ಇಲ್ಲೊಂದು ಕಡೆ ಒಬ್ಬರ ಮನೆಯಲ್ಲಿ ಮಳೆಹಕ್ಕಿಗಳು ಗೂಡು ಕಟ್ಟಿವೆ. ಖಂಡಖಂಡಾತರಗಳಿಂದ ವಲಸೆ ಬರುವ ಇವುಗಳು ತಮ್ಮ ಪೂರ್ವಜ ಹಕ್ಕಿಗಳು ಈ ಹಿಂದೆ ಕಟ್ಟಿರುವ ಗೂಡುಗಳಿಗೆ ಮರಳಿ ಬಂದು, ಮೊಟ್ಟೆಹಾಕಿ, ಮರಿಗಳ ರೆಕ್ಕೆ ಬಲಿತೊಡನೆ ಮತ್ತೆ ಅವುಗಳೊಡನೆ ಹಾರಿ ಹೋಗುತ್ತವೆ. ಮತ್ತೆ ಆ ಮರಿಗಳು ಬೆಳೆದು ಮೊಟ್ಟೆಹಾಕಲು ಇಲ್ಲಿಗೇ ಬರುತ್ತವೆ. ಇದು ಹಲವು ಕಾಲದಿಂದ ಹೀಗೇ ನಡೆದು ಬಂದಿದೆ’ ಎಂದು ಗೆಳೆಯರೊಬ್ಬರು ಹೇಳಿದ್ದರು. ತಮಗೂ ಈ ಇಹಲೋಕಕ್ಕೂ ಏನೂ ಸಂಬಂಧವೇ ಇಲ್ಲ ಎಂಬ ಹಾಗೆ ಯಾವಾಗಲೂ ಆಕಾಶದಲ್ಲಿ ಒಂಟಿ ಆತ್ಮಗಳಂತೆ ಕೀಚು ದನಿಯಲ್ಲಿ ಕೀರಲಿಡುತ್ತಾ ಹಾರುವ ಈ ಹಕ್ಕಿಗಳು ಎಂದೂ ಮನುಷ್ಯರಿಗೆ ಸಂಬಂಧಿಸಿದವುಗಳಲ್ಲ ಎಂದು ಇದುವರೆಗೆ ನಾನೂ ಅಂದುಕೊಂಡಿದ್ದೆ. ಆದರೆ ಈಗ ಇಲ್ಲಿ ಬಂದು ನೋಡಿದರೆ ಈ ಮಳೆಹಕ್ಕಿಗಳು ಈ ಕಾಫಿ ಬೆಳೆಗಾರನ ಮನೆಯ ಗೋಡೆಯ ಸಣ್ಣ ಮೂಲೆಯನ್ನು ತಮ್ಮದೇ ಪಿತ್ರಾರ್ಜಿತ ಆಸ್ತಿ ಎಂದು ಪರಿಭಾವಿಸಿಕೊಂಡು, ತಮ್ಮ ಎಂಜಲಿನಿಂದ ಗಟ್ಟಿ ಅಂಟಿನಂತಹ ಪಸೆಯನ್ನು ಹೊರಹಾಕಿ, ಆ ಅಂಟಿನಿಂದ ಒಣಕಡ್ಡಿಗಳನ್ನೂ ಹಳೆಯ ತುಪ್ಪಳಗಳನ್ನೂ ಅಂಟಿಸಿ ದೊಡ್ಡ ವಸಾಹತನ್ನಾಗಿ ಮಾಡಿ, ಅವುಗಳೊಳಗೆ ಸಣ್ಣಸಣ್ಣ ವಸಾಹತುಶಾಹಿಗಳಂತೆ ತಮ್ಮ ಸಂಸಾರ ಸಾಗರದಲ್ಲಿ ಕಿರುಚಿಕೊಂಡು ಕೂತಿದ್ದವು. ಇನ್ನೂ ಮನೆಗೆ ಮರಳದೇ ಉಳಿದ ಹಕ್ಕಿಗಳು ಆಕಾಶವೇ ತಮ್ಮ ಸಾಮ್ರಾಜ್ಯ ಎಂಬಂತೆ ಅಲ್ಲೇ ಆತ್ಮಗಳಂತೆ ಹಾರಾಡುತ್ತಿದ್ದವು. 

ಈ ಹಕ್ಕಿಗಳು ಈ ಮನೆಗೆ ಮೊದಲ ಬಾರಿ ಗೂಡು ಕಟ್ಟಲು ಬಂದಾಗ ಬದುಕಿದ್ದ ಯಜಮಾನರು ಈಗ ತೀರಿ ಹೋಗಿದ್ದರು. ಆಗ ಅವರು ಕುಳಿತುಕೊಳ್ಳುತ್ತಿದ್ದ ಆರಾಮ ಕುರ್ಚಿಯನ್ನು ಈಗಿನ ಯಜಮಾನರು ಹಾಗೇ ಖಾಲಿ ಇರಲು ಬಿಟ್ಟಿದ್ದರು. ಆ ಖಾಲಿಯಾಗಿ ಕುಳಿತಿದ್ದ ಆರಾಮಕುರ್ಚಿಯ ಮೇಲೆ ಈ ಹಕ್ಕಿಗಳು ಹಾಕುವ ಹಿಕ್ಕೆ ಬೀಳಬಾರದೆಂದು ಆ ಹಿಕ್ಕೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸಿಮೆಂಟಿನ ಒಂದು ತಟ್ಟನ್ನೂ ಕಟ್ಟಿದ್ದರು. ಆ ತಟ್ಟಿನ ಮೇಲಿರುವ ವಸಾಹತಿನಲ್ಲಿ ನೂರಾರು ಹಕ್ಕಿಗಳ ಸಂಸಾರ. ಸಂಜೆ ಕತ್ತಲಾಗುವವರೆಗೆ ಮೊಟ್ಟೆಗಳ ಮೇಲೆ ಕಾವು ಕೂತಿರುವ ಹಕ್ಕಿಗಳ ಸಣ್ಣ ನಿಟ್ಟುಸಿರಿನಂತಹ ಸದ್ದು. ಆಗಾಗ ಆಕಾಶದಿಂದ ಇಳಿದು ಬಂದು ಎಳೆಮರಿಗಳಿಗೆ ತಾವು ತಂದ ಹುಳಹುಪ್ಪಡಿಗಳನ್ನು ತಿನಿಸಿ ಹಾರಿಹೋಗುವ ತಂದೆತಾಯಿ ಹಕ್ಕಿಗಳ ರೆಕ್ಕೆ ಬಡಿತದ ಸಣ್ಣ ಸದ್ದು. ಅವುಗಳು ಬಂದು ಹೋಗುವಾಗ ಮರಿ ಹಕ್ಕಿಗಳ ಉಲ್ಲಾಸದ ಮತ್ತು ಬೇಸರದ ಸಣ್ಣ ಕಿರುಚಾಟ. ಇಷ್ಟು ಬಿಟ್ಟರೆ ಈ ಮನೆಯೊಳಗೆ ಸದ್ದೇ ಇಲ್ಲದಂತೆ ಚಲಿಸುವ ಈಗಿನ ಯಜಮಾನ ಮತ್ತು ಯಜಮಾನಿಯ ಮೆಲುದನಿಯ ಮಾತುಗಳು.

ಇವರ ಮಕ್ಕಳು ಬೇರೆ ಯಾವುದೋ ದೇಶಗಳಲ್ಲಿ ದುಡಿಯುತ್ತಿದ್ದಾರೆ. ಯಾವಾಗಲೋ ಒಮ್ಮೆ ಬಂದು ಹೋಗುತ್ತಾರೆ. ಬಂದರೆ ಹೆಚ್ಚು ಸಮಯವನ್ನು ಈ ದೇಶದ ದೊಡ್ಡ ದೊಡ್ಡ ಶಹರುಗಳಲ್ಲಿ ಕಳೆದು, ಉಳಿದ ಸ್ವಲ್ಪ ಸಮಯವನ್ನು ತಂದೆ ತಾಯಿಗಳ ಜೊತೆ ಕಳೆಯುತ್ತಾರೆ. ಆಗಲೂ ಹೆಚ್ಚು ಸಮಯವನ್ನು ನಿದ್ದೆಯಲ್ಲೋ ಅಥವಾ ಪಕ್ಕದಲ್ಲಿರುವ ನದಿಯಲ್ಲಿ ಈಜುತ್ತಲೋ ಇರುತ್ತಾರೆ. ‘ಮಕ್ಕಳಲ್ಲವಾ.. ಅವರನ್ನು ಹಿಡಿದು ನಿಲ್ಲಿಸಲು ಆಗುತ್ತದಾ… ನನ್ನ ತಂದೆಗಿಂತ ಬಲಿಷ್ಟ ರೆಕ್ಕೆಗಳು ನನಗಿದ್ದವು. ಎಲ್ಲೆಲ್ಲಿಗೋ ಹಾರಿ ಹೋಗಿ ರೆಕ್ಕೆಗಳು ಸೋತಾಗ ಇಲ್ಲಿಗೆ ಮರಳಿ ಬಂದೆ. ನನಗಿಂತಲೂ ಬಲಿಷ್ಟ ರೆಕ್ಕೆಗಳು ನನ್ನ ಮಕ್ಕಳವು. ಅವುಗಳು ಸೋಲುವುದೇ ಇಲ್ಲ ಎಂದು ಅವರು ಅಂದುಕೊಂಡಿದ್ದಾರೆ. ನೋಡಿ ಈ ಮಳೆ ಹಕ್ಕಿಗಳು ಗೂಡು ಕಟ್ಟಲು ಶುರುವಿಟ್ಟಾಗ ನಾನು ಈ ಮನೆಯಲ್ಲಿ ಇರಲೇ ಇಲ್ಲ. ಎಲ್ಲೆಲ್ಲೋ ಅಹಂಕಾರದಲ್ಲಿ ಪೋಲಿ ಸುತ್ತುತ್ತಿದ್ದೆ. ನನ್ನ ತಂದೆ ಇವುಗಳ ಸಂಸಾರವನ್ನು ಗಂಟೆಗಟ್ಟಲೆ ನೋಡುತ್ತಾ ಕಾಲ ಕಳೆದಿರಬಹುದು. ನಾನು ಬಂದಾಗಲೆಲ್ಲ ಇವು ತಮ್ಮದೇ ಬೆಳೆಯುತ್ತಿರುವ ಇನ್ನೊಂದು ಸಂಸಾರ ಎಂಬಂತೆ ಕಥೆ ಹೇಳುತ್ತಿದ್ದರು. ಹಾರಲು ಯತ್ನಿಸಿ ಗೂಡಿಂದ ಬಿದ್ದ ಹಕ್ಕಿಮರಿಗಳನ್ನು ಮತ್ತೆ ಗೂಡಿಗೆ ಸೇರಿಸಲು ನೋಡುತ್ತಿದ್ದರು. ಆದರೆ ಇರುವ ನೂರಾರು ಗೂಡುಗಳಲ್ಲಿ ಇದರ ಗೂಡು ಯಾವುದು ಎಂದು ಗೊತ್ತಾಗದೆ ತಪ್ಪು ತಪ್ಪು ಗೂಡುಗಳಲ್ಲಿ ಆ ಮರಿಗಳನ್ನು ತುರುಕಿಸಿಬಿಡುತ್ತಿದ್ದರು. ಆಗ ಅವುಗಳಲ್ಲದ ತಂದೆತಾಯಿ ಹಕ್ಕಿಗಳು ಅವುಗಳನ್ನು ಮತ್ತೆ ನೆಲಕ್ಕೆ ಉದುರಿಸಿಬಿಡುತ್ತಿದ್ದವು. ಆಗ ನೋಡಬೇಕಿತ್ತು ಅವರ ಪರದಾಟ’

‘ಅಯ್ಯೋ ಇವರ ಪರದಾಟವೇನು ಕಮ್ಮಿಯಾ?’ ಮನೆಯ ಈಗಿನ ಯಜಮಾನತಿ ಕೈಯಲ್ಲಿ ಟೀ ಮತ್ತು ಬಿಸ್ಕತ್ತಿನ ಟ್ರೇ ಹಿಡಿದುಕೊಂಡು ನಗುತ್ತಾ ಬಂದರು. ‘ನನಗೆ ಮೊದಲು ಈ ಹಕ್ಕಿಗಳನ್ನು ಕಂಡರೆ ಆಗುತ್ತಿರಲಿಲ್ಲ. ಗೋಡೆಯ ಮೇಲೆ ಅಸಹ್ಯವಾಗಿ ಬೆಳೆಯುತ್ತಿದ್ದ ಇವುಗಳ ಗೂಡು. ಒಂದು ದಿನ ಆಳುಗಳಿಗೆ ಹೇಳಿ ಈ ಗೂಡುಗಳನ್ನು ಉದುರಿಸಿಬಿಟ್ಟೆ. ಗೂಡಿನೊಳಗಿಂದ ಮೊಟ್ಟೆಗಳೂ ಮರಿಗಳೂ ಉದುರಿ ಬಿದ್ದವು. ಇವರು ಬಂದವರೇ ಅಳಲು ಶುರು ಮಾಡಿದರು. ಅಂಗಡಿಯಿಂದ ಫೆವಿಕಾಲ್ ತರಿಸಿ ಒಂದೊಂದೇ ಗೂಡುಗಳನ್ನು ಮೊದಲಿನ ಹಾಗೆ ಗೋಡೆಗೆ ಅಂಟಿಸುತ್ತಾ ಎರಡು ದಿನ ಕಳೆದರು.

‘ಅಯ್ಯೋ ಇನ್ನು ಈ ಹಕ್ಕಿಗಳು ಬರಲಿಕ್ಕಿಲ್ಲ ಎಂದು ವಾರಗಟ್ಟಲೆ ನಿದ್ದೆಯಲ್ಲಿ ಕನವರಿಸುತ್ತಿದ್ದರು. ಆದರೆ ನೋಡಿ ಕೆಲವು ದಿನಗಳಲ್ಲಿ ಮತ್ತೆ ಈ ಹಕ್ಕಿಗಳು ಬರಲು ಶುರು ಮಾಡಿದವು’ `ದೇವ್ರೆ ನಾನು ಬೇಕಾದರೂ ಈ ಮನೆಯನ್ನು ಬಿಟ್ಟು ಹೋಗುತ್ತೇನೆ.ಆದರೆ ಈ ಮಳೆಹಕ್ಕಿಗಳು ಮಾತ್ರ ಇಲ್ಲೇ ಇರಲಿ’ ಆಕೆ ಪತಿಯನ್ನೂ, ಹಕ್ಕಿಗಳ ಗೂಡನ್ನೂ ನೋಡುತ್ತ ಟೀ ಬಿಸ್ಕತ್ತು ಮೇಜಿನ ಮೇಲಿಟ್ಟರು. ನಾನು ಆಕಾಶವನ್ನು ನೋಡುತ್ತ ಕುಳಿತಿದ್ದೆ. ಹಕ್ಕಿಗಳ ಕಾಲಗಣನೆಯ ಜೊತೆಗೆ ಆಟವಾಡುತ್ತ ಅಣಕಿಸುತ್ತಿರುವ ಆಕಾಶ. ಇಳಿಯುತ್ತಿರುವ ಸೂರ್ಯನ ಮೇಲೆ ಮೋಡಗಳು ಮುಸುಕಿದಂತೆ ಕತ್ತಲಾಯಿತು ಎಂದು ಆಕಾಶದಿಂದ ಇಳಿದು ಮನೆಯ ಸುತ್ತ ಗಿರಕಿ ಹೊಡೆಯುತ್ತಿದ್ದ ಮಳೆಹಕ್ಕಿಗಳು ಸೂರ್ಯ ಮತ್ತೆ ಮೋಡಗಳಿಂದ ಬಿಡಿಸಿಕೊಂಡು ಬೆಳಕಾದಾಗ ಮತ್ತೆ ಬೆಳಗಾಯಿತೆಂದು ಆಕಾಶದೆತ್ತರಕ್ಕೆ ಹಾರಿ ಹೋಗಿ ಚುಕ್ಕಿಗಳಂತೆ ಕಾಣಿಸುತ್ತಿದ್ದವು.

ಬದುಕಿನ ಬಹುಕಾಲ ಆಕಾಶದಲ್ಲೇ ಕಳೆಯುವ ಇವುಗಳು ಹಾರುತ್ತ ಹಾರುತ್ತ ನಿದ್ದೆಯನ್ನೂ ಮಾಡಬಲ್ಲವಂತೆ. ಆಕಾಶದಲ್ಲಿ ಇವುಗಳ ಹಾಗೆ ಹಾರುವ ಕೀಟಗಳನ್ನೂ ಮಿಡತೆಗಳನ್ನೂ ತಿಂದು ಬದುಕುವ ಇವುಗಳು ಮರಿಗಳಿಗಾಗಿ ಮಾತ್ರ ನೆಲಕ್ಕೆ ಇಳಿಯುತ್ತವಂತೆ. ಈಗಿನ ಯಜಮಾನರು ಹಕ್ಕಿಗಳ ಕಥೆ ಹೇಳುತ್ತಾ, ನಡುನಡುವಲ್ಲಿ ನನ್ನ ಉಪಚರಿಸುತ್ತಾ, ಹಾರಿ ಬಂದು ಮತ್ತೆ ಹಾರಿ ಹೋಗುವ ಈ ಹಕ್ಕಿಗಳ ಶಬ್ಧವೇ ಇಲ್ಲದ ಆರೋಹಾವರೋಹಣಗಳನ್ನು ಕಣ್ಣಂಚಲ್ಲೇ ಗಮನಿಸುತ್ತಾ, ಇವೆಲ್ಲದರ ಫೋಟೋ ಹಿಡಿಯಲು ಪರದಾಡುತ್ತಿರುವ ನನಗೆ ಫೋಟೋಗ್ರಾಫಿಯ ಕೆಲವು ತತ್ವಗಳನ್ನು ತಿಳಿ ಹೇಳುತ್ತಿದ್ದರು. ಅಷ್ಟು ಹೊತ್ತಿಗೆ ನಿಜವಾಗಿಯೂ ಸಂಜೆಯಾಗುತ್ತಾ ಹಕ್ಕಿಗಳೂ ಸದ್ದಿಲ್ಲದೆ ಇಳಿದು ಬಂದು ಎಲ್ಲವೂ ಬಂದು ಸೇರಿದ ಮೇಲೆ ಒಕ್ಕೊರಲಲ್ಲಿ ಕಿರಲುತ್ತಾ ಕುಳಿತಿದ್ದವು. ನಾನು ಈ ಯಜಮಾನರನ್ನೇ ನೋಡುತ್ತಿದ್ದೆ.

ಈಗಲೂ ಕಟ್ಟುಮಸ್ತಾಗಿಯೇ ಇರುವ ಇವರು ಒಂದು ಕಾಲದಲ್ಲಿ ಇನ್ನೂ ಜೋರಾಗಿದ್ದರು. ಆಗ ಇನ್ನೂ ಹುಡುಗರಾಗಿದ್ದ ನಾವು ಇವರ ಮುಖವನ್ನು ನೋಡಲೂ ಹೆದರುತ್ತಿದ್ದೆವು. ಮೈಮೇಲೆ ದೇವರು ಬರುವವರನ್ನೂ, ಶಕುನ ಹೇಳುವವರನ್ನೂ ಬಿಕ್ಷುಕರನ್ನೂ ಕಂಡರಾಗದ ಇವರು ಕೆಲವೊಮ್ಮೆ ಅವರನ್ನು ಹೊಡೆದೇ ಊರಿನಿಂದ ಅಟ್ಟಿಬಿಡುತ್ತಿದ್ದರು.ಕೈಲಾಗದವರನ್ನೂ ಮೈಗಳ್ಳರನ್ನೂ ಇವರಿಗೆ ಕಂಡರಾಗುತ್ತಿರಲಿಲ್ಲ. ಹಾಗೆಯೇ ಸದ್ದಿಲ್ಲದೆ ಇವರ ತೋಟದೊಳಕ್ಕೆ ನುಗ್ಗಿ ಕಿತ್ತಲೆ ಹಣ್ಣುಗಳನ್ನು ಕದಿಯುತ್ತಿದ್ದ ನನ್ನಂತಹ ಹುಡುಗರನ್ನೂ ಮರಕ್ಕೆ ಕಟ್ಟಿಹಾಕಿ ಶಿಕ್ಷೆ ಕೊಡುತ್ತಿದ್ದರು. ಮಕ್ಕಳೇನಾದರೂ ಅಳು ನಿಲ್ಲಿಸದಿದ್ದರೆ ತಾಯಂದಿರು ಇವರನ್ನು ಕರೆಯುತ್ತೇನೆ ಅಂದಾಗ ಹೆದರಿದ ಮಕ್ಕಳು ಅಳು ನಿಲ್ಲಿಸುತ್ತಿದ್ದರು. ಶಾಸ್ತ್ರ ನಡೆಯುವಲ್ಲಿಗೆ ತೆರಳಿ, ಪೂಜೆ ನಡೆಯುವಲ್ಲಿಗೆ ತೆರಳಿ ರಂಪ ಎಬ್ಬಿಸುತ್ತಿದ್ದ ಇವರನ್ನು ಕಂಡರೆ ಎಲ್ಲರೂ ಹೆದರುತ್ತಿದ್ದರು ಮತ್ತು ಯಾರೂ ತಡೆಯಲು ಹೋಗುತ್ತಿರಲಿಲ್ಲ.

ಬಹುತೇಕ ತಲೆ ಕೆಟ್ಟವನು ಎಂದೇ ಇವರನ್ನು ನಾವೆಲ್ಲ ತಿಳಿದಿದ್ದೆವು. ಈಗ ನೋಡಿದರೆ ಈ ಮಳೆಹಕ್ಕಿ ಸಂಸಾರದ ನಡುವೆ ವಿನೀತನಾಗಿ ಕುಳಿತು ಅವರು ಹಳೆಯ ಪಳೆಯ ಹಲವು ಕಥೆಗಳನ್ನು ವಿವರಿಸುತ್ತಿದ್ದರು. ಒಂದು ಕಾಲದಲ್ಲಿ ಅವರಿಗೆ ಹೆದರಿಕೊಂಡು ತಪ್ಪಿಸಿಕೊಳ್ಳುತ್ತಿದ್ದ ಹುಡುಗ ನಾನು ಎಂದು ಅವರಿಗೆ ತಿಳಿಯದಿರಲಿ ಭಗವಂತಾ ಎಂದು ನಾನೂ ಆ ಕತ್ತಲೆಯಲ್ಲಿ ತಲೆಯಾಡಿಸುತ್ತಿದ್ದೆ.  ವಾಪಾಸು ಬರುವಾಗ ಆ ಯಜಮಾನನ ಮಕ್ಕಳು ರಜೆಯಲ್ಲಿ ಬರುವಾಗ ಈಜಲು ಹೋಗುವ ನದಿಗೆ ಹೋಗಿ ಬಂದೆ.ನಾವೂ ರಜೆಯಲ್ಲಿ ಇವರಿಗೆ ಹೆದರಿ ಹೆದರಿ ಈಜುತ್ತಿದ್ದ ಜಾಗವದು. ಸಣ್ಣಗೆ ಹರಿಯುತ್ತಿದ್ದ ಆ ನದಿ ಈಗ ದೊಡ್ಡ ಜಲಾಶಯವೊಂದರ ಹಿನ್ನೀರಾಗಿ ಮಾರ್ಪಾಡಾಗಿತ್ತು. ಮಳೆಯಿಲ್ಲದೆ ಜಲಾಶಯವೂ ಒಣಗಿ ಹಿನ್ನೀರ ಸಾಗರ ಇದ್ದ ಜಾಗ ಮರುಭೂಮಿಯಂತೆ ಗೊಂದಲ ಹುಟ್ಟಿಸುತ್ತಿತ್ತು. ಆ ಮರುಭೂಮಿಯಲ್ಲಿ ಒಂಟೆಗಳಂತೆ ಮೇಯುತ್ತಿರುವ ಬಡಕಲು ದನಗಳು.

ಎಲ್ಲಿಂದಲೋ ಪ್ರವಾಸಿಗರಂತೆ ಬಂದಿದ್ದ ಎಳೆಯ ಪ್ರೇಮಿಗಳಿಬ್ಬರು ಕೃತಕ ಮರಳು ದಿಬ್ಬವೊಂದರ ಮರೆಯಲ್ಲಿ ಮೈಥುನದಲ್ಲಿ ತೊಡಗಿದ್ದರು. ಕಾಲವೂ ದೇಶವೂ ನದಿಯೂ ಉಸುಕೂ ಬೆಳಕೂ ಕತ್ತಲೆಯೂ ಏನು ಏನೆಂದು ಗೊತ್ತಾಗದ ಅವರ ಕಾಲಘಟ್ಟ. ನಾನೂ ನಾಚಿಕೊಂಡು ವಾಪಾಸು ಬಂದೆ.

(ಫೋಟೋಗಳೂ ಲೇಖಕರವು)