ಲಿಪಿಗೀಗ ೨೭!

ಕಾಲೆಂಡಿರಿನ ದಿನಾಂಕಗಳನ್ನ ಮರೆತು ಕೆಲಸ ಮಾಡುವವಳು ಲಿಪಿ
ಅಂದೆಲ್ಲೋ ಪುಸ್ತಕ ಬಿಡುಗಡೆ, ಅವಳ ಲೇಖನ, ಸಂಗೀತ ಕಛೇರಿ
ಇದಷ್ಟಕ್ಕೆ ಕಾಲೆಂಡಿರಿನ ಕಡೆಗೆ ಮುಖ!

ಕಾಲಕಾಲಕ್ಕೆ ವಾಟ್ಸಾಪಿನಲ್ಲಿ ಬರುವ ಗೆಳೆಯರ ಮದುವೆಯ
ಅದ್ದೂರಿ ಆಮಂತ್ರಣ ಪತ್ರಿಕೆಗಳು, ಶುಭಾಶಯಗಳು
೮ ತಿಂಗಳ ಹಿಂದಿನ ಮದುವೆಯ ಬಗ್ಗೆ ಮುಂಚೆ ಹೇಳಲಿಲ್ಲ
ಎಂದು ಇನ್ನೂ ಮುನಿಸಿಕೊಂಡಿರುವ ಗೆಳೆಯನ ಮೆಸೇಜುಗಳು
ಅದೇ ಮದುವೆಯ ದಿವಸ ಒಡೆದಿರುವ ಮನಸ್ಸಿಗೆ
ಇನ್ನೂ ಮುಲಾಮು ಹಚ್ಚುವ ಕೆಲಸ ಮಾಡಲು ಬಯಸುವ ಲಿಪಿ

ಆಫೀಸಿನ ಕೊಲೀಗಿನ ಮಗು ಅವಳನ್ನ ಆಂಟಿ ಎಂದು ಕರೆದಾಗ
ಚಕ್ಕನೆ ತಿರಗಲು ಮನಸ್ಸು ಬಾರದ ಮೊಗ
ಅಂಗಡಿಗೆ ಹೋದರೆ ಕ್ಯಾಷ್ ಕೌಂಟರಿನ ಹುಡುಗಿ ಆಂ… ಎಂದು
ಮೇಡಂ ಎಂದು ಕರೆದಾಗ ಮುಖದಲ್ಲಿ ಸಂತಸ.

ಆಗಾಗ ಎಲ್ಲಾ ದಾಖಲೆಗಳಲ್ಲಿಯೂ ವಯಸ್ಸನ್ನು ನಮೂದಿಸಬೇಕೆಂದು
೨೫ ಎಂದು ಬರೆದಾಗ ಅದೇ ಸಾಫ್ಟ್ವೇರ್ ಅವಳ ವಯಸನ್ನ
ಸರಿಯಾಗಿ ನಮೂದಿಸಿ ಅಪ್ಡೇಟ್ ಮಾಡುವಾಗಲಿನ ಬೇಸರಿಕೆ.

ಅಲ್ಲೆಲ್ಲೋ ಚೆಂದದ ಹುಡುಗ ಕಂಡರೆ ನಾಚಿಕೆಯಾಗಬೇಕೆಂದು
ಪರಿತಪಿಸುವ ಮನಸ್ಸಿಗೆ ಅವಳ ವಯಸ್ಸಿನ ಪದೇ ಪದೇ ನೆನಪು
ನಾಗರಹಾವಿನ ವಿಷ್ಣುವರ್ಧನನೂ ಅವಳ ಕೆನ್ನಯನ್ನ
ಕೆಂಪು ಮಾಡಲಿಲ್ಲ!

ಆಗಾಗ ವಾಟ್ಸಾಪಿನಲ್ಲಿ ಫಾರ್ವಡ್ ನಲ್ಲಿ ಸಿಗುವ
ಮಗು ಮಾಡಿಕೊಳ್ಳುವ ಸರಿ ವಯಸ್ಸು ಎಂಬ ಲೇಖನ
ಮತ್ತೆಲ್ಲೋ ಹೊಸದಾಗಿ ಆಫೀಸಿಗೆ ಸೇರಿಕೊಂಡವನು
ಮ್ಯಾಮ್ ಅಂದು ಕರೆಯುವ ಪರಿ.

ಗೆಳತಿಯರ ಗುಂಪಿನಲ್ಲಿ ಈಗ ಮನೆ, ಮಕ್ಕಳು, ಹೋಮ್ ಲೋನ್
ಕಾರ್ ಲೋನ್, ಗೋಲ್ಡ್ ಲೋನ್ ಎಂಬ ತಲೆಬುಡವಿಲ್ಲದ
ಮಾತುಗಳು, ಚರ್ಚೆಗಳು.

ಅರ್ಥವೇ ಆಗದ ಹೊಸ ಇಂಟರ್ನಿನ ಭಾಷೆ
ಅವನಿಗೂ ಅವಳಿಗೂ ೨ ಜನರೇಷನ್ ವ್ಯತ್ಯಾಸ
೧೯ ಕ್ಕೆ ನಾ ಹಾಗಿರಲಿಲ್ಲ ಎಂದು
ಬಡಬಡಿಸಿ ಕೆಲಸ ಮಾಡುವ ಪರಿ

ಕೆಲಸ ಮಾಡುವವಳು, ಮಾಡಿಸುವವಳು ಎರಡೂ ಆಗಿ
ಹೈರಾಣವಾಗಿ ಮೂಲೆಯಲ್ಲಿ ಕಣ್ಣೂದಿಸಿಕೊಂಡ ಪರಿ
ಈ ಹಳೇ ಟಾಪ್ ಕೊಂಚ ಮೈ ಕಾಣಿಸುತ್ತದೆ ಎಂದು ಮತ್ತೆ
ವಾರ್ಡ್ ರೋಬಿಗಿಡುವ ಪರಿ
ಅಯ್ಯೋ ಇನ್ನೂ ಸಣ್ಣಗಾಗಬೇಕು ಎಂದು ದಿನಾ ದಿನಾ
೪ ಕಿಮೀ ಓಡುವ ಹುಡುಗಿ

೩೦ ವಯಸ್ಸಿನ ಒಳಗಿರುವವರಿಗೆ ಮಾತ್ರ
ಇನ್ನು ಲೇಖನ ಬರೆಯುವ ಅವಕಾಶ
ಎನ್ನುವ ಯುವ ಮಾಗಝೈನಿನ ಎಡಿಟರ್
ಡೆಡ್ಲೈನ್; ಭಯ

ಹುಡುಗರೇ ಜಾಸ್ತಿ ಗೆಳೆಯರಿರುವ ಪ್ರಪಂಚದಲ್ಲಿ
ಮೀಟಿಂಗ್, ಕರೆಗಳು ಬಂದಾಗ ಸಮಾಜಕ್ಕೆ
ತಪ್ಪು ಎಂದು ಅನ್ನಿಸುತ್ತದೋ ಎಂಬ ದುಗುಡ.

ಅಲ್ಲಿಗೆ ಚಿಕ್ಕವಳೂ ಅಲ್ಲ, ದೊಡ್ಡವಳೂ ಅಲ್ಲ
ಅಪ್ಪಟ ಟೀನೇಜರ್ ಥರ ಅನ್ನಿಸಿದರೂ
ಲಿಪಿಗೀಗ ೨೭!

ಮೇಘನಾ ಪ್ರಸ್ತುತ ಬೆಂಗಳೂರು ನಿವಾಸಿ.
ಇವರ ಕಥೆ, ಕವನ ಮತ್ತು ಲೇಖನಗಳು ವಿವಿಧ ಆನ್ಲೈನ್ ಮತ್ತು ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ.
ಸಂಗೀತ, ಓದು ಮತ್ತು ಪ್ರವಾಸ ಇವರ ಇತರೆ ಹವ್ಯಾಸಗಳು.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)