ನೇತ್ರಿ ಮೆಡಿಕಲ್ ಶಾಪಿನಲ್ಲಿ ಡಾಕ್ಟರ್ ಬರೆದಕ್ಕಿಂತ ಅರ್ಧರ್ಧವೆ ಮಾತ್ರೆ ತೆಗೆಸಿದಳು. ಟಾನಿಕ್ ಇರಲಿಲ್ಲ. ಸ್ವಲ್ಪ ದೂರದಲ್ಲಿ ಮತ್ತೊಂದು ಮೆಡಿಕಲ್ ಶಾಪಿತ್ತು. ಅಲ್ಲಿಗೆ ನಡೆದು ಹೋಗಿ ಅದನ್ನೂ ಕೊಂಡು ಆಸ್ಪತ್ರೆಯ ಕಡೆ ಬಂದರೆ ಕೂತ ಜಾಗದಲ್ಲಿ ಅವ್ವ ಮಗು ಇರಲಿಲ್ಲ! ಹಳದಿ ಕವರ್ರು ಮಾತ್ರವೇ ಬೆಂಚಿನ ಮೇಲಿತ್ತು. ಹೋಗಿ ಮಾತ್ರೆಯನ್ನು ನರ್ಸಿಗೆ ತೋರಿಸಿ ಮತ್ತೆ ಬೆಂಚಿನ ಬಳಿ ಬಂದಳು. ಪಕ್ಕ ಕೂತಿದ್ದ ಅಜ್ಜನೊಬ್ಬ “ತಂಗಿ ನಿಮ್ಮವ್ವ ಇಲ್ಲೆ ಎಲ್ಲೊ ಹೊರಗಡೆ ಹೋದ್ರು. ಹನುಮಂತನ ಗುಡಿ ಹತ್ರ ಇರ್ಬಕಂತೆ. ಬರ್ತಾಳಂತೆ” ಎಂದನು. ನೇತ್ರಿಗೆ ರೇಗಿ ಹೋಯಿತು.
ನವೀನ್ ತೇಜಸ್ವಿ ಕಥಾಸಂಕಲನ “ಬಂಗಾರಕಡ್ಡಿ ಡೇರೆಹೂವು”, ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಸಂಜೆಯ ಮಳೆ ನಿಲ್ಲದೆ ಧೋ ಎಂದು ಸುರಿಯುತ್ತಲೇ ಇತ್ತು. ಮೇಲಿನ ಮನೆಯ ಹಿತ್ತಲ ತಟ್ಟಿಯಲ್ಲಿ ಅಡಿಕೆ ಸುಲಿಯುತ್ತಿದ್ದ ಹೆಂಗಸರು ‘ಈ ಮಳೆ ನಿಲ್ಲಂಗ್ ಕಾಣಕಲ್ಲ’ ಎಂದು ಒಬ್ಬೊಬ್ಬರೆ ಎದ್ದು, ಅಡಿಕೆ ಅಳೆದು, ಲೆಕ್ಕ ಬರೆಸಿ ಮನೆಯ ಕಡೆ ಹೊರಟರು. ಗಂಗವ್ವ ಮಾತ್ರ ಅಡಿಕೆ ಸುಲಿಯುತ್ತಲೇ ಇದ್ದಳು. ಕಡೆಗೆ ಬಡಗೇರ ಸಣ್ಣಕ್ಕ ಮತ್ತು ಗಂಗವ್ವ ಇಬ್ಬರೇ ಉಳಿದು, ಸಣ್ಣಕ್ಕ “ಗಂಗೆ, ಅಡಿಗೆ ಮಾಡಕ್ ಹೊತ್ತಾಕತೆ ನಂಗೆ. ಮಕ್ಳು ಕಾಯ್ತಿರ್ತವೆ. ಹೋಕನಿ ನಾನು” ಎಂದು ಪ್ಲಾಸ್ಟಿಕ್ ಕೊಪ್ಪೆಯನ್ನು ತಲೆ ಮತ್ತು ಬೆನ್ನಿಗೆ ಹೊದ್ದು ಹೊರಟಳು. ಸಣ್ಣಕ್ಕನ ಲೆಕ್ಕ ಬರೆದುಕೊಂಡು ಫೋನಿನಲ್ಲಿ ರೀಲ್ಸ್ ನೋಡುತ್ತ ಕೂತಿದ್ದ ಮೇಲಿನ ಮನೆ ಪುಟ್ಟಿ “ಗಂಗೆ, ನೀನು ಇವತ್ತೂ ಲೇಟನೆ ಮರತಿ..” ಎಂದು ಹೇಳಿ ತನ್ನ ಮೊಬೈಲ್ ಆಟವನ್ನು ಮುಂದುವರೆಸಿದಳು. ಗಂಗವ್ವ ಅಡಿಕೆ ಸುಲಿಯುತ್ತಲೆ ತನ್ನ ಎಡಕ್ಕೆ ಇದ್ದ ಡಬ್ಬಿಯ ಕಡೆ ನೋಡಿದಳು. ಚೇರ್ಮನ್ನರ ಮನೆಯಲ್ಲಿ ಇಸಿದುಕೊಂಡು ಬಂದಿದ್ದ ಹಳೆಯ ಒಂದು ಲೀಟರಿನ ಏಶಿಯನ್ ಪೈಂಟ್ ಡಬ್ಬಿ ಅದು. ಅರ್ಧ ತುಂಬಿತ್ತು. ಪೂರ್ತಿ ತುಂಬಿಸಿಯೇ ಮನೆಗೆ ಹೋಗುವುದೆಂದು ಮನದಲ್ಲೆ ನಿರ್ಧರಿಸಿದಳು. ಹೊರಗಡೆ ಧೋ ಎಂದು ಸುರಿಯುತ್ತಿದ್ದ ಮಳೆ ಸುರಿಯುತ್ತಲೇ ಇತ್ತು. ಗಂಗವ್ವ ಅದೇ ವೇಗದಲ್ಲಿ ಅಡಿಕೆ ಸುಲಿದಳು. ಅವಳು ಡಬ್ಬಿ ತುಂಬಿಸಿ, ಪುಟ್ಟಿ ಅಡಿಕೆ ಅಳೆದು, ಲೆಕ್ಕ ಬರೆದು, ಗಂಗವ್ವ ಹೊರಡುವ ಹೊತ್ತಿಗೆ ರಾತ್ರಿ ಹತ್ತು ಗಂಟೆ ಆಗಿಹೋಗಿತ್ತು! ಗಂಗವ್ವ ತಟ್ಟಿಯ ತಗಡಿನ ಬಾಗಿಲಿನ ಹಿಂದೆ ನೇತು ಹಾಕಿದ್ದ ತನ್ನ ಕಂಬಳಿ ಕೊಪ್ಪೆಯನ್ನು ತೆಗೆದು ತಲೆ ಮತ್ತು ಬೆನ್ನಿಗೆ ಸೇರಿಸಿ ಹಾಕಿಕೊಂಡಳು. ಹಿತ್ತಲಲ್ಲಿ ಜಾರಬಾರದೆಂದು ಹಾಕಿದ್ದ ಸಾರಗಳ ಮೇಲೆ ಜೋಪಾನವಾಗಿ ನಿಧಾನಕ್ಕೆ ಕಾಲಿಡುತ್ತ ನಡೆದಳು. ಎಲ್ಲೆಲ್ಲೂ ಕತ್ತಲು ಕವಿದು ಮಲಗಿತ್ತು. ಸೊಂಟಕ್ಕೆ ಸಿಕ್ಕಿಸಿದ್ದ ಎಲೆ ಅಡಿಕೆ ಚೀಲದಲ್ಲಿದ್ದ ಕುರುಡು ಬ್ಯಾಟರಿಯನ್ನು ತೆಗೆದು ಬೆಳಕು ಮಾಡಿಕೊಂಡು ದಣಪೆಯನ್ನು ದಾಟಿ ರಸ್ತೆಗೆ ಬಂದಳು. ಮಳೆಗೆ ಮಣ್ಣು ರಸ್ತೆಯೆಲ್ಲ ಕೆಸರು ಗದ್ದೆಯಾಗಿ ಹೋಗಿತ್ತು. ಕಪ್ಪೆ, ಕಾಡುಹುಳಗಳು ಕೂಗುವ ಸದ್ದು ಊರ ತುಂಬಾ ಮಳೆಯ ಜತೆ ಬೆರೆತು ಹೋಗಿತ್ತು. ಮಾರಿಗುಡಿ ಮುಡುಕಿ ಇಳಿಯುವಾಗ ಚಪ್ಪಲಿ ಜಾರಿ ಕಾಲುಂಗುರ ಉಂಗುಷ್ಟಕ್ಕೆ ಸಿಲುಕಿ ಬೀಳುವಂತಾದಳು. ಎದ್ದು ಸಾವರಿಸಿಕೊಳ್ಳುತ್ತ ಈ ಹಳೆ ಕಾಲುಂಗುರವ ಮುರಿಸಿ ಹೊಸತನ್ನು ಕೊಂಡುಕೊಳ್ಳಬೇಕೆಂದು ಮನಸ್ಸಿನಲ್ಲೇ ಅಂದುಕೊಂಡಳು. ಹೀಗೇ ಯೋಚಿಸುತ್ತ ಮಾರಿಗುಡಿ ಹಾದು, ರಾಯರ ತೆಂಗಿನ ತೋಟ ಬಳಸಿ ಅವಳ ಮನೆಯ ಹಿಂದೆ ಬಂದು ನಿಂತಳು. ಎದೆ ಒಂದು ಕ್ಷಣ ಧಸಕ್ ಎಂದು ನಡುಗಿತು! ಮಳೆಗಾಳಿಗೆ ಮಗಳು ನೇತ್ರಿಯ ಮದುವೆಯ ಸಮಯದಲ್ಲಿ ಮಾಡಿಸಿದ್ದ ಕಡ್ರಾಡಿನ ತುದಿ ಬಾಗಿ ಹೋಗಿತ್ತು. ಮನಸ್ಸಿನಲ್ಲೆ ‘ಅಯ್ಯೋ ದೇವ್ರೆ’ ಎಂದುಕೊಳ್ಳುತ್ತ ಸೀದಾ ಪಕ್ಕದ ಮನೆಯ ಕಡೆ ಓಡಿದಳು. ಪಕ್ಕದ ಮನೆಯವರು ಆಗಲೇ ಉಂಡು, ಬಾಗಿಲೆಳೆದುಕೊಂಡು ಮಲಗಿ ಆಗಿತ್ತು. ಗಂಗವ್ವ “ದೇವ್ರಾಜ.. ದೇವ್ರಾಜ.. ಕಡ್ರಾಡು ಬಿದೋಗ್ಯತಿ ನೋಡ್ಬಾರ ಒಂಚೂರು” ಎಂದು ಕೂಗಿದಳು. ದೇವ್ರಾಜ ಮಲಗಿದ್ದಲ್ಲಿಂದಲೇ “ಈ ಮುದ್ಕಿದೊಂದು ಇಷ್ಟ್ ಹೊತ್ತಿಗೆ..” ಎಂದು ಮಗ್ಗಲು ಬದಲಿಸಿ ಮಲಗಿದನು. ಗಂಗವ್ವ “ದೇವ್ರಾಜ.. ದೇವ್ರಾಜ..” ಎಂದು ಕೂಗೇ ಕೂಗಿದಳು. ಕದ ತೆಗೆಯದಿದ್ದದ್ದನ್ನು ನೋಡಿ ಎರಡು ಬಾರಿ ಜೋರಾಗಿ ಕದ ಬಡಿದಳು. ದೇವ್ರಾಜನ ಹೆಂಡತಿ “ಥೂ.. ನಿದ್ದೆ ಕೊಡಕಲ್ಲ. ಏನ್ ನೋಡ್ರಿ ಈ ಮುದುಕಿದು” ಎಂದು ನಿದ್ದೆಗಣ್ಣಲ್ಲೇ ಗುನುಗಿದಳು. ದೇವ್ರಾಜ ಹೋಗಲಾರದೆ ಎದ್ದು ಹೋಗಿ ಕದ ತೆರೆದು “ಎಂತುದೆ ಚಿಕ್ಕವ ಇಷ್ಟೊತ್ತಿಗ್ ನಿಂದು?” ಎಂದು ಗೊಣಗಿದ. ಗಂಗವ್ವ “ತಮ ಕಡ್ರಾಡು ಬಿದೋಗ್ಯತಿ ಒಂಚೂರ್ ನೋಡನ್ ಬಾರ” ಎಂದು ಅಳುವ ದನಿಯಲ್ಲಿ ಹೇಳಿದಳು. ದೇವ್ರಾಜ ಅರೆನಿದ್ದೆಗಣ್ಣಿನಲ್ಲೇ ಗಂಗವ್ವನ ಮನೆ ಕಡೆ ದೃಷ್ಟಿ ಹಾಯಿಸಿದ. ಪ್ಯಾರಲೆ ಗಿಡದ ಮರೆಯಲ್ಲಿ ಬಾಗಿದ ಕಡ್ರಾಡು ಚೂರೇ ಚೂರು ಕಾಣಿಸಿತು. ದೇವ್ರಾಜ “ಗಾಳಿಗೆ ಒಂಚೂರ್ ಒರ್ಗ್ಯತಿ. ಬೆಳಿಗ್ಗೆ ನೋಡನ ಬಿಡು. ಊಟ ಮಾಡಿ ಮಿಂಕ್ಯಿನಗೋಗು ಈಗ” ಎಂದು ಕದ ಎಳೆದುಕೊಂಡ. ಗಂಗವ್ವ ಆ ಸುರಿವ ಮಳೆಯಲ್ಲೇ ಬ್ಯಾಟರಿ ಬಾಯಲ್ಲಿ ಕಚ್ಚಿಕೊಂಡು ಕಡ್ರಾಡಿನ ಕಂಬವನ್ನು ಎಳೆದು ನೆಟ್ಟಗೆ ನಿಲ್ಲಿಸಲು ನೋಡಿದಳು. ವಾಲಿದ ಹಂಚುಗಳು ತಪತಪನೆ ಉದುರಿದವು. ಗಂಗವ್ವ ಹೆದರಿ ಪಕ್ಕಕೆ ಸರಿದಳು. ಮನಸಿನಲ್ಲೇ ‘ಸಹಾಯಕ್ಕೆ ಒಬ್ಬರೂ ಇಲ್ಲವಲ್ಲ’ ಎಂದು ನೊಂದುಕೊಂಡಳು. ಕಡ್ರಾಡಿಗೆ ಅಂಟಿಕೊಂಡಿದ್ದ ಕೋಳಿದಡ್ಡಿಯ ಬಳಿ ಓಡಿದಳು. ಕೋಳಿಗಳು ದಡ್ಡಿ ಸೇರಿ ಚಳಿಗೆ ಮುದುಡಿ ಕೂತಿದ್ದವು. ದಡ್ಡಿಯ ಮೇಲೆ ಹಳೆ ಕೂಣಿಯ ಒಳಗೆ ಇಟ್ಟಿದ್ದ ಪ್ಲಾಸ್ಟಿಕ್ ಚೀಲದಿಂದ ಹಿಡಿ ನುಚ್ಚು ತೆಗೆದು ಕೋಳಿಗಳಿಗೆ ಹಾಕಿದಳು. ದೊಡ್ಡ ಹುಂಜದ ಕಡೆ ನೋಡಿ ‘ಚೌತಿಗೆ ಮಗಳು ಅಳಿಯ ಬಂದಾಗ ಇದನ್ನು ಕೊಯ್ಯಬೇಕು’ ಅಂದುಕೊಂಡಳು. ಅಳಿಯನಿಗೆ ಕೋಳಿ ಕಜ್ಜಾಯ ಅಂದರೆ ಭಾರಿ ಪ್ರೀತಿ. ಅತ್ತೆಗೂ ಅಳಿಯ ಕೇಳಿದ ಅಡುಗೆ ಮಾಡಿ ಹಾಕುವ ಆಸೆ. ಕಡ್ರಾಡಿನ ತಟ್ಟಿಯನ್ನು ಸರಿಸಿ ಜೋಪಾನವಾಗಿ ಒಳಹೋಗಿ ಕಂಬಳಿಯನ್ನು ಬಚ್ಚಲ ಬಿದಿರು ಕೊಕ್ಕೆಗೆ ಸಿಕ್ಕಿಸಿದಳು. ಬಿದಿರಿನ ಗಳದಿಂದ ಜೋತುಬಿದ್ದ ಲೈಟು ಸ್ವಿಚ್ಚನ್ನು ಒತ್ತಿದಳು. ಸಾಕೆಟ್ಟಿನೊಳಗೆ ಕೂತಿದ್ದ ಹಳೆ ವಯರಿನ ಲೋಹದ ಬಿಡಿತುದಿಗಳಿಂದ ಕರ್ರ್ ಎಂದು ಕಿಡಿಗಳು ಚಿಮ್ಮಿದವು. ಗಂಗವ್ವ ಅದನ್ನು ಗಮನಿಸಲೂ ಇಲ್ಲ. ಅರವತ್ತು ಕ್ಯಾಂಡಲ್ ದೀಪದಿಂದ ಬೆಳಕುಮೂಡಿತು. ಎಲೆ ಅಡಿಕೆಗೆಂದು ಪುಟ್ಟಿಯ ಕಣ್ಣು ತಪ್ಪಿಸಿ ತಂದಿದ್ದ ನಾಲ್ಕು ಅಡಿಕೆಗಳನ್ನು ಸೆರಗಿನ ತುದಿಯಿಂದ ಬಿಚ್ಚಿ ನಾಗಂದಿಗೆಯ ಮೇಲೆ ಇಟ್ಟಳು. ಮಧ್ಯಾಹ್ನ ಮಾಡಿದ ಅನ್ನ ಒಲೆಯ ಬದಿ ಅವಳಿಗಾಗೆ ಕಾಯುತ್ತಿತ್ತು. ಬಟ್ಟಲಿಗೆ ಮಧ್ಯಾಹ್ನದ ಅನ್ನ, ಸಿಕ್ಕದ ಮೇಲಿಟ್ಟಿದ್ದ ನಿನ್ನೆಯ ತಾರ್ಲೆ ಮೀನಿನ ಸಾರನ್ನು ಹಾಕಿಕೊಂಡು ಗಪಗಪನೆ ಉಂಡಳು. ಕಡ್ರಾಡಿನಿಂದ ಹರಿದು ಬೀಳುವ ವದಿಗೆಯ ನೀರು ಮಣ್ಣಿನ ಬಾನಿಯನ್ನು ತುಂಬಿಸಿತ್ತು. ಅದರಲ್ಲಿ ಬಟ್ಟಲನ್ನು ತೊಳೆಯುತ್ತ ಒಮ್ಮೆ ಬಾಗಿದ ಮೂಲೆಯನ್ನು ನೋಡಿ ಏನನ್ನೋ ಯೋಚಿಸಿದಳು. ಅದೇ ಯೋಚನೆಯಲ್ಲೆ ನಾಗಂದಿಗೆಯ ತುದಿಯಲ್ಲಿದ್ದ ಚಾಪೀಸನ್ನು ತೆಗೆದುಕೊಂಡು ಕದದ ಹಿಂದೆ ಇವತ್ತು ಸುಲಿದ ಏಳು ಗಿದ್ನ ಅಡಿಕೆಗೆ ಏಳು ಗೀಟು ಬರೆದಳು. ಕೊಂಚ ದೂರದಲ್ಲಿ ನಿಂತು ಗೀಟುಗಳನ್ನು ಎಣಿಸಿದಳು. ‘ಗಿದ್ನಕ್ಕೆ ಇಪ್ಪತ್ತೆಂಟು ರೂಪಾಯಿಯಂತೆ ಇಷ್ಟು ಗೀಟುಗಳಿಗೆ ಬರುವ ದುಡ್ಡಿನಲ್ಲಿ ಕಡ್ರಾಡಿನ ರಿಪೇರಿ ಮಾಡಿಸಬಹುದೆ’ ಎಂದು ಚಿಂತಿಸಿದಳು. ಮಗಳ ಮದುವೆಗೆ ಮಾಡಿದ್ದ ಸಾಲ, ಇನ್ನೂ ಗಿಲಾಯ ಆಗದ ಮನೆ ನೆನಪಿಗೆ ಬಂದವು. ಸೋರುವ ಸೂರಿನ ಕೆಳಗೆ ಇಟ್ಟಿದ್ದ ಚೊಂಬು, ಬಟ್ಟಲು, ಪ್ಲಾಸ್ಟಿಕ್ ಕೊಡಪಾನಗಳಲ್ಲಿದ್ದ ನೀರನ್ನು ಹೊರಕ್ಕೆ ಚೆಲ್ಲಿ ಮತ್ತೆ ಅದೇ ಜಾಗದಲ್ಲಿ ಇಟ್ಟು ಹೋಗಿ ಹಾಸಿಗೆ ಹಾಸಿ ಮಲಗಿದಳು. ನಿದ್ದೆ ಬರಲಿಲ್ಲ. ಎಡದಿಂದ ಬಲಕ್ಕೆ ಹೊರಳಿದಳು. ಮಗಳು ನೇತ್ರಿ ಹರಳು ಕಟ್ಟಿಸಿಕೊಂಡು ಬಂದಿದ್ದ ಅವಳ ಅಪ್ಪನ ಪೋಟೋ ಗಂಗವ್ವನನ್ನೇ ನೋಡುತ್ತಿತ್ತು. ಅವನು ಬದುಕಿದ್ದಿದ್ದರೆ ಹೀಗೆ ಒಬ್ಬಳೆ ಹೈರಾಣಾಗಿ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನೊಂದುಕೊಂಡಳು. ಗಂಗವ್ವ ತನ್ನ ಮದುವೆಯಾದ ದಿನ, ಮಗಳು ನೇತ್ರಿ ಹುಟ್ಟಿದ್ದು, ಗಂಡ ನೇತ್ರಿಯನ್ನು ಜಾತ್ರೆಗೆ ಕರೆದುಕೊಂಡು ಹೋಗಿದ್ದು, ಅವನು ಹೆಗಡೇರ ತೋಟದಲ್ಲಿ ಔಷಧಿ ಹೊಡೆವಾಗ ಮರದಿಂದ ಬಿದ್ದು ಆಸ್ಪತ್ರೆಯ ದಾರಿಯಲ್ಲಿ ಓಮಿನಿಯಲ್ಲೇ ಜೀವ ಬಿಟ್ಟದ್ದು, ಮನೆಯಲ್ಲಿ ಇದ್ದ ಅಪ್ಪನ ಒಂದೇ ಒಂದು ಪಾಸ್ ಪೋರ್ಟ್ ಸೈಜಿನ ಪೋಟೊವನ್ನು ನೇತ್ರಿ ಸೊರಬದ ಯಶವಂತ ಸ್ಟುಡಿಯೋಗೆ ತೆಗೆದುಕೊಂಡು ಹೋಗಿ ಕಂಪ್ಯೂಟರಿನಲ್ಲಿ ಸೂಟಿನ ಬಟ್ಟೆ ಹಾಕಿಸಿ ಹರಳು ಕಟ್ಟಿಸಿಕೊಂಡು ಬಂದದ್ದು, ಅವಳ ಮದುವೆಯ ದಿನ ಅಪ್ಪಯ್ಯನನ್ನು ನೆನೆದು ದುಃಖಿಸಿ ದುಃಖಿಸಿ ಅತ್ತದ್ದು ಎಲ್ಲ ಗಂಗವ್ವನ ಕಣ್ಣ ಮುಂದೆ ಬಂದು ಕಣ್ಣಂಚು ಒದ್ದೆಯಾಯಿತು. ಸೋರುವ ಸದ್ದು ಮನೆಯ ತುಂಬಿ ಮೌನ ನೂರ್ಮಡಿಯಾಗಿತ್ತು. ಮತ್ತೆ ಮಗ್ಗಲು ಬದಲಿಸಿ ಮಲಗಿದಳು.

(ನವೀನ್ ತೇಜಸ್ವಿ)
ಬೆಳಿಗ್ಗೆ ಕೋಳಿ ಕೂಗುವ ವೇಳೆಗೆಲ್ಲ ಎಚ್ಚರ ಆಗಿ ಬಚ್ಚಲ ಒಲೆಯ ಮಸಿಕೆಂಡದಲ್ಲಿ ಹಲ್ಲು ತಿಕ್ಕಿ, ಮುಖ ತೊಳೆದು, ಕ್ಷಣ ಹೊತ್ತು ಬಾಗಿದ ಕಡ್ರಾಡಿನ ತುದಿಯನ್ನು ಪರೀಕ್ಷಿಸಿ ರಾತ್ರಿ ತಾನಂದುಕೊಂಡಷ್ಟೇನೂ ಬಿದ್ದು ಹೋಗಿಲ್ಲವೆಂದು ಸಮಾಧಾನಪಟ್ಟುಕೊಂಡಳು. ಅಷ್ಟರಲ್ಲೆ ದೇವ್ರಾಜ “ಚಿಕ್ಕವ..” ಎಂದು ಕೂಗಿದ. ಗಂಗವ್ವ ಮನೆಯ ಎದುರು ಹೋಗಿ “ದೇವ್ರಾಜ..” ಎಂದಳು. ದೇವ್ರಾಜ “ಚಿಕ್ಕವ, ನೇತ್ರ ಸೊರುಬುಕ್ಕೆ ಬತಾಳಂತೆ ಇವತ್ತು. ಎಂಟೂವರೆ ಗಂಟೆ ಗುರೇಣುಕ ಬಸ್ಸಿಗೆ ಬಂದು ಫಯಾಜ್ ಅಂಗ್ಡಿ ಹತ್ರ ಇರ್ಬಕಂತೆ ಕಣೆ, ಪೋನ್ ಮಾಡಿದ್ಲು” ಎಂದನು. ಆ ಕ್ಷಣಕ್ಕೆ ಗಂಗವ್ವನಿಗೆ ಕಡ್ರಾಡಿನ ವಿಷಯ ಸಂಪೂರ್ಣ ಮರೆತು ಹೋಯಿತು. ದೂರದ ಸಿದ್ದಾಪುರ ಸೀಮೆಗೆ ಮಗಳನ್ನು ಮದುವೆ ಮಾಡಿಕೊಟ್ಟು ಮಗಳು ಮೊಮ್ಮಗನನ್ನು ನೋಡುವುದೇ ಅಪರೂಪವಾಗಿತ್ತು.
“ಎಂತಕೆ ಬತಾಳಂತೆ ಸೊರ್ಬುಕ್ಕೆ?”
“ಗೊತ್ತಲ್ಲೆ ಚಿಕವ್ವ. ಎಂತು ಹೇಳ್ನಲ್ಲ ಅವ್ಳು”
“ಹೌದೆ..”
“ಹೋಗದಿದ್ರೆ ಒಂದ್ ಕೊಡೆ ತಗುಂದೋಗು. ಈ ಸುಡ್ಗಾಡ್ ಮಳೆ ನಿಂತ್ರೆ ಬಿಡದಲ್ಲ”
ಗಂಗವ್ವ “ಹ್ಞೂಂ..” ಎಂದು ತಲೆಯಾಡಿಸಿ ಮನೆಯ ಒಳಹೊಕ್ಕಳು. ‘ನೇತ್ರಿ ಯಾಕೆ ಸೊರಬಕ್ಕೆ ಬರುವಳಿದ್ದಾಳೆ, ಸೊರಬಕ್ಕೆ ಬರುವವಳು ಅರ್ಧ ತಾಸಿನ ದಾರಿಯ ತವರಿಗೆ ಯಾಕೆ ಬರುತ್ತಿಲ್ಲ’ ಎಂದು ಯೋಚಿಸಿದಳು. ‘ನೆಂಟರು ಯಾರಾದರದ್ದಾದರೂ ಮದುವೆ ಇರಬಹುದೆ’ ಎಂದು ನೆನಪು ಮಾಡಿಕೊಂಡಳು. ಯಾರದ್ದು ಇದ್ದಹಾಗೆ ಕಾಣಲಿಲ್ಲ. ಪ್ರಶ್ನೆಗಳಿಗೆ ಉತ್ತರಗಳು ಸಿಗದಿದ್ದರೂ ಮಗಳನ್ನು ಕಾಣುವ ಖುಷಿಯಂತು ಕರುಳ ತುಂಬಿ ಹೋಗಿತ್ತು. ಮನೆಯಲ್ಲಿ ಇರುವುದು ಗಂಗವ್ವ ಒಬ್ಬಳೆ, ಮುರುಕು ಮನೆ ಬೇರೆ ಎಂದು ಮಗಳ ಬಾಣಂತನವು ಗಂಡನ ಮನೆಯಲ್ಲೆ ಆಗಿತ್ತು. ಸಿದ್ದಾಪುರ ಸೀಮೆ ಹೋಗಿಬರಲು ಸುಲಭದ ದಾರಿಯಲ್ಲ. ಎರಡು ಬಸ್ಸು ಹತ್ತಿ, ಎರಡು ಬಸ್ಸು ಇಳಿದು, ಅರ್ಧ ಗಾವುದ ನಡೆಯಬೇಕು. ಬರಿ ಬರಿ ಬಂದು ಹೋಗುವುದು ನೆಂಟಗಿತ್ತಿಗೂ ಅಷ್ಟು ಇಷ್ಟವಾಗಲಿಕ್ಕಿಲ್ಲ ಎಂದು ಸುಮ್ಮನೆ ಇದ್ದಳು. ದೇವ್ರಾಜ ‘ನೇತ್ರಿ ಪೋನ್ ಮಾಡ್ಯಳೆ’ ಎಂದು ಕರೆದರೆ ಎಂತದೇ ಕೆಲಸವಾಗಲಿ ಅದನ್ನು ಅಲ್ಲೇ ಬಿಟ್ಟು ನಗುನಗುತ್ತ ಓಡಿ ಹೋಗುತ್ತಾಳೆ. ನೂರು ಬಾರಿ ಮೊಮ್ಮಗನ ಬಗ್ಗೆ ಕೇಳುತ್ತಾಳೆ. ಯಾವಾಗಲಾದರೂ ನೇತ್ರಿ ತನ್ನ ಒಂದು ವರ್ಷದ ಮಗನ ಪೋಟೋವನ್ನು ವಾಟ್ಸ್ಯಾಪಿನಲ್ಲಿ ಸ್ಟೇಟಸ್ ಹಾಕಿದರೆ ದೇವ್ರಾಜ ಮರೆಯದೆ ಗಂಗವ್ವನನ್ನು ಕರೆದು ತೋರಿಸುತ್ತಾನೆ. ಗಂಗವ್ವ ಚಂದ ನಕ್ಕು ಪೋನಿಗೇ ದೃಷ್ಟಿ ತೆಗೆಯುತ್ತಾಳೆ. ಯಾರಾದರು ಪೋನಿನಲ್ಲಿ ವಿಡಿಯೋ ನೋಡುತ್ತಿದ್ದರೆ, “ಅಪಿ, ನನ್ ಮೊಮ್ಮಗುನ್ ಪೋಟನ ವಾಟ್ಸಾಪಗೆ ಬಿಟ್ಟರನ ನೋಡ” ಎಂದು ಕೇಳುತ್ತಾಳೆ. ಅವರು “ಅಜ್ಜಿ ಅದಂಗಲ್ಲೆ.. ನಂಬರ್ ಇರ್ಬಕು” ಎಂದು ನಕ್ಕು ಬಿಡುತ್ತಾರೆ. ಮೇಲಿನಮನೆ ಪುಟ್ಟಿಯಂತೂ ಇನ್ನೊಂದು ಬಾರಿ ಕೇಳಬಾರದೆಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾಳೆ. ಅಕೌಂಟು ಮಾಡಿಸಲು ಸೊರಬದ ಬ್ಯಾಂಕಿಗೆ ಹೋದಾಗ ಮೊಬೈಲಿನಲ್ಲಿ ವಿಡಿಯೋ ನೋಡುತ್ತಿದ್ದ ಕ್ಲರ್ಕಿಗೆ “ಸರ್ರ, ನನ್ ಮೊಮ್ಮಗುನ್ ಪೋಟ ಬಿಟ್ಟರನ ನೋಡ್ರಿ ವಾಟ್ಸಾಪಗೆ” ಎಂದು ಕೇಳಿದಳು. ಕ್ಲರ್ಕ್ ಜೋರಾಗಿ ನಗಲು ಶುರುಮಾಡಿದ. ಮ್ಯಾನೇಜರು, ಕ್ಯಾಶಿಯರ್ರು, ಮಾಜಿ ಮಿಲಿಟರಿ ಸೆಕ್ಯೂರಿಟಿಯನ್ನು ಕರೆದು ಗಂಗವ್ವನ ಬಾಯಲ್ಲಿ ಅದನ್ನು ಮತ್ತೆ ಹೇಳಿಸಿದ. ಎಲ್ಲರೂ ಗೊಳ್ಳೆಂದು ನಕ್ಕರು. ದುಡ್ಡು ಜಮೆಗೆ ಬಂದಿದ್ದ ಡೊಡ್ಡ ಮಂದಿಯೆಲ್ಲ ಸೇರಿ ನಕ್ಕರು. ಗಂಗವ್ವನಿಗೆ ಎಲ್ಲರೂ ಯಾಕೆ ನಗುತ್ತಿದ್ದಾರೆಂದು ಅರ್ಥವಾಗಲಿಲ್ಲ. ಮುಜುಗರವಾಯಿತು. ದವಡೆ ಕಚ್ಚಿ ‘ನನಗೆ ಎರಡಕ್ಷರ ಓದಲು ಬಂದಿದ್ದರೆ ಇವರಿಗೆಲ್ಲ ಪಾಠ ಕಲಿಸುತ್ತಿದ್ದೆ’ ಎಂದು ಮನಸಿನಲ್ಲೇ ಅಂದುಕೊಂಡಳು.
ಗಂಗವ್ವನಿಗೆ ಮೊಮ್ಮಗ ಎಂದರೆ ಪ್ರಾಣ. ಬೇಕುಬೇಕಾದ ಬಟ್ಟೆ, ತಿಂಡಿ, ಬಂಗಾರ ಕೊಡಿಸಬೇಕೆಂಬ ಆಸೆ. ಆದರೆ ದುಡ್ಡು ಬೇಕಲ್ಲ… ಮೇಲಿನ ಮನೆಗೆ ಅಡಿಕೆ ಸುಲಿಯಲು ಹೋದಾಗ ಒಮ್ಮೊಮ್ಮೆ ಅವರ ಕಟ್ಟೆಯ ಮೇಲೆ ಕೂತು ಟಿ.ವಿ ಇಣುಕುತ್ತಾಳೆ. ಯಾವುದೋ ಧಾರಾವಾಹಿಯಲ್ಲಿ ಅಜ್ಜಿ ಮೊಮ್ಮಗನ ಕೈಗೆ ಬಂಗಾರದ ಕಡಗ ಹಾಕುವುದ ನೋಡಿ ತಾನೂ ತನ್ನ ಮಗಳಿಗೆ ಮಾಟಿಲ್, ಎರಡು ಎಳೆ ಅವಲಕ್ಕಿ ಸರ, ಮೊಮ್ಮಗನಿಗೆ ಬಂಗಾರದ ಕಡಗ ತೊಡಿಸುವ ಕನಸ ಕಾಣುತ್ತಾಳೆ. ನಮಗೂ ಆಸ್ತಿ ಪಾಸ್ತಿ ಇದ್ದಿದ್ದರೆ ಎಷ್ಟು ಚಂದವಿತ್ತಲ ಎಂದು ಒಳಗೊಳಗೇ ನೊಂದುಕೊಳ್ಳುತ್ತಾಳೆ.
ಇವತ್ತು ಮೊಮ್ಮಗನ ನೋಡುವ ಕನಸು ಕಾಣುತ್ತ ಸೀದಾ ಹಿಂಬಾಗಿಲಿಗೆ ಹೋಗಿ ಗೀಟುಗಳನ್ನು ಎಣಿಸಿದಳು. ಎಪ್ಪತ್ತೆರಡು ಗೀಟುಗಳಿದ್ದವು. ಕದವನ್ನು ಹಾಗೆ ಎಳೆದುಕೊಂಡು ಮೇಲಿನ ಮನೆಯ ಕಡೆ ಜೋರು ಹೆಜ್ಜೆ ಹಾಕಿದಳು. ಬಂಗಾರದ ಬಣ್ಣದ ಅವಳ ಪ್ಲಾಸ್ಟಿಕ್ ಚಪ್ಪಲಿಗಳು ಎಳೆಬಿಸಿಲಿಗೆ ಫಳ್ಳೆಂದು ಹೊಳೆಯುತ್ತಿದ್ದವು.

ಮೇಲಿನಮನೆಯಲ್ಲಿ ಅರ್ಧ ಮಂದಿ ಇನ್ನೂ ಎದ್ದಿರಲಿಲ್ಲ. ಗಂಗವ್ವ “ವಡೇರೆ, ವಡೇರೆ..” ಎಂದು ಕೂಗಿದಳು. ಯಾರೂ ಹೊರಬರಲಿಲ್ಲ. “ಪುಟ್ಟಿ.. ಪುಟ್ಟಿ.” ಎಂದು ಕೂಗಿದಳು. ಪುಟ್ಟಿಯ ದೊಡ್ಡಮ್ಮ ಸುಮಂಗಳಮ್ಮ ಹೊರಬಂದು “ಏನೇ ಗಂಗೆ, ಇಷ್ಟು ಬೇಗ ಬಂದಿಯಲ್ಲೆ. ಎಂತ ಆತೆ?” ಎಂದಳು. ಗಂಗವ್ವ ನಗುನಗುತ್ತಲೆ “ಅಮ್ಮಾರೆ, ಮಗುಳ್ ನೋಡಕ್ ಹೊಂಟಿದ್ದೆ. ಎಪ್ಪತೆರ್ಡ್ ಗಿದ್ನ ಅಡಿಕೆ ಆಗ್ಯವೆ. ದುಡ್ಡ್ ಕೊಟ್ತಾರ ಅಂತ ವಡೇರ್ನ ಕೇಳನ ಅಂತ ಬಂದೆ” ಎಂದಳು. ಸುಮಂಗಳಮ್ಮ “ಮಗ್ಳು ಅಂದ್ರೆ ಎಷ್ಟ್ ಖುಷಿಯಲ್ಲೆ ಮಾರಾಯ್ತಿ ನಿಂಗೆ. ಒಡೇರು ಶಿವಮೊಗ್ಗ ಹೋದರು ಇನ್ನೂ ಬಂದಿಲ್ಲ. ಒಂದ್ ನಿಮಿಷ ಇರು” ಎಂದು ಒಳಹೋಗಿ ಐದು ನೂರು ರೂಪಾಯಿ ತಂದು “ಇಷ್ಟೇ ಇರೋದು ನನ್ ಹತ್ರ. ಈಗ ಇಟ್ಕೊ ಖರ್ಚಿಗಾಗತ್ತೆ” ಎಂದಳು. ಗಂಗವ್ವ ಬೇರೆ ದಾರಿ ಕಾಣದೆ ನೂರರ ಐದು ನೋಟುಗಳನ್ನು ಹಿಡಿದು ಮನೆಯ ಕಡೆ ಓಡಿದಳು.
ಅಂಗಳದಲ್ಲಿ ದೇವ್ರಾಜ ಕಿಕ್ ಹೊಡೆದು ಗಾಡಿ ಶುರು ಮಾಡಲು ಪ್ರಯತ್ನಿಸುತ್ತಿದ್ದ. ಗಂಗವ್ವ ಅವನ ಬಳಿ ಮೇಲಿನ ಮನೆಗೆ ಹೋಗಿ ಬಂದದ್ದನ್ನು ಹೇಳಿ “ತಮ, ಒಂದ್ ಸಾವ್ರೂಪಾಯಿ ದುಡ್ಡಿದ್ರೆ ಕೊಡ. ಅಡಿಕೆ ಸುಲ್ದುದ್ ದುಡ್ ಸಿಕ್ಕಿದ್ ಕೂಡ್ಲೆ ವಾಪಾಸ್ ಕೊಡ್ತನಿ” ಎಂದಳು. ದೇವ್ರಾಜ “ಚಿಕ್ಕವ, ನನ್ನತ್ರ ಎಲ್ ಬರ್ಬಕೆ ದುಡ್ಡು. ಮಕ್ಳು ಶಾಲೆ, ಮನೆ ಸಂತೆ ಅಂತ ಕೈಯಗ್ ದುಡ್ಡೆ ನಿಲ್ಲಕಲ್ಲ. ಇಲ್ಲೆ ಸೊರ್ಬುಕಲ.. ಐನೂರ್ ರೂಪಾಯ್ ಸಾಕ್ ತಗ” ಎಂದು ಒಂದು ಕಿಕ್ ಹೊಡೆದ. ಗಾಡಿ ಶುರುವಾಯಿತು. ಗಂಗವ್ವನಿಗೆ ಮರು ಮಾತಾಡಲು ಅವಕಾಶವನ್ನೇ ನೀಡದೆ “ಬತನೆ ಚಿಕವ” ಎಂದು ಪುರ್ರನೆ ಹೋದನು. ದೇವ್ರಾಜ ಶುಂಠಿ, ಗೇರುಬೀಜ, ಅನನಾಸ, ಟಿಂಬರಿನ ದಲ್ಲಾಳಿ ಕೆಲಸ ಮಾಡುತ್ತಾನೆ. ಅವನ ಬಳಿ ದುಡ್ಡು ಇಲ್ಲವೆಂದೇನಲ್ಲ. ಹೆಂಡತಿಗೆ ಗೊತ್ತಾದರೆ ಬಯ್ಯುತ್ತಾಳೆಂದು ಯಾರಿಗೂ ಒಂದು ರೂಪಾಯಿಯನ್ನು ಕೊಡುವುದಿಲ್ಲ. ವರುಷಗಳ ಹಿಂದೆ ಅವನೆ ಗಂಗವ್ವನಿಗೆ ವಿಧವಾ ವೇತನ ಕೊಡಿಸಲು ಓಡಾಡಿದ. ಆಧಾರ್ ಕಾರ್ಡಿನಲ್ಲಿ ‘ಗಂಗಮ್ಮ’ ಎಂದು, ಸಕ್ಕರೆ ಕಾರ್ಡಿನಲ್ಲಿ ‘ಗಂಗವ್ವ’ ಎಂದು ಹೆಸರಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಅವಳ ಅರ್ಜಿಯನ್ನು ತಿರಸ್ಕರಿಸಲಾಯಿತು ಎಂದು ಗ್ರಾಮ ಪಂಚಾಯತಿಯವರು ಹೇಳಿದ್ದರು. ಎಲೆಕ್ಷನ್ ಆಗತಾನೆ ಮುಗಿದದ್ದಕ್ಕೋ ಏನೋ ಯಾರು ಗಂಗವ್ವನ ವಿಚಾರಕ್ಕೆ ತಲೆಕೆಡಿಸಿಕೊಳ್ಳಲೇ ಇಲ್ಲ. ಹಸಿ ಅಡಿಕೆ ಸುಲಿದು ಸುಲಿದು ಸೊಸೈಟಿಯಲ್ಲಿ ಅಕ್ಕಿ ಕೊಡುವ ಮೆಷಿನ್ ಬೆರಳಚ್ಚು ಗುರುತಿಸದೆ ಕೇರಿಯ ಅರ್ಧ ಜನ ಹೆಂಗಸರಿಗೆ ತಿಂಗಳು ಬಂದರೆ ಅಕ್ಕಿ ಪಡೆದುಕೊಳ್ಳುವುದು ಸಾಕುಸಾಕಾಗಿ ಹೋಗುತ್ತಿತ್ತು. ಎರಡು ತಿಂಗಳ ಹಿಂದೆ ದೇವ್ರಾಜನೆ ಮುಂದೆ ನಿಂತು ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಬರುವ ಯೋಜನೆಗೆ ಗಂಗವ್ವನಿಂದ ಅರ್ಜಿ ಹಾಕಿಸಿದ್ದ. ಹೋದ ತಿಂಗಳು ದುಡ್ಡು ಬಂದು ಅವನೇ ಏಟಿಎಮ್ಮಿನಲ್ಲಿ ಬಿಡಿಸಿ ಕೊಟ್ಟಿದ್ದ. ಮಗಳ ಮದುವೆಗೆ ಧರ್ಮಸ್ಥಳ ಸಂಘದಲ್ಲಿ ಮಾಡಿದ್ದ ಸಾಲ ಬಡ್ಡಿ, ದಂಡ, ವಿಶೇಷ ಬಡ್ಡಿ ಅದು ಇದು ಸುಡುಗಾಡು ಸುಂಟಿಕೊಂಬು ಎಂದು ಬೆಳೆದು ನಿಂತಿತ್ತು. ದುಡ್ಡು ಬಂದಿದ್ದೆ ತಡ ಎರಡು ಕಂತನ್ನು ಒಟ್ಟಿಗೆ ಕಟ್ಟಿದ್ದಳು ಗಂಗವ್ವ.
ರೊಟ್ಟಿ ಮಾಡಲು ಕೂತರೆ ಬಸ್ಸಿಗೆ ಲೇಟಾಗುವುದೆಂದು ಗಂಜಿ ಮಾಡಿಕೊಂಡು ಕುಡಿದಳು. ಗಡಗಡನೆ ಎರಡು ಚೊಂಬು ಸ್ನಾನ ಮಾಡಿದಳು. ತನ್ನಿಷ್ಟದ ಮಾವಿನ ಕ್ವಾರೆ ಸೀರೆಯನ್ನೇ ಉಟ್ಟಳು. ಟ್ರಂಕಿನ ಬಾಗಿಲು ತೆಗೆದು ನೀಲಿ ಬಣ್ಣದ ಪಾಸ್ ಬುಕ್ಕು, ಆಧಾರ್ ಕಾರ್ಡು ಮತ್ತು ನೇತ್ರಿ ಯಾವಾಗಲೋ ತಂದಿದ್ದ ಫಾಂಟಾ ಜ್ಯೂಸು ಬಾಟಲಿಗೆ ನೀರುತುಂಬಿಸಿ ಹಳದಿ ಬಣ್ಣದ ಹಳೆಯ ಈಗಲ್ ಕವರಿಗೆ ಹಾಕಿದಳು. ದುಡ್ಡನ್ನು ಊದಾ ಬಣ್ಣದ ಸೊನಗಾರ ಶೆಟ್ಟಿಯ ಬಂಗಾರದಂಗಡಿಯ ಸಣ್ಣ ಪರ್ಸಿನಲ್ಲಿ ಇಟ್ಟು ಕುಬುಸದ ಒಳಗೆ ಸೇರಿಸಿದಳು. ಬಾಗಿಲಿಗೆ ಬೀಗ, ಕಾಲಿಗೆ ಬಂಗಾರದ ಬಣ್ಣದ ಚಪ್ಪಲಿ ಹಾಕಿ ನಾಲ್ಕು ಬಾಗಿಲ ಕಡೆ ಜೋರು ಹೆಜ್ಜೆ ಹಾಕಿದಳು. ಸಣ್ಣಶಾಲೆಯ ಬಳಿ ಬರುತ್ತಿದ್ದಂತೆ ಗುಗ್ರಿ ನಾಗಿಯ ಮನೆಯಲ್ಲಿ ಅರಳಿ ನಿಂತ ಡೇರೆ ಹೂಗಳು ಕಣ್ಸೆಳೆದವು. ಅಮ್ಮಮಗಳಿಬ್ಬರಿಗೂ ಡೇರೆಹೂವು ಎಂದರೆ ಭಾರಿ ಇಷ್ಟ. ನೇತ್ರಿ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಗಂಗವ್ವ ಎಲ್ಲೇ ಹೋದರು ಡೇರೆಹೂವಿನ ಕಡ್ಡಿಗಳನ್ನು ತಂದು ತನ್ನ ಮನೆಯ ಮುಂದೆ ನೆಡುತ್ತಿದ್ದಳು. ಆಗೆಲ್ಲ ಮಳೆಗಾಲ ಬಂತೆಂದರೆ ಗಂಗವ್ವನ ಮನೆಯ ಅಂಗಳ ಬೆಂಗಳೂರಿನ ಲಾಲ್ಬಾಗಿನಂತೆ ಕಾಣುತ್ತಿತ್ತು. ತರಹೇವಾರಿ ಡೇರೆಹೂಗಳು – ಬಿಳೆಕಡ್ಡಿ, ನೀಲಿಕಡ್ಡಿ, ಕರೆಕಡ್ಡಿ, ಕೆಂಪುಕಡ್ಡಿ, ಹಳದಿಕಡ್ಡಿ, ಬಂಗಾರಕಡ್ಡಿ, ಮಾಸಲುಕಡ್ಡಿ, ಕೆರೆತಾವರೆ, ಕಾಮಿಕಣ್ಣು, ಕುಂಕುಮತಾವರೆ, ಬಿಳೆ ಬುತ್ತಿಉಂಡೆ, ಇಂದ್ರನೂವಿನ ತಾವರೆ – ಇನ್ನೂ ಅನೇಕ ತರಹದ ಡೇರೆ ಹೂಗಳು. ಜತೆಗೆ ಮಲ್ಲಿಗೆ, ಗುಲಾಬಿ, ಜಡೆಪತ್ರೆ, ಗೌರಿ ಹೂ, ನಂದಿಬಟ್ಟಲು ಇತ್ಯಾದಿ. ಗುಗ್ರಿ ನಾಗಿಯ ಮನೆಯ ಸರಿಗಲ್ಲು ಸರಿಸಿ ಅಂಗಳಕ್ಕೆ ಹೋದ ಗಂಗವ್ವನ ಕಣ್ಣು ಸೂರ್ಯನ ಬೆಳಕಿಗೆ ಹೊಳೆಯುತ್ತಿದ್ದ ಬಂಗಾರಕಡ್ಡಿ ಡೇರೆಹೂವಿನ ಮೇಲೆ ಬಿತ್ತು. ನೇತ್ರಿಗೆ ಭಾರಿ ಇಷ್ಟದ ಹೂವು ಅದು! ಇದನ್ನು ಶಾಲೆಗೆ ಮುಡಿದು ಹೋಗುವುದು, ಜತೆಗೆ ತನ್ನ ಇಷ್ಟದ ಶಶಿಕಲಾ ಟೀಚರಿಗೂ ಒಂದು ಹೂವು ತೆಗೆದುಕೊಂಡು ಹೋಗುವುದು ಅವಳಿಗೆ ಇಷ್ಟದ ವಿಷಯವಾಗಿತ್ತು. ಅವ್ವ ಒಮ್ಮೆ ಯಾರೋ ಕೇಳಿದರೆಂದು ಅರಳಿದ್ದ ಬಂಗಾರಕಡ್ಡಿಯೊಂದನ್ನು ಕೊಟ್ಟಿದ್ದಕ್ಕೆ ಸಂಜೆ ಶಾಲೆಯಿಂದ ಬಂದವಳೆ “ನನ್ ಕೇಳ್ದೆ ಅದೆಂಗ್ ಕೊಟ್ಟೆ..” ಎಂದು ಜಗಳ ಮಾಡಿದ್ದಳು.
ಗಂಗವ್ವ “ನಾಗಿ ಒಂದ್ ಹೂವ್ ಕ್ವಯ್ಕಿನ್ಲನೆ?” ಎಂದು ಕೂಗಿದಳು. ಅಡಿಗೆ ರಾಡಿನಲ್ಲಿ ರೊಟ್ಟಿ ತಟ್ಟುತ್ತಿದ್ದ ನಾಗಿ ಅಲ್ಲಿಂದಲೆ ಬಗ್ಗಿ ನೋಡಿ “ಅತ್ಯರೆ..? ನಿಮ್ಗ್ ಯಲ್ಲ ಅನ್ನಕಾಕತೇನ್ರಿ. ಒಂದಲ್ಲ ಎಲ್ಡ್ ಕ್ವಯ್ಕ್ಯಳ್ರಿ” ಎಂದಳು. ಗಂಗವ್ವ ತನಗಾಗಿ ಬಿಳಿಬುತ್ತಿಯ ಕೊಯ್ದು ಮುಡಿದಳು, ಮಗಳಿಗಾಗಿ ಬಂಗಾರದ ಕಡ್ಡಿಯೊಂದನ್ನು ಹಳದಿ ಕವರಿನ ಒಳಗೆ ಹಾಕಿಕೊಂಡಳು. “ಬತನೆ ನಾಗಿ” ಎಂದು ಹೇಳಿ ಸರಿಗಲ್ಲ ಸರಿಸಿ ಜೋರು ಹೆಜ್ಜೆ ಹಾಕಿದಳು. ನಾಲ್ಕು ಬಾಗಿಲಿಗೆ ಬರುತ್ತಿದ್ದಂತೆ ಬಸ್ಸೂ ಬಂತು. ಮನಸ್ಸಿನಲ್ಲೇ ನಾಲ್ಕು ಬಾಗಿಲು ಭೂತಪ್ಪನಿಗೆ ಕೈಮುಗಿದು ಟಿ.ವಿ ನೋಡುವ ಆಸೆಗೆ ಮುಂದಿನ ಬಾಗಿಲಿನಲ್ಲಿ ಬಸ್ಸು ಹತ್ತಿದಳು. ಟಿ.ವಿ.ಯಲ್ಲಿ ‘ಆಪ್ತಮಿತ್ರ’ ಸಿನಿಮಾ ಓಡುತ್ತಿತ್ತು. ಕಂಡಕ್ಟರ್ ಇಪ್ಪತ್ತು ರೂಪಾಯಿಗೆ ಟಿಕೆಟ್ ಹರಿದು ಅವಳ ಕೈಗಿಟ್ಟ. ಗಂಗವ್ವ ಟಿ.ವಿ ನೋಡುತ್ತಲೆ ಕುಬಸದಿಂದ ಪರ್ಸ್ ತೆಗೆದು ನೂರು ರೂಪಾಯಿಯ ನೋಟೊಂದನ್ನು ಕಂಡಕ್ಟರ್ ಕೈಗಿಟ್ಟಳು. ಕಂಡಕ್ಟರ್ ಆಮೇಲೆ ಚೇಂಜ್ ಕೊಡುವುದಾಗಿ ಹೇಳಿ ಹೋದ. ಗಂಗವ್ವ ವಿಷ್ಣುವರ್ಧನನ ಮೇಲಿಟ್ಟ ಕಣ್ಣನ್ನು ಸೊರಬ ಬರುವವರೆಗೂ ಮಿಟುಕಿಸಲಿಲ್ಲ. ಅವನ ಕೈಯಲ್ಲಿದ್ದ ಕಡಗ ನೋಡಿ ತನ್ನ ಮೊಮ್ಮಗನ ಕೈಯಲ್ಲೂ ಒಂದು ಇದ್ದರೆ ಎಷ್ಟು ಚಂದ ಅನಿಸಿತು. ಸಮಯ ಪಟಕ್ಕನೆ ಓಡಿತ್ತು. ಕಂಡಕ್ಟರ್ “ಸೊರಬ ಸೊರಬ” ಎಂದು ಕೂಗಿದ. ಮಧ್ಯ ಬಸ್ಸ್ಟ್ಯಾಂಡಿನಲ್ಲಿ ಇಳಿದು ಫಯಾಜ್ ಅಂಗಡಿಯ ಎದುರು ಹೋಗಿ ನಿಂತಳು. ಕಂಡಕ್ಟರ ಬಳಿ ಎಂಬತ್ತು ರೂಪಾಯಿ ಚೇಂಜ್ ಇಸಿದುಕೊಳ್ಳಲು ಮರೆಯಲಿಲ್ಲ.
ಊರೆಲ್ಲ ಮೋಡವಾಗಿತ್ತು. ತನ್ನ ಮೊಮ್ಮಗ, ಮಗಳು ಬರುವರೆಂದು ಹೋಗುವ ಬರುವ ಬಸ್ಸೆಲ್ಲವನ್ನು ಬಿಡದೇ ನೋಡುತ್ತಿದ್ದಳು. ಪಕ್ಕದ ಗೂಡಂಗಡಿಯಲ್ಲಿ ಮೊಮ್ಮಗನಿಗಾಗಿ ಐದು ರೂಪಾಯಿಯ ಎರಡು ಮಂಚ್ ಚಾಕ್ಲೇಟ್ ಕೊಂಡುಕೊಂಡಳು. ಹೊಸ ಅಂಗಡಿ ಮುಂಗಟ್ಟುಗಳ ನೋಡಿ ‘ಸೊರಬ ಪಟ್ಟಣ ಎಷ್ಟು ಬದಲಾಗಿ ಹೋಗಿದೆ’ ಅನಿಸಿತು! ತನ್ನ ಗಂಡನ ಜತೆ ‘ಆಕಸ್ಮಿಕ’ ಸಿನಿಮಾ ನೋಡಲು ವಿಜಯ ಟಾಕೀಸಿಗೆ ಬಂದದ್ದು, ಸುಧಾ ಹೋಟಲಿನಲ್ಲಿ ಮಸಾಲೆ ದೋಸೆ ತಿಂದದ್ದು ಎಲ್ಲ ನೆನಪಾಯಿತು. ಗಂಡ ಇದ್ದಿದ್ದರೆ ಮಗಳು, ಮೊಮ್ಮಗ ಖುಷಿಯಾಗಿರುವುದ ನೋಡಿ ಎಷ್ಟು ಖುಷಿಪಡುತ್ತಿದ್ದ ಎಂದೆನಿಸಿತು. ಯಾರೇ ಮಕ್ಕಳನ್ನು ಎಚ್ಚಿಕೊಂಡು ಅವಳೆದುರು ನಡೆದುಕೊಂಡು ಹೋದರೂ ‘ಮಗು ಯಾವ ತರಹದ ಬಟ್ಟೆ ಹಾಕಿದೆ, ಕೈ ಕಾಲಲ್ಲಿ ಬಳೆ ಉಂಗುರ ಕಡಗಗಳಿವೆಯೆ, ಅವು ತನ್ನ ಮೊಮ್ಮಗನ ಮೇಲೆ ಹೇಗೆ ಕಾಣಬಹುದು’ ಎಂದೆಲ್ಲ ಹಗಲುಗನಸು ಕಾಣುತ್ತಿದ್ದಳು. ಪಕ್ಕದಲ್ಲೆ “ಯವಾ..” ಎಂದು ಯಾರೋ ಕರೆದಂತಾಯಿತು. ತಿರುಗಿ ನೋಡಿದಳು. ಮಗಳು ನೇತ್ರಿ ತನ್ನ ಮಗನನ್ನು ಸೊಂಟಕ್ಕೆ ಇಟ್ಟುಕೊಂಡು ಅವ್ವಳನ್ನೇ ನೋಡುತ್ತಿದ್ದಾಳೆ! ಗಂಗವ್ವ ಮರುಕ್ಷಣವೇ ಕೈಚಾಚಿ ಮೊಮ್ಮಗನನ್ನು ಎಚ್ಚಿಕೊಂಡು “ಎಷ್ಟ್ ಚಂದ್ ಐದಿಯ ನನ್ ಬಂಗಾರ” ಎಂದು ಮುದ್ದು ಮಾಡಿದಳು. ಮೊಮ್ಮಗನ ಸ್ಪರ್ಶ ಅವಳಿಗೆ ಹೊಸ ಚೈತನ್ಯ ತುಂಬಿತು. ನೂರು ಮುತ್ತು ಕೊಟ್ಟಳು. ಮತ್ತೆ ಮತ್ತೆ ಮುತ್ತು ಕೊಟ್ಟಳು. ಮೊಮ್ಮಗನ ಮೊಣಕೈಗೆ ಕಟ್ಟಿದ್ದ ಕರಿ ದಾರವನ್ನೆ ನೋಡಿದಳು. “ನೇತ್ರಿ, ಎಲ್ಲ ಅರಾಮೇನವ್ವ?” ಎಂದು ಚಂದದ ನಗು ಬೀರಿದಳು. ಹಳದಿ ಕವರಿನಿಂದ ಮಂಚ್ ತೆಗೆದು ಮಗುವಿನ ಕೈಗಿಟ್ಟಳು. ನೇತ್ರಿ “ಯವ, ಚಾಕ್ಲೇಟ್ ಕೊಡ್ಬಾಡ್ದು ಅಂತ ಎಷ್ಟ್ ಸತಿ ಹೇಳೆನಿ.. ಇನ್ನು ಶಣ್ ಕೂಸ್ ಅದು” ಎಂದು ಅವ್ವನೆಡೆ ಜೋರು ಕಣ್ಣು ಬಿಟ್ಟು ಚಾಕ್ಲೇಟ್ ಕಸಿದುಕೊಂಡು ಹಳದಿ ಕವರಿಗೆ ಎಸೆದಳು. ಗಂಗವ್ವನಿಗೆ ‘ಇವಳಿಗೆ ಓದಿಸಿದ್ದೇ ತಪ್ಪಾಯಿತು’ ಅನಿಸಿತು. ಅವಳಿಗೆ ತನ್ನ ಮಗಳು ಆಫೀಸರ್ ಆಗಬೇಕು, ಕೆಂಪು ಗೂಟದ ಕಾರಿನಲ್ಲಿ ಊರಿಗೆ ಬರಬೇಕೆಂದು ಆಸೆಯಿತ್ತು. ಕಷ್ಟಪಟ್ಟು ಪಿಯೂಸಿವರೆಗೂ ಓದಿಸಿದಳು. ಆಮೇಲೆ ಡಿಗ್ರಿಗೆ ದುಡ್ಡಿಲ್ಲವೆಂದು ತಿಂಗಳ ಕಂಪ್ಯೂಟರ್ ಕೋರ್ಸ್ ಮಾಡಿಸಿದಳು. ಕೋರ್ಸ್ ಮುಗಿಸಿ ನೇತ್ರಿಯು ಸೈಬರ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ದಿನ ಕೆಲಸಕ್ಕೆಂದು ಪಟ್ಟಣಕ್ಕೆ ಬರುತ್ತಿದ್ದವಳು ಸಿದ್ದಾಪುರ ಸೀಮೆಯ ಹುಡುಗನ ಪ್ರೀತಿಸಿ ಅವನ ಜತೆ ಓಡಿ ಹೋಗಿ ಮದುವೆಯಾದಳು. ಗಂಗವ್ವ ಮೊದಮೊದಲು ನೊಂದುಕೊಂಡರೂ ಆಮೇಲೆ ಅಳಿಯ ಮಗಳ ನೋಡಿ ‘ಇಬ್ರು ಚನಾಗಿದ್ರೆ ಸಾಕು’ ಅಂದುಕೊಂಡು ಮನ ಕರಗಿದಳು. ಧರ್ಮಸ್ಥಳ ಸಂಘದಲ್ಲಿ ಸಾಲ ತೆಗೆದು ಸಣ್ಣದಾಗಿ ನೆಂಟರಿಷ್ಟರ ಕರೆದು ಮದುವೆ ಊಟ ಹಾಕಿಸಿದಳು. ಸಿದ್ದಾಪುರ ಬಸ್ಸ್ಟ್ಯಾಂಡಿನಲ್ಲಿ ಗೂಡಂಗಡಿ ನಡೆಸುವ ಅಳಿಯ ಮಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಅನ್ನುವುದೊಂದೇ ಅವಳಿಗೆ ಸಾಕಾಗಿತ್ತು.
“ಗಂಡ ಬರ್ನಲ್ಲನೆ ತಂಗಿ?”
“ಕೆಲ್ಸ ಬಿಟ್ಟು ಎಲ್ಲಿ ಬರಕಾಕತೆ ಯವ?”
“ಅಲ್ಲೆ ನೀನೇ ನೇರ ಊರಿಗ್ ಬಂದುದ್ರೆ ನಾಕ್ ದಿಸ ಇದ್ದ್ ಹೋಗಕಾಕುತ್ತಲೆ”
“ಯಲ್ಲೆ ಯವ. ನನ್ ಪ್ರೆಂಡ್ ಒಬ್ಳುದ್ದು ಮದಿವಿತ್ತು ನಿನ್ನೆ ಕೊಡಕಣ್ಯಗೆ. ಅದುಕ್ಕೆ ಬಂದೆ. ಈಗ್ ಹೊಂಡ್ಬಕು. ಗದ್ದೆ ಕೆಲ್ಸಲ ಹಂಗೆ ಬಿದ್ದಾವೆ”
“ಆತ್ ತಗ ಎಂತ ಮಾಡಕಾಕತಿ. ನೀನ್ ಚನಾಗಿದ್ರೆ ಅಷ್ಟೇ ಸಾಕು”
“ನೀನೂ ಮೈಕೈ ನೂವು ಅಂತಿದ್ಯಲ ಅದ್ಕೆ ಈ.ಕೆ. ಸಟ್ಟಿ ಹತ್ರ ಟಾನಿಕ್ ಬರ್ಸನ ಅಂತ ಪೋನ್ ಮಾಡಿಸ್ದೆ”
“ಹೋಗೆ ಹುಡ್ಗಿ, ನಂಗೆತ ಆಗೆತಿ.. ಪುಲ್ ಗಟ್ಟಿ ಐದೇನ್ ನಾನು”
ನೇತ್ರಿ “ನೀ ನನ್ ಮಾತ್ ಎಲ್ ಕೇಳ್ತಿ ತಗ.. ಬಾ ಹೋಗನ” ಎಂದು ಅವ್ವನ ಕೈಲಿದ್ದ ಕವರನ್ನು ಇಸಿದುಕೊಂಡು ಆಸ್ಪತ್ರೆಯ ಕಡೆ ನಡೆಯ ಹತ್ತಿದಳು. ಗಂಗವ್ವನೂ ಹಿಂದೆ ನಡೆದಳು. ನಿಮಿಷದಲ್ಲೆ ಮಗು ಅಳ ಹತ್ತಿತು. ಗಂಗವ್ವ ಮೊಮ್ಮಗನನ್ನು ತನ್ನ ಎದೆಗೆ ಒರಗಿಸಿ “ಅಳ್ ಬ್ಯಾಡಪ್ಪ ನನ್ ಕೂಸೆ” ಅಂದಳು. ಮಗು ಅಳು ನಿಲ್ಲಿಸಲಿಲ್ಲ. ನೇತ್ರಿ “ಹೊಟ್ಟೆ ಹಸ್ದತೇನ ಕೊಡಿಲ್ಲಿ” ಎಂದು ಮಗುವನ್ನು ಎಚ್ಚಿಕೊಂಡಳು. “ಯವ, ಇದುಕ್ಕೊಂಚೂರ್ ಹಾಲ್ ಕುಡುಸ್ತನಿ” ಎಂದು ಹನುಮಂತ ಗುಡಿಯ ಕಟ್ಟೆಯ ಮೇಲೆ ಹೋಗಿ ಕೂತಳು. ಗಂಗವ್ವ ಏನೋ ಹೊಳೆದವಳಂತೆ “ತಂಗಿ, ಹಿಂಗ್ ಹೋಗ್ ಹಂಗ್ ಬತ್ನೆ” ಎಂದು ಮಗಳ ಉತ್ತರಕ್ಕೆ ಕಾಯದೆ ಹಳದಿ ಕವರ್ ತೆಗೆದುಕೊಂಡು ನಡೆದು ಹೊರಟಳು.
ಮುಖ್ಯರಸ್ತೆಯಲ್ಲಿದ್ದ ಮೈಸೂರು ಬ್ಯಾಂಕ್ ‘ಸ್ಟೇಟ್ ಬ್ಯಾಂಕ್’ ಆಗಿತ್ತು. ಬ್ಯಾಂಕಿನ ಮುಂದೆ ಸುಮಾರು ಜನ ತುಂಬಿದ್ದರು. ಜಾಗ ಮಾಡಿಕೊಂಡು ಗಂಗವ್ವ ಬ್ಯಾಂಕಿನ ಒಳಗೆ ಹೋದಳು. ಪಾಸ್ಬುಕ್, ಆಧಾರ್ ಕಾರ್ಡ್ ತೆಗೆದು ಕೈಲಿಟ್ಟುಕೊಂಡಳು. ಮೊದಲ ಕೌಂಟರಿನಲ್ಲಿ ಕೂತಿದ್ದ ವ್ಯಕ್ತಿಗೆ “ಸರ್ರ ದುಡ್ ಬಂದತ್ಯ ನೋಡ್ಬಕಿತ್ತಲ್ರಿ” ಎಂದಳು. ಆ ವ್ಯಕ್ತಿ “ಕ್ಯಾ ಚಾಯಿಯೆ ಆಂಟಿ” ಎಂದನು. ಗಂಗವ್ವ ಮತ್ತೆ “ದುಡ್ ಬಂದತ್ಯ ನೋಡ್ಬಕಿತ್ತಲ್ರಿ” ಎಂದಳು. ಬ್ಯಾಂಕಿನ ವ್ಯಕ್ತಿ “ಕನ್ನಡ್ ನಹಿ..” ಎಂದ. ಗಂಗವ್ವ ಮುಖಮುಖ ನೋಡಿದಳು. ಆ ವ್ಯಕ್ತಿ ಪಕ್ಕದ ಕೌಂಟರ್ ಕಡೆ ತಿರುಗಿ “ಕುಚ್ ಕನ್ನಡ್ ಲೋಗ್, ತೋಡ ದೇಖೋ” ಎಂದ. ಪಕ್ಕದ ಕೌಂಟರಿನ ಮುಂದೆ ದೊಡ್ಡ ಸಾಲಿತ್ತು. ಅಲ್ಲಿದ್ದ ಹುಡುಗಿ ಕಂಪ್ಯೂಟರಿನಲ್ಲಿ ಏನನ್ನೋ ನೋಡುತ್ತಲೇ “ಈ ಕಡೆ ಬಾರಮ್ಮ, ಏನ್ ಆಗ್ಬೇಕಿತ್ತು?” ಎಂದಳು. ಗಂಗವ್ವ “ಮೇಡಮ್ಮರೆ, ದುಡ್ ಬಂದತ್ಯ ನೋಡ್ಬಕಿತ್ತಲ್ರಿ” ಎಂದಳು. “ಯಾವ್ ದುಡ್ಡಮ್ಮ?” ಎಂದಿದ್ದಕ್ಕೆ “ಸರ್ಕಾರುದ್ ಎಲ್ಡ್ ಸಾವ್ರುಪಾಯ್ರಿ ಮೇಡಮ್” ಎಂದಳು. “ಅಮ್ಮ, ರಶ್ ಇದೆ. ಅಲ್ಲಿ ಹೊರಗಡೆ ಮೆಷಿನ್ ಇದೆ, ಅಲ್ಲಿ ಪಾಸ್ಬುಕ್ ಪ್ರಿಂಟ್ ಮಾಡಿ ನೋಡಿ” ಎಂದು ಬಾಗಿಲ ಕಡೆ ತೋರಿಸಿದಳು. ಗಂಗವ್ವ ಅತ್ತಲೆ ನಡೆದಳು. ಬ್ಯಾಂಕಿನ ಹೊರಗೆ ಇದ್ದ ಏಟಿಎಮ್ ಮತ್ತು ಪಾಸ್ಬುಕ್ ಪ್ರಿಂಟ್ ಮಾಡುವ ಮೆಷಿನ್ ಎದುರು ಹತ್ತಾರು ಜನ ಜಮಾಯಿಸಿದ್ದರು. ಗಂಗವ್ವನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಬಂದುಹೋಗುವವರು ಮೆಷಿನಿನ ಪರದೆಯ ಮೇಲೆ ಬೆರಳು ಒತ್ತಿ, ಪಾಸ್ಬುಕ್ಕನ್ನು ಇಟ್ಟು ಪೇಜು ತಿರುವಿ ಹಾಕುವುದನ್ನೆ ನೋಡುತ್ತ ನಿಂತಳು. ಅವಳು ನಿಂತಿರುವಂತೆಯೆ ಅವಳ ನಂತರ ಬಂದ ಹತ್ತಾರು ಜನ ಪಾಸ್ಬುಕ್ ಪ್ರಿಂಟ್ ಮಾಡಿಕೊಂಡು ಹೋದರು. ತನಗೆ ಎರಡಕ್ಷರ ಓದಲು ಬಂದಿದ್ದರೆ ಕತೆಯೆ ಬೇರೆಯಿತ್ತು ಎಂದು ಮನಸ್ಸಿನಲ್ಲೇ ಅಂದುಕೊಂಡಳು. ಪಕ್ಕದಲ್ಲೇ ನಿಂತಿದ್ದ ಹೆಂಗಸೊಬ್ಬಳು ಗಂಗವ್ವನಿಗೆ “ಅಕ್ಕ ನಿಂತ್ರೆ ನಿಂತೇ ಇರ್ಬೇಕು. ಯಾರ್ಕೈಲಾದ್ರೂ ಪ್ರಿಂಟ್ ಮಾಡಿಸ್ಕೊಳಿ” ಎಂದಳು. ಪಾಸ್ಬುಕ್ ಪ್ರಿಂಟ್ ಮಾಡುತ್ತಿದ್ದ ಹುಡುಗನೊಬ್ಬ ಅದನ್ನು ಕೇಳಿಸಿಕೊಂಡು “ಅಜ್ಜಿ ಕೊಡ್ರಿಲ್ಲಿ” ಎಂದು ಪಾಸ್ಬುಕ್ ಇಸಿದುಕೊಂಡು ಪರದೆಯ ಮೇಲೆ ಬೆರಳು ಒತ್ತಿದ. ಮೆಷಿನ್ ಒಳಗೆ ಪೇಜು ಅಗಲಿಸಿ ಇಟ್ಟ. ಕರ್ರ್ ಎಂದು ಶಬ್ದ ಮಾಡುತ್ತ ಮೆಷಿನ್ ಪಾಸ್ಬುಕ್ ಪ್ರಿಂಟ್ ಮಾಡಿತು. ಗಂಗವ್ವ “ತಮ ದುಡ್ ಬಂದತ್ಯ?” ಎಂದಳು. ಹುಡುಗ ಪಾಸ್ಬುಕ್ ನೋಡಿ “ಅಜ್ಜಿ ಹೊಸ ದುಡ್ ಬಂದಲ್ಲ. ಹೊದ್ ತಿಂಗ್ಳು ಬಂದತಿ. ಅದುನ್ನ ತಗ್ದಿರಿ. ಅದಾದ್ ಮ್ಯಾಲೆ ನಿಮ್ ಅಕೌಂಟಾಗೆ ದುಡ್ ಕಡಿಮೆ ಐತಿ ಅಂತ ಬ್ಯಾಂಕರ್ ದುಡ್ ಕಟ್ ಮಾಡ್ಯಾರೆ. ಮೆಸೇಜ್ ದುಡ್ಡು, ಏಟಿಎಮ್ ಕಾರ್ಡ್ ದುಡ್ಡು ಅಂತ ಎಲ್ಲ ಕಟ್ ಮಾಡಿ ಈಗ ಮೂವತ್ತೇಳ್ ರೂಪಾಯಿ ಐತಿ ನೋಡ್ರಿ” ಎಂದನು. ಗಂಗವ್ವ “ಇನ್ನೊಂದ್ ಸತಿ ನೋಡ್ ನನ್ನಪ್ಪ ದುಡ್ ಬಂದತೇನ” ಎಂದಿದ್ದಕ್ಕೆ ಆ ಹುಡುಗ “ದುಡ್ ಬಂದಿಲ್ಲ ಅಜ್ಜಿ. ಮೂವತ್ತೇಳು ರೂಪಾಯಿ ಅಷ್ಟೆ ಇರದು” ಎಂದನು. ಗಂಗವ್ವಳಿಗೆ ನಿರಾಶೆಯಾಯಿತು. ಈ ದುಡ್ಡಿನಲ್ಲಿ ಮೊಮ್ಮಗನಿಗೆ ಏನನ್ನೂ ಕೊಡಿಸಲು ಸಾಧ್ಯವಾಗದು ಎಂದು ನೆನೆದು ಮನಸ್ಸು ತುಂಬಿ ಬಂತು. ‘ಬಡೂರ್ ಅಕೌಂಟಾಗೆ ದುಡ್ ತಕ್ಕುತಿರಾ ಹಾಂಟ್ಗಳ್ರ’ ಅಂತ ಬ್ಯಾಂಕಿನವರ ಕಡೆ ತಿರುಗಿ ಬೈಯಬೇಕು ಅನಿಸಿತು. ಅಳುಮುಖ ಹಾಕಿಕೊಂಡು ಹನುಮಂತನ ದೇವಸ್ಥಾನದತ್ತ ನಡೆದಳು.
ದಾರಿಯಲ್ಲಿ ಸೊನಗಾರ ಶೆಟ್ಟಿಯ ಬಂಗಾರದ ಅಂಗಡಿ ಕಂಡು ಚಪ್ಪಲಿ ಹೊರಗೆ ಬಿಟ್ಟು ಅಂಗಡಿ ಒಳಹೊಕ್ಕಳು. ಶೆಟ್ಟರು ಇಂಗ್ಲಿಷ್ ಪೇಪರ್ ಓದುತ್ತಿದ್ದರು. ಪೇಪರಿನ ಒಂದು ಮೂಲೆಯಲ್ಲಿ ‘ಬ್ಯಾಂಕುಗಳಿಂದ ಶ್ರೀಮಂತರ ಎರಡು ಲಕ್ಷ ಕೋಟಿ ಸಾಲ ಮನ್ನ’ ಎಂದು ಸಣ್ಣದಾಗಿ ಬರೆದಿತ್ತು. ಗಂಗವ್ವನನ್ನು ನೋಡಿ ಪೇಪರನ್ನು ಬದಿ ಇಟ್ಟ ಶೆಟ್ಟರು “ಬಾರಮ್ಮ, ಭಾಳ ದಿನ ಆತು ಈ ಕಡೆ ಬಂದು” ಎಂದು ಭಾರಿ ಪರಿಚಯ ಇರುವವರ ಹಾಗೆ ಮಾತನಾಡಿಸಿದರು. ಗಂಗಮ್ಮ “ಬೆಳ್ಳಿವು ಕೈ ಕಡಗ ತೋರುಸ್ರಿ, ಒಂದ್ ವರ್ಷುದ್ ಮಕ್ಳಿಗೆ” ಎಂದಳು. ಶೆಟ್ರು ಬೇರೆ ಬೇರೆ ರೀತಿಯ ಎರಡು ಸಾವಿರದಿಂದ ಎಂಟು ಸಾವಿರದವರೆಗಿನ ಕಡಗಗಳನ್ನು ತೋರಿಸಿದರು. ಕುತೂಹಲಕ್ಕೆ “ಬಂಗಾರುದ್ ಆದ್ರೆ ಎಷ್ಟ್ ಆಕತ್ರಿ?” ಎಂದಳು. ಶೆಟ್ಟರು “ಕಡಿಮೆ ಅಂದ್ರೆ ಮೂವತೈದ್ ಸಾವ್ರ ಆಕತ್ರಿ” ಎಂದರು. ಗಂಗವ್ವ “ಸಟ್ರೆ, ಇಲ್ಲೊಂದ್ ಚೂರ್ ಕೆಲ್ಸ ಐತಿ, ಮುಗಿಸ್ಕಿಂದ್ ಬತನ್ರಿ” ಎಂದು ಹೇಳಿ ಹೊರಟಳು. ಬ್ಯಾಂಕಿಗೆ ದುಡ್ಡು ಬಂದಿದ್ದರೆ ಎರಡು ಸಾವಿರದ ಕಡಗವನ್ನು ಕೊಂಡು ಮೊಮ್ಮಗನ ಮುದ್ದಾದ ಕೈಗಳಿಗೆ ಹಾಕಬಹುದಿತ್ತು ಎಂದು ಮನಸಿನಲ್ಲೇ ನೊಂದುಕೊಂಡಳು.
ಹನುಮಂತನ ಗುಡಿಯಲ್ಲಿ ನೇತ್ರಿ ಕಾದು ಕೂತಿದ್ದಳು. ಅವ್ವನನ್ನು ನೋಡುತ್ತಲೆ “ಎಲ್ಲಿಗೋಗಿದ್ದೆ ಯವ ಇಷ್ಟೊತ್ತು?” ಎಂದಳು. “ಇಲ್ಲೆ ಬ್ಯಾಂಕಿಗೋಗಿದ್ನೆ ದುಡ್ ಬಿಡಿಶ್ಕಿ ಬರಕೆ” ಎಂದಳು ಗಂಗವ್ವ. “ಬಾ ಟೈಮಾಕತಿ ಹೋಗನ” ಎಂದು ಆಸ್ಪತ್ರೆಯ ಕಡೆ ನಡೆದಳು ನೇತ್ರಿ. ಗಂಗವ್ವ ಮೊಮ್ಮಗನತ್ತಲೇ ನೋಡುತ್ತ ಬೇಜಾರಿನಲ್ಲಿ ಹೆಜ್ಜೆ ಹಾಕಿದಳು.
ಯು.ಕೆ. ಶೆಟ್ಟಿ ಅಸ್ಪತ್ರೆಯಲ್ಲಿ ಒಂದಷ್ಟು ಜನ ಕಾಯುತ್ತಿದ್ದರು. ನೇತ್ರಿ ಹೋಗಿ ನರ್ಸಿನ ಬಳಿ ಚೀಟಿ ತೆಗೆದುಕೊಂಡಳು. ತಾಯಿ ಮಗಳಿಬ್ಬರು ಮರದ ಬೆಂಚಿನ ಮೇಲೆ ಕುಳಿತರು. ಗಂಗವ್ವ ಮೊಮ್ಮಗನನ್ನು ಎತ್ತಿ ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳಲು ಮಗು ಅಜ್ಜಿಯ ಸೀರೆಸೆರಗು ಹಿಡಿದು ಮಾವಿನ ಕೋರೆಯ ಚಿತ್ರವ ನೋಡಿ ಆಟ ಆಡತೊಡಗಿತು. ಗಂಗವ್ವ “ತಂಗಿ ಅಂಗ್ಡಿ ಯಾಪಾರ ಹೆಂಗೈತೆ” ಎಂದಳು. ನೇತ್ರಿ “ಪುಲ್ ಡಲ್ ಕಣೆ ಯವ. ಬನವಾಸಿ ಗೌಡ್ರು ಒಬ್ರು ನಮ್ ಅಂಗ್ಡಿ ಹತ್ರಾನೆ ಒಂದ್ ದೊಡ್ ಅಂಗ್ಡಿ ಮಾಡ್ಯಾರೆ. ನಮ್ಗೆ ಪೆಟ್ಟು ಅದು. ಬರೆ ಸಿಗ್ರೆಟು ಗುಟ್ಕ ಅಷ್ಟೇ ವ್ಯಾಪಾರ ಈಗ” ಎಂದಳು. ಗಂಗವ್ವ “ದೇವ್ರು ನಡಿಸ್ ದಂಗೆ ಆಕತಿ ಬಿಡು. ಭೂತಪ್ಪ ಐದಾನೆ. ಕಾಪಾಡ್ತಾನೆ” ಎಂದು ನೇತ್ರಿಯ ಕೈ ಹಿಡಿದಳು. “ನೀ ಹೆಂಗದಿಯೆ ಯವ?” ಎಂದಳು ನೇತ್ರಿ. “ನಂಗೇನು ಗಟ್ಟಿ ಐದೇನಿ. ನಂಗ್ ನೀವ್ ಚಂದಗಿದ್ರೆ ಆತು ಮಗುಳೆ” ಎಂದು ಮಗುವಿನ ತಲೆಗೆ ಮುತ್ತೊಂದ ಇಟ್ಟು “ನೇತ್ರಿ, ಕವರಾಗೆ ಬಂಗಾರುದ್ ಕಡ್ಡಿ ಐತಿ ಮುಡ್ಕಳೆ ಮಗ್ಳೆ” ಎಂದು ಹಳದಿ ಕವರನ್ನು ತೋರಿಸಿದಳು. ನೇತ್ರಿಯ ಮುಖ ಅರಳಿತು. ಖುಷಿಯಿಂದ ಹೂವ ಮುಡಿದುಕೊಳ್ಳುತ್ತ “ದೇವ್ರಾಜಣ್ಣ ಕಡ್ರಾಡು ಬಿದೋಗ್ಯತಿ ಅಂತ ಅಂದ. ಅದೊಂದ್ ಸರಿ ಮಾಡಿಸ್ಕಳೆ ಯವ. ಮಳೆಗಾಲ ಹುಶಾರಿ. ನಾನೆ ಒಂಚೂರ್ ದುಡ್ ಕೊಡಾನ ಅನ್ಕುಂದೆ.. ಆದ್ರೆ ನನ್ ಕೈಯಾಗು ದುಡ್ ಯಲ್ಲ ಈಗ. ಸಾಲ ತೀರ್ಸದಲ ಇರ್ಲಿ, ಮನೆ ಸರಿ ಮಾಡಿಶ್ಕ ಫಸ್ಟು” ಎಂದಳು. ಅದಕ್ಕೆ ಗಂಗವ್ವ “ನನ್ ಬಗ್ಗೆ ನೀನ್ ತಲೆ ಕೆಡಿಸ್ಕಿಬ್ಯಾಡ. ನಾನ್ ಎಲ್ಲ ನೋಡ್ಕಿತ್ನಿ. ನೀವು ಹುಶಾರು ಮಕ್ಳ” ಎಂದಳು. ಅಷ್ಟರಲ್ಲಿ ನರ್ಸ್ ಇವರ ನಂಬರ್ ಕೂಗಿದಳು.
ತಿರುಗುವ ಗಾಲಿಚೇರಿನಲ್ಲಿ ಕೂತಿದ್ದ ಡಾಕ್ಟರು ತಾಯಿ ಮಗಳಿಗೆ ಕೂರಲು ಸನ್ನೆ ಮಾಡಿ “ಹೇಳಮ್ಮ” ಎಂದರು. ನೇತ್ರಿ ತನ್ನ ತಾಯಿಗೆ ಆಗಾಗ ಸುಸ್ತು, ಮೈಕೈನೋವು ಆಗುವುದರ ಬಗ್ಗೆ ಹೇಳಿದಳು. ಡಾಕ್ಟರು ಸಣ್ಣ ಬ್ಯಾಟರಿ ಹಿಡಿದು ಗಂಗವ್ವನ ಕಣ್ಣು ಬಾಯಿ ಪರೀಕ್ಷಿಸಿ “ವಯಸ್ಸಿನ ಕಾಯಿಲೆ ಇದು. ಚನ್ನಾಗಿ ಊಟ ಮಾಡಿ, ನಿದ್ದೆ ಮಾಡಿ. ನಾನೊಂದು ಮಾತ್ರೆ ಬರ್ದ್ ಕೊಡ್ತೀನಿ ಮೈಕೈ ನೋವಾದಾಗ ತಗಳಿ. ಒಂದು ಟಾನಿಕ್ ಬರ್ದು ಕೊಡ್ತೀನಿ. ದಿನಾ ರಾತ್ರೆ ತಗಳಿ” ಎಂದು ಯಾರಿಗೂ ಅರ್ಥವಾಗದ ಭಾಷೆಯಲ್ಲಿ ಚೀಟಿಯೊಂದನ್ನು ಬರೆದು ಕೊಟ್ಟರು. ಡಾಕ್ಟರ ಕೊಠಡಿಯಿಂದ ಹೊರಬರಲು ನೇತ್ರಿ “ಅವ್ವ ನೀನ್ ಇಲ್ಲೆ ಕುತ್ಕ. ನಾನು ಹೋಗಿ ಮಾತ್ರೆ ತತನಿ” ಎಂದು ಮಗುವನ್ನು ಅವ್ವನ ಕೈಗೆ ಕೊಟ್ಟು ಮೆಡಿಕಲ್ ಶಾಪಿನ ಕಡೆ ನಡೆದಳು. ನೇತ್ರಿ ಮೆಡಿಕಲ್ ಶಾಪಿನಲ್ಲಿ ಡಾಕ್ಟರ್ ಬರೆದಕ್ಕಿಂತ ಅರ್ಧರ್ಧವೆ ಮಾತ್ರೆ ತೆಗೆಸಿದಳು. ಟಾನಿಕ್ ಇರಲಿಲ್ಲ. ಸ್ವಲ್ಪ ದೂರದಲ್ಲಿ ಮತ್ತೊಂದು ಮೆಡಿಕಲ್ ಶಾಪಿತ್ತು. ಅಲ್ಲಿಗೆ ನಡೆದು ಹೋಗಿ ಅದನ್ನೂ ಕೊಂಡು ಆಸ್ಪತ್ರೆಯ ಕಡೆ ಬಂದರೆ ಕೂತ ಜಾಗದಲ್ಲಿ ಅವ್ವ ಮಗು ಇರಲಿಲ್ಲ! ಹಳದಿ ಕವರ್ರು ಮಾತ್ರವೇ ಬೆಂಚಿನ ಮೇಲಿತ್ತು. ಹೋಗಿ ಮಾತ್ರೆಯನ್ನು ನರ್ಸಿಗೆ ತೋರಿಸಿ ಮತ್ತೆ ಬೆಂಚಿನ ಬಳಿ ಬಂದಳು. ಪಕ್ಕ ಕೂತಿದ್ದ ಅಜ್ಜನೊಬ್ಬ “ತಂಗಿ ನಿಮ್ಮವ್ವ ಇಲ್ಲೆ ಎಲ್ಲೊ ಹೊರಗಡೆ ಹೋದ್ರು. ಹನುಮಂತನ ಗುಡಿ ಹತ್ರ ಇರ್ಬಕಂತೆ. ಬರ್ತಾಳಂತೆ” ಎಂದನು. ನೇತ್ರಿಗೆ ರೇಗಿ ಹೋಯಿತು. ‘ಹೀಗೆ ಹೇಳದೆ ಕೇಳದೆ ಮಗುವನ್ನು ಕರೆದುಕೊಂಡು ಎಲ್ಲಿಗೆ ಹೋದಳಿವಳು’ ಎಂದು ಮನದಲ್ಲೆ ಶಪಿಸಿದಳು. ಕವರನ್ನು ಎತ್ತಿಕೊಂಡು ಜೋರು ಹೆಜ್ಜೆ ಹಾಕುತ್ತ ಹನುಮಂತನ ಗುಡಿಯ ಕಡೆ ನಡೆದಳು. ಹೋಗಿ ಗುಡಿಯ ಕಟ್ಟೆಯ ಬಳಿ ನಿಂತು ಎಡಬಲ ದಾರಿಯನ್ನೇ ನೋಡಿದಳು. ಎಲ್ಲಿಗೆ ಹೋಗಿರಬಹುದು ಎಂದು ಯೋಚಿಸಿದಳು. ಏನೂ ಹೊಳೆಯಲಿಲ್ಲ. ನಡೆದು ಬಾಯಾರಿತ್ತು. ಅವ್ವ ತಂದಿದ್ದ ಫಾಂಟಾ ಬಾಟಲಿ ನೀರನ್ನು ಚೂರು ಕುಡಿದಳು. ಅವ್ವ ಬಂದರೆ ಗ್ರಹಚಾರ ಬಿಡಿಸುವುದಾಗಿ ಮನದಲ್ಲೇ ಅಂದುಕೊಂಡಳು. ಸ್ವಲ್ಪ ಹೊತ್ತಿನಲ್ಲಿ ಗಂಗವ್ವ ಮಗುವನ್ನು ಎಚ್ಚಿಕೊಂಡು ಬ್ಯಾಂಕಿನ ದಾರಿಯಾಗಿ ಬಂದಳು. ಅವ್ವ ಕಣ್ಣಿಗೆ ಕಾಣುತ್ತಲೆ ಅವಳ ಕಡೆ ಜೋರು ಹೆಜ್ಜೆ ಹಾಕುತ್ತ ಹೋಗಿ ಮಗುವನ್ನು ಕಸಿದುಕೊಂಡ ನೇತ್ರಿ “ನಿಂಗೇನ್ ಒಂಚೂರರು ಬುದ್ದಿ ಐತೆ? ಹಿಂಗ್ ಹೇಳ್ದೆ ಕೇಳ್ದೆ ಆ ಸಣ್ ಕೂಸ್ ಕರ್ಕುಂದ್ ಹೋಗಿಯಲ. ಗೊತ್ತಕ್ಕಲ ನಿಂಗೆ?” ಎಂದು ಜೋರಾಗಿ ರೇಗಿದಳು. ಇದನ್ನು ನಿರೀಕ್ಷಿಸದಿದ್ದ ಗಂಗವ್ವ “ಯಾಕ್ ಹಂಗ್ ಕೂಗ್ತಿ? ಸೊನಗಾರ ಸಟ್ಟಿ ಅಂಗ್ಡಿಗ್ ಹೋಗಿದ್ದೆ” ಎನ್ನುತ್ತ ಮಗುವಿನ ಬಲಗೈ ತೋರಿಸಿದಳು. ಮಗುವಿನ ಬಲಗೈಯಲ್ಲಿ ಬೆಳ್ಳಿಯ ಕಡಗವೊಂದು ಕರಿದಾರದೊಂದಿಗೆ ಬೆರೆತು ಹೊಳೆಯುತ್ತಿತ್ತು. “ಇದ್ನ ಯಾಕ್ ತರಕ್ ಹೋಗಿದ್ದೆ ನೀನು? ನಮ್ಗ್ ಏನೂ ಗತಿ ಯಲ್ಲ ಅನ್ಕು ಬಿಟ್ಟಿಯ ಎಂತುದು? ನಿನ್ ಮನೆ ಸರಿಮಾಡಿಸ್ಕಿನದ್ ಬಿಟ್ಟು ಈ ಶೋಕಿಯಲ ಬೇಕ ನಿಂಗೆ? ಅದು ಹೇಳ್ದೆ ಕೇಳ್ದೆ ಹೋಗ್ಯಳೆ ಎಳೆ ಕೂಸ್ ಕರ್ಕುಂದು. ಚೂರೂ ಜವಾಬ್ದಾರಿ ಅನ್ನದೆ ಯಲ್ಲ” ಎಂದು ಮತ್ತೆ ರೇಗಿ ಹೋಗಿ ಗುಡಿಯ ಕಟ್ಟೆಯ ಮೇಲೆ ಕೂತಳು. ಗಂಗವ್ವನ ಕೆನ್ನೆ ಒದ್ದೆಯಾಯಿತು. ಅಲ್ಲೇ ನಿಂತು ಮೊಮ್ಮಗನ ನೋಡಿದಳು. ಆಸ್ಪತ್ರೆಯಲ್ಲಿ ಕೂತಾಗ ತನ್ನ ಸೀರೆ ಹಿಡಿದು ಆಡುತ್ತಿದ್ದ ಮೊಮ್ಮಗನ ಕಂಡು ಮುದ್ದು ಉಕ್ಕಿ ಬಂತು. ಸೀದಾ ಸೊನಗಾರ ಶೆಟ್ಟಿಯ ಅಂಗಡಿಯ ಕಡೆ ನಡೆದಳು. ತನ್ನ ಹಳೆಯ ಕಾಲುಂಗುರವ ಮುರಿಸಿ ಮೇಲೆ ಮುನ್ನೂರು ರೂಪಾಯಿ ಹಾಕಿ ಮೊಮ್ಮಗನಿಗಾಗಿ ಒಂದೇ ಒಂದು ಕಡಗ ಕೊಂಡಿದ್ದಳು. ಎಲ್ಲಿ ತಾನೇ ತಂದರೆ ಸೈಜು ಸರಿ ಆಗುವುದಿಲ್ಲವೊ ಎಂದು ಮೊಮ್ಮಗನನ್ನೇ ಕರೆದುಕೊಂಡು ಹೋಗಿದ್ದಳು. ಮೊಮ್ಮಗನ ನೋಡುತ್ತ ಸೀರೆಯ ಸೆರೆಗಿನಿಂದ ಜಾರುತ್ತಿದ್ದ ಕಣ್ಣೀರ ಒರೆಸಿ ಹೋಗಿ ಮಗಳ ಪಕ್ಕ ಕೂತಳು.
ಕೊಂಚ ಸುಧಾರಿಸಿಕೊಂಡ ನೇತ್ರಿ “ತಪ್ಪಾತೆ ಯವ. ಸಿಟ್ಟಗೆ ಕೂಗಿ ಬಿಟ್ಟೆ” ಎಂದಳು. ಗಂಗವ್ವ “ಇರ್ಲಿ ಬಿಡೆ.. ನೀನಲ್ದೆ ಇನ್ಯಾರ್ ಕೂಗ್ತರೆ?” ಎಂದಳು. ಮಗನ ಕೈ ನೋಡಿದ ನೇತ್ರಿ “ಅವ, ಅಪ್ಪ ಇದ್ದುದ್ರೆ ಮೊಮ್ಮಗುನ್ ನೋಡಿ ಎಷ್ಟು ಖುಷಿ ಪಡ್ತುದ್ನೆ..” ಎಂದಳು. ನೇತ್ರಿಯ ಗಂಟಲು ತುಂಬಿ ಬಂತು. ತಾಯಿ ಮಗಳು ಇಬ್ಬರ ಕಣ್ಣುಗಳೂ ಒದ್ದೆಯಾದವು. ನೇತ್ರಿ ಅವ್ವನ ಕಡೆ ತಿರುಗಿ “ಇನ್ನೊಂದ ಬತಾ ಐತಿ” ಎಂದು ಮುಗುಳ್ನಕ್ಕಳು. ಗಂಗವ್ವ ಎದ್ದು ಮಗಳ ಕೈಹಿಡಿದು ತಲೆಗೆ ಒಂದು ಮುತ್ತ ಕೊಟ್ಟಳು. ಚಪ್ಪಲಿ ಬಿಚ್ಚಿ ಹನುಮಂತನ ಕಡೆ ತಿರುಗಿ ಕೈ ಮುಗಿದಳು. ಮತ್ತೆ ಎಲ್ಲಿಗೊ ನಡೆದು ಹೊರಟಳು. ನೇತ್ರಿ “ಮತ್ತೆಲ್ಲಿಗ್ ಹೊಂಟ್ಲು ಮರತಿ ಇವ್ಳು..” ಎಂದು ಗುನುಗಿದಳು. ಗಂಗವ್ವ ಬೇಕರಿಗೆ ಹೋಗಿ ಪೇಪರಿನ ಬಾಕ್ಸಿನಲ್ಲಿ ಕಾಲು ಕೆ.ಜಿ ಮೈಸೂರು ಪಾಕ್ ತಂದಳು. ಒಂದು ತುಂಡನ್ನು ಮಗಳ ಬಾಯಿಗೆ ಹಾಕಿ, ಅರ್ಧ ತಾನು ತಿಂದು, ಇನ್ನರ್ಧ ಮಗುವಿನ ಕೈಗೆ ಇಟ್ಟಳು. ನೇತ್ರಿ “ನಿಂಗೆ ಒಂದ್ ಸತಿ ಹೇಳಿದ್ರೆ ಗೊತ್ತಾಗದಲ್ಲಲ” ಎಂದು ಮುಗುಳ್ನಕ್ಕಳು. ದನಿಯಲ್ಲಿ ಚೂರೂ ಸಿಟ್ಟಿರಲಿಲ್ಲ. ಗಂಗವ್ವ “ಇದೊಂದ್ ಸತಿ ಏನೂ ಆಗದಲ್ಲ ಬಿಡು ಪಾಪ. ಅವುಂಗೂ ತಮ್ಮನೊ, ತಂಗಿನೊ ಬತಳೆ ಅಂತ ಗೊತ್ತಾಗ್ಲಿ” ಎಂದಳು. ತಾಯಿಮಗಳು ಕೂಡಿ ನಕ್ಕರು. ಮೋಡಗಳ ನಡುವೆ ಅಡಗಿದ್ದ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಇಬ್ಬರು ಬಸ್ಸ್ಟ್ಯಾಂಡಿನ ಕಡೆ ನಡೆದರು.

ನಿಮಿಷ ಆದ ಮೇಲೆ ನೇತ್ರಿಯ ಬಸ್ಸು ನಿಧಾನಕ್ಕೆ ಬಂದು ನಿಂತಿತು. ಗಂಗವ್ವ ಒಮ್ಮೆ ಮೊಮ್ಮಗ ಮಗಳನ್ನು ತಬ್ಬಿ “ಹುಶಾರು. ಪೋನ್ ಮಾಡ್ತ ಇರು ಮಗ” ಎಂದಳು. ನೇತ್ರಿ ಅವ್ವನ ಚೀಲಕ್ಕೆ ಅವಳಿಗೆ ತಿಳಿಯದಂತೆ ಇನ್ನೂರು ರೂಪಾಯಿ ಹಾಕಿ “ನೀನು ಹುಶಾರು ಯವ” ಎಂದಳು. ನೇತ್ರಿ ಬಸ್ಸು ಹತ್ತಿ ಕಿಟಕಿಯ ಪಕ್ಕ ಕೂತಳು. ಗಂಗವ್ವ ಮಗಳ ಸೀಟಿನ ಕಿಟಕಿಯ ಬಳಿ ಹೋಗಿ ನಿಂತು “ಜಾಕೆ, ಮನಿಗೋಗಿ ನನ್ ಕೂಸಿಗೆ ದೃಷ್ಟಿ ತಗಿ” ಎಂದು ಟಾಟಾ ಮಾಡಿದಳು. ನೇತ್ರಿ “ಪೋನ್ ಮಾಡ್ತನೆ ಯವ ಊರಿಗೋಗಿ” ಎಂದಳು. ಬಸ್ಸು ಹೊರಟಿತು. ತನ್ನದೇ ಆಟದಲ್ಲಿ ಮಗ್ನವಾಗಿದ್ದ ಮೊಮ್ಮಗನ ನೋಡುತ್ತ ಗಂಗವ್ವನ ಹೃದಯ ಭಾರವಾಯಿತು. ಓಡಿ ಹೋಗಿ ಚಲಿಸುತ್ತಿದ್ದ ಬಸ್ಸು ಹತ್ತಿ ಮೊಮ್ಮಗನಿಗೆ ಮುತ್ತಿಡೋಣ ಎನಿಸಿತು. ಹಾಗೇ ನಿಂತು ಹೋಗುವ ಬಸ್ಸನ್ನೇ ದಿಟ್ಟಿಸಿದಳು. ಮೊಮ್ಮಗು ಕಿಟಕಿಯಿಂದ ಬೀಸುವ ಗಾಳಿಗೆ ಪುಳಕಗೊಂಡು ತಾಯಿ ಟಿಕೆಟ್ ಕೊಳ್ಳುವಾಗ ಕಿಟಕಿಯಿಂದ ಹೊರಗೆ ಕೈ ಚಾಚಿತು. ಗಂಗವ್ವ ಮೊಮ್ಮಗನ ಕೈಯಲ್ಲಿ ಹೊಳೆಯುತ್ತಿದ್ದ ಬೆಳಕನ್ನೇ ದಿಟ್ಟಿಸಿದಳು.
(ಕೃತಿ: ಬಂಗಾರಕಡ್ಡಿ ಡೇರೆಹೂವು (ಕಥಾಸಂಕಲನ), ಲೇಖಕರು: ನವೀನ್ ತೇಜಸ್ವಿ, ಪ್ರಕಾಶಕರು: ಭೀಮಪುಸ್ತಕ, ಬೆಲೆ: 280/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


