Advertisement
ನಾಕವೋ? ನರಕವೋ?!: ಜಯಲಕ್ಷ್ಮಿ ಪಾಟೀಲ್ ಅಂಕಣ

ನಾಕವೋ? ನರಕವೋ?!: ಜಯಲಕ್ಷ್ಮಿ ಪಾಟೀಲ್ ಅಂಕಣ

ಕಾಶ್ಮೀರವನ್ನು ನೋಡಿಯೇ ಇಲ್ಲದ ಆದರೆ ಮತ್ತೂ ಮತ್ತೂ ಆತಂಕವಾದಿಗಳ ದಾಳಿಗೆ, ಧರ್ಮಗಳ ಮೂಲಕ ಅಲ್ಲಿನ ಜನರನ್ನು ಒಡೆದು ಆಳುತ್ತಿರುವವರ ದಾಳಿಗೆ ಒಳಗಾಗುತ್ತಲೇ ಇರುವ ಕಾಶ್ಮೀರ ಕುರಿತು ನನಗೆ ಯಾವಾಗಲೂ ಭಯ ಮಿಶ್ರಿತ ಕುತೂಹಲ. ಕಾಶ್ಮೀರ ನನಗೆ ರಮ್ಯವಾಗಿ ಎಂದಾದರೂ ಕಂಡಿದ್ದರೆ ಅದು ಅದು ಶಮ್ಮಿ ಕಪೂರ್, ಶಶಿ ಕಪೂರ್ ಅವರ ಸಿನಿಮಾಗಳಲ್ಲಿ. ಇತ್ತೀಚಿನ ಪೆಹಲ್‌ಗಾಮ್ ಅಟ್ಯಾಕ್‌ವರೆಗೂ ಉಗ್ರಗಾಮಿಗಳ ಅಟ್ಟಹಾಸದ ಪ್ರಕರಣಗಳನ್ನೆ ಕೇಳುತ್ತಾ ಬಂದಿದ್ದೇನೆ. ಹೊರಗಿನವರು ಸಾಲದು ಅಂತ ನಮ್ಮ ರಾಜಕಾರಣಿಗಳ ಧರ್ಮದಾಟ ಬೇರೆ! ಅಯ್ಯೋ ಭಾರತಮಾತೆ…
ಜಯಲಕ್ಷ್ಮಿ
ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ನಾಲ್ಕನೆಯ ಬರಹ

ಕಾಶ್ಮೀರ ಎಂದರೆ ಮೊದಲೆಲ್ಲ ಅದು ಭುವಿಯ ಮೇಲಿನ ಸ್ವರ್ಗ ಎಂದೆನ್ನುವುದನ್ನು ಕೇಳುತ್ತಿದ್ದೆವು. ಆದರೀಗ ಕಾಶ್ಮೀರ ಎಂದು ಯಾರಾದರೂ ಅಂದರೂ ಸಾಕು, ‘ಮತ್ತೇನಾಯ್ತು? ಯಾರು ಎಲ್ಲಿ ಅಟ್ಯಾಕ್ ಮಾಡಿದರು? ಎಷ್ಟು ಜನ ಸತ್ತಿರಬಹುದು…?’ ಎನ್ನುವ ಆಲೋಚನೆಗಳೇ ಮೊದಲು ಬರೋದು. ಒಂದಾ ಎರಡಾ ಅಲ್ಲಿ ನಡೆದ ದಾಳಿಗಳು! ಸದಾ ಒಂದು ರೀತಿಯ ಭಯದಲ್ಲೇ ಅಲ್ಲಿನ ಜನ ಬದುಕ್ತಾರೇನೋ ಅನಿಸುತ್ತದೆ ನಮಗೆ. ಆದರೆ ತೀರ ನಾವಿಲ್ಲಿ ಊಹಿಸಿಕೊಳ್ಳುವಷ್ಟು ಆತಂಕದ ದಿನಗಳು ಈಗಿಲ್ಲವಂತೆ ಅಲ್ಲಿ. “ಆರಾಮಾಗಿ ನಾವು ಮಾಲ್‌ಗಳಿಗೆ ಹೋಗಿ ಬರ್ತೀವಿ ಈಗ, ಅಲ್ಲಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳೂ ಆಗ್ತಿವೆ; ಆದರೆ ಅವುಗಳ ಸಂಖ್ಯೆ ಹೆಚ್ಚಿಲ್ಲ, ಕಡಿಮೆ. ಅಷ್ಟರ ಮಟ್ಟಿಗೆ ನಾವೀಗ ಮುಕ್ತವಾಗಿ ಬದುಕ್ತಿದ್ದೀವಿ ಎಂದುಕೊಂಡರೂ ಭಯದ ನೆರಳೊಂದು ಸದಾ ನಮ್ಮನ್ನ ಹಿಂಬಾಲಿಸುತ್ತಲೇ ಇರುತ್ತದೆ. ಇಲ್ಲಿ ನೀವೆಲ್ಲ ಇಷ್ಟು ಬಿಂದಾಸ್ ಆಗಿ ಯಾವುದೇ ಹೆದರಿಕೆ ಆತಂಕ ಇಲ್ಲದೇ ಓಡಾಡ್ಕೊಂಡಿರ್ತೀರಿ! ನೋಡಿದ್ರೆ ಜಲಸ್ ಆಗುತ್ತೆ ನನಗೆ.” ಹೀಗೆ ಹೇಳಿದವರು ಕಳೆದ ವರ್ಷ ನಡೆದ ದಾವಣಗೆರೆಯಲ್ಲಿ ನಡೆದ ‘ರಾಷ್ಟ್ರೀಯ ಅಕ್ಷರ ಹಬ್ಬ’ದಲ್ಲಿ ಭೆಟ್ಟಿಯಾದ ಒಬ್ಬ ಕಾಶ್ಮೀರದವರು.

ಅವರನ್ನೆಲ್ಲ ಅಲ್ಲಿನ ವಾತಾವರಣ ಅದೆಷ್ಟು ಹೆದರಿಸಿ ಇಟ್ಟಿದೆಯೆಂದರೆ ಅವರು ಯಾರನ್ನೂ ನಂಬುವುದಿಲ್ಲ. ಸದಾ ಒಂದು ಎಚ್ಚರದ ರಕ್ಷಾ ಕವಚವೊಂದು ಧರಿಸಿಯೇ ಇರ್ತಾರೆ ಎನ್ನುವಂತೆ ಅವರ ವರ್ತನೆ, ಮಾತುಕತೆ.

ಕಾಶ್ಮೀರವನ್ನು ನೋಡಿಯೇ ಇಲ್ಲದ ಆದರೆ ಮತ್ತೂ ಮತ್ತೂ ಆತಾಂಕವಾದಿಗಳ ದಾಳಿಗೆ, ಧರ್ಮಗಳ ಮೂಲಕ ಅಲ್ಲಿನ ಜನರನ್ನು ಒಡೆದು ಆಳುತ್ತಿರುವವರ ದಾಳಿಗೆ ಒಳಗಾಗುತ್ತಲೇ ಇರುವ ಕಾಶ್ಮೀರ ಕುರಿತು ನನಗೆ ಯಾವಾಗಲೂ ಭಯ ಮಿಶ್ರಿತ ಕುತೂಹಲ. ಕಾಶ್ಮೀರ ನನಗೆ ರಮ್ಯವಾಗಿ ಎಂದಾದರೂ ಕಂಡಿದ್ದರೆ ಅದು ಅದು ಶಮ್ಮಿ ಕಪೂರ್, ಶಶಿ ಕಪೂರ್ ಅವರ ಸಿನಿಮಾಗಳಲ್ಲಿ. ಇತ್ತೀಚಿನ ಪೆಹಗ್ಲಾಮ್ ಅಟ್ಯಾಕ್‌ವರೆಗೂ ಉಗ್ರಗಾಮಿಗಳ ಅಟ್ಟಹಾಸದ ಪ್ರಕಾರಣಗಳನ್ನೆ ಕೇಳುತ್ತಾ ಬಂದಿದ್ದೇನೆ. ಹೊರಗಿನವರು ಸಾಲದು ಅಂತ ನಮ್ಮ ರಾಜಕಾರಣಿಗಳ ಧರ್ಮದಾಟ ಬೇರೆ! ಅಯ್ಯೋ ಭಾರತಮಾತೆ…

ಆ ಅಕ್ಷರ ಹಬ್ಬದಲ್ಲಿ ಭೆಟ್ಟಿಯಾದವರ ಸಂಬಂಧಿಕರಲ್ಲೇ ಇಬ್ಬರು ಹೆಣ್ಣುಮಕ್ಕಳು ಉಗ್ರಗಾಮಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದರಂತೆ… ಮಾತಾಡುತ್ತಾ ಮಾತಾಡುತ್ತಾ ಒಂದು ವಿಷಯ ಗೊತ್ತಾಯ್ತು. ಅದನ್ನು ಕೇಳಿ ಏನು ಹೇಳಬೇಕೋ ತಿಳಿಯದೇ ನಾನು ಮಾತು ಕಳೆದುಕೊಂಡೆ. ಹಿಂದೊಮ್ಮೆ ನಮ್ಮದೇ ಮಿಲಿಟರಿಯ ಸೈನಿಕರು ಅಲ್ಲಿನ ಊರೊಂದಕ್ಕೆ ನುಗ್ಗಿ, ಬಹಳಷ್ಟು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದರಂತೆ! ಅದರಿಂದಾಗಿ ಈಗ ಆ ಊರಿನ ಗಂಡುಮಕ್ಕಳಿಗೆ ಯಾರೂ ಹೆಣ್ಣು ಕೊಡದಂತೆ ಆಗಿ ಹೋಗಿದೆಯಂತೆ! ಬೇಲಿಯೇ ಎದ್ದು ಹೊಲ ಮೇಯ್ದ ಕತೆ ನಿಜವಾಯಿತೇ….?!!

ಘೋರ ಅನ್ಯಾಯಗಳು ನಡೆಯುತ್ತಿರುವ ಈ ನೆಲದ ಕವಿಯ ಎರಡು ಕವನಗಳನ್ನು ನಾನು ‘ರಾಷ್ಟ್ರೀಯ ಅಕ್ಷರ ಹಬ್ಬ’ಕ್ಕಾಗಿ ಅನುವಾದಿಸಿದ್ದು ಅವುಗಳನ್ನು ನಿಮಗಾಗಿ ಇಲ್ಲಿ ಹಂಚಿಕೊಳ್ಳುತ್ತಿರುವೆ.

1. ಮರುಸ್ಥಲ್ (ಮರುಭೂಮಿ)

ಬನ್ನಿ ಒಮ್ಮೆ ಆ ಮರುಭೂಮಿಯೆಡೆಗೆ
ಹೇಳುವೆ ಹನಿಗಣ್ಣಾಗಿ ವ್ಯಥೆಯಿಂದ ಕೂಡಿದ ಒಳಗುದಿಯ
ಬನ್ನಿ ಜೊತೆಯಾಗಿ ಸ್ವಲ್ಪ ದೂರ ಹೇಳುವೆ ಮನದ ಬೇಗುದಿಯ
ಸತಾಯಿಸುತ್ತಿದೆ ಒಂಟಿತನ ನನ್ನೊಳಗೆ
ಭಯದ ದಿನಗಳನು ಕುಕ್ಕಿ ಕುಕ್ಕಿ ಹೆಕ್ಕಿ ಹಾಕುತ್ತಿದೆ ನೆನಪಪಕ್ಷಿ ಎದೆಯೊಳಗೆ
ರಕ್ತಸಿಕ್ತ ಮಾಡಿದೆ ನನ್ನನು ಕಿತ್ತೆಸೆದು ನನ್ನ ಮೂಲ ಬೇರುಗಳನು
ಉಳಿಸಿಹೋಗಿದೆ ಜೊತೆಗೆ ಇಲ್ಲಿ ರಾಶಿ ರಾಶಿ ಬೂದಿಯನು
ಉಪ್ಪಿನ ಹೊದಿಕೆ ನನ್ನ ಗಾಯಗಳಿಗೆ
ಹೊಸ್ತಿಲಾಚೆಗೆ ಕಾಲಿಡದ ನಿರ್ಬಂಧದ ಅಭಿಶಾಪ
ಯಾವ ಅವಕಾಶವನ್ನೂ ಬಿಡಲಿಲ್ಲ ಅವರೋ ಇವರೋ ನನ್ನವರೋ ಇರಿಯುತ್ತಾರೆ ಆಯುಧಗಳ ಹಂಗಿಲ್ಲದೆ
ಸವತಿಯಂಥ ಕಾಲ
ತೊಂದರೆಗಳ ಬಿರುಗಾಳಿಗೆ ತತ್ತರಿಸಿ ಕಣ್ಮರೆಯಾಗುತ್ತಿವೆ ಹೂಗಳು
ಕುಸಿಯುತ್ತದೆ ಭರವಸೆ ಮಾತುಕತೆಯಲ್ಲಿಯೇ ಕಳೆದು ಹೊತ್ತು
ಬರೆಯುತ್ತಾರಾದರೂ ಯಾರು ಪರಸ್ಪರರ ವಿಧಿಯನ್ನು
ಹತಾಶೆ ದಣಿವಿನಲಿ ಗುರುತಿಸಲಿ ಹೇಗೆ ಯಾರನ್ನು
ದಂಡಿ ಭರವಸೆಗಳನ್ನು ನೀಡುತ್ತಾನೆ ಬಾಹುಬಲಿ
ಬನ್ನಿ ಒಮ್ಮೆ ಆ ಮರುಭೂಮಿಯೆಡೆಗೆ
ಹೇಳುವೆ ಹನಿಗಣ್ಣಾಗಿ ವ್ಯಥೆಯಿಂದ ಕೂಡಿದ ಒಳಗುದಿಯ.

***

2. ಸಂಚಿತ್

ಕಣ್ಣುಗಳಲ್ಲಿ ಸುಟ್ಟುಬೂದಿಯಾಗುತ್ತಿರುವ ದೃಶ್ಯ ಉಳಿದಿದೆ
ಆಡುವ ಮಾತುಗಳಲ್ಲಿ ಶವ ಹುಗಿದ ಮನ ಕಾಣುತ್ತಿದೆ
ಮನದ ಪ್ರೇಮ ಸರೋವರ ಮರುಭೂಮಿಯಾದಂತಿದೆ
ನನ್ನ ಅಸ್ತಿತ್ವದ ಬೇರುಗಳನ್ನು ಯಾರೋ ಕಿತ್ತು ಹಾಕಿದಂತಿದೆ
ತಾಳ್ಮೆಯ ಕನ್ನಡಿ ಎಂದೋ ಒಡೆದು ಹೋಗಿದೆ
ಕಾಲನ ಕೈಗೆ ಸಿಕ್ಕು ಸೂತ್ರ ಹರಿದ ಗಾಳಿಪಟವಾಗಿರುವೆ ನಾನು
ಯಾರಿಗೆ ಹೇಳಲಿ ಈ ಸ್ಥಿತಿಯ ಒಂಟಿತನಲ್ಲಿ ನೆನೆಯುತ್ತ ಛಿದ್ರವಾಗಿರುವೆ ನಾನು.

 

About The Author

ಜಯಲಕ್ಷ್ಮಿ ಪಾಟೀಲ್

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು' (ಕವನ ಸಂಕಲನ) ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ 'ಬೇಬಿ' (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. 'ಜನದನಿ' (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ  ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

6 Comments

  1. Dr Jyoti Patil

    Excellent

    Reply
    • ಜಯಲಕ್ಷ್ಮಿ

      Thanks Jyoti.

      Reply
  2. Deepika Chate

    ಭಾವನಾತ್ಮಕ ಲೇಖನ…. ಮಿಲಿಟ್ರಿ ವೇಷದಲ್ಲಿ ಆತಂಕವಾದಿಗಳೆ ಬಂದು ನಮ್ಮ ಸೈನಿಕರ ಮೇಲೆ ಅವಿಸ್ವಾಸ ಮೂಡಿಸುವಂತೆ ಮಾಡಿದ್ದರೂ ಮಾಡಿರಬಹುದಲ್ವೇ?

    Reply
    • ಜಯಲಕ್ಷ್ಮಿ

      ಆ ಕುರಿತು ತಿಳಿದಿಲ್ಲ ದೀಪಿಕಾ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

      Reply
  3. Shyamala Madhav

    ಮನಸ್ಪರ್ಶಿ! ಜಯಲಕ್ಷ್ಮೀ, ಮೂಲಕವನವನ್ನೂ ಕೊಡಬಹುದೇ?

    – ‌ಶ್ಯಾಮಲಾ ಮಾಧವ

    Reply
  4. ಜಯಲಕ್ಷ್ಮಿ

    ನಿಮಗೆ ಕಳಿಸಿರುವೆ ಶ್ಯಾಮಲಾ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ