ನೇತ್ರಾವತಿ ದಂಡೆಯ ಅಜಿಲಮೊಗರು ಎಂಬ ಊರಿನ ಇದಿನಬ್ಬನಿಗೆ, ಆಫ್ರಿಕಾದ ಡರ್ಬನ್ ನಂಟು ಅಂಟಿದ ಕತೆಯಿದು. ನದಿಯ ಹರಿವಿನಂತೆ ಸಾಗುವ ಈ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಓದಿನ ಕುತೂಹಲವನ್ನು ಹೆಚ್ಚಿಸುತ್ತವೆ. ಕಥೆ ಹೇಳುತ್ತ ಗುಲಾಮ ಪದ್ಧತಿಯಲ್ಲಿರುವ ಕ್ರೌರ್ಯದ ಅನಾವರಣ ಮಾಡಿರುವ ಕಾದಂಬರಿಕಾರ ಮುನವ್ವರ್ ಜೋಗಿಬೆಟ್ಟು, ಬರವಣಿಗೆಯನ್ನು ಬಹಳ ಪ್ರೀತಿಸುತ್ತಾರೆ. ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಅವರು ಉದ್ಯೋಗಿ. ರಜೆಯಿದ್ದಾಗ ಪ್ರವಾಸ, ಸುತ್ತಾಟದ ಒತ್ತಡವಿದ್ದರೂ, ಮೊಬೈಲ್ ನಲ್ಲಿಯೇ ಕಥೆ ಟೈಪ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಅವರು ಬರೆದ ಹೊಸ ಕಾದಂಬರಿಯ ಮೊದಲ ಕಂತು ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿದೆ:

-1-

ಅಮವಾಸ್ಯೆಯ ರಾತ್ರಿ ಸುಮಾರು ಎಂಟು ಗಂಟೆ ಇರಬಹುದು. ಬೇಸಗೆಯಾದ್ದರಿಂದ ಮನೆಯ ಪಡಸಾಲೆಯಲ್ಲಿ ಉಮ್ಮ, ಅಬ್ಬ ಮತ್ತು ನಾವೆಲ್ಲಾ ಕುಳಿತು ಮಾತನಾಡುತ್ತಿದ್ದೆವು. ಆಗೊಮ್ಮೆ ಈಗೊಮ್ಮೆ ತಣ್ಣನೆ ಗಾಳಿ ಬೀಸಿದರೆ “ಅಬ್ಬಾ..ಇಷ್ಟು ಕಾದ ಬಳಿಕ ಸ್ವರ್ಗದ ಗಾಳಿ ಬಂತು” ಎಂದು ನಾವು ಮಕ್ಕಳೆಲ್ಲಾ ಪರಸ್ಪರ ಹೇಳಿಕೊಳ್ಳುವುದು. ಅಬ್ಬ ಉಮ್ಮನನ್ನು ಪ್ರೀತಿಯಿಂದ “ಪುತ್ತು” ಎಂದು ಕರೆಯುತ್ತಿದ್ದುದು ರೂಢಿ.

ನಾವೆಲ್ಲಾ ಮಕ್ಕಳು ಚಾಪೆ ಹಾಸಿ ಇನ್ನೇನು ಮಲಗಲಣಿಯಾಗಿ ಹೊದಿಕೆ ಸರಿಪಡಿಸುತ್ತಿರುವಷ್ಟರಲ್ಲಿ, ಕುಳಿತಲ್ಲಿಂದ ಎದ್ದ ಅಬ್ಬ ಹೊರಗೇಕೋ ಇಣುಕಿದರು.

“ಪುತ್ತೂ… ದೂರದಲ್ಲಿ ಯಾರದೋ ಸೂಟೆ ಕಾಣುತ್ತಿದೆ, ಈ ರಾತ್ರಿಯಲ್ಲಿ ಯಾರಿರಬಹುದು?” ಅಂತ ಅನುಮಾನಿಸಿದರು.

ಆ ದಿನಗಳಲ್ಲಿ ನಮ್ಮೂರಿನಲ್ಲಿ ಡಾಂಬರು ರಸ್ತೆ ಬಂದಿದ್ದರೂ ಬೀದಿ ದೀಪದ ಸೌಕರ್ಯವಿರಲಿಲ್ಲ. ತೋಟವಿರುವವರ ಮನೆಗೆ ಹೋಗಬೇಕಾದರೆ ರಾತ್ರಿ ಹೊತ್ತಲ್ಲಿ ಬೆಳಕಿನ ಮೂಲ ಬೇಕೇ ಬೇಕು‌. ಟಾರ್ಚು ಲೈಟು ಯಾರಾದರೂ ಶ್ರೀಮಂತರ ಮನೆಗಳಲ್ಲಿ ಮಾತ್ರ. ಆಗ ಬೆಳಕಿಗಾಗಿ ತೆಂಗಿನ ಗರಿಯ ಸೂಟೆ ಬಳಸುತ್ತಿದ್ದುದು ರೂಢಿ. ಅಬ್ಬ ದೂರದಲ್ಲಿ ಕಾಣುವ ಸೂಟೆಯ ವಿಚಾರ ಹೇಳಿದ ಬಳಿಕ ಅಮ್ಮನಲ್ಲಿ ತುಂಬಿದ ಹೆದರಿಕೆಯಂತೆ ನಮಗೂ ಭಯ ಮಿಶ್ರಿತ ಕುತೂಹಲ. “ಯಾರು ಬಂದಿರಬಹುದು?”

ಅಬ್ಬ ವರ್ಷಗಳ ಕಾಲ ಕಗ್ಗಾಡಿನಲ್ಲಿ ಬಿಡಾರ ಕಟ್ಟಿ ಕುಳಿತ ಅನುಭವಿ. ಕಾಡು ಪ್ರಾಣಿ, ಕತ್ತಲ ಭಯವೆಲ್ಲಾ ಮರೆತು ಬಿಟ್ಟಿದ್ದ ದಿಟ್ಟ ಎದೆಯ ಮನುಷ್ಯ. ಶಾಲೆಗೆ ಹೋಗಿ ಓದಿದ್ದು ನಾಲ್ಕೇ ಕ್ಲಾಸಾದರೂ ಆಸಕ್ತಿಯಿಂದ ಓದಿ ತಿಳಿದದ್ದು ಅಪಾರ. ಊರಿನಲ್ಲಿ ಯಾವುದೇ ಸಾರ್ವಜನಿಕ ಸೌಕರ್ಯಗಳಿಗೂ, ಜನ ಪ್ರತಿನಿಧಿಗಳ ಮುಂದೆ ಹಕ್ಕು ಮಂಡಿಸುವ ತಾಕತ್ತಿತ್ತು.

ಬೆಳಕು ಹತ್ತಿರವಾದಂತೆ, ನಮ್ಮ ಮನೆಯ ಚಿಮಿಣಿ ಬೆಳಕು ಮಂದವಾಗತೊಡಗಿತು. ಇನ್ನಷ್ಟು ಹತ್ತಿರವಾದಂತೆ ಕೆಮ್ಮುವ ಸದ್ದು ಗಾಳಿಯಲ್ಲಿ ತೇಲಿಬಂತು. ಅಬ್ಬ ಬಾಗಿಲು ತೆರೆದು‌ ಸೂಟೆ ಹಿಡಿದು ಬಂದ ವ್ಯಕ್ತಿಯನ್ನು ಸ್ವಾಗತಿಸಲಣಿಯಾದರು.

“ಯಾರು?” ಉಮ್ಮನ ಹೆದರಿಕೆಯ ಧ್ವನಿ. “ಅಮ್ಮರ್ತೆ ಕಾಕ” ಎಂದು ಅಬ್ಬ ಹೇಳಿದ ಬೆನ್ನಿಗೆ “ಪುತ್ತೂ.. ಇದು ನಾನು, ಗುರ್ತು ಸಿಗಲಿಲ್ವಾ?” ಅಂತ ಪರಿಚಯ ಹೇಳಿಕೊಂಡರು.

“ನಿಮ್ಮ ಕೆಮ್ಮು ಸದ್ದು ಕೇಳುವಾಗಲೇ ನೀವಂತ ಭಾವಿಸಿದ್ದೆ, ರಾತ್ರಿಯಲ್ವಾ ಸ್ವಲ್ಪ ಹೆದರಿಕೆ ಆಯ್ತು” ಅಂತ ಉಮ್ಮ ಸಮಜಾಯಿಷಿ ಕೊಟ್ಟರು.

“ಬನ್ನಿ ಒಳಗೆ ಬನ್ನಿ” ಎಂದು ಅಲ್ಲೇ ಇದ್ದ ಮರದ ಮಣೆಯನ್ನು ಅವರಿಗೆ ನೀಡಿದ ಅಬ್ಬ ನಮ್ಮ ಚಾಪೆಯಲ್ಲಿ ಆಸೀನರಾದರು.

ಬಂದಿದ್ದು ಅಮ್ಮರ್ತೆ ಅಜ್ಜ, ಉಮ್ಮನ ಅಜ್ಜಿಯ ತಂಗಿಯ ಮಗ. ವಯಸ್ಸು ೭೦ ದಾಟಿದ್ದು ಅವರ ನೆತ್ತಿಯ ನೆರಿಗಳಲ್ಲಿ ವೇದ್ಯವಾಗುತ್ತಿತ್ತು. ಆದರೆ ಅವರ ಹಾವಭಾವ, ನಡೆಯುವ ಭಂಗಿಯಲ್ಲಿ ವಯಸ್ಸು ಅಧಿಕಾರ ಸ್ಥಾಪಿಸಲು ಬಿಟ್ಟಿರಲಿಲ್ಲ. ತಲೆಗೂದಲು, ಗಡ್ಡ ಬೆಳ್ಳಗಿದ್ದರೂ ಕಪ್ಪಗಿನ ಮೈ ಕಟ್ಟು ಅವರನ್ನು ಇನ್ನಷ್ಟು ಯೌವ್ವನಕ್ಕೆ ಕೊಂಡೊಯ್ಯುವಂತಿತ್ತು.

“ಮಕ್ಕಳೇ ಹೇಗಿದ್ದೀರಿ” ಎಂದು ಕೇಳುವಾಗ ಇನ್ನೇನು ನಿದ್ರೆಗೆ ಶರಣಾಗಲು ಹೊದಿಕೆಯೊಳಗೆ ನುಸುಳಿ ಮಲಗಿದ್ದ ನಾನು “ಚೆನ್ನಾಗಿದ್ದೇನೆ” ಎಂದು ಹೇಳಿ ಮುಸುಕೆಳೆದುಕೊಂಡು ಎದ್ದು ಕುಳಿತೆ. ಬೆಳಗ್ಗೆ ಹೇಗೂ ಬೇಗನೆ ಶಾಲೆಗೆ ಹೋಗಬೇಕಾದ್ದರಿಂದ ಈ ನಿದ್ದೆಯ ತುರಾತುರಿ. ಅಜ್ಜ ಬಂದರೆ ಕಥೆ ಹೇಳದೆ ಹೋಗುವುದಿಲ್ಲ. ಅವರ ನೀಳ್ಗತೆಗೆಲ್ಲಾ ಒಂದು ವಾರದ ರಾತ್ರಿಗಳು ಸಾಕೆನಿಸುತ್ತಿರಲಿಲ್ಲ. ಅವರ ಕಥೆಗಳಿಗೆ ಊರಿನಲ್ಲಿ ತಲೆದೂಗದವರಿಲ್ಲ. ಮಣೆಯಲ್ಲಿ ಕುಳಿತುಕೊಂಡವರೊಮ್ಮೆ ತಲೆಗೆ ಕಟ್ಟಿದ್ದ ರುಮಾಲನ್ನು ಸಡಿಲಿಸಿ ಮತ್ತೆ ಕಟ್ಟಿಕೊಂಡರು. ಅವರು ಹಾಗೆ ಮಾಡಿದರೆಂದರೆ, ಕಥೆ ಪ್ರಾರಂಭಿಸುತ್ತಾರೆ ಎಂದರ್ಥ. ನಾನು ಹೊದಿಕೆ ಹೊದ್ದುಕೊಂಡು ಬಂದು ಅಜ್ಜನ ಬಳಿ ಕುಳಿತೆ. ಕಣ್ಣು ಬಾಡಿದ್ದ ನನಗೆ ನಿದ್ದೆ ಹಾರಿಹೋಗಿ, ಕಥೆ ಕೇಳಿಸಿಕೊಳ್ಳುವ ಉತ್ಸಾಹಕ್ಕೆ ಮನಸ್ಸು ತಿರುಗಿತು.

ಅಜ್ಜ ಕಥೆ ಶುರು ಮಾಡಿದರು.

-2-

ಆ ತೆಂಗಿನ ಮರದ ಗರಿ ಬಾಗುವಾಗಲೆಲ್ಲಾ ಧೂಪದ ಮರದ ಕೊಂಬೆಯೊಮ್ಮೆ ಇಣುಕುತ್ತದೆ. ಜೋಡಿ ಗುಬ್ಬಚ್ಚಿ ಹಕ್ಕಿಗಳ ಸಲ್ಲಾಪವು ಪ್ರಶಾಂತ ಗದ್ದೆಯಂಚಿಗೆ ಕಾಣುವಷ್ಟು ಸ್ಪಷ್ಟವಾಗುತ್ತದೆ. ನಡು ಮಧ್ಯಾಹ್ನ ಸುತ್ತಲೂ ಗಿಜಿಗುಟ್ಟುವ ಒಂದಷ್ಟು ಹಕ್ಕಿಗಳ ಸದ್ದು. ಬಿದಿರಿನ ಕೀರಲುಗಟ್ಟುವಿಕೆ, ಸುತ್ತಲಿನ ಆ ದಟ್ಟ ಭತ್ತದ ಗದ್ದೆಯನ್ನು ಸಶಬ್ದವಾಗಿರಿಸಲು ಪಕ್ಕದಲ್ಲಿ ಹರಿಯುವ ಸಣ್ಣ ತೊರೆ. ದೂರದಲ್ಲೊಂದು ಕಾಲುದಾರಿ ಗದ್ದೆಯ ದಿಬ್ಬಗಳನ್ನು ಸಂಧಿಸುತ್ತದೆ. ಮೇಲೆ ಆಕಾಶ-ಸುತ್ತ ಹಸಿರು ತುಂಬಿದ ದಟ್ಟಕಾಡು. ಕರಾವಳಿಯ ತಂಗಾಳಿಗೆ ಮೈಮರೆತು ಆಗೊಮ್ಮೆ-ಈಗೊಮ್ಮೆ ತನ್ಮಯಗೊಳ್ಳುವ ಭತ್ತದ ಪೈರು.

ಊರಿಗೆ ಅಪರೂಪವಾಗಿ ಎತ್ತಿನ ಗಾಡಿಗಳು ಬಂದರೂ, ಉಳಿದಂತೆ ಸಂಪರ್ಕ ಯೋಗ್ಯವಾಗಿ ಇರುವುದು ಕಾಲು ದಾರಿಗಳು ಮಾತ್ರ. ಎತ್ತಿನಗಾಡಿ ಬರಬೇಕಾದರೂ ಸಿರಿವಂತರ ಮದುವೆ ನಡೆಯಬೇಕು ಅಥವಾ ಯಾರಾದರೂ ಕಾಯಿಲೆ ಬೀಳಬೇಕು. ಹಾಗಾಗಿ, ಬರುವ ಎತ್ತಿನಗಾಡಿ ನೋಡಲು ಮಣ್ಣಿನ ರಸ್ತೆಯ ಇಕ್ಕೆಲಗಳಲ್ಲೂ ತುಂಬಿ ನಿಲ್ಲುವ ಪ್ರೇಕ್ಷಕರು. ದೂರದಲ್ಲಿ ಕಾಣುವ ಸುಂದರ ಬೆಟ್ಟ ಹಸಿರು ಹೊದ್ದು ಚೆನ್ನಾಗಿ ನಿದ್ರಿಸಿದಂತಿದೆ. ಚುಕ್ಕಿಯಿಟ್ಟಂತೆ ಕಾಣುವ ಒಂದೋ ಎರಡೋ ಹುಲ್ಲಿನ ಮನೆಗಳು. ಮನೆಗಳೆಂದರೆ ಬರೀ ಮಣ್ಣು ಮೆತ್ತಿದ ಗೋಡೆಯ ಮೇಲೆ ಒಟ್ಟು ಹಾಕಿದ ಒಣ ಮುಳಿಹುಲ್ಲಷ್ಟೇ.

ಅಷ್ಟರಲ್ಲೇ ಗಾಳಿ ಜೋರಾಗಿ ಬೀಸಿತು. ತೆಂಗಿನ ಗರಿ ಬಾಗಿತು, ಅಡ್ಡಲಾಗಿದ್ದ ಧೂಪದ ಮರದ ಕೊಂಬೆಯೊಮ್ಮೆ ಅಲುಗಿತು. ಜೋಡಿ ಗುಬ್ಬಚ್ಚಿಗಳು ಹಾರಿ ಭತ್ತದ ಗದ್ದೆಗೆ ಇಳಿದವು. ಅಷ್ಟೇ ತಡ; ಧೈರ್ಯ ಮಾಡಿಕೊಂಡು ಇನ್ನಷ್ಟು ಗುಬ್ಬಚ್ಚಿಗಳು ಗದ್ದೆ ಬದುವಿಗೆ ಹಾರಿ ಬಂದವು.

“ಡಬ್ ಡಬ್, ಡಬ್ ಡಬ್”

ಅಲ್ಯುಮಿನಿಯಮ್ ಡಬ್ಬಿಯನ್ನು ಬಾರಿಸುವ ಸದ್ದು ಗದ್ದೆ ತುಂಬಾ ಪ್ರತಿಧ್ವನಿಸಿದವು. ಆ ಸದ್ದಿಗೆ ಹೆದರಿ ಪೈರು ತಿನ್ನಲು ಬಂದಿದ್ದ ಗುಬ್ಬಚ್ಚಿಗಳೆಲ್ಲಾ ದಿಕ್ಕಾ ಪಾಲಾಗಿ ಹಾರಿದವು.

ಈ ದೃಶ್ಯ ಸುಮಾರು ಎರಡು ಶತಮಾನಗಳಷ್ಟು ಹಳೆಯದ್ದು. ಅದು ಬಂಟವಾಳದ ನೇತ್ರಾವತಿ ನದಿಯ ಉತ್ತರ ದಂಡೆಯ ಮೇಲಿನ ಅಜಿಲಮೊಗರು ಎಂಬ ಊರು. ಸಮೃದ್ಧವಾದ ಭತ್ತದ ಗದ್ದೆ. ಆ ಊರವರಿಗೆಲ್ಲಾ ಕೃಷಿಯೇ ಆಧಾರ. ಕರಾವಳಿಯಲ್ಲಿ ಹೆಸರಾದ ಭತ್ತದ ಕೃಷಿ. ಭತ್ತದ ಕೃಷಿಯೆಂದರೆ ಅಷ್ಟೇನು ಸುಲಭವಲ್ಲ. ಸೂಕ್ಷ್ಮವಾಗಿ ಬೀಜಗಳನ್ನು ಬಿತ್ತಬೇಕು. ಮಳೆಯ ದಿನಗಳಲ್ಲಿ ಬೀಜ ಬಿತ್ತಿ ನೀರು ನಿಲ್ಲುವಂತೆ ಜತನದಿಂದ ಕಾಯುತ್ತಾ ಗದ್ದೆಯ ಸುತ್ತಲೂ ಕಟ್ಟೆ ಕಟ್ಟ ಬೇಕು. ಮುಂದೆ ಬೀಜವೊಡೆದು ಸಸಿ ಕೊನರುತ್ತಿದ್ದಂತೆ ನೀರನ್ನು ಬತ್ತಿಸಿ ಗದ್ದೆಯನ್ನು ಮತ್ತೆ ಕಾವಲು ಕಾಯಬೇಕು.ಇಷ್ಟೆಲ್ಲಾ ಶ್ರಮ ಹಾಕಿದರೆ ಮಾತ್ರ ಬೆಳೆ ಚೆನ್ನಾಗಿ ಬರಬಹುದು.

ಆ ಗದ್ದೆಯಲ್ಲಿ ಇದಿನಬ್ಬ ಎಂಬ ಹತ್ತರ ಹರೆಯದ ಹುಡುಗ ಕೈಯಲ್ಲೊಂದು ತಟ್ಟೆ ಹಿಡಿದು, ಗದ್ದೆಯನ್ನು ಕಾಯುತ್ತಿದ್ದಾನೆ. ಭತ್ತದ ಗದ್ದೆಗೆ ದಾಳಿಯಿಡುವ ಹಕ್ಕಿ ಓಡಿಸಲು ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಿಸುವ ಕೆಲಸವನ್ನು ತಂದೆಯು ಮಗನಿಗೆ ವಹಿಸಿ ಹೊರಟು ಹೋದಾಗ ಇದಿನಬ್ಬನಿಗೆ ಜವಾಬ್ದಾರಿಯ ಕುತೂಹಲ ಮತ್ತು ‘ನಿಭಾಯಿಸಬಹುದೇ?’ ಎನ್ನುವ ಅಳುಕು. ಇದಿನಬ್ಬನ ಕೈಯಲ್ಲಿದ್ದ ಅಲ್ಯೂಮಿನಿಯಂ ತಟ್ಟೆಯನ್ನು ಬೇಸರವಾದಾಂತೆಲ್ಲ ಹೊಲೆಯರ ದುಡಿಯಂತೆ ಬಾರಿಸುತ್ತಾನೆ. ಈ ಕಾರಣದಿಂದ ಸುಮಾರು ಹೊತ್ತು ಯಾವುದೇ ಹಕ್ಕಿಗಳ ಸುಳಿವಿರಲಿಲ್ಲ. ಸುಮ್ಮನೆ ಕುಳಿತು ಬೇಸರವಾಗಿ ಇದಿನಬ್ಬ ತೂಕಡಿಸಲಾರಂಭಿಸಿದ. ಅಷ್ಟರಲ್ಲಿ ಗುಬ್ಬಚ್ಚಿಗಳು ಎಲ್ಲಿದ್ದವೋ, ಏಕಾಏಕಿ ಗದ್ದೆಗೆ ದಾಳಿಯಿಟ್ಟಿದ್ದವು. ಆ ಬಳಿಕ ಬರುವ ಎಲ್ಲಾ ಹಕ್ಕಿಗಳನ್ನು ದೂರ ಅಟ್ಟುತ್ತಾ ಇದಿನಬ್ಬ ತುಸು ಹೆಚ್ಚೇ ಜಾಗರೂಕನಾದನು.

ಸುಗ್ಗಿ ಸಮಯದಲ್ಲಿ ತುಳು ಪಾಡ್ದನಗಳನ್ನು ಹಾಡುತ್ತಾ ಆಯಾಸ ತಣಿಸಿಕೊಳ್ಳುವುದು ತುಳುವರ ಸಂಸ್ಕೃತಿ. ಇದಿನಬ್ಬನಿಗೂ ಹಾಡುವ ಗೀಳು. ಮನೆಯವರಿಂದ ಕಲಿತ ಮುಹಿಯದ್ದೀನ್ ಮಾಲೆಯನ್ನು ಹಾಡುತ್ತಾ ಗದ್ದೆಯನ್ನು ತಾನೂ ಸಶಬ್ಧವಾಗಿರಿಸಲು ಪ್ರಯತ್ನಿಸುತ್ತಿದ್ದ.

ಅಜ್ಜ ಬಂದರೆ ಕಥೆ ಹೇಳದೆ ಹೋಗುವುದಿಲ್ಲ. ಅವರ ನೀಳ್ಗತೆಗೆಲ್ಲಾ ಒಂದು ವಾರದ ರಾತ್ರಿಗಳು ಸಾಕೆನಿಸುತ್ತಿರಲಿಲ್ಲ. ಅವರ ಕಥೆಗಳಿಗೆ ಊರಿನಲ್ಲಿ ತಲೆದೂಗದವರಿಲ್ಲ. ಮಣೆಯಲ್ಲಿ ಕುಳಿತುಕೊಂಡವರೊಮ್ಮೆ ತಲೆಗೆ ಕಟ್ಟಿದ್ದ ರುಮಾಲನ್ನು ಸಡಿಲಿಸಿ ಮತ್ತೆ ಕಟ್ಟಿಕೊಂಡರು.

“ಕಳವ್ ಪರಯಲ್ಲ ಎನ್ನುಮ್ಮ ಚೊನ್ನಾರೆ

ಕಳ್ಳಂಡೆ ಕೈಯಿಲಿ ಪೊನ್ನು ಕೊಡುತ್ತೋವರ್ ”

ಪುಟ್ಟ ಪೋರನ ಪದ್ಯ ಇಡೀ ಗದ್ದೆಯನ್ನು ಪ್ರತಿಧ್ವನಿಸಿತು. ಎಲ್ಲಿಂದಲೋ ಮತ್ತೆ ಹಾರಿ ಬಂದ ಕೆಲವು ತುಂಟ ಗುಬ್ಬಚ್ಚಿ ಹಿಂಡುಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತೆನೆಯನ್ನು ತಿನ್ನಲು ಮತ್ತೆ ಗದ್ದೆಗೆ ಇಳಿದಾಗ ಇದಿನಬ್ಬನಿಗೆ ದಿಗಿಲು. ಮತ್ತೂ ಜೋರಾಗಿ ಹಾಡು ಹಾಡುತ್ತಾ ತಟ್ಟೆ ಬಾರಿಸತೊಡಗಿದ. ಈ ಬಾರಿ ಹಕ್ಕಿಗಳು ಸ್ವಲ್ಪ ದೂರ ಹಾರಿ ಹೋದವು.

ಹೀಗೆ ಇದಿನಬ್ಬನ ವಿವರ ಕೊಡುತ್ತಾ, ಕಥೆಯ ಮಧ್ಯೆ ಅಜ್ಜ ಕೆಮ್ಮಿದಾಗ, ನಾನು ಮಧ್ಯೆ ಬಾಯಿ ಹಾಕುತ್ತಾ “ಅಲ್ಲಜ್ಜಾ ಈ ಗುಬ್ಬಚ್ಚಿ ಅಂದ್ರೆ ಏನು?” ಎಂದು ಕುತೂಹಲ ವ್ಯಕ್ತ ಪಡಿಸಿದೆ.

ಅಜ್ಜ ತಮ್ಮ ಗಂಟಲು ಸರಿ ಪಡಿಸುತ್ತಾ, “ನೋಡು ಮಗೂ, ಈ ಗುಬ್ಬಚ್ಚಿ ಎನ್ನುವುದು ನಗರ ಮತ್ತು ಹಳ್ಳಿಗಳಲ್ಲಿ ಸರ್ವೇ ಸಾಧಾರಣವಾಗಿರುವ ಪುಟ್ಟ ಹಕ್ಕಿ” ಅಜ್ಜ ನನ್ನ ಸಂಶಯ ಪರಿಹರಿಸಿದರು. ಅಷ್ಟರಲ್ಲೇ ಉಮ್ಮ “ಈಗ ಎಲ್ಲಿ ಉಂಟು, ಹಿಂದಿನಂತ ಗದ್ದೆಯೇ ಕಡಿಮೆ. ಬಹುಶಃ ನೀವು ದೊಡ್ಡವರಾದ ಮೇಲೆ ಅವುಗಳನ್ನು ಕೇವಲ ಚಿತ್ರದಲ್ಲಿ ಮಾತ್ರ ನೋಡಬೇಕಾದ ಪರಿಸ್ಥಿತಿ ಬರಬಹುದೋ ಏನೋ” ಎಂದು ಮಕ್ಕಳೆಡೆಗೆ ನೋಡುತ್ತಾ ಉತ್ತರಿಸುತ್ತಿದ್ದರೆ ಅವರ ಹಕ್ಕಿಗಳ ಮೇಲೆ ಅವರಿಗೆಷ್ಟು ಅಕ್ಕರೆ ಎಂಬುದು ಗೊತ್ತಾಗುತ್ತಿತ್ತು.

ಕಥೆಯ ವೇಗಕ್ಕೆ ಕಡಿವಾಣ ಬಿದ್ದಿದ್ದಕ್ಕೆ, ಅಬ್ಬ ಅಸಮಾಧಾನದಿಂದ “ಅದಿರಲಿ, ನೀನು ಮಧ್ಯೆ ಮಧ್ಯೆ ನೂರು ಪ್ರಶ್ನೆ ಕೇಳಬಾರದು” ಎಂದು ಪ್ರೀತಿಯಿಂದ ಗದರಿಸಿ ಬಿಟ್ಟರು.

“ಇರಲಿ ಮಕ್ಕಳ ಕುತೂಹಲ ಅಲ್ವಾ?” ಅಂತ ಅಜ್ಜನ ಜಾಮೀನು. “ಸರಿ ನೀವು ಕಥೆ ಮುಂದುವರಿಸಿ” ಅಮ್ಮನ ಹಸಿರು ನಿಶಾನೆ ಸಿಕ್ಕೊಡನೆ ಮತ್ತೆ ಕಥೆ ಹಳಿಗೆ ಮರಳಿತು.

ಎರಡಿಂಚು ಅಗಲದ ಕೈಗಳು ದಬದಬನೆ ತಟ್ಟೆಯನ್ನು ಬಾರಿಸಿದ ಸದ್ದಿಗೆ ಬೆದರಿ ಇನ್ನೊಂದು ಮೂಲೆಗೆ ಹಾರುತ್ತಿದ್ದ ಹಕ್ಕಿಗಳು ಮತ್ತೆ ಅಲ್ಲಿಗೇ ಬರತೊಡಗಿದವು. ಇದಿನಬ್ಬ ದಿಕ್ಕು ಬದಲಿಸಿ ಪಡುವಣ ಮೂಲೆಗೆ ಹೋಗಿ ಮತ್ತೆ ತಟ್ಟೆ ಬಾರಿಸುವಾಗಲೂ ಇದೇ ಕಥೆ.

ಇದಿನಬ್ಬನಿಗೆ ಈ ಬಾರಿ ರೋಸಿ ಹೋಯಿತು ನೋಡಿ. ಮೂರ್ನಾಲ್ಕು ಬಾರಿ ಈ ರೀತಿ ಪುನರಾವರ್ತನೆಯಾದಾಗ ಇದಿನಬ್ಬ ಕುಪಿತನಾದ. ಪಕ್ಷಿಗಳ ಈ ತರದ ಮಂಗನಾಟಕ್ಕೆ ಒಂದು ಗತಿ ಕಾಣಿಸಬೇಕೆಂದು ನಿರ್ಧರಿಸಿ ಗದ್ದೆಗೆ ಇಳಿದು ಓಡಿಸಲು ಶುರುವಿಟ್ಟ. ಆದರೆ ಗದ್ದೆಗಳಲ್ಲಿ ಮೂಡುವ ತನ್ನದೇ ಕಾಲ್ಹೆಜ್ಜೆಗಳ ಅರಿವು ಸಣ್ಣ ಬಾಲಕನಿಗಿರಲಿಲ್ಲ. ಗುರಿಯೊಂದೇ, ಹಕ್ಕಿಗಳು ಪೈರನ್ನು ತಿನ್ನಲೇ ಬಾರದೆಂದು. ಶತಪಥ ನಾಲ್ಕು ಸಲ ನಡೆಯುವ ಹೊತ್ತಿಗೆ ಗದ್ದೆ ತುಂಬಾ ಪಾದದ ಗುರುತುಗಳು ತುಂಬಿ ಹೋದವು.

“ಉಮ್ಮಾ ಈ ಗದ್ದೆಯಂದರೆ ಅಜ್ಜಿ ಮನೆಯಲ್ಲಿದೆಯಲ್ವಾ, ಅಂತದ್ದಾ?” ನನ್ನ ಕುತೂಹಲ ಗರಿಗೆದರಿತ್ತು.

“ಹೂಂ, ಮಗೂ, ನೀನು ನೋಡಿದ್ದು ಭತ್ತದ್ದೇ ಗದ್ದೆ. ಆದರೆ ಆ ಭತ್ತದ ಕೃಷಿ ಮಾಡುವುದು ಹೇಳಿದಷ್ಟು ಸುಲಭವಲ್ಲ. ಒಮ್ಮೆ ಬೀಜವೊಡೆದು ಕೊನರಿದ ಬಳಿಕ ಅಲ್ಲಿ ನೀರಿನಂಶ ಅಧಿಕವಿರಬಾರದು. ಇತರ ಬೀಜಗಳಿಗೂ ತಥೈವ. ಒಮ್ಮೆ ಬೀಜ ಬಿತ್ತಿದ ಬಳಿಕ ಸಸಿಗಳು ಚಿಗುರುವವರೆಗೆ ಬೀಜದ ಸುತ್ತ ನೀರು ನಿಲ್ಲಲೇಬಾರದು. ಹಸಿ ಮಣ್ಣು ಮಾತ್ರ ಬೆಳವಣಿಗೆಗೆ ಸಹಕಾರಿ”.

ಅಜ್ಜನ ಮಾತಿಗೆ ಕೂಡಿಕೊಂಡ ಅಬ್ಬ, “ನೋಡು, ನೀನು ಪಠ್ಯ ಪುಸ್ತಕದಲ್ಲಿ ಓದಿರುವ ಅತಿವೃಷ್ಟಿ- ಅನಾವೃಷ್ಟಿ ಅಂದರೆ ಗೊತ್ತಲ್ವಾ. ಇವೆರಡೂ ಸಮಸ್ಯೆಗಳು ನಿಜವಾಗಿ ರೈತರಿಗೆ ಅತಿಯಾಗಿ ಕಾಡುವಂಥದ್ದು. ಸಸಿಗಳು ಮೂಡುವ ಹೊತ್ತಿಗೆ ಅಸಾಮಾನ್ಯ ಮಳೆ ಬಂದರೆ ನೀರು ನಿಂತು ಚಿಗುರೊಡೆದ ಬೀಜಗಳು ಕೊಳೆತು ಹೋಗಿ ಫಸಲು ಕುಂಠಿತವಾಗುತ್ತದೆ. ಮನುಷ್ಯನ ಇಂತಹ ಅಪರಿಮಿತ ಪರಿಸರದ ಮೇಲಿನ ಹೇರಿಕೆ, ನಿರಂತರ ಸಂಪನ್ಮೂಲಗಳ ಮೇಲಿನ ಅತ್ಯಾಚಾರಗಳೇ ಮಳೆ, ಬಿಸಿಲು, ಚಳಿಗಳನ್ನು ದಿಕ್ಕು ಬದಲಿಸುವಂತೆ ಮಾಡುವುದು. ನಾವು ನಮ್ಮ ಪರಿಸರದ ಮೇಲೆ ನಡೆಸಿದ ಅನೈಸರ್ಗಿಕ ಪ್ರಯೋಗಗಳು ಪರಿಸರದ ದೆಸೆಯನ್ನು ಬದಲಿಸುವುದು ಸುಳ್ಳಲ್ಲ”.

ಅಬ್ಬನ ವಿವರಣೆ ಕೇಳಿದ ಅಜ್ಜನಿಗೆ ಖುಷಿಯಾಗಿರಬೇಕು‌‌. ಒಂದು ಬಾರಿ ಅಬ್ಬನನ್ನು ಅಪಾದಮಸ್ತಕ ನೋಡಿದವರೇ,

“ಆಕಾಶ ನೋಡಿ ಉಗುಳಿದರೆ , ಬೀಳುವುದು ನಮ್ಮ ಮುಖಕ್ಕೆ” ಎಂಬಂತೆ ನಾವೆಷ್ಟು ವ್ಯತಿರಿಕ್ತವಾಗಿ ಪರಿಸರದೊಡನೆ ವ್ಯವಹರಿಸುತ್ತವೆಯೋ ಪರಿಸರವೂ ಅಷ್ಟೇ ಪ್ರತಿಕೂಲವಾಗುತ್ತದೆ” ಎಂದರು. ನಾವೂ ಹೌದೆಂದು ತಲೆಯಾಡಿಸಿದೆವು‌.

“ಈ ಹಸಿಮಣ್ಣು ನೀರಿನಂಶ ಹೆಚ್ಚಿರುವುದರಿಂದ ಕುಳಿ ಬಿದ್ದ ಕಾಲ ಹೆಜ್ಜೆಗಳ ಗುರುತಿನಲ್ಲಿ ನೀರು ನಿಂತರೆ ಬೀಜ ಕೊಳೆತು ಹೋಗುತ್ತದೆ. ಈ ಬಗ್ಗೆ ಆ ಸಣ್ಣ ಹುಡುಗ ಇದಿನಬ್ಬನಿಗೆಷ್ಟು ತಿಳುವಳಿಕೆ ಇದ್ದೀತು. ಹಕ್ಕಿ ಓಡಿಸುವ ಭರದಲ್ಲಿ ಇಡೀ ಗದ್ದೆಯಲ್ಲೆಲ್ಲಾ ನಡೆದೇ ಬಿಟ್ಟಿದ್ದ. ಅದೇ ಹೊತ್ತಿಗೆ ತಂದೆ ಅಬ್ದುರ್ರಹ್ಮಾನ್ ಪ್ರತ್ಯಕ್ಷ ಆದರು. ಅವರು ಆ ಉರಿನಲ್ಲೇ ಮಹಾ ಕೋಪಿಷ್ಟ ಬೇರೆ. ಗದ್ದೆಯಲ್ಲಿ ಮೂಡಿದ ಹೆಜ್ಜೆ ಗುರುತು ಕಂಡ ಕೂಡಲೇ ಅವರ ರೋಷ ನೆತ್ತಿಗೇರಿತು. ಹಲ್ಲುಗಳನ್ನು ಕಟಕಟನೆ ಕಡಿಯುತ್ತಾ “ಏನೋ ಇದು ರಂ.. ಮಗನೇ, ಬೇವ‌… ಅಷ್ಟು ಗೊತ್ತಾಗಲ್ವಾ ನಿನಗೆ. ಇರು ನಿನಗಿದೆ” ಎನ್ನುತ್ತಾ ಬೆತ್ತ ಹುಡುಕಲು ಪೊದೆಗಳ ಕಡೆ ತಿರುಗಿದರು. ನೋಡಿ, ಈ ಕೋಪಕ್ಕೂ ಒಂದು ಕಾರಣವಿದೆ. ಅಂದಿನ ದಿನಗಳಲ್ಲಿ ಗದ್ದೆಯೊಂದು ಹಾಳು ಬಿದ್ದರೆ ಊಟದ ತಟ್ಟೆಗೆ ಕಲ್ಲು ಬಿದ್ದಂತೆ. ಮೊದಲೇ ಒಂದ್ಹೊತ್ತಿನ ಊಟಕ್ಕೂ ತಿಣುಕಾಡುವ ಕಡುಬಡತನ.

ತಂದೆ ಅಬ್ದುರ್ರಹ್ಮಾನ್ ರ ಕೆಂಡ ಉಗುಳುವ ಕಣ್ಣುಗಳು ನೋಡುತ್ತಿದ್ದಂತೆ ಇದಿನಬ್ಬ ಥರಥರ ನಡುಗಿಬಿಟ್ಟ. ಅಪ್ಪ ಕೈಗೆ ಸಿಕ್ಕ ಕಾಡು ಬೆತ್ತವೊಂದನ್ನು ಹಿಡಿದು ಸರಿಯಾಗಿ ಬಾರಿಸತೊಡಗಿದರು.

“ಮೂರ್ಖ ಮುಂ…. ಮಗ, ಸೂ‌… ಮಗ ಯಾವ ಜನ್ಮವೋ, ಗದ್ದೆ ನೋಡಲು ನಿಲ್ಲಿಸಿ ಹೋದರೆ ಗದ್ದೆಯನ್ನೇ ಹಾಳು ಮಾಡಿ ಬಿಟ್ಟಿದ್ದೀಯಾ, ಅಯೋಗ್ಯ”. ಆ ಪುಟ್ಟ ಪೋರನಿಗೆ ಪೆಟ್ಟು ತಾಳಲಾಗಲಿಲ್ಲ. ಇದಿನಬ್ಬ ಜೋರಾಗಿ ಅಳತೊಡಗಿದ. ಅಳಹತ್ತಿದ ಇದಿನಬ್ಬನ ನೋವಿಗೆ ಮೂಕ ಪ್ರೇಕ್ಷಕರಾಗಿ ಪೈರುಗಳು ಮತ್ತು ಕಾಡು ಹಕ್ಕಿಗಳು ಬಿಟ್ಟರೆ ದೃಕ್ ಸಾಕ್ಷಿಗಳ್ಯಾರೂ ಅಲ್ಲಿರಲಿಲ್ಲ. ಬಾಸುಂಡೆ ಬರುವಂತೆ ಬಾರಿಸುತ್ತಲೇ ಇದ್ದ ಅಪ್ಪನಿಗೆ ಸಣ್ಣ ಹುಡುಗನ ಆರ್ತನಾದ ಕೇಳುವಷ್ಟು ತಾಳ್ಮೆಯೂ ಇರಲಿಲ್ಲ.

ಆ ಹೊತ್ತಿಗೆ ಅಲ್ಲಿದ್ದ ಪೊದೆಗಳೆಲ್ಲಾ ಬೆತ್ತಗಳಾಗಿ ಮಾರ್ಪಟ್ಟಿದ್ದವು. ಒಂದು ಹುಡಿಯಾದಂತೆ ಮತ್ತೊಂದು, ಎಲೆಗಳನ್ನು ಕಿತ್ತು ಕೋಲಿನಿಂದ ಸರಿಯಾಗಿ ಬಾರಿಸತೊಡಗಿದರು. ಒಂದೆಡೆ ಗದ್ದೆ ಹಾಳಾದ ಕೋಪ, ಇನ್ನೊಂದೆಡೆ ಫಸಲು ಕಡಿಮೆಯಾಗುವ ಭೀತಿ; ಹೊಡೆತಗಳೆಲ್ಲವೂ ಹುಡುಗನ ಬೆನ್ನಿನಲ್ಲಿ ಕೆಂಪು ಚಿತ್ರಗಳಾಗಿ ಮೂಡುತ್ತಿದ್ದವು. ಕೊನೆಗೆ ಕೈ ಸೋತು ಕೋಪ ತಣಿಯದೆ ಮಗನನ್ನು ಹಿಡಿದು “ಹಾಳಾಗಿ ಹೋಗು, ಇನ್ನು ಮನೆಗೆ ಬರಬೇಡ” ಎನ್ನುತ್ತಾ ಕಾಡು ಮುಳ್ಳಿನ ಪೊದೆಗೆ ಎತ್ತಿ ಎಸೆದು ಅಬ್ದುರ್ರಹ್ಮಾನ್ ಹೊರಟೇ ಹೋದರು.

ಪಾಪ, ಇದಿನಬ್ಬ ಸಣ್ಣವ. ತಿಳಿಯದೆ ಮಾಡಿದ ತಪ್ಪಿನಿಂದ ಅಪ್ಪನ ರೌದ್ರಾವತಾರಕ್ಕೆ ಬೆದರಿಹೋಗಿದ್ದ. ಗಿಡಗಂಟಿಗಳ ಮುಳ್ಳಿನಿಂದ ಹೇಗೋ ಕಷ್ಟಪಟ್ಟು ಬಿಡಿಸಿಕೊಂಡು ಹೊರಬರುವಷ್ಟರಲ್ಲಿ ಹೊತ್ತು ಮೀರಿತ್ತು. ಅಲ್ಲಲ್ಲಿ ಚರ್ಮ ಕಿತ್ತು, ದೇಹವೀಡೀ ರಕ್ತಸಿಕ್ತವಾಗಿತ್ತು. ನರಳುತ್ತ ಕುಂಟುತ್ತ ಮನೆಗೆ ಬಂದ ಇದಿನಬ್ಬ ಚಾವಡಿಯ ಬಳಿ ಜೋಡಿಸಿಟ್ಟ ಅಕ್ಕಿ ಮೂಟೆಗಳ ಬಳಿ ಅಂಗಾತ ಪವಡಿಸಿದ. ಏದುಸಿರು ಬಿಡುತ್ತಿದ್ದ ಹುಡುಗನ ಕಣ್ಣಲ್ಲಿ ತಂದೆಯ ಮೇಲಿನ ಭಯ ಇನ್ನೂ ಮಾಸಿರಲಿಲ್ಲ. ಮನೆಕೆಲಸ ಮುಗಿಸಿ ಅಡುಗೆ ಮನೆಯಿಂದ ಹೊರ ಬಂದ ಹುಡುಗನ ತಾಯಿ ಹಲೀಮ ಮಗನನ್ನು ಕಂಡು ಅವಾಕ್ಕಾದರು.

(ಈ ಕಾದಂಬರಿಯ ಮುಂದಿನ ಕಂತುಗಳು ಪ್ರತೀ ಭಾನುವಾರ ಪ್ರಕಟವಾಗುತ್ತವೆ)