Advertisement
ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಮಾನವನ ಹುಟ್ಟು, ವಲಸೆ, ನಾಗರಿಕ ತೊಟ್ಟಿಲುಗಳು, ಕೃಷಿ ಮತ್ತು ಗಣಿಗಾರಿಕತೆಗಳು ಎಲ್ಲವೂ ಜೊತೆಜೊತೆಯಾಗಿಯೇ ನಡೆಯಿತು. ಕೃಷಿ ಕಂಡುಕೊಂಡಾಗಲೇ ಲೋಹಗಳ ಮೇಲೆಯೂ ಮನುಷ್ಯನ ಕಣ್ಣು ಬಿದ್ದಿತು. ದಕ್ಷಿಣ ಭಾರತದಲ್ಲಿ ಕೊಳ್ಳದೇವತೆಗಳೆ ಕೃಷಿಗೆ ಕಾರಣ ಎನ್ನುವ ಮಾತಿದೆ. ಭಾರತೀಯ ಪ್ರಾಚೀನ ಗಣಿಗಾರಿಕೆಯ ಈ ಸಣ್ಣ ಕೃತಿಗೆ ಇಷ್ಟೆಲ್ಲ ಪ್ರವೇಶವನ್ನು ಬರೆಯಬೇಕಾಯಿತು. ಯಾಕೆಂದರೆ ಭಾರತೀಯ ಪ್ರಾಚೀನ ಗಣಿಗಾರಿಕೆ ಮಾನವನ ವಲಸೆ ಮತ್ತು ನಾಗರಿಕ ತೊಟ್ಟಿಲುಗಳಿಂದ ಬೆರೆತುಹೋಗಿದೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿ ಬರಹ ಇಂದಿನಿಂದ ಪ್ರತಿ ಸೋಮವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ

ಪ್ರವೇಶ

ಮೂಲ ಮಾನವನ ವಲಸೆ: ಸರಿಸುಮಾರು 20 ಲಕ್ಷ ವರ್ಷಗಳ ಹಿಂದೆ ಮನುಷ್ಯ ಪ್ರಭೇದ ಹೋಮೋ ಎರೆಕ್ಟಸ್‌ನ ವಲಸೆ ಆಫ್ರಿಕಾದಿಂದ ಪ್ರಾರಂಭವಾಯಿತು. ಇವರಲ್ಲಿ ಹೈಡೆಲ್ಬರ್ಜೆನ್ಸಿಸ್ ಕೂಡ ಸೇರಿದ್ದಾರೆ. ಇವರು ಐದು ಲಕ್ಷ ವರ್ಷಗಳ ಹಿಂದೆ ವಾಸಿಸುತ್ತಿದ್ದು ಡೆನಿಸೋವನ್‌ಗಳು ಮತ್ತು ನಿಯಾಂಡರ್ತಲ್‌ಗಳು ಹಾಗೂ ಆಧುನಿಕ ಮಾನವರ ಪೂರ್ವಜರಾಗಿದ್ದರು. ಆರಂಭಿಕ ಹೋಮಿನಿಡ್‌ಗಳು ಬಹುಶಃ ಭೂಸೇತುವೆಗಳನ್ನು ದಾಟಿರಬಹುದು, ಅವೆಲ್ಲ ಈಗ ಮುಳುಗಿವೆ. ಹೋಮೋ ಸೇಪಿಯನ್ಸ್ ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಪ್ರಭೇದೀಕರಣದ ಕಾಲದಲ್ಲಿ ಚದುರಿಹೋದವು. ಇತ್ತೀಚಿನ ಆಫ್ರಿಕನ್ ಮೂಲದ ಸಿದ್ಧಾಂತವು, ಆಫ್ರಿಕಾದ ಹೊರಗಿನ ಅಂಗರಚನಾಶಾಸ್ತ್ರದ ಆಧುನಿಕ ಮಾನವರು ಸುಮಾರು 70-50 ಸಾವಿರ ವರ್ಷಗಳ ಹಿಂದೆ ಪೂರ್ವ ಆಫ್ರಿಕಾದಿಂದ ವಲಸೆ ಬಂದು ಏಷ್ಯಾದ ದಕ್ಷಿಣ ಕರಾವಳಿ ಮತ್ತು ಓಷಿಯಾನಿಯಾಕ್ ಪ್ರದೇಶಗಳಲ್ಲಿ ಸುಮಾರು 50 ಸಾವಿರ ವರ್ಷಗಳ ಹಿಂದೆ ಹರಡಿದ ಹೋಮೋಸೇಪಿಯನ್ಸ್ ಜನರಿಂದ ಬಂದವರು ಎಂದು ಸೂಚಿಸುತ್ತದೆ. ಆಧುನಿಕ ಮಾನವರು ಸುಮಾರು 40 ಸಾವಿರ ವರ್ಷಗಳ ಹಿಂದೆ ಯುರೋಪಿನಾದ್ಯಂತ ಹರಡಿಕೊಂಡರು.

ಇಸ್ರೇಲ್‌ನ ಮಿಸ್ಲಿಯಾ ಗುಹೆಗಳಲ್ಲಿ ಆರಂಭಿಕ ಯುರೇಷಿಯನ್ ಹೋಮೋಸೇಪಿಯನ್ಸ್ ಪಳೆಯುಳಿಕೆಗಳು ಕಂಡುಬಂದಿವೆ, ಇವು ಸುಮಾರು 194,000-177,000 ವರ್ಷಗಳಷ್ಟು ಹಳೆಯವು. ಕೆಲವು ಪೇಲಿಯೋಆಂಥ್ರೋಪೊಲಾಜಿಸ್ಟ್‌ಗಳು ಸುಮಾರು 210,000 ವರ್ಷಗಳಷ್ಟು ಹಳೆಯದಾದ ಅಪಿಡಿಮಾ ಗುಹೆಗಳಲ್ಲಿ (ಗ್ರೀಸ್) ಕಂಡುಬಂದ ತಲೆಬುರುಡೆಯ ತುಣುಕುಗಳು ಹೋಮೋಸೇಪಿಯನ್ಸ್ಗೆ ಸೇರಿರಬಹುದು ಎಂದು ಊಹಿಸುತ್ತಾರೆ; ಆದರೆ ಇದು ಖಚಿತವಲ್ಲ. ಈ ಪಳೆಯುಳಿಕೆಗಳು ಆರಂಭಿಕ ಹೋಮೋಸೇಪಿಯನ್ಸ್‌ನ ವಿಫಲ ಪ್ರಸರಣದ ಪ್ರಯತ್ನಗಳನ್ನು ಪ್ರತಿನಿಧಿಸುತ್ತದೆ ಎಂದು ತೋರುತ್ತದೆ, ಅವರನ್ನು ಸ್ಥಳೀಯ ನಿಯಾಂಡರ್ತಲ್ ಜನಸಂಖ್ಯೆಯಿಂದ ಬದಲಾಯಿಸಿರಬಹುದು. ವಲಸೆ ಹೋಗುತ್ತಿರುವ ಆಧುನಿಕ ಮಾನವ ಜನಸಂಖ್ಯೆಯು ಹಿಂದಿನ ಸ್ಥಳೀಯ ಜನಸಂಖ್ಯೆಯೊಂದಿಗೆ ಮಿಶ್ರ ತಳಿಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಕೊನೆಯ ಹಿಮನದಿಯ ಗರಿಷ್ಠದ ನಂತರ, ಉತ್ತರ ಯುರೇಷಿಯನ್ ಜನಸಂಖ್ಯೆಯು ಸುಮಾರು 20 ಸಾವಿರ ವರ್ಷಗಳ ಹಿಂದೆ ಅಮೆರಿಕಕ್ಕೆ ವಲಸೆಹೋಯಿತು. ಆರ್ಕ್ಟಿಕ್ ಕೆನಡಾ ಮತ್ತು ಗ್ರೀನ್‌ಲ್ಯಾಂಡ್‌ಅನ್ನು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಪೇಲಿಯೊ-ಎಸ್ಲಿಮೊ ವಿಸ್ತರಣೆಯಿಂದ ತಲುಪಲಾಯಿತು. ಅಂತಿಮವಾಗಿ ಆಸ್ಟ್ರೋನೇಷಿಯನ್ ವಿಸ್ತರಣೆಯ ಕೊನೆಯ ಅಲೆಯಲ್ಲಿ ಪಾಲಿನೇಷ್ಯಾದಲ್ಲಿ ಕಳೆದ ಎರಡು ಸಾವಿರ ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಿತ್ತು. ಸುಮಾರು ಮೂರು ದಶಲಕ್ಷ ವರ್ಷಗಳ ಹಿಂದೆ ಆಸ್ಟ್ರಲೋಪಿಥೆಸಿನ್ ಪೂರ್ವಜರಿಂದ ಆರಂಭಿಕ ಮಾನವರು ವಿಕಸನಗೊಂಡರು, ಹೆಚ್ಚಾಗಿ ಕೀನ್ಯಾದ ರಿಫ್ಟ್ ಕಣಿವೆಯ ಪ್ರದೇಶದಲ್ಲಿ, ಅಲ್ಲಿ ಅತ್ಯಂತ ಹಳೆಯ ಕಲ್ಲುಗಳ ಉಪಕರಣಗಳು ಕಂಡುಬಂದಿವೆ. ಇತ್ತೀಚೆಗೆ ಚೀನಾದ ಶಾಂಗ್ಚೆನ್ ಸ್ಥಳದಲ್ಲಿ ಪತ್ತೆಯಾದ ಮತ್ತು 2.12 ದಶಲಕ್ಷ ವರ್ಷಗಳ ಹಿಂದಿನ ಕಲ್ಲಿನ ಉಪಕರಣಗಳು ಆಫ್ರಿಕಾದ ಹೊರಗೆ ಹೋಮಿನಿನ್‌ಗಳ ಆರಂಭಿಕ ಪುರಾವೆಗಳಾಗಿವೆ ಎಂದು ಹೇಳಲಾಗುತ್ತದೆ, ಇದು ಜಾರ್ಜಿಯಾದ ಡ್ಮಾನಿಸಿಯನ್ನು ಮೂರು ಲಕ್ಷಗಳಷ್ಟು ಮೀರಿಸಿದೆ.

ಇದರ ನಂತರ ಹೋಮೋಎರಕ್ಟಸ್, ಹೋಮೋ ಸೇಪಿಯನ್ಸ್ ಆಫ್ರಿಕಾದಾದ್ಯಂತ, ನಂತರ ಎಲ್ಲಾ ಖಂಡಗಳು ಮತ್ತು ಕಡಲು ಪ್ರದೇಶಗಳವರೆಗೂ ವಲಸೆ ಹೋದರು. ಅದರ ನಂತರ ಯುರೇಷ್ಯಾದಾದ್ಯಂತ, ಯುರೋಪ್, ಪೂರ್ವ, ದಕ್ಷಿಣಪೂರ್ವ ಮತ್ತು ಉತ್ತರ ಏಷ್ಯಾದಾದ್ಯಂತ ಹರಡಿಕೊಂಡರು. ಅನಂತರವೂ ನಿರಂತರವಾಗಿ ಮಾನವ ವಲಸೆ ನಡೆಯುತ್ತಲೇ ಇತ್ತು. ಇದು ಮೂಲ ಮಾನವನ ಒಂದು ಸಣ್ಣ ವಲಸೆಯ ಕತೆಯಷ್ಟೇ.

ಪ್ರಾರಂಭಿಕ ನಾಗರಿಕತೆಯ ತೊಟ್ಟಿಲುಗಳು: ಮಾನವ ವಲಸೆಯ ಜೊತೆಜೊತೆಗೆ ನಾಗರಿಕ ತೊಟ್ಟಿಗಳು ನದಿ ದಡಗಳಲ್ಲಿ ಸೃಷಿಯಾದವು. ವಿಜ್ಞಾನಿಗಳು ಜಗತ್ತಿನಲ್ಲಿ ಸಾಮಾನ್ಯವಾಗಿ ಮೊದಲ ಅಥವಾ ಮುಖ್ಯವಾದ ಆರು ನಾಗರಿಕ ತೊಟ್ಟಿಲುಗಳನ್ನು ಗುರುತಿಸುತ್ತಾರೆ: ಮೆಸೊಪಟ್ಯಾಮಿಯಾ, ಪ್ರಾಚೀನ ಈಜಿಪ್ಟ್‌, ಪ್ರಾಚೀನ ಭಾರತ ಮತ್ತು ಪ್ರಾಚೀನ ಚೀನಾ ನಾಗರಿಕತೆಗಳು ಆಫ್ರೋ-ಯುರೇಷಿಯಾದಲ್ಲಿ ಅತ್ಯಂತ ಹಳೆಯವು ಎಂದು ಹೇಳಲಾಗುತ್ತದೆ. ಆದರೆ ಕರಾವಳಿ ಪೆರುವಿನ ಕ್ಯಾರಲ್-ಸೂಪೆ ನಾಗರಿಕತೆ ಮತ್ತು ಮೆಕ್ಸಿಕೊದ ಒಲ್ಮೆಕ್ ನಾಗರಿಕತೆಗಳು ಅಮೆರಿಕಾದಲ್ಲಿ ಅತ್ಯಂತ ಹಳೆಯವು ಎಂದು ಹೇಳಲಾಗುತ್ತದೆ. ಎಲ್ಲಾ ನಾಗರಿಕ ತೊಟ್ಟಿಲುಗಳು ಮೂಲವಾಗಿ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿವೆ (ಬಹುಶಃ ಕ್ಯಾರಲ್-ಸೂಪೆ ಹೊರತುಪಡಿಸಿ, ಇದು ಆರಂಭದಲ್ಲಿ ಸಮುದ್ರ ಸಂಪನ್ಮೂಲಗಳನ್ನು ಅವಲಂಬಿಸಿರಬಹುದು).

ಕ್ರಿ.ಪೂ. 12 ಸಾವಿರ ವರ್ಷಗಳ ಹಿಂದೆಯೇ ಲೆವಂಟ್‌ನಲ್ಲಿ (sedentary) ಜಡ ಸಂಸ್ಕೃತಿಗೆ ಕಾರಣವಾಗುವ ಪ್ರಕ್ರಿಯೆಯ ಆರಂಭಿಕ ಚಿಹ್ನೆಗಳನ್ನು ಕಾಣಬಹುದು, ಆಗ ನಟುಫಿಯನ್ ಸಂಸ್ಕೃತಿ ಜಡವಾಯಿತು; ಅದು ಕ್ರಿ.ಪೂ. 10 ಸಾವಿರ ವರ್ಷಗಳ ಹೊತ್ತಿಗೆ ಕೃಷಿ ಸಮಾಜವಾಗಿ ವಿಕಸನಗೊಂಡಿತು. ಪ್ರಾಣಿಗಳನ್ನು ಬೇಟೆಯಾಡುವುದು, ಮೀನುಗಾರಿಕೆ ಮತ್ತು ಧಾನ್ಯಗಳು ಸೇರಿದಂತೆ ಸಂಪನ್ಮೂಲಗಳನ್ನು ಸಂಗ್ರಹಿಸಲು ಅನುಕೂಲಕರ ಪರಿಸ್ಥಿತಿಗಳಿಂದಾಗಿ ಹೇರಳವಾದ ಮತ್ತು ಸ್ಥಿರವಾದ ಆಹಾರ ಪೂರೈಕೆಯನ್ನು ರಕ್ಷಿಸಲು ನೀರಿನ ಪ್ರಾಮುಖ್ಯತೆಯ ಶಾಶ್ವತ ಹಳ್ಳಿಗಳ ಸೃಷ್ಟಿಗೆ ಕಾರಣವಾದ ಆರಂಭಿಕ ವಿಶಾಲ ವ್ಯಾಪ್ತಿಯ ಆರ್ಥಿಕತೆಯನ್ನು ಒದಗಿಸಿತು.

ಕ್ರಿ.ಪೂ. 10 ಸಾವಿರ ವರ್ಷಗಳ ಆಸುಪಾಸು ಪಶ್ಚಿಮ ಏಷ್ಯಾದಲ್ಲಿ ಪ್ರಾರಂಭವಾದ ನವಶಿಲಾಯುಗದಲ್ಲಿ ಹಲವಾರು ಸಾವಿರ ನಿವಾಸಿಗಳನ್ನು ಹೊಂದಿರುವ ಆರಂಭಿಕ ಮೂಲ-ನಗರ ವಸಾಹತುಗಳು ಸೃಷ್ಟಿಯಾದವು. ಹತ್ತಾರು ಸಾವಿರ ಜನರಿಗೆ ನೆಲೆ ಕಲ್ಪಿಸುವ ಮೊದಲ ಪಟ್ಟಣಗಳು ಮೆಸೊಪಟ್ಯಾಮಿಯಾದ ಉರುಕ್, ಉರ್, ಕಿಶ್, ಮತ್ತು ಎರಿಡು, ನಂತರ ಎಲಾಮ್‌ನಲ್ಲಿ ಸುಸಾ ಮತ್ತು ಈಜಿಪ್ಟ್ ಮೆಂಫಿಸ್ ಪಟ್ಟಣಗಳು ಕಾಣಿಸಿಕೊಂಡವು. ನಾಗರಿಕತೆಯ ಉದಯವು ಮೂಲ-ಬರವಣಿಗೆಯ ಜೊತೆಜೊತೆಗೆ ನಡೆಯಿತು ಎಂದು ಪರಿಗಣಿಸಿದರೆ, ಪೂರ್ವ ಚಾಲ್ಕೊಲಿಥಿಕ್-ತಾಮ್ರ ಕಲ್ಲು (ಕ್ರಿ.ಪೂ. ನಾಲ್ಕನೇ ಸಹಸ್ರಮಾನದಲ್ಲಿ ನವಶಿಲಾಯುಗ ಮತ್ತು ಕಂಚಿನ ಯುಗದ ನಡುವಿನ ಸಂಕ್ರಮಣ ಅವಧಿ) ಮತ್ತು ದಕ್ಷಿಣ ಏಷ್ಯಾದ ಸಿಂಧೂ ಕಣಿವೆಯ ಹರಪ್ಪಾದಲ್ಲಿ ಕ್ರಿ.ಪೂ. 3300ರ ಸುಮಾರಿಗೆ ಮೂಲ-ಬರವಣಿಗೆ ಆರಂಭಿಕ ನಿದರ್ಶನಗಳಿವೆ. ನಂತರ ಚೀನಿ ಮೂಲ-ಬರವಣಿಗೆಯ ಒರಾಕಲ್ ಮೂಳೆ ಲಿಪಿಯಾಗಿ ವಿಕಸನಗೊಂಡಿತು. ಮತ್ತೆ ಸುಮಾರು ಕ್ರಿ.ಪೂ. 900 ರಿಂದ ಮೆಸೊಅಮೆರಿಕನ್ ಬರವಣಿಗೆ ವ್ಯವಸ್ಥೆಗಳು ಬರವಣಿಗೆಯೊಂದಿಗೆ ಆರಂಭಗೊಂಡವು.

ಫಲವತ್ತಾದ ಕ್ರೆಸೆಂಟ್: ಇದು ಫಲವತ್ತಾದ ಅರ್ಧಚಂದ್ರಾಕಾರದ ಪಶ್ಚಿಮ ಏಷ್ಯಾದಲ್ಲಿ ಎತ್ತರದ ಪ್ರದೇಶವಾದ ಇಂದಿನ ಆಧುನಿಕ ಈಜಿಪ್ಟ್, ಪ್ಯಾಲಸ್ಟೈನ್, ಇಸ್ರೇಲ್, ಲೆಬನಾನ್, ಸಿರಿಯಾ, ಜೋರ್ಡಾನ್, ಟರ್ಕಿ ಮತ್ತು ಇರಾಕ್ ಪ್ರದೇಶ. ಮೂಲವಾಗಿ ಕೃಷಿ ಪದ್ಧತಿ ಕೈಗೊಂಡ ಪ್ರದೇಶಗಳಲ್ಲಿ ಒಂದಾಗಿದೆ. ಕ್ರಿ.ಪೂ. 10200ರ ಹೊತ್ತಿಗೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ನವಶಿಲಾಯುಗದ ಸಂಸ್ಕೃತಿಗಳು, ಪೂರ್ವ-ಕುಂಬಾರಿಕೆ ನವಶಿಲಾಯುಗವನ್ನು (ಕ್ರಿ.ಪೂ. 7600 ರಿಂದ 6000) ಹಂತಗಳಲ್ಲಿ ನಿರೂಪಿಸಲ್ಪಟ್ಟದೆ. ಇದು ಮೊದಲ ಮತ್ತು ಹಳೆಯ ನಾಗರಿಕ ತೊಟ್ಟಿಲು ಎಂದು ಗುರುತಿಸಲಾಗುತ್ತದೆ.

ಮೆಸೊಪಟ್ಯಾಮಿಯ: ಇದು ಆಧುನಿಕ ಇರಾಕ್ ಮತ್ತು ಆಗ್ನೇಯ ಟರ್ಕಿ, ಸಿರಿಯಾ ಮತ್ತು ವಾಯುವ್ಯ ಇರಾನ್‌ನ ಗಡಿ ಪ್ರದೇಶಗಳನ್ನು ಒಳಗೊಂಡ ಪ್ರದೇಶವಾಗಿದೆ. ಟೈಗ್ರಿಸ್ ಮತ್ತು ಯೂಫ್ರಟಿಸ್ ನದಿಗಳ ಸಂಗಮ ಸಮೃದ್ಧ ಫಲವತ್ತಾದ ಮಣ್ಣು ಮತ್ತು ನೀರಾವರಿಯನ್ನು ಪೂರೈಕೆಯನ್ನು ಒದಗಿಸಿತು. ಕ್ರಿ.ಪೂ. 8000 ರಿಂದ ಇಲ್ಲಿ ನವಶಿಲಾಯುಗದ ಸಂಸ್ಕೃತಿ ಹೊಮ್ಮಿತು. ಕ್ರಿ.ಪೂ. 6000ರ ಸುಮಾರಿಗೆ ನವಶಿಲಾಯುಗದ ವಸಾಹತುಗಳು ಈಜಿಪ್ಟ್‌ನಾದ್ಯಂತ ಕಾಣಿಸಿಕೊಂಡವು. ರೂಪವಿಜ್ಞಾನ (morphology), ಆನುವಂಶಿಕೆ ಮತ್ತು ಪುರಾತತ್ವಶಾಸ್ತ್ರದ ದತ್ತಾಂಶಗಳು ಇಲ್ಲಿ ದೊರಕಿವೆ. ಪ್ರಾಚೀನ ಈಜಿಪ್ಟ್‌ನಲ್ಲಿ ಪೂರ್ವ-ಕುಂಬಾರಿಕೆ ನವಶಿಲಾಯುಗ (ಕ್ರಿ.ಪೂ. 10200) ಮತ್ತು ಪೂರ್ವ-ಕುಂಬಾರಿಕೆ ನವಶಿಲಾಯುಗ (ಕ್ರಿ.ಪೂ. 7600 ರಿಂದ 6000) ಕಾಲಕ್ಕೆ ಸೇರಿದ ನವಶಿಲಾಯುಗದ ಅಭಿವೃದ್ಧಿಯನ್ನು ಇಲ್ಲಿ ನೋಡಬಹುದು.

ಮೆಹರ್‌ಗಢ-ಸಿಂಧೂ ಕಣಿವೆ-ಹರಪ್ಪಾ-ರಾಖಿಗಢಿ: ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ವಿಶ್ವಾಸಾರ್ಹವಾಗಿ ಕಾಲ ನಿರ್ಧರಿಸಲ್ಪಟ್ಟ ನವಶಿಲಾಯುಗದ ತಾಣವೆಂದರೆ ಇಂದಿನ ಪಾಕಿಸ್ತಾನ ಕಚ್ಚಿ ಬಯಲಿನಲ್ಲಿರುವ ಮೆಹರ್‌ಗಢ, ಇದು ಕ್ರಿ.ಪೂ. 7000ರ ಹಿಂದಿನದು. ಇಲ್ಲಿ ಸೆರಾಮಿಕ್ ನವಶಿಲಾಯುಗವು ಕ್ರಿ.ಪೂ. 7000-5500 ರವರೆಗೆ ದೊರಕಿದೆ. ಇದು ಮುಂದೆ ಕ್ರಿ.ಪೂ. 3300 ರವರೆಗೂ ವಿಸ್ತರಿಸಿ ಆರಂಭಿಕ ಕಂಚಿನ ಯುಗದಲ್ಲಿ ಬೆರೆಯುತ್ತದೆ. ಭಾರತೀಯ ಉಪಖಂಡದಲ್ಲಿ ಕೃಷಿ ಮತ್ತು ಪಶುಪಾಲನೆಯ ಪುರಾವೆಗಳನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿಂದ ವಲಸೆಹೋದ ಜನರು ಸಿಂಧೂ ಕಣಿವೆಗೆ ವಲಸೆಹೋಗಿ ಸಿಂಧೂ ಕಣಿವೆ ನಾಗರಿಕತೆ ಅಭಿವೃದ್ಧಿ ಹೊಂದಿದ ಸಾಧ್ಯತೆಗಳಿವೆ.

ಸಿಂಧೂ ಕಣಿವೆ ನಾಗರಿಕತೆಯು ಸುಮಾರು ಕ್ರಿ.ಪೂ. 3300ರ ಸುಮಾರಿಗೆ ಆರಂಭಿಕ ಹರಪ್ಪಾ ಹಂತ (ಕ್ರಿ.ಪೂ. 3300 ರಿಂದ 2600) ದೊಂದಿಗೆ ಪ್ರಾರಂಭವಾಗುತ್ತದೆ. ಸಿಂಧೂ ಲಿಪಿಯ ಆರಂಭಿಕ ಉದಾಹರಣೆಗಳು ಈ ಅವಧಿಗೆ ಸೇರಿವೆ ಮತ್ತು ಈ ಕಾಲದಲ್ಲಿ ಕೋಟೆಗಳು ಸೃಷ್ಟಿಯಾದವು. ವ್ಯಾಪಾರ ಜಾಲಗಳು, ಪ್ರಾದೇಶಿಕ ಸಂಸ್ಕೃತಿಗಳು ಮತ್ತು ಲ್ಯಾಪಿಸ್ ಲಾಜುಲಿ (ಅಮೂಲ್ಯ ರತ್ನ ಕಲ್ಲುಗಳು) ಮತ್ತು ಮಣಿ ತಯಾರಿಕೆಗೆ ಇತರ ವಸ್ತುಗಳು ಸೇರಿದಂತೆ ಕಚ್ಚಾವಸ್ತುಗಳು ದೂರದ ಸ್ಥಳಗಳಿಂದ ಬಂದವು. ಸುಮಾರು ಕ್ರಿ.ಪೂ. 2600ರ ಹೊತ್ತಿಗೆ ಗ್ರಾಮಸ್ತರು ಬಟಾಣಿ, ಎಳ್ಳು, ಖರ್ಜೂರ ಮತ್ತು ಹತ್ತಿ ಸೇರಿದಂತೆ ಹಲವಾರು ಬೆಳೆಗಳನ್ನು ಹಾಗೂ ನೀರಿನ ಎಮ್ಮೆ ಸೇರಿದಂತೆ ಪ್ರಾಣಿಗಳನ್ನು ಸಾಕಿದ್ದರು.

ಕ್ರಿ.ಪೂ. 2600-1900 ರವರೆಗೆ ಪ್ರಬುದ್ಧ ಹರಪ್ಪಾ ಹಂತವನ್ನು ಗುರುತಿಸಲಾಗಿದೆ, ಈ ಕಾಲದಲ್ಲಿ ಆರಂಭಿಕ ಹರಪ್ಪಾ ಸಮುದಾಯಗಳು ಹರಪ್ಪ, ಲಫಥಾಲ್, ರೂಪರ್ ಮತ್ತು ರಾಖಿಗಢಿ ಸೇರಿದಂತೆ ದೊಡ್ಡದೊಡ್ಡ ನಗರ ಕೇಂದ್ರಗಳಾಗಿ ಮಾರ್ಪಟ್ಟವು ಮತ್ತು ಒಂದು ಸಾವಿರಕ್ಕೂ ಹೆಚ್ಚು ಪಟ್ಟಣಗಳು ಮತ್ತು ಹಳ್ಳಿಗಳು ಸೃಷ್ಟಿಯಾಗಿದ್ದವು. ಪ್ರಬುದ್ಧ ಹರಪ್ಪನ್ನರು ಲೋಹಶಾಸ್ತ್ರದಲ್ಲಿ ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸಿದರು ಮತ್ತು ತಾಮ್ರ, ಕಂಚು, ಸೀಸ ಮತ್ತು ತವರನ್ನು ಉತ್ಪಾದಿಸಿದರು ಮತ್ತು ಉನ್ನತ ಮಟ್ಟದ ಎಂಜಿನಿಯರಿಂಗ್ ಅನ್ನು ಪ್ರದರ್ಶಿಸಿದರು. ಹರಪ್ಪ, ಮಹೆಂಜೊ-ದಾರೊ ಮತ್ತು ಇತ್ತೀಚೆಗೆ ಭಾಗಶಃ ಉತ್ಖಖನನ ಮಾಡಲಾದ ರಾಖಿಗಢದಲ್ಲಿ ನಗರ ಯೋಜನೆ ವಿಶ್ವದ ಮೊದಲ ತಿಳಿದಿರುವ ನಗರ ನೈರ್ಮಲ್ಯ ವ್ಯವಸ್ಥೆಯನ್ನು ಒಳಗೊಂಡಿತ್ತು.

ಮಾನವನ ಹುಟ್ಟು, ವಲಸೆ, ನಾಗರಿಕ ತೊಟ್ಟಿಲುಗಳು, ಕೃಷಿ ಮತ್ತು ಗಣಿಗಾರಿಕತೆಗಳು ಎಲ್ಲವೂ ಜೊತೆಜೊತೆಯಾಗಿಯೇ ನಡೆಯಿತು. ಕೃಷಿ ಕಂಡುಕೊಂಡಾಗಲೇ ಲೋಹಗಳ ಮೇಲೆಯೂ ಮನುಷ್ಯನ ಕಣ್ಣು ಬಿದ್ದಿತು. ದಕ್ಷಿಣ ಭಾರತದಲ್ಲಿ ಕೊಳ್ಳದೇವತೆಗಳೆ ಕೃಷಿಗೆ ಕಾರಣ ಎನ್ನುವ ಮಾತಿದೆ. ಭಾರತೀಯ ಪ್ರಾಚೀನ ಗಣಿಗಾರಿಕೆಯ ಈ ಸಣ್ಣ ಕೃತಿಗೆ ಇಷ್ಟೆಲ್ಲ ಪ್ರವೇಶವನ್ನು ಬರೆಯಬೇಕಾಯಿತು. ಯಾಕೆಂದರೆ ಭಾರತೀಯ ಪ್ರಾಚೀನ ಗಣಿಗಾರಿಕೆ ಮಾನವನ ವಲಸೆ ಮತ್ತು ನಾಗರಿಕ ತೊಟ್ಟಿಲುಗಳಿಂದ ಬೆರೆತುಹೋಗಿದೆ. ಇನ್ನು ಈ ಅದ್ಭುತ ಭಾರತೀಯ ಪ್ರಾಚೀನ ಗಣಿಗಾರಿಕೆಯ “ಕಾಫಿ ಟೇಬಲ್ ಬುಕ್”ಅನ್ನು ತಯಾರಿಸಿದ “ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ”ದ ಭೂವಿಜ್ಞಾನಿಗಳನ್ನು ಪ್ರಶಂಸಿಸಲೇಬೇಕು. ಇಂತಹ ಒಂದು ಇಲಾಖೆಯಲ್ಲಿ ಮೂರು ದಶಕಗಳು ಕಾಲ ಕೆಲಸ ಮಾಡಿದ ನಾನು ಕೂಡ ಧನ್ಯ ಎಂದು ಹೇಳುವೆ

*****

ಅಧ್ಯಾಯ – 1: ಭಾರತದಲ್ಲಿ ಪ್ರಾಚೀನ ನಾಗರಿಕತೆಗಳು

ಆಧುನಿಕ ತಳಿಶಾಸ್ತ್ರದಲ್ಲಿನ ಒಮ್ಮತದ ಪ್ರಕಾರ ಆಧುನಿಕ ಮಾನವ ಸುಮಾರು 73,000 ಮತ್ತು 55,000 ವರ್ಷಗಳ ಹಿಂದೆ ಆಫ್ರಿಕಾ ಖಂಡದಿಂದ ಸಮುದ್ರಗಳ ಮೂಲಕ ತೆಪ್ಪೆಗಳ ಮೇಲೆ ಭಾರತ ಉಪಖಂಡಕ್ಕೆ ಬಂದರು ಎನ್ನುವುದಾಗಿ ಹೇಳಲಾಗುತ್ತದೆ. ಆದರೆ, ದಕ್ಷಿಣ ಏಷ್ಯಾದಲ್ಲಿ ಇದುವರೆಗೂ ಸಂಗ್ರಹಿಸಿರುವ ಮಾನವ ಅವಶೇಷಗಳು ಕೇವಲ 30,000 ವರ್ಷಗಳಷ್ಟು ಹಿಂದಿನದಾಗಿವೆ. ವಲಸೆ ಬಂದವರು ಒಂದು ಕಡೆ ನೆಲೆಸಿದ ಮೇಲೆ ಅವರ ಬದುಕು ಆಹಾರ, ಕೃಷಿ ಮತ್ತು ಪಶುಪಾಲನೆಗಳನ್ನು ಒಳಗೊಂಡಿರುತ್ತದೆ. ಇದು ದಕ್ಷಿಣ ಏಷ್ಯಾದಲ್ಲಿ ಕ್ರಿ.ಪೂ. 7,000 ವರ್ಷಗಳ ಹಿಂದೆ ಪ್ರಾರಂಭವಾಗಿರುವ ಆವಾಸಸ್ಥಾನಗಳಿಂದ ಕಂಡುಬಂದಿದೆ.

“ಮೆಹರ್‌ಘರ್” ಎಂಬ ಸ್ಥಳದಲ್ಲಿ ಗೋಧಿ ಮತ್ತು ಬಾರ್ಲಿಯ ಬೆಳೆಗಳನ್ನು ಮೊದಲಿಗೆ ನಾಟಿ ಮಾಡಿ ಬೆಳೆಸಿರುವ ಕುರುಹುಗಳು ದೊರಕಿವೆ. ಜೊತೆಗೆ ಆಡು, ಕುರಿ ಮತ್ತು ಜಾನವಾರುಗಳನ್ನು ಸಾಕಣೆ ಮಾಡಿರುವುದು ಕಂಡುಬಂದಿದೆ. ಕ್ರಿ.ಪೂ. 4,500ರ ವೇಳೆಗೆ ಹೆಚ್ಚು ಜನರು ಒಂದು ಕಡೆ ನೆಲೆಸಿ ಬದುಕು ಕಂಡುಕೊಂಡರು. ನಂತರ ಕ್ರಮೇಣವಾಗಿ ಹಳೆಯ ಜಗತ್ತಿನ ಆರಂಭಿಕ ನಾಗರಿಕತೆಯ ಮೇಲೆ ಸಿಂಧೂ ಕಣಿವೆಯ ನಾಗರಕತೆ ವಿಕಸನಗೊಳ್ಳಲು ಪ್ರಾರಂಭವಾಯಿತು. ಇದು ಪ್ರಾಚೀನ ಈಜಿಪ್ಟ್ ಮತ್ತು ಮೆಸೊಪಟ್ಯಾಮಿಯಾದ ಸಮಕಾಲೀನ ನಾಗರಿಕತೆಯಾಗಿದೆ. ಸಿಂಧೂ ನಾಗರಿಕತೆ ಕ್ರಿ.ಪೂ.2,500 ದಿಂದ ಕ್ರಿ.ಪೂ.1900 ವರ್ಷಗಳ ನಡುವೆ ಭಾರತದ ವಾಯುವ್ಯ ದಿಕ್ಕಿನಲ್ಲಿ ಮತ್ತು ಇಂದಿನ ಪಾಕಿಸ್ತಾನದಲ್ಲಿ ನೆಲೆಗೊಂಡಿತ್ತು.

ಕ್ರಿ.ಪೂ. 2ನೇ ಸಹಸ್ರಮಾನದ ಆರಂಭದಲ್ಲಿ ನಿರಂತರ ಬರಗಾಲ ಕಾಣಿಸಿಕೊಂಡ ಕಾರಣ ದೊಡ್ಡದೊಡ್ಡ ಪಟ್ಟಣ ಕೇಂದ್ರಗಳಿಂದ ಸಿಂಧೂ ಕಣಿವೆಯ ಜನರು ಹಳ್ಳಿಗಳ ಕಡೆಗೆ ವಲಸೆ ಬಂದರು. ಅದೇ ಸಮಯದಲ್ಲಿ, ಇಂಡೋ-ಆರ್ಯನ್ ಬುಡಕಟ್ಟು ಜನಾಂಗಗಳು ಮಧ್ಯ ಏಷ್ಯಾದಿಂದ ಪಂಜಾಬ್ ಕಡೆಗೆ ಹಲವಾರು ಸಲ ಅಲೆಗಳಲ್ಲಿ ವಲಸೆ ಬಂದರು. ಅವರ ವೇದಕಾಲದ ಅವಧಿಯನ್ನು (ಕ್ರಿ.ಪೂ.1500-ಕ್ರಿ.ಪೂ.500) ವೇದಗಳ ಸಂಯೋಜನೆಯಿಂದ ಗುರುತಿಸಲಾಗಿದ್ದು, ವೇದಗಳು ಬುಡಕಟ್ಟು ಸಮುದಾಯಗಳ ಸ್ತೋತ್ರಗಳ ದೊಡ್ಡ ಸಂಗ್ರಹಣೆಯಾಗಿದೆ.

(ಮಹೆಂಜೊ-ದಾರೋ, ಸಿಂಧೂ ನಾಗರಿಕ ತೊಟ್ಟಿಲು (Harappan.com, Mohenjo-Daro, Great bath).ಈ ಸಮುದಾಯಗಳ ಮೂಲ ವರ್ಣ ವ್ಯವಸ್ಥೆಯು ಕಾಲಾನಂತರದಲ್ಲಿ ಜಾತಿ ವ್ಯವಸ್ಥೆಯಾಗಿ ವಿಕಸನಗೊಂಡಿತು, ಅದು ಮೊದಲಿಗೆ ಪುರೋಹಿತರು, ಯೋಧರು ಮತ್ತು ರೈತರನ್ನು ಒಳಗೊಂಡಿತ್ತು. ಸ್ಥಳೀಯ ಜನರನ್ನು ಅವರ ಕಸುಬುಗಳ ಆಧಾರದಿಂದ ಅಶುದ್ಧರೆಂದು ಹೊರಗಿಡುವ ಪ್ರಕ್ರಿಯೆಗಳು ನಡೆದು ಕಸುಬುಗಳ ಆಧಾರದಿಂದ ಜಾತಿಗಳು ಹುಟ್ಟಿಕೊಂಡವು. ಪಶುಪಾಲಕ ಮತ್ತು ಅಲೆಮಾರಿ ಇಂಡೋ-ಆರ್ಯನ್ನರು ಪಂಜಾಬ್‌ನಿಂದ ಗಂಗಾ ಬಯಲು ಪ್ರದೇಶಗಳ ಕಡೆಗೆ ವಲಸೆ ಬಂದು ಕೃಷಿ ಬಳಕೆಗಾಗಿ ಅರಣ್ಯಗಳನ್ನು ನಾಶ ಮಾಡತೊಡಗಿದರು.

ವೈದಿಕ ಪಠ್ಯಗಳ ಸಂಯೋಜನೆ ಕ್ರಿ.ಪೂ. 600ಕ್ಕೆ ಕೊನೆಗೊಂಡು ಹೊಸ ಅಂತರ್‌ಪ್ರಾದೇಶಿಕ ಸಂಸ್ಕೃತಿ ಹುಟ್ಟಿಕೊಂಡಿತು. ಸಣ್ಣ ಸಂಸ್ಥಾನಗಳು ಅಥವಾ ಜನಪದಗಳನ್ನು ದೊಡ್ಡ ರಾಜ್ಯಗಳು ಅಥವಾ ಮಹಾಜನಪದರಗಳಾಗಿ ಏಕೀಕರಿಸಲಾಯಿತು. ಇದೇ ಕಾಲದಲ್ಲಿ ಎರಡನೇ ನಗರೀಕರಣ ನಡೆಯಿತು. ಈ ನಗರೀಕರಣವು ಜೈನ ಧರ್ಮ ಮತ್ತು ಬೌದ್ಧ ಧರ್ಮಗಳು ಸೇರಿದಂತೆ “ಗ್ರೇಟರ್ ಮಗಧ”ದಲ್ಲಿ ಹೊಸ ತಪಸ್ವಿ ಚಳುವಳಿಗಳು ಹುಟ್ಟಿಕೊಂಡವು. ಇವು, ಬ್ರಾಹ್ಮಣ ಧರ್ಮದ ವರ್ಧಿತ ಪ್ರಭಾವ ಮತ್ತು ಬ್ರಾಹ್ಮಣ ಪುರೋಹಿತರ ಆಚರಣೆಗಳ ಪ್ರಧಾನ್ಯತೆಯನ್ನು ವಿರೋಧಿಸಿದವು. ಆದರೆ ಬ್ರಾಹ್ಮಣ ಪುರೋಹಿತರು, ವೈದಿಕ ಧರ್ಮದೊಂದಿಗೆ ಸಂಬಂಧ ಹೊಂದಿದ್ದು ಹೊಸ ಧಾರ್ಮಿಕ ಪರಿಕಲ್ಪನೆಗಳನ್ನು ಹುಟ್ಟುಹಾಕಿದರು.

ಕ್ರಿ.ಪೂ.4 ಮತ್ತು 3ನೇ ಶತಮಾನದಲ್ಲಿ ಭಾರತೀಯ ಉಪಖಂಡದ ಬಹುತೇಕ ಭಾಗಗಳನ್ನು ಮೌರ್ಯ ಸಾಮ್ರಾಜ್ಯ ವಶಪಡಿಸಿಕೊಂಡಿತು. ಕ್ರಿ.ಪೂ. 3ನೇ ಶತಮಾನದಲ್ಲಿ “ವೊಟ್ಜ್ ಉಕ್ಕ”ನ್ನು (ಇದು ಕನ್ನಡದಿಂದ ಹುಟ್ಟಿದ ಪದ) ದಕ್ಷಿಣ ಭಾರತದಲ್ಲಿ ಉತ್ಪಾದನೆ ಮಾಡಿ ವಿದೇಶಗಳಿಗೆ ರಫ್ತು ಮಾಡಲಾಯಿತು. ಕ್ರಿ.ಪೂ. 3ನೇ ಶತಮಾನದಲ್ಲಿ ಉತ್ತರದಲ್ಲಿ ಪ್ರಾಕೃತಿ ಮತ್ತು ಪಾಲಿ ಭಾಷೆಗಳ ಸಾಹಿತ್ಯ ಮತ್ತು ದಕ್ಷಿಣದಲ್ಲಿ ತಮಿಳ್ ಸಂಘಮ್ ಸಾಹಿತ್ಯ ಮುಂಚೂಣಿಗೆ ಬಂದಿತು.

ಶಾಸ್ತ್ರೀಯ ಅವಧಿಯಲ್ಲಿ ಭಾರತದ ವಿವಿಧ ಭಾಗಗಳು ಮುಂದಿನ 1500 ವರ್ಷಗಳ ಕಾಲದಲ್ಲಿ ಅನೇಕ ರಾಜವಂಶಗಳ ಆಳ್ವಿಕೆಗೆ ಒಳಪಟ್ಟವು, ಅವುಗಳಲ್ಲಿ ಗುಪ್ತರ ಸಾಮ್ರಾಜ್ಯ ಬಹಳ ಮುಖ್ಯವಾದದ್ದು. ಈ ಅವಧಿಯಲ್ಲಿ ಭಾರತೀಯ ನಾಗರಿಕತೆ, ಆಡಳಿತ, ಸಂಸ್ಕೃತಿ ಮತ್ತು ಧರ್ಮದ ಅಂಶಗಳು (ಹಿಂದೂ ಮತ್ತು ಬೌದ್ಧ) ಏಷ್ಯಾದ ಬಹುಭಾಗಗಳಿಗೆ ಹರಡಿಕೊಂಡಿತು. ಆದರೆ ಅದೇ ಕಾಲದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮಧ್ಯಪ್ರಾಚ್ಯ ಮತ್ತು ಮೆಡಿಟರೇನಿಯನ್ ದೇಶಗಳೊಂದಿಗೆ ಸಮುದ್ರಗಳ ಮೂಲಕ ವ್ಯಾಪಾರವನ್ನು ನಡೆಸುತ್ತಿದ್ದವು.

7ನೇ ಮತ್ತು 11ನೇ ಶತಮಾನಗಳ ನಡುವಿನ ಅತ್ಯಂತ ಮಹತ್ವದ ಘಟನೆಯೆಂದರೆ “ಕನ್ನೌಜ್” (ಉತ್ತರ ಪ್ರದೇಶ) ಅನ್ನು ಕೇಂದ್ರೀಕರಿಸಿದ ತ್ರಿಪಕ್ಷೀಯ ಹೋರಾಟ. ಪಾಲ ಸಾಮ್ರಾಜ್ಯ, ರಾಷ್ಟ್ರಕೂಟ ಸಾಮಾಜ್ಯ, ರಾಷ್ಟ್ರಕೂಟ ಸಾಮ್ರಾಜ್ಯ ಮತ್ತು ಗುರ್ಜರ-ಪ್ರತಿಹಾರ ಸಾಮ್ರಾಜ್ಯಗಳ ನಡುವೆ ಎರಡು ಶತಮಾನಗಳಿಗೂ ಹೆಚ್ಚು ಕಾಲ ಹೋರಾಟಗಳು ನಡೆದವು. ದಕ್ಷಿಣ ಭಾರತವು 5ನೇ ಶತಮಾನದ ಮಧ್ಯಭಾಗದಿಂದ ಬಹುಚಕ್ರಾಧಿಪತ್ಯ ಶಕ್ತಿಗಳ ಉದಯವನ್ನು ಕಂಡಿತು, ವಿಶೇಷವಾಗಿ ಚಾಲುಕ್ಯ, ಚೋಳ, ಪಲ್ಲವ, ಚೇರ, ಪಾಂಡ್ಯನ್ ಮತ್ತು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯಗಳು.

ಚೋಳ ಸಾಮ್ರಾಜ್ಯವು ದಕ್ಷಿಣ ಭಾರತವನ್ನು ವಶಪಡಿಸಿಕೊಂಡಿತು ಮತ್ತು 11ನೇ ಶತಮಾನದಲ್ಲಿ ಆಗ್ನೇಯ ಏಷ್ಯಾ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಬಂಗಾಳದ ಕೆಲವು ಭಾಗಗಳನ್ನು ಯಶಸ್ವಿಯಾಗಿ ಆಕ್ರಮಿಸಿಕೊಂಡಿತು. ಮಧ್ಯಕಾಲೀನ ಯುಗಧ ಆದಿಕಾಲದಲ್ಲಿ ಹಿಂದೂ ಅಂಕಿಗಳನ್ನು ಒಳಗೊಂಡಂತೆ ಭಾರತೀಯ ಗಣಿತಶಾಸ್ತ್ರವು ಅರಬ್ ಜಗತ್ತಿನ ಗಣಿತ ಮತ್ತು ಖಗೋಳಶಾಸ್ತ್ರದ ಬೆಳವಣಿಗೆಯ ಮೇಲೆ ಪ್ರಭಾವ ಬೀರಿತು.

ಇಸ್ಲಾಮಿಕ್ ವಿಜಯಗಳು 8ನೇ ಶತಮಾನದಷ್ಟು ಹಿಂದೆಯೇ ಆಧುನಿಕ ಆಪ್ಘಾನಿಸ್ತಾನದಲ್ಲಿ ಮತ್ತು ಸಿಂಧ್‌ನಲ್ಲಿ ಸೀಮಿತ ಪ್ರವೇಶವನ್ನು ಕಂಡುಕೊಂಡವು. ನಂತರ ಉತ್ತರದಲ್ಲಿ ಮಹಮೂದ್ ಘಜ್ನಿಯ ಆಕ್ರಮಣಗಳು ನಡೆದವು. ದೆಹಲಿ ಸುಲ್ತಾನರ ಆಳ್ವಿಕೆಯಲ್ಲಿ ಕ್ರಿ.ಶ.1206ರಲ್ಲಿ ಮಧ್ಯ ಏಷ್ಯಾದ ಮುಸ್ಲಿಮರು ಆಳ್ವಿಕೆ ಸ್ಥಾಪಿಸಿದರು. ಇವರು 14ನೇ ಶತಮಾನದ ಆರಂಭದಲ್ಲಿ ಉತ್ತರ ಭಾರತೀಯ ಉಪಖಂಡದ ಪ್ರಮುಖ ಭಾಗಗಳನ್ನು ಆಳಿದರು. ಆದರೆ, 14ನೇ ಶತಮಾನದ ಕೊನೆಯಲ್ಲಿ ಇವರ ಪ್ರಾಬಲ್ಯ ಕ್ಷೀಣಿಸಿ ಡಕ್ಕನ್ ಸುಲ್ತಾನರ ಆಗಮನವಾಯಿತು.

ಶ್ರೀಮಂತ ಬಂಗಾಳ ಸುಲ್ತಾನರ ಆಳ್ವಿಕೆ ಮೂರು ಶತಮಾನಗಳ ಕಾಲ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿತು. ಈ ಅವಧಿಯಲ್ಲಿ ಹಲವಾರು ಪ್ರಬಲ ಹಿಂದೂ ರಾಜ್ಯಗಳು, ವಿಶೇಷವಾಗಿ ವಿಜಯನಗರ ಮತ್ತು ರಜಪೂತ ರಾಜ್ಯಗಳು ಉಗಮವಾದವು. ಉದಾ: ಮೇವಾರ್. 15ನೇ ಶತಮಾನದಲ್ಲಿ ಸಿಖ್ ಧರ್ಮ ಹುಟ್ಟಿಕೊಂಡಿತು. ಆರಂಭಿಕ ಆಧುನಿಕ ಅವಧಿಯು 16ನೇ ಶತಮಾನದಲ್ಲಿ ಪ್ರಾರಂಭವಾಯಿತು, ಮೊಘಲ್ ಸಾಮ್ರಾಜ್ಯವು ಭಾರತೀಯ ಉಪಖಂಡದ ಹೆಚ್ಚಿನ ಭಾಗಗಳನ್ನು ವಶಪಡಿಸಿಕೊಂಡಿತು. ಇದರಿಂದ ಪ್ರೋಟೋ-ಕೈಗಾರೀಕರಣ ಪ್ರಾರಂಭವಾಗಿ ಭಾರತ ಅತಿದೊಡ್ಡ ಜಾಗತಿಕ ಅರ್ಥಿಕತೆ ಮತ್ತು ಉತ್ಪಾದನಾ ಶಕ್ತಿಯಾಗಿ ಮಾರ್ಪಟ್ಟಿತು. ವಿಶ್ವದ ಜಿಡಿಪಿಯ ಕಾಲುಭಾಗ ಮೌಲ್ವೀಕರಿಸಿದ ಜಿಡಿಪಿಯೊಂದಿಗೆ ಯುರೋಪಿನ ಜಿಡಿಪಿಯ ಸಂಯೋಜನೆಗಿಂತ ಉತ್ತಮವಾಗಿತ್ತು.

18ನೇ ಶತಮಾನದ ಆರಂಭದಲ್ಲಿ ಮೊಘಲರು ಕ್ರಮೇಣ ಕುಸಿತವನ್ನು ಅನುಭವಿಸಿದರು. ಇದು ಮರಾಠರು, ಸಿಖ್ಖರು, ಮೈಸೂರಿನ ರಾಜರು, ಹೈದರಾಬಾದ್ ನಿಜಾಮರು ಮತ್ತು ಬಂಗಾಳದ ನವಾಬರಿಗೆ ಭಾರತೀಯ ಉಪಖಂಡದ ದೊಡ್ಡ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಅವಕಾಶಗಳನ್ನು ಒದಗಿಸಿತು. 18ನೇ ಶತಮಾನದ ಮಧ್ಯಭಾಗದಿಂದ 19ನೇ ಶತಮಾನದ ಮಧ್ಯಭಾಗದವರೆಗೆ ಭಾರತದ ದೊಡ್ಡ ಪ್ರದೇಶಗಳನ್ನು ಈಸ್ಟ್ ಇಂಡಿಯಾ ಕಂಪನಿ ಸ್ವಾಧೀನಪಡಿಸಿಕೊಂಡಿತು. ಇದು ಬ್ರಿಟಿಷ್ ಸರ್ಕಾರದ ಪರವಾಗಿ ಸಾರ್ವಭೌಮ ಶಕ್ತಿಯಾಗಿ ಕಾರ್ಯನಿರ್ವಹಿಸುವ ಚಾರ್ಟರ್ಡ್ ಕಂಪನಿಯಾಯಿತು.

ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಬಗ್ಗೆ ಅತೃಪ್ತಿ ಕಾಣಿಸಿಕೊಂಡು 1857ರ ವೇಳೆಗೆ ಭಾರತೀಯ ದಂಗೆಗೆ ಕಾರಣವಾಯಿತು. ಇದು ಉತ್ತರ ಮತ್ತು ಮಧ್ಯಭಾರತದ ಕೆಲವು ಭಾಗಗಳನ್ನು ನಡುಗಿಸಿತು ಮತ್ತು ಕಂಪನಿಯ ವಿಸರ್ಜನೆಗೆ ಕಾರಣವಾಯಿತು. ನಂತರ ಭಾರತವನ್ನು ಬ್ರಿಟಿಷ್ ರಾಜಪ್ರಭುತ್ವ ನೇರವಾಗಿ ಆಳಿತು. ಮೊದಲನೆ ಮಹಾಯುದ್ಧದ ನಂತರ, ಮಹಾತ್ಮಗಾಂಧಿ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರವ್ಯಾಪಿ ಹೋರಾಟವನ್ನು ಪ್ರಾರಂಭಿಸಿ ಅಹಿಂಸೆಯ ಮೂಲಕ ಹೋರಾಟಕ್ಕಾಗಿ ಹೆಸರುವಾಸಿಯಾಯಿತು.

ನಂತರ ಅಖಿಲ ಭಾರತ ಮುಸ್ಲಿಂಲೀಗ್ ಪ್ರತ್ಯೇಕ ಮುಸ್ಲಿಂ-ಬಹುಸಂಖ್ಯಾತ ರಾಷ್ಟ್ರಕ್ಕಾಗಿ ಪ್ರತಿಪಾದಿಸಿತು. ಬ್ರಿಟಿಷ್ ಭಾರತೀಯ ಸಾಮ್ರಾಜ್ಯವು ಆಗಸ್ಟ್ 1947ರಲ್ಲಿ ಭಾರತದ ಡೊಮಿನಿಯನ್ ಮತ್ತು ಪಾಕಿಸ್ತಾನದ ಡೊಮಿನಿಯನ್ ಆಗಿ ವಿಭಜನೆ ಮಾಡಿತು.

ಭಾರತೀಯ ಪ್ರಾಚೀನ ನಾಗರಿಕ ಯುಗಗಳು: ಇತಿಹಾಸಪೂರ್ವ ಯುಗ (ಕ್ರಿ.ಪೂ. 3300 ರವರೆಗೆ) :

(ಚಿತ್ರ: ಮಧ್ಯಪ್ರದೇಶದ ಭೀಮ್ಕ ಬೆಟ್ಕಾ ಬಂಡೆಗಳ ಆಶ್ರಯಗಳಲ್ಲಿ ಮಧ್ಯ ಶಿಲಾಯುಗ ಕಾಲದ ಚಿತ್ರಕಲೆ.)

ಆದಿಮಾನವನು ಗುಹೆಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುವು ಸಮಯದಲ್ಲಿ ಚಿತ್ರಕಲೆಯನ್ನು ಬಿಡಿಸಿದ್ದಾನೆ. ಇಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಮತ್ತು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವ ಚಿತ್ರಗಳನ್ನು ಬಿಡಿಸಲಾಗಿದೆ. ಚಿತ್ರಕಲೆ ನೇರವಾಗಿ ದಿನಾಂಕವನ್ನು ತೋರಿಸದಿದ್ದರೂ ಅನೇಕ ವರ್ಣ ಚಿತ್ರಗಳು ಕ್ರಿ.ಪೂ. 8000 ವರ್ಷಗಳ ಆಸುಪಾಸು ಮತ್ತು ಕೆಲವು ಇನ್ನೂ ಮುಂಚಿನ ಕಾಲಕ್ಕೆ ಸೇರಿದವಾಗಿವೆ ಎನ್ನಲಾಗಿದೆ.

ಚಿತ್ರ: ಕೇರಳ ರಾಜ್ಯದ ಮರಮೂರ್, ನವ ಶಿಲಾಯುಗದಲ್ಲಿ ನಿರ್ಮಾಣವಾಗಿರುವ ಡೋಲ್ಮೆನ್. ಡೋಲ್ಮೆನ್ ಎಂದರೆ ಬೃಹತ್ ಶಿಲಾಯುಗದ ಸಮಾಧಿಗಳು. ಇಂಥಹ ಸಮಾಧಿಗಳು ಜಗತ್ತಿನ ಅನೇಕ ಕಡೆ ದೊರಕುತ್ತವೆ.

ಚಿತ್ರ: ಕೇರಳ ರಾಜ್ಯದ ಎಡಕ್ಕಲ್ ಗುಹೆಗಳ ಒಳಗೆ ಚಿತ್ರಿಸಿರುವ ಶಿಲಾಯುಗ ಕಾಲದ (ಕ್ರಿ.ಪೂ. 6000) ರೇಖಾ ಚಿತ್ರಗಳು.

ಪೂರ್ವಶಿಲಾಯುಗ: ದಕ್ಷಿಣ ಏಷ್ಯಾ ಶಿಲಾಯುಗ ಆಫ್ರಿಕಾದಿಂದ ಬಂದ “ಹೋಮಿನಿನ್” ಜನರ ವಲಸೆ ಸುಮಾರು 2 ದಶಲಕ್ಷ ವರ್ಷಗಳ ಹಿಂದೆ ಮತ್ತು ಬಹುಶಃ ವರ್ತಮಾನಕ್ಕೆ 2.2 ದಶಲಕ್ಷ ವರ್ಷಗಳ ಮೊದಲು ಭಾರತೀಯ ಉಪಖಂಡವನ್ನು ತಲುಪಿದೆ ಎಂದು ಅಂದಾಜಿಸಲಾಗಿದೆ. ಈ ಕಾಲ ನಿರ್ಣಯವು, ಇಂಡೋನೇಷ್ಯಾದಲ್ಲಿ “ಹೋಮೋ ಎರೆಕ್ಟಸ್”ನ ಪರಿಚಿತ ಉಪಸ್ಥಿತಿಯನ್ನು ಆಧರಿಸಿದೆ. ಪ್ರಸ್ತುತಕ್ಕಿಂತ ಸುಮಾರು 1.8 ದಶಲಕ್ಷ ವರ್ಷಗಳ ಹಿಂದೆ ಮತ್ತು ಸೋನ್ ನದಿ ಕಣಿವೆಯ (ಗಂಗಾ ಉಪನದಿ, ಉತ್ತರ ಪ್ರದೇಶ) ರಿವಾಟ್ ಮತ್ತು ಪಬ್ಬಿ ಬೆಟ್ಟಗಳಲ್ಲಿ; ಇಂದಿನ ಪಾಕಿಸ್ತಾನದಲ್ಲಿ ಪ್ರೋಟೋ-ಮಾನವರು (ಇತಿಹಾಸ ಪೂರ್ವ ಮಾನವ ಪ್ರಭೇದ) ತಯಾರಿಸಿದ ಕಲ್ಲಿನ ಉಪಕರಣಗಳ ಆವಿಷ್ಕಾರವನ್ನು ಆಧರಿಸಿದೆ.

ಕೆಲವು ಹಳೆಯ ಆವಿಷ್ಕಾರಗಳನ್ನು ಹೇಳಿಕೊಂಡಿದ್ದರೂ, ನೀರಿನ ಮೂಲಕ ಹರಿದು ಸಂಚಯನಗೊಂಡ ಮಣ್ಣಿನಿ ಗಸಿಯ ಆಧಾರದಿಂದ ಮೇಲೆ ಸೂಚಿಸಿದ ಕಾಲವನ್ನು ಸ್ವತಂತ್ರ್ಯವಾಗಿ ಪರಿಶೀಲಿಸಲಾಗಲಿಲ್ಲ. ಭಾರತೀಯ ಉಪಖಂಡದ ಅತ್ಯಂತ ಹಳೆಯ “ಹೋಮಿನಿನ್” ಮಾನವನ ಪಳೆಯುಳಿಕೆ ಅವಶೇಷಗಳು ಮಧ್ಯಭಾರತದ ನರ್ಮದಾ ಕಣಿವೆಯಿಂದ ಬಂದ “ಹೋಮೋ ಎರೆಕ್ಟಸ್” ಅಥವಾ “ಹೋಮೋ ಹೈಡಲ್ಬರ್ಗ್ಸಿಸ್”ನ ಅವಶೇಷಗಳಾಗಿವೆ, ಮತ್ತು ಇವು 5 ಲಕ್ಷ ವರ್ಷಗಳಷ್ಟು ಹಿಂದಿನವು. ಇದಕ್ಕೂ ಹಳೆಯ ಪಳೆಯುಳಿಕೆಗಳನ್ನು ಶೋಧನೆ ಮಾಡಿದ್ದರೂ ಅವುಗಳ ಕಾಲದ ಬಗ್ಗೆ ಅನುಮಾನವಿದೆ.

ಪುರಾತತ್ವ ಶಾಸ್ತ್ರದ ಪುರಾವೆ ವಿಮರ್ಶೆಗಳ ಪ್ರಕಾರ ಸುಮಾರು 700,000 ವರ್ಷಗಳ ಹಿಂದಿನವರೆಗೂ ಭಾರತೀಯ ಉಪಖಂಡವನ್ನು ಹೋಮಿನಿನ್‌ಗಳು ಅಲ್ಲಲ್ಲಿ ಆಕ್ರಮಿಸಿಕೊಂಡಿದ್ದು, 2,50,000 ವರ್ಷಗಳ ಮೊದಲು ಹೆಚ್ಚು ವ್ಯಾಪಿಸಿಕೊಂಡಿದ್ದರು. ಅಂದರೆ ಪ್ರೋಟೋ-ಮಾನವರ ಉಪಸ್ಥಿತಿಯು ಪುರಾತತ್ವ ಶಾಸ್ತ್ರದ ಪುರಾವೆಗಳಲ್ಲಿ ವ್ಯಾಪಕವಾಗಿ ಕಂಡುಬಂದಿವೆ. ದಕ್ಷಿಣ ಏಷ್ಯಾದ ಐತಿಹಾಸಿಕ ಡೆಮೋಗ್ರಾಫರ್, ಟಿಮ್ ಡೈಸನ್ ಪ್ರಕಾರ ಆಧುನಿಕ ಮಾನವರಾದ ಹೋಮೋಸೇಪಿಯನ್ನರು ಮೊದಲಿಗೆ ಆಫ್ರಿಕಾದಲ್ಲಿ ಹುಟ್ಟಿಕೊಂಡರು. ನಂತರ 60,000 ಮತ್ತು 80,000 ವರ್ಷಗಳ ಹಿಂದೆ ಸಣ್ಣಸಣ್ಣ ಗುಂಪುಗಳಲ್ಲಿ ಭಾರತೀಯ ಉಪಖಂಡದ ವಾಯುವ್ಯ ಭಾಗಗಳನ್ನು ಪ್ರವೇಶಿಸಲು ಪ್ರಾರಂಭಿಸಿದರು.

ಮೈಕಲ್ ಡಿ. ಪೆಟ್ರಾಗ್ಲಿಯಾ ಮತ್ತು ಬ್ರಿಡ್ಜೆಟ್ ಆಲ್ಚಿನ್ ಪ್ರಕಾರ ವೈ-ಕ್ರೋಮೋಸೋಮ್ ಮತ್ತು ಎಮ್‌ಟಿ ಡಿಎನ್‌ಎ ದತ್ತಾಂಶವು ಆಫ್ರಿಕಾದಲ್ಲಿ ಹುಟ್ಟಿಕೊಂಡ ಆಧುನಿಕ ಮಾನವರು ದಕ್ಷಿಣ ಏಷ್ಯಾದಲ್ಲಿ ವಸಾಹತುಶಾಹಿಯನ್ನು ಕಂಡುಕೊಂಡರು ಎಂಬುದನ್ನು ಬೆಂಬಲಿಸುತ್ತದೆ. ಹೆಚ್ಚಿನ ಯುರೋಪಿಯನ್ ಅಲ್ಲದ ಸರಾಸರಿ 73-55% ಆಫ್ರಿಕಾ ಜನಸಂಖ್ಯೆಗೆ ಇದು ಹೋಲುತ್ತದೆ. ಇನ್ನೊಬ್ಬ ದಕ್ಷಿಣ ಏಷ್ಯಾದ ಪರಿಸರ ಇತಿಹಾಸಕಾರರ ಮೈಕೆಲ್ ಫಿಶರ್ ಪ್ರಕಾರ ಹೋಮೋಸೇಪಿಯನ್ಸ್ ಶ್ರೇಣಿಯು ಆಫ್ರಿಕಾದ ಆಚೆ ಮತ್ತು ಅರೇಬಿಯನ್ ಪುರ್ಯಾಯ ದ್ವೀಪದಾದ್ಯಂತ 80,000 ವರ್ಷಗಳ ಹಿಂದಿನಿಂದ 40,000 ವರ್ಷಗಳ ಹಿಂದಿನವೆರೆಗೆ ನೆಲೆನಿಂತಿದ್ದರು. ಅದಕ್ಕೆ ಮುಂಚೆ ಹಲವಾರು ಸಲ ಪ್ರಯತ್ನಿಸಿದ ವಲಸೆಗಳು ವಿಫಲವಾಗಿರಬೇಕು ಎಂದು ಹೇಳಲಾಗುತ್ತದೆ. ಪ್ರತಿಯೊಂದು ಸಲ ವಲಸೆ ಬಂದ ಮಾನವ ಪೀಳಿಗೆಗಳು ಮತ್ತಷ್ಟು ವಿಸ್ತರಿಸುತ್ತಾ ವಾಸಯೋಗ್ಯ ಪ್ರದೇಶಗಳಲ್ಲಿ ನೆಲೆಯೂರಿ ಹರಡಿದವು.

ಒಂದು ಗುಂಪಿನ ವಲಸೆ ಪರ್ಷಿಯನ್ ಕೊಲ್ಲಿ ಮತ್ತು ಉತ್ತರ ಹಿಂದೂ ಮಹಾಸಾಗರದ ಬೆಚ್ಚಗಿನ ಮತ್ತು ಉತ್ಪಾದಕ ಕರಾವಳಿ ಪ್ರದೇಶಗಳಲ್ಲಿ ನೆಲೆಯೂರಿತ್ತು. ಅಂತಿಮವಾಗಿ ಆಫ್ರಿಕಾದ ಮೂಲಸ್ಥರು ಸುಮಾರು 75,000 ದಿಂದ 35,000 ವರ್ಷಗಳ ಮಧ್ಯೆ ಭಾರತದ ಉಪಖಂಡವನ್ನು ಪ್ರವೇಶಿಸಿದರು. ಈ ಕಲ್ಪನೆ ಸ್ವಲ್ಪಮಟ್ಟಗೆ ವಿವಾದಾಸ್ಪದವಾಗಿದ್ದರೂ 78,000 ದಿಂದ 74,000 ವರ್ಷಗಳ ಹಿಂದೆ ಭಾರತೀಯ ಉಪಖಂಡದಲ್ಲಿ ಅಂಗರಚನಾಶಾಸ್ತ್ರದ ಆಧುನಿಕ ಮಾನವರ ಉಪಸ್ಥಿತಿಯನ್ನು ಸೂಚಿಸಲು ಪುರಾತತ್ವಶಾಸ್ತ್ರದ ಪುರಾವೆಗಳನ್ನು ವ್ಯಾಖ್ಯಾನಿಸಲಾಗಿದೆ. ಆಧುನಿಕ ಮಾನವರು ದಕ್ಷಿಣ ಏಷ್ಯಾವನ್ನು ದೀರ್ಘಕಾಲದವರೆಗೂ ಆಕ್ರಮಿಸಿಕೊಂಡಿದ್ದು ಆರಂಭದಲ್ಲಿ ಬೇಟೆಗಾರರಾಗಿ-ಸಂಗ್ರಹಕಾರರಾಗಿ ವಿಭಿನ್ನ ರೀತಿಯ ಪ್ರತ್ಯೇಕತೆಯಲ್ಲಿ, ಹೆಚ್ಚು ವೈವಿಧ್ಯಮಯವಾಗಿ ಕಾಣಿಸಿಕೊಂಡರು; ಮಾನವ ಆನುವಂಶಿಕ ವೈವಿಧ್ಯತೆಯಲ್ಲಿ ಆಫ್ರಿಕಾದ ನಂತರ ಏಷ್ಯಾ ಎರಡನೇ ಸ್ಥಾನದಲ್ಲಿದೆ.

ಟಿಮ್ ಡೈಸನ್ ಪ್ರಕಾರ ಆನುವಂಶಿಕ ಸಂಶೋಧನೆಗಳು ಉಪಖಂಡದ ಜನರ ಇತಿಹಾಸಪೂರ್ವ ಜ್ಞಾನಕ್ಕೆ ಇತರ ವಿಷಯಗಳಲ್ಲಿ ಕೊಡುಗೆ ನೀಡಿದೆ. ವಿಶೇಷವಾಗಿ, ಈ ಪ್ರದೇಶದಲ್ಲಿ ಆನುವಂಶಿಕ ವೈವಿಧ್ಯೆತೆಯ ಮಟ್ಟವು ಅತ್ಯಂತ ಹೆಚ್ಚಾಗಿದೆ. ವಾಸ್ತವವಾಗಿ, ಆಪ್ರಿಕಾದ ಜನಸಂಖ್ಯೆ ಮಾತ್ರ ಆನುವಂಶಿಕವಾಗಿ ಹೆಚ್ಚು ವೈವಿಧ್ಯಮಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉಪಖಂಡದಲ್ಲಿ “ಸ್ಥಾಪಕ” ಘಟನೆಗಳ ಬಗ್ಗೆ ಬಲವಾದ ಪುರಾವೆಗಳಿವೆ. ಇದರ ಅರ್ಥ, ಒಂದು ಬುಡಕಟ್ಟು ಜನಾಂಗದ ಉಪಗುಂಪಿನ ಸಣ್ಣ ಸಂಖ್ಯೆಯ “ಮೂಲ” ವ್ಯಕ್ತಿಗಳಿಂದ ಅಭಿವೃದ್ಧಿ ಹೊಂದಿದೆ ಎನ್ನುವುದು. ಇದಲ್ಲದೆ ಜಗತ್ತಿನ ಹೆಚ್ಚಿನ ಪ್ರದೇಶಗಳಿಗೆ ಹೋಲಿಸಿದರೆ, ಉಪಖಂಡದ ಜನರು ತುಲಾತ್ಮಕವಾಗಿ ಉನ್ನತ ಮಟ್ಟದ ಎಂಡೊಗಾಮಿಯನ್ನು ಅಭ್ಯಾಸ ಮಾಡುವಲ್ಲಿ ತುಲನಾತ್ಮಕವಾಗಿ ವಿಭಿನ್ನರಾಗಿದ್ದಾರೆ.

ನವ ಶಿಲಾಯುಗ: ಸುಮಾರು 9,000 ವರ್ಷಗಳ ಹಿಂದೆ ಸಿಂಧೂ ನದಿಯ ಪಶ್ಚಿಮ ಅಂಚುಗಳಲ್ಲಿ ಮೊದಲಿಗೆ ಮಾನವರು ನೆಲೆಸಲು ಪ್ರಾರಂಭಿಸಿದರು. ಕ್ರಿ.ಪೂ. 3ನೇ ಸಹಸ್ರಮಾನದಲ್ಲಿ ಸಿಂಧೂ ಕಣಿವೆಯ ನಾಗರಿಕತೆ ವಿಕಸನಗೊಂಡಿತು. ಟಿಮ್ ಡೈಸನ್ ಪ್ರಕಾರ 7,000 ವರ್ಷಗಳ ಹಿಂದೆ ಬಲೂಚಿಸ್ತಾನದಲ್ಲಿ ಕೃಷಿ ಬದುಕು ದೃಢವಾಗಿ ಸ್ಥಾಪಿತಗೊಂಡಿತ್ತು. ಮುಂದಿನ 2,000 ವರ್ಷಗಳಲ್ಲಿ ಕೃಷಿಯ ಅಭ್ಯಾಸವು ನಿಧಾನವಾಗಿ ಪೂರ್ವಾಭಿಮುಖವಾಗಿ ಸಿಂಧೂ ಕಣಿವೆಗೆ ಹರಡಿತು.

ಪ್ರಾಚೀನ ಕಾಲದ ಅತ್ಯಂತ ಸ್ಥಿರವಾದ ಕೃಷಿ ಸಮಾಜವು ಬೊಲಾನ್ ಪಾಸ್ ಮತ್ತು ಸಿಂಧೂ ಮೈದಾನದ ನಡುವಿನ ಬೆಟ್ಟಗಳಲ್ಲಿ ಮೆಹರ್‌ನಲ್ಲಿ ಕಂಡುಬಂದಿತು. ಕ್ರಿ.ಪೂ. 7,000 ವರ್ಷಗಳಷ್ಟು ಹಿಂದೆಯೇ ಅಲ್ಲಿನ ಕೃಷಿ ಸಮುದಾಯಗಳು ಭೂಮಿಯನ್ನು ಸಿದ್ಧಪಡಿಸುವಲ್ಲಿ ಮತ್ತು ನಿರ್ದಿಷ್ಟ ಸಸ್ಯಗಳನ್ನು ಆಯ್ಕೆ ಮಾಡಿ ನೆಟ್ಟು ಶ್ರಮಪಟ್ಟು ಕೃಷಿ ಮಾಡಿ ಧಾನ್ಯಗಳನ್ನು ಉತ್ಪಾದನೆ ಮಾಡತೊಡಗಿದ್ದರು. ಕೃಷಿಯ ಜೊತೆಗೆ ಕುರಿ, ಆಡು, ಹಂದಿ ಮತ್ತು ಎತ್ತುಗಳು (ಹಂಪ್ ಇರುವ ಮತ್ತು ಇಲ್ಲದಿರುವ) ಸೇರಿದಂತೆ ನಾಯಿ ಮತ್ತು ಬೆಕ್ಕುಗಳನ್ನು ಸಾಕುತ್ತಿದ್ದರು. ಎತ್ತುಗಳನ್ನು ಕೃಷಿಗೆ ಉಪಯೋಗಿಸುವುದಲ್ಲದೇ ಮಾಂಸಕ್ಕಾಗಿಯೂ ಸಾಕುತ್ತಿದ್ದರು.

ಕಂಚಿನ ಯುಗ (ಕ್ರಿ.ಪೂ. 3300 ರಿಂದ ಕ್ರಿ.ಪೂ. 1800) : ಕಂಚಿನ ಯುಗವನ್ನು ಮೊದಲ ನಗರೀಕರಣ ಯುಗ ಎಂದು ಕರೆಯಲಾಗುತ್ತದೆ.

(ಚಿತ್ರ: ಸಿಂಧೂ ಕಣಿವೆ ನಾಗರಿಕತೆಯ ನಗರವಾದ ಧೋಲಾವಿರಾದಲ್ಲಿ ನಿರ್ಮಿಸಲಾದ ಕಲ್ಲುಕಟ್ಟಡ ಜಲಾಶಯಗಳು.)

(ಚಿತ್ರ: ಲೋಥಾಲ್‌ನ ಶೌಚಾಲಯ ಒಳಚರಂಡಿ ವ್ಯವಸ್ಥೆಯ ಪುರಾತತ್ತ್ವ ಅವಶೇಷಗಳು.)

ಭಾರತೀಯ ಉಪಖಂಡದಲ್ಲಿ ಕಂಚಿನ ಯುಗವು ಕ್ರಿ.ಪೂ. 3300ರ ಸುಮಾರಿಗೆ ಪ್ರಾರಂಭವಾಯಿತು. ಪ್ರಾಚೀನ ಈಜಿಪ್ಟ್ ಮತ್ತು ಮೆಸೊಪೊಟೇಮಿಯಾ ಜೊತೆಗೆ, ಸಿಂಧೂ ಕಣಿವೆ ಪ್ರದೇಶವು ಹಳೆಯ ಜಗತ್ತಿನ ನಾಗರಿಕತೆಯ ಮೂರು ಆರಂಭಿಕ ತೊಟ್ಟಿಲುಗಳಲ್ಲಿ ಒಂದಾಗಿತ್ತು. ಈ ಮೂರರಲ್ಲಿ ಸಿಂಧೂ ಕಣಿವೆಯ ನಾಗರಿಕತೆ ಅತ್ಯಂತ ವಿಸ್ತಾರವಾದದ್ದು ಮತ್ತು ಅದರ ಉತ್ತಂಗದಲ್ಲಿ, ಐದು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿತ್ತು ಎನ್ನಲಾಗಿದೆ.

ಸಿಂಧೂ ನಾಗರಿಕತೆ ಮೊದಲಿಗೆ ಇಂದಿನ ಪಾಕಿಸ್ತಾನದಲ್ಲಿ, ಸಿಂಧೂ ನದಿ ಜಲಾನಯನ ಪ್ರದೇಶದಲ್ಲಿ ಮತ್ತು ಎರಡನೆಯದಾಗಿ ಪೂರ್ವ ಪಾಕಿಸ್ತಾನ ಮತ್ತು ವಾಯುವ್ಯ ಭಾರತದ ಘಗ್ಗರ್-ಹಕ್ರಾ ನದಿ ಜಲಾನಯನ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಕ್ರಿ.ಪೂ.2600 ರಿಂದ ಕ್ರಿ.ಪೂ.1900 ರವರೆಗೆ ಪ್ರಬುದ್ಧ ಸಿಂಧೂ ನಾಗರಿಕತೆಯು ಪ್ರವರ್ಧಮಾನಕ್ಕೆ ಬಂದಿತು. ಇದು ಭಾರತೀಯ ಉಪಖಂಡದಲ್ಲಿ ನಗರ ನಾಗರಿಕತೆಯ ಆರಂಭವನ್ನು ಸೂಚಿಸುತ್ತದೆ.

ಈ ನಾಗರಿಕತೆ ಆಧುನಿಕ ಪಾಕಿಸ್ತಾನದ ಹರಪ್ಪ, ಗನೆರಿವಾಲಾ, ಮೊಹೆಂಜೊದಾರೊ; ಮತ್ತು ಆಧುನಿಕ ಭಾರತದ ಧೋಲವೀರ, ಕಾಲಿಬಂಗನ್, ರಾಖಿಗರ್ಹಿ ಮತ್ತು ಲೋಥಾಲ್‌ನಂತಹ ನಗರಗಳನ್ನು ಒಳಗೊಂಡಿತ್ತು. ಪ್ರಾಚೀನ ಸಿಂಧೂ ನದಿ ಕಣಿವೆಯ ನಿವಾಸಿಗಳಾದ ಹರಪ್ಪನ್ನರು ಲೋಹಶಾಸ್ತ್ರ ಮತ್ತು ಕರಕುಶಲ (ಕಾರ್ನಿಯೋಲ್ ಉತ್ಪನ್ನಗಳು, ಮುದ್ರೆಗಳ ಕೆತ್ತನೆ) ಗಳಲ್ಲಿ ಹೊಸಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸಿದ್ದರು. ತಾಮ್ರ, ಕಂಚು, ಸೀಸ ಮತ್ತು ತವರನ್ನು ಇಲ್ಲೆಲ್ಲ ಉತ್ಪಾದಿಸಲಾಯಿತು. ಇಟ್ಟಿಗೆ, ರಸ್ತೆಬದಿಯ ಒಳಚರಂಡಿಯ ವ್ಯವಸ್ಥೆ ಮತ್ತು ಬಹುಮಹಡಿ ಮನೆಗಳಿಂದ ನಿರ್ಮಿಸಲಾದ ನಗರಗಳಿಗೆ ಹೆಸರುವಾಸಿಯಾಗಿ ಒಂದು ರೀತಿಯ ಪ್ರೌಢಾಳಿತವನ್ನು ಹೊಂದಿತ್ತು.

ಸಿಂಧೂ ಕಣಿವೆ ನಾಗರಿಕತೆಯ ಪತನದ ನಂತರ, ಸಿಂಧೂ ಕಣಿವೆ ನಿವಾಸಿಗಳು ಸಿಂಧೂ ಮತ್ತು ಘಗ್ಗರ್-ಹಕ್ರಾ ನದಿ ಕಣಿವೆಗಳಿಂದ ಗಂಗಾ-ಯಮುನಾ ಜಲಾನಯನ ಪ್ರದೇಶದ ಬಯಲುಗಳಿಗೆ ವಲಸೆ ಬಂದರು.

ಓಚರ್ ಬಣ್ಣದ ಕುಂಬಾರಿಕೆ ಸಂಸ್ಕೃತಿ: ಕ್ರಿ.ಪೂ. 2ನೇ ಸಹಸ್ರಮಾನದಲ್ಲಿ ಓಚರ್ ಬಣ್ಣದ ಕುಂಬಾರಿಕೆ

(ಚಿತ್ರ: ಸಿನೌಲಿ “ರಥ”, ಭಾರತೀಯ ಪುರಾತತ್ತ್ವ ಸಮೀಕ್ಷೆಯ ಛಾಯಾಚಿತ್ರ.)

ಸಂಸ್ಕೃತಿ ಗಂಗಾ-ಯಮುನಾ ದೋಹಾಬ್ ಪ್ರದೇಶಗಳಲ್ಲಿ ನೆಲೆಸಿತ್ತು. ಇವು ಕೃಷಿ ಮತ್ತು ಕಾಡು ಪ್ರಾಣಿಗಳ ಬೇಟೆಯೊಂದಿಗೆ ಗ್ರಾಮೀಣ ವಸಾಹತುಗಳಾಗಿದ್ದು, ತಾಮ್ರದ ಉಪಕರಣಗಳಾದ ಅಕ್ಷಗಳು, ಈಟಿಗಳು, ಬಾಣಗಳು ಮತ್ತು ಖಡ್ಗಳನ್ನು ಬಳಸುತ್ತಿದ್ದರು. ಈ ತಾಣಗಳಲ್ಲಿ ಕಂಚಿನ ಯುಗದಲ್ಲಿ ಗಟ್ಟಿ-ಚಕ್ರಗಳ ಬಂಡಿಗಳು ದೊರಕಿವೆ. ಇವು ಮೂಲವಾಗಿ ಕುದುರೆಗಳು ಎಳೆಯುವ ರಥಗಳ ಆವಿಷ್ಕಾರಕ್ಕೆ ನಾಂದಿಯಾಯಿತು ಎನ್ನಲಾಗಿದೆ.

ಕಬ್ಬಿಣ ಯುಗ (ಕ್ರಿ.ಶ.1500 ರಿಂದ ಕ್ರಿ.ಶ.200): ಇಂಡೋ-ಆರ್ಯನ್ ಜನರು ಪ್ರಾರ್ಥನಾ ಸ್ತೋತ್ರಗಳನ್ನು ರಚಿಸಿದ ಕಾಲವನ್ನು ವೇದಗಳ ಕಾಲ ಎಂದು ಕರೆಯಲಾಗಿದೆ. ವೈದಿಕ ಸಂಸ್ಕೃತಿ ಅಂದಿನ ವಾಯುವ್ಯ ಭಾರತದಲ್ಲಿ ನೆಲೆಸಿದ್ದು, ಭಾರತದ ಇತರ ಭಾಗಗಳಲ್ಲಿ ಇದೇ ಅವಧಿಯಲ್ಲಿ ವಿಭಿನ್ನ ಸಾಂಸ್ಕೃತಿಕ ನಾಗರಿಕತೆಗಳು ನೆಲೆಗೊಂಡಿದ್ದವು. ವೈದಿಕ ಸಂಸ್ಕೃತಿಯನ್ನು ವೇದಗಳ ಪಠ್ಯಗಳಲ್ಲಿ ವಿವರಿಸಲಾಗಿದ್ದು ಇವು ಮೊದಲು ಮೌಖಿಕವಾಗಿದ್ದು, ನಂತರದ ಕಾಲದಲ್ಲಿ ವೈದಿಕ ಸಂಸ್ಕೃತದಲ್ಲಿ ರಚಿಸಲಾಯಿತು. ವೇದಗಳು ಭಾರತೀಯ ಸಂಸ್ಕೃತದಲ್ಲಿ ಹಳೆಯ ಪ್ರಾಚೀನ ಗ್ರಂಥಗಳಾಗಿವೆ. ಸುಮಾರು ಕ್ರಿ.ಪೂ.1500 ರಿಂದ ಕ್ರಿ.ಪೂ.500 ರವರೆಗಿನ ಕಾಲವನ್ನು ವೇದಕಾಲ ಎನ್ನಲಾಗಿದೆ. ಭಾರತೀಯ ಉಪಖಂಡ ಹಲವಾರು ಸಾಂಸ್ಕೃತಿಕ ಅಂಶಗಳಿಗೆ ಅಡಿಪಾಯ ಒದಗಿಸಿದೆ. ಸಂಸ್ಕೃತಿಯ ದೃಷ್ಟಿಯಿಂದ ಭಾರತೀಯ ಉಪಖಂಡದ ಅನೇಕ ಪ್ರದೇಶಗಳು ಈ ಅವಧಿಯಲ್ಲಿ ಚಾಲ್ಕೊಲಿಥಿಕ್‌ನಿಂದ ಕಬ್ಬಿಣಯುಗಕ್ಕೆ ಪರಿವರ್ತನೆಗೊಂಡವು.

(ಮೂಲ: Historic Mining in India by Geological Survey of India (G.S.I)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ