ಹಳಿಗಳ ನೆಟ್‌ವರ್ಕ್‌ಗಳು ಬೆಳೆದಂತೆ, ಒಂದೇ ಸಮಯದಲ್ಲಿ ಹಲವಾರು ರೈಲು ಗಾಡಿಗಳು ಈ ಹಳಿಗಳ ಮೇಲೆ ಓಡಾಡುತ್ತಿದ್ದವು. ಇವೆಲ್ಲವೂ ಒಂದಕ್ಕೊಂದು ಡಿಕ್ಕಿ ಹೊಡೆಯದಂತೆ ತಪ್ಪಿಸಲು ಅವುಗಳಿಗೆ ಒಂದು ಟೈಮ್ ಟೇಬಲ್ ಬೇಕಿತ್ತು. ಜೊತೆಗೆ, ಆ ಹಳಿಗಳ ಉದ್ದಕ್ಕೂ ಆ ಟೈಮ್ ಟೇಬಲ್ ಅನ್ನೇ ಅನುಸರಿಸಬೇಕಿತ್ತು. ಆ ಕಾಲದಲ್ಲಿ ರೈಲು ಗಾಡಿಗಳನ್ನು ನಡೆಸುತ್ತಿದ್ದವರು ಪ್ರೈವೇಟ್ ಕಂಪೆನಿಗಳು. ಈ ಕಂಪೆನಿಗಳವರು, ತಮ್ಮ ಕಂಪೆನಿಯ ಮುಖ್ಯ ಕಛೇರಿ ಎಲ್ಲಿತ್ತೋ ಆ ಊರಿನ ಸಮಯವನ್ನೇ ಸ್ಟಾಂಡರ್ಡ್ ಆಗಿ ಬಳಸಿ ಟೈಮ್ ಟೇಬಲ್ ಪ್ರಕಟಿಸುತ್ತಿದ್ದರು. ಆ ರೈಲು ಗಾಡಿಗಳು ಬರುವ ಪ್ಲಾಟ್‌ಫಾರ್ಮ್ ಗಳಲ್ಲಿನ ಗಡಿಯಾರ ಆ ಸಮಯವನ್ನು ತೋರಿಸುತ್ತಿತ್ತು.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

“ಈಗ ಅಲ್ಲಿ ಟೈಮ್ ಎಷ್ಟು?” ನಾನೀಗ ಕೆನಡಾದಲ್ಲಿರುವುದರಿಂದ, ಭಾರತದಿಂದ ಫೋನ್ ಕರೆ ಬಂದಾಗ ಈ ಪ್ರಶ್ನೆ ಸಾಮಾನ್ಯ. ಹಿರಿಯರು ಈ ಪ್ರಶ್ನೆ ಕೇಳುವಾಗ, ಆ ಪ್ರಶ್ನೆಯ ಹಿಂದೆ, “ನಿನ್ನನ್ನು ನಿದ್ದೆಯಿಂದ ಎಬ್ಬಿಸಿದೆನೇ?” ಅಥವಾ “ಇದು ನಿನ್ನ ಆಫೀಸ್ ಸಮಯ ಇರಬಹುದೇ?” ಎನ್ನುವಂತಹ ಕಾಳಜಿ ಇರುತ್ತವೆ. ಆದರೆ, ಮಕ್ಕಳು ಅದೇ ಪ್ರಶ್ನೆ ಕೇಳಿದಾಗ ಇರುವುದು ಅಂತಹ ಯಾವುದೂ ಕಾಳಜಿಯಲ್ಲ. ಬದಲಿಗೆ, ನಮಗಿಲ್ಲಿ ರಾತ್ರಿ/ಬೆಳಗು ಆಗಿದ್ದಾಗ ಇನ್ನೊಂದು ಊರಿನಲ್ಲಿ ಬೆಳಗು/ರಾತ್ರಿ ಆಗಿದೆಯಲ್ಲಾ ಎನ್ನುವ ಒಂದು ಬೆರಗು ಮತ್ತು ಅದು ಹೇಗೆ ಎನ್ನುವಂತಹ ಒಂದು ಕುತೂಹಲ. ಹಿಂದೊಮ್ಮೆ ಸಣ್ಣವನಿದ್ದಾಗ ನಾನೂ ಅದೇ ಪ್ರಶ್ನೆಯನ್ನು ಅಮೆರಿಕದಲ್ಲಿದ್ದ ನನ್ನ ಚಿಕ್ಕಪ್ಪನಿಗೆ ಕೇಳುತ್ತಿದ್ದೆ. ಇಂದು ಭಾರತದಲ್ಲಿರುವ ನನ್ನ ಚಿಕ್ಕಪ್ಪನ ಮೊಮ್ಮಕ್ಕಳು ಆ ಪ್ರಶ್ನೆಯನ್ನು ನನಗೆ ಕೇಳುತ್ತಾರೆ.

ಸಾವಿರಾರು ವರ್ಷಗಳ ಇತಿಹಾಸದಲ್ಲಿ, ಸನ್-ಡಯಲ್‌ ಗಳಿಂದ ಪೆಂಡುಲಂ ಗಡಿಯಾರದವರೆಗೆ ಗಡಿಯಾರದ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ್ದರೂ, ಇಂತಹ ಪ್ರಶ್ನೆ ಮೂಡುವ ಸಂದರ್ಭಗಳು ಸಾಮಾನ್ಯವಾಗಿದ್ದು ತೀರಾ ಇತ್ತೀಚೆಗೆ. ಪೆಂಡುಲಂ ಗಡಿಯಾರಗಳು ಕರಾರುವಾಕ್ಕಾಗಿ ಸಮಯ ತೋರಿಸುತ್ತಿದ್ದರೂ, ಅವು ತೋರಿಸುತ್ತಿದ್ದದ್ದು ಆ ಊರಿನ ಸಮಯ ಮಾತ್ರ.

 

ಕೇವಲ ಇನ್ನೂರು ವರ್ಷಗಳ ಹಿಂದೆ, ನೀವೇನಾದರೂ ಯೂರೋಪಿನ ಅಕ್ಕ-ಪಕ್ಕದ ಎರಡು ಸಣ್ಣ ಪಟ್ಟಣಗಳಿಗೆ ಭೇಟಿ ನೀಡಿದ್ದಿದ್ದರೆ, ಆ ಎರಡೂ ಪಟ್ಟಣಗಳಲ್ಲಿ ನೀವು ಗಡಿಯಾರದ ಗೋಪುರಗಳನ್ನು ಕಾಣಬಹುದಿತ್ತಾದರೂ, ಅವೆರಡೂ ಗಡಿಯಾರಗಳು ತೋರುತ್ತಿದ್ದ ಸಮಯ ಮಾತ್ರ ಬೇರೆ. ಇದರಿಂದ ಯಾರಿಗೂ ಏನೂ ಅಂತಹ ತೊಂದರೆ ಏನೂ ಇರಲಿಲ್ಲ. ಅವರ ಸಮಯ ಅವರಿಗೆ. ಅಷ್ಟೇ.

******

ಲಂಡನ್, ಪ್ಯಾರಿಸ್‌ ಗಳಂತಹ ದೊಡ್ಡ ದೊಡ್ಡ ನಗರಗಳಲ್ಲಿ, ಆ ಕಾಲದಲ್ಲಿ ಹಲವಾರು ಗಡಿಯಾರ ಗೋಪುರಗಳು ಇದ್ದು, ಪ್ರತಿಯೊಂದೂ ತನ್ನದೇ ಸಮಯ ತೋರುತ್ತಿದ್ದರೂ, ಅದೂ ಸಹ ಕುತೂಹಲದ ವಿಷಯವಾಗಿದ್ದಿರಬಹುದೇ ಹೊರತು ಅಂತಹ ತೊಂದರೆಯ ವಿಷಯವೇನೂ ಆಗಿರಲಿಲ್ಲ. ತೊಂದರೆ ಇದ್ದರೆ ಅದು ಖಗೋಳ ಶಾಸ್ತ್ರಜ್ಞರಿಗೋ ಅಥವಾ ಖಂಡಾಂತರ ಪ್ರಯಾಣ ಮಾಡುತ್ತಿದ್ದ ನಾವಿಕರಿಗೋ ಮಾತ್ರ.

ಆದರೆ, ದೂರ ಪ್ರಯಾಣ, ಸಾಮಾನ್ಯರಿಗೂ ಹತ್ತಿರವಾಗುತ್ತಿದ್ದಂತೆಯೇ, ಕಾಲದ ಫಜೀತಿ ಪ್ರಾರಂಭಿಸಿತು. ಇದರ ಹಿಂದಿನ ಮುಖ್ಯಕಾರಣ ರೈಲುಗಾಡಿ ತಂತ್ರಜ್ಞಾನದ ಅಭಿವೃದ್ಧಿ. ಬ್ರಿಟಿಷ್ ಲೇಖಕ ಮತ್ತು ತತ್ವಜ್ಞಾನಿ ಅಲ್ಡೂಸ್ ಹಕ್ಸ್‌ಲೀ ತನ್ನ ಬರಹವೊಂದರಲ್ಲಿ, “[ರೈಲ್-ವೇ ತಂತ್ರಜ್ಞಾನದ ಅವಿಷ್ಕಾರರಾದ] ವಾಟ್ ಮತ್ತು ಸ್ಟೀವನ್‌ಸನ್ ರೈಲು ತಂತ್ರಜ್ಞಾನದೊಂದಿಗೇ ‘ಟೈಮ್’ ಅನ್ನೂ ಸಹ ಅವಿಷ್ಕರಿಸಿದರು” ಎನ್ನುತ್ತಾನೆ.

ಸ್ಟೀಮ್ ಎಂಜಿನ್ ತಂತ್ರಜ್ಞಾನದ ಆದಿಯಲ್ಲಿ, ಅದರ ಬಳಕೆ ಬಹುಮಟ್ಟಿಗೆ ಕಲ್ಲಿದ್ದಿಲಿನ ಸಾಗಣಿಕೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಆ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ, ರೈಲುಗಳ ಬಳಕೆ ನಾಗಾಲೋಟಕ್ಕೆ ಏರಿತು. ಉದಾಹರಣೆಗೆ, ಬ್ರಿಟನ್‌ ನಲ್ಲಿ ೧೮೩೦ರಲ್ಲಿ, ರೈಲು ಹಳಿಗಳ ಒಟ್ಟು ಉದ್ದ ೧೦೦ ಮೈಲುಗಳಿಗಿಂತಾ ಕಡಿಮೆ ಇದ್ದರೆ, ಮುಂದಿನ ಮೂರೇ ದಶಕದಲ್ಲಿ ಅದರ ಉದ್ದ ೧೦,೦೦೦ ಮೈಲನ್ನು ಮೀರಿತು! ವಿಶಾಲವಾದ ಅಮೆರಿಕದಲ್ಲಿ, ೧೮೩೦ರಲ್ಲಿ ರೈಲು ಹಳಿಗಳ ಒಟ್ಟು ಉದ್ದ ಕೇವಲ ೫೦ ಮೈಲೂ ಸಹ ಇರಲಿಲ್ಲ. ಆದರೆ, ೧೮೯೦ರ ಹೊತ್ತಿಗೆ ಅದರ ಉದ್ದ ೧೫೦,೦೦೦ ಮೈಲು ಮೀರಿತ್ತು!! (ಅಮೆರಿಕನ್ ಲೇಖಕಿ ಜೆಸ್ಸಾಮಿನ್ ವೆಸ್ಟ್ ಈ ರೈಲ್ ವೇ ಅನ್ನು “ದೇಶದ ಅಂಬರವನ್ನು ಹೊಲಿಯುವ ಸೂಜಿ” ಎಂದು ಬಣ್ಣಿಸುತ್ತಾಳೆ)

ಇಂತಹ ಹಳಿಗಳ ನೆಟ್‌ವರ್ಕ್‌ಗಳು ಬೆಳೆದಂತೆ, ಒಂದೇ ಸಮಯದಲ್ಲಿ ಹಲವಾರು ರೈಲು ಗಾಡಿಗಳು ಈ ಹಳಿಗಳ ಮೇಲೆ ಓಡಾಡುತ್ತಿದ್ದವು. ಇವೆಲ್ಲವೂ ಒಂದಕ್ಕೊಂದು ಡಿಕ್ಕಿ ಹೊಡೆಯದಂತೆ ತಪ್ಪಿಸಲು ಅವುಗಳಿಗೆ ಒಂದು ಟೈಮ್ ಟೇಬಲ್ ಬೇಕಿತ್ತು. ಜೊತೆಗೆ, ಆ ಹಳಿಗಳ ಉದ್ದಕ್ಕೂ ಆ ಟೈಮ್ ಟೇಬಲ್ ಅನ್ನೇ ಅನುಸರಿಸಬೇಕಿತ್ತು. ಆ ಕಾಲದಲ್ಲಿ ರೈಲು ಗಾಡಿಗಳನ್ನು ನಡೆಸುತ್ತಿದ್ದವರು ಪ್ರೈವೇಟ್ ಕಂಪೆನಿಗಳು. ಈ ಕಂಪೆನಿಗಳವರು, ತಮ್ಮ ಕಂಪೆನಿಯ ಮುಖ್ಯ ಕಛೇರಿ ಎಲ್ಲಿತ್ತೋ ಆ ಊರಿನ ಸಮಯವನ್ನೇ ಸ್ಟಾಂಡರ್ಡ್ ಆಗಿ ಬಳಸಿ ಟೈಮ್ ಟೇಬಲ್ ಪ್ರಕಟಿಸುತ್ತಿದ್ದರು. ಆ ರೈಲು ಗಾಡಿಗಳು ಬರುವ ಪ್ಲಾಟ್‌ಫಾರ್ಮ್ ಗಳಲ್ಲಿನ ಗಡಿಯಾರ ಆ ಸಮಯವನ್ನು ತೋರಿಸುತ್ತಿತ್ತು. ಹೀಗಾಗಿ, ರೈಲು ಸಂಪರ್ಕವಿದ್ದ ಊರುಗಳಲ್ಲಿ, ಸ್ಥಳೀಯ ಸಮಯದ ಜೊತೆಗೇ “ರೈಲ್ವೇ ಟೈಮ್” ಎನ್ನುವ ಪದ್ಧತಿಯೂ ಪ್ರಾರಂಭವಾಯಿತು.

ಹಲವಾರು ಕಂಪೆನಿಗಳ ರೈಲು ಸಂಪರ್ಕವಿದ್ದ ನ್ಯೂಯಾರ್ಕ್‌ ನಂತಹ ನಗರಗಳ ರೈಲು ನಿಲ್ದಾಣಗಳಲ್ಲಿ, ಸ್ಥಳೀಯ ಸಮಯದ ಜೊತೆಗೇ, ಮೂರು ನಾಲ್ಕು ವಿವಿಧ ಸಮಯಗಳಿರುತ್ತಿದ್ದವು. ಆ ಪ್ಲಾಟ್‌ಫಾರ್ಮ್‌ ನಲ್ಲಿ ಒಂದು ಸಮಯವಾದರೆ, ಈ ಪ್ಲಾಟ್ಫಾರ್ಮ್‌ ನಲ್ಲಿ ಇನ್ನೊಂದು ಸಮಯ! ಕೆಲವೊಂದು ಸ್ಥಳಗಳಲ್ಲಿ ಇಂತಹ ವೈಚಿತ್ರ್ಯಗಳಿಂದಾಗಿ ಒಂದೇ ಗಡಿಯಾರದಲ್ಲಿ ಎರಡು ನಿಮಿಷದ-ಮುಳ್ಳುಗಳಿರುವ ಪದ್ಧತಿಯೂ ಬಂತು.

ಒಂದೇ ಸ್ಥಳದಲ್ಲಿ ಎರಡು ಮೂರು ಸಮಯಗಳಿದ್ದದ್ದರಿಂದ ತೊಂದರೆ ಅನುಭವಿಸುತ್ತಿದ್ದವರು ಕೇವಲ ರೈಲು ಪ್ರಯಾಣಿಕರಷ್ಟೇ ಅಲ್ಲ, ರೈಲು ಕಂಪೆನಿಗಳಿಗೂ ಇದೊಂದು ದೊಡ್ಡ ತಲೆನೋವೇ ಅಗಿತ್ತು. ಕೆಲವೊಂದು ಹಳಿಗಳ ಮೇಲೆ ಹಲವು ಕಂಪೆನಿಗಳ ರೈಲುಗಳು ಓಡುತ್ತಿದ್ದವು. ಆ ಎಲ್ಲಾ ಕಂಪೆನಿಗಳ ಸ್ಥಳೀಯ ವೇಳೆಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಟೈಮ್ ಟೇಬಲ್ ಮಾಡುವುದು ಸುಲಭದ ಸಂಗತಿ ಏನೂ ಆಗಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ, ಇಂತಹ ಟೈಮ್-ತಾಕಲಾಟಗಳಿಂದಾಗಿ ರೈಲು ಅಪಘಾತಗಳುಂಟಾಗುವ ಪರಿಸ್ಥಿತಿ ಏರ್ಪಟ್ಟಿತ್ತು. ಹೀಗಾಗಿ, ಇಡೀ ದೇಶಕ್ಕೆ ಒಂದು ಟೈಮ್ ಸ್ಟಾಂಡರ್ಡ್ ಇರಬೇಕೆಂದು ಬಯಸಿದವರಲ್ಲಿ ಮೊದಲಿಗರು ರೈಲ್-ವೇ ಕಂಪೆನಿ ಮಾಲಿಕರು. ರೈಲು ನೆಟ್‌ವರ್ಕ್‌ ನ ವಿಸ್ತಾರ ಹೆಚ್ಚಿದಷ್ಟೂ ಇಂತಹದೊಂದು “ಸ್ಟಾಂಡರ್ಡ್” ನಿರ್ಮಿಸುವ ಅಗತ್ಯ ಹೆಚ್ಚಾಗುತ್ತಲೇ ಹೋಯಿತು.

ಮೊದ-ಮೊದಲಲ್ಲಿ ರೈಲು ಕಂಪೆನಿಗಳವರು ರೈಲ್ವೇ ನಿಲ್ದಾಣಗಳಿರುತ್ತಿದ್ದ ಊರಿನವರನ್ನು ಸಂಪರ್ಕಿಸಿ, ಆ ಊರಿನಲ್ಲಿ ತಮ್ಮ ರೈಲ್ವೇ ಟೈಮ್ ಅನ್ನೇ ಸ್ಥಳೀಯ ಟೈಮ್ ಎಂದು ಅಧಿಕೃತಗೊಳಿಸಬೇಕೆಂದು ಒತ್ತಾಯ ಮಾಡಹತ್ತಿದರು. ಊರಿನ ರಾಜಕೀಯ ನಾಯಕರನ್ನು ಬಳಸಿಕೊಂಡು, ರೈಲ್-ವೇ ಟೈಂ ಅನ್ನು ಹೇರಲಾರಂಭಿಸಿದರು.

******

ತಮ್ಮ ಕಾಲವನ್ನು, ಕಾಲಮಾನಗಳನ್ನು ಇತರರ ಮೇಲೆ ಹೇರುವುದನ್ನು ನಾವು ಇತಿಹಾಸದುದ್ದಕ್ಕೂ ಕಾಣಬಹುದು. ಒಂದು ಸಂಸ್ಕೃತಿ, ಧರ್ಮ ಪ್ರಾಮುಖ್ಯ ಪಡೆದಂತೆ ಅದರ ಕಾಲಮಾನ ಪದ್ಧತಿಗಳು, ಆ ಸಂಸ್ಕೃತಿಗಳ ಹೊರಗೂ ಬಳಕೆಯಾಗುವುದು ಎಲ್ಲರಿಗೂ ತಿಳಿದಿರುವಂಥದ್ದೆ. ಹಲವಾರು “ಶಕೆ”ಗಳು, ಕ್ಯಾಲೆಂಡರ್ ಪದ್ಧತಿಗಳ ಹಿಂದೆ ಇರುವುದು ಇಂತಹ ಬಲವಂತದ ಹೇರಿಕೆಯೇ. ಈ ವರ್ಷವನ್ನು ವಿಶ್ವಾದ್ಯಂತ ಕ್ರೈಸ್ತಮಾನದ “೨೦೨೦” ಎಂದು ಕರೆಯುವುದರ ಹಿಂದೆ ಯೂರೋಪಿಯನ್ ಇಂಪೀರಿಯಲಿಸಂ ಇದ್ದೇ ಇದೆ ಅಲ್ಲವೇ..

೧೮೫೭ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಂತರ, ಬ್ರಿಟಿಷರು ತಮ್ಮ ಪ್ರಭುತ್ವದ ಛಾಪನ್ನು ತೋರಿಸಲು ಬಳಸಿಕೊಂಡ ಒಂದು ವಿಧಾನವೆಂದರೆ ಹಲವಾರು ನಗರಗಳಲ್ಲಿ ಗಡಿಯಾರದ ಗೋಪುರಗಳನ್ನು ನಿರ್ಮಿಸುವುದು. ಇತಿಹಾಸ ತಜ್ಞ ಥಾಮಸ್ ಮೆಟ್‌ ಕಾಫ್ ಹೇಳುವಂತೆ, ಈ ಗಡಿಯಾರಗಳು ಭಾರತೀಯ ಸಾಮಾಜಿಕ ಪ್ರಜ್ಞೆಯ ಮೇಲೆ ಬ್ರಿಟಿಷ್ ಅಧಿಪತ್ಯದ ಅಚ್ಚೊತ್ತಲು ಅತ್ಯಂತ ಉದ್ದೇಶ ಪೂರ್ವಕವಾಗಿ ಬ್ರಿಟಿಷರು ನಿರ್ಮಿಸಿದಂತಹ ಸಂಕೇತಗಳು. ಈ ಸಂಕೇತಗಳ ಹಿಂದೆ “ಭಾರತೀಯರು ಸೋಮಾರಿಗಳು, ಕಾಲನಿಷ್ಠೆ (“punctuality”) ಇಲ್ಲದವರು” ಎಂಬ ಭಾವವೂ ಇತ್ತು. ಕೆಲವೊಂದೆಡೆ, ಈ ಗಡಿಯಾರಗಳನ್ನು ನಿರ್ಮಿಸುವಾಗ, ಬೇಕೆಂದೇ, ಅಲ್ಲಿ ಮೊದಲೇ ಇದ್ದ ಸ್ಮಾರಕವೊಂದನ್ನು ನಾಶಮಾಡಿರುವುದನ್ನೂ ಇತಿಹಾಸಕಾರರು ಗುರುತಿಸುತ್ತಾರೆ. ಉದಾಹರಣೆಗೆ, ೧೮೬೨ರಲ್ಲಿ ಅಲೀಗಢ ಬ್ರಿಟಿಷರ ವಶವಾದ ನಂತರ ಅಲ್ಲಿ ನಿರ್ಮಿಸಿದ ಗಡಿಯಾರ ಗೋಪುರ ಇದ್ದ ಜಾಗದಲ್ಲಿ ಹದಿಮೂರನೆಯ ಶತಮಾನದ ಒಂದು ಸ್ಮಾರಕ ಇತ್ತು.

ಇದನ್ನು ಓದುವಾಗ ಭಾರತೀಯರಾದ ನಮಗೆ, ಈ ಗಡಿಯಾರ ಗೋಪುರಗಳ ಹಿಂದೆ ಕೇವಲ ಬ್ರಿಟಿಷರ “ಇಂಪೀರಿಯಲಿಸಂ” ಮನೋವೃತ್ತಿಯಷ್ಟೇ ಗೋಚರವಾಗಬಹುದಾದರೂ, ನನ್ನ ಪ್ರಕಾರ ಅದಕ್ಕೊಂದು ಸಂಕೀರ್ಣತೆಯೂ ಇದೆ. ಹತ್ತೊಂಬತ್ತನೆಯ ಶತಮಾನದ ವೇಳೆಗೆ, ಯೂರೋಪಿನಲ್ಲಿ ಅದರಲ್ಲೂ ಬ್ರಿಟನ್ನಿನಲ್ಲಿ ಗಡಿಯಾರಗಳು ಸಾಮಾನ್ಯವಾಗಿದ್ದವು. ಗಡಿಯಾರಗಳು ಇಲ್ಲದಿದ್ದ ಭಾರತೀಯರು ಕಾಲವನ್ನು ಸಾಂಸ್ಕೃತಿಕವಾಗಿ ಅರ್ಥೈಸಿಕೊಳ್ಳುತ್ತಿದ್ದುದೇ ಬೇರೆ ರೀತಿಯಲ್ಲಾದರೇ, ಬ್ರಿಟಿಷರು ಅದಕ್ಕೆ ಕೊಡುತ್ತಿದ್ದ ಮಹತ್ವವೇ ಬೇರೆ.

ಹತ್ತೊಂಬತ್ತನೆಯ ಶತಮಾನದ ಇಂಗ್ಲೀಷ್ ಸಾಹಿತ್ಯವನ್ನು ಗಮನಿಸಿದರೆ, ಗಡಿಯಾರಗಳ ಕುರಿತು ಕವನಗಳನ್ನು, ಕತೆಗಳನ್ನು, ಪ್ರಬಂಧಗಳನ್ನು ನೋಡಬಹುದು. ಉದಾಹರಣೆಗೆ, ೧೮೪೦ರಲ್ಲಿ ಪ್ರಕಟವಾದ “ಟು ಅ ಕ್ಲಾಕ್” ಎಂಬ ಕವನ, ಗಡಿಯಾರವನ್ನು “ಜೀವನ ಸಂಗಾತಿ, ಸ್ನೇಹಿತ, ದುಃಖಕಾಲದಲ್ಲಿ ಸಂತೈಸುವವ, ಅಷ್ಟೇ ಅಲ್ಲ ನೈತಿಕತೆಯ ಹಾದಿ ತೋರಿಸುವ ಗುರು ಸಹ” ಎನ್ನುತ್ತದೆ. ಇನ್ನೊಂದು ಕವನದಲ್ಲಿ ಗಂಡ-ಹೆಂಡಿರ ನಡುವಿನ ಜಗಳದಲ್ಲಿ ಗಡಿಯಾರ ಸಾಕ್ಷಿ ಮತ್ತು ನ್ಯಾಯಾಧೀಶ.

ಈ ಕಂಪೆನಿಗಳವರು, ತಮ್ಮ ಕಂಪೆನಿಯ ಮುಖ್ಯ ಕಛೇರಿ ಎಲ್ಲಿತ್ತೋ ಆ ಊರಿನ ಸಮಯವನ್ನೇ ಸ್ಟಾಂಡರ್ಡ್ ಆಗಿ ಬಳಸಿ ಟೈಮ್ ಟೇಬಲ್ ಪ್ರಕಟಿಸುತ್ತಿದ್ದರು. ಆ ರೈಲು ಗಾಡಿಗಳು ಬರುವ ಪ್ಲಾಟ್‌ಫಾರ್ಮ್ ಗಳಲ್ಲಿನ ಗಡಿಯಾರ ಆ ಸಮಯವನ್ನು ತೋರಿಸುತ್ತಿತ್ತು. ಹೀಗಾಗಿ, ರೈಲು ಸಂಪರ್ಕವಿದ್ದ ಊರುಗಳಲ್ಲಿ, ಸ್ಥಳೀಯ ಸಮಯದ ಜೊತೆಗೇ “ರೈಲ್ವೇ ಟೈಮ್” ಎನ್ನುವ ಪದ್ಧತಿಯೂ ಪ್ರಾರಂಭವಾಯಿತು.

ಆ ವೇಳೆಗಾಗಲೇ ಯೂರೋಪಿನಲ್ಲಿ ಕೈಗಾರಿಕಾ ಕ್ರಾಂತಿಯಾಗಿ, ಕ್ಯಾಪಿಟಲಿಸಂ ಬೆಳವಣಿಗೆಯಾದ್ದರಿಂದ, ಎಂದಿಗೂ ಲಯ ತಪ್ಪದ ಗಡಿಯಾರಗಳು, ಆ ಕಾಲದ ಬ್ರಿಟಿಷ್ ಚಿಂತಕರ ಪ್ರಕಾರ ಮನುಷ್ಯರಿಗಿಂತ ಉತ್ತಮ ಕೆಲಸಗಾರರೂ ಸಹ. ಮನುಷ್ಯರು ಗಡಿಯಾರಗಳನ್ನು ನೋಡಿ ಸಮಯನಿಷ್ಠೆ ಮತ್ತು ಕಾರ್ಯನಿಷ್ಠೆ ಕಲಿಯಬೇಕೆಂಬ ಎಷ್ಟೋ ಪ್ರಬಂಧಗಳೂ ಆ ಕಾಲದಲ್ಲಿ ಪ್ರಕಟವಾಗಿರುವುದನ್ನು ನಾವು ನೋಡಬಹುದು. (ಗಡಿಯಾರವನ್ನು ಕೊಂಚ ಮಟ್ಟಿಗೆ ಅನುಮಾನದಿಂದ ನೋಡುವ, ಗಡಿಯಾರದಂತಹ ಯಾಂತ್ರಿಕತೆಗೂ ಮಾನವೀಯತೆಗೂ ಇರುವ ವ್ಯತ್ಯಾಸವನ್ನು ಕಾಣುವ ಪ್ರವೃತ್ತಿ ಇಪ್ಪತ್ತನೆಯ ಶತಮಾನದ ಇಂಗ್ಲೀಷ್ ಸಾಹಿತ್ಯದಲ್ಲಿ ಕಾಣಸಿಗುತ್ತದೆ. “ಆರ್ಲಾಂಡೋ: ಅ ಬಯಾಗ್ರಫಿ” ಕೃತಿಯಲ್ಲಿ ಕಾಲದ ಹರಿವಿನ ಬಗೆಗೇ ಸಂದೇಹಿಸುವ ವರ್ಜೀನಿಯ ವೂಲ್ಫ್, ತನ್ನ “ಜೇಕಬ್ಸ್ ರೂಂ” ಕಾದಂಬರಿಯಲ್ಲಿ ಗಡಿಯಾರದ ತಂತ್ರಜ್ಞಾನ ಮಾನವ ವಿಕಾಸದ ಕುರುಹು ಎಂಬ ಬಗೆಗೆ ಸಂದೇಹ ವ್ಯಕ್ತಪಡಿಸುತ್ತಾಳೆ)

******

ಹೊರಗಿನವರು ತಮ್ಮ ಅನುಕೂಲಕ್ಕಾಗಿ ಸ್ಥಳೀಯ ರೂಢಿ, ಪದ್ಧತಿ, ಸಂಸ್ಕೃತಿಗಳಲ್ಲಿ ಬದಲಾವಣೆ ಬಯಸಿದರೆ, ಅದನ್ನು ಸ್ಥಳೀಯರು ವಿರೋಧಿಸುವುದು ನಿಶ್ಚಿತ. “ಟೈಮ್ ಸ್ಟಾಂಡರ್ಡ್” ಎನ್ನುವ ಬದಲಾವಣೆಯೂ ಇದರಿಂದ ಹೊರತಲ್ಲ. ಯಾವುದೋ ರೈಲು ಕಂಪೆನಿಗಳ ಒಳಿತಿಗಾಗಿ, ತಮ್ಮ ಸಮಯವನ್ನು ಬದಲಾಯಿಸುವುದಕ್ಕೆ ಹಲವಾರು ಸ್ಥಳಗಳಲ್ಲಿ ಸಹಜವಾಗಿಯೇ ವಿರೋಧ ವ್ಯಕ್ತವಾಯಿತು. ಸ್ಥಳೀಯ ಆಡಳಿತಗಳು ರೈಲ್ವೇ ಕಂಪೆನಿಗಳ ಪರ ಇರುವಂತಹ ಊರುಗಳಲ್ಲಿ, ಇಂತಹ ಬದಲಾವಣೆಯ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳೂ ಸಹ ನಡೆದವು. ಉದಾಹರಣೆಗೆ, ಅಮೆರಿಕದ ಇಂಡಿಯಾನಪೋಲಿಸ್ ನಗರದ ಸೆಂಟಿನೆಲ್ ದಿನ ಪತ್ರಿಕೆ, ತನ್ನ ನವೆಂಬರ್ ೧೭, ೧೮೮೩ ಇಂತಹದೊಂದು ಪ್ರತಿಭಟನೆಯ ವರದಿ ಪ್ರಕಟಿಸುತ್ತದೆ. ಆ ವರದಿಯ ಪ್ರಕಾರ, “ನಮ್ಮ ಊಟ, ನಿದ್ದೆ, ಕೆಲಸ… ಕೊನೆಗೆ ಮದುವೆಯ ಸಮಯವನ್ನೂ ನಿರ್ಧರಿಸುವ ಈ ರೈಲ್ವೇ ಟೈಮ್” ವಿರುದ್ಧ ಪ್ರತಿಭಟನಾಕಾರರು ಕೆಂಡ ಕಾರುತ್ತಾರೆ. ಇದು ಅವರ ದೃಷ್ಟಿಯಲ್ಲಿ ಈ ರೈಲ್-ವೇ ಟೈಮ್ ಎನ್ನುವುದು ಸಹ ಒಂದು ರೀತಿಯ ಇಂಪೀರಿಯಲಿಸಂ.

ಮಾರ್ಚ್ ೭, ೧೮೯೮ರಂದು ಮುಂಬೈನಲ್ಲಿ ಬ್ರಿಟಿಷರ ವಿರುದ್ಧ ಭಾರೀ ಪ್ರತಿಭಟನೆಗಳು ಆದವು. ಈ ಪ್ರತಿಭಟನೆಗಳ ಹಿಂದಿನ ಮುಖ್ಯಕಾರಣ, ಆ ಕಾಲದಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದ ಪ್ಲೇಗ್ ಮಾರಿಯನ್ನು ತಡೆಗಟ್ಟಲು, ಬ್ರಿಟಿಷ್ ಆಡಳಿತ ವ್ಯವಸ್ಥೆ ತೆಗೆದುಕೊಂಡಿದ್ದ ಕಠಿಣ ಕ್ರಮಗಳು. ಪೋಲೀಸರು, ಸೈನಿಕರೊಂದಿಗೆ ಮನೆ-ಮನೆಗೂ ನುಗ್ಗಿ ತಪಾಸಣೆ ನಡೆಸಿ ರೋಗಿಗಳನ್ನು, ಉಳಿದವರನ್ನು ಬೇರ್ಪಡಿಸಿ ಆಸ್ಪತ್ರೆಗಳಿಗೆ, ಊರ ಹೊರಗಿನ ಕ್ಯಾಂಪ್‌ ಗಳಿಗೆ ಕಳುಹಿಸುತ್ತಿದ್ದ ಅಂದಿನ ಬ್ರಿಟಿಷ್ ಅಧಿಕಾರಶಾಹಿ, ಸ್ಥಳೀಯ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳ ಕುರಿತು ಕೊಂಚವೂ ಸಂವೇದನಾಶೀಲವಾಗಿರಲಿಲ್ಲ. ಯಾರದೋ ಮನೆಯಲ್ಲಿ, ಸೈನಿಕರು ಹೀಗೆ ತಪಾಸಣೆ ಮಾಡುವಾಗ ಅವರು ಆ ಮನೆಯಲ್ಲಿದ್ದ ಹದಿಹರೆಯದ ಹುಡುಗಿಯೊಂದಿಗೆ ವರ್ತಿಸಿದ ಪರಿಯನ್ನು ಆ ಮನೆಯವರು ಪ್ರಶ್ನಿಸಿದ್ದು ಕೆಲಕಾಲದಲ್ಲೇ ದೊಡ್ಡ ಗಲಭೆಗೆ ಕಾರಣವಾಯಿತು. ದೊಂಬಿ, ಹಿಂಸೆಗಳು ತಾಂಡವವಾಡಿದವು. ಪೋಲೀಸರ ಗೋಲಿಬಾರಿನ ಗುಂಡೇಟಿಗೆ ಐದು ಮಂದಿ ಹತರಾದರು. ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿತು.

ಮಾರ್ಚ್ ೧೧ ರ ಶುಕ್ರವಾರದಂದು ಮತ್ತಷ್ಟು ಗಲಭೆಗಳಾದವು. ಆ ದಿನ ಸಂಜೆ ಸುಮಾರು ೭:೩೦ರ ಆಸುಪಾಸಿನಲ್ಲಿ, ಮುಂಬೈನ ಕ್ರಾಫರ್ಡ್ ಮಾರುಕಟ್ಟೆಯ ಹತ್ತಿರದ ತನ್ನ ಮನೆಯ ಬಾಲ್ಕನಿಯಲ್ಲಿದ್ದ ಬ್ರಿಟಿಷ್ ಅಧಿಕಾರಿ ಡಗ್ಲಾಸ್ ಬೆನೆಟ್‌ ನ ಪತ್ನಿಗೆ ಗುಂಡು ಹಾರಿಸುತ್ತಿರುವ ಶಬ್ದಗಳು ಕೇಳಿಸಿತು. ಆದರೆ ಈ ಬಾರಿ ಗುಂಡು ಹಾರಿಸುತ್ತಿದ್ದವರು, ಪೋಲೀಸರೋ-ಸೈನಿಕರೋ ಅಲ್ಲ, ಬದಲಿಗೆ, ಭಾರತೀಯ ಪ್ರತಿಭಟನಾಕಾರರು. ಮಾರನೆಯ ದಿನದ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯ ವರದಿಯಂತೆ, “ಮೊಹಮಡನ್ನರು ಮತ್ತು ಹಿಂದೂಗಳು” ಕ್ರಾಫರ್ಡ್ ಮಾರುಕಟ್ಟೆಯ ಗೋಪುರದಲ್ಲಿದ್ದ ಗಡಿಯಾರದ ಮುಖವನ್ನು ಗುಂಡು ಹಾರಿಸಿ ವಿಕೃತಗೊಳಿಸಿದ್ದರು.

೧೮೯೮ರ ಕ್ರಾಫರ್ಡ್ ಮಾರುಕಟ್ಟೆಯ ಗಡಿಯಾರದ ಮೇಲಿನ ಹಲ್ಲೆ, ಅದರ ಸಾಂಕೇತಿಕ ದೃಷ್ಟಿಯಿಂದ ಕುತೂಹಲಕಾರಿಯಾಗಿದ್ದರೂ, ಆ ಪ್ರತಿಭಟನೆ “ಟೈಮ್ ಸ್ಟಾಂಡರ್ಡ್” ಹೇರುವ ಕುರಿತಾದದ್ದಲ್ಲ. ಆದರೆ, ಅಂತಹದೊಂದು ಕಾಲಮಾನದ ಹೇರುವಿಕೆಯ ವಿರುದ್ಧದ ಪ್ರತಿಭಟನೆ ಸುಮಾರು ಎರಡು ದಶಕಗಳ ಮುನ್ನ ಮುಂಬೈನಲ್ಲೇ ನಡೆದಿತ್ತು.

ಆ ಕಾಲದಲ್ಲಿ, ವಿಶ್ವದ ಎಲ್ಲೆಡೆ ಸಾಮಾನ್ಯವಾಗಿದ್ದಂತೆ, ಒಂದೊಂದು ಊರಿನಲ್ಲೂ ಒಂದೊಂದು ಸಮಯವಿತ್ತು. ಭಾರತದ ಪೂರ್ವ ಕರಾವಳಿಯ ಮದ್ರಾಸಿನ ಗಡಿಯಾರಗಳು, ಅಲ್ಲಿನ ಸೂರ್ಯೋದಯಕ್ಕೆ ತಕ್ಕಂತೆ, ಮುಂಬೈ ಗಡಿಯಾರಗಳಿಗಿಂತ ಸುಮಾರು ಅರ್ಧಗಂಟೆ ಮುಂದಿರುತ್ತಿದ್ದವು.

(ಪ್ರೇಮ್‌ ಚಂದ್ ರಾಯ್‌ ಚಂದ್)

೧೮೮೧ರಲ್ಲಿ, ಬಾಂಬೆ ಗವರ್ನರ್ ಜನರಲ್ ಜೇಮ್ಸ್ ಫರ್ಗುಸನ್, ಮದ್ರಾಸ್ ಟೈಮ್ ಅನ್ನೇ ಮುಂಬೈನಲ್ಲೂ ಬಳಸುವುದಾಗಿ ಅಣತಿಯಿತ್ತ. ಇದರಿಂದಾಗಿ, ಸರ್ಕಾರಿ ಕಛೇರಿಗಳ ಮತ್ತು ಅಂಗಡಿ ಮುಂಗಟ್ಟುಗಳ ವ್ಯವಹಾರದ ವೇಳೆಯಲ್ಲಿ ಬದಲಾವಣೆಯಾಗ ಬೇಕಾಯಿತು. ಆ ಕಾಲದ ಮುಂಬೈನ ಎಲ್ಲ ವರ್ಗದ ಜನರ ದೈನಂದಿನ ಲಯ ತಪ್ಪಿದಂತೆ ಆಯಿತು. ಎಷ್ಟೋ ಕಾಲದಿಂದ ಆಚರಿಸಿಕೊಂಡು ಬಂದಿದ್ದ ಧಾರ್ಮಿಕ ಆಚರಣೆಗಳನ್ನು ಬದಲಾಯಿಸಿಕೊಳ್ಳುವಂತಹ ಪರಿಸ್ಥಿತಿ ಎದುರಾಯಿತು. ಹೀಗಾಗಿ, ಎಷ್ಟೋ ಮಂದಿ ಫರ್ಗುಸನ್‌ ನ ಅಣತಿಯನ್ನು ಧಿಕ್ಕರಿಸಿ, ಹಳೆಯ ಮುಂಬೈ ಸಮಯವನ್ನೇ ಪಾಲಿಸಿದರು. ಇದರಿಂದಾಗಿ, ಒಂದೊಂದು ಗಡಿಯಾರಗಳು ಒಂದೊಂದು ಸಮಯ ತೋರಿಸುವಂತಾಯಿತು.

ಮುಂಬೈನಲ್ಲಿ ರಾಜಾಬಾಯಿ ಕ್ಲಾಕ್ ಟವರ್ ಎಂಬ ಗಡಿಯಾರದ ಗೋಪುರವಿದೆ. ಲಂಡನ್ನಿನ ಬಿಗ್ ಬೆನ್ ಗಡಿಯಾರವನ್ನು ನೆನಪಿಸುವಂತಹದು ಇದು. ೧೮೭೮ರಲ್ಲಿ ನಿರ್ಮಿಸಿದ ಈ ಗಡಿಯಾರ-ಗೋಪುರದ ಆರ್ಕಿಟೆಕ್ಟ್ ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್. ಇವನೊಬ್ಬ ಹೆಸರಾಂತ ಆರ್ಕಿಟೆಕ್ಟ್. ಲಂಡನ್ನಿನ ಹಲವಾರು ಭವನಗಳ, ಗೋಪುರಗಳ, ಸ್ಮಾರಕಗಳ ಹಿಂದೆ ಇವನ ಕೈವಾಡವಿದೆ.

ರಾಜಾಬಾಯಿ ಕ್ಲಾಕ್ ಟವರ್ ಅನ್ನು ನಿರ್ಮಿಸಿದವರು ಬ್ರಿಟಿಷರೇ ಆದರೂ, ಅದಕ್ಕೆ ಬೇಕಿದ್ದ ಭಾರೀ ಮೊತ್ತದ ಹಣದ ಗಣನೀಯ ಅಂಶ ಬಂದದ್ದು ಪ್ರೇಮ್‌ ಚಂದ್ ರಾಯ್‌ ಚಂದ್ ಎಂಬ ಜೈನ ಉದ್ಯಮಿಯಿಂದ. ಈತ ಬಾಂಬೇ ಸ್ಟಾಕ್ ಎಕ್ಸ್‌ಚೇಂಜಿನ ಸ್ಥಾಪಕರಲ್ಲೂ ಒಬ್ಬ. ಅವನು ಗಡಿಯಾರ-ಗೋಪುರಕ್ಕೆ ದೇಣಿಗೆ ನೀಡುವಾಗ ಒಂದು ಷರತ್ತು ಹಾಕಿದ್ದ. ಆ ಷರತ್ತಿನಂತೆ, ಆ ಗೋಪುರಕ್ಕೆ ರಾಯ್‌ ಚಂದ್‌ ನ ತಾಯಿ ರಾಜಾಬಾಯಿಯ ಹೆಸರಿಡಲಾಯಿತು. ಕತ್ತಲಾಗುವ ಮುನ್ನವೇ ಆಹಾರ ಸ್ವೀಕರಿಸುವ ಕಟ್ಟಾ ಜೈನಳಾಗಿದ್ದ ಆಕೆ, ಅಂಧಳಾಗಿದ್ದರೂ, ಗಡಿಯಾರದ ನಿರ್ಮಾಣದ ನಂತರ, ಅದರ ಗಂಟೆಗಳ ನಿನಾದದಿಂದ, ಯಾರದೇ ಸಹಾಯವಿಲ್ಲದೆ, ಸಂಜೆಯ ಊಟ ಮಾಡಲು ಸಾಧ್ಯವಾಯಿತಂತೆ.

ಜೇಮ್ಸ್ ಫರ್ಗುಸನ್‌ ನ ಮದ್ರಾಸ್-ಟೈಮ್ ಅಣತಿ ಬರುವ ವೇಳೆಗೆ, ಈ ರಾಜಾಬಾಯಿ ಗಡಿಯಾರಕ್ಕೆ ಮತ್ತಷ್ಟು ಅಲಂಕಾರ ಮಾಡುವ ಸಿದ್ಧತೆಗಳು ನಡೆಯುತ್ತಿದ್ದವು. ಮುಖ್ಯವಾಗಿ, ರಾತ್ರಿ ವೇಳೆಯೂ ಟೈಂ ಕಾಣಿಸುವಂತೆ ದೀಪದ ವ್ಯವಸ್ಥೆ ಮಾಡುವುದಕ್ಕಾಗಿ ದೇಣಿಗೆ ಸಂಗ್ರಹಿಸುವುದು ನಡೆಯುತ್ತಿತ್ತು. ಫರ್ಗುಸನ್ ಮದ್ರಾಸ್-ಟೈಮ್ ಅಣತಿ ಇತ್ತಿದ್ದರೂ, ಅಂದಿನ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಅದನ್ನು ಒಪ್ಪಿರಲಿಲ್ಲ. ಹೀಗಾಗಿ ಗವರ್ನರ್ ಜನರಲ್ ಮತ್ತು ಕಾರ್ಪೊರೇಷನ್ ನಡುವೆ ತಿಕ್ಕಾಟ ಉಂಟಾಗಿತ್ತು. ರಾಜಾಬಾಯಿ ಕ್ಲಾಕ್ ಟವರ್‌ ಗೆ ಇಬ್ಬರೂ ಹಣ ಒದಗಿಸುವುದಾಗಿ ವಾಗ್ದಾನ ಮಾಡಿದರು, ಆದರೆ ಒಂದು ಷರತ್ತಿನೊಂದಿಗೆ: ಫರ್ಗುಸನ್ ಮದ್ರಾಸ್ ಟೈಮ್ ತೋರಿಸಬೇಕು ಎಂದರೆ, ಕಾರ್ಪೋರೇಷನ್ ಮುಂಬೈ ಟೈಮ್ ತೋರಿಸುವಂತೆ ಷರತ್ತು ಹಾಕಿತು. ಕೊನೆಗೆ, ೧೮೮೩ರಲ್ಲಿ ಈ ವಿವಾದ ಕೊನೆಗೊಂಡು, ಫರ್ಗುಸನ್ ತನ್ನ ಅಣತಿ ವಾಪಸು ತೆಗೆದುಕೊಂಡ. ಇವೆಲ್ಲಾ ವಿವಾದಗಳ ನಡುವೆ, ಕ್ರಾಫರ್ಡ್ ಮಾರ್ಕೆಟ್‌ ನ ಗಡಿಯಾರ ಮಾತ್ರ ಮುಂಬೈ ಟೈಂ ತೋರಿಸುವುದನ್ನು ಬಿಟ್ಟಿರಲೇ ಇಲ್ಲ

ಅರುಣಾಚಲ ಪ್ರದೇಶದ ಕಿಬಿತೂ ಪಟ್ಟಣದಲ್ಲಿ ಸೂರ್ಯೋದಯವಾದ ಸುಮಾರು ಎರಡು ಗಂಟೆಗಳ ನಂತರ, ಗುಜರಾತಿನ ಕಛ್‌ ನ ಗಡಿಯಲ್ಲಿರುವ ಗೂವಾರ್ ಮೋಟಾದಲ್ಲಿ ಸೂರ್ಯೋದಯವಾಗುತ್ತದೆ. ಆದರೆ, ಇವೆರಡೂ ಸ್ಥಳಗಳ ಗಡಿಯಾರಗಳು ಒಂದೇ ಸಮಯವನ್ನು ತೋರುತ್ತವೆ. ಏಕೆಂದರೆ, ಇಡೀ ಭಾರತದಲ್ಲಿ ಇಂಡಿಯನ್ ಸ್ಟಾಂಡರ್ಡ್ ಟೈಮ್ ಬಳಕೆಯಲ್ಲಿದೆ. ಇದು ಎಷ್ಟರ ಮಟ್ಟಿಗೆ ನ್ಯಾಯ ಎಂಬಂತಹ ಪ್ರಶ್ನೆಗಳು ಆಗ್ಗಿಂದಾಗ್ಗೆ ಎದುರಾಗುತ್ತಲೇ ಇರುತ್ತವೆ. (ಮೂವತ್ತು ವರ್ಷಗಳ ಹಿಂದೆ, ಕೆಲಸ ಮೇಲೆ ನಾನು ಅಸ್ಸಾಮಿಗೆ ಹೋಗಿದ್ದಾಗ, ಬೆಳಗಿನ ೭:೩೦ಕ್ಕೆ ಕಛೇರಿಗಳು ಬಾಗಿಲು ತೆರೆಯುತ್ತಿದ್ದುದು ಕೊಂಚ ಮಟ್ಟಿಗೆ ಕುತೂಹಲಕಾರಿ ಎನಿಸಿತ್ತು.)

ಈ ಇಂಡಿಯನ್ ಸ್ಟಾಂಡರ್ಡ್ ಟೈಂ ಹುಟ್ಟು ಹಾಕಿದವನು, ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ ಅಧಿಕಾರಿ ಓಲ್ಡ್‌ಹ್ಯಾಮ್ (ಓಲ್ಡಂ??) ಎನ್ನುವವನು. ೧೮೯೯ರಲ್ಲಿ ತನ್ನ ಭಾಷಣವೊಂದರಲ್ಲಿ ಈ ವಿಷಯವನ್ನು ಅವನು ಪ್ರಥಮ ಬಾರಿಗೆ ಪ್ರಸ್ತಾಪಿಸಿದ. ಆ ವೇಳೆಗೆ ಆಗಲೇ, ಭಾರತದಲ್ಲಿ ಮುಖ್ಯವಾಗಿ ಎರಡು ಸಮಯಗಳಿದ್ದವು: ಒಂದು ಮದ್ರಾಸ್ ಟೈಂ ಮತ್ತು ಅದಕ್ಕಿಂತ ಸುಮಾರು ೩೯ ನಿಮಿಷ ಹಿಂದಿರುವ ಬಾಂಬೇ ಟೈಂ. ಇವೆರಡೂ ಕಾಲಮಾನಗಳ ತಾಕಲಾಟಗಳ ನಡುವೆ ರೈಲ್-ವೇ ಟೈಮ್ ಸಹ ಇದ್ದು, ಅದು ಬಹು ಮಟ್ಟಿಗೆ ಮದ್ರಾಸ್ ಟೈಂ ಅನ್ನೇ ಅನುಸರಿಸುತ್ತಿತ್ತು.

೧೯೦೬ರಲ್ಲಿ ಅಂದಿನ ವೈಸ್‌ರಾಯ್‌ ಮಿಂಟೋ, ಮದ್ರಾಸ್ ಟೈಮ್ ಅನ್ನೇ ಇಂಡಿಯನ್ ಸ್ಟಾಂಡರ್ಡ್ ಟೈಮ್ ಆಗಿ ದೇಶದ ಎಲ್ಲೆಡೆ ಬಳಸುವಂತೆ ಅಣತಿ ಇತ್ತ. ಇದು ಮುಂಬೈ, ಕಲ್ಕತ್ತಾಗಳೂ ಸೇರಿದಂತೆ ಹಲವೆಡೆ ಪ್ರತಿಭಟನೆಗೆ ಕಾರಣವಾಯಿತು. ಮುಂಬೈನಲ್ಲಂತೂ ಪ್ರತಿಭಟನೆ ಬುಗಿಲೆದ್ದು, ಕಾರ್ಮಿಕರು ಇದರಿಂದ ತಮಗೆ ಮೋಸವಾಗುತ್ತದೆಂದು ಸ್ಟ್ರೈಕ್ ಮಾಡಿ ಕಾರ್ಖಾನೆಗಳು ಮುಚ್ಚಲ್ಪಟ್ಟವು. ಧಾರ್ಮಿಕ ಜನರೂ ಸಹ ಇದು ತಮ್ಮ ಧರ್ಮಕ್ಕೆ ಮಾಡುತ್ತಿರುವ ಅನ್ಯಾಯವೆಂದೇ ಬಗೆದರು. ಈ ಪ್ರತಿಭಟನೆಗಳಿಗೆ ತಲೆ ಬಾಗಿದ ಸರ್ಕಾರ ಕೊನೆಗೆ, ಮುಂಬೈ ಮತ್ತು ಕಲ್ಕತ್ತಾಗಳಿಗೆ ತಮ್ಮದೇ ಟೈಂ ಪಾಲಿಸಲು ಒಪ್ಪಿಗೆ ನೀಡಿತು.

ಭಾರತ ಸ್ವಾತಂತ್ರ್ಯ ಪಡೆದ ಹದಿನೈದು ದಿನದ ನಂತರ, ಸೆಪ್ಟೆಂಬರ್ ೧, ೧೯೪೭ರಂದು ಮತ್ತೊಮ್ಮೆ ಇಂಡಿಯನ್ ಸ್ಟಾಂಡರ್ಡ್ ಟೈಮ್ ಸ್ಥಾಪಿಸಲಾಯಿತಾದರೂ, ಮುಂಬೈ ಮತ್ತು ಕಲ್ಕತ್ತಾಗಳ ಪ್ರತಿಭಟನೆಯಿಂದಾಗಿ, ಅವೆರಡೂ ನಗರಗಳಲ್ಲಿ ತಮ್ಮದೇ ಟೈಂ ಮುಂದುವರೆಸಲಾಯಿತು. ೧೯೫೫ರ ವರೆಗೆ, ಇವೆರಡೂ ನಗರಗಳು ತಮ್ಮದೇ ಸಮಯವನ್ನು ಹೊಂದಿದ್ದವು.

ಪೂರ್ವದಿಂದ ಪಶ್ಚಿಮಕ್ಕೆ ಸುಮಾರು ೩೦೦೦ ಕಿ.ಮಿ. ಇರುವ ಭಾರತ ಒಂದು ವಿಶಾಲ ದೇಶ. ಇಂತಹ ವೈಶಾಲ್ಯಕ್ಕೆ, ಒಂದೇ ಒಂದು ಕಾಲಮಾನ ಇರುವುದು ಸೌಕರ್ಯದ ವಿಷಯ ಎಂದೆನಿಸಿದರೂ, ಈ ಸೌಕರ್ಯಕ್ಕಾಗಿ ಹಲವರು ಬೆಲೆ ತೆತ್ತುತ್ತಿದ್ದಾರೆ. ಈ ವಿಷಯವನ್ನು ಅಧ್ಯಯನ ಮಾಡಿರುವ ಅಮೆರಿಕದ ಕಾರ್ನೆಲ್ ಯೂನಿವರ್ಸಿಟಿಯ ತಜ್ಞರ ಪ್ರಕಾರ, ಭಾರತದ ಹಲವು ರಾಜ್ಯಗಳ ಮಕ್ಕಳು ನಿದ್ದೆ ಮತ್ತು ಶಿಕ್ಷಣದ ಅವಧಿಗಳ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಅವರು ಹಾಕಿರುವ ಲೆಕ್ಕಾಚಾರದ ಪ್ರಕಾರ ಇದು ಭಾರತಕ್ಕೆ ಹಲವಾರು ಸಾವಿರ ಕೋಟಿ ರೂಪಾಯಿಗಳ ಆರ್ಥಿಕ ಹಾನಿಯನ್ನೂ ಮಾಡುತ್ತಿದೆ.

ಗಡಿಯಾರಗಳು, ಟೈಮ್ ಸ್ಟಾಂಡರ್ಡ್‌ ಗಳು, ಕಾಲಮಾನಗಳು, ಕಾಲದೊಂದಿಗೆ ಪ್ರತಿ ವ್ಯಕ್ತಿಯೂ ಹೊಂದಿರುವ ಖಾಸಗಿ ಸಂಬಂಧವನ್ನು ಪಕ್ಕಕ್ಕಿರಿಸುವ, ಬೇರೆಯದೇ ಆದ ಧಾರ್ಮಿಕ, ರಾಜಕೀಯ, ಕಾರ್ಮಿಕ , ಸಾಂಸ್ಕೃತಿಕ ವ್ಯವಸ್ಥೆಯನ್ನು ಹೇರುವ ಸಂಕೇತಗಳಾಗುತ್ತವೆ.


ಸೌಕರ್ಯದ ಹೆಸರಿನಲ್ಲಿ ಮಾನವೀಯತೆಯನ್ನು ಬದಿಗಿಡುತ್ತಿದ್ದೇವೇಯೇ?!

******

(ಮುಂದುವರೆಯುವುದು)