ದೇಗುಲದ ಮಹಾದ್ವಾರವೇ ದೊಡ್ಡದೊಂದು ಕಟ್ಟಡದಂತಿದೆ. ಒಳಬರುತ್ತಿರುವಂತೆಯೇ ಧ್ವಜಸ್ತಂಭವೂ ಗುಡಿಯನ್ನೇರಲು ಸೋಪಾನಗಳೂ ಇದಿರಾಗುತ್ತವೆ. ಮೆಟ್ಟಿಲುಗಳ ಅಕ್ಕಪಕ್ಕ ಸೊಗಸಾದ ಗಜಶಿಲ್ಪಗಳು. ಮಂಟಪದ ಸೂರಿನ ಇಳಿಜಾರು, ಮೇಲಂಚಿನ ಕೈಪಿಡಿಯ ಗೋಡೆಯ ಮೇಲಿನ ಚಿತ್ತಾರ, ಎಲ್ಲವೂ ಆಕರ್ಷಕ. ಮುಖಮಂಟಪದ ಸುತ್ತ ಒರಗಲು ಕಕ್ಷಾಸನಗಳು. ಈ ಪೀಠಗಳನ್ನೂ ಆನೆಗಳೇ ಹೊತ್ತಿರುವುದೊಂದು ವಿಶೇಷ. ನವರಂಗದೆಡೆಯಿಂದ ಮೂರೂ ಗರ್ಭಗುಡಿಗಳಿಗೂ ಸಂಪರ್ಕ ಕಲ್ಪಿಸಿದೆ. ಈ ಆವರಣದ ಸುತ್ತ ನಿಲ್ಲಿಸಲಾಗಿರುವ ತಿರುಗಣೆಯ ಕಂಬಗಳು ಒಂದಕ್ಕಿಂತ ಒಂದು ಸುಂದರ. ಭುವನೇಶ್ವರಿಯ ಚಿತ್ತಾರಗಳೂ ಗಮನಸೆಳೆಯುತ್ತವೆ.
ಟಿ.ಎಸ್.‌ ಗೋಪಾಲ್‌ ಬರೆಯುವ ದೇಗುಲಗಳ ಸರಣಿಯ ಎಪ್ಪತ್ತನೆಯ ಕಂತು

 

ಹನ್ನೆರಡನೆಯ ಶತಮಾನದ ಉತ್ತರಾರ್ಧದಲ್ಲಿ ಹೊಯ್ಸಳ ಸಾಮ್ರಾಜ್ಯದ ಅಧಿಪತಿಯಾಗಿದ್ದ ಎರಡನೇ ವೀರಬಲ್ಲಾಳನು ತನ್ನ ಐವತ್ತು ವರುಷಗಳ ಆಳ್ವಿಕೆಯಲ್ಲಿ ಇನ್ನೂರಕ್ಕೂ ಹೆಚ್ಚು ದೇವಾಲಯಗಳನ್ನು ಕಟ್ಟಿಸಿದ ಯಶಸ್ಸಿಗೆ ಪಾತ್ರನಾದನು. ಈ ದೇಗುಲಗಳಲ್ಲಿ 50ಕ್ಕೂ ಹೆಚ್ಚು ತ್ರಿಕೂಟಾಚಲ ಅಂದರೆ ಮೂರು ಶಿಖರಗಳುಳ್ಳ ನಿರ್ಮಾಣಗಳಾಗಿದ್ದವು. ಇಂತಹ ತ್ರಿಕೂಟಾಚಲ ದೇಗುಲಗಳಲ್ಲಿ ಬೆಳವಾಡಿಯ ವೀರನಾರಾಯಣ ದೇಗುಲವೂ ಒಂದು. ಮಾತ್ರವಲ್ಲ, ವೀರಬಲ್ಲಾಳನ ಕಾಲದಲ್ಲೇ ನಿರ್ಮಾಣವಾದ (ಕ್ರಿ.ಶ.1206) ಈ ಗುಡಿಯು ಹೊಯ್ಸಳ ತ್ರಿಕೂಟಾಚಲ ದೇವಾಲಯಗಳಲ್ಲೇ ಅತ್ಯಂತ ದೊಡ್ಡದೆಂಬ ಕೀರ್ತಿಗೂ ಪಾತ್ರವಾಗಿದೆ.

ಬಾಣಾವರದಿಂದ ಜಾವಗಲ್ ಮಾರ್ಗವಾಗಿ ಚಿಕ್ಕಮಗಳೂರಿಗೆ ಹೋಗುವ ರಸ್ತೆಯಲ್ಲಿ ಬೆಳವಾಡಿ ಗ್ರಾಮವನ್ನು ತಲುಪಬಹುದು. ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ 29 ಕಿ.ಮೀ. ಹಾಗೂ ವಿಶ್ವವಿಖ್ಯಾತ ಹಳೇಬೀಡಿನಿಂದ ಬೆಳವಾಡಿಗೆ ಹತ್ತು ಕಿ.ಮೀ. ದೂರ ಮಾತ್ರ. ಈ ಬೆಳವಾಡಿಯು ಮಹಾಭಾರತದ ಕಾಲದ ಏಕಚಕ್ರನಗರವಾಗಿತ್ತೆಂದೂ ಭೀಮನು ಇಲ್ಲಿಯೇ ಬಕಾಸುರನನ್ನು ಸಂಹರಿಸಿದನೆಂದೂ ಐತಿಹ್ಯ. ಮಹಾಭಾರತದ ಘಟನೆಗಳು ನಡೆದ ವಿವಿಧ ಪ್ರದೇಶಗಳೊಡನೆ ಇಲ್ಲಿಯ ವಿದ್ಯಮಾನವನ್ನು ಭೌಗೋಳಿಕವಾಗಿ ಹೇಗೆ ತಾಳೆಹೊಂದಿಸಬಹುದೋ ತಿಳಿಯದು. ಇರಲಿ.


ಇದೀಗ ಭಾರತೀಯ ಸರ್ವೇಕ್ಷಣಾ ಇಲಾಖೆಯ ಸುಪರ್ದಿಗೊಳಪಟ್ಟ ಬೆಳವಾಡಿಯ ದೇವಾಲಯದ ಕಟ್ಟಡದ ವಿಸ್ತೀರ್ಣ, ಭವ್ಯತೆಗಳು ಮೊದಲ ನೋಟಕ್ಕೇ ನಿಮ್ಮ ಮನಸೂರೆಗೊಳ್ಳುತ್ತವೆ. ತ್ರಿಕೂಟಾಚಲದ ಮೂರೂ ಭಾಗಗಳನ್ನು ಒಮ್ಮೆಗೇ ಕಟ್ಟಲಿಲ್ಲವೆಂದೂ ಮೊದಲಿಗೆ ಹಿಂಬದಿಯ ವೀರನಾರಾಯಣನ ಗುಡಿಯನ್ನು ಕಟ್ಟಿ ಕಂಬ-ಕಕ್ಷಾಸನ(ಒರಗು ಬೆಂಚು)ಗಳಿರುವ ಆವರಣಗಳ ಮೂಲಕ ಇತರ ಎರಡು ಗುಡಿಗಳೊಡನೆ ಸಂಪರ್ಕ ಕಲ್ಪಿಸಿರಬಹುದೆಂದು ಒಂದು ಊಹೆ.

ದೇಗುಲದ ಮಹಾದ್ವಾರವೇ ದೊಡ್ಡದೊಂದು ಕಟ್ಟಡದಂತಿದೆ. ಒಳಬರುತ್ತಿರುವಂತೆಯೇ ಧ್ವಜಸ್ತಂಭವೂ ಗುಡಿಯನ್ನೇರಲು ಸೋಪಾನಗಳೂ ಇದಿರಾಗುತ್ತವೆ. ಮೆಟ್ಟಿಲುಗಳ ಅಕ್ಕಪಕ್ಕ ಸೊಗಸಾದ ಗಜಶಿಲ್ಪಗಳು. ಮಂಟಪದ ಸೂರಿನ ಇಳಿಜಾರು, ಮೇಲಂಚಿನ ಕೈಪಿಡಿಯ ಗೋಡೆಯ ಮೇಲಿನ ಚಿತ್ತಾರ, ಎಲ್ಲವೂ ಆಕರ್ಷಕ. ಮುಖಮಂಟಪದ ಸುತ್ತ ಒರಗಲು ಕಕ್ಷಾಸನಗಳು. ಈ ಪೀಠಗಳನ್ನೂ ಆನೆಗಳೇ ಹೊತ್ತಿರುವುದೊಂದು ವಿಶೇಷ. ನವರಂಗದೆಡೆಯಿಂದ ಮೂರೂ ಗರ್ಭಗುಡಿಗಳಿಗೂ ಸಂಪರ್ಕ ಕಲ್ಪಿಸಿದೆ. ಈ ಆವರಣದ ಸುತ್ತ ನಿಲ್ಲಿಸಲಾಗಿರುವ ತಿರುಗಣೆಯ ಕಂಬಗಳು ಒಂದಕ್ಕಿಂತ ಒಂದು ಸುಂದರ. ಭುವನೇಶ್ವರಿಯ ಚಿತ್ತಾರಗಳೂ ಗಮನಸೆಳೆಯುತ್ತವೆ.

ಎಡಭಾಗದ ಗರ್ಭಗುಡಿಯಲ್ಲಿ ಗೋಪಾಲಕೃಷ್ಣನ ಪೂಜಾವಿಗ್ರಹವಿದೆ. ಸಾಮಾನ್ಯವಾಗಿ ಹೊಯ್ಸಳ ಶೈಲಿಯ ವೇಣುಗೋಪಾಲ ಮೂರ್ತಿಗಳೆಲ್ಲ ಸುಂದರವಾದ ಕೆತ್ತನೆಯಿಂದ ಮನಸೆಳೆಯುವಂತಹವು. ಅದರಲ್ಲೂ ಬೆಳವಾಡಿಯ ಈ ಮೂರ್ತಿ ಅತಿ ಸುಂದರವೆಂಬ ಕೀರ್ತಿಗೆ ಪಾತ್ರವಾಗಿದೆ. ಗರುಡಪೀಠದ ಮೇಲೆ ತ್ರಿಭಂಗಿಯಲ್ಲಿ ನಿಂತು ಕೊಳಲೂದುತ್ತಿರುವ ಕೃಷ್ಣ, ಅಕ್ಕಪಕ್ಕದಲ್ಲಿ ಗೋವುಗಳು, ಗೋಪಿಕೆಯರು, ಪರಿವಾರದವರು. ಏಳು ಅಡಿಗಳಿಗೂ ಮಿಕ್ಕ ಎತ್ತರದ ಈ ವಿಗ್ರಹದ ಸೌಂದರ್ಯ ಅತಿಶಯವಾದುದು. ಬಲಭಾಗದ ಗುಡಿಯಲ್ಲಿ ಯೋಗಾನರಸಿಂಹ ಶಿಲ್ಪವಿದ್ದು ಮೊಣಕಾಲುಗಳ ಮೇಲೆ ಮುಂಗೈಗಳನ್ನು ಇರಿಸಿಕೊಂಡು ಕುಳಿತ ಮೂರ್ತಿಯಿದೆ. ಪ್ರಭಾವಳಿಯಲ್ಲಿ ದಶಾವತಾರಗಳು ಮೂಡಿವೆ.

ಈ ಎರಡೂ ಗುಡಿಗಳ ಸುತ್ತ ಹೊರಭಿತ್ತಿಯಲ್ಲಿ ಅನೇಕ ಶಿಲ್ಪಗಳನ್ನು ಕಾಣಬಹುದು. ಮಹಾವಿಷ್ಣುವಿನ ಇಪ್ಪತ್ನಾಲ್ಕು ರೂಪಗಳು, ವೇಣುಗೋಪಾಲ, ಗರುಡ, ಬುದ್ಧ, ಯೋಗಾನರಸಿಂಹ. ಕಾಳಿಂಗ ಮರ್ದನ ಕೃಷ್ಣ, ಸ್ಥಾನಕ(ನಿಂತಿರುವ) ನರಸಿಂಹ, ವರಾಹಾವತಾರಿ ವಿಷ್ಣು, ರಾಮ ಲಕ್ಷ್ಮಣ ಸೀತೆಯರು, ದೇವದೇವಿಯರು, ಚಾಮರಧಾರಿಣಿಯರು, ವಾದ್ಯಗಾರರು ಮೊದಲಾದ ಅನೇಕ ಶಿಲ್ಪಗಳಿಂದ ಈ ಗೋಡೆಗಳು ಅಲಂಕೃತವಾಗಿವೆ. ಆದರೆ, ಹಿಂಬದಿಯ ವೀರನಾರಾಯಣನ ಗುಡಿಯ ಸುತ್ತ ಹೀಗೆ ಶಿಲ್ಪಗಳಿಲ್ಲದೆ ಗೋಡೆ ಸಪಾಟಾಗಿದೆ.

(ಫೋಟೋಗಳು: ಲೇಖಕರವು)

ದೇವಾಲಯದ ಜಗತಿಯ ಮೇಲೆ ಇತರ ಹೊಯ್ಸಳ ಗುಡಿಗಳಲ್ಲಿ ಕಂಡುಬರುವಂತೆ ಆನೆ, ಕುದುರೆ ಮತ್ತಿತರ ಪ್ರಾಣಿಗಳನ್ನು ಚಿತ್ರಿಸುವ ಪಟ್ಟಿಕೆಗಳು ಇಲ್ಲಿ ಕಾಣುವುದಿಲ್ಲ. ಮೂರೂ ಶಿಖರಗಳ ಮೇಲೆ ಆರು ಸ್ತರಗಳ ಅಲಂಕಾರ, ಕೀರ್ತಿಮುಖಗಳು, ಚಿತ್ರವಿನ್ಯಾಸಗಳು, ಕಿರುಗೂಡುಗಳಲ್ಲಿ ವೇಣುಗೋಪಾಲ, ವಿಷ್ಣು ಮತ್ತಿತರ ದೇವತಾಮೂರ್ತಿಗಳಿವೆ. ಶಿಖರದ ಮುಂಚಾಚಿಕೊಂಡ ಶುಕನಾಸಿಯ ಮುಂದೆಯೂ ವಿಷ್ಣುವಿನ ರೂಪಗಳನ್ನು ಚಿತ್ರಿಸಿದೆ, ದೇವಾಲಯದ ಸುತ್ತಲೂ ಗೋಡೆಯ ಅಂಚಿನ ಕೈಪಿಡಿಗಳಲ್ಲೂ ಸೊಗಸಾದ ಅಲಂಕಾರ. ಹೂಬಳ್ಳಿಗಳ ಗೂಡುಗಳೊಳಗೆ ದೇವತಾಶಿಲ್ಪಗಳನ್ನು ಕಾಣಬಹುದು.

ಹೊಯ್ಸಳ ವಾಸ್ತುಶಿಲ್ಪದ ಉತ್ಕೃಷ್ಟ ಕೊಡುಗೆಗಳಲ್ಲಿ ಬೆಳವಾಡಿಯ ವೀರನಾರಾಯಣ ದೇವಾಲಯವೂ ಒಂದೆಂಬುದರಲ್ಲಿ ಸಂಶಯವಿಲ್ಲ. ದಿನನಿತ್ಯದ ಪೂಜಾಕೈಂಕರ್ಯಗಳೂ ವಾರ್ಷಿಕ ಉತ್ಸವಾದಿಗಳೂ ಇಲ್ಲಿ ನೆರವೇರುತ್ತಿದ್ದು ಭಕ್ತಾದಿಗಳೂ ಶಿಲ್ಪಕಲಾಸಕ್ತರೂ ತಪ್ಪದೆ ಸಂದರ್ಶಿಸಲೇಬೇಕಾದ ತಾಣವಿದು. ಬಾಣಾವರ ಮಾರ್ಗವಾಗಿ ಇತ್ತ ಬರುವವರು ದಾರಿಯಲ್ಲಿ ಅರಕೆರೆ, ಮಾವುತನಹಳ್ಳಿ, ಜಾವಗಲ್ ಮುಂತಾದೆಡೆಗಳಲ್ಲಿರುವ ಹೊಯ್ಸಳ ಗುಡಿಗಳನ್ನೂ ನೋಡಲು ಸಾಧ್ಯ.