ಅದ್ಯಾಕೋ ಅಜ್ಜಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ತೀರಾ ಅಸಮಾಧಾನವಿತ್ತು. ತಾತನೂ ಒಮ್ಮೊಮ್ಮೆ ಮಾವ ಸೈಕಲ್ ತೆಗೆದುಕೊಂಡು ಶಾಸ್ತ್ರಿಗಳ ಮನೆಗೆ ಹೊರಟ ಕೂಡಲೇ, ‘ಹೊರಟ ಇನ್ನು ಅಲ್ಲಿ ದಾಳ ಉರುಳಿಸೋಕ್ಕೆ‘ ಎಂದು ಗೊಣಗಿ ಈ ಸ್ನೇಹಕ್ಕೆ ಅಸಮ್ಮತಿ ಸೂಚಿಸುತ್ತಿದ್ದದ್ದು ನಮ್ಮ ಗಮನಕ್ಕೆ ಬಂದಿತ್ತು. ಮಕ್ಕಳಾದ ನಮಗೆ ಇದರ ಕುರಿತು ಹೀಗೆ ಅಸಹನೆ ಪಡುವಂಥದ್ದೇನಿದೆ ಎಂಬುದಂತೂ ತಿಳಿಯುತ್ತಿರಲಿಲ್ಲ. ನಾವು ಈ ಕುರಿತು ಯೋಚಿಸುತ್ತಲೂ ಇರಲಿಲ್ಲ.
ಮೀರಾ ಪಿ.ಆರ್. ಬರೆದ ಈ ಭಾನುವಾರದ ಕಥೆ ‘ಮೌನʼ

 

‘ಮಾವ, ನೀವ್ಯಾಕೆ ಮಾತಾಡಬಾರದೆಂದು ನಿರ್ಧಾರ ಮಾಡಿದ್ದು?’

ಕೇಳಿದೆ. ಇದೇ ಪ್ರಶ್ನೆಯನ್ನ ಅವರಿಗೆ ಯಾರ್ಯಾರು ಎಷ್ಟೆಷ್ಟು ಸಲ ಕೇಳಿರಬಹುದೋ ಅನ್ನಿಸಿತು. ಅವರು ಮತ್ತೆ ‘ಹ್ಹು ಹ್ಹು ಹ್ಹು ಹ್ಹು….’ ಎಂದು ನಕ್ಕು ತಲೆ ಬಗ್ಗಿಸಿ, ತಮ್ಮ ತೊಡೆಯ ಮೇಲಿಟ್ಟುಕೊಂಡಿದ್ದ ಪ್ಯಾಡ್ ಮೇಲಿದ್ದ ಸಣ್ಣ ಕಾಗದದ ಚೂರಿನಲ್ಲಿ
‘ಮಾತು ಬೆಳ್ಳಿ, ಮೌನ ಬಂಗಾರ’
ಎಂದು ಬರೆದು ನನ್ನ ಕೈಗಿತ್ತರು. ಗೌರಿ ಬಾಗಿ ಇನ್ನಷ್ಟು ನನಗೆ ಒತ್ತಿಕೊಳ್ಳುತ್ತಾ
‘ಅಮ್ಮ, ತಾತ ಏನ್ ಬರ್ದಿದಾರೆ?’ ಎಂದು ಕೇಳಿದಳು. ‘ನೀನೇ ಓದು ಕಂದ’ ಎಂದು ಚೀಟಿಯನ್ನು ಅವಳ ಕೈಗಿಟ್ಟೆ. ಇಷ್ಟರಲ್ಲಾಗಲೇ ಕನ್ನಡದಲ್ಲಿ ಬರೆದಿದ್ದ ಅವರ ಮೂರ್ನಾಲ್ಕು ಚೀಟಿ ಬರಹಗಳನ್ನು ಕಷ್ಟ ಪಟ್ಟು ಅಕ್ಷರ ಕೂಡಿಸಿ ಓದಿ ಸುಸ್ತಾಗಿದ್ದ ಅವಳು,
‘ಅಮ್ಮ ಪ್ಲೀಸ್ ನೀನೇ ಹೇಳ್ಬಿಡು’ ಅಂದಳು.

‘ಸೈಲೆನ್ಸ್ ಈಸ್ ಮೋರ್ ವ್ಯಾಲ್ಯುಬಲ್ ಅಂಡ್ ಇಟ್ ಮೇಕ್ಸ್ ಮೋರ್ ಸೆನ್ಸ್ ಅಂತ’ ಎಂದು ಹೇಳಿದೆ. ಸ್ವಲ್ಪ ಹೊತ್ತು ಏನೋ ಯೋಚಿಸಿ ನಂತರ ‘ಅದು ಹ್ಯಾಗೆ?’ ಎಂದು ಅವಳು ಕೇಳಿದಾಗ ಅವರು ಮತ್ತೊಮ್ಮೆ, ‘ಹ್ಹು ಹ್ಹು ಹ್ಹು….’ ಎಂದು ಮೊದಲಿಗಿಂತ ಜೋರಾಗಿ ನಕ್ಕರು.

‘ಮಾತು ಬೆಳ್ಳಿ, ಮೌನ ಬಂಗಾರ, ನಗು ಪ್ಲಾಟಿನಮ್’ ಎಂದೆ.

ಇನ್ನಷ್ಟು ಜೋರಾಗಿ ನಕ್ಕು ತಮ್ಮ ಬಲಗೈ ಎತ್ತಿ ಹೆಬ್ಬೆರಳಿಗೆ ತೋರುಬೆರಳನ್ನು ತಾಗಿಸಿ ಉಂಗುರದಂತೆ ಹಿಡಿದು, ಉಳಿದ ಮೂರೂ ಬೆರಳನ್ನೂ ನೇರವಾಗಿ ಹಿಡಿದು, ಹುಬ್ಬು ಮೇಲೆತ್ತಿ ನಕ್ಕು, ನಾನು ಹೇಳಿದ್ದು ಚೆನ್ನಾಗಿದೆ ಎನ್ನುವಂತೆ ಸಮ್ಮತಿ ಸೂಚಕವಾಗಿ ತಲೆಯಾಡಿಸಿದರು.

‘ನೀವು ಮಾತನಾಡದಿದ್ರೂ ಹೀಗೆಲ್ಲಾ ಆಕ್ಷನ್ ಮಾಡ್ತಾ ಬೇರೆಯವ್ರ ಜೊತೆ ಕಮ್ಯೂನಿಕೇಟ್ ಮಾಡ್ತೀರ. ಅದೂ ಮಾಡದೆ ಸುಮ್ಮನಿರೋದು ತುಂಬಾ ಕಷ್ಟ ಅಲ್ವಾ’ ಎಂದು ಗೌರಿ ಕೇಳಿದಾಗ ಮತ್ತೆ ಹುಬ್ಬು ಮೇಲೆತ್ತಿ, ತಮ್ಮ ತೋರುಬೆರಳನ್ನ ಕಣ್ಣಿನ ಪಕ್ಕ ಹಣೆಯ ಭಾಗದಲ್ಲಿ ಮೂರ್ನಾಲ್ಕು ಬಾರಿ ತಟ್ಟಿ ‘ನೀನು ತುಂಬಾ ಜಾಣೆ’ ಎನ್ನುವಂತೆ ಅವಳತ್ತ ನೋಡಿದರು.

‘ನಿಮ್ಮ ಈ ಆಕ್ಷನ್ ಗಳನ್ನ ಬೇರೆಯವ್ರು ಮಿಸ್‌ರೀಡ್ ಮಾಡುವ ಚಾನ್ಸಸ್ ಇರತ್ತಲ್ಲಾ ಆಗ ಏನ್ ಮಾಡ್ತೀರಿ?’ ಎಂದು ಗೌರಿ ಮತ್ತೆ ಕೇಳಿದಾಗ ನಕ್ಕು, ತಲೆ ಬಗ್ಗಿಸಿ ಚೀಟಿಯ ಮೇಲೆ ಮತ್ತೆ ಏನೋ ಬರೆದು ನನ್ನ ಕೈಗಿಟ್ಟು ‘ಅವಳಿಗೆ ಓದಿ ಹೇಳು’ ಎಂದು ಸನ್ನೆ ಮಾಡಿದರು.
‘ಮಾತನ್ನೂ ತಪ್ಪಾಗಿ ಅರ್ಥೈಸಬಹುದಲ್ಲ?’ ಎಂದು ಬರೆದಿದ್ದರು.

‘ಮಾತನ್ನೂ ಮಿಸ್‌ಇಂಟರ್‌ಪ್ರಿಟ್‌ ಮಾಡುವ ಚಾನ್ಸಸ್ ಇರತ್ತೆ ಅಂತ ಬರ್ದಿದಾರೆ’ ಎಂದು ನಾನು ಗೌರಿಗೆ ಹೇಳುತ್ತಿದಾಗಲೇ ಅವಳ ಮುಂದೆ ಬಗ್ಗಿ ಜೋಲು ಮೋರೆಯನ್ನು ಮಾಡಿ ‘ಅಲ್ವಾ?’ ಎನ್ನುವ ಹಾಗೆ ತಲೆಯಲುಗಿಸುತ್ತಾ ಅವಳನ್ನು ನೋಡಿದರು.

‘ನೀವು ಮಾತನಾಡದೆ ಇರುವುದರಿಂದ ನಿಮಗೇನು ಲಾಭವಾಗ್ತಿದೆ ನಂಗೊತ್ತಿಲ್ಲ. ನನಗಂತೂ ಹೀಗೆ ನಿಮ್ಮಿಬ್ಬರ ಮಧ್ಯದಲ್ಲಿ ಇಂಟರ್ಪ್ರಿಟರ್ ಆಗಿರುವುದು ಸಧ್ಯಕ್ಕೆ ತುಂಬಾ ಕಷ್ಟವಾಗ್ತಿದೆ’ ಎಂದೆ. ಮತ್ತೊಮ್ಮೆ ತಲೆಯೆತ್ತಿ ಸೂರು ನೋಡುತ್ತಾ ಮೈಯಲುಗಿಸಿ ಜೋರಾಗಿ ನಕ್ಕರು. ಅದೇ ಸಮಯಕ್ಕೆ, ಗುಡಿಯ ಆ ಕೋಣೆಯ ಗಿಡ್ಡ ಬಾಗಿಲಿನ ಚೌಕಟ್ಟಿಗೆ ತಲೆ ತಾಗದಂತೆ ತಲೆಯನ್ನ ಬಗ್ಗಿಸಿ ಹೊಸಿಲು ದಾಟಿ ಒಳ ಬಂದ ಶೇಖರ,
‘ಮುನ್ನಿ, ಹೋಗಣ್ವಾ? ಮಳೆ ಬರೋ ಹಾಗಿದೆ’ ಎಂದ.

ಶೇಖರನ ಜೊತೆಗೆ ಬಂದ ಅವನ ಒಂಭತ್ತು ವರ್ಷದ ಮಗಳು, ತನ್ನದೇ ಜೊತೆಯ ಹರ್ಷಿಣಿಯನ್ನು ನೋಡಿದ್ದೇ ಖುಷಿಯಾದ ಗೌರಿ, ‘ಹಾರ್ಷೀ…’ ಎಂದು ಕೂಗುತ್ತಾ ಹೋಗಿ ಅವಳನ್ನು ಅಪ್ಪಿಕೊಂಡಳು. ಇಬ್ಬರು ಹುಡುಗಿಯರೂ ಅ ಸಣ್ಣ ಗುಡಿಯ ಹೊರಗೆ ಆಡಲಿಕ್ಕೆಂದು ಕಾಲಿಟ್ಟಾಗ,
‘ತುಂಬಾ ದೂರ ಎಲ್ಲೂ ಹೋಗ್ಬೇಡಿ, ಇಲ್ಲೇ ಆಡ್ತಾ ಇರಿ. ಇನ್ನು ಹತ್ತು ನಿಮಿಷದಲ್ಲಿ ಹೊರಟುಬಿಡೋಣ ಮನೆಗೆ’ ಎಂದು ಶೇಖರ ಅವರಿಬ್ಬರಿಗೂ ಕೂಗಿ ಹೇಳಿದ.

ಬಿಸಿಲಿನ ಝಳ ಕಳೆದು ಸಂಜೆಯಾಗುತ್ತಿರುವ ಹಿತವಾದ ಬೆಳಕಿನ ವೇಳೆ ಹೀಗೆ ಗುಡಿಯ ಒಳಗೆ ಬಂದ ಶೇಖರನ ಕಣ್ಣು ಈಗಷ್ಟೇ ಈ ಮಂದ ಬೆಳಕಿಗೆ ಹೊಂದಿಕೊಳ್ಳುತ್ತಿತ್ತು. ಶಿವಲಿಂಗವಿದ್ದ ಸಣ್ಣ ಗರ್ಭಗುಡಿಯೊಳಗೆ ಹಚ್ಚಿಟ್ಟ ನಂದಾದೀಪದ ಮಂದ ಬೆಳಕಿನ ಜೊತೆಗೆ, ಗುಡಿಯ ಬಾಗಿಲಿನ ಮೂಲಕ ಹಾದು ಬಂದ ಹೊರಗಿನ ಬೆಳಕೂ ಸೇರಿ ಗುಡಿಯನ್ನು ಸ್ವಲ್ಪ ಬೆಳಕಾಗಿಸಿತ್ತು. ಗರ್ಭ ಗುಡಿಯ ಪಕ್ಕದಲ್ಲೇ ಇದ್ದ ಸಣ್ಣ ಕೋಣೆಯಲ್ಲಿ ಮಾವ ತಮ್ಮ ಮೂರು ಮತ್ತೊಂದು ಸಾಮಾನನ್ನು ಇಟ್ಟುಕೊಂಡಿದ್ದರು. ನೀರು ತುಂಬಿಟ್ಟಿದ್ದ ತಾಮ್ರದ ಬಿಂದಿಗೆ, ಒಂದು ಸ್ಟೀಲ್ ತಟ್ಟೆ ಮತ್ತು ಲೋಟ, ಒಂದು ಪಂಪ್ ಸ್ಟವ್, ಹಾಸಲು ಚಾಪೆ ಮತ್ತು ಹೊದೆಯಲು ಇರುವ ಕಂಬಳಿ, ರಜಾಯಿ. ಇದಲ್ಲದೆ ಆ ಕೋಣೆಯ ಗೋಡೆಗೆ ಮೊಳೆ ಹೊಡೆದು ಕಟ್ಟಿದ್ದ ಹಗ್ಗದ ಮೇಲೆ ತೂಗು ಹಾಕಿದ್ದ ಅವರ ಒಂದು ಜೊತೆ ಬಟ್ಟೆ. ಬಟ್ಟೆ ಅಂದರೆ ಒಂದು ಪಂಚೆ, ಶರಟು, ಬನಿಯನ್ನು, ಚಡ್ಡಿ. ಮೂಲೆಯಲ್ಲಿದ್ದ ಅವರ ಸಣ್ಣ ಟ್ರಂಕಿನಲ್ಲಿ ಅವರ ಸ್ವೆಟರ್, ಸ್ಕಾರ್ಫು, ಕೆಮ್ಮಿನ ಔಷದ, ಟೀ ಪುಡಿ ಇತ್ಯಾದಿ ಇರಬಹುದು ಎಂದು ಊಹಿಸಿದೆ. ಟ್ರಂಕಿನ ಮೇಲೆ ಒಂದಿಷ್ಟು ಪುಸ್ತಕಗಳು. ಉಪನಿಷತ್ ಸಾರ, ಭಗವದ್ಗೀತೆ, ಕನ್ನಡದಲ್ಲಿ ಖುರಾನ್, ದೇವ ವಾಣಿ… ಇಂಥವೇ ಇನ್ನೊಂದಿಷ್ಟು. ಈ ದಿನ ಅವರು ಬಿಳಿಯ ಬಟ್ಟೆ ಹಾಕಿದ್ದರಿಂದ ತಂತಿಯ ಮೇಲಿದ್ದಿದ್ದು ಖಾವಿಯದ್ದು. ಅವೆರಡೇ ಬಟ್ಟೆಗಳನ್ನಷ್ಟೇ ಈಗವರು ಇಟ್ಟುಕೊಂಡಿರುವುದನ್ನು ಶೇಖರ ಈ ಮೊದಲೇ ನನಗೆ ತಿಳಿಸಿದ್ದ.

ಬೆಟ್ಟದ ಮೇಲಿನ ಈ ಗುಡಿಗೆ ಹಾಗೆ ನೋಡಿದರೆ ಮುಂಚೆ ಅಷ್ಟಾಗಿ ಯಾರೂ ಬರುತ್ತಲೇ ಇರಲಿಲ್ಲ. ಬಹಳಷ್ಟು ವೇಳೆ ಗುಡಿಯ ಬಾಗಿಲಿಗೆ ಬೀಗ ಜಡಿದೇ ಇರುತ್ತಿತ್ತು. ಕೇವಲ ಹಬ್ಬ ಹುಣ್ಣಿಮೆಗೆ ಅಂತ ಕೆಳಗಿನ ಊರಿಂದ ಬರುವ ಅರ್ಚಕರು ಒಂದಿಷ್ಟು ಪೂಜೆ ಮಾಡಿ ಹೋಗುತ್ತಿದ್ದರು. ಈಗ ಮಾವ ಇಲ್ಲಿ ಉಳಿದುಕೊಂಡಾಗಿನಿಂದ ಈ ಶಿವಲಿಂಗಕ್ಕೆ ನಿತ್ಯ ಪೂಜೆ ಪ್ರಾಪ್ತವಾಗಿದೆ. ದಿನವೂ ಅಕ್ಕ ಪಕ್ಕದ ಊರುಗಳಿಂದಲೂ ಒಬ್ಬರಲ್ಲ ಒಬ್ಬರು ಗುಡಿಗೆ ಬಂದು ಹೋಗುವುದೂ ನಡೆದಿದೆ.

ಬಂದವರು ಇವರನ್ನು ‘ಸ್ವಾಮಿಗೊಳೇ…ʼ ಎಂದೇ ಸಂಬೋಧಿಸುತ್ತಾರೆ. ಮಾತೇ ಆಡದ ಇವರೆದುರು ಕೂತು ತಮ್ಮ ಕಷ್ಟ ಸುಖ ಮಾತನಾಡಿ, ಸಮಸ್ಯೆಗಳ ಪಟ್ಟಿಯನ್ನೇ ಇವರ ಮುಂದೆ ತೆರೆದಿಟ್ಟು, ‘ಒಂದು ಪೆಶಲ್ ಪೂಜೆ ಮಾಡಿಕೊಡಿ ಸ್ವಾಮಿಗೊಳೆʼ ಎನ್ನುತ್ತಾರೆ. ಎದುರು ಕುಳಿತವರು ಆಡಿದ ಮಾತುಗಳನ್ನೆಲ್ಲ ತಲೆಯಾಡಿಸುತ್ತಾ ಚಾಚೂ ತಪ್ಪದೆ ಕೇಳಿಸಿಕೊಂಡು ಯಾವ ಪ್ರತಿಕ್ರಿಯೆಯನ್ನೂ ನೀಡದೆ, ಸುಮ್ಮನೆ ಬಂದವರು ತಮ್ಮಿಷ್ಟ ಬಂದ ಹಾಗೆ ಮಾತನಾಡಲು ಬಿಡುವ ಮಾವ ಕಡೆಯಲ್ಲಿ ಎದ್ದು, ಮಾತು ಮಂತ್ರ ಯಾವುದೂ ಇಲ್ಲದೆ ಅರಿಶಿನ, ಕುಂಕುಮ, ಹೂವು ಲಿಂಗಕ್ಕೆ ಹಾಕಿ, ಭಕ್ತರೇ ತಂದ ಊದಿನಕಡ್ಡಿ-ಕರ್ಪೂರವನ್ನು ಬೆಳಗಿ ತಮಗೆ ತಿಳಿದ ಅದೊಂದೇ ಪೂಜೆಯನ್ನು ಮಾಡಿ, ಬಂದ ಭಕ್ತರಿಗೆ ಮಂಗಳಾರತಿ, ಹೂವಿನ ಪ್ರಸಾದ ಕೊಟ್ಟು ಕಳಿಸುತ್ತಾರೆ. ಬಂದವರು ಇವರೊಂದಿಗೆ ಮಾತಾಡಿ, ಶಿವನಿಗೆ ಅಡ್ದಬಿದ್ದು, ಅವರ ಅನುಕೂಲಕ್ಕೆ ತಕ್ಕಂತೆ ಹುಂಡಿಗೆ ಪುಡಿ ಕಾಣಿಕೆ ಹಾಕಿ ಬೆಟ್ಟ ಇಳಿದು ಹೋಗುವುದುಂಟು. ವಾರಾಂತ್ಯಕ್ಕೆ ಬರುವ ಅರ್ಚಕರು ಹುಂಡಿಯ ಕಾಣಿಕೆ ತೆಗೆದುಕೊಳ್ಳುತ್ತಾರೆ. ಪಾಳು ಬಿದ್ದ ಹಾಗಿದ್ದ ಗುಡಿಗೆ ಈಗ ಅಲ್ಲಿ ಮಾವ ವಾಸ್ತವ್ಯಕ್ಕೆ ಬಂದಾಗಿನಿಂದ ಬೇರೆಯದೇ ಕಳೆ ಬಂದಿದೆ. ಗುಡಿಯ ಒಳಗೂ ಹೊರಗೂ ಸದಾ ಸ್ವಚ್ಛವಾಗಿದೆ. ಶಿವನಿಗೆ ನಿತ್ಯ ಪೂಜೆಯೂ ಲಭ್ಯವಾಗಿದೆ. ಇದೆಲ್ಲದರ ಜೊತೆಗೆ ಹುಂಡಿಗೆ ಬೀಳುವ ಕಾಣಿಕೆಯೂ ಅಲ್ಪ ಪ್ರಮಾಣದ್ದಾದರೂ ಇದೆ. ಇದೆಲ್ಲ ಅನುಕೂಲವನ್ನು ಮನಗಂಡೇ ಅರ್ಚಕರು ಮಾವನಿಗೆ ಇಲ್ಲೇ ಉಳಿದುಕೊಳ್ಳಲು ಅನುಮತಿ ಕೊಟ್ಟಿದ್ದಾರೆ. ವಿಶೇಷ ದಿನಗಳಲ್ಲಿ ಮಾತ್ರ ಅವರೇ ಬಂದು ಪೂಜೆ ಮಾಡಿ ತೆರಳುತ್ತಾರೆ.

ಮಾವ ಕೆಳಗೆ ಹಳ್ಳಿಯಲ್ಲಿದ್ದ ದೊಡ್ಡ ತೊಟ್ಟಿಮನೆಯನ್ನು ಬಿಟ್ಟು, ಹೀಗೆ ಗುಡ್ಡದ ಮೇಲಿದ್ದ ಹಳೆಯ ಗುಡಿಯನ್ನೇ ವಾಸ್ತವ್ಯ ಮಾಡಿಕೊಂಡು ಮೂರು ವರ್ಷ ಕಳೆದಿದೆ. ಅಜ್ಜಿ, ತಾತ ತೀರಿಹೋದ ಮೇಲೂ ಆ ದೊಡ್ಡ ಮನೆಯಲ್ಲೇ ತನ್ನ ಅಣ್ಣನ ಸಂಸಾರದ ಜೊತೆಗೇ ಇದ್ದವರು ನಂತರ ಏಕಾ ಏಕಿ ಮನೆಯನ್ನು ಬಿಟ್ಟು, ಹೀಗೆ ಗುಡಿ ಸೇರಲು ಕಾರಣ ಅವರ ಆಪ್ತ ಗೆಳೆಯ ವೆಂಕಟ ಶಾಸ್ತ್ರಿಗಳ ಸಾವು ಎಂದು ಅವರು ಹಾಗೆ ಹೇಳದಿದ್ದರೂ ಬೇರೆಯವರೆಲ್ಲಾ ಊಹಿಸಿದ್ದಾರೆ. ತನ್ನ ಅಣ್ಣನ ಮಗ ಶೇಖರನ ಮದುವೆಯಾಗಿ, ಅವನ ಮಗಳು ಹರ್ಷಿಣಿಯೂ ಹುಟ್ಟಿ, ಅವಳು ಈ ಚಿಕ್ಕತಾತನನ್ನು ತನ್ನ ಸ್ವಂತ ತಾತನಿಗಿಂತಲೂ ಹೆಚ್ಚು ಹಚ್ಚಿಕೊಂಡು ಬೆಳೆಯುತ್ತಿರುವ ವೇಳೆಗೇ ಮಾವನ ಗೆಳೆಯ ವೆಂಕಟ ಶಾಸ್ತ್ರಿಗಳು ಒಂದು ರಾತ್ರಿ ಮಲಗಿದವರು ಮಾರನೆಯ ದಿನ ಮತ್ತೆ ಕಣ್ತೆರೆಯದೆ ನಿದ್ದೆಯಲ್ಲೇ ಸುಖವಾಗಿ ಸತ್ತಿದ್ದರು. ಕ್ರಿಯಾಕರ್ಮ ಮುಗಿಸಲು ದೆಹಲಿಯಿಂದ ಬಂದ ಅವರ ಮಗ ಶ್ರೀನಿವಾಸ, ಊರಿನಲ್ಲಿ ಅಮ್ಮನನ್ನು ಒಂಟಿಯಾಗಿ ಇರಲು ಬಿಡದೆ ಹೇಗೋ ಒಪ್ಪಿಸಿ, ತನ್ನೊಂದಿಗೆ ದೆಹಲಿಗೆ ಕರೆದುಕೊಂಡು ಮರಳಿದ. ಶಾಸ್ತ್ರಿಗಳು ಹೋದ ಬಳಿಕ ಹುಚ್ಚರ ಹಾಗೆ ಅನ್ನ, ನಿದ್ದೆ ಬಿಟ್ಟು ಸೊರಗಿ ಹೋಗಿದ್ದ ಮಾವ ನಂತರ ಶಾಸ್ತ್ರಿಗಳ ಹೆಂಡತಿ ಸರಸಮ್ಮ, ಇದ್ದ ಒಬ್ಬನೇ ಮಗ ಸೀನನ ಜೊತೆಗೆ ದೆಹಲಿಗೆ ಹೊರಟು ಹೋದ ಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಟ್ರಂಕ್ ಹಿಡಿದು, ಗುಡ್ಡ ಹತ್ತಿ, ಗುಡಿ ಸೇರಿಕೊಂಡರಂತೆ.

ಹಾಗೆ ತಾವಿನ್ನು ಗುಡಿಯಲ್ಲೇ ಉಳಿಯುವ ನಿರ್ಧಾರವನ್ನು ಅವರು ಅರ್ಚಕರೊಬ್ಬರಿಗೆ ಮಾತ್ರ ತಿಳಿಸಿ ಅವರ ಒಪ್ಪಿಗೆ ಪಡೆದಿದ್ದರಂತೆ. ಮೊದಲು ಅವರ ಈ ನಿರ್ಧಾರಕ್ಕೆ ಅಚ್ಚರಿಗೊಂಡಿದ್ದ ಮನೆಯವರು ಮತ್ತು ಹಳ್ಳಿಯವರೆಲ್ಲ, ನಂತರದ ದಿನಗಳಲ್ಲಿ ಈ ಬೆಳವಣಿಗೆಯನ್ನು ಸಹಜವಾಗಿ ಒಪ್ಪಿಕೊಂಡುಬಿಟ್ಟಿದ್ದರು. ಮದುವೆಯೂ ಆಗಿರದ ಚಿಕ್ಕ ಮಾವ ಶೇಖರನ ತಂದೆ ದೊಡ್ಡ ಮಾವನ ಸಂಸಾರದೊಂದಿಗೇ ಒಬ್ಬರಾಗಿ ಇದ್ದವರು. ಈಗ ಹೀಗೆ ಮನೆಬಿಟ್ಟು, ಗುಡಿ ಸೇರಿ ಯಾವ ಉದ್ದೇಶವೂ ಇಲ್ಲದೆ ಸ್ವಯಿಚ್ಛೆಯಿಂದ ಒಂದು ದಿನ ಬಿಳಿ, ಒಂದು ದಿನ ಖಾವಿ ಧರಿಸುತ್ತಿದ್ದ ಮಾವನನ್ನು ಎಲ್ಲರೂ ‘ಸ್ವಾಮಿಗಳೇ..’ ಎಂದೇ ಸಂಭೋದಿಸಲು ಪ್ರಾರಂಭಿಸಿದ್ದರು.

ನಾಲ್ಕು ವರ್ಷದ ಹಿಂದೆ ನಾನು ಇಂಡಿಯಾಗೆ ಬಂದು, ಅಜ್ಜಿ ಮನೆಗೂ ಬಂದಿದ್ದ ವೇಳೆ ಮಾವ ಮನೆಯಲ್ಲೇ ಇದ್ದರು. ಆ ನಂತರದ ಈ ಬೆಳವಣಿಗೆಗಳನ್ನೆಲ್ಲಾ ಶೇಖರನೇ ನನಗೆ ತಿಳಿಸುತ್ತಿದ್ದ. ಗುಡಿ ಸೇರಿದ ಮಾವ ನಂತರದಲ್ಲಿ ಹೀಗೆ ಸರಳ ಬದುಕನ್ನು ಕಟ್ಟಿಕೊಂಡಿದ್ದು, ದಿನಕ್ಕೆ ಒಂದೆ ಹೊತ್ತು ಊಟ ಮಾಡುವ ಅವರಿಗೆ ಮಧ್ಯಾಹ್ನದ ಹೊತ್ತು ತಾನೇ ಊಟ ತೆಗೆದುಕೊಂಡು ಹೋಗಿ ತಲುಪಿಸುವುದು, ನಿಧಾನವಾಗಿ ಮಾತನಾಡುವುದನ್ನು ಕಡಿಮೆ ಮಾಡಿದ ಮಾವ ಈಗ ಒಂದೂವರೆ ವರ್ಷದಿಂದ ಈಚೆಗೆ ಸಂಪೂರ್ಣವಾಗಿ ಮೌನ ಧರಿಸಿರುವುದು ಎಲ್ಲವನ್ನೂ ಶೇಖರನೇ ತಿಳಿಸಿದ್ದ. ಮಧ್ಯಾಹ್ನದ ಒಂದು ಊಟ ಬಿಟ್ಟರೆ, ಬೇಕೆನಿಸಿದಾಗ ಹಾಲು, ಸಕ್ಕರೆ ಇಲ್ಲದ ಟೀ ಮಾಡಿಕೊಂಡು ಕುಡಿಯುವುದು, ಇದ್ದರೆ ರಾತ್ರಿಗೆ ಒಂದು ಹಣ್ಣು ತಿಂದು ಮಲಗುವುದು ಅವರ ನಿತ್ಯದ ಅಭ್ಯಾಸ. ಬೆಂಗಳೂರಿನಲ್ಲಿದ್ದ ಅಮ್ಮ ಕೂಡ ನಾನು ಫೋನ್ ಮಾಡಿ ಅವಳೊಡನೆ ಮಾತನಾಡುವಾಗ ಆಗಾಗ್ಗೆ ತನ್ನ ಈ ಚಿಕ್ಕ ಅಣ್ಣ ಹೀಗೆ ಸನ್ಯಾಸಿಯಂತೆ ಮನೆ ಬಿಟ್ಟು ಗುಡಿ ಸೇರಿದ್ದನ್ನು ಕುರಿತು ಹೇಳುತ್ತಾ ಬೇಜಾರು ಮಾಡಿಕೊಳ್ಳುತ್ತಿದ್ದಳು.

ಶೇಖರ ಮಾವನನ್ನು ಕುರಿತು,
‘ಇವ್ಳು ಅಮೆರಿಕಾದಿಂದ ಬಂದಿದಾಳೆ, ನಿಮ್ಮನ್ನ ನೋಡಕ್ಕೆ. ಸರಿಯಾಗಿ ಹಬ್ಬದಡಿಗೆ ಮಾಡಿ ಬಡಿಸಬೇಕೀಗ ನೀವು’ ಎಂದ. ಅವನ ಮಾತಿಗೆ ಮಾವ ತಲೆಯಲುಗಿಸಿ ನಕ್ಕರು.

‘ಏನು?, ವಿಶೇಷ ಅತಿಥಿ ಅಂತ ನಿನ್ನ ಜೊತೆ ಏನಾದ್ರೂ ಬಾಯಿಬಿಟ್ಟು ಮಾತಾಡಿದ್ರೋ ಹ್ಯಾಗೆ?’ ಎಂದು ಕೇಳಿದ. ನಾನು ಇಲ್ಲ ಎಂದು ಅಡ್ಡಡ್ಡಕ್ಕೆ ತಲೆ ಅಲುಗಿಸುತ್ತಿದ್ದ ಹಾಗೇ ಮಾವ ಮತ್ತೆ ಜೋರಾಗಿ ನಕ್ಕರು. ‘ಇವರು ಮೌನ ವ್ರತ ಶುರು ಮಾಡಿದಾಗಿಂದ ನಗೋದು ಜಾಸ್ತಿ ಆಗಿದೆ ಅನ್ಸತ್ತೆ ಅಲ್ವಾ? ಅಂದೆ. ತಮಾಷೆಗೆ ನಾನು ಹಾಗಂದಿದ್ದು ಎಂದು ಅಲ್ಲಿದ್ದ ಎಲ್ಲರಿಗೂ ಗೊತ್ತಿದ್ದಿದ್ದೇ. ಹಾಗೆ ನೋಡಿದರೆ ಸಣ್ಣ ಮಕ್ಕಳಾಗಿದ್ದ ನಮಗೆಲ್ಲ, ಚಿಕ್ಕ ಮಾವನೊಂದಿಗಿನ ಒಡನಾಟ ಅಷ್ಟು ಆಪ್ತವೆನಿಸುತ್ತಿದ್ದಿದ್ದೇ ನಗು ನಗುತ್ತಾ ಎಲ್ಲರನ್ನೂ ಮಾತನಾಡಿಸುವ ಅವರ ಸ್ವಭಾವದಿಂದ. ಪ್ರತಿ ಬೇಸಿಗೆಗೂ ಬೆಂಗಳೂರಿನಿಂದ, ಹಳ್ಳಿಯಲ್ಲಿದ್ದ ಅಜ್ಜಿ ಮನೆಗೆ ಬರುತ್ತಿದ್ದ ನನಗೆ, ನನ್ನ ದೊಡ್ಡ ಮಾವನ ಮಗನೂ ಓರಿಗೆಯವನೂ ಆದ ಶೇಖರನ ಜೊತೆ ಆಡುವುದೂ ಊರು ಸುತ್ತುವುದೂ ಎಷ್ಟು ಪ್ರಿಯವಾದ ವಿಷಯವಾಗಿತ್ತೋ ಅಷ್ಟೇ ಇಷ್ಟದ ವಿಷಯ, ಚಿಕ್ಕ ಮಾವನೊಂದಿಗೆ ಕಳೆಯುವ ಸಮಯ ಆಗಿತ್ತು.

ನಮ್ಮಿಬ್ಬರನ್ನೂ ತಮ್ಮ ಸೈಕಲ್ ಮೇಲೆ ಮುಂದೊಬ್ಬರು, ಹಿಂದೊಬ್ಬರಂತೆ ಕೂರಿಸಿಕೊಂಡು ಡಬ್ಬಲ್ ರೈಡ್ ಮಾಡುತ್ತಾ ಊರು ಸುತ್ತಿಸುತ್ತಿದ್ದ ಮಾವ, ನಮಗೆ ಸೈಕಲ್ ಹೊಡೆಯುವುದನ್ನೂ ಮರ ಹತ್ತುವುದನ್ನೂ ಕೊಟ್ಟಿಗೆಯಲ್ಲಿ ಹಸುವಿನ ಹಾಲು ಕರೆಯುವುದನ್ನೂ ಕಲಿಸಿಕೊಟ್ಟವರು. ಆ ಪುಟ್ಟ ಹಳ್ಳಿಯಲ್ಲಿದ್ದ ಒಂದೇ ಒಂದು ಚಿಕ್ಕ ರೀಡಿಂಗ್ ರೂಮಿಗೆ, ಅವರ ಗೆಳೆಯರ ಮನೆಗಳಿಗೆ, ಟೆಂಟಿನಲ್ಲಿ ನಡೆಯುತ್ತಿದ್ದ ಸಿನಿಮಾಗೆ, ಗುಡ್ಡದ ಮೇಲಿನ ಸೂರ್ಯಾಸ್ತ ನೋಡಲಿಕ್ಕೆ ಎಂದೆಲ್ಲ ನಮ್ಮನ್ನು ಕರೆದುಕೊಂಡು ಹೋಗಿ ನಮ್ಮ ಬೇಸಿಗೆಯನ್ನು ಸಮೃದ್ಧಗೊಳಿಸಿದವರು. ನಾವು ಜಗಳವಾಡಿದಾಗ, ಪದ ಬಂಧ ಬಿಡಿಸಲು ಒದ್ದಾಡುತ್ತಿದ್ದಾಗ, ಅಜ್ಜಿಯ ಕಣ್ ತಪ್ಪಿಸಿ ಅಡುಗೆ ಮನೆಯಿಂದ ಕೊಬ್ಬರಿ ಕದ್ದು ಸಿಕ್ಕಿ ಬಿದ್ದಾಗ ನಮ್ಮ ನೆರವಿಗೆ ಧಾವಿಸಿ ಬರುತ್ತಿದ್ದವರು ಮಾವನೇ.

ಮಾವನ ಆಪ್ತ ಮಿತ್ರ ವೆಂಕಟ ಶಾಸ್ತ್ರಿಗಳ ಮನೆಗೆ ಹೋಗುವುದಂತೂ ನಮಗೆ ಪರಮಾನಂದದ ವಿಷಯ. ಬೆಳಗ್ಗೆ ತೋಟದ ಕೆಲಸ ಮುಗಿಸಿ, ಸಾಮಾನ್ಯವಾಗಿ ಮಧ್ಯಾಹ್ನ ಊಟದ ನಂತರದ ಸಣ್ಣ ನಿದ್ದೆ ಮುಗಿಸಿ ಎದ್ದು, ಮಾವ ನಮ್ಮಿಬ್ಬರನ್ನೂ ಸೈಕಲ್ ನಲ್ಲಿ ಕೂರಿಸಿಕೊಂಡು ಶಾಸ್ತ್ರಿಗಳ ಮನೆಗೆ ಕರೆದೊಯ್ಯುತ್ತಿದ್ದರು. ಶಾಸ್ತ್ರಿಗಳಿದ್ದಿದ್ದು ಅವರ ತೋಟದ ಮನೆಯಲ್ಲಿ. ಆ ಹಳ್ಳಿಯಂಚಿನಿಂದ ಶುರುವಾಗುವ ಒಂದೆರಡು ಹೊಲಗಳನ್ನು ದಾಟಿ ನಾವು ಮೂವರನ್ನೂ ಹೊತ್ತ ಸೈಕಲ್, ಶಾಸ್ತ್ರಿಗಳ ತೆಂಗಿನ ತೋಟದೊಳಗೆ ಪ್ರವೇಶಿಸುತ್ತಿತ್ತು. ತೋಟದ ಮನೆಯಾದ ಕಾರಣ ಇಳಿ ಮಧ್ಯಾಹ್ನದ ಆ ವೇಳೆ ಅಲ್ಲಿ ಮನೆಯವರಲ್ಲದೆ ಬೇರೆ ಯಾರೂ ಇರುತ್ತಿರಲಿಲ್ಲ. ನಾವು ಅಲ್ಲಿ ಹೋದದ್ದೇ ಶಾಸ್ತ್ರಿಗಳ ಹೆಂಡತಿ ಸರಸಮ್ಮನವರು ಕಾಫಿ, ಚಕ್ಕಲಿ, ಕೋಡು ಬಳೆ ಎಂದೆಲ್ಲಾ ನಮ್ಮ ಮುಂದಿಟ್ಟು ಹಿಗ್ಗುತ್ತಿದ್ದರು. ಅವರ ಮಗ ಸೀನನ ಕುರಿತು ಇದ್ದಷ್ಟೇ ಪ್ರೀತಿ ಶಾಸ್ತ್ರಿಗಳಿಗೂ ಸರಸಮ್ಮನವರಿಗೂ ನಮ್ಮಿಬ್ಬರ ಮೇಲೂ ಇರುವ ಹಾಗೆಯೇ ನಮಗನ್ನಿಸುತ್ತಿತ್ತು. ಹೀಗಾಗಿಯೇ ಅವರ ಮನೆಗೆ ಹೋಗಲು ನಾವು ಸದಾ ತುದಿಗಾಲ ಮೇಲೆಯೇ ನಿಂತಿರುತ್ತಿದ್ದೆವು.

ನಮಗಿಂತ ಒಂದೆರಡು ವರ್ಷ ದೊಡ್ದವನಾದ ಅವರ ಮಗ ಸೀನನ ಜೊತೆ ಸೇರಿ ನಾವಿಬ್ಬರೂ ಸಂಜೆಯವರೆಗೂ ಆ ತೋಟದ ಯಾವುದೋ ಮೂಲೆಯಲ್ಲೋ ಅಥವಾ ಹತ್ತಿರದಲ್ಲೇ ಇದ್ದ ಮಾವಿನ ತೋಪಿನಲ್ಲೋ ಅದೂ ಇದೂ ಆಡುತ್ತಾ ಕಾಲ ಕಳೆಯುತ್ತಿದ್ದಾಗ ಮಾವ, ಶಾಸ್ತ್ರಿಗಳು ಮತ್ತು ಸರಸಮ್ಮನವರೂ ಮನೆಯಲ್ಲಿ ಕುಳಿತು ಪಗಡೆ ಆಡುತ್ತಿದ್ದರು. ಸುಮ್ಮನೆ ಆಡುವ ಆಟವಲ್ಲ ಅದು. ಒಬ್ಬರನ್ನೊಬ್ಬರು ಕಿಚಾಯಿಸುತ್ತ, ಛೇಡಿಸುತ್ತ, ಕಾಲೆಳೆಯುತ್ತ, ಪಂದ್ಯ ಕಟ್ಟುತ್ತಾ ಅಡುತ್ತಿದ್ದ ಆಟ. ಹೀಗೆ ಇಬ್ಬರು ಗಂಡಸರೂ ಒಬ್ಬ ಹೆಂಗಸೂ ಕುಳಿತು ಜೊತೆಯಾಗಿ ದೊಡ್ಡಕ್ಕೆ ನಗುತ್ತಾ ಆಡುವುದು ಅವರಿದ್ದ ಆ ಪರಿಸರದಲ್ಲಿ ಅಪರೂಪವೇ. ಅದು ತೋಟದ ಮನೆಯಾಗಿದ್ದು, ಅದು ಒದಗಿಸುವ ಏಕಾಂತವೇ ಇವರ ಸ್ನೇಹವನ್ನು ಹೀಗೆ ಪೊರೆಯುತ್ತಿತ್ತೇನೋ. ಈ ಮೂವರೂ ಆಪ್ತ ಸ್ನೇಹಿತರು ಎಂದು ನಮಗೆ ಯಾರೂ ಹೇಳದೆಯೂ ಅವರನ್ನು ಹಾಗೆ ನೋಡುವಾಗ ತಿಳಿಯುತ್ತಿತ್ತು.

ಅದ್ಯಾಕೋ ಅಜ್ಜಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ತೀರಾ ಅಸಮಾಧಾನವಿತ್ತು. ತಾತನೂ ಒಮ್ಮೊಮ್ಮೆ ಮಾವ ಸೈಕಲ್ ತೆಗೆದುಕೊಂಡು ಶಾಸ್ತ್ರಿಗಳ ಮನೆಗೆ ಹೊರಟ ಕೂಡಲೇ, ‘ಹೊರಟ ಇನ್ನು ಅಲ್ಲಿ ದಾಳ ಉರುಳಿಸೋಕ್ಕೆ‘ ಎಂದು ಗೊಣಗಿ ಈ ಸ್ನೇಹಕ್ಕೆ ಅಸಮ್ಮತಿ ಸೂಚಿಸುತ್ತಿದ್ದದ್ದು ನಮ್ಮ ಗಮನಕ್ಕೆ ಬಂದಿತ್ತು. ಮಕ್ಕಳಾದ ನಮಗೆ ಇದರ ಕುರಿತು ಹೀಗೆ ಅಸಹನೆ ಪಡುವಂಥದ್ದೇನಿದೆ ಎಂಬುದಂತೂ ತಿಳಿಯುತ್ತಿರಲಿಲ್ಲ. ನಾವು ಈ ಕುರಿತು ಯೋಚಿಸುತ್ತಲೂ ಇರಲಿಲ್ಲ.

ಈಗಲೂ ನಾನು, ಶಾಸ್ತ್ರಿಗಳ ಕುರಿತಾಗಲೀ ಸರಸಮ್ಮನವರ ಕುರಿತಾಗಲೀ ಮಾವನನ್ನು ಏನೂ ಕೇಳಲಿಲ್ಲ. ಶೇಖರನ ಮನೆಯಲ್ಲಿ ಮಧ್ಯಾಹ್ನ ಊಟ ಮುಗಿಸಿ, ಗೌರಿಯ ಜೊತೆ ಗುಡ್ಡ ಏರಿ ಗುಡಿಯನ್ನು ತಲುಪುವ ವೇಳೆಗೆ, ಶೇಖರ ಮೊದಲೇ ತಂದುಕೊಟ್ಟಿದ್ದ ಕ್ಯಾರಿಯರ್ ಊಟ ಮಾಡಿ, ಡಬ್ಬಿಗಳನ್ನು ತೊಳೆದು ಮುಗಿಸಿ ಮಾವ ನನಗಾಗಿಯೇ ಕಾಯುತ್ತಾ ಕುಳಿತಿದ್ದರು. ಬೆಳಗ್ಗೆ ಶೇಖರ ಬಂದಾಗಲೇ ನಾನು ಮಧ್ಯಾಹ್ನ ಬರುವುದನ್ನು ಅವರಿಗೆ ತಿಳಿಸಿದ್ದನಂತೆ. ನನ್ನನ್ನೂ ಗೌರಿಯನ್ನೂ ನೋಡಿ ಕಣ್ಣರಳಿಸಿದವರು ಖುಷಿಯನ್ನು ತಡೆಯಲಾರದೆ ಚಪ್ಪಾಳೆ ತಟ್ಟಿ ಪುಟ್ಟ ಮಕ್ಕಳ ಹಾಗೆ ಜೋರಾಗಿ ನಕ್ಕರು. ಮಾತಾಡುವುದನ್ನು ನಿಲ್ಲಿಸಿಬಿಟ್ಟ ಅವರು ಹೀಗೆ ಹಾವ ಭಾವಗಳ ಮೂಲಕವೇ ಮಾತನಾಡುತ್ತಿದ್ದರು. ಸೊರಗಿ, ಆಗಿರುವುದಕ್ಕಿಂತಲೂ ಹೆಚ್ಚೇ ವಯಸ್ಸಾದ ಹಾಗೆ ಕಂಡ ಅವರನ್ನು ನೋಡಿ, ‘ಹೇಗಿದ್ದೀರಿ ಮಾವ?ʼ ಅಂದವಳೇ ಗಂಟಲುಬ್ಬಿ ಬಂದು ಮುಂದೆ ಏನೂ ಹೇಳಲಾಗದೆ ಸುಮ್ಮನೆ ನಿಂತು ಬಿಟ್ಟೆ. ನನಗೆ ಅರ್ಥವಾಗತ್ತೆ ಎನ್ನುವ ಹಾಗೆ ಹತ್ತಿರ ಬಂದು ನನ್ನ ಭುಜದ ಮೇಲೆ ಕೈಯಿಟ್ಟು ಅವರು ಸುಮ್ಮನೆ ನಿಂತರು.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಅವಳು ಈ ಚಿಕ್ಕತಾತನನ್ನು ತನ್ನ ಸ್ವಂತ ತಾತನಿಗಿಂತಲೂ ಹೆಚ್ಚು ಹಚ್ಚಿಕೊಂಡು ಬೆಳೆಯುತ್ತಿರುವ ವೇಳೆಗೇ ಮಾವನ ಗೆಳೆಯ ವೆಂಕಟ ಶಾಸ್ತ್ರಿಗಳು ಒಂದು ರಾತ್ರಿ ಮಲಗಿದವರು ಮಾರನೆಯ ದಿನ ಮತ್ತೆ ಕಣ್ತೆರೆಯದೆ ನಿದ್ದೆಯಲ್ಲೇ ಸುಖವಾಗಿ ಸತ್ತಿದ್ದರು.

ನಾನೇ ಸಾವರಿಸಿಕೊಂಡು, ಗೌರಿಯ ಕಡೆ ತಿರುಗಿ ‘ನಿನಗೆ ತಾತನ ನೆನಪಿದೆಯಾ ಚಿನ್ನ?ʼ ಎಂದೆ. ಕಳೆದ ಸಲ ಈ ತಾತನ್ನ ನೋಡಿದಾಗ ಗೌರಿಯಿನ್ನೂ ಐದು ವರ್ಷದ ಮಗು. ಮುತ್ತಜ್ಜಿಯ ಮನೆಯಲ್ಲಿ ಆಗ ಇದ್ದ ಎರಡು ದಿನವೂ ಈ ತಾತನಿಗೇ ಅಂಟಿಕೊಂಡು ಆಟವಾಡಿಕೊಂಡಿದ್ದ ಮಗುವಿಗೆ ಅದೆಲ್ಲಾ ಅದೆಷ್ಟು ನೆನಪಿನಲ್ಲಿ ಉಳಿದಿತ್ತೋ ಇಲ್ಲವೋ! ಈಗ ಮಾತನಾಡುವುದನ್ನೇ ನಿಲ್ಲಿಸಿ, ಹೀಗೆ ಗುಡ್ಡದ ಮೇಲೆ ಒಂಟಿಯಾಗಿ ಬದುಕುತ್ತಿರುವ ತಾತನ ಬಗ್ಗೆ ಅಮ್ಮ ಗುಡ್ಡ ಹತ್ತುತ್ತಲೇ ಹೇಳಿದ್ದೆಲ್ಲವನ್ನೂ ಕಣ್ಣರಳಿಸಿ ಕೇಳಿಸಿಕೊಂಡಿದ್ದ ಗೌರಿಗೆ ಈ ತಾತನ ಜೊತೆ ಏನು ಮಾತನಾಡುವುದು ತಿಳಿಯದೆ ಸುಮ್ಮನೆ ತಲೆಯಲುಗಿಸಿ ನಕ್ಕು ಮೆಲ್ಲನೆ ‘ಹಲೋ ತಾತʼ ಎಂದಳು. ಬದಲಿಗೆ ಹಲೋ ಹೇಳದೆ ಅವರು ಕೈಚಾಚಿ ಇವಳ ಕೈಹಿಡಿದು ಕುಲುಕಿ ಇನ್ನಷ್ಟು ಹತ್ತಿರ ಬಂದು ಬಾಗಿ ಹಲ್ಲು ಕಾಣುವಂತೆ ನಕ್ಕು ಕತ್ತು ಕುಣಿಸಿದ್ದೇ ಅವಳಿಗೆ ಚೂರು ನಾಚಿಕೆಯೂ ಜೊತೆಗೇ ತಡೆ ಹಿಡಿಯಲಾರದಷ್ಟು ನಗುವೂ ಒಟ್ಟಿಗೇ ಬಂದು ಬಿಟ್ಟಿತ್ತು. ನಂತರ ಗುಡಿಯೊಳಗೆ ಕೂತು ಕೇವಲ ಹಾವಭಾವದಲ್ಲಿ ಮತ್ತೆ ಕೆಲವೊಮ್ಮೆ ಚೀಟಿಯಲ್ಲಿ ಕನ್ನಡದಲ್ಲಿ ಅವರು ಬರೆಯುತ್ತಿದ್ದ ಪುಟ್ಟ ಪುಟ್ಟ ನೋಟ್ ಗಳನ್ನು ಓದುತ್ತಾ ಈ ತಾತನ ಜೊತೆಗೆ ಸುಲಭವಾಗಿಯೇ ಮಾತನಾಡಲು ಮೊದಲಿಟ್ಟಳು.

ಈಗ ಮಕ್ಕಳಿಬ್ಬರೂ ಗುಡಿಯ ಹೊರಗೆ ಗುಡ್ಡದ ನೆತ್ತಿಯ ಮೇಲೆ ಅಲ್ಲಲ್ಲಿ ಬೆಳೆದಿದ್ದ ಎಂಥೆಂತದ್ದೋ ಕಾಡು ಗಿಡ ಮರಗಳ ಮಧ್ಯದಲ್ಲಿ ಕೇಕೆ ಹಾಕುತ್ತಾ ಆಟ ಆಡಿಕೊಳ್ಳುತ್ತಿದ್ದಾಗ ನಾವು ಮೂವರೂ ಗುಡಿಯ ಹೊರಗಿದ್ದ ಸಣ್ಣ ಜಗಲಿಯ ಮೇಲೆ ಬಂದು ಕುಳಿತೆವು. ಶೇಖರ ತಲೆಯೆತ್ತಿ ಆಕಾಶ ನೋಡಿದವನು, ‘ನಾನು ಮೇಲೆ ಹತ್ತಿ ಬರುವಾಗ ಎಷ್ಟು ಮೋಡ ಕವಿದಿತ್ತು, ಈಗ ನೋಡಿದ್ರೆ ಎಲ್ಲ ಚೆದುರಿ ಹೋಗಿ ತೆಳ್ಳಗಾಗ್ತಾ ಇದೆ! ಮಳೆ ಬರೋದಿಲ್ಲ ಅನ್ಸತ್ತೆ‘ ಎಂದ. ಮಾವ ಕೂಡ ಕತ್ತನ್ನೆತ್ತಿ ಆಕಾಶ ನೋಡಿದರು. ಒಂದು ನಿಮಿಷ ಅಲ್ಲಿ ಬರೀ ಮೌನ. ‘ನೀವು ರಾತ್ರಿಗೆ ಮನೆಗೇ ಊಟಕ್ಕೆ ಬಂದಿದ್ದರೆ ಏನಾಗ್ತಿತ್ತು? ಇಲ್ಲಿ ನೀವೊಬ್ರೇ ಯಾಕೆ ಹೀಗಿರಬೇಕು? ನಾನು ಬಂದಿದೀನಿ ಅಂತಾನಾದ್ರೂ ಸುಮ್ಮನೆ ಇವತ್ತೊಂದು ದಿನ ನೀವು ಮನೆಗೆ ಬರಬಾರ್ದಾ?ʼ ಎಂದೆ. ನನ್ನ ಧ್ವನಿಯಲ್ಲಿ ನನಗೇ ಗೊತ್ತಿಲ್ಲದೆ ಬೇಜಾರಿನ ಜೊತೆಗೆ ತುಸು ಸಿಟ್ಟೂ ಸೇರಿಕೊಂಡಿದ್ದು ನನ್ನ ಗಮನಕ್ಕೂ ಬಂತು. ‘ಅಯ್ಯೋ, ಮನೆಗೆ ಬರಬೇಕು ಅಂತ ಅವರೇ ಮನಸ್ಸು ಮಾಡಬೇಕು. ಬೇರೆ ಯಾರೂ ಏನೂ ಮಾಡೋಕ್ಕಾಗಲ್ಲ. ನಾವು ಕಾಲಿಗೆ ಬಿದ್ದು ಬೇಡಿಕೊಂಡರೂ ಅವರು ಬರೋದಿಲ್ಲ ಬಿಡುʼ ಎಂದು ಶೇಖರನೂ ಬೇಜಾರಿನಲ್ಲಿ ಹೇಳಿದ. ಮಾವ ಮಾತಿಲ್ಲದೆ ಮೆಲ್ಲನೆ ನಕ್ಕು ಅವನ ಬೆನ್ನ ಮೇಲೆ ಕೈಯ್ಯಾಡಿಸಿದರು.

ಅಷ್ಟರಲ್ಲಿ ಅದ್ಯಾವುದೋ ಗಿಡದಿಂದ ಕಿತ್ತ ಎಲೆಯೊಂದನ್ನು ಹಿಡಿದುಕೊಂಡು ಮಕ್ಕಳು ಓಡಿಬಂದರು. ಹರ್ಷಿಣಿ ಶೇಖರನ ಕೈಗೆ ಆ ಎಲೆಯನ್ನ ಕೊಟ್ಟು ‘ಅಪ್ಪಾ, ನಮ್ಗೆ ಪೀಪಿ ಮಾಡ್ಕೊಡುʼ ಎಂದಳು. ಗೌರಿ, ‘ಸೌಂಡ್ ಚೆನ್ನಾಗಿ ಬರ್ಬೇಕು, ಹಾಗೆ ಮಾಡ್ಕೊಡಿ ಮಾವʼ ಅಂದಳು. ಶೇಖರ ಆ ಎಲೆಯನ್ನೊಮ್ಮೆ ನೋಡಿ ತಲೆಯಲುಗಿಸುತ್ತಾ ‘ಎಂತೆತ್ತದ್ದೋ ಎಲೆಯಲ್ಲಿ ಹಾಗೆ ಪೀಪಿ ಮಾಡೋಕ್ಕಾಗಲ್ಲ, ಪೀಪಿ ಮಾಡುವ ಎಲೆಯೇ ಬೇರೆ. ನಾನು ಬಂದೆ ಇರಿ, ನೀವಿಬ್ರೂ ಈ ಸಂಜೆ ಹೊತ್ತಲ್ಲಿ ಯಾವ್ಯಾವ್ದೋ ಗಿಡ ಗಂಟೆ ಅಂತ ಕೈ ಹಾಕ್ಬೇಡಿ ಮತ್ತೆ, ನಾನೇ ನೋಡಿ ಮಾಡಿಕೊಡ್ತೀನಿʼ ಅನ್ನುತ್ತಾ ಮೇಲೆದ್ದು, ಕುಣಿಯುತ್ತಾ ಓಡುತ್ತಿದ್ದ ಮಕ್ಕಳ ಜೊತೆಗೆ ದಾಪುಗಾಲಿಡುತ್ತಾ ಅಲ್ಲೇ ಕಣ್ಣಳತೆಯಷ್ಟು ದೂರದಲ್ಲಿ ಕಾಣಿಸುತ್ತಿದ್ದ ಗಿಡಗಳ ಗುಂಪಿನ ಕಡೆ ಹೆಜ್ಜೆ ಹಾಕಿದ.

ಈಗ ಜಗಲಿಯ ಮೇಲೆ ನಾನು, ಮಾವ ಇಬ್ಬರೇ ಉಳಿದೆವು. ಮೆಲ್ಲನೆ ಬೀಸುತ್ತಿದ್ದ ಗಾಳಿ ಹಿತವಾಗಿದ್ದರೂ ಸ್ವಲ್ಪ ತಣ್ಣಗಾಗುತ್ತಿದೆ ಎನಿಸಿತು. ನಾನು ತೊಟ್ಟಿದ್ದ ಕಾರ್ಡಿಗನ್ ಅನ್ನು ಇನ್ನಷ್ಟು ಬಿಗಿಯಾಗಿಸಿ ಎದೆಯ ಮೇಲೆ ಎಳೆದುಕೊಳ್ಳುತ್ತಾ ಮಾವನ ಕಡೆ ನೋಡಿ, ‘ನಿಮಗೆ ಚಳಿಯಾಗ್ತಿಲ್ವಾ ಮಾವ? ನಿಮ್ಮ ಸ್ವೆಟರ್ ತಂದುಕೊಡ್ಲಾ?ʼ ಎಂದು ಕೇಳಿದೆ. ‘ಬೇಡ’ ಎನ್ನುವಂತೆ ಅಡ್ಡಡ್ಡಕ್ಕೆ ತಲೆಯಾಡಿಸಿದ ಮಾವ ಯಾಕೋ ಇದ್ದಕ್ಕಿದ್ದಂತೆ ಮುಖ ಸಣ್ಣಗೆ ಮಾಡಿಕೊಂಡಿರುವ ಹಾಗೆ ಕಂಡರು. ‘ಏನಾಯ್ತು ಮಾವ?‘ ಎಂದೆ. ಗುಡ್ಡದಿಂದ ಕೆಳಗೆ, ಅಲ್ಲೆಲ್ಲೋ ಮೈಲುಗಳಾಚೆ ದೂರದಲ್ಲಿ ಕಾಣುತ್ತಿರುವ ಮರಗಳ ಗುಂಪಿನ ಕಡೆ ನೋಡುತ್ತ ಒಮ್ಮೆ ನಿಟ್ಟುಸಿರು ಬಿಟ್ಟು ಇದ್ದಕ್ಕಿದ್ದಂತೆ,
‘ನೀವು.. ಮಕ್ಕಳು… ನಮ್ಮನ್ಯಾವತ್ತೂ ಬಿಟ್ಟುಕೊಡಲಿಲ್ಲ’ ಅಂದರು.

ಅವರು ಇದ್ದಕ್ಕಿದ್ದಂತೆ ಹೀಗೆ ಬಾಯಿಬಿಟ್ಟು ಮಾತನಾಡಿದ್ದಕ್ಕೂ ಜೊತೆಗೆ ಅವರು ಹೇಳಿದ ಸಂಗತಿಗೂ ಒಟ್ಟೊಟ್ಟಿಗೇ ಹೇಗೆ ಸ್ಪಂದಿಸುವುದು ತಿಳಿಯದೆ ಕಕ್ಕಾಬಿಕ್ಕಿಯಾದೆ. ತಾವು ಹೀಗೆ ಮಾತನಾಡಿದ್ದು ತಮ್ಮ ಗಮನಕ್ಕೇ ಬಂದಿರದ ಹಾಗೆ ಮಾವ, ಇನ್ನೇನೋ ಹೇಳಲು ಬಾಯ್ತೆರೆದರು. ನನ್ನಿಂದ ಯಾವ ತರಹದ ಪ್ರತಿಕ್ರಿಯೆ ಬಂದರೂ ಅವರು ಮತ್ತೆ ಮಾತು ನಿಲ್ಲಿಸಿಬಿಡಬಹುದು ಅನ್ನಿಸಿ ಉಸಿರು ಬಿಗಿಹಿಡಿದು ನಾನು ಸುಮ್ಮನೆ ಕಾದೆ. ಏನೋ ಹೇಳಹೊರಟಂತೆ ಕಂಡ ಮಾವ ಏನೂ ಹೇಳದೆ, ಮೆಲ್ಲನೆ ನನ್ನ ಕಡೆ ತಿರುಗಿದರು. ನಾನಿನ್ನೂ ಉಸಿರು ಬಿಗಿ ಹಿಡಿದೇ ಇದ್ದೆ. ಹತ್ತಿರ ಸರಿದು ನನ್ನ ಕೈಯನ್ನು ಹಿಡಿದುಕೊಂಡು,
‘ದೇವರ ಹಾಗೆ ಮೌನವಾಗಿಯೇ ಉಳಿದು, ನಮ್ಮನ್ನೆಲ್ಲಾ ಕಾಪಾಡಿ ಬಿಟ್ರಿ’ ಎಂದರು. ಅದಕ್ಕೂ ನಾನು ಏನೂ ಹೇಳದೆ, ಸುಮ್ಮನೆ ಅವರ ಕೈಯನ್ನು ಮೆಲ್ಲನೆ ಒತ್ತಿದೆ. ಆಡಲು ಏನೂ ಇರಲಿಲ್ಲ.

ಮಾವ ಆಡದೆಯೂ ಆಡುತ್ತಿರುವ ಈ ಮಾತು ಯಾವುದೆಂದು ನನಗೆ ಗೊತ್ತಿತ್ತು. ನನಗೆ ಮತ್ತು ಶೇಖರನಿಗೆ ಮಾತ್ರ ತಿಳಿದಿದ್ದ ಗುಟ್ಟೊಂದು ಆ ನಂತರದಲ್ಲಿ ಸೀನನಿಗೂ ಯಾವಾಗಲೋ ತಿಳಿದುಬಂದಿತ್ತು. ಆ ದಿನದ ನೆನಪು ಈಗಲೂ ಇದೆ, ಕೆಲವು ಚಿತ್ರಗಳು ಮಸುಕಾಗಿ, ಮತ್ತೆ ಕೆಲವು ತುಂಬಾ ಸ್ಪಷ್ಟವಾಗಿ. ನಾವಿಬ್ಬರೂ ಮಿಡಲ್ ಸ್ಕೂಲಿನಲ್ಲಿ ಕಲಿಯುತ್ತಿದ್ದೆವು. ಚಿಕ್ಕ ಮಾವನ ಜೊತೆಗೆ ಆ ಬೇಸಿಗೆಯ ಒಂದು ದಿನ ವೆಂಕಟ ಶಾಸ್ತ್ರಿಗಳ ಮನೆಗೆ ಮಾಮೂಲಿನಂತೆ ಹೋದವರು, ಸ್ವಲ್ಪ ಹೊತ್ತಿನ ಬಳಿಕ ಸೀನನೊಟ್ಟಿಗೆ ಆಡಲೆಂದು ಹೊರಗೆ ಹೋಗಿದ್ದೆವು. ನಾವು ಹೊರಟಾಗ ಶಾಸ್ತ್ರಿಗಳೂ ಸರಸಮ್ಮನವರೂ ಮಾವನೊಟ್ಟಿಗೆ ಎಂದಿನಂತೆ ಪಂಥ ಕಟ್ಟುತ್ತಾ ಪಗಡೆ ಆಡುತ್ತಿದ್ದರು. ಆ ದಿನ ನಾವು ಮೂವರೂ ಮಕ್ಕಳು ಮಾವಿನ ತೋಪಿಗೆ ಹೋಗಿ, ಒಂದೆರಡು ಗಂಟೆಗಳ ಕಾಲ ಕಳೆದು ಮನೆಗೆ ಬರುವ ಕಾರ್ಯಕ್ರಮವಿತ್ತು ಮತ್ತು ಅದು ದೊಡ್ಡವರಿಗೂ ತಿಳಿದಿತ್ತು. ಮಾವಿನ ಕಾಯಿಯ ಜೊತೆಗೆ ಹಚ್ಚಿಕೊಂಡು ತಿನ್ನಲೆಂದು ಸರಸಮ್ಮನವರು ಉಪ್ಪು, ಅಚ್ಚ ಖಾರದ ಪುಡಿ, ಸಕ್ಕರೆ ಬೆರೆಸಿ ಕಾಗದದಲ್ಲಿ ಪೊಟ್ಟಣ ಕಟ್ಟಿ ಕೊಟ್ಟಿದ್ದರು. ನಾವು ಮೂವರೂ ಮಾವಿನ ತೋಪಿಗೆ ಹೋಗಿ, ಅದಾಗಲೇ ಅಲ್ಲಿ ಸೇರಿದ್ದ ಉಳಿದ ಮಕ್ಕಳ ಜೊತೆ ಸೇರಿ ಸಿಕ್ಕಷ್ಟು ಮಾವಿನ ಕಾಯಿ ಕಿತ್ತು ಉಪ್ಪು ಖಾರದ ಜೊತೆಗೆ ಸೇರಿಸಿಕೊಂಡು ತಿಂದಾದ ಮೇಲೆ, ಅಲ್ಲೇ ಆಡಲು ಶುರು ಮಾಡಿದೆವು.

ಐಸ್ಪೈಸು, ಲಗೋರಿ, ಮರಕೋತಿ ಎಂದೆಲ್ಲ ನಮ್ಮ ಆಟಗಳು ಒಂದಾದ ಮೇಲೊಂದರಂತೆ ಮುಂದುವರಿದಿತ್ತು. ಮರಕೋತಿಯಾಡುವ ವೇಳೆ ಕೊಂಬೆಯಿಂದ ಕೆಳಗೆ ಬಿದ್ದ ನಾನು ಕಾಲು ಉಳುಕಿಸಿಕೊಂಡಿದ್ದೆ. ಬೇರೆಯ ಮಕ್ಕಳೆಲ್ಲಾ ಆಟ ಮುಂದುವರಿಸಿದ್ದಾಗ, ಕಾಲು ಉಳುಕಿಸಿಕೊಂಡು ಆಡಲಾಗದ ನಾನು ಶೇಖರನೊಟ್ಟಿಗೆ ಮನೆಗೆ ಹೋಗುವುದು ಎಂದು ನಿರ್ಧಾರವಾಯ್ತು. ಸೀನ ಅಲ್ಲಿಯೇ ಉಳಿದು ಆಟ ಮುಂದುವರೆಸಿದ್ದ. ಕುಂಟುತ್ತಾ ಶೇಖರನೊಟ್ಟಿಗೆ ಹೊರಟ ನನ್ನ ಕಾಲು ನಡೆದು ನಡೆದು ಶಾಸ್ತ್ರಿಗಳ ಮನೆ ತಲುಪುವಷ್ಟರಲ್ಲಿ ಯಾವ ಮಾಯದಲ್ಲೋ ಸರಿಯಾಗಿ ಬಿಟ್ಟಿತ್ತು. ಮತ್ತೆ ತೋಪಿಗೆ ಹೋಗಿ ಆಡುವುದು ಬೇಡವೆಂದೂ ಮನೆಯಲ್ಲೇ ಅಟ್ಟ ಹತ್ತಿ ಅಲ್ಲಿರುವ ಹಳೆಯ ಚಂದಮಾಮ ಪುಸ್ತಕಗಳನ್ನ ಓದುವುದೆಂದೂ ನಾವಿಬ್ಬರೂ ತೀರ್ಮಾನಿಸಿದೆವು. ಶಾಸ್ತಿಗಳ ಮನೆಯ ಊಟದ ಮನೆಯ ಒಂದು ಮೂಲೆಯಲ್ಲಿ ಅಟ್ಟಕ್ಕೆ ಹೋಗಲು ಸಣ್ಣ ಹಲಗೆಗಳಿಂದ ಮಾಡಿದ ಮೆಟ್ಟಿಲುಗಳಿತ್ತು. ಮಾಡಿನಿಂದ ತೂಗು ಬಿದ್ದ ಹಗ್ಗವನ್ನು ಆಧಾರಕ್ಕೆ ಹಿಡಿದು, ಹುಷಾರಾಗಿ ಅಟ್ಟ ಹತ್ತುವುದೇ ನಮಗೆ ಒಂದು ರೋಚಕವೆನ್ನಿಸುವ ವಿಷಯವಾಗಿತ್ತು. ಹಾಗೊಮ್ಮೆ ಅಪರೂಪಕ್ಕೆ ದೊಡ್ಡವರ ಒಪ್ಪಿಗೆ ಪಡೆದು ಅಟ್ಟ ಹತ್ತಿದರೆ ಅಲ್ಲಿ ಅದೊಂದು ಬೇರೆಯೇ ಲೋಕದ ಹಾಗೆ ಕಾಣುತ್ತಿತ್ತು. ಇಡೀ ಊಟದ ಮನೆ ಮತ್ತು ಅಡುಗೆಯ ಮನೆಯ ಮೇಲೆ ವಿಶಾಲವಾಗಿ ಹರಡಿಕೊಂಡಿದ್ದ ಆ ಅಟ್ಟದ ಒಂದು ಬದಿಯಲ್ಲಿ ಸರಸಮ್ಮನವರು ಇಡೀ ವರ್ಷಕ್ಕೆಂದು ಹಾಕಿಟ್ಟಿರುತ್ತಿದ್ದ ಬಗೆ ಬಗೆಯ ಉಪ್ಪಿನಕಾಯಿಯ, ಮೂರೋ ನಾಕೋ ದೊಡ್ಡ ಪಿಂಗಾಣಿಯ ಭರಣಿಗಳು ಗಾಳಿಯಾಡದ ಹಾಗೆ ಮುಚ್ಚಿದ್ದ ಬಿಳಿಯ ಬಟ್ಟೆಯನ್ನು ಬಿಗಿಯಾಗಿ ಕತ್ತಿಗೆ ಕಟ್ಟಿಕೊಂಡು, ಅದರ ಮೇಲೊಂದು ದೊಡ್ಡ ಬುಗುಟೆಯಿದ್ದ ಪಿಂಗಾಣಿಯದ್ದೇ ಮುಚ್ಚಳವನ್ನು ತಲೆಗೆ ಹೊತ್ತು, ಯುದ್ಧಕ್ಕೆ ಹೊರಟ ಸೈನಿಕರ ಹಾಗೆ ಶಿಸ್ತಾಗಿ ನಿಂತಿದ್ದವು. ಅಪ್ಪಿ ತಪ್ಪಿಯೂ ನಾವು ಆ ಕಡೆ ಸುಳಿಯುವಂತಿರಲಿಲ್ಲ.

ಅದಕ್ಕಿಂತ ಸ್ವಲ್ಪ ದೂರದಲ್ಲಿದ್ದ ವಿವಿಧ ಗಾತ್ರದ ಟಿನ್ ಡಬ್ಬಗಳ ಒಳಗೆ ಕಾಗದದಲ್ಲಿ ಸುತ್ತಿಟ್ಟ ಹಪ್ಪಳ, ಸಂಡಿಗೆ, ಬಾಳಕಗಳಿದ್ದವು. ಇದರ ಜೊತೆಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುತ್ತಿದ್ದ ದೊಡ್ಡ ದೊಡ್ದ ಪಾತ್ರೆ-ಪಗಡಿಗಳು, ಹಿತ್ತಾಳೆಯದ್ದೊಂದು ದೊಡ್ಡ ಕೊಳಗ, ಯಾವ ಯಾವುದೋ ದವಸ ಧಾನ್ಯಗಳನ್ನು ತುಂಬಿಟ್ಟುಕೊಂಡಿದ್ದ ಸಣ್ಣ ಪುಟ್ಟ ಚೀಲಗಳಿದ್ದವು. ಜೊತೆಗೇ ತೆಂಗಿನಕಾಯಿಗಳು. ಅಟ್ಟದ ಇನ್ನೊಂದು ಬದಿಯಲ್ಲಿ ಸಾಲಾಗಿ ಒಂದರ ಮೇಲೊಂದು ಪೇರಿಸಿಟ್ಟ ಚಂದಮಾಮ, ಬಾಲಮಿತ್ರ ಪುಸ್ತಕಗಳು, ವಿವಿಧ ವಿಶೇಷಾಂಕಗಳು, ಇನ್ನೊಂದಷ್ಟು ಹಳೆಯ ಕನ್ನಡ, ಇಂಗ್ಲೀಷ್, ಸಂಸ್ಕೃತ ಭಾಷೆಯ ಪುಸ್ತಕಗಳಿದ್ದವು. ಈ ಪುಸ್ತಕಗಳಿಟ್ಟಿದ್ದ ಬದಿಯಲ್ಲಿಯೇ ಸಣ್ಣದೊಂದು ಕಿಟಕಿಯಿದ್ದು, ಅಲ್ಲಿಂದ ತೂರಿ ಬರುತ್ತಿದ್ದ ಬೆಳಕು ಅಟ್ಟದ ಆ ಬದಿಯನ್ನು ಮಂದ ಬೆಳಕಿನಿಂದ ತುಂಬಿಸುತ್ತಿತ್ತು. ಅದು ಅಟ್ಟವಾದರೂ ಬಹುಷಃ ಐದು ಅಡಿಯಷ್ಟಾದರೂ ಎತ್ತರದ ಮಾಡು ಇದ್ದಿದ್ದರಿಂದ, ಸಣ್ಣ ಮಕ್ಕಳಾದ ನಾವು ತಲೆ ಎತ್ತಿಕೊಂಡೇ ಅಟ್ಟದ ಮೇಲೆಲ್ಲಾ ಓಡಾಡಬಹುದಿತ್ತು.

ಆ ದಿನ ತೋಪಿನಿಂದ ನಾನು ಶೇಖರನೊಟ್ಟಿಗೆ ಮನೆಗೆ ಬಂದಾಗ ನಡು ಮನೆಯಲ್ಲಿ ದೊಡ್ದವರ್ಯಾರೂ ಕಾಣಲಿಲ್ಲ. ದೊಡ್ಡವರೆಲ್ಲ ಹಿತ್ತಲಲ್ಲೇ ಇರಬೇಕೆಂದು ನಾವಂದುಕೊಂಡೆವು. ಎಷ್ಟೋ ದಿನ ಹಿತ್ತಲಿನಲ್ಲಿ ಈ ಮೂವರೂ ಗಿಡಗಳ ಪಾತಿ ಸರಿಮಾಡುತ್ತಲೋ, ನೀರುಣಿಸುತ್ತಲೋ ಇಲ್ಲವೆ ಸುಮ್ಮನೆ ಬಟ್ಟೆ ಒಗೆಯುವ ಕಲ್ಲಿನ ಬಳಿ ಕುಳಿತು ಹರಟುತ್ತಲೋ ಇರುವುದನ್ನು ಲೆಕ್ಕವಿಲ್ಲದಷ್ಟು ಬಾರಿ ಕಂಡಿದ್ದೆವು. ದೊಡ್ಡವರ್ಯಾರೂ ಕಾಣಿಸದ ಕಾರಣದಿಂದ ಆ ದಿನ ಅಟ್ಟ ಹತ್ತಲು ಯಾರ ಒಪ್ಪಿಗೆಯನ್ನೊ ಕೇಳಬೇಕೆಂದು ನಮಗನ್ನಿಸಲಿಲ್ಲ. ಮೊದಲೇ ತೀರ್ಮಾನಿಸಿದ ಹಾಗೆ ಹಳೆಯ ಒಂದೆರಡು ಚಂದಮಾಮ ಪುಸ್ತಕಗಳನ್ನು ಕೆಳಗೆ ತಂದು ಓದಬೇಕೆಂದುಕೊಂಡು ನಾವಿಬ್ಬರೂ ಮಾಡಿನಿಂದ ನೇತಾಡುತ್ತಿದ್ದ ಹಗ್ಗವನ್ನು ಹಿಡಿದು ಹುಷಾರಾಗಿ ಸಣ್ಣ ಹಲಗೆಗಳ ಮೆಟ್ಟಿಲನ್ನು ಹತ್ತ ತೊಡಗಿದೆವು. ತೂಗಾಡುವ ಹಗ್ಗವನ್ನೇ ಆಧಾರವಾಗಿ ಹಿಡಿಯಬೇಕಿದ್ದ ಕಾರಣಕ್ಕೆ, ಈ ಮೆಟ್ಟಿಲು ಹತ್ತುವಾಗ ಚಿಕ್ಕ ಮಕ್ಕಳಾದ ನಾವು ಹುಷಾರಾಗಿ ಬ್ಯಾಲೆನ್ಸ್ ಮಾಡಬೇಕಿತ್ತು. ಹೀಗಾಗಿಯೋ ಏನೋ ಚೂರೂ ಮಾತಾಡದೆ, ಏಕಾಗ್ರಚಿತ್ತರಾಗಿ ಇಬ್ಬರೂ ಉಸಿರು ಬಿಗಿ ಹಿಡಿದು ಸದ್ದಿಲ್ಲದೆ ಅಟ್ಟ ಏರಲು ಮೊದಲಿಟ್ಟೆವು.

ಮುಂದೆ ನಾನು, ನನ್ನ ಹಿಂದೆ ಎರಡು ಮೆಟ್ಟಿಲ ಅಂತರದಲ್ಲಿ ಶೇಖರ. ಅಟ್ಟದ ಕೊನೆಯ ಒಂದೆರಡು ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ನನಗೆ, ಅಟ್ಟದಲ್ಲಿ ಯಾರೋ ಪಿಸು ದನಿಯಲ್ಲಿ ಮಾತನಾಡುತ್ತಿರುವ, ಜೋರಾಗಿ ಉಸಿರಾಡುತ್ತಿರುವ ಶಬ್ದ ಮೊದಲು ಕೇಳಿಸಿತು. ಮುಂದೆ ಸಾಗದೆ ಅಲ್ಲಿಯೇ ನಿಂತವಳು, ನನ್ನ ಹಿಂದಿದ್ದ ಶೇಖರನಿಗೂ ಅಲ್ಲಿಯೇ ನಿಲ್ಲುವಂತೆ ಜೊತೆಗೆ ಮಾತಾಡದಂತೆ ಮೆಲ್ಲನೆ ಸೂಚಿಸಿದೆ. ಆ ನಂತರ ಇನ್ನೊಂದೇ ಮೆಟ್ಟಲೇರಿ ಅಟ್ಟದ ಆ ಮಂದ ಬೆಳಕಿಗೆ ಕಣ್ಣು ಹೊಂದಿಸಿಕೊಳ್ಳುತ್ತಾ ಶಬ್ದ ಬರುತ್ತಿರುವ ಕಡೆಗೆ ನೋಡಿದೆ. ಪುಸ್ತಕಗಳಿದ್ದ ಅಟ್ಟದ ಆ ಬದಿಯ ಖಾಲಿ ಜಾಗದಲ್ಲಿ, ಕಿಟಕಿಯ ಪಕ್ಕದಲ್ಲಿ ಚಿಕ್ಕ ಮಾವ ಕಾಲು ಚಾಚಿಕೊಂಡು ಕುಳಿತಿದ್ದರು. ಅವರ ತೆರೆದ ಎದೆಗೆ ಒರಗಿಕೊಂಡು ಅವರ ಮುಖವನ್ನೇ ದಿಟ್ಟಿಸುತ್ತಾ ಅರ್ಧ ಮಲಗಿದ ಭಂಗಿಯಲ್ಲಿ ವೆಂಟಕಶಾಸ್ತ್ರಿಗಳು ಕಂಡರು. ಮಾವನಿಗೆ ಒರಗಿ ಅವರ ಭುಜದ ಮೇಲೆ ತಲೆಯಿಟ್ಟು ಒಂದು ಕೈಯಿಂದ ಮಾವನನ್ನೂ ಇನ್ನೊಂದು ಕೈಯಿಂದ ಶಾಸ್ತ್ರಿಗಳನ್ನೂ ಬಳಸಿ ಹಿಡಿದಿದ್ದ ಸರಸಮ್ಮ ಅಲ್ಲಿದ್ದರು. ಈ ಮೂವರೂ ಒಬ್ಬರನ್ನೊಬ್ಬರು ಹೀಗೆ ಬಳಸಿ ಹಿಡಿದು ಕುಳಿತಿರುವ ಸ್ಪಷ್ಟವೋ ಅಸ್ಪಷ್ಟವೋ ಎಂದು ನನಗೆ ಈಗಲೂ ಅರಿಯಲು ಬಾರದ ಚಿತ್ರವೊಂದು ನನ್ನೊಳಗೆ ಅಂದಿನಿಂದಲೂ ಉಳಿದುಹೋಯ್ತು.

ಮಾವನ ಒಂದು ಕೈ ಶಾಸ್ತ್ರಿಗಳ ಬೆನ್ನನ್ನು ಬಳಸಿ ಹಿಡಿದಿರುವಂತೆಯೇ ಇನ್ನೊಂದು ಕೈ ಶಾಸ್ತ್ರಿಗಳ ಮುಖ ಬೆನ್ನು ನೇವರಿಸುತ್ತಿತ್ತು. ಇಬ್ಬರೂ ಅದೇನೋ ಮೆಲ್ಲನೆ ಪಿಸುಗುಡುತ್ತಿದ್ದರು. ಶಾಸ್ತ್ರಿಗಳು ಒಮ್ಮೆ ಯಾಕೋ ಬಿಕ್ಕಳಿಸಿದರು, ಅವರು ಮಾವನ ಕಡೆಗೆ ತಿರುಗಿದ್ದ ಕಾರಣ ಅವರ ಮುಖ ನನಗೆ ಕಾಣದೆ ಹೋದರೂ ಅವರು ಅಳುತ್ತಿದ್ದಾರೆ ಎಂದು ನನಗನ್ನಿಸಿತು. ನನಗೆ ಹಾಗನ್ನಿಸಿದ್ದು ನಿಜವಾಗಿತ್ತು. ಶಾಸ್ತ್ರಿಗಳ ಬೆನ್ನು ನೇವರಿಸುತ್ತಿದ್ದ ಮಾವನ ಕೈ ಈಗ ಶಾಸ್ತ್ರಿಗಳ ಕಣ್ಣೊರೆಸಿ ಅವರನ್ನು ಸಂತೈಸಲು ತೊಡಗಿತ್ತು. ಮಾವ ಈಗ ಶಾಸ್ತ್ರಿಗಳಿಗೆ ಅದೇನೋ ಪಿಸು ದನಿಯಲ್ಲೇ ಹೇಳುತ್ತಾ ಅವರನ್ನು ಮುದ್ದಿಸತೊಡಗಿದರು. ಹೀಗೆ ಇವರಿಬ್ಬರೂ ಒಬ್ಬರ ತೋಳಿನಲ್ಲೊಬ್ಬರು ಒರಗಿ ತುಟಿಗೆ ತುಟಿ ಸೇರಿಸಿ ಮುದ್ದಿಸುತ್ತಿದ್ದರೆ ಅದನ್ನು ಒದ್ದೆ ಕಣ್ಣಿನಲ್ಲಿ ನೋಡುತ್ತಾ ಸರಸಮ್ಮನವರು ಇವರಿಬ್ಬರಿಗೂ ಇನ್ನಷ್ಟು ಒತ್ತಿಕೊಂಡರು. ಅದೇ ವೇಳೆಗೆ, ಅಲ್ಲಿಯವರೆಗೂ ನಡೆಯುತ್ತಿದ್ದ ಎಲ್ಲವನ್ನೂ ಸ್ತಂಭೀಭೂತಳಾಗಿ ನೋಡುತ್ತಿದ್ದ ನನಗೆ ಶೇಖರನೂ ನನ್ನ ಜೊತೆಯೇ ನಿಂತು ನಾನು ನೋಡಿದ್ದೆಲ್ಲವನ್ನೊ ತಾನೂ ನೋಡುತ್ತಿರುವುದು ಗಮನಕ್ಕೆ ಬಂತು. ನಾವಿಬ್ಬರೂ ಉಸಿರು ಬಿಗಿ ಹಿಡಿದು ಅಲ್ಲಿ ನಿಂತಿದ್ದೆವು. ಮೂರು ಜನ ದೊಡ್ಡವರು ಹೀಗೆ ಪ್ರೀತಿಯಲ್ಲಿ ಮುಳುಗಿರುವ ದೃಶ್ಯ ನಮ್ಮಿಬ್ಬರಿಗೂ ತೀರ ಹೊಸದಾಗಿತ್ತು. ಅದರಲ್ಲೂ ಗಂಡಸರಿಬ್ಬರು ಹೀಗೆ ಒಬ್ಬರು ಇನ್ನೊಬ್ಬರ ತೋಳಲ್ಲಿ ಸೇರಬಹುದೆನ್ನುವ ವಿಷಯವೇ ನಮಗೆ ತಿಳಿದಿರಲಿಲ್ಲ.

ನಾವಿಬ್ಬರೂ ಹೀಗೆ ನಿಂತಿರುವ ವೇಳೆಯೇ ನಮ್ಮ ಕಡೆಗೆ ಮೊದಲು ತಿರುಗಿ ನೋಡಿದವರು ಸರಸಮ್ಮ. ನೋಡಿದವರೇ ತಮ್ಮ ತುಟಿಯ ಮೇಲೆ ತೋರು ಬೆರಳಿತ್ತು ನಮಗೆ ಮಾತನಾಡದಿರುವಂತೆ ಸೂಚಿಸಿ, ನಮ್ಮಿಬ್ಬರನೂ ಕೆಳಗೆ ಇಳಿದು ಹೋಗುವಂತೆ ಸೂಚಿಸಿದ್ದು ಅವರೇ. ನನಗೆ ಚೆನ್ನಾಗಿ ನೆನಪಿರುವಂತೆ, ನಮ್ಮತ್ತ ತಿರುಗಿದ ಸರಸಮ್ಮನವರು ಮೊದಲು ಮಾಡಿದ ಕೆಲಸವೆಂದರೆ ಬಿಚ್ಚಿದಂತಿದ್ದ ತಮ್ಮ ಕುಪ್ಪಸವನ್ನು ಎಳೆದು ಸರಿಪಡಿಸಿಕೊಳ್ಳುತ್ತಾ ಎದೆಯ ಮೇಲೆ ಸೆರಗು ಹೊದ್ದಿದ್ದು.

ನಿಶ್ಯಬ್ದವಾಗಿ ನಮ್ಮ ಹಿಂದೆಯೇ ಮೆಟ್ಟಲಿಳಿದು ಬಂದ ಅವರು ನಮ್ಮನ್ನ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಹಿಂದಿನ ದಿನವಷ್ಟೇ ಮಾಡಿ ಡಬ್ಬದಲ್ಲಿಟ್ಟಿದ್ದ ಎರಡೆರಡು ರವೆ ಉಂಡೆ ಕೊಟ್ಟರು. ನಾವು ಮಾತಾಡದೆ ಅಲ್ಲೇ ಕುಳಿತು ರವೆ ಉಂಡೆ ತಿನ್ನಲಾರಂಭಿಸಿದೆವು. ತಿನ್ನದೆ, ಮಾತಾಡದೆ ಅಲ್ಲಿ ಸುಮ್ಮನೆ ಕೂತಿರುವುದೇ ಕಷ್ಟದ ಕೆಲಸ ಅನಿಸಿದ ಕಾರಣಕ್ಕೇ ಕೈಗೆ ಕೊಟ್ಟ ಉಂಡೆಯನ್ನು ತಕ್ಷಣ ಹಾಗೆ ತಿನ್ನಲು ಶುರು ಮಾಡಿದೆವೋ ಏನೋ. ಅಟ್ಟದ ಮೇಲೆ ನಾವು ಈಗಷ್ಟೇ ನೋಡಿದ ವಿಷಯವೇ ಮನಸ್ಸನ್ನು ತುಂಬಿಕೊಂಡಿತ್ತು. ನಾವಿಬ್ಬರೂ ರವೆ ಉಂಡೆ ತಿನ್ನುತ್ತಿರುವಾಗ ಸರಸಮ್ಮ ಮೊದಲು ನಮ್ಮನ್ನು ಕೇಳಿದ್ದು,
‘ಆಡಲು ಹೋದ ನೀವ್ಯಾಕೆ ಇಷ್ಟು ಬೇಗ ವಾಪಸ್ಸು ಬಂದಿರಿ? ಸೀನ ಎಲ್ಲಿ?ʼ ಎಂಬ ಎರಡು ಪ್ರಶ್ನೆಗಳನ್ನು. ಅವರ ಧ್ವನಿ ಮಾಮೂಲಿನಂತಿದ್ದು. ಯಾವ ಉದ್ವೇಗವಾಗಲೀ ಆತಂಕವಾಗಲೀ ಇರದಂತಿದ್ದಿದ್ದು ಚೆನ್ನಾಗಿ ನೆನಪಿದೆ. ಸೀನ ಇನ್ನೂ ತೋಪಿನಲ್ಲೆ ಆಡುತ್ತಿರುವುದನ್ನು ತಿಳಿದಾಗ ಅವರ ಮುಖದಲ್ಲಿ ಒಂದು ಬಗೆಯ ನಿರಾಳತೆ ಮೂಡಿತು. ನನ್ನ ಕಾಲು ಉಳುಕಿದ್ದು ತಿಳಿದು ಎಂದಿನ ಕಕ್ಕುಲಾತಿಯಿಂದಲೇ ತಮ್ಮ ಕೈಯಲ್ಲಿ ನನ್ನ ಪಾದವನ್ನು ಹಿಡಿದು, ಅಲ್ಲಲ್ಲಿ ಒತ್ತಿ ನೋಡಿ ನನಗೆ ನೋವಾಗುತ್ತಿಲ್ಲವೆಂದು ಖಾತ್ರಿ ಮಾಡಿಕೊಂಡರು.

ಇಷ್ಟಾದ ಮೇಲೆ ನಮ್ಮಿಬ್ಬರನ್ನೂ ದಿಟ್ಟಿಸಿ ನೋಡುತ್ತಾ ನೇರವಾಗಿ ವಿಷಯಕ್ಕೆ ಬಂದರು. ‘ನೀವಿಬ್ಬರೂ ಈಗ ಅಟ್ಟದ ಮೇಲೆ ನೋಡಿದ್ದನ್ನ ಯಾರಿಗೊ ಯಾವತ್ತೂ ಹೇಳಬಾರದು, ಸೀನನಿಗೂʼ ಎಂದು ನಮ್ಮಿಂದ ಭಾಷೆ ತೆಗೆದುಕೊಂಡು ನಮ್ಮ ಇಷ್ಟ ದೈವಗಳ ಹೆಸರಿನಲ್ಲಿ ಆಣೆ ಮಾಡಿಸಿಕೊಂಡರು. ನಂತರ ‘ಈ ಭಾಷೆ, ಆಣೆಗಳಲ್ಲಿ ನಿಮಗೆ ನಂಬಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ವಿಷಯವನ್ನ ನೀವು ಬಾಯಿ ಬಿಟ್ಟರೆ, ನಮಗೆಲ್ಲಾ ಅಪಾಯವಾಗುವುದಂತೂ ಖಂಡಿತ’ ಎಂದರು. ಹಾಗೆ ಕಡೆಯ ಮಾತನ್ನು ಹೇಳುವಾಗ ಮಾತ್ರ ಅವರ ತಲೆ ಬಗ್ಗಿ, ಧ್ವನಿ ಭಾರವಾಯ್ತು. ಈ ಮೂವರನ್ನೂ ಅಷ್ಟು ಹಚ್ಚಿಕೊಂಡು, ಅವರ ಅಕ್ಕರೆಯ ಸವಿಯಲ್ಲಿ ಮುಳುಗೇಳುತ್ತಿದ್ದ ನಾವು ಆಣೆ ಭಾಷೆಗಳನ್ನು ಹಾಕದಿದ್ದರೂ ಯಾರಲ್ಲೂ ಏನೂ ಹೇಳುತ್ತಿರಲಿಲ್ಲ. ಮಾತಿನಲ್ಲಿ ಇದನ್ನ ಹೇಗೆ ತಿಳಿಸಬಹುದೋ ಅರಿಯದ ನಾವಿಬ್ಬರೂ ಮೌನವಾಗಿಯೇ ಸರಸಮ್ಮನವರಿಗೆ ಈ ವಿಷಯದಲ್ಲಿ ಭರವಸೆ ಕೊಟ್ಟೆವು. ಆ ನಂತರ ಸ್ವಲ್ಪ ವೇಳೆಗೆ ಸೀನ ಮನೆಗೆ ಬಂದ. ಅಷ್ಟು ಹೊತ್ತಿಗೆ ಅಟ್ಟದ ಮೇಲಿದ್ದವರೂ ಕೆಳಗಿಳಿದು ಬಂದರು. ಸ್ವಲ್ಪ ಹೊತ್ತಿನ ಬಳಿಕ ನಾನು, ಶೇಖರ ಇಬ್ಬರೂ ಮಾವನ ಜೊತೆಗೆ ಸೈಕಲ್ ಏರಿ ಎಂದಿನಂತೆ ಮನೆಗೆ ವಾಪಸ್ಸಾದೆವು.

ನಂತರದಲ್ಲಿ ಅವರ್ಯಾರೂ ಈ ವಿಷಯವಾಗಿ ನಮ್ಮ ಜೊತೆಗೆ ಏನೂ ಮಾತಾಡಲಿಲ್ಲ. ಎಲ್ಲವೂ ಎಂದಿನಂತೆಯೇ ನಡೆಯುತ್ತಿತ್ತು. ನಾನು, ಶೇಖರ ಕೂಡ ಈ ಕುರಿತು ಯಾವ ಮಾತೂ ಆಡಿರದಿದ್ದರೂ ತೀರಾ ವಿಶೇಷವಾದ ಗುಟ್ಟೊಂದರಲ್ಲಿ ನಾವಿಬ್ಬರೂ ಭಾಗಿಗಳಾಗಿದ್ದು ಅದನ್ನು ಅಷ್ಟೇ ಮುತುವರ್ಜಿಯಿಂದ ನಾವಿಬ್ಬರೂ ಕಾಯುತ್ತಿರುವ ಭಾವವೊಂದು ನಮ್ಮೊಳಗಿತ್ತು. ಮುಂದೆ ನಾವೆಲ್ಲ ದೊಡ್ಡವರಾಗಿ ಕಾಲೇಜು ಓದುತ್ತಿರುವ ವೇಳೆಯಲ್ಲಿ ನಾನು ಅಜ್ಜಿ ಮನೆಗೆ ಬಂದಾಗೊಮ್ಮೆ, ಎಂದಿನಂತೆ ಶೇಖರನೊಟ್ಟಿಗೆ ಇದೇ ಗುಡ್ಡವನ್ನು ಹತ್ತಿ, ಸೂರ್ಯಾಸ್ತವನ್ನು ಕಾಣಲು ಕಾಯುತ್ತಿರುವ ವೇಳೆಗೆ ಶೇಖರ, ‘ಸೀನಂಗೆ ವಿಷಯ ತಿಳೀತು ಅನ್ಸತ್ತೆ ಮುನ್ನಿ’ ಎಂದ. ಅವನು ಹೇಳದಿದ್ದರೂ ಅದು ಯಾವ ವಿಷಯ ಎಂದು ನನಗೆ ತಿಳಿದಿತ್ತು. ನಂತರ ಅವನೇ ಹೇಳಿದಂತೆ ಅದಾಗಲೇ ದೆಹಲಿ ಸೇರಿ ಜೆ ಎನ್ ಯು ನಲ್ಲಿ ಕಲಿಯುತ್ತಿದ್ದ ಸೀನ ರಜೆಗೆ ಊರಿಗೆ ಬಂದಾಗಲೆಲ್ಲ, ಮಾವ ಶಾಸ್ತ್ರಿಗಳ ಮನೆಗೆ ಹೋಗುತ್ತಿರಲಿಲ್ಲವಂತೆ. ಸೀನ ಈಗ ಮಾವನೊಟ್ಟಿಗಿರಲಿ ಶೇಖರನೊಟ್ಟಿಗೂ ಮಾತನಾಡುವುದಿಲ್ಲವಂತೆ. ನಮ್ಮ ಅಜ್ಜಿ ಮನೆ ಕಡೆಗೂ ಸುಳಿಯುವುದಿಲ್ಲವಂತೆ. ಅವನಿರುವಷ್ಟು ದಿನವೂ ಮಾವನೂ ಮಂಕಾಗಿರುತ್ತಿದ್ದರಂತೆ. ಅವನು ರಜೆ ಮುಗಿಸಿ ವಾಪಸ್ಸಾಗುತ್ತಿದ್ದಂತೆ ಎಲ್ಲವೂ ಮತ್ತೆ ಮೊದಲಿನಂತಾಗಿ ಮಾವನ ಸೈಕಲ್ ಶಾಸ್ತ್ರಿಗಳ ಮನೆಯ ಹಾದಿ ಹಿಡಿಯುತ್ತಿತ್ತಂತೆ.

ಹಾಗೆ ನೋಡಿದರೆ ನಾನೂ ಶೇಖರನೂ ನಮಗೆ ಮಾವನ ಈ ಗುಟ್ಟು ಗೊತ್ತಾಗಿ ಅದೆಷ್ಟೋ ವರ್ಷಗಳ ನಂತರ ಈ ವಿಷಯದ ಕುರಿತಾಗಿ ಆ ದಿನ ಮಾತನಾಡಿದ್ದು. ಸೀನ ಮುಂದೆ ದೆಹಲಿಯಲ್ಲೇ ಕೆಲಸ ಹಿಡಿದು, ಮನೆ ಮಾಡಿ ನೆಲೆಯೂರಿದ್ದ. ಅಷ್ಟರಲ್ಲಾಗಲೇ ತೋಟ ಮಾರಿದ್ದ ಶಾಸ್ತ್ರಿಗಳೂ ಸರಸಮ್ಮನವರು ತೋಟದ ಮನೆಯನ್ನು ಬಿಟ್ಟು ಊರ ಅಂಚಿನಲ್ಲಿ ಬಂದು ನೆಲೆಸಿದ್ದರು.

ಈಗ ಮತ್ತೆ ಅದೆಲ್ಲವೂ ಒಟ್ಟೊಟ್ಟಿಗೇ ನನಗೆ ನೆನಪಾಯಿತು. ಸಣ್ಣ ಮಕ್ಕಳಾಗಿದ್ದ ನಾವು ಈ ಮೂವರ ಸಂಬಂಧವನ್ನು ಆಗ ಹ್ಯಾಗೆ ಅರ್ಥ ಮಾಡಿಕೊಂಡೆವು ಈಗಂತೂ ತಿಳಿಯುತ್ತಿಲ್ಲ. ಹಾಗೆ ನೋಡಿದರೆ, ಆಗ ನಾವು ಯೋಚನೆ ಮಾಡಿದ್ದು ಆ ಮೂವರ ನಡುವಿದ್ದ ಸಂಬಂಧದ ಕುರಿತು ಅಲ್ಲವೇ ಅಲ್ಲ, ಆ ಮೂವರೊಟ್ಟಿಗೂ ನಮಗಿದ್ದ ಸಂಬಂಧದ ಕುರಿತಾಗಿ ಮಾತ್ರ ಇರಬೇಕು. ನಮ್ಮ ಕುರಿತು ಆ ದೊಡ್ಡವರಿಗಿದ್ದ ಪ್ರೀತಿ ಕಾಳಜಿ ಕೇವಲ ಮಕ್ಕಳಷ್ಟೇ ಆಗಿದ್ದ ಕಾರಣಕ್ಕೇ ನಮಗರ್ಥವಾಗಿ, ಅದಷ್ಟೇ ಮುಖ್ಯವಾಗಿ ಕಂಡಿತ್ತೇನೋ. ಈ ವಿಷಯದಲ್ಲಿ ನಾನು, ಶೇಖರ, ಸೀನ ತಳೆದ ಮೌನಕ್ಕೂ ಈಗ ಮಾವ ಕೈಗೊಂಡಿರುವ ಮೌನ ವ್ರತಕ್ಕೂ ಏನೋ ಸಂಬಂಧವಿರುವ ಹಾಗೆ ಕಂಡಿತು! ಹಾಗೆ ಇವಕ್ಕೆಲ್ಲಾ ಸಂಬಂಧ ನಿಜವಾಗಿಯೂ ಇತ್ತೋ ಇಲ್ಲವೋ ಯಾರಿಗೆ ಗೊತ್ತು? ಎಲ್ಲವನ್ನೂ ಒಡೆದು ನೋಡುವ, ಅರ್ಥ ಮಾಡಿಕೊಳ್ಳುವ ಹಪಾಹಪಿಯಲ್ಲೇ ಹೀಗೆಲ್ಲಾ ಪ್ರತ್ಯೇಕವೆನಿಸುವ ವಿದ್ಯಮಾನಗಳಿಗೆ ಮನಸ್ಸು ಸಂಬಂಧ ಕಲ್ಪಿಸಬಹುದೇನೋ. ಕಡೆಗೂ ನಮಗೆ ನಿಜವಾಗಿಯೂ ಅರ್ಥವಾಗುವಂಥದ್ದು ಇಲ್ಲಿ ಏನೂ ಇಲ್ಲ ಎನಿಸಿ ತುಟಿಯಂಚಿನಲ್ಲಿ ಸಣ್ಣದೊಂದು ನಗು ಮೂಡಿತು.

ಈ ಮೂವರ ಸಂಬಂಧದ ಕುರಿತು ನಮ್ಮ ನಮ್ಮಲ್ಲಿ ಒಬ್ಬೊಬ್ಬರಿಗೂ ಒಂದೊಂದು ಬಗೆಯ ಭಾವನೆಯಿತ್ತೇನೋ. ಅದೇನೇ ಇದ್ದರೂ ಇದು ನಾವ್ಯಾರೂ ಮಾತನಾಡದೆಯೇ ಉಳಿಯಬೇಕಾದ, ಕೇವಲ ಆ ಮೂವರಿಗಷ್ಟೇ ಸಂಬಂಧಿಸಿದ ಖಾಸಗಿ ವಿಷಯ ಎಂಬ ಅರಿವು ಕೂಡ ಮಕ್ಕಳಾದ ನಮ್ಮೆಲ್ಲರೊಳಗೂ ಇತ್ತೇನೋ. ಹಾಗೆ ನೋಡಿದರೆ, ನಮ್ಮೆಲ್ಲರನ್ನೂ ಒಟ್ಟೊಟ್ಟಿಗೇ ಕಾದಿದ್ದು ಆ ಮೌನ ಮತ್ತು ಅದರ ಹಿಂದೆ ನಮ್ಮೆಲ್ಲರಿಗೂ ಈ ಮೂವರ ಕುರಿತೂ ಇದ್ದ ಪ್ರೀತಿ ಮಾತ್ರವೇ ಆಗಿತ್ತು.

ಮೌನ ವ್ರತ ಹಿಡಿದ ಅಥವಾ ಹಾಗೆ ಉಳಿದವರು ಭಾವಿಸಿರುವ ಮಾವ ಹೀಗೆ ಯಾವ ಮುನ್ಸೂಚನೆಯೂ ಇಲ್ಲದೆ ಇದ್ದಕ್ಕಿದ್ದಂತೆ ನನ್ನೊಂದಿಗೆ ಎರಡು ಮಾತನಾಡಿದ್ದೇ ನನಗೆ ಹಳೆಯದೆಲ್ಲ ನೆನಪಾಗಿತ್ತು. ಅಷ್ಟರಲ್ಲಿ ಗಿಡಗಳ ಗುಂಪಿನಿಂದ ಪೀ…ಪೀ…ಕೀಕೀ…ಎನ್ನುವ ಕರ್ಕಶ ಶಬ್ದಗಳು ಕೇಳಿಸಿದವು. ಅಷ್ಟು ದೂರದಲ್ಲಿ ಮಕ್ಕಳಿಬ್ಬರ ಜೊತೆಯಲ್ಲಿ ತಾನೂ ಎಲೆಯ ಪೀಪಿ ಊದುತ್ತಾ ಬರುತ್ತಿರುವ ಶೇಖರ ಕಾಣಿಸಿದ. ಆ ಮೂವರೂ ನಾವಿಬ್ಬರೂ ಕೂತ ಕಡೆಗೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರು. ಖುಷಿಯಾಗಿ ಕುಣಿಯುತ್ತಾ ಎಲೆಯ ಪೀಪಿ ಊದುತ್ತಿರುವ ಮಕ್ಕಳನ್ನ ನೋಡಿದ್ದೇ ಮಂಕಾಗಿ ಕುಳಿತಿದ್ದ ಮಾವನ ಮುಖದಲ್ಲಿ ಮತ್ತೆ ನಗು ಕಾಣಿಸಿತು. ಜಗಲಿ ಬಿಟ್ಟು ಎದ್ದವರೇ ಓಡು ನಡಿಗೆಯಲ್ಲಿ ಹೋಗಿ ಅವರನ್ನು ಕೂಡಿಕೊಂಡರು. ಹರ್ಷಿಣಿ ತನ್ನ ಕೈಲಿದ್ದ ಇನ್ನೊಂದು ಪೀಪಿಯನ್ನು ತಾತನ ಕೈಗೆ ಕೊಟ್ಟು ‘ನೀನೂ ಊದು ತಾತ’ ಅಂದಳು. ಮಾವ ಪೀಪಿಯನ್ನ ಬಾಯಲಿಡುತ್ತಿದ್ದಂತೇ ಗೌರಿ, ‘ತಾತ, ರಿಮೆಂಬರ್?… ನೀನು ಊದಿ ಶಬ್ದ ಮಾಡೋಹಾಗಿಲ್ಲ… ಅದು ಮಾತಾಡಿದ ಹಾಗೇನೇ ಆಗ್ಬಿಡತ್ತೆ’ ಅಂದಳು.

ಬಾಯಲ್ಲಿಟ್ಟ ಪೀಪಿಯನ್ನ ಊದುವುದೋ ಬಿಡದೆ ಪೇಚಾಡುತ್ತಿರುವ ಹಾಗೆ ನಟಿಸುತ್ತಾ ಮಾವ, ಮಕ್ಕಳಿಬ್ಬರ ಕಡೆಗೂ ಅಯೋಮಯವಾಗಿ ನೋಡುತ್ತಾ ಮುಖ ಹುಳ್ಳಗೆ ಮಾಡಿ, ತಲೆಯ ಮೇಲೆ ಕೈಹೊತ್ತು ನಿಂತದ್ದೇ ಅಲ್ಲಿ ನಗುವಿನ ಕಟ್ಟೆಯೊಡೆಯಿತು. ಮಕ್ಕಳಿಬ್ಬರೂ ಹಾಗೆ ಬಿದ್ದು ಬಿದ್ದು ನಗುತ್ತಿರುವಾಗ ಶೇಖರ ನನ್ನ ಹತ್ತಿರ ಬಂದು ಕಕ್ಕುಲಾತಿಯಿಂದ, ‘ಮುನ್ನಿ, ಹೊರಟುಬಿಡೋಣ, ಆಮೇಲೆ ಗುಡ್ಡ ಇಳಿಯುವಾಗ ಕತ್ತಲಾಗಿಬಿಡತ್ತೆ, ಜೊತೆಗೆ ಮಕ್ಕಳಿದಾರೆ’ ಅಂದ.