ಕರ್ನಾಟಕದ ಕರಾವಳಿಯುದ್ಧಕ್ಕೂ ಸೊಂಪಾಗಿ ವಿಕಾಸಗೊಂಡಿರುವ ಯಕ್ಷಗಾನ ಕಲೆಯು ಅಪಾರ ವೈವಿಧ್ಯವನ್ನು ಹೊಂದಿದೆ. ಈ ವೈವಿಧ್ಯತೆಯ ಕಾರಣದಿಂದಲೇ, ಅದರ ವ್ಯಾಖ್ಯಾನವನ್ನು ಸರಳವಾಗಿ ಮಾಡುವುದು ಕಷ್ಟವಾಗಿಬಿಟ್ಟಿದೆ. ಆಯಾ ಪ್ರದೇಶಗಳ ಪ್ರಭಾವದೊಂದಿಗೆ ವಿಕಾಸ ಹೊಂದಿರುವ ಈ ಕಲೆಯನ್ನು ಏಕರೂಪವಾಗಿ ನೋಡುವುದು ಸಾಧ್ಯವಾಗುತ್ತಿಲ್ಲ. ಇದೀಗ ಯಕ್ಷಗಾನ ಕಲೆಗೊಂದು ಪಠ್ಯಪುಸ್ತಕ ರಚನೆಯಾಗಿದೆ. ಹಾಗಿದ್ದರೆ ಪಠ್ಯಪುಸ್ತಕವು  ಈ ಬೃಹತ್ ಕಲಾಪ್ರಕಾರವನ್ನು ಸಾಂದ್ರವಾಗಿ ಗ್ರಹಿಸಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.   ಪಠ್ಯಪುಸ್ತಕವನ್ನು ಓದಿದ ಬಳಿಕ ತಮ್ಮ ಅನಿಸಿಕೆಯನ್ನು ದಾಖಲಿಸಿದ್ದಾರೆ ಸ್ವತಃ ಕಲಾವಿದರೂ, ವಿದ್ವಾಂಸರೂ ಆಗಿರುವ ನಾರಾಯಣ ಯಾಜಿ

 

‘ತಿಟ್ಟು ಎನ್ನುವುದಕ್ಕೆ ಯಕ್ಷಗಾನದ ವಲಯದಲ್ಲಿ ‘ಪ್ರಬೇಧಗಳು’ ಎನ್ನುವ ಸಾಮಾನ್ಯ ಅರ್ಥವಿದ್ದರೂ ನಿಘಂಟಿನಲ್ಲಿ ಅದಕ್ಕೆ ಈ ಕೆಳಗಿನ ಅರ್ಥವೂ ಇದೆ.  ‘ತಿಟ್ಟು : ಬಯ್ಗಳು, ತೆಗಳಿಕೆ, ನಿಂದೆ, ಭರ್ತ್ಸನೇ (ಉದಾ – ಸಂತರ್ ತಮ್ಮಂ ಖಳರ್ ಮವಂದಂತು ತಿಟ್ಟೆ ಮೂಗುವಟ್ಟಂತಿರ್ಪರ್) ಕಡೆಗಣಿಸು, ಕೀಳುಮಾಡು:”

ಈ ಮೇಲಿನ ಉದಾಹರಣೆ ಯಕ್ಷಗಾನದ ಪಠ್ಯಪುಸ್ತಕವನ್ನು ನೋಡಿದಾಗ ನನ್ನ ಮನಸಿಗೆ ಹೊಳೆಯಿತು. ಇದು ಕೇವಲ ಸಾಂದರ್ಭಿಕ.
ಯಕ್ಷಗಾನವನ್ನು ಪಠ್ಯಪುಸ್ತಕನ್ನಾಗಿಸುವ ಉಮೇದಿನಲ್ಲಿ ಹೊರತಂದ ಕೃತಿಯನ್ನು ಅತ್ಯಂತ ಉತ್ಸಾಹದಿಂದಲೇ ತೆರೆದು ನೋಡಿದೆ. ನನ್ನ ವ್ಯಕ್ತಿತ್ವವನ್ನು ರೂಪಿಸಿರುವ ಕಲೆಯಾದುದರಿಂದ ಈ ಕಲೆಯ ಮೇಲೆ ವಿಶೇಷವಾದ ಒಲವು ಖಂಡಿತವಾಗಿ ಇದೆ.

ಅದೂ ಅಲ್ಲದೇ ನಾನು ಈ ಕಲೆಯ ಮೂರೂ ತಿಟ್ಟುಗಳು ಪ್ರಚಲಿತವಿರುವ ಅನೇಕ  ಪ್ರದೇಶಗಳಿಗೆ ತೆರಳಿದ್ದೇನೆ. ಅಲ್ಲಿನ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಕಾರಣದಿಂದಲೂ ಸಮಗ್ರವಾಗಿ ಈ ಕಲೆಯನ್ನು ಪ್ರೀತಿಸುತ್ತೇನೆ.

ಮಾವಿನ ಹಣ್ಣು ಹೇಗೆ ಸವಿಯಾಗಿರುವುದೋ ಅದೇ ರೀತಿ ಸವಿಯುವವನಿಗೆ ಅಂಕೋಲೆಯ ಇಸಾಡಿನಿಂದ ಹಿಡಿದು ರತ್ನಗಿರಿಯ ಆಪೂಸಿನವರೆಗೆ ಇರುವ ಪ್ರಬೇಧಗಳನ್ನು ಸಮಾನಾಂತರವಾಗಿ ಸವಿಯುವುದು ಇಷ್ಟವಾಗುವುದು. ಅದೇ ರೀತಿಯಲ್ಲಿ ಈ ಕಲೆಯು ನನ್ನನ್ನು ಆವರಿಸಿದೆ. ಇಲ್ಲಿನ ತೆಂಕು ಬಡಗು ಮತ್ತು ಉತ್ತರಕನ್ನಡದ ಪರಂಪರೆಯನ್ನು ಅದರ ಮೂಲ ನಿರ್ವಚನದಿಂದಲೇ (Etymology) ನಾನು ಆಸ್ವಾದಿಸುತ್ತೇನೆ.

ಉತ್ತರ ಕನ್ನಡದ ಪರಂಪರೆಗೆ ಅನ್ಯಾಯ

ಪಠ್ಯಪುಸ್ತಕದ ಮುಖಪುಟದಲ್ಲಿರುವ ರಥ, ಸಿಂಹಾಸನ ಯಾವುದೂ ಆಗಬಲ್ಲ ಪೀಠದ ಚಿತ್ರಣ ಅತ್ಯಾಕರ್ಷಕವಾಗಿದೆ. ನಂತರದಲ್ಲಿ ರಂಗಭೂಮಿಯಲ್ಲಿ ಸಿಂಹಾಸನದ ಹೆಸರಿನಲ್ಲಿ ಬಂದ ಆಸನವೊಂದು ಇದನ್ನು ಮೂಲೆಗುಂಪುಮಾಡಿರುವುದನ್ನು ನೋಡಿ ವಿಷಾದಿಸಿದ್ದೇನೆ. ಅದೇ ರೀತಿ ಬ್ರಹ್ಮಾವರದ ಸುಂದರ ಕತ್ತರಿ ಎದೆಹಾರ ಮರೆಯಾಗಿ ಉತ್ತರಕನ್ನಡದ ವರ್ತುಲ ಎದೆಹಾರ ರೂಢಿಗೆ ಬಂದಿರುವುದನ್ನು ನೋಡಿದಾಗ ಆ ಕುರಿತು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದೇನೆ. ಇಂಥ ಅನೇಕ ಅಪಸವ್ಯಗಳಿಗೆ ಪಠ್ಯಪುಸ್ತಕದಲ್ಲಿ ಮಾರ್ಗದರ್ಶನ ಸಿಗಬಹುದು ಎನ್ನುವುದು ನನ್ನ ಊಹೆಯಾಗಿತ್ತು. ಪ್ರತಿಯನ್ನು ತಿರುಗಿಸುತ್ತಾ ಹೋದಂತೆ ನನಗೆ ಈ ಕುರಿತಾಗಿ ಭ್ರಮನಿರಸವಾದದ್ದಷ್ಟೇ ಅಲ್ಲ ಒಂದು ಪ್ರಮುಖ ಪ್ರಕಾರವಾದ ಉತ್ತರ ಕನ್ನಡದ ಪರಂಪರೆಗೆ ವ್ಯವಸ್ಥಿತವಾಗಿ ಅನ್ಯಾಯ ಮಾಡಲಾಗಿದೆ ಎಂದು ಅನ್ನಿಸಿಯೇ ಬಿಟ್ಟಿದೆ.

ಈ ಕುರಿತು ಕೆರಮನೆ ಶಿವಾನಂದ ಹೆಗಡೆ, ಯಕ್ಷರಂಗದ ಸಂಪಾದಕರಾದ ಗೋಪಾಲಕೃಷ್ಣ ಭಾಗವತ, ಡಾ. ರಾಘವ ನಂಬಿಯಾರರ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ಕೃತಿಯನ್ನು ಅವಲೋಕಿಸಿರುವದರಿಂದ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ನಾನು ಸಂಪೂರ್ಣವಾಗಿ ಸಹಮತವನ್ನು ವ್ಯಕ್ತಪಡಿಸುತ್ತಿದ್ದೇನೆ.

ಒಂದು ಪಠ್ಯಪುಸ್ತಕವೆಂದಾಗ ಅದರ ಉದ್ದೇಶ ಆ ಕಲೆಯ ಕುರಿತು ಇರುವ ಸೌಂದರ್ಯದ ಪರಿಚಯವನ್ನು ಮತ್ತು ಅದರ ಕುರಿತಾದ ಪ್ರಾಥಮಿಕ ಪರಿಚಯವನ್ನು ಮಾಡಿಕೊಡಲೇಬೇಕಾಗುತ್ತದೆ. ಈ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾದ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಭಾಷಣದಲ್ಲಿ ಉತ್ತರ ಕನ್ನಡದ ಪರಂಪರೆಯ ಮತ್ತು ಸಭಾಹಿತ ಮಟ್ಟುಗಳ ಕುರಿತು ಯಾವತ್ತೂ ಹೇಳುತ್ತಿರುವ ವಿಷಯಗಳ ಪೈಕಿ ಒಂದು ಅಂಶವೂ ಇದರಲ್ಲಿ ಕಾಣಸಿಗಲಿಲ್ಲ. ಅವರು ತಮ್ಮ ಮಾತುಗಳಲ್ಲಿ ಬರೆದಂತೆ ಶ್ರೀ ಕೃಷ್ಣ ಪಾರಿಜಾತ, ಬೊಂಬೆಯಾಟ, ಹೀಗೆ ಎಲ್ಲವೂ ಬಂದರೂ ಇಲ್ಲಿನ ತಿಟ್ಟಿನ ಕುರಿತಾಗಿ ಯಾವ ಮಾತೂ ಇಲ್ಲ. ಅಕ್ಷರಕ್ಕಿಂತಲೂ ಮೊದಲು ಆಕರ್ಷಿಸುವುದು ಚಿತ್ರಗಳು, ಈ ವಿಭಾಗದಲ್ಲಿ ಸಂಪೂರ್ಣವಾಗಿ ಉತ್ತರಕನ್ನಡದ ವೀರಕಾಸೆ, ವೃತ್ತಾಕಾರದ ಎದೆಹಾರಗಳಿಲ್ಲವೇ ಇಲ್ಲ. ಕೆರಮನೆಯ ಶಿವಾನಂದ ಹೆಗಡೆಯವರ ಸಂಗ್ರಹದಲ್ಲಿ, ಕರ್ಕಿ ಮೇಳದ ಅನೇಕ ವಿಡಿಯೋಗಳಲ್ಲಿ ಬಡಾ ಬಡಗಿನ ಅನೇಕ ವಿವರಗಳು ದೊರೆಯುತ್ತಿದ್ದವು. ಅಂತಹದ್ದರಲ್ಲಿ ಇವ್ಯಾವುದೂ ಇಲ್ಲವೆಂದಾದರೆ ಅದಕ್ಕೆ ಕಾರಣವಾದರೂ ಏನಿರಬಹುದು ಎನ್ನುವುದೇ ಅರ್ಥವಾಗುತ್ತಿಲ್ಲ.

ಈ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾದ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಭಾಷಣದಲ್ಲಿ ಉತ್ತರ ಕನ್ನಡದ ಪರಂಪರೆಯ ಮತ್ತು ಸಭಾಹಿತ ಮಟ್ಟುಗಳ ಕುರಿತು ಯಾವತ್ತೂ ಹೇಳುತ್ತಿರುವ ವಿಷಯಗಳ ಪೈಕಿ ಒಂದು ಅಂಶವೂ ಇದರಲ್ಲಿ ಕಾಣಸಿಗಲಿಲ್ಲ. ಅವರು ತಮ್ಮ ಮಾತುಗಳಲ್ಲಿ ಬರೆದಂತೆ ಶ್ರೀ ಕೃಷ್ಣ ಪಾರಿಜಾತ, ಬೊಂಬೆಯಾಟ, ಹೀಗೆ ಎಲ್ಲವೂ ಬಂದರೂ ಇಲ್ಲಿನ ತಿಟ್ಟಿನ ಕುರಿತಾಗಿ ಯಾವ ಮಾತೂ ಇಲ್ಲ.

ಯಕ್ಷಗಾನದ ವಿಷಯಕ್ಕೆ ಬಂದಾಗ ದಕ್ಷಿಣೋತ್ತರ ಕನ್ನಡ ಮತ್ತು ಮಲೆನಾಡಿನ ಭಾಗದಲ್ಲಿ ವ್ಯಾಪಿಸಿರುವ ಕಲೆ ಈ ಭಾಗದ ಜನಾಂಗದ ಸಂಸ್ಕೃತಿಯ ಮೇಲೆ ಬೀರಿರುವ ಪ್ರಭಾವ ಗಮನಾರ್ಹ. ಆ ಮಟ್ಟಿಗೆ ‘ಕುರಿತೋದದೆಯೆ ಕಾವ್ಯ ಪರಿಣತಿ ಮತಿಗಳ್’ ಎನ್ನುವ ಮಾತು ನಿಜವಾಗಿರುವುದಾದರೆ ಈ ಭಾಗದ ಜನಜೀವನವನ್ನು ಅಧ್ಯಯನ ಮಾಡಬೇಕು. ಡಾ. ರಾಘವ ನಂಬಿಯಾರರು ಯಾವತ್ತಿಗೂ ಹೇಳುವಂತೆ ಕೇರಳದ ಕಾಸರಗೋಡಿನಿಂದ ಉತ್ತರಕನ್ನಡದ ಇಡಗುಂಜಿ ಗಣಪನವರೆಗೆ ಹಾಸುಹೊಕ್ಕಾಗಿರುವ ಈ ಕಲೆ ತಾನು ಬೆಳೆಯುವ ಹೊತ್ತಿನಲ್ಲಿ ಭೌಗೋಳಿಕವಾಗಿ ಅನೇಕ ನದಿಗಳು ಸಮುದ್ರವನ್ನು ಸೇರುವ ತಾಣವಾಗಿರುವುದರಿಂದಲೂ, ಭಾಷೆಯ ಉಚ್ಛಾರದಲ್ಲಿ ಭಿನ್ನತೆಯಿರುವುದನ್ನು ಗಮನಿಸಬಹುದು. ಯಕ್ಷಗಾನದಲ್ಲಿ ತೆಂಕು ಬಡಗು ಮತ್ತು ಉತ್ತರಕನ್ನಡದ ಪ್ರಭೇದಗಳಾಗಿ ಆಹಾರ್ಯ, ನಡೆ ಮತ್ತು ಶೈಲಿಯಲ್ಲಿನ ಭೇದಗಳನ್ನು ಯಾರೂ ಗುರುತಿಸುವಷ್ಟರ ಮಟ್ಟಿಗೆ ಬದಲಾವಣೆಯಾಗಿರುವುದನ್ನು ಗುರುತಿಸಬಹುದಾಗಿದೆ. ಉತ್ತರಕನ್ನಡದಲ್ಲಿ ಘಟ್ಟದ ಮೇಲೆ ಮತ್ತು ಘಟ್ಟದ ಕೆಳಗೆ ಭೌಗೋಳಿಕವಾಗಿ ಭೇದವಿದ್ದರೂ ಇಲ್ಲಿನ ಶೈಲಿಯಲ್ಲಿ- ಸಾಮ್ಯತೆಯಲ್ಲಿ ಹೇಳಿಕೊಳ್ಳುವ ಯಾವ ವ್ಯತ್ಯಾಸವಂತೂ ಕಾಣಸಿಗುವುದಿಲ್ಲ. ಯಕ್ಷಗಾನದಂತಹ ಪರಂಪರಾಗತ ಕಲೆಯ ಕುರಿತು ವಿವರಿಸುವಾಗ ಈ ಸೂಕ್ಷ್ಮವನ್ನು ಅವಲೋಕಿಸದಿದ್ದರೆ ಅದು ಕಲೆಗೆ ಮಾಡಿದ ಅಪಚಾರವಲ್ಲದೇ ಮತ್ತೇನೂ ಅಲ್ಲ.

ಬಡಾ ಬಡಗು ಎಂದು ಇತ್ತೀಚೆಗೆ ಹೆಸರಿಸಲ್ಪಟ್ಟ ಈ ಜಿಲ್ಲೆಯ ಕರ್ಕಿ ಮೇಳದ ಕಲೆ ಮರಾಠಿ ರಂಗಭೂಮಿಯ ಉಗಮಕ್ಕೆ ಕಾರಣವಾಗಿರುವುದನ್ನು ಸಾಹಿತ್ಯಲೋಕವೇ ಒಪ್ಪಿರುವ ಸತ್ಯ. ಅದರಲ್ಲಿಯೂ ಉತ್ತರ ಕನ್ನಡದ ಅಭಿನಯ ಪ್ರಕಾರದಲ್ಲಿ ಪದ್ಯವನ್ನು ಎತ್ತುಗಡೆ ಮಾಡಿ ಆ ಪದ್ಯಕ್ಕೆ ಅಭಿನಯವನ್ನು ಲೋಕಧರ್ಮಿ ಮತ್ತು ನಾಟ್ಯಧರ್ಮಿಯಲ್ಲಿ ವಿವರಿಸುವುದು ಹಗಲಿನಷ್ಟೇ ಸತ್ಯ. ಇಲ್ಲಿನ ಆಡುಭಾಷೆಯಲ್ಲಿ “ಗಣ ಜಂಪೆ” ಎನ್ನುವ ಮಾತು ಒಂದಿದೆ. ಅದು ಯಕ್ಷಗಾನದ ವಿಲಂಬಿತ ನಡೆಯನ್ನು ನೋಡಿ ರೂಢಿಗೆ ಬಂದ ಮಾತುಗಳು.

ಉತ್ತರಕನ್ನಡದಲ್ಲಿ ಘಟ್ಟದ ಮೇಲೆ ಮತ್ತು ಘಟ್ಟದ ಕೆಳಗೆ ಭೌಗೋಳಿಕವಾಗಿ ಭೇದವಿದ್ದರೂ ಇಲ್ಲಿನ ಶೈಲಿಯಲ್ಲಿ- ಸಾಮ್ಯತೆಯಲ್ಲಿ ಹೇಳಿಕೊಳ್ಳುವ ಯಾವ ವ್ಯತ್ಯಾಸವಂತೂ ಕಾಣಸಿಗುವುದಿಲ್ಲ. ಯಕ್ಷಗಾನದಂತಹ ಪರಂಪರಾಗತ ಕಲೆಯ ಕುರಿತು ವಿವರಿಸುವಾಗ ಈ ಸೂಕ್ಷ್ಮವನ್ನು ಅವಲೋಕಿಸದಿದ್ದರೆ ಅದು ಕಲೆಗೆ ಮಾಡಿದ ಅಪಚಾರವಲ್ಲದೇ ಮತ್ತೇನೂ ಅಲ್ಲ.

ಇವತ್ತು ಹಿಂದುಸ್ಥಾನಿ ಸಂಗೀತದ ಸವಿ ಅರ್ಥವಾಗಬೇಕಾದರೆ ಆಲಾಪವನ್ನು ಸವಿಯಬೇಕು. ಊಟ ಎನ್ನುವದಕ್ಕೆ ಗಪ್ಪ ಹೊಡೆದು ಕುಳಿತು ಊಟಮಾಡುವುದನ್ನು ‘ಅಭಿನಯ’ ಎನ್ನುವುದಿಲ್ಲ, ನಿಧಾನಕ್ಕೆ ಎಲೆಯತ್ತ ಹಸಿವಿನಿಂದ ಬಳಲಿದವನಾದರೆ ನೋಡುವ ಆಸೆಗಣ್ಣು, ಮುಖಭಾವ ದೇಹದ ತುಂಬಾ ಎಷ್ಟೊತ್ತಿಗೆ ತಿಂದೇನೆನ್ನುವ ತುಡಿತಗಳನ್ನು ವ್ಯಕ್ತಪಡಿಸುತ್ತಾ ಅದರ ಬಗೆಬಗೆಯ ಆವರ್ತನಗಳನ್ನು ತಂದು ನಂತರ ಒಮ್ಮೆಲೇ ಹಿಡಿದು ಎರಡು ಮುಷ್ಟಿಯಲ್ಲಿ ಬಾಚಿ ತಿನ್ನುವುದು ಅಭಿನಯವಾಗುತ್ತದೆ. ಅದೇ ರಾಜನೋ ತಾಪಸಿಯೋ ಊಟ ಮಾಡುವ ವಿಧಾನ ಹೀಗಲ್ಲ, ರಾಜನಾದವ ತನ್ನ ಪಾತ್ರದ ಮೂಲಕ ಊಟದಲ್ಲಿ ರಸವನ್ನು ಗ್ರಹಿಸಬೇಕು. ಗಂಭೀರತೆಯನ್ನು ವ್ಯಕ್ತಮಾಡಿ ಗಾಂಭೀರ್ಯದಲ್ಲಿಯೇ ಸಂತೃಪ್ತಿಯನ್ನು ಅಭಿವ್ಯಕ್ತಿಸಬೇಕಾಗುತ್ತದೆ. ಅದೇ ತಾಪಸಿ ಹಾಗಲ್ಲ. ಆತನಿಗೆ ಊಟವೆನ್ನುವುದು ದೇಹದಲ್ಲಿನ ಜೀವ ಧಾರಣೆಗೆ ಮಾತ್ರ. ಆತ ತಾಮಸ ಆಹಾರವನ್ನು ಊಟಮಾಡಲಾರ. ನಟನಾದವ ಇದನ್ನು ಗ್ರಹಿಸಬೇಕು. ಆದರೆ ಇಲ್ಲಿ ಯಕ್ಷಗಾನದಲ್ಲಿನ ಅಭಿನಯಕ್ಕೆ ಕೊಟ್ಟಿರುವ ಉದಾಹರಣೆಯನ್ನು ನೋಡಿದರೆ ಈ ಯಾವ ಅಂಶಗಳನ್ನೂ  ಗ್ರಹಿಸಿದಂತಿಲ್ಲ.

ಅಭಿನಯದಲ್ಲಿ ಮುಖ್ಯವಾಗಿ ಇರಬೇಕಾದುದು ಪ್ರಸಂಗದ ಪದ್ಯಗಳ ರಸ ಸ್ಥಾನವನ್ನು ಗುರುತಿಸುವಿಕೆ. ಉದಾಹರಣೆಗೆ ಉತ್ತರಕನ್ನಡದ ಶೈಲಿಯ “ಮಾನಿನಿ ಮಣಿಯೇ ಬಾSರೇ..” ಎನ್ನುವ ಪದ್ಯದಲ್ಲಿ (ಕೃಷ್ಣಾರ್ಜುನ ಕಾಳಗ)  ಅಸಹಾಯಕನಾಗಿ ಬಂದು ಗೋಳಿಡುವ, ಹೆಂಡತಿಯ ಎದುರು  ಆತ್ಮಹತ್ಯೆಗೆ ಯತ್ನಿಸುವ ಅರ್ಜುನನ್ನು ಭೀಮ ಸಮಾಧಾನಪಡಿಸುವುದು ಹೀಗೆ: ಈ ಸಂದರ್ಭದಲ್ಲಿ ಬರುವ  “ನಾಳೆ ವಿಶ್ವಾಧಾರ ಮೂರ್ತಿಯ ಕೂಡೆ …” ಎನ್ನುವ ಪದ್ಯವೊಂದು ಅದ್ಭುತವಾಗಿದೆ. ಆ ಪದ್ಯದ ಕೊನೆಯಲ್ಲಿ , ‘ಸಮಸ್ಯೆಗೆ ಆತ್ಮಹತ್ಯೆ ಉತ್ತರವಲ್ಲ. ಕೃಷ್ಣನ ಕೂಡೆ ಹೋರಾಟ ಮಾಡಿ, ಮುಕ್ತಿಪಥ ಸೇರುವುದು ಒಳ್ಳೆಯದು’ ಎನ್ನುವ ಸಂದೇಶವಿದೆ. ಅಂದರೆ ಸಾವಿಗೆ ಒಂದು ಹೊಸ ಅರ್ಥ ಕೊಡುವ ಮಾತುಗಳು ಈ ಪದ್ಯದಲ್ಲಿವೆ. ಈ ಮಾತುಗಳನ್ನು ಕೇಳಿದ  ಅರ್ಜುನನಿಗೆ, ಸಮಸ್ಯೆಗೆ ಪರಿಹಾರ ರೂಪದಲ್ಲಿ ಹೊಸ ಹೊಳಹು ದೊರೆಯುತ್ತದೆ.  ಆಗ ಆತ ಸುಭದ್ರೆಯನ್ನು ಸಂತೈಸುವುದಷ್ಟೇ ಅಲ್ಲ, ಆಕೆಗೆ ತನ್ನ ಮಾರ್ಗವನ್ನು ಅನುಸರಿಸುವಂತೆ, ಅಂದರೆ ವೀರ  ಪಾರ್ಥನ ಹೆಂಡತಿ ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕಾಗುತ್ತದೆ. ಇಲ್ಲಿ ಮೂಡ್ಕಣಿ ನಾರಾಯಣ ಹೆಗಡೆ, ಕೆರಮನೆ ಕಲಾವಿದರು, ಕರ್ಕಿ , ಎಲ್ಲರೂ ಅನುಸರಿಸುತ್ತಿದ್ದ ಮಾರ್ಗ ವಿಲಂಬಿತ ನಡೆ.

ಆದರೆ ಪಠ್ಯದಲ್ಲಿ ‘ಸ್ಮರ’ ಎನ್ನುವಾಗ ಶೂನ್ಯವನ್ನು ತೋರಿಸಬೇಕೆನ್ನುವ ಅಭಿನಯ ಸೂಚನೆಯಿದೆ. ಅದನ್ನು ಇಲ್ಲಿ ಹೇಗೆ ತೋರಿಸಬಹುದು. ‘ಸ್ಮರ’ನೆಂದರೆ ಅವನು ಅನಂಗ ಎನ್ನುವ ಮಾತ್ರಕ್ಕೆ ಆತ ಶೂನ್ಯನಾಗಲಾರ. ಆತನ ಸ್ಥಾಯಿ ಭಾವವು ಸೌಂದರ್ಯ. ಅದನ್ನು ತರುವಾಗ ತೋರು ಬೆರಳು ಮತ್ತು ಹೆಬ್ಬೆರಳನ್ನು ಶುಭಪ್ರದದಲ್ಲಿ ಹಿಡಿದು ಎಡದಿಂದ ಬಲಕ್ಕೆ ವೃತ್ತಾಕಾರವಾಗಿ ತಲೆಯ ಸುತ್ತ ತಿರುಗಿಸಿದಾಗ ಸುಂದರ ಎನ್ನುವ ಕಲ್ಪನೆ ತಾನೇ ತಾನಾಗಿ ಬರುತ್ತದೆ. ಅಭಿನಯ ಪ್ರಪಂಚದಲ್ಲಿ ಶೂನ್ಯವೆನ್ನುವುದನ್ನು ಸೂಚಿಸುವುದು ಬ್ರಹ್ಮನಿಗೆ ಮಾತ್ರ. ಅದು ಹೇಗೆ ಸ್ಮರನಿಗೆ ಶೂನ್ಯದತ್ತ ದೃಷ್ಟಿ ಮಾಡಿ ತೋರಿಸಿದರೋ ಅರ್ಥವಾಗುವದಿಲ್ಲ.

ಕೆರಮನೆ ಮಹಾಬಲ ಹೆಗಡೆಯವರು ದ್ವಾರಕೆ ಎನ್ನುವ ಶಬ್ದಕ್ಕೆ “ಪುರ” ಎನ್ನುವ ನಾಟ್ಯಧರ್ಮಿಯಲ್ಲಿ ಅಭಿನಯಿಸಿ ಪೋಗಿ ಬೇಗನೆ ಎನ್ನುವಾಗ ಚಿಟಿಕೆ ಹೊಡೆದು ಲೋಕಧರ್ಮಿ ಅಭಿನಯವನ್ನು ಮಾಡುತ್ತಿದ್ದರು. ಅದು ತುಂಬಾ ಪರಿಣಾಮಕಾರಿಯಾಗಿರುತ್ತಿತ್ತು. ಪಿ. ವಿ. ಹಾಸ್ಯಗಾರರ ಗದಾಯುದ್ಧದ ಕೌರವನಾಗಿ “ನಿನ್ನಯ ಬಲುಹೇನೋ…” ಎನ್ನುವ ಪದ್ಯದಲ್ಲಿ ಧರ್ಮರಾಜನನ್ನು ಸ್ವಲ್ಪಹೊತ್ತು ವಿಸ್ಮಯದಿಂದ ದಿಟ್ಟಿಸಿ ಮತ್ತೆ ಗದೆಯನ್ನು ಎತ್ತಿ ಆ ಕಡೆ ನೋಡಿ ಗದೆಯನ್ನು ಕೆಳಗೆ ಇಳಿಸಿ ಮತ್ತೆ ಧರ್ಮರಾಜನನ್ನು ನೋಡುತ್ತಿದ್ದರು. ಇವೆಲ್ಲವೂ ಶಬ್ದಾಭಿನಯವಲ್ಲ, ಅವು ಭಾವಾಭಿನಯಗಳಿಗೆ ಉದಾಹರಣೆಗಳು. ಇನ್ನು ಶಂಭು ಹೆಗಡೆಯವರು ಲವಕುಶ ಕಾಳಗದಲ್ಲಿ “ನಾರಿಯನು ತೊರೆದಿರುವ ಸೂನುಗಳೆನಗಿಲ್ಲ…” ಎನ್ನುವಾಗ ಸೀತೆಯನ್ನು ತೊರೆಯುವ ಅಭಿನಯವನ್ನು ನಾಟ್ಯಧರ್ಮಿಯಲ್ಲಿ ಮಾಡಿದರೆ, ಸೂನುಗಳೆನಗಿಲ್ಲ ಎನ್ನುವಾಗ ದೇವರಾದ ರಾಮ ಅನೃತವನ್ನು ಹೇಳಬಾರದಷ್ಟೆ, ಅದಕ್ಕಾಗಿ ಪತಾಕಾ ಹಸ್ತವನ್ನು ತಿರುಗಿಸುತ್ತಾ ಮುಂದೆ ನಿಧಾನವಾಗಿ ಕುಣಿಯುತ್ತಾ ಬರುತ್ತಿದ್ದರು. ಈ ಎಲ್ಲ ಸನ್ನಿವೇಶಗಳು ರಂಗದಲ್ಲಿ ಬೀರುವ ಪರಿಣಾಮ ಮಾತ್ರ ಅತ್ಯದ್ಭುತ. ಯಕ್ಷಗಾನದಲ್ಲಿ ಸೂಕ್ಷ್ಮ ಅಭಿನಯ ತರಲಾಗುವದಿಲ್ಲ ಎನ್ನುವದೆಲ್ಲವೂ ಕುಣಿಯಲಾಗದವರು ಅಂಗಳ ಡೊಂಕು ಎಂದಂತೆ ಆಗುತ್ತದೆ.

ಇಲ್ಲಿ ಮೂಡ್ಕಣಿಯವರು, ಸದಾನಂದ ಹೆಗಡೆಯವರು ಪರಮಯ್ಯ ಹಾಸ್ಯಗಾರರು ವೆಂಕಪ್ಪ ಭಂಡಾರಿ ಮಲ್ಲಗದ್ದೆ ಗಣೇಶ ಹೆಗಡೆ ಇವರೆಲ್ಲರೂ ಇಂತಹ ಅಭಿನಯ ತೋರುವಾಗ ಇಲ್ಲಿ ಜಗಮಗಿಸುವ ವಿದ್ಯುತ್‌ ದೀಪಗಳಿರಲಿಲ್ಲ; ದೊಂದಿ ಬೆಳಕಿನಲ್ಲಿ ಕಲೆಯನ್ನು ಸೂರೆಗೊಂಡ ಉದಾಹರಣೆಗಳು. ಇಂತಹ ಯಾವುದೇ ಉದಾಹರಣೆಗಳಿಲ್ಲದೇ ಕೇವಲ ಪೇಲವವಾಗಿ ಅಭಿನಯದ ಕುರಿತು ಹೇಳಿರುವದನ್ನು ನೋಡಿದರೆ ಅಭಿನಯದ ಪಠ್ಯಪುಸ್ತಕಕ್ಕೆಂದು ಸರಿಯಾದ ಸಿದ್ಧತೆಯನ್ನು ಮಾಡದೇ ಒಟ್ಟಿನಲ್ಲಿ ‘ಸಂತೆಗೆ ಮುನ್ನ ಮೂರು ಮೊಳ’ ಎಂದು ನೇಯ್ದಂತೆ ತೋರುತ್ತದೆ. ಸಮಿತಿಯಲ್ಲಿರುವ ತಜ್ಞರ ಸಾಮರ್ಥ್ಯದ ಕುರಿತು ನಾನು ಆಕ್ಷೇಪ ವ್ಯಕ್ತಪಡಿಸುವದಿಲ್ಲ. ಆದರೆ ಈ ನಿಷ್ಕಾಳಜಿ ಯಾಕೆ ಎನ್ನುವದೇ ಅರ್ಥವಾಗುತ್ತಿಲ್ಲ. ಸೋಂದಾ ಕೃಷ್ಣ ಭಂಡಾರಿಯವರು ನೂರುವರ್ಷಗಳ ಹಿಂದೆಯೇ ಯಕ್ಷಗಾನಕ್ಕೊಂದು ಕೈಪಿಡಿಯನ್ನು ರಚಿಸಿದ್ದನ್ನೂ ಸಹ ಇಲ್ಲಿ ನೆನಪಿಸಬೇಕಾಗುತ್ತದೆ.

ಯಕ್ಷಗಾನದ ಉಗಮದ ಕುರಿತು ಅನೇಕ ವಾದಗಳಿವೆ. ಇಲ್ಲಿ ಆಡಲ್ಪಡುವ ಸಾಹಿತ್ಯಕ್ಕೆ ಪ್ರಸಂಗ ಎಂದು ಹೆಸರು. ಪ್ರಸಂಗಗಳೆಲ್ಲ ರಚಿತವಾಗಿರುವುದು ದೇಸಿ ಛಂದಸ್ಸಿನಲ್ಲಿ. ಛಂದೋನಿಯತವಾದ ಲಯಗತಿಯ ಪದ ಸಂಯೋಜನೆಯೇ ‘ಮಟ್ಟು’. ದ್ರಾವಿಡ ಮೂಲಕ್ಕೆ ಸೇರಿದ ಭಾಷೆಯಲ್ಲಿ ಆಡುವ ಈ ಕಥಾನಕಗಳು ಅಭಿವ್ಯಕ್ತಿಸುವ ಭಾವವನ್ನೇ ‘ಮಟ್ಟು’ ಎನ್ನುತ್ತಾರೆ. ಈ ದ್ರಾವಿಡ ಮೂಲದ ಮಡು ಎಂಬ ಪದವೇ ಮಟ್ಟುವಿನ(ಮಡ್+ಟು=ಮಟ್ಟು) ಮೂಲ. ಆದರೆ ಈ ವಿಶಿಷ್ಟ ಕಲೆಗೆ ಬಂದ ಹೆಸರು ಮಾತ್ರ ಅಚ್ಚ ಸಂಸ್ಕೃತದ ‘ಯಕ್ಷಗಾನʼ. ಅಷ್ಟೇ ಅಲ್ಲ, ಯಕ್ಷಗಾನವು ಕರಾರುವಕ್ಕಾಗಿ ನಾಟ್ಯಶಾಸ್ತ್ರದ ನಿಯಮವನ್ನು ಅನುಸರಿಸುತ್ತದೆ. ಹಾಗೇ ನೋಡಿದರೆ ನಾಟ್ಯಶಾಸ್ತ್ರವು ರಚಿತವಾಗುವುದಕ್ಕಿಂತಲೂ ಮೊದಲು ಇಲ್ಲೊಂದು ಸಶಕ್ತರಂಗಭೂಮಿ ಜನಪದರಲ್ಲಿತ್ತು. ಇಡೀ ದೇಶದಲ್ಲೆಡೆ ಹರಡಿಕೊಂಡ ಈ ರಂಗಭೂಮಿ ಬೇರೆಲ್ಲಾ ಕಡೆ ವಿದೇಶಿ ಆಕ್ರಮಣ, ಮತಧರ್ಮದ ಬದಲಾವಣೆ, ಸಾಮಾಜಿಕ ವ್ಯವಸ್ಥೆಯಲ್ಲಾದ ವೈಪರೀತ್ಯದಿಂದ ಮೂಲ ಸ್ವರೂಪವನ್ನು ಕಳೆದುಕೊಂಡರೆ ಕರಾವಳಿ ಭಾಗದಲ್ಲಿ ಮಾತ್ರ ಆಹಾರ್ಯ, ಆಂಗಿಕ ವಾಚಿಕಗಳಲ್ಲಿ ಹೆಚ್ಚಿನ ಪಾಲು ಮೂಲಸತ್ವವನ್ನು ಇಂದಿನವರೆಗೂ ಉಳಿಸಿಕೊಂಡಿವೆ ಎನ್ನಬಹುದು. ಪ್ರಾರಂಭದಲ್ಲಿ ದೇಶಿಯವಾದ ಕಲೆಗಳೆಲ್ಲ ನಂತರದಲ್ಲಿ ಹೊರಳಿದ ಉದಾಹರಣೆ ನೋಡಬಹುದು.

ವಿಸ್ತಾರವಾದ ಸಂಸ್ಕೃತ ವಾಙ್ಮಯಗಳಲ್ಲಿ ಎಲ್ಲಿಯೂ ಯಕ್ಷಗಾನವೆಂಬ ಶಬ್ಧವು ಕಾಣಸಿಗುವದಿಲ್ಲ. ತಂಜಾವೂರಿನ ರಾಜ ರಘುನಾಥ ನಾಯಕನ ಮಡದಿ ರಾಮಭದ್ರೆ ಎನ್ನುವವಳು ಬರೆದಿರುವ ಸಂಸ್ಕೃತ ಭಾಷೆಯ ಕೃತಿ ರಘುನಾಥಾಭ್ಯುಯದಲ್ಲಿ ಒಂದು ಕಡೆ ಮಾತ್ರ ‘ಯಕ್ಷಗಾನ’ಎನ್ನುವ ಶಬ್ಧವು ಬಂದಿದೆ. “ರಘುನಾಥಾಭುದಯ” ಹದಿನೇಳನೆ ಶತಮಾನದ ಕೃತಿಯಾಗಿದೆ. ‘ಯಕ್ಷ’ ಎಂಬುದರ ಅರ್ಥ ಪೂಜಿಸು, ಅಥವಾ ‘ಕ್ರೀಡಾಯಾಂ’ ಎಂದೂ ಅರ್ಥವಿದೆ. ಬಹುಶಃ 12ನೆಯ ಶತಮಾನದ ವಚನಕಾರರ ಮತ್ತು 14-5ನೆಯ ಶತಮಾನದ ದಾಸ ಪರಂಪರೆಯ ಪ್ರಭಾವವನ್ನು ಗಮನಿಸಿ ಹೇಳುವದಾದರೆ ಗಾನ ಪದ್ಧತಿಯಿಂದ ದೇವೋಪಾಸನೆ ಆಗುತ್ತಿತ್ತು ಎಂತಲೂ ಆಗುತ್ತದೆ. ಇನ್ನು ‘ಜಕ್ಕಗಾನ’ ಎನ್ನುವಂತೆ ಹಲವು ರೀತಿಯಿಂದ ವರ್ಣಿಸಬಹುದು. ಒಟ್ಟಿನಲ್ಲಿ ಒಂದಂತೂ ಸ್ಪಷ್ಟ, ದ್ರಾವಿಡ ಮೂಲವಾದ ಈ ಜನಪದ ಕಲೆ ಪ್ರಾದೇಶಿಕವಾದ ಪರಿಷ್ಕೃತ ಕಲೆಯಾಗಿದ್ದು ಕಾಲಾಂತರದಲ್ಲಿ ಶಿಷ್ಟಮುಖವಾಗಿ ಸಾಗಿದಂತೆ ತೋರುತ್ತದೆ.

ಪಠ್ಯವಾಗುವ ಹೊತ್ತಿನಲ್ಲಿ ಇಂತಹ ವಿಷಯಗಳನ್ನು ಎಲ್ಲಿಯೂ ತಂದಿಲ್ಲ. ಇವುಗಳ ಕುರಿತು ಹೇಳುವುದು ಪ್ರಾಥಮಿಕ ವಿಷಯ ಅಲ್ಲದಿರಬಹುದು, ಆದರೆ ಪ್ರಾಥಮಿಕ ಪಠ್ಯಗಳನ್ನು ಸಿದ್ಧಮಾಡುವಾಗ ಇಂತಹ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಲೇಬೇಕಾಗುತ್ತದೆ. ಹಿಂದುಸ್ಥಾನಿ ಸಂಗೀತದಲ್ಲಿ ಗಂಧರ್ವ ಮಹಾವಿದ್ಯಾಲಯದವರು ತಯಾರಿಸಿದ ಪಠ್ಯಗಳನ್ನು ನೋಡಬಹುದು. ಅದರಲ್ಲಿ ಪ್ರಾಥಮಿಕ ಹಂತದಲ್ಲಿ  ವಿಷಯಗಳು ಸರಳವಾಗಿ ಇವೆ. ಆದರೆ ಇಡೀ ಸಂಗೀತ ಲೋಕದ ಇತಿಹಾಸದ ಪರಿಚಯವನ್ನು,  ಮಹಾವೃಕ್ಷವೊಂದರ ಚಿಗುರು ಎಲೆಯನ್ನು ಪರಿಚಯಿಸುವ ರೀತಿಯಲ್ಲಿ ಪರಿಚಯ ನೀಡಿದ್ದಾರೆ.

ಇಲ್ಲಿ ಆದದ್ದು ಆಗಿ ಹೋಯಿತು ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ. ಇದು ಕೇವಲ ಒಂದು ಪುಸ್ತಕವಾಗಿದ್ದರೆ ಆಕ್ಷೇಪಣೆ ಇರುತ್ತಿರಲಿಲ್ಲ. ಪಠ್ಯಪುಸ್ತಕವಾಗಿ ಯಕ್ಷಗಾನವನ್ನು ಕಲಿಸುವ ಮತ್ತು ಭಾವೀ ಕಲಾವಿದರನ್ನು ತಯಾರು ಮಾಡುವ ಒಂದು ಮಾರ್ಗದರ್ಶಿ ಗ್ರಂಥವಾಗಿರುವುದರಿಂದ ಈ ಕೂಡಲೇ ಇಂದಿನ ಅಕಾಡೆಮಿ ಅಧ್ಯಕ್ಷರಾಗಿರುವ ಡಾ. ಜಿ. ಎಲ್. ಹೆಗಡೆಯವರು ತಕ್ಷಣಕ್ಕೆ ಪಠ್ಯವನ್ನು ತಡೆ ಹಿಡಿದು ತಪ್ಪುಗಳನ್ನು ಸರಿಪಡಿಸಿ ಉತ್ತರಕನ್ನಡದ ವೈವಿಧ್ಯತೆಯನ್ನು ಸೇರಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಕಾಲಾಂತರದಲ್ಲಿ ಒಂದು ಸಮರ್ಥರಂಗಭೂಮಿಯ ಕೊಡುಗೆಗಳು ಅಳಿಸಿಹೋಗುವ ಅಪಾಯವಿದೆ.