ನಾವೆಲ್ಲರೂ ಮನುಷ್ಯರೇ ತಾನೆ? ಈವತ್ತು ಸಮತೋಲಿತ ಮನಸ್ಸಿನಿಂದ ಕೂಡಿರುವವನು ಮುಂದೆ ಜಾತಿವಾದಿಯಾಗಬಹುದು. ಅಂತಹ ಪ್ರಲೋಭನೆ, ಒತ್ತಡಗಳು ಬರಬಹುದು. ಅಥವಾ ನಾವೇ ಅದನ್ನೆಲ್ಲ ಸೃಷ್ಟಿಸಿಕೊಂಡು ಈಗ ನಾನೇನು ಮಾಡಲಿ ಎಂದು ಅಸಹಾಯಕತೆ ನಟಿಸಿ ಜಾತಿವಾದಿಯಾಗಬಹುದು. ನಮ್ಮ ಆಪ್ತರೇ ಬಹಿರಂಗದಲ್ಲಿ ಸಮಾನಭಾವದವರಾಗಿದ್ದು, ಒಳಗಡೆ ತಮ್ಮ ಜಾತಿಯ ಬಗ್ಗೆ ಅನುಕೂಲವಾಗಿ ಭಾವಿಸುತ್ತಿರಬಹುದು, ನಡೆದುಕೊಳ್ಳುತ್ತಿರಬಹುದು. ಇದು ಎಂದಿದ್ದರೂ ತಂತಿಯ ಮೇಲಿನ ನಡಿಗೆಯೇ! ಕಷ್ಟವೇ! ಆದರೆ ತಂತಿ ಅಲ್ಲಿದೆ. ಅದರ ಮೇಲೆ ನಾವು ನಡೆಯುವಾಗ ಸಹಜವಾಗಿರುವುದು, ಬಿಡುವುದು ನಮ್ಮ ಕೈಯಲ್ಲಿದೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಏಳನೆಯ ಪ್ರಬಂಧ ನಿಮ್ಮ ಓದಿಗೆ

ಈ ಪ್ರಬಂಧದ ಶೀರ್ಷಿಕೆ ನೋಡಿ ನಿಮಗೆ ಹುಬ್ಬೇರುವುದು ಮಾತ್ರವಲ್ಲ ನನ್ನ ಬಗ್ಗೆ ಅಸಹ್ಯ ಕೂಡ ಆಗಬಹುದು! ಏನಪ್ಪಾ, ಈ ಮನುಷ್ಯ ನಾಲ್ಕು ಅಕ್ಷರ ಬರೆಯಲು ಬರುತ್ತೆ ಅನ್ನುವ ಕಾರಣಕ್ಕೆ “ನಾನೇಕೆ ಜಾತಿವಾದಿಯಲ್ಲ?” ಅಂಥ ತನಗೆ ತಾನೇ ಪ್ರಶಸ್ತಿ ಪತ್ರ ಕೊಟ್ಟುಕೊಳ್ಳುವುದರ ಜೊತೆಗೆ, ಅದರ ಬಗ್ಗೆ ಡಂಗೂರ ಹೊಡೆಯುವಷ್ಟು ಅಹಂಕಾರಿಯೂ, ಅಸೂಕ್ಷ್ಮವೂ ಆಗಿರುವನಲ್ಲ ಎಂದು ನಿಮಗೆ ಹುಬ್ಬೇರಿ ಅಸಹ್ಯವಾಗಿರುವುದು ಎಷ್ಟು ನಿಜವೋ, ಪ್ರಬಂಧಕ್ಕೆ ಇಂತಹದೊಂದು ಶೀರ್ಷಿಕೆ ಕೊಡಲು, ಅದೂ ಈ ಕಾಲದಲ್ಲಿ, ಅಷ್ಟೇ ನನಗೂ ಹೆದರಿಕೆಯೇ!

ಒಂದು ರೀತಿಯಲ್ಲಿ ನೀವು ಹೀಗಳೆಯುವುದು ಸರಿಯೇ. ನಾನು ಜಾತಿವಾದಿಯೋ ಅಲ್ಲವೋ ಎಂದು ನಿರ್ಧರಿಸಬೇಕಾದವರು ಉಳಿದವರು. ಈ ಉಳಿದವರಲ್ಲಿ ಸ್ನೇಹಿತರು, ಸಮಕಾಲೀನರು, ಸಹೋದ್ಯೋಗಿಗಳು, ಬಂಧುಗಳು ಎಲ್ಲರೂ ಸೇರಿಕೊಳ್ಳುತ್ತಾರೆ. ನಿಜ, ಇವರೆಲ್ಲ ಸೇರಿ ಸರ್ವಾನುಮತದಿಂದ ಒಂದು ಪ್ರಮಾಣ ಪತ್ರ ಕೊಟ್ಟಾಗಲೇ ಸೊಗಸಿರುವುದು. ಆದರೆ ನನ್ನ ಮತವೇನೆಂದರೆ, ಪ್ರತಿಯೊಬ್ಬ ಮನುಷ್ಯನಿಗೂ ಅವನಿಗೇ ಗೊತ್ತಿರುತ್ತದೆ; ಒಳಮನಸ್ಸಿನಲ್ಲಿ, ಆತ್ಮಸಾಕ್ಷಿಯ ಸೂಕ್ಷ್ಮಭಾಗದಲ್ಲಿ ತಾನು ಜಾತಿವಾದಿಯೋ ಅಲ್ಲವೋ ಎಂದು. ಹಾಗೆ ಗೊತ್ತಿದ್ದೂ ಅದನ್ನು ವಿನಯಶೀಲವಾಗಿ ನಾಲ್ಕು ಜನರಿಗೆ ನಡೆಯಲ್ಲಿ (ನುಡಿಯಲ್ಲಿ ಅಲ್ಲ) ತಿಳಿಸಿದಾಗಲೇ ಒಂದು ಘನತೆ ಬರುವುದು. ನನ್ನ ಸ್ವಂತದ ಅನುಭವದಿಂದ ಹೇಳುವುದಾದರೆ, ಜನ ನನ್ನನ್ನು ಜಾತ್ಯಾತೀತ, ಸಾಮರಸ್ಯ ಪ್ರಜ್ಞೆಯುಳ್ಳವನು, ನಿಷ್ಪಕ್ಷಪಾತಿ ಎಂದು ಗುರುತಿಸಿ, ಸಂಸ್ಕೃತಿ ಪ್ರಶಸ್ತಿ ಕೊಟ್ಟಾಗಲೇ ನಾನು ಒಳಗಡೆ ಜಾತಿವಾದಿಯಾಗಿದ್ದುದು, ಜಾತಿ ಹಮ್ಮಿನಿಂದ ಕೂಡಿದ್ದುದು. ಅಲ್ಲದೆ ನನಗೆ ಹೀಗೆ ಪ್ರಮಾಣ ಪತ್ರ ಕೊಟ್ಟವರಿಗೆಲ್ಲ ನನ್ನಿಂದ ಏನಾದರೂ ವೈಯಕ್ತಿಕವಾಗಿ ಅನುಕೂಲವಾಗಿರುತ್ತದೆ. ಅದಕ್ಕಾಗಿ ಇಂತಹದೊಂದು ಪ್ರಮಾಣ ಪತ್ರವನ್ನು ಕೊಟ್ಟಿರುತ್ತಾರೆ. ನಾನೂ ಕೂಡ ಅವರನ್ನು ಒಲಿಸಿಕೊಳ್ಳಲು ಅವರ ಮಟ್ಟಿಗೆ ಜಾತ್ಯಾತೀತವಾಗಿ ವರ್ತಿಸಿ, ಉಳಿದಂತೆ ಅವರ ಜಾತಿಯನ್ನು ಕೊನೆಯಿಂದ ಮೊದಲವರೆಗೆ ದ್ವೇಷಿಸುತ್ತಿರಬಹುದು. ಒಳ ಸತ್ಯಗಳು ಹೀಗೆಲ್ಲ ಇರುವಾಗ ನಮ್ಮ ಬಗ್ಗೆ ನಾವೇ ಮಾತನಾಡಿಕೊಳ್ಳುವುದು ಒಳ್ಳೆಯದು. ಬೇರೆಯವರ ಜೊತೆ ಅಲ್ಲ, ನಮ್ಮ ಜೊತೆಯೇ ನಾವು ಮಾತನಾಡಿಕೊಳ್ಳಬೇಕು.

ತರ್ಕದ ಮಾತು ಬಿಡಿ, ಸ್ವಲ್ಪ ಸಮಾಧಾನವಾಗಿ ಯೋಚಿಸೋಣ. ನಾವೆಲ್ಲರೂ ಒಂದು ಜಾತಿಯಲ್ಲಿ ಹುಟ್ಟಿರುವುದು ನಿಜ. ಇದು ನಮ್ಮ ಆಯ್ಕೆಯಲ್ಲ. ಹಾಗೆಯೇ ನಮ್ಮ ತಂದೆ-ತಾಯಿಗಳ ಆಯ್ಕೆಯೂ ಅಲ್ಲ. ಯಾರೂ ಕೂಡ ಇಂತಹ ಮಕ್ಕಳೇ ನಮಗೆ ಬೇಕು ಎಂದು ಪ್ರಾರ್ಥಿಸಿಕೊಂಡಿರುವುದಿಲ್ಲ. ಒಂದು ಕುಟುಂಬದಲ್ಲಿ, ಒಂದು ಜಾತಿಯಲ್ಲಿ ಹುಟ್ಟಿದ ತಕ್ಷಣ ನಮಗೊಂದು ಗುರುತು, ಹಣೆಪಟ್ಟಿ ಸಿಗುತ್ತದೆ. ಆದರೆ ನಾವು ಬೆಳೆದಂತೆ, ನಮ್ಮ ಹಿನ್ನೆಲೆ ಹಿನ್ನೆಲೆಗೇ ಸರಿಯುತ್ತದೆ. ವಿದ್ಯೆ, ಉದ್ಯೋಗ, ಸಹೋದ್ಯೋಗಿಗಳು, ಮದುವೆ, ಆಸಕ್ತಿ, ಪ್ರವಾಸ ಎಲ್ಲವೂ ಸೇರಿಕೊಳ್ಳುತ್ತಾ ನಮ್ಮ ವ್ಯಕ್ತಿತ್ವಕ್ಕೆ ಬೇರೆ ಬೇರೆ ಪದರುಗಳು ಸೇರಿಕೊಳ್ಳುತ್ತಾ ಹೋಗುತ್ತದೆ. ಒಂದು ಹಂತದ ನಂತರ, “ಜಾತಿ”ಯ ಅಂಶ ತನ್ನ ಸ್ವಂತಿಕೆ ಮತ್ತು ಮಹತ್ವವನ್ನು ನಮ್ಮ ವ್ಯಕ್ತಿತ್ವದಲ್ಲಿ ಕಳೆದುಕೊಳ್ಳುತ್ತಾ ಹೋಗುತ್ತದೆ. ಹೀಗಾಗಬೇಕು, ಹೀಗೇ ಆಗುತ್ತದೆ ಎಂದೇ ಶಿಕ್ಷಣ, ಪ್ರವಾಸ, ಉದ್ಯೋಗ, ಗೆಳೆಯರು ಇವರೆಲ್ಲರ, ಇದೆಲ್ಲದರ ನಿರೀಕ್ಷೆ. ಭಾವನಾತ್ಮಕ ಕಾರಣಗಳಿಗಾಗಿ, ತೃಪ್ತಿಗಾಗಿ, ಸಾಮಾಜಿಕ ಗುರುತಿಗಾಗಿ ಇಂತಹದೊಂದು ಜಾತಿಗೆ ನಾನು ಸೇರಿರಬಹುದು ಎಂದು ನೀವು ಹೇಳಿಕೊಳ್ಳುತ್ತಿರಬಹುದು, ಹೇಳಿಕೊಳ್ಳಬೇಕಾಗಬಹುದು. ಸಮಾಜವು ಕೂಡ ತನ್ನ ಚಾಳಿಗನುಗುಣವಾಗಿ ನಿಮ್ಮನ್ನು ಹಾಗೇ ಗುರುತಿಸಬಹುದು. ಆದರೆ ಅದು ನಿಜವಾಗಿರುವುದಿಲ್ಲವಷ್ಟೇ? ನಿಜವಲ್ಲದಿದ್ದರೂ ನಾನು ಅದನ್ನೇ ನಂಬುತ್ತೇನೆ ಎಂದರೆ ಯಾರೇನು ಮಾಡಬಹುದು, ನಿಮ್ಮ ಬಗ್ಗೆ ಅನುಕಂಪ ತೋರಿಸಬಹುದು.

ಕೊಂಚ ಗಮನಿಸಿದರೂ ಸಾಕು, ಕನಿಷ್ಠ ತಿಳುವಳಿಕೆ ಇರುವವರಿಗೂ ಗೊತ್ತಾಗುತ್ತದೆ. ವ್ಯಕ್ತಿತ್ವ ನಿರ್ಮಾಣದಲ್ಲಿ, ಶಿಕ್ಷಣ, ಉದ್ಯೋಗ, ಕುಟುಂಬದ ಬೆಳವಣಿಗೆಯಲ್ಲಿ, ಸಮಾಜದ, ಸರ್ಕಾರದ ಪಾತ್ರವೇ ಹೆಚ್ಚಾಗಿರುತ್ತದೆ. ನೀವು ಓದುವ ಶಾಲೆ, ಓಡಾಡುವ ರಸ್ತೆ, ಪ್ರತಿಕ್ಷಣವೂ ಅನುಭವಿಸುವ ನಾನಾ ರೀತಿಯ ನಾಗರಿಕ ಸೇವೆ-ಸೌಕರ್ಯಗಳು, ಎಲ್ಲವನ್ನೂ ನೀಡುವುದು ನಿಮ್ಮ ಜಾತಿಯಲ್ಲ, ಸರ್ಕಾರ. ಸಕಲ ಜಾತಿ-ಜನಾಂಗಗಳು ಸೇರಿ ರೂಪುಗೊಂಡ ಸಮಾಜ. ಮುಂದುವರೆದ ಜಾತಿಗಳವರು ಹೀಗೆಲ್ಲ ಹೇಳಿದಾಗ ಕೊರಗಬಹುದು, ನಮ್ಮ ಪ್ರಗತಿಯಲ್ಲಿ ಸರ್ಕಾರದ ಪಾಲು ಏನಿದೆ? ನಮ್ಮ ಪ್ರತಿಭೆಯಿಂದ ನಾವು ಮುಂದೆ ಬಂದಿರುವುದು. ನಮಗೆಲ್ಲ ಸರ್ಕಾರ ಏನೂ ಮಾಡುವುದಿಲ್ಲ. ಯಾವ ರೀತಿಯ ಅನುಕೂಲವೂ ಇಲ್ಲ. ಆದರೆ ವಾಸ್ತವ ಹಾಗಲ್ಲ. ನೀವು ಪಡೆಯುವ ಶಿಕ್ಷಣಕ್ಕೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಬಡವರಿಗಿಂತ ಹೆಚ್ಚಾಗಿ ನೀವೇ ಸರ್ಕಾರದ ಎಲ್ಲ ಸೇವೆ-ಸೌಲಭ್ಯಗಳನ್ನು ಬಳಸುತ್ತೀರಿ. ನೀವು ನಡೆಸುವ ಉದ್ಯಮಗಳಿಗೆ ಸರ್ಕಾರ ತೆರಿಗೆ ರಿಯಾಯಿತಿ ನೀಡುತ್ತದೆ. ಇದಕ್ಕೆಲ್ಲ ಬೇಕಾದ ಸಂಪನ್ಮೂಲ ಸರ್ಕಾರಕ್ಕೆ ದಕ್ಕುವುದು ಎಲ್ಲರೂ ನೀಡುವ ತೆರಿಗೆ ಹಣದಿಂದ.

ಹಿಂದುಳಿದ ಜಾತಿಗಳವರು ಕೂಡ ತಮ್ಮ ಜಾತಿಗೇ ಯಾವಾಗಲೂ ಕೃತಜ್ಞರಾಗಬೇಕಾದ ಅಗತ್ಯವಿಲ್ಲ. ತಮ್ಮ ಗುರುತಿಗೆ ಅದನ್ನೇ ಮುಂದೆ ಮಾಡಬೇಕಾಗಿಲ್ಲ. ಒಂದು ನಿರ್ದಿಷ್ಟ ಜಾತಿಗೆ ಸೇರಿದ್ದರಿಂದ ಸರ್ಕಾರ ನೆರವು, ಪ್ರೋತ್ಸಾಹ ನೀಡುತ್ತಿರಬಹುದು. ಆದರೆ ಸರ್ಕಾರ ಯಾವುದೇ ಒಂದು ಜಾತಿಗೆ ಸೇರಿರುವುದಿಲ್ಲ. ನಿಮ್ಮ ಜಾತಿಗೆಂದು ಕೊಡುವ ರಿಯಾಯಿತಿ, ಸೌಕರ್ಯಗಳಿಗೆ ನಿಮ್ಮ ಜಾತಿಯವರ ನಿಲುವಿಗಿಂತ ಮುಖ್ಯವಾಗಿರುವುದು ಸರ್ಕಾರದ, ಸಮಾಜದ ನಿರ್ಧಾರ. ಇದನ್ನೆಲ್ಲ ಗಮನಿಸಿದಾಗ ಹಿಂದುಳಿದವರ ಬೆಳವಣಿಗೆಯಲ್ಲೂ ಆಯಾ ಜಾತಿಗಳ ಪಾತ್ರ ಹೆಚ್ಚಿರುವುದಿಲ್ಲ. ಅಬ್ಬಬ್ಬ ಅಂದರೆ, ಜಾತಿ ಜೀವನ ಪಯಣಕ್ಕೆ ಒಂದು ಪ್ರವೇಶ ಪತ್ರ ಕೊಡಬಹುದು.

ನಾನು ಮದ್ರಾಸಿನಲ್ಲಿದ್ದಾಗ ನೆರೆಯವರು ಎಡಪಂಥೀಯ ವಿಚಾರ, ಸಂಘಟನೆಗಳ ಬಗ್ಗೆ ಒಲವು ಹೊಂದಿದ್ದವರು. ಹಿಂದುಳಿದ ಜನಾಂಗದವರು. ಹೆಚ್ಚು ಹೆಚ್ಚು ಎಡಪಂಥೀಯರಾಗಬೇಕೆಂದು ಆ ವರ್ಗದ ಯುವಕರ ಶಿಕ್ಷಣ, ಉದ್ಯೋಗ, ಸಾಮಾಜಿಕ ಕಾಳಜಿಯ ರೂಪುಗೊಳ್ಳುವಿಕೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದರು. ಹಾಗೆ ನೆರವು ಪಡೆದವರಲ್ಲಿ ಒಬ್ಬ ಅಂತಹ ಪ್ರಮುಖ ಜಾತಿಯವನಲ್ಲ. ಒಂದು ಹಂತದ ತನಕ ಬೆಳೆದ ಮೇಲೆ ಅವನಿಗೆ ತಾನು ಹುಟ್ಟಿದ ಜಾತಿ-ವರ್ಗದವರು ನಡೆಸುವ ಪಕ್ಷ-ಸಂಘಟನೆಗಳಿಗೆ ಸೇರಿಕೊಳ್ಳಬೇಕೆನಿಸಿತು. ಸುಮ್ಮನೆ ಸೇರಿಕೊಂಡಿದ್ದರೆ ಪರವಾಗಿಲ್ಲ, ನನ್ನ ಜಾತಿಯಿಂದಾಗಿಯೇ ಯಾರೂ ನನ್ನನ್ನು ಸಮಾಜದಲ್ಲಿ, ಪಕ್ಷದಲ್ಲಿ ಗುರುತಿಸುತ್ತಿಲ್ಲ ಎಂದು ಆಪಾದಿಸಿದ. ನೆರವಾಗುತ್ತಿದ್ದ ನಮ್ಮ ನೆರೆಯ ಹಿರಿಯರಿಗೆ ಬೇಸರವಾಗಿ ಕೊಟ್ಟ ಉತ್ತರ ಬಹಳ ಸೂಕ್ಷ್ಮವಾಗಿತ್ತು. ಹೌದು! ಇದುವರೆಗೆ ನಾನಾ ಜಾತಿ-ಜನಾಂಗಗಳಿಗೆ ಸೇರಿದ ಪಕ್ಷ ನಿನ್ನನ್ನು ಇಲ್ಲಿಯ ತನಕ ಬೆಳೆಸಿದೆ, ಪ್ರತಿಷ್ಠಾಪಿಸಿದೆ. ಇದರಲ್ಲಿ ನೀನು ಹುಟ್ಟಿದ ಜಾತಿಯ ಕಾಣಿಕೆ ಏನೂ ಇಲ್ಲ. ಸಮಾಜದಿಂದ, ಪಕ್ಷದಿಂದ ಬೆಳೆದ ನಿನ್ನ ವ್ಯಕ್ತಿತ್ವವನ್ನು ಈಗ ನೀನು ತೆಗೆದುಕೊಂಡು ಹೋಗಿ ನಿನ್ನ ಜಾತಿಗೆ ಅರ್ಪಿಸುವುದು ತಪ್ಪು. ಇದುವರೆಗೆ ನಾವು ನಿನ್ನನ್ನು ಒಂದು ಜಾತಿಗೆ ಸೇರಿದವನು ಎಂದು ಕಂಡಿರಲಿಲ್ಲ. ಇನ್ನು ಮೇಲೆ ಖಂಡಿತವಾಗಿ ಹಾಗೇ ನೋಡುತ್ತೇವೆ.

ಮುಂದುವರೆದವರು ಎಂದುಕೊಂಡ ಬಲಿಷ್ಠ ಜಾತಿಗಳವರ ನಿಲುವುಗಳು ಇನ್ನೂ ಸಂಕೀರ್ಣವಾಗಿದ್ದವು. ದುರಹಂಕಾರದಿಂದ ಕೂಡಿದ್ದವು. ಒಬ್ಬರು ಪ್ರಸಿದ್ಧ ನಟಿ. ನಾನಾ ರೀತಿಯ ಪದ್ಮ ಪ್ರಶಸ್ತಿಗಳನ್ನು ಪಡೆದವರು. ಕೊಳ್ಳೆ ಹೋಗುವಷ್ಟು ಆಸ್ತಿಯಿದೆ. ಒಂದು ಭೇಟಿಯ ಸಂದರ್ಭದಲ್ಲಿ ನಾನು ತೆರಿಗೆ ಇಲಾಖೆಯ ಅಧಿಕಾರಿ ಎಂದು ಆಕೆಗೆ ತಿಳಿಯಿತು. ಸರಿ, ಕೂಗಾಡಲು ಪ್ರಾರಂಭಿಸಿದರು. ನಾನೇಕೆ ತೆರಿಗೆ ಕಟ್ಟಬೇಕು? ಸರ್ಕಾರ ನನ್ನನ್ನು ಗುರುತಿಸಿಲ್ಲ. ನನ್ನ ಜಾತಿಯವರು ನನ್ನನ್ನು ಎಷ್ಟೊಂದು ಸಮ್ಮೇಳನಗಳಿಗೆ ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ, ಎಷ್ಟು ಕಡೆ ಪ್ರತಿಮೆ ನಿಲ್ಲಿಸಿದ್ದಾರೆ. ಹಾಗಲ್ಲ ನಟಿಮಣಿಯವರೇ, ಇದೆಲ್ಲ ನೀವು ಸಾಧನೆ, ಪ್ರಸಿದ್ಧಿಯ ಒಂದು ಮಟ್ಟ ತಲುಪಿದ ಮೇಲೆ, ನಿಮ್ಮ ಜಾತಿಯವರು ನಿಮ್ಮನ್ನು ಹಿಡಿದುಕೊಂಡು ಮೆರೆಸುತ್ತಿದ್ದಾರೆ. ನೀವು ಸಾಧನೆಯ ಹಾದಿಯಲ್ಲಿದ್ದಾಗ, ಹೆಣಗಾಡುತ್ತಿದ್ದಾಗ, ನಿಮ್ಮ ಜಾತಿಯವರ‍್ಯಾರೂ ನಿಮ್ಮ ಹತ್ತಿರವಿರಲಿಲ್ಲ. ಆವಾಗ ನಿಮಗೆ ಬೆಂಬಲವಾಗಿ ನಿಂತಿದ್ದು ನಾನಾ ಜಾತಿಗಳವರು, ಸರ್ಕಾರ, ಸಮಾಜ. ಎಷ್ಟು ವಿವರಿಸಿದರೂ ಕೂಗಾಟ ಕಡಿಮೆ ಆಗಲಿಲ್ಲ. ನಟಿ ಬೇರೆ! ಹಾವಭಾವಗಳೊಡನೆ ಮಾತನಾಡುತ್ತಿದ್ದರು. ಹಿಂದಿನ ವರ್ಷಗಳ ಸೌಂದರ್ಯದ ಕಳೆ ಕೂಡ ಪೂರ್ತಿ ಮಾಸಿರಲಿಲ್ಲ. ಭೇಟಿಯಾಗಿದ್ದುದು ಆಸ್ಪತ್ರೆಯ ಸ್ವಾಗತದ ಹಾಲಿನಲ್ಲಿ. ನಾನಾದರೂ ಏನು ಮಾಡಲಿ, ಸುಮ್ಮನಾದೆ.

ಇನ್ನೊಬ್ಬರು ಜಮೀನ್ದಾರಿ ಜಾತಿಗೆ ಸೇರಿದವರು. ಬಲಿಷ್ಠ ಜಾತಿ. ಪ್ರಾಧ್ಯಾಪಕರು, ಸಾಹಿತಿಗಳು. ಕೆಲವು ಪ್ರಗತಿಪರ ಚಳುವಳಿಗಳ ನೇತಾರರು. ಅವರ ಜಾತಿಯವರು ಕೂಡ ನಾವು ಹಿಂದುಳಿದಿದ್ದೇವೆ, ನಾವು ಹಿಂದೂಗಳಲ್ಲ, ನಮಗೂ ಮೀಸಲಾತಿ ಬೇಕು, ಸಬ್ಸಿಡಿ ಬೇಕು ಎಂದು ಕೂಗಾಡಲು ಪ್ರಾರಂಭಿಸಿದರು. ಆ ದಿನಗಳಲ್ಲಿ ನಾನು ಪತ್ರಿಕೆಗೆ ಅಂಕಣ ಬರೆಯುತ್ತಿದ್ದೆ. ಒಂದು ಜಾತಿ ಹಿಂದುಳಿದಿದೆಯೋ ಇಲ್ಲವೋ ಎಂದು ನೋಡುವಾಗ ಆ ಜಾತಿಯ ಬಳಿ ಇರುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಂಪನ್ಮೂಲಗಳನ್ನು ಪರಿಗಣಿಸಬೇಕು, ಸಂಖ್ಯೆ ಮತ್ತು ರಾಜಕೀಯ ಪ್ರಭಾವವನ್ನಲ್ಲ ಎಂದು ಬರೆದೆ. ಪ್ರೊಫೆಸರ್‌ ಫೋನ್‌ ಬಂತು. ಆಸಾಮಿ ಕುಳ್ಳ, ಶಾರೀರ ಕೂಡ ಕಡಿಮೆಯೇ! ಫೋನಿನಲ್ಲೇ ಎಗರಾಡುತ್ತಿರುವುದು ಕಾಣುತ್ತಿತ್ತು. ನನ್ನನ್ನು ಚೆನ್ನಾಗಿ ಬೈದರು. ಏನು ನಮ್ಮ ಜಾತಿ ಅಂದರೆ ಏನು ಅಂಥ ತಿಳಿದುಕೊಂಡಿದ್ದೀರಿ. ನಾವೇ State, ಸರ್ಕಾರವೇ ಬೇಡ ನಮಗೆ. We are givers, not beggars and backwards ಎಂದೆಲ್ಲಾ ಕೂಗಾಡಿದರು. ಸ್ವಲ್ಪ ಸಮಾಧಾನವಾದ ಮೇಲೆ ನಾನು ಹೇಳಿದೆ; ನೀವು ದಾತರು, ಆಶ್ರಿತರಲ್ಲ. ಹಾಗೆ ದಾತರಾಗುವ ಸ್ಥಿತಿ ತಲುಪಲು ಸರ್ಕಾರ, ಸಮಾಜ ನಿಮಗೆ ನೆರವಾಗಿದೆ. ಈಗ ಸ್ವಲ್ಪ ಕಾಲ ಬೇರೆಯವರಿಗೂ ಅವಕಾಶ ಕೊಡಿ. ಇದರಿಂದ ನೀವೇನು ಹಿಂದುಳಿಯುವುದಿಲ್ಲ. ನಿಮ್ಮನ್ನು ನೀವು ನೋಡಿಕೊಳ್ಳುವಷ್ಟು ಸಂಪನ್ಮೂಲಗಳಿವೆ. ನಿಜ, ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟವಾಗಬಹುದು, ಮುಜುಗರವಾಗಬಹುದು. ಹಾಗೆಂದು ಅಷ್ಟೇ ಕಾರಣಕ್ಕೆ ಒಂದು ನಿಲುವು ತಳೆಯಬಾರದು. ಮಾನ್ಯರು ಒಪ್ಪಲಿಲ್ಲ.

ಭಾವನಾತ್ಮಕ ಕಾರಣಗಳಿಗಾಗಿ, ತೃಪ್ತಿಗಾಗಿ, ಸಾಮಾಜಿಕ ಗುರುತಿಗಾಗಿ ಇಂತಹದೊಂದು ಜಾತಿಗೆ ನಾನು ಸೇರಿರಬಹುದು ಎಂದು ನೀವು ಹೇಳಿಕೊಳ್ಳುತ್ತಿರಬಹುದು, ಹೇಳಿಕೊಳ್ಳಬೇಕಾಗಬಹುದು. ಸಮಾಜವು ಕೂಡ ತನ್ನ ಚಾಳಿಗನುಗುಣವಾಗಿ ನಿಮ್ಮನ್ನು ಹಾಗೇ ಗುರುತಿಸಬಹುದು. ಆದರೆ ಅದು ನಿಜವಾಗಿರುವುದಿಲ್ಲವಷ್ಟೇ? ನಿಜವಲ್ಲದಿದ್ದರೂ ನಾನು ಅದನ್ನೇ ನಂಬುತ್ತೇನೆ ಎಂದರೆ ಯಾರೇನು ಮಾಡಬಹುದು, ನಿಮ್ಮ ಬಗ್ಗೆ ಅನುಕಂಪ ತೋರಿಸಬಹುದು.

ನಡಾವಳಿಯಲ್ಲಿ, ನುಡಿಯಲ್ಲಿ ನಾವೇ ಇದನ್ನೆಲ್ಲ ತೋರಿಸಿಕೊಳ್ಳುವುದು ಹೇಗೆ? ಇದನ್ನೆಲ್ಲ ಸಾರ್ವಜನಿಕವಾಗಿ ತೋರಿಸಬೇಕೆ? ಸಾರ್ವಜನಿಕ ಜೀವನದಲ್ಲಿದ್ದರೆ, ನಮ್ಮ ಕೆಲಸವನ್ನು ನಿಃಸ್ಪೃಹವಾಗಿ ಮಾಡಬಹುದು, ಮಾಡಬೇಕು. ಸಾರ್ಜಜನಿಕರನ್ನೆಲ್ಲ ಗೌರವದಿಂದ ಕಾಣಬೇಕು. ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸುವಾಗ ಎಚ್ಚರದಿಂದಿರಬೇಕು. ಸ್ಪಂದನೆ, ಪ್ರತಿಕ್ರಿಯೆ, ಮಾನದಂಡ ಇದೆಲ್ಲ ವಸ್ತುನಿಷ್ಠವಾಗಿರಬೇಕು. ಇಷ್ಟಾದರೆ ಯಾರ ಪ್ರಮಾಣ ಪತ್ರವೂ ಬೇಕಾಗುವುದಿಲ್ಲ, ಆರಾಮವಾಗಿರಬಹುದು.

ಆದರೆ ನಾವೆಲ್ಲರೂ ಮನುಷ್ಯರೇ ತಾನೆ? ಈವತ್ತು ಸಮತೋಲಿತ ಮನಸ್ಸಿನಿಂದ ಕೂಡಿರುವವನು ಮುಂದೆ ಜಾತಿವಾದಿಯಾಗಬಹುದು. ಅಂತಹ ಪ್ರಲೋಭನೆ, ಒತ್ತಡಗಳು ಬರಬಹುದು. ಅಥವಾ ನಾವೇ ಅದನ್ನೆಲ್ಲ ಸೃಷ್ಟಿಸಿಕೊಂಡು ಈಗ ನಾನೇನು ಮಾಡಲಿ ಎಂದು ಅಸಹಾಯಕತೆ ನಟಿಸಿ ಜಾತಿವಾದಿಯಾಗಬಹುದು. ನಮ್ಮ ಆಪ್ತರೇ ಬಹಿರಂಗದಲ್ಲಿ ಸಮಾನಭಾವದವರಾಗಿದ್ದು, ಒಳಗಡೆ ತಮ್ಮ ಜಾತಿಯ ಬಗ್ಗೆ ಅನುಕೂಲವಾಗಿ ಭಾವಿಸುತ್ತಿರಬಹುದು, ನಡೆದುಕೊಳ್ಳುತ್ತಿರಬಹುದು. ಇದು ಎಂದಿದ್ದರೂ ತಂತಿಯ ಮೇಲಿನ ನಡಿಗೆಯೇ! ಕಷ್ಟವೇ! ಆದರೆ ತಂತಿ ಅಲ್ಲಿದೆ. ಅದರ ಮೇಲೆ ನಾವು ನಡೆಯುವಾಗ ಸಹಜವಾಗಿರುವುದು, ಬಿಡುವುದು ನಮ್ಮ ಕೈಯಲ್ಲಿದೆ ಎಂಬ ಭಾವನೆ, ತಂತಿಯ ಸೂಕ್ಷ್ಮತೆಯ ಬಗ್ಗೆ ಗೌರವವಿರಬೇಕು.

ನಾನು ಜಾತಿವಾದಿಯಲ್ಲ ಎಂದು ಕಾಣಿಸಿಕೊಳ್ಳಬೇಕಾದರೆ, ಜಾತಿ ಒಳಗೇ ಇರುವ ಬಂಧು-ಮಿತ್ರರನ್ನೆಲ್ಲ ದ್ವೇಷಿಸಬೇಕೆ? ಅವರೆಲ್ಲರೂ ಜಾತಿವಾದಿಗಳು, ನಾನು ಹಾಗಲ್ಲವೆಂದು ಪ್ರತಿಕ್ಷಣ ಸಾಬೀತು ಪಡಿಸಬೇಕೆ? ಹಾಗೆ ಮಾಡುವುದು ಕೂಡ ಇನ್ನೊಂದು ರೀತಿಯ ಜಾತೀಯತೆಯೇ! ಕೃತಕವರ್ತನೆಯೇ! ಇನ್ನೊಬ್ಬರ ಜಾತಿ ಮನೋಭಾವದೊಡನೆ ಸ್ಪರ್ಧೆ ಮಾಡುವುದರಿಂದ ನಮ್ಮ ಜಾತಿಯವರನ್ನು ಅಗತ್ಯವಿರಲಿ, ಇಲ್ಲದಿರಲಿ ಹೀಗಳೆಯುವುದರಿಂದ ನಾಲ್ಕು ಜನರು ನಮ್ಮ ಬೆನ್ನು ತಟ್ಟಬಹುದು ಅಷ್ಟೇ.

ಜಾತಿವಾದಿಯಲ್ಲ ಅನ್ನುವ ಒಂದೇ ಕಾರಣಕ್ಕೆ ನಾನು ಉತ್ತಮ ಮನುಷ್ಯನಾಗಲು ಸಾಧ್ಯವಿಲ್ಲ, ಬೇರೆ ರೀತಿಯ ಕೆಟ್ಟ ಗುಣಗಳು ನನ್ನಲ್ಲಿರಬಹುದು, ಅದನ್ನೆಲ್ಲ ಮುಚ್ಚಲು ಕೂಡ ನಾನು ಜಾತ್ಯಾತೀತನಾಗಿರಬಹುದು. ಮನುಷ್ಯ ಜಾತ್ಯಾತೀತನಾಗಿದ್ದರೆ ಸಾಕು, ಅವನ ಇತರ ಕೆಟ್ಟ ಗುಣಗಳನ್ನು ಉದಾರವಾಗಿ ನೋಡಬಹುದು, ನೋಡಬೇಕು ಎಂಬ ವಾದವು ವಿತಂಡವಾದವೇ. ಹಾಗೆಯೇ ನಾವು ಜಾತ್ಯಾತೀತವಾದಿಗಳಾಗಿದ್ದರೂ, ಮೇಲರಿಮೆ ರೂಢಿಸಿಕೊಳ್ಳುವ, ಇತರರ ಬಗ್ಗೆ ನೈತಿಕ ತೀರ್ಪು ನೀಡುವ ಅಧಿಕಾರ ನಮಗಿರುವುದಿಲ್ಲ. ನಮ್ಮ ವಲಯದಲ್ಲಿ ಇಂತಹ ಹಿರಿಯರೊಬ್ಬರಿದ್ದರು. ಮನುಷ್ಯ ಪ್ರಾಮಾಣಿಕವಾಗಿ ಜಾತ್ಯಾತೀತವಾದಿಯೇ! ಆದರೆ ಯಾವಾಗಲೂ ಜಾತಿ ಸಮಸ್ಯೆಯ ಬಗ್ಗೆಯೇ ಯೋಚಿಸುತ್ತಿದ್ದರು. ಇನ್ನೊಬ್ಬರ ಮನಸ್ಸು ಈ ವಿಷಯದಲ್ಲಿ, ಈ ಸಂದರ್ಭದಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ಕಿಲಾಡಿತನದಿಂದ ಪರೀಕ್ಷಿಸುವ ಗೀಳು.

ನನ್ನ ಬಂಧುವೊಬ್ಬಳು ವಿದೇಶದಿಂದ ಬಂದಿದ್ದಳು. ಆಕೆ ಯುರೋಪಿಯನ್ನನ್ನು ಮದುವೆಯಾಗಿದ್ದಳು. ಕೆಲವು ವರ್ಷಗಳ ಹಿಂದೆ ಮದುವೆ ಆಗುವಾಗ, ಮದುವೆ ಆದ ಹೊಸದರಲ್ಲಿ ನಮಗೆಲ್ಲಾ ಮುಜುಗರವಿತ್ತು. ಅದಕ್ಕಿಂತ ಹೆಚ್ಚಾಗಿ ಭಯವಿತ್ತು. ಕ್ರಮೇಣ ಅವರದೂ ಎಲ್ಲದರಂತೆಯೇ ಮಾಮೂಲು ದಾಂಪತ್ಯವಾಯಿತು. ಇದಕ್ಕೆ ಆ ಯರೋಪಿಯನ್‌ ಹುಡುಗನ ಸಹಜ, ಸಭ್ಯ ಜೀವಂತಿಕೆಯೂ ಸಾಕಷ್ಟು ಕಾರಣವಾಗಿತ್ತು. ಇರಲಿ, ಇದೆಲ್ಲ ನಮ್ಮ ಮನೆಯ ನಾಲ್ಕು ಗೋಡೆಯ ಒಳಗಿನ ಸಮಾಚಾರ. ನಮಗೆ ಬೇಕಾದ ರೀತಿಯಲ್ಲಿ ನಾವು ಅದನ್ನು ನಿರ್ವಹಿಸಿಕೊಂಡು ಮುಂದುವರೆಯುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ಈ ದಂಪತಿಗಳು ಬಂದಿದ್ದಾಗ ನಮ್ಮ ಪರೀಕ್ಷಾಧಿಕಾರಿಯಾದ ಜಾತ್ಯಾತೀತವಾದಿಗಳಿಗೆ ಒಂದು ಸಂದರ್ಭದಲ್ಲಿ ಇವರ ಪರಿಚಯವಾಯಿತು. ಇವರೊಡನೆ ಉತ್ಸಾಹದಿಂದ ಬೆರೆತರು. ಒಂದೇ ತೊಂದರೆ. ಅವರ ವಲಯದಲ್ಲೆಲ್ಲ ಇವರನ್ನು ವಿಶೇಷವಾಗಿ ಉಲ್ಲೇಖಿಸಿ, ಇವರ ಅಂತರ್‌ಧರ್ಮೀಯ, ಅಂತರ್‌ಜಾತೀಯ ವಿವಾಹವನ್ನು ಪ್ರಸ್ತಾಪಿಸುತ್ತಾ ಹೋದರು. ಸ್ವಲ್ಪ ದಿನದ ನಂತರ ಈ ಸಮ್ಮಿಶ್ರ ದಂಪತಿಗಳಿಗೆ ಮುಜುಗರವಾಯಿತು. ಯಾಕೆ ಎಲ್ಲ ಕಡೆಯೂ ಈ ಮನುಷ್ಯ ನಮ್ಮನ್ನು ಒಂದು ವಿಶೇಷ ಪದಾರ್ಥವೆಂಬಂತೆ, ನಮೂನೆ ಪ್ರಾಣಿಗಳಂತೆ ಪರಿಚಯಿಸುತ್ತಾನೆ, ನೋಡುತ್ತಾನೆ? ನಾವು ಈಗ ಎಲ್ಲ ದಂಪತಿಗಳಂತೆ ಸಹಜವಾಗಿದ್ದೇವೆ. ನಮಗೆ ನಮ್ಮದೇ ಆದ ಏಳುಬೀಳುಗಳಿವೆ. ಹೀಗೆ ನಮ್ಮನ್ನು ವಿಶೇಷವಾಗಿ ಪರಿಗಣಿಸುವುದು ಕೂಡ ಇನ್ನೊಂದು ರೀತಿಯ ಜಾತಿ ಭಾವನೆಯಲ್ಲವೇ? ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಒಂದು ಕ್ಷಣ ಈಕೆ ನನ್ನ ಒಳಮನಸ್ಸನ್ನು ಓದುತ್ತಿರಬಹುದೇ ಎಂಬ ಅನುಮಾನ ಬಂದು ಭಯವಾದದ್ದು ನಿಜ. ಕರೋನಾ ನಂತರ ಮತ್ತೆ ಈ ದಂಪತಿಗಳು ಬಂದಾಗ, ನನ್ನ ಬಂಧು ತಮಾಷೆ ಮಾಡಿದಳು, ಏನಂತಾರೆ ನಿಮ್ಮ Secular ಗೀಳಿನ Uncle?

ಮಕ್ಕಳನ್ನು ಹೇಗೆ ಬೆಳೆಸಬೇಕು? ಶಾಲೆಗೆ ಹೋಗುವ ಮಕ್ಕಳು ತಂದೆ-ತಾಯಿಗಳು ಅವರ ಜಾತಿ ಬಗ್ಗೆ ರೂಢಿಸಿಕೊಂಡಿರುವ ಮೇಲರಿಮೆ, ಕೀಳರಿಮೆಯ ಭಾವನೆಗಳನ್ನು ತಾವೂ ಸಹಜವಾಗಿ ರೂಢಿಸಿಕೊಳ್ಳುತ್ತಾರೆ. ಆದರೆ ಶಾಲೆಯ ಸಹಪಾಠಿಗಳಿಂದಲೂ ಪ್ರಭಾವಿತರಾಗುತ್ತಾರೆ. ಮಕ್ಕಳನ್ನು ಅವರಿಗೆ ಬೇಕಾದ ಹಾಗೆ ಸಹಜವಾಗಿ ಬೆಳೆಯಲು, ಕಲಿಯಲು ಬಿಡುವುದು ಆರೋಗ್ಯಕರವೆನಿಸುತ್ತದೆ. ಮುಂದೆ ಮಕ್ಕಳು ದೊಡ್ಡವರಾಗಿ ಹಿನ್ನೋಟದಿಂದ ಯೋಚಿಸಿದಾಗ, ನಮ್ಮ ತಂದೆ-ತಾಯಿಯಿಂದ ನಾವು ಹೀಗಾದೆವು, ಇಂತಹ ವಿವಾಹ ಮಾಡಿಕೊಂಡೆವು ಎಂದು ದೂರುವಂತಾಗಬಾರದು. ಒಬ್ಬ ಗೆಳೆಯರು ಜಾತ್ಯಾತೀತವಾದಿಗಳಾಗಿದ್ದರು. ಅವರೇ ಜಾತಿಯ ಹೊರಗೆ ಮದುವೆ ಆಗಿ ಯಶಸ್ವಿ ದಾಂಪತ್ಯ ನಡೆಸಿದ್ದರು. ಆದರೆ ಗಂಡನಿಗೆ ಕೆಲವು ಜಾತಿಗಳವರನ್ನು ಕಂಡರೆ ಆಗುತ್ತಿರಲಿಲ್ಲ. ಹೆಂಡತಿಗೂ ಅಷ್ಟೆ. ಮಕ್ಕಳ ಮದುವೆ ವಿಷಯಕ್ಕೆ ಬಂದಾಗ ಈ ಒಲವು ನಿಲುವುಗಳನ್ನು ಆಧರಿಸಿ ಮದುವೆ ಮಾಡಿದರು. ಅವರ ಆಯ್ಕೆಯಲ್ಲೇ ಮಕ್ಕಳಿಗೆ ಮಾಡಿಕೊಂಡ ಮದುವೆಗಳು ಕೂಡ ಬೇರೆ ಜಾತಿಯವೇ ಆಗಿದ್ದವು. ಮುಂದೆ ದಾಂಪತ್ಯಗಳು ಸರಿ ಕೂಡಲಿಲ್ಲ – ಬೇರೆ ಕಾರಣಗಳಿಗಾಗಿ, ಜಾತಿಯ ಕಾರಣಕ್ಕಲ್ಲ. ಆದರೂ ಮಕ್ಕಳು ತಂದೆ-ತಾಯಿ ಇಬ್ಬರ ಮನೋಧರ್ಮವನ್ನೂ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿ ಮಾತಾಪಿತರಿಂದ ದೂರವಾದರು.

ನಮ್ಮ ಜಾತಿ-ಜನಾಂಗದವರು ನಮಗೆ ಗೊತ್ತಿಲ್ಲದಂತೆಯೇ ನಮಗೆ ಸುಂದರವಾಗಿ, ಪ್ರತಿಭಾವಂತರಾಗಿ ಸಕಲ ಕಲ್ಯಾಣ ಗುಣಗಳ ಪ್ರತೀಕವಾಗಿ ಕಾಣುತ್ತಾರೆ. ಇಷ್ಟೇ ಆದರೆ ತಪ್ಪಿಲ್ಲವೇನೋ. ಹೋಲಿಕೆಯಲ್ಲೂ ಯಾವಾಗಲೂ ಹೀಗೇ ಕಾಣುತ್ತಾರೆ. ನಮಗೆ ಗೊತ್ತಿಲ್ಲದಂತೆಯೇ ನಾವು ಅವರ ಕಡೆಗೆ ಆಕರ್ಷಿತರಾಗುತ್ತೇವೆ. ನಮ್ಮಂತೆಯೇ ಇರುವವರೊಡನೆ, ನಮ್ಮಂತೆಯೇ ವಿಚಾರ ಮಾಡುವವರೊಡನೆ ಒಡನಾಡಲು ಬಯಸುತ್ತೇವೆ. ಇದು ಸಹಜವಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಸಹಜವಾಗಿರುವುದೆಲ್ಲ ಸರಿಯಾಗಿಯೂ, ಮೌಲಿಕವಾಗಿಯೂ ಇರಬೇಕಾಗಿಲ್ಲ. ಮನಃಶ್ಯಾಸ್ತ್ರೀಯವಾಗಿ ಸರಿಯೆನಿಸುವ Cultural affinity ಆಳದಲ್ಲೆಲ್ಲೋ Incest ಭಾವನೆಯೂ ಆಗಿರುತ್ತದೆ. ಇದರಿಂದೆಲ್ಲ ಯಾರಿಗೂ ಪೂರ್ಣವಾಗಿ ಬಿಡುಗಡೆಯಿಲ್ಲ. ಮನುಷ್ಯ ಸಂಬಂಧದಲ್ಲಿರಬೇಕಾದ ಘನತೆಯ ಬಗ್ಗೆ ನಮ್ಮ ಗಮನವಿರಬೇಕು. ಪ್ರತಿಯೊಂದು ಜಾತಿಗೂ ತನ್ನದೇ ಆದ ಜೀವನಶೈಲಿಯಿರುತ್ತದೆ. ಸಾಹಿತ್ಯ, ಸಂಗೀತ, ಹಬ್ಬ-ಹರಿದಿನ, ಸಾಂಸ್ಕೃತಿಕ ಆಚರಣೆಗಳಿರುತ್ತವೆ. ಇದರಲ್ಲೆಲ್ಲ ಸೌಂದರ್ಯಾತ್ಮಕ, ಸಾಂಸ್ಕೃತಿಕ ಅಂಶಗಳು ಇದ್ದೇ ಇರುತ್ತವೆ. ಜಾತಿ ಭಾವನೆಯಿಂದ ಹೊರಬರಲು ಇವುಗಳನ್ನೆಲ್ಲ ಬಿಡಬೇಕೆ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಆದರೆ ಈ ಆಚರಣೆಗಳಲ್ಲಿ ನಮ್ಮನ್ನು ಇತರರಿಂದ ಬೇರ್ಪಡಿಸುವ ಹಾಗೆ, ನಮ್ಮನ್ನು ನಾವೇ ಮೀರುವ, ಇನ್ನೊಬ್ಬರೊಡನೆ ಕರೆದೊಯ್ಯುವ ಅಂಶಗಳೂ ಇರುತ್ತವೆ. ನಿಮ್ಮ ಆಚರಣೆಗಳು ನಿಮಗೆ ನೀವು ಅನನ್ಯ, ವಿಶಿಷ್ಟ ಎಂಬ ಭಾವನೆ ಪ್ರೇರೇಪಿಸಿದರೆ ತಪ್ಪಿಲ್ಲ. ಆದರೆ ನೀವು ಶ್ರೇಷ್ಠರು, ನಿಮ್ಮ ಆಚರಣೆಯೇ ಶ್ರೇಷ್ಠ, ಇತರರು ಕೀಳು ಎಂಬ ಭಾವನೆ ಮೂಡಿದರೆ ತಪ್ಪಾಗುತ್ತದೆ. ಬಹುಪಾಲು ಆಚರಣೆ-ಅಭಿವ್ಯಕ್ತಿಗಳಲ್ಲಿ ಭಿನ್ನತೆಯಿದ್ದರೂ, ಮೂಲ ಆಶಯ, ಆರಾಧನೆಯ ಅಂಶಗಳು ಒಂದೇ ಆಗಿರುತ್ತವೆ. ಇನ್ನೊಬ್ಬರು ಕೂಡ ತಮಗೆ ಬೇಕಾದಂತೆ ಬದುಕುವ, ಆಚರಣೆಗಳನ್ನು ಸಂಘಟಿಸುವ, ಸಂಭ್ರಮಿಸುವ ಹಕ್ಕು ಹೊಂದಿರುತ್ತಾರೆ. ನಿಜ, ನಮ್ಮದಲ್ಲದ ಎಲ್ಲವನ್ನೂ ನಮಗೆ ಪ್ರೀತಿಸಿವುದು, ಗೌರವಿಸುವುದು ಸಾಧ್ಯವಿಲ್ಲ. ಏಕೆಂದರೆ, ನಮ್ಮ ಮನಸ್ಸೇ ಆ ರೀತಿಯ ತರಬೇತಿ ಪಡೆದಿಲ್ಲ. ಫಾರ್‌ಸ್ಟರ್‌ ಹೇಳುವ ಹಾಗೆ ಸಹನೆ ಮತ್ತು ವೈವಿಧ್ಯದ ಕುತೂಹಲ ನಮ್ಮನ್ನು ಜೀವನ್ಮುಖಿಯಾಗಿಡಬಹುದು (Tolerance and variety – Two cheers for democracy).

ನಾನೇಕೆ ಜಾತಿವಾದಿಯಲ್ಲ ಎಂದು ನಾನೇ ನಂಬಿ, ಇನ್ನೊಬ್ಬರನ್ನು ನಂಬಿಸಲೆಂದು ಹೊರಟು ಶುರು ಮಾಡಿದ ಬರವಣಿಗೆ, ನಾನೇಕೆ ಜಾತಿವಾದಿಯಾಗಬಾರದು, ಹಾಗಾಗಲು ಇರುವ ಸಂಕಷ್ಟಗಳೇನು ಎಂದು ನಿರೂಪಿಸಿದೆ. ನೀವು ಇದೇ ವಿಷಯದ ಬಗ್ಗೆ ಪ್ರಬಂಧ ಬರೆದರೂ ಕೂಡ ಇಂತಹ ಹೆಣಗಾಟದಲ್ಲೇ ಸಿಕ್ಕಿಹಾಕಿಕೊಳ್ಳುತ್ತೀರಿ ಎಂಬ ಭರವಸೆ ನನಗಿರುವುದರಿಂದ ಇದನ್ನು ಬರೆದು ಪ್ರಕಟಿಸುತ್ತಿದ್ದೇನೆ.