ಬಹಳಷ್ಟು ಪಬ್‌ಗಳು ಹತ್ತು, ಹನ್ನೆರಡನೇ ಶತಮಾನದಲ್ಲಿ ಡಬ್ಲಿನ್ ಬೀದಿಗಳಲ್ಲಿ ತಲೆದೋರಿದವು. ಮುಂದೆ ಇವು ಸಮಾನ ಆಸಕ್ತರ ಕೇಂದ್ರಗಳಾಗಿ ಸಾಮಾಜಿಕ ಹರಟೆಕಟ್ಟೆಗಳಾಗಿ ಬೆಳೆದವು. ಕೆಲವು ಪಬ್‌ಗಳಲ್ಲಿ ಬರೀ ವ್ಯಾಪಾರಸ್ಥರು ಸೇರಿಕೊಂಡರೆ, ಮತ್ತೆ ಹಲವು ಸಂಗೀತಗಾರರ ಕೇಂದ್ರಗಳಾದವು. ಮತ್ತೆ ಹಲವು ಸಾಹಿತಿಗಳೂ ಕವಿಗಳೂ ಸೇರುವ ಸ್ಥಳಗಳಾದವು. ಮತ್ತೆ ಕೆಲವು ರಾಜಕೀಯದವರು, ಗಣ್ಯರು, ಶ್ರೀಮಂತರು ಸೇರುವ ಜಾಗಗಳು… ಹೀಗೆ ಅಂದಿನಿಂದ ಇಂದಿನವರೆಗೂ ಕಾರ್ಯನಿರತವಾಗಿರುವ ಹಲವು ಬಗೆಯ ಪಬ್‌ಗಳು ಡಬ್ಲಿನ್‌ನಲ್ಲಿ ಕಾಣಸಿಗುತ್ತವೆ. ಈ ಪಬ್‌ಗಳಲ್ಲಿ ಬಹಳಷ್ಟು ಸಾಮಾಜಿಕ ಕ್ರಾಂತಿಗಳೂ ನಡೆದವು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿ ಹೆಗಡೆ ಐರಿಷ್ ಪಬ್‌ಗಳ ಇತಿಹಾಸದ ಕುರಿತು ಬರೆದಿದ್ದಾರೆ

ಹಾಸುಗಲ್ಲಿನ ಹಾದಿ, ಇಕ್ಕೆಲಗಳಲ್ಲಿ ಚಿಕ್ಕ ಚಿಕ್ಕ ಬಣ್ಣ ಬಣ್ಣದ ಪಬ್, ರೆಸ್ಟೋರೆಂಟ್‌ಗಳಿಂದ ತುಂಬಿರುವ ಗಲ್ಲಿಗಳು. ನಡುನಡುವೆ ಮನೆಗಳು, ಆ ಮನೆಗಳ ಬಣ್ಣದ ಬಾಗಿಲುಗಳು, ಇದು ಹಳೆಯ ಡಬ್ಲಿನ್. ಈ ಇಡೀ ಊರು, ಊರಿನ ಕಟ್ಟಡಗಳು, ಸಂದಿಗೊಂದಿಗಳೆಲ್ಲ ಸಾವಿರಾರು ವರ್ಷ ಹಳೆಯವು. ಎಲ್ಲ ಅಂಗಡಿ, ಪಬ್‌ಗಳ ಮುಂದೂ ಕಟ್ಟಲ್ಪಟ್ಟ ಇಸವಿಯ ಗುರುತು ಹುಡುಕಿದರೆ ಸಿಗುತ್ತದೆ. ಒಂದಷ್ಟು ಅಂಗಡಿಗಳು ಲಘು ಉಪಹಾರ ಒದಗಿಸಿದರೆ, ಮತ್ತೆ ಹಲವು ರೆಸ್ಟೋರೆಂಟುಗಳು ಐಷಾರಾಮಿ ಆತಿಥ್ಯದವು. ಆದರೆ ಬಹುತೇಕ ಪಬ್‌ಗಳು ಇಲ್ಲಿ ಊಟ ತಿಂಡಿ ಕಾಫಿ, ಬಿಯರು, ವಿಸ್ಕಿ ಎಲ್ಲವನ್ನೂ ಒದಗಿಸುವ ವಿಶಿಷ್ಟ ಐರಿಷ್ ಪಬ್‌ಗಳು.

ಕಾಶಿಗೆ ಹೋಗಿ ಗಂಗೆ ನೋಡದೆ ಬಂದರೆ ಹೇಗೋ, ಡಬ್ಲಿನ್‌ಗೆ ಹೋಗಿ ಪಬ್ಬೊಂದರಲ್ಲಿ ಕೂರದೆ ಬಂದರೆ ಅದು ಅಷ್ಟೇ ಹಾಸ್ಯಾಸ್ಪದ. ಇಂದು ಜಗತ್ತಿನಾದ್ಯಂತ ಹರಡಿರುವ “ಪಬ್” ಸಂಸ್ಕೃತಿಯ ಹುಟ್ಟುನೆಲವಿದು. ಅಂದಿನ ಪಬ್ ಇಂದಿನ ಬಾರ್ ಆಗಿರುವ ಹಾದಿಯಲ್ಲಿ ಸಾಕಷ್ಟು ಬಿಯರು ಹರಿದು ಹೋಗಿದೆ. ಆದರೆ ಡಬ್ಲಿನ್ನಿನ ಬೀದಿಯಲ್ಲಿ ಇಂದಿಗೂ ಅದೇ ಹಳೆಯ ಹಾಸುಗಲ್ಲುಗಳ ದಾರಿ ಶತಮಾನಗಳ ಬಿಯರು ಹೀರಿ ಡಬ್ಲಿನ ಛಳಿಯ ಬೆಚ್ಚಗಾಗಿಸುತ್ತ ಮಲಗಿದೆ. ನಡೆದಾಡಲು ಮಾತ್ರ ಅವಕಾಶವಿರುವ ಹಾಸುಗಲ್ಲಿನ ಹಳೆಯ ಬೀದಿಯ ತುಂಬೆಲ್ಲ ಬಣ್ಣದ ಬಾಗಿಲುಗಳ ಹಿಂದಿನ ಸಾವಿರಾರು ಕಥೆಗಳಿವೆ.

ಇಂದಿನ ರೆಸ್ಟೋರೆಂಟ್ ಎಂಬ ಮಾದರಿಯ ಊಟದಮನೆಗಳು ಹಲವು ಸಂಸ್ಕೃತಿಗಳಲ್ಲಿ ಹಲವು ಬಗೆಯಲ್ಲಿ ಹಲವೆಡೆಗಳಲ್ಲಿ ಹುಟ್ಟಿಕೊಂಡಿದ್ದು ಮಾನವ ವಿಕಾಸದ ಹಾದಿ. ಅವಕ್ಕೊಂದು ಸಿದ್ಧ ಚೌಕಟ್ಟೇನೂ ಇರಲಿಲ್ಲ. ಆದರೆ ರೆಸ್ಟೋರೆಂಟ್ ಅಥವಾ ಮೂಲದಲ್ಲಿ “ಟಾವೆರ್ನ್” ಎಂದು ಕರೆಯಲ್ಪಡುವ ಸ್ಥಳಗಳನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ್ದು ರೋಮನ್ನರು. ರೋಮನ್ ಸಾಮ್ರಾಜ್ಯಶಾಹಿ ಶಕ್ತಿ ಇಂಗ್ಲೆಂಡ್, ಐರ್ಲ್ಯಾಂಡನ್ನು ತಲುಪಿದಾಗ ಅವರಿಗೆ ಆಶ್ಚರ್ಯವೊಂದು ಕಾಡಿತ್ತು. ಅಲ್ಲಿ ಅದಾಗಲೇ, ಜನಜನಿತವಿದ್ದ, ಸುಲಲಿತವಾಗಿ ಕಾರ್ಯಾಚರಣೆಯಲ್ಲಿದ್ದ “ಪಬ್ಲಿಕ್ ಹೌಸ್” ಚಿಕ್ಕದಾಗಿ ಅದೇ, “ಪಬ್”!

ಸುಮಾರು ಒಂಬತ್ತನೇ ಶತಮಾನದ ಕೊನೆಯಲ್ಲಿ ಆರಂಭವಾದವುಗಳು ಈ ಪಬ್‌ಗಳು. ೧೧೯೮ನೇ ಇಸವಿಯಲ್ಲಿ ಆರಂಭವಾದ “ಬ್ರೇಝನ್ ಹೆಡ್” ಪಬ್ ಇಂದಿಗೂ ಬಿಯರು ಬಸಿಯುತ್ತಿದೆ. ಹತ್ತನೇ ಶತಮಾನದಲ್ಲಿ ಆರಂಭಿಸಲ್ಪಟ್ಟದ್ದೆಂದು ಹೇಳುವ ಹಳೆಯ ಪಬ್ಬೊಂದು ಹಲವು ಹೆಸರು ಬದಲಾವಣೆಗಳೊಂದಿಗೆ ಐರ್ಲೆಂಡ್‌ನ ಚಿಕ್ಕ ಊರೊಂದರಲ್ಲಿದೆ. ಹಾಗೆ ನೋಡಿದರೆ, “ಬ್ರೆಝನ್ ಹೆಡ್” ಅಂದಿನಿಂದ ಇಂದಿನವರೆಗೂ ಹಾಗೆಯೆ ಇರುವ ಇತಿಹಾಸದ ತುಣುಕೊಂದು ತನ್ನಸುತ್ತಲಿನದೆಲ್ಲ ಬದಲಾಗುತ್ತಿರುವುದನ್ನು ನಿರುಕಿಸುತ್ತ ನಿಂತ ಜಗತ್ತಿನ ಅತ್ಯಂತ ಹಳೆಯ ಪಬ್.

ಏನಿವು ಪಬ್? ಪಬ್ ಎಂದರೆ ಪಬ್ಲಿಕ್ ಹೌಸ್. ಇವು ಹುಟ್ಟಿಕೊಂಡಿದ್ದು ಅನಿವಾರ್ಯವಾಗಿ ಹೊಟ್ಟೆಯ ಅವಶ್ಯಕತೆಗಳ ಪೂರೈಕೆಗಾಗಿ. ಇವು ಒಂದು ಬಗೆಯ ಹಾಸ್ಟೆಲ್‌ಗಳು. ದಾರಿಹೋಕರಿಗೆ ಒಂದು ರಾತ್ರಿಯ ಛಾವಣಿ, ಜೊತೆಗೊಂದಿಷ್ಟು “ಏಲ್” ಮತ್ತು ಎರಡೊತ್ತಿನ ಊಟ ಒದಗಿಸುತ್ತಿದ್ದ ಅರವಟ್ಟಿಗೆಗಳು. ವ್ಯವಸ್ಥೆಗೆ ತಕ್ಕಂತೆ ಅಷ್ಟೋ ಇಷ್ಟೋ ಎಂದು ಪ್ರಯಾಣಿಕರು ಹಣ ಸಂದಾಯ ಮಾಡುವುದು ರೂಢಿಯಲ್ಲಿತ್ತು. ಆಗೆಲ್ಲ ಮನೆಯಲ್ಲಿ ಹೆಂಗಸರು ಹೇಗೆ ರೊಟ್ಟಿ ಬಡಿಯುತ್ತಿದ್ದರೋ, ಬ್ರೆಡ್ ಬೇಯಿಸುತ್ತಿದ್ದರೋ, ಬಿಯರು ಕಾಸುವುದು ಕೂಡ ಅವರದ್ದೇ ಕೆಲಸವಾಗಿತ್ತು. ಪ್ರತಿ ಮನೆಯಲ್ಲೂ ಏಲ್ ತಯಾರಿಕೆ ಹೆಂಗಸರ ಹೊಣೆ.

ಅಂದಿನ ಈ ಪಬ್ಲಿಕ್ ಹೌಸ್‌ಗಳೆಲ್ಲವೂ ಬಹುತೇಕ ಹೆಂಗಸರೇ ನಡೆಸುತ್ತಿದ್ದ ವ್ಯಾಪಾರ. ಬಡವರು, ವಿಧವೆಯರು ತಮ್ಮ ಕೌಟುಂಬಿಕ ಕಷ್ಟ ಪರಿಹಾರಕ್ಕೆಂದು, ಪ್ರಯಾಣಿಕರಿಗೆ ಊಟ ತಿಂಡಿ, ಏಲ್ ಒದಗಿಸಲು ತಮ್ಮ ಮನೆಯ ಒಂದಷ್ಟು ಭಾಗಗಳನ್ನು ಮಾರ್ಪಡಿಸಿ, ಆ ಭಾಗಕ್ಕೆ “ಪಬ್ಲಿಕ್ ಹೌಸ್” ಎಂದು ಹೆಸರಿಸಿದ್ದರಿಂದಾಗಿ ಹುಟ್ಟಿಕೊಂಡವು ಪಬ್. ಹೀಗೆ ಆರಂಭವಾದ ಪಬ್‌ಗಳನ್ನು ನಡೆಸುವವರೆಲ್ಲರೂ ಬಹುತೇಕ ನಿರಕ್ಷರಸ್ಥ ಹೆಂಗಸರು. ಓದು ಬರೆಹ ಬಾರದ ಅವರು ತಮ್ಮ ಮನೆಗಳ ಮುಂದೆ ಗುರುತಿಗಾಗಿ ವಿಶಿಷ್ಟವಾದ ಕಲಾಕೃತಿಯನ್ನೋ, ಇಲ್ಲವೇ ಚಿತ್ರಪಟವನ್ನೋ ತೂಗುಹಾಕಿದರು. ದಾರಿಹೋಕರು ಕೇಳಿದರೆ ಸುಲಭದಲ್ಲಿ ಹೇಳಬಹುದಲ್ಲಾ!

“ಈ ತೂಗುಕತ್ತಿ ಪಬ್ಲಿಕ್ ಹೌಸ್ ಎಲ್ಲಿದೆ?”

“ಕರಡಿ ಪಾದದ ಪಬ್‌ನಲ್ಲಿ ಸೂಪ್ ಚೆನ್ನಾಗಿರುತ್ತಂತೆ.”

“ತೋಳದ ತಲೆಯ ಪಬ್‌ನಲ್ಲಿ ಬರೀ ಕವಿಗಳೇ ತುಂಬಿಕೊಂಡಿರುತ್ತಾರಂತೆ.”

“ಮೂರು ಕೋಡಿನ ಆಡಿನ ಪಬ್‌ನಲ್ಲಿ ದರ ಜಾಸ್ತಿ.”

“ಹಾರುವ ಕುದುರೆ” ಪಬ್ ಒಡತಿ ಬಲು ಜೋರು, ಹುಷಾರು..

ಹೀಗೆ ಪಬ್‌ಗಳು ತಮ್ಮ ಮನೆ ಮುಂದಿನ ಚಿತ್ರವಿಚಿತ್ರ ಗುರುತಿನಿಂದಾಗಿ ಹೆಸರಿಸಲ್ಪಟ್ಟವು. ಇಂದಿಗೂ ನೀವು ಗಮನಿಸಿದರೆ, ಅವನ್ನು ಅಕ್ಷರದಲ್ಲಿ ಬರೆದರೂ ಐರಿಷ್ ಪಬ್‌ಗಳ ಹೆಸರುಗಳು ಬೇರೆಯೇ ಆದ ನಿಗೂಢತೆಯನ್ನು ಹೊಂದಿದವುಗಳು.

ಹೀಗೆ ಆರಂಭವಾದ ಪಬ್‌ಗಳನ್ನು ನಡೆಸುವವರೆಲ್ಲರೂ ಬಹುತೇಕ ನಿರಕ್ಷರಸ್ಥ ಹೆಂಗಸರು. ಓದು ಬರೆಹ ಬಾರದ ಅವರು ತಮ್ಮ ಮನೆಗಳ ಮುಂದೆ ಗುರುತಿಗಾಗಿ ವಿಶಿಷ್ಟವಾದ ಕಲಾಕೃತಿಯನ್ನೋ, ಇಲ್ಲವೇ ಚಿತ್ರಪಟವನ್ನೋ ತೂಗುಹಾಕಿದರು. ದಾರಿಹೋಕರು ಕೇಳಿದರೆ ಸುಲಭದಲ್ಲಿ ಹೇಳಬಹುದಲ್ಲಾ!

ಇಂಥ ಬಹಳಷ್ಟು ಪಬ್‌ಗಳು ಹತ್ತು, ಹನ್ನೆರಡನೇ ಶತಮಾನದಲ್ಲಿ ಡಬ್ಲಿನ್ ಬೀದಿಗಳಲ್ಲಿ ತಲೆದೋರಿದವು. ಮುಂದೆ ಇವು ಸಮಾನ ಆಸಕ್ತರ ಕೇಂದ್ರಗಳಾಗಿ ಸಾಮಾಜಿಕ ಹರಟೆಕಟ್ಟೆಗಳಾಗಿ ಬೆಳೆದವು. ಕೆಲವು ಪಬ್‌ಗಳಲ್ಲಿ ಬರೀ ವ್ಯಾಪಾರಸ್ಥರು ಸೇರಿಕೊಂಡರೆ, ಮತ್ತೆ ಹಲವು ಸಂಗೀತಗಾರರ ಕೇಂದ್ರಗಳಾದವು. ಮತ್ತೆ ಹಲವು ಸಾಹಿತಿಗಳೂ ಕವಿಗಳೂ ಸೇರುವ ಸ್ಥಳಗಳಾದವು. ಮತ್ತೆ ಕೆಲವು ರಾಜಕೀಯದವರು, ಗಣ್ಯರು, ಶ್ರೀಮಂತರು ಸೇರುವ ಜಾಗಗಳು… ಹೀಗೆ ಹಲವು ಬಗೆಯ ಪಬ್‌ಗಳು ಅಂದಿನಿಂದ ಇಂದಿನವರೆಗೂ ಕಾರ್ಯನಿರತವಾಗಿರುವ ಅವುಗಳು ಡಬ್ಲಿನ್‌ನಲ್ಲಿ ಕಾಣಸಿಗುತ್ತವೆ. ಈ ಪಬ್‌ಗಳಲ್ಲಿ ಬಹಳಷ್ಟು ಸಾಮಾಜಿಕ ಕ್ರಾಂತಿಗಳೂ ನಡೆದವು. ಐರಿಶ್ ಪಬ್‌ಗಳಲ್ಲಿ ಹುಟ್ಟಿಕೊಂಡ ಸಾಹಿತಿಗಳ ಪಟ್ಟಿಯೇ ಇದೆ. ಕ್ರಾಂತಿಯ ದಾಖಲೆಗಳೂ ಇವೆ. ಇಂದಿಗೂ ನೀವು ಡಬ್ಲಿನ್‌ನಲ್ಲಿ “ಪೊಯೆಟ್ರಿ ಪಬ್ ಟೂರ್” ನೋಡಬಹುದು.
ಈ ಟೂರ್ ನಿಮ್ಮನು ಶತಮಾನಗಳ ಹಾದಿಯಲ್ಲಿ ಐರ್ಲ್ಯಾಂಡ್‌ ಸಾಹಿತ್ಯಲೋಕ ಬೆಳೆದುಬಂದ ಹಾದಿಯಲಿ ಸಾಗಿದ ಎಲ್ಲ ಪಬ್‌ಗಳನ್ನೂ ಹೊಕ್ಕು ಹೊರಡುವ ವಾಕಿಂಗ್ ಟೂರ್. ಪ್ರಖ್ಯಾತ ಕಾದಂಬರಿ ಯುಲಿಸ್ಸಿಸ್‌ನಲ್ಲಿ ಬ್ರೆಜನ್ ಹೆಡ್ ಪಬ್ ಅನ್ನು ಕಾದಂಬರಿಕಾರ ಜೇಮ್ಸ್ ಜಾಯ್ಸ್ ಉಲ್ಲೇಖಿಸಿದ್ದಾನೆ. ಇಂದಿಗೂ ಇಲ್ಲಿನ ಎಲ್ಲ ಪಬ್‌ಗಳಲ್ಲೂ ಲೈವ್ ಸಂಗೀತವಿರುತ್ತದೆ. ಸ್ಥಳೀಯ ಯಾವುದೊ ಪುಟ್ಟ ಬ್ಯಾಂಡ್, ಇಲ್ಲ ಹಾಡುಗಾರರಿಗೆ ತಮ್ಮ ಪ್ರತಿಭಾ ಪ್ರದರ್ಶನದ ಕೇಂದ್ರಗಳು ಇವು. ತನ್ನ ಹುಟ್ಟಿನ ಇತಿಹಾಸದಿಂದಾಗಿಯೇ ಏನೋ, ಐರಿಷ್ ಪಬ್‌ನಲ್ಲಿ ಬರೀ ಪಾನೀಯ ಸವಿಯುವುದಕ್ಕಿಂತ ಹೆಚ್ಚಿನ ಅನುಭವವೂ, ಅನುಭಾವವೂ ಇದೆ.

ಒಂದು ದಾಖಲೆಯ ಪ್ರಕಾರ 1760ರಷ್ಟರಲ್ಲಿ ಡಬ್ಲಿನ್ 2300 ಪಬ್‌ಗಳನ್ನು ಹೊಂದಿತ್ತು! ಈಗ ಸುಮಾರು 780 ಪಬ್ ಇವೆಯೆಂಬ ಅಂದಾಜು. ಹದಿನೇಳನೇ ಶತಮಾನದಲ್ಲಿ ಕೆಲವು ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಲು ಲೈಸೆನ್ಸ್ ಕೊಡಲಾಯಿತು. ಆಗ ಆರಂಭವಾಗಿದ್ದು ಹೊಸದೊಂದು ಕ್ರಾಂತಿ. ಇಲ್ಲಿಯವರೆಗೂ ಈ ಪಬ್‌ಗಳನ್ನು ಹೆಂಗಸರೇ ನಡೆಸಿದರೂ ಹೆಂಗಸರೇ ಅಡಿಗೆ, ಏಲ್ ಎಲ್ಲ ತಯಾರಿಸಿದರೂ ಅವರು ಇತರ ಗಂಡಸರಂತೆ ಮೇಜಿನ ಸುತ್ತ ಏಲ್ ಹೀರುತ್ತಾ ಹರಟುವ ಅವಕಾಶವಿರಲಿಲ್ಲ! ಗಣ್ಯರೆನಿಸಿಕೊಂಡ ಹೆಂಗಸರೆಲ್ಲ ಮನೆಯವರೊಡನೆ ಮಾತ್ರ ಮನೆಯಲ್ಲೇ ಕುಡಿಯುವ ಲೋಕವದು. ಅವರೆಲ್ಲ ಎಂದೂ ಯಾವುದೇ ಬಗೆಯ “ಸೋಷಿಯಲ್ ಪಬ್” ಹೊಕ್ಕುವಂತಿರಲಿಲ್ಲ.

ಎಲ್ಲಿಂದ ಎಲ್ಲಿಗೆ ಹೋದರೂ ಹೆಂಗಸರಿಗೆ ಮಾತ್ರ ಎಲ್ಲೆಯೊ ಎಲ್ಲೇ. ಹ್ಮ್ಮ್ ಏಲ್ ಕುದಿಸಿದರೂ ಎಲ್ಲೆ ತಪ್ಪದು ಎಂಬಂತೆ ಇವರೆಲ್ಲ ವಾರಕ್ಕೊಂದು ದಿನ ಇಂಥ ಲೈಸೆನ್ಸ್ ಕಿರಾಣಿ ಅಂಗಡಿಯೊಂದರಲ್ಲಿ ಅಂಗಡಿ ಮುಚ್ಚಿದ ಮೇಲೆ ಅದರ ನೆಲಮಾಳಿಗೆಯಲ್ಲಿ ಸೇರಹತ್ತಿದರು. ಅವರಿಗೆಲ್ಲ ತಾವೊಂದು ಕ್ರಾಂತಿ ಮಾಡುತ್ತಿದ್ದೇವೆಂಬ ಅರಿವಾಗಲೀ ಪರಿವೆಯಾಗಲೀ ಇರಲಿಲ್ಲ. ಮನೆಯ ಎಲ್ಲೆ ಮೀರುವ ಕಷ್ಟ ಸುಖ ಹಂಚಿಕೊಂಡು ಒಂದಿಷ್ಟು ಕುಡಿದು ಕುಣಿದು ಹಗುರಾಗುವ ಬಯಕೆಯಷ್ಟೇ ಅದು. ಹೀಗೆ ಆರಂಭವಾಗಿದ್ದು ಹೆಂಗಸರ ಸೋಷಿಯಲ್ ಕ್ಲಬ್ ಅದೂ ಡಬ್ಲಿನ್‌ನಲ್ಲಿಯೇ. ಕ್ರಮೇಣ ಇದು ಊರವರಿಗೆಲ್ಲ ಗೊತ್ತಾಗಿ, ಪಂಚಾಯಿತಿ ಸೇರಿ ಅವರೆಲ್ಲ ಆ ಕಿರಾಣಿಯವನನ್ನು ಹಿಡಿದು ಥಳಿಸಿದಾಗ ಹೊರಬಿದ್ದ ಸಂಗತಿ ಮುಂದೆ ಹದಿನೆಂಟನೇ ಶತಮಾನದ ಆದಿಯಲ್ಲಿ ಹೆಂಗಸರೂ ಪಬ್‌ಗಳಲ್ಲಿ ಕುಳಿತು ಕುಡಿಯಲು ಅನುವು ಮಾಡಿಕೊಟ್ಟಿತು. ಆದರೂ ಅಲ್ಲಿ ಹೆಂಗಸರಿಗೆಂದೇ ಕತ್ತಲೆಯ ಮೂಲೆಯೊಂದು ಇಲ್ಲವೇ ನೆಲಮಾಳಿಗೆಯೊಂದು ಇರುತ್ತಿತ್ತು. ಈ ಸಾಮಾಜಿಕ ನಿಷೇಧ ಹೋಗಲು ಹತ್ತೊಂಬತ್ತನೇ ಶತಮಾನ ಬರಬೇಕಾಯಿತು! ಇಂದು ನಮಗೆಲ್ಲ ಕಾಣಸಿಗುವ ಪಬ್‌ಗಳು ಆ ಪರಿಸರದ ಕಾಲಘಟ್ಟದಲ್ಲಿ ಹುಟ್ಟಿದವುಗಳು. ಕ್ರಾಂತಿಕಾರಿ ಎನಿಸಿಕೊಂಡಂಥವುಗಳು.

ಈ ನಡುವೆಯೇ ಬ್ರಿಟಿಷರ ದಬ್ಬಾಳಿಕೆಯಿಂದಾಗಿ, ಬ್ರಿಟಿಷರ ಮತ್ತು ಐರಿಶ್ ಜನರ ನಡುವಿನ ಸಂಘರ್ಷದಿಂದಾಗಿ ಡಬ್ಲಿನ್ ಹಾಳು ಬಿತ್ತು. ಬಡತನ, ಬರಗಾಲದಿಂದಾಗಿ ವೇಶ್ಯಾವಾಟಿಕೆಯ ಗೂಡಾಯಿತು. ಇಂದಿನ ಪ್ರಸಿದ್ಧ ಟೆಂಪಲ್ ಬಾರ್ ಪ್ರದೇಶ ಅಂದು ವೇಶ್ಯಾವಾಟಿಕೆಯಾಗಿ ಕುಪ್ರಸಿದ್ಧವಾಗಿತ್ತು. ಬ್ರಿಟಿಷ್ ರಾಜಮನೆತನ ಐರ್ಲೆಂಡ್ ಅನ್ನು ತನ್ನ ಜಗತ್ತನ್ನು ಕಬಳಿಸುವ ನೀತಿಯ ಪ್ರಯೋಗ ಶಾಲೆಯಾಗಿಸಿಕೊಂಡಿತು. ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತತೊಡಗಿತು. ಚರ್ಚುಗಳ ಹೆಸರಿನಲ್ಲಿ ಜನ ಬಡಿದಾಡಿಕೊಂಡರು. ಕಾಡು ಬರಗಾಲದಲ್ಲೂ ತೆರಿಗೆ ಕೊಡದವರ ಮನೆ, ಹೊಲಗಳಿಗೆ ಬ್ರಿಟಿಷ್ ಸರಕಾರ ಬೆಂಕಿ ಹಚ್ಚಿತು. ಕೊನೆಗೆ “ದಿ ಗ್ರೇಟ್ ಫ್ಯಾಮಿನ್” ಬರಗಾಲದಿಂದ ತತ್ತರಿಸಿದ ಜನ ಬ್ರಿಟಿಷರ ಕ್ರೌರ್ಯ ತಾಳಲಾರದೆ ಗುಳೆ ಎದ್ದು ಅಮೆರಿಕಾದತ್ತ ಹಡಗು ಹತ್ತತೊಡಗಿದರು.
ಹೀಗೆ ಐರಿಶ್ ಪಬ್ ಐರ್ಲೆಂಡಿನಿಂದ ಬಾಸ್ಟನ್ನಿಗೆ ಬಂದಿಳಿಯಿತು. ಅಂತೆಯೇ ಜಗತ್ತಿಗೆ ಹರಡಿತು.

ಮುಂದೆ ಬ್ರಿಟಿಷ್ ಸರಕಾರ ತನ್ನ ಗಣ್ಯ ಪಾಳೇಗಾರರನ್ನು ಡಬ್ಲಿನ್ನಿಗೆ ಕಳಿಸಿ ಹಾಳು ಬೀಳುತ್ತಿದ್ದ ಡಬ್ಲಿನ್ ಅನ್ನು ಪುನರುಜ್ಜೀವನಗೊಳಿಸಲುತೊಡಗಿತು. ಇಂದು ಹಳೆಯ ಡಬ್ಲಿನ್ನಿನ ಹೆಗ್ಗುರುತಾಗಿರುವ ಟೆಂಪಲ್ ಬಾರ್ ಆರಂಭಗೊಂಡಿದ್ದು ಹೀಗೆ ಬಂದಿಳಿದ ಬ್ರಿಟಿಷ್ ಅಧಿಕಾರಿ ಸರ್ ವಿಲಿಯಂ ಟೆಂಪಲ್ ಕುಟುಂಬದಿಂದ. ಮುಂದೆ ಅಲ್ಲಿ ಅವರಿಂದಲೇ ಜಗತ್‌ಪ್ರಸಿದ್ಧ ಟ್ರಿನಿಟಿ ಕಾಲೇಜ್ ಆರಂಭವಾಯಿತು. ತಂಗಿ ಮಾರ್ಥ ಟೆಂಪಲ್ “ಟೆಂಪಲ್ ಬಾರ್” ಆರಂಭಿಸಿದಳು. ಇಂದು ಟೆಂಪಲ್ ಬಾರ್ ಜಗತ್ತಿನಲ್ಲಿ ಸಿಗುವ ಎಲ್ಲ ಬಗೆಯ ವಿಸ್ಕಿಗಳನ್ನು ಮಾರುವ ಅಂದರೆ ಸುಮಾರು 450 ಬಗೆಯ ವಿಸ್ಕಿಗಳನ್ನು ಬಡಿಸಬಲ್ಲ ಬಾರ್. ಅಲ್ಲಿಂದ ಡಬ್ಲಿನ್ ಮತ್ತೆ ಸ್ವಚ್ಛಗೊಂಡು ಪಬ್ ಸಂಸ್ಕೃತಿಯ ಪುನರುಜ್ಜೀವನಗೊಂಡಿತು.

ಇಂದಿಗೂ ಬಹಳಷ್ಟು ಪಬ್‌ಗಳು ಹೊರಗೋಡೆಗಳ ಮೇಲೆ ಐರ್ಲೆಂಡ್ ಸಂವಿಧಾನದ ಪುಟಗಳು, ಕ್ರಾಂತಿಕಾರಿ ಒಕ್ಕಣಿಕೆಗಳು ಬರೆಯಲ್ಪಟ್ಟಿವೆ. ಐರಿಶ್ ಸ್ವಾತಂತ್ರ್ಯ ಹೋರಾಟದ ದಾಖಲೆಗಳನ್ನು ಉಳಿಸಿಕೊಳ್ಳಲಾಗಿದೆ. ಹಳತಾದ ಗೋಡೆಗಳ ಉಸ್ತುವಾರಿ ಕೂಡ ಸಾಧ್ಯವಾದಷ್ಟು ಮಟ್ಟಿಗೆ ಮೂಲ ಧಾತುಗಳಲ್ಲೇ ರಿಪೇರಿ ಮಾಡಲಾಗುತ್ತದೆ. ಇತಿಹಾಸ ಅಳಿಯದಂತೆ ಕಾಪಾಡಿಕೊಳ್ಳಲಾಗುತ್ತಿದೆ. ಸಾಂಸ್ಕೃತಿಕ ಊಟ, ತಿನಿಸುಗಳನ್ನೇ ಸರಬರಾಜು ಮಾಡಲಾಗುತ್ತೆ. ಬ್ರಿಟಿಷ್ ಸರಕಾರದ ದಬ್ಬಾಳಿಕೆಯ ಉರಿಯ ಕಿಡಿಗಳ ಕುರುಹುಗಳೆಲ್ಲ ಅಲ್ಲಿ ಹಾಸು ಹೊಕ್ಕಾಗಿ ಹರಡಿವೆ. ಬಹಳಷ್ಟು ಪಬ್‌ಗಳಲ್ಲಿ ಹಳೆಯ ಚಿತ್ರಗಳು, ವಾರ್ತೆಗಳ ತುಣುಕು, ದಾಖಲೆಪತ್ರಗಳು, ಜಾಗತಿಕ ಘಟನೆಗಳನ್ನೆಲ್ಲ ಅಲಂಕಾರಿಕವಾಗಿ ಜೋಡಿಸಿಟ್ಟಿದ್ದಾರೆ. ಐರ್ಲೆಂಡಿನ ಆತ್ಮ ಅಡಗಿರುವುದೇ ಈ ಹಳೆಯ ಪಬ್ ಗೋಡೆಗಳ ನಡುವೆ ಎಂದು ಐರಿಶರಿಗೆ ಚೆನ್ನಾಗಿ ಅರಿವಿದೆ.

ನಡೆನಡೆದು ನಾ ಹಿಂತಿರುಗಿ ನೋಡುತ್ತೇನೆ, ನಡೆದು ಬಂದ ದಾರಿಯ ತುಂಬಾ ಹಾಸುಗಲ್ಲುಗಳೆ ಇವೆ. ಮುಂದೆ ಡಾಂಬರು ಹಾಸಿದ ರಸ್ತೆಯ ತಿರುವು. ನಡುವೆ ನಿಂತಿದೆ “ಬ್ರೆಜಿನ್ ಹೆಡ್”. ಒಳಗೆ ಹಳೆಯ ಮನೆಯ ಚಿಕ್ಕ ಕೋಣೆಗಳೂ, ದಾರಿಗುರುತುಗಳೂ ಕುದುರೆ ಕಟ್ಟುವ ಜಾಗ ಎಲ್ಲ ಹಾಗೆ ಇದೆ. ಸುಣ್ಣಬಣ್ಣ ಹೊಸತಾಗಿದೆ. ಹಳೆಯ ಪೀಪಾಯಿಯ ವಾಸನೆ ಇನ್ನೂ ಇದೆ ಎನಿಸುತ್ತಿದೆ. ಈ ಹನ್ನೆರಡನೇ ಶತಮಾನದ ಜಗತ್ತಿನ ಅತಿ ಹಳೆಯ ಪಬ್ ಗೋಡೆಗಳ ನಡುವೆ ಕುಳಿತ ನನ್ನೆದುರಿನ ಅರ್ಧ ಪಿಂಟು ಬಿಯರು ನನ್ನನ್ನೇ ನೋಡುತ್ತಿದ್ದರೆ, ಅಲ್ಲೆಲ್ಲೋ ಬೆತ್ತಲಾಗದೆ ಬಯಲು ಸಿಗದೆಂದು ಅಕ್ಕ ಹೊರಟಿದ್ದಾಳೆ. ಇಲ್ಲೊಬ್ಬಳು ಬಾಲೆ ಬೆವರಿಳಿಯದಂತೆ ಬಿಯರು ಕುದಿಸುತ್ತಿದ್ದಾಳೆ. ಒಬ್ಬರಿಗೊಬ್ಬರ ಅರಿವಿಲ್ಲದಂತೆ ಅವನ ಹುಡುಕುತ್ತಿದ್ದಾರೆ. ನಾನೂ ಹೊರಡಬೇಕೀಗ ಚೆನ್ನಮಲ್ಲಿಕಾರ್ಜುನನ ಹುಡುಕಿ.