ಮಂಡಕ್ಕಿ ಅಂಗಡಿ ಇಡುವವರು ನಮ್ಮ ಚರ್ಚೆಯಲ್ಲಿ ಭಾಗವಹಿಸಿದರು, ಆದರೆ ಅವರು ಫೋಟೊ ತೆಗೆಯೋದು ಬೇಡ ಅಂದರು. ಮುಂಚೆ ಬಳೆ ವ್ಯಾಪಾರ ಮಾಡುತ್ತಿದ್ದರು. ಯಕ್ಷಗಾನವು ಇಷ್ಟ ಆಗುವುದರಿಂದ ಮಂಡಕ್ಕಿ ವ್ಯಾಪಾರ ಮಾಡುತ್ತಾರೆ. ಟೆಂಟ್ ಮೇಳದಲ್ಲಿ ಬರಿ ಭಾಗವತಿಕೆ ಕೇಳೋಕಾಗತ್ತೆ. ಭಾಗವತಿಕೆನೆ ಮುಖ್ಯ ಅವರ ಪ್ರಕಾರ. ‘ಯಕ್ಷಗಾನ ನೋಡಿದ ಹಾಗೂ ಆತು, ಗಂಜಿಗೆ ಕಾಸು ಆತು’, ಅದಕ್ಕೆ ಮಂಡಕ್ಕಿ ವ್ಯಾಪಾರ ಶುರುಮಾಡಿದೆ ಅಂದರು. ಇಲ್ಲಿಯ ಎಲ್ಲಾ ಕಲಾವಿದರೂ ಯಾವ ಪಾತ್ರವನ್ನಾದರೂ ಪದ್ಯ ನೋಡಿಕೊಂಡು ಮಾಡಬಲ್ಲವರಾಗಿದ್ದರು. ಕಥೆ ಮುಂದುವರಿಯಲು ಬೇಕಾದಷ್ಟು ಮಾತು, ಕುಣಿತ, ಅಭಿನಯವನ್ನು ಮಾಡಲು ತಯಾರಿದ್ದರು.
ಯಕ್ಷಾರ್ಥ ಚಿಂತಾಮಣಿ ಅಂಕಣದಲ್ಲಿ ಕೃತಿ ಪುರಪ್ಪೇಮನೆ ಲೇಖನ ಇಲ್ಲಿದೆ.

‘ಕಲೆ ಎನ್ನುವುದು ಒಂದು ಕ್ರಿಯೆ. ಅದು ಬರಿ ಅರ್ಥ ಮತ್ತು ಸಂವಹನ ಅಲ್ಲ.’
-ಆಲ್ಫ್ರಡ್ ಜೆಲ್.

‘ಕಲ್ಲಾಗಿರುವ ವಸ್ತುಗಳಲ್ಲಿ ಅಡಗಿರುವ ಬದುಕನ್ನು–ರೂಪಕವಾಗಿ-ಎಬ್ಬಿಸುವುದಷ್ಟೇ ಅಲ್ಲ, ಜೀವಂತವಾಗಿರುವುದನ್ನೂ- ಅವು ಪುರಾತನವಾಗಿ ತೋರ್ಪಡಿಸಿಕೊಂಡು ಅದರ ಮಹತ್ವವನ್ನು ಏಕಾಏಕಿ ಹೊರಹಾಕುವಂತೆ -ಪರಿಶೀಲಿಸುವುದು’.
-ಥಿಯೊಡೋರ್ ಅಡೊರ್ನೊ.

ನಮ್ಮೂರಿನ ಹತ್ತಿರದಲ್ಲಿ ಒಂದು ಬಯಲಾಟ ನೋಡಿ ಬಂದು ಮಾಡಿಕೊಂಡ ಟಿಪ್ಪಣಿಯನ್ನು ಮತ್ತೆ ಓದಿದಾಗ ಎರಡು ಲೇಖನಗಳು ನೆನಪಾದವು. ಮೇಲಿರುವುದು ಅವುಗಳಿಂದ ತೆಗೆದ ಸಾಲುಗಳು. ಮೇಲಿನ ಉಧೃತಗಳ ಹಿನ್ನಲೆಯಲ್ಲಿ ಈ ಟಿಪ್ಪಣಿಯನ್ನು ಇದ್ದ ಹಾಗೆಯೇ ತೋರ್ಪಡಿಸಿದರೆ ‘ಉತ್ತರೊತ್ತರವಪ್ಪುದೇ?’

ಟಿಪ್ಪಣಿ

ಪೇಟೇಸರವೆಂಬ ಸಾಗರ ತಾಲ್ಲೂಕಿನ ಹಳ್ಳಿಯಲ್ಲಾದ ಯಕ್ಷಗಾನಕ್ಕೆ ನಮ್ಮೂರಿನ ಹವ್ಯಾಸಿ ಭಾಗವತ, ಉಡುಪಿ ಕೇಂದ್ರದಲ್ಲಿ ಎರಡು ವರ್ಷ ಅಭ್ಯಾಸ ಮಾಡಿದವರು, ತಮ್ಮ ಭಾಗವತಿಕೆ ಇದೆ ಹೋಗೋಣ ಎಂದರು. ಅಲ್ಲದೆ ನಮ್ಮೂರಿನ ಇನ್ನೊಬ್ಬ ಭಾಗವತರು- ನಾವುಡರ ಕ್ಯಾಸೇಟ್ ಕೇಳಿ ಪ್ರಭಾವಿತರಾಗಿ, ಸ್ವಲ್ಪ ಕಲಿಯುತ್ತಾ ಅಲ್ಲಲ್ಲಿ ಸಂಗೀತ(ಕಲಿಕೆಯಲ್ಲಿರುವ ಭಾಗವತರು ಯಕ್ಷಗಾನದ ಪೂರ್ವರಂಗದ ಪದಗಳನ್ನು ಹೇಳುವುದು) ಮಾಡುವವರೊಬ್ಬವರು ನನ್ನ ಸಂಗೀತ ಇದೆ ಬನ್ನಿ ಎಂದೂ ಹೇಳಿದ್ದರು. ಅವರು ‘ಒಂದು ವಾರದಿಂದ ಒಡ್ಡೋಲಗದ ತಿಟ್ಟುಗಳನ್ನು ಬಾಯಿಯಲ್ಲಿ ಹೇಳಿ ಅಭ್ಯಾಸ ಮಾಡಿಕೊಂಡಿದ್ದೇನೆ, ಇವತ್ತು ಅಲ್ಲಿ ಒಡ್ಡೊಲಗ ನಂದೇ’ ಎಂದಿದ್ದರು. ನಾವು ಅಲ್ಲಿಗೆ ತಲುಪುವಾಗ ರಾತ್ರಿ ಒಂಬತ್ತು ಘಂಟೆಯಾಗಿತ್ತು. ಊರ ಮಧ್ಯವಿರುವ ಹಳೇ ಶನೀಶ್ವರದ ದೇವಸ್ಥಾನದ ಎದುರಿನ ರಸ್ತೆಯಲ್ಲಿಯೇ ರಂಗಸ್ಥಳವನ್ನು ಕಟ್ಟಿ, ಅದರ ಹಿಂದೆ, ಸ್ವಲ್ಪ ದೂರದಲ್ಲಿ ಇನ್ನೊಂದು ಮನೆಯೆದುರಿಗೆ ಚೌಕಿಮನೆಯನ್ನು ಪೆಂಡಾಲ್ ಕಟ್ಟಿ ಮಾಡಲಾಗಿತ್ತು. ಸಾಲು ಮನೆಗಳ ಎದುರಿಗೆ, ಊರಿನ ಗಡಿಯಿಂದ ರಂಗಸ್ಥಳದ ತನಕ ಬಣ್ಣದ ಲೈಟ್ ಕಟ್ಟಿ ಎರಡೂ ಕಡೆಗೂ ಜಾತ್ರೆಯ ಅಂಗಡಿಗಳಿದ್ದವು. ತಿಂಡಿ ತಿನಿಸುಗಳು, ಮಕ್ಕಳ ಆಟಿಕೆಗಳು ಮುಂತಾದವು. ನಾವು ಹೋದಾಗ, ದೇವಸ್ಥಾನದ ಮುಖ್ಯ ವ್ಯಕ್ತಿಯೊಬ್ಬರು ನಮ್ಮ ಹತ್ತಿರ ಊಟ ಮಾಡಿ ಬನ್ನಿ, ನಿಮಗೆ(ಬ್ರಾಹ್ಮಣರಿಗೆ) ಭಟ್ಟರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದೇವೆ ಅಂದರು. ಮಧ್ಯಾಹ್ನವೂ ದೇವಸ್ಥಾನದಲ್ಲಿ ಪೂಜೆ ಊಟದ ವ್ಯವಸ್ಥೆಯಿತ್ತಂತೆ. ಚೌಕಿಮನೆಯಲ್ಲಿ ಅವಲಕ್ಕಿ ಪ್ರಸಾದವಿತ್ತು. ಪ್ರಸಾದ ಕೊಡುವಾಗ ಬ್ರಾಹ್ಮಣರು ಕೈ ಹಾಕಿ ತೆಗೆದುಕೊಳ್ಳುವುದು, ‘ಇತರೇರು’ ಕೈ ಒಡ್ಡುತ್ತಿದ್ದರು. ಪ್ರಸಾದವನ್ನು ಯಾರೂ ಕೈ ಹಾಕಿ ತೆಗೆದುಕೊಳ್ಳುವ ರೂಢಿಯಿಲ್ಲ. ಆದರೆ ಯಕ್ಷಗಾನದ ಚೌಕಿಮನೆ ಒಂದು ಸೆಕ್ಯುಲರ್ ಜಾಗ. ಅಲ್ಲಿ ಯಾರೂ ಪ್ರಸಾದ ತಿನ್ನುವ ಮೂಡಿನಲ್ಲಿರಲಿಲ್ಲ, ಆದರೆ ಪ್ರಸಾದ ಬೇಡವೆನ್ನುವಂತಿಲ್ಲವಾದ್ದರಿಂದ ಚೂರೇ ತೆಗೆದುಕೊಳ್ಳುತ್ತಿದ್ದರು.

ಅವತ್ತಿನ ಪ್ರಸಂಗ ಶನಿಮಹಾತ್ಮೆ. ಅದನ್ನು ಹಿಂದೆ ಆ ಭಾಗದಲ್ಲಿದ್ದ ಮಂಕಾಳೆ ಮೇಳ ಎನ್ನುವ ಹಳ್ಳಿ ಮೇಳದವರು ಮತ್ತೆ ಅದನ್ನು ಪುನರುಜ್ಜೀವನಗೊಳಿಸಲು, ಹೊಸ ಬ್ಯಾನರ್ ಮಾಡಿಸಿ, ಹೆಗ್ಗೋಡಿನ ಭಾಗದ ಕೆಲ ಕಲಾವಿದರನ್ನು ಸೇರಿಸಿಕೊಂಡು ಒಂದು ಬಯಲಾಟದ ಸೇವೆಯನ್ನು ಮಾಡಬೇಕೆಂಬುದು ಅವರ ಉಮೇದು. ಹತ್ತು ವರ್ಷದಿಂದ ಯಕ್ಷಗಾನ ಮಾಡದವರು ಕೂಡ ಅಲ್ಲಿದ್ದರು. ಅವತ್ತಿನ ಮುಖ್ಯ ಆಕರ್ಷಣೆ ಅಲಾಲಿಕೆ. ಯಕ್ಷಗಾನದ ಒಬ್ಬ ವೃತ್ತಿ ಕಲಾವಿದೆ, ಜೊತೆಗೆ ಟಿ ವಿ ಸೀರಿಯಲ್‌ನಲ್ಲೂ ನಟಿಸುತ್ತಾರೆ. ಒಟ್ಟಿನಲ್ಲಿ ಅಭಿನಯವನ್ನು ಯಕ್ಷಗಾನವನ್ನು ವೃತ್ತಿಯಾಗಿ ತೊಡಗಿಸಿಕೊಂಡ ಕೆಲವೇ ಹೆಂಗಸರಲ್ಲಿ ಇವರೂ ಒಬ್ಬರು. ಅವರ ಅಪ್ಪ ಯಕ್ಷಗಾನದ ವೃತ್ತಿ ಕಲಾವಿದರು. ಪುಂಡು ವೇಷಗಳನ್ನು ಮಾಡುತ್ತಿದ್ದವರು ಕಾಲಿಗೆ ಪೆಟ್ಟಾದ ನಂತರ ಈಗ ಮೇಳಗಳಿಗೆ ಸ್ತ್ರೀವೇಶಕ್ಕೆ ಹೋಗುತ್ತಾರೆ. ಆ ಕಲಾವಿದೆಯ ತಂಡ ಬಂದಿದ್ದು ತಡರಾತ್ರಿ, ಅಲಾಲಿಕೆ ಮಾಡಿ ಬೆಳಗಿನ ತಿಂಡಿ ತಿಂದು ಸಂಜೆ 5 ಘಂಟೆಯ ಉಡುಪಿಯ ಕಾರ್ಯಕ್ರಮಕ್ಕೆ ಹೋಗುವುದಿತ್ತು. ಗಂಡಸರ ಚೌಕಿಯಲ್ಲೇ ವೇಷ ಮಾಡಿಕೊಂಡು, ವೃತ್ತಿಯವರಂತೆ ಹಳ್ಳಿಯ ವೇಷಧಾರಿಗಳನ್ನು ಸರಿದೂಗಿಸಿಕೊಂಡು ಹೋಗುವ ಮಾತುಗಾರಿಕೆ, ಯಾರ ಭಾಗವತಿಕೆಗಾದರೂ ಕುಣಿಯುವ ಚಾಕಚಾಕ್ಯತೆ ಇದ್ದುದು ರಂಗದಲ್ಲೂ ಗೊತ್ತಾಗುತ್ತಿತ್ತು. ಮುಖ್ಯವಾಗಿ ಇಂತಹ ಗುಂಪಿನೊಂದಿಗೆ ಪಾತ್ರಗಳನ್ನು ಮಾಡುತ್ತಾ, ಬರಿ ನೆಲದ ಮೇಲಿನ ರಂಗಸ್ಥಳದಲ್ಲೂ, ಹಾಲಿನ ವೇದಿಕೆಯಲ್ಲೂ ಯಕ್ಷಗಾನ ಮಾಡುವ ಆಶುತ್ವದ ಪ್ರೌಢಿಮೆಯನ್ನು ಪಡೆದುಕೊಂಡಿದ್ದಾರೆ. ಯಕ್ಷಗಾನದ ಪಾತ್ರ ನಿರ್ವಹಣೆಯ ಕಲಿಕೆಯ ರೀತಿಯೇ ಅದು.

ಬರೀ ಹೆಂಗಸರ ಗುಂಪು, ಅಥವಾ ಹವ್ಯಾಸಿಗಳ ಗುಂಪಾದರೆ ಅದರಲ್ಲೇ ಮುಖ್ಯ ಪಾತ್ರವನ್ನು ಮೊದಲಿಂದಲೂ ಮಾಡಿಕೊಂಡು ಬಂದಿರುತ್ತಾರೆ. ಈ ಕಲಾವಿದೆ ಮೇಳದಲ್ಲಿ, ಗೋಪಾಲ ವೇಶ ಮಾಡಿ ಒತ್ತು ಪಾತ್ರಗಳನ್ನು ಮಾಡಿಕೊಂಡು ಕಲಿತಂತೆಯೇ ಕಲಿತಿದ್ದಾರೆ. ಇದು ಅವರನ್ನು ಯಕ್ಷಗಾನ ಮಾಡುವ ಬೇರೆ ಹೆಂಗಸರಿಂದ ಬೇರೆಯಾಗಿಡುತ್ತದೆ. (ಸಮಾಜದ ಸಾರ್ವಜನಿಕ ಸ್ಥಳದಲ್ಲಿ ಹೆಂಗಸರಿಗೆ ಬೆರೆಯುವಂತ ಅವಕಾಶ ಕಡಿಮೆ ಇರುವಂತೆಯೇ ರಂಗಸ್ಥಳದಲ್ಲಿ ಕ್ಯಾಶುವಲ್ ಆಗಿ ಪಾತ್ರ ಮಾಡುತ್ತ ಕಲಿಯುವ ಅವಕಾಶ ಹೆಚ್ಚಿನ ಹೆಂಗಸರಿಗೆ ಕಡಿಮೆ. ಭರತನಾಟ್ಯ ಕಲಿತಂತೆ ಕಲಿತು ಯಥಾವತ್ತಾಗಿ ರಂಗದ ಮೇಲೆ ತರುವುದೇ ಹೆಚ್ಚು.) ಅವತ್ತು ತಡ ರಾತ್ರಿಗೆ ಅವರ ತಂಡ(ಸುಮಾರು ಒಂದು ಗಂಟೆ) ಬಂದು, ಅವರೊಬ್ಬರೆ ವೇಶ ಮಾಡಿ ಬೆಳಗ್ಗೆ ತಿಂಡಿ ತಿಂದು ಉಡುಪಿಗೆ ಸಂಜೆಯ ಕಾರ್ಯಕ್ರಮಕ್ಕೆ ಹೋಗುವವರು. ರಾತ್ರಿ ನಿದ್ದೆಗೆಟ್ಟು ಮತ್ತೆ ಹಗಲಿಗೆ ಪ್ರಯಾಣ ಮಾಡಿ ಹೋಗುವ ಇಚ್ಛೆ, ಇದು ಊರಿನ ಸೇವೆಯಾಟ ಎನ್ನುವ ಕಾರಣಕ್ಕಿರಬಹುದು. ಇಡೀ ಚೌಕಿಮನೆಯಲ್ಲಿ ಅವರ ತಂಡದ ಇತರರು, ವೇಶವನ್ನು ಕಟ್ಟಿಕೊಳ್ಳುವುದನ್ನು ನೋಡುತ್ತಾ, ಫೋಟೋ ತೆಗೆಯುತ್ತಾ ಇದ್ದರು. ಅಲ್ಲಿಯ ಚೌಕಿಮನೆ ವಾತಾವರಣಕ್ಕೆ ಅವರ ಬಟ್ಟೆ, ಸ್ಮಾರ್ಟ್ ಫೋನುಗಳು ವಿಶೇಷವಾಗಿ ಕಾಣುತಿತ್ತು.

ಈ ಸೇವೆ ಬಯಲಾಟ ವೃತ್ತಿಪರರ ಆಟವಲ್ಲದಿದ್ದರೂ ಸುತ್ತಮುತ್ತಲಿನ ಹವ್ಯಾಸಿ ಮೇಳಗಳಿಗಿಂತ ಭಿನ್ನವಾಗಿತ್ತು. ಅಲ್ಲಿ ಬಂದವರೆಲ್ಲರು ಬಿಸಿಲಲ್ಲಿ ದೈಹಿಕ ಶ್ರಮದ ಕೆಲಸ ಮಾಡುವವರು ಎಂದು ಒಂದು ನೋಟದಲ್ಲಿಯೇ ಗೊತ್ತಾಗುವಂತಿತ್ತು. ಹಲವು ಟ್ರಯಲ್ ಮಾಡಿದವರಲ್ಲ. ಹಿಂದೆ ಎಲ್ಲರೂ ವೇಶ ಹಾಕಿದವರು. ಅದಕ್ಕಿಂತ ಶನಿಮಹಾತ್ಮೆಯನ್ನು ಹಲವು ಸಲ ನೋಡಿದವರು. ಆಟಕ್ಕಿರುವ ಆಶುತ್ವ, ಅರಾಮು, ಕ್ಯಾಷುವಲ್‌ನೆಸ್, ಉತ್ಸಾಹ ಎಲ್ಲವೂ ಇತ್ತು. ಹಲವು ಪ್ರದರ್ಶನ ಕೊಟ್ಟವರ ಹಾಗೆ ಒಂದು ರೀತಿಯ ನಿರ್ಲಿಪ್ತತೆಯು ಇತ್ತು.

ಬ್ರಾಹ್ಮಣ ವೇಶಧಾರಿಯ ಕಟ್ಟುಮಸ್ತಾದ ಕಪ್ಪು ದೇಹಕ್ಕೆ ಬಿಳಿ ಹಗ್ಗ ಎದ್ದು ಕಾಣುತ್ತಿದ್ದುದು, ಹತ್ತಿರದ ದೇವಸ್ಥಾನದ ಸುತ್ತಲಿನ ವಾತಾವರಣಕ್ಕೆ ವಿರುದ್ಧವಾಗಿತ್ತು. ಯಕ್ಷಗಾನದ ಬಣ್ಣದ ಮನೆ, ಆಟದ ಸೆಕ್ಯುಲರ್ ಜಾಗವನ್ನು ನೆನಪು ಮಾಡುವುದು ಇಂತವುಗಳೇ. ಜಾತಿಯ ಚಿಹ್ನೆಗಳು ಸಮಾಜದಂತೆಯೇ ಇಲ್ಲಿಯ ಪಾತ್ರಗಳಲ್ಲಿ ಕಂಡರೂ ಪಾತ್ರಧಾರಿಗಳ ವೈರುಧ್ಯತೆಯಿಂದಾಗಿ ಸಮಾಜದ ಗುಣಲಕ್ಷಣಗಳ ಕ್ಯಾರಿಕೇಚರ್ ಆಗಿ ಇವು ನನಗೆ ಕಂಡಿತು.

ಗಂಡಸರ ಚೌಕಿಯಲ್ಲೇ ವೇಷ ಮಾಡಿಕೊಂಡು, ವೃತ್ತಿಯವರಂತೆ ಹಳ್ಳಿಯ ವೇಷಧಾರಿಗಳನ್ನು ಸರಿದೂಗಿಸಿಕೊಂಡು ಹೋಗುವ ಮಾತುಗಾರಿಕೆ, ಯಾರ ಭಾಗವತಿಕೆಗಾದರೂ ಕುಣಿಯುವ ಚಾಕಚಾಕ್ಯತೆ ಇದ್ದುದು ರಂಗದಲ್ಲೂ ಗೊತ್ತಾಗುತ್ತಿತ್ತು. ಮುಖ್ಯವಾಗಿ ಇಂತಹ ಗುಂಪಿನೊಂದಿಗೆ ಪಾತ್ರಗಳನ್ನು ಮಾಡುತ್ತಾ, ಬರಿ ನೆಲದ ಮೇಲಿನ ರಂಗಸ್ಥಳದಲ್ಲೂ, ಹಾಲಿನ ವೇದಿಕೆಯಲ್ಲೂ ಯಕ್ಷಗಾನ ಮಾಡುವ ಆಶುತ್ವದ ಪ್ರೌಢಿಮೆಯನ್ನು ಪಡೆದುಕೊಂಡಿದ್ದಾರೆ.

ಗೋಪಾಲ ವೇಶದವರು ಬಣ್ಣ ಹಚ್ಚಿಕೊಳ್ಳುತ್ತಿದ್ದಾಗ, ಚಾ ಕುಡಿಯಲು ನಮ್ಮನ್ನು ಊರಿನ ಪುಜಾರಿಯ ಮನೆಗೆ ಕರೆದುಕೊಂಡು ಹೋದರು. ಅಲ್ಲಿಯೇ ಬ್ರಾಹ್ಮಣ ಕಲಾವಿದರಿಗೆ ಊಟದ ವ್ಯವಸ್ಥೆಯು ಆಗಿತ್ತು. ದೇವಸ್ಥಾನದ ಪೂಜೆಯ ಅಡುಗೆಯನ್ನು ಬ್ರಾಹ್ಮಣರೇ ಮಾಡಿದ್ದರೂ ಅವರಿಗೆ ಬೇರೆ ತೆಗೆದಿಟ್ಟುಕೊಂಡು ಕೊನೆಗೆ ಬಂದ ಬ್ರಾಹ್ಮಣರಿಗೆ ಅಲ್ಲೇ ಬಡಿಸುವ ವ್ಯವಸ್ಥೆಯು ಆಗಿತ್ತು ಅನ್ನಿಸುತ್ತದೆ. ಇದು ಮಾಮೂಲಿಯಾಗಿ ಎಲ್ಲಾ ‘ಇತರೇರು’ ನಡೆಸುವ ದೇವಸ್ಥಾನಗಳ ವ್ಯವಸ್ಥೆ. ಭಟ್ಟರ ಮನೆಯಲ್ಲಿ ನಮಗೆ ಚಾ ಆಯಿತು. ಭಟ್ಟರೂ ಯಕ್ಷಗಾನ ನೋಡಲಿಕ್ಕೆ ಬರುವವರಿದ್ದರು. ಅವರ ಹೆಂಡತಿ, ನಾನು ಅವರ ಕೇರಿಗೆ ಕಾಲಿಡಲ್ಲ ಅಂದರು. ಯಾವುದೋ ಮೂಲೆ ಊರಿಂದ, ಅತಿ ಬಡತನದಿಂದ ಬಂದು ಇಲ್ಲಿ ಪೂಜೆಯ ಕೆಲಸ ಮಾಡಿಕೊಂಡು ಗೌರವಯುತ ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿರುವುದು ಅವರಲ್ಲಿ ಕಾಣುತಿತ್ತು. ಈ ‘ಗೌರವಯುತ’ ಎನ್ನುವುದು ಊರಿನ ಇತರ ಮಧ್ಯಮ ವರ್ಗದ ಬ್ರಾಹ್ಮಣರ ಕುಟುಂಬಕ್ಕೆ ಸಮವಾಗಿ ಊಟ ತಿಂಡಿ ನಡವಳಿಕೆ ಅಭಿಪ್ರಾಯಗಳನ್ನು ರೂಢಿಸಿಕೊಳ್ಳುವುದು. ಆರ್ಥಿಕವಾಗಿ ಕೆಳ ಮಧ್ಯಮವರ್ಗದಲ್ಲಿದ್ದು ಅದನ್ನು ತಮ್ಮ ಇತರೇ ನಡವಳಿಕೆಗಳಿಂದ ತುಂಬುವುದಕ್ಕೆ ಪ್ರಯತ್ನಿಸುವುದನ್ನು ಎಲ್ಲಾ ಕಡೆಯೂ ಕಾಣುತ್ತೇವೆ. ಭಟ್ಟರು ವ್ಯವಹಾರಸ್ಥರಾಗಿ, ಹೊರಗಡೆ ಸಮಾಜದ ಸಂಪರ್ಕ ಉಳ್ಳವರಾಗಿ ಹಳೇ ದೇವಸ್ಥಾನದ ಮೈಮೇಲೆ ಬರುವ, ಧರ್ಮದರ್ಶಿಯಾದವರ ಪ್ರಾಮಾಣಿಕತೆಯನ್ನೂ, ಹೇಳಿಕೆ ಕೇಳಲು ಬರುವ ಭಕ್ತರು ಕೊಡುವ ಹಣವನ್ನು ಪೂರ್ತಿಯಾಗಿ ಸಂತರ್ಪಣೆ, ದೇವಸ್ಥಾನದ ಜೀರ್ಣೊದ್ಧಾರಕ್ಕೆ ಬಳಸುವ ಅವರ ಒಳ್ಳೆಯತನದ ಬಗ್ಗೆ ನಮ್ಮಲ್ಲಿ ಮಾತನಾಡಿದರು. ಈ ಪ್ರಾಮಾಣಿಕತೆಯ ವಿಷಯ ಹೇಗೆ ಬಂದಿತೆಂದರೆ ಆ ಊರಿನಲ್ಲಿ ಹೊಸ ದೇವಸ್ಥಾನದಲ್ಲಿ ಮೈಮೇಲೆ ಬರುವವನು ಪ್ರಾಮಾಣಿಕನಲ್ಲ. ಬರುವ ದುಡ್ಡನ್ನೆಲ್ಲ ಮೀಡಿಯ ಪ್ರಚಾರಕ್ಕೆ, ತನ್ನ ಸ್ವಂತ ಸುಖಕ್ಕೆ ಬಳಸಿಕೊಳ್ಳುತ್ತಾನೆ ಎನ್ನುವ ತುಲನೆಯ ಮಾತುಗಳನ್ನು ಆಡಿದರು. ಹೊಸ ದೇವಸ್ಥಾನದಲ್ಲಿ ಶನಿಯು ಮೈಮೇಲೆ ಅವಾಹನೆಯಾಗುವುದು, ಟಿ ವಿ ಯಲ್ಲಿ ಹೀಗೂ ಉಂಟೆ ಅನ್ನುವ ಕಾರ್ಯಕ್ರಮದಲ್ಲೂ ಬಂದಿತ್ತಂತೆ. ಹಾಗಾಗಿ ಅಲ್ಲಿಗೆ ಜನಸಂದಣಿಯು ಜಾಸ್ತಿ ಮತ್ತು ಅಲ್ಲಿಗೆ ಸ್ಥಳಿಯರಲ್ಲದೆ ಹೊಸಬರು ಬಂದು ನಡೆದುಕೊಳ್ಳುತ್ತಾರಂತೆ. ಟಿ ವಿಯಲ್ಲಿ ಬಂದ ಮೇಲೆ ಅವನ ಇಮೇಜ್ ಬದಲಾಗಿದೆಯಂತೆ, ಈಗ ಗುಂಗುರು ಕೂದಲನ್ನು ಸಾಯಿಬಾಬನ ತರ ಮೈನ್ಟೇನ್ ಮಾಡುತ್ತಾನೆ ಇತ್ಯಾದಿ ಮಾತುಗಳಾದವು.

ಸಂಗೀತಗಾರ ಮತ್ತು ಯಕ್ಷಗಾನದ ಉಠಾವ್:

ನಾವು ವಾಪಾಸು ಬರುವಷ್ಟರಲ್ಲಿ ಹಲವರ ಬಣ್ಣ ಮುಗಿದು, ಸಂಗೀತ ಮಾಡುವ ಭಾಗವತರು ರಂಗಸ್ಥಳಕ್ಕೆ ಹೋಗುವುದಕ್ಕೆ ತಯಾರಾಗಿದ್ದರು. ಇವತ್ತು ಒಡ್ಡೋಲಗ ನೋಡಿ, ಆದರೆ ರೆಕಾರ್ಡ್ ಮಾಡಿಕೊಳ್ಳಿ ಎಂದರು. ನಾನು ಅವತ್ತು ವಿಡಿಯೊ ಆಡಿಯೋ ಎರಡನ್ನು ಇಟ್ಟುಕೊಂಡಿದ್ದೆ. ಆದರೆ ಹೆಚ್ಚಿನ ಸಮಯ ರೆಕಾರ್ಡ್ ಮಾಡಿಕೊಳ್ಳುತ್ತಿರಲಿಲ್ಲ. ಆಡಿಯೊ ವಿಡಿಯೊ ಗ್ಯಾಜೆಟ್‌ಗಳು ನಮ್ಮೂರಿನಲ್ಲಿಯೇ ಟೂರಿಸ್ಟಿನ ತರ ಹಿಡಿದುಕೊಂಡು ತಿರುಗುವುದು ಸಹಜವಾಗಿ ಎಲ್ಲರೊಟ್ಟಿಗೆ ಮಾತುಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕಷ್ಟ ಕೊಡುತಿತ್ತು. ಗಣಪತಿ ಪೂಜೆ ಪ್ರಾರಂಭವಾಗುತ್ತಿದ್ದಂತೆಯೇ ಮೊದಲ ಪದದಲ್ಲಿಯೇ ಮೈಕ್ ತುಂಬಾ ಸಲ ತೊಂದರೆ ಕೊಟ್ಟಿತು. ಈ ಗಲಿಬಿಲಿಯಿಂದಾಗಿ(ಆಮೇಲೆ ಭಾಗವತರು ನನ್ನಲ್ಲಿ ಹೇಳಿದರು) ಎರಡನೆಯ ಹಾಡಿನ ಹೊತ್ತಿಗೆ ಭಾಗವತರು ಪೂರ್ತಿ ಶೃತಿ ಬಿಟ್ಟು ಹಾಡಿದರು. ದೇವರ ಶ್ಲೋಕ, ಪದ್ಯ ಎಲ್ಲವೂ ಕೇಳುವುದಕ್ಕೆ ಕಷ್ಟವಾಗಿ ಜನರು ತಮ್ಮ ತಮ್ಮ ಮಾತುಕತೆಯಲ್ಲಿ ತೊಡಗಿಕೊಳ್ಳುವುದಕ್ಕೆ ಶುರುಮಾಡಿದರು. ಆ ಭಾಗವತರು ಇಳಿದು ಒಡ್ಡೋಲಗಕ್ಕೆ ಮುಖ್ಯ ಭಾಗವತರೇ ಬಂದರು.

ಸಂಗೀತದ ಭಾಗವತರು ರಂಗಸ್ಥಳದಿಂದ ಒಡ್ಡೋಲಗದಿಂದ ಮೊದಲೇ ಇಳಿದಿದ್ದೇಕೆಂದರೆ ಅವರು ಮೊದಲೆರೆಡು ಹಾಡು ಹಾಡುವ ಹೊತ್ತಿಗೆ ಆ ಮೇಳದ ಮುಖ್ಯ ಸಂಘಟಕ ಮತ್ತು ಎರಡನೆ ವೇಷಧಾರಿ ಮುಖ್ಯ ಭಾಗವತರಿಗೆ ನೀವು ಒಡ್ಡೋಲಗಕ್ಕೆ ಹೋಗುವುದೆ ಸೈ, ಇಲ್ಲ ಅಂದರೆ ರಂಗಸ್ಥಳದಲ್ಲಿ ಉಠಾವ್ ಬರುವುದಿಲ್ಲ. ವಾತಾವರಣನೇ ಬರುತ್ತಿಲ್ಲ ಅಂದರಂತೆ. ಆಮೇಲೆ ಸಂಗೀತದ ಭಾಗವತರಿಗೆ ನೀವು ಮೂರು ಘಂಟೆಯ ನಂತರ ಮತ್ತೆ ರಂಗಸ್ಥಳಕ್ಕೆ ಹೋಗುವಿರಂತೆ ಅಂದರು. ಆ ಸಂಗೀತದ ಭಾಗವತರು ‘ನೋಡ್ರಿ ಇವರು ಹೀಗೆ ಮಾಡೋದು, ನಾನು ಪೆಟ್ರೊಲ್ ಖರ್ಚು ಮಾಡ್ಕೊಂಡು ಇವರಿಗೆ ಕಷ್ಟ ಆಗಬಾರದು ಅಂತ ಮೂರು ದಿನ ಒಡ್ಡೋಲಗಕ್ಕೆ ಟ್ರಯಲ್‌ಗೆ ಬಂದು ಎಲ್ಲಾ ಅಭ್ಯಾಸ ಮಾಡಿಕೊಂಡು ಬಂದಿದ್ದೆ. ಚೆನ್ನಾಗಿ ಅಂತ ಮಾಡದೆ ಇದ್ರೂ ಸರಿಯಾಗಿ ಮುಗಿಸಿಕೊಡ್ತಿದ್ದೆ. ಇನ್ನು ಮೂರು ಘಂಟೆಯಾದರು ಇವರು ಇಳಿಯೋಲ್ಲ. ಇನ್ನೊಬ್ಬ ಭಾಗವತರು ಬೇರೆ ಇದಾರೆ. ನಾನು ಮನೆಗೆ ಹೋಗ್ತೀನಿ’ ಎಂದು ನನ್ನಲ್ಲಿ ಹೇಳಿದರು.

ಚಂದ್ರಹಾಸನ ಪಾತ್ರ:

ಸುಮಾರು ಎರಡು ಘಂಟೆಯ ಹೊತ್ತಿಗೆ ಒಬ್ಬರು ಬಂದು ‘ನಾನು 10 ಕಿಲೊಮೀಟರ್ ದೂರದಿಂದ ಬಂದಿದೀನಿ, ಮುಂಚೆ ಈ ಮೇಳದಲ್ಲಿ ಪಾತ್ರ ಮಾಡ್ತಿದ್ದೆ ನನಗೊಂದು ಪಾತ್ರ ಬೇಕು’ ಅಂದರು. ತಂಡದವರು ‘ಸರಿ, ಚಂದ್ರಹಾಸನ ಪಾತ್ರ ಮಾಡಬೋದು, ಈಗಲೆ ಲೇಟಾಗಿದೆ ಬಣ್ಣ ಹಚ್ಚಿಕೊಳ್ಳಿ, ನಿಮ್ಮ ಎಲ್ಲಾ ಪದ್ಯನೂ ಮಾಡಬೇಕು. ಇನ್ನೊಂದು ಶನಿಯ ವೇಷವಾಗುವುದು ತಡವಾಗುತ್ತದೆ. ಪದ್ಯ ಎಲ್ಲಾ ಗೊತ್ತಲ್ಲ’ ಅಂದರು. ಅವರು ನೆನಪಿಲ್ಲ ಒಮ್ಮೆ ಹೇಳಿ ಅಂದರು. ನೀವು ಬಣ್ಣ ಹಚ್ಚಿಕೊಳ್ಳಿ, ಇಲ್ಲಿ ಒಬ್ಬರು ಭಾಗವತರು ನಿಮಗೆ ಓದಿ ಪದ್ಯ ಹೇಳುತ್ತಾರೆ ಅಂದು ಅವರನ್ನು ಬಣ್ಣ ಹಚ್ಚಲಿಕ್ಕೆ ಕೂರಿಸಿದರು. ಪೂರ್ತಿ ವೇಷ ಮಾಡಿಕೊಂಡು ಯಾವ ಯಾವ ಪದ್ಯ ಇರಬೋದು ಎಂದು ಅಂದಾಜಿನ ಮೇಲೆ ಸಂಗೀತದ ಭಾಗವತರು ಅದನ್ನು ಓದಿ ಹೇಳಿದರು. ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ಆ ಕತೆ ಗೊತ್ತಲ್ಲ ಈ ಕತೆ ಗೊತ್ತಲ್ಲ, ಮುಂಚೆ ಹಾಗಾಗಿರತ್ತೆ ಎನ್ನುವ ವಿವರಣೆಯನ್ನೂ ಕೊಟ್ಟರು. ಅಷ್ಟೇ ತಯಾರಾಗಿ ಹೋದವರು ಹೇಗೆ ಮಾಡುತ್ತಾರೆಂದು ನೋಡಲು ಚಂದ್ರಹಾಸ ಬರುವಾಗ ಮತ್ತೆ ನಾನು ರಂಗಸ್ಥಳಕ್ಕೆ ಹೋದೆ. ಭಾಗವತರು ಹಾಕಿದ ತಾಳಕ್ಕೆ ಮುಕ್ತಾಯ ಹಾಕಿ, ಒಂದು ಚಾಲು ಕುಣಿದು ಪಾತ್ರಕ್ಕೆ ತಕ್ಕಂತ ಮಾತುಗಳನ್ನು ಆಡಿದರು. ವಿಶೇಷವೇನೂ ಇರಲಿಲ್ಲ. ಕುಣಿತ ನೀಟಾಗಿರಲಿಲ್ಲ. ಆದರೆ ಒಂದು ಹೆಜ್ಜೆಯನ್ನೂ ತಾಳದ ಹೊರಗಿಡದೆ ಯಕ್ಷಗಾನ ಶೈಲಿಯಲ್ಲಿ ಸಂಭಾಷಣೆಯನ್ನು ಆಡಿ ಕತೆಯ ಮುಂದುವರಿಕೆಗೆ ಏನೂ ತೊಂದರೆಯಾಗದಂತೆ ಪಾತ್ರ ನಿರ್ವಹಣೆ ಮಾಡಿದರು. ಆದರೆ ಬಯಲಾಟದ ವಾತಾವರಣಕ್ಕೆ ಸರಿಯಾಗಿ ಆಶುತ್ವದಿಂದ ಅವರ ಕುಣಿತವೂ ಸಂಭಾಷಣೆಯು ಬಂದಿತು.

ಮೇಳದ ಮುಖ್ಯ ಭಾಗವತರು:

ಇವರಿಗೆ ಮೊದಲು ಅಲ್ಲಿ ಇಲ್ಲಿ ಕೇಳಿ ಯಕ್ಷಗಾನದಲ್ಲಿ ಆಸಕ್ತಿ ಮೂಡಿತು. ಹತ್ತಿರದಲ್ಲೇ ಇರುವ ಇನ್ನೊಬ್ಬ ಹವ್ಯಾಸಿ ಭಾಗವತರ ಹತ್ರ ಸ್ವಲ್ಪ ತಾಳ ಕಲಿತು ವೇಷ ಮಾಡುತ್ತಿದ್ದರು. ಆದರೆ ಭಾಗವತಿಕೆ ಇಷ್ಟವಿದ್ದರಿಂದ ಅಲ್ಪ ಸ್ವಲ್ಪ ಹಾಡಲು ಶುರುಮಾಡಿದರು. ನಂತರ ಶಿರವಂತೆಯಲ್ಲಿ ಒಂದು ಶಿಬಿರದಲ್ಲಿ ಸ್ವಲ್ಪ ಭಾಗವತಿಕೆಯನ್ನು ಕಲಿತರು. ಅವರನ್ನು ಚೌಕಿಮನೆಯ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಜನರೇಟರ್ ಶಬ್ದದ ಮಧ್ಯೆ ಉಳಿದ ವೇಷಧಾರಿಗಳ ಮಧ್ಯೆ ಮಾತನಾಡಿಸಿದೆ. ಹಾಡುವುದರಿಂದ ಅವರಿಗೆ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎನ್ನುವ ಮಾತನಾಡಿದರು. ‘ನಾವು ಹಲವು ಯಕ್ಷಗಾನ ಮಾಡಿದ್ದೆವು, ಇತ್ತೀಚೆಗೆ ಹೆಚ್ಚು ಮಾಡುತ್ತಿಲ್ಲ. ಕಲೆಯನ್ನು ಕಲಿತುಬಿಟ್ಟಿದ್ದೀವಿ. ಮತ್ತೆ ನಮ್ಮ ಮೇಳದ ಕೆಲವು ಹಳೆ ಕಲಾವಿದರನ್ನು ಕೂಡಿಸಿಕೊಂಡು ಮಾಡಬೇಕು ಅಂತ ಮಾಡಿದ್ದೀವಿ’ ಅಂದರು. ಅವರ ಪ್ರಕಾರ ಹಿಂದಿನ ಯಕ್ಷಗಾನಕ್ಕಿಂತ ಈಗಿನ ಯಕ್ಷಗಾನ ಚೆನ್ನಾಗಿರುತ್ತದೆ. ಯಕ್ಷಗಾನ ಕಲೆ ಬಹಳ ಬೆಳೆದಿದೆ ಎಂದರು. ಈಗ ಟೆಂಟ್ ಮೇಳದ ಯಕ್ಷಗಾನಕ್ಕೆ ಹೋದರೆ ಕಾರು ಬೈಕು ತುಂಬಾ ಬಂದಿರತ್ತೆ. ಈಗ ಮುಂಚಿನ ತರ ಹಳ್ಳಿಯವರು ಸಣ್ಣ ಜನ ಬರೊಲ್ಲ. ಎಲ್ಲಾ ಎಡುಕೇಟೆಡ್, ನಿಮ್ಮವರು(ಅಂದ್ರೆ ಬ್ರಾಹ್ಮಣರು) ಜಾಸ್ತಿ ಬರ್ತಾ ಇದಾರೆ ಅಂದರು. ಹಳ್ಳಿಯವರು ಈಗ ಹತ್ತಿರದಲ್ಲಿ ಆದರೆ ಮಾತ್ರ ನೋಡ್ತಾರೆ ಅಷ್ಟೆ. ಹೆಂಗಸರು ಮಕ್ಕಳಿಗೆ ದೂರ ಹೋಗಿ ಬರುವುದು ಕಷ್ಟ ಅಂದರು.

ಯಾವ ಪ್ರಸಂಗದ ಪಠ್ಯಕೊಟ್ಟರು ಅದರ ತಾಳ ಮಟ್ಟು ನೋಡಿಕೊಂಡು ಆಡಿಸಬಹುದು. ಹೊಸ ಪ್ರಸಂಗವಾದರೂ ಪಠ್ಯ ನೋಡಿದ ತಕ್ಷಣ ಗೊತ್ತಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಧಾಟಿ ಹಾಕಿ ಭಾಗವತಿಕೆ ಮಾಡುವುದು ಅಂದರು. ಮಂಜಪ್ಪನವರು ಮಾತನಾಡುವಾಗ ಮನಸ್ಸಿಗೆ ತೃಪ್ತಿ ಸಿಗುತ್ತದೆ ಅನ್ನುವುದನ್ನು ಬಹಳಾ ಸಲ ಹೇಳಿದರು. ಜನ ಇರಲಿ ಬಿಡಲಿ, ಹಾಡಿದರೆ ಖುಷಿಯಾಗುತ್ತದೆ. ಹಾಡುವುದಕ್ಕೆ ಜೊತೆಗೆ ಅದೇ ರೀತಿಯ ವಾತಾವರಣ ಇರಬೇಕು. ಅವರ ಊರಿನಲ್ಲಿ ಈಗ ಯುವಕ ಸಂಘಗಳು ಯಕ್ಷಗಾನ ಮಾಡುವುದಿಲ್ಲ. ಸುತ್ತ ಮುತ್ತಲಿನ ಹಳ್ಳಿಗಳಲ್ಲೂ ಕಡಿಮೆಯಾಗಿದೆ. ಹುಡುಗರೆಲ್ಲ ಪೇಟೆಗೆ ಹೋಗುದು, ಟಿ ವಿ ನೋಡುದು ಮಾಡುತ್ತಾರೆ. ಅವರ ಸ್ನೇಹಿತರೊಬ್ಬರು ಇದ್ದಾರೆ. ಪಕ್ಕದ ಊರಿನವರು. ಇಬ್ಬರೂ ಸೇರಿಕೊಂಡು ಅಭ್ಯಾಸ ಮಾಡಬೇಕು ಅಂದುಕೊಳ್ಳುತ್ತಾರೆ ಆದರೆ ಆಗುವುದಿಲ್ಲ. ಇಬ್ಬರಿಗೂ ಒಟ್ಟಿಗೆ ಪುರಸೊತ್ತು ಸಿಗುವುದು ಕಷ್ಟ. ಮನೆಯಲ್ಲಿ ಗದ್ದೆ, ತೋಟದ ಕೆಲಸ, ಸಂಸಾರದ ತಾಪತ್ರಯ. ಸಣ್ಣ ವಯಸ್ಸಲ್ಲಿ ಮ್ಯಾಳಕ್ಕೆ ಹೋಗುವ ಅವಕಾಶ ಇತ್ತು. ಆದರೆ ಮನೆಗೆ ನಾನೆ ಹಿರಿಮಗ, ಮನೆಕಡೆ ಜವಾಬ್ದಾರಿ ಬಿತ್ತು. ಹಾಗಾಗಿ ಹೋಗಲಿಲ್ಲ ಅಂದರು.

ಮಂಡಕ್ಕಿ ಅಂಗಡಿ ಇಡುವವರು ನಮ್ಮ ಚರ್ಚೆಯಲ್ಲಿ ಭಾಗವಹಿಸಿದರು, ಆದರೆ ಅವರು ಫೋಟೊ ತೆಗೆಯೋದು ಬೇಡ ಅಂದರು. ಮುಂಚೆ ಬಳೆ ವ್ಯಾಪಾರ ಮಾಡುತ್ತಿದ್ದರು. ಯಕ್ಷಗಾನವು ಇಷ್ಟ ಆಗುವುದರಿಂದ ಮಂಡಕ್ಕಿ ವ್ಯಾಪಾರ ಮಾಡುತ್ತಾರೆ. ಟೆಂಟ್ ಮೇಳದಲ್ಲಿ ಬರಿ ಭಾಗವತಿಕೆ ಕೇಳೋಕಾಗತ್ತೆ. ಭಾಗವತಿಕೆನೆ ಮುಖ್ಯ ಅವರ ಪ್ರಕಾರ. ‘ಯಕ್ಷಗಾನ ನೋಡಿದ ಹಾಗೂ ಆತು, ಗಂಜಿಗೆ ಕಾಸು ಆತು’, ಅದಕ್ಕೆ ಮಂಡಕ್ಕಿ ವ್ಯಾಪಾರ ಶುರುಮಾಡಿದೆ ಅಂದರು.

ಇಲ್ಲಿಯ ಎಲ್ಲಾ ಕಲಾವಿದರೂ(ಬಾಲ ಗೋಪಾಲರ ವೇಶ ಬಿಟ್ಟು, ಅವರು ಸಣ್ಣ ಹುಡುಗರಾಗಿದ್ದರು) ಯಾವ ಪಾತ್ರವನ್ನಾದರೂ ಪದ್ಯ ನೋಡಿಕೊಂಡು ಮಾಡಬಲ್ಲವರಾಗಿದ್ದರು. ಕಥೆ ಮುಂದುವರಿಯಲು ಬೇಕಾದಷ್ಟು ಮಾತು, ಕುಣಿತ, ಅಭಿನಯವನ್ನು ಮಾಡಲು ತಯಾರಿದ್ದರು. ಆದರೆ ಯಾರೂ ನುರಿತ ಕಲಾವಿದರಲ್ಲ. ಕತೆಯ ಆಚೆ ಈಚೆ ಹೋಗಿ ತರ್ಕ ಮಾಡಲು, ಭಾವನಾತ್ಮಕವಾಗಿ ತೊಡಗಲು ಬೇಕಾದಷ್ಟು ಅಧ್ಯಯನ, ಪ್ರದರ್ಶನ ಕೊಟ್ಟವರಲ್ಲ. ಅದಕ್ಕಾಗಿಯೆ ಅವರಲ್ಲಿ ಮುಖ್ಯ ಪಾತ್ರ ಮಾಡುವ ಕಲಾವಿದರ ಮಾತುಗಳು ಕೂಡ ಪದ್ಯಕ್ಕೆ ಬೇಕಾದಷ್ಟು ಮಾತ್ರ.

ಸಿದ್ಧ ಮಾದರಿಯ ಮಾತುಗಳು:

ರಾಜನ ಪಾತ್ರ ಮಾಡುವವನ ಪೀಠಿಕೆಯಲ್ಲಿ ರಾಜನ ಒಳ್ಳೆಯ ಆಡಳಿತವನ್ನು ವಿವರಿಸುವ ಮಾತುಗಳು ಸಿದ್ಧಮಾದರಿಯದು. ನಮ್ಮ ರಾಜ್ಯದಲ್ಲಿ ಎಲ್ಲವೂ ಸುಭಿಕ್ಷವಾಗಿದೆ. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ತಮ್ಮ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಹೋಗುತ್ತಿದ್ದಾರೆ ಇತ್ಯಾದಿ. ಇಂತದೇ ಮಾತುಗಳು ಮತ್ತೆ ನಾರದನ ವೇಷ ಮಾಡಿದವರದು. ವೃತ್ತಿಪರ ಮೇಳಕ್ಕು ಇದಕ್ಕೂ ಏನು ವ್ಯತ್ಯಾಸವೆಂದರೆ ಇದೇ. ಹೊಸ ಆವಿಷ್ಕಾರಗಳಿಲ್ಲ. ಮಾತಿನಲ್ಲಿ, ಕುಣಿತದಲ್ಲಿ, ಭಾಗವತಿಕೆಯಲ್ಲಿ. ಉಳಿದದ್ದೆಲ್ಲವೂ ಯಕ್ಷಗಾನೀಯವಾಗಿರುತ್ತದೆ. ಮುಖ್ಯವಾಗಿ ನಾಟಕದಂತಲ್ಲದೆ ಎಲ್ಲಿ ನಿಲ್ಲಬೇಕು ಹೇಗೆ ನಿಲ್ಲಬೇಕು ಅನ್ನುವುದು ಸಂದರ್ಭಕ್ಕೆ ತಕ್ಕಂತೆ ಬರುತ್ತದೆ. ಅದು ಆಶುತ್ವವನ್ನು ಕೊಡುತ್ತದೆ. ಯಕ್ಷಗಾನದ ಸ್ವರೂಪದಲ್ಲಿ ಆಶುತ್ವವು ಮುಖ್ಯವಾದರೆ ಅದನ್ನು ಪ್ರತಿನಿಧಿಸುವುದು ಹೇಗೆ, ಕಾಲಮಿತಿಯಲ್ಲಿ ತರುವುದು ಹೇಗೆ? ಅದು ಶಾಸ್ತ್ರೀಯ (ಕಾಲ ದೇಶಗಳನ್ನು ಮೀರಿದ ಕಲೆ)ವಾಗದ್ದರಿಂದ ಕಾರಂತರಿಗೆ ಅದನ್ನು ಹೊರಗಡೆ ತೋರಿಸುವುದಕ್ಕೆ ಅದಕ್ಕೆ ತಕ್ಕ ಬದಲಾವಣೆಗಳು ಬೇಕು ಅನ್ನಿಸಿರುತ್ತದೆ.