ಅಗಲಿಕೆ ಆರಂಭದಷ್ಟೇ ನೋವನ್ನು ಅಂತ್ಯಕ್ಕೂ ಉಳಿಸಿಕೊಳ್ಳುತ್ತದೆನ್ನುವ ಸೂತ್ರ ಅವಳಿಂದ ನನಗೀಗ ನಿಧಾನಕ್ಕೆ ಅರ್ಥವಾಗತೊಡಗಿತ್ತು. ಮತ್ತೆ ಮರುಜನ್ಮವಿದ್ದರೆ ನನ್ನಾಣೆ ನೀನೆ ನನಗೆ ಸಿಗಬೇಕು. ಈ ಮಡಿಲು ಸದಾ ನನ್ನ ತಲೆಗೆ ಜೋಪಡಿಯಾಗಬೇಕು. ನಿನ್ನ ಕುರುಚಲು ಗಡ್ಡದ ಕೂದಲು ಸದಾ ನನ್ನ ಕೆನ್ನೆಗೆ ಕಚಗುಳಿ ಇಡುತ್ತಿರಬೇಕು. ನನ್ನ ಎಲ್ಲಾ ಖುಷಿಗಳಿಗೂ ನೀನೇ ಕಾರಣಬೇಕು… ಏನೆಲ್ಲಾ ಹೇಳಿದ್ದಳು ಅವಳು. ಪ್ರೀತಿಸುವುದರಲ್ಲಿ ನಾನೇ ಹುಚ್ಚ ಎಂದುಕೊಂಡ ನನ್ನನ್ನೇ ಸೋಲಿಸಿ ಹುಚ್ಚಿಯಷ್ಟೇ ಪ್ರೀತಿಸುತ್ತಿದ್ದಳು.
ಪ್ರಕಾಶ್‌ ಪೊನ್ನಾಚಿ ಬರಹ ನಿಮ್ಮ ಓದಿಗೆ

ಆಗಸಕ್ಕೆ ದುಃಖವಾಗಿ ಜೋರು ಅಳುತ್ತಿದೆಯೋ ಅನ್ನುವ ಹಾಗೆ ಹೊರಗೆ ವಿಪರೀತ ಮಳೆ ಸುರಿಯತೊಡಗಿತ್ತು. ಮಿಂಚುತ್ತಿದ್ದ ಬೆಳಕು ರೂಮಿನ ಕಿಟಕಿ ಹೊಕ್ಕು ನನ್ನ ನೆರಳನ್ನೇ ನನಗೆ ಭಯಭೀತಗೊಳಿಸುವಂತೆ ಮಾಡುತ್ತಿತ್ತು. ವರಾಂಡದಲ್ಲಿ ಸೋರಿ ಹೋಗುತ್ತಿದ್ದ ಹನಿಗಳನ್ನೇ ದಿಟ್ಟಿಸುತ್ತಾ ಕೂತೆ. ಒಂಟಿ ದಾರಿಯಲ್ಲಿ ಅವಳೇನಾದರು ನಡೆದು ಹೋಗಬಹುದಾ? ಹುಚ್ಚು ಮನಸ್ಸು ಅದೇ ಧ್ಯಾನದಲ್ಲಿ ಅವಳನ್ನೇ ನೆನೆಯುತ್ತಿತ್ತು.

ಅವಳೆಂದರೆ ನನಗೆ ಹಾಗೇ. ಪ್ರಪಂಚದ ಯಾವ ಪ್ರೇಮಿಯೂ ಪ್ರೀತಿಸಿದಷ್ಟು ಒಲವು ಅವಳ ಮೇಲೆ. ಅವಳು ನಗುವಾಗ, ನಾಚುವಾಗ, ಹೆಜ್ಜೆಹಾಕಿ ಅಂಗಳದಲ್ಲಿ ಸುಳಿದಾಡುವಾಗಲೆಲ್ಲಾ ನಾನು ವಿಚಿತ್ರವಾಗಿ ಪುಳಕಿತನಾಗುತ್ತಿದ್ದೆ. ಅವಳ ಮೇಲಿನ ಹುಚ್ಚುತನ ನನ್ನನ್ನು ಮನುಷ್ಯನನ್ನಾಗಂತು ಇರಿಸಿರಲಿಲ್ಲ. ಸದಾ ಅವಳನ್ನೇ ಮೌನಿಯಾಗಿ ನೆನೆಯುತ್ತಾ ಸನ್ಯಾಸಿಯಂತಾಗಿದ್ದೆ.

‘ಬಿಹೈಂಡ್ ಆಫ್ ಎವ್ವೆರಿ ಸಕ್ಸಸ್ ಆಫ್ ಮೀ, ದೇರ್ ಇಸ್ ಯೂ’ ಎನ್ನುತ್ತಿದ್ದಳು ಯಾವಾಗಲು ಅವಳು. ಅವಳ ನೋವು ನಲಿವು, ಸುಖ ದುಃಖಗಳಲ್ಲಿ ನಾನು ಹೆಗಲಾಗಿ ನಿಂತಿದ್ದೆ. ಹಸಿವಿನಲ್ಲಿ ತುತ್ತನಿಟ್ಟು ನಿದಿರೆಗೆ ಲಾಲಿಕೊಟ್ಟು, ನನ್ನ ಮಡಿಲಲಿ ಅವಳ ತಲೆಯಿಟ್ಟು ಸಣ್ಣಗೆ ನೇವರಿಸುತ್ತಿದ್ದೆ. ಅವಳು ನಗುತ್ತಿದ್ದಳು, ಆಹ್ಲಾದಿಸುತ್ತಿದ್ದಳು, ಸಣ್ಣಗೆ ನಾಚಿ ನೀರಾಗುತ್ತಿದ್ದಳು. ಗಲ್ಲದ ಮೇಲೆ ಮೆಲ್ಲನೊಂದು ಮುತ್ತು ಕೊಟ್ಟರೆ ಹೇ.. ಗಡ್ಡ ಚುಚ್ಚುತ್ತೆ ಎಂದು ತಪ್ಪಿಸಿಕೊಳ್ಳುತ್ತಿದ್ದಳು. ಜೊತೆ ನಡೆಯುವಾಗಲೆಲ್ಲಾ ಬೆರಳು ಹಿಡಿದು ನಕ್ಷತ್ರಗಳ ಎಣೆಸುತ್ತಾ, ಅಲ್ಲಿ ನಾವಿಬ್ಬರೂ ಇದ್ದರೆ ನೀನು ಸೂರ್ಯನಾಗು, ನಾನು ಭೂಮಿಯಾಗಿ ಸದಾ ನಿನ್ನ ಸುತ್ತಲೇ ಸುತ್ತುವೆ ಎನ್ನುತ್ತಿದ್ದಳು. ಇಬ್ಬರೂ ಕೂತು ಹರಟುತ್ತಿದ್ದ ಲಾಸಿನ ಪಸೆಗಳ ಮೇಲೆ ನನ್ನ ಹೆಸರು ಕೆತ್ತಿ ‘ಪ್ರೇಮ ಮಧುರ ಪ್ರೇಮಿ ಅಮರ’ ಎನ್ನುತ್ತಿದ್ದಳು. ಬದುಕು ಇದಕ್ಕಿಂತಲೂ ಏನು ಬಯಸಲಾರದು ಎನ್ನುವಂತೆ ನಾನು ಅವಳನ್ನೇ ದಿಟ್ಟಿಸುತ್ತಿದ್ದೆ. ಅವಳು ಹೆಗಲ ಮೇಲೆ ತಲೆಯಿಟ್ಟು ಕಣ್ಣೀರಾಗುತ್ತಿದ್ದಳು.

ಪ್ರೇಮ ಎಂದೂ ನಶಿಸದ ಕಾಯಿಲೆ ಎಂದು ಅದು ಯಾರು ನನಗೆ ಹೇಳಿದರೋ ಅವಳನ್ನು ಪ್ರೇಮಿಸಲು ಕಾರಣಗಳು ಬೇಕಿರಲಿಲ್ಲ. ಎಲ್ಲಾ ಸಂಬಂಧಗಳಲ್ಲೂ ಘಟಿಸಬೇಕಾದ್ದ ಒಂದು ಬಂಧ ನನ್ನೊಳಗೆ ಅತಿಯಾಗಿ ಬೇರೂರಿದೆ. ಅವಳನ್ನು ದೇವತೆ ಎಂದು ಪೂಜಿಸುವುದಕ್ಕಿಂತ ಪ್ರೇಮಿಯಾಗಿ ಪ್ರೀತಿಸುತ್ತಲೇ ಇರಬೇಕೆಂದುಕೊಂಡೆ. ನನಗೆ ಗೊತ್ತಿತ್ತು ಅವಳನ್ನು ಮತ್ಯಾರೋ ಪ್ರೇಮಿಸುತ್ತಾರೆ, ಪೂಜಿಸುತ್ತಾರೆ, ಆರಾಧಿಸುತ್ತಾರೆ. ಆದರೆ ಅವಳಿಗೆ ನಾನೇ ಮೊದಲ ಪ್ರೇಮಿ. ಅವಳಂತರಾಳವನ್ನು ನನಗಿಂತ ಮಿಗಿಲಾಗಿ ಬೇರೊಬ್ಬರು ಅರಿಯಲು ಅಸಾಧ್ಯ. ಹಾಗಾಗಿ ಜಗತ್ತಿನ ನೈಜ ಮತ್ತು ಕಥೆಗಳಲ್ಲಿ ಬರುವ ಎಲ್ಲಾ ಪ್ರೇಮಿಗಳಿಗಿಂತ ಅತೀ ಶ್ರೇಷ್ಠ ಪ್ರೇಮಿ ನಾನೇ ಎಂದುಕೊಳ್ಳುತ್ತೇನೆ.

ಪ್ರತೀ ನೋವುಗಳಿಗೂ ಮದ್ದುಗಳಿಲ್ಲ ಎಂದು ಅವಳು ಹೇಳಿದ್ದಳು. ಅವಳ ನೋವಿನಲ್ಲಿ ಸದಾ ಮಿಡಿಯುತ್ತಿದ್ದ ನನಗೀಗ ನೋವುಗಳ ನೋವು ಅರ್ಥವಾಗುವ ಘಳಿಗೆ ಬಂದಾಗಿತ್ತು. ಭೂಮಿ ದುಂಡಾಗಿದೆ ಕಳೆದುಹೋದವರು ಮತ್ತೆ ಸಿಗುತ್ತಾರೆ ಎನ್ನುವವರು ಭೂಮಿ ಚಪ್ಪಟೆಯಾಗಿದೆ ಅಲ್ಲಿ ಅವರು ಶಾಶ್ವತವಾಗಿ ಉಳಿದುಬಿಡಬಹುದು ಎಂದು ಹೇಳುವುದನ್ನು ಮರೆತಿರಬೇಕು. ಈಗ ಅವಳು ಯಾವುದೋ ಕಾರಣದಲ್ಲಿ ನನ್ನಿಂದ ದೂರ ಹೋಗಿದ್ದಾಳೆ. ಮತ್ತೆ ಎಂದಾದರು ಸಿಗುವಳೋ ಅಥವಾ ಚಪ್ಪಟೆ ಭೂಮಿಯಲ್ಲಿ ಶಾಶ್ವತವಾಗಿ ಉಳಿದುಬಿಡುವಳೋ ಎಂಬ ಗೊಂದಲದಲ್ಲಿ ನಿಧಾನವಾಗಿ ಕಿಟಕಿ ತೆರೆದು ಒಂಟಿ ದಾರಿಯನ್ನು ನೋಡುತ್ತಲೇ ಕುಳಿತಿದ್ದೇನೆ. ಬರೀ ತಿರುವುಗಳೇ ಕಣ್ಣ ಮುಂದೆ ಕಾಣಿಸುತ್ತಿವೆ.

ಅಷ್ಟು ಸುಲಭಕ್ಕೆ ಯಾವ ಸಂಬಂಧಗಳೂ ಸಾಯಲಾರವು. ನಿನ್ನಲ್ಲಿ ನಂಬಿಕೆ ಇಡು ಎಂದು ಎಚ್ಚರಿಸಿ ಹೋದ ಗೆಳೆಯ. ಆದರೆ ನನ್ನ ಅವಳ ನಡುವೆ ಅದು ಕೇವಲ ಸಂಬಂಧ ಮಾತ್ರವಲ್ಲ ಅದೂ ಮತ್ತೇನೋ ವಿವರಿಸಲಾಗದ ಬಂಧ. ಈಗ ಅವಳಿಲ್ಲ ಅನ್ನುವ ನೋವುಗಳು ಅವು ನೋವುಗಳಾಗಷ್ಟೆ ಉಳಿದುಕೊಂಡಿಲ್ಲ. ಜೀವನದ ಯಾವುದೋ ಒಂದು ಭಾಗವೇ ಕಳಚಿಕೊಂಡ ಅನುಭವ.

ಹಸಿವಿನಲ್ಲಿ ತುತ್ತನಿಟ್ಟು ನಿದಿರೆಗೆ ಲಾಲಿಕೊಟ್ಟು, ನನ್ನ ಮಡಿಲಲಿ ಅವಳ ತಲೆಯಿಟ್ಟು ಸಣ್ಣಗೆ ನೇವರಿಸುತ್ತಿದ್ದೆ. ಅವಳು ನಗುತ್ತಿದ್ದಳು, ಆಹ್ಲಾದಿಸುತ್ತಿದ್ದಳು, ಸಣ್ಣಗೆ ನಾಚಿ ನೀರಾಗುತ್ತಿದ್ದಳು. ಗಲ್ಲದ ಮೇಲೆ ಮೆಲ್ಲನೊಂದು ಮುತ್ತು ಕೊಟ್ಟರೆ ಹೇ.. ಗಡ್ಡ ಚುಚ್ಚುತ್ತೆ ಎಂದು ತಪ್ಪಿಸಿಕೊಳ್ಳುತ್ತಿದ್ದಳು. ಜೊತೆ ನಡೆಯುವಾಗಲೆಲ್ಲಾ ಬೆರಳು ಹಿಡಿದು ನಕ್ಷತ್ರಗಳ ಎಣೆಸುತ್ತಾ, ಅಲ್ಲಿ ನಾವಿಬ್ಬರೂ ಇದ್ದರೆ ನೀನು ಸೂರ್ಯನಾಗು, ನಾನು ಭೂಮಿಯಾಗಿ ಸದಾ ನಿನ್ನ ಸುತ್ತಲೇ ಸುತ್ತುವೆ ಎನ್ನುತ್ತಿದ್ದಳು.

ಏಕಾಂತದ ನೋವು ಯಾವ ಜೀವಿಯೂ ಅನುಭವಿಸಬಾರದು. ಮನುಷ್ಯ ಏಕಾಂಗಿಯಾದಷ್ಟು ಒಂದು ಶಕ್ತಿಶಾಲಿಯಾಗಿ ಹುಚ್ಚನಾಗುತ್ತಾನೆ. ಇಲ್ಲ ಬಲಹೀನನಾಗಿ ವಿಕೃತನಾಗುತ್ತಾನೆ. ನನಗೀಗ ಎರಡರ ಅನುಭವವೂ ಜಂಟಿಯಾಕಿಕೊಂಡ ಹಾಗಿತ್ತು. ಅಗಲಿಕೆ ಆರಂಭದಷ್ಟೇ ನೋವನ್ನು ಅಂತ್ಯಕ್ಕೂ ಉಳಿಸಿಕೊಳ್ಳುತ್ತದೆನ್ನುವ ಸೂತ್ರ ಅವಳಿಂದ ನನಗೀಗ ನಿಧಾನಕ್ಕೆ ಅರ್ಥವಾಗತೊಡಗಿತ್ತು. ಮತ್ತೆ ಮರುಜನ್ಮವಿದ್ದರೆ ನನ್ನಾಣೆ ನೀನೆ ನನಗೆ ಸಿಗಬೇಕು. ಈ ಮಡಿಲು ಸದಾ ನನ್ನ ತಲೆಗೆ ಜೋಪಡಿಯಾಗಬೇಕು. ನಿನ್ನ ಕುರುಚಲು ಗಡ್ಡದ ಕೂದಲು ಸದಾ ನನ್ನ ಕೆನ್ನೆಗೆ ಕಚಗುಳಿ ಇಡುತ್ತಿರಬೇಕು. ನನ್ನ ಎಲ್ಲಾ ಖುಷಿಗಳಿಗೂ ನೀನೇ ಕಾರಣಬೇಕು… ಏನೆಲ್ಲಾ ಹೇಳಿದ್ದಳು ಅವಳು. ಪ್ರೀತಿಸುವುದರಲ್ಲಿ ನಾನೇ ಹುಚ್ಚ ಎಂದುಕೊಂಡ ನನ್ನನ್ನೇ ಸೋಲಿಸಿ ಹುಚ್ಚಿಯಷ್ಟೇ ಪ್ರೀತಿಸುತ್ತಿದ್ದಳು.

ಗಾಯ ಎಲ್ಲರು ಮಾಡಿಕೊಳ್ಳುತ್ತಾರೆ. ಆದರೆ ಮುಲಾಮು ಇನ್ಯಾರೋ ಹಚ್ಚುತ್ತಾರೆ. ಆದರೆ ನನಗಾದ ಗಾಯಗಳಿಗೆ ಯಾವ ಮುಲಾಮೂ ಇರಲಿಲ್ಲ. ಮುಲಾಮು ಹಚ್ಚಿ ವಾಸಿಮಾಡಲು ಅದು ಗಾಯವೇ ಅಲ್ಲದೆ ಮತ್ತೇನೋ ಮಿಗಿಲಾದುದು. ಅವಳ ಮುಖವಿಲ್ಲದ ಕನ್ನಡಿ, ಗುರುತು ಅಂಟಿಸಿಕೊಂಡ ಒರಾಂಡ, ಕೂತ ಜಾಗದಲ್ಲಿ ಸುಕ್ಕುಗಟ್ಟಿದ ಲಾಸಿನ ಪಸೆ, ಬೇಡವೆಂದರೂ ಕಿವಿ ಚುಚ್ಚಿ ನೋಯಿಸುವ ಅವಳ ಪುಟ್ಟ ಗೆಜ್ಜೆಯ ಸದ್ದುಗಳು, ಬೈಕಿನ ಹಿಂಬದಿ ಸೀಟಿನಲ್ಲಿ ಅವಳು ಅಂಟಿಸಿ ಹೋದ ಸ್ಪರ್ಶ ನೋವಿಗೊಂದು ನೋವು ಎಣಿಕೆ ಹಾಕಿಕೊಂಡು ಚುಚ್ಚಲಾರಂಭಿಸಿವೆ.

ಅವಳನ್ನು ಒಮ್ಮೆಯಾದರು ನೋಡಬೇಕು ಈ ಖಾಲಿ ಬದುಕಿಗೆ ಅದಕ್ಕಿಂತಲೂ ದೊಡ್ಡ ಧ್ಯೇಯ ಇರಲಾರದು. ನನ್ನ ಶಕ್ತಿ ಹಿಗ್ಗಿಹೋಗುವಷ್ಟು ಒಮ್ಮೆ ಅವಳನ್ನು ಬಿಗಿದಪ್ಪಿ ನವಿರು ಗಲ್ಲಕ್ಕೊಂದು ಮುತ್ತನ್ನಿಟ್ಟು ಈ ಪ್ರಪಂಚವನ್ನೆ ಮರೆತು ಅವಳೊಳಗೆ ಲೀನವಾಗಿಬಿಡಬೇಕು. ಆದರೆ ಅವಳು ಕಣ್ಣ ಮುಂದೆ ಸುಳಿದರು ಅದೃಶ್ಯವಾಗುವ ಮಾಯೆಯಂತೆ ನನಗೆ ಸಿಗುವ ಅವಕಾಶವಾದರು ಹೇಗೆ? ನಾನು ಅವಳನ್ನೆ ಹಂಬಲಿಸುವಂತೆ ಅವಳು ನನ್ನನ್ನು ಹಂಬಲಿಸುತ್ತಿರಬಹುದೇ? ತನ್ನ ತಲೆಯನ್ನಿಟ್ಟು ಸುಖವ ಕಾಣಲು ನನ್ನದೇ ಮಡಿಲಿಗೆ ಚಡಪಡಿಸಬಹುದೇ? ಎಂದುಕೊಳ್ಳುತ್ತೇನೆ. ಶೂನ್ಯ ನಿಧಾನಕ್ಕೆ ನನ್ನನ್ನು ಆವರಿಸಿಕೊಳ್ಳುತ್ತದೆ.

ಭೂಮಿ ದುಂಡಗಿದೆ ಎಂದವರ ಮಾತನ್ನು ಈಗ ನಾನು ನಂಬುತ್ತೇನೆ. ಹನ್ನೆರಡು ವರ್ಷಕೊಮ್ಮೆ ಬರುವ ಊರ ಜಾತ್ರೆಗೆ ಅವಳು ತಪ್ಪದೆ ಬರುತ್ತಾಳೆ ಎಂಬ ನಂಬಿಕೆ ಇದೆ. ಈಗ ಹೇಗಾದರು ಮಾಡಿ ಅವಳನ್ನು ಭೇಟಿ ಮಾಡಿ ನನ್ನ ತಪ್ಪಿಗೆ ಕ್ಷಮಿಸು ಎನಬೇಕು. ತೇರಿನ ಮುಂದೆ ಇಬ್ಬರೂ ನಿಂತು ಒಂದು ಫೋಟೊ ಕ್ಲಿಕ್ಕಿಸಿಕೊಳ್ಳಬೇಕು. ಜಾತ್ರೆ ಅಂಗಡಿ ಬೀದಿಯಲ್ಲಿ ಅವಳ ಕೈ ಹಿಡಿದು ಒಂದು ಸುತ್ತು ಬರಬೇಕು. ರಾಟೆಯಲ್ಲಿ ಗಿರಿಗಿಟ್ಲೆಯಲಿ, ಜಾರುಬಂಡೆಯಲಿ ಇಬ್ಬರೂ ಕೂತು ಆಟವಾಡಬೇಕು. ಊದಿದ ಬಲೂನುಗಳನ್ನು ಆಗಸಕ್ಕೆ ಹಾರಿಬಿಡಬೇಕು. ಗುಡಿಯ ಮುಂದಿನ ಕೆರೆಯ ಅಂಗಳದಲ್ಲಿ ಕೂತು ತಾಸುಗಟ್ಟಲೆ ಹರಟಬೇಕು… ಎಲ್ಲಾ ಕಲ್ಪನೆಗಳನ್ನು ಒಂದಕ್ಕೊಂದು ಹೋಲಿಸಿಕೊಂಡು ಜಾತ್ರೆಯ ಬೀದಿಯತ್ತ ಹೆಜ್ಜೆ ಹಾಕಿದೆ.

ತರಹೇವಾರಿ ಅಂಗಡಿಗಳು, ರಂಗು ರಂಗಿನ ಬೀದಿ ದೀಪಗಳು, ಬಾನೆತ್ತರದ ತೇರು, ಬಣ್ಣ ಬಣ್ಣದ ಉಡುಗೆ ಉಟ್ಟ ಜನಜಂಗುಳಿಯಲ್ಲಿ ಜಾತ್ರೆ ರಂಗೇರಿತ್ತು. ಸಂದಣಿಯಲ್ಲಿ ಯಾವುದೇ ಗೆಜ್ಜೆ ಸದ್ದಾದರೂ ಅವಳೇ ಇರಬಹುದೇನೋ ಎಂದು ಕಣ್ಣು ಹುಡುಕಲಾರಂಭಿಸುತ್ತಿತ್ತು. ಕಣ್ಣಿಗೆ ಅದೆಷ್ಟು ಲೆನ್ಸ್‌ಳು ಬಿದ್ದಿದ್ದವೋ ಕ್ಷಣಾರ್ಧದಲ್ಲಿ ದುರ್ಬೀನಿನಂತೆ ಸುತ್ತ ಹುಡುಕಲಾರಂಭಿಸಿದವು. ಕೊನೆಗೂ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಕಟ್ಟೆಬಸಪ್ಪನ ಸನ್ನಿಧಿಯಲ್ಲಿ ಅವಳು ಹಣೆಗೆ ಕುಂಕುಮ ಹಚ್ಚುತ್ತ ನಿಂತಿದ್ದಳು. ಸಾಕ್ಷಾತ್ ದೇವತೆಯೆ ಎದುರು ನಿಂತಂತೆ ಅವಳು ಕಾಣತೊಡಗಿದಳು. ಜೀವನದ ಅಷ್ಟೂ ಸುಖ ಒಮ್ಮೆಗೆ ಜೋಳಿಗೆಯಲ್ಲಿ ಬಂದು ತುಂಬಿದಂತಾಯಿತು. ಇದೊಂದು ಅವಕಾಶಕ್ಕಾಗಿ ಈ ಜನ್ಮ ಕಾಯುತ್ತಿದ್ದೆ. ತಡಮಾಡಬಾರದು ಎಂದು ಇರುವ ಉಸಿರನೆಲ್ಲ ಜೋರು ಎಳೆದುಕೊಂಡು ಪ್ರಾಣ ಹೋಗುವ ಹಾಗೆ ಅವಳ ಹೆಸರ ಕೂಗಿದೆ. ಜಾತ್ರೆಯ ಜೋರು ಗದ್ದಲದಲ್ಲಿ ನನ್ನ ಕೂಗು ಅವಳ ಕಿವಿ ಮುಟ್ಟಲು ಸೋತು ಮಕಾಡೆ ಮಲಗಿತ್ತು. ನಾನು ಅವಳನ್ನು ಹಿಂಬಾಲಿಸುವುದರಲ್ಲಿ ಅವರಮ್ಮನ ಕೈ ಹಿಡಿದು ಕಾರು ಹತ್ತಿ ಅವಳು ಹೊರಟೇ ಹೋದಳು. ಹೃದಯ ಒಡೆದು ಬಿದ್ದಂತಾಯಿತು.