ನೆತ್ತಿಗೇರಿದ ಜ್ವಾಲೆ

1

ನೀ ಕಾಲದ ಬೆಂಕಿತುಂಡು
ಒಂದೇ ಸಮನೆ ಉರಿಯಬೇಕು
ನನ್ನ ಕಣ್ಣೀರ ಹೊಳೆ

2

ಹೀಗೆ ಸಂಭವಿಸಿದ ಭೂಕಂಪ
ವಿದಾಯದಂತೆ ಭಾಸವಾಯಿತು
ಕ್ಷಣದಲ್ಲಿ ಎಲ್ಲವೂ ಅಪರಿಚಿತ
ಖಂಡಾಂತರ ದ್ವೀಪವಾದಂತೆ
ನೆತ್ತಿಗೇರಿದ ಜ್ವಾಲೆ ಹೊಟ್ಟೆಯೊಳಗೆ
ಈಗ ಸತ್ತುಬಿದ್ದಿದೆ ಕಾಲ
ಮುದಿ ಕತ್ತೆ ಚಲಿಸುತ್ತಿಲ್ಲ
ದೂರದ ಊರಿನ ದಿಬ್ಬದಲಿ
ಬಂಧಿಯಾಗಿದ್ದಾನೆ ಸೂರ್ಯ
ಹಠದ ಅಗ್ನಿಗೆ ಜಾರಿ
ಪಾಪ,
ಚಂದ್ರನನ್ನು ಉಡಿಯಲಿ ಕಟ್ಟಿ
ಮೂಲೆಗೆ ಎಸೆಯಲಾಗಿದೆ
ಅದಕ್ಕೆ ರಾತ್ರಿ ಭಯಂಕರ
ಬೈರೂಪಿಯಾಗಿ ಕುಣಿಯುತ್ತಿದೆ
ಹಗಲು ಲಕ್ವಾ ಹೊಡೆದ ನಿಸ್ತೇಜ
ಇಲ್ಲಿ ನಾನು ಜೊತೆಯಾಗಿದ್ದೇನೆ

3

ಸಾಕೆಂದು ವಿದಾಯದ ದಾರಿ ತುಳಿದು
ಗೋರಿ ತೋಡಿದರೂ
ಹೃದಯ ತೊಲಬಾಗಿಲಲಿ ತಡೆಯುತ್ತಿದೆ
ಗತ ಭವಿಷ್ಯದ ಚಿಮಣಿ
ಎದುರಿಟ್ಟು ಮೋಡಿ ಮಾಡುತ್ತಿದೆ
ಆದರೂ ಸತ್ಯದ ತುಣುಕೇ ತುಂಬಿವೆ
ಅದರ ಬೆಳಕಲ್ಲಿ
ಬದುಕಿನ ರೈಲಿಗೆ
ವಿದಾಯ ಹೆಳಲಿ ಹೇಗೆ

4

ಭೂಮಿ ತಿರುಗುವಂತೆ
ಸಣ್ಣಗೆ ಚಲಿಸೋಣ
ಕಾಲದ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡುತ್ತ

ಈ ಬರಗಾಲದಲ್ಲೂ ಮಳೆಗಾಲದಂತೆ
ಸುರಿಯುವ ಕಣ್ಣೀರಿಗೆ
ಒಂದು ದಾರಿ ತೋರಿಸು
ದೇಶಾಂತರದ ನೆನಪಿನ ಗತಕ್ಕೆ
ಮುತ್ತಿಟ್ಟು ನಡೆದು ಬಿಡು
ಸಂಭವ ಅಸಂಭವದ ಬಿಂದುವಿನಲಿ
ಸಾಧ್ಯವಾದರೆ ಹೂದೋಟ ನೆಟ್ಟು ಬಿಡು
ನಾಳೆಯಾದರು ವಸಂತ
ಹಾಡಬಹುದು ಎದೆಯ ಬಾಗಿಲಲಿ
ಲಲ್ಲೆಗರಿಯಬಹುದು ಭೂಖಂಡ ಅಪ್ಪಿ

5

ಸುಮ್ಮನೆ ಒಂದು ಬಾರಿ ನೋಡು
ಹಾಳು ಮಣ್ಣಿನ ಹುಡಿಯಲಿ
ಛಿದ್ರಗೊಂಡ ಜೋಪಡಿಗಳನು
ನಿನ್ನನ್ನು ನೀ ಕಳೆದುಕೊಂಡು
ಅಮುಖ್ಯವೇ ಮುಖ್ಯವಾದಂತೆ
ವರ್ತಿಸಬೇಡ ಬೀರುಗಾಳಿ ಬಾರಿಜಿಡ್ಡಾಗಿ
ಬದುಕು ಸರಳ ರೇಖೆಯಲ್ಲ
ವಕ್ರದಾರಿ ದೀರ್ಘ ಭಯಂಕರ
ತಾಳ್ಮೆ ಸಹನೆ ಉಂಡು
ಹೊರಟು ಬೀಡು
ಕಾಲ ಗರ್ಭದಲ್ಲಿ ಇದ್ದಲಿಯೂ ಚಿಗರಬಹುದು
ಕಂಡವರಾರು?

 

ಮಧು ಬಿರಾದಾರ ಮೂಲತಃ ಮಹಾರಾಷ್ರದ ಜತ್ ನವರು
ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ
‘ಕಾಲದ ರಶೀದಿ ಪುಟ’ ಇವರ ಪ್ರಕಟಿತ ಕವನ ಸಂಕಲನ