ನನ್ನ ತಂದೆ ಹಾವು ಹೊಡೆಯುವುದನ್ನು ಕೂಡ ಸಹಿಸಿಕೊಳ್ಳುತ್ತಿರಲಿಲ್ಲ. ಆದರೆ ಕಂದೂರಿ ಒಂದು ಶ್ರದ್ಧೆಯಾಗಿದ್ದರಿಂದ ಮನೆತನದಲ್ಲಿ ತಲೆತಲಾಂತರದಿಂದ ಬಂದ, ಅವರದೇ ನಂಬಿಕೆಯಿಂದ ಕೂಡಿದ ಧಾರ್ಮಿಕ ಕರ್ತವ್ಯ ನಿರ್ವಹಣೆಯನ್ನು ನಿಷ್ಠೆಯಿಂದ ಮಾಡುತ್ತಿದ್ದರು. ನನ್ನ ದಲಿತ ಮಿತ್ರ ತುಕಾರಾಮ ನನಗಿಂತ ಆರುವರ್ಷ ದೊಡ್ಡವರಿದ್ದರು. ನಾನು ನಾಲ್ಕನೆಯ ಇಯತ್ತೆ ಓದುವಾಗ ಅವರು ಮ್ಯಾಟ್ರಿಕ್ ಇದ್ದರು. ನಮ್ಮ ಮನೆಯ ಹತ್ತಿರದ ಹರಿಜನ ಬೋರ್ಡಿಂಗ್‌ನಲ್ಲಿ ಇದ್ದು ಓದುತ್ತಿದ್ದರು. ರಜೆಯಲ್ಲಿ ಅವರ ಊರಾದ ಡೊಮನಾಳಕ್ಕೆ ಹೋದೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಹದಿನೇಳನೇ ಕಂತು

 

ನಮ್ಮ ಪ್ರಾಣಿಪ್ರಪಂಚ ವಿಶಿಷ್ಟವಾಗಿತ್ತು. ನನ್ನ ತಾಯಿಯ ದೃಷ್ಟಿಯಲ್ಲಿ ನಮ್ಮ ಮನೆಯ ಪ್ರಾಣಿಗಳು, ಪಕ್ಷಿಗಳು ಮತ್ತು ನಾವು ಮಕ್ಕಳು ಒಂದೇ ಆಗಿದ್ದೆವು. ಗಿಳಿ, ಕೋಳಿ, ಬಾತುಕೋಳಿ, ಆಕಳು, ಎತ್ತು, ಎಮ್ಮೆ, ಆಡು, ನಾಯಿ ಮುಂತಾದ ಪ್ರಾಣಿ ಪಕ್ಷಿಗಳು ನಮ್ಮ ಮನೆಯಲ್ಲಿ ಮಕ್ಕಳ ಸ್ಥಾನವನ್ನೇ ಪಡೆದಿದ್ದವು.

ಅಲ್ಲೀಬಾದಿ ನಾಯಿ, ಚಮೇಲಿ ಕುದುರೆ, ಬಾಳ್ಯಾ ನಾಯಿ, ಗಂಗಾ ಆಕಳು ಹೀಗೆ ಅನೇಕ ಪ್ರಾಣಿಗಳು ನನ್ನ ನೆನಪಿನ ಅಂಗಳದಲ್ಲಿ ನಿಂತಿವೆ. ಅವುಗಳ ಜೊತೆ ಬೀದಿನಾಯಿಗಳೂ ಅವುಗಳ ಮರಿಗಳೂ ಸೇರಿವೆ.

ನಾನು ವಿಜಾಪುರದಲ್ಲಿ ನಾಲ್ಕನೆಯ ಇಯತ್ತೆ ಓದುತ್ತಿದ್ದ ಸಮಯದಲ್ಲಿ ನಮ್ಮ ನಾವಿಗಲ್ಲಿ ಮನೆಯ ಮುಂದೆಯೆ ಬೀದಿನಾಯಿಯೊಂದು ಇರುತ್ತಿತ್ತು. ಅದು ಒಂದು ದಿನ ಬಹಳ ಬೊಗಳುತ್ತಿತ್ತು. ಬಹುಶಃ ಆ ಸಮಯದಲ್ಲಿ ಬೇರೆ ಕಡೆಯ ನಾಯಿಗಳ ಗುಂಪೊಂದು ಬಂದಿರಬಹುದು. ತಮ್ಮ ಏರಿಯಾದಲ್ಲಿ ಬೇರೆ ನಾಯಿಗಳು ಬಂದರೆ ನಾಯಿಗಳು ಹೀಗೆ ಜೋರಾಗಿ ಬೊಗಳುತ್ತವೆ. ನಾನು ಸಿಟ್ಟಿನಿಂದ ಆ ನಾಯಿಯ ಕಡೆಗೆ ಕಲ್ಲು ಬೀಸಿದೆ. ಅದು ಚೂಪಾದ ಕಲ್ಲು ಇತ್ತೆಂದು ತೋರುತ್ತದೆ. ಅದು ನಾಯಿಯ ಬಾಯಿಗೆ ಬಡಿದು ರಕ್ತ ಸೋರತೊಡಗಿತು. ಅದರ ಆರ್ತನಾದ ಕೇಳಿ ಗಾಬರಿಗೊಂಡೆ, ದುಃಖ ಉಮ್ಮಳಿಸಿತು. ಅದರ ಹತ್ತಿರ ಹೋಗಿ ಮೈ ಸವರಿದೆ. ಗಾಯವಾದಲ್ಲಿ ಸುಣ್ಣ ಅರಿಷಿಣ ಕಲಿಸಿ ಹಚ್ಚಿದೆ. ಬಹಳ ತಳಮಳ ಶುರುವಾಯಿತು. ರಾತ್ರಿ ಮಲಗಲು ಅರ್ಜುನ ಮಾಮಾನ ಮನೆಗೆ ಹೋದೆ. ಅವನಿಗೆ ಇನ್ನೂ ಮಕ್ಕಳಾಗಿರಲಿಲ್ಲ. ನನ್ನ ಬಗ್ಗೆ ಪ್ರೀತಿ ಇತ್ತು. ಹಾಗೆಲ್ಲ ಹೋದರೆ ಅವನಿಗೆ ಖುಷಿಯಾಗುತ್ತಿತ್ತು. ಅಲ್ಲಿಯೆ ಪುಸ್ತಕ ಓದುತ್ತ ಕುಳಿತೆ. ಅದು ನಮ್ಮ ಪಠ್ಯಪುಸ್ತಕವಾಗಿತ್ತು. ಬುದ್ಧ ಮತ್ತು ಮಹಾವೀರರ ಕುರಿತು ಓದಿದೆ. ಲೇಖನಗಳಿಗೆ ಸಂಬಂಧಿಸಿದ ಮಹಾಪುರಷರ ಚಿತ್ರಗಳೂ ಆ ಪುಸ್ತಕದಲ್ಲಿ ಇದ್ದವು. ಬುದ್ಧ ಮಹಾವೀರರ ಬಗ್ಗೆ ಓದುವಾಗ ಅಹಿಂಸೆಯ ಪರಿಜ್ಞಾನವಾಗಿ ದುಃಖ ಉಮ್ಮಳಿಸಿ ಬರತೊಡಗಿತು. ಅರ್ಜುನ ಮಾಮಾ ಊಟ ಮಾಡಲು ಒತ್ತಾಯಿಸಿದ. ಊಟ ಮಾಡಿ ಬಂದಿರುವುದಾಗಿ ಸುಳ್ಳು ಹೇಳಿದೆ. ಅತ್ತೆ ಶಾಂತಾಬಾಯಿಯ ಒತ್ತಾಯಕ್ಕೂ ಮಣಿಯಲಿಲ್ಲ. ರಾತ್ರಿ ಚಾದ್ದರ ಹೊತ್ತುಕೊಂಡು ಕಣ್ಣೀರು ಸುರಿಸುತ್ತ ಮಲಗಿದೆ. ನಿದ್ದೆ ಯಾವಾಗ ಬಂತೋ ಗೊತ್ತಾಗಲಿಲ್ಲ.

ಮರುದಿನ ಮನೆಗೆ ಹೋಗಿ ಅವ್ವನಿಗೆ ಗಂಜಿ ಮಾಡಲು ಹೇಳಿದೆ. ಬಹಳಹೊತ್ತು ಅದರ ಜೊತೆಗೇ ಇದ್ದೆ. ಗಂಜಿ ತಣ್ಣಗಾದೊಡನೆ ಹಾಗೂ ಹೀಗೂ ಕುಡಿಸಿದೆ. ಅದರ ಗಾಯ ಮಾಯವಾಗುವವರೆಗೆ ಹೀಗೇ ಅದರ ಸೇವೆ ಮಾಡುತ್ತಲಿದ್ದೆ. ಕೊನೆಗೆ ನಮ್ಮ ದೋಸ್ತಿ ಗಾಢವಾಗಿ ಬೆಳೆಯಿತು.

ನಮ್ಮ ನಾವಿಗಲ್ಲಿಯಲ್ಲಿ ಬಹಳಷ್ಟು ಹಂದಿಗಳಿದ್ದವು. ಅವೆಲ್ಲ ಹೆಚ್ಚಾಗಿ ಬೋಧರಾಚಾರಿ ದೊಡ್ಡಿಯಿಂದ ಬರುತ್ತಿದ್ದವು. ಅವುಗಳಲ್ಲಿ ಕೆಲವು ಕೊಬ್ಬಿದ ಹಂದಿಗಳಿದ್ದವು. ಅವುಗಳಿಗೆ ನಾಯಿಗಳೂ ಮನುಷ್ಯರೂ ಕೂಡಿಯೆ ಅಂಜುತ್ತಿದ್ದರು. ಹೀಗಾಗಿ ದೊಡ್ಡಿಯಲ್ಲಿ ಬಯಲುಕಡೆಗೆ ಹೋಗುವವರಲ್ಲಿ ಕೆಲವರು ಬಡಿಗೆ ಹಿಡಿದುಕೊಂಡು ಹೋಗುತ್ತಿದ್ದರು.

ನಾನು ದೋಸ್ತಿ ಬೆಳೆಸಿದ ನಾಯಿ ಹೆಣ್ಣುನಾಯಿಯಾಗಿತ್ತು. ಮಧ್ಯಮ ಗಾತ್ರದ ಅದು ಕಪ್ಪಗೆ ಸುಂದರವಾಗಿತ್ತು. ಶ್ರಾವಣದಲ್ಲಿ ಅದು ಗರ್ಭಧರಿಸಿತು. ಅದರ ಬಗ್ಗೆ ಇನ್ನೂ ಹೆಚ್ಚಿಗೆ ಕಾಳಜಿ ವಹಿಸತೊಡಗಿದೆ. ಅದು ನಮ್ಮ ಮನೆಯ ಹತ್ತಿರದಲ್ಲೇ ಒಂದಿಷ್ಟು ಸುರಕ್ಷಿತ ಜಾಗ ಮಾಡಿಕೊಂಡು ಮರಿಹಾಕಿತು. ಮರಿ ಹಾಕಿ ಮೂರ್ನಾಲ್ಕು ದಿನಗಳಾಗಿರಬಹುದು. ಕೊಬ್ಬಿದ ಹಂದಿಯೊಂದು ಬಂದು ಆ ಮರಿಗಳನ್ನು ಕೊಂದು ಹಾಕಿತು. ಅವರಿವರ ಮನೆಕಡೆ ತಿನ್ನಲು ಹೋಗಿದ್ದ ಆ ತಾಯಿನಾಯಿ ಬಂದು ತನ್ನ ಸತ್ತ ಮರಿಗಳನ್ನು ನೋಡಿ ಅನುಭವಿಸಿದ ನೋವಿಗೆ ಅಕ್ಕಪಕ್ಕದ ಜನರೆಲ್ಲ ಕನಿಕರಪಟ್ಟರು. ಗಲ್ಲಿಯ ಕೆಲ ಹುಡುಗರ ಜೊತೆಗೂಡಿ ಆ ಸತ್ತ ಮರಿಗಳನ್ನು ಬೋಧರಾಚಾರಿ ದೊಡ್ಡಿಯಲ್ಲಿ ಹುಗಿದು ಬಂದೆ. ತಾಯಿನಾಯಿ ಮಂಕಾಗಿ ನಿಂತಿತ್ತು. ಅದರ ಮುಂದೆ ಹಾಲು ಒಯ್ದಿಟ್ಟೆ, ಕುಡಿಯಲಿಲ್ಲ. ಅದರ ಬಾಯಿ ತೆಗೆದು ಹಾಲು ಹಾಕಲು ಯತ್ನಿಸಿದೆ. ಆದರೆ ಅದು ಹಲ್ಲು ಗಟ್ಟಿಯಾಗಿ ಹಿಡಿದು ಹಾಲು ಕುಡಿಯಲಿಲ್ಲ. ನನ್ನ ಪ್ರಯತ್ನವೆಲ್ಲವೂ ವ್ಯರ್ಥವಾದವು. ಹೀಗೆ ಮೂರ್ನಾಲ್ಕು ದಿನ ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ. ಆ ತಾಯಿ ಸತ್ತೇ ಹೋಯಿತು!

ನನ್ನ ಗೆಳೆಯರೊಬ್ಬರು ನಾಯಿ ಸಾಕಿದ್ದರು. ಒಂದು ವರ್ಷದ ನಂತರ ಇನ್ನೊಂದು ನಾಯಿಮರಿ ತಂದರು. ಆ ಸಿನಿಯರ್ ನಾಯಿ ಯಾವ ರಂಪಾಟವೂ ಮಾಡದೆ ಕಾಣೆಯಾಯಿತು. ಮನೆಯವರು ಎಲ್ಲೆಡೆ ಹುಡುಕಿದರು. ಮರುದಿನ ಅದು ಮಂಚದ ಕೆಳಗೆ ಇಟ್ಟ ವಸ್ತುಗಳ ಹಿಂದೆ ಮುದ್ದೆಯಾಗಿ ಬಿದ್ದಿತ್ತು. ಕೂಡಲೆ ಜ್ಯೂನಿಯರ್ ನಾಯಿಯನ್ನು ಬೇರೆಯವರಿಗೆ ಕೊಟ್ಟು ಕಳಿಸಿದರು. ಮಂಚದ ಕೆಳಗಿನಿಂದ ಆ ನಾಯಿಯನ್ನು ಹೊರತೆಗೆದು; ನಾಯಿಮರಿಯನ್ನು ಹೊರಗೆ ಹಾಕಿದ್ದು ಅದಕ್ಕೆ ಮನವರಿಕೆಯಾಗುವಂತೆ ಮನೆಯ ಮೂಲೆ ಮೂಲೆಗಳಲ್ಲಿ ಒಯ್ದು ತೋರಿಸಿದರು. ತದನಂತರ ಅದು ಅನ್ನ ಹಾಲು ತಿಂದಿತು.

ಇನ್ನೊಂದು ಆಶ್ವರ್ಯಕರ ಘಟನೆಯನ್ನು ನಾಯಿಯ ಬಗ್ಗೆ ಹೇಳಬೇಕೆನಿಸುತ್ತದೆ. ನಮ್ಮ ಮನೆಯ ಹತ್ತಿರ ಹೊಸ ಮನೆ ಕಟ್ಟುತ್ತಿದ್ದವರು ರಸ್ತೆ ಬದಿ ಉಸುಕಿನ ರಾಶಿ ಹಾಕಿದ್ದರು. ಯಾರದೋ ಮನೆಯವರು ಬಿಸಾಕಿದ ಒಣ ಚಪಾತಿಯನ್ನು ನಾಯಿಯೊಂದು ಕಚ್ಚಿಕೊಂಡು ತರುತ್ತಿತ್ತು. ಅದನ್ನೇ ಗಮನಿಸುತ್ತಿದ್ದೆ. ಅದು ಬಂದು ಉಸುಕಿನ ರಾಶಿಯನ್ನು ಕೆದರಿ ಆ ತಂಗಳು ಚಪಾತಿಯನ್ನು ಮುಚ್ಚಿಟ್ಟಿದ್ದು ನನ್ನ ಕುತೂಹಲ ಕೆರಳಿಸಿತು. ನಂತರ ಅದು ಅಲ್ಲಿ ನಿಲ್ಲದೆ ಓಡಿಹೋಗಿ ಇನ್ನೊಂದು ನಾಯಿ ಮತ್ತು ಅದರ ಎರಡು ಮರಿಗಳನ್ನು ಕರೆದುಕೊಂಡು ಬಂದಿತು. ಉಸುಕು ಕೆದರಿ ಒಣ ಚಪಾತಿಯನ್ನು ಹೊರ ತೆಗೆದು ಅವುಗಳ ಮುಂದೆ ಚೆಲ್ಲಿತು. ಅವು ಖುಷಿಯಿಂದ ತಿನ್ನುವುದನ್ನು ನೋಡುತ್ತ ಮನೆಯ ಯಜಮಾನನ ಹಾಗೆ ನಿಂತಿತು.

ಬೇರೆಯವರು ಖುಷಿಯಿಂದ ಕೊಟ್ಟ ಪುಟ್ಟ ಒಣಭೂಮಿಯನ್ನು ನನ್ನ ತಂದೆ ಹಸಿರುಗೊಳಿಸಿದ್ದರು. ಆ ತಾಣದಲ್ಲಿ ಎರಡು ನಾಯಿಗಳನ್ನು ಸಾಕಿದ್ದರು. ಅದು ನಮ್ಮ ಮನೆಯಿಂದ ಒಂದು ಫರ್ಲಾಂಗನಷ್ಟು ದೂರದಲ್ಲಿತ್ತು. ನಾವು ಊಟ ಮಾಡುವ ಸಮಯಕ್ಕೆ ಆ ನಾಯಿಗಳು ಬಂದು ಬಿಸಿಬಿಸಿ ರೊಟ್ಟಿಯನ್ನು ತಿಂದು ಹೋಗುತ್ತಿದ್ದವು. ತಂದೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದರೂ ಅವುಗಳಿಗೆ ಮನೆಯ ಚಟ ಅಂಟಿಕೊಂಡಿತ್ತು. ನನ್ನ ತಾಯಿಯ ಪ್ರೀತಿಯೆ ಅದಕ್ಕೆ ಕಾರಣವಾಗಿತ್ತು. ಆದರೆ ತಂದೆಗೆ ಮಾತ್ರ ಬಹಳ ಅಂಜುತ್ತಿದ್ದವು. ತಂದೆ ಅವುಗಳಿಗೆ ಎಂದೂ ಹೊಡೆಯುತ್ತಿರಲಿಲ್ಲ. ಅದು ಹೇಗೆ ಈ ಅಂಜಿಕೆ ಹುಟ್ಟಿತ್ತೋ ಗೊತ್ತಿಲ್ಲ. ಒಂದು ದಿನ ಅವು ರೊಟ್ಟಿ ತಿನ್ನುವುದನ್ನು ಅರ್ಧಕ್ಕೆ ಬಿಟ್ಟು ಹಸಿರು ತಾಣದ ಕಡೆಗೆ ಓಡಿದವು. ನಾನು ಆಶ್ಚರ್ಯದಿಂದಲೇ ಏನಾಯಿತೆಂದು ಮನೆಯ ಬಾಗಿಲಲ್ಲಿ ಬಂದು ನಿಂತೆ. ನನ್ನ ತಂದೆ ಬರುವುದು ಕಾಣಿಸಿತು!

ಒಬ್ಬರು ನಮ್ಮ ಹಾಗೆಯೆ ಬೀದಿನಾಯಿ ಸಾಕಿದ್ದರು. ಒಣಿಯವರು ಯಾರಾದರೂ ಅದರ ಮುಂದೆ ರೊಟ್ಟಿ ಎಸೆದರೆ ಅದು ಆ ರೊಟ್ಟಿಯನ್ನು ಕಚ್ಚಿಕೊಂಡು ಒಗೆದವರ ಮನೆಮುಂದೆ ಬಿಟ್ಟುಬರುತ್ತಿತ್ತು. ಮಾಲಿಕರೇ ಅದಕ್ಕೆ ಆಹಾರ ನೀಡಬೇಕಿತ್ತು. ಎಂದಾದರೂ ಪರ ಊರಿಗೆ ಹೋದರೆ, ಅವರು ಬರುವವರೆಗೆ ತಿನ್ನುತ್ತಿರಲಿಲ್ಲ. ಹೀಗಾಗಿ ಅವರು ಎಲ್ಲೇ ಹೋದರೂ ಮರುದಿನವೇ ವಾಪಸ್ ಬರುವಂಥ ಪರಿಸ್ಥಿತಿ ಉಂಟಾಯಿತು.

ದನಗಳು ನನ್ನ ತಂದೆಗೆ ಹೆಚ್ಚು ಹಚ್ಚಿಕೊಂಡಿದ್ದರೆ, ಆಡುಗಳು ನನ್ನ ತಾಯಿಯನ್ನು ಬಿಟ್ಟಿರುತ್ತಿರಲಿಲ್ಲ. ನನ್ನ ಸಂಬಂಧ ಹೆಚ್ಚಾಗಿ ಕೋಳಿಗಳ ಜೊತೆಗೆ. ಅವುಗಳಿಗೆ ಕಾಳು ಹಾಕುವುದು ಹೆಚ್ಚಿನ ಆನಂದ ಕೊಡುತ್ತಿತ್ತು. ಕೋಳಿ ಮತ್ತು ಹುಂಜಗಳು ತಮ್ಮ ಕುತ್ತಿಗೆಯ ಕೆಳಗಿನ ಭಾಗದಲ್ಲಿ ನುಂಗಿದ ಆಹಾರ ಧಾನ್ಯಗಳನ್ನು ಶೇಖರಿಸಿಟ್ಟುಕೊಳ್ಳುತ್ತವೆ. ನಾನು ಅವುಗಳನ್ನು ಎತ್ತಿ ಆ ಎದೆಯ ಭಾಗವನ್ನು ಹಿಚುಕಿ ನೋಡುತ್ತಿದ್ದೆ. ಕಡಿಮೆ ಕಾಳುಗಳಿರುವ ಕೋಳಿಗಳಿಗೆ ಹೆಚ್ಚು ಕಾಳು ಹಾಕುತ್ತಿದ್ದೆ. ಹುಂಜಗಳು ಉಡಾಳ ಹುಡುಗರ ಹಾಗೆ ಕಂಡರೆ ಕೋಳಿಗಳು ಘನತೆವೆತ್ತ ಹೆಣ್ಣುಮಕ್ಕಳ ಹಾಗೆ ಕಾಣುತ್ತಿದ್ದವು.

ಆ ಕಾಲದ ಡಿಸಿ ಕರೆಂಟ್ ಬೀದಿದೀಪಗಳ ಬೆಳಕಲ್ಲಿ ರಸ್ತೆಗಳು ನಿಚ್ಚಳವಾಗಿ ಕಾಣುತ್ತಿರಲಿಲ್ಲ. ರಾತ್ರಿ ನಾವು ನಮ್ಮ ತಂದೆಯ ದಾರಿ ಕಾಯುವಾಗ ದನಗಳು ಒದರತೊಡಗಿದರೆ ತಂದೆ ಬರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿತ್ತು. ನಮ್ಮ ಮನೆಯ ರಸ್ತೆಯ ದಂಡೆಗೆ ಇರುವ ಆಲದಮರ ಮತ್ತು ಅದರ ಹಿಂದಿರುವ ಸೇದುವ ಬಾವಿಯ ಬಗ್ಗೆ ನನಗೆ ಭಯ ಕಾಡುತ್ತಿತ್ತು. ಆಲದಮರದಲ್ಲಿ ದೆವ್ವಗಳಿವೆ. ಸೇದುವ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರು ದೆವ್ವಗಳಾಗಿ ಆ ಆಲದಮರದಲ್ಲಿ ಇರುತ್ತಾರೆ ಎಂದು ನನಗಿಂತ ದೊಡ್ಡ ಹುಡುಗರು ನನ್ನ ತಲೆಯಲ್ಲಿ ಹುಳು ಬಿಟ್ಟಿದ್ದರಿಂದ ರಾತ್ರಿ ಆ ಕಡೆ ನೋಡಲೂ ಭಯ ಎನಿಸುತ್ತಿತ್ತು. ಆಲದಮರ ನಮ್ಮ ಮನೆಯಿಂದ ಏನಿಲ್ಲೆಂದರೂ 300 ಮೀಟರ್‌ಗಳಷ್ಟು ದೂರವಿತ್ತು. ಆ ಕತ್ತಲಲ್ಲಿ ಕೊಟ್ಟಿಗೆಯಲ್ಲಿರುವ ದನಗಳು ಬರಿ ವಾಸನೆಯ ಮೇಲೆ ಕಂಡುಹಿಡಿದು ಒದರುತ್ತಿದ್ದವೆಂದು ಕಾಣುತ್ತದೆ. ತಂದೆ ಮನೆಯೊಳಗೆ ಬರುವ ಮೊದಲು ರಸ್ತೆಯ ಆಚೆಬದಿ ಇರುವ ದನದ ಕೊಟ್ಟಿಗೆಗೆ ಹೋಗಿ ಅವುಗಳ ಬೆನ್ನು ಸವರಿ ಕಣಿಕೆ (ಜೋಳದ ಒಣ ದಂಟು) ಹಾಕುತ್ತಿದ್ದರು. ಅಷ್ಟೊತ್ತಿಗೆ ನಾವು ನೀರು ತುಂಬಿದ ಬೋಗುಣಿಯಲ್ಲಿ ತಂಬಿಗೆ ಇಟ್ಟು ನಿಂತಿರುತ್ತಿದ್ದೆವು. ತಂದೆ ಹೀಗೆ ಕೈಕಾಲು ಮುಖ ತೊಳೆದುಕೊಂಡೇ ಮನೆಯೊಳಗೆ ಬರುತ್ತಿದ್ದರು.

ನಾನೊಂದು ಗಿಳಿ ಸಾಕಿದ್ದೆ. ಅದು ಹಾರಲು ಬರದಂಥ ಸ್ಥಿತಿಯಲ್ಲಿತ್ತು. ಅರ್ಜುನ ಮಾಮಾನ ತೋಟದ ಬಳಿ ಸಿಕ್ಕಿತ್ತು. ಅದನ್ನು ಮನೆಗೆ ತೆಗೆದುಕೊಂಡು ಬಂದೆ. ಸ್ವಲ್ಪ ದೊಡ್ಡದಾದ ಮೇಲೆ ಪಂಜರದಲ್ಲಿ ಹಾಕಿ ಇಟ್ಟೆ. ಒಂದು ದಿನ ಪಂಜರದ ಬಾಗಿಲನ್ನು ಸರಿಯಾಗಿ ಹಾಕದ ಕಾರಣ ಅದು ಪಂಜರದಿಂದ ಹಾರಿ ಹೋಯಿತು. ಅದು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಎತ್ತರದ ಮರವೊಂದರ ತುದಿಯ ಬಳಿ ಹೋಗಿ ಕುಳಿತಿತು. ನನಗೆ ಬಹಳ ದುಃಖವಾಯಿತು. ತಂದೆ ಕೆಲಸ ಮಾಡುವ ಅಡತಿ ಅಂಗಡಿಗೆ ಹೋಗಿ ಅಳತೊಡಗಿದೆ. ಅವರು ಬಾಡಿಗೆ ಸೈಕಲ್ ಮೇಲೆ ನನ್ನನ್ನು ಕೂಡಿಸಿಕೊಂಡು ಆ ಗಿಡದ ಬಳಿ ಬಂದರು. ನಂತರ ಸರಸರನೆ ಆ ಬೃಹತ್ತಾಗಿ ಬೆಳೆದ ಗಿಡವನ್ನು ಹತ್ತತೊಡಗಿದರು. ನನಗೋ ಗಾಬರಿ ಶುರುವಾಯಿತು. ಆ ಗಿಡದ ತುದಿಗೆ ಹೋಗುವಾಗ ಏನಾದರೂ ಅವಘಡ ಸಂಭವಿಸಿದರೆ ಹೇಗೆ ಎಂಬ ಚಿಂತೆ ಕಾಡತೊಡಗಿತು. ಅಷ್ಟೊತ್ತಿಗಾಗಲೆ ತಂದೆ ಗಿಳಿಯ ಸಮೀಪ ಹೋಗಿ ಕೈ ಮಾಡಿದರು ಅದು ಹೆಗಲ ಮೇಲೆ ಬಂದು ಕುಳಿತಿತು. ‘ಇದೆಂಥ ವಿಶ್ವಾಸ’ ಎಂದು ನನಗೆ ದಿಗಿಲಾಯಿತು. ಅವರು ಕೆಳಗಿಳಿದು ಮನೆಗೆ ತಂದು ಪಂಜರದಲ್ಲಿ ಹಾಕಿ ಹೋದರು. ಆದರೆ ಮುಂದೆ ಅದು ಬಹಳ ದಿನ ಬದುಕಲಿಲ್ಲ. ನಂತರ ನನ್ನ ಜೀವನದಲ್ಲಿ ಎಂದೂ ಪಕ್ಷಿ ಸಾಕುವ ಗೋಜಿಗೆ ಹೋಗಲಿಲ್ಲ.

ನಮ್ಮ ಮನೆಯಲ್ಲಿನ ಬೆಕ್ಕಿನ ಮರಿ ನನ್ನ ತಾಯಿಯನ್ನು ಬಿಟ್ಟಿರುತ್ತಿರಲಿಲ್ಲ. ತಾಯಿಯ ಕಾಲಿಗೆ ಚಿಕ್ಕದೊಂದು ಗಡ್ಡೆಯಾಗಿತ್ತು. ಅದನ್ನು ಆಪರೇಷನ್ ಮಾಡಿ ತೆಗೆಯಬೇಕೆಂದು ಡಾ|| ಪ್ರೇಮಾನಂದ ಅಂಬಲಿ ಅವರು ಹೇಳಿದ್ದರಿಂದ ಟಾಂಗಾದಲ್ಲಿ ತಾಯಿಯನ್ನು ಕೂಡಿಸಿಕೊಂಡು ಹೋಗಬೇಕೆಂದಾಗ ಬೆಕ್ಕು ಭಾರಿ ಕಿರಿಕಿರಿಯನ್ನುಂಟು ಮಾಡಿತು. ಕೊನೆಗೆ ಅದನ್ನೂ ಟಾಂಗಾದಲ್ಲಿ ಹತ್ತಿಸಿಕೊಂಡು ಹೋದೆವು. ಆಪರೇಷನ್ ಥಿಯೆಟರ್‌ನಲ್ಲೂ ಇದೇ ಸಮಸ್ಯೆ ಆಯಿತು. ತಾಯಿಯನ್ನು ಒಳಗೆ ಕರೆದುಕೊಂಡು ಹೋದನಂತರ ಬಾಗಿಲು ಮುಚ್ಚಿದ ಮೇಲೆ ತನ್ನ ಪಂಜ(ನಖ)ಗಳಿಂದ ಒಂದೇ ಸಮನೆ ಬಾಗಿಲು ಕೆದರುತ್ತ ಚೀರಾಡತೊಡಗಿತು. ಕೊನೆಗೆ ಅಂಬಲಿ ಡಾಕ್ಟರ್ ಅದನ್ನು ಒಳಗೆ ಕರೆದುಕೊಂಡು ತಾಯಿಯ ಕಾಲಿನ ಆಪರೇಷನ್ ಮಾಡಿದರು.

ಮರಿ ಹಾಕಿ ಮೂರ್ನಾಲ್ಕು ದಿನಗಳಾಗಿರಬಹುದು. ಕೊಬ್ಬಿದ ಹಂದಿಯೊಂದು ಬಂದು ಆ ಮರಿಗಳನ್ನು ಕೊಂದು ಹಾಕಿತು. ಅವರಿವರ ಮನೆಕಡೆ ತಿನ್ನಲು ಹೋಗಿದ್ದ ಆ ತಾಯಿನಾಯಿ ಬಂದು ತನ್ನ ಸತ್ತ ಮರಿಗಳನ್ನು ನೋಡಿ ಅನುಭವಿಸಿದ ನೋವಿಗೆ ಅಕ್ಕಪಕ್ಕದ ಜನರೆಲ್ಲ ಕನಿಕರಪಟ್ಟರು.

ಆಡುಗಳು ಕೂಡ ತಾಯಿಯ ಜೊತೆ ಅಂಥದೇ ಸಂಬಂಧ ಹೊಂದಿದ್ದವು. ತಾಯಿ ಮನೆಗೆಲಸ ಮುಗಿಸಿಕೊಂಡು ಆಡುಗಳನ್ನು ಮೇಯಿಸಲು ಒಂದು ಕಿಲೋಮೀಟರನಷ್ಟು ದೂರವಿರುವ ಕುರುಚಲು ಅರಣ್ಯದ ಕಡೆಗೆ ಒಯ್ಯುತ್ತಿದ್ದಳು. ಒಂದು ದಿನ ಇಳಿಹೊತ್ತಿನಲ್ಲಿ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಯಿತು. ನಾನು ದುಗುಡದಿಂದ ತಾಯಿ ಇದ್ದಲ್ಲಿಗೆ ಓಡುತ್ತ ಹೋದೆ. ಆ ಪ್ರದೇಶ ಮುಟ್ಟುವುದರೊಳಗಾಗಿ ಮಳೆ ಶುರುವಾಗಿತ್ತು. ನಮ್ಮ ಆಡುಗಳು ಕಂಡವು, ಆದರೆ ತಾಯಿ ಕಾಣುತ್ತಿಲ್ಲವಾದ್ದರಿಂದ ಬಹಳ ಗಾಬರಿಯಾಯಿತು. ಸಮೀಪ ಹೋದಾಗ ಆಶ್ಚರ್ಯ ಕಾದಿತ್ತು. ನನ್ನ ತಾಯಿ, ಗೋಣಿಚೀಲವನ್ನು ದೊಡ್ಡ ಕುಲಾಯಿಯ ಹಾಗೆ ಮಡಚಿ ಹೊದ್ದಿಕೊಂಡು ಕುಳಿತಿದ್ದಳು. ಹತ್ತೆಂಟು ಆಡುಗಳು ಸುತ್ತುವರಿದು ಆಸರೆ ಒದಗಿಸಿದ್ದವು. ಅವುಗಳ ಮಧ್ಯೆ ಬೆಚ್ಚಗೆ ಕುಳಿತಿದ್ದ ತಾಯಿಯನ್ನು ನೋಡಿ ಖುಷಿಯಾಯಿತು.

ತಾಯಿಯ ತವರುಮನೆ ಅಲ್ಲೀಬಾದಿ ಆಗಿದ್ದರೆ ತಂದೆಯ ಊರು ದರ್ಗಾ. ಅದು ವಿಜಾಪುರಕ್ಕೆ ಬಹಳ ಸಮೀಪದಲ್ಲಿದೆ. ಆ ಹಳ್ಳಿಯಿಂದ ಕೂಲಿಕಾರರು ಹಣ್ಣು ಹಂಪಲು ಮಾರುವವರು ದಿನಂಪ್ರತಿ ಕಾಲ್ನಡಿಗೆಯಿಂದ ವಿಜಾಪುರಕ್ಕೆ ಬಂದು; ಸಂಜೆ ಕಾಲ್ನಡಿಗೆಯಲ್ಲೇ ವಾಪಸಾಗುತ್ತಿದ್ದರು. ಈಗಿನಂತೆ ಆಗ ಅಟೋರಿಕ್ಷಾ ಆಗಲಿ, ನಗರ ಸಾರಿಗೆ ಅಥವಾ ಗ್ರಾಮೀಣ ಬಸ್ ಆಗಲಿ ಇರಲಿಲ್ಲವಾದ್ದರಿಂದ ಇದೆಲ್ಲ ಅವರಿಗೆ ರೂಢಿಯಾಗಿತ್ತು.

ಖ್ವಾಜಾ ಅಮೀನುದ್ದೀನ ಹೆಸರಿನ ಪ್ರಖ್ಯಾತ ಸೂಫಿ ಸಂತನ ಸಮಾಧಿ (ದರ್ಗಾ) ಅಲ್ಲಿರುವ ಕಾರಣ ಆ ಹಳ್ಳಿಗೆ ‘ದರ್ಗಾ’ ಎಂಬ ಹೆಸರು ಬಂದಿದೆ. ಖ್ವಾಜಾ ಅಮೀನುದ್ದೀನ ನಮ್ಮ ಮನೆಯ ದೈವವಾಗಿದ್ದರಿಂದ ತಂದೆ ಪ್ರತಿವರ್ಷ ಕಂದೂರಿ ಮಾಡುತ್ತಿದ್ದರು. ದರ್ಗಾದ ಉರುಸ್ (ಸ್ಮರಣೋತ್ಸವ) ದಿನ ಅಲ್ಲಿಗೆ ಹೋಗಿ ಕಂದೂರಿ ಮಾಡಿ ನೂರಾರು ಜನರಿಗೆ ಉಣಬಡಿಸಿ ಸಂತಸಗೊಳ್ಳುತ್ತಿದ್ದರು. ಇಂಥ ಸನ್ನಿವೇಶಗಳು ಜನರನ್ನು ಸಾಮಾಜಿಕವಾಗಿ ಗಟ್ಟಿಗೊಳಿಸುವ ಕಾರಣ ಎಂಥ ಬಡವರು ಕೂಡ ಒಂದಿಲ್ಲೊಂದು ಕಾರಣದಿಂದ ಹೀಗೆ ಒಂದುಗೂಡುವ ಮೂಲಕ ಸಾಮಾಜಿಕ ಸಂಬಂಧಗಳನ್ನು ಉಳಿಸಿಕೊಳ್ಳುತ್ತಾರೆ.

ಉರುಸ್‌ಗೆ ಒಂದು ವರ್ಷದಷ್ಟು ಮುಂಚೆಯೆ ನನ್ನ ತಂದೆ ಹೋತಿನ ಮರಿಯನ್ನು ಕೊಳ್ಳುತ್ತಿದ್ದರು. ಉರುಸ್ ಬರುವ ಹೊತ್ತಿಗೆ ಅದು ಬೆಳೆದು ದೊಡ್ಡದಾಗಿರುತ್ತಿತ್ತು. ಹಾಗೆ ಬೆಳೆದು ನಿಂತ ಹೋತನ್ನು ಕೊಳ್ಳಲು ಬಹಳ ಹಣ ತೆರಬೇಕಿತ್ತು. ಆದ್ದರಿಂದ ಕಡಿಮೆ ದರದಲ್ಲಿ ಮರಿಯನ್ನು ಕೊಂಡು ಬೆಳೆಸುವ ಮೂಲಕ ಈ ಸಮಸ್ಯೆ ಬಗೆಹರಿಸಿದ್ದರು.

ಹೀಗೆ ಒಂದು ಹೋತಿನ ಮರಿಯನ್ನು ಕೊಂಡಾಗ ಅದನ್ನು ನಾನು ಬಹಳ ಪ್ರೀತಿಯಿಂದ ಸಾಕಿದೆ. ಅದು ನನ್ನ ಜೊತೆಗೇ ಇರುತ್ತಿತ್ತು. ಯಾರಿಗೂ ಗೊತ್ತಾಗದಂತೆ ಮನೆಯಲ್ಲಿನ ಕಾಳುಕಡಿಗಳನ್ನು ಕೂಡ ಅದಕ್ಕೆ ಹಾಕುತ್ತಿದ್ದೆ. ಆರೇಳು ತಿಂಗಳಲ್ಲಿ ಅದು ಬಹಳ ದಷ್ಟಪುಷ್ಟವಾಗಿ ಬೆಳೆಯಿತು. ಎದುರಿಗೆ ಬಂದು ಕೆಣಕಿದವರಿಗೆಲ್ಲ ಹಾಯಲು ಹೋಗುತ್ತಿತ್ತು. ನಾನು ಕೈ ಮುಂದು ಮಾಡಿದರೆ ಎರಡೂ ಮುಂಗಾಲುಗಳನ್ನು ಕೈಯ ಮೇಲಿಟ್ಟು ನಿಲ್ಲುತ್ತಿತ್ತು. ರಿಮ್ (ಸೈಕಲ್ ಚಕ್ರದ ಹೊರಸುತ್ತು) ಹಿಡಿದು ನಿಂತರೆ ಓಡುತ್ತ ಬಂದು ಹಾರಿ ಅದರೊಳಗಿಂದ ಪಾರಾಗಿ ನಿಲ್ಲುತ್ತಿತ್ತು. ಈ ದೃಶ್ಯವನ್ನು ನಾನು ಸರ್ಕಸ್‌ನಲ್ಲಿ ನೋಡಿದ್ದೆ. ಅದೇ ರೀತಿ ಈ ಹೋತಿನಿಂದ ಕಸರತ್ತು ಮಾಡಿಸುವಲ್ಲಿ ಯಶಸ್ವಿಯಾಗಿದ್ದೆ. ಹಾಗೆ ಕಸರತ್ತು ಮಾಡಿಸುವಾಗ ನಮ್ಮ ಗಲ್ಲಿಯ ಜನ ನಿಂತು ನೋಡುತ್ತ ಖುಷಿಪಡುತ್ತಿದ್ದರು.

ಸಾಯಂಕಾಲ ಶಾಲೆ ಬಿಡುವ ಹೊತ್ತಿಗೆ ಅದು ಅರ್ಧ ದಾರಿಗೆ ಬಂದು ಎದುರುಗೊಳ್ಳುತ್ತಿತ್ತು. ಉರುಸ್ ಬಂತು. ಅದು ಕಂದೂರಿಯಾಗಿ ಮರಳಿಬಾರದ ದಾರಿಗೆ ಹೋಯಿತು. ಆ ದಿನ ನಾನು ಊಟ ಮಾಡಲಿಲ್ಲ. ಆ ಘಟನೆಯ ಆಳವಾದ ಪರಿಣಾಮದಿಂದ ಇಂದಿಗೂ ಹೊರಬರಲಿಕ್ಕಾಗಲಿಲ್ಲ.

ನನ್ನ ತಂದೆ ಹಾವು ಹೊಡೆಯುವುದನ್ನು ಕೂಡ ಸಹಿಸಿಕೊಳ್ಳುತ್ತಿರಲಿಲ್ಲ. ಆದರೆ ಕಂದೂರಿ ಒಂದು ಶ್ರದ್ಧೆಯಾಗಿದ್ದರಿಂದ ಮನೆತನದಲ್ಲಿ ತಲೆತಲಾಂತರದಿಂದ ಬಂದ, ಅವರದೇ ನಂಬಿಕೆಯಿಂದ ಕೂಡಿದ ಧಾಮಿಕ ಕರ್ತವ್ಯ ನಿರ್ವಹಣೆಯನ್ನು ನಿಷ್ಠೆಯಿಂದ ಮಾಡುತ್ತಿದ್ದರು.
ನನ್ನ ದಲಿತ ಮಿತ್ರ ತುಕಾರಾಮ ನನಗಿಂತ ಆರುವರ್ಷ ದೊಡ್ಡವರಿದ್ದರು. ನಾನು ನಾಲ್ಕನೆಯ ಇಯತ್ತೆ ಓದುವಾಗ ಅವರು ಮ್ಯಾಟ್ರಿಕ್ ಇದ್ದರು. ನಮ್ಮ ಮನೆಯ ಹತ್ತಿರದ ಹರಿಜನ ಬೋರ್ಡಿಂಗ್‌ನಲ್ಲಿ ಇದ್ದು ಓದುತ್ತಿದ್ದರು. ರಜೆಯಲ್ಲಿ ಅವರ ಊರಾದ ಡೊಮನಾಳಕ್ಕೆ ಹೋದೆ. ಅಲ್ಲಿನ ಸುಂದರವಾದ ಗುಡ್ಡದ ಮೇಲೆ ಸೂಫಿಸಂತ ದಾವಲಮಲಿಕ್ ಅವರ ದರ್ಗಾ ಇದೆ. ಆ ಸಂತ ಆ ಊರಿನ ಜನರ ಆರಾಧ್ಯ ದೈವವಾಗಿದ್ದಾನೆ. ಆ ಗುಡ್ಡದ ಮೇಲೆ ಹೋಗಿ ನಿಂತಾಗ ಎಲ್ಲಿಂದಲೋ ವಿಮಾನವೊಂದು ಬಂದಿತು. ಅದು ಅಷ್ಟೇನು ಸಮೀಪದಲ್ಲಿರಲಿಲ್ಲ.
ಆದರೆ ನಾನು ನೋಡಿದ ವಿಮಾನಗಳಲ್ಲಿ ಅದು ಹೆಚ್ಚು ಸಮೀಪವಾಗಿತ್ತು. ವಿಜಾಪುರದಲ್ಲಿ ಯಾವಾಗೋ ಒಮ್ಮೆ ವಿಮಾನ ಕಾಣುತ್ತಿದ್ದವು. ಅವು ಬಹಳ ಎತ್ತರದಲ್ಲಿ ಹಾರುತ್ತಿದ್ದುದರಿಂದ ಆಟಿಕೆ ಸಾಮಾನಿನ ಹಾಗೆ ಕಾಣುತ್ತಿದ್ದವು. ಆಗ ನಾವು ಹುಡುಗರು ಕೇಕೆ ಹಾಕುತ್ತ “ವಿಮಾನ ನಿಮ್ಮಾಯಿ ಕಮಾನ” ಎಂದು ಕೂಗುತ್ತಿದ್ದೆವು. ಕೆಲವೊಂದು ಸಲ ಜೆಟ್ ವಿಮಾನಗಳು ಬಂದಾಗ ಉದ್ದವಾದ ಹೊಗೆಯ ಸಾಲನ್ನು ನಿರ್ಮಿಸುತ್ತಿದ್ದವು. ರಾತ್ರಿ ವಿಮಾನ ಬಂದಾಗ ದೂರದ ಸಪ್ಪಳಿನ ಜೊತೆ ಮಿಣುಕು ಬೆಳಕು ಸಾಗುವುದನ್ನು ನೋಡುತ್ತಿದ್ದೆವು.

ಡೊಮನಾಳ ಪರಿಸರ ಬಹಳ ತೃಪ್ತಿ ಕೊಟ್ಟಿತು. ಮೂರ್ನಾಲ್ಕು ದಿನ ಡೊಮನಾಳಲ್ಲಿ ಕಳೆದದ್ದೊಂದು ಅನುಭವ. ವಿಜಾಪುರದಿಂದ ಸೋಲಾಪುರಕ್ಕೆ ಹೋಗುವಾಗ ತಿಡಗುಂದಿಯಲ್ಲಿ ಕೆಂಪುಬಸ್ ಇಳಿದು, ನಡೆದುಕೊಂಡು ಡೊಮನಾಳಕ್ಕೆ ಹೋಗಬೇಕಿತ್ತು. ತಿಡಗುಂದಿ ಮುಟ್ಟುವಾಗ ಸಾಯಂಕಾಲವಾಗಿತ್ತು. ಡೊಮನಾಳದಿಂದ ತುಕಾರಾಮ ಅವರ ತೋಟದ ಮನೆಗೆ ಹೋಗಬೇಕಿತ್ತು. ಆಗ ಕತ್ತಲಾಯಿತು. ಕಾಲುದಾರಿಯಲ್ಲಿ ಹೋಗುವಾಗ ಅವರ ಬೆನ್ನುಹತ್ತಿದ್ದು ಮಾತ್ರ ಗೊತ್ತು. ಏನೂ ಕಾಣದಂಥ ಗಾಢವಾದ ಕತ್ತಲೆ ಅದು. ಆಗ ನಾವು ಹೋಗುತ್ತಿದ್ದುದು ನಕ್ಷತ್ರಗಳ ಮತ್ತು ಮಿಂಚುಹುಳುಗಳ ಬೆಳಕಲ್ಲಿ! ಆ ದಾರಿ ಅವರಿಗೆ ಚಿರಪರಿಚಿತವಾದುದರಿಂದ ಅವರ ಬೆನ್ನುಹತ್ತುವುದೊಂದೇ ನನ್ನ ಪಾಲಿನ ಜವಾಬ್ದಾರಿಯಾಗಿತ್ತು. ಅವರು ಮೌನವಾಗಿ ಮುಂದೆ ಮುಂದೆ ಸಾಗುತ್ತಿದ್ದರು. ನಾನು ಮೌನವಾಗಿ ಹಿಂಬಾಲಿಸುತ್ತಿದ್ದೆ. ಕೊನೆಗೂ ಅವರ ತೋಟದ ಮನೆ ಬಂದಿತು. ಅವರ ತಂದೆ, ಇಬ್ಬರು ಅಣ್ಣಂದಿರು ಅವರ ಹೆಂಡಿರು ಮತ್ತು ಮಕ್ಕಳು ಹಾಗೂ ತುಕಾರಾಮ ಅವರ ಪತ್ನಿ ನಾಗಮ್ಮ ಮನೆಯಲ್ಲಿ ಇದ್ದರು. (ಅವರದು ಬಾಲ್ಯವಿವಾಹ. ಈ ಬಗ್ಗೆ ಅವರಿಗೆ ನಿರಾಸಕ್ತಿ ಇತ್ತು ಎಂಬುದು ಬೇಗ ಗೊತ್ತಾಯಿತು.) ಅವರಿಗೆ ಈ ಅನಿರೀಕ್ಷಿತ ಭೇಟಿ ಆಶ್ಚರ್ಯಾನಂದವನ್ನುಂಟು ಮಾಡಿದವು. (ಆಗಿನ ಕಾಲದಲ್ಲಿ ಹಳ್ಳಿಯಲ್ಲಿ ಯಾವುದೇ ತೆರನಾದ ದೂರವಾಣಿ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಸಂಪರ್ಕಿಸುವುದು ಅಸಾಧ್ಯವಾಗಿತ್ತು.) ಅವರೆಲ್ಲ ಅದಾಗಲೆ ಊಟ ಮಾಡಿದ್ದರು. ಆ ಹೆಣ್ಣುಮಕ್ಕಳು ನಮ್ಮಿಬ್ಬರಿಗೆ ಸಾಕಾಗುವಷ್ಟು ಜವೆಗೋಧಿಯನ್ನು ಕುಟ್ಟಿದರು. ನಂತರ ಗೋಧಿಯನ್ನು ಬೀಸುವ ಕಲ್ಲಲ್ಲಿ ಬೀಸಿ ಚಪಾತಿ ಮಾಡಿ ಉಣಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ‘ಹೆಣ್ಣುಮಕ್ಕಳ ಧೈರ್ಯವೇ ಧೈರ್ಯ, ಅವರ ಶಕ್ತಿಯೇ ಶಕ್ತಿ’ ಎಂಬುದು ನನಗಂದೇ ಗೊತ್ತಾಯಿತು.

ಅವರ ಅಣ್ಣಂದಿರಲ್ಲಿ ಸಣ್ಣವ ಕುಸ್ತಿಪಟು ಆಗಿದ್ದ. ದೊಡ್ಡವ ಬಹಳ ಸಂಭಾವಿತನಾಗಿದ್ದು ಲೋಕವ್ಯವಹಾರದಲ್ಲಿ ತಲೆಕೆಡಿಸಿಕೊಂಡಿರಲಿಲ್ಲ. ಇಬ್ಬರೂ ತಮ್ಮ ಕುಟುಂಬಗಳ ಜೊತೆ ತೋಟ ಮತ್ತು ಹೊಲದಲ್ಲಿ ದುಡಿದು ಬದುಕುತ್ತಿದ್ದರು. ಅವರ ತಂದೆ ಬಹಳ ಮುಪ್ಪಾಗಿದ್ದರು. ಒಂದು ದಿನ ಮಧ್ಯಾಹ್ನ ಅವರ ಕೈಕಾಲು ತಿಕ್ಕಿದೆ. ಅವರು ಬಹಳ ಖುಷಿಯಿಂದ ನಕ್ಕರು. ಅಲ್ಲಿ ಮೂರ್ನಾಲ್ಕು ದಿನ ಕಳೆದದ್ದೇ ಗೊತ್ತಾಗಲಿಲ್ಲ. ಕೊನೆಯ ದಿನ ಬೇಗ ಮನೆ ಬಿಟ್ಟೆವು. ಮತ್ತೆ ಅವರ ತೋಟದಿಂದ ತಿಡಗುಂದಿಯವರೆಗೆ ನಡೆಯಬೇಕಿತ್ತು. ಡೊಮನಾಳದಲ್ಲಿ ಊರ ಗೌಡ ಸಿಕ್ಕರು. ಅವರು ತುಕಾರಾಮ ಜೊತೆ ಸಂತೋಷದಿಂದ ಮಾತನಾಡಿದರು. ಆಗಿನ ಕಾಲದಲ್ಲಿ ಒಬ್ಬ ಹಳ್ಳಿಯ ಹುಡುಗ, ಅದರಲ್ಲೂ ದಲಿತ ಹುಡುಗ ಮ್ಯಾಟ್ರಿಕ್ ಓದುತ್ತಾನೆಂದರೆ ಅವನ ಬಗ್ಗೆ ಒಳ್ಳೆಯ ಜನರು ಮೆಚ್ಚುಗೆ ವ್ಯಕ್ತಪಡಿಸುವುದು ಸಹಜವಾಗಿತ್ತು. ಅದೇರೀತಿ ಕೆಲವರು ಹೊಟ್ಟೆಕಿಚ್ಚು ಪಡುವುದು ಕೂಡ ಸಹಜವಾಗಿತ್ತು.

ಹೀಗೆ ಬಹಳ ಸಂತೋಷದೊಂದಿಗೆ ಡೊಮನಾಳದಿಂದ ವಿಜಾಪುರಕ್ಕೆ ಬಂದು ಮನೆಹೊಕ್ಕಾಗ ದುಃಖದ ಸುದ್ದಿಯೊಂದು ನನಗಾಗಿ ಕಾದಿತ್ತು. ನನ್ನ ಪ್ರೀತಿಯ ಹಸು ಗಂಗಾ ವಯೋಸಹಜ ಅನಾರೋಗ್ಯದಿಂದ ಅಸುನೀಗಿದ್ದಳು. ನಾನು ಮಗುವಾಗಿದ್ದಾಗಿಂದಲೂ ಅವಳ ಹಾಲುಂಡು ಬೆಳೆದವನಾಗಿದ್ದೆ. ಅವಳನ್ನು ಅಪ್ಪಿಕೊಂಡು ಬದುಕಿದವನಾಗಿದ್ದೆ. ಅವಳ ಸಾವು ಸಿಡಿಲೆರಗಿದಂತಾಯಿತು. ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದೆ. ಈ ಘಟನೆ ನಿನ್ನೆಯೆ ನಡೆದು ಹೋಗಿತ್ತು. ನನಗೆ ಸುದ್ದಿ ಮುಟ್ಟಿಸುವ ಯಾವ ಸಾಧ್ಯತೆಯೂ ಇಲ್ಲದ ಕಾರಣ ಮನೆಯವರಿಗೆ ಪ್ರಶ್ನಿಸುವಂಥ ಸ್ಥಿತಿಯೂ ಇರಲಿಲ್ಲ.

ನಮ್ಮ ತಂದೆ ಚಕ್ಕಡಿಯ ತೊಟ್ಟಿಲನ್ನು ತೆಗೆದು, ಅದರಲ್ಲಿ ಗಂಗೆಯ ಪಾರ್ಥಿವಶರೀರವನ್ನು ಕೂಡಿಸಿ, ಶರೀರದ ಮೇಲೆ ಹಸಿರು ಬಟ್ಟೆ ಹೊದಿಸಿ, ಹಾರ ಹಾಕಿ, ಊದುಬತ್ತಿ ಹಚ್ಚಿ, ಗಲ್ಲಿಯಲ್ಲಿ ಮೆರವಣಿಗೆ ತೆಗೆದ ನಂತರ ಆ ಪುಟ್ಟ ತೋಟದ ಬದುವಿನಲ್ಲಿ ತಗ್ಗುತೋಡಿ ಶವಸಂಸ್ಕಾರ ಮಾಡಿದ್ದನ್ನು ಕಣ್ಣಿಗೆ ಕಟ್ಟುವಂತೆ ನೆರೆಮನೆಯವರು ಹೇಳಿ ನನ್ನನ್ನು ಸಮಾಧಾನಪಡಿಸಲು ಯತ್ನಿಸಿದರು. ನನ್ನ ತಾಯಿ ತಂದೆ ಮತ್ತು ಮನೆಯವರೆಲ್ಲ ಬಹಳ ಉದಾಸವಾಗಿದ್ದರು.

ಗಂಗೆ ನಮ್ಮ ಬದುಕಿನ ಬಹುಮುಖ್ಯ ಭಾಗವಾಗಿದ್ದಳು. ನಾವೆಲ್ಲ ಆಕೆಯ ಹಾಲಿನ ಋಣದಲ್ಲಿದ್ದೆವು. ಅವಳು ಮುದಿಯಾದಮೇಲೆ ಎಷ್ಟೋ ವರ್ಷ ಬದುಕಿದಳು. ಮನೆಯವರೆಲ್ಲ ಅವಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡೆವು. ಅವಳ ಗಾಂಭೀರ್ಯ ಮತ್ತು ನಮ್ಮೆಲ್ಲರ ಬಗ್ಗೆ ಅವಳಿಗಿದ್ದ ಪ್ರೀತಿ ವರ್ಣಿಸಲಸಾಧ್ಯ. ಅದರಲ್ಲೂ ಅವಳಿಗೆ ನಾನೆಂದರೆ ಪಂಚಪ್ರಾಣ. ನನ್ನನ್ನು ಅವಳು ತನ್ನ ಮಗುವಿನಂತೆ ನೋಡಿಕೊಂಡಿದ್ದಳು. ಅಲ್ಲೀಬಾದಿಯಲ್ಲಿದ್ದಾಗ ನನ್ನನ್ನು ನೋಡಿದರೇ ಅವಳಿಗೆ ತೊರೆ ಉಕ್ಕುತ್ತಿತ್ತು. ಅವಳ ಕರುವಿನ ಹಾಗೆಯೆ ನಾನು ಮೊಲೆಹಾಲು ಕುಡಿಯುತ್ತಿದ್ದೆ. ಆ ಬೆಚ್ಚನೆಯ ಮತ್ತು ಪ್ರೀತಿ ತುಂಬಿದ ಹಾಲನ್ನು ಮರೆಯುವಂತಿಲ್ಲ.

ಮರುದಿನ ಬೆಳಿಗ್ಗೆ ಗಂಗೆಯ ಗೋರಿಯ ಬಳಿ ಹೋದೆ. ಅವಳ ಗೋರಿಯ ಮೇಲೆ ಹೊಚ್ಚಿದ ಹೊಸ ಹಸಿರು ಬಟ್ಟೆ ಮತ್ತು ಬಾಡಿದ ಹೂವಿನ ರಾಶಿಯನ್ನು ನೋಡಿ ಕಂಗಳು ತುಂಬಿ ಬಂದವು. ನನ್ನ ಬದುಕಿನ ಅಧ್ಯಾಯವೊಂದು ಮುಗಿದ ಹಾಗೆ ಅನಿಸಿತು.

ವಿಜಾಪುರದ ನಾವೆಲ್ಲ ಬರಗಾಲ ನೋಡುತ್ತಲೇ ಬೆಳೆದಿದ್ದೇವೆ. ಭೂಮಿ ಬಿಟ್ಟರೆ ವಿಜಾಪುರದವರಿಗೆ ಬೇರೆ ಗತಿ ಇರಲಿಲ್ಲ. ಹೇಳಿಕೊಳ್ಳುವಂಥ ಯಾವ ಉದ್ದಿಮೆಗಳೂ ಇರಲಿಲ್ಲ. ಗುಡಿಕೈಗಾರಿಕೆಗಳು ಮತ್ತು ಕೆಲವೊಂದು ಕಡೆ ಕೈಮಗ್ಗದಂಥ ಉದ್ಯೋಗಗಳೇ ದೊಡ್ದದಾಗಿ ಕಾಣುತ್ತಿದ್ದವು.
ಮಳೆಬೆಳೆ ಸರಿಯಾಗಿ ಆದರೆ ಬದುಕುವ ಸಮಸ್ಯೆ ಇರಲಿಲ್ಲ. ಬರಗಾಲದ ಸಂಕಷ್ಟ ಹೇಳತೀರದು. ಒಂದು ಸಲದ ಬರಗಾಲವಂತೂ ನಮ್ಮನ್ನು ಧೃತಿಗೆಡೆಸಿತ್ತು. ಜಿಗಿಬಿದ್ದ ಸಜ್ಜಿ(ಸಜ್ಜೆ)ಯೆ ನಮಗೆ ಆ ಬರಗಾಲದಲ್ಲಲಿ ಮುಖ್ಯ ಆಹಾರವಾಗಿತ್ತು. ಸಜ್ಜೆಗೆ ಜಿಗಿ ಎಂಬ ವಿಷ ಮುತ್ತಿಕೊಂಡಿದ್ದರಿಂದ ಹಾಗೇ ಬೀಸಿ ತಿಂದರೆ ಸಾವೇ ಗತಿ. ಆ ಸಜ್ಜೆಯನ್ನು ರಾತ್ರಿ ನೆನೆಯಿಟ್ಟು ನೀರಿನಲ್ಲಿ ವಿಷ ಬಿಡುವಂತೆ ಮಾಡಬೇಕು. ಬೆಳಿಗ್ಗೆ ಮತ್ತೆ ಚೆನ್ನಾಗಿ ನೀರಲ್ಲಿ ತೊಳೆದನಂತರ ಒಣಗಿಸಿಯಾದಮೇಲೆ ಬೀಸುವ ಕಲ್ಲಲ್ಲಿ ಬೀಸಿದ ನಂತರ ಅಮ್ಮ ರೊಟ್ಟಿ ಬಡಿಯವ ವೇಳೆ ಮಧ್ಯಾಹ್ನವಾಗುತ್ತಿತ್ತು. ಅಲ್ಲಿಯವರೆಗೆ ಹಸಿವನ್ನು ತಾಳಿಕೊಂಡಿರುವುದೇ ಮಹಾಸಾಹಸವಾಗಿತ್ತು. ನಮಗೆಲ್ಲ ಒಂದೂವರೆ ರೊಟ್ಟಿ ಸಿಗುತ್ತಿತ್ತು. ನನ್ನ ತಾಯಿಗೆ ಒಂದು ರೊಟ್ಟಿ ಸಿಕ್ಕರೆ ಅದು ಅವಳ ಸುದೈವ ಎಂದೇ ಭಾವಿಸಬೇಕು. ಎಂಟು ಜನ ಮಕ್ಕಳನ್ನು ಅದು ಹೇಗೆ ಸಾಕಿದರೋ ಆಶ್ಚರ್ಯವೆನಿಸುತ್ತದೆ. ರೊಟ್ಟಿಯ ಜೊತೆ ಹಸಿಮೆಣಸಿನಕಾಯಿ ಹಾಕಿ ತಯಾರಿಸಿದ ಖಾರಬ್ಯಾಳಿ (ದಾಲ್)ಯಿಂದ ಹೊಟ್ಟೆ ತೊಳಸಿದಂತಾಗುತ್ತಿತ್ತು. ಜಿಗಿಬಿದ್ದ ಸಜ್ಜೆ ಅರ್ಧಬೆಲೆಗೆ ಸಿಗುತ್ತಿದ್ದುದರಿಂದ ಬಡವರಿಗೆ ಅದೇ ಅಮೃತವಾಗಿತ್ತು. ಅದನ್ನು ಪಡೆಯಲು ಕೂಡ ಬಡವರು ಹೆಣಗಬೇಕಿತ್ತು.

ಬರಗಾಲ ಎಷ್ಟು ಭಯಂಕರವೆಂದರೆ ರೈತರು ಮಹಾರಾಷ್ಟ್ರದ ಕಸಾಯಿಖಾನೆಗಳಿಗೆ ಮಾರುವ ದನಗಳಿಗೆ ಲೆಕ್ಕವಿದ್ದಿಲ್ಲ. ಆ ಕಸಾಯಿಖಾನೆಗಳವರಿಗೆ ಇಂಥ ಬರಗಾಲಗಳು ದೊಡ್ಡ ಸುಗ್ಗಿಯ ಹಾಗೆ ಕಾಣುತ್ತಿದ್ದವು. ವಿಜಾಪುರದಿಂದ ಸೋಲಾಪುರ ಕೇವಲ ನೂರು ಕಿಲೋಮೀಟರ್. ಮಹಾರಾಷ್ಟ್ರದ ಕಸಾಯಿಖಾನೆಯವರು ಜಾನುವಾರು ಖರೀದಿಸಲು ತಮ್ಮ ಸಿಬ್ಬಂದಿಯನ್ನು ಕಳಿಸಿ ಸಾವಿರಾರು ದನಗಳನ್ನು ಸಂಗ್ರಹಿಸಿ ರಾಜ್ಯ ಹೆದ್ದಾರಿಗುಂಟ ಉಪವಾಸ ನಡೆಸಿಕೊಂಡು ಹೋಗುತ್ತಿರುವ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. (ಕಟುಕರು ಪ್ರಾಣಿಗಳ ವಧೆ ಮಾಡುವ ಮೊದಲು ಉಪವಾಸ ಕೆಡುವುತ್ತಾರೆ. ಬಹುಶಃ ಅವುಗಳ ಬೊಜ್ಜು ಕರಗಿಸಲು ಹೀಗೆ ಮಾಡುತ್ತಿರಬಹುದು.)

ಕೃಷಿ ಉತ್ಪನ್ನಗಳಿಲ್ಲದೆ ಅಡತಿ ಅಂಗಡಿಗಳು ಬಿಕೊ ಎನ್ನುತ್ತಿದ್ದವು. ಒಂದುದಿನ ಸಣ್ಣ ಕೂಲಿಯೊಂದರಿಂದ ಎಂಟಾಣೆ ಸಿಕ್ಕಾಗ ನನ್ನ ತಂದೆ ಆ ಹಣದಿಂದ ಪಾವ್ ಕಿಲೊ ಅಕ್ಕಿ ತಂದರು. ನಾವೆಲ್ಲ ನಾಲ್ಕು ತುತ್ತು ಅನ್ನ ತಿಂದೆವು. ಅವರು ಆ ಎಂಟಾಣೆಯನ್ನು ಹೊಟೆಲ್‍ಗೆ ಹೋಗಿ ಖರ್ಚು ಮಾಡಲಿಲ್ಲ. ಕಾಳಜಿ ವಹಿಸುವ ಪಾಲಕರ ಮಕ್ಕಳೇ ನಿಜವಾದ ಶ್ರೀಮಂತ ಮಕ್ಕಳು ಎಂದು ನನಗೆ ಅನೇಕ ಸಲ ಅನಿಸಿದೆ.
ನನ್ನ ತಂದೆ ಆಗ ಎಲ್ಲ ದನಗಳನ್ನು ಕೈಗೆ ಬಂದ ದರದಲ್ಲಿ ಮಾರಿದರೂ ಎರಡು ಹೋರಿಗಳನ್ನು ಉಳಿಸಿಕೊಂಡಿದ್ದರು. ಅವು ಅವರ ಪ್ರೀತಿಯ ಹೋರಿಗಳಾಗಿದ್ದವು. ಜನ ನಿಂತು ನೋಡುವ ಹಾಗೆ ಅವುಗಳನ್ನು ಬೆಳೆಸಿದ್ದರು. ಫರ್ಲಾಂಗ್ ದೂರದ ಖಾನಾವಳಿಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಮುಸುರಿಯನ್ನು ಎರಡು ಬಕೆಟ್‌ಗಳಲ್ಲಿ ತುಂಬಿಕೊಂಡು ಬಂದು ಕಲಗಚ್ಚಿನಲ್ಲಿ ಹಾಕಿ ಕುಡಿಸುತ್ತಿದ್ದರು.

ನನ್ನ ತಾಯಿ ಮತ್ತು ಅಜ್ಜಿ ಲಾಲಬಿ ಏನೇನೋ ಪ್ರಯತ್ನ ಮಾಡಿ ಒಂದಿಷ್ಟು ಅರೆಬರೆ ಊಟದ ವ್ಯವಸ್ಥೆ ಮಾಡುತ್ತಿದ್ದರು. ಆ ಬರಗಾಲದಲ್ಲಿ ಹೋರಿಗಳನ್ನು ಉಳಿಸಿಕೊಳ್ಳುವುದೇ ನನ್ನ ತಂದೆಗೆ ಸವಾಲಾಗಿತ್ತು. ಅವರು ಅವುಗಳಿಗಾಗಿ ಒಂದು ಸೂಡು ಕಣಿಕೆಗಾಗಿ ಒದ್ದಾಡುತ್ತಿದ್ದರು. ನಮಗೋ ಎಲ್ಲಿಲ್ಲದ ಸಿಟ್ಟು. ‘ನಾವಿಲ್ಲಿ ಸಾಯುತ್ತಿದ್ದೇವೆ ನಿನಗೆ ಆ ಹೋರಿಗಳದ್ದೇ ಚಿಂತೆ’ ಎನ್ನುವ ಹಾಗೆ ಬೇಸರ ವ್ಯಕ್ತಪಡಿಸುತ್ತಿದ್ದೆವು. ಅವರು ಒಳಗೊಳಗೆ ನೊಂದುಕೊಂಡರೂ ಕೇಳಿಯೂ ಕೇಳದ ಹಾಗೆ ಸುಮ್ಮನಿರುತ್ತಿದ್ದರು. ಪ್ರತಿದಿನ ಏನಾದರೂ ಮಾಡಿ ಒಂದುಸೂಡು ಕಣಿಕೆಯನ್ನೋ ಒಂದಿಷ್ಟು ಹುಲ್ಲನ್ನೋ ಸಂಗ್ರಹಿಸುವುದೇ ಅವರ ಜೀವನದ ಗುರಿಯಾಗಿತ್ತು. ಏನಾದರೂ ಮಾರಬೇಕೆಂದರೆ ಮಾರುವಂಥ ವಸ್ತು ಯಾವುದೂ ಇರಲಿಲ್ಲ. ನಮ್ಮ ತಂದೆಯ ಇನ್‌ಸೈಟ್ ಬಿಟ್ಟರೆ ಒಂದು ಸೈಟೂ ಇರಲಿಲ್ಲ. ಅವರಿಗೆ ಒಂದು ತುಂಡು ಸ್ವಂತದ ಹೊಲವೂ ಇರಲಿಲ್ಲ. ಮನೆತನದ ಆಸ್ತಿಯಾಗಿ ಪುರಾತನ ಕಾಲದ ಒಂದು ರುಳಿ ಇತ್ತು. ಅದನ್ನು ಬಹಳ ಜೋಪಾನವಾಗಿ ಉಳಿಸಿಕೊಂಡಿದ್ದರು. ಅದರಲ್ಲಿ ಬಹುಶಃ ಅರ್ಧಕಿಲೊ ಬೆಳ್ಳಿ ಇದ್ದಿರಬೇಕು. ಮನೆಯಲ್ಲಿ ಯಾರೂ ಅದನ್ನು ಮಾರುವ ಯೋಚನೆ ಮಾಡಲಿಲ್ಲ. (ಹಳ್ಳಿಯಲ್ಲಿ ಅವರ ತಂದೆಯ ಒಂದು ಸ್ವಲ್ಪ ದೊಡ್ಡದಾದ ಮಣ್ಣಿನ ಮನೆ ಇದ್ದರೂ ಇಬ್ಬರು ತಮ್ಮಂದಿರರಿಗೆ ಮತ್ತು ವಿಧವೆ ಅಕ್ಕನಿಗೆ ಬಿಟ್ಟುಕೊಟ್ಟಿದ್ದರು. ಹಾಗೆನ್ನುವುದಕ್ಕಿಂತಲೂ ಅದನ್ನು ಅವರ ಮನಸ್ಸಿನಿಂದ ತೆಗೆದುಹಾಕಿದ್ದರು.)

ಈಗ ಮಾರುವ ವಸ್ತುಗಳೆಂದರೆ ಆ ಎರಡು ಹೋರಿಗಳು ಮಾತ್ರ. ತಂದೆಗೆ ಹೋರಿಗಳೇ ಪ್ರಾಣವಾಗಿದ್ದವು. ನಮ್ಮ ಕಿರಿಕಿರಿ ಒಂದಿಲ್ಲೊಂದು ರೀತಿಯಲ್ಲಿ ದಿನವೂ ಇರುತ್ತಿತ್ತು. ಕೊನೆಗೆ ಬಹಳ ಬೇಸರದಿಂದ ತಂದೆ ಅವುಗಳನ್ನು ಮಾರಲು ತಯಾರಾದರು. ಒಬ್ಬ ರೈತ ಕೊಳ್ಳಲು ಬಂದ. ಆತ ಏಳುನೂರು ರೂಪಾಯಿಗೆ ಬೇಡಿದ. ಆಗ ನನ್ನ ತಂದೆ ಆ ರೈತನ ಊರು, ಹೊಲ ಮನೆ ಕುರಿತು ವಿಚಾರಿಸಿದರು. ಆತ ರೀತಿನೀತಿ ಉಳ್ಳವ ಎಂಬುದು ನನ್ನ ತಂದೆಗೆ ಮನವರಿಕೆಯಾಯಿತು. ‘ನೀವು ಕೊಡುವ ಹಣ ನನಗೆ ಮುಖ್ಯವಲ್ಲ. ನಿಮಗೆ ಹೆಚ್ಚಿಗೆ ಕೊಡಲು ಕೇಳುವುದೂ ಇಲ್ಲ. ನೀವು ಹೋರಿಗಳನ್ನು ಹೇಗೆ ನೋಡಿಕೊಳ್ಳುವಿರಿ ಎಂಬುದು ಮುಖ್ಯ. ಈಗ ಹೋರಿಗಳನ್ನು ಒಯ್ಯಿರಿ. ನಾನು ವಾರ ಕಳೆದ ಮೇಲೆ ಬಂದು ನೋಡುವೆ. ನೀವು ಚೆನ್ನಾಗಿ ನೋಡಿಕೊಂಡಿದ್ದರೆ ಹಣ ತೆಗೆದುಕೊಳ್ಳುವೆ. ಇಲ್ಲದಿದ್ದರೆ ಹೋರಿಗಳನ್ನು ವಾಪಸ್ ಕರೆದುಕೊಂಡು ಬರುವೆ’ ಎನ್ನುವ ರೀತಿಯಲ್ಲಿ ಹೇಳಿ ಹೋರಿಗಳನ್ನು ಕೊಟ್ಟರು. ಆತ ಹೊಡೆದುಕೊಂಡು ಹೋದ.

ನಮಗೋ ಏಳು ದಿನಗಳೆಂದರೆ ಏಳು ತಿಂಗಳುಗಳ ಹಾಗೆ ಆಯಿತು. ಕೊನೆಗೂ ಆ ದಿನ ಬಂದಿತು. ನನ್ನ ತಂದೆ ಆ ರೈತನ ಹಳ್ಳಿಗೆ ಹೋದ. ಅವನ ಹೊಲದಲ್ಲಿ ಕಾಲಿಡುತ್ತಲೆ ಆ ರೈತ ಗಳೆ ಹೊಡೆಯುವುದನ್ನು ನೋಡಿದ. ಆ ಹೋರಿಗಳು ನನ್ನ ತಂದೆಯನ್ನು ನೋಡಿದ ಕೂಡಲೆ ಗಳೆ ಸಮೇತ ಓಡಿ ಬಂದವು. ನನ್ನ ತಂದೆ ಅವುಗಳ ಕೊರಳಿಗೆ ಬಿದ್ದು ಅತ್ತ. ಅವುಗಳ ಕಣ್ಣಲ್ಲೂ ನೀರು. ಅವುಗಳ ಮೈ ತಿಕ್ಕಿದ. ಅವುಗಳನ್ನು ಆ ರೈತ ಬಹಳ ಚೆನ್ನಾಗಿ ನೋಡಿಕೊಂಡಿದ್ದ. ಹೊಲದಲ್ಲಿನ ಮನೆಗೆ ಕರೆದುಕೊಂಡು ಹೋಗಿ ಕುಸುಬಿ ಹಿಂಡಿ, ಕಣಿಕೆ ಮುಂತಾದ ದನಗಳ ಪೌಷ್ಟಿಕ ಆಹಾರವನ್ನು ತೋರಿಸಿದ. ಹೋರಿಗಳು ಇಲ್ಲಿ ಸುಖದಿಂದ ಇರುತ್ತವೆ ಎಂದು ನನ್ನ ತಂದೆಗೆ ಅನಿಸಿತು. ಬಹಳ ಸಮಾಧಾನಪಟ್ಟರು. ಆತ ತನ್ನ ಮಾತಿನಂತೆ 700 ರೂಪಾಯಿ ಕೊಡಲು ಬಂದ. ಖುಷಿಯಾಗಿದ್ದ ನನ್ನ ತಂದೆ ಅಂಥ ಬರಗಾಲದಲ್ಲೂ 50 ರೂಪಾಯಿ ವಾಪಸ್ ಕೊಟ್ಟರು. ಆ ರೈತ ಎಷ್ಟು ಬೇಡ ಎಂದರೂ ಕೇಳಲಿಲ್ಲ.

(ಚಿತ್ರಗಳು: ಸುನೀಲಕುಮಾರ ಸುಧಾಕರ)