ಕೆಂಪು ಹನಿಸುತ್ತಿದೆ

ಆಕಾಶದಿಂದ ಆಗಾಗ ಕೆಂಪು ಹನಿಸುತ್ತಿದೆ
ಆಗ ಅಲ್ಲಷ್ಟೆ ಹಾಹಾಕಾರ ಅನಿಸುತ್ತದೆ

ಅದಾವ ದ್ರವ ಕರಗಿ ಆವಿಯಾಗಿರಬಹುದು
ಮೋಡ ಹಳದಿ ಬಣ್ಣಕ್ಕೆ ತಿರುಗಿದೆ
ಅದಾವುದೋ ಲೋಭಾನಿನ ಹೊಗೆಯೋ
ಅಥವಾ ಅಗರ ಬತ್ತಿಯದೋ
ಸಾಧ್ಯವಿಲ್ಲ ಆಕಾರ ನಿರಾಕಾರದ್ದಲ್ಲ

ಜಿಡ್ಡುಗಟ್ಟಿದ ನೆತ್ತಿಯೊಳಗಿನ ನೆತ್ತರಿರಬಹುದು
ಜಡ್ಡು ಹಿಡಿದು ಕ್ಯಾಕರಿಸುವ ಪಿತ್ತವಿರಬಹದು
ಗೊಡ್ಡುತನಕೆ ಗೋಣುಕೊಟ್ಟ ಕುರಿಯದ್ದೂ ಇರಬಹುದು
ಒಟ್ಟಾರೆ ಇದು ಹೆಣಸುಟ್ಟು ಮೈ ಕಾಯಿಸಿಕೊಳ್ಳುವ ಮಾಯಕಾರನ ಮೋಸದಾಟ

ರಕ್ತದ ಮಳೆ ಬರುತ್ತೈತಣ್ಣ ಕಾಲಜ್ಞಾನಿಯ ಮಾತು
ಮುಕ್ತತೆಯ ಬೆಳೆಯ ನುಂಗಿ ನೀರ ಕುಡಿಯಬಹುದು
ಮಗ್ದತೆಯ ನಗುವ ಬಾಚಿ ಮೋಜು ನೋಡಬಹುದು
ಶಕ್ತತೆಯಲಿ ದುಡಿಯುವವನ ಹೆಣ ತೇಲಬಹುದು
ಅತಂತ್ರವಾಗಬಹದು ಸ್ವಾತಂತ್ರ್ಯ ಹಳದಿ ಮೇಘಗಳ ಹುಚ್ಚಾಟಕೆ

ಅಯ್ಯಾ ಇದು ದ್ವೇಷರಸದ ಆವಿ
ಭಯದ ನಾಗರ ಹಾವಿನ ಹಲ್ಲಿನ ಹಬೆ
ಜಯವಿಲ್ಲಾ ಕೊಂದು ಉಳಿಯುವುದೇನಿಲ್ಲಾ
ದಯಮಾಡಿ ನಿಲ್ಲಿಸಿ ಮಾರಣ ಹೋಮ

ಆಕಾಶದಿಂದ ಆಗಾಗ ಕೆಂಪು ಹನಿಸುತ್ತದೆ
ಅತಿಯಾದಾಗ ಎಲ್ಲೆಲ್ಲೂ ಹರಿಯಬಹುದು ಹಾಹಾಕಾರ
ಪ್ರೀತಿಯಿಲ್ಲದ ಜಾತಿ ಕೊರಡು
ದಯವಿಲ್ಲದ ಧರ್ಮ ಕುರುಡು.

ಮೌನೇಶ್ ನವಲಹಳ್ಳಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ನವಲಹಳ್ಳಿ ಗ್ರಾಮದವರು
ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಜೊತೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣದಲ್ಲಿ ಡಿಪ್ಲೋಮಾ ಪತ್ರಿಕೋದ್ಯಮ ಓದಿದ್ದಾರೆ.
ಬೆಂಗಳೂರಿನ ‘ಅದಮ್ಯ’ ರಂಗತಂಡದಲ್ಲಿ ಕೆಲ ಕಾಲ ರಂಗನಟರಾಗಿ ಅಭಿನಯಿಸಿರುವ ಇವರು ಸದ್ಯ ನವಲಹಳ್ಳಿಯಲ್ಲಿ ‘ಮೌನ ಗುರು ವುಡ್ ವರ್ಕ್ಸ್ʼ ಎನ್ನುವ ಬಡಗಿತನದ ಕೈಗಾರಿಕೆ ನಡೆಸುತ್ತಿದ್ದಾರೆ.
‘ಪ್ರೀತಿಯ ಜಾತ್ರಿ’ ಇವರ ಪ್ರಕಟಿತ ಮೊದಲ ಕವನ ಸಂಕಲನ.