ಒಂದು ಕರಕುಶಲ ಮಳಿಗೆಯಲ್ಲಿ ಇರಿಸಿದ್ದ ಗಣೇಶನ ವಿಗ್ರಹಕ್ಕೆ ‘ಬುದ್ಧ’ ಎಂದು ಲೇಬಲ್ ಇತ್ತು. ನಾನು ಮಾಲೀಕಳ ಬಳಿ ಹೋಗಿ ‘ನೋಡಿ, ಅದು ಗಣೇಶನ ಪ್ರತಿಮೆ, ದಯವಿಟ್ಟು ಆ ‘ಬುದ್ಧ’ ಲೇಬಲ್ ತೆಗೆದುಹಾಕಿ’ ಎಂದರೆ ಆಕೆ ಉಡಾಫೆಯಿಂದ ‘ನನ್ನ ಸ್ಟಾಫ್ ಒಬ್ಬಳು ಆ ಲೇಬಲ್ ಹಚ್ಚಿದ್ದು. ನಾಳೆ ಬಂದಾಗ ಅವಳಿಗೆ ಹೇಳುತ್ತೀನಿ’ ಎನ್ನುವುದೇ! ಅಂದರೆ ಬೇರೆ ಸಂಸ್ಕೃತಿ, ಧರ್ಮ, ನಂಬಿಕೆಗಳಿಗೆ ಅಲ್ಲಿ ಕಿಂಚಿತ್ತೂ ಬೆಲೆಯಿರಲಿಲ್ಲ. ಹತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಧಾರಾಳವಾಗಿ ಕಾಣಿಸುತ್ತಿದ್ದ ಅಬೊರಿಜಿನಲ್ ಜನ ಈಗ ಯಾಕಿಲ್ಲ ಎನ್ನುವ ನನ್ನ ಪ್ರಶ್ನೆಗೆ ಸ್ವಲ್ಪಮಟ್ಟಿಗೆ ಉತ್ತರ ದೊರಕಿತ್ತು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ವಿಶ್ವಖ್ಯಾತಿಯ ಟೆನಿಸ್ ಪಟು ನೊವಾಕ್ ಜೊಕೊವಿಚ್ ಮತ್ತು ಆಸ್ಟ್ರೇಲಿಯನ್ ಕೇಂದ್ರ ಸರಕಾರದ ನಡುವೆ ನಡೆದಿದ್ದ ನಾಟಕಕ್ಕೆ ತೆರೆಬಿದ್ದಿದೆ. ಕೋವಿಡ್-೧೯ ಸಂಬಂಧಿತ ಲಸಿಕೆಗಳನ್ನು ಹಾಕಿಸಿಕೊಳ್ಳದೆ ತಮ್ಮ ‘ಆಸ್ಟ್ರೇಲಿಯನ್ ಓಪನ್’ ಟೈಟಲನ್ನು ಮುಂದುವರೆಸಲು ಮೆಲ್ಬೋರ್ನ್ ನಗರಕ್ಕೆ ಬಂದಿದ್ದ ನೊವಾಕ್ ಕೇಂದ್ರ ಸರಕಾರದ ಆಜ್ಞೆಯನ್ನು ಪಾಲಿಸಿ ಕಳೆದ ಸೋಮವಾರ ದೇಶದಿಂದ ಹೊರನಡೆದರು. ಸುಮಾರು ಎರಡು ವಾರಗಳ ಕಾಲ ಅವರ ಹುಟ್ಟುದೇಶ ಸೆರ್ಬಿಯಾ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವೆ ಮಾತಿನ ಬಿಸಿ ಏರಿತ್ತು. ಆತನ ತಂದೆತಾಯಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಅಭಿಮಾನಿಗಳು ಆಸ್ಟ್ರೇಲಿಯದ ರಾಜಕೀಯ ನಡತೆಗಳನ್ನು ಟೀಕಿಸಿದ್ದರು. ಟೈಟಲ್ ಇರುವ ಆಟಗಾರನೇ ಇಲ್ಲವಾದರೆ ಪಂದ್ಯ ನಡೆಯುವುದಾದರೂ ಹೇಗೆ ಎಂದೆಲ್ಲ ಪ್ರಶ್ನೆಗಳಿದ್ದವು. ಈಗ ಎಲ್ಲವೂ ತಣ್ಣಗಾಗಿ, ಪಂದ್ಯ ಆರಂಭವಾಗಿದೆ!

ಇದ್ದಕ್ಕಿದ್ದಂತೆ ಹೊಸವರ್ಷದ ಹೊಚ್ಚಹೊಸತಿನ ಸವಿಯ ಗಮ್ಮತ್ತು ಇಳಿಯುತ್ತ, ಜನವರಿ ೨೬ ‘ಆಸ್ಟ್ರೇಲಿಯ ಡೇ’ ಎದುರಾಗಿದೆ. ಬಿಳಿಯರು ‘ನಮ್ಮ ದೇಶವಿದು ಆಸ್ಟ್ರೇಲಿಯಾ’ ಎಂದು ಹರ್ಷಿಸಿ ಆ ದಿನವನ್ನು ‘ಬಿಯರ್ ಅಂಡ್ ಬಾರ್ಬೆಕ್ಯೂ’ ಪಾರ್ಟಿಗಳ ಆಚರಣೆಯಲ್ಲಿ ಕಳೆದರೆ, ಅಬೊರಿಜಿನಲ್ ಜನರು ತಮ್ಮ ನೆಲವನ್ನು ಬ್ರಿಟಿಷರು ಆಕ್ರಮಿಸಿದ ದಿನವಿದು ಎಂದು ಪ್ರತಿಭಟಿಸುತ್ತಾರೆ. ಇದರ ಬಗ್ಗೆ ನಾನು ಈ ಹಿಂದೆ ಬರೆದಿದ್ದೆ. ಈ ವರ್ಷದ ವಿಶೇಷವೆಂದರೆ ಸರಕಾರಗಳು ಸೌಹಾರ್ದತೆ ಮತ್ತು ಹೊಂದಾಣಿಕೆಯ ಮಾತನ್ನು ಎತ್ತಿ ಹಿಡಿದಿವೆ. ಆ ಮಾತಿನಲ್ಲಿ ಬಿಳಿಯರು, ಮೂಲನಿವಾಸಿಗಳು ಅಲ್ಲದೆ ವಲಸಿಗರೂ ಇದ್ದಾರೆ ಎನ್ನುವುದು ಸಮಾಧಾನ ತರುತ್ತದೆ.

ಆದರೆ ಸೌಹಾರ್ದತೆ ಮತ್ತು ಹೊಂದಾಣಿಕೆಯನ್ನು ಯಾರು ಮೊದಲು ತೋರಿಸಬೇಕು ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ. ಈ ನಾಡಿಗೆ ಬಂದು ನೆಲೆ ನಿಂತವರು ಅದನ್ನು ಸದಾ ನೆನೆಸಿಕೊಳ್ಳಬೇಕೆಂದು ನನ್ನ ಅಭಿಪ್ರಾಯ. ಹಾಗೆ ಬಂದವರು ಈ ನೆಲದ ಜನರನ್ನು ಗೌರವಿಸುತ್ತಾ ಅವರೊಡನೆ ಹೊಂದಿಕೊಂಡು ಇರಬೇಕಿತ್ತು. ಆದರೆ ಆಗಿದ್ದು ಅದಕ್ಕೆ ತದ್ವಿರುದ್ಧ!

ಹೋದ ತಿಂಗಳಷ್ಟೇ ಇದನ್ನು ನಾನು ಕಣ್ಣಾರೆ ಕಂಡದ್ದು ಕಸಿವಿಸಿ ತಂದಿತ್ತು. ಕ್ರಿಸ್ಮಸ್ ಹಬ್ಬದ ದೀರ್ಘ ರಜೆಯಲ್ಲಿ ನಾವುಗಳು ಕ್ಯಾಂಪಿಂಗ್ ಹೋಗಿದ್ದೆವು. ನಾವು ಹೋದ ಸ್ಥಳ ಬ್ರಿಸ್ಬೇನ್ ನಗರದ ಪಶ್ಚಿಮದಲ್ಲಿ, ಎರಡು ಗಂಟೆಗಳ ಪಯಣದ ದೂರದಲ್ಲಿರುವ ಬ್ಲಾಕಾಲ್ ರೇಂಜ್ (Blackall Range) ಎಂಬ ಬಹುಸುಂದರ ಉಷ್ಣವಲಯ ಕಾಡು, ಬೆಟ್ಟ, ನದಿ, ಜಲಪಾತಗಳ ಶ್ರೇಣಿಯಲ್ಲಿತ್ತು. ಬಹಳ ವರ್ಷಗಳಿಂದ ಅಲ್ಲಿಯ ನದಿಗಳನ್ನು, ಜಲಪಾತಗಳನ್ನು ನೋಡುವ ಇಚ್ಛೆಯಿತ್ತು. ಕೆಲದಿನಗಳು ಅಲ್ಲೇ ತಂಗಿದರೆ ಮಾತ್ರ ಅದು ಸಾಧ್ಯವೆಂದು ಕ್ಯಾಂಪಿಂಗ್ ಹೊರಟಿದ್ದು.
ನಾವಿದ್ದ ಕ್ಯಾಂಪ್ ಸೈಟಿನ ವಿಶೇಷವೆಂದರೆ ಅಲ್ಲಲ್ಲಿ ನಿಗದಿತ ಬೆಂಕಿಹಳ್ಳ (firepit) ಇದ್ದವು. ಅದನ್ನು ತಿಳಿದು ನಮಗೆಲ್ಲ ಖುಷಿಯೋ ಖುಷಿ! ರಾಣಿರಾಜ್ಯದಲ್ಲಿ ಯಾವಾಗಲೂ ಪೊದೆಬೆಂಕಿ ಭಯವಿದ್ದದ್ದೆ. ಹಾಗಾಗಿ ಈ ಬಾರಿ ಕ್ಯಾಂಪಿಂಗಿನಲ್ಲಿ ಕಟ್ಟಿಗೆ ಉರಿಸಿ ಬೆಂಕಿ ಹಚ್ಚಿ ಅಡುಗೆ ಮಾಡುತ್ತಾ, ಬೆಂಕಿಯನ್ನು ಆನಂದಿಸಬಹುದು ಎಂದೆಲ್ಲ ಮಾತಾಯಿತು. ಜೊತೆಗೆ ಆಗಾಗ ಮಳೆ ಬರುವ ಸೂಚನೆ ಇದ್ದದ್ದರಿಂದ ಬೆಂಕಿಹಳ್ಳವಿದ್ದರೂ ಸರಿ, ನಮ್ಮ ಪುಟ್ಟದಾದ ಕುಮ್ಮುಟಿ (ಅಗ್ಗಿಷ್ಟಿಕೆ ಒಲೆ ಅಥವಾ ಕಲ್ಲಿದ್ದಿನ ಒಲೆ) ಕೂಡ ಕಾರಿನಲ್ಲಿ ಸೇರಿಕೊಂಡಿತು. ಇದರ ಬಗ್ಗೆ ನನಗೆ ಬಹಳ ಅಭಿಮಾನವಿದೆ. ಅದು ನನ್ನ ತಾಯಿಗೆ ಸೇರಿದ್ದು ಮತ್ತು ಸುಮಾರು ಅರವತ್ತು ವರ್ಷ ಹಳೆಯದು. ಅಪ್ಪಟ ಕಬ್ಬಿಣದ (cast iron) ತೂಕವಿದೆ. ಅದನ್ನು ಬೆಂಗಳೂರಿನ ಅಕ್ಕನ ಮನೆಯಿಂದ ಆಸ್ಟ್ರೇಲಿಯದ ನನ್ನ ಮನೆಗೆ ತಂದಿರಿಸಿಕೊಂಡು ಅಮ್ಮನ ನೆನಪಿನಲ್ಲಿ, ಬಾಲ್ಯದಲ್ಲಿ ಅದರ ಬೆಂಕಿಯಲ್ಲಿ ಅಮ್ಮ ಬೇಯಿಸಿದ ಅನ್ನದ ರುಚಿಯನ್ನು ನೆನೆಸಿಕೊಂಡು ಆಗಾಗ ಹಿಗ್ಗುತ್ತೀನಿ.

ಸೌಹಾರ್ದತೆ ಮತ್ತು ಹೊಂದಾಣಿಕೆಯನ್ನು ಯಾರು ಮೊದಲು ತೋರಿಸಬೇಕು ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ. ಈ ನಾಡಿಗೆ ಬಂದು ನೆಲೆ ನಿಂತವರು ಅದನ್ನು ಸದಾ ನೆನೆಸಿಕೊಳ್ಳಬೇಕೆಂದು ನನ್ನ ಅಭಿಪ್ರಾಯ. ಹಾಗೆ ಬಂದವರು ಈ ನೆಲದ ಜನರನ್ನು ಗೌರವಿಸುತ್ತಾ ಅವರೊಡನೆ ಹೊಂದಿಕೊಂಡು ಇರಬೇಕಿತ್ತು. ಆದರೆ ಆಗಿದ್ದು ಅದಕ್ಕೆ ತದ್ವಿರುದ್ಧ!

೨೦೨೦ರಲ್ಲಿ ಒಮ್ಮೆ ಯೂನಿವರ್ಸಿಟಿಯಲ್ಲಿ ನಾನು ನಡೆಸಿದ ನೇಚರ್ ಥೆರಪಿ ಸೆಷೆನ್ನಿನಲ್ಲಿ ಸೆಷನ್ ಭಾಗಿಗಳಿಗೆ flint ಅಂಡ್ steel ಬಳಸಿ ಬೆಂಕಿ ಉಂಟುಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದೆ. ಆಗ ಇದೇ ಕುಮ್ಮುಟಿಯಲ್ಲಿ ತೆಂಗಿನ ಚಿಪ್ಪು, ಒಂದಷ್ಟು ಒಣಗಿದ ಎಲೆಗಳನ್ನಿರಿಸಿ ಬೆಂಕಿ ಉರಿಸಿದ್ದೆ. ನಮ್ಮಮ್ಮನ ಕುಮ್ಮುಟಿಯ ಕಥೆಯನ್ನು ಕೇಳಿ ಅವರಿಗೆಲ್ಲ ಸಂತೋಷವಾಗಿತ್ತು. ಅದೇ ಸಂದರ್ಭದಲ್ಲಿ ಆಸ್ಟ್ರೇಲಿಯನ್ ಅಬೊರಿಜಿನಲ್ ಜನರು ಹೇಗೆ ನಿತ್ಯ ಜೀವನದಲ್ಲಿ ಸಹಜ ಬೆಂಕಿಯ ಉಪಯೋಗವನ್ನು ಪಡೆದಿದ್ದರು ಮತ್ತು ಅದನ್ನು ಅವರು ಒಂದು ದಾರ್ಶನಿಕತೆಯ ಅನುಭೂತಿ ಬೆರೆಸಿ ಥೆರಪಿಯಾಗಿ ಅನುಭವಕ್ಕೆ ತಂದುಕೊಂಡಿದ್ದರು, ಅದು ಅವರ ಅಸ್ಮಿತೆಯ ಭಾಗವಾಗಿತ್ತು ಎಂದೆಲ್ಲ ಮಾತನಾಡಿದ್ದೆ. ಅದನ್ನು ಸೆಷೆನ್ನಿನವರು ಮೆಚ್ಚಿಕೊಂಡಿದ್ದರು.

(Kondalila ಜಲಪಾತ)

ಈ ನೆಲದ ಅಂತಹ ನೈಜಜೀವನವು ಏನಾಗಿಹೋಗಿದೆ ಎಂದು ಚಿಂತಿಸಿದರೆ ವ್ಯಥೆಯಾಗುತ್ತದೆ. ವಸಾಹತುಶಾಹಿಗಳು, ಕೈಗಾರೀಕರಣ, ಬಂಡವಾಳಶಾಹಿ ಮಂತ್ರಗಳು ಇಲ್ಲಿನ ಜೀವನವನ್ನೇ ಬದಲಿಸಿದೆ. ಎಂಟು, ಒಂಭತ್ತು ವರ್ಷಗಳ ಹಿಂದೆ ನಾವು Blackall Rangeಗೆ ದಿನದ ಪ್ರವಾಸ ಬಂದಾಗ ಆಗಿನ್ನೂ ಇಲ್ಲಿನ ಪುಟಾಣಿ ಪಟ್ಟಣಗಳಲ್ಲಿ ಹೆಚ್ಚಿನ ಜನಸಂಚಾರವಾಗಲಿ, ಅಷ್ಟೊಂದು ಅಂಗಡಿಮಳಿಗೆಗಳಾಗಲಿ ಇರಲಿಲ್ಲ. ನಾವು ಅಬೊರಿಜಿನಲ್ ಜನರ ಸಂಖ್ಯೆ ಇದ್ದದ್ದನ್ನ ನೋಡಿದ್ದೆವು. ಈ ಬಾರಿ ಅಲ್ಲಿಯೇ ತಂಗಿ ಕೆಲವಾರು ದಿನ ಸಂಚರಿಸಿದರೂ ಮೂರುಮತ್ತೊಂದು ಎಂಬಷ್ಟು ಜನ ಮಾತ್ರವೇ ಕಂಡರು. ಇನ್ನುಳಿದಂತೆ ಪ್ರವಾಸಿಗರ ಸಂತೆ, ಎಲ್ಲೆಲ್ಲೂ ವ್ಯಾಪಾರದ ಗುಂಗು, ವಿಪರೀತ ಬೆಲೆ, ಕಳಪೆ ಗುಣಮಟ್ಟದ ಆಹಾರ ಮತ್ತು ಪ್ರತಿಯೊಂದು ಪುಟ್ಟ ಪಟ್ಟಣದಲ್ಲೂ ಬಿಳಿ ಆಸ್ಟ್ರೇಲಿಯನ್ನರ ಪ್ರಾಬಲ್ಯತೆ ಎದ್ದು ಕಾಣುತ್ತಿತ್ತು. ಒಂದು ಕರಕುಶಲ ಮಳಿಗೆಯಲ್ಲಿ ಇರಿಸಿದ್ದ ಗಣೇಶನ ವಿಗ್ರಹಕ್ಕೆ ‘ಬುದ್ಧ’ ಎಂದು ಲೇಬಲ್ ಇತ್ತು. ನಾನು ಮಾಲೀಕಳ ಬಳಿ ಹೋಗಿ ‘ನೋಡಿ, ಅದು ಗಣೇಶನ ಪ್ರತಿಮೆ, ದಯವಿಟ್ಟು ಆ ‘ಬುದ್ಧ’ ಲೇಬಲ್ ತೆಗೆದುಹಾಕಿ’ ಎಂದರೆ ಆಕೆ ಉಡಾಫೆಯಿಂದ ‘ನನ್ನ ಸ್ಟಾಫ್ ಒಬ್ಬಳು ಆ ಲೇಬಲ್ ಹಚ್ಚಿದ್ದು. ನಾಳೆ ಬಂದಾಗ ಅವಳಿಗೆ ಹೇಳುತ್ತೀನಿ’ ಎನ್ನುವುದೇ! ಅಂದರೆ ಬೇರೆ ಸಂಸ್ಕೃತಿ, ಧರ್ಮ, ನಂಬಿಕೆಗಳಿಗೆ ಅಲ್ಲಿ ಕಿಂಚಿತ್ತೂ ಬೆಲೆಯಿರಲಿಲ್ಲ. ಹತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಧಾರಾಳವಾಗಿ ಕಾಣಿಸುತ್ತಿದ್ದ ಅಬೊರಿಜಿನಲ್ ಜನ ಈಗ ಯಾಕಿಲ್ಲ ಎನ್ನುವ ನನ್ನ ಪ್ರಶ್ನೆಗೆ ಸ್ವಲ್ಪಮಟ್ಟಿಗೆ ಉತ್ತರ ದೊರಕಿತ್ತು. ಸೌಹಾರ್ದತೆ, ಹೊಂದಾಣಿಕೆಗಳ ಅರ್ಥ ಯಾರಿಗಾಗಬೇಕು ಎನ್ನುವ ಚಿಂತೆಯ ಗೆರೆ ಹಣೆಯ ಮೇಲೆ ಮೂಡಿತು!

ಕ್ಯಾಂಪ್ ಸೈಟಿನಲ್ಲಿ ಅವರಿವರ ಜೊತೆ ಮಾತನಾಡುತ್ತಿದ್ದಾಗ ತಿಳಿದಿದ್ದು ಈಗ Blackall Range ಎನ್ನುವ ಪ್ರದೇಶವು ಕಡು ಶ್ರೀಮಂತರ ಸ್ವರ್ಗ. ಮತ್ತು, ಬೇಸಗೆಯಲ್ಲಿ ಪ್ರವಾಸಿಗರಿಗೆ ತನ್ನ ನೈಸರ್ಗಿಕ ಸೌಂದರ್ಯದಿಂದ ಹುಚ್ಚುಹಿಡಿಸುವ ತಾಣ. ಮಿಲಿಯನ್ ಗಟ್ಟಲೆ ಡಾಲರುಗಳಿದ್ದರೆ ನಿಮಗಿಲ್ಲಿ ಜಾಗ ಕೊಳ್ಳಲು ಸ್ವಾಗತ; ಇಲ್ಲವಾದರೆ, ದಿನಪ್ರವಾಸವೇ ಗತಿ. ಇಪ್ಪತ್ತು ವರ್ಷಗಳ ಹಿಂದಿನ ತನಕ ಈ ಕಾಡುಮೇಡುಗಳಿಗೆ ಅದರದ್ದೇ ಆದ ಸ್ವಂತಿಕೆಯಿತ್ತು. ಅಬೊರಿಜನಲ್ ಜನರ ಕಥೆಗಳೊಡನೆ ಬೆರೆತಿರುವ ಇಲ್ಲಿನ ಪ್ರತಿಯೊಂದು ನದಿ, ತೊರೆ, ಬೆಟ್ಟಗುಡ್ಡಗಳಿಗೆ ಅರ್ಥವಿತ್ತು. ಬ್ರಿಸ್ಬೇನ್ ನಗರ ಬೆಳೆಯುತ್ತಾ, ಉತ್ತರಕ್ಕಿರುವ Sunshine ಕೋಸ್ಟ್ ಸುಲಭವಾಗಿ ಜನರಿಗೆ ದಕ್ಕಿತು. ಆಗ ಪಶ್ಚಿಮದಲ್ಲಿದ್ದ ಸುಂದರ ನಿಸರ್ಗಭರಿತ ತಾಣಗಳು ರಿಯಲ್ ಎಸ್ಟೇಟ್ ಕುಳಗಳ ಕಣ್ಣಿಗೆ ಬಿದ್ದು ಅಲ್ಲಿ ವಾಸವಾಗಿದ್ದ ಅಬೊರಿಜನಲ್ ಜನರನ್ನು ಗುಳೆ ಎಬ್ಬಿಸಿ, ಅದೆಲ್ಲ ಈಗ ಮಿಲಿಯನ್ ಡಾಲರ್ ಕಾರಿಡಾರ್ ಆಗಿದೆ. ಇಡೀ ಪ್ರದೇಶದ ಒಡೆತನ ೯೫% ಭಾಗ ಬಿಳಿಯ ಆಸ್ಟ್ರೇಲಿಯನ್ನರಿಗೆ ಸೇರಿದ್ದು. ಹೇಗಾದರೂ ಮಾಡಿ ಹೊರಗಿನವರನ್ನು ತಡೆಗಟ್ಟುತ್ತಾರಂತೆ. ಎಲ್ಲವೂ ಗಗನಕುಸುಮಗಳೇ!

ನಮ್ಮಂಥ ಸಾವಿರಾರು ವಲಸಿಗರು ಬ್ರಿಸ್ಬೇನ್ ನಗರದಿಂದ ದಿನಪ್ರವಾಸಕ್ಕೆಂದು ಹೊರಟು ಇಲ್ಲಿನ ಜಲಪಾತಗಳಿಗೆ ಭೇಟಿ ಕೊಡುತ್ತಾರೆ. ರಜಾದಿನಗಳಲ್ಲಂತೂ ಜನವೋ ಜನ! ಈ ಬಾರಿ ಬೇಸಗೆಯಲ್ಲಿ ಚೆನ್ನಾಗಿ ಮಳೆ ಬೀಳುವ ನಿರೀಕ್ಷೆಯಿದ್ದದ್ದರಿಂದ ಪ್ರವಾಸಿಗರ ಸಂಖ್ಯೆ ಎಂದಿಗಿಂತಲೂ ಹೆಚ್ಚಾಗಿತ್ತು ಎಂದು ಕಾಣುತ್ತದೆ. ನಾವಿದ್ದ ನೂರಾರು ಎಕರೆ ಕ್ಯಾಂಪ್ ಸೈಟಿನಲ್ಲಿ ನೂರಾರು ಕ್ಯಾಂಪಿಗರು. ಆಸ್ಟ್ರೇಲಿಯಾದಲ್ಲಿ ಆ ಪಾಟಿ ಕ್ಯಾಂಪಿಗರನ್ನು ನಾವು ಇದುವರೆಗೂ ಕಂಡಿರಲಿಲ್ಲ. ಅವರುಗಳ ದೊಡ್ಡದೊಡ್ಡ campervan, caravan, ಭಾರಿ ಟೆಂಟ್ ಸೆಟ್ ಅಪ್ ಎಲ್ಲವನ್ನೂ ಕುತೂಹಲದಿಂದ ವೀಕ್ಷಿಸಿದ್ದಾಯ್ತು.


ನಮ್ಮ ಟೆಂಟ್ ಹಿಂದೆಯೆ ಇದ್ದ ನದಿಯಲ್ಲಿ ಈಜಿ, ತೇಲಾಡಿ, ಕಯಾಕ್ ನಡೆಸಿ ಆನಂದಪಟ್ಟಿದ್ದಾಯ್ತು. ಸುತ್ತಮುತ್ತ ಜಲಪಾತಗಳನ್ನೂ ನೋಡಿ ಹರ್ಷಿಸಿದ್ದಾಯ್ತು. ಅವುಗಳಲ್ಲಿ ದೊಡ್ಡದಾದ Kondalila ಜಲಪಾತದ ನೆತ್ತಿಯನ್ನು, ಅಲ್ಲಿಯ waterholeನಲ್ಲಿ ಮುಳುಗೆದ್ದು, ಜಲಪಾತದ ಸುತ್ತ, ಉಷ್ಣವಲಯದ ಚೆನ್ನಾಗಿ ಮಳೆಬಿದ್ದು ಜಾರಿಕೆಯಿದ್ದ ಕಾಡಿನೊಳಗೆ ಐದು ಕಿಲೋಮೀಟರ್ ಪರಿಕ್ರಮವನ್ನು ಮಾಡಿ ಬಂದಾಗ ಸಂತೃಪ್ತಿಯಾಗಿತ್ತು. ಇಂತಹ ಸಮೃದ್ಧಿ ನೈಸರ್ಗಿಕ ಚೆಲುವನ್ನು ಅನುಭವಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ಅನೇಕ ಸಾವಿರ ವರ್ಷಗಳು ಈ ನೆಲಜಲಗಳನ್ನು ಕಾಪಾಡಿಕೊಂಡು ಬಂದ ನೆಲದ ಮೂಲನಿವಾಸಿಗಳಿಗೆ ಮನಸ್ಸಿನಲ್ಲೇ ನಮಿಸಿ ಹರಸಿರೆಂದು ಕೇಳಿಕೊಂಡೆ.

(ಚಿತ್ರಗಳು: ಲೇಖಕರವು)