ಪ್ರೀತಿಯ ಸಂಪಾದಕರಿಗೆ,

ನೀವು ನಿನ್ನೆ ಚಾಟ್ ಗೆ ಸಿಕ್ಕಿ, ಮಂಗಳೂರಿನ ವಿಮಾನ ಅವಘಡದ ಬಗ್ಗೆ ಬರೆಯಲು ತಿಳಿಸುವ ಮುನ್ನ, ನಾನು ಇಲ್ಲಿ ನನ್ನ ಪರಿಚಯದ ಹುಡುಗರ ಬಳಿ ಹರಟೆ ಹೊಡೆಯುತ್ತಿದ್ದೆ. ಭಾರತದಲ್ಲಿನ ವಿದ್ಯಮಾನವೊಂದು ಇಲ್ಲಿ ಮೊದಲ ಪುಟದಲ್ಲಿ ಮೊದಲ ಪುಟದಲ್ಲಿ ಪ್ರಕಟಗೊಂಡದ್ದನ್ನು ನಾನು ಕಂಡದ್ದೂ ಮೊದಲನೇ ಬಾರಿ. ಅವರು ನನಗೆ ಯಾಕೆ ಹಾಗೆ ಭಾರತದ ವಿಮಾನ ಪತನಗೊಂಡಿತೆಂದೂ, ಮಡಗಾಸ್ಕರಿನ `ಏರ್ ಮಡಗಾಸ್ಕರ್’ ವಿಮಾನವು ಹಾಗೆ ಪತನಗೊಂಡಿದ್ದೇ ಇಲ್ಲವೆಂದೂ ಹೇಳುತ್ತಿದ್ದರು. ಅವರಿಗೆ ನಾನು, ಭಾರತದ ವಿಮಾನಗಳಿಗೆ ಒಂದೇ ರೆಕ್ಕೆಯಿರುವುದೆಂದೂ ರೈಲು ಹತ್ತಿಸುತ್ತಿದ್ದೆ.

ಆ ಬಳಿಕ ಚಾಟ್ ನಲ್ಲಿ ನೀವು ಈ ದುರಂತದ ಕುರಿತು `ಪರದೇಶಿ’ (ಎಕ್ಸ್ ಪಾಟ್ರಿಯೇಟ್) ಆಗಿ ಏನು ಅನ್ನಿಸುತ್ತದೆಯೆಂದು ಬರೆಯಲು ಹೇಳಿದಿರಿ. ನನಗೆ ಈ ಸುದ್ದಿ ಕೇಳಿದಾಗಲಿಂದಲೂ, ನನ್ನ ಅಮ್ಮ ಎಷ್ಟು ಗಾಬರಿಯಾಗಿರಬಹುದೆಂದು ಅನ್ನಿಸಿ ಗಾಬರಿಯಾಗುತ್ತಿತ್ತಷ್ಟೇ ಹೊರತು ಬೇರೆ ಯಾವ ಸಂಚಲನವೂ ಉಂಟಾಗಿರಲಿಲ್ಲ. ಕಾರಣವು ಸ್ಪಷ್ಟ: ಸಾವಿನ ಗಾಂಭೀರ್ಯ ಅರಿಯದ ವಯಸ್ಸು ನನ್ನದು. ವಿಮಾನಾಪಘಾತದಲ್ಲಿ ಜನರು ಸಾಯುವುದಕ್ಕಿಂತ, ಸ್ಟೇಟ್ ನ ಹಿಂಸೆಯಲ್ಲಿ ರೈತರು ಸಾಯುತ್ತಾರೆಂದು ಇಂಥ ಸಮಯದಲ್ಲೂ ವಾದಿಸುವವರನ್ನು ಕಡಿದು ಕೊಲ್ಲಬೇಕೆನ್ನಿಸುವ ವ್ಯಗ್ರ ವಯಸ್ಸು.

ಕೆಂಡಸಂಪಿಗೆಯಲ್ಲಿ ಪ್ರಕಟವಾದ, ಈ ಅವಘಡದ ಕುರಿತ ಬರಹ, ವಿಮಾನದ ಕುರಿತಾದ ಸದಾರಣೀಕೃತವಾದ ಒಂದು ನಂಬಿಕೆಯನ್ನು ಪುನರಾವರ್ತಿಸಿದೆ ಎಂದನ್ನಿಸಿತು. ವಿಮಾನವನ್ನು ಕನಸಿನ ರೂಪಕವಾಗಿ ಚಿತ್ರಿಸುವ ಕಾಲ ಹಿಂಸರಿದಿದೆ ಎಂದು ಭಾವಿಸಿದ್ದೇನೆ ನಾನು. ನಾನಿರುವ ಮಡಗಾಸ್ಕರಿನಿಂದ ಅನೇಕ ಹೆಣ್ಣುಮಕ್ಕಳು, ಲೆಬನಾನಿಗೆ ಹೋಗುತ್ತಾರೆ. ಇವರಲ್ಲಿ ಅನೇಕರು ಇಲ್ಲಿ ದುಡಿಯಲಾರದ ಅನ್ನವನ್ನಷ್ಟೇ ಹುಡುಕಿಕೊಂಡು ಅಲ್ಲಿಗೆ ಹೋಗುತ್ತಾರೆ, ಕನಸುಗಳನ್ನು ಬೆಂಬತ್ತಿಯಲ್ಲ. ಮೆಕ್ಸಿಕೋದಿಂದ ಅಮೇರಿಕಾದೊಳಕ್ಕೆ ನುಸುಳಿ, ಅಲ್ಲಿ ಐಡೆಂಟಿಟಿ ಕಾರ್ಡ್ ಕೂಡ ಇಲ್ಲದೇ ಅನೇಕ ಉದ್ಯೋಗಗಳಲ್ಲಿ ಜೀವಿಸುತ್ತಿರುವ ಅರ್ಧ ಮಿಲಿಯನ್ ಕಿಂತ ಹೆಚ್ಚಿನ ಜನರೂ ಬದುಕಿಗಿಂತ ಹೆಚ್ಚಿನ ಕನಸುಗಳನ್ನೇನೂ ಹುಡುಕಿಕೊಂಡು ಹೋದವರಲ್ಲ. ಅಂತೆಯೇ, ಲಾರಿ ಬಸ್ಸುಗಳಡಿಯಲ್ಲಿ ಅಡಗಿಕೊಂಡು ಯೂರೋಪಿನೊಳಕ್ಕೆ ಊಟ ಹುಡುಕಿಕೊಂಡು ಇಮಿಗ್ರೇಟ್ ಆಗುವ ಅನೇಕ ಮಂದಿ ಈ ಪ್ರಯತ್ನದಲ್ಲಿಯೇ, ಉದುರಿ ಬಿದ್ದು ಮಂಡೆಯೊಡೆದು ಸಾಯುತ್ತಾರೆ: ಹೀಗೆ ಸತ್ತವರ ಇಲ್ಲಿಯವರೆಗಿನ ಸಂಖ್ಯೆಯೇ ಇಂಥ ಅನೇಕ ವಿಮಾನಾಪಘಾತದಲ್ಲಿ ಮರಣವನ್ನಪ್ಪುವವರ ಅಂಕಿಗಳನ್ನು ಮೀರುತ್ತದೆ. ಇವರೂ ಭಯೋತ್ಪಾದನೆಯ ಕನಸುಗಳನ್ನು ಹೊತ್ತ ನುಸುಳುಕೋರರಲ್ಲ.

ವಿಮಾನವೆಂಬುದು ಕನಸೆಂಬುದನ್ನೂ, ಅದು ಯಾವ ದಿಕ್ಕಿಗೆ ಮೂತಿ ತಿರುಗಿಸಿ ನಿಂತಿದೆಯೋ ಆ ದೇಶ, ಆ ವಿಮಾನದಲ್ಲಿ ಕೂತವರೆಲ್ಲರ ಅಂತಿಮ ಪ್ರಸ್ಥಾನವೆನ್ನುವುದನ್ನೂ, ಮತ್ತು ವಿಮಾನವೆನ್ನುವುದು ಅಂತಿಮವಾಗಿ ಶ್ರೀಮಂತರ, ಶ್ರೀಮಂತಿಕೆ ಹುಡುಕಿಕೊಂಡು ಹೊರಟವರ ವಾಹನವೆಂಬುದನ್ನೂ- ನಾನು ತಿರಸ್ಕರಿಸುತ್ತೇನೆ. ನಾನು ದೇಶ ಬಿಡುವಾಗ ಹಾಕಿಕೊಂಡಿದ್ದ ಕೋಟು ಹೆಚ್ಚೂಕಡಿಮೆ ಕದ್ದಿದ್ದಾಗಿತ್ತು. ಎರಡು ವರುಷಗಳ ಹಿಂದೆ, ನಾನೂ ಮತ್ತು ನನ್ನ ಗೆಳೆಯನೂ- ಕನ್ನಡದ ಕತೆಗಳಲ್ಲಿ ಟಿ.ವಿ ಎಷ್ಟರಮಟ್ಟಿಗೆ ಬರುತ್ತದೆ ಎಂದು ಮಾತನಾಡಿದ್ದೆವು. ಇವತ್ತಿನ ದಿನಗಳಲ್ಲಿ ನಮ್ಮ ಬದುಕಿನ ಬೆಣ್ಣೆಗಳಾದ ಕತೆಗಳಲ್ಲಿ ವಿಮಾನಗಳು ಸರಳವಾಗಿ ಬಂದುಹೋಗುತ್ತವೆ (ಶಶಿಕಲಾ ಚಂದ್ರಶೇಖರ್ ಕತೆ `ಕೊಟ್ಟ ಹೆಣ್ಣು’; ಕೃಪಾಕರ್-ಸೇನಾನಿ ಕೆಂಸಂನಲ್ಲಿ ಬರೆದ ನೆನಪುಗಳು). ವಸ್ತಾರೆಯವರಂತೂ ತಮ್ಮ ಪ್ರತೀ ಕತೆಯಲ್ಲೂ ಇನ್ನೇನು ಬದಲಿಸದಿದ್ದರೂ ಕಾರು ಬದಲಿಸುತ್ತಾರೆ. ಹೀಗಾಗಿ ನನಗೆ ವಿಮಾನವೆನ್ನುವುದಾಗಲೀ ಅಥವಾ ಈ ಅಧುನಿಕ ಪ್ರಯಾಣದ ಸಲಕರಣೆಗಳಾಗಲೀ ತೀರಾ ಕನಸಾಗಿ ಕಾಣುತ್ತಿಲ್ಲ.

ಇತ್ತೀಚೆಗೆ ವಿಮಾನಾಪಘಾತಗಳು ವಿಚಿತ್ರವಾಗಿ ಹೆಚ್ಚುತ್ತಿವೆ: ಎಲ್ಲವೂ ಅನ್ ಪ್ರೆಸಿಡೆಂಟೆಡ್ ಎನ್ನುವ ಥರದವೇ. ಪೋಲೆಂಡಿನ ರಾಜಕೀಯ ನಾಯಕರ ದುರ್ಮರಣದ ಕಾರಣ, ವರದಿಗಳು ಇನ್ನೂ ಬರುತ್ತಲೇ ಇವೆ; ನಾಲ್ಕೋ ಐದೋ ತಿಂಗಳ ಹಿಂದೆ ಅಟ್ಲಾಂಟಿಕ್ ಮಹಾಸಾಗರದಲ್ಲಿ ಬ್ರಾಝಿಲ್ ನ ಸಮೀಪ ಬಿದ್ದುಹೋದ ಫ್ರಾನ್ಸ್ ನ ವಿಮಾನದ ಬ್ಲಾಕ್ ಬಾಕ್ಸ್ ಎಂಬ ಕಿತ್ತಳೆ ಬಣ್ಣದ ಪೆಟ್ಟಿಗೆ ಇನ್ನೂ ಪತ್ತೆಯೇ ಆಗಿಲ್ಲ; ಮೊನ್ನೆ ಯೂರೋಪಿನಲ್ಲಿ ಆದ ವಿಮಾನಾಪಘಾತದಲ್ಲಿ ಅಚ್ಚರಿಯಂತೆ ಬದುಕುಳಿದ ಎಂಟರ ಹರೆಯದ ಒಬ್ಬನೇ ಹುಡುಗ ಇನ್ನೂ ಅವನ ಭಯದಿಂದ ಚೇತರಿಸಿಕೊಂಡಿಲ್ಲ. ಯಾಕೋ ಹಿಂಸೆಯೂ ಆಗುತ್ತಿದೆ. ದುಬೈನಲ್ಲಿ ವಿಮಾನ ಹತ್ತುವಾಗಿನ ಅವರೆಲ್ಲರ ಮುನ್ನೋಟವನ್ನು ಖಂಡಿತ ನಾನು ಊಹಿಸಿಕೊಳ್ಳಬಲ್ಲೆ, ಕಾರಣ ಆ ಥರದ ಒಂದು ಮುನ್ನೋಟವನ್ನು ಎಲ್ಲ ಪ್ರಯಾಣವೂ, ಅದು ಆಟೊ ಪ್ರಯಾಣವಾಗಿದ್ದರೂ ಹೊಂದಿರುತ್ತದೆ. ಆದರೆ ವಿಮಾನ ಪ್ರಯಾಣ ಉದ್ದ ಪ್ರಯಾಣವಾದ್ದರಿಂದ, ಆ ಪ್ರಯಾಣದ ತುದಿಯ ನಿರೀಕ್ಷೆಗಳೂ ಗಾಢವಾದುದ್ದೇ ಆಗಿರುತ್ತದೆ, ಸಹಜವಾಗಿ. ಹೀಗೆ ಸಾವು ಯಾರಿಗೂ ಬರಬಾರದು ಎಂದು ಆಶಿಸಲಷ್ಟೇ ಸಾಧ್ಯವಾಗುವ ನಮ್ಮ ನಿಸ್ಸಹಾಯಕತೆಗೆ ಸಿಟ್ಟುಬರುತ್ತಿದೆ.

ಈ ಅಪಘಾತ ಆದ ದಿನವಿಡೀ ಬಿಬಿಸಿಗೆ ಕಿವಿಹಚ್ಚಿ ಕುಳಿತಿದ್ದೆ. ಯೂರೋಪಿನ ವಿಮಾನಗಳು ಉರುಳಿ ಬಿದ್ದಾಗ ಅದನ್ನೇ ದಿನವಿಡೀ ಶೋಕಾಚರಣೆಯಂತೆ ಬಿತ್ತರಿಸುತ್ತಲೇ ಇರುವ ಬಿಬಿಸಿ, ಈ ಸುದ್ದಿಯನ್ನು ಹೇಗೆ ನಿರ್ವಹಿಸುತ್ತದೆ ಎಂದು ನೋಡಲು. ಮೊದಲನೇ ಅವರ್ ನಲ್ಲಿ ಮೊದಲ ಸುದ್ದಿ; ಎರಡನೇ ಅವರ್ ನಲ್ಲಿ ಎರಡನೇಯ ಸುದ್ಧಿ; ಮೂರನೇ ಅವರ್ ನಲ್ಲಿ ಈ ಸುದ್ಧಿ ಕ್ರಮಣ ಕರಗುತ್ತಿತ್ತು. ಯೂರೋಪಿನ ಅನೇಕ ವಿಮಾನ ನಿಲ್ದಾಣಗಳು, ಮಂಗಳೂರಿನ ಈ ನಿಲ್ದಾಣದಂತೆಯೇ ಕಡಿದಾಗಿವೆ ಎಂದು ಬಿಬಿಸಿಯ ಡೆಲ್ಲಿ ವರದಿಗಾರ ಸಂಜಯ್ ಸಮರ್ಥನೆಯ ಧ್ವನಿಯಲ್ಲಿ ಮಾತನಾಡುತ್ತಿದ್ದರು; ನಿಮಗೆಲ್ಲ ತಿಳಿದಿರುವ ಹಾಗೆ ವಿಮಾನ ಮಂತ್ರಿಯೋ ಮತ್ಯಾರೋ ಆ ನಿಲ್ದಾಣದಲ್ಲಿ ಇಲ್ಲಿಯವರೆಗೆ ೩೬೦೦೦ ಲ್ಯಾಂಡಿಗ್ ಆಗಿದೆಯೆಂದೂ ಹಾಗಾಗಿ ಪೂರ್ಣ ವರದಿ ಬರುವವರೆಗೂ ಆ ನಿಲ್ದಾಣದ ವಸ್ತುಸ್ಥಿತಿ ಪರೀಶೀಲನೆಗೆ ಮುಂದಾಗಲಾರೆನೆಂದೂ ಗೊಣಗುತ್ತಿದ್ದರು.

ಇಂಥ ದುರಂತವೋ, ಹಾಯಿತಿಯ ಭೂಕಂಪವೋ, ಆಂಧ್ರಪ್ರದೇಶದ ಬಿರುಗಾಳಿಯೋ ಸಾರಾಸಗಟಾಗಿ ಜನರನ್ನು ಕೊಂದಾಗ ಬದುಕಿನ ಲಾಜಿಕ್ ನ ಬಗ್ಗೆಯೇ ಗೊಂದಲವಾಗುತ್ತದೆ. ಬೆಂಗಳೂರಿನ ಬಿಎಂಟಿಸಿ ಬಸ್ಸುಗಳು ಪಾದಚಾರಿಗಳನ್ನು ಕೊಲ್ಲುವುದೂ, ವಿಮಾನವು ಒಟ್ಟಿಗೇ ಅನೇಕರನ್ನು ಇನ್ನಿಲ್ಲವಾಗಿಸುವುದೂ- ಈ ಎಲ್ಲವೂ ಸಾಮೂಹಿಕ ಸಾವೇ ಆಗಿದ್ದರೂ, ಅದು ಕಡೆಗೆ ಅವನವನ ಮನೆಯ ಸೂತಕದಲ್ಲಿ ವೈಯಕ್ತಿಕ ಸಾವು ಮಾತ್ರವೇ.