ಮೂಲ ಲೇಖಕರ ಒಪ್ಪಿಗೆಯಿರಲಿ, ಅವರ ಗಮನಕ್ಕೂ ತಾರದೇ ನೇರವಾಗಿ ಕವಿತೆಯ ಸಾಲುಗಳನ್ನು ನಕಲು ಮಾಡಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ತಾವೇ ರಚಿಸಿದ್ದೆಂದು ಪ್ರಚಾರ ಪಡೆಯುವ ಕಪಟ ಸಾಹಿತಿಗಳನ್ನು ಕೆಣಕಿದ್ದಾರೆ. ‘ಇರಬೇಕು, ಇದ್ದೇ ಇರುತ್ತಾರೆ, ಒಬ್ಬಿಬ್ಬರಲ್ಲ ಒಂದಷ್ಟು ಜನ, ಇರುವಿಕೆಯ ಅರಿವನ್ನಷ್ಟೇ ಉಳಿಸಿ, ಎಲ್ಲರೊಳಗೂ ಸಾಲವಾಗಿಯೇ ಉಳಿಯುವವರು..’ ಎಂದೆನ್ನುತ್ತಾ ಪ್ರತಿಯೊಂದರಲ್ಲೂ ಮೂಗು ತೋರಿಸುವವರ ಸಂಖ್ಯೆ ಈಗ ಅಧಿಕ. ಅದರ ಬಗ್ಗೆ ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನದೂ ಒಂದು ಅಭಿಪ್ರಾಯವಿರಲಿ ಎನ್ನುವವರೇ ಹೆಚ್ಚಾಗಿದ್ದಾರೆ.
ಸೌಜನ್ಯ ದತ್ತರಾಜ ಕವನ ಸಂಕಲನ “ಭಾವನೌಕೆಯನೇರಿ” ಕುರಿತು ಪ ನಾ ಹಳ್ಳಿ ಹರೀಶ್ ಕುಮಾರ್ ಬರಹ

ಭಾವನೌಕೆಯನೇರಿ, ಸೌಜನ್ಯ ದತ್ತರಾಜರ ಮೊದಲ ಕವನ ಸಂಕಲನ. ಇದರಲ್ಲಿ ಅವರು ತಮ್ಮ ಕವನಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಮೊದಲನೆಯ ಗುಂಪಿನವು ಒಲವಿನ ಪ್ರೇಮ ಕಾವ್ಯಗಳಾಗಿದ್ದು, ಎರಡನೆಯವು ವಿರಹದಲೆಗಳಾಗಿವೆ ಮತ್ತು ಕೊನೆಯವು ತಮ್ಮ ಸುತ್ತಲಿನ ಆಗುಹೋಗುಗಳಿಗೆ ಸಂಬಂಧಿಸಿದವುಗಳಾಗಿವೆ.

ಪ್ರೇಮಶರಧಿಯ ವಿಭಾಗದಲ್ಲಿ ‘ರಾಮಸೀತೆಯರ ಒಲವಿನಂತೆ, ಶಿವಪಾರ್ವತಿಯರ ಅನುರಾಗದಂತೆ, ರಾಧಾಕೃಷ್ಣರ ಪ್ರೇಮದಂತೆ, ಈ ಕ್ಷಣವು ಹೀಗೆಯೇ ಇರಲಿ’ ಎನ್ನುತ್ತಾ ತನ್ನ ಪ್ರೇಮವೂ ಎಂದೆಂದಿಗೂ ಮುಗಿಯದ ಮಹಾಕಾವ್ಯವಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ‘ಕಾಮ ಮೋಹಗಳ ಮೀರಿದ ಹೊಸತೊಂದು ಪ್ರೇಮಪಲ್ಲವಿಯ ಹಾಡುವಾಸೆ’ ಎಂದೆನ್ನುವಾಗ ಅವರಲ್ಲಿ ತನ್ನ ನಿಷ್ಕಲ್ಮಷ ಪ್ರೇಮದೊಳಗಣ ಆಸೆಯ ಅಭಿವ್ಯಕ್ತಿಯನ್ನು ಕಾಣಬಹುದಾಗಿದೆ. ‘ಹೆಗಲಿಗೆ ಹೆಗಲು ಸೇರಿಸಿ ಅರಳುತ್ತಿದ್ದಾರೆ ಒಬ್ಬರೊಳಗೊಬ್ಬರು’ ಎನ್ನುತ್ತಾ ಭೌತಿಕ ಆಕರ್ಷಣೆಗಳನ್ನು ಗೆಲ್ಲುವಂತೆ ಕರೆನೀಡುತ್ತಾರೆ. ಈ ವಿಭಾಗದಲ್ಲಿನ ಪ್ರತೀ ಕವನದಲ್ಲೂ ದಾಂಪತ್ಯದೊಳಗಿನ ಪ್ರೇಮ ಪಲ್ಲವಿಯನ್ನು ಕಾಣಬಹುದಾಗಿದೆ.

(ಸೌಜನ್ಯ ದತ್ತರಾಜ)

ವಿರಹದಲೆಗಳ ಮೇಲೆ ನೆನಪುಗಳ ನೌಕೆಯನೇರಿ ವಿಭಾಗವು ಪ್ರೇಮದೊಳಗಣ ವಿರಹದ ಬೇಗೆಯನ್ನು ಅಭಿವ್ಯಕ್ತಪಡಿಸುವ ಕವನಗಳನ್ನು ಹೊಂದಿದ್ದು, ಇಲ್ಲಿ ಕೃಷ್ಣನ ಸಂಗದೊಳಿಂದ ದೂರವಿರುವ ರಾಧೆಯ ವಿರಹವಿದೆ. ಬರೀ ವಿರಹವನ್ನಷ್ಟೇ ತಿಳಿಸಿ ಸುಮ್ಮನಾಗದೇ ಅದರಿಂದ ಮುಕ್ತಿ ಹೊಂದುವ ಸಾಲುಗಳೂ ಇಲ್ಲಿವೆ, ಉದಾಹರಣೆಗೆ ‘ಹಳೇ ನೆನಪೆಂಬ ಪಳೆಯುಳಿಕೆಗಳ ಗೊಬ್ಬರದ ಮೇಲೆಯೇ ಹೊಸ ಹೂವೊಂದು ಅರಳೀತು..’ ಎಂಬ ಸಾಲುಗಳು ನನ್ನ ಮಾತನ್ನು ಪುಷ್ಠೀಕರಿಸುತ್ತವೆ. ‘ನಿನ್ನ ಮರೆತು ನಾನು ನಾನಾಗಿ ಉಳಿಯಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದೇನೆ’ ಎಂಬಲ್ಲಿ ಸೋಲೊಪ್ಪಿಕೊಳ್ಳದ ನೈಜ ಪ್ರೀತಿಯಿರುವುದು ಗೋಚರವಾಗುತ್ತದೆ. ‘ಮನಸ್ಸು ಪ್ರವಾಸಹೊರಡುತ್ತದೆ ಆತ್ಮಕ್ಕಂಟಿದ ನೆನಪಿನ ಧೂಳಿನಲಿ, ಹೊಸಚಿತ್ರ ಬಿಡಿಸುತ್ತಾ..’ ಎನ್ನುವ ಸಾಲುಗಳಲ್ಲಿ ವಿರಹದ ಬೇಗೆಯಿಂದ ಹೊರಬಂದು ಮಾನಸಿಕ ನೆಮ್ಮದಿಯತ್ತ ತೆರಳುವ ಮನಸ್ಸಿನ ತವಕವನ್ನು ಕಾಣಬಹುದು.

ಸವೆದ ಸಾಲಿನಂಚಿನ ಸಾಲು ಕವನಗಳಂತೂ ತಮ್ಮ ಸುತ್ತಲಿನ ಆಗುಹೋಗುಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚಿತವಾಗಿದ್ದು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತವೆ. ಅಪಾರ್ಟ್‌ಮೆಂಟೊಂದರ ಯಾಂತ್ರಿಕ ಜೀವನದ ಪರಿಯನ್ನು ‘ಅಪಾರ್ಟಮೆಂಟಿನ ಕಾಂಪೌಂಡು’ ಕವಿತೆ ಚೆನ್ನಾಗಿ ಕಟ್ಟಿಕೊಟ್ಟಿದೆ. ಹೊಸ ಹುಣಸೆಹಣ್ಣಿನ ರಸವನ್ನು ಒಗ್ಗರಣೆ ಹಾಕಿ ನಂತರ ನಾಲಿಗೆಯಿಂದ ರುಚಿಸಿ ನೋಡಿದಂತೆ ‘ಇನಿಯನ ಒಲವೂ ಒಂದು ಅಂದಾಜು’ ಎಂದಿದ್ದಾರೆ ಸೌಜನ್ಯರವರು.

‘ಬೇಕಿತ್ತು ನಿಮ್ಮದೊಂದೆರೆಡು ಕವಿತೆಗಳು ಸಾಲವಾಗಿ ಯೋಚಿಸಬೇಡಿ ಹಿಂತಿರುಗಿಸುತ್ತೇನೆ, ಒಮ್ಮೆ ಕೊಟ್ಟು ನೋಡಿ ನನ್ನ ಕೈಚಳಕ ತೋರಿಸುತ್ತೇನೆ. ನಿಮ್ಮದೇ ಕವನಗಳಿಗೆ ಛಂದಸ್ಸು ಬದಲಿಸುತ್ತೇನೆ ನಗುವಿಗೆ ಅಳುವಿನ ಅಲಂಕಾರ ಮಾಡುತ್ತೇನೆ’ ಎಂಬ ಸಾಲುಗಳು ‘ಒಂಚೂರು ಸಾಲ ಬೇಕಿತ್ತು ‘ ಎಂಬ ಕವನದಿಂದ ಆಯ್ದದ್ದು. ಈ ಸಾಲುಗಳ ಮೂಲಕ ಸೌಜನ್ಯರವರು ಕೃತಿ ಚೋರರನ್ನು ವ್ಯಂಗ್ಯ ಮಾಡಿದ್ದಾರೆ. ಮೂಲ ಲೇಖಕರ ಒಪ್ಪಿಗೆಯಿರಲಿ, ಅವರ ಗಮನಕ್ಕೂ ತಾರದೇ ನೇರವಾಗಿ ಕವಿತೆಯ ಸಾಲುಗಳನ್ನು ನಕಲು ಮಾಡಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ತಾವೇ ರಚಿಸಿದ್ದೆಂದು ಪ್ರಚಾರ ಪಡೆಯುವ ಕಪಟ ಸಾಹಿತಿಗಳನ್ನು ಕೆಣಕಿದ್ದಾರೆ. ‘ಇರಬೇಕು, ಇದ್ದೇ ಇರುತ್ತಾರೆ, ಒಬ್ಬಿಬ್ಬರಲ್ಲ ಒಂದಷ್ಟು ಜನ, ಇರುವಿಕೆಯ ಅರಿವನ್ನಷ್ಟೇ ಉಳಿಸಿ, ಎಲ್ಲರೊಳಗೂ ಸಾಲವಾಗಿಯೇ ಉಳಿಯುವವರು..’ ಎಂದೆನ್ನುತ್ತಾ ಪ್ರತಿಯೊಂದರಲ್ಲೂ ಮೂಗು ತೋರಿಸುವವರ ಸಂಖ್ಯೆ ಈಗ ಅಧಿಕ. ಅದರ ಬಗ್ಗೆ ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನದೂ ಒಂದು ಅಭಿಪ್ರಾಯವಿರಲಿ ಎನ್ನುವವರೇ ಹೆಚ್ಚಾಗಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ಅಧಿಕವಾದಂತೆಲ್ಲ ಇಂತಹ ಪುಗಸಟ್ಟೆ ವಿಚಾರವಾದಿಗಳು ಅಧಿಕವಾಗಿದ್ದಾರೆ. ಅಂತಹವರ ಕುರಿತೇ ಬರೆದಿರುವ ಈ ಕವಿತೆ ಓದಿದೊಡನೆ ನಗು ಬರಿಸುತ್ತದೆಯಾದರೂ ತಾರ್ಕಿಕವಾಗಿ ಯೋಚಿಸಿದಾಗ ಗಂಭೀರ ವಿಷಯವನ್ನು ಪ್ರಸ್ತಾಪಿಸುವಂತೆ ಇದೆ.

‘ಅಡುಗೆ ಕೋಣೆಗೆ ಬೇಕಾದ ಉಗುರು ಸ್ವಾವಲಂಬಿ ಜೀವನಕ್ಕೆ ಪೊಗರು, ಎರೆಡೂ ಇಂದಿನ ಸ್ತ್ರೀಗೆ ಅಗತ್ಯ’ ಎಂಬುದನ್ನು ‘ಉಗುರು-ಪೊಗರು’ ಕವಿತೆ ಬಹಳ ವಿಡಂಬನಾತ್ಮಕವಾಗಿ ಹೇಳುತ್ತದೆ. ‘ಮಾತನಾಡಬೇಕಿತ್ತು’ ಕವಿತೆಯು ಅಪ್ಪ ಅಮ್ಮನನ್ನು ಅವರಿದ್ದಾಗಲೇ ಆಧರಿಸಿ, ಹಾರೈಕೆ ಮಾಡಬೇಕೆಂದು ಹೇಳುತ್ತದೆ. ಈ ವಿಭಾಗದಲ್ಲಿನ ಕವಿತೆಗಳು ಯೋಧನ ಪತ್ನಿಯ ಸ್ವಗತವನ್ನು ಹೇಳುತ್ತವೆ. ಕಹಿ ನೆನಪುಗಳ ಮರೆತುಬಿಡುವುದರ ಸುಖವನ್ನು ಹೇಳುತ್ತವೆ. ಇಂತಹದ್ದೆ ನಮ್ಮವೇ ಆದ, ನಮ್ಮ ಸುತ್ತಲೂ ಕಂಡುಬರುವ, ಸನ್ನಿವೇಶ ಹಾಗೂ ವ್ಯವಸ್ಥೆಗಳ ಕುರಿತಾದ ೬೦ಕ್ಕೂ ಅಧಿಕ ಕವಿತೆಗಳು ಈ ಸಂಕಲನದ ಒಳಗಿದ್ದು ಮೇಲ್ನೋಟಕ್ಕೆ ಸುಲಭಕ್ಕೆ ದಕ್ಕಂತಹವುಗಳೆನ್ನಿಸಿದರು ಅಂತರಾಳದಲ್ಲಿ ಹೊಸ ಅರಿವುಗಳನ್ನು ನೀಡುವ ಕವಿತೆಗಳು ಇವಾಗಿವೆ. ಸೌಜನ್ಯಾರವರ ಮೊದಲ ಕವನ ಸಂಕಲನವಾದರೂ ಕವಿತೆಗಳನ್ನು ಓದಿದಾಗ ಹಾಗನ್ನಿಸುವುದಿಲ್ಲ, ಇಲ್ಲಿನ ಕವನಗಳಲ್ಲಿ ತೀವ್ರ ಪ್ರೇಮಾಲಾಪವಿದೆ, ಮರೆಯಲಾಗದ ವಿರಹವಿದೆ, ಬದುಕಿನ ಒಳತಿರುಳುಗಳ ನೆನಪುಗಳನ್ನು ಮೆಲುಕುಹಾಕುವ ವಿಡಂಬನೆಯ ಸಾಲುಗಳಿವೆ. ಕಾವ್ಯಕ್ರೇತ್ರದಲ್ಲಿ ವಿಹರಿಸಬೇಕೆಂಬ ಅಧಮ್ಯ ಉತ್ಸಾಹದಿಂದ ಭಾವನೌಕೆಯನ್ನೇರಿ ಪ್ರವಾಸ ಹೊರಟಿರುವ ಸೌಜನ್ಯರವರನ್ನು ಸಾಹಿತ್ಯ ಕ್ಷೇತ್ರ ಬಿಗಿದಪ್ಪಿ ಸತ್ಕರಿಸಲಿ ಎಂಬುದೇ ಕಾವ್ಯಾಸಕ್ತರ ಆಶಯ..