ಹದಿಹರೆಯದವರನ್ನೊಮ್ಮೆ ಮಾತನಾಡಿಸಿ ಅವರ ಮಾತಿನ ಮಧ್ಯೆ ಹಲವಾರು ಸಾರಿ ಆದರು ನನಗೆ ನೆನಪೆ ಇಲ್ಲ ಎಂಬ ಶಬ್ಧ ಪುನರಾವರ್ತಿತವಾಗುತ್ತಾ ಇರುತ್ತದೆ. ಇದು ಯಾವ ಜಾಣ ಕುರುಡು ಅಲ್ಲ ಹಾಗೆ ವಿಷಯದ ತಿರುಚುವಿಕೆಯೂ ಅಲ್ಲ ಇಲ್ಲಿ ಕೇವಲ ಮಾತಿನ ನುಣುಚುವಿಕೆ ಅಷ್ಟೆ. ಹಳೆ ರೋಗಿಗೆ ವೈದ್ಯರ ಚೀಟಿ ಮರೆತು ಬಂದೆನೆಂಬುದು ಆ ಕ್ಷಣದ ಸಬೂಬು ವೈದ್ಯರ ಸಿಡುಕಿನಿಂದ ತಪ್ಪಿಸಿಕೊಳ್ಳಲು. ಎಲ್ಲಾ ವೃತ್ತಿಯವರಲ್ಲು ತಮ್ಮ ವೃತ್ತಿಗೆ ಸಂಬಂದಪಟ್ಟಂತೆ ಕಾರ್ಯಕಾರಣ ಮರೆವು ಸಂದರ್ಭಕ್ಕೆ ಅನುಗುಣವಾಗಿ ಸರ್ವೆಸಾಮಾನ್ಯ ಇದಕ್ಕೆ ಉಪಶಮನದ ಅವಶ್ಯಕತೆಯು ಇಲ್ಲಾ. ಇದು ರೋಗವು ಅಲ್ಲ.
ವಿನಾಯಕ ಎಸ್. ನಾಯಕ ಬರೆದ ಪ್ರಬಂಧ ನಿಮ್ಮ ಓದಿಗೆ
ನಾನೊಬ್ಬ ಮಹಾನ್ ಮರೆಗುಳಿ ಮಾರಾಯಾ, ಏನು ಹೇಳಿದರು ನೆನಪಿನಲ್ಲುಳಿಯುವುದೆ ಇಲ್ಲ. ಬೆಳಗ್ಗೆ ಹೇಳಿದ್ದನ್ನು ಸಂಜೆ ಮರೆತಿರುತ್ತೇನೆ. ಸಂಜೆ ಹೇಳಿದ್ದು ಮುಂಜಾನೆ ಎದ್ದಾಗ ನೆನಪಿಗೆ ಬರುವುದಿಲ್ಲ. ಈಗ ಹೇಳಿದ್ದನ್ನು ಹತ್ತು ನಿಮಿಷದ ನಂತರ ಕೇಳಿದರೆ ನೆನಪಿನಲ್ಲಿರುವುದಿಲ್ಲ ಅಷ್ಟೊಂದು ಮರೆವು. ಎಷ್ಟೋ ಬಾರಿ ಇದರಿಂದಾಗಿ ನನ್ನ ಮೇಲೆಯೆ ನನಗೆ ಮುಜುಗರ ಹುಟ್ಟಿದ್ದು ಇದೆ. ಇದೆಂಥ ಕಾಯಿಲೆಯೋ ಮಾನಸಿಕ ರೋಗವೋ ಒಂದು ತಿಳಿಯುವುದಿಲ್ಲ. ನೂರರಲ್ಲಿ 99% ಜನ ಹೇಳುವ ನಾವು ಕೇಳಿಸಿಕೊಳ್ಳುವ ಸಾಮಾನ್ಯ ಹೇಳಿಕೆ ಇದು. ಹಾಗಾದರೆ ಈ ಮರೆಗುಳಿತನವು ಅಷ್ಟೊಂದು ಭಯಾನಕವೆ.
ಕ್ಷಣ ಮಾತ್ರದಲ್ಲಿ ಕೇಳಿದ್ದು ನೆನಪಿನಲ್ಲುಳಿಯದಂತಾಗುವುದರ ಗುಟ್ಟೇನು? ಅಷ್ಟೊಂದು ಮರೆವು ನಮ್ಮನ್ನು ಆವರಿಸಲು ಕಾರಣವಾದರು ಏನು? ಅದೇನು ಗಣಿತದ ಲೆಕ್ಕದ ಹಾಗೆ ಸುಲಭವಿದ್ದರೆ ನನಗೆ ಕಠಿಣವೆನಿಸಿದರೆ ಪಕ್ಕದ ಕಡೆಗೆ ಅಂದ ಹಾಗೆಯೆ, ಇಲ್ಲವಾದಲ್ಲಿ ಜಾರಿಕೊಳ್ಳಲು ಇರುವ ಸುಲಭ ದಾರಿಯೆ, ಕನಸಿನ ಮರೀಚಿಕೆಯ ಹಾಗೆ ಬಂದು ಮಾಯವಾಗುವ ಮಾಯಾವಿಯೆ, ಇದನ್ನೆ ನಾವು ಸ್ವಲ್ಪ ಕುಲಂಕೂಶವಾಗಿ ವಿಶ್ಲೇಷಿಸಿದಾಗ ಕೆಲವು ಕುತೂಹಲಕರವಾದ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತದೆ.
ಅದೆನೆಂದರೆ ನೋಡಿ ಸ್ವಾಮಿ ಸಾಲ ಕೊಟ್ಟಿದ್ದರ ಮರೆವು ಕೊಟ್ಟವನಿಗೆ ಎಂದೂ ಕಾಡದು. ಸಾಲ ಕೊಂಡುತಂದು ತಿಂದಿದ್ದು ಮಾತ್ರ ಸಾಲ ತೆಗೆದುಕೊಂಡವನಿಗೆ ನೆನಪಿಗೆ ಬರುವುದಿಲ್ಲ. ಪಕ್ಕದ ಮನೆಯವರ ಚಿಕ್ಕಜಗಳವು ವರ್ಷ ಪೂರ್ತಿ ನೆನಪಿಟ್ಟು ಬೇರೆಯವರ ಹತ್ತಿರ ಊದುವ ನಾವು ನಮ್ಮ ಮನೆಯಲ್ಲೆ ನಡೆದ ಜಗಳವನ್ನು ಕ್ಷಣಮಾತ್ರದಲ್ಲಿ ಮರೆತಿರುತ್ತೇವೆ. ಮನೆಯಲ್ಲಿ ಉದ್ದಿನದೋಸೆ ನಾಟಿಕೋಳಿ ಸಾರು ಮಾಡಿ ತಿಂದಿದ್ದು ದಿನಾಂಕ ಸಮೇತ ನೆನಪಿದೆ. ಅದೇ ಅವಲಕ್ಕಿ ಮಾಡಿ ಗೊಣಗುತ್ತಾ ತಿಂದಿದ್ದು ನೆನಪಿಗೆ ಬರುವುದಿಲ್ಲ. ಹೆಂಡತಿ ಹೇಳಿದ ಮನೆ ದಿನಸಿಯ ಪಟ್ಟಿಯಲ್ಲಿ ಒಂದೆರಡು ಸಾಮಾನು ದೇವರಿಗೆ ಬಿಟ್ಟಿರುತ್ತೇವೆ, ಆದರೆ ಸ್ನೇಹಿತನ ಎಣ್ಣೆ ಪಾರ್ಟಿ ಸ್ನ್ಯಾಕ್ಸ್ ಮಾತ್ರ ಹೇಳಿದಕ್ಕಿಂದ ಜಾಸ್ತಿ ಕೊಂಡೊಯ್ಯುತ್ತೇವೆ. ಹಳೆಗಾಡಿಯ ಇನ್ಸುರೆನ್ಸ್ ಲ್ಯಾಪ್ಸ್ ಆಗಿ ಕಂಪೆನಿಯವರ ಕರೆ ಬರುವವರೆಗೂ ನೆನಪಿನಲ್ಲಿರುವುದಿಲ್ಲ, ಅದೆ ಹೊಸ ಗಾಡಿಯ ಸರ್ವಿಸ ಮಾತ್ರ ತಟ್ಟನೆ ನೆನಪಾಗುತ್ತದೆ, ನಮಗಿಷ್ಟವಾದ ಕಲಾವಿದರ, ಬರಹಗಾರರು, ಹೆಸರು ಯಾವಾಗಲೂ ಮರೆವಿನಿಂದಾಗಿ ಮಾಸುವುದಿಲ್ಲ. ಅದೆ ಇಷ್ಟವಿಲ್ಲದವರ ಹೆಸರು ಮನಪಟಲದಲ್ಲಿ ಎಂದು ನುಸುಳುವುದಿಲ್ಲ. ಇಷ್ಟಪಟ್ಟ ಪ್ರವಾಸಿತಾಣಗಳ ಇಂಚಿಂಚೂ ಅನುಭವ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಕುಳಿತಿದೆ; ಆದರೆ ಇಷ್ಟವಾಗದೆ ಕಷ್ಟಪಟ್ಟು ಮುಗಿಸಿದ ಪ್ರವಾಸದ ಅನುಭವಗಳು ಮಾತ್ರ ನೆನಪಿನಲ್ಲೆ ಉಳಿದಿಲ್ಲ.
ಹಳೆಯ ಸವಿನೆನಪುಗಳು ಸದಾ ಕಾಡುತ್ತಲೆ ಇರುತ್ತದೆ, ಆದರೆ ಕಹಿಘಟನೆಗಳ ನೆನಪು ಕ್ಷಣದಲ್ಲೆ ಕರಗುತ್ತದೆ. ಮನಸಿಗೆ ಮುದ ನೀಡಿದ ಸಿನಿಮಾ, ಮೊದಲು ಪ್ರೀತಿಯ ನೆನಪುಗಳು, ಇಷ್ಟಪಟ್ಟ ಕ್ರಿಕೆಟರ ಸೆಂಚುರಿ, ಇಷ್ಟಪಟ್ಟ ಹಾಡುಗಳು ಇವೆಲ್ಲಕ್ಕೆ ಮರೆವೆ ಇಲ್ಲದಂತೆ ನಮ್ಮ ಮನಪಟಲದಲ್ಲಿ ಅಚ್ಚಳಿಯದೆ ಅಚ್ಚೊತ್ತಿದೆ. ಇನ್ನು ಪಟ್ಟಿಮಾಡುತ್ತ ಹೋದಂತೆ ಇಷ್ಟಪಷ್ಟು ಅನುಭವಿಸಿದ ಸವಿನೆನಪುಗಳು ಹತ್ತು ಹಲವು ಎಂದು ಮಾಸದೆ ಮರೆಗುಳಿತನಕ್ಕೆ ಸಿಲುಕದೆ ಸದಾ ಜಾಗೃತವಾಗಿ ಮನದ ಮೂಲೆಯಲ್ಲೊಂದು ಕಡೆ ಅಚ್ಚಳಿಯದಂತೆ ದಾಖಲಾಗಿದೆ, ಹಾಗಾದರೆ ಈ ಅಕಾಲಿಕ ಮರೆಗುಳಿತನ ಮನುಷ್ಯನ ಸಂದರ್ಭಕ್ಕೆ ಅನುಸಾರವಾಗಿರುವ ಸಮಯೋಚಿತ ನಡಾವಳಿಯೆ.
ವ್ಯೆದ್ಯಕೀಯ ದೃಷ್ಟಿಯಿಂದ ನೋಡುವುದಾದರೆ ಅಲ್ಝೈಮರ್‌ನಂತಹ ಕಾಯಿಲೆಗಳು, ವಯೋಸಹಜ ದೇಹ ಬದಲಾವಣೆಗಳು, ಮಾನಸಿಕ ಖಿನ್ನತೆ, ಒತ್ತಡಗಳು ಕೆಲವೊಮ್ಮೆ ಮರೆವನ್ನು ಬರಿಸುತ್ತದೆ. ಆದರೆ ನಾನು ಮೇಲ್ಗಡೆ ಪಟ್ಟಿ ಮಾಡಿದ ಎಲ್ಲ ವಿಷಯಗಳು ಸಹ ವೈದ್ಯಕೀಯ ಹಿನ್ನೆಲೆಯಿಂದ ಹುಟ್ಟಿದವಲ್ಲ. ಅವೆಲ್ಲವು ನಾವೆ ಸೃಷ್ಟಿಸಿಕೊಂಡಂತಹ ಕಾರಣಗಳಷ್ಟೆ. ಮನಸಿಗೆ ಮುದ ನೀಡಿದ ಯಾವುದೆ ವಿಷಯವನ್ನು ಮರೆಯದ ನಾವು ಇಷ್ಟವಿಲ್ಲದ ಯಾವ ಕೆಲಸವನ್ನು ಸಹ ಸ್ವಲ್ಪ ಅಸಡ್ಡೆಯ ದೃಷ್ಟಿಯಿಂದ ಪರಿಗಣಿಸುವುದೆ ಇದಕ್ಕೆಲ್ಲ ಮೂಲ.

ಮರೆಗುಳಿತನ ನಿಜವಾಗಿ ನುಣುಚುಕೊಳ್ಳುವಿಕೆಗೆ ಒಂದು ಸುಲಭ ದಾರಿ ಅಷ್ಟೆ, ಕೆಲವೊಮ್ಮೆ ಇನ್ಯಾವುದೋ ಬೇರೆ ಕೆಲಸದ ಒತ್ತಡದಿಂದಾಗಿ ಸ್ವಲ್ಪ ಮರೆವು ಆವರಿಸಬಹುದು, ಇಲ್ಲವಾದಲ್ಲಿ ಯಾವುದೆ ಕೆಲಸದಲ್ಲಿ ಸ್ವಲ್ಪ ಪರಿಶ್ರಮ ಪಡಬೇಕಾದ ಸನ್ನಿವೇಶದಲ್ಲೂ ಸ್ವಲ್ಪ ಮರೆವು ಆವರಿಸಬಹುದು. ಆದರೆ ಎಲ್ಲ ವಿಷಯಗಳು ಸಹ ನಮ್ಮ ಮರೆವಿಗೆ ನಿಲುಕುವ ಸತ್ಯಗಳೆ. ನಮ್ಮ ಆರ್ಥಿಕ ಸ್ಥಿತಿಗೆ ವಿರುದ್ಧವಾದ, ನಮ್ಮ ಮೇಲೆ ಒತ್ತಾಯ ಪೂರ್ವಕವಾಗಿ ಹೇರಿಕೆಯಾದ, ಭಯ, ಅಸೂಯೆ, ನಿಂದನೆಯಂತಹ ಸನ್ನಿವೇಶ ಸೃಷ್ಟಿಸಿದ ಯಾವ ವಿಷಯವನ್ನು ನಾವು ನೆನಪಿನಲ್ಲಿ ಕಾದಿಟ್ಟು ಅದನ್ನು ಸಂವಹನಕ್ಕೆ ಬಳಸುವುದಿಲ್ಲ. ಕೆಲವೊಮ್ಮೆ ಜಾಣ ಮರೆವು ಪ್ರದರ್ಶಿಸಿ ಎಷ್ಟೋ ವಿಷಯವನ್ನು ಮೂಲದಲ್ಲೆ ಚುಟುಕಾಗಿಸುತ್ತೇವೆ. ದೈನಂದಿನ ಬದುಕಿನಲ್ಲಿ ನಮ್ಮ ಮಾನಸಿಕ ಸ್ವಾಸ್ಥ್ಯವನ್ನು ಕದಲಿಸದ ಯಾವ ವಿಷಯವು ನಮ್ಮ ಮರೆವಿಗೆ ನಿಲುಕುವುದಿಲ್ಲ. ನಮ್ಮ ಪ್ರೀತಿಪಾತ್ರರ ಪ್ರತಿಯೊಂದು ಇಷ್ಟಾನಿಷ್ಟಗಳ ಪರಿಚಯವು ನಮ್ಮ ಮನಸ್ಸಿನ ಅಂತರಾಳದಲ್ಲಿ ಸುಪ್ತವಾಗಿ ಹುದುಗಿ ನಮ್ಮನ್ನು ಆಗಾಗ ಎಚ್ಚರಿಸುತ್ತಲೆ ಇರುತ್ತದೆ. ಇದರಿಂದಾಗಿಯೆ ನಾವು ಮರೆವಿಗೆ ಜಾಣ ಕುರುಡನ್ನು ಆರೋಪಿಸಬಹುದು.
ಮರೆವಲ್ಲೂ ಕೆಲವೊಮ್ಮೆ ಒಳಿತನ್ನು ನಾವು ಕಾಣಬಹುದು. ಮನೆವಾರ್ತೆ ನಿಭಾಯಿಸುವುದರಲ್ಲಿ ಮರೆವಿಗೆ ಮೊದಲ ಸ್ಥಾನ ಮರೆತೆ ಹೋಯ್ತು ಎಂದು ಎಷ್ಟೊ ಬಾರಿ ನುಣುಚಿಕೊಂಡಿದ್ದು ಹೆಂಡತಿಯ ಮುನಿಸಿಗೆ ಕಾರಣವಾದರು ನಾಳೆ ತರುತ್ತಾರೆಂಬ ಆಶಾವಾದವನ್ನು ಅದು ಹುಟ್ಟಿಸುತ್ತದೆ. ಇಷ್ಟಪಾತ್ರರ ಸಾವಿನ ದುಖಃವನ್ನು ಸಹ ಮರೆವು ನಮಗೆ ಮರೆಮಾಚುತ್ತದೆ. ಎಲ್ಲೋ ಡಬ್ಬದಲ್ಲಿ ಕೂಡಿಟ್ಟ ಹಣ ಮರೆವಿನಿಂದಾಗಿ ಗುಪ್ತನಿಧಿಯಾಗಿ ಕೆಲವೊಮ್ಮೆ ಸಹಾಯಕ್ಕೆ ಬರುತ್ತದೆ. ಸರ್ಕಾರಿ ನೌಕರನಿಗೆ ಈ ಕೆಲಸ ನೆನಪೆ ಆಗಲಿಲ್ಲ ಎಂಬ ಸಬೂಬು ಕೆಲವೊಮ್ಮೆ ಮೇಲಾಧಿಕಾರಿಗಳನ್ನು ನಿಭಾಯಿಸಲು ಸಹಾಯಕ್ಕೆ ಬರುತ್ತದೆ. ಬಾರಿನಲ್ಲಿ ಕುಳಿತಿರುವ ಕಾಯಂ ಗಿರಾಕಿಗಳು ಕಂಠಪೂರ್ತಿ ಕುಡಿದು ಪರ್ಸೆ ಮರೆತು ಬಂದೆ ಎಂಬ ಸಬೂಬು ಹೇಳಿ ನುಣುಚಿಕೊಳ್ಳುವುದು ಸರ್ವೆ ಸಾಮಾನ್ಯ. ದೇವರಿಗೆ ಹರಕೆ ಹೊತ್ತ ಎಷ್ಟೋ ಭಕ್ತಾದಿಗಳಲ್ಲಿ ಮರೆವು ಎಂಬುದು ಸಾರ್ವಕಾಲಿಕ ಉಪಶಮನ. ಮನೆಪಾಟ ಮಾಡದ ವಿದ್ಯಾರ್ಥಿಗಳಿಗಂತು ಮರೆವೆಂಬುದು ಮನೆದೇವರಿದ್ದ ಹಾಗೆ. ಅನುತ್ತೀರ್ಣರಾದರೆ ಓದಿದ್ದು ನೆನಪಿನಲ್ಲುಳಿಯುವುದೆ ಇಲ್ಲ ಎಂಬ ಸಬೂಬು, ಪರೀಕ್ಷಾ ಕೊಠಡಿಯಲ್ಲಿ ಕುಳಿತು ಪ್ರಶ್ನೆಪತ್ರಿಕೆ ನೋಡುತ್ತಿದ್ದಂತೆ ಓದಿದ್ದೆಲ್ಲ ನೆನಪಿಗೆ ಬರುವುದಿಲ್ಲ ಎಂಬ ದೂರು, ಅಂತು ಇವರಿಗೂ ಮರೆವಿಗೂ ಜನ್ಮ ಜನ್ಮಾಂತರದ ಅನುಬಂಧ.
ಹದಿಹರೆಯದವರನ್ನೊಮ್ಮೆ ಮಾತನಾಡಿಸಿ ಅವರ ಮಾತಿನ ಮಧ್ಯೆ ಹಲವಾರು ಸಾರಿ ಆದರು ನನಗೆ ನೆನಪೆ ಇಲ್ಲ ಎಂಬ ಶಬ್ಧ ಪುನರಾವರ್ತಿತವಾಗುತ್ತಾ ಇರುತ್ತದೆ. ಇದು ಯಾವ ಜಾಣ ಕುರುಡು ಅಲ್ಲ ಹಾಗೆ ವಿಷಯದ ತಿರುಚುವಿಕೆಯೂ ಅಲ್ಲ ಇಲ್ಲಿ ಕೇವಲ ಮಾತಿನ ನುಣುಚುವಿಕೆ ಅಷ್ಟೆ. ಹಳೆ ರೋಗಿಗೆ ವೈದ್ಯರ ಚೀಟಿ ಮರೆತು ಬಂದೆನೆಂಬುದು ಆ ಕ್ಷಣದ ಸಬೂಬು ವೈದ್ಯರ ಸಿಡುಕಿನಿಂದ ತಪ್ಪಿಸಿಕೊಳ್ಳಲು. ಎಲ್ಲಾ ವೃತ್ತಿಯವರಲ್ಲು ತಮ್ಮ ವೃತ್ತಿಗೆ ಸಂಬಂದಪಟ್ಟಂತೆ ಕಾರ್ಯಕಾರಣ ಮರೆವು ಸಂದರ್ಭಕ್ಕೆ ಅನುಗುಣವಾಗಿ ಸರ್ವೆಸಾಮಾನ್ಯ ಇದಕ್ಕೆ ಉಪಶಮನದ ಅವಶ್ಯಕತೆಯು ಇಲ್ಲಾ. ಇದು ರೋಗವು ಅಲ್ಲ.

ಅಂತು ಮರೆವಿಗೆ ನಿತ್ಯ ಜೀವನದ ಆಗುಹೋಗುಗಳಲ್ಲಿ ಅದರದ್ದೆ ಆದ ಮಹತ್ವ ಇದೆ ಎಂಬುದಂತು ಈಗ ನಮಗೆ ಮನದಟ್ಟಾಯಿತು. ಆದರೆ ಮರೆವಿಗೂ ಔಷಧಿ ಹುಡುಕಲೂ ಮಾತ್ರ ಹೊರಡಬೇಡಿ. ಇದೊಂದು ವ್ರತಾ ಕಾಲಹರಣವಾದೀತು. ಮರೆವು ಎಂಬುದು ವಯೋಸಹಜವಾಗಿ ಬಂದಲ್ಲಿ ಅದಕ್ಕೆ ವೈದ್ಯಕೀಯ ಉಪಚಾರವಿದೆ ಆದರೆ ಈ ನಮ್ಮ ಮರೆವು ಸಾಂದರ್ಭಿಕವಾಗಿ, ಸಾಮಾಜಿಕವಾಗಿ ಹಾಗೂ ನಮ್ಮ ಇಷ್ಟಾನಿಷ್ಟಗಳಿಗೆ ಪೂರಕವಾಗಿ ನಾವೆ ನಿರ್ಮಿಸಿಕೊಳ್ಳುವ ವಿಷಯದ ಪಲ್ಲಟವಷ್ಟೆ. ಆದರು ಮರೆವಿನ ಬಗ್ಗೆ ಅಸಡ್ಡೆಯಂತು ಮಾಡುವ ಹಾಗಿಲ್ಲ. ಏಕೆಂದರೆ ಕೆಲವೊಮ್ಮೆ ಮರೆವಿನಿಂದಾಗಿ ಅನಾಹುತವು ಘಟಿಸಬಹುದು! ಹಲವಾರು ಬಾರಿ ನಮಗೆ ಬಹಳ ಮುಖ್ಯವೆಂದೆನಿಸಿದ ವಿಷಯಗಳೆ ಮರೆತು ಹೋದರೆ ಅದರಿಂದಾಗುವ ಹಾನಿಯನ್ನು ನಾವೆ ಭರಿಸಬೇಕಾದೀತು, ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತೆ, ವ್ಯವಹಾರಕ್ಕೆ ಸಂಬಂದಪಟ್ಟಂತೆ, ಕಾನೂನಿಗೆ ಸಂಬಂಧಪಟ್ಟಂತೆ, ಸಾರ್ವಜನಿಕ ಬದುಕಿನಲ್ಲಿ ಇರಬೇಕಾದ ಬದ್ಧತೆಗೆ ಸಂಬಂಧ ಪಟ್ಟಂತೆ ಎಲ್ಲಾದರು ಈ ಮರೆವಿನಿಂದಾಗಿ ನಿರ್ಲಕ್ಷ್ಯ ಮಾಡಿದಲ್ಲಿ ಅದು ನಮ್ಮನ್ನೆ ಸಮಸ್ಯೆಗೆ ಒಳಪಡಿಸುವುದರಲ್ಲಿ ಸಂಶಯವೆ ಇಲ್ಲ. ಜಾಣ ಮರೆವಿನಲ್ಲು ಎಚ್ಚರವಹಿಸಬೇಕಾದುದು ನಮ್ಮ ಜವಾಬ್ದಾರಿ, ಜಾಗರೂಕರಾಗಿ ಜಾಗ್ರತೆ ವಹಿಸಿ ಮರೆವನ್ನು ಮರೆತರೆ ಜೋಕೆ. ಮರೆವನ್ನು ಮರೆಯುವ ಮುನ್ನ ಒಮ್ಮೆ ಯೋಚಿಸಿ. ನಮಸ್ಕಾರ.

ವಿನಾಯಕ ಎಸ್ ನಾಯಕ ವಿನಾಯಕ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಖರ್ವಾದಲ್ಲಿ ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾಗಿ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. “ಕಾಲಮಾನ” (ಕವನ ಸಂಕಲನ-೨೦೧೭), ನಗೆಯ ಹೂ ಚೆಲ್ಲಿ (ಕವನ ಸಂಕಲನ), ಬೊಂಬೆಮಿಠಾಯಿ (ಕಥಾಸಂಕಲನ), ಖಂಡತುಂಡೋಕ್ತಿ (ಹೇಳಿಕಾ ಗುಚ್ಚ) ಕುಚ್ಚೋಡಿ (ಕಾದಂಬರಿ) ಸೇರಿ ಒಟ್ಟು ಎಂಟು ಕೃತಿಗಳು ಪ್ರಕಟವಾಗಿವೆ.
