ಸಮಾಜವನ್ನು ಸರಿಯಾದ ಹಾದಿಗೆ ಹಾಕುತ್ತಿದ್ದೇವೆ ಎಂದು ತೋರಿಸಲು, ನಂಬಿಕೆ ಹುಟ್ಟಿಸಲು ನಮ್ಮ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಒಂದು ಹಂತದ ತನಕ ನಮ್ಮ ಇಲಾಖೆ, ಪತ್ತೇದಾರರು, ವಕೀಲರು ಇದನ್ನೆಲ್ಲ ಗಮನಿಸಬಹುದು, ನಿರ್ವಹಿಸಬಹುದು. ಈಗ ಹಾಗಿಲ್ಲ. ಇದೇ ಸಮಾಜದ ಮುಖ್ಯವಾಹಿನಿಯೂ, ಜೀವನಶೈಲಿಯೂ ಆಗಿರುವುದರಿಂದ, ನಮ್ಮ ಇಲಾಖೆಯ ಅಗತ್ಯವಿಲ್ಲವೆನಿಸುತ್ತದೆ. ಅಂದರೆ ಇದು ಒಟ್ಟು ಸಮಾಜಕ್ಕೆ ಸೇರಿದ ಜವಾಬ್ದಾರಿ. ಹಾಗಾಗಿ ನಾನಾಗಲೀ, ನಮ್ಮ ಇಲಾಖೆಯಾಗಲೀ ಮುಂದುವರೆಯುವ ಅಗತ್ಯವಿಲ್ಲ. ಬರಕಾಸ್ತು ಮಾಡುವುದೇ ಒಳ್ಳೆಯದು. ಹಾಗೆಂದು ಈ ಸಮ್ಮೇಳನದ ಮೂಲಕ ಕರೆ ಕೊಡುತ್ತಿದ್ದೇನೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಗಂಭೀರ, ಪ್ರಬುದ್ಧ ಕತೆಗಾರನೆಂಬ ಹಗಲುವೇಷ ಹಾಕಿಕೊಂಡ ಮೇಲೆ ನಾನು ನನ್ನ ಹಿಂದಿನ ಜನ್ಮ, ಅವತಾರಗಳ ಕತೆಯನ್ನು ಯಾರಲ್ಲೂ ಹೇಳಲು ಹೋಗುತ್ತಿರಲಿಲ್ಲ. ನಮ್ಮ image ಗೆ ನಾವೇ ಯಾಕೆ ಕಲ್ಲು ಹಾಕಿಕೊಳ್ಳಬೇಕು.
ವಾರ್ಷಿಕ ಪತ್ತೇದಾರಿ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಸನ್ಮಾನ ಮಾಡಿ ಗೃಹಸಚಿವರು ನುಡಿದ ಅಮೃತ ವಾಕ್ಯಗಳನ್ನು ಕೇಳಿಸಿಕೊಂಡ ಮೇಲೆ ನಿಜವನ್ನು ಹೇಳಬೇಕೆಂದು ಹೊರಟಿರುವೆ.
*****
ಮೊದಮೊದಲು ನಾನು ಯಶಸ್ವಿ, ವರ್ಣರಂಜಿತ, ಅಂಗಾಂಗಭರಿತ ಪ್ರೇಮದ ಕತೆಗಳನ್ನು ಬರೆಯುತ್ತಿದ್ದೆ. ಕತೆಗಳು ಇನ್ನೂ ಆಕರ್ಷಕವಾಗಿರಬೇಕು, ಆಧುನಿಕವಾಗಿರಬೇಕು, ಈ ಕಾಲದ ಓದುಗರ ಅಪೇಕ್ಷೆಗಳಿಗನುಗುಣವಾಗಿ ಇರಬೇಕೆಂಬ ಸಂಪಾದಕಶ್ರೀಗಳ ಸೂಚನೆಯಂತೆ ಕೆಲವು ವರ್ಷ ಗಂಡಸರು ಹೆಂಗಸರನ್ನು ತೀವ್ರವಾಗಿ ಪ್ರೀತಿಸುವಂತೆ, ನಂತರ ಹೆಣ್ಣು ಗಂಡನ್ನು ಪೀಡಿಸುವಂತೆ ಕಥಾನಕಗಳನ್ನು ಸೃಷ್ಟಿಸಿದೆ. ಕಾಲ ಬದಲಾದಂತೆ ಜಾತಿ ಸಮೀಕರಣಗಳನ್ನು ಕೂಡ ಬದಲಾಯಿಸಿದೆ. ಸೂಕ್ತ ಜಾತಿಗಳ ನಡುವೆ ಪ್ರೇಮಿಗಳ ವಿವಾಹ ಮಾಡಿಸುತ್ತಿದ್ದೆ. ಆದರೂ ಸಂಪಾದಕರು, ಓದುಗರು ಇಬ್ಬರೂ ಸುಸ್ತಾದರು. ಪ್ರೇಮ ಕತೆಗಳು ಬೇಡ – ಪತ್ತೇದಾರಿ ಕತೆಗಳನ್ನು ಬರೆಯಿರಿ, ಹೊಸ ಅನುಭವ ಹುಡುಕಿ, ಹೊಸ ಅಪರಾಧಗಳನ್ನು ಕಂಡು ಹಿಡಿಯುವ ನವನವೀನ ಪತ್ತೇದಾರರನ್ನು ಸೃಷ್ಟಿಸಿ ಎಂದರು. ಸವಾಲನ್ನು ಸ್ವೀಕರಿಸಿದೆ.
ನಿರ್ದಿಷ್ಟವಾದ ಉತ್ತರಾಯಣ ಪುಣ್ಯ ಕಾಲದಿಂದ ಪತ್ತೇದಾರಿ ಕಥಾನಕಗಳನ್ನು ಸೃಷ್ಟಿಸಿದೆ. ಬೇರೆ ಬೇರೆ ದೇಶ-ಕಾಲಗಳ ಪತ್ತೇದಾರಿ ಸಾಹಿತ್ಯವನ್ನು ಕೂಡ ಓದಿಕೊಂಡೆ. ಅನುವಾದದ ಬದಲು ಸೂಕ್ತ ಸಾಂಸ್ಕೃತಿಕ ಬದಲಾವಣೆ ಮಾಡಿ ನನ್ನದೇ ಕತೆಗಳು ಅಂತ ಪ್ರಕಟಿಸಿದೆ. ಕತೆಗಳು ಚೆನ್ನಾಗಿ ಓಡುತ್ತಿವೆ ಎಂದು ಹೇಳಿದ ಸಂಪಾದಕರು/ಪ್ರಕಾಶಕರೇ, ಇಲ್ಲ ಇಲ್ಲ ನೀವು ಬದಲಾಯಿಸಬೇಕು, ಹೊಸ ಕಾಲದಲ್ಲಿ ಹೊಸ ರೀತಿಯಲ್ಲಿ ನಡೆಯುತ್ತಿರುವ ಕೊಲೆ, ಆತ್ಮಹತ್ಯೆ, ಮೋಸ, ದಗಾ, ಭ್ರಷ್ಟಾಚಾರಗಳ ಮುಂದೆ ನಿಮ್ಮ ಕತೆಗಳು ತೀರಾ ಗರತಿ ಕತೆಗಳಂತಿವೆ, ಕಾಣುತ್ತವೆ ಅಂತ ರಾಗ ಎಳೆಯಲು ಪ್ರಾರಂಭಿಸಿದರು. Digital Crime ಯುಗ ಪ್ರಾರಂಭವಾದಮೇಲಂತೂ ನನಗೆ ತಲೆಬುಡ ಒಂದೂ ಅರ್ಥವಾಗುತ್ತಿರಲಿಲ್ಲ. ಎತೆಂತವರೋ, ಎಲ್ಲರೂ ತಾವೇ ತಾವಾಗಿ ಮೇಲೆ ಬಿದ್ದು ಹೋಗಿ ಹಗರಣಗಳಲ್ಲಿ, ಮೋಸದ ವ್ಯಾಪಾರಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾಗ, ಪತ್ತೆ ಮಾಡುವುದು ಏನಿದೆ ಎಂಬ ನಿಲುವು ಜಾಗೃತವಾಯಿತು. ಮತ್ತೆ ಮತ್ತೆ ಯೋಚಿಸಿದಾಗಲೂ ಇದೇ ನಿಲುವು ದೃಢವಾಯಿತು. ಹೊಸ ಕಾಲದ ಯಾವ ಬೆಳವಣಿಗೆಗಳೂ ಈಗ ನನಗೆ ಅರ್ಥವಾಗುತ್ತಿಲ್ಲ. ದಯವಿಟ್ಟು ಕ್ಷಮಿಸಿ. ಇನ್ನು ಮುಂದೆ ನಾನು ಬರೆಯಲಾರೆ ಎಂದು ನಿವೇದಿಸಿದೆ ಕೂಡ.
ಪ್ರಕಾಶಕರು ಒಪ್ಪಲಿಲ್ಲ. ನೀವು ತುಂಬಾ ತಪ್ಪು ಮಾಡುತ್ತಿದ್ದೀರಿ. ಎಲ್ಲ ಅಪರಾಧಗಳೂ ಈಗ sophisticated ಆಗುತ್ತಿದೆ. ಪಾತಾಳಗರಡಿ ತಲುಪುತ್ತಿದೆ. ಅಂತರಿಕ್ಷಕ್ಕೂ ವಿಸ್ತರಿಸುತ್ತಿದೆ. ಹಿಂದಿನ ಕಾಲದಲ್ಲಿ ಬಡವರು, ಕುಲ ಕಸುಬು ಮಾಡುವವರು ಮಾತ್ರ ಈ ಕ್ಷೇತ್ರಕ್ಕೆ ಬರುತ್ತಿದ್ದರು. ಈಗ ಹಾಗಲ್ಲ. ತಾರೆಯರು, ಸುಂದರಿಯರು, ಕುಲೀನ ಮನೆತನದವರು, ಎಲ್ಲರೂ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ವಿಶ್ವವಿದ್ಯಾಲಯಗಳು ಕೂಡ ಹೊಸ ಅಧ್ಯಯನ ವಿಭಾಗಗಳನ್ನು ತೆರೆದಿವೆ. ಇದೇ ಪತ್ತೇದಾರಿ ಸಾಹಿತ್ಯಕ್ಕೆ ಪ್ರಶಸ್ತವಾದ ಕಾಲ. ದಯವಿಟ್ಟು ಬರವಣಿಗೆಯನ್ನು ಮುಂದುವರೆಸಿ ಎಂದು ಬಾಯಿಮಾತಿನಲ್ಲಿ ಹೇಳಿದರು, ಲಿಖಿತ ಸಂದೇಶವನ್ನೂ ಕಳಿಸಿದರು.
ನನಗೆ ನನ್ನ ಬರವಣಿಗೆಯ ಕಾಲ ಮುಗಿಯಿತು ಎಂದು ಖಚಿತವಾಯಿತು. ನನ್ನನ್ನು ಪೀಡಿಸಬೇಡಿ ಎಂದು ಮರು ಕೋರಿದೆ.
ಸರಿ! ಮುಂದೇನು ಮಾಡುತ್ತೀರಿ ಎಂದು ಕೇಳಿದರು. ಸುಭಾಷಿತ, ವಿಚಾರರಶ್ಮಿ, ಶ್ಲೋಕಗಳ ತಿಳಿಗನ್ನಡ ಅನುವಾದ ಇಂತಹ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದೆ. ಏನೇ ಆದರೂ ಸಂಪಾದಕರು ಪ್ರಕಾಶಕರಿಗೆ ಇಷ್ಟು ವರ್ಷಗಳ ಕಾಲ ಚೆನ್ನಾಗಿ ಮಾರಾಟವಾಗುವ ಪತ್ತೇದಾರಿ ಕಾದಂಬರಿಗಳನ್ನು ಬರೆದುಕೊಟ್ಟವನು ಎಂಬ ಗೌರವ, ಪ್ರೀತಿ ಇತ್ತು.
ಆಯ್ತು. ನಿಮಗಿಷ್ಟವಾದುದನ್ನೇ ಬರೆಯಿರಿ. ಆದರೆ ಈ ಸಾಲಿನ ವಾರ್ಷಿಕ ಪತ್ತೇದಾರಿ ಸಾಹಿತ್ಯ ಸಮ್ಮೇಳನದಲ್ಲಿ ನಿಮ್ಮನ್ನು ಸನ್ಮಾನಿಸುತ್ತೇವೆ, ಗೌರವಿಸುತ್ತೇವೆ. ಘನತೆವೆತ್ತ ಗೃಹಮಂತ್ರಿಗಳೇ ನಿಮಗೆ ಸನ್ಮಾನ ಮಾಡುತ್ತಾರೆ. ಸಮ್ಮೇಳನಕ್ಕೆ ದಯವಿಟ್ಟು ಕುಟುಂಬವನ್ನು ಕೂಡ ಕರೆದುಕೊಂಡು ಬನ್ನಿ ಎಂದು ಆತ್ಮೀಯವಾಗಿಯೇ ಆಹ್ವಾನಿಸಿದರು.

ಸನ್ಮಾನ ಚೆನ್ನಾಗಿತ್ತು. ಹೃತ್ಪೂರ್ವಕವಾಗಿ ಗೌರವಿಸಿದರು. ಸನ್ಮಾನ ಮಾಡುವಾಗ ಗೃಹಮಂತ್ರಿಗಳು ಎರಡು ಮೂರು ಸಲ ಬೆನ್ನು, ಭುಜ ತಟ್ಟಿದರು. ನಾಲ್ಕೂವರೆ ಕೆಜಿ dry fruits ಬುಟ್ಟಿ ಕೊಟ್ಟರು. ದಶಾವತಾರ ಪ್ರತಿಮೆ ಇರುವ ಸ್ಮರಣಿಕೆ ನೀಡಿದರು. ಗೃಹಮಂತ್ರಿಗಳು ಮೆಚ್ಚುಗೆಯಿಂದ ಸ್ಮರಣಿಕೆಯನ್ನು ನಿಧಾನವಾಗಿ ಗಮನಿಸುತ್ತಿದ್ದರು. ದಶಾವತಾರದ ವಿವಿಧ ಘಟ್ಟಗಳು ಅವರ ಮನಸ್ಸಿನಲ್ಲಿ ಹಾದು ಹೋಗುತ್ತಿರಬೇಕು. ತುಂಬಾ ಪ್ರಸನ್ನವಾಗಿ, ಸ್ವಗತದ ಧಾಟಿಯಲ್ಲಿ ಮಾತನಾಡಿದರು. ಅವರು ಮಾತನಾಡಿದ್ದರ ಮಹತ್ವ ತಿಳಿಯಬೇಕಾದರೆ, ಮಾನ್ಯರ ಹಿನ್ನೆಲೆಯ ಬಗ್ಗೆ ಸ್ವಲ್ಪ ಹೇಳಬೇಕು.
*****
ರಾಜಕಾರಣಕ್ಕೆ ಬರುವ ಮುನ್ನ ಅವರು ಸಣ್ಣ ಪತ್ರಿಕೆಯ ವರದಿಗಾರರಾಗಿದ್ದರು. ಟ್ಯುಟೋರಿಯಲ್ನಲ್ಲಿ ಪಾಠ ಹೇಳುತ್ತಿದ್ದರು. ನಂತರ ಸಬ್-ಇನ್ಸ್ಪೆಕ್ಟರ್ ಪರೀಕ್ಷೆ ಪಾಸ್ ಮಾಡಿ ಪೋಲಿಸ್ ಇಲಾಖೆ ಸೇರಿದರು. ದಿಟ್ಟ ನಿಲುವಿನ ಪ್ರಾಮಾಣಿಕ ಮನುಷ್ಯ. ವಾಚಾಳಿ. Station posting ಸಿಗುತ್ತಿರಲಿಲ್ಲ. ಆದರೆ ದಿಟ್ಟ ನಿಲುವಿಗೆ ಯಾರೂ ಬೆಂಬಲ ಕೊಡದಿದ್ದರೂ, ಜನಪ್ರಿಯತೆ ಬಂದಿತ್ತು. ತುಂಬಾ ಜನ ಬಾಯಿಮಾತಿನ ಗೌರವ ಕೊಡುತ್ತಿದ್ದರು. ಇನ್ನೇನು ಸರ್ಕಲ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಬರವೇಕೆನ್ನುವ ಸಮಯದಲ್ಲಿ ಗಾಂಧಿ ಕುಟುಂಬವನ್ನು ನೇರವಾಗಿ ಸಂಪರ್ಕಿಸಿ, ಎಲ್ಲರಿಗೂ ಆಶ್ಚರ್ಯವಾಗುವಂತೆ ಚುನಾವಣಾ ಟಿಕೆಟ್ ಪಡೆದರು. ಚತುಶ್ಕೋನ ಸ್ಪರ್ಧೆಯ ವೈಚಿತ್ರ್ಯದಿಂದಾಗಿ ಕೆಲವೇ ಮತಗಳ ಅಂತರದಲ್ಲಿ ಗೆದ್ದೂಬಿಟ್ಟರು. ಪ್ರಾಮಾಣಿಕತೆ, ಅಡ್ಡಾದಿಡ್ಡಿ ಮಾತುಗಳ ಹಿನ್ನೆಲೆಯಲ್ಲೇ ಹೆಸರು ಮುನ್ನೆಲೆಗೆ ಬಂದು ಗೃಹಖಾತೆಯ ರಾಜ್ಯ ಸಚಿವರೂ ಆದರು. ಪೂರ್ವಾಶ್ರಮದ ಹಿನ್ನೆಲೆಯಿಂದಾಗಿ ಪತ್ರಿಕೆಗಳಿಗೆ ಅಂಕಣಗಳನ್ನು ಕೂಡ ಬರೆಯುತ್ತಿದ್ದರು. ಭಾಷಣಕಾರರಾಗಿಯೂ ಅವರಿಗೆ ತುಂಬಾ ಬೇಡಿಕೆಯಿತ್ತು. ಬರವಣಿಗೆಯ ಹಿನ್ನೆಲೆಯ ಕಾರಣ, ಗೃಹಖಾತೆಯ ರಾಜ್ಯ ಸಚಿವರಾಗಿದ್ದುದು, ಎಲ್ಲವೂ ಸೇರಿಕೊಂಡು ಪತ್ತೇದಾರಿ ಸಾಹಿತಿಗಳ ವಾರ್ಷಿಕ ಸಮ್ಮೇಳನಕ್ಕೆ ಅತಿಥಿಯಾಗಿ ಬಂದಿದ್ದರು. ಯಾವ ಕಾರಣಕ್ಕಾದರೂ ಸಚಿವರಾಗಲಿ, ಯಾರೇ ಆಹ್ವಾನಿಸಿರಲಿ, ಮಾಡಿದ ಭಾಷಣ, ಭಾಷಣ ಮಾಡಿದ ರೀತಿ ಎರಡೂ ಮುಖ್ಯ.
*****
ನನಗೆ ಏನು ಮಾತನಾಡಬೇಕು, ಯಾರ ಹತ್ತಿರ ಮಾತನಾಡಬೇಕು, ಯಾವ ಮಾತಾಡಿದರೆ ಯಾರಿಗೆ ತಲುಪುತ್ತೆ, ತಲುಪುವುದಿಲ್ಲ ಅನ್ನುವುದಾಗಲೀ ಗೊತ್ತಾಗುತಿಲ್ಲ. ವಾರ್ಷಿಕ ಸಮ್ಮೇಳನ, ಪತ್ತೇದಾರಿ ಸಾಹಿತಿಗಳ ಸಮ್ಮೇಳನ ನಡೆಯಬೇಕು, ನಡೆಯುತ್ತಿದೆ. ಹಬ್ಬ ಹರಿದಿನಗಳಂತೆ, ಶ್ರಾದ್ಧ, ಪಕ್ಷ ಮಾಸದ ಆಚರಣೆಗಳಂತೆ ಇದೂ ಕೂಡ ಅನೂಚಾನವಾಗಿ ನಡೆಯಬೇಕು, ನಡೆಯುತ್ತಿದೆ. ಸಂತೋಷ, ಅಭಿನಂದನೆಗಳು. ನಾನು ಗೃಹಸಚಿವ, ಈ ವಲಯಕ್ಕೆ ಸಂಬಂಧಿಸಿದವನು ಎಂದು ಕರೆದಿದ್ದೀರಿ, ಕೃತಜ್ಞತೆ.
ಸಮಾಜದಲ್ಲಿ ಕಳ್ಳರು ಕಾಕರು, ಭ್ರಷ್ಟಾಚಾರಿಗಳು, ಭ್ರಷ್ಟಾಚಾರವನ್ನು ಕೂಡ ಒಂದು ಜೀವನಮಾರ್ಗವೆಂದು ನಂಬಿದವರು ಕಡಿಮೆ ಇದ್ದಾಗ, ಒಂದು ಕಳ್ಳತನ, ಅಪರಾಧ, ಭ್ರಷ್ಟಾಚಾರದ ಪ್ರಕರಣಕ್ಕೂ ಇನ್ನೊಂದಕ್ಕೂ ಕಾಲದ ಅಂತರವಿದ್ದಾಗ, ಪೋಲಿಸ್ ಇಲಾಖೆಗೆ, ಗುಪ್ತಚರ ಇಲಾಖೆಗೆ, ಪತ್ತೇದಾರರಿಗೆ, ಸಾಹಿತಿಗಳಿಗೆ, ಲೋಕಾಯುಕ್ತಕ್ಕೆ ಒಂದು ಅರ್ಥವಿದೆ. ಈಗ ನೋಡಿ! ನಮ್ಮ ಬೀದಿಯಲ್ಲಿ, ಮೊಹಲ್ಲಾದಲ್ಲಿ, ತಾಲ್ಲೂಕಿನಲ್ಲಿ, ಫಿರ್ಕಾದಲ್ಲಿ, ಯಾವ ಅಧಿಕಾರಿ, ಯಾವ ರಾಜಕಾರಣಿ, ಯಾವ ವ್ಯಾಪಾರಿ, ಯಾವ ರೀತಿಯಲ್ಲಿ ಹಣ ಸಂಪಾದಿಸುತ್ತಿದ್ದಾನೆ, ಎಲ್ಲೆಲ್ಲಿ ಇಟ್ಟಿದ್ದಾನೆ, ಸರ್ಕಾರದ ಯಾವ ಯಾವ ಅಂಗಾಂಗಗಳನ್ನು ಯಾವ ರೀತಿ ತಿರುಚುತ್ತಿದ್ದಾನೆ. ಯಾವುದು ಯಾವುದಕ್ಕೆ ಕುಮ್ಮಕ್ಕು, ಯಾರಿಗೆ ಯಾರು ಆಸರೆ ಎಂಬುದೇ ಗೊತ್ತಾಗುತಿಲ್ಲ. ಗೊತ್ತಾದರೂ ಗೊತ್ತಿಲ್ಲದಂತೆ ನಾವು ಇದ್ದೇವೆ. ಇಲ್ಲ ಇಲ್ಲ, ಇರಲು ಬಯಸುತ್ತೇವೆ.
ನಮ್ಮ ಇಲಾಖೇನೇ ನೋಡಿ! ಕಾನೂನು ಪಾಲನೆ, ಸಂಚಾರ ನಿಯಂತ್ರಣ, ನಾಗರಿಕರಿಗೆ ದಿನನಿತ್ಯದ ಜೀವನದಲ್ಲಿ ನೀಡುವ ನೆರವು, ಇವುಗಳಿಗಿಂತ ಹೆಚ್ಚು ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಅಪರಾಧದ ಪತ್ತೆ, ಭ್ರಷ್ಟಾಚಾರಿಗಳ ತನಿಖೆ, ಲೋಕಾಯುಕ್ತ ಇಂತಹ ವಲಯಗಳಿಗೆ ನೇಮಿಸಬೇಕಾಗಿದೆ. ಈ ವಲಯವೇ ಮಾತೃ ವಲಯಕ್ಕಿಂತ, ಮೂಲ ಇಲಾಖೆಗಿಂತ ದೊಡ್ಡದಾಗಿದೆ. ಈಗ ಎಲ್ಲ ಅಪರಾಧಿಗಳು ಗಣ್ಯರು, ಅತಿ ಗಣ್ಯರೇ. ಶಾಸಕರು, ಸಂಸದರು, ಮಂತ್ರಿಗಳು, ನಾನಾ ಸ್ತರದ ಅಧಿಕಾರಿಗಳು ಇವರನ್ನೆಲ್ಲ ಅಪರಾಧಿಗಳು ಎಂದು ಹೇಳುವುದು ಸುಲಭ. ಇವರನ್ನೆಲ್ಲ ಜೈಲುಗಳಲ್ಲಿ, ಕೋರ್ಟುಗಳಲ್ಲಿ ನಿರ್ವಹಿಸುವುದು ತುಂಬಾ ಕಷ್ಟ. ಸಮಯವೂ ವ್ಯರ್ಥ, ಹಣವೂ ವ್ಯರ್ಥ. ಇವರನ್ನೆಲ್ಲ ನಿಯಂತ್ರಿಸುತ್ತಿದ್ದೇವೆ, ಸಮಾಜವನ್ನು ಸರಿಯಾದ ಹಾದಿಗೆ ಹಾಕುತ್ತಿದ್ದೇವೆ ಎಂದು ತೋರಿಸಲು, ನಂಬಿಕೆ ಹುಟ್ಟಿಸಲು ನಮ್ಮ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಒಂದು ಹಂತದ ತನಕ ನಮ್ಮ ಇಲಾಖೆ, ಪತ್ತೇದಾರರು, ವಕೀಲರು ಇದನ್ನೆಲ್ಲ ಗಮನಿಸಬಹುದು, ನಿರ್ವಹಿಸಬಹುದು. ಈಗ ಹಾಗಿಲ್ಲ. ಇದೇ ಸಮಾಜದ ಮುಖ್ಯವಾಹಿನಿಯೂ, ಜೀವನಶೈಲಿಯೂ ಆಗಿರುವುದರಿಂದ, ನಮ್ಮ ಇಲಾಖೆಯ ಅಗತ್ಯವಿಲ್ಲವೆನಿಸುತ್ತದೆ. ಅಂದರೆ ಇದು ಒಟ್ಟು ಸಮಾಜಕ್ಕೆ ಸೇರಿದ ಜವಾಬ್ದಾರಿ. ಹಾಗಾಗಿ ನಾನಾಗಲೀ, ನಮ್ಮ ಇಲಾಖೆಯಾಗಲೀ ಮುಂದುವರೆಯುವ ಅಗತ್ಯವಿಲ್ಲ. ಬರಕಾಸ್ತು ಮಾಡುವುದೇ ಒಳ್ಳೆಯದು. ಹಾಗೆಂದು ಈ ಸಮ್ಮೇಳನದ ಮೂಲಕ ಕರೆ ಕೊಡುತ್ತಿದ್ದೇನೆ.
ಮನುಷ್ಯನಾಗಲೀ, ಸಮಾಜವಾಗಲೀ ಪ್ರಾಮಾಣಿಕನಾಗಿರುವುದೆಂದರೆ, ತನ್ನ, ತಮ್ಮ ಅಸಹಾಯಕತೆಯನ್ನು, ಅಪ್ರಸ್ತುತೆಯನ್ನು ಒಪ್ಪಿಕೊಳ್ಳುವುದು, ನಮಗೆ ನಾವೇ ಹೇಳಿಕೊಳ್ಳುವುದು. ಸಾಹಿತಿಗಳಾದ ನೀವು ಈ ಕೆಲಸವನ್ನು ರಾಜಕಾರಣಿಗಳಾದ ನಮಗಿಂತ ಚೆನ್ನಾಗಿ ಮಾಡಬಲ್ಲಿರಿ, ಮಾಡಬೇಕು.
ಸಮಾರಂಭಕ್ಕೆ ಧಾರ್ಮಿಕ ನಾಯಕರುಗಳು ಕೂಡ ಬರುವವರಿದ್ದಾರೆ. ತ್ರಿಮತಸ್ಥರಲ್ಲದೆ ಅನ್ಯ ಧರ್ಮದ ಜಗದ್ಗುರುಗಳನ್ನು ಕೂಡ ಕೂಗಿದ್ದೀರಿ. ಅವರಿಗೂ ನನ್ನ ಮಾತುಗಳನ್ನು ತಿಳಿಸಿ. ನಾನು ಕೂಡ ಸರ್ಕಾರದ, ಪಕ್ಷದ ಮಟ್ಟದಲ್ಲಿ ನಮ್ಮ ಇಲಾಖೆಯನ್ನು ಬರಖಾಸ್ತು ಮಾಡುವ ವಿಚಾರಕ್ಕೆ ಚಾಲನೆ ನೀಡುತ್ತೇನೆ.

ಇನ್ನೂ ಒಂದು ವಿನಯಪೂರ್ವಕವಾದ ಕೋರಿಕೆಯಿದೆ. ಪತ್ತೇದಾರಿ ಸಾಹಿತ್ಯದ ರಚನೆ, ಪತ್ತೇದಾರಿ ಸಮ್ಮೇಳನಗಳ ಅವಶ್ಯಕತೆಯೂ ಇಲ್ಲವೆಂದು ಕಾಣಿಸುತ್ತದೆ. ಮನಸ್ಸಿನ ಸಮಾಧಾನಕ್ಕಾಗಿ ಮಾಡುವುದಾದರೆ ನನ್ನದೇನೂ ಅಡ್ಡಿಯಿಲ್ಲ. ಇದು domain expert ಗಳ ಕಾಲ. ನೀವೇ ನಿರ್ಧರಿಸಿ.
ನಿಮ್ಮ ಸ್ಮರಣ ಸಂಚಿಕೆ, ವಾರ್ಷಿಕ ಸಾಹಿತ್ಯ ಸಂಕಲನ ಎಲ್ಲವನ್ನೂ, ಫಲಪುಷ್ಟ, ತಾಂಬೂಲಾದಿಗಳನ್ನು ಕೂಡ ಗೌರವಪೂರ್ವಕವಾಗಿ ಹಿಂದಿರುಗಿಸುತ್ತಿರುವೆ.
(ಹಿಂದಿನ ಕತೆ: ಜಗನ್ ಮೋಹನ್ ಎಂಬ ವಠಾರ)

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

