ಸೇಡಿಯಾಪು ಕೃಷ್ಣಭಟ್ಟರಿಗೆ ಮಂಗಳೂರಿನಲ್ಲಿ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಮಾರ್ಗದರ್ಶನ ಮತ್ತು ತರುಣ ಕವಿ ಕಡೆಂಗೊಂಡ್ಲು ಶಂಕರಭಟ್ಟರ ಗೆಳೆತನದ ಲಾಭವಾಯಿತು. ಅವರಿಬ್ಬರಿಂದ ಪ್ರೇರಣೆ ಪಡೆದು, ಮದ್ದಿನಂಗಡಿಯಲ್ಲಿ ಕುಳಿತೇ ಕನ್ನಡ – ಸಂಸ್ಕೃತ ಭಾಷೆಗಳನ್ನು ಖಾಸಗಿಯಾಗಿ ಅಧ್ಯಯನ ನಡೆಸಿ, ಮದರಾಸು ಸರ್ಕಾರ ನಡೆಸುತ್ತಿದ್ದ ‘ವಿದ್ವಾನ್’ ಪರೀಕ್ಷೆಯಲ್ಲಿ ಪಾಸಾದರು. ಆ ಪದವಿಯ ಬಲದಿಂದ 1929 ರಲ್ಲಿ ಸೈಂಟ್ ಅಲೋಸಿಯಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಸೇರಿಕೊಂಡು ಸುಮಾರು ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದರು.
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಸೇಡಿಯಾಪು ಕೃಷ್ಣಭಟ್ಟರ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

 

ಸೇಡಿಯಾಪು ಕೃಷ್ಣಭಟ್ಟರು (1902-1996) ನವೋದಯದ ಒಬ್ಬರು ಗುರುಗಳಾದ ಮುಳಿಯ ತಿಮ್ಮಪ್ಪಯ್ಯನವರ ಶಿಷ್ಯ, ನವೋದಯದ ಮುಖ್ಯ ಕವಿ ಕಡೆಂಗೋಡ್ಲು ಶಂಕರ ಭಟ್ಟರ ಗೆಳೆಯ, ಸ್ವಂತಿಕೆಯುಳ್ಳ ಕವಿ ಮತ್ತು ಸ್ವತಂತ್ರ ಪ್ರವೃತ್ತಿಯ ಚಿಂತಕ ಮತ್ತು ಪಂಡಿತ. ಕೆಲವೇ ಕಾವ್ಯಕೃತಿಗಳನ್ನು ಬರೆದರೂ ನವೋದಯದ ಒಬ್ಬ ಮುಖ್ಯ ಕವಿಯಾಗಿ ಗುರುತಿಸಿಕೊಂಡವರು.

ಅವರ ಮುಖ್ಯ ಕ್ಷೇತ್ರ ವಿಚಾರ ಪ್ರಪಂಚ, ವ್ಯಾಕರಣ, ಛಂದಸ್ಸು ಮತ್ತು ತಥ್ಯದರ್ಶನ. ಪಂಡಿತರು ಯಾರು ಎಂದರೆ ತೋರಿಸಬಲ್ಲ ವ್ಯಕ್ತಿ ಸೇಡಿಯಾಪು ಕೃಷ್ಣಭಟ್ಟರು ಎಂದು ಶಿವರಾಮ ಕಾರಂತರು ಹೇಳಿದ್ದರು. ಈ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಕನ್ನಡದ ಕಾವ್ಯ ಮತ್ತು ಸಣ್ಣಕತೆಗಳ ಬಗ್ಗೆ ಮಾತಾಡುವಾಗಲೂ ಸೇಡಿಯಾಪು ಅವರ ಹೆಸರನ್ನು ಬಿಡಲಾಗದು ಎನ್ನುವುದೇ ಅವರ ವೈಶಿಷ್ಟ್ಯ.

ಸರಸ ಸ್ವಭಾವದ ಸೇಡಿಯಾಪು ಒಮ್ಮೆ ಹೀಗೆ ಹೇಳಿದ್ದರಂತೆ: “ಸಾಹಿತ್ಯದ ಸಂತೆಯಲ್ಲಿ ನನ್ನದು ಚಿಲ್ಲರೆ ಅಂಗಡಿ. ಸ್ವಲ್ಪ ಛಂದಸ್ಸು, ಸ್ವಲ್ಪ ವ್ಯಾಕರಣ, ಸ್ವಲ್ಪ ಕಥೆ, ಸ್ವಲ್ಪ ಕವಿತೆ – ಎಲ್ಲವೂ ಸ್ವಲ್ಪ ಸ್ವಲ್ಪ. ಗಿರಾಕಿಗಳೂ ಸ್ವಲ್ಪವೇ!”

ಸೇಡಿಯಾಪು ಅವರ ‘ಎಣ್ಣೆ ಹೊಯ್ಯಮ್ಮ ದೀಪಕ್ಕೆ’ ಎನ್ನುವ ಅರ್ಥಪೂರ್ಣ ಭಾವಗೀತೆ ಕನ್ನಡದ ಅತ್ಯುತ್ತಮ ಭಾವಗೀತೆಗಳಲ್ಲಿ ಒಂದು. ಕನ್ನಡದ ಸಣ್ಣಕಾವ್ಯಗಳ ಪೈಕಿ ಅವರ ‘ಶ್ವಮೇಧ’ಕ್ಕೆ ಒಂದು ಪ್ರತ್ಯೇಕ ಸ್ಥಾನವಿದೆ. ಅಧ್ಯಯನ ಮಾಡಿದರೆ ಅವರ ಕಾವ್ಯಕೃತಿಗಳಿಂದ ಹಲವು ಅನರ್ಘ್ಯ ರತ್ನಗಳನ್ನು ಹೆಕ್ಕಬಹುದು.

ಅವರ ನಾಲ್ಕು ಕತೆಗಳಲ್ಲಿ ಮುಖ್ಯವಾದವುಗಳು ‘ಚೆನ್ನಮಣೆ’ ಮತ್ತು ‘ನಾಗರಬೆತ್ತ’ ಎರಡೇ. ಆದರೆ ‘ನಾಗರಬೆತ್ತ’ ಕನ್ನಡದ ಮುಖ್ಯ ಕತೆಗಳಲ್ಲಿ ಒಂದೆಂದು ಮಾನ್ಯವಾಗಿದೆ; ಅದು ಇಂಗ್ಲೀಷಿಗೂ ಅನುವಾದಿತವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿರುವ ಆಂಥಾಲಜಿಯಲ್ಲಿ ಸೇರಿದೆ!

ಪಾರತಂತ್ರ್ಯದಿಂದ, ಪರಕೀಯ ಸಂಸ್ಕೃತಿಯ ದಾಳಿಯಿಂದ ನಾಶವಾಗುತ್ತಿರುವ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಗಿಸಬೇಕೆಂಬ ಕೋರಿಕೆಯಿರುವ `ಎಣ್ಣೆ ಹೊಯ್ಯಮ್ಮ ದೀಪಕ್ಕೆ’ (1960) ಕವಿತೆಯ ಆಕರ್ಷಣೆಗೆ ಅದರ ಧ್ವನಿಶಕ್ತಿ ಮತ್ತು ನಿಗೂಢತೆಗಳು ಕಾರಣವಾಗಿವೆ.

ಎಣ್ಣೆ ಹೊಯ್ಯಮ್ಮ ದೀಪಕ್ಕೆ
ಅಟ್ಟ ತಾಳ (ಮಿಶ್ರ ಛಾಪು)

ಬತ್ತಿಯಾರುತ್ತಿದೆ, ಬೆಳಕು ಬಾಡುತ್ತಿದೆ
ಕತ್ತಲೆ ಮುಂದೆ ಮುಂದೊತ್ತುತ್ತಿದೆ
ಅತ್ತಲಿಂದಿತ್ತಲು ಕಂಡಿಯೊಳಗೆ ನುಗ್ಗಿ
ಒತ್ತರದಲಿ ಗಾಳಿ ಬೀಸುತ್ತಿದೆ
– ಎಣ್ಣೆ ಹೊಯ್ಯಮ್ಮ ದೀಪಕ್ಕೆ!

ಹೊರಗಲ್ಲಿ ಗಿಡಮರಗಳ ಕೊಂಬೆರೆಂಬೆಗಳ್
ಬಡಿದಾಡಿಕೊಂಡು ಭೋರಿಡುತಲಿವೆ
ಪಡುಬಾನ ಕರ್ಮುಗಿಲ್ ಅರಿಲೊಂದೊಂದನೆ ಮೆಟ್ಟಿ
ಕಡುಮಿಂಚಿನಲಿ ಗಹಗಹಿಸುತಿದೆ
– ಎಣ್ಣೆ ಹೊಯ್ಯಮ್ಮ ದೀಪಕ್ಕೆ!

ಹಸಿದ ಮಕ್ಕಳು ಬಟ್ಟಲೆನ್ನದು ತನ್ನದೆಂ –
ದೆಳೆದಾಡಿಕೊಂಡು ಗುದ್ದಾಡುತ್ತಿವೆ
ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವ
ಕಡೆಗಾಲೊಳೆಡವಿ ಚೆಲ್ಲಾಡುತ್ತಿವೆ
– ಎಣ್ಣೆ ಹೊಯ್ಯಮ್ಮ ದೀಪಕ್ಕೆ!

ಗೋಡೆಯ ಬಳಿಯಿಂದ ಹಸುರುಗಣ್ಣಿನ ಭೂತ
ಹಾಲಳಗೆಯ ಬಳಿ ಸಾರುತಿದೆ
ಗೂಡಿನ ಗಿಳಿ ಹೆಸರೆತ್ತಿ ಕರೆದು ಕೂಗಿ
ಕಾಣದೆ ನಿನ್ನ ಕಂಗೆಡುತಲಿದೆ
– ಎಣ್ಣೆ ಹೊಯ್ಯಮ್ಮ ದೀಪಕ್ಕೆ !

(1960)
ಅಳಗೆ: ಮಣ್ಣಿನ ಪಾತ್ರೆ

ಈ ಕವಿತೆಯಲ್ಲಿ ಬರುವ ರೂಪಕಗಳು ಸಾಂಪ್ರದಾಯಿಕ ವಾತಾವರಣವನ್ನು ಸೃಷ್ಟಿಸಿರುವುದು ವಿಶೇಷವಾಗಿದೆ. ಈಗ ಬಡತನ ಪ್ರಾಪ್ತವಾಗಿ ಮಕ್ಕಳಿಗೆ ತಿನ್ನಲು ಅನ್ನವಿಲ್ಲದೆ ಹಸಿವಿನಿಂದ ಅಳುತ್ತಿರುವ, ದಕ್ಷಿಣ ಕನ್ನಡದ ಒಂದು ಹಳೆಯ ಮನೆ, ಕತ್ತಲಾದ ಮೇಲಿನ ದೀಪವಿಲ್ಲದ ಭಯಾನಕ ವಾತಾವರಣ, ಅದರ ಸುತ್ತಲಿನ ಗ್ರಾಮೀಣ ವಾತಾವರಣ, ಕರಾವಳಿಯ ಮನೆ, ಮನೆಯ ಯಜಮಾನರು ಬಳಸುವ ಸಂಧ್ಯಾವಂದನೆಯ ಸಾಹಿತ್ಯ (ಸಾಹಿತ್ಯ ಅನ್ನುವುದು ಸಾಮಗ್ರಿ ಎನ್ನುವ ಅರ್ಥ ಕೊಡುವ ದಕ್ಷಿಣ ಕನ್ನಡದ ವಿಶೇಷಪದ), ಅವುಗಳನ್ನು ಹಸಿದ ಮಕ್ಕಳು ಕಡೆಗಾಲಲ್ಲಿ ಎಡವಿ ಚೆಲ್ಲಾಡುವುದು, ಹಾಲಿನ ಪಾತ್ರೆಯ (ಹಾಲಳಗೆ) ಕಡೆಗೆ ಮೆಲ್ಲನೆ ಸರಿಯುತ್ತಿರುವ ಹಸಿರುಗಣ್ಣಿನ ಭೂತ, ಗೂಡಿನ ಗಿಳಿ ಹೆಸರೆತ್ತಿ ಕರೆದು ಬೊಬ್ಬಿಡುವುದು, ಎಣ್ಣೆ ಹೊಯ್ಯಮ್ಮ ದೀಪಕ್ಕೆ ಎನ್ನುವ ಆರ್ತ ಪ್ರಾರ್ಥನೆ – ಎಲ್ಲವೂ ಒಂದು ವಿಷಣ್ಣ ವಾತಾವರಣವನ್ನು ಸೃಷ್ಟಿಸಿ ಮನಸ್ಸಿನಲ್ಲಿ ನಿಂತುಬಿಡುತ್ತದೆ. ಇದು ಪಾರತಂತ್ರ್ಯಕ್ಕೆ ಸಿಕ್ಕಿ, ಆರ್ಥಿಕ ಮತ್ತು ಸಾಂಸ್ಕೃತಿಕ ದಾರಿದ್ರ್ಯವನ್ನು ಅನುಭವಿಸುತ್ತಿರುವ ದೇಶೀಯರ ಪಾಡಿನ ವರ್ಣನೆಯಾಗಿದೆ.

ವಿದ್ವಾನ್ ರಂಗನಾಥ ಶರ್ಮರು ಇನ್ನೆರಡು ಅರ್ಥ ಸಾಧ್ಯತೆಗಳನ್ನು ತೋರಿಸಿದ್ದಾರೆ: 1. ಸಂಸಾರ ವಿಪತ್ತಿನ ಕತ್ತಲಲ್ಲಿ ನರಳುತ್ತಿರುವವನೊಬ್ಬನು ದಾರಿಗಾಣದೆ ಸರಿಯಾದ ದಾರಿಯನ್ನು ತೋರೆಂದು ಹಂಬಲಿಸುತ್ತಿರುವನೆ? 2. ಪ್ರಾಣೋತ್ಕ್ರಮಣದ ಕಾಲವು ಬಂದಂತಿರುವುದರಿಂದ ಬೆದರಿದ ಒಬ್ಬನು ಆಯುಸ್ಸನ್ನು ಕೋರಿ, ತನ್ನನ್ನು ಉಳಿಸೆಂದು ದೇವಿಯನ್ನು ಬೇಡುತ್ತಿರುವನೆ? ರೋಗಿಯೊಬ್ಬನು ಆರೋಗ್ಯಕ್ಕಾಗಿ ಪರಿತಪಿಸುತ್ತಿರುವನೆ? (‘ಸೇಡಿಯಾಪು’. ಪಾದೇಕಲ್ಲು ವಿಷ್ಣು ಭಟ್ಟ. 1996).

ಇಂತಹ ಶ್ರೇಷ್ಠ ಕವಿತೆಯನ್ನು ಬರೆದ ಕವಿ ಬರೆದದ್ದು ಹೆಚ್ಚಿಲ್ಲ. ತಮ್ಮ ಕಾವ್ಯದ ಬಗ್ಗೆ ಅವರೇ ಹೇಳಿರುವ ಸೂತ್ರರೂಪದ ಪದ್ಯ ಹೀಗಿದೆ:

ಹೆಚ್ಚ್ಚು ಬರೆದವನಲ್ಲ
ನಿಚ್ಚ ಬರೆದವನಲ್ಲ
ಮೆಚ್ಚಿಸಲು ಬರೆಯುವಭ್ಯಾಸವಿಲ್ಲ |
ಇಚ್ಚೆಗೆದೆಯೊಪ್ಪಿ ಬಗೆ
ಬಿಚ್ಚಿದರೆ, ಕಣ್ಗೆ ಮಯ್
ಎಚ್ಚುವಂದದಿ ತಿದ್ದಿ ತೀಡಿ ಬರೆವೆ ||

‘ಚಂದ್ರಖಂಡ ಮತ್ತು ಇತರ ಸಣ್ಣಕಾವ್ಯಗಳು’ ಎಂಬ 155 ಪುಟಗಳ ಅವರ ಸಮಗ್ರ ಕಾವ್ಯ ಮತ್ತು ‘ಪಳಮೆಗಳು’ ಎನ್ನುವ ನಾಲ್ಕು ಸಣ್ಣಕತೆಗಳ ಸಂಕಲನ, ‘ಈಶ್ವರ ಸಂಕಲ್ಪ ಅಥವಾ ದೈವಲೀಲೆ’ ಎನ್ನುವ ಅನುಭವಕಥನ – ಇಷ್ಟೇ ಅವರ ಸೃಜನಶೀಲ ಬರವಣಿಗೆ.
ನವೋದಯದ ಕಥನಕವಿಗಳು

ಖಂಡ ಕಾವ್ಯಗಳನ್ನು ಸಣ್ಣ ಕಾವ್ಯಗಳೆಂದು ಕರೆದ ಸೇಡಿಯಾಪು ಕೃಷ್ಣ ಭಟ್ಟರು ಅವುಗಳಲ್ಲಿ ಪ್ರಯೋಗಗಳನ್ನು ಮಾಡಿದರು. ಮುಳಿಯ ತಿಮ್ಮಪ್ಪಯ್ಯ ಮತ್ತು ಕಡೆಂಗೋಡ್ಲು ಶಂಕರ ಭಟ್ಟರು ಸಾಮಾನ್ಯ ಜನರ ಪಾಡನ್ನು ತಮ್ಮ ಸಣ್ಣ ಕಾವ್ಯಗಳಲ್ಲಿ ಚಿತ್ರಿಸಿದರೆ, ಸೇಡಿಯಾಪು ಅವರು ಜನತೆಗೆ ದೇಶಪ್ರೇಮವನ್ನು ಮತ್ತು ಸನ್ನಡತೆಯನ್ನು ಕಾಂತಾಸಮ್ಮಿತಿಯ ಮಾದರಿಯಲ್ಲಿ ತಿಳಿಸಿಹೇಳಲು ಕಾವ್ಯ ಮಾಧ್ಯಮವನ್ನು ಬಳಸಿದರು.

ಮಾನವನ ಅಹಂಕಾರ-ದೌರ್ಜನ್ಯ-ಶೋಷಣೆಗಳ ವಿರುದ್ಧ ನಾಯಿಯೊಂದರ ಸನ್ನಡತೆಯನ್ನು ಮುಖಾಮುಖಿಯಾಗಿಸಿ ಮಹತ್ವದ ಸಣ್ಣಕಾವ್ಯವೊಂದನ್ನು ಬರೆದ ವಿಶಿಷ್ಟ ಸಾಧನೆ ಸೇಡಿಯಾಪು ಅವರದು. ಅವರ ‘ಶ್ವಮೇಧ ಅಥವಾ ನಾಯ ನಡತೆ’ ಸಣ್ಣಕಾವ್ಯ ಪ್ರತಿಭಟನಾ ಸಾಹಿತ್ಯಕ್ಕೆ ಇನ್ನೊಂದು ಮಾದರಿ. ಈ ಕಾವ್ಯವನ್ನು ಅಹಂಕಾರದ ವಿರುದ್ಧ ಪ್ರತಿಭಟನೆಯ ದುರಂತ ಕಾವ್ಯ ಎಂದೇ ಪರಿಗಣಿಸಬೇಕು. ಮಹಾಕಾವ್ಯ ಪರಂಪರೆಗೆ ಎದುರಾಗಿ ಗಾತ್ರದಲ್ಲಿ ಮಾತ್ರವಲ್ಲ, ವಸ್ತುವಿನಲ್ಲೂ, ವ್ಯವಸ್ಥೆಯನ್ನು ಪ್ರತಿಭಟಿಸುವ ಆಶಯದಲ್ಲಿಯೂ (ಜೀತಮುಕ್ತಿಗಾಗಿ ನಾಯಿಯ ಬಲಿದಾನ; ಉಳ್ಳವರ ದರ್ಪದ ಎದುರು ಮೌನವಾಗಿ ಕಾರ್ಯನಿರ್ವಹಿಸುತ್ತ ಅವರ ಮನಃಪರಿವರ್ತನೆ ಮಾಡುವುದು – ಸೇಡಿಯಾಪು ಅವರು ಗಾಂಧೀಜಿಯವರ ಅನುಯಾಯಿಯಾದುದರಿಂದ ಅವರದು ಗಾಂಧೀಮಾರ್ಗದ ಪ್ರತಿಭಟನೆ), ಕಾವ್ಯದ ಮುಖ್ಯ ಪಾತ್ರವನ್ನಾಗಿ ನಾಯಿಯನ್ನು ಆರಿಸಿಕೊಳ್ಳುವಲ್ಲಿಯೂ ಈ ಪ್ರತಿಭಟನೆಯ ನೆಲೆಗಳನ್ನು ಗುರುತಿಸಬಹುದು.

‘ಶ್ವಮೇಧ’ವನ್ನು ಸೇಡಿಯಾಪು ಅವರು 1935 ರ ಮೊದಲ ಮುದ್ರಣದಲ್ಲಿ ‘ಕ್ಷುದ್ರ ಕಾವ್ಯ’ ಎಂದು ಕರೆದಿದ್ದರು. ಸಂಸ್ಕೃತದಲ್ಲಿ ಸಣ್ಣ ಕಾವ್ಯಗಳಿಗೆ ಆ ಹೆಸರು ಇರುವುದಾದರೂ, ತಮ್ಮ ಕಾವ್ಯದಲ್ಲಿ ನಾಯಿಯೊಂದರ ಚಾರಿತ್ರ್ಯವನ್ನು ವರ್ಣಿಸಿರುವುದನ್ನು ಘೋಷಿಸುವುದಕ್ಕಾಗಿಯೂ ಈ ಹೆಸರನ್ನು ಅವರು ಬಳಸಿರಬಹುದು. ಯಾಕೆಂದರೆ ಸಂಸ್ಕೃತ ಕಾವ್ಯ ಮೀಮಾಂಸೆಯಲ್ಲಿ ತಿರ್ಯಕ್ ಜೀವಿಗಳ (ನಾಯಿ ಒಂದು ತಿರ್ಯಕ್ ಜೀವಿ) ಚಾರಿತ್ರ್ಯ ವಿಶೇಷ ಕಾವ್ಯಗಳಿಗೆ ವಸ್ತುವಾಗಲಾರದು ಎಂಬ ಹೇಳಿಕೆಯಿದೆ. ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಈ ಕಾವ್ಯವನ್ನು ವಿಮರ್ಶಿಸಿದ ಹಿರಿಯ ವಿದ್ವಾಂಸ ಮ. ಪ್ರ. ಪೂಜಾರರು ಈ ಒಳ್ಳೆಯ ಕಾವ್ಯ ಕೃತಿಯನ್ನು ಹಾಗೆ ಕರೆಯಬಾರದು, ಅದು ಹೀನ ಎಂಬ ಅರ್ಥವನ್ನು ಕೊಡುತ್ತದೆ ಎಂದು ಬರೆದರು. ಆದುದರಿಂದ ಸೇಡಿಯಾಪು ಮುಂದೆ ಆ ಹೆಸರನ್ನು ಬಿಟ್ಟು ಸಣ್ಣ ಕಾವ್ಯ ಎಂದು ಕರೆದರು. ನಾಯಿಯನ್ನು ನಾಯಕನನ್ನಾಗಿ ಮಾಡಿಕೊಂಡು ಹೊಸ ದಿಕ್ಕನ್ನು ತೋರಿಸಿದ್ದಲ್ಲದೆ, ಈ ಕಾವ್ಯದ ಕೊನೆಗೆ ಮಹಾಭಾರತದ ಧರ್ಮರಾಯನ ಅಶ್ವಮೇಧವನ್ನು ಈ ಕಾವ್ಯದ ಧರ್ಮರಾಯ ಸೆಟ್ಟಿಯ ‘ಶ್ವಮೇಧ’ಕ್ಕೆ ಮುಖಾಮುಖಿಯಾಗಿಸಿ ಮಹಾಕಾವ್ಯ ಪರಂಪರೆಗೆ ಎದುರಾಗಿ ಕಿರುಕಾವ್ಯ ಪರಂಪರೆಯನ್ನು ನಿಲ್ಲಿಸುವ ಸಾಧ್ಯತೆಯನ್ನು ತೋರಿಸಿದ್ದಾರೆ. ಅಂದರೆ ಕಿರುಕಾವ್ಯ ಎನ್ನುವುದು ಈ ಕೃತಿಯ ಮಟ್ಟಿಗೆ ಕೇವಲ ಗಾತ್ರಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ ಎನ್ನುವುದನ್ನು ಗಮನಿಸಬೇಕು.

ಮುಳಿಯ, ಕಡೆಂಗೋಡ್ಲು ಮತ್ತು ಸೇಡಿಯಾಪು – ಈ ಮೂವರನ್ನು ‘ನವೋದಯದ ಕಥನ ಕವಿಗಳು’ ಎಂಬ ಒಂದು ಗುಂಪಿನಲ್ಲಿ ನೋಡುವುದೇ ಸೂಕ್ತ. ಆಗ ಇವರ ಕೊಡುಗೆಯನ್ನು ಒಂದು ಹೊಸ ಬೆಳಕಿನಲ್ಲಿ ನೋಡಲು ಸಾಧ್ಯವಾಗುತ್ತದೆ. ಮೂವರಲ್ಲಿಯೂ ಉದಾರ ಮಾನವತಾವಾದವೆಂದು ಹೇಳಬಹುದಾದ ನವೋದಯದ ಆದರ್ಶ ಇತ್ತು. ಸೇಡಿಯಾಪು ಮತ್ತು ಕಡೆಂಗೋಡ್ಲು ಅವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಜನರ ನಡುವೆ ಇದ್ದು, ಮದ್ಯಪಾನ ನಿಷೇಧದ ಹೋರಾಟದ ಮೂಲಕ ಬಡಜನರ ಬದುಕಿನ ಸಮೀಪ ಪರಿಚಯವಾಗಿತ್ತು. ಅಲ್ಲದೆ ಮುಳಿಯ, ಕಡೆಂಗೋಡ್ಲು, ಸೇಡಿಯಾಪು ಮೂವರೂ ಶ್ರೀಮಂತ ಮನೆಗಳಿಂದ ಬಂದವರಲ್ಲ; ಆರ್ಥಿಕವಾಗಿ ಕಷ್ಟದಲ್ಲಿದ್ದ ಕುಟುಂಬಗಳಿಂದಲೇ ವಿದ್ಯೆಯನ್ನು ಅರಸಿಕೊಂಡು ಬಂದವರು. ಬಡವರ ಬದುಕಿನ ಬಗ್ಗೆ ಅನುಕಂಪವನ್ನು ಹುಟ್ಟಿಸುವ ಹಾಗೆ ಬರೆಯಲು ಅವರೆಲ್ಲರಿಗೂ ಭಾವಪ್ರಧಾನವಾದ ಕಾವ್ಯವೇ ಸರಿಯಾದ ಮಾಧ್ಯಮ ಎಂದು ಅನಿಸಿತ್ತು. ಅವರ ಉದ್ದೇಶ ಸಮಾಜ ಶಿಕ್ಷಣ ಮತ್ತು ಹೃದಯ ಪರಿವರ್ತನೆ. ಕಾವ್ಯ ಮಾಧ್ಯಮವನ್ನು ಸಾಮಾನ್ಯ ಜನರ ಓದಿಗೆ ಸಿಗುವಷ್ಟು ಸಣ್ಣ ಗಾತ್ರಕ್ಕೆ ಇಳಿಸಿ, ಭಾಷೆಯನ್ನು ಸರಳಗೊಳಿಸುವಷ್ಟರ ಮಟ್ಟಿಗೆ ಅವರು ಸಾಹಿತ್ಯವನ್ನು ಜನರ ಸಮೀಪಕ್ಕೆ ಒಯ್ಯುವ ಪ್ರಯತ್ನವನ್ನು ಮಾಡಿದ್ದರು.

ಕಡೆಂಗೋಡ್ಲು ತಮ್ಮ ಮೂವತ್ತನೆಯ ವರ್ಷಕ್ಕೆ ಪದ್ಯಗಳಿಂದ ಹೊರಳಿ ಗದ್ಯದಲ್ಲಿ ಕತೆ, ಕಾದಂಬರಿಗಳನ್ನು ಬರೆಯಲಾರಂಭಿಸಿದರು. ತುಂಬ ಕಡಿಮೆ ಬರೆಯುವ ಸೇಡಿಯಾಪು ಕೃಷ್ಣ ಭಟ್ಟರು ಕೂಡ ನಲುವತ್ತರ ದಶಕದಲ್ಲಿ ಕಾವ್ಯ ಮಾಧ್ಯಮವನ್ನು ಬಿಟ್ಟು ಸಣ್ಣ ಕತೆಗಳನ್ನು ಬರೆದರು. ಆಗ ಬರೆದ ಅವರ ಎರಡು ಮುಖ್ಯ ಕತೆಗಳಲ್ಲಿ ಒಂದು (ಚೆನ್ನೆಮಣೆ) ಸಾಂಸ್ಕೃತಿಕ ತಲ್ಲಣಕ್ಕೆ ಸಂಬಂಧಿಸಿದ್ದು, ಇನ್ನೊಂದು (ನಾಗರಬೆತ್ತ) ವಸಾಹತುಶಾಹಿ ಅನುಭವಕ್ಕೆ ಸಂಬಂಧಿಸಿದ್ದು. ಆಮೇಲೆ ಅವರು ‘ಎಣ್ಣೆ ಹೊಯ್ಯಮ್ಮ ದೀಪಕ್ಕೆ’ ಕವಿತೆಯನ್ನು ಬರೆದು ಸಾಂಸ್ಕೃತಿಕ ತಲ್ಲಣವನ್ನು ಕಾವ್ಯ ಮಾಧ್ಯಮದಲ್ಲಿಯೂ ಬರೆಯಲು ಸಾಧ್ಯ ಎನ್ನುವುದನ್ನು ತೋರಿಸಿದರು. ಆದರೆ ವಸಾಹತುಶಾಹಿ ಅನುಭವವನ್ನು ಹೇಳಲು ಕಾವ್ಯ ಮಾಧ್ಯಮದಲ್ಲಿ ಸರಿಯಾದ ವಸ್ತು ಅವರಿಗೆ ಸಿಗಲಿಲ್ಲವೋ, ಈ ವಸ್ತುವೇ ಕಾವ್ಯ ಮಾಧ್ಯಮಕ್ಕೆ ಸೂಕ್ತವಲ್ಲವೋ ಎನ್ನುವುದನ್ನು ಹೇಳುವುದು ಕಷ್ಟ.

ಅವರೆಲ್ಲರ ಸಮಕಾಲೀನರಾದ ಶಿವರಾಮ ಕಾರಂತರು ಪ್ರಾರಂಭದಿಂದಲೇ ಗದ್ಯವೇ ಸಮಾಜ ವಿಮರ್ಶೆ, ಸಮಾಜ ಶಿಕ್ಷಣ ಮತ್ತು ಸಮಾಜ ಸುಧಾರಣೆಗಳಿಗೆ ಸರಿಯಾದ ಮಾಧ್ಯಮ ಎಂದು ನಿರ್ಧರಿಸಿ, ಕಾವ್ಯದತ್ತ ಆಕರ್ಷಿತರಾಗದೆ, ಮೊದಲು ಸಣ್ಣ ಕತೆಗಳನ್ನೂ, ನಂತರ ‘ಚೋಮನದುಡಿ’ ಯಂತಹ ಕಾದಂಬರಿಗಳನ್ನೂ ಬರೆದರು.

ಕಯ್ಯಾರ ಕಿಞ್ಞಣ್ಣ ರೈಗಳು ಹಾಡುಗಬ್ಬಗಳಾದ ಕಿರುಗವನಗಳು ಮತ್ತು ಕ್ರಾಂತಿಗೀತೆಗಳಿಂದ ನೇರವಾಗಿ ಜನರಿಗೆ ತಲುಪಿದರೆ, ಕರಾವಳಿಯ ಮೊದಲ ಗಣ್ಯ ದಲಿತ ಕವಿ ಅ. ಗೌ. ಕಿನ್ನಿಗೋಳಿ ಅವರು ಅಲಕ್ಷಿತ ಧ್ವನಿಗಳನ್ನು ಕೇಳಿಸಲು ತಕ್ಕ ಸಾಹಿತ್ಯ ರೂಪಗಳ ಅನ್ವೇಷಣೆಯಲ್ಲಿ ತೊಡಗಿದರು. ಅವರು ಅದಕ್ಕಾಗಿ ಖಂಡಕಾವ್ಯಗಳನ್ನು ಮತ್ತು ಕಿರುಗವನಗಳನ್ನು ಬರೆದರು; ರೂಪಕಗಳನ್ನು ಮತ್ತು ಕಾದಂಬರಿಗಳನ್ನೂ ಬರೆದದ್ದಿದೆ.

ಶಿಕ್ಷಣ – ಸ್ವಾತಂತ್ರ್ಯ ಹೋರಾಟ – ಉದ್ಯೋಗ

ಸೇಡಿಯಾಪು ಎನ್ನುವ ಪುಟ್ಟ ಹಳ್ಳಿ ಇರುವುದು ಈಗಿನ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಗೆ ಹತ್ತಿರ. ಜೂನ್ 8, 1902 ರಂದು ಕೃಷ್ಣ ಭಟ್ಟರು ಸೇಡಿಯಾಪಿನ ಕೃಷಿಕರಾದ ಪಂಜಿಗುಡ್ಡೆ ರಾಮಭಟ್ಟ – ಮೂಕಾಂಬಿಕೆ ದಂಪತಿಗಳ ಮಗನಾಗಿ ಹುಟ್ಟಿದರು. ಮನೆ ಪಾಲಾದಾಗ ರಾಮಭಟ್ಟರು ಪುತ್ತೂರು ಸಮೀಪದ ನೀರ್ಕಜೆ ಎಂಬಲ್ಲಿ ಜಾಗ ತೆಗೆದುಕೊಂಡು ನೆಲೆಸಿದರು. ಅವರು ಕೆಲವೇ ವರ್ಷಗಳಲ್ಲಿ ನಿಧನರಾದಾಗ ಸೇಡಿಯಾಪು ಕೃಷ್ಣ ಭಟ್ಟರನ್ನು ತಾಯಿಯ ತಂದೆ ಕುಕ್ಕಿಲ ಕೃಷ್ಣ ಭಟ್ಟರು ತಮ್ಮ ಮನೆಗೆ ಕರೆತಂದು ಶಿಕ್ಷಣ ಕೊಡಿಸಿದರು. ಸೇಡಿಯಾಪು ಕೃಷ್ಣ ಭಟ್ಟರಿಗೂ ಈ ಅಜ್ಜ ಕುಕ್ಕಿಲ ಕೃಷ್ಣ ಭಟ್ಟರ ಹೆಸರು; ಕುಕ್ಕಿಲ ಕೃಷ್ಣ ಭಟ್ಟರ ಮಗನ ಮಗನಿಗೂ ಅದೇ ಹೆಸರು ಇತ್ತು – ಅವರೇ ಪ್ರಸಿದ್ಧ ವಿದ್ವಾಂಸ ಕುಕ್ಕಿಲ ಕೃಷ್ಣ ಭಟ್ಟರು.

ಸೇಡಿಯಾಪು ಅವರು ಆಗಿನ ಎಂಟನೆಯ ತರಗತಿಯವರೆಗೆ ಪುತ್ತೂರಿನಲ್ಲಿ ಓದಿ ಮುಂದಿನ ವಿದ್ಯಾಭ್ಯಾಸಕ್ಕೆ ಮಂಗಳೂರಿನ ಅಲೋಷಿಯಸ್ ಹೈಸ್ಕೂಲಿಗೆ ಸೇರಿದರು. ಮಂಗಳೂರಿನಲ್ಲಿ ಅವರಿಗೆ ಇಲಿ ಕಚ್ಚಿ, ಮೈಯೆಲ್ಲ ನಂಜಾಗಿ ಆರೋಗ್ಯ ಕೆಟ್ಟು ವಿದ್ಯಾಭ್ಯಾಸ ಮೊಟಕುಗೊಂಡಿತು. ಮುಂದೆ ಪುತ್ತೂರಿನಲ್ಲಿ ಹೈಸ್ಕೂಲು ಸ್ಥಾಪನೆಯಾದ ಕಾರಣ ಅಲ್ಲಿ ಅವರ ವಿದ್ಯಾಭ್ಯಾಸ ಮುಂದುವರಿಯಿತು. ಆದರೆ ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಒಂಭತ್ತನೆಯ ತರಗತಿಯ ತನಕ ಓದಿದಾಗ, ಗಾಂಧೀಜಿಯವರು ಶಾಲೆ ಕಾಲೇಜುಗಳನ್ನು ತೊರೆದು ಹೊರಬನ್ನಿ ಎಂದು ನೀಡಿದ ಕರೆಗೆ ಸ್ಪಂದಿಸಿ ಕೃಷ್ಣಭಟ್ಟರು ಕೂಡ ಶಾಲೆ ಬಿಟ್ಟರು.

ಸೇಡಿಯಾಪು ಕೃಷ್ಣಭಟ್ಟರು ಹಳ್ಳಿ ಹಳ್ಳಿಗೆ ತಿರುಗಿ ನೂಲುವುದು, ಖಾದಿ ಪ್ರಚಾರ, ಮಾರಾಟ, ಅಸ್ಪೃಶ್ಯತಾ ನಿವಾರಣೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಜೀವನೋಪಾಯಕ್ಕಾಗಿ ಪಾರಂಪರಿಕ ಜ್ಞಾನದಿಂದ ವೈದ್ಯವೃತ್ತಿಯನ್ನು ಮಾಡಿದರು. ನಾಟೀವೈದ್ಯರಾಗಿ ವೃತ್ತಿ ಪ್ರಾರಂಭಿಸಿದ ಅವರು ಆಯುರ್ವೇದವನ್ನು ಅಧ್ಯಯನದ ಮೂಲಕ ಕಲಿತು ಪಾರಂಗತರಾದರು. ಜೊತೆಗೆ ಮನೆಯಲ್ಲೇ ಭಾಷೆ-ಸಾಹಿತ್ಯಗಳ ಅಧ್ಯಯನ, ಪದ್ಯ ರಚನೆ, ವೈಚಾರಿಕ ಲೇಖನಗಳನ್ನು ಬರೆಯುವುದು ಹೀಗೆ ವಾಙ್ಮಯ ಆರಾಧನೆಯನ್ನು ಮುಂದುವರಿಸಿಕೊಂಡೇ ಇದ್ದರು.
ಆ ಸಂದರ್ಭದಲ್ಲಿ ಅವರಿಗೆ ವೀರಕಂಬ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಸಿಕ್ಕಿತು. ಅಲ್ಲಿ ಅಧ್ಯಾಪಕರಾಗಿರುವಾಗಲೇ ಸೇಡಿಯಾಪು ಕೃಷ್ಣ ಭಟ್ಟರು ಚಕ್ರಕೋಡಿ ಮನೆತನದ ಶಾಮ ಶಾಸ್ತ್ರಿಗಳ ಮಗಳು ಶಂಕರಿ ಅಮ್ಮ ಅವರನ್ನು ಮದುವೆಯಾದರು. ಈ ದಂಪತಿಗಳಿಗೆ ಐವರು ಹೆಣ್ಣುಮಕ್ಕಳು ಮತ್ತು ಒಬ್ಬನೇ ಮಗ (ಸೇಡಿಯಾಪು ಜಯರಾಮ ಭಟ್).

ವೀರಕಂಬ ಶಾಲೆಯನ್ನು ತಾಲೂಕು ಬೋರ್ಡ್ ವಹಿಸಿಕೊಂಡಾಗ ಸೇಡಿಯಾಪು ಅವರಿಗೆ ಶಿಕ್ಷಕ ತರಬೇತಿ ಇಲ್ಲದ ಕಾರಣ ಕೆಲಸ ಬಿಡಬೇಕಾಯಿತು. 1927 ರಲ್ಲಿ ಮಂಗಳೂರಿಗೆ ಬಂದ ಸೇಡಿಯಾಪು ತಮ್ಮ ಬಾಲ್ಯಮಿತ್ರ ಆಯುರ್ವೇದ ವೈದ್ಯರೊಬ್ಬರ ಜತೆ ಸೇರಿ ಆಯುರ್ವೇದ ವೈದ್ಯಶಾಲೆ ‘ಸಿದ್ಧೌಷಧ ಭವನ’ವನ್ನು ಪ್ರಾರಂಭಿಸಿದರು. ಆಮೇಲೆ ಆ ಮಿತ್ರರು ಬೇರೆಯಾದರೂ ಸೇಡಿಯಾಪು ಚಿಕಿತ್ಸಾಲಯವನ್ನು ಮುಂದುವರಿಸಿಕೊಂಡು ಹೋದರು. ಅವರು ಉನ್ಮಾದ ರೋಗಕ್ಕೆ ಔಷಧಿ ಕೊಡುವುದಕ್ಕೆ ಪ್ರಖ್ಯಾತರಾಗಿದ್ದರಂತೆ. ಅವರು ಔಷಧಾಲಯ ಮುಚ್ಚಿದ ಮೇಲೂ ಅವರನ್ನು ಹುಡುಕಿಕೊಂಡು ಬರುತ್ತಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿ ಬರುತ್ತಿತ್ತಂತೆ. ಇದರ ಜತೆಯಲ್ಲಿಯೇ, ಅವರು ಕಡೆಂಗೋಡ್ಲು ಶಂಕರ ಭಟ್ಟರ `ರಾಷ್ಟ್ರಬಂಧು’ ಪತ್ರಿಕೆಯ ಉಪಸಂಪಾದಕರಾಗಿಯೂ ಕೆಲಸ ಮಾಡಿದರು, `ಜಯಕರ್ನಾಟಕ’ ಪತ್ರಿಕೆಯ ಸ್ಥಳೀಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.

ಮಂಗಳೂರಿನಲ್ಲಿ ಅವರಿಗೆ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಮಾರ್ಗದರ್ಶನ ಮತ್ತು ತರುಣ ಕವಿ ಕಡೆಂಗೊಂಡ್ಲು ಶಂಕರಭಟ್ಟರ ಗೆಳೆತನದ ಲಾಭವಾಯಿತು. ಅವರಿಬ್ಬರಿಂದ ಪ್ರೇರಣೆ ಪಡೆದು, ಮದ್ದಿನಂಗಡಿಯಲ್ಲಿ ಕುಳಿತೇ ಕನ್ನಡ – ಸಂಸ್ಕೃತ ಭಾಷೆಗಳನ್ನು ಖಾಸಗಿಯಾಗಿ ಅಧ್ಯಯನ ನಡೆಸಿ, ಮದರಾಸು ಸರ್ಕಾರ ನಡೆಸುತ್ತಿದ್ದ ‘ವಿದ್ವಾನ್’ ಪರೀಕ್ಷೆಯಲ್ಲಿ ಪಾಸಾದರು. ಆ ಪದವಿಯ ಬಲದಿಂದ 1929 ರಲ್ಲಿ ಸೈಂಟ್ ಅಲೋಸಿಯಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಸೇರಿಕೊಂಡು ಸುಮಾರು ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದರು. ಅವರ ಸೂಕ್ಷ್ಮ ಆರೋಗ್ಯ ಪರಿಸ್ಥಿತಿಯಿಂದಾಗಿ ನಿಂತುಕೊಂಡು ಪಾಠ ಮಾಡಲು ಕಷ್ಟವಾದ ಕಾರಣ ಆ ಹುದ್ದೆಯನ್ನು ತೊರೆದು, ಅದೇ ಆಡಳಿತದ ಅಲೋಷಿಯಸ್ ಕಾಲೇಜಿನಲ್ಲಿ 1950 ರಲ್ಲಿ ಕನ್ನಡ ‘ಟ್ಯೂಟರ್’ ಆಗಿ ಸೇರಿದರು. ಅದು ಪ್ರಬಂಧಗಳನ್ನು ಮತ್ತು ಉತ್ತರಪತ್ರಿಕೆಗಳನ್ನು ತಿದ್ದುವ ಕೆಲಸ; ಪಾಠ ಮಾಡಬೇಕಾಗಿರಲಿಲ್ಲ. ಮುಂದೆ ಸ್ವಲ್ಪ ಸಮಯ ‘ಲೆಕ್ಚರರ್’ ಆಗಿ ಕೆಲಸ ಮಾಡಿದ್ದೂ ಇದೆ. 1957ರಲ್ಲಿ ಅನಾರೋಗ್ಯ ಕಾರಣವಾಗಿ, ಅವಧಿ ಪೂರ್ವದಲ್ಲೇ ನಿವೃತ್ತಿಯನ್ನು ಪಡೆದುಕೊಂಡರು. ಅವರು ಅಧ್ಯಾಪಕರಾಗಿದ್ದಾಗ ಅರೆಕಾಲಿಕವಾಗಿ, ನಂತರ ಪೂರ್ಣಾವಧಿ ಆಯುರ್ವೇದ ವೈದ್ಯರಾಗಿ ಮದ್ದುಕೊಡುತ್ತಿದ್ದರು.

ಸೇಡಿಯಾಪು ನಿವೃತ್ತರಾದ ಮೇಲೆ 1964 ರ ವರೆಗೆ ಮಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ಮಗ, ಇಲೆಕ್ಟ್ರಾನಿಕ್ಸ್ ಇಂಜಿನಿಯರ್ ಜಯರಾಮ ಅವರಿಗೆ ನಾಗಪುರದಲ್ಲಿ ಕೆಲಸ ಸಿಕ್ಕಿದ ಕಾರಣ ಮಗನ ಜತೆಗೆ ಅಲ್ಲಿಗೆ ಹೋದರು. 1971 ರಲ್ಲಿ ಜಯರಾಮ ಅವರು ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಸೇರಿದಾಗ ಸೇಡಿಯಾಪು ಮಣಿಪಾಲಕ್ಕೆ ಬಂದರು. ಅಲ್ಲಿ ಅವರ ಸಾಹಿತ್ಯಿಕ ಸಾಧನೆಗೆ ಹೊಸ ಆಯಾಮ ಸಿಕ್ಕಿತು.

ಸೇಡಿಯಾಪು ಅವರು ಬಾಲ್ಯದಿಂದಲೂ ದುರ್ಬಲ ದೇಹಪ್ರಕೃತಿಯವರು. ಅವರು 95 ವರ್ಷಗಳ ದೀರ್ಘಾಯುಷಿಗಳಾಗಿದ್ದರೂ, ಆಗಾಗ ಅವರ ಆರೋಗ್ಯ ಹದಗೆಡುತ್ತಿತ್ತು. ಜತೆಗೆ ಅವರಿಗೆ ಮೊದಲಿನಿಂದಲೂ ಒಂದು ಕಣ್ಣಿನ ಸಮಸ್ಯೆಯಿತ್ತು. 1985 ರಿಂದ ಸಂಪೂರ್ಣವಾಗಿ ದೃಷ್ಟಿಹೀನರಾದರು. ಆದರೆ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಸೇಡಿಯಾಪು ಅವರ ಲಿಪಿಕಾರರಾಗಿ, ಸಂಪಾದಕರಾಗಿ ಸಹಕರಿಸಿದ್ದರಿಂದ ಕೆಲವು ಅಮೂಲ್ಯ ವೈಚಾರಿಕ ಗ್ರಂಥಗಳು ರಚಿಸಲ್ಪಟ್ಟವು. ಅವರ ಮುಖ್ಯ ಕೃತಿಗಳೆಲ್ಲ ಮಣಿಪಾಲ ವಾಸದ 25 ವರ್ಷಗಳಲ್ಲಿ ಪ್ರಕಟವಾದವು. ಹಳೆಯ ಕೃತಿಗಳ ಮರುಮುದ್ರಣವಾಯಿತು. 1992 ರಲ್ಲಿ ಪಾದೇಕಲ್ಲು ಅವರು ಸಂಪಾದಿಸಿ ಪ್ರಕಟಿಸಿದ ಸೇಡಿಯಾಪು ಕೃಷ್ಣ ಭಟ್ಟರ ವೈಚಾರಿಕ ಬರಹಗಳ ಬೃಹತ್ ಸಂಪುಟ ‘ವಿಚಾರಪ್ರಪಂಚ’ಕ್ಕೆ ಕರ್ನಾಟಕ ಸರಕಾರದ ಪಂಪ ಪ್ರಶಸ್ತಿ (1994 ನೆ ಸಾಲಿನ ಪ್ರಶಸ್ತಿ ಮರಣೋತ್ತರವಾಗಿ 1996ರಲ್ಲಿ) ಸಿಕ್ಕಿತು.

ಸಾಹಿತ್ಯಾಸಕ್ತಿ – ಬರವಣಿಗೆ

ಸೇಡಿಯಾಪು ಕೃಷ್ಣ ಭಟ್ಟರು ಶಾಲಾ ಜೀವನದಲ್ಲಿಯೇ ಛಂದೋಬದ್ಧವಾಗಿ ಪದ್ಯಗಳನ್ನು ಬರೆಯುತ್ತಿದ್ದರು. ಅಲ್ಲಿ ಅವರಿಗೆ ಮಾರ್ಗದರ್ಶಕರಾಗಿದ್ದವರು ಉಗ್ರಾಣ ಮಂಗೇಶರಾಯರು. ಮಂಗಳೂರಿಗೆ ಬಂದಮೇಲೆ ಪ್ರತಿದಿನವೂ ಪ್ರಾತಃಕಾಲ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಪಾದಮೂಲದಲ್ಲಿ ಕುಳಿತು ಸಂಸ್ಕೃತ ಕಾವ್ಯ – ನಾಟಕಗಳ ಪಾಠ ಹೇಳಿಸಿಕೊಂಡರು. ಅವರಿಗೆ ಯಕ್ಷಗಾನ ಪ್ರಸಂಗಗಳ ಪರಿಚಯವೂ ಬಾಲ್ಯದಲ್ಲೇ ಆಗಿತ್ತು. ಪಂಜೆ ಮಂಗೇಶರಾವ್, ಗೋವಿಂದ ಪೈ, ಮುಳಿಯ ಮತ್ತು ಕಡೆಂಗೋಡ್ಲು ಈ ನಾಲ್ಕು ಮಂದಿಯ ಪ್ರಭಾವ ಅವರ ಮೇಲೆ ಉಂಟಾಯಿತು.

ಬಾಲಕರಾಗಿದ್ದ ತಮ್ಮ ಮತ್ತು ಕಡೆಂಗೋಡ್ಲು ಶಂಕರ ಭಟ್ಟರ ಕಾವ್ಯಾಸಕ್ತಿಯ ಬಗ್ಗೆ ಸೇಡಿಯಾಪು ಹೇಳಿರುವ ಒಂದು ಘಟನೆ ಹೀಗಿದೆ: “ಒಮ್ಮೆ ಶಂಕರ ಭಟ್ಟರ ಒಂದು ಕವಿತೆಯನ್ನು ಅದರಲ್ಲಿ (ಜಯ ಕರ್ನಾಟಕ) ಕಂಡೆ. ಇದನ್ನು ಕಂಡು ಆ ಮಾತುಗಳ ಕುಣಿತಕ್ಕೆ ನಾನು ತಲೆದೂಗಿದ್ದರೂ ಸಂತುಷ್ಟನಾಗುವ ಬದಲು ಖಿನ್ನನಾದೆ. ಕಾರಣವೇನೆಂದರೆ ಇದು ಸಂಸ್ಕೃತ ಭೂಯಿಷ್ಠವಾದ ಹಳೆಯ ಚಂಪೂ ಶೈಲಿಯ ಅಚ್ಚ ಪ್ರತಿಬಿಂಬ. ಮೊದ ಮೊದಲು ನಾನು ಚಂಪೂ ಶೈಲಿಯ ಹಳೆಗನ್ನಡವನ್ನು ಬಹಳ ಮೆಚ್ಚಿದ್ದೆ. ಕಂದವೃತ್ತಗಳಲ್ಲಿ ಬರೆಯುತ್ತಿದ್ದೆ. ಬಾಲ್ಯದಲ್ಲಿಯೇ `ಗದಾಯುದ್ಧ’ವನ್ನು ಓದಿದುದರ ಫಲವಿದಾಗಿತ್ತು. ಮತ್ತೆ ಪುತ್ತೂರಲ್ಲಿ ವಿದ್ಯಾರ್ಥಿ ಆಗಿದ್ದಾಗಲೂ ಪಂಪಭಾರತ, ಆದಿಪುರಾಣ, ಪಂಪ ರಾಮಾಯಣ, ಮಲ್ಲಿನಾಥ ಪುರಾಣಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದ್ದೆ. ಅದರೆಡೆಯಲ್ಲಿ ಪಂಜೆ ಮಂಗೇಶರಾಯರ ಹೊಸ ಮಟ್ಟಿನ ಲಲಿತ ರಚನೆಗಳು ನನ್ನ ಮನಸ್ಸನ್ನು ಅಪಹರಿಸಿದ್ದವು. ಇದರಿಂದಾಗಿ ಇನ್ನು ಮುಂದೆ ಚಂಪೂಶೈಲಿಗೆ ಗೆಲವಿಲ್ಲವೆಂದು ಬಗೆದಿದ್ದೆ. ಶಂಕರ ಭಟ್ಟರು ಆ ಹಳೆಯ ಶೈಲಿಗೆ ಮನಸೋತುದು ನನ್ನ ಖಿನ್ನತೆಗೆ ಕಾರಣ. ಆ ಕಾಲದಲ್ಲಿ ಕವಿತಾರಚನೆ ಮಾಡುತ್ತಿದ್ದ ತರುಣರೊಳಗೆ ಶಂಕರಭಟ್ಟರು ಅತ್ಯಂತ ಪ್ರತಿಭಾನ್ವಿತರೆಂದು ನಾನು ಅಂದುಕೊಂಡಿದ್ದೆ. ಅವರು ಹೀಗೆ ಹಳೆಯ ಮಾರ್ಗಕ್ಕೆ ತಿರುಗಿದುದು ಕನ್ನಡದ ಮುನ್ನಡೆಗೆ ದೊಡ್ಡ ಆಘಾತವಾಯಿತೆಂದು ನನಗೆ ಕಂಡಿತು. ಒಂದೆರಡು ವರ್ಷಗಳ ಮೇಲೆ ಮತ್ತೊಮ್ಮೆ ಮಂಗಳೂರಲ್ಲಿ ನಾನವರನ್ನು ಕಂಡಾಗ ನನ್ನ ಅಭಿಪ್ರಾಯವನ್ನು ತಿಳಿಸಿಯೇ ಬಿಟ್ಟೆ. ಆಗ ಅವರೂ ಅದನ್ನೊಪ್ಪಿದರು ಮಾತ್ರವಲ್ಲ; ಅವರು ಬರೆದ ಮತ್ತು ಬರೆಯುತ್ತಿದ್ದ ಕೆಲವು ಕವನಗಳ ಹಸ್ತಪ್ರತಿಗಳನ್ನು ತೋರಿಸಿದರು. ಅವೆಲ್ಲ ಹೊಸ ಶೈಲಿಯಲ್ಲಿದ್ದುದನ್ನು ಕಂಡು ಸಂತುಷ್ಟನಾದೆ.” (ವಿಚಾರ ಪ್ರಪಂಚ 366-367).

ಸೇಡಿಯಾಪು ಅವರ ಕಾವ್ಯದ ಬಗ್ಗೆ ಪಾದೇಕಲ್ಲು ವಿಷ್ಣುಭಟ್ಟರು ಹೀಗೆ ಹೇಳುತ್ತಾರೆ: “ಪಂಜೆಯವರ ಪದ್ಯಗಳನ್ನು ಸು. 1918-19ರಲ್ಲಿ ಕನ್ನಡ ಪದ್ಯಪುಸ್ತಕ ಭಾಗ 1 ಮತ್ತು 2 (ಬಾಸೆಲ್ ಮಿಶನ್ ಪ್ರಕಟನೆ)ರಲ್ಲಿ ಓದಿದ ಸೇಡಿಯಾಪು ಅವರು, ಪಂಜೆಯವರು ಹೊಸಗನ್ನಡದ ಸರಳ ನುಡಿಗಳನ್ನು ಬಳಸುವ ವಿಧಾನದಿಂದ ಪ್ರಭಾವಿತರಾದರು. ಮತ್ತು ಹೊಸಕಾಲಕ್ಕೆ ಆ ರೀತಿಯ ಹೊಸ ಪದ್ಯಗಳೇ ಯೋಗ್ಯವೆಂಬುದನ್ನು ಕಂಡುಕೊಂಡರು. ಮುಂದೆ ಹೊಸ ಛಂದೋಬಂಧಗಳಲ್ಲಿ ನಡುಗನ್ನಡ ಮಿಶ್ರಿತವಾದ ಹೊಸಗನ್ನಡದಲ್ಲಿ ಕವಿತೆಗಳನ್ನು ಬರೆದರು. ಈ ಛಂದೋಬಂಧಗಳು ನವೋದಯ ಕಾಲದಲ್ಲಿ ಇಂಗ್ಲಿಷಿನ ನೇರಪ್ರಭಾವದಿಂದ, ಮುಖ್ಯವಾಗಿ ಬಿ.ಎಂ. ಶ್ರೀಯವರಿಂದ ಹೊಸದಾಗಿ ಸೃಷ್ಟಿಸಲ್ಪಟ್ಟುವೆಂಬ ಒಂದು ಅಭಿಪ್ರಾಯವಿದೆ. ಆದರೆ ಹೊಸ ಕಾಲಕ್ಕೊಪ್ಪುವ ಈ ವಿವಿಧ ಮಟ್ಟುಗಳಿಗೆ ಆಧಾರವು ಯಕ್ಷಗಾನದ ತಾಳದ ಪದ್ಯಗಳಲ್ಲಿ, ಶೋಭಾನೆ ಹಾಡುಗಳಲ್ಲಿ, ದಾಸರ ಪದಗಳಲ್ಲಿ, ಶಿವಶರಣರ ಗೀತಗಳಲ್ಲಿ ಕಂಡುಬರುತ್ತದೆ. ಆದುದರಿಂದ ಹೊಸಗನ್ನಡ ಛಂದಸ್ಸಿಗೆ ಈ ರೀತಿಯ ಬಂಧಗಳನ್ನು ಹೊಸದಾಗಿ ನೀಡಿದವರು ಬಿ.ಎಂ.ಶ್ರೀಯವರೇ ಎಂಬ ಅಭಿಪ್ರಾಯ ಯಥಾರ್ಥವಲ್ಲವೆಂಬುದನ್ನು ಇಲ್ಲಿ ಹೇಳಬಹುದಾಗಿದೆ. ತಾಳದ ಪದ್ಯಗಳನ್ನು ಹೊಸಗನ್ನಡದ ಹೊಸ ಮಾತ್ರಾಬಂಧಗಳನ್ನಾಗಿ ರೂಪಿಸಿಕೊಂಡವರಲ್ಲಿ ಮೊದಲಿಗರು ಪಂಜೆಯವರೆಂದು ಸೇಡಿಯಾಪು ಅವರ ಅಭಿಪ್ರಾಯ. ಅದೇ ಮಾರ್ಗದಲ್ಲಿ ಹಟ್ಟಿಯಂಗಡಿ ನಾರಾಯಣರಾಯರು, ಮುಳಿಯ ತಿಮ್ಮಪ್ಪಯ್ಯನವರು, ಉಗ್ರಾಣ ಮಂಗೇಶರಾಯರು ಮೊದಲಾದವರು ನಡೆದರೆಂದು ಹೇಳಬಹುದಾಗಿದೆ. ಯಕ್ಷಗಾನದ ಛಂದಸ್ಸು ತನ್ನ ಮೇಲೆ ಪ್ರಭಾವ ಬೀರಿದ ಬಗೆಗೆ ಸೇಡಿಯಾಪು ಅವರು ಹೇಳಿದ ಮಾತುಗಳು ಹೀಗಿವೆ: – “ಯಕ್ಷಗಾನದ ಛಂದಸ್ಸಿನ ಪರಿಚಯ ನನಗೆ ಬಾಲ್ಯದಲ್ಲೇ ಆದುದರಿಂದ ಕನ್ನಡ ದೇಶ್ಯ ಛಂದಸ್ಸಿನ ವಿಷಯದಲ್ಲಿ ಇತರರಿಗೆ ಕಂಡುಬಾರದಿದ್ದ ತಥ್ಯಗಳು ನನಗೆ ಕಂಡು ಬಂದವು. ಪಿರಿಯಕ್ಕರ ಮುಂತಾದವುಗಳ ಧಾಟಿಯನ್ನು ಹಿಡಿಯಲಿಕ್ಕೆ ನನಗೆ ಶಕ್ತಿ ಕೊಟ್ಟದ್ದು ಈ ಯಕ್ಷಗಾನ” (`ಚಂದ್ರಖಂಡ ಮತ್ತು ಕೆಲವು ಸಣ್ಣ ಕಾವ್ಯಗಳು’ ಪ್ರಸ್ತಾವನೆ)

ಸೇಡಿಯಾಪು ಸಣ್ಣ ಕಾವ್ಯಗಳು

1930 ರ ದಶಕದಲ್ಲಿ, ಮುಳಿಯ ಮತ್ತು ಕಡೆಂಗೋಡ್ಲು ಅವರ ದಟ್ಟ ಪ್ರಭಾವದ ಕಾಲದಲ್ಲಿ ಸೇಡಿಯಾಪು ತಮ್ಮ ಸಣ್ಣ ಕಾವ್ಯಗಳನ್ನು ಬರೆದರು. ಅವು – ‘ತರುಣ ಧಮನಿ’ (1935), ‘ಶ್ವಮೇಧ’ (1935), ‘ಕೃಷ್ಣಾಕುಮಾರಿ’ (1939) ಮತ್ತು ‘ಪುಣ್ಯಲಹರಿ ಅಥವಾ ಶಬರಿ’ (1939). ಅವರ ಕಥನ ಕವನಗಳ ಸಂಕಲನ ‘ಕೆಲವು ಸಣ್ಣ ಕಾವ್ಯಗಳು’ 1949ರಲ್ಲಿ ಪ್ರಕಟವಾಯಿತು. ಇದರಲ್ಲಿ ಮೇಲಿನ ನಾಲ್ಕು ಸಣ್ಣ ಕಾವ್ಯಗಳಿವೆ. (ಖಂಡಕಾವ್ಯವೆನ್ನುವ ಪ್ರಯೋಗ ಸರಿಯಲ್ಲ – ಸಣ್ಣ ಕಾವ್ಯ ಎನ್ನುವುದೇ ಸರಿ ಎನ್ನುವುದು ಅವರ ನಿಲುವು).

ಈ ಕಾವ್ಯಗಳಲ್ಲಿ ಅವರು ಬಳಸಿದ ಛಂದೋವೈವಿಧ್ಯ ಕೂಡ ಅಧ್ಯಯನಯೋಗ್ಯವಾಗಿದೆ. ಅವುಗಳಲ್ಲಿ `ತರುಣಧಮನಿ’ಯಲ್ಲಿ ಛಂದಸ್ಸಿನ ವಿಶಿಷ್ಟ ಪ್ರಯೋಗ ಗಮನ ಸೆಳೆಯುವಂಥದು. ಪ್ರತಿಯೊಂದು ಪದ್ಯದಲ್ಲೂ ಶಬ್ದ ಚಮತ್ಕಾರ, ಸರ್ಗದ ಕೊನೆಯ ಪದ್ಯ ಬೇರೊಂದೇ ಛಂದಸ್ಸಿನಲ್ಲಿರುವುದು – ಇದೇ ಆ ವೈಶಿಷ್ಟ್ಯ. `ಶಬರಿ’ಯಲ್ಲಿ ಪಿರಿಯಕ್ಕರ ಎಂಬ ಪ್ರಾಚೀನ ಛಂದಸ್ಸನ್ನೂ `ಕೃಷ್ಣಾಕುಮಾರಿ’ಯಲ್ಲಿ ಭಾಮಿನಿ ಷಟ್ಪದಿಯನ್ನೂ, `ಶ್ವಮೇಧ’ದಲ್ಲಿ ರಗಳೆಯನ್ನೂ ಬಳಸಿದ್ದಾರೆ. ನಾಯಿಯೊಂದನ್ನು ಕಾವ್ಯವೊಂದರ ಪ್ರಧಾನ ಪಾತ್ರವನ್ನಾಗಿಸಿದ್ದು `ಶ್ವಮೇಧ’ದ ಹೆಚ್ಚುಗಾರಿಕೆ.

ತರುಣಧಮನಿ

‘ತರುಣಧಮನಿ’ ವಿಜಯನಗರದ ಕೊನೆಯ ದೊರೆ ರಾಮರಾಜ (ಅಳಿಯ ರಾಮರಾಯ) ಮತ್ತು ಮುಸ್ಲಿಮ್ ಯುವತಿ ಮಿಹಿರೆಯೆಂಬವಳ ಪ್ರಣಯಪ್ರಸಂಗವನ್ನು ವರ್ಣಿಸುವ ಸಣ್ಣಕಾವ್ಯ.

ವಿಜಯನಗರದ ರಾಜಸಂಬಂಧಿಯಾದ ಯುವಕನಾದ ರಾಮರಾಜನು ಒಮ್ಮೆ ಕಾಡಿಗೆ ಬೇಟೆಗೆ ಹೋಗುತ್ತಾನೆ. ಬೇರೆಲ್ಲ ಮೃಗಗಳ ಬೇಟೆಯಾಡಿ, ಹುಲಿಯನ್ನು ಬೇಟೆಯಾಡುವ ಇಚ್ಛೆಯಿಂದ ಹುಲಿಯನ್ನು ಆಕರ್ಷಿಸಲು ಜಿಂಕೆಯೊಂದನ್ನು ಮರಕ್ಕೆ ಕಟ್ಟಿಹಾಕಿ, ತಾನು ಮರದ ಮೇಲೆ ಬೇಟೆಗೆ ಕಾದಿರುತ್ತಾನೆ. ಹುಲಿ ಅದನ್ನು ತಿನ್ನಲೆಂದು ಬರುತ್ತಿರುವಾಗ ಎದುರು ಸಿಕ್ಕಿದ, ಕಾಡಿಗೆ ಯಾತಕ್ಕೋ ಬಂದ ಸುಂದರಿಯಾದ ಮುಸ್ಲಿಮ್ ಯುವತಿ ಮಿಹಿರೆ ಮತ್ತು ಅವಳ ಸಖಿಯ ಮೇಲೆರಗುತ್ತದೆ. ಹುಲಿ ಮಿಹಿರೆಯನ್ನೆ ಹಿಡಿದುಕೊಳ್ಳುತ್ತದೆ. ರಾಮನು ತಕ್ಷಣ ಹುಲಿಯ ಮೇಲೆರಗಿ ಅದನ್ನು ಕೊಂದು ಮಿಹಿರೆಯನ್ನು ರಕ್ಷಿಸುತ್ತಾನೆ. ಆಗ ತರುಣಧಮನಿಯ ರಾಮ ಮತ್ತು ಮಿಹಿರೆ ಪರಸ್ಪರ ಪರಿಚಯಿಸಿಕೊಂಡು ಪ್ರೇಮಿಸತೊಡಗುತ್ತಾರೆ.

ಈ ಕಾವ್ಯದಲ್ಲಿ ಸದಭಿರುಚಿಯ, ರೂಪಕಶಕ್ತಿಯುಳ್ಳ ಶೃಂಗಾರರಸದ ಪ್ರಯೋಗ ಇದೆ. ಶೃಂಗಾರ ಎಲ್ಲಿಯೂ ಅತಿಯೆನಿಸುವುದಿಲ್ಲ, ಅಶ್ಲೀಲವಾಗುವುದಿಲ್ಲ; ಮಾತ್ರವಲ್ಲ ಸದಾ ಜೀವನದ ಅರ್ಥಶೋಧದಿಂದ – ಸಾಮಾಜಿಕ ಜವಾಬ್ದಾರಿಯಿಂದ ವಿಮುಖವಾಗುವುದಿಲ್ಲ.
ಮೇಲಿನ ಮಾತುಗಳಿಗೆ ಉದಾಹರಣೆ: ಮುಸ್ಲಿಮ್ ಯುವತಿಯ ಪ್ರಾಣವನ್ನು ಹುಲಿಯ ಬಾಯಿಯಿಂದ ಹಿಂದೂ ವೀರ ರಾಮರಾಜ ಕಾಪಾಡುತ್ತಾನೆ; ಅವನು ವಿಜಯನಗರದ ರಾಜಮನೆತನದವನೆಂದು ತಿಳಿದು ಯುವತಿಯರು ಬೆರಗಾಗುತ್ತಾರೆ. ಆಗ ರಾಮರಾಜನು ಹೇಳುವುದು: “ಕುಲಭೇದವು ಕರುಣೆಯ ಕಡಿಯದು ಕನ್ನಡದ ಕಲಿಗಳ ನಾಡೊಳು”. (ಕನ್ನಡದ ಕಲಿಗಳಿಗೆ ರಕ್ಷಿಸಲು ಮುಂದೆ ಬರುವಾಗ ಮತ ಭೇದ, ಕುಲಭೇದಗಳು ಅಡ್ಡಿಯಾಗುವುದಿಲ್ಲ.)

ರಾಮರಾಜನು ಮಿಹಿರೆಯ ಬಗ್ಗೆ ವಿಚಾರಿಸುವಾಗ ಬಳಸುವ ಬಹುವಚನ, ಪದಬಳಕೆಯ ಮರ್ಯಾದೆ, ಅದರಲ್ಲಿ ಅಡಕವಾಗಿರುವ ಅವನ ಕುತೂಹಲ (ಅವಳಿಗೆ ಮದುವೆಯಾಗಿದೆಯೋ ಇಲ್ಲವೋ ಎನ್ನುವುದು!) ಬಹಳ ಸೊಗಸಾಗಿದೆ:

ಯವನಿಯೆ ನಿಮ್ಮೀ ಮೃದುಪದವೇತಕೆ
ಗಹನದ ಗತಿಯಾಯ್ತೋ!
ಹರೆಯದ ಬಿಸಿಲಿಗೆ ನೆರಳೀಯಲು ಭಾ-
ಗ್ಯದ ಮರವಿರದಾಯ್ತೋ!

‘ಭಾಗ್ಯದ ಮರ’ ಎಂಬ ಪದಬಳಕೆ ಧ್ವನಿಶಕ್ತಿಯುಳ್ಳದ್ದಾಗಿದೆ. (“ಭಾಗ್ಯವು ಯಾರದು? ಪಾಣಿಯನ್ನು ಹಿಡಿದವನದೊ? ಅಥವಾ ಪಾಣಿಗೃಹೀತಳದೊ? ಆ ವನಿತೆಯ ಭಾಗ್ಯವೆಂದು ಅವಳಿಗೆ ತೋರುವ ಅರ್ಥ. ಆ ಸುಂದರಿಯನ್ನು ಮದುವೆಯಾದವನ ಭಾಗ್ಯವೆಂದು ರಾಮರಾಜನ ಗೂಡಾಶಯ!” – ರಂಗನಾಥ ಶರ್ಮಾ).

ನವನೀತ ಕೋಮಲಾಂಗಿಯಾದ ಯವನ ಯುವತಿ ಮಿಹಿರೆಯ ಮನಸ್ಸಿನಲ್ಲಿ, “ಮುಳ್ಳೆಲೆಗಳೊತ್ತರಿಸುತ ಕೇದಗೆ ಮೆಲ್ಲನೆ ಬಿರಿವಂತೆ,” ಪ್ರೇಮಾಂಕುರವಾಗುತ್ತದೆ. ಅಂದರೆ ಅಡ್ಡಿ ಆತಂಕಗಳಿದ್ದರೂ ಅವನ್ನು ಮೀರಿ ಎನ್ನುವುದು ಈ ಉಪಮೆಯಿಂದ ಸೂಚಿತವಾಗಿದೆ. ರಾಮರಾಜನೂ ಮಿಹಿರೆಯೂ ಪರಸ್ಪರ ಇಷ್ಟಪಡತೊಡಗಿದಾಗ ಯವನ ಯುವತಿಯ ಸಖಿ ಎಚ್ಚರಿಸುವ ಸನ್ನಿವೇಶ (ಅವರಿಬ್ಬರ ಪ್ರೇಮಾಂಕುರ ಮತ್ತು ಅದಕ್ಕೆ ಎದುರಾಗಬಹುದಾದ ಆತಂಕ ಎರಡನ್ನೂ ಒಟ್ಟಿಗೆ ಸೂಚಿಸುವ ಕಲ್ಪನೆಯ ಸೊಗಸನ್ನೂ ಗಮನಿಸಿರಿ):

ಹೋಗದ ಕಡಲಲಿ ಹಾಯಿಯನೆತ್ತಿರೆ
ಹೊಸ ನೌಕೆಗಳೆರಡು
ಹೇಳಿದಳಾ ಸಖಿ ಕುಲದ ಕಟ್ಟಳೆಯ
ಬೀಳುಗುಂಡನಿಳಿಸಿ.

ಪರಮೋದಾರ ವಿಶಾಲ ಹೃದಯ! ಭೀ-
ರುತೆಯ ಮನ್ನಿಸೆನ್ನ.
ಮುರಿಯೆ ಕಟ್ಟಳೆಯ ಮರೆಯಾಗದೆ ಸುಖ?
ಬಯಲಾಗದೆ ಮಾನ?
(ಮೇಲಿನ ಪದ್ಯದಲ್ಲಿ ಬೀಳುಗುಂಡು ಅಂದರೆ ಲಂಗರು).

ಕೊನೆಗೂ ಸಖಿ ಹೇಳಿದ ಅಡ್ಡಿಗಳನ್ನು ಲೆಕ್ಕಿಸದೆ ರಾಮರಾಜನೂ ಮಿಹಿರೆಯೂ ಜತೆಗೂಡುತ್ತಾರೆ. ಆದರೆ ಈ ಸಂಬಂಧದಿಂದ ನಾಡಿಗೆ ಒಳಿತಾಗದು ಎನ್ನುವ ಆತಂಕವನ್ನು ವ್ಯಕ್ತಪಡಿಸುತ್ತಾ ಕವಿತೆ ಮುಗಿಯುತ್ತದೆ. ಕವಿಯ ಮನಸ್ಸಿನಲ್ಲಿ, ಮುಂದೆ ರಾಮರಾಜನು ಮುಸ್ಲಿಮ್ ಅರಸೊತ್ತಿಗೆಗಳ ಒಕ್ಕೂಟ ಮತ್ತು ಸಮೀಪವರ್ತಿಗಳ ವಿದ್ರೋಹದಿಂದಾಗಿ ತಾಳಿಕೋಟೆ ಕದನದಲ್ಲಿ ಮಡಿದು, ವಿಜಯನಗರ ಇದ್ದಕ್ಕಿದ್ದಂತೆ ಪತನವಾಗುವ ಮುಂದಿನ ಇತಿಹಾಸದ ನೆನಪಿದೆ.

ಸರಳವೆನ್ನಿಸುವ ಒಂದು ಪ್ರೇಮಕಥೆಯ ಸಾಮಾಜಿಕ ಮತ್ತು ಐತಿಹಾಸಿಕ ಆಯಾಮಗಳನ್ನು ಕೂಡ ಕಾಣಿಸುವ ಸೂಕ್ಷ್ಮಗಳು ಈ ಕಾವ್ಯದಲ್ಲಿವೆ.
ಈ ಕಾವ್ಯದ ಆಯ್ದ ಭಾಗಗಳು ಕೆಳಗಿವೆ:

ತರುಣ ಧಮನಿ

3
ಅಡಗುವ ರಾತ್ರಿಯನೆಬ್ಬಟ್ಟುತ ಮೂ-
ಡಲ ಕೆಂಪೇರುತಿರೆ,
ಹುಲಿಬೇಟೆಗೆ ಹಯವೇರಿದ ವಿದ್ಯಾ-
ನಗರದ ರಾಮದೊರೆ.

4
ಹೆಗಲೇರಿರೆ ಹೆದೆಯೇರಿದ ಬಿಲ್ಗೊನೆ
ಮಿಡುಕಿನ ಕುಡಿಯಂತೆ;
ನಡುವಿನೊಳೊಲೆದುದು ನಿಡುಗೂರಸಿ ತಾ-
ರುಣ್ಯದ ಮನದಂತೆ.

5
ಹೆಣೆಯಗಲವ ಕೋರೈಸುತ ಬಲಿದುದು
ಸಿರಿಮುಡಿ ಜರಿ ಮಿರುಗೆ.
ತರುಣಮನೋರಥವೀಥಿಯ ಸುಂದರ-
ಸೌಧದ ನೆಲೆಯಂತೆ.

6
ನೀಳ್ದೆವೆನೆಳಲಲಿ ಮಲೆಗಣ್ ನೀಡಿತು
ವಿಭವದ ಮದದಂತೆ.
ಆಳ್ದು ಮೊಗವ ಮೂಗೊಪ್ಪಿತು ಬಾಗುತ
ಕಲಿತ ವಿನಯದಂತೆ.

7
ಹೊಳೆವಭಿಮಾನದಿ ತುಂಬಿದ ಗಂಡದಿ
ಗರುವದೆ ಚಿಗುರಂತೆ
ಕೊನೆಯೇರಿದ ಬಾಯ್; ಬಲಿದ ಚಿಬುಕವನು-
ರಾಗಕಂದದಂತೆ.

8
ಮೊಗಕುಬ್ಬಿದ ಮೆಯ್, ಮೆಯ್ಗುಬ್ಬಿದ ಕೈ,
ಕೈಗುಬ್ಬಿದ ಕೈದು;
ತೊಡೆಗುಬ್ಬಿದ ಹಯ, ಹಯಕುಬ್ಬಿದ ತೊಡೆ;
ನಡೆಗುಬ್ಬಿತು ನೆಲವೆ.

9
ಹುಲ್ಲೆಯ ಕಂಡರೆ ಹೊಡೆಯಲು ಬೇಡನೆ ?
ಹುಲ್ಲು ಸಿಡಿಲ ಗುರಿಯೆ?
ಕೊಲ್ಲಲು ಹಕ್ಕಿಯ, ಮನವದು ಕವಣೆಯ
ಕಲ್ಲೆ? ನಲವೆ, ಹೊಲೆಯೆ?

10.
ವನಕೆ ನುಗ್ಗಿದನು, ವನದಳ್ಳೆದೆಗೊಂ-
ದಲಗು ನುಗ್ಗಿದಂತೆ.
ದೊಣೆಯಿಂದೆಳೆದನು ಬಾಣವ, ಮಿಂಚಿನ
ಮರಿಗಳ ಸೆಳೆದಂತೆ.

11
ವನವರಾಹಗಳ ದಾಡೆಯ ಮುರಿದನು,
ವೃಕಗಳ ನಾಲಗೆಯ
ತರಿದನು, ಕರಡಿಯ ಮುಸುಡನು ನುರಿದನು;
ಹುಲಿಯನೆ ಹುಡುಕಿದನು.

12
ಕುಟಿಲಗೆ ಕೌಟಿಲ್ಯದ ಕೊರಳುರುಳನು
ಘಟಿಪುದು, ಸಟೆಗನಲಿ
ಸಟೆವುದು; ರಾಮಗೆ ಗೆಲವೆಂಬೊಗಟ ವಿ-
ಘಟಿಸುವ ಸೂತ್ರವಿದು.

13
ಕುಹಕವ ನೆನೆದನು, ಕುದುರೆಯನುಳಿದನು;
ಮಿದುಹಜ್ಜೆಯ ಹಿಡಿದು,
ಹಸಿಹುಲ್ಲಿಗೆ ಮೆಯ್‍ನೀಡಿದ ಹುಲ್ಲೆಯ
ಚಳಕದಿ ತುಡುಕಿದನು;

14
ಕಿವಿಹಿಡಿದೊಯ್ದನು, ತರುವಿನ ಮೂಲಕೆ
ಬಲಿದನು; ಮರವೇರಿ.
ಕುಳಿತನು, ಸಿಡಿಲಡಗಿದ ಮುಗಿವಿನ ಮುರಿ-
ಯಂತಿರೆ ಕೈಕೋವಿ.

98
ಕುಳಿತ ಮಿಹಿರೆಯುಂಗುಟದಿ ನೆಲದೊಳುಗು-
ರಿಸಲು ಸಮ್ಮತಿಯನು,
ಕೆಳದಿ ಮೌನಮುದ್ರೆಯನೊತ್ತಿರೆ, ದೊರೆ-
ಗಡವಾಯಿತು ನಲ್ಮೆ.

99
ಹುಲಿಯ ಬೇಟೆಯೊಳಗೆ ಮೊಳೆದು ಹುಲಿಯ ತೆರದೊಳಡಗಿ ಬೆಳೆದು
ಬಳಿಕ ವೈರವಡೆದು, ಕನ್ನಡಿಗರ ಭಾಗ್ಯಸುರಭಿಯ
ಹಿಡಿಯಿತಂತದೊಂದು ಹಾಳು ಬೇಟವಿಂತು; ದೊರೆಗದೇಕೆ
ಘಟಿಸಿತಯ್ಯೊ ! ವೀರನರಪತಿಗಳ ಮುಕುಟರತ್ನಕೆ !

100
ನೆಲಕೆ ಬೀಳ್ವ ಮೊದಲೆ ತಂದೆಯಳಿದ ಬಡವು ಹಸುಳೆ ಬೆಳೆದು
ನೆನೆದು ಮರುಗಿ, ಹೇಳಿ ಕೇಳಿ ಬಂದ ತೆರದಿ ಬಗೆಯಲಿ
ಬಲಿದ ಪಿತನ ರೂಪನಪ್ಪಿ ಕರಗುವಂತೆ, ಚರಿತೆಯ ನಿಜ-
ವರಿಯದಿನಿತು ಬರೆದೆನಮ್ಮ ! ನುಡಿಯೊಡತಿಯೆ, ಮನ್ನಿಸು !
(1934)

ಶ್ವಮೇಧ ಅಥವಾ ನಾಯ ನಡತೆ

ಸೇಡಿಯಾಪು ಅವರ ಶ್ರೇಷ್ಠ ಸಣ್ಣ ಕಾವ್ಯ ‘ಶ್ವಮೇಧ ಅಥವಾ ನಾಯ ನಡತೆ’ ಎನ್ನಬಹುದು. ಇದರ ಹೊಸತನ ಮತ್ತು ವೈಶಿಷ್ಟ್ಯದ ಬಗ್ಗೆ ಈಗಾಗಲೆ ಕೆಲವು ಮಾತುಗಳನ್ನು ಹೇಳಿದೆ. ಇಲ್ಲಿ ಈ ಕಾವ್ಯದ ಪರಿಚಯ ಮಾಡಿಕೊಳ್ಳೋಣ. ಇದರ ಎರಡು ಶೀರ್ಷಿಕೆಯಲ್ಲಿ ಎರಡು ಅರ್ಥಗಳು ಅಡಗಿವೆ – ಎರಡು ಭಾವಗಳನ್ನು ಅವು ಪ್ರತಿನಿಧಿಸುತ್ತವೆ. ಒಂದು – ಅಶ್ವಮೇಧದ ಹಾಗೆ ನಾಯಿಯ ಬಲಿಯನ್ನು ಸೂಚಿಸುತ್ತದೆ; ಇನ್ನೊಂದು – ನಾಯಿಯ ಉದಾತ್ತ ನಡತೆಯನ್ನು ಸೂಚಿಸುತ್ತದೆ. ಒಂದೇ ಶೀರ್ಷಿಕೆಯಲ್ಲಿ ಎರಡನ್ನೂ ಸಾಧಿಸಲು ಸಾಧ್ಯವಿಲ್ಲ; ಅದಕ್ಕಾಗಿ ಈ ಶೀರ್ಷಿಕೆ.

ಈ ಕಥನಕಾವ್ಯ ಪ್ರಾಸರಹಿತ ರಗಳೆಯ ಒಂದು ಪ್ರಭೇದದಲ್ಲಿದೆ. ಒಂದು ಸಾಲಿಗೆ ಆರುಮಾತ್ರೆಗಳ ನಾಲ್ಕು ಗಣಗಳು ಇವೆ. (“ಮಹಾಛಂದಸ್ಸೆಂದೋ ರಗಳೆಯೆಂದೋ ನಾಮಕರಣವಿದ್ದೀತು” ಎಂದು ವಿದ್ವಾನ್ ರಂಗನಾಥ ಶರ್ಮರು ಸೂಚಿಸಿದ್ದಾರೆ). ಈ ಕಾವ್ಯದಲ್ಲಿರುವ ವಸ್ತುವಿಗೆ ಆಧಾರವಾಗಿರುವುದು ನರಿಮೊಗರು ಎಂಬ ಗ್ರಾಮದಲ್ಲಿರುವ ನಾಯಿಯೊಂದರ ಸಮಾಧಿಸ್ಮಾರಕ, ಮತ್ತು ಅದರ ಹಿಂದಿರುವ ಒಂದು ಸತ್ಯಕಥೆ. ಆ ಕಥೆಯನ್ನು ಸೇಡಿಯಾಪು ರಸಭಾವಗಳಿಂದ ಪರಿಪುಷ್ಟವಾಗಿಸಿ, ಸಾಮಾಜಿಕ ಕಳಕಳಿ ಮತ್ತು ಜೀವನದರ್ಶನಗಳನ್ನು ಮೇಳೈಸಿ ಬರೆದಿದ್ದಾರೆ.

ಈ ಕಾವ್ಯದ ಕಥಾವಸ್ತು ಹೀಗಿದೆ: ಧರ್ಮರಾಯ ಸೆಟ್ಟಿಯೆಂಬ ಗೃಹಸ್ಥ ಮತ್ತು ಅವನ ಪತ್ನಿ ಪದ್ಮಾವತಿಗೆ ಮಕ್ಕಳಿರಲಿಲ್ಲ. ಅವರು ಒಂದು ನಾಯಿಮರಿಯನ್ನು ಪುತ್ರವಾತ್ಸಲ್ಯದಿಂದ ಸಾಕಿದ್ದರು. ಚಂದು ಎಂದು ಅದರ ಹೆಸರು. ಅದರ ಬುದ್ಧಿಶಕ್ತಿ ಮತ್ತು ಸ್ವಾಮಿನಿಷ್ಠೆ ಅತ್ಯಪೂರ್ವವಾಗಿತ್ತು. ನೆರೆಗ್ರಾಮದಲ್ಲಿ ಗುಮ್ಮಣಾಳ್ವನೆಂಬ ಕ್ರೂರಿ ಜಮೀನುದಾರನಿದ್ದ. ಅವನು ಒಮ್ಮೆ ತನ್ನ ಜೀತದಾಳನ್ನು (ಮೂಲದವನು ಎನ್ನುವ ಶಬ್ದವನ್ನು ಸೇಡಿಯಾಪು ಬಳಸಿದ್ದಾರೆ. ಸಾಮಾನ್ಯವಾಗಿ ದಲಿತರು ಮೂಲದಾಳುಗಳಾಗಿ ದೊಡ್ಡಮನೆತನಗಳ ಸೇವೆಯಲ್ಲಿರುತ್ತಾರೆ. ಅದನ್ನು ಜೀತವೆಂದು ಕರೆಯಬಹುದು) ಹಿಂಸಾತ್ಮಕವಾಗಿ ದಂಡಿಸುತ್ತಿದ್ದಾಗ ಅದನ್ನು ಕಂಡ ಧರ್ಮರಾಯ ಸೆಟ್ಟಿಯ ಮನಸ್ಸು ಕರಗಿ ಅವನನ್ನು ಜೀತದಿಂದ ಬಿಡಿಸಲು ಮುಂದಾಗುತ್ತಾನೆ. ತನ್ನ ಸೊಂಟದಲ್ಲಿದ್ದ ಚಿನ್ನದ ಉಡಿದಾರವನ್ನು ಜೀತದಾಳಿನ ಬಿಡುಗಡೆಗೆಂದು ಗುಮ್ಮಣಾಳ್ವನಿಗೆ ಕೊಡುತ್ತಾನೆ. ಆಳ್ವ ನಗುತ್ತ ಅದನ್ನು ತೆಗೆದುಕೊಂಡು, ಇನ್ನೂ ಹತ್ತು ವರಹ ಕೊಟ್ಟರೆ ಮಾತ್ರ ಅವನ ಜೀತ ಮುಕ್ತಿಯಾಗುತ್ತದೆಂದು ಹೇಳುತ್ತಾನೆ. ಆಗ ಆ ಹತ್ತು ವರಹ ಧರ್ಮರಾಯ ಸೆಟ್ಟಿಯ ಬಳಿ ಇಲ್ಲದಿದ್ದಾಗ ತನ್ನ ನಿಷ್ಠೆಯ ನಾಯಿಯನ್ನು ಅಡವಿಡುತ್ತಾನೆ. ಆ ಬುದ್ಧಿಶಕ್ತಿಯುಳ್ಳ ನಾಯಿ ಗುಮ್ಮಣಾಳ್ವನ ಹಿಂಸೆಯನ್ನೆಲ್ಲ ಸಹಿಸಿಕೊಂಡು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿತ್ತು. ಒಂದು ದಿನ ಗುಮ್ಮಣಾಳ್ವನ ಮನೆಗೆ ಬೆಂಕಿ ಬೀಳುತ್ತದೆ, ಎಲ್ಲರೂ ಹೊರಗೆ ಓಡುತ್ತಾರೆ. ಒಂದು ಮಗು ಮಾತ್ರ ಒಳಗೆ ಉಳಿಯುತ್ತದೆ. ನಾಯಿ ಚಂದು ಬೆಂಕಿಯ ಜ್ವಾಲೆಯ ನಡುವೆ ಒಳಗೆ ನುಗ್ಗಿ ಮಗುವಿಗೆ ನೋವಾಗದಂತೆ ಅದನ್ನು ಕಚ್ಚಿಕೊಂಡು ಹೊರಗೆ ಧುಮುಕುತ್ತದೆ. ಅದನ್ನು ಕಂಡ ಗುಮ್ಮಣಾಳ್ವನ ಹೃದಯ ಪರಿವರ್ತನೆ ಆಗುತ್ತದೆ. ನಾಯಿಯನ್ನುದ್ದೇಶಿಸಿ ಗುಮ್ಮಣಾಳ್ವನು ಹೇಳುವುದು ಹೀಗೆ:

“ಎನ್ನ ಧನಿಯೆ! ನಿನ್ನ ಧನಿಯ ಮಾತು ಸತ್ಯವಾಯ್ತು; ಎನ್ನ
ಸಾಲ ಬಡ್ಡಿಗೂಡಿ ಪೂರ್ಣ ಬಂದುಹೋಯ್ತು. ಹೊನ್ನಿನಾಸೆ,
ಪಂತ ಮೇಲೆ ನೆಗೆಯಿಪಾಸೆ, ಕೊಂದು ತಿಂಬ ವೇಳೆಯಲ್ಲಿ
ಧರ್ಮರಾಯನವನ ಜುಟ್ಟ ಹಿಡಿದು ತಂದೆನೆಂದು ತಂದೆ
ನಿನ್ನ; ಕಾಮಧೇನುವಿನಿಂದಲೆಳೆಯ ಕರುವ ಬಿಡಿಸಿ ನಾಕ-
ದಿಂದ ನರಕಕೆಳೆದು ತಂದ ತೆರದಿ ತಂದೆ, ಕಷ್ಟ ಕೊಟ್ಟೆ…..
…………………………………………. ಕುಲದ ಕುಡಿಯ
ಹೆಣ್ಣುಮಗಳನುಳಿಸಿ ಕೊಟ್ಟ ಚೆನ್ನ! ಹೋಗು, ಎನ್ನ ಎದೆಯ
ಕಲ್ಲ ಕೋಟೆಯನೊಡೆದು ಗೆದ್ದ ವೀರ! ಹೋಗು”

ನಾಯಿಯ ಸಾಹಸದಿಂದಾಗಿ ಮಗುವಿನ ಪ್ರಾಣವುಳಿದುದರಿಂದ ಸೆಟ್ಟಿಯ ಸಾಲ ತೀರಿದೆಯೆಂದು ಒಂದು ಚೀಟಿಯಲ್ಲಿ ಬರೆದು ಅದನ್ನು ನಾಯಿಯ ಕುತ್ತಿಗೆಗೆ ಕಟ್ಟಿ, ಜತೆಗೆ ನಾಯಿಗೆ ಉಡುಗೊರೆಯಾಗಿ ಆಭರಣವೊಂದನ್ನು ಕೊಟ್ಟು, ನಾಯಿಯನ್ನು ಸೆಟ್ಟಿಯ ಬಳಿಗೆ ಹಿಂದಿರುಗಲು ಕಳುಹಿಸಿಕೊಡುತ್ತಾನೆ. ನಾಯಿ ಸಂತೋಷದಿಂದ ತನ್ನ ಒಡೆಯನ ಬಳಿಗೆ ಹಿಂದಿರುಗುತ್ತದೆ. ಸೆಟ್ಟಿಯು ನಾಯಿಯನ್ನು ಕಂಡು, ಅದು ತನ್ನ ಮಾತನ್ನು ಉಳಿಸಲಿಲ್ಲವೆಂದು ಭಾವಿಸಿ ಸಿಟ್ಟಿನಿಂದ ಅದನ್ನೆತ್ತಿ ನೆಲಕ್ಕೆ ಬಡಿಯುತ್ತಾನೆ. ನಾಯಿ ಸತ್ತು ಹೋಗುತ್ತದೆ; ಶ್ವಮೇಧವಾಗುತ್ತದೆ. ನಡೆದ ಸಂಗತಿ ತಿಳಿದ ಬಳಿಕ ಅವನ ಶೋಕಕ್ಕೆ ಪಾರವೇ ಇರಲಿಲ್ಲ. ನಾಯಿಗಾಗಿ ಸ್ಮಾರಕವನ್ನು ಕಟ್ಟಿ, ಶೋಕದಿಂದ ನವೆದು ಜೀವನಯಾತ್ರೆಯನ್ನು ಮುಗಿಸುತ್ತಾನೆ.

ಕರುಣರಸ ಪ್ರಧಾನವಾದ, ಇನ್ನು ಕೆಲವು ಸಂಚಾರೀ ಭಾವಗಳ ಈ ಕಾವ್ಯ ಕನ್ನಡದ ಮಹತ್ವದ ಸಣ್ಣಕಾವ್ಯಗಳಲ್ಲಿ ಒಂದು. ತನ್ನ ಒಡೆಯನಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮತ್ತು ಅವನ ಕೈಯಿಂದಲೇ ಪ್ರಾಣವನ್ನು ಕಳಕೊಂಡ ನಾಯಿಯೊಂದರ ಧೀರತನ, ಸ್ವಾಮಿಭಕ್ತಿ, ಸತ್ಯನಿಷ್ಠೆ ಇತ್ಯಾದಿಗಳನ್ನು ಅಸಹಜವೆನ್ನಿಸದಂತೆ; ಓದುಗರಲ್ಲಿ ಅಥವಾ ಕೇಳುಗರಲ್ಲಿ ಕಣ್ಣೀರು ಸುರಿಯುವಂತೆ ಸೇಡಿಯಾಪು ಈ ಕಾವ್ಯವನ್ನು ಬರೆದಿದ್ದಾರೆ.

ಈ ಕಾವ್ಯದ ಕೆಲವು ಭಾಗಗಳಿವು:

ಶ್ವಮೇಧ
ಅಥವಾ
ನಾಯ ನಡತೆ

‘ನಾಯಿಬಾಳ ಬಾಳ್ದನೆ’ಂದು ಹೀನಜನವ ಹಳಿಯುವವರೆ !
ಕೇಳಿ ನಾಯಿಯೊಂದು ನಡೆದ ನಡತೆಯನ್ನು, ನಿಮ್ಮ ಮನದ
ಭಾವ ಬದಲದಿರದು; ಕಣ್ಣ ನೀರು ಸುರಿಯದಿರದು; ಮನುಜ–
ಮಾನಭೂಮಿ ಕುಸಿದು, ಹೃದಯಕುಹರ ಬಾಯ ತೆರೆಯದಿರದು.
ಹಾಳು-ಕಟ್ಟುಕತೆಯಿದಲ್ಲ, ನೋಡಬಹುದು ನರಿಮೊಗರಲಿ
ನಾಯಿ ಮಲಗಿದೆಡೆಯ ಮೇಲೆ ಮಾಡಿಸಿದ ಸಮಾಧಿ-ಒಡೆಯ
ಬೀಡುಗೊಂಡ ಬಳಿಯೆ, ಚಳಿಯ ಗಾಳಿಮಳೆಯ ಬಿಸಿಲ ಜಳವ
ತಾಳಿ, ಮೇಲೆ ಹುಟ್ಟಿ ಸಾವ ಹುಲ್ಲ ಬಾಳುಬೀಳುಗಳಲಿ
ಬೀಗಿ-ಬತ್ತಿ, ಕರುಣಕಥೆಯ ಹಾಡುವುದನು; ಕಲ್ಗಳೆಲ್ಲ
ಕೇಳಿ ಮೆಯ್ಯ ಮರೆದಿಹುದನು, ಬೋಳುಗುಡ್ಡ ಬಿದ್ದಿಹುದನು!| 10

ಅಲ್ಲೆ ಹತ್ತಿರದಲಿ ಮೊದಲು ನೆಲ್ಲುಬೈಲ ಮೇಲೆ ಮುಳಿಯ–
ಹುಲ್ಲ ಮಾಡಿನಡಿಯಲೊಬ್ಬ ಜೈನನಿದ್ದನವನ ಹೆಸರು
ಧರ್ಮರಾಯಸ್ಟೆಟ್ಟಿ ; ಅವನ ಗುಣವು ಮೇಲೊ, ಹೆಸರು ಮೇಲೊ
ಎನ್ನಲಾರೆ ; ಕೈಯ ಹಿಡಿದ ಸುದತಿ ಪದ್ಮವತಿಯ ಶೀಲ
ವಲ್ಲಭನಲಿ ಎರಕವಡೆದೊ, ತಾಯ ಬಳಿಯೆ ರೂಪುಗೊಂಡೊ
ಚಿನ್ನವಾದುದೆಂದು ತಿಳಿಯೆ. ಆದರವರ ನಲ್ಮೆಯೆಂಬ
ಬೆಲ್ಲವಚ್ಚುಗೊಳ್ಳಲಿಲ್ಲ; ಮುದ್ದುಕೂಸು ಮೂಡಲಿಲ್ಲ ;
ಹೊಲದ ಮನೆಯ ಕೆಲಸ ಮುಗಿಯೆ ಮನದ ಮೋದಕೇನು ಇಲ್ಲ !

ಮನದಲಂಪನಿಡಲಿಕಾಗಿ ಕರಡಿಗೆಯನು ತಂದನೇನೊ ?
ಚೆಲುವಿನೊಂದು ಮರಿಯ, – ಹೊಳೆವ ಕರಿಯ ಮೆಯ್ಯ, ನೇರಗಿವಿಯ, 20
ಹರಳುಗೆಂಪು ತೆತ್ತಿದಂತೆ ಮಿರುಗುತಿರುವ ಮೂಗುಮೊನೆಯ,
ಕಿರಿಯ ಕಣ್ಣ, ಬೆರಳ ಸರಿಯ ಬಾಲವಲೆವ, ಕೋಲುಗಾಲ,
ಚಿವುಟೆ ಕೈಗೆ ಸಿಕ್ಕದಿರುವ ಮುಟ್ಟೆ, ಮೆಯ್ಯ ಜಕ್ಕುಲಿಸುವ

ನಯದ ರೋಮ ಹೊದೆದ ನಾಯ – ಮನೆಗೆ ಸೆಟ್ಟಿ ತಂದನೇನೊ ?
ಬಿಳಿಯ-ಸೀಮೆನಾಯಿಯಲ್ಲ. ಹಡಗಿನಿಂದ ಹಾರಿ ಬಂದು
‘ಟಾಮು’ ‘ಟೈಗರೆ’ಂಬ ಬಿಂಕದಂಕದಿಂದ ಬೆಳೆದುದಲ್ಲ.
ಹಳೆಯ ಕಾಲ, ಬಿಳಿಯ ಬಣ್ಣ ಬಂದು ಕಣ್ಣ ಬೆಳಗಲಿಲ್ಲ ;
ಕರಿಗಳಂದು ಕಾಡನಿಳಿದು ನಾಡ ಪಶುಗಳಾಗಲಿಲ್ಲ.
ಬಡವನೊಡ್ಡ ದೂಮನವನ ಹರಿದ ಹೆಡಗೆಯಲ್ಲಿ ಕಣ್ಣ
ತೆರೆದ ಬಡವು ಕರಿಯ ನಾಯಿ; ಪದ್ಮವತಿಯ ಕೈಯ ಹಾಲ 30
ಕುಡಿದು ಕುಣಿದು, ಸೆಟ್ಟಿಯಡಿಗೆ ಎಸಳುನಾಲಗೆಯಲಿ ಪೂಜೆ-
ಯೆಸಗಿ ಭಕ್ತಿಯಲ್ಲಿ ಮಣಿದು ಮಡಿಲ ಬೇಡಿ ಪಡೆದು, ಕೊರಳ
ತೊಡೆಯಲಿಟ್ಟು ಕಣ್ಣನರ್ಧಮುಚ್ಚಿ, ಕಂಠ ಕೂಜಿಸುತಿರೆ-
ಒಡಯನೆದೆಯ ಕೋಟರದಲಿ ಪವಡಿಸಿದ್ದ ಪುತ್ರಮೋಹ
ತೆರೆದು ಕಣ್ಣ ಕೆದರಿ ಗರಿಯ ಹಾರಿ ಕೈಯ ಮೇಲೆ ಕುಳಿತು-
ಕೊಳಲು ನಡುಗುತಿರುವ ಬೆರಳು ತಲೆಯ ಹರಸೆ ಬೆನ್ನ ಸವರೆ-
ಬಾಲ ಸುಖದ ಭಾರದಲ್ಲಿ ತೊನೆಯುತಿರಲು ಬಳೆದು ಬುದ್ಧಿ-
ಕಲಿತು ಬಲಿಯಿತದು, ವಿಧೇಯತೆಯನು ಒರೆವ ಕಲ್ಲೊ, ಒಡೆಯ-
ನಪ್ಪಣೆಯನು ತೊಡುವ ಬಿಲ್ಲೊ ಎನಲು; ಸೆಟ್ಟಿಯದರ ರೂಪ
ಗುಣಸಮೃದ್ಧಿಗಳನು ಬಗೆದು ಹೆಸರನೆರಡನಿಟ್ಟನದರ 40
ಚೆಲುವಿಗಾಗಿ ಚಂದುವೆಂದು, ಬುದ್ಧಿಗಾಗಿ ಬಂಟನೆಂದು.

ಹಗಲು ಸೆಟ್ಟಿಗಾಯ್ತು ಚಂದು ಗೆಡೆಯ ಬಿಡದ ಗೆಳೆಯ, ಕೊಡುವ
ತರುವ ಕೆಲಸದಾಳು, ಬೆನ್ನ ಬಳಿಯೆ ಮೆಯ್ಯ ಕಾವ ಬಂಟ ;
ಇರುಳು ಕಾಲ ದಿಂಬು, ಮಕ್ಕಳಿರದ ಶೂನ್ಯಶಯ್ಯೆಗಿಂಬು,
ಜಡಿವ ಕತ್ತಲೆಯಲಿ ನುಸುಳಿ ಸುಳಿವ ದುರುಳರಳ್ಳೆಗಂಬು ;
ಒರಗುತಿರುವ ವೇಳೆ ಮನೆಯೊಳಡಿಯಿಡುವರ ಮೇಲೆ ಬೀಳ್ಪ್ವ
ಸಿಡಿಲು ; ಕಾರ್ಯವಶದಲೊಡೆಯ ದೂರಕ್ಕೆದೆ ಬರುವ ವರೆಗೆ
ಮನೆಗೆ ಕೋಟೆ, ಒಡತಿಯಡಿಯ ನಿಧಿಗೆ ಕೃಷ್ಣಸರ್ಪವೆನಲು,
ಪಡೆವ ಪುಣ್ಯವಿಲ್ಲದಾಯ್ತೊ ಹಲವುಗಾಲವಿಂಥ ನಾಯ !

ನೆರೆಯ ಹಳ್ಳಿಯಲ್ಲಿ ಗುಮ್ಮಣಾಳ್ವನೆಂಬ ಧನಿಕನಿದ್ದ 50
ಹಣದ ಪೆಟ್ಟಿಗೆಯಲಿ ತನ್ನ ಹರಣವೆಲ್ಲವಿಟ್ಟು, ಕಣ್ಣ
ರಕುತವೆಲ್ಲ ಮಾರಿ, ಬಡವರವಸರದಲಿ ಪ್ರೇತದಂತೆ
ಹಿಡಿದು ಜಡದೆ ಪೀಡಿಸುತ್ತ; ನಡೆವ ತನ್ನ ಹೆಣವ ಹೊರದ
ಅಬಲಗವನೆ ಕಾಲ, ಮಲೆವ ಸಬಲಗವನೆ ಸಾನುಕೂಲ.
ಅವನು ತೆಗೆದ ಮನೆಗಳೆಷ್ಟೊ, ಸುಲಿಗೆ ಮಾಡಿದೊಕ್ಕಲೆಷ್ಟೊ
ಹಟವ ಸಾಧಿಸಲ್ಕೆ ಗೈದ ವ್ಯಕ್ತ- ಗುಪ್ತ ವಧೆಗಳಿಷ್ಟೊ!
ಅವನ ಮನೆಯ ಮೂಲದಾಳು, ಅವನ ಬಡಿಗೆಯುಂಬ ಕೂಳು,
ಕುಡಿಯನೊಬ್ಬನೊಂದು ದಿವಸ ಒಡೆಯನಡಿಗೆ ನಮಿಸುವಾಗ
ಬಿರಿವ ಬಾಸುಳಿಂದ ಬೆನ್ನು ಬಾಗಲಿಲ್ಲವೆಂದು, ನೂಕಿ
ತುಳಿದು ಜಪ್ಪಿ ಗುದ್ದುತಿರುವ ಧನಿಯ ಕೆಡೆದ ಕಾಲಹುಳುವ- 60
ನಕಟ ! ಕಂಡ ಧರ್ಮರಾಯ ಸೆಟ್ಟಿ ತನ್ನ ಕೆಲಸದಲ್ಲಿ
ನಡೆಯುತಿರಲು ಬಂಟನೊಡನೆ ; – ಮನವು ಕರಗಿ ಹರಿದು ಹೋಯ್ತು,
ಬುದ್ಧಿ ಮುರುಟಿ ಬಾಡಿ ಬಿತ್ತು, ಜೀವ ಕೆಂಡಕೆಂಡವಾಯ್ತು,
ದೇಹ ಕಲ್ಲಿನಂತೆ ಇತ್ತು, ಮಾತು ನಾಲಗೆಯಲಿ ಸತ್ತು
ಹುಟ್ಟಿ ನರಳಿ ನೆಗೆದುದಿಂತು – “ಸಾಕು, ಸಾಕು, ಆಳ್ವರೇ!
ಕೋಪ ಬಂತು ನಿಮಗೆ ಎಂದು ಪಾಪದವನ ಕೊಲುವುದೇನು ?
ಮೂಲದವನ ದೇಹದಲ್ಲಿ ಮೂಳೆಯಿಲ್ಲವೇನು ?” ಎಂದ
ಮಾತು ನಾಟಿ ಮುಷ್ಟಿ ಸಡಿಲೆ; ಕಣ್ಣ ಕಿಸುರ ಲಜ್ಜೆಯೊರಸೆ,
ಮೋರೆಯೊಳಗೆ ಹುದುಗುತಿರುವ ಗೌರವಕ್ಕೆ ಧೈರ್ಯವಿತ್ತು
ರೋಷ ನಾಲಗೆಯಲಿ ನಿಂತು ಮೂದಲಿಸಿತು – “ಮೂಲದವಗೆ
ನೀರನೆರೆದ ಕೈಯ ತಡೆವ ಬೀರನಹೆಯೊ ಸೆಟ್ಟಿ ನೀನು ?
ಆಳುಗಳನು ಕಾಂಬ ಬಗೆಯನೆಮಗೆ ಕಲಿಸಬಂದೆಯೇನು ?
ಆದರಿರಲಿ, ಜೈನನಲ್ತೆ! ನಿನಗೆ ಕರುಣೆ ಮೀರಿ ಹರಿವು-
ದಾದರಿವನ ಬಿಡಿಸಿಕೊಂಡು ಮೂಳೆ ಮಾಂಸ ಬೆಳೆಸಬಹುದು ;
ಖೂಳಹೊಲೆಯನಿವನ ಕಾಲನೊತ್ತಬಹುದು, ನಮಿಸಬಹುದು !
ಆದರೇನೊ ಸೆಟ್ಟಿ ? ಹಣದ ಚೀಲವಿದೆಯೊ, ಹರಿದು ಹೋಯ್ತೊ ?
ಮಾಡು ಸೋರಿ ಸೋರಿ ಮನೆಗೆ ನೀರು ತುಂಬಿ ತೇಲಿ ಹೋಯ್ತೊ?” 70

****

ಚಾವಡಿಯಲಿ ‘ಮಲ್ಲರಾಯ ಭೂತ’ಕೊಪ್ಪಿಸಿದ್ದ ಹಳೆಯ
ತೂಗುಮಂಚವಿತ್ತು, ಅದಕೆ ಎಂದಿನಂತೆ ಸಂಜೆಯಲ್ಲಿ
ಆಳ್ಚ ತಾನೆ ದೀಪವಿಟ್ಟು ಕೈಯ ಜೋಡಿಸಿದ್ದನದರ
ಜೋತಿಯೇ ನಿಮಿತ್ತವಾಗಿ ಭೋಂಕನೆದ್ದುದಲ್ಲಿ ದೈವ-
ದಾಟದಾರಭಟಿಯ ವಹ್ನಿ. ಭೂತಭಯದಿ ಚಾವಡಿಯಲಿ
ಆವ ಗಂಡನಾದರಲ್ಲಿ ಮಲಗನಿದ್ದುದೊಂದೆ ಚಂದು,
ಹೀರುವವನ ಹಾರಯಿಸುತ ನೀರ ಗಿಂಡಿ ಕಾದಿಹಂತೆ.
ಕಾಣುತೆದ್ದ ಕಿಚ್ಚ ಬಂಟ ಘೋರರವದಿ ಮೊರೆದುದಾದ-
ರೇನು ? ಗಾಢನಿದ್ರೆಯಲ್ಲಿ ಗೂಢವಾದ ಮನೆಯ ಮಂದಿ 250
ಕೇಳಲಿಲ್ಲ, ಕೇಳಿದವರು ಏಳಲಿಲ್ಲ ನಾಯಿಗೇನೊ
ರೋಗವೆಂದು. ಬಳಿಕ ಚಂದು ಮನೆಯ ಬಳಸಿ ಕಿಟಿಕಿಗಳಿಗೆ
ಹಾರಿ ಹಾರಿ ಗರ್ಜಿಸಲ್ಕೆ, – “ಹಾಳುನಾಯ ಕೊಲ್ವೆ”ನೆಂದು
ಖೂಳ ಮುದುಕನೊಬ್ಬ ಬಡಿಗೆಗೊಂಡು ಬಾಗಿಲನ್ನು ತೆರೆದು
ಕಂಡು ಬೆಚ್ಚಿ “ಬೆಂಕಿ !”’ ಎಂದು ಹಾರಿ ಕೂಗೆ, ಎಲ್ಲರೆದ್ದು
ಓಡೆ ಹೊರಗೆ; ಆಳ್ವ ಕಾಣದಿರಲು ತಂದರವನ. ಈಗ
ತಾನದಾರ ದೂರಲಹುದು ? ತನ್ನ ಕೈಯೆ ತನ್ನ ತನುವ.
ಹೂಳಿತೆಂದು ಹಣೆಯ ಮೇಲೆ ಕೈಯ ಹೊಡೆದುಕೊಂಡನಾಳ್ವ |

ಮನೆಯನಪ್ಪಿ ಮದದ ಬೆಂಕಿ ಮದಿಲ ಮುದ್ದಿಸಿತ್ತು ; ಆಳ್ವ
ಸೆರೆಯಲಿಟ್ಟ ಸಿರಿಯ ಜುಟ್ಟು ಅದರ ಹಿಡಿಕೆಯಲ್ಲಿ ಇತ್ತು 260
ಎಳೆದು ತರುವ ಹೊಂತಗಾರನಾರೊ? ಬದುಕಿನಾಸೆ ತೊರೆದು
ಬದುಕುವಾಸೆವಿಡಿದು ಮದಿಲ ಬಾಗಿಲಿಂದ ನುಸುಳಿ ಹೊರಗೆ
ನಡೆದುದೆಲ್ಲ ಬಲದ ಚಲದ ಮಂದಿಯೆನಲು, ಅಬಲೆಯರಿಗೆ
ಸಿರಿಯ ಹಂಗೆ? ಕೈಗೆ ಬಂದ ಹಸುಳೆಗಳನು ಹಿಡಿದುಕೊಂಡು,
“ಯಮನ ಉಕ್ಕಡವನು ದಾಟಿ ನೆಲದ ನೀರ ಋಣದಿ ಬಂದೆ”-
ವೆನುತ ಸತಿಯರೆಲ್ಲ ಮಜಲುಗದ್ದೆಯಲ್ಲಿ’ ಗುಂಪುಗೂಡೆ–
ಬಳಿಗೆ ಆಳ್ವ ಬಂದು – “ಮನೆಯ ಜನವದೆಲ್ಲ ಬಂತೊ ? ನಿಮ್ಮ
ಶಿಶುಗಳೆಲ್ಲ ಬಳಿಯೊಳಿರುವುವೇನು ? ನಮ್ಮ ಕಣ್ಣ ಬೊಂಬೆ
ಕಮಲೆಯಲ್ಲಿ?” ಎಂದ ಮಾತು ಎಲ್ಲರೆದೆಯನೇಕಸಮಯ-
ದಲ್ಲಿ ಬಗಿದು ಹೊಗಲು, ಆಳ್ವನರಸಿ – “ಪೊನ್ನಿ, ಪೊನ್ನಿ | ತರಲೆ 270
ಇಲ್ಲವೇನೆ ಮಗುವ ನೀನು ? ಅಯ್ಯೊ ! ಪಡುವ ಸಾಲೆಯಲ್ಲೆ
ಎನ್ನ ಚಿನ್ನವುಳಿಯಿತಯ್ಯೊ ! ಎನ್ನ ಜೀವವೇಕೆ ಹೋಗ-
ದಯ್ಯೊ? ಪೊನ್ನಿ, ಎನ್ನ ಪೂರ್ವಕರ್ಮ ದಾದಿಯಾಗಿ ನಿನ್ನ
ನಮ್ಮ ಮನೆಗೆ ತಂದಿತಯ್ಯೊ ! ಹೆತ್ತು ಹೆತ್ತು ಸತ್ತು ಉಳಿದ
ಬಿತ್ತು ಬೆಂದಿತಯ್ಯೊ ! ಸುಟ್ಟ ಸಿರಿಯ ನಂಬಿ ಮಾವನೆನ್ನ
ಕೊಟ್ಟು ಬೀಡುಮನೆಯಿದೆಂದು ಕೊಂದನಯ್ಯೊ !” ಎಂದು ಜೀವ
ದಕ್ಕಿಸಲ್ಕೆ ಓಡುವಾಗ ಮಗಳ ಮರೆದು ಬಂದ ತಪ್ಪ
ಸಿಕ್ಕಿದವರಿಗೆಲ್ಲ ಹಂಚಿ, ಸತಿಯರೆಲ್ಲ ರುದಿತದಲ್ಲಿ
ಕುಳ್ಕುದಿಯುವಗುಳ್ಗಳಾಗೆ; ಗುಮ್ಮಣಾಳ್ವ, — ಕಂಡ ಕನಸೆ
ಮುಂದೆ ಬಂದು ನಿಂದಿರಲ್ಕೆ ಗರ್ವಧಾತುವೆಲ್ಲ ಕರಗಿ 280
ಕಣ್ಣಿನಲ್ಲಿ ಸೋರೆ, ಹೆರರ ಹೀರಿ ಬೆಳೆದ ಕೊಬ್ಬು ಹೊಟ್ಟೆ-

ಯುರಿದ ಬೆಂಕಿಗಾರೆ, ಕಿರಿಯ ಹಸುಳೆಯಂತೆ ರೋದಿಸಿದನು:-
“ಫಲಿಸಿತೆನ್ನ ಪಾಪ ! ಬಡವನೆಳೆಯ ಮಕ್ಕಳುಂಬ ತುತ್ತ-
ಸೆಳೆದ ಶಾಪ ! ರಮಣ ಬರುವ ಪಥವ ಕಾದು ಹಸಿದು ಕುಳಿತ
ಸತಿಯ ಕಿವಿಗೆ ಸೀಸವೆರೆದು ಕೊರಳ ತಾಲಿಗಡಿದ ತಾಪ !”
ಎನುತ ಸುರಿದ ಹಸುಬೆಯಂತೆ ಕುಸಿದು ಬೀಳೆ, ಆಳ್ವನರಸಿ
“ಬದುಕಲಾರೆ ! ಮಗಳನುಂಡ ಬೆಂಕಿಗೆನ್ನ ಮುಡಿಪೆನೆ”ನುತ-
ಲೋಡೆ, ಕೆಲಬರೆಳೆದು ತಡೆದು ಹಿಡಿದು ನಿಲಿಸೆ; ಕೆಲಬರಾಗ
ಕೂಸ ತರುವೆನೆಂಬ ಮನಸು ಮೀರಿ ಮುಂದೆ ಸಾರೆ, ಬೆಂಕಿ
ಹಾರಲೊಡನೆ ಕಾಲು ಹಿಂದೆ ಜಾರೆ ನಡುಗಿ ನಿಂತರಲ್ಲೆ ! 290

ಕೆಂಡದೊಳಗಿದೊಂದು ಮಸಿಯ ಖಂಡವೇನೊ ? ಎಂದು ನೋಳ್ಪ
ಗಂಡರೆಲ್ಲ ಕಣ್ಣ ಬಿಡಲು, ಬಾಗಿಲಿಂದ ದುಮುಕಿತಾಗ !
ಕಂಡು “ಆಹ !” ಎಂದು ವಹ್ನಿಘೋಷವಡಗುವಂತೆ ಬೆರಗು-
ಗೊಂಡು ಬೊಬ್ಬಿರಿದರು. ಆಳ್ಪನೆದ್ದಿದೇನಿದೇನೆನುತ್ತ
ಮುಂದಕೋಡೆ – ಬಾಯ ತೆರೆದ ಸಿಂಹದೊಡಲ ಹೊಕ್ಕು ಕವಳ-
ಗೊಂಡ ಹರಿಣ ಶಿಶುವನೆಳೆದು ತಂದುದೇನು ? ಮೃತ್ಯು ಮುಡಿದ
ಕೆಂಡಸಂಪಗೆಯನು, ಶಿಖೆಯ ಸುಲಿದು, ತಂದುದೇನು ? ಎಂಬ
ಚಂಡತೆಯನು ಸೂರೆಗೊಂಡು, ಇಕ್ಕುಳಲ್ಲಿ ಅಮುಕಿ ಅಗ್ನಿ
ಕುಂಡದಿಂದ ಕುಂದಣದಲಿ ಸಮೆದ ಬೊಂಬೆಯೊಂದ ತಂದ
ಚಂದದಲ್ಲಿ ಹಿಡಿದು ದೀರ್ಘತುಂಡದಲ್ಲಿ, ಹೂವಿನೊಂದು 300
ಮಂಜರಿಯಲಿ ಚಿಗುರಿನಂತೆ ರಸನೆಯೊಪ್ಪಿ ಸೊಬಗನಪ್ಪೆ,
ಚಂದು ಶಿಶುವ ತಂದು, ತನ್ನ ಜೀವನಕ್ಕೆ ಕಲಶವಿಟ್ಟ
ಅಂದದಲ್ಲಿ ಆಳ್ವನಡಿಯ ಬಳಿಯಲಿಟ್ಟು ನಿಂದುದಾಗ.

ಮೊಟ್ಟೆಯೊಡೆದು ಹೊರಗೆ ಬಂದ ಗಿಳಿಯ ಮರಿಯ ತೆರದಿ ನಲಿವ
ಪುಟ್ಟುಕೂಸ ಪಡೆದುಕೊಂಡು ಕೊನೆಯರಾರೊ ? ದೈವ ಮಡಿಲೊ-
ಲಿಟ್ಟ ತೆರದಿ ಮಗುವ ತಂದು ಕೊಟ್ಟ ನಾಯನಪ್ಪಿ ಬೆನ್ನ
ತಟ್ಟದವರದಾರೊ? ಕಟ್ಟಿ ಹೊಡೆದ ಕುರುಡರಿಂಗೆ ಕಣ್ಣ
ಕೊಟ್ಟು, ಸೇವೆಗೊಂದು ಮೇಲುಮಟ್ಟವಿಟ್ಟ ಗುಣವ ಮನದ
ತೊಟ್ಟಿಲಲ್ಲಿ ತೂಗಿ ಹಾಡದಿರುವರಾರೊ? ಕೊಬ್ಬಿ ಬೆಳೆದ
ಮಲ್ಲರೆಲ್ಲ ಸೊಂಟದಲ್ಲಿ ಕೈಯನಿಟ್ಟು ಕಣ್ಣ ಬಿಟ್ಟು 310
ಹಲ್ಲ ಕಿರಿಯುವಾಗ, ಬೆಂಕಿಯಲ್ಲಿ ಬೇಟೆಯಾಡಿ ಗೆಲವ
ತಂದ ಪಶುವಿನೊಂದು ಶೌರ್ಯಕಾರೊ ಮೆಚ್ಚದಿಹರು ? ಬೆರಳ-
ನಾರೊ ಕಚ್ಚದಿಹರು? ಮನುಜರೆಂಬ ಹೆಮ್ಮೆ ಮುಚ್ಚದಿಹರು?

ಬೀಡು ಬೂದಿಯಾಯ್ತು, ಎದೆಯ ಕಾಡದೆಲ್ಲ ಹೊತ್ತಿಹೋಯ್ತು;
ತಾನು ಜೀವಹಿಂಡಿದೊಂದು ನಾಯಿ ತನಗೆ ಜೀವಮಣಿಯ
ದಾನಮಾಡೆ ದೀನನಾದನಾಳ್ವ; ತನ್ನ ಪಶುತೆಗಾಗಿ
ಬೇಯುತೆಂದ:- “ಚಂದು ! ನೀನು ನಾಯಿಯಲ್ಲ, ದೇವಲೋಕ-
ಭೋಗಿ! ಆವ ಜನ್ಮದೇನೊ ಪಾಪಲೇಶಕಾಗಿ ಶಾಪ-
ಭಾಗಿಯಾದೆ ! ಬವಣೆಗೊಳಿಸಿದುದಕೆ ನಿನ್ನ ಬಂಡಿಯೆಳೆವ
ಹೋರಿಯಾಗಿ ಹುಟ್ಟದಿಹೆನೆ? ಪಾದರಕ್ಷೆಯಾಗದಿಹೆನೆ? 320
ಆದರಘವು ಮುಗಿಯಲುಂಟೆ? ನಿನ್ನ ಮನೆಯ ಮೆಟ್ಟಿಲಾಗಿ
ನೂರು ವರ್ಷವಿದ್ದರೇನು, ಪಡೆದ ಋಣವ ಸಲಿಸಲುಂಟೆ?
ಬಾರೊ, ಚಂದು ! ನಿನ್ನ ಮೂಲದಾಳು ಗುಮ್ಮಣಾಳ್ವ್ಪನಿಂದು!
ಹೀನನೆಂದು ತೊಲಗಬೇಡ ! ಬಾರೊ, ಬಾರೊ!” ಎಂದು ತನ್ನ
ತೋಳನಗಲಿಸುತ್ತ ಮುಂದೆ ಸಾರಿ ತಬ್ಬಿಕೊಂಡನೆದೆಗೆ ;
ಮೀರಿ ಹರಿವ ಭಾಷ್ಪದಲ್ಲಿ ತೋಯಿಸಿದನು ಮೆಯ್ಯನೆಲ್ಲ.

*****

ಗಾಳಿ ತರಗೆಲೆಗಳ ತೂರಿ ಹಾರಿಸುತ್ತಲೂರಲೆಲ್ಲ
ರೋದಿಸುತ್ತಲಿತ್ತು. ಚಂದು ಕಿಚ್ಚ ಗೆದ್ದಿತೆಂಬ ಮಿಂಚು
ಬೀಸುತಿತ್ತು; ಒಡನೆ ದುಃಖವಾರ್ತೆ ಗುಡುಗಿ ನಡುಗಿಸಿತ್ತು;
ಕೇಳಿ ಊರ ಜನವೆ ಮರುಗಿ ಸೆಟ್ಟಿಯೆಡೆಗೆ ಧಾವಿಸಿತ್ತು. 500
ನೋಡಿದತ್ತ ಕತ್ತಲನ್ನೆ ಕಾಣುತಿದ್ದ ಸೆಟ್ಟಿಗಾಗ
ಶೋಕದಗ್ಧವಾಗಿ ಬರುವ ಮಂದಿಯೆಲ್ಲ ಕೊಳ್ಳಿದೆವ್ಚ-
ದಾಟದಂತೆ ತೋರುತಿತ್ತು. ಆದರಲ್ಲಿ ತಾಪಯೋಗ-
ದೇರುಗದ್ದುಗೆಯ ಮಹಾಸಮಾಧಿಯಲ್ಲಿರಲ್ಕೆ ಸೆಟ್ಟಿ,
ಮೌನಭಂಗವೆಸಗೆ ಧಾರ್ಷ್ಟ್ಯವಾರಿಗೆಂತು ಬಹುದೊ ? ದುಃಖ-
ದೋಷವಾವರಿಸಿದ ಮೊಗವ ನೋಡಿ ಮಾನಿನಿಯನು ಲಜ್ಜೆ-
ಗೀಡುಮಾಳ್ಪ ಖೋಡಿಯಾವನಹನೊ ? ತಮ್ಮ ಹಳ್ಳಿಯೂರ
ತಾಯಿಯಲ್ಲಿ, ತಂದೆಯಲ್ಲಿ,. ತಪ್ಪ ಹೆಕ್ಕಿ ನುಡಿವನಿಹನೊ?

ನೋಡಲೇಕೊ ಚಂದುವಿರವ? ನೀತಿನಿರ್ಮಲಾಂಬುವಿನಲಿ
ಬಾಳೆಯಂತೆ ಹೊಳೆಯುತಿದ್ದ ಸೆಟ್ಟಿಯೆದೆಯೆ ಹಿಂಸೆಯೆಂಬ 510
ಗಾಳದಲ್ಲಿ ಸಿಲುಕಿ ನೆಲಕೆ ಬೀಸೆ ಬಿದ್ದ ತೆರದಲಿಹುದ !
ಕಂಡು ಕಣ್ಣ ಮುಚ್ಚಿ, ಜಗವ ಮುಂದಲೆಯಲಿ ಹಿಡಿದು ಕುಣಿವ
ಚಂಡವಿಧಿಗೆ ಬೆಚ್ಚಿ, ಮೊಗವ ತಿರುಹಿ, ಮೋರೆ ಮೋರೆ ನೋಡಿ-
ಕೊಂಡು ತಮ್ಮ ಮನದ ನೆಳಲನನ್ಯಮುಖಕೆ ಕೊಟ್ಟು ಕೊಂಡು,
ಮೆಲ್ಲಮೆಲ್ಲನಡಿಯನೆತ್ತಿ, ಬಂದ ನೆರವಿ ಬರಿಯಿತೆಲ್ಲ.

ಅನಿತರಲ್ಲಿ ಗುಮ್ಮಣಾಳ್ವನಿತ್ತ ಹಲವ ಹಂಬಲಿಸುತ
ಮಸಣದಂತೆ ತೋರುತಿದ್ದ ಮನೆಯ ಬೂದಿಗೆದರಿ, ಸುಟ್ಟ
ಸಿರಿಯ ಶೇಷಗಳನು ಉರಿವ ಬಿಸಿಲಿನಲ್ಲಿ ಹೆಕ್ಕುತಿರಲು,-
ಮನದ ಬೇಗೆಯಿಮ್ಮಡಿಸಿತು, ತನ್ನ ಹಲವು ಕಿಡುಗೆಲಸದ
ನೆನಹಿನೊಂದು ನಂಜು ನಾಲ್ಮಡಿಸಿತು; ಬಳಿಕ, ಮಾನ ಮುಚ್ಚ- 520
ಲೆನುತ ಮುಸುಡನಡಗಿಸಿದುದರಿಂದ, ಪಡೆದ ತಾಯ ತೆರದ
ಬಡವು ಚಂದು ಮಡಿದು ಹೋಯಿತೆನುತ ಸಿಡಿದ ಸುದ್ದಿ ಕಿವಿಯ
ನೊಡೆದು ಹೊಕ್ಕು, ಚುರುಚುರೆನುತ ಎದೆಯ ಹೀರಿ, ಕಣ್ಣುಗಳನು
ಗರಗರೆನುತ ತಿರುಗಿಸಿತ್ತು, ಕೆಡೆಯಿಸಿತ್ತು; ತನ್ನ ಬಂಧು–
ಬಳಗವೆಲ್ಲ ರೋದಿಸಿತ್ತು; ಬಳಿಕ ಎಚ್ಚರಾಗಲೆದ್ದು–
“ಮನೆಯ ತಿಂದ ಮೃತ್ಯುವೆನ್ನ ಅಗಿದು ನುಂಗದುಗುಳಿತಲ್ಲ !
ಅದುವೆ ಹೇಸಿದೊಡಲ ತೊಳೆವ ಕರುಣೆ ಬೇರದಾರಿಗಿಹುದೊ?
ನಡೆವೆ, ಸೆಟ್ಟಿಯಡಿಗೆ ಬೀಳ್ವೆ; ಅವನ ನಾಯಿಗಾಗಿ ಬಾಳ್ವೆ!’
ಎನುತದೆಂತೊ ಬಂದ ; ಶೋಕತೀರ್ಥದಲ್ಲಿ ಮುಳುಗಿ ಮಿಂದ !

*****

ಬಂದು ಹೋದ ಮಂದಿ ಹೊತ್ತ ದುಗುಡವೆಂಬ ಹೊರೆಗೆ ಸುಂಕ- 530
ವೆಂದು ಸುಯ್ದ ಸುಯ್ಯೆ ಸುಳಿಯುತಿಹುದ; ತನ್ನ ಕೊಂದ ಕೊಲೆಗೆ
ನೊಂದು ಬೆಂದ ಸೆಟ್ಟಿಯೆದೆಯು ಬಾತುಹೋಗಿ, ಲೋಹದೊಂದು
ಗುಂಡ ಕಾಸಿ ಬಡಿವ ತೆರದಿ ಬಡಿಯುತಿಹುದ; “ಚಂದು, ಚಂದು !”
ಎಂದು ಕರಗಿ ಕಣ್ಣನೀರ ಗಿಂಡಿಯಾದ ಪದ್ಮವತಿಯ
ದುಂಡುಮೊಗವ ; ಜಗಲಿಯಡ್ಡ ಕಂಡಿಯಲ್ಲಿ ಕೊನೆಯ ತೂರಿ
ಒಂದೆ ಒಂದೆ ಉದುರಿ ಬಿದ್ದು ಕಂದಿಹೋಗುತಿರುವ ಹೂವಿ
ನೊಂದು ಪಾರಿಜಾತಗಿಡವ – ಕಂಡು ಮನೆಗೆ ಕತ್ತಲಾಯ್ತು |

*****

ಗ್ರಹಣಗೊಂಡು ಮುಳುಗುತಿರುವ ಶಶಿಯ ತೆರದಿ, ಚಂದುವೊಡಲ
ನೆದೆಯೊಳಪ್ಪಿ ಕಾಣುತಿದ್ದ ಬಳಿಯ ಬೋಳುಗುಡ್ಡದೊಂದು
ಹೊಡೆಯಲಿದ್ದ ಸೆಟ್ಟಿ, ಅಲ್ಲೆ ಮಡಗಿ ತನ್ನ ಜೀವನಿಧಿಯ; 540
ಬಳಿಕ ಕಲ್ಲ ಕಡಿದು ಕೆತ್ತಿ ಕಟ್ಟಿಸಿದನು – ತನ್ನ ಕಣ್ಣ
ಕೆರೆಗೆ ಕಟ್ಟೆಯಂತೆ — ಕಿರುಸಮಾಧಿಯೊಂದನಲ್ಲಿ ; ಬಳಿಯೆ
ತನಗೆ ಮಲಗಲಿರುವ ನೆಲವ ಗುರುತಿಸಿದನು. ದಿನದಿನದಲಿ
ಬೆಳಗುಜಾವದಲ್ಲಿ ಬಂದು ಇರುಳ ಶೋಕಸಂಚಯವನು
ಸುರಿಯುತಿಹನು ; ತಂದ ನಾಲ್ಕು ಉದಿರುಹೂವನಿಟ್ಟು, ಹಿಂದೆ
ತಿರುಗಿ-ತಿರುಗಿ ನಿಂದು – ನಿಂದು ನೋಡಿ – ನೋಡಿ ತೆರಳುತಿಹನು.
ಸಂಜೆಯಲ್ಲಿ ಸಣ್ಣ ಹಣತೆಯೊಂದ ಕೊಂಡು, ಸುಳಿವ ಮೀಂಬು-
ಳೆಂಬ ತೆರದಿ ಗುಡ್ಡವೇರಿ, ವಿಧಿಯ ಶಾಪದಿಂದ ಕಲ್ಲ
ಕೊಂಪೆಯಾದ ತನ್ನ ಪುಣ್ಯರಾಶಿಯೆಡೆಗೆ ಬಂದು, ನಿಂದು,
ತಂದ ಜೋತಿಯೊಪ್ಪಿಸುವನು. – ಕಂದಿ ಕಂದಿ ಕರಿಕುವದರ 550
ಮಂದ ಕಾಂತಿಯೊಡನೆ ಜೀವ ಕುಂದಿ ಕುಂದಿ ಬಂತು; ಆಯು
ಬಿಂದುಬಿಂದುವಾಗಿ ಗಲಿತವಾಯ್ತು, ಶೂನ್ಯಲೀನವಾಯ್ತು!

*****
ಜ್ಞಾತಿವಧೆಯ ದೋಷಭಯ ವಿವೇಕವನ್ನು ಕೆಡಿಸಲಂದು
ದೇಶದೇಶಗಳನೆ ಗೆದ್ದು ತನಗೆ ತಂದು ಕುದುರೆಯೊಂದ
ದ್ವಾಪರದಲಿ ಧರ್ಮರಾಯ ‘ಧರ್ಮ ! ಧರ್ಮ!’ ಎಂದು ಕೊಂದ-
ನಾದರೆರಡು ಕಣ್ಣನೀರ ಹನಿಯು ಕೂಡ ಅದಕೆ ದೊರೆವ
ಯೋಗವಿತ್ತೆ ? ಮಾತು, ನೀತಿ ಮೀಸಲಳಿದುವೆಂಬ ಶಂಕೆ
ಬಾಧಿಸಲ್ಕೆ ಸೆಟ್ಟಿ ಕೊಟ್ಟ ಬಲಿಯದಾಗಿ ಹೋಯ್ತು ಚಂದು.
ಅದರೇನು ? ಕೊಂದ ಕೊಲ್ಲದೆಲ್ಲ ಮಂದಿ, ಹಿಮಗಿರಿಯಲಿ
ಜಾರಿ ಬೀಳ್ವನಂತವಾರಿಧಾರೆಯಂತೆ ಸುರಿದಖಂಡ-
ಶೋಕಧಾರೆ ಯಜ್ಞಪಶುಗಳಗ್ರಪಟ್ಟಗಟ್ಟಿತಲ್ತೆ !
ನಾಯದೆಂಬ ಮಾತ ಮುಚ್ಚು ! ನರರ ಹೆಕ್ಕಳಿಕೆಯ ಕೊಚ್ಚು.
ರಾಗರೋಷಗಳನು ಹಿಡಿವ ಬಲ್ಮೆಗಳನು ಒರೆಗೆ ಹಚ್ಚು !

(1935)
(ಟಿಪ್ಪಣಿ: ನರಿಮೊಗರು – ದಕ್ಷಿಣಕನ್ನಡದ ಒಂದು ಹಳ್ಳಿ)

ಈ ಸಣ್ಣ ಕಾವ್ಯ ಕನ್ನಡದ ಶ್ರೇಷ್ಠ ರಚನೆಗಳಲ್ಲೊಂದು. ಇದರ ವರ್ಣನೆಯ ಸೊಗಸು, ಮನುಷ್ಯ ಸ್ವಭಾವದ ಸೂಕ್ಷ್ಮ ಅವಲೋಕನ, ಮಾನವೀಯವಾದ ಮತ್ತು ಜನಪರವಾದ ನಿಲುವು ಇವುಗಳಿಗೆ ಸರಿಸಾಟಿಯಾದ ಕಾವ್ಯಗಳು ಅಪೂರ್ವ. ಉದಾಹರಣೆಗೆ, ಮಕ್ಕಳಿಲ್ಲದ ದಂಪತಿಗಳು ಪುಟ್ಟ ನಾಯಿ ಮರಿಯನ್ನು ಮುದ್ದಿನಿಂದ ಸಾಕಿದ ಪರಿಯನ್ನು ಸೇಡಿಯಾಪು ಅವರು ವರ್ಣಿಸಿರುವ ಭಾಗ ಹೃದಯಂಗಮವಾಗಿದೆ. ಈ ಕಾವ್ಯದಲ್ಲಿ ಅಲ್ಲಲ್ಲಿ ಮಾನವನ ಬಾಳಿಗೆ ಮಾರ್ಗದರ್ಶಕವಾದ ನಡತೆಯ ಮಾದರಿಗಳಿವೆ. ಉದಾಹರಣೆಗೆ, ಗುಮ್ಮಣಾಳ್ವನು ತನ್ನ ಜೀತದಾಳಿಗೆ ಹೊಡೆಯುತ್ತಿರುವಾಗ ಆ ದಾರಿಯಾಗಿ ತನ್ನ ನಾಯಿಯೊಂದಿಗೆ ಹೋಗುತ್ತಿದ್ದ ಸೆಟ್ಟಿಯು ಅವನನ್ನು ತಡೆಯುವುದು; ಆಳ್ವನು ಹಂಗಿಸುವುದು; ಸೆಟ್ಟಿಯು ಮಾನವತೆಯ ಘನತೆಯನ್ನು ಉಳಿಸಲೋಸುಗ ಪಂಥಾಹ್ವಾನವನ್ನು (ತುಳುನಾಡಿನಲ್ಲಿ ‘ಪಂತ’ ಎನ್ನುವ ಪದ ಬಳಕೆಯಿದೆ) ಸ್ವೀಕರಿಸಿ, ತನ್ನಲ್ಲಿದ್ದ ಚಿನ್ನವನ್ನೆಲ್ಲ ಆಳ್ವನಿಗೆ ಕೊಟ್ಟು ಜೀತದಾಳನ್ನು ಜೀತಮುಕ್ತನನ್ನಾಗಿಸಲು ಮುಂದಾದದ್ದು, ಆ ಚಿನ್ನ ಸಾಲದೆಂದು ಆಳ್ವ ಹೇಳಿದಾಗ ಉಳಿದ ಹಣವನ್ನು ಸಂಪಾದಿಸಿ ತಂದು ಕೊಡುವೆನು ಎಂದು ಹೇಳಿ, ಅಲ್ಲಿಯವರೆಗೆ ತನ್ನ ಮುದ್ದಿನ ನಾಯಿಯನ್ನು ಅಡವು ಇಟ್ಟದ್ದು – ಇವೆಲ್ಲ ಈ ಸನ್ನಿವೇಶವಕ್ಕೆ ಪುರಾಣಸದೃಶ ಔನ್ನತ್ಯವನ್ನು ಕೊಟ್ಟಿವೆ. ಉದಾತ್ತ ಭಾವ ಎಲ್ಲಿಯೂ ಹುಟ್ಟಬಲ್ಲದೆನ್ನುವುದೇ ಈ ಕಾವ್ಯದ ಒಂದು ಸಂದೇಶವಲ್ಲವೇ? ಪ್ರಾರಂಭದ ಸಾಲುಗಳೇ ಅದನ್ನು ಧ್ವನಿಸುತ್ತವೆ. ಈ ಕಾವ್ಯದಲ್ಲಿ ಮಾನವ ಸ್ವಭಾವದ ಸೂಕ್ಷ್ಮಗಳನ್ನು ಸೇಡಿಯಾಪು ಹಿಡಿದಿರುವುದಕ್ಕೆ ಒಂದು ಉದಾಹರಣೆ: ಮಗುವನ್ನು ಉರಿಯುವ ಮನೆಯಲ್ಲಿ ಬಿಟ್ಟು ಹೊರಗೆ ಓಡಿಬಂದಿದ್ದ ತಾಯಿ ತನ್ನ ತಪ್ಪನ್ನು ಎಲ್ಲರಿಗೂ ಹಂಚುತ್ತಾಳಂತೆ! “ಮಗಳ ಮರೆದು ಬಂದ ತಪ್ಪ ಸಿಕ್ಕಿದವರಿಗೆಲ್ಲ ಹಂಚಿ…” ಎಂದು ಕವಿ ವರ್ಣಿಸಿದ್ದಾರೆ.

ಮುಳಿಯ, ಕಡೆಂಗೋಡ್ಲು, ಸೇಡಿಯಾಪು ಮೂವರೂ ಶ್ರೀಮಂತ ಮನೆಗಳಿಂದ ಬಂದವರಲ್ಲ; ಆರ್ಥಿಕವಾಗಿ ಕಷ್ಟದಲ್ಲಿದ್ದ ಕುಟುಂಬಗಳಿಂದಲೇ ವಿದ್ಯೆಯನ್ನು ಅರಸಿಕೊಂಡು ಬಂದವರು. ಬಡವರ ಬದುಕಿನ ಬಗ್ಗೆ ಅನುಕಂಪವನ್ನು ಹುಟ್ಟಿಸುವ ಹಾಗೆ ಬರೆಯಲು ಅವರೆಲ್ಲರಿಗೂ ಭಾವಪ್ರಧಾನವಾದ ಕಾವ್ಯವೇ ಸರಿಯಾದ ಮಾಧ್ಯಮ ಎಂದು ಅನಿಸಿತ್ತು.

ಕೃಷ್ಣಾಕುಮಾರಿ

‘ಕೃಷ್ಣಾಕುಮಾರಿ’ ಎಂಬುದು ರಾಜಸ್ಥಾನದ ರಜಪೂತ ರಾಜಕುಮಾರಿಯೊಬ್ಬಳ ವೀರಗಾಥೆ. ಇದು ಭಾಮಿನಿ ಷಟ್ಪದಿಯಲ್ಲಿದೆ; ಕೆಲವು ಪದ್ಯಗಳಲ್ಲಿ ಪ್ರಾಸವನ್ನು ಬಿಟ್ಟಿದ್ದಾರೆ. ಕೃಷ್ಣಾಕುಮಾರಿಯ ತಂದೆ ಅವಳನ್ನು ರಕ್ಷಿಸಲು ತನಗೆ ಸಾಮರ್ಥ್ಯವಿಲ್ಲವೆಂದು ಹೇಡಿಯಂತೆ ಅವಳಿಗೆ ವಿಷ ಕೊಟ್ಟು ಸಾಯಿಸಲು ಮುಂದಾಗುತ್ತಾನೆ. ಅವಳು ಅದನ್ನು ಕುಡಿಯದೆ ತಾನು ಹೋರಾಡಿ, ತನ್ನನ್ನು ಕೆಣಕಬಂದವರನ್ನು ಕೊಂದು ತಾನು ಸಾಯುವೆನೆಂದು ಧೀರಳಾಗಿ ನುಡಿಯುತ್ತಾಳೆ.

ಗಂಡುಗಲಿಗಳು ನಲಿನಲಿದು ರಿಪು
ರುಂಡಗಳ ಚೆಂಡಾಡೆ, ಪಂಕಜ
ಷಂಡದಲಿ ಜಲದೇವಿ ನರ್ತಿಸುವಂತೆ, ಧಗಧಗಿಪ
ಕುಂಡದಲಿ ಕುಣಿಕುಣಿದು ಪುಲಕದ
ತಂಡ ಬೆವರಲಿ ತುಳುಕೆ, ವಿಲಯದ
ತಾಂಡವವ ತುಳಿದಾಡಿ ಪದ್ಮಿನಿಯೆಡೆಗೆ ನಡೆಯುವೆನು!

ಕೊನೆಗೂ ಮಗಳನ್ನು ಮೋಸದಿಂದ ಬಲಿಕೊಟ್ಟ ತಂದೆ, ‘ಕುಂಪನಿಯ ಉಂಬಳಿಯ ಅಂಬಲಿಯನ್ನು ಕೈಮುಗಿದು’ ಪಡೆದುಕೊಂಡು ಸಾಮಂತನಾಗಿ ಬಾಳಿದನು. ಕೊನೆಯ ಚರಣ ಹೀಗಿದೆ.

ಮೊದಲೊಬ್ಬ ಕನೋಜ ನೃಪ ಮಗ-
ಳೆದೆಗೆ ಶೂಲವನಿಕ್ಕಿ ಸ್ವಾತಂ-
ತ್ರ್ಯವನು ಘೋರಿಗೆ ಮಾರಿ ಸತ್ತನು; ಮತ್ತೆ ಮರುಹುಟ್ಟ
ಪಡೆದು, ಮಗಳನು ತಿಂದು, ಮಾನವ
ಹುಗಿದು, ಬದುಕಲು ಕುಂಪನಿಯ ಬಾ-
ಯುಗುಳ ನುಂಗಿದನವನೆ ನಿಜ! ಇತರಂಗಿದರಿದರಿದು!!

ಇದು ಪ್ರಕಟವಾದದ್ದು 1939ರಲ್ಲಿ, ಮಿತ್ರಮಂಡಳಿಯ ‘ನಮ್ಮ ಕವಿತೆಗಳು’ ಸಂಕಲನದಲ್ಲಿ. – ಈ ಸಾಂಕೇತಿಕ ಕವಿತೆಯನ್ನು (ಇಲ್ಲಿನ ರಾಜರುಗಳು ನಾಡಿನ ರಕ್ಷಣೆಯನ್ನು ಮಾಡದೆ ಹೇಡಿಗಳಾಗಿ ಬ್ರಿಟಿಷರಿಗೆ ಒಪ್ಪಿಸಿ, ಅವರು ಕೊಟ್ಟ ರಾಜಧನ (ಉಂಬಳಿ)ಯನ್ನು ಪಡೆದುಕೊಂಡು ಹೇಡಿಗಳಾಗಿ ಬಾಳುತ್ತಿದ್ದಾರೆ ಎಂಬುದರ ಸಂಕೇತ ಈ ಕಥೆ) ಸೇಡಿಯಾಪು ಅವರು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿಯೆ ಬರೆದು ಪ್ರಕಟಿಸಿದುದು ವಿಶೇಷವಾಗಿದೆ. ಕೇವಲ 17 ಪದ್ಯಗಳ ಇದನ್ನು ಕಥನ ಕವನ ಎನ್ನಬಹುದು. ಸಣ್ಣಕಾವ್ಯವೆಂದು ಹೇಳುವುದು ಸಮಂಜಸವಾಗದು.

ಪುಣ್ಯಲಹರಿ ಅಥವಾ ಶಬರಿ

‘ಪುಣ್ಯಲಹರಿ ಅಥವಾ ಶಬರಿ’ ಎಂಬುದು ರಾಮಾಯಣದ ಶಬರಿಯ ಕಥೆಯನ್ನು ತಮ್ಮ ಕಲ್ಪನೆಯಿಂದ ವಿಸ್ತರಿಸಿ ಹೃದಯಸ್ಪರ್ಶಿ ಕಟ್ಟಿರುವ ಸಣ್ಣ ಕಾವ್ಯ. ಬಹುಪ್ರಾಚೀನವಾದ ಪಿರಿಯಕ್ಕರ ಎಂಬ ಛಂದಸ್ಸಿನಲ್ಲಿ ಇದು ರಸವತ್ತಾಗಿ ವರ್ಣಿತವಾಗಿದೆ. ಸೇಡಿಯಾಪು ಅವರ ಕಾವ್ಯಶಕ್ತಿ ‘ಶ್ವಮೇಧ’ದಲ್ಲಿರುವಂತೆ ಇಲ್ಲಿಯೂ ಉನ್ನತ ಮಟ್ಟದಲ್ಲಿದೆ. ಆದರೆ ಕಥಾವಸ್ತು ವಾಸ್ತವಕ್ಕಿಂತ ಆದರ್ಶದ ಕಡೆಗೆ ಹೆಚ್ಚು ವಾಲಿರುವುದರಿಂದ ರಸಪ್ರತೀತಿ ಸ್ವಲ್ಪ ಹಿಂದುಳಿಯುತ್ತದೆ.

ಈ ಸಣ್ಣಕಾವ್ಯದಲ್ಲಿ ಕಲ್ಪನೆಯ ಹೊಸತನವನ್ನೂ, ಬೋಧನೆಯ ಅಂಶಗಳನ್ನೂ ಕಾಣಬಹುದು. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಶಬರಿ ಕೇವಲ ವೃದ್ಧ ತಾಪಸಿ, ಮತಂಗ ಋಷಿಯ ಶಿಷ್ಯೆ, ಅವರ ಆಣತಿಯಂತೆ ಶ್ರೀರಾಮನ ದರ್ಶನದವರೆಗೆ ದೇಹತ್ಯಾಗಕ್ಕಾಗಿ ಮತಂಗಾಶ್ರಮದಲ್ಲಿ ಕಾದಿದ್ದವಳು. ರಾಮನ ಅನುಜ್ಞೆ ಪಡೆದು ಅವನ ಸಮ್ಮುಖದಲ್ಲಿಯೇ ಅಗ್ನಿಪ್ರವೇಶ ಮಾಡಿ ದೇಹತ್ಯಾಗ ಮಾಡಿ ಮೋಕ್ಷಪಡೆದವಳು.

ಕಂಬ ರಾಮಾಯಣ ಇತ್ಯಾದಿ ಮರುಸೃಷ್ಟಿಗಳಲ್ಲಿ ಶಬರಿಯು ನಿಜವಾಗಿ ‘ಮಾಲಿನಿ’ ಎನ್ನುವ ಗಂಧರ್ವ ಸ್ತ್ರೀ; ಗಂಡನಿಗೆ ಆಕೆ ಪರಪುರುಷನತ್ತ ಆಕರ್ಷಿತಳಾದಳೆಂಬ ಅಸಹನೆಯುಂಟಾಗಿ ಶಾಪಕ್ಕೆ ತುತ್ತಾಗಿ (ಅಹಲ್ಯೆಯಂತೆ) ಬೇಡ ಯುವತಿಯಾಗಿ – ‘ಶಬರಿ’ (ಬೇಟೆಗಾತಿ)ಯಾಗಿ – ಭೂಮಿಗೆ ಬರಬೇಕಾಯಿತು. ಅಥವಾ ಪುನರ್ಜನ್ಮ ಪಡೆಯಬೇಕಾಯಿತು. ತನ್ನ ಮದುವೆಯ ಸಂದರ್ಭದಲ್ಲಿ ನೂರಾರು ಆಡು, ಕುರಿಗಳನ್ನು ಕೊಚ್ಚಿ ಔತಣ ಮಾಡುವುದನ್ನು ಕಂಡು ಹೇಸಿ, ಮನೆಬಿಟ್ಟುಹೋಗಿ ಮತಂಗ ಮುನಿಯ ಆಶ್ರಮದಲ್ಲಿ ಸೇವೆ ಮಾಡಿಕೊಂಡಿದ್ದಳು. ಶ್ರೀರಾಮನ ದರ್ಶನದಿಂದ ಅವಳ ಪಾಪ ಪರಿಹಾರವಾಗುವುದೆಂಬ ಪರಿಹಾರ (ಶಾಪದ ಸಂದರ್ಭದಲ್ಲಿಯೇ) ಹೇಳಲ್ಪಟ್ಟಿತ್ತು. ಮತಂಗ ಮುನಿಗಳ ಆಶ್ರಮದಲ್ಲಿದ್ದಾಗ ಅಲ್ಲಿಗೆ ಬಂದ ಶ್ರೀರಾಮನನ್ನು ಉಪಚರಿಸಿ, ಸವಿಯಾದ ಹಣ್ಣುಗಳನ್ನು ಕಚ್ಚಿ ರುಚಿ ನೋಡಿ ಕೊಡುವ ಮುಗ್ಧತೆಯ ಕಥೆಗಳೆಲ್ಲ ಈ ಪಾಠಾಂತರ ಕವಿಗಳ ಸೃಷ್ಟಿ (ಸೇಡಿಯಾಪು ಅವರಲ್ಲಿಯೂ ಇದು ಇದೆ). ಅವನಿಗೆ ತನ್ನ ದಿವ್ಯಜ್ಞಾನದಿಂದ ಮುಂದಿನ ಮಾರ್ಗದರ್ಶನನವನ್ನು ಮಾಡಿ (ಸುಗ್ರೀವನನ್ನು ಭೇಟಿಯಾಗುವಂತೆ ಹೇಳಿ) ತನ್ನ ಮಾನುಷ ರೂಪವನ್ನು ಕಳೆದುಕೊಂಡು ಗಂಧರ್ವಸ್ತ್ರೀಯಾಗಿ ಬದಲಾಗಿ ತನ್ನ ಗಂಡನನ್ನು ಸೇರುತ್ತಾಳೆ.

‘ಪುಣ್ಯಲಹರಿ’ಯಲ್ಲಿ ಇರುವ ಕಥೆ ಯಾವುದೋ ಪಾಠಾಂತರದಲ್ಲಿ ಇರುವಂತಹದೇ. ಆದರೆ ಅವಳ ಪೂರ್ವಜನ್ಮದ ಬಗ್ಗೆ ಅವರು ಉಲ್ಲೇಖಿಸುವುದಿಲ್ಲ ಮತ್ತು ಅವಳ ಮರಣದ ಬಗ್ಗೆ ಸ್ಪಷ್ಟವಾಗಿ ಹೇಳುವುದಿಲ್ಲ.

ಬೇಡ ರಾಜನ ಮಗಳಾದ ಭಿಲ್ಲ ಯುವತಿ ಶಬರಿ, ತನ್ನ ಮದುವೆಯ ಸಂದರ್ಭದಲ್ಲಿ ಪ್ರಾಣಿವಧೆಯನ್ನು ಕಂಡು ಹೇಸಿ, ಮನೆಬಿಟ್ಟು ಹೋಗುತ್ತಾಳೆ. ಮದುವೆಯ ಹಿಂದಿನ ರಾತ್ರಿ ಯಾರಿಗೂ ತಿಳಿಯದಂತೆ ಮನೆಬಿಟ್ಟು ಹೋಗಿ, ಮನಃಶಾಂತಿ ಇಲ್ಲದೆ ಅಲೆಯುತ್ತಿದ್ದಳು. ಅವಳಿಗೆ ಒಬ್ಬ ಋಷಿ ಶ್ರೀರಾಮ ದೀಕ್ಷೆಯನ್ನು ನೀಡುತ್ತಾನೆ. (ಅವನಿಗೆ ಸೇಡಿಯಾಪು ಹೆಸರು ಕೊಡುವುದಿಲ್ಲ). ಶಬರಿ ರಾಮನ ಬರುವಿಕೆಗಾಗಿ ಕಾಯುತ್ತಾಳೆ. ಕೊನೆಗೂ ಶ್ರೀರಾಮನ ಅನುಗ್ರಹಕ್ಕೆ ಪಾತ್ರಳಾಗುತ್ತಾಳೆ. ‘ಪುಣ್ಯಲಹರಿ’ಯಲ್ಲಿ ತೇಲುತ್ತಾಳೆ ‘ಶಬರಿ’.

“ಭಿಲ್ಲನಂದಿನಿಯ ಬೋಧವಖಿಲಬ್ರಹ್ಮಾಂಡಬುದ್ಬುದಗಳು ತೇಲುವಾನಂಅರಸವ ಕಂಡಿತು! ಜೀವ ಜಳಜಳಿಸಿತು, ದೇಹ ಕರ್ಪುರವಾಗಿತೆ, ಮಂಗಳಾರತಿಯೊಪ್ಪಿತು! ….. ಪರಂಜ್ಯೋತಿಯ ತೇಜದೊಂದೆಸಳಾಗಿ, ನಿತ್ಯಾನಂದಲೀಲೆಯ ನವಮಂದಹಾಸವಾಗಿ, ಕೇವಲ ಬ್ರಹ್ಮರಸವಾಗಿ ಪರಿಪೂರ್ಣವಾದಳಾದಳು ಸತ್ಯ-ಶಿವ-ಸುಂದರಿ!”

ಹೀಗೆ ಕೊನೆಯಲ್ಲಿ ಶಬರಿ ಏನಾದಳೆನ್ನುವುದು ಅಸ್ಪಷ್ಟವಾಗಿದೆ. ಸಂದಿಗ್ಧವಾಗಿರುವುದು (ನವ್ಯ ವಿಮರ್ಶಕರು ಮೆಚ್ಚುವ ಆಂಬಿಗ್ವಿಟಿ) ಒಂದು ಕವಿತೆಯ ಅರ್ಥವನ್ನು ಹೆಚ್ಚಿಸುತ್ತದೆ; ಆದರೆ ಅಸ್ಪಷ್ಟವಾಗಿರುವುದು ಒಂದು ದೋಷವಾಗುತ್ತದೆ. ಆದರೆ ಇಲ್ಲಿ ದೋಷ ಎನ್ನುವಂತಿಲ್ಲ; ಯಾಕೆಂದರೆ ಕವಿಗೆ ಶಬರಿ ಕೊನೆಗೆ ಹೇಗೆ ಪ್ರಾಣ ತೊರೆದಳೆನ್ನುವುದನ್ನು ಹೇಳುವ ಉದ್ದೇಶವಿಲ್ಲ; ಅವಳು ತನ್ನ ಆತ್ಮವನ್ನು ಕರ್ಪೂರದಂತೆ ಬೆಳಗಿಸಿ ಶ್ರೀರಾಮನಿಗೆ ಮಂಗಳಾರತಿಯೆತ್ತಿದಳು ಎಂಬ ಕಾವ್ಯಾತ್ಮಕ ವರ್ಣನೆಯಷ್ಟೆ ಈ ಸಾಲಿನ ಉದ್ದೇಶ ಎಂದು ವಾದಿಸಲು ಅವಕಾಶವಿದೆ.

ಗಾಂಧೀಜಿಯವರ ತತ್ತ್ವಗಳಿಂದ ಪ್ರಭಾವಿತರಾಗಿ ಅಹಿಂಸೆಯನ್ನು ಬೋಧಿಸುವಂತಿರುವ ಈ ಕತೆಯಲ್ಲಿ ವಾಸ್ತವದ ಅಂಶ ಕಡಿಮೆ. ಬೇಡನ ಮಗಳಾದ ಶಬರಿ ಪ್ರಾಣಿಹಿಂಸೆಗೆ ಹೇಸಿದಳೆನ್ನುವುದು (ಮದುವೆಯ ಹೊತ್ತಿಗಷ್ಟೇ ಪ್ರಾಣಿ ವಧೆ ನೋಡಿದಳೆನ್ನುವುದು) ಸಹಜವಾಗಿ ಕಾಣುವುದಿಲ್ಲ ಎಂದು ಸುಬ್ರಾಯ ಚೊಕ್ಕಾಡಿಯವರು ಹೇಳುತ್ತಾರೆ. ಅದನ್ನೂ ಒಪ್ಪಬಹುದು. ಈ ಕಥೆ ಹಲವು ಪಾಠಾಂತರಗಳಲ್ಲಿ ಇರುವುದೇ ಆಗಿದೆ. ಸೇಡಿಯಾಪು ಅವರು ಇದನ್ನು ಪ್ರಧಾನ ನೆಲೆಗೆ ತಂದದ್ದನ್ನು ಆಕ್ಷೇಪಿಸಬಹುದು; ಆದರೆ ಅದಕ್ಕೆ ಕಾರಣವೇನಿರಬಹುದು ಎಂದು ಯೋಚಿಸಿದರೆ ಇದು ಗಾಂಧೀಯುಗದ ಸುಧಾರಣಾವಾದಿ ಕಾವ್ಯ ಎಂದು ಹೊಳೆಯುತ್ತದೆ.

ಈ ಪಾಠಾಂತರವನ್ನು ಸೇಡಿಯಾಪು ಅವರು ಬಳಸಿರುವುದು, ಅದರಲ್ಲಿಯೂ ಹಿಂದಿನ ಜನ್ಮದ ಕಥೆಯನ್ನು ತಾರದೆ ಇರುವುದು ಮತ್ತು ಕೊನೆಯಲ್ಲಿ ಆತ್ಮಸಾಕ್ಷಾತ್ಕಾರ ಪಡೆದಳು ಅಥವಾ ಬ್ರಹ್ಮ ಜ್ಞಾನ ಪಡೆದಳು ಎನ್ನುವಂತೆ ಕಾವ್ಯವನ್ನು ಕೊನೆಗೊಳಿಸಿರುವ ಉದ್ದೇಶವನ್ನು ಅಥವಾ ಆಶಯವನ್ನು ಗಮನಿಸಿದರೆ ಅವರಿಗೆ ಗಾಂಧೀಜಿಯವರಂತಹ ಗುರು ಒಬ್ಬರಿಂದ ಸತ್ಪಥವನ್ನು ಕಂಡುಕೊಂಡು ಜನತೆ ಮದ್ಯಪಾನ ಇತ್ಯಾದಿಗಳನ್ನು ಬಿಟ್ಟು, ಉದಾತ್ತ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳುವ ಉದ್ದೇಶವಿದೆ ಅನಿಸುತ್ತದೆ. ಗಾಂಧೀಜಿಯವರ ಸಮಕಾಲೀನರಾದ ನಾರಾಯಣ ಗುರುಗಳು ಕೂಡ ಮದ್ಯಪಾನವನ್ನು ತೊರೆಯಬೇಕೆಂದು ಹೇಳಿದ್ದರು; ಆ ಉದ್ಯೋಗದಲ್ಲಿ ತೊಡಗಿಕೊಂಡಿದ್ದವರು ಅದನ್ನು ಬಿಟ್ಟು ಬೇರೆ ಉದ್ಯೋಗವನ್ನು ಅವಲಂಬಿಸಬೇಕು ಎಂದೂ ಅವರು ಹೇಳಿದ್ದರು. ಶಬರಿಯು ಮದ್ಯಪಾನ ಮಾಡಿ ಗಂಡು ಹೆಣ್ಣುಗಳು ಅಸ್ತವ್ಯಸ್ತವಾಗಿ ಮಲಗಿದುದನ್ನು ಕಂಡು ಕೂಡ ಜುಗುಪ್ಸೆ ಪಟ್ಟುಕೊಂಡಳೆಂದು ಸೇಡಿಯಾಪು ಸೂಚಿಸಿದ್ದಾರೆ. (ಭೀಮಕಾಯದ ಭಿಲ್ಲರು ಮದ್ಯದ ಭಾಜನಗಳನಪ್ಪಿ ಮಲಗಿದರು ತಾಳೆ ಕೆಡೆದಂತೆ; ಕನ್ನೆಯರಲ್ಲಲ್ಲಿ ಕುಣಿವ ಕನಸುಗಳನಪ್ಪಿದರು – ಧೀರೆ ಶಬರಿ ಹೊರಗಾಲಿಟ್ಟಳು!). ತಾಳೆಮರವು ಅಡ್ಡಬಿದ್ದಂತೆ (ಕುಡಿದು) ಮಲಗಿದರು ಎನ್ನುವಲ್ಲಿ ಧ್ವನಿಶಕ್ತಿ ಇದೆ. ತಾಳೆ ಮರದಿಂದಲೇ ಕಳ್ಳು (ನೀರಾ) ಇಳಿಸುವುದಾಗಿದೆ!

ಮಾಂಸಾಹಾರ ಜನತೆಯ ಸಹಜ ಆಹಾರ ಪದ್ಧತಿ, ಅದರ ಬಗ್ಗೆ ಸೇಡಿಯಾಪು ಅವರ ಶಬರಿಯ ಮನನೋಯುವುದಲ್ಲ. ಸಾಮೂಹಿಕ ವಧೆಯನ್ನು ಕಂಡು ಹುಡುಗಿಯ ಮನಸ್ಸಿಗೆ ಆಘಾತವಾಗಿರುವುದು ಸಹಜ. ಆಕೆ ಮಾಂಸಾಹಾರವನ್ನೇ ವರ್ಜಿಸಿದವಳಲ್ಲ, ಕಾಡುಮೃಗಗಳು ಅವರ ಸಹಜ ಆಹಾರ ಎನ್ನುವುದನ್ನು ಸೇಡಿಯಾಪು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಈ ಕಾವ್ಯವನ್ನು ಗಾಂಧೀಯುಗದ ಸುಧಾರಣಾವಾದಿ ಕಾವ್ಯ ಎಂದು ಪರಿಗಣಿಸಬೇಕು.

ಈ ಕಾವ್ಯದ ಕೆಲವು ಭಾಗಗಳನ್ನು ಕೆಳಗೆ ಕೊಡಲಾಗಿದೆ:

ಪುಣ್ಯಲಹರಿ
ಅಥವಾ
ಶಬರಿ
(ಪಿರಿಯಕ್ಕರ)

1
ವಿಂಧ್ಯಾಟವಿಯಲ್ಲಿ ಭಿಲ್ಲರೊಡೆಯನಲ್ಲಿ ಹದಿನಾರು ತುಂಬಿದ ಕನ್ನೆತುಂಬಿ,
ಕಲ್ಲ ಪುತ್ತಳಿ ಜೀವ ನೆತ್ತರು ತುಂಬಿ ನಲಿದಂತೆ ಸುಳಿದಳು ಮನೆಯ ತುಂಬಿ ;
ಮೆಲ್ಲನೊಂದಂಗುಲಿಯಲಿ ಸಿಡಿಯೆ ರಕ್ತ ಚಿಮ್ಮಬಹುದು ಎಂಬ ಪರಿಪೂಣಾರ್ಂಗಿ,
ಹಣ್ಣುನೇರಿಲ ಹೊಗರ ಮೆಯ್ ಹಾಲ್ಮನ ಬೆಳ್‍ಬೆಳಗಿನ ಕಣ್ಣುಗಳ ಶಬರಿ.

9
ಕಾಡ ಮರೆಯಲಿ ಹೂವಿನಂತರಳಿದ ಮಾನಸಿಕೆಯ ಮುಗ್ಧೆ ! ಕಂಡವಳೆ
ನಾಡ ನಡೆಗಳ ? ಸಾಕಿದ ಕರುಗಳ ಗೋಣ್ಮುರಿಯುತ ಬಾಡನುಂಡವಳೆ?
ಗೀಳಿಡುವ ಮದದಾನೆಯ ಸುಂಡಿಲ ಕೂಗು ಕಹಳೆಯಾಗೆ, ಮೊನೆಗೊಂಬಿನ
ಕಾಡ ಮೃಗಗಳ ಗೆದ್ದುಂಬ ಗೆಲವಿಗೆ ಜೋಡಿಯಹುದೆ ಕೊಲೆ ಕುರಿಯಾಡಿನ ?

13
ಭೀಮಕಾಯದ ಭಿಲ್ಲರು ಮದ್ಯದ ಭಾಜನಗಳನಪ್ಪಿ ಮಲಗಿದರು
ತಾಳೆ ಕೆಡೆದಂತೆ; ಕನ್ನೆಯರಲ್ಲಲ್ಲಿ ಕುಣಿವ ಕನಸುಗಳನಪ್ಪಿದರು;
ಮಾನಿನಿಯರು ಮಕ್ಕಳನಪ್ಪಿ – ಕಾಡನು ಕಾರಿರುಳಪ್ಪಿ – ನಿದ್ರಿಸುತಿರಲು,
ಜೀವಮಣಿಯೊಂದು ಖನಿಯಿಂದ ನೆಗೆಯಿತು ! – ಧೀರೆ ಶಬರಿ ಹೊರಗಾಲಿಟ್ಟಳು !

23
ತಿಳಿವೋ ದಯೆಯೊ ಪೊದಳ್ದಂತೆ, ನೈರ್ಮಲ್ಯ ಮಡಿಯುಟ್ಟು ಬಂದಂತೆ, ಮುಂದಿರಲು
ಪುರುಷಾಕೃತಿಯೊಂದು, – ಕಂಡೆದ್ದು ಕಣ್ಬಿಟ್ಟು ಭಯವಿಲ್ಲದಿದ್ದೊಂದು ನಡುಕಗೊಂಡು
ನಿಲಲಾರದೆ, ಕುದಿವೆದೆಯಿಂದ ನುಡಿಗಳ ತೆಗೆಯಲಾರದೆ, ಬಾಲೆ ಕಂಬನಿಯ
ಹೊರಲಾರದೆ ಮುನಿಪದಕೆ ಬೀಳುತ್ತಿರೆ ಹಿಡಿದಂ ಪೂಜೆಯ ಹೂವ ಹಿಡಿವಂತಿರೆ !

24
ಯೋಗದೀಪವ ಬೆಳಗಿಸಿ ಶಬರಿಯ ಹೃದಯಾಂತರಾಳವ ಮುನಿ ಕಂಡನು;
ದೇವನದಿಯ ನಿರ್ಝರದಂತೆ ಮೊರೆಯುವ ಧಾರಾಲ ಕರುಣೆಗಚ್ಚರಿಗೊಂಡನು;
ಭಾವಮಂಟಪ ಮಧ್ಯದಿ ಹೊಳೆಯುವ ರಾಗವರ್ಜಿತ ಚಿತ್ತಫಲಕವನು
ನೋಡಿ ತಲೆದೂಗಿ – “ವೈಕುಂಠನಿಲಯದ ಶ್ರೀಮಂಚವಿದಕೆ ನಮೋ !’ – ಎಂದನು.

25
ರಾಮನಾಮಾಮೃತವನೆರೆದನು ಮುನಿ ಬಾಲೆಯ ಹೃದಯದಕ್ಷಯ ಪಾತ್ರಕೆ ;
ನೂರುಮಡಿಯಾಗಿ ತುಂಬಿತು ! ಸಂತಾಪವಾರಿತು ; ಸಾಯಲಾಗಿಹ ಮನಕೆ
ಜೀವ ಕೂಡಿತು ; ಕರಣಸಂಕುಲ ಸೂರ್ಯಕಿರಣಕೆ ನಲಿಯುವಶ್ವತ್ಥದಂತೆ
ಡಾಳಗೊಂಡಿತು ; ವಾಣಿ ‘ರಾಮಾ !’ಎಂದು ವೀಣೆನುಡಿಸಲಾತ್ಮ ಲಾಲಿಸಿತು.

32
ಮಾಯಾಮೃಗವನಟ್ಟುವ ನೆವದಲಿ ಭಿಲ್ಲಲೀಲೆಯ ಕೈಕೊಂಡು, ನಾರೀತ್ವದ
ಮಾನಮೇರುವನೆತ್ತಲಧಾರ್ಂಗಿಯ ನೇಮಿಸಿ ನಗಧಾರಿ, ಕುಂತಳದ
ಭೂಮಿಸುರಭಿ ಕರೆಯೆ ನಡೆತಂದನು :– ನೀರು ತುಂಬಿತು ತುಂಗಭದ್ರೆಯಲಿ!
ದಾರಿ ಮಿಂಚಿತು ! ಶೈಲವು ನಮಿಸಿತು ! ಬಾನಿಂದ್ರಚಾಪಧ್ವಜವನೆತ್ತಿತು !!

33
ಸಕಲೇಂದ್ರಿಯವಂತರ್ಮುಖವಾಗಿ ರಾಮನ ಚರಣನಖಾಗ್ರದಿ ನಿಂದಿರಲು,
“ಶಬರೀ !” ಎಂದು ದೇವಧ್ವನಿ ಕಿವಿಯಲಿ ಜಯಘಂಟೆಯಾಗಿ ನಿನಾದಿಸಿತು ;
“ಪ್ರಭುವೇ! ಬಂದೆಯ!” ಎನುತ ಪುಣ್ಯದ ಕಣ್ಣ ತೆರೆದಳು, ಪರಮತೇಜವ ಕಂಡಳು !
ಯಮುನಾ ನದಿ ಭಾನುಬಿಂಬವರಳೆ ನಲಿನಲಿವಂತೆ ಜಗಜಗಿಸುತ ನಿಂದಳು !

34
ಮೇಘಮಾಲೆ ಮಿಂಚಿನೊಳಾಡುವಂತಿರೆ ದೇವನ ಬಳಸಿ ಪ್ರಭಾಮಂಡಲ,
ಶ್ಯಾಮಶೋಭಾಂಗದರಸಾಗಿ ತಂಪಿನ ಸೂರ್ಯನಾಗಿರೆ ದಿವ್ಯಮುಖಮಂಡಲ,
ಧ್ಯೇಯವೇ ಮೂರುಮಡಿ ಚೆಲ್ವುಗೊಂಡು ದಯಾಘನವಾಗಿ ಬಳಿಗೆ ಬಂದಿರೆ –
ದೇಹದಳವು ಸುಖದಿ ತುಂಬಿ ತುಳುಕಿತು ಮೆಯ್ಯೆಲ್ಲ ಮಧುರಮಧುರವಾಯಿತು.

40
ರಾಮರಾಮೆಂಬ ನಾದದಿ ವನವೆಲ್ಲ ಲೀನವಾಯಿತು ; ರಾಮಚಂದಿರನ
ಶ್ರೀಮುಖದ ಮಂದಹಾಸದಲುಕ್ಕಿತು ಕ್ಷೀರಸಾಗರ! ಭಿಲ್ಲನಂದಿನಿಯ
ಬೋಧವಖಲಬ್ರಹ್ಮಾಂಡ ಬುದ್ಬುದಗಳು ತೇಲುವಾನಂದರಸವ ಕಂಡಿತು !
ಜೀವ ಜಳಜಳಿಸಿತು, ದೇಹ ಕರ್ಪೂರವಾಗಿರೆ, ಮಂಗಳಾರತಿಯೊಪ್ಪಿತು !

41
ದೇವದೇವನ ಫುಲ್ಲಪದಾಬ್ಜ ಪರಾಗ ನವೀನಸುಗಂಧವಾಗಿ,
ರಾಮನಾಮ ಮಹಾಸಂಗೀತದ ನವ್ಯರಾಗಿಣಿಯಾಗಿ. ಪರಂಜ್ಯೋತಿಯ
ತೇಜದೊಂದೆಸಳಾಗಿ, ನಿತ್ಯಾನಂದಲೀಲೆಯ ನವಮಂದಹಾಸವಾಗಿ.
ಕೇವಲ ಬ್ರಹ್ಮರಸವಾಗಿ ಪರಿಪೂರ್ಣವಾದಳಾದಳು ಸತ್ಯ-ಶಿವ-ಸುಂದರಿ |

(1939)

ಈ ಕಾವ್ಯಖಂಡದ ಕಾವ್ಯಸೌಂದರ್ಯ, ಇತರರಿಗೆ ಕಷ್ಟಕರವೆಂದು ಕಾಣುವ ಪಿರಿಯಕ್ಕರದಲ್ಲಿ ಕವಿ ಲೀಲಾಜಾಲವಾಗಿ ವಿಹರಿಸಿರುವುದು ವಿಶೇಷವಾಗಿದೆ. ವಿದ್ವಾನ್ ರಂಗನಾಥ ಶರ್ಮರ ಮಾತುಗಳಿವು: “ಇಲ್ಲಿರುವ ಶಬ್ದಗಳನ್ನು ಪೃಥಕ್ಕರಿಸಿ ಹಿರಿಯಲು, ಪದಶಯ್ಯೆಯನ್ನು ಕಿತ್ತುಹಾಕಲು, ಅಲಂಕಾರಗಳನ್ನು ಬಿಚ್ಚಿ ತೋರಿಸಲು, ಶಬ್ದಾರ್ಥಗುಣಗಳನ್ನು ಹಿಸುಕಲು ಮನಸ್ಸು ಬರುವುದಿಲ್ಲ. ರಸಾಯನದ ಘಟಕ ಸಾಮಗ್ರಿಗಳನ್ನು ಪೃಥಕ್ಕರಿಸಿ ತೋರಿಸುವುದು ಯುಕ್ತವಲ್ಲ, ಶಕ್ಯವೂ ಅಲ್ಲ. ರಸಾಯನವನ್ನು ಒಟ್ಟಿಗೇ ಸವಿದುಬಿಡಬೇಕು!” (ಸೇಡಿಯಾಪು. 1996)

ಸೇಡಿಯಾಪು ಕೃಷ್ಣ ಭಟ್ಟರು ‘ಶಬರಿ’ಯಲ್ಲಿ ಪುರಾಣವನ್ನು ವರ್ತಮಾನ ಕಾಲದ ಆಶಯಕ್ಕೆ ಒಗ್ಗಿಸಿಕೊಳ್ಳಲು ಪ್ರಯತ್ನಿಸಿದರು; ‘ತರುಣಧಮನಿ’ಯಲ್ಲಿ ಇತಿಹಾಸದ ತುಣುಕೊಂದನ್ನು ಕಾವ್ಯದ ವಸ್ತುವಾಗಿಸಿದರು. ಆ ಕಾಲದ ಕವಿ-ಸಾಹಿತಿಗಳು ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಪ್ರಚ್ಛನ್ನವಾಗಿ ಉದ್ದೀಪಿಸಲು ಕ್ಷಾತ್ರ ತೇಜದ ಕಥೆಗಳನ್ನು ಮತ್ತು ಕವಿತೆಗಳನ್ನು ಬರೆದುದು ಒಂದು ಅಧ್ಯಯನ ಯೋಗ್ಯ ವಿಷಯ. ‘ತರುಣ ಧಮನಿ’ ಮತ್ತು ‘ವಿಜಯನಗರ ಧ್ವಂಸನ’ ಕವಿತೆಗಳಲ್ಲಿ ಸೇಡಿಯಾಪು ಅವರಿಗೆ ಇತಿಹಾಸದ ವಸ್ತುವೊಂದು ಅಸ್ಪಷ್ಟವಾಗಿ ಕಾಡಿದೆ ಅನಿಸುತ್ತದೆ. ಅವರ ಸಾಮಾಜಿಕ ತುಡಿತಗಳಿಗೆ ‘ಶ್ವಮೇಧ’ದ ವಸ್ತು ಅತ್ಯದ್ಭುತವಾಗಿ ಒದಗಿಬಂತು. ಆ ಕಾವ್ಯದಲ್ಲಿ ಅವರ ಸಂಪೂರ್ಣ ಪ್ರತಿಭೆ ಕಾಣಿಸುತ್ತದೆ. ಪರಕೀಯ ದಬ್ಬಾಳಿಕೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳು ಅವರ ‘ನಾಗರ ಬೆತ್ತ’ ಮತ್ತು ‘ಚೆನ್ನೆಮಣೆ’ ಕತೆಗಳಲ್ಲಿ ಅಭಿವ್ಯಕ್ತಿ ಪಡೆದವು.

ಸೇಡಿಯಾಪು ಬಿಡಿ ಕವಿತೆಗಳು

ಹಿರಿಯ ಕಾಲೇಜಿನ ಅಧ್ಯಾಪಕರಾಗಿದ್ದಾಗ ಹೆಚ್ಚು ಕಾವ್ಯಕೃಷಿ ಮಾಡದೆ ಉಳಿದ ಸೇಡಿಯಾಪು ನಿವೃತ್ತರಾದ ಮೇಲೆ ಭಾವಗೀತೆಗಳನ್ನು, ಕಿರುಗವನಗಳನ್ನು ಬರೆದರು. ಅವರ ಮಹತ್ವದ ಕಾವ್ಯಕೃತಿಗಳು `ಎಣ್ಣೆ ಹೊಯ್ಯಮ್ಮ ದೀಪಕ್ಕೆ’ (1960) ಮತ್ತು `ನೌಕೆಯಲೆನ್ನ ಕುಳ್ಳಿರಿಸು’ (1959) ಮುಂತಾದ ಸಣ್ಣ ಕವನಗಳೇ. 1936 ರವರೆಗೆ (ಉದಾಹರಣೆಗೆ, ವಿಜಯನಗರ ಧ್ವಂಸನ – 1936) ಕೂಡ ಅವರು ಬಿಡಿ ಕವಿತೆಗಳನ್ನು ಬರೆಯುತ್ತಿದ್ದರು. ಆಮೇಲೆ ನಿವೃತ್ತಿಯ ನಂತರವೇ ಬಿಡಿ ಕವಿತೆಗಳನ್ನು ಮತ್ತೆ ಬರೆಯಲಾರಂಭಿಸಿದರು. ನಡುವೆ ಎರಡು ದಶಕಗಳ ಮೌನ ಇರುವುದು ಗಮನಾರ್ಹ.

ಸೇಡಿಯಾಪು ಕವಿತೆಗಳಲ್ಲಿ ಒಂದು ವಿಶೇಷ ಭಾವೋನ್ನತಿ ಇದೆ. ಅವರ ಕವಿತೆಗಳಲ್ಲಿ ಜೀವನಶ್ರದ್ಧೆ, ಸಂಸ್ಕೃತಿಯ ಅವನತಿಯ ಬಗೆಗಿನ ಎಚ್ಚರ – ಕಾಳಜಿ, ನಾಡು ನುಡಿಯ ಪ್ರೇಮ ಮತ್ತು ಶೃಂಗಾರ ಕಾವ್ಯದಲ್ಲಿ ಸಾತ್ವಿಕ ಎಚ್ಚರ – ಇವುಗಳನ್ನು ಗಮನಿಸಬಹುದು. ಅವರ ಕವಿತೆಗಳೆಲ್ಲ ನಿಧಾನಶ್ರುತಿಯ ಕವಿತೆಗಳು, ಅವುಗಳನ್ನು ನಿಧಾನವಾಗಿಯೇ ಓದಿ ಸವಿದರೆ ಅವು ವಿಶೇಷವಾದ ಸೌಂದರ್ಯವನ್ನು ಬಿಟ್ಟುಕೊಡುತ್ತವೆ.

ಸೇಡಿಯಾಪು ಅವರ ಪ್ರಸಿದ್ಧ ಗೀತೆ, ‘ಎಣ್ಣೆ ಹೊಯ್ಯಮ್ಮ ದೀಪಕ್ಕೆ’ ಅನ್ನು ಈಗಾಗಲೇ ಓದಿದೆವು. ಅವರ ಇನ್ನೊಂದು ಪ್ರಸಿದ್ಧ ಗೀತೆ, `ನೌಕೆಯಲೆನ್ನ ಕುಳ್ಳಿರಿಸು’. ಈ ಕವಿತೆಯು ಭಾವಗೀತೆಗಳಲ್ಲಿ ಒಂದು ವಿಶಿಷ್ಟ ಪ್ರಯೋಗವೂ ಹೌದು. ಇದರಲ್ಲಿ ಒಂದು ಸನ್ನಿವೇಶ ಬೆಳೆಯುತ್ತಾ ಹೋಗುವುದನ್ನು ತೋರಿಸುವಂತೆ, ಎರಡು ಹಂತಗಳಿರುವುದನ್ನು ತೋರಿಸುವಂತೆ ಎರಡು ಭಾಗಗಳಿಗೆ ಎರಡು ರಾಗಸೂಚನೆಯನ್ನು (ದಾಸರ ಹಾಡುಗಳು ಮತ್ತು ಯಕ್ಷಗಾನದಲ್ಲಿ ಕೊಡುವಂತೆ) ಕೂಡ ಕವಿ ಮಾಡಿದ್ದಾರೆ. ಸೇಡಿಯಾಪು ಅವರು ಕೊಡುವ ಸದೃಶ ಚಿತ್ರಗಳು (ಉಪಮೆ – ರೂಪಕ) ಯಾವಾಗಲೂ ಹೊಸತನದಿಂದ ಕೂಡಿರುತ್ತವೆ. ಇಲ್ಲಿ ನಿರೂಪಕ ಈಜುಬಿದ್ದಿದ್ದಾನೆ, ಈಗವನ ಕೈಸೋತಿದೆ, ಎದೆ ಕುಸಿದಿದೆ; ಅಮ್ಮ ಅವನನ್ನು ತನ್ನ ವಿಹಾರ ನೌಕೆಯಲ್ಲಿ ಕುಳ್ಳಿರಿಸಿ ರಕ್ಷಿಸಿ ದಡಕ್ಕೆ ಕರೆತರಲಿ ಎನ್ನುವ ಪ್ರಾರ್ಥನೆಯಿದು. ಪುರಂದರದಾಸರ ‘ಅಂಬಿಗ ನಾ ನಿನ್ನ ನಂಬಿದೆ’ ಮತ್ತು ಕುವೆಂಪು ಅವರ ‘ದೋಣಿ ಸಾಗಲಿ’ ಹಾಡುಗಳ ಜತೆಯಲ್ಲಿ ನಿಲ್ಲುವ ಮೂರನೆಯ ಹಾಡು ಇದು.

ಕವಿ ಬಳಸಿರುವ ಪದಗಳು ಈಜುವವನ ಕೈಸೋಲುವ ಚಿತ್ರವನ್ನು ಬಹಳ ಸಶಕ್ತವಾಗಿ ನಮ್ಮ ಅನುಭವಕ್ಕೆ ತಂದುಕೊಡುತ್ತವೆ. “ತಲೆಯನು ಎತ್ತಿಹಿಡಿದು ಹಿಡಿದು ಬಳಲಿದೆ ಕೊರಳು ಸೋಲುತಿದೆ – ಉಸಿರನು ಎತ್ತಿ ಮೊಗೆದು ಮೊಗೆದು ಚೆಲ್ಲುತ ತೆಗಲೆ ಬತ್ತುತಿದೆ” ಎಂಬ ಸಾಲುಗಳನ್ನು ನೋಡಿ. ಇಲ್ಲಿ ಅವರು ಬಳಸಿರುವ ‘ತೆಗಲೆ’ ಎಂಬ ಶಬ್ದ ತುಳುನಾಡಿನಲ್ಲಿ ಬಳಕೆಯಲ್ಲಿರುವ ವಿಶಿಷ್ಟ ಶಬ್ದ. ‘ಎದೆ’ ಎನ್ನುವುದು ಅದರ ಅರ್ಥವಾಗಿದ್ದರೂ, ಅದು ದೇಹದ ಭಾಗವನ್ನು ಮಾತ್ರ ಸೂಚಿಸಲು ಬಳಕೆಯಾಗುವುದಿಲ್ಲ, ಸುಮಾರಾಗಿ ‘ಗುಂಡಿಗೆ’ ಎನ್ನುವ ಪದದ ಹಾಗೆ ‘ಧೈರ್ಯ’ ಎನ್ನುವ ಅರ್ಥವನ್ನೂ ಕೊಡುತ್ತದೆ. ಈ ಕವಿತೆಯನ್ನು ಇಡಿಯಾಗಿ ಓದೋಣ.
ಬಾಕ್ಸ್ ಐಟಮ್

ನೌಕೆಯಲೆನ್ನ ಕುಳ್ಳಿರಿಸು
ರಾಗ: ಕಾನಡಾ. ತಾಳ: ತ್ರಿವುಡೆ

ಅಮ್ಮ ! ನಿನ್ನ ವಿಹಾರ – ನೌಕೆಯಲೆನ್ನ ಕುಳ್ಳಿರಿಸು
ಸಣ್ಣ ಬೆಳಗಿಂದೀಜಿ ಈಜಿ, ಬೆನ್ನು ಹುರಿ ಕೈಕಾಲು ಕುಸಿಯಿತು
ಅಮ್ಮ ! ನಿನ್ನ ವಿಹಾರ – ನೌಕೆಯಲೆನ್ನ ಕುಳ್ಳಿರಿಸು.

ಹೊತ್ತು ನೆತ್ತಿಯ ದಾಟಿ ಕೆಳಗೆ, ಕೆಳಗೆ ಹೋಗುತಿದೆ – ಸುತ್ತಲು
ಎತ್ತಲೂ, ಮೊದಲಿದ್ದ ಶುಭ್ರತೆ ಕಾಣದಾಗುತಿದೆ – ತಲೆಯನು
ಎತ್ತಿ ಹಿಡಿದು, ಹಿಡಿದು ಬಳಲಿದ ಕೊರಳು ಸೋಲುತಿದೆ – ಉಸಿರನು
ಎತ್ತಿ ಮೊಗೆದು ಮೊಗೆದು ಚೆಲ್ಲುತ ತೆಗಲೆ ಬತ್ತುತಿದೆ – ಅಮ್ಮಾ !
ನನಸು ಕನಸುತಿದೆ – ಆದರು
ಮನಸು ನೆಗೆಯುತಿದೆ – ನೀರಿನ
ಚೆಲುವನೆಣಿಸುತಿದೆ – ಬಾ ಬಾ
ಅಮ್ಮ ನಿನ್ನ ವಿಹಾರ – ನೌಕೆಯಲೊಮ್ಮೆ ಕುಳ್ಳಿರಿಸು.
ದೂರದಿಂ ಭೋರೆನುವ ಗಾಳಿಯ ದಾಳಿ ಕೇಳುತಿದೆ – ತೆರೆತೆರೆ
ಮೀರಿ ನೊರೆಗಳ ಹಲ್ಲ ಕಿಸಿಯುತ ಮೇಲೆ ಹಾರುತಿದೆ – ಕತ್ತಲೆ
ಕಾಳಿಯಾಗುತ ಮಿಂಚ ಮಸೆಯುವ ಕನಸು ಕಟ್ಟುತಿದೆ – ಕಾಣದ
ನೀಳದಾಳದ ನೀರು ಮೆಯ್ಯನು ಕೆಳಗೆ ಸೆಳೆಯುತಿದೆ – ಅಮ್ಮಾ!
ಮನಸು ನಡುಗುತಿದೆ – ಆದರು
ಚೆಲುವ ಹುಡುಕುತಿದೆ – ಓವೋ
ಸಮಯ ಮೀರುತಿದೆ – ಈಗಲೆ
ಅಮ್ಮ ನಿನ್ನ ವಿಹಾರ – ನೌಕೆಯಲೊಮ್ಮೆ ಕುಳ್ಳಿರಿಸು.

ರಾಗ: ಸುರುಟಿ

ಸೂರ್ಯ ಸಂಜೆಯ ಕೂಡಿ ಓಕುಳಿಯಾಡುತಿರುವಾಗ – ಬಾನಲಿ
ಏಳು ಬಣ್ಣದ ತೋರಣವು ಮೇಲೇರುತಿರುವಾಗ – ನೋಡಲು
ತಾರಕೆಗಳೋಡೋಡಿ ಬರುತಿರೆ ಚಂದ್ರ ನಗುವಾಗ – ಕಾಣುತ
ಭೂರಿ ದೃಶ್ಶವ ನಲಿದು ನಲಿದಾಂ ಪಾಡುತಿರುವಾಗ – ಸಂತಸ-
ವೇರಿ ತಲೆ ಭಾರಯಿಸಿ ಕಣಳು ತೂಗುತಿರುವಾಗ – ಮಗನೇ
ಬಾರೆನುತ ಮಡಿಲಲ್ಲಿ ಮಲಗಿಸಿ ಹಾಯಿಯಗಲಿಸಿ ದಡಕೆ ನಡೆಯಿಸು !
ಅಮ್ಮ ನಿನ್ನ ವಿಹಾರ – ನೌಕೆಯಲೆನ್ನ ಕುಳ್ಳಿರಿಸು – ಅಮ್ಮಾ.
ನಿನ್ನ ದಯೆಯ ವಿಲಾಸ-ನೌಕೆಯಲೆನ್ನ ಕುಳ್ಳಿರಿಸು – ಕೈನೀ –
ಡಮ್ಮ ಕೈಕೊಳ್ಳಮ್ಮ ಮೇಲೆತ್ತಮ್ಮ ಕುಳ್ಳಿರಿಸು !
(1959)

‘ವಿಜಯನಗರ ಧ್ವಂಸನ’ (1936) ಮತ್ತು ‘ತುಳುನಾಡ ಹಾಡು’ (1972) ಎಂಬ ಎರಡು ಕವಿತೆಗಳು ನಾಡಿನ ಮೇಲಿನ ಕವಿಯ ಪ್ರೀತಿಯನ್ನು ಎರಡು ಭಿನ್ನ ನೆಲೆಗಳಲ್ಲಿ ವ್ಯಕ್ತಪಡಿಸಿವೆ. ಆ ಕವಿತೆಗಳು ಹೀಗಿವೆ:

ವಿಜಯನಗರ ಧ್ವಂಸನ

ಲಕ್ಷ್ಮಿ ಮೆಚ್ಚಿ ಮೆಚ್ಚಿ ಕುಣಿದ
ನಾಟ್ಯರಂಗದಲ್ಲಿ ಭೂತ –
ಯಕ್ಷರಕ್ಷರಂದು ಕೋಲ ಕುಣಿಯುವಂತೆ ಕಂಡಿತು;
ಹಜ್ಜೆಗಳಲಿ ನೂಪುರಗಳ
ರತ್ನರಾಜಿಯುಲಿದ ರಾಜ-
ಮಾರ್ಗದಲ್ಲಿ ಗಗ್ಗರಗಳ ಘರ್ಘರರವ ಕೇಳಿತು.

ಸಿರಿಯ ಮಣಿಯ ದೇಗುಲದಲಿ
ತುದಿಯ ಮಾಡದಲ್ಲಿ ತೂಗಿ
ತೊನೆದ ಘಂಟೆ ಕಡಿದು ನೆಲಕುರುಳ್ದು ಬಿರಿದು ಹೋಯಿತು!
ಹುರುಡೆ ಹುಟ್ಟುಗುಣದ ಕಾಲ-
ದನುಜ ನಿರ್ಘೃಣೆಯಲಿ ಬೇಳ್ದ
ಪುರುಷವೃಷಭ ಮೇಧ ಧೂಮ ಸುಳಿದು ಸುತ್ತಿ ಮುತ್ತಿತು.

ಕನ್ನಡಿಗರ ಭಾಗ್ಯನಿಧಿಯ
ಭರಿತದಲ್ಲಿ ಸೂರೆಗುಡಿವ
ಹುಮ್ಮಸದಲಿ ಯವನಸೇನೆ ವಡಬನಂತೆ ನುಗ್ಗಿತು;
ನಮ್ಮ ದೇವ ! ನಮ್ಮ ರಾಯ !
ನಮ್ಮ ರಾಮರಾಯ|! ಎಂದು.
ನಮ್ಮ ನಗರ ತೆರೆಯ ತೆರದಿ ಮೊರೆದು ಚಿಲ್ಲಿ ಕೆಡೆಯಿತು.

ಸಿಡಿಲು ಮುಗಿಲ ರೆಕ್ಕೆಗಳನು
ಬಡಿದು ಮಿಂಚುಗುತ್ತುವಂತೆ
ಹಲಗೆವಿಡದ ತುರುಕದಳವು ಕಡತಲೆಯಲಿ ಕುತ್ತ್ತಿತು;
ಕೆದೆರುದಲೆಯ ಬೆದರು ಬಾಯ
ಬಡಿವ ಕೈಯ ಬೀಳ್ವ ಮೆಯ್ಯ
ಬಡವುಗಳನು ಪಂತವಾಡಿ ತರಿದು ತರಿದು ಸೊಕ್ಕಿತು.

ನಗರಸಿರಿಯ ಸುರಿವ ಖೂಳ-
ತೆಗೆ ನೃಸಿಂಹಮೂರ್ತಿ ಕನಲಿ
ಕುದಿದು ತನ್ನ ಶಿಲೆತನಕ್ಕೆ ಬಲಿದು ಹಲ್ಲ ಮೊರೆಯಲು
ಜಗುಳೆ ಕೋರೆ, ಮುಖ ಕರಾಲ-
ತರ ವಿಕಾರಗೊಳ್ಳಲದರ
ಬಳಿಗೆ ಬರ್ಬರೌಘ ಬಂದು ಬಗುಳಿ ಹಲ್ಲ ಕಿರಿಯಿತು !

ಜಗದ ಕಣ್ಣ ಕುಟ್ಟುವಂತೆ,
ಪಳಿಕುನೆಲದ ಹೊನ್ನ ಹೊದೆದ
ಚೆಲುವ ಮಂಟಪಗಳ ಘನ ಫಿರಂಗಿಗಳಲಿ ಸುಟ್ಟರು;
ಜಗಕೆ ವಿಷವನೆರೆಯುವಂತೆ,
ಹಸುಳೆಹೆಂಗಳೊಡಲ ತರಿದು
ಬಸಿವ ಸೆತ್ತರೋಕುಳಿಯನು ನದಿಗೆ ಹರಿಯ ಬಿಟ್ಟರು !

ಹಗೆಗಳಿಂತು ನಗರದಲ್ಲಿ
ಧಗಧಗಿಸುತ ರೌರವವನು.
ನಗಿಸಿ ಯಮನ ಬಾವುಟವನು ನಟ್ಟು ನಲಿದು ತಣಿದರು;
ಮೊದಲವೇನೊ! ವಿಧಿಯ ರಥಕೆ
ಹೂಡಲಾಗಿ, ‘ಹುಲಿಗಳಾಗಿ
ಬಗಿದು ತಿಂದೆವೆ’ನುತ ಬಾಯ ಚಪ್ಪರಿಸುತ ಕುಣಿದರು !
(1936)

(ಟಿಪ್ಪಣಿಗಳು: ಕೋಲ- ಭೂತದ ಉತ್ಸವ. ಗಗ್ಗರ – ಭೂತದೆ ಕಾಲಕಡಗ. ಕಡಿತಲೆ – ಒಂದು ಬಗೆಯ ಖಡ್ಗ).

ತುಳುನಾಡ ಹಾಡು

1
ಮುನ್ನೀರ ಮಡಿಲ ಹಸುಳೆ – ತುಳುನಾಡೆ !
ಎನ್ನ ತಾಯ್, ತಂಗೆ, ಮಗಳೆ!
ಕಂಡೆ ನೂರೂರ ನಾಡಾಡಿ – ನಾನಕ್ಕ
ಕಂಡಿಲ್ಲ ನಿನ್ನ ಸರಿಜೋಡಿ
ನಿನ್ನ ಬೆವರಿನ ಗಾಳಿ ಬಂದು ತಟ್ಟಿದೊಡನೆ
ತುಂಬಿ ತುಳುಕುವುದು ನರನಾಡಿ!

2
ನಿನ್ನ ನಿಮ್ನೋನ್ನತ ಶರೀರ – ಓ ತಾಯೆ !
ಮನ್ಮನಃ ಶಿಶು ಸುಖ ವಿಹಾರ!
ನಿನ್ನ ಗಿಡ ಮರ ಹುಲ್ಲು, ನಿನ್ನ ಖಗಮೃಗ ಕಲ್ಲು,
ಎಲ್ಲವೂ ಎನ್ನ ಸಂಸಾರ !

3
ಕಾಡು ಕಣ್ಣಿಗೆ ಕಾಡಿಗೆ, – ಹಸುರುಗುವ
ಬೈಲು ಹೃದಯಕೆ ಹಾಸಿಗೆ, – ತೆಂಗಡಕೆ.
ತೋಟ ಮಾನಸಕೆ ಸುಸ್ವಾಗತದ ಮಂಟಪ, ಗ-
ಭೀರ ಜಲನಿಧಿಯ ತೆರೆ ಭಾವಕುಡುಗೊರೆ. ಇಂಥ
ನಾಡಿನಲಿ ಕಣ್ ತೆರೆದುದೆನ್ನ ಪುಣ್ಯ !
ಹಾಡಿ ಹೊಗಳುತ ನಿನ್ನನಪ್ಪೆ ಧನ್ಯ !

4
ನಿನ್ನ ನೀರೆಲ್ಲ ಸೀನೀರು – ಸೌಳೆಂಬ
ಸೊಲ್ಲ ಕಿವಿಯಲ್ಲಿ ಕೇಳ್ದರಾರು ? – ಬರಗಾಲ –
ವನ್ನಿಲ್ಲಿ ಕಂಡವರು ಯಾರು ?
ನಿನ್ನ ಬಯಲುಗಳಲ್ಲಿ ಕೆಯ್ ಕುಣಿಯದಿರುವ ದಿನ –
ವೆಲ್ಲುಂಟು? ಇಂಥ ಸೊಬಗೆಲ್ಲುಂಟು? ಎಲ್ಲುಂಟು?

5
ಘಟ್ಟಗಳ ಗರ್ಭದಿಂದ – ಸೌಂದರ್ಯ
ಘಟ್ಟಿಗಳೆ ಕರಗಿ ಬಂದ – ನೂರಾರು
ದಿಟ್ಟ ತೊರೆಗಳ ಕಲಕಲ – ನಿನ್ನುರದಿ
ಪುಟ್ಟ ಮಕ್ಕಳ ಕಿಲಕಿಲ !

6

ಕಡಲ ತೆರೆ ಕಾಲ್ಗೆಜ್ಜೆಯಾಗಿ – ರಭಸದಲಿ
ಹರಿವ ತೊರೆಗಳೆ ತೋಳ್ಗಳಾಗಿ – ಮಿಂಚೆಸಳ್
ಚಪಲ ನಯನ ವಿಲಾಸವಾಗಿ – ಬೀಸುತಿಹ
ಬಿರುಗಾಳಿ ಚಾರಿನಡೆಯಾಗಿ – ತೆಂಗುಗಳ
ತೊನೆತ ಹಸ್ತಾಭಿನಯವಾಗಿ – ವನಮಹೀ-
ರುಹಕಂಪವನುಭಾವವಾಗಿ – ಜಲಧಾರೆ-
ಯುಲಿಯೆ ತಂತ್ರೀ ಘೋಷವಾಗಿ – ಅಂಭೋದ
ನಿನದವೆ ಮೃದಂಗರವವಾಗಿ,- ಹಗಲಿರುಳು
ಬಿಡದುಗ್ಗಡಿಪ ನಿನ್ನ ವರ್ಷರ್ತುಲಾಸ್ಯಕ್ಕೆ
ಸರಿದೊರೆಯ ಭವ್ಯ ನಾಟ್ಯವ ಕಂಡರುಂಟೆ?
ನೆನೆಯೆ ಮನವೆಸಳೆಸಳ ತೆರೆಯದುಂಟೆ?

7
ಮನೆಯ ನೆಲ ಕರಿಮಣಿಯ ಫಲಕ, – ಮುಳಿಮಾಡು
ತಲೆಬಾಚಿ ಕುಳಿತ ಮುತ್ತೈದೆಯಲಕ,
ಚತುರಸ್ರ ವೇದಿಯಲಿ ಪರಮ ಪಾವನ ತುಲಸಿ
ಮನೆಮನೆಯ ಅಂಗಳದ ತಿಲಕ – ಶುಚಿರುಚಿಗೆ
ಸರಳತೆಗೆ ಭಾವುಕತೆಗೆಂಥ ಎರಕ!

8
ನಿನ್ನ ಹಿತ್ತಲ ಗಿಡಗಳಲ್ಲಿ – ಹೂವಿಂದು
ಇಲ್ಲವೆನ್ನುವ ಮಾತದೆಲ್ಲಿ? — ಬಿಡುವಿರದ
ನಿನ್ನ ಹೆಂಗಳ ಮುಡಿಗಳಲ್ಲಿ – ಹೂವಿಲ್ಲ-
ವೆಂಬುದನು ಕಾಂಬರಾರಿಲ್ಲಿ ?

9
ನಡೆವ ಹೊಂಗೇದಗೆಗಳು, – ಮೆಲುನುಡಿಯೊ-
ಳಡಿಯಿಡುವ ಮಲ್ಲಿಗೆಗಳು,- ಹುರಿದುಂಬಿ
ಪುಟ ನೆಗೆವ ಚೆನ್ನ ಚೆಂಡುಗಳು, – ನಿನ್ನ ಮಂ-
ಗಳ ಭುವಿಯ ಯುವ ಕಿಶೋರಗಳು – ನೋಳ್ಪವರ
ನಯನ ಸಾಮ್ರಾಜ್ಯದರಸುಗಳು !

10
ನೀಲ ಮೇಘದಲಿ ಕಡೆದಿಹೆಯೋ? – ನೀನವರ
ಸೌದಾಮಿನಿಯಲಿ ಸಮೆದಿಹೆಯೋ ? – ಮತ್ತೇನು
ಹಾಲ ಹದಿಯಲಿ ನಿರ್ಮಿಸಿಹೆಯೋ ? – ಅಲ್ಲದಿರೆ
ಈ ಹೊಳೆವ ಕರಿಯ ಮೆಯ್, ಈ ಹೊಗರ ಬೆಣ್ಣೆ ಮೆಯ್,
ಈ ಮೊಗದ, ಈ ಕಣ್ಣ, ಈ ಹಲ್ಲ ಚೆಲುವ ಮೆಯ್
ಬೇರೆಂತು ಬಂತು ಹೇಳಮ್ಮಾ |! -ನಾ ಬೇರೆ
ಊರಲ್ಲಿ ಕಂಡೆನಿಲ್ಲಮ್ಮಾ!

11
ನಿನ್ನ ವಾತಾವರಣವಾರ್ದ್ರ, – ಈ ನೆಲದ
ಮಣ್ ಮಳಲ್ ನಿರ್ಮಲ ಜಲಾರ್ದ್ರ, – ಬೆಳೆವೆಲ್ಲ
ದಾನ್ಯ ಹಣ್ಕಾಯತಿ ರಸಾರ್ದ್ರ, – ನಿನ್ನವರ
ಉಲ್ಲಸದ ದುಡಿಮೆ ಸ್ವೇದಾರ್ದ್ರ, – ಅತಿಥಿಗಳ
ಕಾಣ್ಬಿವರ ಕಣ್ಣು ಸ್ನೇಹಾರ್ದ್ರ, – ನೀನಾಂತ
ಚೆನ್ನ ತುಳುವೆಸರ ಪುರುಳಾದ್ರ್ರ – ಓ ತಾಯಿ,
ನಿನ್ನಂತರಂಗ ಬಹಿರಂಗವಾದ್ರ್ರ | – ಸುಮುಖಿ!
ನಿನ್ನ ಮೇಲೀಶನಾಗಿರಲಿ ಕರುಣಾರ್ದ್ರ!

12
ನಿನ್ನ ಜಲ ನೆಲವ ಬಯಸಿ – ಬಂದವರ,
ಅನ್ಯರುಪಟಳಕೆ ಪರಿತಪಿಸಿ – ಬಂದವರ
ಎಲ್ಲವರ ಇಲ್ಲಿಯೇ ಇರಿಸಿ – ಮಕ್ಕಳೇ |
ಉಣ್ಣಿರೆಂದೆದೆ ಹಾಲ ಸುರಿಸಿ – ಮೆಯ್ಗೊತ್ತಿ,
ಒಂದೊಂದು ನುಡಿಯ ಮೇಣೊಂದೊಂದು ನಡೆಯ ಜನ-
ವೊಂದಾಗಿ ಬಾಳ್ವಂತೆ ಹರಸಿ – ಪಾಲಿಸಿದೆ
ತಂದೆ ನೀ ತಾಯ ಅರಸಿ!

13
ನಿನ್ನ ನಾನಾ ದೈವಗಳನು – ದೇವರನು
ಬಾಂಧವ್ಯದಲಿ ಬೆಸೆದು ನೀನು,
ಒಂದೆ ಸತ್ಯದ ಶಕ್ತಿಯೊಂದು ಸಾವಿರವಾಗಿ.
ನಂಬಿದರ ಕಾಪಿಡುವುದೆಂಬ ಪರಮಾರ್ಥವನು
ಬಿಂಬಿಸಿದ ಜಾಣ್ಮೆಗಾರ್ ಮಣಿಯರಮ್ಮಾ!
ಒಂದೆ ಮನದೊಂದು ಜನತೆಯ ಗೈದೆ ನಮ್ಮ

14
ತೊದಲೊ ಜಲ್ಪವೊ ಮುದ್ದು ನುಡಿಯೋ,- ಹಸುಗೂಸಿ-
ನುಲಿಗೆ ಮನಸೋತದನೆ ತಾಯುಲಿಯಳೋ ? – ಅಂತೆ
ತುಳುವೊ ಕನ್ನಡವೊ ಕೊಂಕಣಿಯೊ, – ಪುತ್ರ ವ-
ತ್ಸಲೆ! ನಿನ್ನ ಹೊನ್ನುಡಿಗಳಾಗಿವೆಯಲೋ? – ನೀನು
ತುಳು ತಾಲಿ ಕಟ್ಟಿ, ಕನ್ನಡದೋಲೆಯಿಟ್ಟು, ಕೊಂ –
ಕಣಿ ಕಂಕಣವ ತೊಟ್ಟ ಮಾಂಗಲ್ಯ ಮೂರ್ತಿ!|
ನಮಿಪೆ ಓ ಕನ್ನಡಿತಿ, ನಮಿಪೆ ಓ ಕೊಂಕಣಿತಿ,
ನಮಿಪೆ ಓ ತುಳುವಿತಿ, ಶ್ರೀಭಾರತಿ.
(1972)

ಮೂರನೆಯ ಭಾಗದಲ್ಲಿರುವ ‘ನಿನ್ನನಪ್ಪೆ’ ಎನ್ನುವ ಪದಪ್ರಯೋಗದಲ್ಲಿ ಶ್ಲೇಷಾರ್ಥವಿದೆ. ‘ಅಪ್ಪೆ’ ಎಂದರೆ ತುಳುವಿನಲ್ಲಿ ‘ತಾಯಿ’. ‘ಅಪ್ಪಲು’ ಎನ್ನುವ ಕನ್ನಡದ ಅರ್ಥವೂ ಅಲ್ಲಿಗೆ ಕೂಡಿಕೊಳ್ಳುತ್ತದೆ. ತಾಯಿಯನ್ನಪ್ಪಲು ಮಗುವಿನ ಬಾಳು ಧನ್ಯವಲ್ಲವೆ!

1994 ರಲ್ಲಿ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಸೇಡಿಯಾಪು ಅವರ ಅಪ್ರಕಟಿತ ಕವಿತೆಗಳನ್ನೂ ಈ ಹಿಂದಿನ ಪ್ರಕಟಿತ ಕವಿತೆಗಳ ಜತೆಗೆ ಸೇರಿಸಿ – ‘ಚಂದ್ರಖಂಡ (ಪರಿವರ್ಧಿತ ಮತ್ತು ಅನುಬಂಧಿತ) ಮತ್ತು ಕೆಲವು ಸಣ್ಣ ಕಾವ್ಯಗಳು’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಪ್ರಸ್ತಾವನೆ, ಮುನ್ನುಡಿಗಳೆಲ್ಲ ಸೇರಿ ಕೇವಲ 155 ಪುಟಗಳಿರುವ ‘ಸಮಗ್ರ ಕಾವ್ಯ’ ಸಂಪುಟವಿದು.

ಅವರ `ಚಂದ್ರಖಂಡ ಮತ್ತು ಕೆಲವು ಸಣ್ಣಕಾವ್ಯಗಳು’ ಕೃತಿಗೆ (ಮೊದಲು ಪ್ರಕಟವಾದಾಗ, 1971 ರಲ್ಲಿ) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ವೈಚಾರಿಕ ಕೃತಿಗಳು

ಸೇಡಿಯಾಪು ಅವರು ಹೆಚ್ಚು ಪ್ರಸಿದ್ಧರಾಗಿರುವುದು ಅವರ ವೈಚಾರಿಕ ಕೃತಿಗಳಿಂದಾಗಿ; ಛಂದಸ್ಸು ಮತ್ತು ವ್ಯಾಕರಣಕ್ಕೆ ಸಂಬಂಧಿಸಿದ ಹೊಸ ಚಿಂತನೆಗಳಿಗಾಗಿ. ಅವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಬರೆದ ‘ಕರ್ನಾಟಕ ಕವಿತಾ ಪ್ರಪಂಚ’ ವೆಂಬ ಲೇಖನ ಆಲೂರ ವೆಂಕಟರಾಯರ ‘ಜಯಕರ್ನಾಟಕ’ದಲ್ಲಿ. ಅಚ್ಚಾಯಿತು. ಮುಂದೊಂದು ದಿನ ಕೃಷ್ಣಭಟ್ಟರನ್ನು ಕಂಡಾಗ, ಆಲೂರು ವೆಂಕಟರಾಯರು, “ನಿಮ್ಮ ಲೇಖನ ಓದಿ ನಿಮ್ಮ ಅಭಿಪ್ರಾಯಗಳನ್ನು ಗಮನಿಸಿದಾಗ ಪ್ರಾಯದಲ್ಲಿ ನೀವು ಇಷ್ಟು ಸಣ್ಣವರೆಂದು ತಿಳಿಯಲಿಲ್ಲ” ಎಂದು ಉದ್ಗರಿಸಿ, ಅವರನ್ನು ಆಲಂಗಿಸಿ ಆಶೀರ್ವದಿಸಿದರಂತೆ. 1932ರಲ್ಲಿ ಮಡಿಕೇರಿಯಲ್ಲಿ ಡಿ.ವಿ.ಜಿ.ಯವರ ಅಧ್ಯಕ್ಷತೆಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಕೃಷ್ಣಭಟ್ಟರು ‘ಕನ್ನಡ ಛಂದಸ್ಸು’ ಎಂಬ ದೀರ್ಘ ಪ್ರಬಂಧವನ್ನು ಓದಿದರು. 1944ರಲ್ಲಿ ‘ಪ್ರಬುದ್ಧ ಕರ್ಣಾಟಕ’ದ ದೀಪಾವಳಿ ಸಂಚಿಕೆಯಲ್ಲಿ ಅವರ ‘ಪಂಚಮೀ ವಿಭಕ್ತಿ’ ಎಂಬ ಲೇಖನ ಪ್ರಕಟವಾಯಿತು. ಪಂಚಮೀ ವಿಭಕ್ತಿ ಇದೆಯೋ ಇಲ್ಲವೋ ಎಂಬ ಜಿಜ್ಞಾಸೆ ನಡೆಯುತ್ತಿದ್ದ ಆ ಕಾಲದಲ್ಲಿ ಕೃಷ್ಣಭಟ್ಟರು ‘ಕನ್ನಡದಲ್ಲಿ ಪಂಚಮೀ ವಿಭಕ್ತಿ ಸಹಜವಾಗಿಯೇ ಇದೆ’ ಎಂಬುದನ್ನು ಅನೇಕ ಆಧಾರಗಳಿಂದ ನಿಸ್ಸಂದಿಗ್ಧವಾಗಿ ಸಾಧಿಸಿದರು. ಧಾರವಾಡದಲ್ಲಿ ಸೇಡಿಯಾಪು ನೀಡಿದ ಮೂರು ಉಪನ್ಯಾಸಗಳು ‘ಕನ್ನಡ ವರ್ಣಗಳು’ ಎಂಬ ಪುಸ್ತಕವಾಗಿ ಮುದ್ರಿತವಾಯಿತು.

ಮಣಿಪಾಲಕ್ಕೆ ಬಂದಮೇಲೆ ಸೇಡಿಯಾಪು ಕೃಷ್ಣಭಟ್ಟರ ಮಹತ್ವದ ವೈಚಾರಿಕ ಗ್ರಂಥಗಳು ಪ್ರಕಟವಾದವು. 1975ರಲ್ಲಿ ‘ಕೆಲವು ದೇಶನಾಮಗಳು’ ಎಂಬ ಗ್ರಂಥ ಪ್ರಕಟವಾಯಿತು. 1985ರಲ್ಲಿ ಪ್ರಕಟವಾದ ‘ಛಂದೋಗತಿ’ ಗ್ರಂಥಕ್ಕೆ ‘ವರ್ಧಮಾನ ಪ್ರಶಸ್ತಿ’ ಲಭಿಸಿತು. ಇವುಗಳು ಮತ್ತು, ‘ಕನ್ನಡ ಛಂದಸ್ಸು’ (1889), ವೈಚಾರಿಕ ಬರಹಗಳ ಬೃಹತ್ ಸಂಪುಟ ‘ವಿಚಾರ ಪ್ರಪಂಚ’ (1992), ‘ತಥ್ಯದರ್ಶನ’ (1991), ಡಾ. ಪಾದೇಕಲ್ಲು ನರಸಿಂಹ ಭಟ್ಟರು ಮಾಡಿದ ಇದರ ಇಂಗ್ಲಿಷ್ ಅನುವಾದ ‘ಡಿಸ್ಕವರಿ ಆಫ್ ಫ್ಯಾಕ್ಟ್ಸ್’ (1996) – ಇವು ಕನ್ನಡ ಶಬ್ದಮೂಲ ಚಿಂತನೆ, ವ್ಯಾಕರಣ ಶಾಸ್ತ್ರ, ಛಂದಶ್ಶಾಸ್ತ್ರಗಳಿಗೆ ಮತ್ತು ವೈಚಾರಿಕ ಸಾಹಿತ್ಯಕ್ಕೆ ಸೇಡಿಯಾಪು ಅವರ ಮಹತ್ವದ ಕೊಡುಗೆಗಳು.

‘ತಥ್ಯದರ್ಶನ’ ಸೇಡಿಯಾಪು ಕೃಷ್ಣಭಟ್ಟರು ತಮ್ಮ ತೊಂಬತ್ತನೆಯ ಹುಟ್ಟುಹಬ್ಬದ ನೆನಪಿಗೆಂಬಂತೆ ಕನ್ನಡಿಗರಿಗೆ ನೀಡಿದ ಕೊಡುಗೆ. ಆರ್ಯ – ವರ್ಣ – ಜಾತಿ – ಲಿಂಗ ಈ ನಾಲ್ಕು ಪದಗಳ ಕುರಿತಾದ ಚಿಂತನೆಯು ಇದರಲ್ಲಿದೆ. ‘ಆರ್ಯ’ರೆಂದರೆ ಒಂದು ಜನಾಂಗ, ವರ್ಣ ಮತ್ತು ಜಾತಿ ಎಂದರೆ ಒಂದೇ, ಲಿಂಗ ಎಂದರೆ ಜನನೇಂದ್ರಿಯ ಸಂಕೇತ ಎಂಬ ಅಪಾರ್ಥಗಳನ್ನು ಅವರು ಇದರಲ್ಲಿ ನಿವಾರಿಸಿದ್ದಾರೆ. ಆರ್ಯವೆಂಬುದು ಜನಾಂಗವಾಚಕವಲ್ಲ. ಅದು ಸಂಸ್ಕೃತಿ ಸೂಚಕವೆಂದು ಅವರು ಪ್ರತಿಪಾದಿಸಿದ್ದಾರೆ. ಪುಸ್ತಕದ ಇಂಗ್ಲಿಷ್ ಅನುವಾದ ‘Discovery of Facts’ ಎಂಬ ಹೆಸರಿನಲ್ಲಿ, 1996ರ ಜೂನ್ 8ರಂದು ಅವರ ತೊಂಬತ್ತೈದನೆಯ ಜನ್ಮದಿನದಂದು ಬಿಡುಗಡೆಗೊಂಡಿತು. ಸೇಡಿಯಾಪು ಅವರ ಮಣಿಪಾಲದ ಮನೆಯಲ್ಲಿ ಶಿವರಾಮ ಕಾರಂತರು ಬಿಡುಗಡೆ ಮಾಡಿದರು. ಅದೇ ದಿನ ರಾತ್ರಿ ಸೇಡಿಯಾಪು ನಿಧನರಾದರು.

ಬಡತನ ಮತ್ತು ಅನಾರೋಗ್ಯ, ಅಧ್ಯಯನ ಮತ್ತು ಪರಾಮರ್ಶನಕ್ಕೆ ಗ್ರಂಥಗಳ ಅಲಭ್ಯತೆ ಇದ್ದ ಕಾಲದಲ್ಲಿಯೂ ಸೇಡಿಯಾಪು ಅವರು ವಿದ್ವತ್ ಪ್ರತಿಭೆಯಾಗಿ ರೂಪುಗೊಂಡರು. ಮುಂದೆ ಅಲಾಶಿಯಸ್ ಕಾಲೇಜಿನ ಗ್ರಂಥಾಲಯವನ್ನು ಅವರು ಚೆನ್ನಾಗಿ ಬಳಸಿಕೊಂಡಿರಬೇಕು. ಅವರ ಸ್ಮರಣಶಕ್ತಿ ಅಗಾಧವಾಗಿತ್ತು ಎಂದು ಡಾ. ಪಾದೇಕಲ್ಲು ವಿಷ್ಣು ಭಟ್ಟರು ದಾಖಲಿಸಿದ್ದಾರೆ. ಮಹತ್ವದ ವಿಚಾರಗಳನ್ನು ಉಕ್ತಲೇಖನದ ಮಾದರಿಯಲ್ಲಿ ಬರೆಯಬೇಕಾದರೆ ಅವರ ಧೀಃಶಕ್ತಿ ಅತ್ಯದ್ಭುತವಾಗಿದ್ದುದರಲ್ಲಿ ಸಂದೇಹವಿಲ್ಲ. ಅವರಿಗೆ ಕನ್ನಡ, ಸಂಸ್ಕೃತ, ತುಳು, ತಮಿಳು, ಹಿಂದಿ, ಮಲಯಾಳ, ತೆಲುಗು ಮುಂತಾದ ಭಾಷೆಗಳು ಬರುತ್ತಿದ್ದವು. ಕೆಲವು ದೇಶನಾಮಗಳು ಮುಂತಾದ ಪುಸ್ತಕಗಳಲ್ಲಿ ಉದಾಹರಣೆಗಳನ್ನು ಕೊಡುವಾಗ ಈ ಬಹುಭಾಷಾ ಜ್ಞಾನ ಅವರ ಸಹಾಯಕ್ಕೆ ಬಂದಿತ್ತು. ಪ್ರತಿಯೊಂದನ್ನೂ ಸ್ವಂತವಾಗಿ ವಿಚಾರ ಮಾಡಬೇಕು ಎನ್ನುವುದು ಅವರಲ್ಲಿ ಮೊದಲಿನಿಂದಲೂ ಇದ್ದ ತುಡಿತ. ಅದರಿಂದಾಗಿ ಅವರು ಕನ್ನಡದ ಪ್ರಮುಖ ಸ್ವೋಪಜ್ಞ ಚಿಂತಕರಾಗಿ ರೂಪುಗೊಂಡರು.

`ಛಂದೋಗತಿ’ ಕೃತಿಗೆ 1985ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ವರ್ಧಮಾನ ಪ್ರಶಸ್ತಿ (1991) ಲಭಿಸಿವೆ. ಸೇಡಿಯಾಪು ಅವರಿಗೆ 1972ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ದೊರಕಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1994), ಈಗಾಗಲೇ ಹೇಳಿದಂತೆ ಮರಣೋತ್ತರವಾಗಿ ಪಂಪ ಪ್ರಶಸ್ತಿ ಸಂದಿದೆ. ಹೀಗೆ ಕನ್ನಡ ನಾಡು ತಮ್ಮ ಪಾಡಿಗೆ ತಾವು ವಿದ್ವತ್ ಕಾರ್ಯಗಳಲ್ಲಿ ತೊಡಗಿದ್ದ ಮತ್ತು ಅಪರೂಪದ ಸೃಜನಶೀಲ ಕೃತಿಗಳನ್ನು ನೀಡಿದ ಸೇಡಿಯಾಪು ಅವರ ವಿಶಿಷ್ಟ ಕೊಡುಗೆಯನ್ನು ಗುರುತಿಸಿದೆ.

*****

ಗ್ರಂಥ ಋಣ:
‘ಸೇಡಿಯಾಪು’: ಪಾದೆಕಲ್ಲು ವಿಷ್ಣು ಭಟ್ಟ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ. 1996

ಕೃತಜ್ಞತೆಗಳು:

1. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.
2. ಸೇಡಿಯಾಪು ಜಯರಾಮ ಭಟ್
3. ಡಾ. ಪಾದೆಕಲ್ಲು ವಿಷ್ಣು ಭಟ್
4. ಡಾ. ನಾ. ಮೊಗಸಾಲೆ
5. ಕನ್ನಡ ಸಂಘ, ಕಾಂತಾವರ.