ಅವನ ಸರ್ಜರಿಯ ಕೆಲ ವರ್ಷಗಳ ನಂತರ ಅವನ ತಂದೆ ಮರಣ ಹೊಂದಿದರು. ಆ ವಿಷಯ ಅವನಿಗೆ ತಿಳಿದಾಗ ಎಲ್ಲರಂತೆಯೇ ಅವನು ದುಃಖಿತನಾದ. ಕೆಲವೇ ಸಮಯದಲ್ಲಿ ಮಾತುಕತೆ ಬೇರೆಡೆಗೆ ತಿರುಗಿತು; ಅವನಪ್ಪ ಸತ್ತಿದ್ದ ಸಂಗತಿ ಸಂಪೂರ್ಣವಾಗಿ ಮರೆಯಿತು. ಆ ಸಾವಿನ ನೋವು ಕ್ಷಣಮಾತ್ರದಲ್ಲಿ ಮರೆಯಾಯಿತು. ಕೆಲವು ಸಮಯದ ನಂತರ ಮತ್ತೊಮ್ಮೆ ತಂದೆಯ ಸಾವಿನ ವಿಚಾರವನ್ನು ಅವನಿಗೆ ತಿಳಿಸಿದಾಗ, ಅದೇ ಮೊದಲ ಬಾರಿಗೆ ತಂದೆಯ ಸಾವನ್ನು ತಿಳಿದಂತೆ ಅವನು ದುಃಖಿತನಾದ. ನೋವಿನ ನೆನಪುಗಳು, ಕಾಲ ಸರಿದಂತೆ ಅದರ ಮೊನಚನ್ನು ಕಡಿಮೆ ಮಾಡುತ್ತವೆ. ಅಂತಹ ನೆನಪುಗಳೇ ಇಲ್ಲದ, ಹೆನ್ರಿ ಮೊಲಾಯ್ಸನ್ ಅಂತಹವರಿಗೆ ಆ ನೋವಿನ ಮೊನಚು ಸದಾ ತೀಕ್ಷ್ಣ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

“Time and Tide Wait for No Man” – ಕಾಲ ಮತ್ತು ಅಲೆಗಳು ಯಾರಿಗೂ ನಿಲ್ಲುವುದಿಲ್ಲ. ಇದು ಇಂಗ್ಲೀಷಿನ ಒಂದು ಪ್ರಸಿದ್ಧೋಕ್ತಿ. ನಮ್ಮ ಅನುಭವಕ್ಕೆ ಸುಲಭವಾಗಿ ಲಭ್ಯ ವಿಷಯ ಸಹ. ಕಾಲಯಾನ ಮಾಡಲು ನಮಗೆ ಇರುವ ಅತ್ಯಂತ ಪ್ರಮುಖ ತೊಡಕೆಂದರೆ, ಇದೇ. ಕಾಲದ ಓಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂಬ ನಿಯಮ.

ಹೆನ್ರಿ ಮೊಲಾಯ್ಸನ್ ಎಂಬ ೨೭ ವರ್ಷ ವಯಸ್ಸಿನ ತರುಣನಿಗೆ, ಸೆಪ್ಟೆಂಬರ್ ೧, ೧೯೫೩ರಂದು ಕಾಲದ ಓಟ ನಿಂತಿತು. ಮುಂದಿನ ೫೫ ವರ್ಷಗಳ ಕಾಲ ಅದು ಮುಂದುವರೆಯಲೇ ಇಲ್ಲ. ಇದು, ಐದು ದಶಕಗಳ ಕಾಲ ಈ ರೀತಿ ಕಾಲಯಾನ ಮಾಡಿದವನ ಕತೆ.

(ಹೆನ್ರಿ ಮೊಲಾಯ್ಸನ್, ಅಪಘಾತಕ್ಕೂ ಮೊದಲಿನ ಫೋಟೋ)

ಹೆನ್ರಿ, ಅಮೆರಿಕದ ಈಶಾನ್ಯ ಭಾಗದಲ್ಲಿರುವ ಕನೆಕ್ಟಿಕಟ್ ರಾಜ್ಯದ ಹಾರ್ಟ್‌ಫರ್ಡ್ ಎಂಬ ಪಟ್ಟಣದಲ್ಲಿ, ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವನು. ತನ್ನ ಒಂಬತ್ತನೆಯ ವಯಸ್ಸಿನಲ್ಲಿ, ಅವನು ಸೈಕಲ್ ಅಪಘಾತವೊಂದಕ್ಕೆ ಸಿಲುಕಿದ. ತಾನೇ ಸೈಕಲ್ ಓಡಿಸುತ್ತಾ ಬಿದ್ದನೋ, ಅಥವಾ ಅಕ್ಕ-ಪಕ್ಕದವರಲ್ಲೊಬ್ಬ ಸೈಕಲ್ಲನ್ನು ಅವನಿಗೆ ಗುದ್ದಿಸಿದನೋ, ಅದು ಯಾರಿಗೂ ತಿಳಿಯದು. ಈ ಸೈಕಲ್ ಅಪಘಾತದಿಂದಾಗಿ ಅವನ ತಲೆಗೆ ಪೆಟ್ಟು ಬಿದ್ದಿತು. ಆದರೆ, ಅದರಿಂದ ಅಂತಹ ದೊಡ್ಡ ತೊಂದರೆ ಏನೂ ಆಗಲಿಲ್ಲ. ಬಹು ಬೇಗನೆ ಚೇತರಿಸಿಕೊಂಡ.

ಈ ಸೈಕಲ್ ಅಪಘಾತದ ಕೆಲ ಸಮಯದ ನಂತರ, ಅವನು ಆಗೊಮ್ಮೆ-ಈಗೊಮ್ಮೆ ಎಪಿಲೆಪ್ಸಿ (ಮೂರ್ಛೆ ರೋಗ) ಅನುಭವಿಸಲು ಪ್ರಾರಂಭಿಸಿದ. ಅವನ ತಂದೆ-ತಾಯಿ ಹೆನ್ರಿಯನ್ನು ತಜ್ಞ ವೈದ್ಯರ ಬಳಿಗೆ ಕರೆದುಕೊಂಡು ಹೋದರು. ೧೯೩೦ರ ದಶಕದಲ್ಲಿ, ನಮ್ಮ ತಲೆಬುರುಡೆಯೊಳಗೆ ಏನಾಗುತ್ತಿದೆ ಎಂದು ನೋಡುವ ಇಂದಿನ ಎಂ.ಆರ್.ಐ. ನಂತಹ ತಂತ್ರಜ್ಞಾನ ಇರಲಿಲ್ಲ. ಸೈಕಲ್ ಅಪಘಾತದಿಂದಾಗಿ ಅವನ ಮಿದುಳಿಗೆ ಪೆಟ್ಟಾಯಿತೇ? ಈ ಪೆಟ್ಟಿನಿಂದ ಅವನಿಗೆ ಎಪಿಲೆಪ್ಸಿ ಬರಲು ಪ್ರಾರಂಭವಾಯಿತೇ? ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಆ ಕಾಲದ ವೈದ್ಯರಿಗೆ ಸಾಧ್ಯವಿರಲಿಲ್ಲ. ಹೀಗಾಗಿ, ಅವು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ.

ಹೆನ್ರಿಯನ್ನು ಪರೀಕ್ಷೆ ಮಾಡಿದ ವೈದ್ಯರು ಅವನಿಗೆ ಕೆಲವೊಂದು ಔಷಧಿ-ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ಮಾಡಿದರು. ಹೆನ್ರಿ ಅವುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ.

ಆರಂಭದಲ್ಲಿ, ಈ ಎಪಿಲೆಪ್ಸಿ ಪ್ರಸಂಗಗಳು ತಿಂಗಳಿಗೊಮ್ಮೆಯೋ ಅಥವಾ ಹಲವು ತಿಂಗಳಿಗೊಮ್ಮೆಯೋ ಮರುಕಳಿಸುತ್ತಿದ್ದವು. ಅದರ ತೀವ್ರತೆಯೂ ಅಂತಹ ಹೆಚ್ಚಾಗಿರಲಿಲ್ಲ. ಹೆನ್ರಿ, ತನ್ನ ವಿದ್ಯಾಭ್ಯಾಸವನ್ನು ತನ್ನ ಓರಗೆಯ ಉಳಿದ ಮಕ್ಕಳಂತೆಯೇ ಮುಂದುವರೆಸಿದ. ಮಿಡ್ಲ್ ಸ್ಕೂಲ್ ಮುಗಿಸಿ ಹೈ-ಸ್ಕೂಲು ಸೇರಿದ.

ಆದರೆ, ಹೈ-ಸ್ಕೂಲು ಮುಗಿಸುವ ವೇಳೆಗೆ, ಅವನ ಎಪಿಲೆಪ್ಸಿ ಪ್ರಸಂಗಗಳು ಹೆಚ್ಚಾಗ ತೊಡಗಿದವು. ಜೊತೆಗೇ, ಆ ಪ್ರಸಂಗಗಳ ತೀವ್ರತೆಯೂ ಸಹ. ಅವನ ಹೈ-ಸ್ಕೂಲ್ ಗ್ರಾಜುಯೇಷನ್ ಸಮಾರಂಭದ ವೇಳೆಗೆ ಈ ಎಪಿಲೆಪ್ಸಿ ಪ್ರಸಂಗಗಳ ಭಯ ಅವನನ್ನು ನಿತ್ರಾಣನನ್ನಾಗಿಸಿತ್ತು. ಹೈ-ಸ್ಕೂಲು ಹುಡುಗರು ಮಾಡುವ ಸರ್ವೇ-ಸಾಮಾನ್ಯ ಸಂಗತಿಗಳೂ ಅವನಿಂದ ದೂರವಾಗಿದ್ದವು; ತನ್ನ ಮಿತ್ರರೊಡನೆ ಪಿಕ್‌ನಿಕ್, ಸಿನೆಮಾ ಇತ್ಯಾದಿಗಳು ಯಾವುವೂ ಅವನಿಂದ ಸಾಧ್ಯವಿರಲಿಲ್ಲ.

ಹೈ-ಸ್ಕೂಲ್ ನಂತರ, ದೂರದ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡುವ ಸ್ಥಿತಿಯಲ್ಲಿ ಅವನು ಇರಲಿಲ್ಲ. ಈ ಎಪಿಲೆಪ್ಸಿ ಬಿಟ್ಟರೆ, ಅವನಿಗೆ ಇನ್ನಾವ ರೋಗ ಲಕ್ಷಣಗಳೂ ಇರಲಿಲ್ಲ. ಅವನನ್ನು ಪರೀಕ್ಷಿಸಿದ ಮನೋವೈದ್ಯರು ಹೇಳುವಂತೆ ಅವನ ಬುದ್ಧಿಶಕ್ತಿ – ಇಂಟೆಲಿಜೆನ್ಸ್ ಕೋಷೆಂಟ್ – ಸಾಮಾನ್ಯರಿಗಿಂತ ಹೆಚ್ಚೇ ಇತ್ತು. ತನ್ನೆಲ್ಲಾ ಕಷ್ಟಗಳ ನಡುವೆಯೂ, ಹೆನ್ರಿ ಹಾಸ್ಯ ಪ್ರವೃತ್ತಿ ಉಳ್ಳವನೂ, ಸ್ನೇಹಪರನೂ ಆಗಿದ್ದ.

ಕಾಲೇಜು ವಿದ್ಯಾಭ್ಯಾಸ ಸಾಧ್ಯವಿಲ್ಲದ್ದರಿಂದ, ಹತ್ತಿರದ ಕಾರ್ಖಾನೆಯೊಂದರ ಪ್ಯಾಕೇಜಿಂಗ್ ವಿಭಾಗವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಅದು ವೃತ್ತಿ ಎನ್ನುವುದಕ್ಕಿಂತ, ಅವನ ಮೇಲಿನ ಕರುಣೆಯಿಂದ ನೀಡಿದ್ದ ಕೆಲಸವಾಗಿತ್ತು.

ಆದರೆ, ವರ್ಷಗಳು ಉರುಳಿದಂತೆ, ಈ ಎಪಿಲೆಪ್ಸಿ ಪ್ರಸಂಗಗಳೂ, ಅವುಗಳ ತೀವ್ರತೆಯೂ ಹೆಚ್ಚಾದವು. ಅವನು ತನ್ನ ಕೆಲಸಕ್ಕೆ ಹೋಗುವುದೂ ಸಾಧ್ಯವಿಲ್ಲದಂತಾಯಿತು.

*******

ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ, ಮಾನವರ ನಡವಳಿಕೆಗೂ ಮಿದುಳಿಗೂ ಇರುವ ಸಂಬಂಧ ಗೊತ್ತಾದ ಮೇಲೆ, ಮಿದುಳಿನ ಕೆಲವೊಂದು ಭಾಗಗಳನ್ನು “ಕೆಟ್ಟಿದೆ” ಎಂದು ಗುರುತಿಸಿ, ಅವನ್ನು ತೆಗೆದು ಹೊರ ಹಾಕುವ ಪದ್ಧತಿ ಪ್ರಾರಂಭವಾಗಿತ್ತು; ಅವು ನಿಜಕ್ಕೂ “ಕೆಟ್ಟಿದ್ದವೇ?” ಎಂಬ ಪ್ರಶ್ನೆ ಉಳಿದಿದ್ದರೂ! “ಲೋಬೋಟಮಿ” ಎನ್ನುವ ಈ ಪದ್ಧತಿಯನ್ನು ಪರಿಚಯಿಸಿದವನು ಈಗಾಸ್ ಮುನೀಜ್ ಎಂಬ ಪೋರ್ಚುಗೀಸ್ ವೈದ್ಯ. ಇದಕ್ಕಾಗಿ, ಅವನಿಗೆ ೧೯೪೯ರಲ್ಲಿ ನೊಬೆಲ್ ಪ್ರಶಸ್ತಿಯೂ ದೊರಕಿತು.

(ಲೋಬೋಟಮಿ)

ಹೃದಯ ಬದಲಾದರೂ ನಾವು ಬದಲಾಗುವುದಿಲ್ಲ. ಕಿಡ್ನಿ ಬದಲಾದರೆ, ನಮ್ಮ ನಡವಳಿಕೆ ಬದಲಾಗುವುದಿಲ್ಲ. ಲಿವರ್ ಶಸ್ತ್ರಚಿಕಿತ್ಸೆಯಿಂದ ನಮ್ಮ ನೆನಪುಗಳು ಮರೆಯಾಗುವುದಿಲ್ಲ. ಹಿಟ್ಲರ್‌ ನನ್ನು ಹಿಟ್ಲರನಾಗಿಸಿದ್ದು, ಗಾಂಧಿಯನ್ನು ಗಾಂಧಿಯನ್ನಾಗಿಸಿದ್ದು, ಐನ್‌ಸ್ಟೈನ್‌ನನ್ನು ಐನ್‌ಸ್ಟೈನ್ ಆಗಿಸಿದ್ದು ಅವರ ಮಿದುಳುಗಳೇ; ನಮ್ಮನ್ನು ನಾವಾಗಿಸುವ ಒಂದು ಅಂಗವಿದ್ದರೆ, ಅದು ಮಿದುಳೊಂದೇ. ಲೌಕಿಕ, ಭೌತಿಕಗಳನ್ನು ಪಾರಮಾರ್ಥಿಕ, ಆಧ್ಯಾತ್ಮಿಕವಾಗಿಸುವ ಇಂತಹ ಅಂಗದ ಭಾಗಗಳನ್ನು ಕತ್ತರಿಸಿ ಎಸೆಯಬಹುದೇ? ಇದು, ಚಿಂತಿಸಿ, ಚರ್ಚಿಸಬೇಕಾದ ಪ್ರಶ್ನೆ. ಇಂದು, ‘ಲೊಬೋಟಮಿ’ ಶಸ್ತ್ರಚಿಕಿತ್ಸೆ ಹೇಳ-ಹೆಸರಿಲ್ಲದಷ್ಟು ಅಪರೂಪ. ಆದರೆ, ಇಪ್ಪತ್ತನೆಯ ಶತಮಾನದಲ್ಲಿ ಆ ರೀತಿ ಇರಲಿಲ್ಲ. ಪ್ರತಿವರ್ಷ ಹತ್ತಾರು ಸಾವಿರ ಮಂದಿ ಮನೋರೋಗಿಗಳು ಈ “ಚಿಕಿತ್ಸೆ”ಗೆ ಗುರಿಯಾಗುತ್ತಿದ್ದರು. ಅದಕ್ಕೆ ಆ ರೋಗಿಗಳ ಒಪ್ಪಿಗೆ ಸಹ ಬೇಕಿರಲಿಲ್ಲ. ಆ ಕಾಲದ ನಂಬಿಕೆಯಂತೆ, ಯಾವುದೇ ರೋಗಿ ಲೋಬೋಟಮಿ ಬೇಡವೆಂದರೆ, ಅದನ್ನು ಮನೋರೋಗದ ಉಲ್ಬಣಾವಸ್ಥೆ ಎಂದೇ ಭಾವಿಸಿ ಅಂತಹವರನ್ನು ಲೋಬೋಟಮಿಗೆ ಮತ್ತಷ್ಟು ಸೂಕ್ತರೆಂಬಂತೆ ಪರಿಗಣಿಸಲಾಗುತ್ತಿತ್ತು.

ಮಿದುಳನ್ನು ಕತ್ತರಿಸಿ ಎಸೆಯುವುದು ಒಂದು ವಿಧಾನವಾದರೆ, suction catheter – ಸಣ್ಣದೊಂದು ವ್ಯಾಕ್ಯೂಮ್ ಕ್ಲೀನರ್ ಎನ್ನಬಹುದು – ಮೂಲಕ ಹೀರಿ ಎಳೆಯುವುದು ಆ ಕಾಲದಲ್ಲಿ ಪ್ರಚಲಿತವಿದ್ದ ಇನ್ನೊಂದು ವಿಧಾನ. ೧೯೪೮ರ ನವೆಂಬರ್‌ ನಲ್ಲಿ ಆ ಕಾಲದ ಇಬ್ಬರು ಅತ್ಯಂತ ಪ್ರಸಿದ್ಧ ನ್ಯೂರೋಸರ್ಜನ್‌ ಗಳು, ಹಲವಾರು ವೈದ್ಯರುಗಳ ಮುಂದೆ ಲೋಬೋಟಮಿಯ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆಗಳನ್ನು ನೀಡಿದರು. ತಮ್ಮ ವಿಧಾನವೇ ಸುಲಭವೂ, ಉತ್ತಮವೂ ಎಂದು ತೋರುವುದು ಆ ಪ್ರಾತ್ಯಕ್ಷಿಕೆಗಳ ಗುರಿಯಾಗಿತ್ತು.

ದೇಹದ ಯಾವುದೇ ಭಾಗಕ್ಕೆ ನೋವಾದರೂ, ಅದನ್ನು ಗ್ರಹಿಸುವುದು ಮಿದುಳೇ. ಆದರೆ, ಮಿದುಳಿಗೆ ನೋವಾಗುವುದಿಲ್ಲ. ಅದನ್ನು ಕತ್ತರಿಸಿದಾಗ, ನೋವಿನ ಯಾವುದೇ ಅನುಭವವೂ ಆಗುವುದಿಲ್ಲ. ಹೀಗಾಗಿ, ಮಿದುಳಿನ ಶಸ್ತ್ರಚಿಕಿತ್ಸೆಗೆ ಜೆನೆರಲ್ ಅನಸ್ತೇಷಿಯಾದ ಅಗತ್ಯವಿಲ್ಲ; ಕೇವಲ ಲೋಕಲ್ ಅನಸ್ತೇಷಿಯಾ ನೀಡಿದರೆ ಸಾಕು. ಹಲ್ಲು ಕೀಳುವಾಗ ನೀಡುವಂತೆ.

ಆ ದಿನ ಮೊದಲನೆಯ ವೈದ್ಯ ಮಾಡಿದ್ದು ಅದನ್ನೇ. ರೋಗಿಗೆ ಲೋಕಲ್ ಅನಸ್ತೇಷಿಯಾ ನೀಡಿ, ಅವಳ ಎರಡು ಕಣ್ಣುಗಳ ಮೇಲಿನ ಹಣೆಯ ಭಾಗದ ಚರ್ಮವನ್ನು ಕತ್ತರಿಸಿ, ಮೇಲ್ಸರಿಸಿ, ತಲೆಬುರುಡೆಯಲ್ಲಿ ಡ್ರಿಲ್ ಮಷೀನ್‌ ನಿಂದ ರಂಧ್ರಗಳನ್ನು ಮಾಡಿದ. ಈ ರಂಧ್ರಗಳ ಮೂಲಕ ಮಿದುಳನ್ನು ಬುರುಡೆಯೊಳಗೇ ಎತ್ತಿಹಿಡಿದು, ಸಕ್ಷನ್ ಕೆಥೀಟರ್ ಮೂಲಕ ಮಿದುಳಿನ ಕೆಲ ಭಾಗಗಳನ್ನು ಹೊರಗೆಳೆದ. ಸರ್ಜರಿ ಯಶಸ್ವಿ!

ಅವನ ನಂತರ ಇನ್ನೊಬ್ಬ ನ್ಯೂರೋಸರ್ಜನ್ ತನ್ನ ರೋಗಿಯೊಂದಿಗೆ ಬಂದ. ರೋಗಿಗೆ ಎಲೆಕ್ಟ್ರಿಕ್ ಷಾಕ್ ನೀಡುವ ಮೂಲಕ ಪ್ರಜ್ಞೆ ತಪ್ಪಿಸಲಾಯಿತು. ಸಣ್ಣ ಸುತ್ತಿಗೆಯೊಂದರ ಮೂಲಕ, ತಲೆಬುರುಡೆ ಒಡೆದು, ಚರ್ಮ ಸರಿಸಿ, ಮಿದುಳಿನ ಭಾಗಗಳನ್ನು ಕತ್ತರಿಸಿ ತೆಗೆದು ಹಾಕಲಾಯಿತು. ಇಡೀ ಶಸ್ತ್ರ ಚಿಕಿತ್ಸೆ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಮುಗಿಯಿತು.

(ಹೆನ್ರಿ ಮೊಲಾಯ್ಸನ್)

ಕಾಲದ ಪ್ರವಾಹವನ್ನು ನಾವು ಗ್ರಹಿಸುವುದು ನಮ್ಮ ನೆನಪುಗಳ ಮೂಲಕ. ನಮ್ಮೆಲ್ಲಾ ಅನುಭವಗಳನ್ನು, ಪ್ರಜ್ಞಾಪೂರ್ವಕ ಗ್ರಹಿಕೆಗಳನ್ನು, ನೆನಪುಗಳನ್ನಾಗಿಸುವುದು ಮಿದುಳಿನ ಹಿಪ್ಪೋಕ್ಯಾಂಪಸ್‌ ನ ಕೆಲಸ. ಇದು ನಮಗೆ ಇಂದು ತಿಳಿದಿದ್ದರೆ, ಅದಕ್ಕೆ ಕಾರಣ ಹೆನ್ರಿ ಮೊಲಾಯ್ಸನ್‌ ನಂತಹ ರೋಗಿಗಳು.

ಎರಡನೆಯ ವೈದ್ಯನ ಹೆಸರು ವಾಲ್ಟರ್ ಫ್ರೀಮನ್. ಸಾವಿರಾರು ಲೋಬೋಟಮಿ ಮಾಡಿದವನು. ಮುಂದೆ ಅಮೆರಿಕದ ಅಧ್ಯಕ್ಷನಾದ ಜಾನ್ ಎಫ್. ಕೆನಡಿಯ ಸಹೋದರಿ ರೋಸ್-ಮೇರಿ ಕೆನಡಿಯ ಲೋಬೋಟಮಿ ಮಾಡಿದವನೂ ಇವನೇ. (ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ಲೋಬೋಟಮಿಗೆ ಗುರಿಯಾದ ಈಕೆ, ತನ್ನುಳಿದ ಆಯುಷ್ಯವನ್ನು ಮಾನಸಿಕ ರೋಗಿಗಳ ಆಸ್ಪತ್ರೆಯೊಂದರಲ್ಲಿಯೇ ಕಳೆದು, ೨೦೦೫ರಲ್ಲಿ, ೮೬ನೆಯ ವಯಸ್ಸಿನಲ್ಲಿ ಸಾವನ್ನಪ್ಪಿದಳು) ಅವನು ಸರ್ಜರಿಯ ಶಿಕ್ಷಣವನ್ನೇ ಪಡೆದವನಲ್ಲ. ಜೊತೆಗೆ, ಕನೆಕ್ಟಿಕಟ್ ರಾಜ್ಯದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಬೇಕಿದ್ದ ಲೈಸೆನ್ಸ್ ಸಹ ಅವನ ಬಳಿ ಇರಲಿಲ್ಲ. ಆದರೆ, ಅಂದು, ಆ ವಿಚಾರಗಳು ಯಾರ ಮನಸ್ಸಿಗೂ ಬರಲಿಲ್ಲ. ಡಾ.ಫ್ರೀಮನ್ ತನ್ನ ವಿಧಾನವೇ ಅತಿ ಸುಲಭವೆಂದೂ, ತನ್ನ ವಿಧಾನವನ್ನು ಮನೋರೋಗಿಗಳಿಗೂ ತಾನು ಒಂದೇ ದಿನದಲ್ಲಿ ಕಲಿಸಬಲ್ಲೆನೆಂದು ಬಡಾಯಿ ಬಿಟ್ಟ.

ಮೊದಲನೆಯ ವೈದ್ಯನ ಹೆಸರು ಡಾ.ವಿಲಿಯಂ ಸ್ಕೊವಿಲ್. ಅವನು ಅಮೆರಿಕದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಿಂದ ವೈದ್ಯಕೀಯ ಶಿಕ್ಷಣದ ಪದವಿ ಪಡೆದು, ಹಾರ್ಟ್‌ಫರ್ಡ್ ನಗರದಲ್ಲಿದ್ದ ಪ್ರತಿಷ್ಠಿತ ಮನೋವಿಜ್ಞಾನದ ಆಸ್ಪತ್ರೆಯಾಗಿದ್ದ “ಇನ್ಸ್ಟಿಟ್ಯೂಟ್ ಆಫ್ ಲಿವಿಂಗ್”ನಲ್ಲಿ ನ್ಯೂರೋ ಸರ್ಜನ್ ಆಗಿ ಕೆಲಸಮಾಡುತ್ತಿದ್ದ.

(ಡಾ.ವಿಲಿಯಂ ಸ್ಕೊವಿಲ್)

ವೈದ್ಯಕೀಯ ರಂಗದಲ್ಲಿ ಅಪಾರ ಯಶಸ್ಸಿನ ಜೊತೆಗೇ ಅವನಿಗೆ ಶ್ರೀಮಂತಿಕೆಯೂ ದೊರೆತಿತ್ತು. ಮಡದಿ, ಮೂರು ಮಕ್ಕಳ ಜೊತೆ ಸುಖೀ ಸಂಸಾರ ನಡೆಸುತ್ತಿದ್ದ. ಆದರೆ, ಇನ್ನೊಬ್ಬ ಮಹಿಳೆಯ ಮೇಲೆ ಮನಸ್ಸಾಗಿ ಅಕ್ರಮ ಸಂಬಂಧ ಬೆಳೆಯಿತು. ಈ ವಿಷಯ ಅವನ ಮಡದಿಗೆ ತಿಳಿದಾಗ, ಅವಳು ಖಿನ್ನತೆಗೆ ಗುರಿಯಾದಳು. ಅದು ಮುಂದೆ ಇತರೆ ಮಾನಸಿಕ ತೊಂದರೆಗಳಿಗೆ ಕಾರಣವಾಯಿತು.

ಡಾ.ಸ್ಕೊವಿಲ್ ತನ್ನ ಮಡದಿಗೆ ತಾನೇ ಚಿಕಿತ್ಸೆ ನೀಡಲು ಪ್ರಾರಂಭಿಸಿದ. ಎಲೆಕ್ಟ್ರಿಕ್ ಷಾಕ್ ಥೆರಪಿ ಆಯಿತು. ಪ್ರತಿದಿನ ಶವಪೆಟ್ಟಿಗೆಯಂತಹ ಪೆಟ್ಟಿಗೆಯೊಂದರಲ್ಲಿ ಎಂಟುಗಂಟೆಗಳ ಕಾಲ ಮಲಗಿಸಿ, ಅದರ ತಾಪಮಾನ ಹೆಚ್ಚಿಸಿ ದೇಹಕ್ಕೆ ಜ್ವರ ಬರಿಸುವ ಪೈರೋಥೆರಪಿಯೆಂಬ ವಿಚಿತ್ರ ಚಿಕಿತ್ಸೆಯ ಪ್ರಯೋಗವೂ ಆಯಿತು. ಆದರೆ, ಆಕೆಯ ಮಾನಸಿಕ ಖಿನ್ನತೆ ದೂರವಾಗಲಿಲ್ಲ. ಕೊನೆಗೆ, ಡಾ.ಸ್ಕೊವಿಲ್, ತಾನೇ ಆಕೆಯ ಲೊಬೊಟಮಿ ಮಾಡಿದ.

ಆಕೆಯ ಖಿನ್ನತೆ ದೂರವಾಗಲಿಲ್ಲ. ಆದರೆ, ವಾಸ್ತವದೊಂದಿಗಿನ ಒಡನಾಟದಿಂದ ಅವಳು ದೂರವಾದಳು. ತನ್ನ ಉಳಿದ ಜೀವನವನ್ನೆಲ್ಲಾ ಆ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲೇ ಕಳೆದಳು. ಆಕೆಗೆ ಡೈವೋರ್ಸ್ ನೀಡಿದ ಡಾ.ಸ್ಕೊವಿಲ್, ತನ್ನ ಪ್ರೇಯಸಿಯನ್ನು ಮದುವೆಯಾದ.

******

೧೯೫೩ರ ಹೊತ್ತಿಗೆ ಹೆನ್ರಿ ಮೊಲಾಯ್ಸನ್‌ ಗೆ ಇಪ್ಪತ್ತೇಳರ ವಯಸ್ಸು. ಅವನ ಎಪಿಲೆಪ್ಸಿ ಉಲ್ಬಣಾವಸ್ಥೆಗೆ ಏರಿತ್ತು. ಅದರ ಸುಧಾರಣೆಗಾಗಿ ಯಾವುದೇ ಚಿಕಿತ್ಸೆಗೂ ಸಿದ್ಧನಿದ್ದ. ತನ್ನದೇ ಊರಿನಲ್ಲಿದ್ದ ಪ್ರಖ್ಯಾತ ನ್ಯೂರೋಸರ್ಜನ್ ಡಾ.ವಿಲಿಯಂ ಸ್ಕೊವಿಲ್ ಬಳಿ ಅವನು ಚಿಕಿತ್ಸೆಗಾಗಿ ಬಂದದ್ದು ಸಹಜವೇ ಆಗಿತ್ತು.

ಹೆನ್ರಿಯನ್ನು ಪರಿಶೀಲಿಸಿದ ಡಾ.ಸ್ಕೊವಿಲ್, ಲೊಬೋಟಮಿ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಒದಗಿಸಬಲ್ಲದೆಂದು ಹೇಳಿದ. ಹೆನ್ರಿ ಮತ್ತು ಆತನ ತಂದೆ-ತಾಯಿಯರು ಆ ಶಸ್ತ್ರಚಿಕಿತ್ಸೆಗೆ ಒಪ್ಪಿದರು.

ಸೆಪ್ಟೆಂಬರ್ ೧, ೧೯೫೩ರಂದು ಡಾ.ಸ್ಕೊವಿಲ್ ಲೊಬೋಟಮಿ ಮಾಡಿ, ಹೆನ್ರಿ ಮೊಲಾಯ್ಸನ್‌ ನ ಮಿದುಳಿನಿಂದ ಹಿಪ್ಪೋಕ್ಯಾಂಪಸ್ ಮತ್ತು ಅದರ ಸುತ್ತಮುತ್ತಲ ಭಾಗಗಳನ್ನು ತೆಗೆದು ಹಾಕಿದ. ಜೊತೆಗೇ, ಮಿದುಳಿನ ಇನ್ನೊಂದು ಕೇಂದ್ರವಾದ ಅಮಿಗ್ಡಾಲಾದ ಬಹುಭಾಗವನ್ನೂ ಹೊರ ಹಾಕಿದ.

ಈ ಸರ್ಜರಿಯ ನಂತರ, ಹೆನ್ರಿ ಚೇತರಿಸಿಕೊಂಡನಂತರ ಒಂದು ವಿಷಯ ಬೆಳಕಿಗೆ ಬಂತು. ಸರ್ಜರಿಯ ಮುಂಚಿನ ವಿಷಯಗಳೆಲ್ಲಾ ಅವನಿಗೆ ನೆನಪಿದ್ದರೂ, ಅವನು ಹೊಸ ನೆನಪುಗಳನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದ್ದ. ಯಾವುದೇ ಹೊಸ ವಿಷಯ-ಅನುಭವದ ನೆನಪುಗಳು ಮೂವತ್ತು ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ಅವನ ಮನದಲ್ಲಿರುತ್ತಿರಲಿಲ್ಲ. ಅವನ ಮನಸ್ಸು ಭೂತದ ಬಂದೀಖಾನೆಯಿಂದ ಬಿಡುಗಡೆ ಹೊಂದಿ, ಸದಾ ವರ್ತಮಾನದಲ್ಲೇ ನೆಲೆಸಿತ್ತು.

******

ಕಾಲದ ಪ್ರವಾಹವನ್ನು ನಾವು ಗ್ರಹಿಸುವುದು ನಮ್ಮ ನೆನಪುಗಳ ಮೂಲಕ. ನಮ್ಮೆಲ್ಲಾ ಅನುಭವಗಳನ್ನು, ಪ್ರಜ್ಞಾಪೂರ್ವಕ ಗ್ರಹಿಕೆಗಳನ್ನು, ನೆನಪುಗಳನ್ನಾಗಿಸುವುದು ಮಿದುಳಿನ ಹಿಪ್ಪೋಕ್ಯಾಂಪಸ್‌ ನ ಕೆಲಸ. ಇದು ನಮಗೆ ಇಂದು ತಿಳಿದಿದ್ದರೆ, ಅದಕ್ಕೆ ಕಾರಣ ಹೆನ್ರಿ ಮೊಲಾಯ್ಸನ್‌ ನಂತಹ ರೋಗಿಗಳು. ಮತ್ತು ಡಾ.ಸ್ಕೊವಿಲ್‌ ನಂತಹ ವೈದ್ಯರು.

ನೆನಪುಗಳನ್ನು ಹಲವು ವಿಧಗಳಾಗಿ ವಿಂಗಡಿಸಬಹುದು. ಕಾಲವನ್ನೇ ಮಾಪಕವಾಗಿ ವಿಂಗಡಿಸಿದರೆ, ನೆನಪುಗಳನ್ನು ಅಲ್ಪಾವಧಿಯ ನೆನಪುಗಳು (“Short Term Memories”) ಮತ್ತು ದೀರ್ಘಾವಧಿ ನೆನಪುಗಳು (“Long Term Memories”) ಎಂದು ಸ್ಥೂಲವಾಗಿ ವಿಂಗಡಿಸಬಹುದು.

ಅಲ್ಪಾವಧಿ ನೆನಪುಗಳು ನಮ್ಮ ಮನದಲ್ಲಿ ಕೇವಲ ೩೦ ಸೆಕೆಂಡುಗಳಿಂದ ಒಂದೋ-ಎರಡೋ ನಿಮಿಷ ಮಾತ್ರ ಇದ್ದರೆ, ದೀರ್ಘಾವಧಿಯ ನೆನಪುಗಳು, ಬಾಲ್ಯದಲ್ಲಿ ಮೂಡಿದರೂ ಮುಪ್ಪಿನಲ್ಲೂ ಹಸಿರಾಗಿಯೇ ಇರುತ್ತವೆ. ಅಲ್ಪಾವಧಿಯ ನೆನಪುಗಳನ್ನು ದೀರ್ಘಾವಧಿ ನೆನಪುಗಳನ್ನಾಗಿಸುವುದು ಹಿಪ್ಪೋಕ್ಯಾಂಪಸ್‌ ನ ಪ್ರಮುಖ ಕೆಲಸ.

(ರೋಸ್-ಮೇರಿ ಕೆನಡಿ)

ನಮ್ಮ ಮನಸ್ಸು ಸರಿಯಾಗಿ ಕೆಲಸಮಾಡಲು ಇವೆರಡೂ ರೀತಿಯ ನೆನಪುಗಳು ನಮಗೆ ಅವಶ್ಯಕ (*). ಉದಾಹರಣೆಗೆ ನೀವು ಈ ವಾಕ್ಯವನ್ನು ಓದಿ ಅರ್ಥೈಸಿಕೊಳ್ಳಲು, ನೀವು ಕೆಲವೇ ಸೆಕೆಂಡುಗಳ ಹಿಂದೆ ಓದಿದ ಪದಗಳ ನೆನಪು ಬೇಕು. ಈ ನೆನಪು ನಿಮಗೆ ಈ ವಾಕ್ಯದ “context” – ಸಂದರ್ಭ – ಒದಗಿಸುತ್ತದೆ; ಎರಡೋ ಮೂರೋ ನಿಮಿಷಗಳ ಹಿಂದೆ ನೀವು ಓದಿರಬಹುದಾದ ಪ್ರತಿಯೊಂದು ಪದದ ನೆನಪೂ ನಿಮಗೆ ಬೇಕಿಲ್ಲ. ಇದು ಶಾರ್ಟ್ ಟರ್ಮ್ ಮೆಮರಿ. ಆದರೆ, ನೀವು ಈ ಲೇಖನವನ್ನು ಅರ್ಥೈಸಿಕೊಳ್ಳಲು, ನಿಮಗೆ ನೀವು ನೆನಪುಗಳ ಕುರಿತು ಲೇಖನವನ್ನು ಓದುತ್ತಿರುವಿರೆಂಬ ಅರಿವಿನ ನೆನಪು ಬೇಕು. ಈ ಲೇಖನ-ಸರಣಿಯ ಗುರಿಯನ್ನು ತಿಳಿಯಲು ಹಲವು ವಾರಗಳ ಕೆಳಗೆ ಬರೆದಂತಹ ಕಾಲ ಪ್ರಯಾಣದ ಕುರಿತಾದ ಲೇಖನದ ನೆನಪಿದ್ದರೆ ಅದು ಸಹಾಯಕಾರಿ.

೩೭೯ + ೨೩ + ೧೮ = ?

ಇದರ ಉತ್ತರವನ್ನು ನಿಮ್ಮ ಮನಸ್ಸಿನಲ್ಲಿಯೇ ಲೆಕ್ಕ ಹಾಕಲು, ಈ ಸಂಖ್ಯೆಗಳನ್ನು ಕ್ಷಣಕಾಲ ನೀವು ಪ್ರಜ್ಞಾಪೂರ್ವಕವಾಗಿ ನಿಮ್ಮ ನೆನಪಿನಲ್ಲಿಟ್ಟುಕೊಂಡಿರಬೇಕು. ಅದರ ಉತ್ತರ: ೪೨೦ ಎಂದಾದ ಮೇಲೆ, ಆ ಸಂಖ್ಯೆಗಳ ನೆನಪು ನಿಮಗೆ ಅಷ್ಟೇನೂ ಅವಶ್ಯಕವಲ್ಲ. ಭಾರತೀಯ ಸಾಂಸ್ಕೃತಿಕ ಸಂದರ್ಭದಲ್ಲಿ, “೪೨೦” ಸಂಖ್ಯೆಗೆ ತನ್ನದೇ ಆದ ಅರ್ಥವಿದೆ – “ಮೋಸಗಾರ” ಎಂದು. ಅದನ್ನು ತಿಳಿದವರಿಗೆ, ಈ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅಷ್ಟೇನೂ ಕಷ್ಟದ ವಿಷಯವಲ್ಲ. ಮೊದಲನೆಯ ಕೆಲಸಕ್ಕೆ ಶಾರ್ಟ್ ಟರ್ಮ್ ಮೆಮರಿ ಬೇಕಿದ್ದರೆ, ಎರಡನೆಯದು ಲಾಂಗ್ ಟರ್ಮ್ ಮೆಮರಿಯ ಕೆಲಸ.

ಹಿಪ್ಪೋಕ್ಯಾಂಪಸ್ ಮಾಡುವ ಕೆಲಸವನ್ನು, ಹೋಟೆಲ್‌ ನ ರಿಸೆಪ್ಷನ್‌ ನಲ್ಲಿ ಕೆಲಸಮಾಡುವವರಿಗೆ ಹೋಲಿಸಬಹುದು. ಹೋಟೆಲಿನ ರಿಸೆಪ್ಷನ್‌ ಡೆಸ್ಕಿನಲ್ಲಿ ಕುಳಿತವರು, ಹೋಟೆಲಿನ ಲಾಬಿಯಲ್ಲಿ ಓಡಾಡುತ್ತಿರುವವರ ಮೇಲೆ ಕಣ್ಣಿಟ್ಟಿರಬೇಕು: ಯಾರು ಎಲ್ಲಿ ಕುಳಿತಿದ್ದಾರೆ? ಮಕ್ಕಳು ಲಿಫ್ಟ್-ಬಟನ್‌ ಗಳನ್ನು ಒತ್ತುತ್ತಿದ್ದಾರೆಯೇ? ಒಂದು ಸೆಕೆಂಡಿನ ಹಿಂದೆ ಕಾಣುತ್ತಿದ್ದ ನೀಲಿ ಅಂಗಿಯ ಯುವಕ ಎಲ್ಲಿ ಮಾಯವಾದ? ಇವೆಲ್ಲಾ ಶಾರ್ಟ್ ಟರ್ಮ್ ಮೆಮರಿ ಕೆಲಸ ಮಾಡುತ್ತಿರುವ ಲಕ್ಷಣಗಳು. ಲಾಬಿಯಲ್ಲಿ ಇರುವವರಲ್ಲಿ ಒಬ್ಬರು ಬಂದು, ಹೋಟೆಲಿನ ರೂಮ್ ಒಂದನ್ನು ಪಡೆದರೆ, ಅದನ್ನು ಹೋಟೆಲಿನ ಕಂಪ್ಯೂಟರ್ ಅಥವಾ ರೆಜಿಸ್ಟರ್‌ ನಲ್ಲಿ ದಾಖಲಾಗುತ್ತದೆ. ಈ ದಾಖಲೆ, ಆ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡುವವರೆಗೂ, ಅಥವಾ ರೆಜಿಸ್ಟರ್ ಇರುವವರೆಗೂ ಇದ್ದೇ ಇರುತ್ತದೆ. ಇದು ಲಾಂಗ್ ಟರ್ಮ್ ಮೆಮರಿ. ನಮ್ಮ ಕ್ಷಣ-ಕ್ಷಣದ ಅನುಭವಗಳನ್ನು ನಮ್ಮ ಮಿದುಳಿನ ರೆಜಿಸ್ಟರಿನಲ್ಲಿ ದಾಖಲಿಸುವುದು ಹಿಪ್ಪೋಕ್ಯಾಂಪಸ್ ಕೆಲಸ.

ಹಿಪ್ಪೋಕ್ಯಾಂಪಸ್ ತೆಗೆದು ಹಾಕಿದವರಲ್ಲಿ, ಕ್ಷಣ-ಕ್ಷಣದ ಅನುಭವಕ್ಕೆ ಬೇಕಾದ ಅಲ್ಪಾವಧಿ ನೆನಪುಗಳು ಇರುವವಾದರೂ ಅವು ದೀರ್ಘಾವಧಿಯ ನೆನಪುಗಳಾಗಿ ದಾಖಲಾಗುವುದಿಲ್ಲ.

ಹೆನ್ರಿ ಮೊಲಾಯ್ಸನ್‌ ಗೆ ಆಗಿದ್ದು ಅದೇ.

(ಹಿಪ್ಪೊಕ್ಯಾಂಪಸ್‌ (Hippocampus))

ಹಿಪ್ಪೋಕ್ಯಾಂಪಸ್ ಇಲ್ಲದಿದ್ದ ಅವನ ಮಿದುಳಿನಲ್ಲಿ, ಹೊಸ ವಿಚಾರ, ಅನುಭವಗಳು, ಅವೆಷ್ಟೇ ಗಹನವಾಗಿರಲಿ ಅಥವಾ ಕ್ಷುಲ್ಲಕವಾಗಿರಲಿ, ದೀರ್ಘಾವಧಿಯ ನೆನಪುಗಳಾಗಿ ದಾಖಲಾಗುತ್ತಿರಲಿಲ್ಲ. ಆಗಷ್ಟೇ ಊಟಮಾಡಿ ಕೈ ತೊಳೆದ ನಂತರ ಊಟಕ್ಕೆ ಕರೆದರೆ, ಮತ್ತೊಮ್ಮೆ ಊಟ ಮಾಡಲು ಸಿದ್ಧನಾಗುತ್ತಿದ್ದ.

ಹಲವು ದಶಕಗಳ ಕಾಲ, ಅವನೊಡನಾಡುತ್ತಿದ್ದ ವಿಜ್ಞಾನಿಗಳು, ವೈದ್ಯಕೀಯ ಸಿಬ್ಬಂದಿ ಅವನಿಗೆ ಪ್ರತಿಬಾರಿಯೂ ಹೊಸಬರೇ!

ಅವನ ಸರ್ಜರಿಯ ಕೆಲ ವರ್ಷಗಳ ನಂತರ ಅವನ ತಂದೆ ಮರಣ ಹೊಂದಿದರು. ಆ ವಿಷಯ ಅವನಿಗೆ ತಿಳಿದಾಗ ಎಲ್ಲರಂತೆಯೇ ಅವನು ದುಃಖಿತನಾದ. ಕೆಲವೇ ಸಮಯದಲ್ಲಿ ಮಾತುಕತೆ ಬೇರೆಡೆಗೆ ತಿರುಗಿತು; ಅವನಪ್ಪ ಸತ್ತಿದ್ದ ಸಂಗತಿ ಸಂಪೂರ್ಣವಾಗಿ ಮರೆಯಿತು. ಆ ಸಾವಿನ ನೋವು ಕ್ಷಣಮಾತ್ರದಲ್ಲಿ ಮರೆಯಾಯಿತು. ಕೆಲವು ಸಮಯದ ನಂತರ ಮತ್ತೊಮ್ಮೆ ತಂದೆಯ ಸಾವಿನ ವಿಚಾರವನ್ನು ಅವನಿಗೆ ತಿಳಿಸಿದಾಗ, ಅದೇ ಮೊದಲ ಬಾರಿಗೆ ತಂದೆಯ ಸಾವನ್ನು ತಿಳಿದಂತೆ ಅವನು ದುಃಖಿತನಾದ.

ನೋವಿನ ನೆನಪುಗಳು, ಕಾಲ ಸರಿದಂತೆ ಅದರ ಮೊನಚನ್ನು ಕಡಿಮೆ ಮಾಡುತ್ತವೆ. ಅಂತಹ ನೆನಪುಗಳೇ ಇಲ್ಲದ, ಹೆನ್ರಿ ಮೊಲಾಯ್ಸನ್ ಅಂತಹವರಿಗೆ ಆ ನೋವಿನ ಮೊನಚು ಸದಾ ತೀಕ್ಷ್ಣ. ತಂದೆಯ ಸಾವಿನ ಸುದ್ದಿ ಪ್ರತಿ ಬಾರಿಯೂ ಅವನಿಗೆ ಹೊಸತೇ; ಅದರ ದುಃಖದ ನೋವೂ ಸಹ. ಇದನ್ನು ಗಮನಿಸಿದ ಅವನ ತಾಯಿ, ತಂದೆಯ ಸಾವಿನ ಸುದ್ದಿಯ ವಿಚಾರವನ್ನು ಯಾರೂ ಅವನ ಮುಂದೆ ಎತ್ತದಂತೆ ತಾನು ಬದುಕಿರುವವರೆಗೂ ನಿಗಾ ಇಟ್ಟಿದ್ದಳು. ಅಕಸ್ಮಾತ್, ಅದು ಹೊರ ಬಂದರೆ, ಅವನ ಗಮನವನ್ನು ಕ್ಷಣ ಕಾಲ ಬೇರೆಡೆಗೆ ತಿರುಗಿಸಿದರೇ ಸಾಕು, ಆ ನೆನಪು ಮಾಯವಾಗಿ ದುಃಖದಿಂದ ಹೊರಬರುತ್ತಿದ್ದ.

ತನ್ನ ದೇಹದ ಬಗೆಗೆ, ತನ್ನ ಮುಖದ ಬಗೆಗೆ ಅವನ ಮನದಲ್ಲಿದ್ದ ಚಿತ್ರ ಸಹ ಅವನ ೨೭ನೆಯ ವಯಸ್ಸಿನದಾಗಿತ್ತು. ಆ ನಂತರದ ಫೋಟೋಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವುದೂ ಅವನಿಗೆ ಅಸಾಧ್ಯವಾಗಿತ್ತು. ಪ್ರತಿ ಬಾರಿ ಕನ್ನಡಿಯಲ್ಲಿ ತನ್ನ ಮುಖ ಕಂಡಾಗಲೂ, ಅವನ ಮನದಲ್ಲಿ ಅದು ಆಶ್ಚರ್ಯಕ್ಕೆ ಕಾರಣವಾಗುತ್ತಿತ್ತು.

ಅವನ ಈ ಮರೆವು, ಅವನ ಬುದ್ಧಿವಂತಿಕೆಗೇನೂ ಧಕ್ಕೆ ತರಲಿಲ್ಲ. ಅವನ ಐ.ಕ್ಯೂ. ಕಡಿಮೆಯಾಗಿರಲಿಲ್ಲ. ಪದಬಂಧಗಳನ್ನು ಬಿಡಿಸುವಲ್ಲಿ ಆಸಕ್ತಿ-ನೈಪುಣ್ಯತೆ ಎರಡೂ ಇತ್ತು. ಸರ್ಜರಿಯ ಮುಂಚಿನ ಎಲ್ಲ ವಿಚಾರಗಳೂ ಅವನ ನೆನಪಿನಲ್ಲಿದ್ದವು. ಅವನ ಸರ್ಜರಿಗೆ ಮುಂಚೆಯೇ ಟಿ.ವಿ. ತಂತ್ರಜ್ಞಾನ ಇದ್ದುದ್ದರಿಂದ, ಟಿ.ವಿ. ಅವನಿಗೆ ಹೊಸದೇನೂ ಆಗಿರಲಿಲ್ಲ. ಟಿ.ವಿ.ಯಲ್ಲಿ ಹಳೆಯ ಚಲನಚಿತ್ರಗಳನ್ನು ನೋಡುತ್ತಿದ್ದ; ಆದರೆ, ರಿಮೋಟ್ ಕಂಟ್ರೋಲ್ ಉಪಯೋಗಿಸುವುದು ಕಲಿಯಲಾಗಲೇ ಇಲ್ಲ. ನೆನಪುಗಳು ಜೈಲಾದರೆ, ಮರೆವೇ ಮುಕ್ತಿ. ಲೋಬೋಟಮಿ ಸರ್ಜರಿಯ ನಂತರದ ೫೫ ವರ್ಷಗಳ ತನ್ನ ಬದುಕನ್ನು, ಆ ಕ್ಷಣದ ಅನುಭವಕ್ಕಷ್ಟೇ ಸ್ಪಂದಿಸುವ, ಸುಖ-ದುಃಖಗಳನ್ನು ಮೀರಿದ ಧ್ಯಾನಾಸಕ್ತ ಯೋಗಿಯಂತೆ ಅವನು ಬದುಕಿದ.

ಅವನ ಪರಿಸ್ಥಿತಿಯ ಕುರಿತು ಹಲವು ದಶಕಗಳ ಕಾಲ ಅಧ್ಯಯನ ಮಾಡಲಾಯಿತು. ಸುಮಾರು ನೂರಕ್ಕೂ ಹೆಚ್ಚು ಜನ ಅವನ ಕುರಿತು ರೀಸರ್ಚ್ ಪೇಪರ್‌ ಗಳನ್ನು ಬರೆದಿದ್ದಾರೆ. ಇನ್ನೂ ಬರೆಯುತ್ತಲಿದ್ದಾರೆ. ಹಲವರು ಹೇಳುವಂತೆ, ಮಾನವ ಇತಿಹಾಸದಲ್ಲಿ, ಹೆನ್ರಿ ಮೊಲಾಯ್ಸನ್‌ ನಷ್ಟು ಅಧ್ಯಯನಕ್ಕೆ ಗುರಿಯಾದ ರೋಗಿ ಇನ್ನೊಬ್ಬನಿಲ್ಲ.

ಡಾ.ಬ್ರೆಂಡಾ ಮಿಲ್ನರ್ ಮತ್ತು ಡಾ.ಸೂಸನ್ ಕಾರ್ಕಿನ್ ಅಂತಹ ಪ್ರಖ್ಯಾತ ನ್ಯೂರೋಸೈಂಟಿಸ್ಟ್‌ ಗಳು ದಶಕಗಳ ಕಾಲ ಅವನೊಂದಿಗೆ ಒಡನಾಡಿ ಎಷ್ಟೋ ಪ್ರಯೋಗಗಳನ್ನು ಮಾಡಿದರು. ಈ ಅಧ್ಯಯನಗಳ ಮೂಲಕ ಮಾನವರ ಮಿದುಳು-ನೆನಪುಗಳ ಸಂಬಂಧ ಕುರಿತು ಅತಿ ಮಹತ್ವದ ವಿಷಯಗಳನ್ನು ಬೆಳಕಿಗೆ ತಂದರು. ಅವನೊಂದಿಗೆ ಕೆಲಸ ಮಾಡಿದ, ಈ ವಿಜ್ಞಾನಿಗಳು ಹೇಳುವಂತೆ, ಅವನೆಂದೂ ತನ್ನ ತಾಳ್ಮೆ ಕಳೆದುಕೊಳ್ಳಲಿಲ್ಲ. ತನ್ನ ಪರಿಸ್ಥಿತಿಯ ಬಗೆಗೆ ಅವನಿಗೆ ಅರಿವಿತ್ತು, ಆದರೆ, ಅವನೆಂದೂ ತನ್ನ ವಿಧಿಯ ಬಗೆಗಾಗಲೀ, ಡಾ.ಸ್ಕೊವಿಲ್ ಬಗೆಗಾಗಲೀ ಹಳಿಯಲಿಲ್ಲ. ಡಾ.ಕಾರ್ಕಿನ್, ಒಮ್ಮೆ ಹೆನ್ರಿಯ ಆರೋಗ್ಯದ ಕುರಿತು ವಿಚಾರಿಸಿದರು. ಅದಕ್ಕೆ, ಮುಗುಳ್ನಗುತ್ತಾ ಅವನೆಂದ ಮಾತು: “Live and learn. I live. And you learn”

೨೦೦೮ರಲ್ಲಿ, ತನ್ನ ೮೨ನೆಯ ವಯಸ್ಸಿನಲ್ಲಿ ಹೆನ್ರಿ ಮೊಲಾಯ್ಸನ್ ಕಾಲಾಧೀನನಾದ. ಸರ್ಜರಿಯ ಮುನ್ನ ಇದ್ದ ಅವನ ಸ್ನೇಹ ಪರತೆ ಮತ್ತು ಹಾಸ್ಯಪ್ರಜ್ಞೆ ಕೊನೆಯೊಂದಿಗೂ ಅವನಲ್ಲಿತ್ತು. ಅವನ ಖಾಸಗಿತನವನ್ನು ಕಾಪಾಡಲು, ಅವನ ಹೆಸರನ್ನು ಅವನ ಸಾವಿನವರೆಗೂ ಗೋಪ್ಯವಾಗಿ ಇಡಲಾಗಿತ್ತು.


ಹದಿಹರೆಯದಲ್ಲೇ ಖ್ಯಾತಿ ಪಡೆದು, “ಸವಿನೆನಪುಗಳು ಬೇಕು…” ಎಂದು ಶೋಕ ಗೀತೆ ಹಾಡಿ ಹದಿನೇಳನೆಯ ವಯಸ್ಸಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಚಿತ್ರ ನಟಿ ಶೋಭಾಳ ನಿಗೂಢ ಬದುಕು ಒಂದೆಡೆಯಾದರೆ, ತನ್ನ ಇಡೀ ಜೀವನ ಯಾರಿಗೂ ತಿಳಿಯದಂತೆ ಬದುಕಿ, ಮರೆವಿನಲ್ಲಿಯೇ ಮುಕ್ತಿ ಪಡೆದು, ಮಿದುಳು-ನೆನಪುಗಳ ನಿಗೂಢತೆಯ ಮುಸುಕನ್ನು ತೆರೆಯಲು ಸಹಾಯಮಾಡಿದ ಮೋಲಾಯ್ಸನ್‌ ನ ಬದುಕು ಇನ್ನೊಂದೆಡೆ. (ಇದು ಬದುಕುಗಳ ಸಾರ್ಥಕತೆಯ ವಿಚಾರವೆಂದು ನನ್ನ ಅಭಿಪ್ರಾಯವಲ್ಲ. ಬದುಕುಗಳ ವೈವಿಧ್ಯದ ಕುರಿತಾದ ಬೆರಗು ಅಷ್ಟೇ)

******

(*) ಇಂತಹ ವಿಚಾರಗಳನ್ನು ವಿವರಿಸುವಲ್ಲಿ ಭಾಷೆ ಸೋಲುತ್ತದೆ. ಇಲ್ಲಿ ಪ್ರಯೋಗಿಸಿರುವ “ಮನಸ್ಸು ಸರಿಯಾಗಿ” ಎಂಬ ಪದಗಳ ಹಿಂದೆ “ಸರಿ/ಕೆಡಕು”ಗಳ ವಿಸ್ತಾರ ಭಾವಾರ್ಥವಿಲ್ಲ