆಯುತ್ತಿದ್ದಂತೆ ಈ ಮೀನು ಹಿಡಿಯುವ ಕೆಲಸ ನನ್ನಿಂದಾಗದು ಅನಿಸಿತು. ಮತ್ತೊಮ್ಮೆ ಪರೀಕ್ಷಿಸಬೇಕೆಂದು ಪುನಃ ಕೈ ಹಿಡಿದುಕೊಂಡು ಹತ್ತಿರ ಸಾಗಿದೆ. ಆಗುವುದೇನು, ಮತ್ತೆ ಮೀನುಗಳು ಆರಾಮವಾಗಿ ಕೈಗೆ ತಾಗಿಕೊಂಡೇ ತಪ್ಪಿಸಿಕೊಂಡವು. ಈ ಸಲ ನನಗೆ ಹತಾಶೆಯಾಯ್ತು. ನನಗೇಕೋ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತಾಯ್ತು. ಏನಾದರಾಗಲಿ ಎನ್ನುತ್ತಾ ತುಸು ಮುಂದೆ ಸರಿದು ಬಗ್ಗಿ ನೀರಿನ ಬಿಲದೊಳಗೆ ಕೈ ಬಿಟ್ಟೆ. ಏನೋ ಗಟ್ಟಿಯಾದ ವಸ್ತು ಕೈಗೆ ಸಿಕ್ಕಂತಾಯಿತು, ಜೀವವಿದೆಯೆಂದೆ ತಿಳಿಯುವಂತೆ ಸಣ್ಣಗೆ ಚಲಿಸಿದಂತಾಯಿತು. ಮರುಕ್ಷಣ.. ಕೈಗಳೇ ಕಿತ್ತು ಬರುವಂತೆ ಏನೋ ಕಚ್ಚಿದಂತಾಯಿತು. ನನಗೆ ಕಣ್ಣು ಕತ್ತಲೆಯಾಗಿ ಒಮ್ಮೆಲೇ ಕೈ ಹೊರತೆಗೆದು ಕೊಡವಿದೆ. ನೋಡುವುದೇನು ಅದೊಂದು ಏಡಿಯಾಗಿತ್ತು. ನಾನು ಕೈ ಹೊರಗೆಳೆದು ಕೊಡವಿದ ರಭಸಕ್ಕೆ ಏಡಿಯು ಅಲ್ಲೇ ಎಲ್ಲೋ ನೀರಿಗೆ ಬಿತ್ತು. ಇನ್ನೇನೋ ಇರಬಹುದೆಂದು ಬಗೆದಿದ್ದ ನನಗೆ ಕೈ ಚರ್ಮ ಸ್ವಲ್ಪ ಸಿಗಿದು ಹೋಗಿದ್ದು ನೋಡಿ ಸಮಾಧಾನವಾಯಿತು. ನೀರಲ್ಲಿ ಅದ್ದಿದೆ, ಉರಿಯುತ್ತಿದ್ದ ಕೈಗೆ ತಣ್ಣೀರು ಸ್ವಾಂತನ ನೀಡುತ್ತಿತ್ತು. ಇಷ್ಟೆಲ್ಲಾ ಅವಾಂತರಕ್ಕೆ ಪ್ಯಾಂಟಿನ ಕಾಲು ಪೂರ ಒದ್ದೆಯಾಗಿಬಿಟ್ಟಿತ್ತು. ಮೆಲ್ಲನೆ ಆ ಗುಂಡಿಯಿಂದ ಎದ್ದು ಮನೆಯ ಕಡೆ ಹೆಜ್ಜೆ ಹಾಕಿದೆ. ಮನೆಯ ಬಾಗಿಲ ಬಳಿಯೇ ಕಾಯುತ್ತಿದ್ದ ಅಮ್ಮನ ಮುಂದೆ ಯಾವ ಅಳುಕೂ ತೋರಿಸಿಕೊಳ್ಳದೆ ಹತ್ತಿರ ಹೋದೆ. “ಇದ್ಯಾಕೆ ವಸ್ತ್ರ ಎಲ್ಲ ಕೊಳೆಯಾಗಿದೆ”. ಅಮ್ಮನ ಪ್ರಶ್ನೆ ಮುಗಿಯುವ ಮೊದಲೇ ನನ್ನ ಉತ್ತರ ಸಿದ್ಧವಾಗಿತ್ತು. “ಕಾಲು ಜಾರಿ ತೊರೆಗೆ ಬಿದ್ದೆ” ಎಂದು ಪೂರ್ವ ನಿಯೋಜಿತ ಸುಳ್ಳನ್ನೇ ನಂಬಿಸಿದೆ. ಅಷ್ಟಕ್ಕೂ ನನ್ನ ಸುಳ್ಳಿಗೆ ಇಂಬು ನೀಡುವಂತೆ ವಸ್ತ್ರವೂ ಅಲ್ಲಲ್ಲಿ ಕೊಳೆಯಾಗಿದ್ದುದು ತಡವಾಗಿ ಬೆಳಕಿಗೆ ಬಂದು ಮುಸಿ ಮುಸಿ ನಕ್ಕೆ. ಏಡಿಯಿಂದ ಕಡಿಸಿಕೊಂಡ ನನಗೆ ಪುನಃ ಪೆಟ್ಟು ತಿನ್ನುವುದು ಸಾಧ್ಯವೇ ಇರಲಿಲ್ಲ. ಅಷ್ಟರಲ್ಲಿ ಉರಿ ಕೈ ಇದೆಯೆಂದು ನೆನಪಿಸಿತು. ಯಾರೂ ಕಾಣದಂತೆ ಸ್ವಲ್ಪ ಅರಿಶಿನ ಹಚ್ಚಿದೆ. “ಅದ್ಯಾವ ನಂಜೂ ಆಗದಂತೆ ಅರಿಶಿನ ತಡೆಯುತ್ತದೆ” ಎಂದು ಹಿರಿಯರು ಹೇಳಿದ ಮಾತು ನೆನಪಿಗೆ ಬಂತು.

ಕೆಲವೊಮ್ಮೆ ಅವರು ಮೀನು ಹಿಡಿಯಲು ಬಳಸುವ ಬಟ್ಟೆಯಿಂದ ಮೀನುಗಳು ತಪ್ಪಿ ಹೋದರೆ ನನಗೆ ಬೈಗುಳಗಳ ಸುರಿಮಳೆಯಾಗುತ್ತಿತ್ತು. “ಇನ್ನು ಇವನನ್ನು ಮೀನು ಹಿಡಿಯಲು ಕರೆದುಕೊಳ್ಳಬಾರದು” ಎಂದು ಅಣ್ಣ ಅಸಹಾಯಕತೆಯನ್ನು ನನ್ನ ಮೇಲೆ ತೀರಿಸುವಾಗ ಕೊತ ಕೊತನೆ ಕುದಿದರೂ ಮನಸ್ಸಲ್ಲಿಯೇ ಕರಗಿಸಿ ಅವುಡುಗಚ್ಚಿ ಸುಮ್ಮನಿರುತ್ತಿದ್ದೆ. ಆ ಮೀನು ಹಿಡಿಯುವ ದಿನಗಳಲ್ಲಿ ನಾನು ಮಾತೆತ್ತಿದರೆ ಸಾಕು, ಶ್ ಎಂಬ ಘರ್ಜನೆಯೂ ಅಣ್ಣನಿಂದ ಬರುತ್ತಿತ್ತು. ನಾನು ಸುಮ್ಮನೆ ಅವರು ಮೀನು ಹಿಡಿಯುವ ಚಾಕ ಚಾಕ್ಯತೆಯನ್ನು ಕಂಡು ತುಂಬಾ ಮೌನದಿಂದ ಖುಷಿ ಪಡುತ್ತಿದ್ದೆ. ತೋಡಿನ ನೀರು ಶುಭ್ರವಾಗಿ ಹರಿಯು ದಿನ ಮೀನುಗಳು ಅವರು ಹಿಡಿಯುವ ವಸ್ತ್ರದ ಮೇಲೆ ಇನ್ನೇನು ಬರಲಿದೆ ಎಂದು ಖುಷಿಯಿಂದ ಮೈ ಮರೆತು ನಾನು ದಡದಲ್ಲೇ ನಿಂತು ಜಿಗಿಯುವುದು ಮತ್ತು ಅದು ಕೂದಲೆಳೆಯುವ ಅಂತರದಿಂದ ತಪ್ಪಿಸಿಕೊಳ್ಳುವುದು ನಡೆದರೆ ಮುಗಿಯಿತು. ನಾನೇ ಆ ಮೀನನ್ನು ಓಡಿಸಿದನೆಂದು ಅಣ್ಣ ನನ್ನನ್ನೇ ಬೈಯ್ಯುತ್ತಿದ್ದುದು ಮಾಮೂಲಾಗಿತ್ತು.

ಮದರಸಕ್ಕೆ ಹೋಗುತ್ತಿದ್ದ ನಮಗೆ ಆದಿತ್ಯವಾರ ವಿಶೇಷ ತರಗತಿ ಇರುತ್ತಿತ್ತು. ನಮ್ಮದು ಹಳೇ ಕಾಲದ ಮಸೀದಿ. ಈಗ ನವೀಕರಿಸಲಾಗಿದೆ. ಎಲ್ಲಾ ಮಸೀದಿಯಲ್ಲೂ ಅಂಗಸ್ನಾನಕ್ಕೆಂದು ಕಟ್ಟಿದ್ದ ನೀರಿನ ತೊಟ್ಟಿಯಿರುತ್ತದೆ. ಅದರಂತೆ ಅಂಗಸ್ನಾನ ಮಾಡಿದ ನೀರು ಹೋಗಲು ಕೊಳವೆಗಳಿರುತ್ತದೆ. ಆ ನೀರು ಪೋಲಾಗದಿರಲು ತೆಂಗಿನ ಬುಡಕ್ಕೂ ಹಿತ್ತಲ ಸಸ್ಯಗಳಿಗೆ ತಲುಪಿಸಲಾಗುತ್ತದೆ. ಮಳೆಗಾಲದಲ್ಲಿ ಸರ್ವೇ ಸಾಧರಣವಾಗಿ ಮಳೆಯ ನೀರು ಹೆಂಚಿನಿಂದಿಳಿದು ನೇರ ಇದೇ ದಾರಿ ಬಳಸಿ ಹೊರಟು ಹೋಗುತ್ತಿತ್ತು. ಆಗೆಲ್ಲ ಅದರ ಸುತ್ತಲೂ ಕಟ್ಟಿರುವ ಸಿಮೆಂಟು ಕಟ್ಟೆಯ ಕೊರಕಲಲ್ಲಿ ಕಪ್ಪೆಗಳು ವಾಸ ಹೂಡುತ್ತಿದ್ದವು. ಒಮ್ಮೆ ಅದೇ ಕೊರಕಲುಗಳಲ್ಲಿ ಗರಗಸ ಮಾದರಿಯ ಯಾವುದೋ ವಸ್ತು ಸಂದಿನಿಂದ ಕಾಣುತ್ತಿತ್ತು. ನನಗೆ ವಿಪರೀತ ಕುತೂಹಲ. “ಮೊಸಳೆಯಾಗಿರಬಹುದೇ? ಹಾಗಿದ್ದರೆ ಅಷ್ಟು ಸಣ್ಣದಿರುತ್ತದೆಯೇ?” ಈ ರೀತಿಯೆಲ್ಲಾ ಯೋಚಿಸುತ್ತ ಮೆಲ್ಲಗೆ ಕೋಲು ಹಾಕಿದೆ. ಆ ಪ್ರಾಣಿ ಹೊರ ಹಾಕಿದ್ದ ಗರಗಸವನ್ನು ಸರಕ್ಕನೆ ಒಳಗೆಳೆದುಕೊಂಡಿತು. ನನಗೆ ದಿಗಿಲಾಯಿತು. ಅದರೊಳಗಿರುವ ಪ್ರಾಣಿಯ ಬಗ್ಗೆ ಕುತೂಹಲ ಹೆಚ್ಚುತ್ತಲೇ ಹೋಯಿತು. ಆ ದಿನ ನಾನು ಸ್ವಲ್ಪ ಬೇಗನೇ ಮದರಸಕ್ಕೆ ಹೊರಟಿದ್ದೆ. ಮೆಲ್ಲಗೆ ಕಳ್ಳ ಹೆಜ್ಜೆಯೊಂದಿಗೆ ಅದೇ ಸ್ಥಳಕ್ಕೆ ಬಂದೆ. ನೋಡಿದರೆ ಸಮ ಗಾತ್ರದ ಏಡಿ. ದೇಹದ ಅರ್ಧ ಭಾಗ ಹೊರ ಹಾಕಿ ನೀರಲ್ಲೇನೋ ಹುಡುಕುತ್ತಿತ್ತು. ಕೂಡಲೇ ಕಾರ್ಯೋನ್ಮುಖನಾದೆ. ಒಂದು ಉದ್ದ ಕೋಲನ್ನು ತಂದು ಅದರ ಮಧ್ಯ ಭಾಗವನ್ನು ಒತ್ತಿ ಹಿಡಿದೆ. ಏಡಿ ಕೊಸರಾಡಿ ಕೊರಕಲೊಳಗೆ ನುಸುಳುವ ಬದಲು ನೀರ ಮೇಲೇರಿ ಬದಿಗೆ ಬಂತು. ಮಂಡಿ ನೋವಿನ ವೃದ್ಧನಂತೆ ಹಾಗೂ ಹೀಗೂ ಕಾಲು ಹಾಕುತ್ತಾ ಸಾಗುತ್ತಿತ್ತು. ಆ ಕ್ಷಣಕ್ಕೆ ಅದು ನನ್ನ ಆ ಜನ್ಮ ಶತ್ರುವಿನಂತೆ ಕಂಡಿತು. ಹತ್ತಿರದಲ್ಲಿದ್ದ ಕಲ್ಲೆತ್ತಿ ಅದರ ಮೇಲೆ ಹಾಕಿದೆ. ಒಂದು ಕೈ ತುಂಡಾಯ್ತು. ಮತ್ತೊಂದು ಕಲ್ಲೆತ್ತಿ ಹಾಕಿದೆ. ದೇಹ ಚಿದ್ರವಾಗಿತ್ತು. ವಿಜಯೋತ್ಸವದ ಸಂಭ್ರಮಕ್ಕೆ ಅದರ ಕೋಡನ್ನು ತಂದು ಎಲ್ಲರಿಗೂ ತೋರಿಸಿದೆ. ಯಾರೂ ಸೊಪ್ಪು ಹಾಕಿದಂತೆ ಕಾಣಲಿಲ್ಲ. ನನ್ನ ಮನಸ್ಸಿನ ತೃಪ್ತಿ ಯಾರು ಬಲ್ಲವರು?

ರಜಾ ದಿನಗಳಲ್ಲಿ ಬಟ್ಟೆ ತೊಳೆಯಲು ತೊರೆಗೆ ಹೋಗುವುದು ರೂಢಿ. ಆಗ ಅಕ್ಕಂದಿರು ಹೋಗುವಾಗ ನಾನೂ ಅವರ ಬಾಲಂಗೋಚಿಯಾಗಿ ಬಿಡುತ್ತಿದ್ದೆ. ಅಲ್ಲಿ ಸಣ್ಣಗೆ ಹರಿಯುವ ನೀರ ಝರಿ. ತಥಾಕಥಿತ ತೋಡಿನ ಮುಂದುವರಿದ ಭಾಗ. ಬಟ್ಟೆ ತೊಳೆಯಲು ಹರಿದು ಸಾಗುವ ನೀರು ಸಾಲದು. ಅದಕ್ಕೆ ತಾತ್ಕಾಲಿಕವಾಗಿ ನಾಲ್ಕೈದು ಕಲ್ಲುಗಳನ್ನು ಅಡ್ಡಲಾಗಿಟ್ಟು ಸ್ವಲ್ಪ ಸ್ವಲ್ಪವೇ ನೀರು ಹೊರ ಹೋಗುವಂತೆ ಮಾಡುತ್ತಿದ್ದರು. ಇನ್ನೊಂದು ಸಣ್ಣ ಝರಿಯು ಚಿಕ್ಕಮ್ಮನ ಮನೆಯ ಹಿತ್ತಲಿನಿಂದ ಸ್ವಲ್ಪ ದೂರದಿಂದ ಹರಿದು ಬಂದು ಇದೇ ತೊರೆ ಸೇರುತ್ತಿತ್ತು. ಈ ಕವಲು ಅಷ್ಟೊಂದು ಬಿರುಸಾಗಿಲ್ಲ. ಹೇಗೂ ಇದರ ಮೂಲ ಹುಡುಕ ಬೇಕೆಂದು ರಜೆಯ ದಿನ ಹೊರಟಿದ್ದೆ. ಸುಮಾರು ದೂರ ನಡೆದು ಚಿಕ್ಕಮ್ಮನ ಮನೆಯ ಕಡೆ ತಲುಪಿದಾಗ ಜೋರಾಗಿ ಮಳೆ ಪ್ರಾರಂಭವಾಗಿತ್ತು. ರಸ್ತೆ ಬದುಗಳಿಂದ ಬರುವ ನೀರು ಅದೇ ತೊರೆಗೆ ಸೇರುತ್ತಿದ್ದುದನ್ನು ನೋಡಿ ನನಗೆ ಪರಮಾನಂದವಾಯ್ತು. ನದಿ ಮೂಲ ಕಂಡು ಹಿಡಿದಷ್ಟು ಬೀಗಿದೆ. ಅಲ್ಲಿಂದ ಸೀದಾ ಹೊರಟು ಮನೆಗೆ ಬಂದೆ. ತಕ್ಷಣ ಏನೋ ಹೊಳೆದಂತೆ; ಸಾಮಾನ್ಯವಾಗಿ ರಸ್ತೆ ಬದುವಿನ ನೀರು ಮಳೆ ದಿನಗಳಲ್ಲಿ ಮಾತ್ರ, ಅದ್ಹೇಗೆ ಮಳೆಗಾಲದಲ್ಲಿ ಮಳೆ ಸುರಿಯದ ಸಮಯದಲ್ಲೂ ತೊರೆ ಹರಿಯುವುದು? ಎಂಬ ಪ್ರಶ್ನೆ ಉದಿಸಿದಂತೆ ಮಳೆಯೂ ಸಾಕಷ್ಟು ಕಡಿಮೆಯಾಯ್ತು. ಅದು ಊಟದ ಸಮಯ. ಮಾವಿನ ‘ಉಪ್ಮುಂಚಿ’ ಚಪ್ಪರಿಸಿ ಊಟವೂ ಸಾಗಿತು. ಅಷ್ಟಕ್ಕೇ ಮಳೆ ತಗ್ಗಿ ಬಿಸಿಲು ಬೀಳಲಾರಂಭಿಸಿತು. ಮೆಲ್ಲನೆ ಮತ್ತೆ ಕವಲಿನ ಬಳಿಗೆ ಮಾವು ಬಿದ್ದಿದ್ದರೆ ತರುತ್ತೇನೆಂದು ಸುಳ್ಳು ಹೇಳಿ ತಪ್ಪಿಸಿಕೊಂಡೆ. ಮತ್ತೊಮ್ಮೆ ಜಾಡು ಹಿಡಿಯುತ್ತಾ ಅದೇ ಸ್ಥಳಕ್ಕೆ ಬಂದೆ. ನೋಡುವುದೇನು, ಬಾಳೆ ಮರಗಳೆರಡರ ಮಧ್ಯೆ ಸಣ್ಣದೊಂದು ಒಸರು. ತಿಳಿ ಶುಭ್ರ ನೀರು ಭುವಿಯೊಡಲಿನಿಂದ ಚಿಮ್ಮಿ ಬರುತ್ತಿತ್ತು. ಈಗ ಸರಿಯಾಗಿ ಅರ್ಥವಾಯ್ತು. ರಸ್ತೆಯ ಬದುಗಳ ನೀರು ತಾತ್ಕಾಲಿಕ ಮತ್ತು ಇಂತಹ ಒಸರುಗಳೇ ನಿರ್ಣಾಯಕ. ಮತ್ತೊಮ್ಮೆ ಉಗಮ ಸ್ಥಾನ ಕಂಡು ಹಿಡಿದ ಖುಷಿ ಇಮ್ಮಡಿಯಾಯ್ತು. ಕಾವೇರಿ ನದಿಯ ಮೂಲ ತಲಕಾವೇರಿ ಎಂದರೆ ಹೀಗೆಯೇ ಇರಬಹುದೆಂಬ ಅಂದಾಜಿಗೆ ಬಂದೆ!

(ಮುಂದುವರಿಯುವುದು)