ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು. ಆದರೆ ಇಂತಹ ಸ್ಥಿತಿಯಲ್ಲಿಯೂ ಪ್ರಭುತ್ವವನ್ನು ವಿಡಂಬನೆ ಮಾಡುವುದಿದೆಯಲ್ಲ ಅದು ಸಾಮಾನ್ಯವಾದುದಲ್ಲ.
ಶಿವಕುಮಾರ್ ದಂಡಿನ ಅವರ ಮೋಹದ ಪಥವೂ, ಇಹಲೋಕದ ರಿಣವೂ ಕವನ ಸಂಕಲನ ಬಗ್ಗೆ ಶ್ರೀದೇವಿ ಕೆರೆಮನೆ ಲೇಖನ

 

ನನಗೊಂದು ಕೆಟ್ಟ ಗುಣವಿದೆ. ಸಭೆಗಳಲ್ಲಿ ಯಾರಾದರೂ ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದರೆ ಅಥವಾ ಉಪನ್ಯಾಸ ನೀಡುತ್ತಿದ್ದರೆ ಸುಮ್ಮನೆ ಯಾವುದೋ ಪುಸ್ತಕವನ್ನು ತಿರುವಿ ಹಾಕುವುದು. ಅಂದೂ ಹಾಗೇ ಆಯಿತು. ಧಾರವಾಡದ ಸಾಹಿತ್ಯಸಂಭ್ರಮದಲ್ಲಿ. ನಮ್ಮ ಮಾತುಕತೆ ಮುಗಿಸಿ ವೇದಿಕೆಯಿಂದ ಕೆಳಗೆ ಇಳಿದಾಗ ಕೈಗೊಂದಿಷ್ಟು ಪುಸ್ತಕ ಬಂತು. ವೇದಿಕೆಯ ಮುಂಭಾಗದಲ್ಲಿ ಕುಳಿತವಳು ಆಗತಾನೆ ಕೈಗೆ ಬಂದ ಪುಸ್ತಕಗಳನ್ನು ಸುಮ್ಮನೆ ತಿರುವಿ ಹಾಕುತ್ತಿದ್ದೆ.

ಬಹುದೂರದ ಕನಸು ಕರಗುವ ಮುಂಚೆ
ಕೈ ಚಾಚಿ ತಬ್ಬಿಹಿಡಿ ನಲ್ಲೆ ಬಿಗಿದಪ್ಪಿ
ಬಿಗಿ ಸಡಿಲಿಸಬೇಡ ಹಿತ ಮರುಕಳಿಸಲಿ
ಕೈಗೆರೆಗಳು ಮಾತಾಡಲಿ ಪಿಸುದನಿಯಲಿ
ಸಾಲುಗಳು ತಟ್ಟನೆ ಗಮನ ಸೆಳೆದವು. ಅರೆರೆ ಖಡಕ್ ಖಾಕಿಯೊಳಗೆ ಇಂತಹ ನವಿರು ಭಾವಗಳೇ….!!!?? ಓದುತ್ತ ನನ್ನನ್ನೇ ನಾನುಪ್ರಶ್ನಿಸಿಕೊಂಡೆ.

ಶಿವಕುಮಾರ್ ದಂಡಿನ ಧಾರವಾಡದ ಲೋಕಾಯುಕ್ತ ಎಸ್ ಪಿ. ಪೋಲಿಸ್ ಇಲಾಖೆಯಲ್ಲೂ ಇಂತಹ ಸಂವೇದನೆ ಇರಲು ಸಾಧ್ಯವೇ ಎಂದು ನಾನು ಕೇಳಲು ಕಾರಣವಿದೆ. ಕೆರೆಮನೆ ಮನೆತನದಲ್ಲಿ ಗಂಡುಮಕ್ಕಳೆಲ್ಲ ಮೃದುಮಾತಿನವರಂತೆ. ಆದರೆ ಸಿಪಿಐ ಆದ ಅಣ್ಣ ಕೃಷ್ಣಾನಂದನ ಮಾತು ಈಗೀಗ ಒರಟಾಗುತ್ತಿರುವುದನ್ನು ಗಮನಿಸಿದ್ದೇನೆ. ಹೀಗಾಗಿ ಎಸ್ ಪಿ ಒಬ್ಬರು ಇಷ್ಟುಸೂಕ್ಷ್ಮ ವಾಗಿ ಬರೆಯುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇ ನನಗೆ ಒಂದಿಷ್ಟು ಸಮಯ ಬೇಕಾಯಿತು. ಪೋಲಿಸ್ ಇಲಾಖೆ ಎಂದರೆ ತೀರಾ ಖಡಕ್ಕಾದ ಇಲಾಖೆ. ತಾವಷ್ಟೇ ಸಾಹಿತ್ಯ ರಚಿಸುವವರು ಎನ್ನುವ ಅಕಾಡೆಮಿಕ್ ವಲಯದಂತೆ ಸದಾ ಸಾಹಿತ್ಯದ ಸಾಂಗತ್ಯದಲ್ಲೇ ಇರಬಹುದಾದ ವೃತ್ತಿ ಅಲ್ಲ ಅದು. ತೀರಾ ಸಂವೇದನೆಯನ್ನೂ ನಿರೀಕ್ಷಿಸುವಂತಿಲ್ಲ. ಅದಕ್ಕೇ ಈ ಸಂವೇದನೆ ಹುಬ್ಬೇರಿಸುವಂತೆ ಮಾಡಿತು.

ಒಂದು ವ್ಯವಸ್ಥೆಯ ಭಾಗವಾಗಿ ಆ ವ್ಯವಸ್ಥೆಯನ್ನು ಹೊರಗೆ ನಿಂತು ಗಮನಿಸುವುದು ಎಲ್ಲರಿಂದಲೂ ಆಗದ ಮಾತು. ಅದರಲ್ಲೂ ವ್ಯವಸ್ಥೆಯನ್ನು ವಿಮರ್ಶಾತ್ಮಕವಾಗಿ ನೋಡುವುದಕ್ಕೆ ಮತ್ತು ಅದನ್ನು ದಾಖಲಿಸುವುದಕ್ಕೆ ಖಂಡಿತಾ ಎಂಟೆದೆ ಬೇಕು. ಎಷ್ಟೋ ಸಲ ಇಷ್ಟವಿಲ್ಲದಿದ್ದರೂ ಆ ವ್ಯವಸ್ಥೆಯೊಳಗೆ ಇಳಿಯಲೇಬೇಕಾಗುತ್ತದೆ. ಮನಸ್ಸಿಲ್ಲದಿದ್ದರೂ ಪ್ರಭುತ್ವದ ಭಾಗವಾಗಬೇಕಾಗುತ್ತದೆ. ಎಷ್ಟೋ ಸಲ ಆ ಪ್ರಭುತ್ವದ ಗುರಾಣಿಯಾಗಿ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು. ಆದರೆ ಇಂತಹ ಸ್ಥಿತಿಯಲ್ಲಿಯೂ ಪ್ರಭುತ್ವವನ್ನು ವಿಡಂಬನೆ ಮಾಡುವುದಿದೆಯಲ್ಲ ಅದು ಸಾಮಾನ್ಯವಾದುದಲ್ಲ.

ರಾಜಕಾರಣವೆಂಬುದು
ಕಳ್ಳ ಸುಳ್ಳರ ಸಂತೆ
ಇಲ್ಲಿ ವರ್ತಕರೇ ಗ್ರಾಹಕರು
ಗ್ರಾಹಕರೇ ವರ್ತಕರು
ಸೌಧವೆಂಬ ಸಂತೆಯಲ್ಲಿ
ಕಂತೆ ಕಂತೆಗಳಿಗಷ್ಟೇ ಬೆಲೆ

ಎಂದು ಮುಲಾಜಿಲ್ಲದೇ ಹೇಳಿಬಿಡುತ್ತಾರೆ ಇವರು. ಈ ಚುನಾವಣೆ ಬಿಸಿ ಇಡಿ ದೇಶವನ್ನು ಕುಲುಮೆಯಲ್ಲಿಟ್ಟಂತೆ ಸುಡುತ್ತಿರುವ ಸಮಯದಲ್ಲಿ ಈ ಸಾಲುಗಳು ತೀರಾ ಪ್ರಾಮುಖ್ಯತೆ ಪಡೆದುಕೊಳ್ಳುವುದನ್ನು ಗಮನಿಸಬೇಕು.

ದುಡ್ಡು ಕಳ್ಕೊಂಡು
ಅಧಿಕಾರ ಹಿಡ್ಕೊ
ದುಡ್ಡು ಮಾಡೋದೇ
ಧರ್ಮ ಅಂದ್ಕೋ

ಎನ್ನುತ್ತ ಚುನಾವಣೆಗಾಗಿ ದುಡ್ಡು ಖರ್ಚು ಮಾಡಿ ಆರಿಸಿ ಬಂದು ಮತ್ತೆ ಅಧಿಕಾರ ಹಿಡಿದು ಹಣ ಮಾಡುವ ಪ್ರಸ್ತುತ ಸ್ಥಿತಿಗೆ ಕನ್ನಡಿಹಿಡಿಯುತ್ತಾರೆ.
ಪ್ರಸ್ತುತ ರಾಜಕಾರಣವು ದುಡ್ಡೇ ದೊಡ್ಡಪ್ಪ ಎನ್ನುವ ಮೌಲ್ಯ ರಹಿತ ರಾಜಕಾರಣದ ಹೀಗಾಗಿಯೇ

ಕವಿತೆ ಬರೆಯಲೆಂದು
ಕೂತಾಗಲೆಲ್ಲ ಪೆನ್ನು ಹಾಳೆಗಳು
ಶತ್ರುಗಳಂತೆ ನೋಡುತ್ತವೆ
ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ.

ಬರೆಯುವುದು ಸೃಜನಶೀಲ ಕೆಲಸ. ಕವಿತೆ ಎಂದರೇ ಹೃದಯಗಳು ಬೆರೆಯುವ ಪ್ರಕ್ರೀಯೆ. ಹೀಗಿರುವಾಗ ಜಗವನ್ನೇ ಒಳಗೊಳ್ಳುವ ಕವಿತೆ ಬರೆಯುವಾಗ ಪೆನ್ನು ಹಾಳೆಗಳು ಮುನಿಸಿಕೊಂಡು ಬಿಟ್ಟರೆ ಬರೆಯುವುದಾದರೂ ಏನನ್ನು? ಮುನಿಸಿಕೊಳ್ಳುವ ಮಾತು ಒತ್ತಟ್ಟಿಗಿರಲಿ, ಶತ್ರುಗಳಂತೆ ದ್ವೇಷ ಸಾಧಿಸಿ ಬರೆಯುವುದೇ ಒಂದು, ಹಾಳೆಯಲ್ಲಿ ಮೂಡುವುದೇ ಇನ್ನೊಂದು ಎಂದಾಗಿಬಿಟ್ಟರೆ ಕವಿತೆ ಬರೆಯುವ ಮೂಲ ಉದ್ದೇಶವೇ ನಾಶವಾಗಿ ಬಿಡುವ ಸಾಧ್ಯತೆಗಳನ್ನಿಲ್ಲಿ ಎತ್ತಿ ತೋರಿಸಿದ್ದಾರೆ. ಜಗದ ಶತ್ರುತ್ವವನ್ನು ಕಳೆಯುವ ಕವಿತೆ ಬರೆಯುವ ಸಮಾಧಿತ್ವ ಸ್ಥಿತಿಯಲ್ಲಿಯೇ ಶತ್ರುತ್ವ ಮೊಳಕೆ ಒಡೆಯುತ್ತಿರುವುದು ವರ್ತಮಾನದ ಚೋದ್ಯಗಳಲ್ಲಿ ಒಂದೂ ಕೂಡ. ಹೀಗಾಗಿ ಈ ಸಾಲುಗಳು ನಾನಾ ಅರ್ಥಗಳನ್ನು ಏಕಕಾಲದಲ್ಲಿ ಹೊಮ್ಮಿಸುತ್ತವೆ. ಮುಂದುವರೆದು

“ಠಾಣೆಯನ್ನು ಎಡತಾಕುವವರ ಮುಖಗಳಲ್ಲಿ
ದ್ವೇಷ, ಅಸೂಯೆ, ಜಿಗುಪ್ಸೆ, ತಾತ್ಸಾರ
ಅಸಹಾಯಕತೆಗಳ ಅನಾವರಣ
ಠಾಣೆಯ ಒಳಗೂ ಹೊರಗೂ
ಲಾಠಿ ಬೂಟಿನ ಸದ್ದುಗದ್ದಲ
ಅಸಹಾಯಕರ ಆಕ್ರಂದನ”
ಎಂದು ನೊಂದುಕೊಳ್ಳುತ್ತಾರೆ.

ಪೋಲಿಸ್ ಇಲಾಖೆ ಎಂದರೆ ತೀರಾ ಖಡಕ್ಕಾದ ಇಲಾಖೆ. ತಾವಷ್ಟೇ ಸಾಹಿತ್ಯ ರಚಿಸುವವರು ಎನ್ನುವ ಅಕಾಡೆಮಿಕ್ ವಲಯದಂತೆ ಸದಾ ಸಾಹಿತ್ಯದ ಸಾಂಗತ್ಯದಲ್ಲೇ ಇರಬಹುದಾದ ವೃತ್ತಿ ಅಲ್ಲ ಅದು. ತೀರಾ ಸಂವೇದನೆಯನ್ನೂ ನಿರೀಕ್ಷಿಸುವಂತಿಲ್ಲ. ಅದಕ್ಕೇ ಈ ಸಂವೇದನೆ ಹುಬ್ಬೇರಿಸುವಂತೆ ಮಾಡಿತು.

ಒಬ್ಬ ಪೋಲಿಸ್ ಅಧಿಕಾರಿ ತನ್ನ ಠಾಣೆಗೆ ಬರುವವರ ಅಸಹಾಯಕ ಮುಖಗಳನ್ನು ದಿಟ್ಟಿಸುವುದಿಲ್ಲ ಎಂಬುದು ಸಾರ್ವಜನಿಕ ವಲಯದ ಜನಜನಿತ ಮಾತು. ಅದು ಒಂದಿಷ್ಟರ ಮಟ್ಟಿಗೆ ಸತ್ಯವೂ ಹೌದು. ಪೋಲಿಸ್ ಠಾಣೆಯಲ್ಲಿ ಬಂದವರ ಅಸಹಾಯಕ ಮುಖಗಳನ್ನು ಕಂಡು ಕರುಣೆ ತೋರಿಸುತ್ತ ಕುಳಿತರೆ ಅಪರಾಧಗಳನ್ನು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ. ಆದರೆ ಅಂತಹ ಕಠಿಣ ಹೃದಯದ ಠಾಣೆಗಳಲ್ಲೂ ಹೀಗೆ ಚಡಪಡಿಸುವ ಅಧಿಕಾರಿಗಳಿರುವುದೇ ಸಮಾಧಾನದ ಸಂಗತಿ. ಹೀಗಾಗಿಯೇ ತನ್ನಠಾಣೆಯ ನೋವನ್ನು ಕಂಡು ಮರಗುತ್ತಾರೆ. ಎಷ್ಟು ಜನರಿಗೆ ಹೀಗೆ ತಮ್ಮ ಇಲಾಖೆಯ ಅದ್ವಾನವನ್ನು ಬಹಿರಂಗವಾಗಿ ಹೇಳಿಕೊಳ್ಳುವಧೈರ್ಯವಿದೆ?

ಭ್ರಷ್ಟರನ್ನು
ಜೈಲಿಗೆ ಅಟ್ಟಿ
ಮಂತ್ರಿ ಮಹಾಶಯರ ಸಲಹೆ
ಇಲಾಖೆಗೊಂದು
ಜೈಲುಕಟ್ಟಿ
ಇಲ್ಲೊಬ್ಬನ ಸಲಹೆ

ಇದೆಷ್ಟು ಮಾರ್ಮಿಕವಾದದ್ದು. ಭ್ರಷ್ಟಾಚಾರ ಎನ್ನುವುದು ಈ ಸಮಾಜಕ್ಕೆ ಅಂಟಿದ ಬಲಿತ ಕ್ಯಾನ್ಸರ್. ಒಂದು ಕಡೆ ಕತ್ತರಿಸಿ ಎಸೆದರೆ ಇನ್ನೊಂದು ಕಡೆ ಬೃಹದಾಕಾರವಾಗಿ ಬೆಳೆಯುತ್ತದೆ. ಅದಕ್ಕೆ ಮಾಡುವ ಕಿಮೋ ತೆರಪಿಯಲ್ಲಿ ಕ್ಯಾನ್ಸರ್ ಕಣಗಳು ಅಲ್ಲಲ್ಲಿ ನುಣುಚಿಕೊಂಡು ಒಳ್ಳೆಯ ಜೀವಕೋಶಗಳು ಸುಟ್ಟು ಕರಕಲಾಗಿ ಹೋದ ಉದಾಹರಣೆಗಳಿವೆ.

ಹೀಗಾಗಿಯೇ ಭ್ರಷ್ಟರನ್ನು ಜೈಲಿಗೆಕಳಿಸುವುದಾದರೆ ಪ್ರತಿ ಇಲಾಖೆಗೊಂದು ಜೈಲು ಅನಿವಾರ್ಯವಾದೀತು. ಪ್ರಸ್ತುತ ಸಮಾಜದ ಭ್ರಷ್ಟತೆಗೆ ಈ ಸಾಲುಗಳುಕೈಗನ್ನಡಿಯಂತಿದೆ.

ಮೃದು ಮಾತಿನ, ಸದಾ ಮುಗುಳ್ನಗೆಯ ಆಭರಣ ತೊಟ್ಟಿರುವ ಶಿವಕುಮಾರ ದಂಡಿನ ಕೇವಲ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಬಗ್ಗೆ, ಚುನಾವಣೆಯ ಬಗ್ಗೆ ಮಾತ್ರ ಬರೆಯಬಲ್ಲರು ಎಂದು ತಿಳಿಯಬೇಕಿಲ್ಲ.

ಚುಕ್ಕಿ ಚುಕ್ಕಿಗೆ ಕತೆಕಟ್ಟಿ ಹಾಡು ಹಾಡುವ ಪಾಡು
ನೆನಪುಗಳು ಮಾಸಿಲ್ಲ ಹಳಸಿ ಹೋಗಿವೆಯಷ್ಟೇ
ಪುಳಕ ಬಯಕೆಗಳೆಲ್ಲ ಬತ್ತಿ ಹೋಗಿವೆ

ಎನ್ನುತ್ತ ವಿರಹದ ಹಾಡಾಗುವ ಪರಿಯನ್ನೂ ಕಾಣಬಹುದು.

ಪ್ರಿಯತಮೆಯ
ತೆಕ್ಕೆ ಮರೆಯಿಸಿತು
ದುಃಖ ದುಮ್ಮಾನ

ಎನ್ನುತ್ತ ಉನ್ಮಾದದ ಪ್ರೇಮದ ಚಿತ್ರವನ್ನೂ ಅಕ್ಷರಗಳಲ್ಲಿ ಕಟ್ಟಿಕೊಡಬಲ್ಲರು.

ಕಂಡ ಕನಸುಗಳೆಲ್ಲ ಕರಗಿದವು
ಭುವಿಗೆ ಬಿದ್ದ ಆಲಿಕಲ್ಲಿನಂತೆ

ಎನ್ನುವ ಶಿವಕುಮಾರರ ಕವನದ ಕನಸು ಆಲಿಕಲ್ಲಿನಂತೆ ಕರಗದೇ ಚಿಮ್ಮುವ ಝರಿಯಾಗಿರಲಿ.

(ಪುಸ್ತಕ- ಮೋಹದ ಪಥವೂ, ಇಹಲೋಕದ ರಿಣವೂ (ಕವನ ಸಂಕಲನ) ಲೇಖಕರು- ಶಿವಕುಮಾರ ದಂಡಿನ, ಬೆಲೆ-50ರೂ)