ಶ್ರೀನಿವಾಸನು ಕಿಟಕಿಗಳನ್ನೆಲ್ಲಾ ಪರೀಕ್ಷಿಸಲು ಹೊರ ಮನೆಯಲ್ಲಿ ಸುತ್ತಾಡುತ್ತಿದ್ದನು. ನಾನು ಅಮ್ಮನನ್ನೇ ದಿಟ್ಟಿಸುತ್ತಿದ್ದೆ. ಈಗ ಉಂಟಾಗುವ ಪ್ರಹಸನವನ್ನು ಕಣ್ತುಂಬಿಕೊಳ್ಳಲು ನನ್ನ ಪಂಚೇಂದ್ರಿಯಗಳು ಸರ್ವ ಸನ್ನದ್ಧವಾಗಿದ್ದವು. ಅಮ್ಮ ಬಾಗಿಲನ್ನು ನೋಡಿ ಹೌಹಾರಿದಳು. ತಂದ ಕಾಫಿ ಲೋಟವನ್ನು ಟೇಬಲಿಗೆ ಕುಕ್ಕಿ “ಅಯ್ಯೋ ರಾಮ ಇದೇನೊ ಸುಡುಗಾಡು ಮಾಡಿಟ್ಟು ಈ ಪಡಪೋಶಿ ಇಡೀ ಬಾಗ್ಲು ಹಾಳುಗೆಡವಿದನಲ್ಲ ಇವನ ಮನೆ ಕಾಯುವಾಗ” ಅಂದುಕೋತಾ ಹೋಗಿ ಬಾಗಿಲ ಬಳಿ ಕುಕ್ಕರಗಾಲಿನಲ್ಲಿ ಕೂತು ಎಲ್ಲವನ್ನೂ ಪರಿಶೀಲಿಸಿದ ನಂತರ ನಮ್ಮನೆಯ ಹೊಸ ಕೆಂಪು ಲ್ಯಾಂಡ್ ಲೈನ್ ಫೋನಿನಲ್ಲಿ ಅಪ್ಪನಿಗೆ ರಿಂಗಾಯಿಸಿದಳು. ಸುಮಾರು ಹದಿನೈದು ನಿಮಿಷ ಪ್ರವಾಹ ಪರಿಸ್ಥಿತಿ ಉಂಟಾಯಿತು.
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

 

“ನೋಡು, ಅದೇನಾದರಾಗಲಿ. ಮೊದಲು ಬಾಗ್ಲು ಸರಿ ಮಾಡು. ಸುಮ್ನೆ ಮಾತಾಡ್ತಾ ಕೂರಬೇಡ. ಆಮೇಲೆ… ಆ ಬೀಡಿಕೊರೆಗಳನ್ನು ಬೇಲಿಯ ಆಚೆಗೆ ಬಿಸಾಕು. ಹೊಲಸು ತಂದೂ..” ಅಮ್ಮ ಬೈಯುತ್ತಿದ್ದಳು. ಶ್ರೀನಿವಾಸನು ಅದು ತಾನಲ್ಲವೇ ಅಲ್ಲವೆಂಬ ಘನ ಗಂಭೀರ ಮುಖಭಾವದಲ್ಲಿ “ಆಯ್ತೇಳಿ ಅಮ್ಮಾರೇ, ಬರೀ ಬಾಗ್ಲೋ ಇಲ್ಲಾ ಕಿಟಕೀನು ಇದಾವೋ..?” ಅಂತ ತೀರಾ ಲೋಕಾಭಿರಾಮವಾಗಿ ಅಂದನು. ನಕಶಿಖಾಂತ ಉರಿದ ಅಮ್ಮನು “ಮೊದಲು ಬಾಗ್ಲು ಮುಗ್ಸೋ ಮಾರಾಯ. ಆಮೇಲೆ ಬ್ಯಾರೆ ಮಾತು.” ಅಂದಳು ಕೆಂಗಣ್ಣು ಬೀರಿ.

ಹಾಡೊಂದನ್ನು ಗುನುಗುತ್ತಾ ಕಿವಿಯ ಮೇಲಿನ ಬೀಡಿ ಕೊರೆಯನ್ನು ವಜ್ರಕಿರೀಟದ ಹಿಡಿಯನ್ನು ಸರಿಪಡಿಸಿಕೊಳ್ಳುವ ಇಂದ್ರನಂತೆ ಮಾಡುತ್ತಾ ಅವೇನೇನೋ ಅರ್ಥವಾಗದ ಕಬ್ಬಿಣದ ಸಾಮಗ್ರಿಗಳನ್ನೆಲ್ಲಾ ತನ್ನ ಕಾಟನ್ ಕೈಚೀಲದಿಂದ ಹೊರತೆಗೆದು ಸಂಡಿಗೆ ವೆರೈಟಿಯಂತೆ ಹರವಿಡತೊಡಗಿದನು. ನಾವು ಮಕ್ಕಳು ಸೋಜಿಗದ ಕಣ್ಣು ಬಾಯಿ ಬಿಟ್ಟು ನೋಡುತ್ತಾ ಕೂತೆವು. ಕೆಲವು ನೆಟ್ಟನೆಯ ಮೊಳೆಯಂತಹವು, ಕೆಲವು ಕಬ್ಬಿಣ ಹಾಗೂ ಕೆಲವು ಪ್ಲಾಸ್ಟಿಕ್ ನವು, ಮತ್ತೆ ಕೆಲವು ಮರದಲ್ಲಿ ಮಾಡಿದ ವಿವಿಧಾಕೃತಿಗಳು… ಒಂದು ದೊಡ್ಡ ಸುತ್ತಿಗೆ, ಅರ, ಉಳಿ, ಗಟ್ಟಗಳ ದೊಡ್ಡ ಖಜಾನೆಯೇ ಅಲ್ಲಿತ್ತು.

ಅಜ್ಜನು ಕುಮಾರವ್ಯಾಸ ಭಾರತದ ಓದಿನ ಸನ್ನಿವೇಶಗಳಲ್ಲಿ ಅರ್ಜುನ ಕರ್ಣ ದುರ್ಯೋಧನ ಮುಂತಾದವರ ಬತ್ತಳಿಕೆಯಲ್ಲಿ ಇರುತ್ತಿದ್ದ ಬಾಣಗಳ ಕುರಿತಾದ ದಟ್ಟ ನೆನಪು ಆವರಿಸುವುದು. ಹಾಗೆಯೇ ಸಮಯ ಬಂದಾಗ ಉಪಯೋಗಿಸೋದು ಬ್ರಹ್ಮಾಸ್ತ್ರವನ್ನು ಕಾಪಾಡಿದ್ದ ಇಂದ್ರಜಿತುವಿನ ನೆನಪಾಗುವುದು. ಈಗ ಶ್ರೀನಿವಾಸನು ನಮಗೆ ಅಂತಹುದೇ ಒಂದು ಪ್ರಾಚೀನ ಪಾತ್ರದಂತೆ ಕಂಡು ಈಗ ಯಾವ ಸಮಯಕ್ಕೆ ಯಾವ ಆಯುಧ ಬಳಸುವವನೆಂದು ಕಣ್ಣು ತಿರುಗಿಸದೆ ನೋಡುತ್ತಿದ್ದೆವು.

ಅವನು ಅಂತರ್ಗತವಾಗಿ ಒಂದೊಂದೇ ಆಯುಧಗಳನ್ನು ಮುಟ್ಟಿ ಸವರಿ ಮಂತ್ರಿಸಿ ಪ್ರೋಕ್ಷಿಸಿ ಮತ್ತೆ ಹೊರಗೆದ್ದು ಹೋಗಿ ಉಳಿದ ಅರ್ಧ ಬೀಡಿ ಸೇದಿ ಬಂದನು. ಅವನ ಬಲಗಿವಿಯ ಮೇಲಿನ ಜಾಗ ಈಗ ಖಾಲಿಯಾಗಿತ್ತು. ಅಮ್ಮ ಒಳಗಿನಿಂದ ತಮ್ಮನನ್ನು ಕೂಗಿ ಒಂದು ಲೋಟ ಚಹಾವನ್ನು ಶ್ರೀನಿವಾಸನಿಗೆ ಕೊಟ್ಟು ಬರುವಂತೆ ಹೇಳಿದಳು. ನಾನು ಡೈನಿಂಗ್ ಟೇಬಲ್ ಬಳಿ ಕೂತು ಎಲ್ಲವನ್ನೂ ಮೌನವಾಗಿ ಗಮನಿಸತೊಡಗಿದೆ.

ಹೀಗೆ ಹೊತ್ತು ಕಳೆದು ಸೂರ್ಯ ನೆತ್ತಿಗೆ ಬಂದರೂ ಬಾಗಿಲಿಗೆ ಒಂದು ಹುಲಿ ಪೆಟ್ಟಾಗಲಿ ಒಂದು ಮೊಳೆ ಜಡಿದಿದ್ದಾಗಲಿ ಕಾಣಬರಲಿಲ್ಲ. ಬೀಡಿ ಸೇದುವುದು ತಲೆ ಕೆರೆಯುವುದು ತಂದ ಆಯುಧಗಳನ್ನೆಲ್ಲ ಮುಟ್ಟಿ ಮುಟ್ಟಿ ನೋಡುವುದು ಟೇಪು ಹಿಡಿದು ಬಾಗಿಲನ್ನು ಕಟಾಂಜನವನ್ನು ಮತ್ತೆ ಮತ್ತೆ ಅಳೆಯುವುದು… ಮಧ್ಯಾಹ್ನವೇ ಆಗಿ ಹೋಯಿತೇ ಹೊರತು ಶ್ರೀನಿವಾಸನು ಬಾಗಿಲು ರಿಪೇರಿಗೆ ತೊಡಗಲೆ ಇಲ್ಲ. ‘ಇವನು ಕೆಲಸವನ್ನು ನೆಟ್ಟಗೆ ಮಾಡುವ ಬಡಗಿಯಲ್ಲ, ಇವನು ಬೇಡ ಬೇರೆ ಕರೆಯಿರಿ’ ಎಂದು ಅಮ್ಮ ಯಾವಾಗಲೂ ಅಪ್ಪನ ಬಳಿ ಹೊಡೆದಾಡುವಳು. ಅಪ್ಪನಿಗೆ ಅದೇನು ಕರುಣೆಯೋ, ಹೋದರೆ ಹೋಗಲಿ ಯಾರೂ ಕರೆಯದಿದ್ದರೆ ಪಾಪ ಅವನ ಬದುಕು ನಡೆಯೋದು ಹೇಗೆ? ನಿಧಾನವಾಗಿ ನಡೆಸಲಿ ಅನ್ನುವರು. ಅಪ್ಪ ಆಡಿದ್ದಕ್ಕೆ ಇವನು ಮಾಡುವುದಕ್ಕೂ ತಾಳೆಯಾಗಿ ಅಮ್ಮನ ಪಿತ್ತ ನೆತ್ತಿಗೇರುವುದು.

ಇಂದೂ ಅಷ್ಟೇ ಈ ಸಲದ ಬೇಸಿಗೆಗೆ ಬೆಂಡಾಗಿ ಸ್ವಲ್ಪ ಬಗ್ಗಿದ ಕೆಳಬಾಗಿಲನ್ನು ಸರಿ ಮಾಡಬೇಕಿತ್ತು ಅಷ್ಟೇ. ಅಡುಗೆ ಮನೆಯಲ್ಲಿ ಸಾರಿಗೆ ಒಗ್ಗರಣೆ ಬಿದ್ದರೂ ಇವನು ಕೆಲಸ ಶುರು ಮಾಡಲಿಲ್ಲ. ಇನ್ನು ಎದುರಿಗೆ ಕೂತು ಕೆಲಸ ಮಾಡಿಸಿದರೆ ಒಂದು ಅಮ್ಮನ ಸಹನೆ ಕಳೆಯುತ್ತಿತ್ತು, ಎರಡು ಅವನು ಅಪ್ಪನಿಗೆ ಕಂಪ್ಲೇಂಟ್ ಮಾಡುವನು. ಇವೆರಡೂ ಬೇಡ ಎಂದು ಬೆಳಗ್ಗೆ ಅವನು ಬಂದಾಗ ಅಡುಗೆ ಮನೆ ಹೊಕ್ಕ ಅಮ್ಮ ಮಧ್ಯಾಹ್ನ ಹೊರಗೆ ಬಂದರೆ ಅವನು ತನ್ನ ನಾಲ್ಕನೇ ಉತ್ತರಾರ್ಧದ ಬೀಡಿ ಸೇದಲು ಹೊರಗೆ ಹೋಗಿದ್ದು ನೋಡಿ ‘ಏನ್ ಮಾಡಿದ ಇಷ್ಟೊತ್ತು?’ ಅಂತ ನನ್ನ ಕೇಳಿದಳು. ‘ಅಮ್ಮ, ಎಲ್ಲಾ ಹೊಂದಿಸಿಕೊಂಡ, ಅಳತೆ ತೊಗೊಂಡ, ಇನ್ನೇನು ಶುರು ಮಾಡಬಹುದು..’ ಎಂದು ಅಡ್ಡಗೋಡೆ ಮೇಲಿನ ದೀಪದ ಉತ್ತರ ಕೊಟ್ಟೆ ನಾನು. ಹಾಗಂದಿದ್ದೇ ತಡ, ಹೆಮ್ಮಾರಿಯಂತೆ ಅವಳ ಕಣ್ಣು ಕೆಂಪಾದವು.. ಕ್ಷಣಕಾಲ ಎರಡೂ ಕೈ ಮುಷ್ಟಿ ಮಾಡಿ ಕಟಕಟನೆ ಹಲ್ಲು ಕಡಿದು ಮತ್ತೆ ಅಡುಗೆ ಮನೆ ಹೊಕ್ಕಲು, ನಾನು ಮತ್ತು ತಮ್ಮ ಕಣ್ಣಲ್ಲೇ ಏನೋ ಮಾತಾಡಿ ಕಿಸಕ್ಕೆಂದು ಸುಮ್ಮನಾದೆವು. ಮಧ್ಯಾಹ್ನ ಊಟದ ನಂತರ ಹಾಕಿದ್ದ ಅಂಗಿ ಬಿಚ್ಚಿಟ್ಟು ಕೆಲಸ ಶುರು ಹಚ್ಚಿದ ಶ್ರೀನಿವಾಸ.

ಅವನು ಅಂತರ್ಗತವಾಗಿ ಒಂದೊಂದೇ ಆಯುಧಗಳನ್ನು ಮುಟ್ಟಿ ಸವರಿ ಮಂತ್ರಿಸಿ ಪ್ರೋಕ್ಷಿಸಿ ಮತ್ತೆ ಹೊರಗೆದ್ದು ಹೋಗಿ ಉಳಿದ ಅರ್ಧ ಬೀಡಿ ಸೇದಿ ಬಂದನು. ಅವನ ಬಲಗಿವಿಯ ಮೇಲಿನ ಜಾಗ ಈಗ ಖಾಲಿಯಾಗಿತ್ತು.

ಮತ್ತೊಮ್ಮೆ ಆಯುಧಗಳ ರಾಶಿಯ ಬಳಿ ಹೋಗಿ ಅದೇನೋ ಚಪ್ಪಟೆಯಾಕಾರದ ಒಂದು ಕಬ್ಬಿಣದ ಆಯುಧವನ್ನು ಕೈಗೆತ್ತಿಕೊಂಡನು. ಅದರ ಸಾಣೆ ಹಿಡಿದ ತುದಿಯು ಪಳಪಳನೆ ಮಿಂಚುತ್ತಿತ್ತು. ಆದರೆ ನಮಗೆ ಅದಕ್ಕಿಂತಲೂ ಆಕರ್ಷಣೀಯವಾಗಿ ಕಂಡದ್ದು ಶ್ರೀನಿವಾಸನ ಪೀಚು ದೇಹ. ಮಕ್ಕಳಿಗೆ ತೊಡಿಸುವ ಸೈಜಿನ ಬನ್ಯನ್ನೊಂದು ಅವನ ಮೈ ಮೂಳೆಗಳ ಹರವನ್ನು ಮುಚ್ಚಿದ್ದಿತು. ಆದರೂ ಆ ಎಲುವಿನ ಗೂಡು ಅದೆಷ್ಟಮಟ್ಟಿಗೆ ತನ್ನ ಇರುವಿಕೆಯನ್ನು ಪ್ರಚಾರ ಪಡಿಸುತ್ತಿತ್ತೆಂದರೆ ಅವನ ಪ್ರಾಣವು ಈ ದೇಹದ ಯಾವ ಭಾಗದಲ್ಲಿ ಇನ್ನೂ ಉಳಿದುಕೊಂಡಿರಬಹುದೆಂದು ನಾವು ಆಶ್ಚರ್ಯಪಟ್ಟೆವು. ವಾಯುವಿನ ರೂಪದಲ್ಲಿ ಅವನ ದೇಹ ಸೇರುವ ಆ ಬೀಡಿ ಹೊಗೆಯು ಅವನ ನೆತ್ತಿಯಿಂದ ಪಾದಗಳವರೆಗೆ ಸಂಚರಿಸಿ ಒಳಗೆಲ್ಲಾ ಧೂಮ ತುಂಬಿದ ಒಂದು ಪುತ್ಥಳಿಯೇ ಇವನು ಎಂಬ ಅನುಮಾನ ಮಾಡುವಂತಿದ್ದನು. ಎರಡು ಕಣ್ಣುಗಳು ಸದಾ ಕೆಂಪಗಿರುತ್ತಾ ದೇಹದಲ್ಲಿ ತುಂಬಿದ ಹೊಗೆಯನ್ನು ಹೊರಹಾಕಿ ಸಾಕಾಗಿ ನಲುಗಿದಂತಿರುತ್ತಿದ್ದವು. ಒಟ್ಟಾರೆ ಅವನೊಂದು ಸ್ಮಶಾನದಿಂದ ಬಂದ ಫ್ರೆಶ್ ಹೆಣದಂತೆ ಕಾಣುತ್ತಿದ್ದನು.

ಪಾದಗಳು ಮಾತ್ರ ಅವನ ದೇಹದ ಅಳತೆಗೂ ಮೀರಿ ದೊಡ್ಡವಿದ್ದವು. ಅವನ ಚಪ್ಪಲಿಗಳು ಸರಿಸುಮಾರು ಅಪ್ಪನ ಚಪ್ಪಲಿ ಅಳತೆಗೆ ಇದ್ದವು. ಪ್ಯಾಂಟಿನೊಳಗೆ ಎರಡು ಹಂಚಿ ಕಡ್ಡಿಗಳು ಅಲ್ಲಾಡುತ್ತಿರುವಂತೆ ಎರಡು ಕಾಲುಗಳು. ಮೊಳಕೈ ಮೂಳೆಗಳು ಹೊರ ಚಾಚಿಕೊಂಡ, ಮಣಿಗಂಟಿನ ಬಳಿ ಗಂಟು ಹಾಯ್ದಿದ್ದ ಕಡ್ಡಿ ಕೈಗಳು… ಇಂತಿಪ್ಪ ಶ್ರೀನಿವಾಸನು ಅದು ಹೇಗೆ ಅಷ್ಟು ದೊಡ್ಡ ಸುತ್ತಿಗೆ ಹಾಗೂ ಇತರ ಸಾಮಗ್ರಿಗಳನ್ನು ಸಮರ್ಥವಾಗಿ ಉಪಯೋಗಿಸುತ್ತಿದ್ದನೋ ನಾವು ಕಾಣೆವು.

ಅಂತೂ ಇಂತೂ ಇಳಿ ಮಧ್ಯಾಹ್ನದ ಕಡೆಗೆ ಕೆಲಸ ಶುರುವಿಟ್ಟನು. “ಹುತ್ರೀ ಹೊಡಿತೀನಮ್ಮ… ತಲಬಾಗಲು ಓದಿ ಕೆಂಡವೇ” ಎಂದವನೇ ಅವಳ ಅನುಮತಿಗೂ ಕಾಯದೆ ಅದೇನೋ ಒಂದು ಚೂಪನೆಯ ಆಯುಧ ಹಿಡಿದು ಹೊಸಿಲನ್ನು ತೀಡತೊಡಗಿದನು. ಏನಾಗುತ್ತಿದೆ ಎಂದು ಯಾರಾದರೂ ಗಮನಿಸುವ ಹೊತ್ತಿಗಾಗಲೇ ಹಚ್ಚಿದ ಏಷ್ಯನ್ ಪೇಂಟ್ ಹೋಗಿ ಬೆತ್ತಲಾದ ಹೊಸ್ತಿಲು ಒಂದಿಂಚು ಕೆಳಕ್ಕೆ ಹೂತುಕೊಂಡಿತು. ಆಮೇಲೆ ಅದನ್ನು ಬಿಟ್ಟು ಬಾಗಿಲು ಹಿಡಿದ. ಶ್ರೀನಿವಾಸರಾಯರು ಬಾಗಿಲ ತಳವನ್ನು ಒಂದಿಂಚು ನಗ್ನಗೊಳಿಸಿದರು. ಬಾಗಿದ್ದ ಪ್ರಾಣಿಗಳಾದರೆ ಅವನ ಚಿತ್ರಹಿಂಸೆಗೆ ಕಿರುಚಿ ಸತ್ತೇ ಹೋಗುತ್ತಿದ್ದವು ಏನೋ… ಅಂತೂ ಸಂಜೆಯ ಕಾಫಿ ಕೈಯಲ್ಲಿ ಹಿಡಿದು ಅಮ್ಮ ಹೊರಬರುವ ಹೊತ್ತಿಗೆ ಮುಚ್ಚಿದ ಬಾಗಿಲಿನ ಕೆಳಗೆ ಎರಡು ಇಂಚಿನಷ್ಟು ದೊಡ್ಡ ಕಿಂಡಿ ಉಂಟಾಗಿ ತಾವು ಸಿಕ್ಕ ಸಂಭ್ರಮದಲ್ಲಿ ಸಂಜೆಯ ಹೊಂಬೆಳಕು ಆ ಕಿಂಡಿಯಿಂದ ದಾಳಿ ಇಡುತ್ತಿತ್ತು.

ಶ್ರೀನಿವಾಸನು ಕಿಟಕಿಗಳನ್ನೆಲ್ಲಾ ಪರೀಕ್ಷಿಸಲು ಹೊರ ಮನೆಯಲ್ಲಿ ಸುತ್ತಾಡುತ್ತಿದ್ದನು. ನಾನು ಅಮ್ಮನನ್ನೇ ದಿಟ್ಟಿಸುತ್ತಿದ್ದೆ. ಈಗ ಉಂಟಾಗುವ ಪ್ರಹಸನವನ್ನು ಕಣ್ತುಂಬಿಕೊಳ್ಳಲು ನನ್ನ ಪಂಚೇಂದ್ರಿಯಗಳು ಸರ್ವ ಸನ್ನದ್ಧವಾಗಿದ್ದವು. ಅಮ್ಮ ಬಾಗಿಲನ್ನು ನೋಡಿ ಹೌಹಾರಿದಳು. ತಂದ ಕಾಫಿ ಲೋಟವನ್ನು ಟೇಬಲಿಗೆ ಕುಕ್ಕಿ “ಅಯ್ಯೋ ರಾಮ ಇದೇನೊ ಸುಡುಗಾಡು ಮಾಡಿಟ್ಟು ಈ ಪಡಪೋಶಿ ಇಡೀ ಬಾಗ್ಲು ಹಾಳುಗೆಡವಿದನಲ್ಲ ಇವನ ಮನೆ ಕಾಯುವಾಗ” ಅಂದುಕೋತಾ ಹೋಗಿ ಬಾಗಿಲ ಬಳಿ ಕುಕ್ಕರಗಾಲಿನಲ್ಲಿ ಕೂತು ಎಲ್ಲವನ್ನೂ ಪರಿಶೀಲಿಸಿದ ನಂತರ ನಮ್ಮನೆಯ ಹೊಸ ಕೆಂಪು ಲ್ಯಾಂಡ್ ಲೈನ್ ಫೋನಿನಲ್ಲಿ ಅಪ್ಪನಿಗೆ ರಿಂಗಾಯಿಸಿದಳು. ಸುಮಾರು ಹದಿನೈದು ನಿಮಿಷ ಪ್ರವಾಹ ಪರಿಸ್ಥಿತಿ ಉಂಟಾಯಿತು.

ಇನ್ನರ್ಧ ಗಂಟೆಗೆ ಅಪ್ಪ ಮನೆಗೆ ಬಂದರು. “ಹೇಳಿದ್ದೆ ನಿಮಗೆ ನಾನು, ಈ ಹೊಲಸು ಪಡಪೋಶಿ ಕರಿಬ್ಯಾಡ್ರಿ ಅಂತ… ಈಗ ಹೋತು ಮನೆ ಬಾಗಿಲು… ಅದೇನ್ ಯಾವ್ಯಾವ ಕಿಟಕಿ ಕೆತ್ತುತ್ತಿದ್ದನೋ ಕಾಣೆ.. ಏನಾರ ಮಾಡಿಕೊಂಡು ಹಾಳಾಗಿ ಹೋಗ್ರಿ, ಈ ಕಿಂಡಿಯಿಂದ ದಿನ ರಾತ್ರಿ ಹುಳ ಹುಪ್ಪಟಿ ಹೊರಡುತ್ತವೆ. ನಂಗೆ ಜಾಗರಣೆಯನ್ನು ಆತು..” ಅಪ್ಪನಿಗೆ ಈ ಓತಪ್ರೋತ ಪ್ರವಾಹ ತಡೆಯುವಷ್ಟು ಬಲವಿರಲಿಲ್ಲ ಹಾಗೂ ಅವರು ಈ ಪಡಪೋಶಿ ವಿಷಯದಲ್ಲಿ ಮತ್ತೊಮ್ಮೆ ಅಮ್ಮನೆದುರು ಸೋತಿದ್ದರೂ ಸರಸರನೆ ಹೊರ ಮನೆಗೆ ನಡೆದವರ ಹಿಂದೆ ನಾವು ಓಡಿದೆವು. ಹಿಂಬಾಗಿಲ ಬಳಿಯ ಕಿಟಕಿಯೊಂದಕ್ಕೆ ಅದೇನೋ ಒಂದು ಮೊಳೆ ಇಟ್ಟು ಜಡಿಯುತ್ತಿದ್ದ ಶೀನನು ಅಪ್ಪನನ್ನು ನೋಡಿ ‘ಹೇಗೆ ಸ್ವಾಮಿ.. ಇನ್ನೇನು ಕೆಲಸ ಮುಗಿದೇ ಬಿಡುತ್ತದೆ ನೋಡಿ. ನಿಮ್ಮನ್ನೇ ಬಡಗಿತನಾನೆಲ್ಲಾ ಒಂದೇ ದಿನದಾಗ ಮುಗಿಸೇನಿ’. ಎಂದು ಹಲ್ಲು ಕಿರಿದು ಅವನ ಕೆಂಪಾದ ಹಲ್ಲುಗಳು ಯಾವುದೋ ಕಾಲದ ಪಳೆಯುಳಿಕೆಯಂತೆ ಕಾಣುತ್ತಿದ್ದವು. ಅರೆ ಗಂಟೆಯೊಳಗೆ ಅದೇನೇನು ಮಾತಾಯಿತು ಕಾಣೆ. ಶ್ರೀನಿವಾಸನು ವೆರಾಂಡದಿಂದ ಈಚೆಗೆ ಹೊರಟು ಹೋದನು.

ಈ ಬಾರಿ ಅವನು ‘ಬರ್ತೀನಿ ಅಮ್ಮಾ..’ ಅನ್ನುವ ಧೈರ್ಯವನ್ನು ಮಾಡಲಿಲ್ಲ. ಆದರೆ ಕೈಚೀಲಕ್ಕೆ ಆಯುಧಗಳನ್ನು ತುಂಬಿ ಹೊರಡುವಾಗಲೂ ಹಾಡೊಂದನ್ನು ಗುನುಗುತ್ತಾ ಬಲಗಿವಿ ಸವರಿಕೊಂಡು ಬೀಡಿ ಅಲ್ಲೇ ಇರುವುದನ್ನು ಖಚಿತ ಪಡಿಸಿಕೊಳ್ಳುತ್ತಾ, ಕಡ್ಡಿಗೆ ಬಟ್ಟೆ ಹೊಚ್ಚಿದ ನಾಲ್ಕೂವರೆ ಅಡಿಯ ಆಕಾರವೊಂದು ಗಾಳಿಗೆ ತುಯ್ದಾಡುವ ಆಡುತ್ತಾ ನಡೆದು ಹೋದನು. ಕೆಲವು ಕ್ಷಣಗಳಲ್ಲೇ ಬೀದಿಯ ಅಂಚಿನಿಂದ ಮರೆಯಾದನು. ರಾತ್ರಿಗೆ ಅಮ್ಮನು ಗೊಣಗುತ್ತಲೇ ಬಾಗಿಲ ಕೆಳಗಿನ ಆ ಎರಡು ಇಂಚು ಖಾಲಿ ಜಾಗಕ್ಕೆ ಗೋಣಿ ಚೀಲವೊಂದನ್ನು ತುರುಕಿ ಭದ್ರ ಪಡಿಸುತ್ತಿದ್ದಳು.